ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 65
ಸಾರ
ಕೌರವರ ಮಕರವ್ಯೂಹ ರಚನೆ ಮತ್ತು ಪಾಂಡವರ ಶ್ವೇನವ್ಯೂಹ ರಚನೆ; ಯುದ್ಧಾರಂಭ (1-12). ತುಮುಲ ಯುದ್ಧ (13-33).
06065001 ಸಂಜಯ ಉವಾಚ।
06065001a ವ್ಯುಷಿತಾಯಾಂ ಚ ಶರ್ವರ್ಯಾಮುದಿತೇ ಚ ದಿವಾಕರೇ।
06065001c ಉಭೇ ಸೇನೇ ಮಹಾರಾಜ ಯುದ್ಧಾಯೈವ ಸಮೀಯತುಃ।।
ಸಂಜಯನು ಹೇಳಿದನು: “ಮಹಾರಾಜ! ರಾತ್ರಿಯು ಕಳೆದು ದಿವಾಕರನು ಉದಯಿಸಲು ಎರಡೂ ಸೇನೆಗಳೂ ಯುದ್ಧಕ್ಕೆ ಬಂದು ಸೇರಿದವು.
06065002a ಅಭ್ಯಧಾವಂಶ್ಚ ಸಂಕ್ರುದ್ಧಾಃ ಪರಸ್ಪರಜಿಗೀಷವಃ।
06065002c ತೇ ಸರ್ವೇ ಸಹಿತಾ ಯುದ್ಧೇ ಸಮಾಲೋಕ್ಯ ಪರಸ್ಪರಂ।।
ಅವರೆಲ್ಲರೂ ಒಟ್ಟಿಗೇ ಪರಸ್ಪರರನ್ನು ಸಂಕ್ರುದ್ಧರಾಗಿ ನೋಡುತ್ತಾ, ಪರಸ್ಪರರನ್ನು ಗೆಲ್ಲಲು ಬಯಸಿ ಹೊರಟರು.
06065003a ಪಾಂಡವಾ ಧಾರ್ತರಾಷ್ಟ್ರಾಶ್ಚ ರಾಜನ್ದುರ್ಮಂತ್ರಿತೇ ತವ।
06065003c ವ್ಯೂಹೌ ಚ ವ್ಯೂಹ್ಯ ಸಂರಬ್ಧಾಃ ಸಂಪ್ರಯುದ್ಧಾಃ ಪ್ರಹಾರಿಣಃ।।
ರಾಜನ್! ನಿನ್ನ ದುರ್ಮಂತ್ರದಿಂದಾಗಿ ಪಾಂಡವರು ಮತ್ತು ಧಾರ್ತರಾಷ್ಟ್ರರು ವ್ಯೂಹಗಳನ್ನು ರಚಿಸಿ ಸಂರಬ್ಧರಾಗಿ ಪ್ರಹರಿಸಲು ಉದ್ಯುಕ್ತರಾದರು.
06065004a ಅರಕ್ಷನ್ಮಕರವ್ಯೂಹಂ ಭೀಷ್ಮೋ ರಾಜನ್ಸಮಂತತಃ।
06065004c ತಥೈವ ಪಾಂಡವಾ ರಾಜನ್ನರಕ್ಷನ್ವ್ಯೂಹಮಾತ್ಮನಃ।।
ರಾಜನ್! ಭೀಷ್ಮನು ಮಕರವ್ಯೂಹವನ್ನು ರಚಿಸಿ ಸುತ್ತಲೂ ಅದರ ರಕ್ಷಣೆಯನ್ನು ಮಾಡಿದನು. ರಾಜನ್! ಹಾಗೆಯೇ ಪಾಂಡವರು ತಮ್ಮ ವ್ಯೂಹದ ರಕ್ಷಣೆಯ ವ್ಯವಸ್ಥೆಯನ್ನು ಮಾಡಿದರು.
06065005a ಸ ನಿರ್ಯಯೌ ರಥಾನೀಕಂ ಪಿತಾ ದೇವವ್ರತಸ್ತವ।
06065005c ಮಹತಾ ರಥವಂಶೇನ ಸಂವೃತೋ ರಥಿನಾಂ ವರಃ।।
ನಿನ್ನ ತಂದೆ ರಥಿಗಳಲ್ಲಿ ಶ್ರೇಷ್ಠ ದೇವವ್ರತನು ಮಹಾ ರಥಸಂಕುಲದಿಂದ ಆವೃತನಾಗಿ ರಥಸೇನೆಯೊಂದಿಗೆ ಹೊರಟನು.
06065006a ಇತರೇತರಮನ್ವೀಯುರ್ಯಥಾಭಾಗಮವಸ್ಥಿತಾಃ।
06065006c ರಥಿನಃ ಪತ್ತಯಶ್ಚೈವ ದಂತಿನಃ ಸಾದಿನಸ್ತಥಾ।।
ಆಯಾ ವಿಭಾಗಗಳಲ್ಲಿ ವ್ಯವಸ್ಥಿತರಾದ ರಥಿಕರು, ಪದಾತಿಗಳು, ಆನೆ ಸವಾರರು ಮತ್ತು ಕುದುರೆ ಸವಾರರು ಒಂದರ ಹಿಂದೆ ಒಂದರಂತೆ ಅವನ ರಥಸೇನೆಯನ್ನು ಹಿಂಬಾಲಿಸಿ ನಡೆದವು.
06065007a ತಾನ್ದೃಷ್ಟ್ವಾ ಪ್ರೋದ್ಯತಾನ್ಸಂಖ್ಯೇ ಪಾಂಡವಾಶ್ಚ ಯಶಸ್ವಿನಃ।
06065007c ಶ್ಯೇನೇನ ವ್ಯೂಹರಾಜೇನ ತೇನಾಜಯ್ಯೇನ ಸಮ್ಯುಗೇ।।
ಉದ್ಯುಕ್ತರಾಗಿರುವ ಅವರನ್ನು ನೋಡಿ ಯಶಸ್ವಿ ಪಾಂಡವರು ಕೂಡ ಸಂಯುಗದಲ್ಲಿ ಜಯಿಸಲಸಾಧ್ಯವಾದ ವ್ಯೂಹರಾಜ ಶ್ಯೇನವ್ಯೂಹವನ್ನು ರಚಿಸಿದರು.
06065008a ಅಶೋಭತ ಮುಖೇ ತಸ್ಯ ಭೀಮಸೇನೋ ಮಹಾಬಲಃ।
06065008c ನೇತ್ರೇ ಶಿಖಂಡೀ ದುರ್ಧರ್ಷೋ ಧೃಷ್ಟದ್ಯುಮ್ನಶ್ಚ ಪಾರ್ಷತಃ।।
ಅದರ ಮುಖದಲ್ಲಿ ಮಹಾಬಲ ಭೀಮಸೇನನೂ, ಕಣ್ಣುಗಳಲ್ಲಿ ದುರ್ಧರ್ಷ ಶಿಖಂಡಿ ಮತ್ತು ಪಾರ್ಷತ ಧೃಷ್ಟದ್ಯುಮ್ನರು ಶೋಭಿಸಿದರು.
06065009a ಶೀರ್ಷಂ ತಸ್ಯಾಭವದ್ವೀರಃ ಸಾತ್ಯಕಿಃ ಸತ್ಯವಿಕ್ರಮಃ।
06065009c ವಿಧುನ್ವನ್ಗಾಂಡಿವಂ ಪಾರ್ಥೋ ಗ್ರೀವಾಯಾಮಭವತ್ತದಾ।।
ವೀರ ಸತ್ಯವಿಕ್ರಮ ಸಾತ್ಯಕಿಯು ಅದರ ತಲೆಯ ಭಾಗವಾದನು. ಗಾಂಡೀವವನ್ನು ಟೇಂಕರಿಸುತ್ತಾ ಪಾರ್ಥನು ಅದರ ಕುತ್ತಿಗೆಯಾದನು.
06065010a ಅಕ್ಷೌಹಿಣ್ಯಾ ಸಮಗ್ರಾ ಯಾ ವಾಮಪಕ್ಷೋಽಭವತ್ತದಾ।
06065010c ಮಹಾತ್ಮಾ ದ್ರುಪದಃ ಶ್ರೀಮಾನ್ಸಹ ಪುತ್ರೇಣ ಸಂಯುಗೇ।।
ಸಂಯುಗದಲ್ಲಿ ಸಮಗ್ರ ಅಕ್ಷೌಹಿಣಿಯ ಎಡಬಾಗದಲ್ಲಿ ಪುತ್ರರೊಂದಿಗೆ ಮಹಾತ್ಮ ಶ್ರೀಮಾನ್ ದ್ರುಪದನಿದ್ದನು.
06065011a ದಕ್ಷಿಣಶ್ಚಾಭವತ್ಪಕ್ಷಃ ಕೈಕೇಯೋಽಕ್ಷೌಹಿಣೀಪತಿಃ।
06065011c ಪೃಷ್ಠತೋ ದ್ರೌಪದೇಯಾಶ್ಚ ಸೌಭದ್ರಶ್ಚಾಪಿ ವೀರ್ಯವಾನ್।।
ಅದರ ಬಲಭಾಗದಲ್ಲಿ ಅಕ್ಷೌಹಿಣೀಪತಿ ಕೈಕೇಯನು ಇದ್ದನು. ಹಿಂಭಾಗದಲ್ಲಿ ದ್ರೌಪದೇಯರೂ, ವೀರ್ಯವಾನ್ ಸೌಭದ್ರನೂ ಇದ್ದರು.
06065012a ಪೃಷ್ಠೇ ಸಮಭವಚ್ಚ್ರೀಮಾನ್ಸ್ವಯಂ ರಾಜಾ ಯುಧಿಷ್ಠಿರಃ।
06065012c ಭ್ರಾತೃಭ್ಯಾಂ ಸಹಿತೋ ಧೀಮಾನ್ಯಮಾಭ್ಯಾಂ ಚಾರುವಿಕ್ರಮಃ।।
ಅವರ ಹಿಂದೆ ಸೋದರರಾದ ಯಮಳರೊಡನೆ ಧೀಮಾನ್, ಚಾರುವಿಕ್ರಮ, ಸ್ವಯಂ ರಾಜಾ ಯುಧಿಷ್ಠಿರನಿದ್ದನು.
06065013a ಪ್ರವಿಶ್ಯ ತು ರಣೇ ಭೀಮೋ ಮಕರಂ ಮುಖತಸ್ತದಾ।
06065013c ಭೀಷ್ಮಮಾಸಾದ್ಯ ಸಂಗ್ರಾಮೇ ಚಾದಯಾಮಾಸ ಸಾಯಕೈಃ।।
ರಣದಲ್ಲಿ ಭೀಮನು ಮಕರದ ಮುಖವನ್ನು ಪ್ರವೇಶಿಸಿ ಸಂಗ್ರಾಮದಲ್ಲಿ ಭೀಷ್ಮನನ್ನು ಎದುರಿಸಿ ಅವನನ್ನು ಸಾಯಕಗಳಿಂದ ಮುಚ್ಚಿಬಿಟ್ಟನು.
06065014a ತತೋ ಭೀಷ್ಮೋ ಮಹಾಸ್ತ್ರಾಣಿ ಪಾತಯಾಮಾಸ ಭಾರತ।
06065014c ಮೋಹಯನ್ಪಾಂಡುಪುತ್ರಾಣಾಂ ವ್ಯೂಢಂ ಸೈನ್ಯಂ ಮಹಾಹವೇ।।
ಭಾರತ! ಆಗ ಭೀಷ್ಮನು ಮಹಾಹವದಲ್ಲಿ ಪಾಂಡುಪುತ್ರರ ಸೈನ್ಯ ವ್ಯೂಹವನ್ನು ಮೋಹಗೊಳಿಸುತ್ತಾ ಮಹಾಸ್ತ್ರಗಳನ್ನು ಪ್ರಯೋಗಿಸತೊಡಗಿದನು.
06065015a ಸಮ್ಮುಹ್ಯತಿ ತದಾ ಸೈನ್ಯೇ ತ್ವರಮಾಣೋ ಧನಂಜಯಃ।
06065015c ಭೀಷ್ಮಂ ಶರಸಹಸ್ರೇಣ ವಿವ್ಯಾಧ ರಣಮೂರ್ಧನಿ।।
ರಣಮೂರ್ಧನಿಯಲ್ಲಿ ಸೈನ್ಯವು ಮೋಹಗೊಳ್ಳಲು ತ್ವರೆಮಾಡಿ ಧನಂಜಯನು ಭೀಷ್ಮನನ್ನು ಸಹಸ್ರ ಶರಗಳಿಂದ ಹೊಡೆದನು.
06065016a ಪರಿಸಂವಾರ್ಯ ಚಾಸ್ತ್ರಾಣಿ ಭೀಷ್ಮಮುಕ್ತಾನಿ ಸಂಯುಗೇ।
06065016c ಸ್ವೇನಾನೀಕೇನ ಹೃಷ್ಟೇನ ಯುದ್ಧಾಯ ಸಮವಸ್ಥಿತಃ।।
ಸಂಯುಗದಲ್ಲಿ ಭೀಷ್ಮನು ಪ್ರಯೋಗಿಸಿದ ಅಸ್ತ್ರಗಳನ್ನು ನಿರಸನಗೊಳಿಸಿ ತನ್ನ ಸೇನೆಯು ಸಂತೋಷಗೊಂಡು ಯುದ್ಧದಲ್ಲಿ ನಿಲ್ಲುವಂತೆ ಮಾಡಿದನು.
06065017a ತತೋ ದುರ್ಯೋಧನೋ ರಾಜಾ ಭಾರದ್ವಾಜಮಭಾಷತ।
06065017c ಪೂರ್ವಂ ದೃಷ್ಟ್ವಾ ವಧಂ ಘೋರಂ ಬಲಸ್ಯ ಬಲಿನಾಂ ವರಃ।
06065017e ಭ್ರಾತೄಣಾಂ ಚ ವಧಂ ಯುದ್ಧೇ ಸ್ಮರಮಾಣೋ ಮಹಾರಥಃ।।
ಆಗ ಹಿಂದೆ ತನ್ನ ಸೇನೆಯ ಘೋರ ವಧೆಯನ್ನು ನೋಡಿದ್ದ ಬಲಿಗಳಲ್ಲಿ ಶ್ರೇಷ್ಠ ಮಹಾರಥ ರಾಜಾ ದುರ್ಯೋಧನನು ಯುದ್ಧದಲ್ಲಿ ತನ್ನ ಭ್ರಾತೃಗಳ ವಧೆಯನ್ನು ಸ್ಮರಿಸಿಕೊಳ್ಳುತ್ತಾ ಭಾರದ್ವಾಜನಿಗೆ ಹೇಳಿದನು:
06065018a ಆಚಾರ್ಯ ಸತತಂ ತ್ವಂ ಹಿ ಹಿತಕಾಮೋ ಮಮಾನಘ।
06065018c ವಯಂ ಹಿ ತ್ವಾಂ ಸಮಾಶ್ರಿತ್ಯ ಭೀಷ್ಮಂ ಚೈವ ಪಿತಾಮಹಂ।।
06065019a ದೇವಾನಪಿ ರಣೇ ಜೇತುಂ ಪ್ರಾರ್ಥಯಾಮೋ ನ ಸಂಶಯಃ।
06065019c ಕಿಮು ಪಾಂಡುಸುತಾನ್ಯುದ್ಧೇ ಹೀನವೀರ್ಯಪರಾಕ್ರಮಾನ್।।
“ಆಚಾರ್ಯ! ಅನಘ! ನೀನು ಸತತವೂ ನನ್ನ ಹಿತವನ್ನೇ ಬಯಸುತ್ತೀಯೆ. ನಾವು ನಿನ್ನನ್ನು ಮತ್ತು ಪಿತಾಮಹ ಭೀಷ್ಮನನ್ನು ಆಶ್ರಯಿಸಿ ರಣದಲ್ಲಿ ದೇವತೆಗಳನ್ನು ಕೂಡ ಗೆಲ್ಲಬಲ್ಲೆವು ಎನ್ನುವುದರಲ್ಲಿ ಸಂಶಯವಿಲ್ಲ. ಇನ್ನು ಯುದ್ಧದಲ್ಲಿ ಹೀನಪರಾಕ್ರಮರಾದ ಪಾಂಡುಸುತರೇನು?”
06065020a ಏವಮುಕ್ತಸ್ತತೋ ದ್ರೋಣಸ್ತವ ಪುತ್ರೇಣ ಮಾರಿಷ।
06065020c ಅಭಿನತ್ಪಾಂಡವಾನೀಕಂ ಪ್ರೇಕ್ಷಮಾಣಸ್ಯ ಸಾತ್ಯಕೇಃ।।
ನಿನ್ನ ಮಗನು ಹೀಗೆ ಹೇಳಲು ದ್ರೋಣನು ಸಾತ್ಯಕಿಯನ್ನು ನೋಡಿ ಪಾಂಡವರ ಸೇನೆಯ ಮೇಲೆ ಆಕ್ರಮಣಿಸಿದನು.
06065021a ಸಾತ್ಯಕಿಸ್ತು ತದಾ ದ್ರೋಣಂ ವಾರಯಾಮಾಸ ಭಾರತ।
06065021c ತತಃ ಪ್ರವವೃತೇ ಯುದ್ಧಂ ತುಮುಲಂ ಲೋಮಹರ್ಷಣಂ।।
ಭಾರತ! ಸಾತ್ಯಕಿಯಾದರೋ ದ್ರೋಣನನ್ನು ತಡೆದನು. ಆಗ ಲೋಮಹರ್ಷಣ ತುಮುಲ ಯುದ್ಧವು ಪ್ರಾರಂಭವಾಯಿತು.
06065022a ಶೈನೇಯಂ ತು ರಣೇ ಕ್ರುದ್ಧೋ ಭಾರದ್ವಾಜಃ ಪ್ರತಾಪವಾನ್।
06065022c ಅವಿಧ್ಯನ್ನಿಶಿತೈರ್ಬಾಣೈರ್ಜತ್ರುದೇಶೇ ಹಸನ್ನಿವ।।
ರಣದಲ್ಲಿ ಕ್ರುದ್ಧನಾದ ಪ್ರತಾಪವಾನ್ ಭಾರದ್ವಾಜನು ನಗುತ್ತಾ ಶೈನೇಯನ ಕೊರಳಿಗೆ ನಿಶಿತ ಬಾಣಗಳಿಂದ ಹೊಡೆದನು.
06065023a ಭೀಮಸೇನಸ್ತತಃ ಕ್ರುದ್ಧೋ ಭಾರದ್ವಾಜಮವಿಧ್ಯತ।
06065023c ಸಂರಕ್ಷನ್ಸಾತ್ಯಕಿಂ ರಾಜನ್ದ್ರೋಣಾಚ್ಚಸ್ತ್ರಭೃತಾಂ ವರಾತ್।।
ರಾಜನ್! ಆಗ ಭೀಮಸೇನನು ಶಸ್ತ್ರಭೃತಶ್ರೇಷ್ಠ ದ್ರೋಣನಿಂದ ಸಾತ್ಯಕಿಯನ್ನು ರಕ್ಷಿಸುತ್ತಾ ಕ್ರುದ್ಧನಾಗಿ ಭಾರದ್ವಾಜನನ್ನು ಹೊಡೆದನು.
06065024a ತತೋ ದ್ರೋಣಶ್ಚ ಭೀಷ್ಮಶ್ಚ ತಥಾ ಶಲ್ಯಶ್ಚ ಮಾರಿಷ।
06065024c ಭೀಮಸೇನಂ ರಣೇ ಕ್ರುದ್ಧಾಶ್ಚಾದಯಾಂ ಚಕ್ರಿರೇ ಶರೈಃ।।
ಆಗ ರಣದಲ್ಲಿ ದ್ರೋಣ, ಭೀಷ್ಮ ಮತ್ತು ಶಲ್ಯರು ಕ್ರೋಧದಿಂದ ಭೀಮಸೇನನನ್ನು ಶರಗಳಿಂದ ಹೊಡೆಯತೊಡಗಿದರು.
06065025a ತತ್ರಾಭಿಮನ್ಯುಃ ಸಂಕ್ರುದ್ಧೋ ದ್ರೌಪದೇಯಾಶ್ಚ ಮಾರಿಷ।
06065025c ವಿವ್ಯಧುರ್ನಿಶಿತೈರ್ಬಾಣೈಃ ಸರ್ವಾಂಸ್ತಾನುದ್ಯತಾಯುಧಾನ್।।
ಆಗ ಸಂಕ್ರುದ್ಧರಾದ ಅಭಿಮನ್ಯು ಮತ್ತು ದ್ರೌಪದೇಯರು ನಿಶಿತ ಬಾಣಗಳಿಂದ ಮತ್ತು ಆಯುಧಗಳಿಂದ ಅವರನ್ನು ಹೊಡೆದರು.
06065026a ಭೀಷ್ಮದ್ರೋಣೌ ಚ ಸಂಕ್ರುದ್ಧಾವಾಪತಂತೌ ಮಹಾಬಲೌ।
06065026c ಪ್ರತ್ಯುದ್ಯಯೌ ಶಿಖಂಡೀ ತು ಮಹೇಷ್ವಾಸೋ ಮಹಾಹವೇ।।
ಆ ಮಹಾಹವದಲ್ಲಿ ಸಂಕ್ರುದ್ಧರಾಗಿ ಮೇಲೆ ಎರಗಿ ಬರುತ್ತಿರುವ ಮಹಾಬಲ ಭೀಷ್ಮ-ದ್ರೋಣರನ್ನು ಮಹೇಷ್ವಾಸ ಶಿಖಂಡಿಯು ಎದುರಿಸಿ ಯುದ್ಧಮಾಡಿದನು.
06065027a ಪ್ರಗೃಹ್ಯ ಬಲವದ್ವೀರೋ ಧನುರ್ಜಲದನಿಸ್ವನಂ।
06065027c ಅಭ್ಯವರ್ಷಚ್ಚರೈಸ್ತೂರ್ಣಂ ಚಾದಯಾನೋ ದಿವಾಕರಂ।।
ಆ ವೀರನು ಮೋಡದ ಗರ್ಜನೆಯಿದ್ದ ಬಲ ಧನುಸ್ಸನ್ನು ಹಿಡಿದು ಕ್ಷಣಮಾತ್ರದಲ್ಲಿ ದಿವಾಕರನನ್ನೇ ಮುಚ್ಚಿಬಿಡುವಂತೆ ಶರವರ್ಷವನ್ನು ಸುರಿಸಿದನು.
06065028a ಶಿಖಂಡಿನಂ ಸಮಾಸಾದ್ಯ ಭರತಾನಾಂ ಪಿತಾಮಹಃ।
06065028c ಅವರ್ಜಯತ ಸಂಗ್ರಾಮೇ ಸ್ತ್ರೀತ್ವಂ ತಸ್ಯಾನುಸಂಸ್ಮರನ್।।
ಶಿಖಂಡಿಯನ್ನು ಎದುರಿಸಿ ಭರತರ ಪಿತಾಮಹನು ಅವನ ಸ್ತ್ರೀತ್ವವನ್ನು ಸ್ಮರಿಸಿಕೊಂಡು ಹೋರಾಡುವುದನ್ನು ನಿಲ್ಲಿಸಿದನು.
06065029a ತತೋ ದ್ರೋಣೋ ಮಹಾರಾಜ ಅಭ್ಯದ್ರವತ ತಂ ರಣೇ।
06065029c ರಕ್ಷಮಾಣಸ್ತತೋ ಭೀಷ್ಮಂ ತವ ಪುತ್ರೇಣ ಚೋದಿತಃ।।
ಮಹಾರಾಜ! ಆಗ ದ್ರೋಣನು ನಿನ್ನ ಪುತ್ರನಿಂದ ಚೋದಿತನಾಗಿ ಭೀಷ್ಮನನ್ನು ರಕ್ಷಿಸಲು ರಣದಲ್ಲಿ ಮುಂದೆಬಂದನು.
06065030a ಶಿಖಂಡೀ ತು ಸಮಾಸಾದ್ಯ ದ್ರೋಣಂ ಶಸ್ತ್ರಭೃತಾಂ ವರಂ।
06065030c ಅವರ್ಜಯತ ಸಂಗ್ರಾಮೇ ಯುಗಾಂತಾಗ್ನಿಮಿವೋಲ್ಬಣಂ।।
ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೋಣನು ಶಿಖಂಡಿಯನ್ನು ಎದುರಿಸಿ ಸಂಗ್ರಾಮದಲ್ಲಿ ಯುಗಾಂತದ ಅಗ್ನಿಯಂತೆ ಉಲ್ಬಣಿಸಿ ಅವನನ್ನು ಹೊರಹಾಕಿದನು.
06065031a ತತೋ ಬಲೇನ ಮಹತಾ ಪುತ್ರಸ್ತವ ವಿಶಾಂ ಪತೇ।
06065031c ಜುಗೋಪ ಭೀಷ್ಮಮಾಸಾದ್ಯ ಪ್ರಾರ್ಥಯಾನೋ ಮಹದ್ಯಶಃ।।
ವಿಶಾಂಪತೇ! ಆಗ ನಿನ್ನ ಪುತ್ರನು ಮಹಾ ಸೇನೆಯೊಂದಿಗೆ ಭೀಷ್ಮನ ಸಮೀಪಕ್ಕೆ ಬಂದು ಅವನನ್ನು ರಕ್ಷಿಸಿದನು.
06065032a ತಥೈವ ಪಾಂಡವಾ ರಾಜನ್ಪುರಸ್ಕೃತ್ಯ ಧನಂಜಯಂ।
06065032c ಭೀಷ್ಮಮೇವಾಭ್ಯವರ್ತಂತ ಜಯೇ ಕೃತ್ವಾ ದೃಢಾಂ ಮತಿಂ।।
ರಾಜನ್! ಹಾಗೆಯೇ ಪಾಂಡವರು ಧನಂಜಯನನ್ನು ಮುಂದಿಟ್ಟುಕೊಂಡು ಜಯದ ಕುರಿತು ದೃಢ ನಿಶ್ಚಯವನ್ನು ಮಾಡಿ ಭೀಷ್ಮನನ್ನೇ ಆಕ್ರಮಣಿಸಿದರು.
06065033a ತದ್ಯುದ್ಧಮಭವದ್ಘೋರಂ ದೇವಾನಾಂ ದಾನವೈರಿವ।
06065033c ಜಯಂ ಚ ಕಾಂಕ್ಷತಾಂ ನಿತ್ಯಂ ಯಶಶ್ಚ ಪರಮಾದ್ಭುತಂ।।
ಆಗ ಅಲ್ಲಿ ದೇವ-ದಾನರವರ ನಡುವಿನಂತೆ ನಿತ್ಯ ಯಶ ಮತ್ತು ಜಯವನ್ನು ಬಯಸುವ ಅವರ ನಡುವೆ ಪರಮಾದ್ಭುತವಾದ ಘೋರ ಯುದ್ಧವು ನಡೆಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಪಂಚಮದಿವಸಯುದ್ಧಾರಂಭೇ ಪಂಚಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಐದನೇ ದಿನದ ಯುದ್ಧಾರಂಭ ಎನ್ನುವ ಅರವತ್ತೈದನೇ ಅಧ್ಯಾಯವು.