ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 60
ಸಾರ
ಭೀಮಸೇನನು ಸೇನಾಪತಿ, ಸುಷೇಣ, ಜಲಸಂಧ, ಸುಲೋಚನ, ಉಗ್ರ, ಭೀಮರಥ, ಭೀಮ, ಭೀಮಬಾಹು – ಈ ಎಂಟು ಮಂದಿ ಧೃತರಾಷ್ಟ್ರನ ಮಕ್ಕಳನ್ನು ಸಂಹರಿಸಿದುದು (1-32). ಭಗದತ್ತ-ಘಟೋತ್ಕಚರ ಯುದ್ಧ (33-65). ನಾಲ್ಕನೆಯ ದಿವಸದ ಯುದ್ಧ ಸಮಾಪ್ತಿ (66-79).
06060001 ಸಂಜಯ ಉವಾಚ।
06060001a ತತೋ ಭೂರಿಶ್ರವಾ ರಾಜನ್ಸಾತ್ಯಕಿಂ ನವಭಿಃ ಶರೈಃ।
06060001c ಅವಿಧ್ಯದ್ಭೃಶಸಂಕ್ರುದ್ಧಸ್ತೋತ್ತ್ರೈರಿವ ಮಹಾದ್ವಿಪಂ।।
ಸಂಜಯನು ಹೇಳಿದನು: “ರಾಜನ್! ಆಗ ಭೂರಿಶ್ರವನು ಸಂಕ್ರುದ್ಧನಾಗಿ ಸಲಗವನ್ನು ಅಂಕುಶದಿಂದ ಬಾಧೆಗೊಳಿಸುವಂತೆ ಒಂಭತ್ತು ಬಾಣಗಳಿಂದ ಸಾತ್ಯಕಿಯನ್ನು ಹೊಡೆದನು.
06060002a ಕೌರವಂ ಸಾತ್ಯಕಿಶ್ಚೈವ ಶರೈಃ ಸಮ್ನತಪರ್ವಭಿಃ।
06060002c ಅವಾಕಿರದಮೇಯಾತ್ಮಾ ಸರ್ವಲೋಕಸ್ಯ ಪಶ್ಯತಃ।।
ಅಮೇಯಾತ್ಮ ಸಾತ್ಯಕಿಯೂ ಕೂಡ ಸರ್ವಲೋಕವೂ ನೋಡುತ್ತಿರಲು ಕೌರವನನ್ನು ಸನ್ನತಪರ್ವ ಶರಗಳಿಂದ ಹೊಡೆದನು.
06060003a ತತೋ ದುರ್ಯೋಧನೋ ರಾಜಾ ಸೋದರ್ಯೈಃ ಪರಿವಾರಿತಃ।
06060003c ಸೌಮದತ್ತಿಂ ರಣೇ ಯತ್ತಃ ಸಮಂತಾತ್ಪರ್ಯವಾರಯತ್।।
ಆಗ ರಾಜಾ ದುರ್ಯೋಧನನು ಸೋದರರಿಂದ ಪರಿವಾರಿತನಾಗಿ ರಣದಲ್ಲಿ ಸೋಮದತ್ತಿಯನ್ನು ಎಲ್ಲ ಕಡೆಗಳಿಂದ ಸುತ್ತುವರೆದನು.
06060004a ತಥೈವ ಪಾಂಡವಾಃ ಸರ್ವೇ ಸಾತ್ಯಕಿಂ ರಭಸಂ ರಣೇ।
06060004c ಪರಿವಾರ್ಯ ಸ್ಥಿತಾಃ ಸಂಖ್ಯೇ ಸಮಂತಾತ್ಸುಮಹೌಜಸಃ।।
ಹಾಗೆಯೇ ಪಾಂಡವರೆಲ್ಲರೂ ರಭಸದಿಂದ ರಣದಲ್ಲಿ ಸಾತ್ಯಕಿಯನ್ನು ಎಲ್ಲಕಡೆಗಳಿಂದ ಸುತ್ತುವರೆದು ಯುದ್ಧಕ್ಕೆ ನಿಂತರು.
06060005a ಭೀಮಸೇನಸ್ತು ಸಂಕ್ರುದ್ಧೋ ಗದಾಮುದ್ಯಮ್ಯ ಭಾರತ।
06060005c ದುರ್ಯೋಧನಮುಖಾನ್ಸರ್ವಾನ್ಪುತ್ರಾಂಸ್ತೇ ಪರ್ಯವಾರಯತ್।।
ಭಾರತ! ಭೀಮಸೇನನಾದರೋ ಸಂಕ್ರುದ್ಧನಾಗಿ ಗದೆಯನ್ನು ಎತ್ತಿ ಹಿಡಿದು ದುರ್ಯೋಧನನ ನಾಯಕತ್ವದಲ್ಲಿದ್ದ ನಿನ್ನ ಪುತ್ರರೆಲ್ಲರನ್ನೂ ತಡೆದನು.
06060006a ರಥೈರನೇಕಸಾಹಸ್ರೈಃ ಕ್ರೋಧಾಮರ್ಷಸಮನ್ವಿತಃ।
06060006c ನಂದಕಸ್ತವ ಪುತ್ರಸ್ತು ಭೀಮಸೇನಂ ಮಹಾಬಲಂ।
06060006e ವಿವ್ಯಾಧ ನಿಶಿತೈಃ ಷಡ್ಭಿಃ ಕಂಕಪತ್ರೈಃ ಶಿಲಾಶಿತೈಃ।।
ಅನೇಕ ಸಹಸ್ರ ರಥಗಳೊಂದಿಗಿದ್ದ, ಕ್ರೋಧಾಮರ್ಷಸಮನ್ವಿತನಾದ ನಿನ್ನ ಮಗ ನಂದಕನಾದರೋ ಮಹಾಬಲ ಭೀಮಸೇನನನ್ನು ಆರು ಶಿಲಾಶಿತ ನಿಶಿತ ಕಂಕಪತ್ರಗಳಿಂದ ಹೊಡೆದನು.
06060007a ದುರ್ಯೋಧನಸ್ತು ಸಮರೇ ಭೀಮಸೇನಂ ಮಹಾಬಲಂ।
06060007c ಆಜಘಾನೋರಸಿ ಕ್ರುದ್ಧೋ ಮಾರ್ಗಣೈರ್ನಿಶಿತೈಸ್ತ್ರಿಭಿಃ।।
ಸಮರದಲ್ಲಿ ಕ್ರುದ್ಧನಾದ ದುರ್ಯೋಧನನಾದರೋ ಮಹಾಬಲ ಭೀಮಸೇನನನ್ನು ಉಕ್ಕಿನ ಮೂರು ನಿಶಿತ ಮಾರ್ಗಣಗಳಿಂದ ಹೊಡೆದನು.
06060008a ತತೋ ಭೀಮೋ ಮಹಾಬಾಹುಃ ಸ್ವರಥಂ ಸುಮಹಾಬಲಃ।
06060008c ಆರುರೋಹ ರಥಶ್ರೇಷ್ಠಂ ವಿಶೋಕಂ ಚೇದಮಬ್ರವೀತ್।।
ಆಗ ಮಹಾಬಾಹು ಸುಮಹಾಬಲ ಭೀಮನು ತನ್ನ ರಥಶ್ರೇಷ್ಠ ರಥವನ್ನೇರಿ ವಿಶೋಕನಿಗೆ ಇದನ್ನು ಹೇಳಿದನು:
06060009a ಏತೇ ಮಹಾರಥಾಃ ಶೂರಾ ಧಾರ್ತರಾಷ್ಟ್ರಾ ಮಹಾಬಲಾಃ।
06060009c ಮಾಮೇವ ಭೃಶಸಂಕ್ರುದ್ಧಾ ಹಂತುಮಭ್ಯುದ್ಯತಾ ಯುಧಿ।।
“ಈ ಮಹಾರಥ ಮಹಾಬಲಿ ಶೂರ ಧಾರ್ತರಾಷ್ಟ್ರರು ಯುದ್ಧದಲ್ಲಿ ನನ್ನನ್ನೇ ಕೊಲ್ಲಲು ಉದ್ಯುಕ್ತರಾಗಿದ್ದಾರೆ.
06060010a ಏತಾನದ್ಯ ಹನಿಷ್ಯಾಮಿ ಪಶ್ಯತಸ್ತೇ ನ ಸಂಶಯಃ।
06060010c ತಸ್ಮಾನ್ಮಮಾಶ್ವಾನ್ಸಂಗ್ರಾಮೇ ಯತ್ತಃ ಸಮ್ಯಚ್ಛ ಸಾರಥೇ।।
ಸಾರಥೇ! ಇಂದು ಇವರನ್ನು ನೀನು ನೋಡುತ್ತಿರುವ ಹಾಗೆಯೇ ಸಂಹರಿಸುತ್ತೇನೆ. ಅದರಲ್ಲಿ ಸಂಶಯವಿಲ್ಲ. ಆದುದರಿಂದ ನನ್ನ ಕುದುರೆಗಳನ್ನು ವ್ಯವಸ್ಥಿತವಾಗಿ ನಡೆಸಲು ಪ್ರಯತ್ನಿಸು.”
06060011a ಏವಮುಕ್ತ್ವಾ ತತಃ ಪಾರ್ಥಃ ಪುತ್ರಂ ದುರ್ಯೋಧನಂ ತವ।
06060011c ವಿವ್ಯಾಧ ದಶಭಿಸ್ತೀಕ್ಷ್ಣೈಃ ಶರೈಃ ಕನಕಭೂಷಣೈಃ।
06060011e ನಂದಕಂ ಚ ತ್ರಿಭಿರ್ಬಾಣೈಃ ಪ್ರತ್ಯವಿಧ್ಯತ್ಸ್ತನಾಂತರೇ।।
ಹೀಗೆ ಹೇಳಿ ಪಾರ್ಥನು ನಿನ್ನ ಮಗ ದುರ್ಯೋಧನನನ್ನು ಹತ್ತು ಕನಕಭೂಷಣ ತೀಕ್ಷ್ಣ ಶರಗಳಿಂದ ಹೊಡೆದನು. ಮತ್ತು ಮೂರು ಬಾಣಗಳಿಂದ ನಂದಕನ ಎದೆಗೆ ಹೊಡೆದನು.
06060012a ತಂ ತು ದುರ್ಯೋಧನಃ ಷಷ್ಟ್ಯಾ ವಿದ್ಧ್ವಾ ಭೀಮಂ ಮಹಾಬಲಂ।
06060012c ತ್ರಿಭಿರನ್ಯೈಃ ಸುನಿಶಿತೈರ್ವಿಶೋಕಂ ಪ್ರತ್ಯವಿಧ್ಯತ।।
06060013a ಭೀಮಸ್ಯ ಚ ರಣೇ ರಾಜನ್ಧನುಶ್ಚಿಚ್ಛೇದ ಭಾಸ್ವರಂ।
06060013c ಮುಷ್ಟಿದೇಶೇ ಶರೈಸ್ತೀಕ್ಷ್ಣೈಸ್ತ್ರಿಭೀ ರಾಜಾ ಹಸನ್ನಿವ।।
ದುರ್ಯೋಧನನು ಮಹಾಬಲ ಭೀಮನನ್ನು ಅರವತ್ತು ಮತ್ತು ಅನ್ಯ ಮೂರು ನಿಶಿತ ಶರಗಳಿಂದ ವಿಶೋಕನನ್ನು ಹೊಡೆದನು. ರಾಜನ್! ಮತ್ತು ನಗುತ್ತಾ ಆ ರಾಜನು ಹೊಳೆಯುತ್ತಿದ್ದ ಭೀಮನ ಧನುಸ್ಸನ್ನು ಮುಷ್ಟಿದೇಶದಲ್ಲಿ ತೀಕ್ಷ್ಣವಾದ ಮೂರು ಶರಗಳಿಂದ ತುಂಡರಿಸಿದನು.
06060014a ಭೀಮಸ್ತು ಪ್ರೇಕ್ಷ್ಯ ಯಂತಾರಂ ವಿಶೋಕಂ ಸಮ್ಯುಗೇ ತದಾ।
06060014c ಪೀಡಿತಂ ವಿಶಿಖೈಸ್ತೀಕ್ಷ್ಣೈಸ್ತವ ಪುತ್ರೇಣ ಧನ್ವಿನಾ।।
06060015a ಅಮೃಷ್ಯಮಾಣಃ ಸಂಕ್ರುದ್ಧೋ ಧನುರ್ದಿವ್ಯಂ ಪರಾಮೃಶತ್।
06060015c ಪುತ್ರಸ್ಯ ತೇ ಮಹಾರಾಜ ವಧಾರ್ಥಂ ಭರತರ್ಷಭ।।
ಸಂಯುಗದಲ್ಲಿ ನಿನ್ನ ಮಗ ಧನ್ವಿಯ ತೀಕ್ಷ್ಣ ವಿಶಿಖಗಳಿಂದ ಪೀಡಿತನಾದ ಸಾರಥಿ ವಿಶೋಕನನ್ನು ನೋಡಿ ಅಸಹನೆಯಿಂದ ಕ್ರುದ್ಧನಾದ ಭೀಮನು ನಿನ್ನ ಮಗನ ವಧಾರ್ಥವಾಗಿ ಬೇಗನೇ ಇನ್ನೊಂದು ದಿವ್ಯ ಧನುಸ್ಸನ್ನು ಎತ್ತಿಕೊಂಡನು.
06060016a ಸಮಾದತ್ತ ಚ ಸಂರಬ್ಧಃ ಕ್ಷುರಪ್ರಂ ಲೋಮವಾಹಿನಂ।
06060016c ತೇನ ಚಿಚ್ಛೇದ ನೃಪತೇರ್ಭೀಮಃ ಕಾರ್ಮುಕಮುತ್ತಮಂ।।
ಮತ್ತು ಲೋಮವಾಹಿನಿ ಕ್ಷುರಪ್ರವನ್ನು ತೆಗೆದುಕೊಂಡು ಭೀಮನು ನೃಪತಿಯ ಉತ್ತಮ ಕಾರ್ಮುಕವನ್ನು ತುಂಡರಿಸಿದನು.
06060017a ಸೋಽಪವಿಧ್ಯ ಧನುಶ್ಚಿನ್ನಂ ಕ್ರೋಧೇನ ಪ್ರಜ್ವಲನ್ನಿವ।
06060017c ಅನ್ಯತ್ಕಾರ್ಮುಕಮಾದತ್ತ ಸತ್ವರಂ ವೇಗವತ್ತರಂ।।
06060018a ಸಂಧತ್ತ ವಿಶಿಖಂ ಘೋರಂ ಕಾಲಮೃತ್ಯುಸಮಪ್ರಭಂ।
06060018c ತೇನಾಜಘಾನ ಸಂಕ್ರುದ್ಧೋ ಭೀಮಸೇನಂ ಸ್ತನಾಂತರೇ।।
ಕತ್ತರಿಸಲ್ಪಟ್ಟ ತನ್ನ ಧನುಸ್ಸನ್ನು ಬಿಸುಟು ಕ್ರೊಧದಿಂದ ಭುಗಿಲೆದ್ದು ಇನ್ನೂ ದೊಡ್ಡದಾದ ಮತ್ತು ವೇಗವತ್ತರವಾದ ಬೇರೆ ಕಾರ್ಮುಕವನ್ನು ತೆಗೆದುಕೊಂಡು ಕಾಲಮೃತ್ಯು ಸಮಪ್ರಭೆಯ ಘೋರ ವಿಶಿಖವನ್ನು ಹೂಡಿ ಅದರಿಂದ ಸಂಕ್ರುದ್ಧನಾಗಿ ಭೀಮಸೇನನ ಎದೆಗೆ ಹೊಡೆದನು.
06060019a ಸ ಗಾಢವಿದ್ಧೋ ವ್ಯಥಿತಃ ಸ್ಯಂದನೋಪಸ್ಥ ಆವಿಶತ್।
06060019c ಸ ನಿಷಣ್ಣೋ ರಥೋಪಸ್ಥೇ ಮೂರ್ಚಾಮಭಿಜಗಾಮ ಹ।।
ಅತ್ಯಂತ ಗಾಢವಾಗಿ ಹೊಡೆತತಿಂದ ಅವನು ನೋವಿನಿಂದ ವ್ಯಥಿತನಾಗಿ ತಾನು ಕುಳಿತಿದ್ದಲ್ಲಿಯೇ ಸರಿದು ಕುಳಿತುಕೊಂಡನು. ನಿಷಣ್ಣನಾಗಿ ರಥದಲ್ಲಿ ಕುಳಿತಂತೆಯೇ ಒಂದು ಕ್ಷಣ ಮೂರ್ಛಿತನಾದನು.
06060020a ತಂ ದೃಷ್ಟ್ವಾ ವ್ಯಥಿತಂ ಭೀಮಮಭಿಮನ್ಯುಪುರೋಗಮಾಃ।
06060020c ನಾಮೃಷ್ಯಂತ ಮಹೇಷ್ವಾಸಾಃ ಪಾಂಡವಾನಾಂ ಮಹಾರಥಾಃ।।
06060021a ತತಸ್ತು ತುಮುಲಾಂ ವೃಷ್ಟಿಂ ಶಸ್ತ್ರಾಣಾಂ ತಿಗ್ಮತೇಜಸಾಂ।
06060021c ಪಾತಯಾಮಾಸುರವ್ಯಗ್ರಾಃ ಪುತ್ರಸ್ಯ ತವ ಮೂರ್ಧನಿ।।
ವ್ಯಥಿತನಾದ ಭೀಮನನ್ನು ಕಂಡು ಅಭಿಮನ್ಯುವೇ ಮೊದಲಾದ ಪಾಂಡವ ಮಹಾರಥ ಮಹೇಷ್ವಾಸರು ಸಹಿಸಲಾರದೇ ಅವ್ಯಗ್ರರಾಗಿ ನಿನ್ನ ಮಗನ ತಲೆಯ ಮೇಲೆ ತಿಗ್ಮತೇಸ್ಸಿನ ಶಸ್ತ್ರಗಳ ತುಮುಲ ವೃಷ್ಟಿಯನ್ನೇ ಸುರಿಸಿದರು.
06060022a ಪ್ರತಿಲಭ್ಯ ತತಃ ಸಂಜ್ಞಾಂ ಭೀಮಸೇನೋ ಮಹಾಬಲಃ।
06060022c ದುರ್ಯೋಧನಂ ತ್ರಿಭಿರ್ವಿದ್ಧ್ವಾ ಪುನರ್ವಿವ್ಯಾಧ ಪಂಚಭಿಃ।।
ಸ್ಮೃತಿಯನ್ನು ಪಡೆದುಕೊಂಡ ಮಹಾಬಲ ಭೀಮಸೇನನು ಆಗ ಮೂರು ಮತ್ತು ಪುನಃ ಐದು ಬಾಣಗಳಿಂದ ಹೊಡೆದನು.
06060023a ಶಲ್ಯಂ ಚ ಪಂಚವಿಂಶತ್ಯಾ ಶರೈರ್ವಿವ್ಯಾಧ ಪಾಂಡವಃ।
06060023c ರುಕ್ಮಪುಂಖೈರ್ಮಹೇಷ್ವಾಸಃ ಸ ವಿದ್ಧೋ ವ್ಯಪಯಾದ್ರಣಾತ್।।
ಮತ್ತು ಆ ಮಹೇಷ್ವಾಸ ಪಾಂಡವನು ಶಲ್ಯನನ್ನು ಇಪ್ಪತ್ತೈದು ರುಕ್ಮಪುಂಖ ಶರಗಳಿದ ಹೊಡೆದನು. ಅವನು ನೋವಿನಿಂದ ಪೀಡಿತನಾಗಿ ಪಲಾಯನ ಮಾಡಿದನು.
06060024a ಪ್ರತ್ಯುದ್ಯಯುಸ್ತತೋ ಭೀಮಂ ತವ ಪುತ್ರಾಶ್ಚತುರ್ದಶ।
06060024c ಸೇನಾಪತಿಃ ಸುಷೇಣಶ್ಚ ಜಲಸಂಧಃ ಸುಲೋಚನಃ।।
06060025a ಉಗ್ರೋ ಭೀಮರಥೋ ಭೀಮೋ ಭೀಮಬಾಹುರಲೋಲುಪಃ।
06060025c ದುರ್ಮುಖೋ ದುಷ್ಪ್ರಧರ್ಷಶ್ಚ ವಿವಿತ್ಸುರ್ವಿಕಟಃ ಸಮಃ।।
ಆಗ ನಿನ್ನ ಹದಿನಾಲ್ಕು ಮಕ್ಕಳು - ಸೇನಾಪತಿ, ಸುಷೇಣ, ಜಲಸಂಧ, ಸುಲೋಚನ, ಉಗ್ರ, ಭೀಮರಥ, ಭೀಮ, ಭೀಮಬಾಹು, ಅಲೋಲುಪ, ದುಮುಖ, ದುಷ್ಪ್ರಧರ್ಷ, ವಿವಿತ್ಸು, ವಿಕಟ ಮತ್ತು ಸಮ - ಭೀಮನನ್ನು ಆಕ್ರಮಿಸಿದರು.
06060026a ವಿಸೃಜಂತೋ ಬಹೂನ್ಬಾಣಾನ್ಕ್ರೋಧಸಂರಕ್ತಲೋಚನಾಃ।
06060026c ಭೀಮಸೇನಮಭಿದ್ರುತ್ಯ ವಿವ್ಯಧುಃ ಸಹಿತಾ ಭೃಶಂ।।
ಕ್ರೋಧಸಂರಕ್ತಲೋಚನರಾದ ಅವರು ಒಂದಾಗಿ ಅನೇಕ ಬಾಣಗಳನ್ನು ಪ್ರಯೋಗಿಸುತ್ತಾ ಭೀಮಸೇನನನ್ನು ಬಹಳವಾಗಿ ಬಾಧೆಪಡೆಸಿದರು.
06060027a ಪುತ್ರಾಂಸ್ತು ತವ ಸಂಪ್ರೇಕ್ಷ್ಯ ಭೀಮಸೇನೋ ಮಹಾಬಲಃ।
06060027c ಸೃಕ್ಕಿಣೀ ವಿಲಿಹನ್ವೀರಃ ಪಶುಮಧ್ಯೇ ವೃಕೋ ಯಥಾ।
06060027e ಸೇನಾಪತೇಃ ಕ್ಷುರಪ್ರೇಣ ಶಿರಶ್ಚಿಚ್ಛೇದ ಪಾಂಡವಃ।।
ಮಹಾಬಲ ವೀರ ಪಾಂಡವ ಭೀಮಸೇನನು ನಿನ್ನ ಮಕ್ಕಳನ್ನು ನೋಡಿ ಕುರಿಗಳ ಮಧ್ಯೆಯಿರುವ ತೋಳದಂತೆ ಕಟವಾಯಿಯನ್ನು ನೆಕ್ಕುತ್ತಾ ಸೇನಾಪತಿಯ ಶಿರವನ್ನು ಕ್ಷುರಪ್ರದಿಂದ ಕತ್ತರಿಸಿದನು.
06060028a ಜಲಸಂಧಂ ವಿನಿರ್ಭಿದ್ಯ ಸೋಽನಯದ್ಯಮಸಾದನಂ।
06060028c ಸುಷೇಣಂ ಚ ತತೋ ಹತ್ವಾ ಪ್ರೇಷಯಾಮಾಸ ಮೃತ್ಯವೇ।।
ಜಲಸಂಧನನ್ನು ಹೊಡೆದು ಅವನನ್ನು ಯಮಸಾದನಕ್ಕೆ ಕಳುಹಿಸಿದನು. ಹಾಗೆಯೇ ಸುಷೇಣನನ್ನೂ ಸಂಹರಿಸಿ ಮೃತ್ಯುವಲ್ಲಿಗೆ ಕಳುಹಿಸಿದನು.
06060029a ಉಗ್ರಸ್ಯ ಸಶಿರಸ್ತ್ರಾಣಂ ಶಿರಶ್ಚಂದ್ರೋಪಮಂ ಭುವಿ।
06060029c ಪಾತಯಾಮಾಸ ಭಲ್ಲೇನ ಕುಂಡಲಾಭ್ಯಾಂ ವಿಭೂಷಿತಂ।।
ಕುಂಡಲಗಳಿಂದ ವಿಭೂಷಿತವಾಗಿದ್ದ, ಕಿರೀಟವನ್ನು ಧರಿಸಿದ್ದ, ಚಂದ್ರನಂತಿದ್ದ ಉಗ್ರನ ಶಿರವನ್ನು ಭಲ್ಲದಿಂದ ಭೂಮಿಗೆ ಉರುಳಿಸಿದನು.
06060030a ಭೀಮಬಾಹುಂ ಚ ಸಪ್ತತ್ಯಾ ಸಾಶ್ವಕೇತುಂ ಸಸಾರಥಿಂ।
06060030c ನಿನಾಯ ಸಮರೇ ಭೀಮಃ ಪರಲೋಕಾಯ ಮಾರಿಷ।।
ಮಾರಿಷ! ಭೀಮನು ಸಮರದಲ್ಲಿ ಎಪ್ಪತ್ತು ಬಾಣಗಳಿಂದ ಭೀಮಬಾಹುವನ್ನು ಅವನ ಕುದುರೆ, ಧ್ವಜ ಮತ್ತು ಸಾರಥಿಯೊಂದಿಗೆ ಪರಲೋಕಕ್ಕೆ ಕಳುಹಿಸಿದನು.
06060031a ಭೀಮಂ ಭೀಮರಥಂ ಚೋಭೌ ಭೀಮಸೇನೋ ಹಸನ್ನಿವ।
06060031c ಭ್ರಾತರೌ ರಭಸೌ ರಾಜನ್ನನಯದ್ಯಮಸಾದನಂ।।
ರಾಜನ್! ಭೀಮಸೇನನು ನಗುತ್ತಾ ರಭಸದಿಂದ ಬರುತ್ತಿದ್ದ ಭೀಮ ಮತ್ತು ಭೀಮರಥ ಸಹೋದರರನ್ನು ಯಮಸಾದನಕ್ಕೆ ಕಳುಹಿಸಿದನು.
06060032a ತತಃ ಸುಲೋಚನಂ ಭೀಮಃ ಕ್ಷುರಪ್ರೇಣ ಮಹಾಮೃಧೇ।
06060032c ಮಿಷತಾಂ ಸರ್ವಸೈನ್ಯಾನಾಮನಯದ್ಯಮಸಾದನಂ।।
ಆಗ ಮಹಾಮೃಧದಲ್ಲಿ ಭೀಮನು ಕ್ಷುರಪ್ರದಿಂದ ಸುಲೋಚನನನ್ನು ಸರ್ವಸೈನ್ಯಗಳು ನೋಡುತ್ತಿದ್ದಂತೆ ಯಮಸಾದನಕ್ಕೆ ಕಳುಹಿಸಿದನು.
06060033a ಪುತ್ರಾಸ್ತು ತವ ತಂ ದೃಷ್ಟ್ವಾ ಭೀಮಸೇನಪರಾಕ್ರಮಂ।
06060033c ಶೇಷಾ ಯೇಽನ್ಯೇಽಭವಂಸ್ತತ್ರ ತೇ ಭೀಮಸ್ಯ ಭಯಾರ್ದಿತಾಃ।
06060033e ವಿಪ್ರದ್ರುತಾ ದಿಶೋ ರಾಜನ್ವಧ್ಯಮಾನಾ ಮಹಾತ್ಮನಾ।।
ರಾಜನ್! ಭೀಮಸೇನನ ಆ ಪರಾಕ್ರಮವನ್ನು ನೋಡಿ ಮಹಾತ್ಮನಿಂದ ವಧಿಸಲ್ಪಡುತ್ತಿದ್ದ ಅಲ್ಲಿ ಉಳಿದಿದ್ದ ನಿನ್ನ ಪುತ್ರರಾದರೋ ಭೀಮನ ಭಯದಿಂದ ಪೀಡಿತರಾಗಿ ದಿಕ್ಕು ದಿಕ್ಕುಗಳಲ್ಲಿ ಓಡಿ ಹೋದರು.
06060034a ತತೋಽಬ್ರವೀಚ್ಚಾಂತನವಃ ಸರ್ವಾನೇವ ಮಹಾರಥಾನ್।
06060034c ಏಷ ಭೀಮೋ ರಣೇ ಕ್ರುದ್ಧೋ ಧಾರ್ತರಾಷ್ಟ್ರಾನ್ಮಹಾರಥಾನ್।।
06060035a ಯಥಾಪ್ರಾಗ್ರ್ಯಾನ್ಯಥಾಜ್ಯೇಷ್ಠಾನ್ಯಥಾಶೂರಾಂಶ್ಚ ಸಂಗತಾನ್।
06060035c ನಿಪಾತಯತ್ಯುಗ್ರಧನ್ವಾ ತಂ ಪ್ರಮಥ್ನೀತ ಪಾರ್ಥಿವಾಃ।।
ಆಗ ಶಾಂತನವನು ಎಲ್ಲ ಮಹಾರಥರಿಗೆ ಹೇಳಿದನು: “ಪಾರ್ಥಿವರೇ! ಈ ಭೀಮನು ರಣದಲ್ಲಿ ಕ್ರುದ್ಧನಾಗಿ ಮಹಾರಥರಾದ, ಶ್ರೇಷ್ಠ, ಜ್ಯೇಷ್ಠ, ಶೂರ ಧಾರ್ತರಾಷ್ಟ್ರರನ್ನು ಸಂಹರಿಸುತ್ತಿದ್ದಾನೆ. ನೀವೆಲ್ಲರೂ ಒಟ್ಟಾಗಿ ಆ ಉಗ್ರಧನ್ವಿಯನ್ನು ಬಂಧಿಸಿರಿ!”
06060036a ಏವಮುಕ್ತಾಸ್ತತಃ ಸರ್ವೇ ಧಾರ್ತರಾಷ್ಟ್ರಸ್ಯ ಸೈನಿಕಾಃ।
06060036c ಅಭ್ಯದ್ರವಂತ ಸಂಕ್ರುದ್ಧಾ ಭೀಮಸೇನಂ ಮಹಾಬಲಂ।।
ಹೀಗೆ ಹೇಳಲು ಧಾರ್ತರಾಷ್ಟ್ರನ ಸೈನಿಕರೆಲ್ಲರೂ ಸಂಕ್ರುದ್ಧರಾಗಿ ಮಹಾಬಲ ಭೀಮಸೇನನ ಮೇಲೆ ಎರಗಿದರು.
06060037a ಭಗದತ್ತಃ ಪ್ರಭಿನ್ನೇನ ಕುಂಜರೇಣ ವಿಶಾಂ ಪತೇ।
06060037c ಅಪತತ್ಸಹಸಾ ತತ್ರ ಯತ್ರ ಭೀಮೋ ವ್ಯವಸ್ಥಿತಃ।।
ವಿಶಾಂಪತೇ! ಮದೋದಕವನ್ನು ಸುರಿಸುತ್ತಿದ್ದ ಆನೆಯ ಮೇಲಿದ್ದ ಭಗದತ್ತನು ಒಡನೆಯೇ ಎಲ್ಲಿ ಭೀಮನಿದ್ದನೋ ಅಲ್ಲಿಗೆ ಧಾವಿಸಿ ಬಂದನು.
06060038a ಆಪತನ್ನೇವ ಚ ರಣೇ ಭೀಮಸೇನಂ ಶಿಲಾಶಿತೈಃ।
06060038c ಅದೃಶ್ಯಂ ಸಮರೇ ಚಕ್ರೇ ಜೀಮೂತ ಇವ ಭಾಸ್ಕರಂ।।
ರಣದಲ್ಲಿ ಬರುತ್ತಲೇ ಅವನು ಭೀಮಸೇನನನ್ನು ಶಿಲಾಶಿತಗಳಿಂದ ಮೋಡಗಳು ಭಾಸ್ಕರನನ್ನು ಮುಚ್ಚಿಬಿಡುವಂತೆ ಅದೃಷ್ಯನನ್ನಾಗಿ ಮಾಡಿಬಿಟ್ಟನು.
06060039a ಅಭಿಮನ್ಯುಮುಖಾಸ್ತತ್ರ ನಾಮೃಷ್ಯಂತ ಮಹಾರಥಾಃ।
06060039c ಭೀಮಸ್ಯಾಚ್ಛಾದನಂ ಸಂಖ್ಯೇ ಸ್ವಬಾಹುಬಲಮಾಶ್ರಿತಾಃ।।
06060040a ತ ಏನಂ ಶರವರ್ಷೇಣ ಸಮಂತಾತ್ಪರ್ಯವಾರಯನ್।
06060040c ಗಜಂ ಚ ಶರವೃಷ್ಟ್ಯಾ ತಂ ಬಿಭಿದುಸ್ತೇ ಸಮಂತತಃ।।
ಯುದ್ಧದಲ್ಲಿ ಸ್ವಬಾಹುಬಲಗಳನ್ನು ಆಶ್ರಯಿಸಿದ್ದ ಅಭಿಮನ್ಯುವೇ ಮೊದಲಾದ ಮಹಾರಥರು ಭೀಮನನ್ನು ಹಾಗೆ ಮುಚ್ಚಿದುದನ್ನು ಸಹಿಸಲಾರದೇ ಆ ಅನೆಯನ್ನು ಎಲ್ಲಕಡೆಗಳಿಂದಲೂ ಸುತ್ತುವರೆದು ಅದನ್ನು ಎಲ್ಲ ಕಡೆಗಳಿಂದಲೂ ಬಾಣಗಳಿಂದ ಹೊಡೆದರು.
06060041a ಸ ಶಸ್ತ್ರವೃಷ್ಟ್ಯಾಭಿಹತಃ ಪ್ರಾದ್ರವದ್ದ್ವಿಗುಣಂ ಪದಂ।
06060041c ಪ್ರಾಗ್ಜ್ಯೋತಿಷಗಜೋ ರಾಜನ್ನಾನಾಲಿಂಗೈಃ ಸುತೇಜನೈಃ।।
06060042a ಸಂಜಾತರುಧಿರೋತ್ಪೀಡಃ ಪ್ರೇಕ್ಷಣೀಯೋಽಭವದ್ರಣೇ।
06060042c ಗಭಸ್ತಿಭಿರಿವಾರ್ಕಸ್ಯ ಸಂಸ್ಯೂತೋ ಜಲದೋ ಮಹಾನ್।।
ರಾಜನ್! ನಾನಾ ಚಿಹ್ನೆಗಳಿಂದ ಸುತೇಜಸರಾದ ಅವರ ಶಸ್ತ್ರವೃಷ್ಟಿಯಿಂದ ಗಾಯಗೊಂಡ ಆ ಪ್ರಾಗ್ಜೋತಿಷದ ಆನೆಯು ಶರೀರಾದ್ಯಂತ ರಕ್ತ ಸುರಿಸುತ್ತಾ ರಣದಲ್ಲಿ ಒಂದು ಪ್ರೇಕ್ಷಣೀಯವಾಯಿತು. ಬಾಲಸೂರ್ಯನ ನಸುಗೆಂಪಾದ ಕಿರಣಗಳಿಂದ ತೊಳೆಯಲ್ಪಟ್ಟ ದೊಡ್ಡದೊಂದು ಕಾರ್ಮುಗಿಲಿನಂತೆ ಕಾಣುತ್ತಿತ್ತು.
06060043a ಸ ಚೋದಿತೋ ಮದಸ್ರಾವೀ ಭಗದತ್ತೇನ ವಾರಣಃ।
06060043c ಅಭ್ಯಧಾವತ ತಾನ್ಸರ್ವಾನ್ಕಾಲೋತ್ಸೃಷ್ಟ ಇವಾಂತಕಃ।
06060043e ದ್ವಿಗುಣಂ ಜವಮಾಸ್ಥಾಯ ಕಂಪಯಂಶ್ಚರಣೈರ್ಮಹೀಂ।।
ಆ ಮದಸ್ರಾವೀ ಆನೆಯು ಭಗದತ್ತನಿಂದ ಪ್ರಚೋದಿಸಲ್ಪಟ್ಟು ಕಾಲನು ಬಿಟ್ಟ ಅಂತಕನಂತೆ ತನ್ನ ಪದಾಘಾತದಿಂದ ಭೂಮಿಯನ್ನೇ ಕಂಪಿಸುತ್ತಾ ವೇಗವನ್ನು ದ್ವಿಗುಣವಾಗಿಸಿಕೊಂಡು ಅವರೆಲ್ಲರ ಮೇಲೆ ಎರಗಿತು.
06060044a ತಸ್ಯ ತತ್ಸುಮಹದ್ರೂಪಂ ದೃಷ್ಟ್ವಾ ಸರ್ವೇ ಮಹಾರಥಾಃ।
06060044c ಅಸಹ್ಯಂ ಮನ್ಯಮಾನಾಸ್ತೇ ನಾತಿಪ್ರಮನಸೋಽಭವನ್।।
ಅದರ ಅಸಹ್ಯವಾದ ಆ ಮಹಾರೂಪವನ್ನು ನೋಡಿ ಮಹಾರಥರೆಲ್ಲರೂ ಅದನ್ನು ಸಹಿಸಿಕೊಳ್ಳಲಾರದೇ ಹತೋತ್ಸಾಹರಾದರು.
06060045a ತತಸ್ತು ನೃಪತಿಃ ಕ್ರುದ್ಧೋ ಭೀಮಸೇನಂ ಸ್ತನಾಂತರೇ।
06060045c ಆಜಘಾನ ನರವ್ಯಾಘ್ರ ಶರೇಣ ನತಪರ್ವಣಾ।।
ನರವ್ಯಾಘ್ರ! ಆಗ ನೃಪತಿಯು ಕ್ರುದ್ಧನಾಗಿ ಭೀಮಸೇನನ ಎದೆಗೆ ನತಪರ್ವ ಶರದಿಂದ ಹೊಡೆದನು.
06060046a ಸೋಽತಿವಿದ್ಧೋ ಮಹೇಷ್ವಾಸಸ್ತೇನ ರಾಜ್ಞಾ ಮಹಾರಥಃ।
06060046c ಮೂರ್ಚಯಾಭಿಪರೀತಾಂಗೋ ಧ್ವಜಯಷ್ಟಿಂ ಉಪಾಶ್ರಿತಃ।।
ಆ ಮಹೇಷ್ವಾಸ ರಾಜನಿಂದ ಹೊಡೆಯಲ್ಪಟ್ಟ ಮಹಾರಥನು ಅಂಗಾಂಗಗಳ ನೋವಿನಿಂದ ಬಳಲಿ ಮೂರ್ಛಿತನಾಗಿ ಧ್ವಜದ ದಂಡವನ್ನು ಹಿಡಿದು ಕುಳಿತುಕೊಂಡನು.
06060047a ತಾಂಸ್ತು ಭೀತಾನ್ಸಮಾಲಕ್ಷ್ಯ ಭೀಮಸೇನಂ ಚ ಮೂರ್ಚಿತಂ।
06060047c ನನಾದ ಬಲವನ್ನಾದಂ ಭಗದತ್ತಃ ಪ್ರತಾಪವಾನ್।।
ಅವರು ಭೀತರಾದುದನ್ನೂ, ಭೀಮಸೇನನು ಮೂರ್ಛಿತನಾದುದನ್ನೂ ಕಂಡು ಪ್ರತಾಪವಾನ್ ಭಗದತ್ತನು ಗಟ್ಟಿಯಾಗಿ ಸಿಂಹನಾದಗೈದನು.
06060048a ತತೋ ಘಟೋತ್ಕಚೋ ರಾಜನ್ಪ್ರೇಕ್ಷ್ಯ ಭೀಮಂ ತಥಾಗತಂ।
06060048c ಸಂಕ್ರುದ್ಧೋ ರಾಕ್ಷಸೋ ಘೋರಸ್ತತ್ರೈವಾಂತರಧೀಯತ।।
ರಾಜನ್! ಆಗ ಭೀಮನು ಹಾಗಾದುದನ್ನು ನೋಡಿ ಸಂಕ್ರುದ್ಧನಾದ ಘೋರ ರಾಕ್ಷಸ ಘಟೋತ್ಕಚನು ಅಲ್ಲಿಯೇ ಅಂತರ್ಧಾನನಾದನು.
06060049a ಸ ಕೃತ್ವಾ ದಾರುಣಾಂ ಮಾಯಾಂ ಭೀರೂಣಾಂ ಭಯವರ್ಧಿನೀಂ।
06060049c ಅದೃಶ್ಯತ ನಿಮೇಷಾರ್ಧಾದ್ಘೋರರೂಪಂ ಸಮಾಶ್ರಿತಃ।।
ಅವನು ಭೀರುಗಳ ಭಯವರ್ಧಿಸುವ ದಾರುಣ ಮಾಯೆಯನ್ನು ಮಾಡಿ ಅದೃಶ್ಯನಾಗಿ ನಿಮಿಷಗಳಲ್ಲಿ ಘೋರರೂಪವನ್ನು ತಾಳಿದನು.
06060050a ಐರಾವತಂ ಸಮಾರುಹ್ಯ ಸ್ವಯಂ ಮಾಯಾಮಯಂ ಕೃತಂ।
06060050c ತಸ್ಯ ಚಾನ್ಯೇಽಪಿ ದಿಮ್ನಾಗಾ ಬಭೂವುರನುಯಾಯಿನಃ।।
ತನ್ನದೇ ಮಾಯೆಯಿಂದ ಮಾಡಲ್ಪಟ್ಟ ಐರಾವತವನ್ನೇರಿ ಬಂದನು. ಇತರ ದಿಗ್ಗಜಗಳೂ ಅನುಸರಿಸಿ ಬಂದವು.
06060051a ಅಂಜನೋ ವಾಮನಶ್ಚೈವ ಮಹಾಪದ್ಮಶ್ಚ ಸುಪ್ರಭಃ।
06060051c ತ್ರಯ ಏತೇ ಮಹಾನಾಗಾ ರಾಕ್ಷಸೈಃ ಸಮಧಿಷ್ಠಿತಾಃ।।
ಅಂಜನ, ವಾಮನ, ಸುಪ್ರಭೆಯ ಮಹಾಪದ್ಮ ಇವು ಮೂರು ಮಹಾನಾಗಗಳೂ ರಾಕ್ಷಸರನ್ನು ಏರಿಸಿಕೊಂಡು ಬಂದವು.
06060052a ಮಹಾಕಾಯಾಸ್ತ್ರಿಧಾ ರಾಜನ್ಪ್ರಸ್ರವಂತೋ ಮದಂ ಬಹು।
06060052c ತೇಜೋವೀರ್ಯಬಲೋಪೇತಾ ಮಹಾಬಲಪರಾಕ್ರಮಾಃ।।
ರಾಜನ್! ಆ ಮೂರು ಮಹಾಬಲ ಪರಾಕ್ರಮಿಗಳಾದ ತೇಜೋವೀರ್ಯಬಲೋಪೇತ ಮಹಾಕಾಯಗಳು ಬಹಳಷ್ಟು ಮದೋದಕವನ್ನು ಸುರಿಸುತ್ತಿದ್ದವು.
06060053a ಘಟೋತ್ಕಚಸ್ತು ಸ್ವಂ ನಾಗಂ ಚೋದಯಾಮಾಸ ತಂ ತತಃ।
06060053c ಸಗಜಂ ಭಗದತ್ತಂ ತು ಹಂತುಕಾಮಃ ಪರಂತಪಃ।।
ಆಗ ಪರಂತಪ ಘಟೋತ್ಕಚನು ಆನೆಯೊಂದಿಗೆ ಭಗದತ್ತನನ್ನು ಕೊಲ್ಲಲು ಬಯಸಿ ತನ್ನ ಆನೆಯನ್ನು ಪ್ರಚೋದಿಸಿದನು.
06060054a ತೇ ಚಾನ್ಯೇ ಚೋದಿತಾ ನಾಗಾ ರಾಕ್ಷಸೈಸ್ತೈರ್ಮಹಾಬಲೈಃ।
06060054c ಪರಿಪೇತುಃ ಸುಸಂರಬ್ಧಾಶ್ಚತುರ್ದಂಷ್ಟ್ರಾಶ್ಚತುರ್ದಿಶಂ।
06060054e ಭಗದತ್ತಸ್ಯ ತಂ ನಾಗಂ ವಿಷಾಣೈಸ್ತೇಽಭ್ಯಪೀಡಯನ್।।
ಮಹಾಬಲ ರಾಕ್ಷಸರಿಂದ ಪ್ರಚೋದಿತರಾದ ಅನ್ಯ ಗಜಗಳೂ ಕೂಡ ಸಂರಬ್ಧರಾಗಿ ಕೋರೆದಾಡೆಗಳೊಡನೆ ನಾಲ್ಕೂಕಡೆಗಳಿಂದ ಭಗದತ್ತನ ಆ ಅನೆಯ ಮೇಲೆ ಬಿದ್ದು ಬಹುವಾಗಿ ಪೀಡಿಸಿದವು.
06060055a ಸಂಪೀಡ್ಯಮಾನಸ್ತೈರ್ನಾಗೈರ್ವೇದನಾರ್ತಃ ಶರಾತುರಃ।
06060055c ಸೋಽನದತ್ ಸುಮಹಾನಾದಂ ಇಂದ್ರಾಶನಿಸಮಸ್ವನಂ।।
ಆ ಆನೆಗಳಿಂದ ಪೀಡಿತಗೊಂಡು ಅದು ಶರಗಳ ವೇದನೆಯಿಂದ ಆರ್ತವಾಗಿ ಮೋಡಗಳ ಗುಡುಗಿಗೆ ಸಮನಾದ ಮಹಾನಾದದಿಂದ ಕೂಗಿತು.
06060056a ತಸ್ಯ ತಂ ನದತೋ ನಾದಂ ಸುಘೋರಂ ಭೀಮನಿಸ್ವನಂ।
06060056c ಶ್ರುತ್ವಾ ಭೀಷ್ಮೋಽಬ್ರವೀದ್ದ್ರೋಣಂ ರಾಜಾನಂ ಚ ಸುಯೋಧನಂ।।
ಕೂಗುತ್ತಿದ್ದ ಆ ಭೀಮನಿಸ್ವನ ಘೋರ ನಾದವನ್ನು ಕೇಳಿದ ಭೀಷ್ಮನು ರಾಜಾ ಸುಯೋಧನ ಮತ್ತು ದ್ರೋಣರಿಗೆ ಹೇಳಿದನು:
06060057a ಏಷ ಯುಧ್ಯತಿ ಸಂಗ್ರಾಮೇ ಹೈಡಿಂಬೇನ ದುರಾತ್ಮನಾ।
06060057c ಭಗದತ್ತೋ ಮಹೇಷ್ವಾಸಃ ಕೃಚ್ಛ್ರೇಣ ಪರಿವರ್ತತೇ।।
“ಈ ಮಹೇಷ್ವಾಸ ಭಗದತ್ತನು ಸಂಗ್ರಾಮದಲ್ಲಿ ದುರಾತ್ಮ ಹೈಡಿಂಬಿಯೊಂದಿಗೆ ಯುದ್ಧಮಾಡಿ ಕಷ್ಟಕ್ಕೊಳಗಾಗಿದ್ದಾನೆ.
06060058a ರಾಕ್ಷಸಶ್ಚ ಮಹಾಮಾಯಃ ಸ ಚ ರಾಜಾತಿಕೋಪನಃ।
06060058c ತೌ ಸಮೇತೌ ಮಹಾವೀರ್ಯೌ ಕಾಲಮೃತ್ಯುಸಮಾವುಭೌ।।
ರಾಕ್ಷಸನು ಮಹಾಮಾಯನಾಗಿದ್ದಾನೆ. ರಾಜನು ಅತ್ಯಂತ ಕುಪಿತನಾಗಿದ್ದಾನೆ. ಅವರಿಬ್ಬರು ಮಹಾವೀರ್ಯವಂತರೂ ಕಾಲಮೃತ್ಯುವಂತೆ ಒಟ್ಟಾಗಿದ್ದಾರೆ.
06060059a ಶ್ರೂಯತೇ ಹ್ಯೇಷ ಹೃಷ್ಟಾನಾಂ ಪಾಂಡವಾನಾಂ ಮಹಾಸ್ವನಃ।
06060059c ಹಸ್ತಿನಶ್ಚೈವ ಸುಮಹಾನ್ಭೀತಸ್ಯ ರುವತೋ ಧ್ವನಿಃ।।
ಹರ್ಷಿತ ಪಾಂಡವರ ಮಹಾಸ್ವನವೂ ಭೀತಿಗೊಂಡ ಆನೆಯ ಚೀರುವ ಮಹಾಧ್ವನಿಯೂ ಕೇಳಿಬರುತ್ತಿದೆ.
06060060a ತತ್ರ ಗಚ್ಛಾಮ ಭದ್ರಂ ವೋ ರಾಜಾನಂ ಪರಿರಕ್ಷಿತುಂ।
06060060c ಅರಕ್ಷ್ಯಮಾಣಃ ಸಮರೇ ಕ್ಷಿಪ್ರಂ ಪ್ರಾಣಾನ್ವಿಮೋಕ್ಷ್ಯತೇ।।
ನಿಮಗೆ ಮಂಗಳವಾಗಲಿ! ರಾಜನನ್ನು ಪರಿರಕ್ಷಿಸಲು ಅಲ್ಲಿಗೆ ಹೋಗೋಣ. ರಕ್ಷಣೆಯಿಲ್ಲದವರು ಸಮರದಲ್ಲಿ ಬೇಗನೇ ಪ್ರಾಣಗಳನ್ನು ಕಳೆದುಕೊಳ್ಳುತ್ತಾರೆ.
06060061a ತೇ ತ್ವರಧ್ವಂ ಮಹಾವೀರ್ಯಾಃ ಕಿಂ ಚಿರೇಣ ಪ್ರಯಾಮಹೇ।
06060061c ಮಹಾನ್ ಹಿ ವರ್ತತೇ ರೌದ್ರಃ ಸಂಗ್ರಾಮೋ ಲೋಮಹರ್ಷಣಃ।।
ಮಹಾವೀರ್ಯರೇ! ತ್ವರೆಮಾಡಿ! ತಡಮಾಡುವುದರಿಂದ ಏನು ಪ್ರಯೋಜನ? ರೌದ್ರವೂ ಲೋಮಹರ್ಷಣವೂ ಆದ ಮಹಾಯುದ್ಧವು ನಡೆಯುತ್ತಿದೆ.
06060062a ಭಕ್ತಶ್ಚ ಕುಲಪುತ್ರಶ್ಚ ಶೂರಶ್ಚ ಪೃತನಾಪತಿಃ।
06060062c ಯುಕ್ತಂ ತಸ್ಯ ಪರಿತ್ರಾಣಂ ಕರ್ತುಮಸ್ಮಾಭಿರಚ್ಯುತಾಃ।।
ಅಚ್ಯುತರೇ! ಭಕ್ತನೂ, ಕುಲಪುತ್ರನೂ, ಶೂರನೂ, ಪೃತನಾಪತಿಯೂ ಆದ ಅವನಿಗೆ ನಾವು ರಕ್ಷಣೆಯನ್ನು ಮಾಡುವುದು ಯುಕ್ತವಾಗಿದೆ.”
06060063a ಭೀಷ್ಮಸ್ಯ ತದ್ವಚಃ ಶ್ರುತ್ವಾ ಭಾರದ್ವಾಜಪುರೋಗಮಾಃ।
06060063c ಸಹಿತಾಃ ಸರ್ವರಾಜಾನೋ ಭಗದತ್ತಪರೀಪ್ಸಯಾ।
06060063e ಉತ್ತಮಂ ಜವಮಾಸ್ಥಾಯ ಪ್ರಯಯುರ್ಯತ್ರ ಸೋಽಭವತ್।।
ಭೀಷ್ಮನ ಆ ಮಾತನ್ನು ಕೇಳಿ ಭಾರದ್ವಾಜನನ್ನು ಮುಂದಿರಿಸಿಕೊಂಡ ಎಲ್ಲ ರಾಜರೂ ಒಟ್ಟಿಗೇ ಭಗದತ್ತನನ್ನು ರಕ್ಷಿಸಲು ಬಯಸಿ ಶೀಘ್ರದಲ್ಲಿಯೇ ಅವನು ಎಲ್ಲಿದ್ದನೋ ಅಲ್ಲಿಗೆ ಬಂದರು,
06060064a ತಾನ್ಪ್ರಯಾತಾನ್ಸಮಾಲೋಕ್ಯ ಯುಧಿಷ್ಠಿರಪುರೋಗಮಾಃ।
06060064c ಪಾಂಚಾಲಾಃ ಪಾಂಡವೈಃ ಸಾರ್ಧಂ ಪೃಷ್ಠತೋಽನುಯಯುಃ ಪರಾನ್।।
ಅವರು ಹೋಗುತ್ತಿರುವುದನ್ನು ನೋಡಿ ಯುಧಿಷ್ಠಿರನನ್ನು ಮುಂದಿರಿಸಿಕೊಂಡ ಪಾಂಚಾಲರು ಪಾಂಡವರೊಂದಿಗೆ ಶತ್ರುಗಳನ್ನು ಹಿಂಬಾಲಿಸಿ ಹೋದರು.
06060065a ತಾನ್ಯನೀಕಾನ್ಯಥಾಲೋಕ್ಯ ರಾಕ್ಷಸೇಂದ್ರಃ ಪ್ರತಾಪವಾನ್।
06060065c ನನಾದ ಸುಮಹಾನಾದಂ ವಿಸ್ಫೋಟಮಶನೇರಿವ।।
ಆ ಸೇನೆಗಳನ್ನು ನೋಡಿದ ಪ್ರತಾಪವಾನ್ ರಾಕ್ಷಸೇಂದ್ರನು ಕಲ್ಲುಬಂಡೆಯು ಸ್ಫೋಟಗೊಂಡ ಹಾಗೆ ಗಟ್ಟಿಯಾಗಿ ಕೂಗಿದನು.
06060066a ತಸ್ಯ ತಂ ನಿನದಂ ಶ್ರುತ್ವಾ ದೃಷ್ಟ್ವಾ ನಾಗಾಂಶ್ಚ ಯುಧ್ಯತಃ।
06060066c ಭೀಷ್ಮಃ ಶಾಂತನವೋ ಭೂಯೋ ಭಾರದ್ವಾಜಮಭಾಷತ।।
ಅವನ ಆ ಕೂಗನ್ನು ಕೇಳಿ ಮತ್ತು ಯುದ್ಧಮಾಡುತ್ತಿದ್ದ ಆನೆಯನ್ನೂ ನೋಡಿ ಶಾಂತನವ ಭೀಷ್ಮನು ಪುನಃ ಭಾರದ್ವಾಜನಿಗೆ ಹೇಳಿದನು:
06060067a ನ ರೋಚತೇ ಮೇ ಸಂಗ್ರಾಮೋ ಹೈಡಿಂಬೇನ ದುರಾತ್ಮನಾ।
06060067c ಬಲವೀರ್ಯಸಮಾವಿಷ್ಟಃ ಸಸಹಾಯಶ್ಚ ಸಾಂಪ್ರತಂ।।
“ದುರಾತ್ಮ ಹೈಡಿಂಬಿಯೊಂದಿಗೆ ಯುದ್ಧಮಾಡಲು ನನಗೆ ಇಷ್ಟವಾಗುತ್ತಿಲ್ಲ. ಈಗ ಅವನು ಬಲ-ವೀರ್ಯಗಳಿಂದ ಸಂಪನ್ನನಾಗಿದ್ದಾನೆ ಮತ್ತು ಸಹಾಯಕರನ್ನೂ ಪಡೆದಿದ್ದಾನೆ.
06060068a ನೈಷ ಶಕ್ಯೋ ಯುಧಾ ಜೇತುಮಪಿ ವಜ್ರಭೃತಾ ಸ್ವಯಂ।
06060068c ಲಬ್ಧಲಕ್ಷ್ಯಃ ಪ್ರಹಾರೀ ಚ ವಯಂ ಚ ಶ್ರಾಂತವಾಹನಾಃ।
06060068e ಪಾಂಚಾಲೈಃ ಪಾಂಡವೇಯೈಶ್ಚ ದಿವಸಂ ಕ್ಷತವಿಕ್ಷತಾಃ।।
ಯುದ್ಧದಲ್ಲಿ ಇವನನ್ನು ಜಯಿಸಲು ಸ್ವಯಂ ವಜ್ರಭೃತನಿಗೂ ಶಕ್ಯವಿಲ್ಲ. ಅವನು ಲಕ್ಷ್ಯಭೇದನದಲ್ಲಿ ಸಿದ್ಧಹಸ್ತನಾಗಿದ್ದಾನೆ. ನಾವೂ ಕೂಡ ಬಳಲಿದ್ದೇವೆ. ಪಾಂಚಾಲರು ಮತ್ತು ಪಾಂಡವರಿಂದ ನಾವು ದಿವಸವಿಡೀ ಗಾಯಗೊಂಡಿದ್ದೇವೆ.
06060069a ತನ್ನ ಮೇ ರೋಚತೇ ಯುದ್ಧಂ ಪಾಂಡವೈರ್ಜಿತಕಾಶಿಭಿಃ।
06060069c ಘುಷ್ಯತಾಮವಹಾರೋಽದ್ಯ ಶ್ವೋ ಯೋತ್ಸ್ಯಾಮಃ ಪರೈಃ ಸಹ।।
ಆದುದರಿಂದ ವಿಜಯೋತ್ಸಾಹದಿಂದ ಉಬ್ಬಿರುವ ಪಾಂಡವರೊಂದಿಗೆ ಯುದ್ಧಮಾಡಲು ನನಗೆ ಮನಸ್ಸಾಗುತ್ತಿಲ್ಲ. ಇಂದು ಯುದ್ಧಕ್ಕೆ ವಿರಾಮವನ್ನು ಘೋಷಿಸಿ ನಾಳೆ ನಾವು ಒಟ್ಟಿಗೇ ಶತ್ರುಗಳೊಂದಿಗೆ ಹೋರಾಡೋಣ.”
06060070a ಪಿತಾಮಹವಚಃ ಶ್ರುತ್ವಾ ತಥಾ ಚಕ್ರುಃ ಸ್ಮ ಕೌರವಾಃ।
06060070c ಉಪಾಯೇನಾಪಯಾನಂ ತೇ ಘಟೋತ್ಕಚಭಯಾರ್ದಿತಾಃ।।
ಘಟೋತ್ಕಚನ ಭಯದಿಂದ ಪೀಡಿತರಾಗಿ ಅದೇ ಉಪಾಯವನ್ನು ಹುಡುಕುತ್ತಿದ್ದ ಕೌರವರೂ ಕೂಡ ಪಿತಾಮಹನ ಮಾತನ್ನು ಕೇಳಿ ಅದರಂತೆಯೇ ಮಾಡಿದರು.
06060071a ಕೌರವೇಷು ನಿವೃತ್ತೇಷು ಪಾಂಡವಾ ಜಿತಕಾಶಿನಃ।
06060071c ಸಿಂಹನಾದಮಕುರ್ವಂತ ಶಂಖವೇಣುಸ್ವನೈಃ ಸಹ।।
ಕೌರವರು ನಿವೃತ್ತರಾಗಲು ಗೆಲುವಿಂದ ಉಬ್ಬಿದ ಪಾಂಡವರು ಶಂಖ-ವೇಣು ನಿಸ್ವನಗಳೊಂದಿಗೆ ಸಿಂಹನಾದವನ್ನು ಮಾಡಿದರು.
06060072a ಏವಂ ತದಭವದ್ಯುದ್ಧಂ ದಿವಸಂ ಭರತರ್ಷಭ।
06060072c ಪಾಂಡವಾನಾಂ ಕುರೂಣಾಂ ಚ ಪುರಸ್ಕೃತ್ಯ ಘಟೋತ್ಕಚಂ।।
ಭರತರ್ಷಭ! ಘಟೋತ್ಕಚನನ್ನು ಮುಂದಿರಿಸಿಕೊಂಡು ಪಾಂಡವ ಕೌರವರ ಆ ದಿನದ ಯುದ್ಧವು ಈ ರೀತಿ ನಡೆಯಿತು.
06060073a ಕೌರವಾಸ್ತು ತತೋ ರಾಜನ್ಪ್ರಯಯುಃ ಶಿಬಿರಂ ಸ್ವಕಂ।
06060073c ವ್ರೀಡಮಾನಾ ನಿಶಾಕಾಲೇ ಪಾಂಡವೇಯೈಃ ಪರಾಜಿತಾಃ।।
ರಾಜನ್! ಆ ನಿಶಾಕಾಲದಲ್ಲಿ ಪಾಂಡವರಿಂದ ಪರಾಜಿತರಾದ ಕೌರವರು ನಾಚಿಕೆಗೊಂಡವರಾಗಿ ತಮ್ಮ ತಮ್ಮ ಶಿಬಿರಗಳಿಗೆ ನಡೆದರು.
06060074a ಶರವಿಕ್ಷತಗಾತ್ರಾಶ್ಚ ಪಾಂಡುಪುತ್ರಾ ಮಹಾರಥಾಃ।
06060074c ಯುದ್ಧೇ ಸುಮನಸೋ ಭೂತ್ವಾ ಶಿಬಿರಾಯೈವ ಜಗ್ಮಿರೇ।।
ಬಾಣಗಳ ಹೊಡೆತಕ್ಕೆ ಗಾಯಗೊಂಡಿದ್ದ ಮಹಾರಥ ಪಾಂಡುಪುತ್ರರೂ ಕೂಡ ಯುದ್ಧದಿಂದ ಸಂತೋಷಗೊಂಡು ಶಿಬಿರಗಳಿಗೆ ತೆರಳಿದರು.
06060075a ಪುರಸ್ಕೃತ್ಯ ಮಹಾರಾಜ ಭೀಮಸೇನಘಟೋತ್ಕಚೌ।
06060075c ಪೂಜಯಂತಸ್ತದಾನ್ಯೋನ್ಯಂ ಮುದಾ ಪರಮಯಾ ಯುತಾಃ।।
ಮಹಾರಾಜ! ಭೀಮಸೇನ-ಘಟೋತ್ಕಚರನ್ನು ಮುಂದಿಟ್ಟು ಪರಮ ಸಂತೋಷಯುಕ್ತರಾಗಿ ಅನ್ಯೋನ್ಯರನ್ನು ಗೌರವಿಸಿದರು.
06060076a ನದಂತೋ ವಿವಿಧಾನ್ನಾದಾಂಸ್ತೂರ್ಯಸ್ವನವಿಮಿಶ್ರಿತಾನ್।
06060076c ಸಿಂಹನಾದಾಂಶ್ಚ ಕುರ್ವಾಣಾ ವಿಮಿಶ್ರಾಂ ಶಂಖನಿಸ್ವನೈಃ।।
ವಿವಿಧ ನಾದಗಳು ತೂರ್ಯಸ್ವನಗಳೊಡನೆ, ಸಿಂಹನಾದಮಾಡುವವರೊಂಡನೆ, ಶಂಖನಾದಗಳೊಂಡನೆ ಮಿಶ್ರಿತವಾಗಿ ಜೋರಾಗಿತ್ತು.
06060077a ವಿನದಂತೋ ಮಹಾತ್ಮಾನಃ ಕಂಪಯಂತಶ್ಚ ಮೇದಿನೀಂ।
06060077c ಘಟ್ಟಯಂತಶ್ಚ ಮರ್ಮಾಣಿ ತವ ಪುತ್ರಸ್ಯ ಮಾರಿಷ।
06060077e ಪ್ರಯಾತಾಃ ಶಿಬಿರಾಯೈವ ನಿಶಾಕಾಲೇ ಪರಂತಪಾಃ।।
ಭೂಮಿಯನ್ನು ನಡುಗಿಸುತ್ತಾ ಸಂತೋಷದಲ್ಲಿ ಕುಣಿಯುತ್ತಾ ನಿನ್ನ ಮಗನ ಮರ್ಮಗಳನ್ನು ಚುಚ್ಚುತ್ತಾ ಆ ಮಹಾತ್ಮ ಪರಂತಪರು ನಿಶಾಕಾಲದಲ್ಲಿ ಶಿಬಿರಗಳಿಗೆ ತೆರಳಿದರು.
06060078a ದುರ್ಯೋಧನಸ್ತು ನೃಪತಿರ್ದೀನೋ ಭ್ರಾತೃವಧೇನ ಚ।
06060078c ಮುಹೂರ್ತಂ ಚಿಂತಯಾಮಾಸ ಬಾಷ್ಪಶೋಕಸಮಾಕುಲಃ।।
ನೃಪತಿ ದುರ್ಯೋಧನನಾದರೋ ಭ್ರಾತೃವಧೆಯಿಂದ ಭಾಷ್ಪಶೋಕಸಮಾಕುಲನಾಗಿ ಒಂದು ಕ್ಷಣ ಚಿಂತೆಗೊಳಗಾದನು.
06060079a ತತಃ ಕೃತ್ವಾ ವಿಧಿಂ ಸರ್ವಂ ಶಿಬಿರಸ್ಯ ಯಥಾವಿಧಿ।
06060079c ಪ್ರದಧ್ಯೌ ಶೋಕಸಂತಪ್ತೋ ಭ್ರಾತೃವ್ಯಸನಕರ್ಶಿತಃ।।
ಆಗ ಶಿಬಿರಗಳ ವಿಧಿಯನ್ನು ಯಥಾವಿಧಿಯಾಗಿ ಮಾಡಿ, ಭ್ರಾತೃವ್ಯಸನದಿಂದ ಎಳೆಯಲ್ಪಟ್ಟು ಶೋಕಸಂತಪ್ತನಾದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಚತುರ್ಥದಿವಸಾವಹಾರೇ ಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಚತುರ್ಥದಿವಸಾವಹಾರ ಎನ್ನುವ ಅರವತ್ತನೇ ಅಧ್ಯಾಯವು.