056 ಭೀಷ್ಮಾರ್ಜುನದ್ವೈರಥಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 56

ಸಾರ

ಯುದ್ಧಾರಂಭ (1-20). ಭೀಷ್ಮಾರ್ಜುನರ ರಥಯುದ್ಧ (21-28).

06056001 ಸಂಜಯ ಉವಾಚ।
06056001a ವ್ಯುಷ್ಟಾಂ ನಿಶಾಂ ಭಾರತ ಭಾರತಾನಾಂ ಅನೀಕಿನೀನಾಂ ಪ್ರಮುಖೇ ಮಹಾತ್ಮಾ।
06056001c ಯಯೌ ಸಪತ್ನಾನ್ಪ್ರತಿ ಜಾತಕೋಪೋ ವೃತಃ ಸಮಗ್ರೇಣ ಬಲೇನ ಭೀಷ್ಮಃ।।

ಸಂಜಯನು ಹೇಳಿದನು: “ಭಾರತ! ರಾತ್ರಿಯು ಕಳೆಯಲು ಭಾರತರ ಸೇನೆಗಳ ಪ್ರಮುಖ ಮಹಾತ್ಮ ಭೀಷ್ಮನು ಕೋಪೋದ್ರಿಕ್ತನಾಗಿ ಸಮಗ್ರ ಸೇನೆಗಳಿಂದ ಆವೃತನಾಗಿ ದಾಯಾದಿಗಳೊಡನೆ ಯುದ್ಧಮಾಡಲು ಹೊರಟನು.

06056002a ತಂ ದ್ರೋಣದುರ್ಯೋಧನಬಾಹ್ಲಿಕಾಶ್ಚ ತಥೈವ ದುರ್ಮರ್ಷಣಚಿತ್ರಸೇನೌ।
06056002c ಜಯದ್ರಥಶ್ಚಾತಿಬಲೋ ಬಲೌಘೈರ್ ನೃಪಾಸ್ತಥಾನ್ಯೇಽನುಯಯುಃ ಸಮಂತಾತ್।।

ಅವನನ್ನು ದ್ರೋಣ, ದುರ್ಯೋಧನ, ಬಾಹ್ಲೀಕ, ಹಾಗೆಯೇ ದುರ್ಮರ್ಷಣ, ಚಿತ್ರಸೇನ, ಅತಿಬಲ ಜಯದ್ರಥರು ಇತರ ರಾಜರ ಬಲಗಳೊಂದಿಗೆ ಸುತ್ತುವರೆದು ಮುಂದುವರೆದರು.

06056003a ಸ ತೈರ್ಮಹದ್ಭಿಶ್ಚ ಮಹಾರಥೈಶ್ ಚ ತೇಜಸ್ವಿಭಿರ್ವೀರ್ಯವದ್ಭಿಶ್ಚ ರಾಜನ್।
06056003c ರರಾಜ ರಾಜೋತ್ತಮ ರಾಜಮುಖ್ಯೈರ್ ವೃತಃ ಸ ದೇವೈರಿವ ವಜ್ರಪಾಣಿಃ।।

ರಾಜನ್! ರಾಜೋತ್ತಮ! ಆ ಮಹಾತ್ಮ, ಮಹಾರಥ, ತೇಜಸ್ವಿ, ವೀರ್ಯವಂತ ರಾಜಮುಖ್ಯರಿಂದ ಆವೃತನಾದ ಅವನು ದೇವತೆಗಳಿಂದ ಸುತ್ತುವರೆಯಲ್ಪಟ್ಟ ವಜ್ರಪಾಣಿಯಂತೆ ರಾರಾಜಿಸಿದನು.

06056004a ತಸ್ಮಿನ್ನನೀಕಪ್ರಮುಖೇ ವಿಷಕ್ತಾ ದೋಧೂಯಮಾನಾಶ್ಚ ಮಹಾಪತಾಕಾಃ।
06056004c ಸುರಕ್ತಪೀತಾಸಿತಪಾಂಡುರಾಭಾ ಮಹಾಗಜಸ್ಕಂಧಗತಾ ವಿರೇಜುಃ।।

ಆ ಸೇನೆಯ ಮುಂದೆ ಸಾಗುತ್ತಿದ್ದ ಮಹಾಗಜಗಳ ಭುಜಗಳ ಮೇಲೆ ಕೆಂಪು-ಹಳದೀ-ಕಪ್ಪು-ಬಿಳೀ ಬಣ್ಣದ ಮಹಾ ಪತಾಕೆಗಳು ಹಾರಾಡುತ್ತಿದ್ದವು.

06056005a ಸಾ ವಾಹಿನೀ ಶಾಂತನವೇನ ರಾಜ್ಞಾ ಮಹಾರಥೈರ್ವಾರಣವಾಜಿಭಿಶ್ಚ।
06056005c ಬಭೌ ಸವಿದ್ಯುತ್ಸಂತನಯಿತ್ನುಕಲ್ಪಾ ಜಲಾಗಮೇ ದ್ಯೌರಿವ ಜಾತಮೇಘಾ।।

ಮಹಾರಥಗಳಿಂದ, ವಾರಣ-ವಾಜಿಗಳಿಂದ ಕೂಡಿದ್ದ ರಾಜ ಶಾಂತನುವಿನ ಆ ಸೇನೆಯು ಮಿಂಚಿನಿಂದ ಕೂಡಿದ ಮೇಘಗಳಂತೆ ಮತ್ತು ಮಳೆಬರುವ ಮುನ್ನ ದಿವಿಯಲ್ಲಿ ಮೋಡಗಳು ತುಂಬಿಕೊಂಡಿರುವಂತೆ ಕಂಡಿತು.

06056006a ತತೋ ರಣಾಯಾಭಿಮುಖೀ ಪ್ರಯಾತಾ ಪ್ರತ್ಯರ್ಜುನಂ ಶಾಂತನವಾಭಿಗುಪ್ತಾ।
06056006c ಸೇನಾ ಮಹೋಗ್ರಾ ಸಹಸಾ ಕುರೂಣಾಂ ವೇಗೋ ಯಥಾ ಭೀಮ ಇವಾಪಗಾಯಾಃ।।

ಆಗ ಶಾಂತನವನಿಂದ ರಕ್ಷಿತವಾದ ರಣಾಭಿಮುಖವಾಗಿದ್ದ ಕುರುಗಳ ಉಗ್ರ ಮಹಾಸೇನೆಯು ಸಮುದ್ರವನ್ನು ಸೇರುವ ಗಂಗೆಯಂತೆ ಭಯಂಕರ ವೇಗದಲ್ಲಿ ಅರ್ಜುನನ ಮೇಲೆ ಎರಗಿತು.

06056007a ತಂ ವ್ಯಾಲನಾನಾವಿಧಗೂಢಸಾರಂ ಗಜಾಶ್ವಪಾದಾತರಥೌಘಪಕ್ಷಂ।
06056007c ವ್ಯೂಹಂ ಮಹಾಮೇಘಸಮಂ ಮಹಾತ್ಮಾ ದದರ್ಶ ದೂರಾತ್ಕಪಿರಾಜಕೇತುಃ।।

ನಾನಾ ವಿಧದ ಗೂಢಸಾರಗಳನ್ನು ಹೊಂದಿದ್ದ, ಗಜ-ಅಶ್ವ-ಪದಾತಿ-ರಥಪಕ್ಷಗಳಿಂದ ಕೂಡಿದ್ದ ಮಹಾ ಮೇಘ ಸಮನಾಗಿದ್ದ ಆ ವ್ಯೂಹವನ್ನು ದೂರದಿಂದ ಕಪಿರಾಜಕೇತುವು ನೋಡಿದನು.

06056008a ಸ ನಿರ್ಯಯೌ ಕೇತುಮತಾ ರಥೇನ ನರರ್ಷಭಃ ಶ್ವೇತಹಯೇನ ವೀರಃ।
06056008c ವರೂಥಿನಾ ಸೈನ್ಯಮುಖೇ ಮಹಾತ್ಮಾ ವಧೇ ಧೃತಃ ಸರ್ವಸಪತ್ನಯೂನಾಂ।।

ಆ ಕೇತುಮತ ನರರ್ಷಭ ಶ್ವೇತಹಯ ವೀರ ಮಹಾತ್ಮನು ಸೈನ್ಯಮುಖದಲ್ಲಿದ್ದುಕೊಂಡು ತನ್ನವರೆಲ್ಲರಿಂದ ಆವೃತನಾಗಿ ಸೇನೆಗಳ ವಧೆಗೆಂದು ಹೊರಟನು.

06056009a ಸೂಪಸ್ಕರಂ ಸೋತ್ತರಬಂಧುರೇಷಂ ಯತ್ತಂ ಯದೂನಾಂ ಋಷಭೇಣ ಸಂಖ್ಯೇ।
06056009c ಕಪಿಧ್ವಜಂ ಪ್ರೇಕ್ಷ್ಯ ವಿಷೇದುರಾಜೌ ಸಹೈವ ಪುತ್ರೈಸ್ತವ ಕೌರವೇಯಾಃ।।

ನಿನ್ನ ಪುತ್ರರೊಂದಿಗೆ ಕೌರವೇಯರು ಉತ್ತಮ ಸೂಪಸ್ಕರಗಳಿಂದ ಕೂಡಿದ ಯದುಗಳ ಋಷಭನೊಂದಿಗಿರುವ ಕಪಿಧ್ವಜನನ್ನು ರಣದಲ್ಲಿ ನೋಡಿ ವಿಷಾದಿತರಾದರು.

06056010a ಪ್ರಕರ್ಷತಾ ಗುಪ್ತಮುದಾಯುಧೇನ ಕಿರೀಟಿನಾ ಲೋಕಮಹಾರಥೇನ।
06056010c ತಂ ವ್ಯೂಹರಾಜನ್ದದೃಶುಸ್ತ್ವದೀಯಾಶ್ ಚತುಶ್ಚತುರ್ವ್ಯಾಲಸಹಸ್ರಕೀರ್ಣಂ।।

ರಾಜನ್! ಆಯುಧಗಳನ್ನು ಎತ್ತಿಹಿಡಿದಿದ್ದ ಲೋಕಮಹಾರಥ ಕಿರೀಟಿಯಿಂದ ರಕ್ಷಿತವಾಗಿ ಮುಂದುವರೆಯುತ್ತಿದ್ದ ಆ ವ್ಯೂಹದ ನಾಲ್ಕೂ ಕಡೆಗಳಲ್ಲಿ ನಾಲ್ಕು ಸಾವಿರ ಆನೆಗಳಿದ್ದವು.

06056011a ಯಥಾ ಹಿ ಪೂರ್ವೇಽಹನಿ ಧರ್ಮರಾಜ್ಞಾ ವ್ಯೂಹಃ ಕೃತಃ ಕೌರವನಂದನೇನ।
06056011c ತಥಾ ತಥೋದ್ದೇಶಮುಪೇತ್ಯ ತಸ್ಥುಃ ಪಾಂಚಾಲಮುಖ್ಯೈಃ ಸಹ ಚೇದಿಮುಖ್ಯಾಃ।।

ಹಿಂದಿನ ದಿನ ಕೌರವನಂದನ ಧರ್ಮರಾಜನು ಹೇಗೆ ವ್ಯೂಹವನ್ನು ರಚಿಸಿದ್ದನೋ ಅದರಂತೆಯೇ ಆಯಾ ಸ್ಥಳಗಳಲ್ಲಿ ಚೇದಿಮುಖ್ಯರೊಂದಿಗೆ ಪಾಂಚಾಲಮುಖ್ಯರು ನಿಂತಿದ್ದರು.

06056012a ತತೋ ಮಹಾವೇಗಸಮಾಹತಾನಿ ಭೇರೀಸಹಸ್ರಾಣಿ ವಿನೇದುರಾಜೌ।
06056012c ಶಂಖಸ್ವನಾ ದುಂದುಭಿನಿಸ್ವನಾಶ್ಚ ಸರ್ವೇಷ್ವನೀಕೇಷು ಸಸಿಂಹನಾದಾಃ।।

ಆಗ ಮಹಾವೇಗದಿಂದ ಕೂಡಿ ಸಹಸ್ರಾರು ಭೇರಿಗಳು ಮೊಳಗಿದವು. ಎಲ್ಲ ಸೇನೆಗಳಲ್ಲಿ ಸಿಂಹನಾದಗಳೊಂದಿಗೆ ಶಂಖಸ್ವನ, ದುಂದುಭಿ ನಿಸ್ವನಗಳು ಕೇಳಿಬಂದವು.

06056013a ತತಃ ಸಬಾಣಾನಿ ಮಹಾಸ್ವನಾನಿ ವಿಸ್ಫಾರ್ಯಮಾಣಾನಿ ಧನೂಂಷಿ ವೀರೈಃ।
06056013c ಕ್ಷಣೇನ ಭೇರೀಪಣವಪ್ರಣಾದಾನ್ ಅಂತರ್ದಧುಃ ಶಂಖಮಹಾಸ್ವನಾಶ್ಚ।।

ಆಗ ವೀರರ ಬಾಣಗಳ ಮಹಾಸ್ವನಗಳು ಅವರ ಧನುಸ್ಸಿನ ಟೇಂಕಾರಗಳು ಸೇರಿ, ಕ್ಷಣದಲ್ಲಿಯೇ ಭೇರಿ-ಪಣವ-ಪ್ರಣಾದಗಳ ಮತ್ತು ಶಂಖಗಳ ಮಹಾಸ್ವನಗಳು ಕೇಳಿಬಂದವು.

06056014a ತಚ್ಚಂಖಶಬ್ದಾವೃತಮಂತರಿಕ್ಷಂ ಉದ್ಧೂತಭೌಮದ್ರುತರೇಣುಜಾಲಂ।
06056014c ಮಹಾವಿತಾನಾವತತಪ್ರಕಾಶಂ ಆಲೋಕ್ಯ ವೀರಾಃ ಸಹಸಾಭಿಪೇತುಃ।।

ಶಂಖಧ್ವನಿಯು ಅಂತರಿಕ್ಷದಲ್ಲಿ ಆವೃತವಾದುದನ್ನು, ಭೂಮಿಯಿಂದ ಮೇಲೆದ್ದ ಧೂಳಿನ ಜಾಲವು ಉಂಟಾದುದನ್ನು, ಮತ್ತು ಬೆಳಕನ್ನು ಮಹಾ ಕತ್ತಲೆಯು ಆವರಿಸಿದುದನ್ನು ನೋಡಿ ವೀರರು ತಕ್ಷಣವೇ ಮೇಲೆರಗಿದರು.

06056015a ರಥೀ ರಥೇನಾಭಿಹತಃ ಸಸೂತಃ ಪಪಾತ ಸಾಶ್ವಃ ಸರಥಃ ಸಕೇತುಃ।
06056015c ಗಜೋ ಗಜೇನಾಭಿಹತಃ ಪಪಾತ ಪದಾತಿನಾ ಚಾಭಿಹತಃ ಪದಾತಿಃ।।

ರಥಿಕನಿಂದ ಹೊಡೆಯಲ್ಪಟ್ಟ ರಥಿಕನು ಸೂತ, ಕುದುರೆ, ಧ್ವಜಗಳೊಂದಿಗೆ ಕೆಳಗುರುಳಿದನು. ಆನೆಗಳು ಆನೆಗಳಿಂದ ಹೊಡೆಯಲ್ಪಟ್ಟು ಮತ್ತು ಪದಾತಿಗಳು ಪದಾತಿಗಳಿಂದ ಹೊಡೆಯಲ್ಪಟ್ಟು ಬಿದ್ದರು.

06056016a ಆವರ್ತಮಾನಾನ್ಯಭಿವರ್ತಮಾನೈರ್ ಬಾಣೈಃ ಕ್ಷತಾನ್ಯದ್ಭುತದರ್ಶನಾನಿ।
06056016c ಪ್ರಾಸೈಶ್ಚ ಖಡ್ಗೈಶ್ಚ ಸಮಾಹತಾನಿ ಸದಶ್ವವೃಂದಾನಿ ಸದಶ್ವವೃಂದೈಃ।।

ಅಶ್ವವೃಂದಗಳು ಅಶ್ವವೃಂದಗಳಿಂದ ಆವರ್ತನ-ಪ್ರತ್ಯಾವರ್ತನಗಳಿಂದ ನಡೆದು ಬಾಣಗಳಿಂದ ಸಾಯುತ್ತಿದ್ದ, ಪ್ರಾಸ-ಖಡ್ಗಗಳಿಂದ ಸಂಹರಿಸಲ್ಪಡುತ್ತಿದ್ದ ದೃಶ್ಯವು ಅದ್ಭುತವಾಗಿತ್ತು.

06056017a ಸುವರ್ಣತಾರಾಗಣಭೂಷಿತಾನಿ ಶರಾವರಾಣಿ ಪ್ರಹಿತಾನಿ ವೀರೈಃ।
06056017c ವಿದಾರ್ಯಮಾಣಾನಿ ಪರಶ್ವಧೈಶ್ಚ ಪ್ರಾಸೈಶ್ಚ ಖಡ್ಗೈಶ್ಚ ನಿಪೇತುರುರ್ವ್ಯಾಂ।।

ವೀರರ ಸುವರ್ಣ ತಾರಾಗಣಗಳಿಂದ ವಿಭೂಷಿತ ಕತ್ತಿ ಮತ್ತು ಗುರಾಣಿಗಳು, ಪರಶಗಳು, ಪ್ರಾಸಗಳು, ಖಡ್ಗಗಳು ತುಂಡಾಗಿ ಭೂಮಿಯ ಮೇಲೆ ಬಿದ್ದಿದ್ದವು.

06056018a ಗಜೈರ್ವಿಷಾಣೈರ್ವರಹಸ್ತರುಗ್ಣಾಃ ಕೇ ಚಿತ್ಸಸೂತಾ ರಥಿನಃ ಪ್ರಪೇತುಃ।
06056018c ಗಜರ್ಷಭಾಶ್ಚಾಪಿ ರಥರ್ಷಭೇಣ ನಿಪೇತಿರೇ ಬಾಣಹತಾಃ ಪೃಥಿವ್ಯಾಂ।।

ಮದಿಸಿದ ಆನೆಗಳ ಕೋರೆದಾಡೆಗಳ ಮತ್ತು ಸೊಂಡಿಲುಗಳ ಪ್ರಹಾರದಿಂದಾಗಿ ಎಲವು ರಥಿಗಳು ಸೂತರೊಂದಿಗೆ ಬಿದ್ದರು. ಗಜರ್ಷಭರೂ ಕೂಡ ರಥರ್ಷಭರ ಬಾಣಗಳಿಂದ ಹತರಾಗಿ ಭೂಮಿಯ ಮೇಲೆ ಬಿದ್ದರು.

06056019a ಗಜೌಘವೇಗೋದ್ಧತಸಾದಿತಾನಾಂ ಶ್ರುತ್ವಾ ನಿಷೇದುರ್ವಸುಧಾಂ ಮನುಷ್ಯಾಃ।
06056019c ಆರ್ತಸ್ವರಂ ಸಾದಿಪದಾತಿಯೂನಾಂ ವಿಷಾಣಗಾತ್ರಾವರತಾಡಿತಾನಾಂ।।

ಆನೆಗಳ ಸಮೂಹಗಳು ವೇಗದಿಂದ ಬಂದು ಕುದುರೆಸವಾರರನ್ನು ಕೆಡವಿ ನೆಲದ ಮೇಲೆ ಬಿದ್ದ ಮನುಷ್ಯರ ಆಕ್ರಂದನ ಮತ್ತು ದೇಹದ ಕೆಳಗೆ ಕೋರೆದಾಡೆಗಳಿಂದ ಆಘಾತಗೊಂಡ ಕುದುರೆಸವಾರರು ಮತ್ತು ಪದಾತಿಗಳ ಆರ್ತಸ್ವರವು ಕೇಳಿಬರುತ್ತಿತ್ತು.

06056020a ಸಂಭ್ರಾಂತನಾಗಾಶ್ವರಥೇ ಪ್ರಸೂತೇ ಮಹಾಭಯೇ ಸಾದಿಪದಾತಿಯೂನಾಂ।
06056020c ಮಹಾರಥೈಃ ಸಂಪರಿವಾರ್ಯಮಾಣಂ ದದರ್ಶ ಭೀಷ್ಮಃ ಕಪಿರಾಜಕೇತುಂ।।

ಕುದುರೆ ಸವಾರರು ಮತ್ತು ಪದಾತಿಗಳ ಆ ಮಹಾಭಯದಿಂದ ನಾಗಾಶ್ವರಥಿಕರು ಸಂಭ್ರಾಂತರಾದರು. ಆಗ ಭೀಷ್ಮನು ಮಹಾರಥರಿಂದ ಪರಿವಾರಿತನಾದ ಕಪಿರಾಜಕೇತುವನ್ನು ನೋಡಿದನು.

06056021a ತಂ ಪಂಚತಾಲೋಚ್ಛ್ರಿತತಾಲಕೇತುಃ ಸದಶ್ವವೇಗೋದ್ಧತವೀರ್ಯಯಾತಃ।
06056021c ಮಹಾಸ್ತ್ರಬಾಣಾಶನಿದೀಪ್ತಮಾರ್ಗಂ ಕಿರೀಟಿನಂ ಶಾಂತನವೋಽಭ್ಯಧಾವತ್।।

ಐದು ತಾಳೇಮರಗಳಷ್ಟು ಎತ್ತರದ ತಾಲವೃಕ್ಷವೇ ಚಿಹ್ನೆಯಾಗಿದ್ದ ಧ್ವಜವುಳ್ಳ, ವೇಗಿಗಳಾದ ವೀರ ಕುದುರೆಗಳನ್ನು ಕಟ್ಟಿದ್ದ ರಥವುಳ್ಳ ಶಾಂತನವನು ಮಹಾ ಅಸ್ತ್ರಗಳನ್ನು ಹೊಂದಿದ್ದ, ಪ್ರದೀಪ್ತನಾಗಿದ್ದ ಕಿರೀಟಿಯನ್ನು ಎದುರಿಸಿದನು.

06056022a ತಥೈವ ಶಕ್ರಪ್ರತಿಮಾನಕಲ್ಪಂ ಇಂದ್ರಾತ್ಮಜಂ ದ್ರೋಣಮುಖಾಭಿಸಸ್ರುಃ।
06056022c ಕೃಪಶ್ಚ ಶಲ್ಯಶ್ಚ ವಿವಿಂಶತಿಶ್ಚ ದುರ್ಯೋಧನಃ ಸೌಮದತ್ತಿಶ್ಚ ರಾಜನ್।।

ರಾಜನ್! ಹಾಗೆಯೇ ಶಕ್ರಪ್ರತಿಮಾನಕಲ್ಪನಾದ ಇಂದ್ರಾತ್ಮಜನನ್ನು ದ್ರೋಣಪ್ರಮುಖರಾದ ಕೃಪ, ಶಲ್ಯ, ವಿವಿಂಶತಿ, ದುರ್ಯೋಧನ ಮತ್ತು ಸೌಮದತ್ತಿಯರು ಎದುರಿಸಿದರು.

06056023a ತತೋ ರಥಾನೀಕಮುಖಾದುಪೇತ್ಯ ಸರ್ವಾಸ್ತ್ರವಿತ್ಕಾಂಚನಚಿತ್ರವರ್ಮಾ।
06056023c ಜವೇನ ಶೂರೋಽಭಿಸಸಾರ ಸರ್ವಾಂಸ್ ತಥಾರ್ಜುನಸ್ಯಾತ್ರ ಸುತೋಽಭಿಮನ್ಯುಃ।।

ಆಗ ರಥಾನೀಕದ ಎದುರಿನಿಂದ ಸರ್ವಾಸ್ತ್ರವಿದು, ಕಾಂಚನ-ಬಣ್ಣದ ಕವಚಗಳನ್ನು ತೊಟ್ಟಿದ್ದ ಶೂರ ಅರ್ಜುನನ ಸುತ ಅಭಿಮನ್ಯುವು ವೇಗದಿಂದ ಅಲ್ಲಿಗೆ ಬಂದೊದಗಿದನು.

06056024a ತೇಷಾಂ ಮಹಾಸ್ತ್ರಾಣಿ ಮಹಾರಥಾನಾಂ ಅಸಕ್ತಕರ್ಮಾ ವಿನಿಹತ್ಯ ಕಾರ್ಷ್ಣಿಃ।
06056024c ಬಭೌ ಮಹಾಮಂತ್ರಹುತಾರ್ಚಿಮಾಲೀ ಸದೋಗತಃ ಸನ್ಭಗವಾನಿವಾಗ್ನಿಃ।।

ಆ ಮಹಾರಥರ ಮಹಾಸ್ತ್ರಗಳನ್ನು ನಿರಸನಗೊಳಿಸಿ ಕಾರ್ಷ್ಣಿಯು ಸಹಿಸಲಸಾಧ್ಯ ಕರ್ಮವನ್ನು ಮಾಡಿ ತೋರಿಸಿ, ಮಹಾಮತ್ರದಿಂದ ಅರ್ಪಿಸಿದ ಆಹುತಿಯನ್ನು ತೆಗೆದುಕೊಂಡ ಭಗವಾನ್ ಅಗ್ನಿಯಂತೆ ಪ್ರಜ್ವಲಿಸಿದನು.

06056025a ತತಃ ಸ ತೂರ್ಣಂ ರುಧಿರೋದಫೇನಾಂ ಕೃತ್ವಾ ನದೀಂ ವೈಶಸನೇ ರಿಪೂಣಾಂ।
06056025c ಜಗಾಮ ಸೌಭದ್ರಮತೀತ್ಯ ಭೀಷ್ಮೋ ಮಹಾರಥಂ ಪಾರ್ಥಮದೀನಸತ್ತ್ವಃ।।

ಆಗ ಬೇಗನೇ ರಕ್ತದ ನೀರು ಮತ್ತು ನೊರೆಗಳ ನದಿಯನ್ನು ರಚಿಸಿ ರಿಪುಗಳನ್ನು ಯಮನಲ್ಲಿಗೆ ಕಳುಹಿಸಿ ಅದೀನ ಸತ್ತ್ವ ಭೀಷ್ಮನು ಸೌಭದ್ರನನ್ನು ಅತಿಕ್ರಮಿಸಿ ಮಹಾರಥ ಪಾರ್ಥನಲ್ಲಿಗೆ ಹೋದನು.

06056026a ತತಃ ಪ್ರಹಸ್ಯಾದ್ಭುತದರ್ಶನೇನ ಗಾಂಡೀವನಿರ್ಹ್ವಾದಮಹಾಸ್ವನೇನ।
06056026c ವಿಪಾಠಜಾಲೇನ ಮಹಾಸ್ತ್ರಜಾಲಂ ವಿನಾಶಯಾಮಾಸ ಕಿರೀಟಮಾಲೀ।।

ಆಗ ಅವನ ಅದ್ಭುತ ದರ್ಶನದಿಂದ ನಗುತ್ತಾ ಕಿರೀಟಮಾಲಿಯು ಗಾಂಡೀವವನ್ನು ಮಹಾಸ್ವನದಿಂದ ಟೇಂಕರಿಸಿ ವಿಪಾಠಜಾಲವೆಂಬ ಮಹಾಸ್ತ್ರಜಾಲದಿಂದ ಸೇನೆಗಳನ್ನು ನಾಶಮಾಡತೊಡಗಿದನು.

06056027a ತಮುತ್ತಮಂ ಸರ್ವಧನುರ್ಧರಾಣಾಂ ಅಸಕ್ತಕರ್ಮಾ ಕಪಿರಾಜಕೇತುಃ।
06056027c ಭೀಷ್ಮಂ ಮಹಾತ್ಮಾಭಿವವರ್ಷ ತೂರ್ಣಂ ಶರೌಘಜಾಲೈರ್ವಿಮಲೈಶ್ಚ ಭಲ್ಲೈಃ।।

ಸರ್ವಧನುರ್ಧರರಲ್ಲಿ ಉತ್ತಮನಾದ ಮಹಾತ್ಮ ಭೀಷ್ಮನ ಮೇಲೆ ಅಸಕ್ತಕರ್ಮ ಕಪಿರಾಜಕೇತುವು ಬೇಗನೆ ವಿಮಲ ಭಲ್ಲಗಳ ಶರಜಾಲಗಳ ಮಳೆಯನ್ನು ಸುರಿಸಿದನು.

06056028a ಏವಂವಿಧಂ ಕಾರ್ಮುಕಭೀಮನಾದಂ ಅದೀನವತ್ಸತ್ಪುರುಷೋತ್ತಮಾಭ್ಯಾಂ।
06056028c ದದರ್ಶ ಲೋಕಃ ಕುರುಸೃಂಜಯಾಶ್ಚ ತದ್ದ್ವೈರಥಂ ಭೀಷ್ಮಧನಂಜಯಾಭ್ಯಾಂ।।

ಈ ರೀತಿ ಸತ್ಪುರುಷೋತ್ತಮರಾದ ಭೀಷ್ಮ-ಧನಂಜಯರಿಬ್ಬರ ಧನುಸ್ಸುಗಳ ಭಯಂಕರ ನಿನಾದವನ್ನೂ, ದೈನ್ಯರಹಿತ ಆ ದ್ವೈರಥಯುದ್ಧವನ್ನು ಕುರುಸೃಂಜಯರೂ ಲೋಕವೂ ನೋಡಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮಾರ್ಜುನದ್ವೈರಥೇ ಷಟ್ಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮಾರ್ಜುನದ್ವೈರಥ ಎನ್ನುವ ಐವತ್ತಾರನೇ ಅಧ್ಯಾಯವು.