ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 59
ಸಾರ
ಭೀಮಸೇನನ ಪರಾಕ್ರಮ (1-20). ಸಾತ್ಯಕಿ-ಭೂರಿಶ್ರವರು ಪರಸ್ಪರರನ್ನು ಎದುರಿಸಿದುದು (21-29).
06059001 ಸಂಜಯ ಉವಾಚ।
06059001a ತಸ್ಮಿನ್ ಹತೇ ಗಜಾನೀಕೇ ಪುತ್ರೋ ದುರ್ಯೋಧನಸ್ತವ।
06059001c ಭೀಮಸೇನಂ ಘ್ನತೇತ್ಯೇವಂ ಸರ್ವಸೈನ್ಯಾನ್ಯಚೋದಯತ್।।
ಸಂಜಯನು ಹೇಳಿದನು: “ಆ ಗಜಸೇನೆಯು ಹತವಾಗಲು ನಿನ್ನ ಮಗ ದುರ್ಯೋಧನನು ಭೀಮಸೇನನೆನ್ನು ಕೊಲ್ಲಬೇಕೆಂದು ಸರ್ವ ಸೇನೆಗಳನ್ನು ಪ್ರಚೋದಿಸಿದನು.
06059002a ತತಃ ಸರ್ವಾಣ್ಯನೀಕಾನಿ ತವ ಪುತ್ರಸ್ಯ ಶಾಸನಾತ್।
06059002c ಅಭ್ಯದ್ರವನ್ಭೀಮಸೇನಂ ನದಂತಂ ಭೈರವಾನ್ರವಾನ್।।
ಆಗ ನಿನ್ನ ಮಗನ ಶಾಸನದಂತೆ ಸರ್ವ ಸೇನೆಗಳೂ ಭೈರವ ಕೂಗನ್ನು ಕೂಗುತ್ತಾ ಭೀಮಸೇನನ ಮೇಲೆ ಎರಗಿದರು.
06059003a ತಂ ಬಲೌಘಮಪರ್ಯಂತಂ ದೇವೈರಪಿ ದುರುತ್ಸಹಂ।
06059003c ಆಪತಂತಂ ಸುದುಷ್ಪಾರಂ ಸಮುದ್ರಮಿವ ಪರ್ವಣಿ।।
06059004a ರಥನಾಗಾಶ್ವಕಲಿಲಂ ಶಂಖದುಂದುಭಿನಾದಿತಂ।
06059004c ಅಥಾನಂತಮಪಾರಂ ಚ ನರೇಂದ್ರಸ್ತಿಮಿತಹ್ರದಂ।।
ಭರತ ಬಂದಾಗ ಮೇಲುಕ್ಕುವ ಸಾಗರದಂತೆ ಬೀಳುತ್ತಿದ್ದ ಆ ದುಷ್ಟಾರ ಸೇನೆಯು ದೇವತೆಗಳಿಗೂ ದುರುತ್ಸಹವಾಗಿ ಅಪಾರವಾಗಿತ್ತು. ರಥ-ಗಜ-ಅಶ್ವಗಳಿಂದ ತುಂಬಿತ್ತು. ಶಂಖ ದುಂದುಭಿಗಳ ನಾದದಿಂದ ಕೂಡಿತ್ತು. ನರೇಂದ್ರ! ಅಮಿತ ಸರೋವರದಂತೆ ಅನಂತವೂ ಅಪಾರವೂ ಆಗಿತ್ತು.
06059005a ತಂ ಭೀಮಸೇನಃ ಸಮರೇ ಮಹೋದಧಿಮಿವಾಪರಂ।
06059005c ಸೇನಾಸಾಗರಮಕ್ಷೋಭ್ಯಂ ವೇಲೇವ ಸಮವಾರಯತ್।।
ಮಹಾಸಾಗರವನ್ನು ದಡವು ಹೇಗೋ ಹಾಗೆ ಸಮರದಲ್ಲಿ ಕ್ಷೋಭೆಗೊಂಡು ಮೇಲೇಳುತ್ತಿದ್ದ ಆ ಸೇನಾಸಾಗರವನ್ನು ಭೀಮಸೇನನು ಬಲದಿಂದ ತಡೆದನು.
06059006a ತದಾಶ್ಚರ್ಯಮಪಶ್ಯಾಮ ಶ್ರದ್ಧೇಯಮಪಿ ಚಾದ್ಭುತಂ।
06059006c ಭೀಮಸೇನಸ್ಯ ಸಮರೇ ರಾಜನ್ಕರ್ಮಾತಿಮಾನುಷಂ।।
ರಾಜನ್! ಸಮರದಲ್ಲಿ ನಂಬಲಿಕ್ಕಾಗದ ಭೀಮಸೇನನ ಆ ಅಮಾನುಷ ಅದ್ಭುತ ಆಶ್ಚರ್ಯ ಕೃತ್ಯಗಳನ್ನು ನೋಡಿದೆವು.
06059007a ಉದೀರ್ಣಾಂ ಪೃಥಿವೀಂ ಸರ್ವಾಂ ಸಾಶ್ವಾಂ ಸರಥಕುಂಜರಾಂ।
06059007c ಅಸಂಭ್ರಮಂ ಭೀಮಸೇನೋ ಗದಯಾ ಸಮತಾಡಯತ್।।
ಭೂಮಿಯನ್ನು ನಡುಗಿಸುತ್ತಾ ಬರುತ್ತಿದ್ದ ಆ ಎಲ್ಲರನ್ನೂ ಕುದುರೆ, ರಥ, ಕುಂಜರಗಳೊಂದಿಗೆ, ಸ್ವಲ್ಪವೂ ಭಯಪಡದೇ ಭೀಮಸೇನನು ಗದೆಯಿಂದ ಹೊಡೆದನು.
06059008a ಸ ಸಂವಾರ್ಯ ಬಲೌಘಾಂಸ್ತಾನ್ಗದಯಾ ರಥಿನಾಂ ವರಃ।
06059008c ಅತಿಷ್ಠತ್ತುಮುಲೇ ಭೀಮೋ ಗಿರಿರ್ಮೇರುರಿವಾಚಲಃ।।
ರಥಿಗಳಲ್ಲಿ ಶ್ರೇಷ್ಠ ಭೀಮನು ಗದೆಯಿಂದ ಆ ಬಲಗಳನ್ನು ತಡೆದು ತುಮುಲದಲ್ಲಿ ಮೇರುಗಿರಿಯಂತೆ ಅಚಲನಾಗಿ ನಿಂತನು.
06059009a ತಸ್ಮಿನ್ಸುತುಮುಲೇ ಘೋರೇ ಕಾಲೇ ಪರಮದಾರುಣೇ।
06059009c ಭ್ರಾತರಶ್ಚೈವ ಪುತ್ರಾಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ।।
06059010a ದ್ರೌಪದೇಯಾಭಿಮನ್ಯುಶ್ಚ ಶಿಖಂಡೀ ಚ ಮಹಾರಥಃ।
06059010c ನ ಪ್ರಾಜಹನ್ಭೀಮಸೇನಂ ಭಯೇ ಜಾತೇ ಮಹಾಬಲಂ।।
ಆ ಘೋರ ಪರಮದಾರುಣ ತುಮುಲದ ಸಮಯದಲ್ಲಿ ಅವನ ಸಹೋದರರು, ಪುತ್ರರು, ಪಾರ್ಷತ ಧೃಷ್ಟದ್ಯುಮ್ನ, ದ್ರೌಪದೇಯರು, ಅಭಿಮನ್ಯು ಮತ್ತು ಮಹಾರಥ ಶಿಖಂಡಿಯರು ಮಹಾಬಲ ಭಯಗೊಂಡು ಭೀಮಸೇನನನ್ನು ಬಿಟ್ಟು ಹೋಗಲಿಲ್ಲ.
06059011a ತತಃ ಶೈಕ್ಯಾಯಸೀಂ ಗುರ್ವೀಂ ಪ್ರಗೃಹ್ಯ ಮಹತೀಂ ಗದಾಂ।
06059011c ಅವಧೀತ್ತಾವಕಾನ್ಯೋಧಾನ್ದಂಡಪಾಣಿರಿವಾಂತಕಃ।
06059011e ಪೋಥಯನ್ರಥವೃಂದಾನಿ ವಾಜಿವೃಂದಾನಿ ಚಾಭಿಭೂಃ।।
ಆಗ ಅಂತಕ ದಂಡಪಾಣಿಯಂತೆ ಉಕ್ಕಿನಿಂದ ಮಾಡಿದ ಭಾರ ಮಹಾ ಗದೆಯನ್ನು ಹಿಡಿದು ಅವನು ನಿನ್ನ ಯೋಧರ ಮೇಲೆ ಬಿದ್ದು ರಥವೃಂದಗಳನ್ನೂ ವಾಜಿವೃಂದಗಳನ್ನೂ ಸದೆಬಡಿದನು.
06059012a ವ್ಯಚರತ್ಸಮರೇ ಭೀಮೋ ಯುಗಾಂತೇ ಪಾವಕೋ ಯಥಾ।
06059012c ವಿನಿಘ್ನನ್ಸಮರೇ ಸರ್ವಾನ್ಯುಗಾಂತೇ ಕಾಲವದ್ವಿಭುಃ।।
ಯುಗಾಂತದಲ್ಲಿ ಅಗ್ನಿಯಂತೆ ವಿಭು ಭೀಮನು ಸಮರದಲ್ಲಿ ಸಂಚರಿಸುತ್ತಾ ಯುಗಾಂತ ಕಾಲನಂತೆ ಸರ್ವರನ್ನೂ ಸಂಹರಿಸತೊಡಗಿದನು.
06059013a ಊರುವೇಗೇನ ಸಂಕರ್ಷನ್ರಥಜಾಲಾನಿ ಪಾಂಡವಃ।
06059013c ಪ್ರಮರ್ದಯನ್ಗಜಾನ್ಸರ್ವಾನ್ನಡ್ವಲಾನೀವ ಕುಂಜರಃ।।
ಪಾಂಡವನು ತನ್ನ ತೊಡೆಗಳ ವೇಗದಿಂದಲೇ ರಥಜಾಲಗಳನ್ನು ಸೆಳೆದು ಆನೆಗಳು ಜೊಂಡುಹುಲ್ಲನ್ನು ಮುರಿದು ಧ್ವಂಸಮಾಡುವಂತೆ ಮರ್ದಿಸುತ್ತಿದ್ದನು.
06059014a ಮೃದ್ನನ್ರಥೇಭ್ಯೋ ರಥಿನೋ ಗಜೇಭ್ಯೋ ಗಜಯೋಧಿನಃ।
06059014c ಸಾದಿನಶ್ಚಾಶ್ವಪೃಷ್ಠೇಭ್ಯೋ ಭೂಮೌ ಚೈವ ಪದಾತಿನಃ।।
ರಥಗಳಿಂದ ರಥಿಕರನ್ನೂ, ಆನೆಗಳಿಂದ ಗಜಯೋಧರನ್ನೂ, ಕುದುರೆಗಳಿಂದ ಸವಾರರನ್ನೂ ಕೆಳಕ್ಕೆ ಸೆಳೆದು, ಭೂಮಿಯಲ್ಲಿರುವ ಪದಾತಿಗಳನ್ನೂ ಕೆಡವಿ ಕೊಲ್ಲುತ್ತಿದ್ದನು.
06059015a ತತ್ರ ತತ್ರ ಹತೈಶ್ಚಾಪಿ ಮನುಷ್ಯಗಜವಾಜಿಭಿಃ।
06059015c ರಣಾಂಗಣಂ ತದಭವನ್ಮೃತ್ಯೋರಾಘಾತಸನ್ನಿಭಂ।।
ಅಲ್ಲಲ್ಲಿ ಸತ್ತು ಬಿದ್ದಿದ್ದ ಮನುಷ್ಯ-ಗಜ-ವಾಜಿಗಳಿಂದ ಆ ರಣಾಂಗಣವು ಮೃತ್ಯುವಿನಿಂದ ಆಘಾತಗೊಂಡಿದೆಯೋ ಎಂಬಂತೆ ಆಯಿತು.
06059016a ಪಿನಾಕಮಿವ ರುದ್ರಸ್ಯ ಕ್ರುದ್ಧಸ್ಯಾಭಿಘ್ನತಃ ಪಶೂನ್।
06059016c ಯಮದಂಡೋಪಮಾಮುಗ್ರಾಮಿಂದ್ರಾಶನಿಸಮಸ್ವನಾಂ।
06059016e ದದೃಶುರ್ಭೀಮಸೇನಸ್ಯ ರೌದ್ರಾಂ ವಿಶಸನೀಂ ಗದಾಂ।।
ಪಶುಗಳನ್ನು ಸಂಹರಿಸುವ ಕ್ರುದ್ಧ ರುದ್ರನ ಪಿನಾಕದಂತೆ ಮತ್ತು ಯಮದಂಡದಂತೆ ಉಗ್ರವಾದ, ಇಂದ್ರನ ವಜ್ರದಂತೆ ರೌದ್ರವಾಗಿ ಶಬ್ಧಮಾಡುತ್ತಿದ್ದ ಭೀಮನ ಗದೆಯನ್ನು ನೋಡಿದರು.
06059017a ಆವಿಧ್ಯತೋ ಗದಾಂ ತಸ್ಯ ಕೌಂತೇಯಸ್ಯ ಮಹಾತ್ಮನಃ।
06059017c ಬಭೌ ರೂಪಂ ಮಹಾಘೋರಂ ಕಾಲಸ್ಯೇವ ಯುಗಕ್ಷಯೇ।।
ಗದೆಯನ್ನು ತಿರುಗಿಸುತ್ತಿದ್ದ ಆ ಮಹಾತ್ಮ ಕೌಂತೇಯನ ರೂಪವು ಯುಗಕ್ಷಯದಲ್ಲಿ ಕಾಲನಂತೆ ಮಹಾಘೋರವಾಗಿತ್ತು.
06059018a ತಂ ತಥಾ ಮಹತೀಂ ಸೇನಾಂ ದ್ರಾವಯಂತಂ ಪುನಃ ಪುನಃ।
06059018c ದೃಷ್ಟ್ವಾ ಮೃತ್ಯುಮಿವಾಯಾಂತಂ ಸರ್ವೇ ವಿಮನಸೋಽಭವನ್।।
ಆ ಮಹಾಸೇನೆಯು ಪುನಃ ಪುನಃ ಪಲಾಯನಗೊಳ್ಳುತ್ತಿರಲು, ಮೃತ್ಯುವಿನಂತೆ ಬರುತ್ತಿದ್ದ ಅವನನ್ನು ನೋಡಿ ಸರ್ವರೂ ಬೇಸತ್ತರು.
06059019a ಯತೋ ಯತಃ ಪ್ರೇಕ್ಷತೇ ಸ್ಮ ಗದಾಮುದ್ಯಮ್ಯ ಪಾಂಡವಃ।
06059019c ತೇನ ತೇನ ಸ್ಮ ದೀರ್ಯಂತೇ ಸರ್ವಸೈನ್ಯಾನಿ ಭಾರತ।।
ಭಾರತ! ಎಲ್ಲೆಲ್ಲಿ ಪಾಂಡವನು ಗದೆಯನ್ನೆತ್ತಿ ಬರುತ್ತಿರುವುದನ್ನು ನೋಡುತ್ತಿದ್ದರೋ ಅಲ್ಲಲ್ಲಿ ಸರ್ವ ಸೈನ್ಯಗಳು ಹಿಮ್ಮೆಟ್ಟುತ್ತಿದ್ದರು1.
06059020a ಪ್ರದಾರಯಂತಂ ಸೈನ್ಯಾನಿ ಬಲೌಘೇನಾಪರಾಜಿತಂ।
06059020c ಗ್ರಸಮಾನಮನೀಕಾನಿ ವ್ಯಾದಿತಾಸ್ಯಮಿವಾಂತಕಂ।।
06059021a ತಂ ತಥಾ ಭೀಮಕರ್ಮಾಣಂ ಪ್ರಗೃಹೀತಮಹಾಗದಂ।
06059021c ದೃಷ್ಟ್ವಾ ವೃಕೋದರಂ ಭೀಷ್ಮಃ ಸಹಸೈವ ಸಮಭ್ಯಯಾತ್।।
ಸೈನ್ಯಗಳನ್ನು ಸೀಳುತ್ತಿದ್ದ, ಅಂತಕನು ಬಾಯಿ ತೆರೆದು ಜೀವಕೋಟಿಯನ್ನು ನುಂಗುವಂತೆ ಕಾಣುತ್ತಿದ್ದ, ಮಹಾಗದೆಯನ್ನು ಹಿಡಿದಿದ್ದ, ಬಲೌಘ, ಅಪರಾಜಿತ, ಭೀಮಕರ್ಮಿ, ವೃಕೋದರನನ್ನು ನೋಡಿ ಭೀಷ್ಮನು ತಕ್ಷಣವೇ ಅಲ್ಲಿಗೆ ಧಾವಿಸಿ ಬಂದನು.
06059022a ಮಹತಾ ಮೇಘಘೋಷೇಣ ರಥೇನಾದಿತ್ಯವರ್ಚಸಾ।
06059022c ಚಾದಯಂ ಶರವರ್ಷೇಣ ಪರ್ಜನ್ಯ ಇವ ವೃಷ್ಟಿಮಾನ್।।
06059023a ತಮಾಯಾಂತಂ ತಥಾ ದೃಷ್ಟ್ವಾ ವ್ಯಾತ್ತಾನನಮಿವಾಂತಕಂ।
06059023c ಭೀಷ್ಮಂ ಭೀಮೋ ಮಹಾಬಾಹುಃ ಪ್ರತ್ಯುದೀಯಾದಮರ್ಷಣಃ।।
ಮಹಾಮೇಘಘೋಷದ ರಥದಲ್ಲಿ ಆದಿತ್ಯವರ್ಚನನಾಗಿ ಮಳೆಸುರಿಸುವ ಮೇಘಗಳಂತೆ ಶರವರ್ಷಗಳಿಂದ ಮುಸುಕು ಹಾಕಿದ್ದ, ಅಂತಕನಂತೆ ಬಾಯಿತೆರೆದು ಬರುತ್ತಿದ್ದ ಭೀಷ್ಮನನ್ನು ನೋಡಿ ಮಹಾಬಾಹು ಭೀಮನು ಪರಮ ಕುಪಿತನಾಗಿ ಅವನನ್ನು ಎದುರಿಸಿದನು.
06059024a ತಸ್ಮಿನ್ ಕ್ಷಣೇ ಸಾತ್ಯಕಿಃ ಸತ್ಯಸಂಧಃ ಶಿನಿಪ್ರವೀರೋಽಭ್ಯಪತತ್ಪಿತಾಮಹಂ।
06059024c ನಿಘ್ನನ್ನಮಿತ್ರಾನ್ಧನುಷಾ ದೃಢೇನ ಸ ಕಂಪಯಂಸ್ತವ ಪುತ್ರಸ್ಯ ಸೇನಾಂ।।
ಅದೇ ಕ್ಷಣದಲ್ಲಿ ಸತ್ಯಸಂಧ ಶಿನಿಪ್ರವೀರ ಸಾತ್ಯಕಿಯು ದೃಢ ಧನುಸ್ಸಿನಿಂದ ಶತ್ರುಗಳನ್ನು ಸಂಹರಿಸಿ ನಿನ್ನ ಮಗನ ಸೇನೆಯನ್ನು ನಡುಗಿಸುತ್ತಾ ಪಿತಾಮಹನ ಮೇಲೆ ಎರಗಿದನು.
06059025a ತಂ ಯಾಂತಮಶ್ವೈ ರಜತಪ್ರಕಾಶೈಃ ಶರಾನ್ಧಮಂತಂ ಧನುಷಾ ದೃಢೇನ।
06059025c ನಾಶಕ್ನುವನ್ವಾರಯಿತುಂ ತದಾನೀಂ ಸರ್ವೇ ಗಣಾ ಭಾರತ ಯೇ ತ್ವದೀಯಾಃ।।
ಭಾರತ! ರಜತಪ್ರಕಾಶದಿಂದ ಹೊಳೆಯುತ್ತಿದ್ದ ಕುದುರೆಗಳಿದ್ದ ರಥದಲ್ಲಿ ಬರುತ್ತಿದ್ದ, ದೃಢ ಧನುಸ್ಸಿನಿಂದ ಶರಗಳನ್ನು ಸುರಿಸುತ್ತಿದ್ದ ಅವನನ್ನು ನಿನ್ನ ಸರ್ವಗಣಗಳಲ್ಲಿ ಯಾರೂ ತಡೆಯಲು ಶಕ್ಯರಾಗಿರಲಿಲ್ಲ.
06059026a ಅವಿಧ್ಯದೇನಂ ನಿಶಿತೈಃ ಶರಾಗ್ರೈರ್ ಅಲಂಬುಸೋ ರಾಜವರಾರ್ಶ್ಯಶೃಂಗಿಃ।
06059026c ತಂ ವೈ ಚತುರ್ಭಿಃ ಪ್ರತಿವಿಧ್ಯ ವೀರೋ ನಪ್ತಾ ಶಿನೇರಭ್ಯಪತದ್ರಥೇನ।।
ಆಗ ರಾಕ್ಷಸ ರಾಜ ಅಲಂಬುಸನು ನಿಶಿತ ಶರಾಗ್ರಗಳಿಂದ ಅವನನ್ನು ಹೊಡೆಯಲು ಶಿನಿಪ್ರವೀರನು ಅವನನ್ನು ನಾಲ್ಕು ಬಾಣಗಳಿಂದ ಗಾಯಗೊಳಿಸಿ ಆಕ್ರಮಣ ಮಾಡಿದನು.
06059027a ಅನ್ವಾಗತಂ ವೃಷ್ಣಿವರಂ ನಿಶಮ್ಯ ಮಧ್ಯೇ ರಿಪೂಣಾಂ ಪರಿವರ್ತಮಾನಂ।
06059027c ಪ್ರಾವರ್ತಯಂತಂ ಕುರುಪುಂಗವಾಂಶ್ಚ ಪುನಃ ಪುನಶ್ಚ ಪ್ರಣದಂತಮಾಜೌ।।
ವೃಷ್ಣಿವರನು ಶತ್ರುಗಳ ಮಧ್ಯದಲ್ಲಿ ಬಾಣಗಳನ್ನು ಸುರಿಸುತ್ತಾ ತನ್ನ ಮೇಲೆ ಬೀಳಲು ಬರುತ್ತಿದ್ದ ಕುರುಪುಂಗವರನ್ನು ಬಾರಿ ಬಾರಿ ಹೊಡೆದಟ್ಟುತ್ತಿದ್ದನು.
06059028a ನಾಶಕ್ನುವನ್ವಾರಯಿತುಂ ವರಿಷ್ಠಂ ಮಧ್ಯಂದಿನೇ ಸೂರ್ಯಮಿವಾತಪಂತಂ।
06059028c ನ ತತ್ರ ಕಶ್ಚಿನ್ನವಿಷಣ್ಣ ಆಸೀದ್ ಋತೇ ರಾಜನ್ಸೋಮದತ್ತಸ್ಯ ಪುತ್ರಾತ್।।
ರಾಜನ್! ಮಧ್ಯಾಹ್ನದಲ್ಲಿ ಸುಡುತ್ತಿರುವ ಸೂರ್ಯನಂತಿದ್ದ ಆ ವರಿಷ್ಠನನ್ನು ತಡೆಯಲು ಸೋಮದತ್ತನ ಮಗನ ಹೊರತಾಗಿ ಅಲ್ಲಿ ಬೇರೆ ಯಾರೂ ಇರಲಿಲ್ಲ.
06059029a ಸ ಹ್ಯಾದದಾನೋ ಧನುರುಗ್ರವೇಗಂ ಭೂರಿಶ್ರವಾ ಭಾರತ ಸೌಮದತ್ತಿಃ।
06059029c ದೃಷ್ಟ್ವಾ ರಥಾನ್ಸ್ವಾನ್ವ್ಯಪನೀಯಮಾನಾನ್ ಪ್ರತ್ಯುದ್ಯಯೌ ಸಾತ್ಯಕಿಂ ಯೋದ್ಧುಮಿಚ್ಛನ್।।
ಭಾರತ! ತನ್ನ ರಥರು ಪಲಾಯನಮಾಡುತ್ತಿರುವುದನ್ನು ನೋಡಿ ಸಾತ್ಯಕಿಯೊಡನೆ ಪ್ರತಿಯುದ್ಧ ಮಾಡಲು ಇಚ್ಛಿಸಿ ಸೌಮದತ್ತಿ ಭೂರಿಶ್ರವನು ಉಗ್ರವೇಗದ ಧನುಸ್ಸನ್ನು ಹಿಡಿದು ಮುಂದೆ ಬಂದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಾತ್ಯಕಿಭೂರಿಶ್ರವಸಮಾಗಮೇ ಏಕೋನಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಾತ್ಯಕಿಭೂರಿಶ್ರವಸಮಾಗಮ ಎನ್ನುವ ಐವತ್ತೊಂಭತ್ತನೇ ಅಧ್ಯಾಯವು.
-
ಸೈನ್ಯದಲ್ಲಿ ಬಿರುಕು ಬೀಳುತ್ತಿತ್ತು ↩︎