ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 64
ಸಾರ
ಬ್ರಹ್ಮಭೂತಸ್ತವ (1-10). “ದೇವರಾದ ನರ-ನಾರಾಯಣರನ್ನು ಅಪಮಾನಿಸಿ ನಾಶವಾಗುತ್ತೀಯೆ” ಎಂದು ಹೇಳಿ ಭೀಷ್ಮನು ದುರ್ಯೋಧನನನ್ನು ಕಳುಹಿಸಿದುದು (11-18).
06064001 ಭೀಷ್ಮ ಉವಾಚ।
06064001a ಶೃಣು ಚೇದಂ ಮಹಾರಾಜ ಬ್ರಹ್ಮಭೂತಸ್ತವಂ ಮಮ।
06064001c ಬ್ರಹ್ಮರ್ಷಿಭಿಶ್ಚ ದೇವೈಶ್ಚ ಯಃ ಪುರಾ ಕಥಿತೋ ಭುವಿ।।
ಭೀಷ್ಮನು ಹೇಳಿದನು: “ಮಹಾರಾಜ! ಹಿಂದೆ ಭುವಿಯಲ್ಲಿ ಬ್ರಹ್ಮರ್ಷಿ-ದೇವತೆಗಳು ಹೇಳಿದ ಈ ಬ್ರಹ್ಮಭೂತಸ್ತವವನ್ನು ಕೇಳು.
06064002a ಸಾಧ್ಯಾನಾಮಪಿ ದೇವಾನಾಂ ದೇವದೇವೇಶ್ವರಃ ಪ್ರಭುಃ।
06064002c ಲೋಕಭಾವನಭಾವಜ್ಞ ಇತಿ ತ್ವಾಂ ನಾರದೋಽಬ್ರವೀತ್।
06064002e ಭೂತಂ ಭವ್ಯಂ ಭವಿಷ್ಯಂ ಚ ಮಾರ್ಕಂಡೇಯೋಽಭ್ಯುವಾಚ ಹ।।
“ನೀನು ಸಾಧ್ಯರ, ದೇವತೆಗಳ ದೇವದೇವೇಶ್ವರ ಪ್ರಭು ಮತ್ತು ಲೋಕಭಾವನ ಭಾವಜ್ಞನೆಂದು ನಾರದನು ಹೇಳಿದನು. ಭೂತ, ಭವ್ಯ, ಭವಿಷ್ಯವೆಂದು ಮಾರ್ಕಂಡೇಯನು ಹೇಳಿದನು.
06064003a ಯಜ್ಞಾನಾಂ ಚೈವ ಯಜ್ಞಂ ತ್ವಾಂ ತಪಶ್ಚ ತಪಸಾಮಪಿ।
06064003c ದೇವಾನಾಮಪಿ ದೇವಂ ಚ ತ್ವಾಮಾಹ ಭಗವಾನ್ಭೃಗುಃ।।
ನೀನು ಯಜ್ಞಗಳ ಯಜ್ಞ, ತಾಪಸರ ತಪಸ್ಸು, ಮತ್ತು ದೇವತೆಗಳಿಗೂ ದೇವನೆಂದು ಭಗವಾನ್ ಭೃಗುವು ಹೇಳಿದನು.
06064003e ಪುರಾಣೇ ಭೈರವಂ ರೂಪಂ ವಿಷ್ಣೋ ಭೂತಪತೇತಿ ವೈ।।
06064004a ವಾಸುದೇವೋ ವಸೂನಾಂ ತ್ವಂ ಶಕ್ರಂ ಸ್ಥಾಪಯಿತಾ ತಥಾ।
06064004c ದೇವದೇವೋಽಸಿ ದೇವಾನಾಂ ಇತಿ ದ್ವೈಪಾಯನೋಽಬ್ರವೀತ್।।
ಪುರಾಣದಲ್ಲಿ ಭೈರವ ರೂಪನೆಂದೂ, ವಿಷ್ಣು-ಭೂತಪತಿಯೆಂದೂ, ವಸುಗಳಲ್ಲಿ ವಾಸುದೇವನೆಂದೂ, ಶಕ್ರನ ಸ್ಥಾಪಕನೆಂದೂ, ದೇವತೆಗಳ ದೇವರ ದೇವನೆಂದೂ ದ್ವೈಪಾಯನನು ಹೇಳಿದನು.
06064005a ಪೂರ್ವೇ ಪ್ರಜಾನಿಸರ್ಗೇಷು ದಕ್ಷಮಾಹುಃ ಪ್ರಜಾಪತಿಂ।
06064005c ಸ್ರಷ್ಟಾರಂ ಸರ್ವಭೂತಾನಾಮಂಗಿರಾಸ್ತ್ವಾಂ ತತೋಽಬ್ರವೀತ್।।
ಹಿಂದೆ ಪ್ರಜಾಸೃಷ್ಟಿಯ ಕಾಲದಲ್ಲಿ ನೀನೇ ಪ್ರಜಾಪತಿ ದಕ್ಷನೆಂದೂ, ಸರ್ವಭೂತಗಳ ಸೃಷ್ಟಾರನೆಂದೂ ಅಂಗಿರಸನು ಹೇಳಿದನು.
06064006a ಅವ್ಯಕ್ತಂ ತೇ ಶರೀರೋತ್ಥಂ ವ್ಯಕ್ತಂ ತೇ ಮನಸಿ ಸ್ಥಿತಂ।
06064006c ದೇವಾ ವಾಕ್ಸಂಭವಾಶ್ಚೇತಿ ದೇವಲಸ್ತ್ವಸಿತೋಽಬ್ರವೀತ್।।
ಅವ್ಯಕ್ತವಾದುದು ನಿನ್ನ ಶರೀರದಿಂದ ಮೇಲೆದ್ದು ಬಂತೆಂದೂ ವ್ಯಕ್ತವಾದುದು ನಿನ್ನ ಮನಸ್ಸಿನಲ್ಲಿಯೇ ನೆಲೆಸಿರುವುದೆಂದೂ, ನಿನ್ನ ಮಾತಿನಿಂದ ದೇವತೆಗಳು ಸಂಭವಿಸಿದರೆಂದೂ ದೇವಲನು ಹೇಳಿದನು.
06064007a ಶಿರಸಾ ತೇ ದಿವಂ ವ್ಯಾಪ್ತಂ ಬಾಹುಭ್ಯಾಂ ಪೃಥಿವೀ ಧೃತಾ।
06064007c ಜಠರಂ ತೇ ತ್ರಯೋ ಲೋಕಾಃ ಪುರುಷೋಽಸಿ ಸನಾತನಃ।।
ನಿನ್ನ ಶಿರವು ದಿವವನ್ನು ವ್ಯಾಪಿಸಿದೆ. ಎರಡೂ ಬಾಹುಗಳು ಪೃಥ್ವಿಯನ್ನು ಧರಿಸಿವೆ. ನಿನ್ನ ಜಠರದಲ್ಲಿ ಮೂರೂ ಲೋಕಗಳಿವೆ. ಸನಾತನ ಪುರುಷನು ನೀನೆ.
06064008a ಏವಂ ತ್ವಾಮಭಿಜಾನಂತಿ ತಪಸಾ ಭಾವಿತಾ ನರಾಃ।
06064008c ಆತ್ಮದರ್ಶನತೃಪ್ತಾನಾಂ ಋಷೀಣಾಂ ಚಾಪಿ ಸತ್ತಮಃ।।
ಹೀಗೆ ತಪಸ್ಸಿನಿಂದ ಭಾವಿತರಾದ ನರರು, ಆತ್ಮದರ್ಶನತೃಪ್ತರಾದ ಋಷಿಗಳೂ ಸತ್ತಮರೂ ತಿಳಿದುಕೊಂಡಿದ್ದಾರೆ.
06064009a ರಾಜರ್ಷೀಣಾಮುದಾರಾಣಾಮಾಹವೇಷ್ವನಿವರ್ತಿನಾಂ।
06064009c ಸರ್ವಧರ್ಮಪ್ರಧಾನಾನಾಂ ತ್ವಂ ಗತಿರ್ಮಧುಸೂದನ।।
ಮಧುಸೂದನ! ಉದಾರರಾದ, ಯುದ್ಧದಿಂದ ಪಲಾಯನ ಮಾಡದಿರುವ, ಸರ್ವಧರ್ಮ ಪ್ರಧಾನರಾದ ರಾಜರ್ಷಿಗಳ ಗತಿಯು ನೀನು.”
06064010a ಏಷ ತೇ ವಿಸ್ತರಸ್ತಾತ ಸಂಕ್ಷೇಪಶ್ಚ ಪ್ರಕೀರ್ತಿತಃ।
06064010c ಕೇಶವಸ್ಯ ಯಥಾತತ್ತ್ವಂ ಸುಪ್ರೀತೋ ಭವ ಕೇಶವೇ।।
ಮಗೂ! ಈ ರೀತಿ ವಿಸ್ತಾರವಾದ ಕೇಶವನ ಯಥಾತತ್ತ್ವವನ್ನು ಸಂಕ್ಷಿಪ್ತವಾಗಿ ಹೇಳಿದ್ದೇನೆ. ಕೇಶವನೊಡನೆ ಸುಪ್ರೀತನಾಗು.””
06064011 ಸಂಜಯ ಉವಾಚ।
06064011a ಪುಣ್ಯಂ ಶ್ರುತ್ವೈತದಾಖ್ಯಾನಂ ಮಹಾರಾಜ ಸುತಸ್ತವ।
06064011c ಕೇಶವಂ ಬಹು ಮೇನೇ ಸ ಪಾಂಡವಾಂಶ್ಚ ಮಹಾರಥಾನ್।।
ಸಂಜಯನು ಹೇಳಿದನು: “ಮಹಾರಾಜ! ಈ ಪುಣ್ಯ ಆಖ್ಯಾನವನ್ನು ಕೇಳಿ ನಿನ್ನ ಮಗನು ಕೇಶವನನ್ನೂ ಮಹಾರಥ ಪಾಂಡವರನ್ನೂ ಮಹಾತ್ಮರೆಂದು ಅಭಿಪ್ರಾಯಪಟ್ಟನು.
06064012a ತಮಬ್ರವೀನ್ಮಹಾರಾಜ ಭೀಷ್ಮಃ ಶಾಂತನವಃ ಪುನಃ।
06064012c ಮಾಹಾತ್ಮ್ಯಂ ತೇ ಶ್ರುತಂ ರಾಜನ್ಕೇಶವಸ್ಯ ಮಹಾತ್ಮನಃ।।
06064013a ನರಸ್ಯ ಚ ಯಥಾತತ್ತ್ವಂ ಯನ್ಮಾಂ ತ್ವಂ ಪರಿಪೃಚ್ಛಸಿ।
06064013c ಯದರ್ಥಂ ನೃಷು ಸಂಭೂತೌ ನರನಾರಾಯಣಾವುಭೌ।।
06064014a ಅವಧ್ಯೌ ಚ ಯಥಾ ವೀರೌ ಸಂಯುಗೇಷ್ವಪರಾಜಿತೌ।
06064014c ಯಥಾ ಚ ಪಾಂಡವಾ ರಾಜನ್ನಗಮ್ಯಾ ಯುಧಿ ಕಸ್ಯ ಚಿತ್।।
ಮಹಾರಾಜ! ಭೀಷ್ಮ ಶಾಂತನವನು ಪುನಃ ಅವನಿಗೆ ಹೇಳಿದನು: “ರಾಜನ್! ನೀನು ನನ್ನನ್ನು ಕೇಳಿದುದಕ್ಕೆ ಮಹಾತ್ಮ ಕೇಶವನ ಮತ್ತು ನರನ ಯಥಾತತ್ತ್ವ ಮಹಾತ್ಮೆಯನ್ನು ಮತ್ತು ಯಾವ ಕಾರಣಕ್ಕಾಗಿ ಆ ನರ-ನಾರಾಯಣರಿಬ್ಬರೂ ನರರಲ್ಲಿ ಅವತರಿಸಿದ್ದಾರೆ, ಹೇಗೆ ಆ ವೀರರಿಬ್ಬರೂ ಯುದ್ಧದಲ್ಲಿ ಅಪರಾಜಿತರಾಗಿದ್ದರೂ ಅವಧ್ಯರೂ ಆಗಿದ್ದಾರೆ, ಮತ್ತು ಹೇಗೆ ಪಾಂಡವರು ಯುದ್ಧದಲ್ಲಿ ಯಾರಿಂದಲೂ ಅಗಮ್ಯರು ಎನ್ನುವುದನ್ನು ನೀನು ಕೇಳಿದೆ.
06064015a ಪ್ರೀತಿಮಾನ್ ಹಿ ದೃಢಂ ಕೃಷ್ಣಃ ಪಾಂಡವೇಷು ಯಶಸ್ವಿಷು।
06064015c ತಸ್ಮಾದ್ಬ್ರವೀಮಿ ರಾಜೇಂದ್ರ ಶಮೋ ಭವತು ಪಾಂಡವೈಃ।।
ಯಶಸ್ವಿಗಳಾದ ಪಾಂಡವರಲ್ಲಿ ಕೃಷ್ಣನು ದೃಢ ಪ್ರೀತಿಯನ್ನಿಟ್ಟಿದ್ದಾನೆ. ಆದುದರಿಂದ ರಾಜೇಂದ್ರ! ನಿನಗೆ ಹೇಳುತ್ತಿದ್ದೇನೆ. ಪಾಂಡವರೊಂದಿಗೆ ಶಾಂತಿಯಿರಲಿ.
06064016a ಪೃಥಿವೀಂ ಭುಂಕ್ಷ್ವ ಸಹಿತೋ ಭ್ರಾತೃಭಿರ್ಬಲಿಭಿರ್ವಶೀ।
06064016c ನರನಾರಾಯಣೌ ದೇವಾವವಜ್ಞಾಯ ನಶಿಷ್ಯಸಿ।।
ಬಲಶಾಲಿಗಳಾದ, ವಶಿಗಳಾದ ಸಹೋದರರೊಂದಿಗೆ ಪೃಥ್ವಿಯನ್ನು ಭೋಗಿಸು. ದೇವರಾದ ನರ-ನಾರಾಯಣರನ್ನು ಅಪಮಾನಿಸಿ ನಾಶವಾಗುತ್ತೀಯೆ.”
06064017a ಏವಮುಕ್ತ್ವಾ ತವ ಪಿತಾ ತೂಷ್ಣೀಮಾಸೀದ್ವಿಶಾಂ ಪತೇ।
06064017c ವ್ಯಸರ್ಜಯಚ್ಚ ರಾಜಾನಂ ಶಯನಂ ಚ ವಿವೇಶ ಹ।।
ವಿಶಾಂಪತೇ! ಹೀಗೆ ಹೇಳಿ ನಿನ್ನ ತಂದೆ ಪಿತಾಮಹನು ಸುಮ್ಮನಾದನು. ರಾಜನನ್ನು ಕಳುಹಿಸಿ, ಶಯನವನ್ನು ಪ್ರವೇಶಿಸಿದನು.
06064018a ರಾಜಾಪಿ ಶಿಬಿರಂ ಪ್ರಾಯಾತ್ಪ್ರಣಿಪತ್ಯ ಮಹಾತ್ಮನೇ।
06064018c ಶಿಶ್ಯೇ ಚ ಶಯನೇ ಶುಭ್ರೇ ತಾಂ ರಾತ್ರಿಂ ಭರತರ್ಷಭ।।
ಭರತರ್ಷಭ! ರಾಜನೂ ಕೂಡ ಮಹಾತ್ಮನಿಗೆ ನಮಸ್ಕರಿಸಿ ಶಿಬಿರಕ್ಕೆ ಹೋದನು. ಶುಭ್ರ ಹಾಸಿಗೆಯಲ್ಲಿ ರಾತ್ರಿಯನ್ನು ಕಳೆದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ವಿಶ್ವೋಪಾಖ್ಯಾನೇ ಚತುಃಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ವಿಶ್ವೋಪಾಖ್ಯಾನ ಎನ್ನುವ ಅರವತ್ನಾಲ್ಕನೇ ಅಧ್ಯಾಯವು.