068 ಪಂಚಮದಿವಸಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 68

ಸಾರ

ಸಂಕುಲಯುದ್ಧ (1-33).

06068001 ಸಂಜಯ ಉವಾಚ।
06068001a ಶಿಖಂಡೀ ಸಹ ಮತ್ಸ್ಯೇನ ವಿರಾಟೇನ ವಿಶಾಂ ಪತೇ।
06068001c ಭೀಷ್ಮಮಾಶು ಮಹೇಷ್ವಾಸಮಾಸಸಾದ ಸುದುರ್ಜಯಂ।।

ಸಂಜಯನು ಹೇಳಿದನು: “ವಿಶಾಂಪತೇ! ಶಿಖಂಡಿಯು ಮತ್ಸ್ಯ- ವಿರಾಟರನ್ನೊಡಗೂಡಿಕೊಂಡು ಮಹೇಷ್ವಾಸ ಸುದುರ್ಜಯ ಭೀಷ್ಮನಿದ್ದೆಡೆಗೆ ಧಾವಿಸಿದನು.

06068002a ದ್ರೋಣಂ ಕೃಪಂ ವಿಕರ್ಣಂ ಚ ಮಹೇಷ್ವಾಸಾನ್ಮಹಾಬಲಾನ್।
06068002c ರಾಜ್ಞಶ್ಚಾನ್ಯಾನ್ರಣೇ ಶೂರಾನ್ ಬಹೂನಾರ್ಚದ್ಧನಂಜಯಃ।।

ರಣದಲ್ಲಿ ಧನಂಜಯನು ಅನ್ಯ ಶೂರ, ಮಹೇಷ್ವಾಸ, ಮಹಾಬಲ ರಾಜರನ್ನೂ, ದ್ರೋಣ, ಕೃಪ, ವಿಕರ್ಣರನ್ನೂ ಬಹುವಾಗಿ ಬಾಧಿಸಿದನು.

06068003a ಸೈಂಧವಂ ಚ ಮಹೇಷ್ವಾಸಂ ಸಾಮಾತ್ಯಂ ಸಹ ಬಂಧುಭಿಃ।
06068003c ಪ್ರಾಚ್ಯಾಂಶ್ಚ ದಾಕ್ಷಿಣಾತ್ಯಾಂಶ್ಚ ಭೂಮಿಪಾನ್ಭೂಮಿಪರ್ಷಭ।।
06068004a ಪುತ್ರಂ ಚ ತೇ ಮಹೇಷ್ವಾಸಂ ದುರ್ಯೋಧನಮಮರ್ಷಣಂ।
06068004c ದುಃಸ್ಸಹಂ ಚೈವ ಸಮರೇ ಭೀಮಸೇನೋಽಭ್ಯವರ್ತತ।।

ಭೂಮಿಪರ್ಷಭ! ಸಮರದಲ್ಲಿ ಭೀಮಸೇನನು ಅಮಾತ್ಯ-ಬಂಧುಗಳೊಡನೆ ಮಹೇಷ್ವಾಸ ಸೈಂಧವನನ್ನು, ಪೂರ್ವ ಮತ್ತು ದಕ್ಷಿಣ ಪ್ರದೇಶಗಳ ಭೂಮಿಪರನ್ನೂ, ನಿನ್ನ ಪುತ್ರ ಮಹೇಷ್ವಾಸ ಅಮರ್ಷಣ ದುರ್ಯೋಧನ ಮತ್ತು ದುಃಸ್ಸಹರನ್ನು ಎದುರಿಸಿದನು.

06068005a ಸಹದೇವಸ್ತು ಶಕುನಿಮುಲೂಕಂ ಚ ಮಹಾರಥಂ।
06068005c ಪಿತಾಪುತ್ರೌ ಮಹೇಷ್ವಾಸಾವಭ್ಯವರ್ತತ ದುರ್ಜಯೌ।।

ದುರ್ಜಯರೂ ಮಹೇಷ್ವಾಸರೂ ತಂದೆ-ಮಗರಾದ ಮಹಾರಥ ಶಕುನಿ-ಉಲೂಕರನ್ನು ಸಹದೇವನು ಎದುರಿಸಿದನು.

06068006a ಯುಧಿಷ್ಠಿರೋ ಮಹಾರಾಜ ಗಜಾನೀಕಂ ಮಹಾರಥಃ।
06068006c ಸಮವರ್ತತ ಸಂಗ್ರಾಮೇ ಪುತ್ರೇಣ ನಿಕೃತಸ್ತವ।।

ಮಹಾರಾಜ! ನಿನ್ನ ಮಗನಿಂದ ವಂಚಿತನಾಗಿದ್ದ ಮಹಾರಥ ಯುಧಿಷ್ಠಿರನು ಸಂಗ್ರಾಮದಲ್ಲಿ ಗಜಸೇನೆಯೊಂದಿಗೆ ಹೋರಾಡುತ್ತಿದ್ದನು.

06068007a ಮಾದ್ರೀಪುತ್ರಸ್ತು ನಕುಲಃ ಶೂರಃ ಸಂಕ್ರಂದನೋ ಯುಧಿ।
06068007c ತ್ರಿಗರ್ತಾನಾಂ ರಥೋದಾರೈಃ ಸಮಸಜ್ಜತ ಪಾಂಡವಃ।।

ಮಾದ್ರೀಪುತ್ರ ಶೂರ ನಕುಲ ಪಾಂಡವನು ಯುದ್ಧದಲ್ಲಿ ಸಂಕ್ರಂದನಂತೆ ರಥೋದಾರ ತ್ರಿಗರ್ತರೊಡನೆ ಯುದ್ಧಮಾಡಿದನು.

06068008a ಅಭ್ಯವರ್ತಂತ ದುರ್ಧರ್ಷಾಃ ಸಮರೇ ಶಾಲ್ವಕೇಕಯಾನ್।
06068008c ಸಾತ್ಯಕಿಶ್ಚೇಕಿತಾನಶ್ಚ ಸೌಭದ್ರಶ್ಚ ಮಹಾರಥಃ।।

ಸಮರದಲ್ಲಿ ದುರ್ಧರ್ಷ ಶಾಲ್ವ-ಕೇಕಯರೊಂದಿಗೆ ಮಹಾರಥ ಸಾತ್ಯಕಿ, ಚೇಕಿತಾನ ಮತ್ತು ಸೌಭದ್ರರು ಹೋರಾಡುತ್ತಿದ್ದರು.

06068009a ಧೃಷ್ಟಕೇತುಶ್ಚ ಸಮರೇ ರಾಕ್ಷಸಶ್ಚ ಘಟೋತ್ಕಚಃ।
06068009c ಪುತ್ರಾಣಾಂ ತೇ ರಥಾನೀಕಂ ಪ್ರತ್ಯುದ್ಯಾತಾಃ ಸುದುರ್ಜಯಾಃ।।

ಸಮರದಲ್ಲಿ ದುರ್ಜಯ ಧೃಷ್ಟಕೇತು ಮತ್ತು ರಾಕ್ಷಸ ಘಟೋತ್ಕಚರು ನಿನ್ನ ಮಕ್ಕಳ ರಥಸೇನೆಯೊಂದಿಗೆ ಹೋರಾಡುತ್ತಿದ್ದರು.

06068010a ಸೇನಾಪತಿರಮೇಯಾತ್ಮಾ ಧೃಷ್ಟದ್ಯುಮ್ನೋ ಮಹಾಬಲಃ।
06068010c ದ್ರೋಣೇನ ಸಮರೇ ರಾಜನ್ಸಮಿಯಾಯೇಂದ್ರಕರ್ಮಣಾ।।

ರಾಜನ್! ಸೇನಾಪತಿ ಅಮೇಯಾತ್ಮ ಮಹಾಬಲ ಧೃಷ್ಟದ್ಯುಮ್ನನು ಸಮರದಲ್ಲಿ ಉಗ್ರಕರ್ಮಿ ದ್ರೋಣನೊಂದಿಗೆ ಯುದ್ಧ ಮಾಡುತ್ತಿದ್ದನು.

06068011a ಏವಮೇತೇ ಮಹೇಷ್ವಾಸಾಸ್ತಾವಕಾಃ ಪಾಂಡವೈಃ ಸಹ।
06068011c ಸಮೇತ್ಯ ಸಮರೇ ಶೂರಾಃ ಸಂಪ್ರಹಾರಂ ಪ್ರಚಕ್ರಿರೇ।।

ಹೀಗೆ ಮಹೇಷ್ವಾಸ ಶೂರರಾದ ನಿನ್ನವರು ಪಾಂಡವರೊಂದಿಗೆ ಸಮರದಲ್ಲಿ ಸೇರಿ ಸಂಪ್ರಹರಿಸಲು ತೊಡಗಿದರು.

06068012a ಮಧ್ಯಂದಿನಗತೇ ಸೂರ್ಯೇ ನಭಸ್ಯಾಕುಲತಾಂ ಗತೇ।
06068012c ಕುರವಃ ಪಾಂಡವೇಯಾಶ್ಚ ನಿಜಘ್ನುರಿತರೇತರಂ।।

ಸೂರ್ಯನು ನಡುನೆತ್ತಿಗೆ ಬಂದು ಆಕಾಶವು ತಾಪಗೊಳ್ಳುತ್ತಿದ್ದರೂ ಕೌರವ-ಪಾಂಡವರು ಪರಸ್ಪರರ ಸಂಹಾರಕ್ರಿಯೆಯಲ್ಲಿ ತೊಡಗಿದ್ದರು.

06068013a ಧ್ವಜಿನೋ ಹೇಮಚಿತ್ರಾಂಗಾ ವಿಚರಂತೋ ರಣಾಜಿರೇ।
06068013c ಸಪತಾಕಾ ರಥಾ ರೇಜುರ್ವೈಯಾಘ್ರಪರಿವಾರಣಾಃ।।

ಧ್ವಜ-ಪತಾಕೆಗಳಿಂದ ಕೂಡಿದ ಬಂಗಾರ ಚಿತ್ರಗಳಿಂದ ಅಲಂಕರಿಸಲ್ಪಟ್ಟಿದ್ದ, ಹುಲಿಯ ಚರ್ಮಗಳನ್ನು ಹೊದಿಸಿದ್ದ ರಥಗಳು ರಜದಲ್ಲಿ ಸಂಚರಿಸುತ್ತಾ ಪ್ರಕಾಶಿಸಿದವು.

06068014a ಸಮೇತಾನಾಂ ಚ ಸಮರೇ ಜಿಗೀಷೂಣಾಂ ಪರಸ್ಪರಂ।
06068014c ಬಭೂವ ತುಮುಲಃ ಶಬ್ದಃ ಸಿಂಹಾನಾಮಿವ ನರ್ದತಾಂ।।

ಪರಸ್ಪರರನ್ನು ಸಮರದಲ್ಲಿ ಗೆಲ್ಲಲು ಸೇರಿದ್ದವರ ಸಿಂಹಗರ್ಜನೆಗಳಿಂದ ತುಮುಲ ಶಬ್ಧವುಂಟಾಯಿತು.

06068015a ತತ್ರಾದ್ಭುತಮಪಶ್ಯಾಮ ಸಂಪ್ರಹಾರಂ ಸುದಾರುಣಂ।
06068015c ಯಮಕುರ್ವನ್ರಣೇ ವೀರಾಃ ಸೃಂಜಯಾಃ ಕುರುಭಿಃ ಸಹ।।

ಅಲ್ಲಿ ರಣದಲ್ಲಿ ವೀರ ಸೃಂಜಯರು ಕುರುಗಳೊಂದಿಗೆ ಸುದಾರುಣ ಸಂಪ್ರಹಾರ ಮಾಡುತ್ತಿರುವ ಅದ್ಭುತವನ್ನು ನೋಡಿದೆವು.

06068016a ನೈವ ಖಂ ನ ದಿಶೋ ರಾಜನ್ನ ಸೂರ್ಯಂ ಶತ್ರುತಾಪನ।
06068016c ವಿದಿಶೋ ವಾಪ್ಯಪಶ್ಯಾಮ ಶರೈರ್ಮುಕ್ತೈಃ ಸಮಂತತಃ।।

ರಾಜನ್! ಶತ್ರುತಾಪನ! ಎಲ್ಲಕಡೆಗಳಲ್ಲಿಯೂ ಪ್ರಯೋಗಿಸುತ್ತಿದ್ದ ಶರಗಳಿಂದ ದಿಕ್ಕುಗಳು ಮುಚ್ಚಿ, ಆಕಾಶವಾಗಲೀ, ದಿಕ್ಕುಗಳಾಗಲೀ, ಸೂರ್ಯನಾಗಲೀ ಕಾಣಲೇ ಇಲ್ಲ.

06068017a ಶಕ್ತೀನಾಂ ವಿಮಲಾಗ್ರಾಣಾಂ ತೋಮರಾಣಾಂ ತಥಾಸ್ಯತಾಂ।
06068017c ನಿಸ್ತ್ರಿಂಶಾನಾಂ ಚ ಪೀತಾನಾಂ ನೀಲೋತ್ಪಲನಿಭಾಃ ಪ್ರಭಾಃ।।
06068018a ಕವಚಾನಾಂ ವಿಚಿತ್ರಾಣಾಂ ಭೂಷಣಾನಾಂ ಪ್ರಭಾಸ್ತಥಾ।
06068018c ಖಂ ದಿಶಃ ಪ್ರದಿಶಶ್ಚೈವ ಭಾಸಯಾಮಾಸುರೋಜಸಾ।।

ಥಳಥಳಿಸುವ ಮೊನೆಯ ಶಕ್ತಿಗಳು, ಹಾಗೆಯೇ ಪ್ರಯೋಗಿಸುತ್ತಿರುವ ತೋಮರಗಳ, ಹರಿತ ಖಡ್ಗಗಳ ಕನ್ನೈದಿಲೆ ಬಣ್ಣದ ಪ್ರಭೆಗಳಿಂದ, ವಿಚಿತ್ರ ಕವಚ-ಭೂಷಣಗಳ ಪ್ರಭೆಗಳಿಂದ ಆಕಾಶ, ದಿಕ್ಕುಗಳು ಮತ್ತು ಉಪದಿಕ್ಕುಗಳು ತಮ್ಮ ಉಜ್ವಲ ಪ್ರಕಾಶದಿಂದ ಬೆಳಗುತ್ತಿದ್ದವು.

06068018e ವಿರರಾಜ ತದಾ ರಾಜಂಸ್ತತ್ರ ತತ್ರ ರಣಾಂಗಣಂ।।
06068019a ರಥಸಿಂಹಾಸನವ್ಯಾಘ್ರಾಃ ಸಮಾಯಾಂತಶ್ಚ ಸಂಯುಗೇ।
06068019c ವಿರೇಜುಃ ಸಮರೇ ರಾಜನ್ಗ್ರಹಾ ಇವ ನಭಸ್ತಲೇ।।

ರಾಜನ್! ಅಲ್ಲಲ್ಲಿ ರಣಾಂಗಣವು ವಿರಾಜಿಸುತ್ತಿತ್ತು. ರಾಜನ್! ಸಂಯುಗದಲ್ಲಿ ಬಂದು ಸೇರಿದ್ದ ರಥಸಿಂಹಾಸನವ್ಯಾಘ್ರರು ನಭಸ್ತಲದಲ್ಲಿ ಬೆಳಗುವ ಗ್ರಹಗಳಂತೆ ವಿರಾಜಿಸಿದರು.

06068020a ಭೀಷ್ಮಸ್ತು ರಥಿನಾಂ ಶ್ರೇಷ್ಠೋ ಭೀಮಸೇನಂ ಮಹಾಬಲಂ।
06068020c ಅವಾರಯತ ಸಂಕ್ರುದ್ಧಃ ಸರ್ವಸೈನ್ಯಸ್ಯ ಪಶ್ಯತಃ।।

ರಥಿಗಳಲ್ಲಿ ಶ್ರೇಷ್ಠ ಭೀಷ್ಮನಾದರೋ ಸಂಕ್ರುದ್ಧನಾಗಿ ಸರ್ವಸೇನೆಗಳೂ ನೋಡುತ್ತಿದ್ದಂತೆಯೇ ಮಹಾಬಲ ಭೀಮಸೇನನನ್ನು ತಡೆದನು.

06068021a ತತೋ ಭೀಷ್ಮವಿನಿರ್ಮುಕ್ತಾ ರುಕ್ಮಪುಂಖಾಃ ಶಿಲಾಶಿತಾಃ।
06068021c ಅಭ್ಯಘ್ನನ್ಸಮರೇ ಭೀಮಂ ತೈಲಧೌತಾಃ ಸುತೇಜನಾಃ।।

ಆಗ ಭೀಷ್ಮನು ಪ್ರಯೋಗಿಸಿದ ರುಕ್ಮಪುಂಖ, ಶಿಲಾಶಿತ, ತೈಲದಲ್ಲಿ ಅದ್ದಿದ್ದ, ಸುತೇಜಸ ಬಾಣಗಳು ಸಮರದಲ್ಲಿ ಭೀಮನಿಗೆ ತಾಗಿದವು.

06068022a ತಸ್ಯ ಶಕ್ತಿಂ ಮಹಾವೇಗಾಂ ಭೀಮಸೇನೋ ಮಹಾಬಲಃ।
06068022c ಕ್ರುದ್ಧಾಶೀವಿಷಸಂಕಾಶಾಂ ಪ್ರೇಷಯಾಮಾಸ ಭಾರತ।।

ಭಾರತ! ಮಹಾಬಲ ಭೀಮಸೇನನು ಅವನ ಮೇಲೆ ಕ್ರುದ್ಧ ಸರ್ಪದ ವಿಷಕ್ಕೆ ಸಮಾನ ಶಕ್ತ್ಯಾಯುಧವನ್ನು ಪ್ರಯೋಗಿಸಿದನು.

06068023a ತಾಮಾಪತಂತೀಂ ಸಹಸಾ ರುಕ್ಮದಂಡಾಂ ದುರಾಸದಾಂ।
06068023c ಚಿಚ್ಛೇದ ಸಮರೇ ಭೀಷ್ಮಃ ಶರೈಃ ಸನ್ನತಪರ್ವಭಿಃ।।

ಮೇಲೆ ಬೀಳುತ್ತಿದ್ದ ರುಕ್ಮದಂಡದ ಆ ದುರಾಸದ ಶಕ್ತಿಯನ್ನು ಸಮರದಲ್ಲಿ ಭೀಷ್ಮನು ತಕ್ಷಣವೇ ಸನ್ನತಪರ್ವ ಶರಗಳಿಂದ ತುಂಡರಿಸಿದನು.

06068024a ತತೋಽಪರೇಣ ಭಲ್ಲೇನ ಪೀತೇನ ನಿಶಿತೇನ ಚ।
06068024c ಕಾರ್ಮುಕಂ ಭೀಮಸೇನಸ್ಯ ದ್ವಿಧಾ ಚಿಚ್ಛೇದ ಭಾರತ।।

ಭಾರತ! ಇನ್ನೊಂದು ಪೀತಲದ ನಿಶಿತ ಭಲ್ಲದಿಂದ ಭೀಮಸೇನನ ಕಾರ್ಮುಕವನ್ನು ಎರಡಾಗಿ ತುಂಡರಿಸಿದನು.

06068025a ಸಾತ್ಯಕಿಸ್ತು ತತಸ್ತೂರ್ಣಂ ಭೀಷ್ಮಮಾಸಾದ್ಯ ಸಮ್ಯುಗೇ।
06068025c ಶರೈರ್ಬಹುಭಿರಾನರ್ಚತ್ಪಿತರಂ ತೇ ಜನೇಶ್ವರ।।

ಜನೇಶ್ವರ! ಆಗ ಸಾತ್ಯಕಿಯೂ ಕೂಡ ಬೇಗನೇ ಸಂಯುಗದಲ್ಲಿ ಭೀಷ್ಮನ ಬಳಿಸಾರಿ ನಿನ್ನ ತಂದೆಯ ಮೇಲೆ ಅನೇಕ ಶರಗಳನ್ನು ಸುರಿಸಿದನು.

06068026a ತತಃ ಸಂಧಾಯ ವೈ ತೀಕ್ಷ್ಣಂ ಶರಂ ಪರಮದಾರುಣಂ।
06068026c ವಾರ್ಷ್ಣೇಯಸ್ಯ ರಥಾದ್ಭೀಷ್ಮಃ ಪಾತಯಾಮಾಸ ಸಾರಥಿಂ।।

ಆಗ ಭೀಷ್ಮನು ಪರಮದಾರುಣ ತೀಕ್ಷ್ಣ ಶರವನ್ನು ಹೂಡಿ ವಾರ್ಷ್ಣೇಯನ ಸಾರಥಿಯನ್ನು ರಥದಿಂದ ಕೆಡವಿದನು.

06068027a ತಸ್ಯಾಶ್ವಾಃ ಪ್ರದ್ರುತಾ ರಾಜನ್ನಿಹತೇ ರಥಸಾರಥೌ।
06068027c ತೇನ ತೇನೈವ ಧಾವಂತಿ ಮನೋಮಾರುತರಂಹಸಃ।।

ರಾಜನ್! ಅವನ ರಥದ ಸಾರಥಿಯು ಬೀಳಲು ಅದರ ಕುದುರೆಗಳು ಮನೋಮಾರುತಹಂಸಗಳಂತೆ ಬೇಕಾದಲ್ಲಿ ಓಡತೊಡಗಿದವು.

06068028a ತತಃ ಸರ್ವಸ್ಯ ಸೈನ್ಯಸ್ಯ ನಿಸ್ವನಸ್ತುಮುಲೋಽಭವತ್।
06068028c ಹಾಹಾಕಾರಶ್ಚ ಸಂಜಜ್ಞೇ ಪಾಂಡವಾನಾಂ ಮಹಾತ್ಮನಾಂ।।

ಆಗ ಸರ್ವ ಸೈನ್ಯಗಳಲ್ಲಿ ಕೂಗು ತುಮುಲಗಳಾದವು. ಮಹಾತ್ಮ ಪಾಂಡವರಲ್ಲಿ ಹಾಹಾಕಾರವೂ ಉಂಟಾಯಿತು.

06068029a ಅಭಿದ್ರವತ ಗೃಹ್ಣೀತ ಹಯಾನ್ಯಚ್ಛತ ಧಾವತ।
06068029c ಇತ್ಯಾಸೀತ್ತುಮುಲಃ ಶಬ್ದೋ ಯುಯುಧಾನರಥಂ ಪ್ರತಿ।।

ಎಲ್ಲೆಲ್ಲೋ ಓಡಿಹೋಗುತ್ತಿದ್ದ ಯುಯುಧಾನನ ರಥವನ್ನು ಹಿಡಿಯುವುದರ ಕುರಿತು ಅಲ್ಲಿ ಮಹಾ ತುಮುಲ ಶಬ್ಧವುಂಟಾಯಿತು.

06068030a ಏತಸ್ಮಿನ್ನೇವ ಕಾಲೇ ತು ಭೀಷ್ಮಃ ಶಾಂತನವಃ ಪುನಃ।
06068030c ವ್ಯಹನತ್ಪಾಂಡವೀಂ ಸೇನಾಮಾಸುರೀಮಿವ ವೃತ್ರಹಾ।।

ಇದೇ ಸಮಯದಲ್ಲಿ ಪುನಃ ಭೀಷ್ಮ ಶಾಂತನವನು ವೃತ್ರಹನು ಅಸುರೀ ಸೇನೆಯನ್ನು ಹೇಗೋ ಹಾಗೆ ನಾಶಗೊಳಿಸಿದನು.

06068031a ತೇ ವಧ್ಯಮಾನಾ ಭೀಷ್ಮೇಣ ಪಾಂಚಾಲಾಃ ಸೋಮಕೈಃ ಸಹ।
06068031c ಆರ್ಯಾಂ ಯುದ್ಧೇ ಮತಿಂ ಕೃತ್ವಾ ಭೀಷ್ಮಮೇವಾಭಿದುದ್ರುವುಃ।।

ಭೀಷ್ಮನಿಂದ ವಧಿಸಲ್ಪಡುತ್ತಿದ್ದರೂ ಪಾಂಚಾಲ-ಸೋಮಕರು ಒಟ್ಟಿಗೇ ಭೀಷ್ಮನನ್ನು ಎದುರಿಸಿ ಯುದ್ಧ ಮಾಡುವ ದೃಢ ನಿಶ್ಚಯವನ್ನು ಮಾಡಿ ಹೋರಾಡಿದರು.

06068032a ಧೃಷ್ಟದ್ಯುಮ್ನಮುಖಾಶ್ಚಾಪಿ ಪಾರ್ಥಾಃ ಶಾಂತನವಂ ರಣೇ।
06068032c ಅಭ್ಯಧಾವಂ ಜಿಗೀಷಂತಸ್ತವ ಪುತ್ರಸ್ಯ ವಾಹಿನೀಂ।।

ಧೃಷ್ಟದ್ಯುಮ್ನನೇ ಮೊದಲಾದ ಪಾರ್ಥರು ನಿನ್ನ ಪುತ್ರನ ಸೇನೆಯನ್ನು ಗೆಲ್ಲಲು ಬಯಸಿ ರಣದಲ್ಲಿ ಶಾಂತನವನನ್ನು ಎದುರಿಸಿದರು.

06068033a ತಥೈವ ತಾವಕಾ ರಾಜನ್ಭೀಷ್ಮದ್ರೋಣಮುಖಾಃ ಪರಾನ್।
06068033c ಅಭ್ಯಧಾವಂತ ವೇಗೇನ ತತೋ ಯುದ್ಧಮವರ್ತತ।।

ರಾಜನ್! ಹಾಗೆಯೆ ನಿನ್ನವರ ಭೀಷ್ಮ-ದ್ರೋಣಪ್ರಮುಖರು ವೇಗದಿಂದ ಶತ್ರುಗಳನ್ನು ಎದುರಿಸಿ ಯುದ್ಧವನ್ನು ನಡೆಸಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಪಂಚಮದಿವಸಯುದ್ಧೇ ಅಷ್ಠಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಪಂಚಮದಿವಸಯುದ್ಧ ಎನ್ನುವ ಅರವತ್ತೆಂಟನೇ ಅಧ್ಯಾಯವು.