ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 73
ಸಾರ
ಕುರುಸೇನೆಯನ್ನು ನಾಶಪಡಿಸುತ್ತಾ ಪದಾತಿಯಾಗಿಯೇ ಸೇನಾಮಧ್ಯವನ್ನು ಸೇರಿದ್ದ ಭೀಮಸೇನನನ್ನು ಧೃಷ್ಟದ್ಯುಮ್ನನು ಹಿಂಬಾಲಿಸಿ ಹೋಗಿ ತನ್ನ ರಥದ ಮೇಲೇರಿಸಿಕೊಂಡಿದುದು (1-38). ಧೃಷ್ಟದ್ಯುಮ್ನನು ಪ್ರಮೋಹಾಸ್ತ್ರದಿಂದ ತನ್ನೊಡನೆ ಯುದ್ಧಮಾಡುತ್ತಿದ್ದ ಧಾರ್ತರಾಷ್ಟ್ರರನ್ನು ಮೂರ್ಛೆಗೊಳಿಸಿದುದು (39-43). ದ್ರೋಣಪರಾಕ್ರಮ (44-71).
06073001 ಸಂಜಯ ಉವಾಚ।
06073001a ಆತ್ಮದೋಷಾತ್ತ್ವಯಾ ರಾಜನ್ಪ್ರಾಪ್ತಂ ವ್ಯಸನಮೀದೃಶಂ।
06073001c ನ ಹಿ ದುರ್ಯೋಧನಸ್ತಾನಿ ಪಶ್ಯತೇ ಭರತರ್ಷಭ।
06073001e ಯಾನಿ ತ್ವಂ ದೃಷ್ಟವಾನ್ರಾಜನ್ಧರ್ಮಸಂಕರಕಾರಿತೇ।।
ಸಂಜಯನು ಹೇಳಿದನು: “ರಾಜನ್! ನಿನ್ನದೇ ದೋಷದಿಂದ ಈ ತರಹದ ವ್ಯಸನವು ನಿನಗೆ ಬಂದೊದಗಿದೆ. ಭರತರ್ಷಭ! ರಾಜನ್! ಅಧರ್ಮದಲ್ಲಿ ಮಾಡಿದವುಗಳನ್ನು ನೀನು ತಿಳಿದುಕೊಂಡಿದ್ದೀಯೆ. ಆದರೆ ಅವುಗಳು ದುರ್ಯೋಧನನಿಗೆ ಕಾಣುತ್ತಿಲ್ಲ.
06073002a ತವ ದೋಷಾತ್ಪುರಾ ವೃತ್ತಂ ದ್ಯೂತಮೇತದ್ವಿಶಾಂ ಪತೇ।
06073002c ತವ ದೋಷೇಣ ಯುದ್ಧಂ ಚ ಪ್ರವೃತ್ತಂ ಸಹ ಪಾಂಡವೈಃ।
06073002e ತ್ವಮೇವಾದ್ಯ ಫಲಂ ಭುಂಕ್ಷ್ವ ಕೃತ್ವಾ ಕಿಲ್ಬಿಷಮಾತ್ಮನಾ।।
ವಿಶಾಂಪತೇ! ಹಿಂದೆ ನಿನ್ನ ದೋಷದಿಂದಲೇ ಆ ದ್ಯೂತವು ನಡೆಯಿತು. ಮತ್ತು ನಿನ್ನ ಈ ದೋಷದಿಂದಲೇ ಪಾಂಡವರೊಂದಿಗೆ ಯುದ್ಧವೂ ಪ್ರಾರಂಭವಾಯಿತು. ನೀನು ಸ್ವಯಂ ತಪ್ಪು ಮಾಡಿ, ಇಂದು ಅದರ ಫಲವನ್ನು ಭೋಗಿಸುತ್ತಿದ್ದೀಯೆ.
06073003a ಆತ್ಮನಾ ಹಿ ಕೃತಂ ಕರ್ಮ ಆತ್ಮನೈವೋಪಭುಜ್ಯತೇ।
06073003c ಇಹ ವಾ ಪ್ರೇತ್ಯ ವಾ ರಾಜಂಸ್ತ್ವಯಾ ಪ್ರಾಪ್ತಂ ಯಥಾತಥಂ।।
ರಾಜನ್! ಇಹಲೋಕದಲ್ಲಿಯಾಗಲೀ ಪರಲೋಕದಲ್ಲಿಯಾಗಲೀ ತಾನು ಮಾಡಿದ ಕರ್ಮಗಳ ಫಲವನ್ನು ತಾನೇ ಅನುಭವಿಸಬೇಕಾಗುತ್ತದೆ. ಅದರಂತೆ ನಿನಗೂ ಕೂಡ ತಕ್ಕ ಫಲವೇ ಪ್ರಾಪ್ತವಾಗಿದೆ.
06073004a ತಸ್ಮಾದ್ರಾಜನ್ಸ್ಥಿರೋ ಭೂತ್ವಾ ಪ್ರಾಪ್ಯೇದಂ ವ್ಯಸನಂ ಮಹತ್।
06073004c ಶೃಣು ಯುದ್ಧಂ ಯಥಾವೃತ್ತಂ ಶಂಸತೋ ಮಮ ಮಾರಿಷ।।
ಆದುದರಿಂದ ಮಾರಿಷ! ರಾಜನ್! ಸ್ಥಿರವಾಗಿದ್ದುಕೊಂಡು ಈ ಮಹಾ ವ್ಯಸನವನ್ನು ಸೈರಿಸಿಕೋ. ನಡೆದಂತೆ ನಾನು ಹೇಳುವ ಯುದ್ಧದ ಕುರಿತು ಕೇಳು.
06073005a ಭೀಮಸೇನಸ್ತು ನಿಶಿತೈರ್ಬಾಣೈರ್ಭಿತ್ತ್ವಾ ಮಹಾಚಮೂಂ।
06073005c ಆಸಸಾದ ತತೋ ವೀರಃ ಸರ್ವಾನ್ದುರ್ಯೋಧನಾನುಜಾನ್।।
ಭೀಮಸೇನನಾದರೋ ನಿಶಿತಬಾಣಗಳಿಂದ ಮಹಾಚಮುವನ್ನು ಭೇದಿಸಿ ನಂತರ ಆ ವೀರನು ದುರ್ಯೋಧನನ ಅನುಜರೆಲ್ಲರನ್ನೂ ಎದುರಿಸಿದನು.
06073006a ದುಃಶಾಸನಂ ದುರ್ವಿಷಹಂ ದುಃಸ್ಸಹಂ ದುರ್ಮದಂ ಜಯಂ।
06073006c ಜಯತ್ಸೇನಂ ವಿಕರ್ಣಂ ಚ ಚಿತ್ರಸೇನಂ ಸುದರ್ಶನಂ।।
06073007a ಚಾರುಚಿತ್ರಂ ಸುವರ್ಮಾಣಂ ದುಷ್ಕರ್ಣಂ ಕರ್ಣಮೇವ ಚ।
06073007c ಏತಾನನ್ಯಾಂಶ್ಚ ಸುಬಹೂನ್ಸಮೀಪಸ್ಥಾನ್ಮಹಾರಥಾನ್।।
06073008a ಧಾರ್ತರಾಷ್ಟ್ರಾನ್ಸುಸಂಕ್ರುದ್ಧಾನ್ದೃಷ್ಟ್ವಾ ಭೀಮೋ ಮಹಾಬಲಃ।
06073008c ಭೀಷ್ಮೇಣ ಸಮರೇ ಗುಪ್ತಾಂ ಪ್ರವಿವೇಶ ಮಹಾಚಮೂಂ।।
ಸಮರದಲ್ಲಿ ಭೀಷ್ಮನಿಂದ ರಕ್ಷಿಸಲ್ಪಟ್ಟಿದ್ದ ಸಮೀಪದಲ್ಲಿದ್ದ ದುಃಶಾಸನ, ದುರ್ವಿಷಹ, ದುಃಸ್ಸಹ, ದುರ್ಮದ, ಜಯ, ಜಯತ್ಸೇನ, ವಿಕರ್ಣ, ಚಿತ್ರಸೇನ, ಸುದರ್ಶನ, ಚಾರುಚಿತ್ರ, ಸುವರ್ಮ, ದುಷ್ಕರ್ಣ, ಕರ್ಣ ಮೊದಲಾದ ಅನೇಕ ಸಂಕ್ರುದ್ಧ ಮಹಾರಥ ಧಾರ್ತರಾಷ್ಟ್ರರನ್ನು ನೋಡಿ ಮಹಾಬಲ ಭೀಮನು ಮಹಾಚಮುವನ್ನು ಪ್ರವೇಶಿಸಿದನು.
06073009a ಅಥಾಹ್ವಯಂತ ತೇಽನ್ಯೋನ್ಯಮಯಂ ಪ್ರಾಪ್ತೋ ವೃಕೋದರಃ।
06073009c ಜೀವಗ್ರಾಹಂ ನಿಗೃಹ್ಣೀಮೋ ವಯಮೇನಂ ನರಾಧಿಪಾಃ।।
ಹಾಗೆ ನುಗ್ಗಿ ಬರುತ್ತಿರುವ ವೃಕೋದರನನ್ನು ಸಮೀಪಿಸಿ ನಮ್ಮ ನರಾಧಿಪರು ಅನ್ಯೋನ್ಯರಲ್ಲಿ “ಇವನನ್ನು ಜೀವಸಹಿತವಾಗಿಯೇ ಸೆರೆಹಿಡಿಯೋಣ!” ಎಂದು ಮಾತನಾಡಿಕೊಂಡರು.
06073010a ಸ ತೈಃ ಪರಿವೃತಃ ಪಾರ್ಥೋ ಭ್ರಾತೃಭಿಃ ಕೃತನಿಶ್ಚಯೈಃ।
06073010c ಪ್ರಜಾಸಂಹರಣೇ ಸೂರ್ಯಃ ಕ್ರೂರೈರಿವ ಮಹಾಗ್ರಹೈಃ।।
ಹೀಗೆ ನಿಶ್ಚಯಮಾಡಿಕೊಂಡ ಸಹೋದರರು ಪ್ರಜಾಸಂಹರಣ ಕಾಲದಲ್ಲಿ ಕ್ರೂರ ಮಹಾಗ್ರಹಗಳು ಸೂರ್ಯನನ್ನು ಸುತ್ತುವರೆಯುವಂತೆ ಪಾರ್ಥನನ್ನು ಸುತ್ತುವರೆದರು.
06073011a ಸಂಪ್ರಾಪ್ಯ ಮಧ್ಯಂ ವ್ಯೂಹಸ್ಯ ನ ಭೀಃ ಪಾಂಡವಮಾವಿಶತ್।
06073011c ಯಥಾ ದೇವಾಸುರೇ ಯುದ್ಧೇ ಮಹೇಂದ್ರಃ ಪ್ರಾಪ್ಯ ದಾನವಾನ್।।
ದೇವಾಸುರರ ಯುದ್ಧದಲ್ಲಿ ದಾನವರನ್ನು ತಲುಪಿದ ಮಹೇಂದ್ರನಿಗೆ ಹೇಗೆ ಭೀತಿಯುಂಟಾಗಲಿಲ್ಲವೋ ಹಾಗೆ ವ್ಯೂಹದ ಮಧ್ಯವನ್ನು ಪ್ರವೇಶಿಸಿದ ಪಾಂಡವನಿಗೆ ಭಯವೆಂಬುದೇ ಆಗಲಿಲ್ಲ.
06073012a ತತಃ ಶತಸಹಸ್ರಾಣಿ ರಥಿನಾಂ ಸರ್ವಶಃ ಪ್ರಭೋ।
06073012c ಚಾದಯಾನಂ ಶರೈರ್ಘೋರೈಸ್ತಮೇಕಮನುವವ್ರಿರೇ।।
ಆಗ ಪ್ರಭೋ! ನೂರಾರು ಸಹಸ್ರಾರು ರಥಿಗಳು ಎಲ್ಲ ಕಡೆಗಳಿಂದಲೂ ಘೋರ ಶರಗಳನ್ನು ಸುರಿಸುತ್ತಾ ಏಕಾಂಗಿಯಾಗಿದ್ದ ಅವನನ್ನು ಆಕ್ರಮಿಸಿದರು.
06073013a ಸ ತೇಷಾಂ ಪ್ರವರಾನ್ಯೋಧಾನ್ ಹಸ್ತ್ಯಶ್ವರಥಸಾದಿನಃ।
06073013c ಜಘಾನ ಸಮರೇ ಶೂರೋ ಧಾರ್ತರಾಷ್ಟ್ರಾನಚಿಂತಯನ್।।
ಆದರೆ ಸಮರದಲ್ಲಿ ಆ ಶೂರನು ಧಾರ್ತರಾಷ್ಟ್ರರನ್ನು ಗಮನಕ್ಕೆ ತೆಗೆದುಕೊಳ್ಳದೇ ನಿನ್ನ ಪಕ್ಷದ ಶ್ರೇಷ್ಠ ಯೋಧರನ್ನೂ, ರಥ-ಅಶ್ವ-ಆನೆ-ಪದಾತಿಗಳ ಸೇನೆಗಳನ್ನೂ ಅಪಾರ ಸಂಖ್ಯೆಗಳಲ್ಲಿ ಸಂಹರಿಸಿದನು.
06073014a ತೇಷಾಂ ವ್ಯವಸಿತಂ ಜ್ಞಾತ್ವಾ ಭೀಮಸೇನೋ ಜಿಘೃಕ್ಷತಾಂ।
06073014c ಸಮಸ್ತಾನಾಂ ವಧೇ ರಾಜನ್ಮತಿಂ ಚಕ್ರೇ ಮಹಾಮನಾಃ।।
ರಾಜನ್! ಅವರು ತನ್ನನ್ನು ಸೆರೆಹಿಡಿಯಲು ವ್ಯವಸ್ಥಿತರಾಗಿದ್ದಾರೆಂದು ತಿಳಿದ ಭೀಮಸೇನನು ಮಹಾಮನಸ್ಕರಾದ ಅವರೆಲ್ಲರನ್ನೂ ವಧಿಸಲು ಮನಸ್ಸು ಮಾಡಿದನು.
06073015a ತತೋ ರಥಂ ಸಮುತ್ಸೃಜ್ಯ ಗದಾಮಾದಾಯ ಪಾಂಡವಃ।
06073015c ಜಘಾನ ಧಾರ್ತರಾಷ್ಟ್ರಾಣಾಂ ತಂ ಬಲೌಘಮಹಾರ್ಣವಂ।।
ಆಗ ಪಾಂಡವನು ಗದೆಯನ್ನು ಹಿಡಿದು ರಥದಿಂದಿಳಿದು ಮಹಾಸಾಗರದಂತಿದ್ದ ಧಾರ್ತರಾಷ್ಟ್ರರ ಆ ಸೇನೆಯನ್ನು ಧ್ವಂಸಮಾಡಿದನು.
06073016a ಭೀಮಸೇನೇ ಪ್ರವಿಷ್ಟೇ ತು ಧೃಷ್ಟದ್ಯುಮ್ನೋಽಪಿ ಪಾರ್ಷತಃ।
06073016c ದ್ರೋಣಮುತ್ಸೃಜ್ಯ ತರಸಾ ಪ್ರಯಯೌ ಯತ್ರ ಸೌಬಲಃ।।
ಭೀಮಸೇನನು ಸೇನೆಯನ್ನು ಪ್ರವೇಶಿಸಿದ ನಂತರ ಪಾರ್ಷತ ಧೃಷ್ಟದ್ಯುಮ್ನನು ದ್ರೋಣನೊಡನೆ ಯುದ್ಧಮಾಡುವುದನ್ನು ಬಿಟ್ಟು ಸೌಬಲನಿದ್ದಲ್ಲಿಗೆ ಅವಸರದಿಂದ ಬಂದನು.
06073017a ವಿದಾರ್ಯ ಮಹತೀಂ ಸೇನಾಂ ತಾವಕಾನಾಂ ನರರ್ಷಭಃ।
06073017c ಆಸಸಾದ ರಥಂ ಶೂನ್ಯಂ ಭೀಮಸೇನಸ್ಯ ಸಂಯುಗೇ।।
ನರರ್ಷಭ! ನಿನ್ನ ಮಹಾಸೇನೆಯನ್ನು ಸೀಳಿಕೊಂಡು ಬಂದ ಅವನು ಸಂಯುಗದಲ್ಲಿ ಭೀಮಸೇನನ ಖಾಲಿ ರಥವನ್ನು ನೋಡಿದನು.
06073018a ದೃಷ್ಟ್ವಾ ವಿಶೋಕಂ ಸಮರೇ ಭೀಮಸೇನಸ್ಯ ಸಾರಥಿಂ।
06073018c ಧೃಷ್ಟದ್ಯುಮ್ನೋ ಮಹಾರಾಜ ದುರ್ಮನಾ ಗತಚೇತನಃ।।
ಸಮರದಲ್ಲಿ ಭೀಮಸೇನನ ಸಾರಥಿ ವಿಶೋಕನೊಬ್ಬನನ್ನೇ ನೋಡಿ ಮಹಾರಾಜ! ಧೃಷ್ಟದ್ಯುಮ್ನನು ದುಃಖಿತನೂ ಬುದ್ಧಿಗೆಟ್ಟವನೂ ಆದನು.
06073019a ಅಪೃಚ್ಛದ್ಬಾಷ್ಪಸಂರುದ್ಧೋ ನಿಸ್ವನಾಂ ವಾಚಮೀರಯನ್।
06073019c ಮಮ ಪ್ರಾಣೈಃ ಪ್ರಿಯತಮಃ ಕ್ವ ಭೀಮ ಇತಿ ದುಃಖಿತಃ।।
ಸುದೀರ್ಘವಾಗಿ ನಿಟ್ಟುಸಿರುಬಿಡುತ್ತಾ ಕಣ್ಣೀರು ತುಂಬಿದವನಾಗಿ ಗದ್ಗದ ಸ್ವರದಲ್ಲಿ “ನನ್ನ ಪ್ರಾಣಗಳಿಗಿಂತಲೂ ಪ್ರಿಯತಮನಾದ ಭೀಮನೆಲ್ಲಿ?” ಎಂದು ದುಃಖಿತನಾಗಿ ಕೇಳಿದನು.
06073020a ವಿಶೋಕಸ್ತಮುವಾಚೇದಂ ಧೃಷ್ಟದ್ಯುಮ್ನಂ ಕೃತಾಂಜಲಿಃ।
06073020c ಸಂಸ್ಥಾಪ್ಯ ಮಾಮಿಹ ಬಲೀ ಪಾಂಡವೇಯಃ ಪ್ರತಾಪವಾನ್।।
06073021a ಪ್ರವಿಷ್ಟೋ ಧಾರ್ತರಾಷ್ಟ್ರಾಣಾಮೇತದ್ಬಲಮಹಾರ್ಣವಂ।
06073021c ಮಾಮುಕ್ತ್ವಾ ಪುರುಷವ್ಯಾಘ್ರ ಪ್ರೀತಿಯುಕ್ತಮಿದಂ ವಚಃ।।
ಆಗ ವಿಶೋಕನು ಧೃಷ್ಟದ್ಯುಮ್ನನಿಗೆ ಕೈಮುಗಿದು ಹೇಳಿದನು: “ನನ್ನನ್ನು ಇಲ್ಲಿರಿಸಿ ಪ್ರತಾಪವಾನ್ ಬಲಶಾಲಿ ಪಾಂಡವೇಯನು ಮಹಾಸಾಗರದಂತಿರುವ ಧಾರ್ತರಾಷ್ಟ್ರರ ಈ ಸೇನೆಯನ್ನು ಪ್ರವೇಶಿಸಿದನು. ಪುರುಷವ್ಯಾಘ್ರ! ಅವನು ನನಗೆ ಈ ಪ್ರೀತಿಯುಕ್ತವಾದ ಮಾತುಗಳನ್ನಾಡಿದನು:
06073022a ಪ್ರತಿಪಾಲಯ ಮಾಂ ಸೂತ ನಿಯಂಶಾಶ್ವಾನ್ಮುಹೂರ್ತಕಂ।
06073022c ಯಾವದೇತಾನ್ನಿಹನ್ಮ್ಯಾಶು ಯ ಇಮೇ ಮದ್ವಧೋದ್ಯತಾಃ।।
“ಸೂತ! ನೀನು ಮುಹೂರ್ತಕಾಲ ಈ ಅಶ್ವಗಳನ್ನು ತಡೆಹಿಡಿದುಕೊಂಡು ಪ್ರತಿಪಾಲಿಸು. ನನ್ನನ್ನು ವಧಿಸಲು ಉದ್ಯುಕ್ತರಾಗಿರುವ ಇವರನ್ನು ಈಗಲೇ ಸಂಹರಿಸಿ ಬಂದುಬಿಡುತ್ತೇನೆ.”
06073023a ತತೋ ದೃಷ್ಟ್ವಾ ಗದಾಹಸ್ತಂ ಪ್ರಧಾವಂತಂ ಮಹಾಬಲಂ।
06073023c ಸರ್ವೇಷಾಮೇವ ಸೈನ್ಯಾನಾಂ ಸಂಘರ್ಷಃ ಸಮಜಾಯತ।।
06073024a ತಸ್ಮಿಂಸ್ತು ತುಮುಲೇ ಯುದ್ಧೇ ವರ್ತಮಾನೇ ಭಯಾನಕೇ।
06073024c ಭಿತ್ತ್ವಾ ರಾಜನ್ಮಹಾವ್ಯೂಹಂ ಪ್ರವಿವೇಶ ಸಖಾ ತವ।।
ಆಗ ಗದೆಯನ್ನು ಹಿಡಿದು ಓಡಿ ಬರುತ್ತಿರುವ ಮಹಾಬಲನನ್ನು ನೋಡಿ ಎಲ್ಲರ ಸೇನೆಗಳೊಂದಿಗೆ ಸಂಘರ್ಷವುಂಟಾಯಿತು. ರಾಜನ್! ಭಯಾನಕವಾದ ತುಮುಲ ಯುದ್ಧವು ನಡೆಯುತ್ತಿರಲು ನಿನ್ನ ಸಖನು ಮಹಾವ್ಯೂಹವನ್ನು ಭೇದಿಸಿ ಪ್ರವೇಶಿಸಿದನು.”
06073025a ವಿಶೋಕಸ್ಯ ವಚಃ ಶ್ರುತ್ವಾ ಧೃಷ್ಟದ್ಯುಮ್ನೋಽಪಿ ಪಾರ್ಷತಃ।
06073025c ಪ್ರತ್ಯುವಾಚ ತತಃ ಸೂತಂ ರಣಮಧ್ಯೇ ಮಹಾಬಲಃ।।
ವಿಶೋಕನ ಮಾತನ್ನು ಕೇಳಿ ಮಹಾಬಲ ಪಾರ್ಷತ ಧೃಷ್ಟದ್ಯುಮ್ನನು ರಣಮಧ್ಯದಲ್ಲಿ ಸೂತನಿಗೆ ಹೇಳಿದನು:
06073026a ನ ಹಿ ಮೇ ವಿದ್ಯತೇ ಸೂತ ಜೀವಿತೇಽದ್ಯ ಪ್ರಯೋಜನಂ।
06073026c ಭೀಮಸೇನಂ ರಣೇ ಹಿತ್ವಾ ಸ್ನೇಹಮುತ್ಸೃಜ್ಯ ಪಾಂಡವೈಃ।।
“ಸೂತ! ರಣದಲ್ಲಿ ಭೀಮಸೇನನನ್ನು ಬಿಟ್ಟು ಪಾಂಡವರ ಸ್ನೇಹವನ್ನೂ ಕಳೆದುಕೊಂಡು ಜೀವಿಸಿರುವುದರಲ್ಲಿ ಪ್ರಯೋಜನವಿಲ್ಲ.
06073027a ಯದಿ ಯಾಮಿ ವಿನಾ ಭೀಮಂ ಕಿಂ ಮಾಂ ಕ್ಷತ್ರಂ ವದಿಷ್ಯತಿ।
06073027c ಏಕಾಯನಗತೇ ಭೀಮೇ ಮಯಿ ಚಾವಸ್ಥಿತೇ ಯುಧಿ।।
ಒಬ್ಬನೇ ಹೋಗಿರುವ ಭೀಮನನ್ನು ಯುದ್ಧದಲ್ಲಿ ಹಾಗೆಯೇ ಬಿಟ್ಟು ಭೀಮನಿಲ್ಲದೇ ನಾನು ಹಿಂದಿರುಗಿದರೆ ಕ್ಷತ್ರಿಯರು ನನ್ನನ್ನು ಏನೆಂದು ಹೇಳಿಕೊಂಡಾರು?
06073028a ಅಸ್ವಸ್ತಿ ತಸ್ಯ ಕುರ್ವಂತಿ ದೇವಾಃ ಸಾಗ್ನಿಪುರೋಗಮಾಃ।
06073028c ಯಃ ಸಹಾಯಾನ್ಪರಿತ್ಯಜ್ಯ ಸ್ವಸ್ತಿಮಾನಾವ್ರಜೇದ್ಗೃಹಾನ್।।
ಸಹಾಯಕನನ್ನು ಬಿಟ್ಟು ತಾನು ಸುಕುಶಲಿಯಾಗಿ ಮನೆಗೆ ಹೋಗುವವನಿಗೆ ಅಗ್ನಿಯೇ ಮೊದಲಾದ ದೇವತೆಗಳು ಕೆಟ್ಟದ್ದನ್ನು ಮಾಡುತ್ತಾರೆ.
06073029a ಮಮ ಭೀಮಃ ಸಖಾ ಚೈವ ಸಂಬಂಧೀ ಚ ಮಹಾಬಲಃ।
06073029c ಭಕ್ತೋಽಸ್ಮಾನ್ಭಕ್ತಿಮಾಂಶ್ಚಾಹಂ ತಮಪ್ಯರಿನಿಷೂದನಂ।।
ನನಗೆ ಭೀಮನು ಸಖನೂ ಹೌದು. ಅ ಮಹಾಬಲನು ಸಂಬಂಧಿಯೂ ಹೌದು. ಅವನು ನಮ್ಮ ಭಕ್ತ. ನಾವೂ ಆ ಅರಿನಿಶೂದನನ ಭಕ್ತರು.
06073030a ಸೋಽಹಂ ತತ್ರ ಗಮಿಷ್ಯಾಮಿ ಯತ್ರ ಯಾತೋ ವೃಕೋದರಃ।
06073030c ನಿಘ್ನಂತಂ ಮಾಮರೀನ್ಪಶ್ಯ ದಾನವಾನಿವ ವಾಸವಂ।।
ಆದುದರಿಂದ ನಾನೂ ಕೂಡ ವೃಕೋದರನು ಎಲ್ಲಿ ಹೋಗಿದ್ದಾನೋ ಅಲ್ಲಿಗೆ ಹೋಗುತ್ತೇನೆ. ವಾಸವನು ದಾನವರನ್ನು ಹೇಗೋ ಹಾಗೆ ನಾನು ಅರಿಗಳನ್ನು ಸಂಹರಿಸುವುದನ್ನು ನೋಡು!”
06073031a ಏವಮುಕ್ತ್ವಾ ತತೋ ವೀರೋ ಯಯೌ ಮಧ್ಯೇನ ಭಾರತೀಂ।
06073031c ಭೀಮಸೇನಸ್ಯ ಮಾರ್ಗೇಷು ಗದಾಪ್ರಮಥಿತೈರ್ಗಜೈಃ।।
ಹೀಗೆ ಹೇಳಿ ವೀರನು ಗದೆಗಳಿಂದ ಆನೆಗಳನ್ನು ಸಂಹರಿಸಿ ಹೋಗಿದ್ದ ಭೀಮಸೇನನ ಮಾರ್ಗದಲ್ಲಿಯೇ ಹೋಗಿ ಭಾರತೀ ಸೇನೆಯ ಮಧ್ಯಕ್ಕೆ ಬಂದನು.
06073032a ಸ ದದರ್ಶ ತತೋ ಭೀಮಂ ದಹಂತಂ ರಿಪುವಾಹಿನೀಂ।
06073032c ವಾತಂ ವೃಕ್ಷಾನಿವ ಬಲಾತ್ಪ್ರಭಂಜಂತಂ ರಣೇ ನೃಪಾನ್।।
ಅಲ್ಲಿ ರಿಪುವಾಹಿನಿಯನ್ನು ದಹಿಸುತ್ತಿದ್ದ, ಭಿರುಗಾಳಿಯು ಮರಗಳನ್ನು ಭಗ್ನಗೊಳಿಸುವಂತೆ ರಣದಲ್ಲಿ ನೃಪರನ್ನು ಬಲವಾಗಿ ಧ್ವಂಸಿಸುತ್ತಿದ್ದ ಭೀಮನನ್ನು ನೋಡಿದನು.
06073033a ತೇ ಹನ್ಯಮಾನಾಃ ಸಮರೇ ರಥಿನಃ ಸಾದಿನಸ್ತಥಾ।
06073033c ಪಾದಾತಾ ದಂತಿನಶ್ಚೈವ ಚಕ್ರುರಾರ್ತಸ್ವರಂ ಮಹತ್।।
ಸಮರದಲ್ಲಿ ಅವನಿಂದ ವಧಿಸಲ್ಪಡುತ್ತಿದ್ದ ರಥಿಗಳು, ಅಶ್ವಾರೋಹಿಗಳು, ಪದಾತಿಗಳು ಮತ್ತು ಆನೆಗಳು ಜೋರಾಗಿ ಆರ್ತಸ್ವರದಲ್ಲಿ ಕೂಗುತ್ತಿದ್ದರು/ವು.
06073034a ಹಾಹಾಕಾರಶ್ಚ ಸಂಜಜ್ಞೇ ತವ ಸೈನ್ಯಸ್ಯ ಮಾರಿಷ।
06073034c ವಧ್ಯತೋ ಭೀಮಸೇನೇನ ಕೃತಿನಾ ಚಿತ್ರಯೋಧಿನಾ।।
ಮಾರಿಷ! ಆ ಚಿತ್ರಯೋಧಿ ಯುದ್ಧಕುಶಲಿ ಭೀಮಸೇನನಿಂದ ವಧಿಸಲ್ಪಡುತ್ತಿದ್ದ ನಿನ್ನ ಸೇನೆಯಲ್ಲಿ ದೊಡ್ಡ ಹಾಹಾಕಾರವೆದ್ದಿತು.
06073035a ತತಃ ಕೃತಾಸ್ತ್ರಾಸ್ತೇ ಸರ್ವೇ ಪರಿವಾರ್ಯ ವೃಕೋದರಂ।
06073035c ಅಭೀತಾಃ ಸಮವರ್ತಂತ ಶಸ್ತ್ರವೃಷ್ಟ್ಯಾ ಸಮಂತತಃ।।
ಆಗ ಅಸ್ತ್ರಗಳಲ್ಲಿ ಪರಿಣಿತರಾದವರು ಎಲ್ಲರೂ ಭಯಪಡದೇ ವೃಕೋದರನನ್ನು ಸುತ್ತುವರೆದು ಶಸ್ತ್ರವೃಷ್ಟಿಯಿಂದ ಎಲ್ಲ ಕಡೆಗಳಿಂದಲೂ ಆಕ್ರಮಿಸಿದರು.
06073036a ಅಭಿದ್ರುತಂ ಶಸ್ತ್ರಭೃತಾಂ ವರಿಷ್ಠಂ ಸಮಂತತಃ ಪಾಂಡವಂ ಲೋಕವೀರೈಃ।
06073036c ಸೈನ್ಯೇನ ಘೋರೇಣ ಸುಸಂಗತೇನ ದೃಷ್ಟ್ವಾ ಬಲೀ ಪಾರ್ಷತೋ ಭೀಮಸೇನಂ।।
06073037a ಅಥೋಪಗಚ್ಛಚ್ಚರವಿಕ್ಷತಾಂಗಂ ಪದಾತಿನಂ ಕ್ರೋಧವಿಷಂ ವಮಂತಂ।
06073037c ಆಶ್ವಾಸಯನ್ಪಾರ್ಷತೋ ಭೀಮಸೇನಂ ಗದಾಹಸ್ತಂ ಕಾಲಂ ಇವಾಂತಕಾಲೇ।।
ಧಾವಿಸಿಬಂದು ಶಸ್ತ್ರಭೃತರಲ್ಲಿ ಶ್ರೇಷ್ಠನಾದ, ಲೋಕವೀರರಿಂದ ಎಲ್ಲಕಡೆಗಳಿಂದ ಮುತ್ತಲ್ಪಟ್ಟ ಪಾಂಡವನನ್ನು, ಘೋರ ಸೇನೆಯೊಂದಿಗೆ ಚೆನ್ನಾಗಿ ಯುದ್ಧಮಾಡುತ್ತಿದ್ದ ಬಲೀ ಭೀಮಸೇನನನ್ನು ನೋಡಿ ಪಾರ್ಷತನು ಅಂಗಾಂಗಳಲ್ಲಿ ಗಾಯಗೊಂಡಿದ್ದ, ಕ್ರೋಧವಿಷವನ್ನು ಕಾರುತ್ತಾ ನೆಲದ ಮೇಲೆಯೇ ನಿಂತು ಯುದ್ಧಮಾಡುತ್ತಿದ್ದ ಅಂತಕಾಲದಲ್ಲಿ ಕಾಲನಂತೆ ಗದೆಯನ್ನು ಹಿಡಿದಿದ್ದ ಭೀಮಸೇನನಿಗೆ ಆಶ್ವಾಸನೆ ನೀಡಿದನು.
06073038a ನಿಃಶಲ್ಯಮೇನಂ ಚ ಚಕಾರ ತೂರ್ಣಂ ಆರೋಪಯಚ್ಚಾತ್ಮರಥಂ ಮಹಾತ್ಮಾ।
06073038c ಭೃಶಂ ಪರಿಷ್ವಜ್ಯ ಚ ಭೀಮಸೇನಂ ಆಶ್ವಾಸಯಾಮಾಸ ಚ ಶತ್ರುಮಧ್ಯೇ।।
ಆ ಮಹಾತ್ಮನು ತಕ್ಷಣವೇ ಭೀಮಸೇನನನ್ನು ತನ್ನ ರಥದ ಮೇಲೇರಿಸಿಕೊಂಡು ಅವನ ಅಂಗಾಂಗಳೆಲ್ಲವನ್ನೂ ಚುಚ್ಚಿದ್ದ ಬಾಣಗಳನ್ನು ತೆಗೆದು ಗಾಂಢವಾಗಿ ಆಲಂಗಿಸಿ ಶತ್ರುಗಳ ಮಧ್ಯದಲ್ಲಿ ಅವನನ್ನು ಸಂತೈಸಿದನು.
06073039a ಭ್ರಾತೄನಥೋಪೇತ್ಯ ತವಾಪಿ ಪುತ್ರಸ್ ತಸ್ಮಿನ್ವಿಮರ್ದೇ ಮಹತಿ ಪ್ರವೃತ್ತೇ।
06073039c ಅಯಂ ದುರಾತ್ಮಾ ದ್ರುಪದಸ್ಯ ಪುತ್ರಃ ಸಮಾಗತೋ ಭೀಮಸೇನೇನ ಸಾರ್ಧಂ।
06073039e ತಂ ಯಾತ ಸರ್ವೇ ಸಹಿತಾ ನಿಹಂತುಂ ಮಾ ವೋ ರಿಪುಃ ಪ್ರಾರ್ಥಯತಾಮನೀಕಂ।।
ಆ ಮಹಾ ವಿಮರ್ದನ ಕಾರ್ಯವು ನಡೆಯುತ್ತಿರಲು ನಿನ್ನ ಪುತ್ರನು ಸಹೋದರರನ್ನು ಸಮೀಪಿಸಿ ಹೇಳಿದನು: “ಈ ದುರಾತ್ಮಾ ದ್ರುಪದನ ಮಗನು ಭೀಮಸೇನನ ನೆರವಿಗೆ ಬಂದುಬಿಟ್ಟನಲ್ಲ! ಇವನನ್ನು ಎಲ್ಲರೂ ಒಟ್ಟಿಗೇ ಸಂಹರಿಸಲು ಆಕ್ರಮಣಿಸೋಣ. ಈ ಶತ್ರುವು ನಮ್ಮ ಸೇನೆಗೆ ಹಾನಿಯನ್ನುಂಟುಮಾಡದಂತೆ ನೋಡಿಕೊಳ್ಳಬೇಕು.”
06073040a ಶ್ರುತ್ವಾ ತು ವಾಕ್ಯಂ ತಮಮೃಷ್ಯಮಾಣಾ ಜ್ಯೇಷ್ಠಾಜ್ಞಯಾ ಚೋದಿತಾ ಧಾರ್ತರಾಷ್ಟ್ರಾಃ।
06073040c ವಧಾಯ ನಿಷ್ಪೇತುರುದಾಯುಧಾಸ್ತೇ ಯುಗಕ್ಷಯೇ ಕೇತವೋ ಯದ್ವದುಗ್ರಾಃ।।
ಅವನ ಮಾತುಗಳನ್ನು ಕೇಳಿ, ಧೃಷ್ಟದ್ಯುಮ್ನನನ್ನು ಸಹಿಸಿಕೊಳ್ಳದೇ, ಹಿರಿಯಣ್ಣನ ಆಜ್ಞೆಯಿಂದ ಚೋದಿತರಾದ ಧಾರ್ತರಾಷ್ಟ್ರರು ಯುಗಕ್ಷಯದದಲ್ಲಿ ಉಗ್ರ ಧೂಮಕೇತುಗಳಂತೆ ಆಯುಧಗಳನ್ನೆತ್ತಿಕೊಂಡು ಅವನನ್ನು ವಧಿಸಲು ಅವನ ಮೇಲೆ ಎರಗಿದರು.
06073041a ಪ್ರಗೃಹ್ಯ ಚಿತ್ರಾಣಿ ಧನೂಂಷಿ ವೀರಾ ಜ್ಯಾನೇಮಿಘೋಷೈಃ ಪ್ರವಿಕಂಪಯಂತಃ।
06073041c ಶರೈರವರ್ಷನ್ದ್ರುಪದಸ್ಯ ಪುತ್ರಂ ಯಥಾಂಬುದಾ ಭೂಧರಂ ವಾರಿಜಾಲೈಃ।।
ಆ ವೀರರು ಚಿತ್ರ ಧನುಸ್ಸುಗಳನ್ನು ಹಿಡಿದು ರಥಚಕ್ರನೇಮಿಗಳ ಗಡ-ಗಡಾಶಬ್ಧದಿಂದ ಭೂಮಿಯನ್ನು ನಡುಗಿಸುತ್ತಾ ಮೇಘಗಳು ಪರ್ವತದ ಮೇಲೆ ಮಳೆಗರೆಯುವಂತೆ ದ್ರುಪದನ ಮಗನನ್ನು ಬಾಣಗಳಿಂದ ಮುಚ್ಚಿದರು.
06073041e ನಿಹತ್ಯ ತಾಂಶ್ಚಾಪಿ ಶರೈಃ ಸುತೀಕ್ಷ್ಣೈರ್ ನ ವಿವ್ಯಥೇ ಸಮರೇ ಚಿತ್ರಯೋಧೀ।।
06073042a ಸಮಭ್ಯುದೀರ್ಣಾಂಶ್ಚ ತವಾತ್ಮಜಾಂಸ್ತಥಾ ನಿಶಾಮ್ಯ ವೀರಾನಭಿತಃ ಸ್ಥಿತಾನ್ರಣೇ।
ಆದರೆ ಆ ಚಿತ್ರಯೋಧಿ ವೀರನು ಅವರ ಸುತೀಕ್ಷ್ಣ ಶರಗಳು ಮೇಲೆ ಬೀಳುತ್ತಿದ್ದರೂ ಸಮರದಲ್ಲಿ ವಿಚಲಿತನಾಗದೇ ನಿನ್ನ ಮಕ್ಕಳ ಬಾಣಗಳನ್ನು ತನ್ನದೇ ಬಾಣಗಳಿಂದ ಕತ್ತರಿಸಿ ರಣದಲ್ಲಿ ನಿಂತನು.
06073042c ಜಿಘಾಂಸುರುಗ್ರಂ ದ್ರುಪದಾತ್ಮಜೋ ಯುವಾ ಪ್ರಮೋಹನಾಸ್ತ್ರಂ ಯುಯುಜೇ ಮಹಾರಥಃ।।
06073042e ಕ್ರುದ್ಧೋ ಭೃಶಂ ತವ ಪುತ್ರೇಷು ರಾಜನ್ ದೈತ್ಯೇಷು ಯದ್ವತ್ಸಮರೇ ಮಹೇಂದ್ರಃ।।
ರಾಜನ್! ನಿನ್ನ ಪುತ್ರರ ಮೇಲೆ ತುಂಬಾ ಕ್ರುದ್ಧನಾಗಿ ಅವರನ್ನು ಕೊಲ್ಲಲು ದ್ರುಪದಾತ್ಮಜ ಯುವಕ ಮಹಾರಥನು ದೈತ್ಯರ ಮೇಲೆ ಸಮರದಲ್ಲಿ ಮಹೇಂದ್ರನು ಹೇಗೋ ಹಾಗೆ ಪ್ರಮೋಹನಾಸ್ತ್ರವನ್ನು ಹೂಡಿದನು.
06073043a ತತೋ ವ್ಯಮುಹ್ಯಂತ ರಣೇ ನೃವೀರಾಃ ಪ್ರಮೋಹನಾಸ್ತ್ರಾಹತಬುದ್ಧಿಸತ್ತ್ವಾಃ।
06073043c ಪ್ರದುದ್ರುವುಃ ಕುರವಶ್ಚೈವ ಸರ್ವೇ ಸವಾಜಿನಾಗಾಃ ಸರಥಾಃ ಸಮಂತಾತ್।
06073043e ಪರೀತಕಾಲಾನಿವ ನಷ್ಟಸಂಜ್ಞಾನ್ ಮೋಹೋಪೇತಾಂಸ್ತವ ಪುತ್ರಾನ್ನಿಶಮ್ಯ।।
ಆಗ ರಣದಲ್ಲಿ ನರವೀರರು ಪ್ರಮೋಹನಾಸ್ತ್ರದಿಂದ ಹೊಡೆಯಲ್ಪಟ್ಟು ಬುದ್ಧಿಸತ್ತ್ವಗಳನ್ನು ಕಳೆದುಕೊಂಡು ಪ್ರಜ್ಞಾಹೀನರಾದರು. ಆಯುಸ್ಸನ್ನು ಕಳೆದುಕೊಂಡವರಂತೆ ಪ್ರಜ್ಞಾಹೀನರಾಗಿ ಬಿದ್ದಿರುವ ನಿನ್ನ ಪುತ್ರರನ್ನು ನೋಡಿ ಕುರುಗಳೆಲ್ಲರೂ ಕುದುರೆ-ಆನೆ-ರಥಗಳೊಂದಿಗೆ ಎಲ್ಲಕಡೆ ಪಲಾಯನಮಾಡತೊಡಗಿದರು.
06073044a ಏತಸ್ಮಿನ್ನೇವ ಕಾಲೇ ತು ದ್ರೋಣಃ ಶಸ್ತ್ರಭೃತಾಂ ವರಃ।
06073044c ದ್ರುಪದಂ ತ್ರಿಭಿರಾಸಾದ್ಯ ಶರೈರ್ವಿವ್ಯಾಧ ದಾರುಣೈಃ।।
ಇದೇ ಸಮಯದಲ್ಲಿ ಶಸ್ತ್ರಭೃತರಲ್ಲಿ ಶ್ರೇಷ್ಠನಾದ ದ್ರೋಣನು ದ್ರುಪದನನ್ನು ಎದುರಿಸಿ ಅವನನ್ನು ಮೂರು ದಾರುಣ ಶರಗಳಿಂದ ಹೊಡೆದನು.
06073045a ಸೋಽತಿವಿದ್ಧಸ್ತದಾ ರಾಜನ್ರಣೇ ದ್ರೋಣೇನ ಪಾರ್ಥಿವಃ।
06073045c ಅಪಾಯಾದ್ದ್ರುಪದೋ ರಾಜನ್ಪೂರ್ವವೈರಮನುಸ್ಮರನ್।।
ರಾಜನ್! ದ್ರೋಣನ ಪ್ರಹಾರದಿಂದ ಬಹುವಾಗಿ ಗಾಯಗೊಂಡ ದ್ರುಪದನು ಹಿಂದಿನ ವೈರವನ್ನು ಸ್ಮರಿಸುತ್ತಾ ರಣದಿಂದ ಬಹುದೂರ ಹೊರಟುಹೋದನು.
06073046a ಜಿತ್ವಾ ತು ದ್ರುಪದಂ ದ್ರೋಣಃ ಶಂಖಂ ದಧ್ಮೌ ಪ್ರತಾಪವಾನ್।
06073046c ತಸ್ಯ ಶಂಖಸ್ವನಂ ಶ್ರುತ್ವಾ ವಿತ್ರೇಸುಃ ಸರ್ವಸೋಮಕಾಃ।।
ದ್ರುಪದನನ್ನು ಗೆದ್ದು ಪ್ರತಾಪವಾನ್ ದ್ರೋಣನು ಶಂಖವನ್ನು ಊದಿದನು. ಅವನ ಶಂಖಸ್ವನವನ್ನು ಕೀಳಿ ಸರ್ವ ಸೋಮಕರೂ ನಡುಗಿದರು.
06073047a ಅಥ ಶುಶ್ರಾವ ತೇಜಸ್ವೀ ದ್ರೋಣಃ ಶಸ್ತ್ರಭೃತಾಂ ವರಃ।
06073047c ಪ್ರಮೋಹನಾಸ್ತ್ರೇಣ ರಣೇ ಮೋಹಿತಾನಾತ್ಮಜಾಂಸ್ತವ।।
ಆಗ ತೇಜಸ್ವೀ ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೋಣನು ನಿನ್ನ ಮಕ್ಕಳು ರಣದಲ್ಲಿ ಪ್ರಮೋಹನಾಸ್ತ್ರದಿಂದ ಮೂರ್ಛಿತರಾಗಿದ್ದಾರೆಂದು ಕೇಳಿದನು.
06073048a ತತೋ ದ್ರೋಣೋ ರಾಜಗೃದ್ಧೀ ತ್ವರಿತೋಽಭಿಯಯೌ ರಣಾತ್।
06073048c ತತ್ರಾಪಶ್ಯನ್ಮಹೇಷ್ವಾಸೋ ಭಾರದ್ವಾಜಃ ಪ್ರತಾಪವಾನ್।
06073048e ಧೃಷ್ಟದ್ಯುಮ್ನಂ ಚ ಭೀಮಂ ಚ ವಿಚರಂತೌ ಮಹಾರಣೇ।।
ಆಗ ರಾಜಗೃದ್ಧೀ ದ್ರೋಣನು ತ್ವರೆಮಾಡಿ ಆ ರಣಕ್ಕೆ ಧಾವಿಸಿದನು. ಅಲ್ಲಿ ಪ್ರತಾಪವಾನ್ ಮಹೇಷ್ವಾಸ ಭಾರದ್ವಾಜನು ಮಹಾರಣದಲ್ಲಿ ಸಂಚರಿಸುತ್ತಿರುವ ಧೃಷ್ಟದ್ಯುಮ್ನನನ್ನೂ ಭೀಮನನ್ನೂ ನೋಡಿದನು.
06073049a ಮೋಹಾವಿಷ್ಟಾಂಶ್ಚ ತೇ ಪುತ್ರಾನಪಶ್ಯತ್ಸ ಮಹಾರಥಃ।
06073049c ತತಃ ಪ್ರಜ್ಞಾಸ್ತ್ರಮಾದಾಯ ಮೋಹನಾಸ್ತ್ರಂ ವ್ಯಶಾತಯತ್।।
ಮೋಹಾವಿಷ್ಟರಾಗಿದ್ದ ನಿನ್ನ ಪುತ್ರರನ್ನು ನೋಡಿ ಆ ಮಹಾರಥನು ಪ್ರಜ್ಞಾಸ್ತ್ರವನ್ನು ಬಳಸಿ ಮೋಹನಾಸ್ತ್ರವನ್ನು ನಾಶಗೊಳಿಸಿದನು.
06073050a ಅಥ ಪ್ರತ್ಯಾಗತಪ್ರಾಣಾಸ್ತವ ಪುತ್ರಾ ಮಹಾರಥಾಃ।
06073050c ಪುನರ್ಯುದ್ಧಾಯ ಸಮರೇ ಪ್ರಯಯುರ್ಭೀಮಪಾರ್ಷತೌ।।
ಆಗ ಹಿಂದೆ ಪ್ರಾಣವನ್ನು ಪಡೆದ ನಿನ್ನ ಪುತ್ರ ಮಹಾರಥರು ಪುನಃ ಸಮರದಲ್ಲಿ ಭೀಮ-ಪಾರ್ಷತರೊಂದಿಗೆ ಯುದ್ಧ ಮಾಡತೊಡಗಿದರು.
06073051a ತತೋ ಯುಧಿಷ್ಠಿರಃ ಪ್ರಾಹ ಸಮಾಹೂಯ ಸ್ವಸೈನಿಕಾನ್।
06073051c ಗಚ್ಛಂತು ಪದವೀಂ ಶಕ್ತ್ಯಾ ಭೀಮಪಾರ್ಷತಯೋರ್ಯುಧಿ।।
ಆಗ ಯುಧಿಷ್ಠಿರನು ತನ್ನ ಸೈನಿಕರನ್ನು ಒಟ್ಟುಗೂಡಿಸಿ ಕರೆದು ಹೇಳಿದನು: “ನೀವು ಒಟ್ಟು ಶಕ್ತಿಯಿಂದ ಯುದ್ಧದಲ್ಲಿ ಭೀಮ-ಪಾರ್ಷತರಿಗೆ ಸಹಾಯಮಾಡಿ.
06073052a ಸೌಭದ್ರಪ್ರಮುಖಾ ವೀರಾ ರಥಾ ದ್ವಾದಶ ದಂಶಿತಾಃ।
06073052c ಪ್ರವೃತ್ತಿಮಧಿಗಚ್ಛಂತು ನ ಹಿ ಶುಧ್ಯತಿ ಮೇ ಮನಃ।।
ಸೌಭದ್ರನೇ ಮೊದಲಾದ ಹನ್ನೆರಡು ಮಂದಿ ವೀರ ರಥರು ಕವಚಗಳನ್ನು ಧರಿಸಿ ಅವರಿದ್ದಲ್ಲಿಗೆ ಹೋಗಿ. ಇಲ್ಲವಾದರೆ ನನ್ನ ಮನಸ್ಸು ನಿಶ್ಚಿಂತವಾಗಿರಲಾರದು.”
06073053a ತ ಏವಂ ಸಮನುಜ್ಞಾತಾಃ ಶೂರಾ ವಿಕ್ರಾಂತಯೋಧಿನಃ।
06073053c ಬಾಢಮಿತ್ಯೇವಮುಕ್ತ್ವಾ ತು ಸರ್ವೇ ಪುರುಷಮಾನಿನಃ।
06073053e ಮಧ್ಯಂದಿನಗತೇ ಸೂರ್ಯೇ ಪ್ರಯಯುಃ ಸರ್ವ ಏವ ಹಿ।।
ಹೀಗೆ ಅನುಜ್ಞಾತರಾದ ಶೂರ ವಿಕ್ರಾಂತಯೋಧಿಗಳು ಹಾಗೆಯೇ ಆಗಲೆಂದು ಹೇಳಿ ಆ ಎಲ್ಲ ಪುರುಷಮಾನಿನರೂ ಸೂರ್ಯನು ಮಧ್ಯಾಕಾಶದಲ್ಲಿ ಬರಲು ತೆರಳಿದರು.
06073054a ಕೇಕಯಾ ದ್ರೌಪದೇಯಾಶ್ಚ ಧೃಷ್ಟಕೇತುಶ್ಚ ವೀರ್ಯವಾನ್।
06073054c ಅಭಿಮನ್ಯುಂ ಪುರಸ್ಕೃತ್ಯ ಮಹತ್ಯಾ ಸೇನಯಾ ವೃತಾಃ।।
06073055a ತೇ ಕೃತ್ವಾ ಸಮರೇ ವ್ಯೂಹಂ ಸೂಚೀಮುಖಮರಿಂದಮಾಃ।
06073055c ಬಿಭಿದರ್ಧಾರ್ತರಾಷ್ಟ್ರಾಣಾಂ ತದ್ರಥಾನೀಕಮಾಹವೇ।।
ಅರಿಂದಮ ಕೇಕಯರು, ದ್ರೌಪದೇಯರು, ಮತ್ತು ವೀರ್ಯವಾನ್ ಧೃಷ್ಟಕೇತುವು ಅಭಿಮನ್ಯುವನ್ನು ಮುಂದೆ ಮಾಡಿಕೊಂಡು ಮಹಾಸೇನೆಯಿಂದ ಆವೃತರಾಗಿ ಸಮರದಲ್ಲಿ ಸೂಚೀಮುಖವೆಂಬ ವ್ಯೂಹವನ್ನು ರಚಿಸಿಕೊಂಡು ಆಹವದಲ್ಲಿ ಧಾರ್ತರಾಷ್ಟ್ರರ ರಥಸೇನೆಯನ್ನು ಭೇದಿಸಿದರು.
06073056a ತಾನ್ಪ್ರಯಾತಾನ್ಮಹೇಷ್ವಾಸಾನಭಿಮನ್ಯುಪುರೋಗಮಾನ್।
06073056c ಭೀಮಸೇನಭಯಾವಿಷ್ಟಾ ಧೃಷ್ಟದ್ಯುಮ್ನವಿಮೋಹಿತಾ।।
06073057a ನ ಸಂಧಾರಯಿತುಂ ಶಕ್ತಾ ತವ ಸೇನಾ ಜನಾಧಿಪ।
06073057c ಮದಮೂರ್ಚಾನ್ವಿತಾತ್ಮಾನಂ ಪ್ರಮದೇವಾಧ್ವನಿ ಸ್ಥಿತಾ।।
ಜನಾಧಿಪ! ಅಭಿಮನ್ಯುವನ್ನು ಮುಂದಿಟ್ಟುಕೊಂಡು ಆ ಮಹೇಷ್ವಾಸರು ಬರಲು ಭೀಮಸೇನನಿಂದ ಭಯಾವಿಷ್ಟರಾಗಿದ್ದ ಮತ್ತು ಧೃಷ್ಟದ್ಯುಮ್ನನಿಂದ ವಿಮೋಹಿತರಾಗಿದ್ದ ನಿನ್ನ ಸೇನೆಯು ತಡೆದುಕೊಳ್ಳಲಾರದೇ ಮತ್ತೇರಿದ ಅಥವಾ ಮುರ್ಛಿತರಾದವರಂತೆ ಕೂಗಾಡುತ್ತಾ ನಿಂತಿತ್ತು.
06073058a ತೇಽಭಿಯಾತಾ ಮಹೇಷ್ವಾಸಾಃ ಸುವರ್ಣವಿಕೃತಧ್ವಜಾಃ।
06073058c ಪರೀಪ್ಸಂತೋಽಭ್ಯಧಾವಂತ ಧೃಷ್ಟದ್ಯುಮ್ನವೃಕೋದರೌ।।
ಸುವರ್ಣವಿಕೃತ ಧ್ವಜಗಳನ್ನು ಹೊಂದಿದ್ದ ಆ ಮಹೇಷ್ವಾಸರು ಧೃಷ್ಟದ್ಯುಮ್ನ ವೃಕೋದರರಿಗೆ ಸಹಾಯ ಮಾಡಲು ಧಾವಿಸಿ ಬಂದರು.
06073059a ತೌ ಚ ದೃಷ್ಟ್ವಾ ಮಹೇಷ್ವಾಸಾನಭಿಮನ್ಯುಪುರೋಗಮಾನ್।
06073059c ಬಭೂವತುರ್ಮುದಾ ಯುಕ್ತೌ ನಿಘ್ನಂತೌ ತವ ವಾಹಿನೀಂ।।
ಬೆಂಗಾವಲಾಗಿ ಬಂದ ಅಭಿಮನ್ಯುಪುರೋಗಮ ಮಹೇಷ್ವಾಸರನ್ನು ನೋಡಿ ನಿನ್ನ ಸೇನೆಯನ್ನು ಸಂಹರಿಸುವಲ್ಲಿ ನಿರತರಾಗಿದ್ದ ಅವರಿಬ್ಬರೂ ಸಂತೋಷಗೊಂಡರು.
06073060a ದೃಷ್ಟ್ವಾ ಚ ಸಹಸಾಯಾಂತಂ ಪಾಂಚಾಲ್ಯೋ ಗುರುಮಾತ್ಮನಃ।
06073060c ನಾಶಂಸತ ವಧಂ ವೀರಃ ಪುತ್ರಾಣಾಂ ತವ ಪಾರ್ಷತಃ।।
ಅವರಿಗೆ ಸಹಾಯುಕನಾಗಿ ಬರುತ್ತಿದ್ದ ಗುರು ದ್ರೋಣನನ್ನು ನೋಡಿ ಪಾಂಚಾಲ್ಯ ಪಾರ್ಷತ ವೀರನು ನಿನ್ನ ಮಕ್ಕಳನ್ನು ವಧಿಸಲು ಮನಸ್ಸು ಮಾಡಲಿಲ್ಲ.
06073061a ತತೋ ರಥಂ ಸಮಾರೋಪ್ಯ ಕೇಕಯಸ್ಯ ವೃಕೋದರಂ।
06073061c ಅಭ್ಯಧಾವತ್ಸುಸಂಕ್ರುದ್ಧೋ ದ್ರೋಣಮಿಷ್ವಸ್ತ್ರಪಾರಗಂ।।
ಆಗ ವೃಕೋದರನನ್ನು ಕೇಕಯನ ರಥದ ಮೇಲೇರಿಸಿ ಸುಸಂಕ್ರುದ್ಧನಾದ ಧೃಷ್ಟದ್ಯುಮ್ನನು ಅಸ್ತ್ರಪಾರಗ ದ್ರೋಣನನ್ನು ಎದುರಿಸಿದನು.
06073062a ತಸ್ಯಾಭಿಪತತಸ್ತೂರ್ಣಂ ಭಾರದ್ವಾಜಃ ಪ್ರತಾಪವಾನ್।
06073062c ಕ್ರುದ್ಧಶ್ಚಿಚ್ಛೇದ ಭಲ್ಲೇನ ಧನುಃ ಶತ್ರುನಿಷೂದನಃ।।
ಅವನು ತಮ್ಮ ಮೇಲೆ ಬೇಗನೆ ಬೀಳುತ್ತಿದ್ದುದನ್ನು ನೋಡಿ ಪ್ರತಾಪವಾನ್ ಶತ್ರುನಿಷೂದನ ಭಾರದ್ವಾಜನು ಕ್ರುದ್ಧನಾಗಿ ಅವನ ಬಿಲ್ಲನ್ನು ಒಂದೇ ಒಂದು ಭಲ್ಲದಿಂದ ತುಂಡರಿಸಿದನು.
06073063a ಅನ್ಯಾಂಶ್ಚ ಶತಶೋ ಬಾಣಾನ್ಪ್ರೇಷಯಾಮಾಸ ಪಾರ್ಷತೇ।
06073063c ದುರ್ಯೋಧನಹಿತಾರ್ಥಾಯ ಭರ್ತೃಪಿಂಡಮನುಸ್ಮರನ್।।
ಅನ್ನವಿಟ್ಟ ಸ್ವಾಮಿಯನ್ನು ಸ್ಮರಿಸುತ್ತಾ ದುರ್ಯೋಧನನ ಹಿತಕ್ಕಾಗಿ ಪಾರ್ಷತನ ಮೇಲೆ ಅನ್ಯ ನೂರಾರು ಬಾಣಗಳನ್ನು ಪ್ರಯೋಗಿಸಿದನು.
06073064a ಅಥಾನ್ಯದ್ಧನುರಾದಾಯ ಪಾರ್ಷತಃ ಪರವೀರಹಾ।
06073064c ದ್ರೋಣಂ ವಿವ್ಯಾಧ ಸಪ್ತತ್ಯಾ ರುಕ್ಮಪುಂಖೈಃ ಶಿಲಾಶಿತೈಃ।।
ಆಗ ಇನ್ನೊಂದು ಬಿಲ್ಲನ್ನು ಎತ್ತಿಕೊಂಡು ಪರವೀರಹ ಪಾರ್ಷತನು ದ್ರೋಣನನ್ನು ಏಳು ಶಿಲಾಶಿತ ರುಕ್ಮಪುಂಖಗಳಿಂದ ಹೊಡೆದನು.
06073065a ತಸ್ಯ ದ್ರೋಣಃ ಪುನಶ್ಚಾಪಂ ಚಿಚ್ಛೇದಾಮಿತ್ರಕರ್ಶನಃ।
06073065c ಹಯಾಂಶ್ಚ ಚತುರಸ್ತೂರ್ಣಂ ಚತುರ್ಭಿಃ ಸಾಯಕೋತ್ತಮೈಃ।।
06073066a ವೈವಸ್ವತಕ್ಷಯಂ ಘೋರಂ ಪ್ರೇಷಯಾಮಾಸ ವೀರ್ಯವಾನ್।
06073066c ಸಾರಥಿಂ ಚಾಸ್ಯ ಭಲ್ಲೇನ ಪ್ರೇಷಯಾಮಾಸ ಮೃತ್ಯವೇ।।
ಅಮಿತ್ರಕರ್ಶನ ದ್ರೋಣನು ಪುನಃ ಅವನ ಚಾಪವನ್ನು ಕತ್ತರಿಸಿದನು ಮತ್ತು ನಾಲ್ಕು ಉತ್ತಮ ಸಾಯಕಗಳಿಂದ ಬೇಗನೇ ಅವನ ನಾಲ್ಕು ಕುದುರೆಗಳನ್ನು ಘೋರ ವೈವಸ್ವತಕ್ಷಯಕ್ಕೆ ಕಳುಹಿಸಿದನು. ವೀರ್ಯವಾನನು ಭಲ್ಲದಿಂದ ಅವನ ಸಾರಥಿಯನ್ನು ಮೃತ್ಯುಲೋಕಕ್ಕೆ ಕಳುಹಿಸಿದನು.
06073067a ಹತಾಶ್ವಾತ್ಸ ರಥಾತ್ತೂರ್ಣಮವಪ್ಲುತ್ಯ ಮಹಾರಥಃ।
06073067c ಆರುರೋಹ ಮಹಾಬಾಹುರಭಿಮನ್ಯೋರ್ಮಹಾರಥಂ।।
ಅಶ್ವಗಳು ಹತಗೊಳ್ಳಲು ತಕ್ಷಣವೇ ಆ ಮಹಾರಥನು ರಥದಿಂದ ಹಾರಿ ಮಹಾಬಾಹು ಅಭಿಮನ್ಯುವಿನ ಮಹಾರಥವನ್ನೇರಿದನು.
06073068a ತತಃ ಸರಥನಾಗಾಶ್ವಾ ಸಮಕಂಪತ ವಾಹಿನೀ।
06073068c ಪಶ್ಯತೋ ಭೀಮಸೇನಸ್ಯ ಪಾರ್ಷತಸ್ಯ ಚ ಪಶ್ಯತಃ।।
ಆಗ ಭೀಮಸೇನ ಪಾರ್ಷತರು ನೋಡುತ್ತಿದ್ದಂತೆಯೇ ರಥ-ಆನೆ-ಕುದುರೆಗಳೊಂದಿಗೆ ಸೇನೆಯು ನಡುಗುತ್ತಿರುವುದು ಕಂಡುಬಂದಿತು.
06073069a ತತ್ಪ್ರಭಗ್ನಂ ಬಲಂ ದೃಷ್ಟ್ವಾ ದ್ರೋಣೇನಾಮಿತತೇಜಸಾ।
06073069c ನಾಶಕ್ನುವನ್ವಾರಯಿತುಂ ಸಮಸ್ತಾಸ್ತೇ ಮಹಾರಥಾಃ।।
ಅಮಿತತೇಜಸ್ವಿ ದ್ರೋಣನಿಂದ ಸದೆಬಡಿಯಲ್ಪಡುತ್ತಿದ್ದ ಸೇನೆಯನ್ನು ನೋಡಿ ಆ ಮಹಾರಥರು ಎಷ್ಟೇ ಪ್ರಯತ್ನಿಸಿದರೂ ಅವನನ್ನು ತಡೆಯಲು ಶಕ್ಯರಾಗಲಿಲ್ಲ.
06073070a ವಧ್ಯಮಾನಂ ತು ತತ್ಸೈನ್ಯಂ ದ್ರೋಣೇನ ನಿಶಿತೈಃ ಶರೈಃ।
06073070c ವ್ಯಭ್ರಮತ್ತತ್ರ ತತ್ರೈವ ಕ್ಷೋಭ್ಯಮಾಣ ಇವಾರ್ಣವಃ।।
ದ್ರೋಣನ ನಿಶಿತ ಶರಗಳಿಂದ ವಧಿಸಲ್ಪಡುತ್ತಿದ್ದ ಆ ಸೇನೆಯು ಅಲ್ಲೋಲಕಲ್ಲೋಲವಾದ ಮಹಾ ಸಾಗರದಂತೆ ಅಲ್ಲಲ್ಲಿಯೇ ಸುತ್ತಿ ಸುತ್ತಿ ಬರುತ್ತಿತ್ತು.
06073071a ತಥಾ ದೃಷ್ಟ್ವಾ ಚ ತತ್ಸೈನ್ಯಂ ಜಹೃಷೇ ಚ ಬಲಂ ತವ।
06073071c ದೃಷ್ಟ್ವಾಚಾರ್ಯಂ ಚ ಸಂಕ್ರುದ್ಧಂ ದಹಂತಂ ರಿಪುವಾಹಿನೀಂ।
06073071e ಚುಕ್ರುಶುಃ ಸರ್ವತೋ ಯೋಧಾಃ ಸಾಧು ಸಾಧ್ವಿತಿ ಭಾರತ।।
ಆ ರೀತಿಯಲ್ಲಿದ್ದ ಅವರನ್ನು ಕಂಡು ನಿನ್ನ ಸೇನೆಯವರು ಬಹಳ ಹರ್ಷಿತರಾದರು. ಕ್ರುದ್ಧನಾಗಿ ಶತ್ರುಸೇನೆಯನ್ನು ಸುಡುತ್ತಿದ್ದ ಆಚಾರ್ಯನನ್ನು ನೋಡಿ ಎಲ್ಲಕಡೆಗಳಿಂದ ಯೋಧರು “ಸಾಧು! ಸಾಧು!” ಎಂದು ಕೂಗಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಂಕುಲಯುದ್ಧೇ ದ್ರೋಣಪರಾಕ್ರಮೇ ತ್ರಿಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಂಕುಲಯುದ್ಧದಲ್ಲಿ ದ್ರೋಣಪರಾಕ್ರಮ ಎನ್ನುವ ಎಪ್ಪತ್ಮೂರನೇ ಅಧ್ಯಾಯವು.