ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 71
ಸಾರ
ಪಾಂಡವ ಸೇನೆಯ ಮಕರವ್ಯೂಹ ರಚನೆ (1-12). ಕೌರವ ಸೇನೆಯ ಕ್ರೌಂಚವ್ಯೂಹ ರಚನೆ (13-22). ಯುದ್ಧಾರಂಭ (23-36).
06071001 ಸಂಜಯ ಉವಾಚ।
06071001a ವಿಹೃತ್ಯ ಚ ತತೋ ರಾಜನ್ಸಹಿತಾಃ ಕುರುಪಾಂಡವಾಃ।
06071001c ವ್ಯತೀತಾಯಾಂ ತು ಶರ್ವರ್ಯಾಂ ಪುನರ್ಯುದ್ಧಾಯ ನಿರ್ಯಯುಃ।।
ಸಂಜಯನು ಹೇಳಿದನು: “ರಾಜನ್! ಸ್ವಲ್ಪ ಹೊತ್ತು ವಿಶ್ರಮಿಸಿ ರಾತ್ರಿಯು ಕಳೆದ ನಂತರ ಕುರುಪಾಂಡವರು ಒಟ್ಟಿಗೇ ಪುನಃ ಯುದ್ಧಮಾಡಲು ಹೊರಟರು.
06071002a ತತ್ರ ಶಬ್ದೋ ಮಹಾನಾಸೀತ್ತವ ತೇಷಾಂ ಚ ಭಾರತ।
06071002c ಯುಜ್ಯತಾಂ ರಥಮುಖ್ಯಾನಾಂ ಕಲ್ಪ್ಯತಾಂ ಚೈವ ದಂತಿನಾಂ।।
06071003a ಸಮ್ನಹ್ಯತಾಂ ಪದಾತೀನಾಂ ಹಯಾನಾಂ ಚೈವ ಭಾರತ।
06071003c ಶಂಖದುಂದುಭಿನಾದಶ್ಚ ತುಮುಲಃ ಸರ್ವತೋಽಭವತ್।।
ಭಾರತ! ಅಲ್ಲಿ ನಿನ್ನವರಲ್ಲಿ ಮತ್ತು ಅವರಲ್ಲಿ ರಥಮುಖ್ಯರು ರಥಗಳನ್ನು ಕಟ್ಟುವುದು, ಆನೆಗಳನ್ನು ಸಜ್ಜುಗೊಳಿಸಿದುದು, ಪದಾತಿ-ಕುದುರೆಗಳು ಅಣಿಯಾಗುವುದು ಇವೇ ಮೊದಲಾದ ಮಹಾಶಬ್ಧವುಂಟಾಯಿತು. ಎಲ್ಲಕಡೆ ಶಂಖ-ದುಂದುಭಿಗಳ ನಾದಗಳ ತುಮುಲವೂ ಉಂಟಾಯಿತು.
06071004a ತತೋ ಯುಧಿಷ್ಠಿರೋ ರಾಜಾ ಧೃಷ್ಟದ್ಯುಮ್ನಮಭಾಷತ।
06071004c ವ್ಯೂಹಂ ವ್ಯೂಹ ಮಹಾಬಾಹೋ ಮಕರಂ ಶತ್ರುತಾಪನಂ।।
ಆಗ ರಾಜಾ ಯುಧಿಷ್ಠಿರನು ಧೃಷ್ಟದ್ಯುಮ್ನನಿಗೆ ಹೇಳಿದನು: “ಮಹಾಬಾಹೋ! ಶತ್ರುತಾಪನ ಮಕರ ವ್ಯೂಹವನ್ನು ರಚಿಸು!”
06071005a ಏವಮುಕ್ತಸ್ತು ಪಾರ್ಥೇನ ಧೃಷ್ಟದ್ಯುಮ್ನೋ ಮಹಾರಥಃ।
06071005c ವ್ಯಾದಿದೇಶ ಮಹಾರಾಜ ರಥಿನೋ ರಥಿನಾಂ ವರಃ।।
ಮಹಾರಾಜ! ಪಾರ್ಥನು ಹೀಗೆ ಹೇಳಲು ಮಹಾರಥ ರಥಿಗಳಲ್ಲಿ ಶ್ರೇಷ್ಠ ಧೃಷ್ಟದ್ಯುಮ್ನನು ರಥಿಗಳಿಗೆ ಆದೇಶವನ್ನಿತ್ತನು.
06071006a ಶಿರೋಽಭೂದ್ದ್ರುಪದಸ್ತಸ್ಯ ಪಾಂಡವಶ್ಚ ಧನಂಜಯಃ।
06071006c ಚಕ್ಷುಷೀ ಸಹದೇವಶ್ಚ ನಕುಲಶ್ಚ ಮಹಾರಥಃ।
06071006e ತುಂಡಮಾಸೀನ್ಮಹಾರಾಜ ಭೀಮಸೇನೋ ಮಹಾಬಲಃ।।
ಮಹಾರಾಜ! ಅದರ ಶಿರದಲ್ಲಿ ದೃಪದನೂ ಪಾಂಡವ ಧನಂಜಯರೂ ಇದ್ದರು. ಮಹಾರಥ ನಕುಲ-ಸಹದೇವರು ಕಣ್ಣುಗಳಾಗಿದ್ದರು. ಮಹಾಬಲ ಭೀಮಸೇನನು ಅದರ ಕೊಕ್ಕಾಗಿದ್ದನು.
06071007a ಸೌಭದ್ರೋ ದ್ರೌಪದೇಯಾಶ್ಚ ರಾಕ್ಷಸಶ್ಚ ಘಟೋತ್ಕಚಃ।
06071007c ಸಾತ್ಯಕಿರ್ಧರ್ಮರಾಜಶ್ಚ ವ್ಯೂಹಗ್ರೀವಾಂ ಸಮಾಸ್ಥಿತಾಃ।।
ಸೌಭದ್ರ, ದ್ರೌಪದೇಯರು, ರಾಕ್ಷಸ ಘಟೋತ್ಕಚ, ಸಾತ್ಯಕಿ ಮತ್ತು ಧರ್ಮರಾಜರು ವ್ಯೂಹದ ಕುತ್ತಿಗೆಯ ಭಾಗದಲ್ಲಿದ್ದರು.
06071008a ಪೃಷ್ಠಮಾಸೀನ್ಮಹಾರಾಜ ವಿರಾಟೋ ವಾಹಿನೀಪತಿಃ।
06071008c ಧೃಷ್ಟದ್ಯುಮ್ನೇನ ಸಹಿತೋ ಮಹತ್ಯಾ ಸೇನಯಾ ವೃತಃ।।
ಮಹಾರಾಜ! ಅದರ ಪೃಷ್ಠಭಾಗದಲ್ಲಿ ವಾಹಿನೀಪತಿ ವಿರಾಟನು ಮಹಾ ಸೇನೆಯಿಂದ ಆವೃತನಾಗಿ ಧೃಷ್ಟದ್ಯುಮ್ನನೊಂದಿಗೆ ಇದ್ದನು.
06071009a ಕೇಕಯಾ ಭ್ರಾತರಃ ಪಂಚ ವಾಮಂ ಪಾರ್ಶ್ವಂ ಸಮಾಶ್ರಿತಾಃ।
06071009c ಧೃಷ್ಟಕೇತುರ್ನರವ್ಯಾಘ್ರಃ ಕರಕರ್ಷಶ್ಚ ವೀರ್ಯವಾನ್।
06071009e ದಕ್ಷಿಣಂ ಪಕ್ಷಮಾಶ್ರಿತ್ಯ ಸ್ಥಿತಾ ವ್ಯೂಹಸ್ಯ ರಕ್ಷಣೇ।।
ಐವರು ಕೇಕಯರು ಬಲಭಾಗದಲ್ಲಿದ್ದರು. ನರವ್ಯಾಘ್ರ ಧೃಷ್ಟಕೇತು ಮತ್ತು ವೀರ್ಯವಾನ್ ಕರಕರ್ಷರು ಎಡಭಾಗದಲ್ಲಿ ವ್ಯೂಹದ ರಕ್ಷಣೆಗೆ ನಿಂತಿದ್ದರು.
06071010a ಪಾದಯೋಸ್ತು ಮಹಾರಾಜ ಸ್ಥಿತಃ ಶ್ರೀಮಾನ್ಮಹಾರಥಃ।
06071010c ಕುಂತಿಭೋಜಃ ಶತಾನೀಕೋ ಮಹತ್ಯಾ ಸೇನಯಾ ವೃತಃ।।
ಮಹಾರಾಜ! ಅದರ ಪಾದಗಳಲ್ಲಿ ಶ್ರೀಮಾನ್ ಮಹಾರಥ ಕುಂತಿಭೋಜ-ಶತಾನೀಕನು ಮಹಾ ಸೇನೆಯಿಂದ ಆವೃತನಾಗಿ ನಿಂತಿದ್ದನು.
06071011a ಶಿಖಂಡೀ ತು ಮಹೇಷ್ವಾಸಃ ಸೋಮಕೈಃ ಸಂವೃತೋ ಬಲೀ।
06071011c ಇರಾವಾಂಶ್ಚ ತತಃ ಪುಚ್ಛೇ ಮಕರಸ್ಯ ವ್ಯವಸ್ಥಿತೌ।।
ಮಕರದ ಬಾಲವಾಗಿ ಇರಾವಾನ ಮತ್ತು ಮಹೇಷ್ವಾಸ ಬಲೀ ಶಿಖಂಡಿಯು ಸೋಮಕರಿಂದ ಸಂವೃತನಾಗಿ ವ್ಯವಸ್ಥಿತರಾಗಿದ್ದರು.
06071012a ಏವಮೇತನ್ಮಹಾವ್ಯೂಹಂ ವ್ಯೂಹ್ಯ ಭಾರತ ಪಾಂಡವಾಃ।
06071012c ಸೂರ್ಯೋದಯೇ ಮಹಾರಾಜ ಪುನರ್ಯುದ್ಧಾಯ ದಂಶಿತಾಃ।।
ಭಾರತ! ಮಹಾರಾಜ! ಹೀಗೆ ಮಹಾವ್ಯೂಹವನ್ನು ರಚಿಸಿ ಕವಚಗಳನ್ನು ಧರಿಸಿ ಪಾಂಡವರು ಸೂರ್ಯೋದಯದಲ್ಲಿ ಪುನಃ ಯುದ್ಧಕ್ಕೆ ಹೊರಟರು.
06071013a ಕೌರವಾನಭ್ಯಯುಸ್ತೂರ್ಣಂ ಹಸ್ತ್ಯಶ್ವರಥಪತ್ತಿಭಿಃ।
06071013c ಸಮುಚ್ಛ್ರಿತೈರ್ಧ್ವ್ವಜೈಶ್ಚಿತ್ರೈಃ ಶಸ್ತ್ರೈಶ್ಚ ವಿಮಲೈಃ ಶಿತೈಃ।।
ಕೌರವರೂ ಕೂಡ ತಕ್ಷಣವೇ ಆನೆ-ಕುದುರೆ-ರಥ-ಪದಾತಿಗಳೊಂದಿಗೆ ಚಿತ್ರವಾದ ಧ್ವಜಗಳಿಂದ ಹೊದಿಕೆಗಳಿಂದ ಮತ್ತು ಹೊಳೆಯುವ ಹರಿತ ಶಸ್ತ್ರಗಳೊಂದಿಗೆ ಹೊರಟರು.
06071014a ವ್ಯೂಹಂ ದೃಷ್ಟ್ವಾ ತು ತತ್ಸೈನ್ಯಂ ಪಿತಾ ದೇವವ್ರತಸ್ತವ।
06071014c ಕ್ರೌಂಚೇನ ಮಹತಾ ರಾಜನ್ಪ್ರತ್ಯವ್ಯೂಹತ ವಾಹಿನೀಂ।।
ರಾಜನ್! ಆ ಸೈನ್ಯವನ್ನು ನೋಡಿ ನಿನ್ನ ಪಿತ ದೇವವ್ರತನು ಸೇನೆಯನ್ನು ಮಹಾ ಕ್ರೌಂಚ ವ್ಯೂಹವಾಗಿ ರಚಿಸಿದನು.
06071015a ತಸ್ಯ ತುಂಡೇ ಮಹೇಷ್ವಾಸೋ ಭಾರದ್ವಾಜೋ ವ್ಯರೋಚತ।
06071015c ಅಶ್ವತ್ಥಾಮಾ ಕೃಪಶ್ಚೈವ ಚಕ್ಷುರಾಸ್ತಾಂ ನರೇಶ್ವರ।।
ನರೇಶ್ವರ! ಅದರ ಕೊಕ್ಕಿನಲ್ಲಿ ಮಹೇಷ್ವಾಸ ಭಾರದ್ವಾಜನು ವಿರಾಜಿಸಿದನು. ಅಶ್ವತ್ಥಾಮ ಮತ್ತು ಕೃಪರು ಅದರ ಕಣ್ಣುಗಳಾದರು.
06071016a ಕೃತವರ್ಮಾ ತು ಸಹಿತಃ ಕಾಂಬೋಜಾರಟ್ಟಬಾಹ್ಲಿಕೈಃ।
06071016c ಶಿರಸ್ಯಾಸೀನ್ನರಶ್ರೇಷ್ಠಃ ಶ್ರೇಷ್ಠಃ ಸರ್ವಧನುಷ್ಮತಾಂ।।
ಕಾಂಬೋಜ, ಆರಟ್ಟ ಮತ್ತು ಬಾಹ್ಲೀಕರೊಂದಿಗೆ ನರಶ್ರೇಷ್ಠ, ಸರ್ವ ಧನುಷ್ಮತರಲ್ಲಿ ಶ್ರೇಷ್ಠ ಕೃತವರ್ಮನು ಅದರ ಶಿರೋಭಾಗದಲ್ಲಿದ್ದನು.
06071017a ಗ್ರೀವಾಯಾಂ ಶೂರಸೇನಸ್ತು ತವ ಪುತ್ರಶ್ಚ ಮಾರಿಷ।
06071017c ದುರ್ಯೋಧನೋ ಮಹಾರಾಜ ರಾಜಭಿರ್ಬಹುಭಿರ್ವೃತಃ।।
ಮಾರಿಷ! ಅದರ ಕಂಠದಲ್ಲಿ ನಿನ್ನ ಪುತ್ರ ಶೂರಸೇನ, ಮಹಾರಾಜ ದುರ್ಯೋಧನನು ಅನೇಕ ರಾಜರಿಂದ ಆವೃತನಾಗಿದ್ದನು.
06071018a ಪ್ರಾಗ್ಜ್ಯೋತಿಷಸ್ತು ಸಹಿತಃ ಮದ್ರಸೌವೀರಕೇಕಯೈಃ।
06071018c ಉರಸ್ಯಭೂನ್ನರಶ್ರೇಷ್ಠ ಮಹತ್ಯಾ ಸೇನಯಾ ವೃತಃ।।
ನರಶ್ರೇಷ್ಠ! ಪ್ರಾಗ್ಜ್ಯೋತಿಷದವನೊಡನೆ ಮದ್ರ-ಸೌವೀರ-ಕೇಕಯರು ಮಹಾ ಸೇನೆಗಳಿಂದ ಆವೃತರಾಗಿ ಅದರ ತೊಡೆಗಳಾದರು.
06071019a ಸ್ವಸೇನಯಾ ಚ ಸಹಿತಃ ಸುಶರ್ಮಾ ಪ್ರಸ್ಥಲಾಧಿಪಃ।
06071019c ವಾಮಂ ಪಕ್ಷಂ ಸಮಾಶ್ರಿತ್ಯ ದಂಶಿತಃ ಸಮವಸ್ಥಿತಃ।।
ಪ್ರಸ್ಥಲಾಧಿಪ ಸುಶರ್ಮನು ತನ್ನ ಸೇನೆಯ ಸಹಿತ ಕವಚಗಳನ್ನು ಧರಿಸಿ ವ್ಯೂಹದ ಬಲಭಾಗವನ್ನು ರಕ್ಷಿಸುತ್ತಿದ್ದನು.
06071020a ತುಷಾರಾ ಯವನಾಶ್ಚೈವ ಶಕಾಶ್ಚ ಸಹ ಚೂಚುಪೈಃ।
06071020c ದಕ್ಷಿಣಂ ಪಕ್ಷಮಾಶ್ರಿತ್ಯ ಸ್ಥಿತಾ ವ್ಯೂಹಸ್ಯ ಭಾರತ।।
ಭಾರತ! ತುಷಾರರು, ಯವನರು ಮತ್ತು ಶಕರು ಚೂಚುಪರೊಂದಿಗೆ ವ್ಯೂಹದ ಎಡಭಾಗವನ್ನು ಆಶ್ರಯಿಸಿ ನಿಂತಿದ್ದರು.
06071021a ಶ್ರುತಾಯುಶ್ಚ ಶತಾಯುಶ್ಚ ಸೌಮದತ್ತಿಶ್ಚ ಮಾರಿಷ।
06071021c ವ್ಯೂಹಸ್ಯ ಜಘನೇ ತಸ್ಥೂ ರಕ್ಷಮಾಣಾಃ ಪರಸ್ಪರಂ।।
ಮಾರಿಷ! ಶ್ರುತಾಯು, ಶತಾಯು ಮತ್ತು ಸೌಮದತ್ತಿಯರು ವ್ಯೂಹದ ಜಘನ ಪ್ರದೇಶದಲ್ಲಿ ಪರಸ್ಪರರನ್ನು ರಕ್ಷಿಸಲು ನಿಂತರು.
06071022a ತತೋ ಯುದ್ಧಾಯ ಸಂಜಗ್ಮುಃ ಪಾಂಡವಾಃ ಕೌರವೈಃ ಸಹ।
06071022c ಸೂರ್ಯೋದಯೇ ಮಹಾರಾಜ ತತೋ ಯುದ್ಧಮಭೂನ್ಮಹತ್।।
ಆಗ ಮಹಾರಾಜ! ಪಾಂಡವರು ಕೌರವರು ಒಟ್ಟಿಗೆ ಯುದ್ಧಕ್ಕಾಗಿ ಬಂದು ಸೇರಿದರು. ಸೂರ್ಯೋದಯದಲ್ಲಿ ಮಹಾ ಯುದ್ಧವು ನಡೆಯಿತು.
06071023a ಪ್ರತೀಯೂ ರಥಿನೋ ನಾಗಾನ್ನಾಗಾಶ್ಚ ರಥಿನೋ ಯಯುಃ।
06071023c ಹಯಾರೋಹಾ ಹಯಾರೋಹಾನ್ರಥಿನಶ್ಚಾಪಿ ಸಾದಿನಃ।।
ರಥಿಗಳು ಆನೆಗಳ ಮೇಲೂ, ಆನೆಗಳು ರಥಿಗಳ ಮೇಲೂ ಎರಗಿದವು. ಅಶ್ವಾರೋಹಿಗಳು ಅಶ್ವಾರೋಹಿಗಳನ್ನೂ ರಥಿಗಳು ಅಶ್ವಾರೋಹಿಗಳನ್ನೂ ಎದುರಿಸಿದರು.
06071024a ಸಾರಥಿಂ ಚ ರಥೀ ರಾಜನ್ಕುಂಜರಾಂಶ್ಚ ಮಹಾರಣೇ।
06071024c ಹಸ್ತ್ಯಾರೋಹಾ ರಥಾರೋಹಾನ್ರಥಿನಶ್ಚಾಪಿ ಸಾದಿನಃ।।
06071025a ರಥಿನಃ ಪತ್ತಿಭಿಃ ಸಾರ್ಧಂ ಸಾದಿನಶ್ಚಾಪಿ ಪತ್ತಿಭಿಃ।
06071025c ಅನ್ಯೋನ್ಯಂ ಸಮರೇ ರಾಜನ್ಪ್ರತ್ಯಧಾವನ್ನಮರ್ಷಿತಾಃ।।
ರಾಜನ್! ಮಹಾರಣದಲ್ಲಿ ರಥಿಗಳು ಸಾರಥಿ ಮತ್ತು ಆನೆಗಳನ್ನೂ, ಆನೆಗಳ ಸವಾರರು ರಥಾರೋಹರನ್ನೂ, ರಥಿಗಳು ಅಶ್ವಾರೋಹಿಗಳನ್ನೂ, ರಥಿಗಳು ಪದಾತಿಗಳನ್ನು, ಹಾಗೆಯೇ ಅಶ್ವಾರೋಹಿಗಳು ಪದಾತಿಗಳನ್ನೂ, ಅನ್ಯೋನ್ಯರನ್ನು ಸಮರದಲ್ಲಿ ಕೋಪದಿಂದ ಮುನ್ನುಗ್ಗಿ ಆಕ್ರಮಣಿಸಿದರು.
06071026a ಭೀಮಸೇನಾರ್ಜುನಯಮೈರ್ಗುಪ್ತಾ ಚಾನ್ಯೈರ್ಮಹಾರಥೈಃ।
06071026c ಶುಶುಭೇ ಪಾಂಡವೀ ಸೇನಾ ನಕ್ಷತ್ರೈರಿವ ಶರ್ವರೀ।।
ಭೀಮಸೇನ, ಅರ್ಜುನ, ಯಮಳರು ಮತ್ತು ಅನ್ಯ ಮಹಾರಥರಿಂದ ರಕ್ಷಿಸಲ್ಪಟ್ಟ ಪಾಂಡವೀ ಸೇನೆಯು ರಾತ್ರಿಯಲ್ಲಿನ ನಕ್ಷತ್ರಗಳಂತೆ ಶೋಭಿಸಿತು.
06071027a ತಥಾ ಭೀಷ್ಮಕೃಪದ್ರೋಣಶಲ್ಯದುರ್ಯೋಧನಾದಿಭಿಃ।
06071027c ತವಾಪಿ ವಿಬಭೌ ಸೇನಾ ಗ್ರಹೈರ್ದ್ಯೌರಿವ ಸಂವೃತಾ।।
ಹಾಗೆಯೇ ಭೀಷ್ಮ, ಕೃಪ, ದ್ರೋಣ, ಶಲ್ಯ, ದುರ್ಯೋಧನಾದಿಗಳಿಂದ ರಕ್ಷಿತವಾದ ನಿನ್ನ ಸೇನೆಯೂ ಕೂಡ ಆಕಾಶದಲ್ಲಿ ಸೇರಿರುವ ಗ್ರಹಗಳಂತೆ ಹೊಳೆಯಿತು.
06071028a ಭೀಮಸೇನಸ್ತು ಕೌಂತೇಯೋ ದ್ರೋಣಂ ದೃಷ್ಟ್ವಾ ಪರಾಕ್ರಮೀ।
06071028c ಅಭ್ಯಯಾಜ್ಜವನೈರಶ್ವೈರ್ಭಾರದ್ವಾಜಸ್ಯ ವಾಹಿನೀಂ।।
ಪರಾಕ್ರಮೀ ಕೌಂತೇಯ ಭೀಮಸೇನನಾದರೋ ದ್ರೋಣನನ್ನು ನೋಡಿ ವೇಗದ ಅಶ್ವಗಳಿಂದ ಭಾರದ್ವಾಜನ ಸೇನೆಯನ್ನು ಎದುರಿಸಿದನು.
06071029a ದ್ರೋಣಸ್ತು ಸಮರೇ ಕ್ರುದ್ಧೋ ಭೀಮಂ ನವಭಿರಾಯಸೈಃ।
06071029c ವಿವ್ಯಾಧ ಸಮರೇ ರಾಜನ್ಮರ್ಮಾಣ್ಯುದ್ದಿಶ್ಯ ವೀರ್ಯವಾನ್।।
ರಾಜನ್! ಸಮರದಲ್ಲಿ ಕ್ರುದ್ಧನಾದ ವೀರ್ಯವಾನ್ ದ್ರೋಣನಾದರೋ ಭೀಮನನ್ನು ಒಂಭತ್ತು ಆಯಸಗಳಿಂದ ಮರ್ಮಗಳಿಗೆ ಗುರಿಯಿಟ್ಟು ಹೊಡೆದನು.
06071030a ದೃಢಾಹತಸ್ತತೋ ಭೀಮೋ ಭಾರದ್ವಾಜಸ್ಯ ಸಂಯುಗೇ।
06071030c ಸಾರಥಿಂ ಪ್ರೇಷಯಾಮಾಸ ಯಮಸ್ಯ ಸದನಂ ಪ್ರತಿ।।
ಆ ಸಂಯುಗದಲ್ಲಿ ದೃಢವಾಗಿ ಹೊಡೆಯಲ್ಪಟ್ಟ ಭೀಮನು ಭಾರದ್ವಾಜನ ಸಾರಥಿಯನ್ನು ಯಮನ ಸದನಕ್ಕೆ ಕಳುಹಿಸಿದನು.
06071031a ಸ ಸಂಗೃಹ್ಯ ಸ್ವಯಂ ವಾಹಾನ್ಭಾರದ್ವಾಜಃ ಪ್ರತಾಪವಾನ್।
06071031c ವ್ಯಧಮತ್ಪಾಂಡವೀಂ ಸೇನಾಂ ತೂಲರಾಶಿಮಿವಾನಲಃ।।
ಆಗ ಪ್ರತಾಪವಾನ್ ಭರದ್ವಾಜನು ಕುದುರೆಗಳನ್ನು ಸ್ವಯಂ ತಾನೇ ನಿಯಂತ್ರಿಸುತ್ತಾ ಪಾಂಡವೀ ಸೇನೆಯನ್ನು ಅಗ್ನಿಯು ಹತ್ತಿಯ ರಾಶಿಯಂತೆ ನಾಶಪಡಿಸಿದನು.
06071032a ತೇ ವಧ್ಯಮಾನಾ ದ್ರೋಣೇನ ಭೀಷ್ಮೇಣ ಚ ನರೋತ್ತಮ।
06071032c ಸೃಂಜಯಾಃ ಕೇಕಯೈಃ ಸಾರ್ಧಂ ಪಲಾಯನಪರಾಭವನ್।।
ನರೋತ್ತಮ! ದ್ರೋಣ ಮತ್ತು ಭೀಷ್ಮರಿಂದ ವಧಿಸಲ್ಪಟ್ಟ ಸೃಂಜಯರು ಮತ್ತು ಕೇಕಯುರು ಒಟ್ಟಿಗೇ ಪರಾಭವಗೊಂಡು ಪಲಾಯನಗೈದರು.
06071033a ತಥೈವ ತಾವಕಂ ಸೈನ್ಯಂ ಭೀಮಾರ್ಜುನಪರಿಕ್ಷತಂ।
06071033c ಮುಹ್ಯತೇ ತತ್ರ ತತ್ರೈವ ಸಮದೇವ ವರಾಂಗನಾ।।
ಹಾಗೆಯೇ ನಿನ್ನವರ ಸೈನ್ಯವೂ ಭೀಮಾರ್ಜುನರಿಂದ ಪೀಡಿತವಾಗಿ ವರಾಂಗನೆಯು ಸೊಕ್ಕಿನಿಂದ ನಿಂತುಕೊಳ್ಳುವಂತೆ ಅಲ್ಲಿಯೇ ಗರಬಡಿದಂತೆ ನಿಂತುಬಿಟ್ಟಿತು.
06071034a ಅಭಿದ್ಯೇತಾಂ ತತೋ ವ್ಯೂಹೌ ತಸ್ಮಿನ್ವೀರವರಕ್ಷಯೇ।
06071034c ಆಸೀದ್ವ್ಯತಿಕರೋ ಘೋರಸ್ತವ ತೇಷಾಂ ಚ ಭಾರತ।।
ಭಾರತ! ಆ ವೀರವರಕ್ಷಯದ ವ್ಯೂಹಗಳಲ್ಲಿ ನಿನ್ನವರ ಮತ್ತು ಅವರ ಘೋರ ನಷ್ಟಗಳಾದವು.
06071035a ತದದ್ಭುತಮಪಶ್ಯಾಮ ತಾವಕಾನಾಂ ಪರೈಃ ಸಹ।
06071035c ಏಕಾಯನಗತಾಃ ಸರ್ವೇ ಯದಯುಧ್ಯಂತ ಭಾರತ।।
ಭಾರತ! ನಿನ್ನವರು ಶತ್ರುಗಳೊಂದಿಗೆ ಜೀವವನ್ನೂ ತೊರೆದು ಎಲ್ಲರೂ ಹೋರಾಡುವ ಅದ್ಭುತವನ್ನು ನಾವು ನೋಡಿದೆವು.
06071036a ಪ್ರತಿಸಂವಾರ್ಯ ಚಾಸ್ತ್ರಾಣಿ ತೇಽನ್ಯೋನ್ಯಸ್ಯ ವಿಶಾಂ ಪತೇ।
06071036c ಯುಯುಧುಃ ಪಾಂಡವಾಶ್ಚೈವ ಕೌರವಾಶ್ಚ ಮಹಾರಥಾಃ।।
ವಿಶಾಂಪತೇ! ಮಹಾರಥ ಪಾಂಡವರು ಮತ್ತು ಕೌರವರು ಅಸ್ತ್ರಗಳನ್ನು ತಿರುಗಿ ಪ್ರಯೋಗಿಸುತ್ತಾ ಅನ್ಯೋನ್ಯರೊಡನೆ ಯುದ್ಧಮಾಡಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಷಷ್ಠದಿವಸಯುದ್ಧಾರಂಭೇ ಏಕಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಷಷ್ಠದಿವಸಯುದ್ಧಾರಂಭ ಎನ್ನುವ ಎಪ್ಪತ್ತೊಂದನೇ ಅಧ್ಯಾಯವು.