ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 61
ಸಾರ
“ಯಾವುದರಿಂದ ಪಾಂಡುಸುತರು ಅವಧ್ಯರಾಗಿದ್ದಾರೆ? ಮತ್ತು ಯಾವುದರಿಂದ ನನ್ನ ಸುತರು ವಧ್ಯರಾಗಿದ್ದಾರೆ?” ಎಂದು ಧೃತರಾಷ್ಟ್ರನು ಸಂಜಯನನ್ನು ಪ್ರಶ್ನಿಸಿದುದು (1-13). “ಪಾರ್ಥರು ಆರಂಭದಿಂದಲೂ ಸದಾ ಎಲ್ಲ ಕಾರ್ಯಗಳನ್ನೂ ಧರ್ಮದಿಂದಲೇ ಮಾಡಿಕೊಂಡು ಬಂದಿದ್ದಾರೆ… ಎಲ್ಲಿ ಧರ್ಮವೋ ಅಲ್ಲಿ ಜಯ” ಎಂದು ಹೇಳಿ ಸಂಜಯನು ದುರ್ಯೋಧನ-ಭೀಷ್ಮರ ಸಂವಾದದ ಕುರಿತು ಹೇಳಲು ಪ್ರಾರಂಭಿಸಿದುದು (14-25). “ಏನನ್ನು ಆಶ್ರಯಿಸಿ ಕೌಂತೇಯರು ನಮ್ಮನ್ನು ಪದೇ ಪದೇ ಜಯಿಸುತ್ತಿದ್ದಾರೆ?” ಎಂದು ದುರ್ಯೋಧನನು ಭೀಷ್ಮನನ್ನು ಕೇಳಿದುದು (26-29). ಭೀಷ್ಮನು ದುರ್ಯೋಧನನಿಗೆ ಬ್ರಹ್ಮನು ಮಾಡಿದ ವಿಷ್ಣುಸ್ತುತಿಯನ್ನು ಹೇಳಿದುದು (30-70).
06061001 ಧೃತರಾಷ್ಟ್ರ ಉವಾಚ।
06061001a ಭಯಂ ಮೇ ಸುಮಹಜ್ಜಾತಂ ವಿಸ್ಮಯಶ್ಚೈವ ಸಂಜಯ।
06061001c ಶ್ರುತ್ವಾ ಪಾಂಡುಕುಮಾರಾಣಾಂ ಕರ್ಮ ದೇವೈಃ ಸುದುಷ್ಕರಂ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ದೇವತೆಗಳಿಗೂ ದುಷ್ಕರ್ಮವಾದ ಪಾಂಡುಕುಮಾರರ ಕರ್ಮವನ್ನು ಕೇಳಿ ನನಗೆ ಮಹಾ ಭಯವೂ ವಿಸ್ಮಯವೂ ಉಂಟಾಗಿದೆ.
06061002a ಪುತ್ರಾಣಾಂ ಚ ಪರಾಭವಂ ಶ್ರುತ್ವಾ ಸಂಜಯ ಸರ್ವಶಃ।
06061002c ಚಿಂತಾ ಮೇ ಮಹತೀ ಸೂತ ಭವಿಷ್ಯತಿ ಕಥಂ ತ್ವಿತಿ।।
ಸಂಜಯ! ಎಲ್ಲಾ ಕಡೆ ಪುತ್ರರ ಪರಾಭವವನ್ನು ಕೇಳಿ ನನಗೆ ಮಹಾ ಚಿಂತೆಯಾಗುತ್ತಿದೆ. ಸೂತ! ಮುಂದೆ ಏನಾಗಬಹುದು?
06061003a ಧ್ರುವಂ ವಿದುರವಾಕ್ಯಾನಿ ಧಕ್ಷ್ಯಂತಿ ಹೃದಯಂ ಮಮ।
06061003c ಯಥಾ ಹಿ ದೃಶ್ಯತೇ ಸರ್ವಂ ದೈವಯೋಗೇನ ಸಂಜಯ।।
ಸಂಜಯ! ವಿದುರನಾಡಿದ ಮಾತುಗಳೇ ಖಂಡಿತವಾಗಿ ನನ್ನ ಹೃದಯವನ್ನು ಸುಡುತ್ತಿವೆ. ಎಲ್ಲವೂ ದೈವಯೋಗದಿಂದಲೇ ಆಗುತ್ತಿದೆ ಎಂದು ತೋರುತ್ತಿದೆ.
06061004a ಯತ್ರ ಭೀಷ್ಮಮುಖಾನ್ ಶೂರಾನಸ್ತ್ರಜ್ಞಾನ್ಯೋಧಸತ್ತಮಾನ್।
06061004c ಪಾಂಡವಾನಾಮನೀಕಾನಿ ಯೋಧಯಂತಿ ಪ್ರಹಾರಿಣಃ।।
ಯೋಧಸತ್ತಮರಾದ, ಶೂರರಾದ, ಅಸ್ತ್ರಜ್ಞರಾದ, ಭೀಷ್ಮಮುಖ್ಯರನ್ನು ಪಾಂಡವರ ಸೇನೆಗಳ ಪ್ರಹಾರಿಗಳು ಯುದ್ಧಮಾಡುತ್ತಿದ್ದಾರಲ್ಲ!
06061005a ಕೇನಾವಧ್ಯಾ ಮಹಾತ್ಮಾನಃ ಪಾಂಡುಪುತ್ರಾ ಮಹಾಬಲಾಃ।
06061005c ಕೇನ ದತ್ತವರಾಸ್ತಾತ ಕಿಂ ವಾ ಜ್ಞಾನಂ ವಿದಂತಿ ತೇ।
06061005e ಯೇನ ಕ್ಷಯಂ ನ ಗಚ್ಛಂತಿ ದಿವಿ ತಾರಾಗಣಾ ಇವ।।
ಮಹಾತ್ಮ ಮಹಾಬಲ ಪಾಂಡುಪುತ್ರರು ಹೇಗೆ ಅವಧ್ಯರಾದರು? ಅಯ್ಯಾ! ಅವರಿಗೆ ಯಾರು ವರವನ್ನಿತ್ತರು? ಅಥವಾ ಯಾವ ಜ್ಞಾನವನ್ನು ಅವರು ತಿಳಿದುಕೊಂಡಿದ್ದಾರೆ? ಯಾವುದರಿಂದ ಅವರು ದಿವಿಯಲ್ಲಿರುವ ತಾರಾಗಣದಂತೆ ಕ್ಷಯವನ್ನು ಹೊಂದುತ್ತಿಲ್ಲ?
06061006a ಪುನಃ ಪುನರ್ನ ಮೃಷ್ಯಾಮಿ ಹತಂ ಸೈನ್ಯಂ ಸ್ಮ ಪಾಂಡವೈಃ।
06061006c ಮಯ್ಯೇವ ದಂಡಃ ಪತತಿ ದೈವಾತ್ಪರಮದಾರುಣಃ।।
ಪಾಂಡವರಿಂದ ನನ್ನ ಸೈನ್ಯವು ಪುನಃ ಪುನಃ ಹತವಾಗುತ್ತದೆ ಎನ್ನುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ದೈವದಿಂದಾಗಿ ನನ್ನ ಮೇಲೆಯೇ ಪರಮ ದಾರುಣ ದಂಡವು ಬೀಳಲಿಕ್ಕಿದೆ.
06061007a ಯಥಾವಧ್ಯಾಃ ಪಾಂಡುಸುತಾ ಯಥಾ ವಧ್ಯಾಶ್ಚ ಮೇ ಸುತಾಃ।
06061007c ಏತನ್ಮೇ ಸರ್ವಮಾಚಕ್ಷ್ವ ಯಥಾತತ್ತ್ವೇನ ಸಂಜಯ।।
ಯಾವುದರಿಂದ ಪಾಂಡುಸುತರು ಅವಧ್ಯರಾಗಿದ್ದಾರೆ? ಮತ್ತು ಯಾವುದರಿಂದ ನನ್ನ ಸುತರು ವಧ್ಯರಾಗಿದ್ದಾರೆ? ಇದೆಲ್ಲವನ್ನೂ ಯಥಾತತ್ತ್ವವಾಗಿ ನನಗೆ ಹೇಳು ಸಂಜಯ!
06061008a ನ ಹಿ ಪಾರಂ ಪ್ರಪಶ್ಯಾಮಿ ದುಃಖಸ್ಯಾಸ್ಯ ಕಥಂ ಚನ।
06061008c ಸಮುದ್ರಸ್ಯೇವ ಮಹತೋ ಭುಜಾಭ್ಯಾಂ ಪ್ರತರನ್ನರಃ।।
ಭುಜಗಳಿಂದಲೇ ಮಹಾ ಸಮುದ್ರವನ್ನು ದಾಟುವೆನೆಂಬ ನರನಿಗೆ ಹೇಗೋ ಹಾಗೆ ನನಗೆ ಈ ದುಃಖದ ದಡೆಯು ಎಲ್ಲಿಯೂ ಕಾಣುತ್ತಿಲ್ಲ.
06061009a ಪುತ್ರಾಣಾಂ ವ್ಯಸನಂ ಮನ್ಯೇ ಧ್ರುವಂ ಪ್ರಾಪ್ತಂ ಸುದಾರುಣಂ।
06061009c ಘಾತಯಿಷ್ಯತಿ ಮೇ ಪುತ್ರಾನ್ಸರ್ವಾನ್ಭೀಮೋ ನ ಸಂಶಯಃ।।
ಮಕ್ಕಳಿಗೆ ಖಂಡಿತವಾಗಿಯೂ ಸುದಾರುಣ ವ್ಯಸನವು ಪ್ರಾಪ್ತವಾಗಿದೆ ಎಂದು ನನಗನ್ನಿಸುತ್ತದೆ. ನನ್ನ ಪುತ್ರರೆಲ್ಲರನ್ನೂ ಭೀಮನು ಕೊಲ್ಲುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
06061010a ನ ಹಿ ಪಶ್ಯಾಮಿ ತಂ ವೀರಂ ಯೋ ಮೇ ರಕ್ಷೇತ್ಸುತಾನ್ರಣೇ।
06061010c ಧ್ರುವಂ ವಿನಾಶಃ ಸಮರೇ ಪುತ್ರಾಣಾಂ ಮಮ ಸಂಜಯ।।
ಸಂಜಯ! ರಣದಲ್ಲಿ ನನ್ನ ಮಕ್ಕಳನ್ನು ರಕ್ಷಿಸಬಲ್ಲ ವೀರನನ್ನು ನಾನು ಕಾಣೆ. ಸಂಜಯ! ಸಮರದಲ್ಲಿ ನನ್ನ ಪುತ್ರರ ವಿನಾಶವು ನಿಶ್ಚಿತವಾದುದು.
06061011a ತಸ್ಮಾನ್ಮೇ ಕಾರಣಂ ಸೂತ ಯುಕ್ತಿಂ ಚೈವ ವಿಶೇಷತಃ।
06061011c ಪೃಚ್ಛತೋಽದ್ಯ ಯಥಾತತ್ತ್ವಂ ಸರ್ವಮಾಖ್ಯಾತುಮರ್ಹಸಿ।।
ಸೂತ! ಅದರ ಯುಕ್ತಿ ಮತ್ತು ವಿಶೇಷ ಕಾರಣವನ್ನು ಇಂದು ನಾನು ಕೇಳುತ್ತಿದ್ದೇನೆ. ಎಲ್ಲವನ್ನೂ ಇದ್ದ ಹಾಗೆ ವಿವರಿಸಿ ಹೇಳಬೇಕು.
06061012a ದುರ್ಯೋಧನೋಽಪಿ ಯಚ್ಚಕ್ರೇ ದೃಷ್ಟ್ವಾ ಸ್ವಾನ್ವಿಮುಖಾನ್ರಣೇ।
06061012c ಭೀಷ್ಮದ್ರೋಣೌ ಕೃಪಶ್ಚೈವ ಸೌಬಲೇಯೋ ಜಯದ್ರಥಃ।।
06061012e ದ್ರೌಣಿರ್ವಾಪಿ ಮಹೇಷ್ವಾಸೋ ವಿಕರ್ಣೋ ವಾ ಮಹಾಬಲಃ।।
ರಣದಲ್ಲಿ ತನ್ನವರು ವಿಮುಖರಾಗುತ್ತಿರುವುದನ್ನು ನೋಡಿ ದುರ್ಯೋಧನನಾದರೋ ಏನು ಮಾಡಿದನು? ಭೀಷ್ಮ, ದ್ರೋಣ, ಕೃಪ, ಸೌಬಲೇಯ, ಜಯದ್ರಥ, ಮಹೇಷ್ವಾಸ ದ್ರೌಣಿ, ಅಥವಾ ಮಹಾಬಲ ವಿಕರ್ಣರು ಏನು ಮಾಡಿದರು?
06061013a ನಿಶ್ಚಯೋ ವಾಪಿ ಕಸ್ತೇಷಾಂ ತದಾ ಹ್ಯಾಸೀನ್ಮಹಾತ್ಮನಾಂ।
06061013c ವಿಮುಖೇಷು ಮಹಾಪ್ರಾಜ್ಞ ಮಮ ಪುತ್ರೇಷು ಸಂಜಯ।।
ಸಂಜಯ! ಮಹಾಪ್ರಾಜ್ಞ! ನನ್ನ ಮಕ್ಕಳು ವಿಮುಖರಾಗುತ್ತಿದ್ದಾಗ ಆ ಮಹಾತ್ಮರ ನಿಶ್ಚಯವು ಏನಾಗಿತ್ತು?”
06061014 ಸಂಜಯ ಉವಾಚ।
06061014a ಶೃಣು ರಾಜನ್ನವಹಿತಃ ಶ್ರುತ್ವಾ ಚೈವಾವಧಾರಯ।
06061014c ನೈವ ಮಂತ್ರಕೃತಂ ಕಿಂ ಚಿನ್ನೈವ ಮಾಯಾಂ ತಥಾವಿಧಾಂ।
06061014e ನ ವೈ ವಿಭೀಷಿಕಾಂ ಕಾಂ ಚಿದ್ರಾಜನ್ಕುರ್ವಂತಿ ಪಾಂಡವಾಃ।।
ಸಂಜಯನು ಹೇಳಿದನು: “ರಾಜನ್! ಸಾವಧಾನಚಿತ್ತನಾಗಿ ಕೇಳು. ಕೇಳಿ ಅರ್ಥಮಾಡಿಕೋ. ರಾಜನ್! ಪಾಂಡವರು ಯಾವುದೇ ಮಂತ್ರಗಳನ್ನಾಗಲೀ, ಮಾಯೆಗಳನ್ನಾಗಲೀ ಮಾಡುತ್ತಿಲ್ಲ. ಅವರು ಯಾವುದೇ ರೀತಿಯ ಹೆದರಿಕೆಯನ್ನುಂಟುಮಾಡುವ ಕೃತ್ಯವನ್ನೂ ಮಾಡುತ್ತಿಲ್ಲ.
06061015a ಯುಧ್ಯಂತಿ ತೇ ಯಥಾನ್ಯಾಯಂ ಶಕ್ತಿಮಂತಶ್ಚ ಸಮ್ಯುಗೇ।
06061015c ಧರ್ಮೇಣ ಸರ್ವಕಾರ್ಯಾಣಿ ಕೀರ್ತಿತಾನೀತಿ ಭಾರತ।
06061015e ಆರಭಂತೇ ಸದಾ ಪಾರ್ಥಾಃ ಪ್ರಾರ್ಥಯಾನಾ ಮಹದ್ಯಶಃ।।
ಅವರು ಯಥಾನ್ಯಾಯವಾಗಿ ಯುದ್ಧಮಾಡುತ್ತಿದ್ದಾರೆ. ಮತ್ತು ಸಂಯುಗದಲ್ಲಿ ಶಕ್ತಿಮಂತರಾಗಿದ್ದಾರೆ ಕೂಡ. ಭಾರತ! ಪಾರ್ಥರು ಆರಂಭದಿಂದಲೂ ಸದಾ ಎಲ್ಲ ಕಾರ್ಯಗಳನ್ನೂ ಧರ್ಮದಿಂದಲೇ ಮಾಡಿಕೊಂಡು ಬಂದಿದ್ದಾರೆ. ಅವರು ಮಹಾ ಯಶಸ್ಸನ್ನೇ ಬಯಸುತ್ತಾ ಬಂದಿದ್ದಾರೆ.
06061016a ನ ತೇ ಯುದ್ಧಾನ್ನಿವರ್ತಂತೇ ಧರ್ಮೋಪೇತಾ ಮಹಾಬಲಾಃ।
06061016c ಶ್ರಿಯಾ ಪರಮಯಾ ಯುಕ್ತಾ ಯತೋ ಧರ್ಮಸ್ತತೋ ಜಯಃ।
06061016e ತೇನಾವಧ್ಯಾ ರಣೇ ಪಾರ್ಥಾ ಜಯಯುಕ್ತಾಶ್ಚ ಪಾರ್ಥಿವ।।
ಧರ್ಮೋಪೇತರಾದ, ಪರಮ ಶ್ರೀಯಿಂದ ಯುಕ್ತರಾದ ಆ ಮಹಾಬಲರು ಯುದ್ಧದಿಂದ ಪಲಾಯನ ಮಾಡುವುದಿಲ್ಲ. ಎಲ್ಲಿ ಧರ್ಮವೋ ಅಲ್ಲಿ ಜಯ. ಪಾರ್ಥಿವ! ಇದರಿಂದಾಗಿ ರಣದಲ್ಲಿ ಪಾರ್ಥರು ಅವಧ್ಯರು ಮತ್ತು ಜಯಶಾಲಿಗಳು.
06061017a ತವ ಪುತ್ರಾ ದುರಾತ್ಮಾನಃ ಪಾಪೇಷ್ವಭಿರತಾಃ ಸದಾ।
06061017c ನಿಷ್ಠುರಾ ಹೀನಕರ್ಮಾಣಸ್ತೇನ ಹೀಯಂತಿ ಸಮ್ಯುಗೇ।।
ನಿನ್ನ ಪುತ್ರರು ದುರಾತ್ಮರು. ಸದಾ ಪಾಪಗಳಲ್ಲಿ ಸದಾ ನಿರತರಾಗಿರುವವರು. ನಿಷ್ಠುರರು. ಹೀನ ಕರ್ಮಿಗಳು. ಇದರಿಂದಲೇ ಅವರು ಸಂಯುಗದಲ್ಲಿ ಕಳೆದುಕೊಳ್ಳುತ್ತಿದ್ದಾರೆ.
06061018a ಸುಬಹೂನಿ ನೃಶಂಸಾನಿ ಪುತ್ರೈಸ್ತವ ಜನೇಶ್ವರ।
06061018c ನಿಕೃತಾನೀಹ ಪಾಂಡೂನಾಂ ನೀಚೈರಿವ ಯಥಾ ನರೈಃ।।
ಜನೇಶ್ವರ! ನಿನ್ನ ಪುತ್ರರು ನೀಚ ನರರಂತೆ ಪಾಂಡವರ ಮೇಲೆ ಅನೇಕ ಕ್ರೂರಕರ್ಮಗಳನ್ನೂ ಮೋಸಕೃತ್ಯಗಳನ್ನೂ ಎಸಗಿದ್ದಾರೆ.
06061019a ಸರ್ವಂ ಚ ತದನಾದೃತ್ಯ ಪುತ್ರಾಣಾಂ ತವ ಕಿಲ್ಬಿಷಂ।
06061019c ಸಾಪಹ್ನವಾಃ ಸದೈವಾಸನ್ಪಾಂಡವಾಃ ಪಾಂಡುಪೂರ್ವಜ।
06061019e ನ ಚೈನಾನ್ಬಹು ಮನ್ಯಂತೇ ಪುತ್ರಾಸ್ತವ ವಿಶಾಂ ಪತೇ।।
ಪಾಂಡುಪೂರ್ವಜ! ನಿನ್ನ ಪುತ್ರರ ತಪ್ಪುಗಳೆಲ್ಲವನ್ನೂ ಅನಾದರಿಸಿ ಪಾಂಡವರು ಸದೈವ ತಮಗೆ ಬಂದಿರುವ ಆಪತ್ತುಗಳಿಂದ ತಪ್ಪಿಸಿಕೊಳ್ಳುವುದರಲ್ಲಿಯೇ ನಿರತರಾಗಿದ್ದರು. ವಿಶಾಂಪತೇ! ಇಂಥವರನ್ನು ನಿನ್ನ ಮಕ್ಕಳು ಹೆಚ್ಚಾಗಿ ಗೌರವಿಸಲಿಲ್ಲ.
06061020a ತಸ್ಯ ಪಾಪಸ್ಯ ಸತತಂ ಕ್ರಿಯಮಾಣಸ್ಯ ಕರ್ಮಣಃ।
06061020c ಸಂಪ್ರಾಪ್ತಂ ಸುಮಹದ್ಘೋರಂ ಫಲಂ ಕಿಂಪಾಕಸನ್ನಿಭಂ।
06061020e ಸ ತದ್ಭುಂಕ್ಷ್ವ ಮಹಾರಾಜ ಸಪುತ್ರಃ ಸಸುಹೃಜ್ಜನಃ।।
ಮಹಾರಾಜ! ಸತತವೂ ಅವನು ಮಾಡುತ್ತಿದ್ದ ಪಾಪ ಕರ್ಮಗಳು ತಂದಿರುವ ಕೆಟ್ಟುಹೋದ ಅಡುಗೆಯಂತಿರುವ ಈ ಮಹಾಘೋರ ಫಲವನ್ನು ನೀನು ಮಕ್ಕಳು ಸುಹೃದಯರೊಂದಿಗೆ ಭೋಗಿಸುತ್ತಿದ್ದೀಯೆ.
06061021a ನಾವಬುಧ್ಯಸಿ ಯದ್ರಾಜನ್ವಾರ್ಯಮಾಣಃ ಸುಹೃಜ್ಜನೈಃ।
06061021c ವಿದುರೇಣಾಥ ಭೀಷ್ಮೇಣ ದ್ರೋಣೇನ ಚ ಮಹಾತ್ಮನಾ।।
ರಾಜನ್! ಅವರನ್ನು ತಡೆಯಲು ಸುಹೃಜ್ಜನರಾದ ಮಹಾತ್ಮ ವಿದುರ, ಭೀಷ್ಮ, ದ್ರೋಣರನ್ನು ನೀನು ಮನಸ್ಸಿಗೆ ತೆಗೆದುಕೊಳ್ಳಲಿಲ್ಲ.
06061022a ತಥಾ ಮಯಾ ಚಾಪ್ಯಸಕೃದ್ವಾರ್ಯಮಾಣೋ ನ ಗೃಹ್ಣಸಿ।
06061022c ವಾಕ್ಯಂ ಹಿತಂ ಚ ಪಥ್ಯಂ ಚ ಮರ್ತ್ಯಃ ಪಥ್ಯಮಿವೌಷಧಂ।
06061022e ಪುತ್ರಾಣಾಂ ಮತಮಾಸ್ಥಾಯ ಜಿತಾನ್ಮನ್ಯಸಿ ಪಾಂಡವಾನ್।।
ಹಾಗೆಯೇ ನಾನೂ ಕೂಡ ಪಾಪಕೃತ್ಯದಿಂದ ತಡೆಯುವಾಗ ಅದನ್ನು ಸ್ವೀಕರಿಸಲಿಲ್ಲ. ಮೃತ್ಯುಮುಖನಾಗಿರುವ ಮನುಷ್ಯನು ಹೇಗೆ ಪಥ್ಯ ಔಷಧವನ್ನು ತೆಗೆದುಕೊಳ್ಳುವುದಿಲ್ಲವೋ ಹಾಗೆ ನೀನು ಪಥ್ಯವಾದ ಹಿತ ವಾಕ್ಯವನ್ನು ಸ್ವೀಕರಿಸಲಿಲ್ಲ. ಮಕ್ಕಳ ಮಾತನ್ನು ಕೇಳಿಕೊಂಡು ಪಾಂಡವರನ್ನು ಗೆದ್ದಾಯಿತು ಎಂದು ತಿಳಿದುಕೊಂಡಿದ್ದೆ.
06061023a ಶೃಣು ಭೂಯೋ ಯಥಾತತ್ತ್ವಂ ಯನ್ಮಾಂ ತ್ವಂ ಪರಿಪೃಚ್ಛಸಿ।
06061023c ಕಾರಣಂ ಭರತಶ್ರೇಷ್ಠ ಪಾಂಡವಾನಾಂ ಜಯಂ ಪ್ರತಿ।
06061023e ತತ್ತೇಽಹಂ ಕಥಯಿಷ್ಯಾಮಿ ಯಥಾಶ್ರುತಮರಿಂದಮ।।
ನೀನು ನನಗೆ ಕೇಳಿದುದನ್ನು ಯಥಾತತ್ತ್ವವಾಗಿ ಪುನಃ ಕೇಳು. ಭರತಶ್ರೇಷ್ಠ! ಅರಿಂದಮ! ಪಾಂಡವರ ಜಯಕ್ಕೆ ಕಾರಣವನ್ನು ಹೇಳುತ್ತೇನೆ. ಅದನ್ನು ಕೇಳು.
06061024a ದುರ್ಯೋಧನೇನ ಸಂಪೃಷ್ಟ ಏತಮರ್ಥಂ ಪಿತಾಮಹಃ।
06061024c ದೃಷ್ಟ್ವಾ ಭ್ರಾತೄನ್ರಣೇ ಸರ್ವಾನ್ನಿರ್ಜಿತಾನ್ಸುಮಹಾರಥಾನ್।।
06061025a ಶೋಕಸಮ್ಮೂಢಹೃದಯೋ ನಿಶಾಕಾಲೇ ಸ್ಮ ಕೌರವಃ।
06061025c ಪಿತಾಮಹಂ ಮಹಾಪ್ರಾಜ್ಞಂ ವಿನಯೇನೋಪಗಮ್ಯ ಹ।
06061025e ಯದಬ್ರವೀತ್ಸುತಸ್ತೇಽಸೌ ತನ್ಮೇ ಶೃಣು ಜನೇಶ್ವರ।।
ಇದರ ಅರ್ಥವನ್ನೇ ದುರ್ಯೋಧನನು ಪಿತಾಮಹನಲ್ಲಿ ಕೇಳಿದ್ದನು. ರಣದಲ್ಲಿ ಸುಮಹಾರಥರಾದ ಸರ್ವ ಭ್ರಾತೃಗಳೂ ಸೋತಿದ್ದುದನ್ನು ನೋಡಿ ಶೋಕಸಮ್ಮೂಢ ಹೃದಯನಾಗಿ ಕೌರವನು ನಿಶಾಕಾಲದಲ್ಲಿ ಮಹಾಪ್ರಾಜ್ಞ ಪಿತಾಮಹನಲ್ಲಿ ವಿನಯದಿಂದ ಹೋಗಿ ನಿನ್ನ ಮಗನು ಏನು ಹೇಳಿದನೆನ್ನುವುದನ್ನು ನನ್ನಿಂದ ಕೇಳು ಜನೇಶ್ವರ!
06061026 ದುರ್ಯೋಧನ ಉವಾಚ।
06061026a ತ್ವಂ ಚ ದ್ರೋಣಶ್ಚ ಶಲ್ಯಶ್ಚ ಕೃಪೋ ದ್ರೌಣಿಸ್ತಥೈವ ಚ।
06061026c ಕೃತವರ್ಮಾ ಚ ಹಾರ್ದಿಕ್ಯಃ ಕಾಂಬೋಜಶ್ಚ ಸುದಕ್ಷಿಣಃ।।
06061027a ಭೂರಿಶ್ರವಾ ವಿಕರ್ಣಶ್ಚ ಭಗದತ್ತಶ್ಚ ವೀರ್ಯವಾನ್।
06061027c ಮಹಾರಥಾಃ ಸಮಾಖ್ಯಾತಾಃ ಕುಲಪುತ್ರಾಸ್ತನುತ್ಯಜಃ।।
ದುರ್ಯೋಧನನು ಹೇಳಿದನು: “ನೀನು, ದ್ರೋಣ, ಶಲ್ಯ, ಕೃಪ, ಮತ್ತು ಹಾಗೆಯೇ ದ್ರೌಣಿ, ಹಾರ್ದಿಕ್ಯ ಕೃತವರ್ಮ, ಕಾಂಬೋಜ ಸುದಕ್ಷಿಣ, ಭೂರಿಶ್ರವ, ವಿಕರ್ಣ, ವೀರ್ಯವಾನ್ ಭಗದತ್ತ ಎಲ್ಲರೂ ಮಹಾರಥರೆಂದು ಖ್ಯಾತರಾಗಿರುವಿರಿ. ಕುಲಪುತ್ರರು ಮತ್ತು ದೇಹವನ್ನು ತ್ಯಜಿಸಿದವರು.
06061028a ತ್ರಯಾಣಾಮಪಿ ಲೋಕಾನಾಂ ಪರ್ಯಾಪ್ತಾ ಇತಿ ಮೇ ಮತಿಃ।
06061028c ಪಾಂಡವಾನಾಂ ಸಮಸ್ತಾಶ್ಚ ನ ತಿಷ್ಠಂತಿ ಪರಾಕ್ರಮೇ।।
ಮೂರುಲೋಕಗಳನ್ನು ಗೆಲ್ಲಲು ನೀವು ಸಾಕೆಂದು ನನ್ನ ಅಭಿಪ್ರಾಯ. ಆದರೂ ನೀವೆಲ್ಲರೂ ಒಟ್ಟಿಗೇ ಪಾಂಡವರ ಪರಾಕ್ರಮವನ್ನು ಎದುರಿಸಿ ನಿಲ್ಲಲಾಗುತ್ತಿಲ್ಲ.
06061029a ತತ್ರ ಮೇ ಸಂಶಯೋ ಜಾತಸ್ತನ್ಮಮಾಚಕ್ಷ್ವ ಪೃಚ್ಛತಃ।
06061029c ಯಂ ಸಮಾಶ್ರಿತ್ಯ ಕೌಂತೇಯಾ ಜಯಂತ್ಯಸ್ಮಾನ್ಪದೇ ಪದೇ।।
ಇದರಲ್ಲಿ ನನಗೆ ಸಂಶಯವು ಹುಟ್ಟಿದೆ. ನಾನು ಕೇಳಿದುದಕ್ಕೆ ಹೇಳು. ಏನನ್ನು ಆಶ್ರಯಿಸಿ ಕೌಂತೇಯರು ನಮ್ಮನ್ನು ಪದೇ ಪದೇ ಜಯಿಸುತ್ತಿದ್ದಾರೆ?”
06061030 ಭೀಷ್ಮ ಉವಾಚ 06061030a ಶೃಣು ರಾಜನ್ವಚೋ ಮಹ್ಯಂ ಯತ್ತ್ವಾಂ ವಕ್ಷ್ಯಾಮಿ ಕೌರವ।
06061030c ಬಹುಶಶ್ಚ ಮಮೋಕ್ತೋಽಸಿ ನ ಚ ಮೇ ತತ್ತ್ವಯಾ ಕೃತಂ।।
ಭೀಷ್ಮನು ಹೇಳಿದನು: “ಕೌರವ! ರಾಜನ್! ನನ್ನ ಮಾತನ್ನು ಕೇಳು. ಯಥಾವತ್ತಾಗಿ ಹೇಳುತ್ತೇನೆ. ಅನೇಕ ಬಾರಿ ಇದನ್ನು ನಾನು ನಿನಗೆ ಹೇಳಿದ್ದೇನೆ. ಆದರೆ ನೀನು ಅದರಂತೆ ಮಾಡಲಿಲ್ಲ.
06061031a ಕ್ರಿಯತಾಂ ಪಾಂಡವೈಃ ಸಾರ್ಧಂ ಶಮೋ ಭರತಸತ್ತಮ।
06061031c ಏತತ್ ಕ್ಷಮಮಹಂ ಮನ್ಯೇ ಪೃಥಿವ್ಯಾಸ್ತವ ಚಾಭಿಭೋ।।
ಭರತಸತ್ತಮ! ವಿಭೋ! ಪಾಂಡವರೊಂದಿಗೆ ಸಂಧಿ ಮಾಡಿಕೋ. ಇದರಿಂದ ನಿನಗೂ ಈ ಪೃಥ್ವಿಗೂ ಒಳ್ಳೆಯದಾಗುತ್ತದೆಯೆಂದು ನನ್ನ ಅಭಿಪ್ರಾಯ.
06061032a ಭುಂಜೇಮಾಂ ಪೃಥಿವೀಂ ರಾಜನ್ಭ್ರಾತೃಭಿಃ ಸಹಿತಃ ಸುಖೀ।
06061032c ದುರ್ಹೃದಸ್ತಾಪಯನ್ಸರ್ವಾನ್ನಂದಯಂಶ್ಚಾಪಿ ಬಾಂಧವಾನ್।।
ರಾಜನ್! ದುಹೃದಯರನ್ನು ಬೇಗೆಗೊಳಿಸಿ ಎಲ್ಲ ಬಾಂಧವರನ್ನೂ ಆನಂದಿಸಿ ಭ್ರಾತೃಗಳೊಂದಿಗೆ ಈ ಪೃಥ್ವಿಯನ್ನು ಸುಖಿಯಾಗಿ ಭೋಗಿಸು.
06061033a ನ ಚ ಮೇ ಕ್ರೋಶತಸ್ತಾತ ಶ್ರುತವಾನಸಿ ವೈ ಪುರಾ।
06061033c ತದಿದಂ ಸಮನುಪ್ರಾಪ್ತಂ ಯತ್ಪಾಂಡೂನವಮನ್ಯಸೇ।।
ಮಗೂ! ಹಿಂದೆ ಇದನ್ನು ನಾನು ಕೂಗಿ ಹೇಳಿದ್ದೆ. ಆಗ ನೀನು ನನ್ನನ್ನು ಕೇಳಲಿಲ್ಲ. ಪಾಂಡವರಿಗೆ ಮಾಡಿದ ಅಪಮಾನವು ನಿನಗೆ ಈ ಪರಿಸ್ಥಿತಿಯನ್ನು ತಂದುಕೊಟ್ಟಿದೆ.
06061034a ಯಶ್ಚ ಹೇತುರವಧ್ಯತ್ವೇ ತೇಷಾಮಕ್ಲಿಷ್ಟಕರ್ಮಣಾಂ।
06061034c ತಂ ಶೃಣುಷ್ವ ಮಹಾರಾಜ ಮಮ ಕೀರ್ತಯತಃ ಪ್ರಭೋ।।
ಮಹಾರಾಜ! ಪ್ರಭೋ! ಆ ಅಕ್ಲಿಷ್ಟಕರ್ಮಿಗಳ ಅವಧ್ಯತ್ವದ ಕಾರಣವನ್ನು ನಾನು ಹೇಳುತ್ತೇನೆ. ಕೇಳು.
06061035a ನಾಸ್ತಿ ಲೋಕೇಷು ತದ್ಭೂತಂ ಭವಿತಾ ನೋ ಭವಿಷ್ಯತಿ।
06061035c ಯೋ ಜಯೇತ್ಪಾಂಡವಾನ್ಸಂಖ್ಯೇ ಪಾಲಿತಾಂ ಶಾರ್ಙ್ಗಧನ್ವನಾ।।
ಶಾರ್ಙ್ಗಧನ್ವನಿಂದ ಪಾಲಿತರಾದ ಪಾಂಡವರನ್ನು ಯುದ್ಧದಲ್ಲಿ ಗೆಲ್ಲುವಂಥಹುದು ಲೋಕಗಳಲ್ಲಿ ಇಲ್ಲ, ಹಿಂದೆಯೂ ಇರಲಿಲ್ಲ ಮತ್ತು ಮುಂದೆ ಕೂಡ ಇರುವುದಿಲ್ಲ.
06061036a ಯತ್ತು ಮೇ ಕಥಿತಂ ತಾತ ಮುನಿಭಿರ್ಭಾವಿತಾತ್ಮಭಿಃ।
06061036c ಪುರಾಣಗೀತಂ ಧರ್ಮಜ್ಞ ತಚ್ಚೃಣುಷ್ವ ಯಥಾತಥಂ।।
ಧರ್ಮಜ್ಞ! ಮಗೂ! ಮುನಿಗಳು ಭಾವಿತಾತ್ಮರು ನನಗೆ ಹೇಳಿದ ಈ ಪುರಾಣಗೀತೆಯನ್ನು ಹೇಗೆ ಕೇಳಿದ್ದೆನೋ ಹಾಗೆ ಕೇಳು.
06061037a ಪುರಾ ಕಿಲ ಸುರಾಃ ಸರ್ವೇ ಋಷಯಶ್ಚ ಸಮಾಗತಾಃ।
06061037c ಪಿತಾಮಹಮುಪಾಸೇದುಃ ಪರ್ವತೇ ಗಂಧಮಾದನೇ।।
ಹಿಂದೆ ಎಲ್ಲ ಸುರರೂ ಋಷಿಗಳೂ ಪಿತಾಮಹನನ್ನು ಉಪಾಸಿಸಲು ಗಂಧಮಾದನ ಪರ್ವತದಲ್ಲಿ ಸೇರಿದ್ದರು.
06061038a ಮಧ್ಯೇ ತೇಷಾಂ ಸಮಾಸೀನಃ ಪ್ರಜಾಪತಿರಪಶ್ಯತ।
06061038c ವಿಮಾನಂ ಜಾಜ್ವಲದ್ಭಾಸಾ ಸ್ಥಿತಂ ಪ್ರವರಮಂಬರೇ।।
ಅವರ ಮಧ್ಯೆ ಕುಳಿತಿದ್ದ ಪ್ರಜಾಪತಿಯು ಮೇಲೆ ಅಂಬರದಲ್ಲಿ ಉರಿಯುತ್ತಿರುವಂತೆ ಹೊಳೆಯುತ್ತಿದ್ದ ವಿಮಾನವನ್ನು ನೋಡಿದನು.
06061039a ಧ್ಯಾನೇನಾವೇದ್ಯ ತಂ ಬ್ರಹ್ಮಾ ಕೃತ್ವಾ ಚ ನಿಯತೋಽಂಜಲಿಂ।
06061039c ನಮಶ್ಚಕಾರ ಹೃಷ್ಟಾತ್ಮಾ ಪರಮಂ ಪರಮೇಶ್ವರಂ।।
ಧ್ಯಾನದಿಂದ ಅವನನ್ನು ತಿಳಿದ ಬ್ರಹ್ಮನು ಹೃಷ್ಟಾತ್ಮನಾಗಿ ಆ ಪರಮ ಪರಮೇಶ್ವರನನ್ನು ನಿಯತನಾಗಿ ಕೈಮುಗಿದು ನಮಸ್ಕರಿಸಿದನು.
06061040a ಋಷಯಸ್ತ್ವಥ ದೇವಾಶ್ಚ ದೃಷ್ಟ್ವಾ ಬ್ರಹ್ಮಾಣಮುತ್ಥಿತಂ।
06061040c ಸ್ಥಿತಾಃ ಪ್ರಾಂಜಲಯಃ ಸರ್ವೇ ಪಶ್ಯಂತೋ ಮಹದದ್ಭುತಂ।।
ಬ್ರಹ್ಮನು ಮೇಲೆದ್ದುದನ್ನು ನೋಡಿ ಎಲ್ಲ ಋಷಿಗಳೂ ದೇವತೆಗಳೂ ಕೈಮುಗಿದು ನಿಂತು ಆ ಮಹಾ ಅದ್ಭುತವನ್ನು ನೋಡಿದರು.
06061041a ಯಥಾವಚ್ಚ ತಮಭ್ಯರ್ಚ್ಯ ಬ್ರಹ್ಮಾ ಬ್ರಹ್ಮವಿದಾಂ ವರಃ।
06061041c ಜಗಾದ ಜಗತಃ ಸ್ರಷ್ಟಾ ಪರಂ ಪರಮಧರ್ಮವಿತ್।।
ಬ್ರಹ್ಮವಿದರಲ್ಲಿ ಶ್ರೇಷ್ಠ, ಪರಮ ಧರ್ಮವಿದು, ಜಗತ್ತಿನ ಸೃಷ್ಟಾ ಬ್ರಹ್ಮನು ಆ ಪರಮನನ್ನು ಯಥಾವಿಧಿಯಾಗಿ ಅರ್ಚಿಸಿದನು.
06061042a ವಿಶ್ವಾವಸುರ್ವಿಶ್ವಮೂರ್ತಿರ್ವಿಶ್ವೇಶೋ ವಿಷ್ವಕ್ಸೇನೋ ವಿಶ್ವಕರ್ಮಾ ವಶೀ ಚ।
06061042c ವಿಶ್ವೇಶ್ವರೋ ವಾಸುದೇವೋಽಸಿ ತಸ್ಮಾದ್ ಯೋಗಾತ್ಮಾನಂ ದೈವತಂ ತ್ವಾಮುಪೈಮಿ।।
“ವಿಶ್ವಾವಸು-ಪ್ರಪಂಚಕ್ಕೆ ಅಕ್ಷಯವಾಗಿರುವ ಐಶ್ವರ್ಯನೇ! ವಿಶ್ವಮೂರ್ತಿ -ಪ್ರಪಂಚವೇ ಮೂರ್ತಿಯಾಗಿರುವವನೇ! ವಿಶ್ವೇಶ! ವಿಷ್ವಕ್ಸೇನ - ಎಲ್ಲೆಡೆಯಲ್ಲಿಯೂ ಏಕೈಕ ಸೇನಾನಿಯೇ! ವಿಶ್ವಕರ್ಮ-ವಿಶ್ವವನ್ನು ಸೃಷ್ಟಿಸಿದವನೇ! ವಶೀ - ಬ್ರಹ್ಮಾಂಡವನ್ನೂ ವಶದಲ್ಲಿಟ್ಟುಕೊಂಡಿರುವವನೇ! ವಿಶ್ವೇಶ್ವರ! ವಾಸುದೇವನಾಗಿದ್ದೀಯೆ. ಆದುದರಿಂದ ಯೋಗಸ್ವರೂಪನಾದ ದೇವತೆಯಾಗಿರುವೆ. ನಿನಗೆ ನಾನು ಶರಣಾಗುತ್ತೇನೆ.
06061043a ಜಯ ವಿಶ್ವ ಮಹಾದೇವ ಜಯ ಲೋಕಹಿತೇ ರತ।
06061043c ಜಯ ಯೋಗೀಶ್ವರ ವಿಭೋ ಜಯ ಯೋಗಪರಾವರ।।
ವಿಶ್ವ! ಮಹಾದೇವ! ನಿನಗೆ ಜಯವಾಗಲಿ. ಲೋಕಹಿತರತನೇ! ನಿನಗೆ ಜಯವಾಗಲಿ. ಯೋಗೀಶ್ವರ! ವಿಭೋ! ನಿನಗೆ ಜಯವಾಗಲಿ. ಯೋಗಪರಾವರ! ನಿನಗೆ ಜಯವಾಗಲಿ.
06061044a ಪದ್ಮಗರ್ಭ ವಿಶಾಲಾಕ್ಷ ಜಯ ಲೋಕೇಶ್ವರೇಶ್ವರ।
06061044c ಭೂತಭವ್ಯಭವನ್ನಾಥ ಜಯ ಸೌಮ್ಯಾತ್ಮಜಾತ್ಮಜ।।
ಪದ್ಮಗರ್ಭ! ವಿಶಾಲಾಕ್ಷ! ಲೋಕೇಶ್ವರೇಶ್ವರ! ನಿನಗೆ ಜಯವಾಗಲಿ. ಭೂತಭವ್ಯಭವನ್ನಾಥ! ಸೌಮ್ಯಾತ್ಮಜಾತ್ಮಜ! ನಿನಗೆ ಜಯವಾಗಲಿ.
06061045a ಅಸಂಖ್ಯೇಯಗುಣಾಜೇಯ ಜಯ ಸರ್ವಪರಾಯಣ।
06061045c ನಾರಾಯಣ ಸುದುಷ್ಪಾರ ಜಯ ಶಾರ್ಮ್ಗಧನುರ್ಧರ।।
ಅಸಂಖ್ಯೇಯಗುಣಾಜೇಯ! ಸರ್ವಪರಾಯಣ! ನಿನಗೆ ಜಯವಾಗಲಿ. ನಾರಯಣ! ಸುದುಷ್ಟಾರ! ಶಾಙ್ರಧನುರ್ಧರ! ನಿನಗೆ ಜಯವಾಗಲಿ.
06061046a ಸರ್ವಗುಹ್ಯಗುಣೋಪೇತ ವಿಶ್ವಮೂರ್ತೇ ನಿರಾಮಯ।
06061046c ವಿಶ್ವೇಶ್ವರ ಮಹಾಬಾಹೋ ಜಯ ಲೋಕಾರ್ಥತತ್ಪರ।।
ಸರ್ವಗುಹ್ಯಗುಣೋಪೇತ! ವಿಶ್ವಮೂರ್ತೇ! ನಿರಾಮಯ! ವಿಶ್ವೇಶ್ವರ! ಮಹಾಬಾಹೋ! ಲೋಕಾರ್ಥತತ್ಪರ! ನಿನಗೆ ಜಯವಾಗಲಿ.
06061047a ಮಹೋರಗ ವರಾಹಾದ್ಯ ಹರಿಕೇಶ ವಿಭೋ ಜಯ।
06061047c ಹರಿವಾಸ ವಿಶಾಮೀಶ ವಿಶ್ವಾವಾಸಾಮಿತಾವ್ಯಯ।।
ಮಹೋರಗ! ವರಾಹಾದ್ಯ! ಹರಿಕೇಶ! ವಿಭೋ! ಹರಿವಾಸ! ವಿಶಾಮೀಶ! ವಿಶ್ವಾವಾಸಾ! ಅಮಿತ! ಅವ್ಯಯ! ನಿನಗೆ ಜಯವಾಗಲಿ.
06061048a ವ್ಯಕ್ತಾವ್ಯಕ್ತಾಮಿತಸ್ಥಾನ ನಿಯತೇಂದ್ರಿಯ ಸೇಂದ್ರಿಯ।
06061048c ಅಸಂಖ್ಯೇಯಾತ್ಮಭಾವಜ್ಞ ಜಯ ಗಂಭೀರ ಕಾಮದ।।
ವ್ಯಕ್ತ! ಅವ್ಯಕ್ತ! ಅಮಿತಸ್ಥಾನ! ನಿಯತೇಂದ್ರಿಯ! ಸೇಂದ್ರಿಯ! ಅಸಂಖ್ಯೇಯಾತ್ಮ! ಭಾವಜ್ಞ! ಗಂಭೀರ! ಕಾಮದ! ನಿನಗೆ ಜಯವಾಗಲಿ.
06061049a ಅನಂತ ವಿದಿತಪ್ರಜ್ಞ ನಿತ್ಯಂ ಭೂತವಿಭಾವನ।
06061049c ಕೃತಕಾರ್ಯ ಕೃತಪ್ರಜ್ಞ ಧರ್ಮಜ್ಞ ವಿಜಯಾಜಯ।।
ಅನಂತ! ವಿದಿತಪ್ರಜ್ಞ! ನಿತ್ಯ! ಭೂತವಿಭಾವನ! ಕೃತಕಾರ್ಯ! ಕೃತಪ್ರಜ್ಞ! ಧರ್ಮಜ್ಞ! ವಿಜಯ! ನಿನಗೆ ಜಯವಾಗಲಿ.
06061050a ಗುಹ್ಯಾತ್ಮನ್ಸರ್ವಭೂತಾತ್ಮನ್ಸ್ಫುಟಸಂಭೂತಸಂಭವ।
06061050c ಭೂತಾರ್ಥತತ್ತ್ವ ಲೋಕೇಶ ಜಯ ಭೂತವಿಭಾವನ।।
ಗುಹ್ಯಾತ್ಮನ್! ಸರ್ವಭೂತಾತ್ಮನ್! ಸ್ಫುಟಸಂಭೂತಸಂಭವ! ಭೂತಾರ್ಥತತ್ತ್ವ! ಲೋಕೇಶ! ಭೂತವಿಭಾವನ! ನಿನಗೆ ಜಯವಾಗಲಿ!
06061051a ಆತ್ಮಯೋನೇ ಮಹಾಭಾಗ ಕಲ್ಪಸಂಕ್ಷೇಪತತ್ಪರ।
06061051c ಉದ್ಭಾವನ ಮನೋದ್ಭಾವ ಜಯ ಬ್ರಹ್ಮಜನಪ್ರಿಯ।।
ಆತ್ಮಯೋನಿಯೇ! ಮಹಾಭಾಗ! ಕಲ್ಪಸಂಕ್ಷೇಪತತ್ಪರ! ಉದ್ಭಾವನ! ಮನೋದ್ಭಾವ! ಬ್ರಹ್ಮಜನಪ್ರಿಯ! ನಿನಗೆ ಜಯವಾಗಲಿ!
06061052a ನಿಸರ್ಗಸರ್ಗಾಭಿರತ ಕಾಮೇಶ ಪರಮೇಶ್ವರ।
06061052c ಅಮೃತೋದ್ಭವ ಸದ್ಭಾವ ಯುಗಾಗ್ನೇ ವಿಜಯಪ್ರದ।।
06061053a ಪ್ರಜಾಪತಿಪತೇ ದೇವ ಪದ್ಮನಾಭ ಮಹಾಬಲ।
06061053c ಆತ್ಮಭೂತ ಮಹಾಭೂತ ಕರ್ಮಾತ್ಮಂ ಜಯ ಕರ್ಮದ।।
ನಿಸರ್ಗಸರ್ಗಾಭಿರತ! ಕಾಮೇಶ! ಪರಮೇಶ್ವರ! ಅಮೃತೋದ್ಭವ! ಸದ್ಭಾವ! ಯುಗಾಗ್ನೇ! ವಿಜಯಪ್ರದ! ಪ್ರಜಾಪತಿಪತೇ! ದೇವ! ಪದ್ಮನಾಭ! ಮಹಾಬಲ! ಆತ್ಮಭೂತ! ಮಹಾಭೂತ! ಕರ್ಮಾತ್ಮ! ಕರ್ಮದ! ನಿನಗೆ ಜಯವಾಗಲಿ!
06061054a ಪಾದೌ ತವ ಧರಾ ದೇವೀ ದಿಶೋ ಬಾಹುರ್ದಿವಂ ಶಿರಃ।
06061054c ಮೂರ್ತಿಸ್ತೇಽಹಂ ಸುರಾಃ ಕಾಯಶ್ಚಂದ್ರಾದಿತ್ಯೌ ಚ ಚಕ್ಷುಷೀ।।
06061055a ಬಲಂ ತಪಶ್ಚ ಸತ್ಯಂ ಚ ಧರ್ಮಃ ಕಾಮಾತ್ಮಜಃ ಪ್ರಭೋ।
06061055c ತೇಜೋಽಗ್ನಿಃ ಪವನಃ ಶ್ವಾಸ ಆಪಸ್ತೇ ಸ್ವೇದಸಂಭವಾಃ।।
06061056a ಅಶ್ವಿನೌ ಶ್ರವಣೌ ನಿತ್ಯಂ ದೇವೀ ಜಿಹ್ವಾ ಸರಸ್ವತೀ।
06061056c ವೇದಾಃ ಸಂಸ್ಕಾರನಿಷ್ಠಾ ಹಿ ತ್ವಯೀದಂ ಜಗದಾಶ್ರಿತಂ।।
ಧರಾದೇವಿಯೇ ನಿನ್ನ ಎರಡು ಪಾದಗಳು, ದಿಕ್ಕುಗಳೇ ಬಾಹುಗಳು, ದಿವಿಯೇ ಶಿರ. ನಾನೇ ನಿನ್ನ ಮೂರ್ತಿ. ಸುರರು ಕಾಯ. ಚಂದ್ರಾದಿತ್ಯರು ಕಣ್ಣುಗಳು. ತಪಸ್ಸೇ ಬಲ. ಸತ್ಯವೇ ಧರ್ಮ. ಪ್ರಭೋ! ಕಾಮನು ಮಗ. ಅಗ್ನಿಯು ತೇಜಸ್ಸು. ವಾಯುವು ಶ್ವಾಸ. ನಿನ್ನ ಬೆವರಿನಿಂದ ಹುಟ್ಟಿದುದೇ ಆಪವು. ಅಶ್ವಿನಿಯರಿಬ್ಬರು ನಿನ್ನ ಎರಡು ಕಿವಿಗಳು. ದೇವಿ ಸರಸ್ವತಿಯು ನಿತ್ಯವೂ ನಿನ್ನ ನಾಲಿಗೆಯಲ್ಲಿದ್ದಾಳೆ. ಸಂಸ್ಕಾರನಿಷ್ಟವಾದ ವೇದಗಳು ಮತ್ತು ಈ ಜಗತ್ತೂ ನಿನ್ನಲ್ಲಿಯೇ ನೆಲೆಗೊಂಡಿವೆ.
06061057a ನ ಸಂಖ್ಯಾನ್ನ ಪರೀಮಾಣಂ ನ ತೇಜೋ ನ ಪರಾಕ್ರಮಂ।
06061057c ನ ಬಲಂ ಯೋಗಯೋಗೀಶ ಜಾನೀಮಸ್ತೇ ನ ಸಂಭವಂ।।
ಯೋಗಯೋಗೀಶ! ಆದರೆ ಅವರು ನಿನ್ನ ಸಂಖ್ಯಗಳನ್ನಾಗಲೀ, ಪರಿಮಾಣವನ್ನಾಗಲೀ, ತೇಜಸ್ಸನ್ನಾಗಲೀ, ಪರಾಕ್ರಮವನ್ನಾಗಲೀ, ಬಲವನ್ನಾಗಲೀ, ಆಗಮವನ್ನಾಗಲೀ ತಿಳಿಯರು.
06061058a ತ್ವದ್ಭಕ್ತಿನಿರತಾ ದೇವ ನಿಯಮೈಸ್ತ್ವಾ ಸಮಾಹಿತಾಃ।
06061058c ಅರ್ಚಯಾಮಃ ಸದಾ ವಿಷ್ಣೋ ಪರಮೇಶಂ ಮಹೇಶ್ವರಂ।।
ವಿಷ್ಣೋ! ದೇವ! ನಿನ್ನಲ್ಲಿ ಭಕ್ತಿನಿರತರಾಗಿ ನಿನ್ನ ನಿಯಮಗಳಲ್ಲಿಯೇ ಸಮಾಹಿತರಾಗಿ ಸದಾ ಪರಮೇಶ ಮಹೇಶ್ವರನಾದ ನಿನ್ನನ್ನು ಅರ್ಚಿಸುತ್ತೇವೆ.
06061059a ಋಷಯೋ ದೇವಗಂಧರ್ವಾ ಯಕ್ಷರಾಕ್ಷಸಪನ್ನಗಾಃ।
06061059c ಪಿಶಾಚಾ ಮಾನುಷಾಶ್ಚೈವ ಮೃಗಪಕ್ಷಿಸರೀಸೃಪಾಃ।।
06061060a ಏವಮಾದಿ ಮಯಾ ಸೃಷ್ಟಂ ಪೃಥಿವ್ಯಾಂ ತ್ವತ್ಪ್ರಸಾದಜಂ।
06061060c ಪದ್ಮನಾಭ ವಿಶಾಲಾಕ್ಷ ಕೃಷ್ಣ ದುಃಸ್ವಪ್ನನಾಶನ।।
ಪದ್ಮನಾಭ! ವಿಶಾಲಾಕ್ಷ! ಕೃಷ್ಣ! ದುಃಸ್ವಪ್ನನಾಶನ! ನಿನ್ನ ಪ್ರಸಾದದಿಂದಲೇ ಹುಟ್ಟಿದ ನಾನು ಪೃಥ್ವಿಯಲ್ಲಿ ಋಷಿಗಳನ್ನೂ, ದೇವ-ಗಂಧರ್ವ-ಯಕ್ಷ-ರಾಕ್ಷಸ-ಪನ್ನಗ-ಪಿಶಾಚ-ಮನುಷ್ಯ-ಮೃಗ-ಪಕ್ಷಿ-ಸರೀಸೃಪಗಳೇ ಮೊದಲಾದವುಗಳನ್ನು ನಾನು ಸೃಷ್ಟಿಸಿದೆ.
06061061a ತ್ವಂ ಗತಿಃ ಸರ್ವಭೂತಾನಾಂ ತ್ವಂ ನೇತಾ ತ್ವಂ ಜಗನ್ಮುಖಂ।
06061061c ತ್ವತ್ಪ್ರಸಾದೇನ ದೇವೇಶ ಸುಖಿನೋ ವಿಬುಧಾಃ ಸದಾ।।
ಸರ್ವಭೂತಗಳ ಗತಿಯು ನೀನು. ನೇತನೂ ನೀನೆ. ಜಗನ್ಮುಖನೂ ನೀನೆ. ದೇವೇಶ! ನಿನ್ನ ಪ್ರಸಾದದಿಂದ ವಿಬುಧರು ಸದಾ ಸುಖಿಗಳಾಗಿರುತ್ತಾರೆ.
06061062a ಪೃಥಿವೀ ನಿರ್ಭಯಾ ದೇವ ತ್ವತ್ಪ್ರಸಾದಾತ್ಸದಾಭವತ್।
06061062c ತಸ್ಮಾದ್ಭವ ವಿಶಾಲಾಕ್ಷ ಯದುವಂಶವಿವರ್ಧನಃ।।
06061063a ಧರ್ಮಸಂಸ್ಥಾಪನಾರ್ಥಾಯ ದೈತೇಯಾನಾಂ ವಧಾಯ ಚ।
06061063c ಜಗತೋ ಧಾರಣಾರ್ಥಾಯ ವಿಜ್ಞಾಪ್ಯಂ ಕುರು ಮೇ ಪ್ರಭೋ।।
ದೇವ! ನಿನ್ನ ಪ್ರಸಾದದಿಂದ ಪೃಥ್ವಿಯು ಸದಾ ನಿರ್ಭಯವಾಗಿದೆ. ಆದುದರಿಂದ ವಿಶಾಲಾಕ್ಷ! ಯದುವಂಶವಿವರ್ಧನನಾಗು. ಧರ್ಮಸಂಸ್ಥಾಪನೆಗಾಗಿ, ದೈತೇಯರ ವಧೆಗಾಗಿ, ಜಗತ್ತನ್ನು ಪೊರೆಯಲಿಕ್ಕಾಗಿ, ಪ್ರಭೋ! ನನ್ನ ವಿಜ್ಞಾಪನೆಯನ್ನು ಮಾಡು.
06061064a ಯದೇತತ್ಪರಮಂ ಗುಹ್ಯಂ ತ್ವತ್ಪ್ರಸಾದಮಯಂ ವಿಭೋ।
06061064c ವಾಸುದೇವ ತದೇತತ್ತೇ ಮಯೋದ್ಗೀತಂ ಯಥಾತಥಂ।।
ವಿಭೋ! ವಾಸುದೇವ! ನಿನ್ನ ಪರಮ ಗುಟ್ಟನ್ನು ನಿನ್ನ ಪ್ರಸಾದದಿಂದ ಹೇಗಿದೆಯೋ ಹಾಗೆ ಹಾಡಿದ್ದೇನೆ.
06061065a ಸೃಷ್ಟ್ವಾ ಸಂಕರ್ಷಣಂ ದೇವಂ ಸ್ವಯಮಾತ್ಮಾನಮಾತ್ಮನಾ।
06061065c ಕೃಷ್ಣ ತ್ವಮಾತ್ಮನಾಸ್ರಾಕ್ಷೀಃ ಪ್ರದ್ಯುಮ್ನಂ ಚಾತ್ಮಸಂಭವಂ।।
ಕೃಷ್ಣ! ಸ್ವಯಂ ನೀನೇ ನಿನ್ನಿಂದ ದೇವ ಸಂಕರ್ಷಣನನ್ನು ಸೃಷ್ಟಿಸಿ ಆತ್ಮಸಂಭವನಾದ ಪ್ರದ್ಯುಮ್ನನನ್ನು ನೀನೇ ನಿನ್ನಿಂದ ಸೃಷ್ಟಿಸಿದೆ.
06061066a ಪ್ರದ್ಯುಮ್ನಾಚ್ಚಾನಿರುದ್ಧಂ ತ್ವಂ ಯಂ ವಿದುರ್ವಿಷ್ಣುಮವ್ಯಯಂ।
06061066c ಅನಿರುದ್ಧೋಽಸೃಜನ್ಮಾಂ ವೈ ಬ್ರಹ್ಮಾಣಂ ಲೋಕಧಾರಿಣಂ।।
ಪ್ರದ್ಯುಮ್ನನಿಂದ ನೀನು ಅವ್ಯಯ ವಿಷ್ಣುವೆಂದೆನಿಸಿಕೊಂಡಿರುವ ಅನಿರುದ್ಧನನ್ನು ಸೃಷ್ಟಿಸಿದೆ. ಅನಿರುದ್ಧನು ಲೋಕಧಾರಿ ಬ್ರಹ್ಮನಾಗಿರುವ ನನ್ನನ್ನು ಸೃಷ್ಟಿಸಿದನು.
06061067a ವಾಸುದೇವಮಯಃ ಸೋಽಹಂ ತ್ವಯೈವಾಸ್ಮಿ ವಿನಿರ್ಮಿತಃ।
06061067c ವಿಭಜ್ಯ ಭಾಗಶೋಽತ್ಮಾನಂ ವ್ರಜ ಮಾನುಷತಾಂ ವಿಭೋ।।
ವಿಭೋ! ನಿನ್ನಿಂದಲೇ ವಿನಿರ್ಮಿತನಾದ ನಾನು ವಾಸುದೇವಮಯನಾಗಿರುವೆನು. ಹೀಗೆ ನಿನ್ನನ್ನು ಭಾಗಗಳನ್ನಾಗಿ ವಿಂಗಡಿಸಿಕೊಂಡು ಮನುಷ್ಯರಲ್ಲಿ ಹುಟ್ಟು.
06061068a ತತ್ರಾಸುರವಧಂ ಕೃತ್ವಾ ಸರ್ವಲೋಕಸುಖಾಯ ವೈ।
06061068c ಧರ್ಮಂ ಸ್ಥಾಪ್ಯ ಯಶಃ ಪ್ರಾಪ್ಯ ಯೋಗಂ ಪ್ರಾಪ್ಸ್ಯಸಿ ತತ್ತ್ವತಃ।।
ಅಲ್ಲಿ ಸರ್ವಲೋಕಸುಖಕ್ಕಾಗಿ ಅಸುರವಧೆಯನ್ನು ಮಾಡಿ ಧರ್ಮವನ್ನು ಸ್ಥಾಪಿಸಿ ಯಶಸ್ಸನ್ನು ಪಡೆದು ತತ್ವತಃ ಯೋಗವನ್ನು ಹೊಂದು.
06061069a ತ್ವಾಂ ಹಿ ಬ್ರಹ್ಮರ್ಷಯೋ ಲೋಕೇ ದೇವಾಶ್ಚಾಮಿತವಿಕ್ರಮ।
06061069c ತೈಸ್ತೈಶ್ಚ ನಾಮಭಿರ್ಭಕ್ತಾ ಗಾಯಂತಿ ಪರಮಾತ್ಮಕಂ।।
ಅಮಿತವಿಕ್ರಮ! ಲೋಕದಲ್ಲಿ ಬ್ರಹ್ಮರ್ಷಿಗಳು ಮತ್ತು ದೇವತೆಗಳು ನಿನ್ನದೇ ಪರಮಾತ್ಮಕ ನಾಮಗಳನ್ನು ಭಕ್ತಿಯಿಂದ ಹಾಡುತ್ತಾರೆ.
06061070a ಸ್ಥಿತಾಶ್ಚ ಸರ್ವೇ ತ್ವಯಿ ಭೂತಸಂಘಾಃ ಕೃತ್ವಾಶ್ರಯಂ ತ್ವಾಂ ವರದಂ ಸುಬಾಹೋ।
06061070c ಅನಾದಿಮಧ್ಯಾಂತಮಪಾರಯೋಗಂ ಲೋಕಸ್ಯ ಸೇತುಂ ಪ್ರವದಂತಿ ವಿಪ್ರಾಃ।।
ಸುಬಾಹೋ! ಸರ್ವ ಭೂತಸಂಘಗಳೂ ವರದನಾದ ನಿನ್ನನ್ನೇ ಆಶ್ರಯವನ್ನಾಗಿ ಮಾಡಿಕೊಂಡು ನಿನ್ನಲ್ಲಿಯೇ ನೆಲೆಸಿವೆ. ವಿಪ್ರರು ನಿನ್ನನ್ನೇ ಆದಿಮಧ್ಯಾಂತರಗಳಿಲ್ಲದವನು, ಅಪಾರ ಯೋಗಿ ಮತ್ತು ಲೋಕದ ಸೇತುವೆಂದು ವರ್ಣಿಸುತ್ತಾರೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ವಿಶ್ವೋಪಾಖ್ಯಾನೇ ಏಕಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ವಿಶ್ವೋಪಾಖ್ಯಾನ ಎನ್ನುವ ಅರವತ್ತೊಂದನೇ ಅಧ್ಯಾಯವು.