ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 70
ಸಾರ
ಭೂರಿಶ್ರವಸನು ಸಾತ್ಯಕಿಯ ಹತ್ತು ಮಕ್ಕಳನ್ನು ಸಂಹರಿಸಿದುದು (1-24). ಐದನೆಯ ದಿನದ ಯುದ್ಧ ಸಮಾಪ್ತಿ (25-37).
06070001 ಸಂಜಯ ಉವಾಚ।
06070001a ಅಥ ರಾಜನ್ಮಹಾಬಾಹುಃ ಸಾತ್ಯಕಿರ್ಯುದ್ಧದುರ್ಮದಃ।
06070001c ವಿಕೃಷ್ಯ ಚಾಪಂ ಸಮರೇ ಭಾರಸಾಧನಮುತ್ತಮಂ।।
06070002a ಪ್ರಾಮುಂಚತ್ಪುಂಖಸಂಯುಕ್ತಾಂ ಶರಾನಾಶೀವಿಷೋಪಮಾನ್।
06070002c ಪ್ರಕಾಶಂ ಲಘು ಚಿತ್ರಂ ಚ ದರ್ಶಯನ್ನಸ್ತ್ರಲಾಘವಂ।।
ಸಂಜಯನು ಹೇಳಿದನು: “ರಾಜನ್! ಆಗ ಮಹಾಬಾಹು ಯುದ್ಧದುರ್ಮದ ಸಾತ್ಯಕಿಯು ಸಮರದಲ್ಲಿ ಉತ್ತವಾದ ಭಾರಸಾಧನ ಚಾಪವನ್ನು ಎಳೆದು ಪುಂಖಗಳನ್ನು ಹೊಂದಿದ್ದ ಸರ್ಪದ ವಿಷಸಮಾನ ಶರಗಳನ್ನು ಪ್ರಯೋಗಿಸಿ ಅವನ ವಿಚಿತ್ರ ಲಘು ಹಸ್ತಲಾಘವವನ್ನು ಪ್ರಕಟಪಡಿಸಿದನು.
06070003a ತಸ್ಯ ವಿಕ್ಷಿಪತಶ್ಚಾಪಂ ಶರಾನನ್ಯಾಂಶ್ಚ ಮುಂಚತಃ।
06070003c ಆದದಾನಸ್ಯ ಭೂಯಶ್ಚ ಸಂದಧಾನಸ್ಯ ಚಾಪರಾನ್।।
06070004a ಕ್ಷಿಪತಶ್ಚ ಶರಾನಸ್ಯ ರಣೇ ಶತ್ರೂನ್ವಿನಿಘ್ನತಃ।
06070004c ದದೃಶೇ ರೂಪಮತ್ಯರ್ಥಂ ಮೇಘಸ್ಯೇವ ಪ್ರವರ್ಷತಃ।।
ಅವನು ರಣದಲ್ಲಿ ಶತ್ರುಗಳ ಮೇಲೆ ಶರಗಳನ್ನು ಎಸೆದು ಹೊಡೆಯುವಾಗ ಎಷ್ಟು ಜೋರಾಗಿ ಚಾಪವನ್ನು ಎಳೆದು ಶರಗಳನ್ನು ಪ್ರಯೋಗಿಸಿ ಪುನಃ ಇತರ ಶರಗಳನ್ನು ಹೂಡಿ ಹೊಡೆಯುತ್ತಿದ್ದನೆಂದರೆ ಅವನು ಮಳೆಸುರಿಸುತ್ತಿರುವ ಮೇಘದಂತೆಯೇ ತೋರಿದನು.
06070005a ತಮುದೀರ್ಯಂತಮಾಲೋಕ್ಯ ರಾಜಾ ದುರ್ಯೋಧನಸ್ತತಃ।
06070005c ರಥಾನಾಮಯುತಂ ತಸ್ಯ ಪ್ರೇಷಯಾಮಾಸ ಭಾರತ।।
ಭಾರತ! ಅವನು ಆ ರೀತಿ ಉರಿಯುತ್ತಿರುವುದನ್ನು ಅವಲೋಕಿಸಿದ ರಾಜಾ ದುರ್ಯೋಧನನು ಹತ್ತು ಸಾವಿರ ರಥಗಳನ್ನು ಅವನಿದ್ದಲ್ಲಿಗೆ ಕಳುಹಿಸಿದನು.
06070006a ತಾಂಸ್ತು ಸರ್ವಾನ್ಮಹೇಷ್ವಾಸಾನ್ಸಾತ್ಯಕಿಃ ಸತ್ಯವಿಕ್ರಮಃ।
06070006c ಜಘಾನ ಪರಮೇಷ್ವಾಸೋ ದಿವ್ಯೇನಾಸ್ತ್ರೇಣ ವೀರ್ಯವಾನ್।।
ಆ ಎಲ್ಲ ಮಹೇಷ್ವಾಸರನ್ನೂ ಸತ್ಯವಿಕ್ರಮ ಪರಮೇಷ್ವಾಸ ವೀರ್ಯವಾನ್ ಸಾತ್ಯಕಿಯು ದಿವ್ಯಾಸ್ತ್ರಗಳಿಂದ ಸಂಹರಿಸಿದನು.
06070007a ಸ ಕೃತ್ವಾ ದಾರುಣಂ ಕರ್ಮ ಪ್ರಗೃಹೀತಶರಾಸನಃ।
06070007c ಆಸಸಾದ ತತೋ ವೀರೋ ಭೂರಿಶ್ರವಸಮಾಹವೇ।।
ಆ ದಾರುಣಕರ್ಮವನ್ನು ಮಾಡಿ ಬಿಲ್ಲನ್ನು ಹಿಡಿದು ಆ ವೀರನು ಆಹವದಲ್ಲಿ ಭೂರಿಶ್ರವನನ್ನು ಎದುರಿಸಿದನು.
06070008a ಸ ಹಿ ಸಂದೃಶ್ಯ ಸೇನಾಂ ತಾಂ ಯುಯುಧಾನೇನ ಪಾತಿತಾಂ।
06070008c ಅಭ್ಯಧಾವತ ಸಂಕ್ರುದ್ಧಃ ಕುರೂಣಾಂ ಕೀರ್ತಿವರ್ಧನಃ।।
ಆ ಕುರುಗಳ ಕೀರ್ತಿವರ್ಧನನಾದರೋ ಸೇನೆಯು ಯುಯುಧಾನನಿಂದ ಉರುಳಿಸಲ್ಪಡುತ್ತಿದ್ದುದನ್ನು ನೋಡಿ ಸಂಕ್ರುದ್ಧನಾಗಿ ರಭಸದಿಂದ ಅವನ ಮೇಲೆ ನುಗ್ಗಿದನು.
06070009a ಇಂದ್ರಾಯುಧಸವರ್ಣಂ ತತ್ಸ ವಿಸ್ಫಾರ್ಯ ಮಹದ್ಧನುಃ।
06070009c ವ್ಯಸೃಜದ್ವಜ್ರಸಂಕಾಶಾಂ ಶರಾನಾಶೀವಿಷೋಪಮಾನ್।।
06070009e ಸಹಸ್ರಶೋ ಮಹಾರಾಜ ದರ್ಶಯನ್ಪಾಣಿಲಾಘವಂ।।
ಮಹಾರಾಜ! ಅವನು ಕಾಮನಬಿಲ್ಲಿನ ಬಣ್ಣದ ಮಹಾಧನುಸ್ಸನ್ನು ಟೇಂಕರಿಸಿ ಸಹಸ್ರಾರು ವಜ್ರಸದೃಶ ಸರ್ಪವಿಷಸಮ ಶರಗಳನ್ನು ಬಿಟ್ಟು ಹಸ್ತಲಾಘವವನ್ನು ತೋರಿಸಿದನು.
06070010a ಶರಾಂಸ್ತಾನ್ಮೃತ್ಯುಸಂಸ್ಪರ್ಶಾನ್ಸಾತ್ಯಕೇಸ್ತು ಪದಾನುಗಾಃ।
06070010c ನ ವಿಷೇಹುಸ್ತದಾ ರಾಜನ್ದುದ್ರುವುಸ್ತೇ ಸಮಂತತಃ।
06070010e ವಿಹಾಯ ಸಮರೇ ರಾಜನ್ಸಾತ್ಯಕಿಂ ಯುದ್ಧದುರ್ಮದಂ।।
ರಾಜನ್! ಸಾತ್ಯಕಿಯನ್ನು ಅನುಸರಿಸಿ ಬಂದವರು ಮೃತ್ಯುವಿನ ಸ್ಪರ್ಶದಂತಿದ್ದ ಆ ಶರಗಳನ್ನು ತಡೆಯಲಾಗದೇ, ಸಮರದಲ್ಲಿ ಯುದ್ಧದುರ್ಮದ ಸಾತ್ಯಕಿಯನ್ನು ಬಿಟ್ಟು ಎಲ್ಲಕಡೆ ಪಲಾಯನಮಾಡಿದರು.
06070011a ತಂ ದೃಷ್ಟ್ವಾ ಯುಯುಧಾನಸ್ಯ ಸುತಾ ದಶ ಮಹಾಬಲಾಃ।
06070011c ಮಹಾರಥಾಃ ಸಮಾಖ್ಯಾತಾಶ್ಚಿತ್ರವರ್ಮಾಯುಧಧ್ವಜಾಃ।।
06070012a ಸಮಾಸಾದ್ಯ ಮಹೇಷ್ವಾಸಂ ಭೂರಿಶ್ರವಸಮಾಹವೇ।
06070012c ಊಚುಃ ಸರ್ವೇ ಸುಸಂರಬ್ಧಾ ಯೂಪಕೇತುಂ ಮಹಾರಣೇ।।
ಅದನ್ನು ನೋಡಿ ಬಣ್ಣಬಣ್ಣದ ಕವಚಗಳು, ಆಯುಧಗಳು ಮತ್ತು ಧ್ವಜಗಳನ್ನು ಹೊಂದಿದ್ದ ಯುಯುಧಾನನ ಹತ್ತು ಮಹಾಬಲ ಮಹಾರಥ ಮಕ್ಕಳು ಒಟ್ಟಾಗಿ ಆಹವದಲ್ಲಿ ಮಹೇಷ್ವಾಸ ಭೂರಿಶ್ರವನನ್ನು ಎದುರಿಸಿ ಎಲ್ಲರೂ ಸಂರಬ್ಧರಾಗಿ ಮಹಾರಣದಲ್ಲಿ ಯೂಪಕೇತುವಿಗೆ ಹೇಳಿದರು:
06070013a ಭೋ ಭೋ ಕೌರವದಾಯಾದ ಸಹಾಸ್ಮಾಭಿರ್ಮಹಾಬಲ।
06070013c ಏಹಿ ಯುಧ್ಯಸ್ವ ಸಂಗ್ರಾಮೇ ಸಮಸ್ತೈಃ ಪೃಥಗೇವ ವಾ।।
“ಭೋ! ಭೋ! ಕೌರವದಾಯಾದ! ಮಹಾಬಲ! ಬಾ! ನಮ್ಮೊಡನೆ ಯುದ್ಧಮಾಡು! ಒಟ್ಟಿಗೇ ನಮ್ಮೊಡನೆ ಯುದ್ಧಮಾಡು ಅಥವಾ ಒಬ್ಬೊಬ್ಬರೊಡನೆ ಯುದ್ಧಮಾಡು.
06070014a ಅಸ್ಮಾನ್ವಾ ತ್ವಂ ಪರಾಜಿತ್ಯ ಯಶಃ ಪ್ರಾಪ್ನುಹಿ ಸಂಯುಗೇ।
06070014c ವಯಂ ವಾ ತ್ವಾಂ ಪರಾಜಿತ್ಯ ಪ್ರೀತಿಂ ದಾಸ್ಯಾಮಹೇ ಪಿತುಃ।।
ನಮ್ಮನ್ನು ಪರಾಜಯಗೊಳಿಸಿ ನೀನು ಸಂಯುಗದಲ್ಲಿ ಯಶಸ್ಸನ್ನು ಗಳಿಸುತ್ತೀಯೆ. ಅಥವಾ ನಾವು ನಿನ್ನನ್ನು ಪರಾಜಯಗೊಳಿಸಿ ನಮ್ಮ ತಂದೆಯ ಪ್ರೀತಿಯನ್ನು ಗಳಿಸುತ್ತೇವೆ.”
06070015a ಏವಮುಕ್ತಸ್ತದಾ ಶೂರೈಸ್ತಾನುವಾಚ ಮಹಾಬಲಃ।
06070015c ವೀರ್ಯಶ್ಲಾಘೀ ನರಶ್ರೇಷ್ಠಸ್ತಾನ್ದೃಷ್ಟ್ವಾ ಸಮುಪಸ್ಥಿತಾನ್।।
ಇದನ್ನು ಕೇಳಿ ಆ ಮಹಾಬಲ ವೀರ್ಯಶ್ಲಾಘೀ ನರಶ್ರೇಷ್ಠನು ಒಟ್ಟಾಗಿರುವ ಅವರನ್ನು ನೋಡಿ ಆ ಶೂರರಿಗೆ ಹೇಳಿದನು:
06070016a ಸಾಧ್ವಿದಂ ಕಥ್ಯತೇ ವೀರಾ ಯದೇವಂ ಮತಿರದ್ಯ ವಃ।
06070016c ಯುಧ್ಯಧ್ವಂ ಸಹಿತಾ ಯತ್ತಾ ನಿಹನಿಷ್ಯಾಮಿ ವೋ ರಣೇ।।
“ವೀರರೇ! ಒಳ್ಳೆಯದಾಗಿಯೇ ಹೇಳಿದ್ದೀರಿ. ಅದೇ ನಿಮ್ಮ ಬಯಕೆಯಾದರೆ ಎಲ್ಲರೂ ಒಟ್ಟಾಗಿ ಪ್ರಯತ್ನಪಟ್ಟು ಯುದ್ಧಮಾಡಿ. ನಿಮ್ಮನ್ನು ರಣದಲ್ಲಿ ಸಂಹರಿಸುತ್ತೇನೆ.”
06070017a ಏವಮುಕ್ತಾ ಮಹೇಷ್ವಾಸಾಸ್ತೇ ವೀರಾಃ ಕ್ಷಿಪ್ರಕಾರಿಣಃ।
06070017c ಮಹತಾ ಶರವರ್ಷೇಣ ಅಭ್ಯವರ್ಷನ್ನರಿಂದಮಂ।।
ಆ ಮಹೇಷ್ವಾಸನು ಅವರಿಗೆ ಹೀಗೆ ಹೇಳಲು ಆ ವೀರ ಕ್ಷಿಪ್ರಕಾರಿಣರು ಆ ಅರಿಂದಮನ ಮೇಲೆ ಮಹಾ ಶರವರ್ಷಗಳನ್ನು ಸುರಿಸಿದರು.
06070018a ಅಪರಾಹ್ಣೇ ಮಹಾರಾಜ ಸಂಗ್ರಾಮಸ್ತುಮುಲೋಽಭವತ್।
06070018c ಏಕಸ್ಯ ಚ ಬಹೂನಾಂ ಚ ಸಮೇತಾನಾಂ ರಣಾಜಿರೇ।।
ಮಹಾರಾಜ! ಆ ಅಪರಾಹ್ಣದಲ್ಲಿ ಅವನೊಬ್ಬನ ಮತ್ತು ಒಟ್ಟಾಗಿರುವ ಅವರೆಲ್ಲರ ನಡುವೆ ರಣದಲ್ಲಿ ತುಮುಲ ಸಂಗ್ರಾಮವು ನಡೆಯಿತು.
06070019a ತಮೇಕಂ ರಥಿನಾಂ ಶ್ರೇಷ್ಠಂ ಶರವರ್ಷೈರವಾಕಿರನ್।
06070019c ಪ್ರಾವೃಷೀವ ಮಹಾಶೈಲಂ ಸಿಷಿಚುರ್ಜಲದಾ ನೃಪ।।
ನೃಪ! ಮಹಾಶೈಲವನ್ನು ಮೋಡಗಳು ಮುಸುಕಿ ಮಳೆಸುರಿಸುವಂತೆ ಅವರು ಆ ಒಬ್ಬನೇ ಶ್ರೇಷ್ಠ ರಥಿಯನ್ನು ಶರವರ್ಷಗಳಿಂದ ಮುಚ್ಚಿದರು.
06070020a ತೈಸ್ತು ಮುಕ್ತಾಂ ಶರೌಘಾಂಸ್ತಾನ್ಯಮದಂಡಾಶನಿಪ್ರಭಾನ್।
06070020c ಅಸಂಪ್ರಾಪ್ತಾನಸಂಪ್ರಾಪ್ತಾಂಶ್ಚಿಚ್ಛೇದಾಶು ಮಹಾರಥಃ।।
ಆದರೆ ಅವರು ಪ್ರಯೋಗಿಸಿದ ಆ ಯಮದಂಡದಂತೆ ಹೊಳೆಯುತ್ತಿದ್ದ ಶರಗಳ ಸಾಲುಗಳನ್ನು ಅವುಗಳು ಬಂದು ತಲುಪುವುದರೊಳಗೇ ಮಹಾರಥನು ಕತ್ತರಿಸಿದನು.
06070021a ತತ್ರಾದ್ಭುತಮಪಶ್ಯಾಮ ಸೌಮದತ್ತೇಃ ಪರಾಕ್ರಮಂ।
06070021c ಯದೇಕೋ ಬಹುಭಿರ್ಯುದ್ಧೇ ಸಮಸಜ್ಜದಭೀತವತ್।।
ಭೀತನಾಗದೇ ಒಬ್ಬನೇ ಅನೇಕರೊಂದಿಗೆ ಯುದ್ಧಮಾಡುತ್ತಿರುವ ಸೌಮದತ್ತಿಯ ಅದ್ಭುತ ಪರಾಕ್ರಮವನ್ನು ನೋಡಿದೆವು.
06070022a ವಿಸೃಜ್ಯ ಶರವೃಷ್ಟಿಂ ತಾಂ ದಶ ರಾಜನ್ಮಹಾರಥಾಃ।
06070022c ಪರಿವಾರ್ಯ ಮಹಾಬಾಹುಂ ನಿಹಂತುಮುಪಚಕ್ರಮುಃ।।
ರಾಜನ್! ಆ ಹತ್ತು ಮಹಾರಥರು ಶರವೃಷ್ಟಿಯನ್ನು ಪ್ರಯೋಗಿಸಿ ಆ ಮಹಾಬಾಹುವನ್ನು ಸುತ್ತುವರೆದು ಅವನನ್ನು ಸಂಹರಿಸಲು ಬಯಸಿದರು.
06070023a ಸೌಮದತ್ತಿಸ್ತತಃ ಕ್ರುದ್ಧಸ್ತೇಷಾಂ ಚಾಪಾನಿ ಭಾರತ।
06070023c ಚಿಚ್ಛೇದ ದಶಭಿರ್ಬಾಣೈರ್ನಿಮೇಷೇಣ ಮಹಾರಥಃ।।
ಆಗ ಮಹಾರಥಿ ಸೌಮದತ್ತಿಯು ಕ್ರುದ್ಧನಾಗಿ ನಿಮಿಷದಲ್ಲಿಯೇ ಅವರ ಚಾಪಗಳನ್ನು ಹತ್ತು ಬಾಣಗಳಿಂದ ತುಂಡರಿಸಿದನು.
06070024a ಅಥೈಷಾಂ ಚಿನ್ನಧನುಷಾಂ ಭಲ್ಲೈಃ ಸನ್ನತಪರ್ವಭಿಃ।
06070024c ಚಿಚ್ಛೇದ ಸಮರೇ ರಾಜನ್ ಶಿರಾಂಸಿ ನಿಶಿತೈಃ ಶರೈಃ।
ರಾಜನ್! ಅವರ ಧನುಸ್ಸುಗಳನ್ನು ಕತ್ತರಿಸಿ ತಕ್ಷಣವೇ ಸನ್ನತಪರ್ವ ನಿಶಿತ ಭಲ್ಲ ಶರಗಳಿಂದ ಸಮರದಲ್ಲಿ ಅವರ ಶಿರಗಳನ್ನೂ ಕತ್ತರಿಸಿದನು.
06070024e ತೇ ಹತಾ ನ್ಯಪತನ್ಭೂಮೌ ವಜ್ರಭಗ್ನಾ ಇವ ದ್ರುಮಾಃ।।
06070025a ತಾನ್ದೃಷ್ಟ್ವಾ ನಿಹತಾನ್ವೀರಾನ್ರಣೇ ಪುತ್ರಾನ್ಮಹಾಬಲಾನ್।
06070025c ವಾರ್ಷ್ಣೇಯೋ ವಿನದನ್ರಾಜನ್ಭೂರಿಶ್ರವಸಮಭ್ಯಯಾತ್।।
ಅವನಿಂದ ಹತರಾದ ಅವರು ಸಿಡಿಲಿನಿಂದ ಹೊಡೆಯಲ್ಪಟ್ಟ ಮರಗಳಂತೆ ಭೂಮಿಯ ಮೇಲೆ ಬಿದ್ದರು. ರಣದಲ್ಲಿ ಆ ಮಹಾಬಲ ವೀರ ಪುತ್ರರು ಹತರಾದುದನ್ನು ನೋಡಿ ಕೂಗುತ್ತಾ ವಾರ್ಷ್ಣೇಯನು ಭೂರಿಶ್ರವನನ್ನು ಎದುರಿಸಿದನು.
06070026a ರಥಂ ರಥೇನ ಸಮರೇ ಪೀಡಯಿತ್ವಾ ಮಹಾಬಲೌ।
06070026c ತಾವನ್ಯೋನ್ಯಸ್ಯ ಸಮರೇ ನಿಹತ್ಯ ರಥವಾಜಿನಃ।
06070026e ವಿರಥಾವಭಿವಲ್ಗಂತೌ ಸಮೇಯಾತಾಂ ಮಹಾರಥೌ।।
ರಥದಿಂದ ರಥವನ್ನು ಪೀಡಿಸುತ್ತಾ ಆ ಮಹಾಬಲರಿಬ್ಬರೂ ಸಮರದಲ್ಲಿ ಅನ್ಯೋನ್ಯರ ರಥ-ವಾಜಿಗಳನ್ನು ಸಂಹರಿಸಿದರು. ರಥವಿಹೀನರಾದ ಅವರಿಬ್ಬರು ಮಹಾರಥರೂ ಒಟ್ಟಿಗೇ ಕೆಳಗೆ ಧುಮುಕಿದರು.
06070027a ಪ್ರಗೃಹೀತಮಹಾಖಡ್ಗೌ ತೌ ಚರ್ಮವರಧಾರಿಣೌ।
06070027c ಶುಶುಭಾತೇ ನರವ್ಯಾಘ್ರೌ ಯುದ್ಧಾಯ ಸಮವಸ್ಥಿತೌ।।
ಶ್ರೇಷ್ಠ ಕವಚಗಳನ್ನು ಧರಿಸಿದ್ದ ಅವರಿಬ್ಬರು ನರವ್ಯಾಘ್ರರೂ ಮಹಾ ಖಡ್ಗಗಳನ್ನು ಹಿಡಿದು ಶೋಭಿಸಿದರು.
06070028a ತತಃ ಸಾತ್ಯಕಿಮಭ್ಯೇತ್ಯ ನಿಸ್ತ್ರಿಂಶವರಧಾರಿಣಂ।
06070028c ಭೀಮಸೇನಸ್ತ್ವರನ್ರಾಜನ್ರಥಮಾರೋಪಯತ್ತದಾ।।
ಆಗ ಖಡ್ಗವನ್ನು ಹಿಡಿದಿದ್ದ ಸಾತ್ಯಕಿಯನ್ನು ಬೇಗನೇ ಭೀಮಸೇನನು ತನ್ನ ರಥದ ಮೇಲೆ ಏರಿಸಿಕೊಂಡರು.
06070029a ತವಾಪಿ ತನಯೋ ರಾಜನ್ಭೂರಿಶ್ರವಸಮಾಹವೇ।
06070029c ಆರೋಪಯದ್ರಥಂ ತೂರ್ಣಂ ಪಶ್ಯತಾಂ ಸರ್ವಧನ್ವಿನಾಂ।।
ರಾಜನ್! ನಿನ್ನ ಮಗನೂ ಕೂಡ ಆಹವದಲ್ಲಿ ಸರ್ವ ಧನ್ವಿಗಳೂ ನೋಡುತ್ತಿದ್ದಂತೆ ಭೂರಿಶ್ರವಸನನ್ನು ತಕ್ಷಣವೇ ತನ್ನ ರಥದ ಮೇಲೇರಿಸಿಕೊಂಡನು.
06070030a ತಸ್ಮಿಂಸ್ತಥಾ ವರ್ತಮಾನೇ ರಣೇ ಭೀಷ್ಮಂ ಮಹಾರಥಂ।
06070030c ಅಯೋಧಯಂತ ಸಂರಬ್ಧಾಃ ಪಾಂಡವಾ ಭರತರ್ಷಭ।।
ಭರತರ್ಷಭ! ಹೀಗೆ ನಡೆಯುತ್ತಿರುವ ರಣದಲ್ಲಿ ಸಂರಬ್ಧರಾದ ಪಾಂಡವರು ಮಹಾರಥ ಭೀಷ್ಮನೊಂದಿಗೆ ಯುದ್ಧ ಮಾಡಿದರು.
06070031a ಲೋಹಿತಾಯತಿ ಚಾದಿತ್ಯೇ ತ್ವರಮಾಣೋ ಧನಂಜಯಃ।
06070031c ಪಂಚವಿಂಶತಿಸಾಹಸ್ರಾನ್ನಿಜಘಾನ ಮಹಾರಥಾನ್।।
ಆದಿತ್ಯನು ಕೆಂಪಾಗುತ್ತಿರಲು ತ್ವರೆಮಾಡಿ ಧನಂಜಯನು ಇಪ್ಪತ್ತೈದು ಸಾವಿರ ಮಹಾರಥರನ್ನು ಸಂಹರಿಸಿದನು.
06070032a ತೇ ಹಿ ದುರ್ಯೋಧನಾದಿಷ್ಟಾಸ್ತದಾ ಪಾರ್ಥನಿಬರ್ಹಣೇ।
06070032c ಸಂಪ್ರಾಪ್ಯೈವ ಗತಾ ನಾಶಂ ಶಲಭಾ ಇವ ಪಾವಕಂ।।
ಪಾರ್ಥನನ್ನು ಕೊಲ್ಲಲು ದುರ್ಯೋಧನನಿಂದಲೇ ಕಳುಹಿಸಲ್ಪಟ್ಟ ಅವರು ಪತಂಗಗಳು ಬೆಂಕಿಯ ಬಳಿ ಬಂದಾಗ ಹೇಗೋ ಹಾಗೆ ಅವನನ್ನು ತಲುಪುವುದರೊಳಗೇ ನಾಶರಾಗಿಬಿಟ್ಟರು.
06070033a ತತೋ ಮತ್ಸ್ಯಾಃ ಕೇಕಯಾಶ್ಚ ಧನುರ್ವೇದವಿಶಾರದಾಃ।
06070033c ಪರಿವವ್ರುಸ್ತದಾ ಪಾರ್ಥಂ ಸಹಪುತ್ರಂ ಮಹಾರಥಂ।।
ಆಗ ಧನುರ್ವೇದವಿಶಾರದರಾದ ಮತ್ಸ್ಯರು ಮತ್ತು ಕೇಕಯರು ಮಗನೊಂದಿಗೆ ಮಹಾರಥ ಪಾರ್ಥನನ್ನು ಸುತ್ತುವರೆದರು.
06070034a ಏತಸ್ಮಿನ್ನೇವ ಕಾಲೇ ತು ಸೂರ್ಯೇಽಸ್ತಮುಪಗಚ್ಛತಿ।
06070034c ಸರ್ವೇಷಾಮೇವ ಸೈನ್ಯಾನಾಂ ಪ್ರಮೋಹಃ ಸಮಜಾಯತ।।
ಇದೇ ಸಮಯದಲ್ಲಿ ಸೂರ್ಯನು ಅಸ್ತಂಗತನಾದನು ಮತ್ತು ಸರ್ವಸೇನೆಗಳನ್ನೂ ಪ್ರಮೋಹವು ಅಚ್ಛಾದಿಸಿತು.
06070035a ಅವಹಾರಂ ತತಶ್ಚಕ್ರೇ ಪಿತಾ ದೇವವ್ರತಸ್ತವ।
06070035c ಸಂಧ್ಯಾಕಾಲೇ ಮಹಾರಾಜ ಸೈನ್ಯಾನಾಂ ಶ್ರಾಂತವಾಹನಃ।।
ಮಹಾರಾಜ! ಆಗ ನಿನ್ನ ತಂದೆ ದೇವವ್ರತನು ಸಂಧ್ಯಾಕಾಲದಲ್ಲಿ ಆಯಾಸಗೊಂಡ ಸೇನೆವಾಹನಗಳಿಗೆ ವಿರಾಮವನ್ನಿತ್ತನು.
06070036a ಪಾಂಡವಾನಾಂ ಕುರೂಣಾಂ ಚ ಪರಸ್ಪರಸಮಾಗಮೇ।
06070036c ತೇ ಸೇನೇ ಭೃಶಸಂವಿಗ್ನೇ ಯಯತುಃ ಸ್ವಂ ನಿವೇಶನಂ।।
ಪರಸ್ಪರರ ಸಮಾಗಮದಿಂದ ತುಂಬಾ ಸಂವಿಗ್ನರಾಗಿದ್ದ ಪಾಂಡವರ ಮತ್ತು ಕುರುಗಳ ಸೇನೆಗಳು ತಮ್ಮ ತಮ್ಮ ನಿವೇಶನಗಳಿಗೆ ತೆರಳಿದವು.
06070037a ತತಃ ಸ್ವಶಿಬಿರಂ ಗತ್ವಾ ನ್ಯವಿಶಂಸ್ತತ್ರ ಭಾರತ।
06070037c ಪಾಂಡವಾಃ ಸೃಂಜಯೈಃ ಸಾರ್ಧಂ ಕುರವಶ್ಚ ಯಥಾವಿಧಿ।।
ಭಾರತ! ತಮ್ಮ ತಮ್ಮ ಶಿಬಿರಗಳಿಗೆ ಹೋಗಿ ಅಲ್ಲಿ ಪಾಂಡವರು ಸೃಂಜಯರೊಂದಿಗೆ ಮತ್ತು ಕುರುಗಳೂ ಯಥಾವಿಧಿಯಾಗಿ ವಿಶ್ರಾಂತಿಪಡೆದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಪಂಚಮದಿವಸಾವಹಾರೇ ಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಪಂಚಮದಿವಸಾವಹಾರ ಎನ್ನುವ ಎಪ್ಪತ್ತನೇ ಅಧ್ಯಾಯವು.