055 ತೃತೀಯದಿವಸಾವಹಾರಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 55

ಸಾರ

ಭೀಷ್ಮನ ಪರಾಕ್ರಮ, ಪಾಂಡವ ಸೇನೆಯ ಪಲಾಯನ (1-39). ಭೀಷ್ಮಾರ್ಜುನರ ಯುದ್ಧ (40-63). ಕೃಷ್ಣನ ಚಕ್ರಧಾರಣೆ (64-118). ಅರ್ಜುನನು ಐಂದ್ರಾಸ್ತ್ರವನ್ನು ಪ್ರಯೋಗಿಸಿದುದು (119-127). ಮೂರನೆಯ ದಿನದ ಯುದ್ಧಸಮಾಪ್ತಿ (128-132).

06055001 ಧೃತರಾಷ್ಟ್ರ ಉವಾಚ।
06055001a ಪ್ರತಿಜ್ಞಾತೇ ತು ಭೀಷ್ಮೇಣ ತಸ್ಮಿನ್ಯುದ್ಧೇ ಸುದಾರುಣೇ।
06055001c ಕ್ರೋಧಿತೋ ಮಮ ಪುತ್ರೇಣ ದುಃಖಿತೇನ ವಿಶೇಷತಃ।।
06055002a ಭೀಷ್ಮಃ ಕಿಮಕರೋತ್ತತ್ರ ಪಾಂಡವೇಯೇಷು ಸಂಜಯ।
06055002c ಪಿತಾಮಹೇ ವಾ ಪಾಂಚಾಲಾಸ್ತನ್ಮಮಾಚಕ್ಷ್ವ ಸಂಜಯ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಆ ಸುದಾರುಣ ಯುದ್ಧದಲ್ಲಿ ನನ್ನ ಪುತ್ರನಿಂದ ಕ್ರೋಧಿತನಾಗಿ, ವಿಶೇಷವಾಗಿ ದುಃಖಿತನಾಗಿ, ಭೀಷ್ಮನು ಪ್ರತಿಜ್ಞೆಯನ್ನು ಮಾಡಲು ಭೀಷ್ಮನು ಪಾಂಡವೇಯರೊಂದಿಗೆ ಅಲ್ಲಿ ಏನು ಮಾಡಿದನು? ಸಂಜಯ! ಪಿತಾಮಹನೊಂದಿಗೆ ಪಾಂಚಾಲರು ಏನುಮಾಡಿದರು? ನನಗೆ ಹೇಳು.”

06055003 ಸಂಜಯ ಉವಾಚ।
06055003a ಗತಪೂರ್ವಾಹ್ಣಭೂಯಿಷ್ಠೇ ತಸ್ಮಿನ್ನಹನಿ ಭಾರತ।
06055003c ಜಯಂ ಪ್ರಾಪ್ತೇಷು ಹೃಷ್ಟೇಷು ಪಾಂಡವೇಷು ಮಹಾತ್ಮಸು।।

ಸಂಜಯನು ಹೇಳಿದನು: “ಭಾರತ! ಆದಿನದ ಪೂರ್ವಾಹ್ಣವು ಹೆಚ್ಚಾಗಿ ಕಳೆದುಹೋಗಿರಲು ಜಯವನ್ನು ಪಡೆದ ಮಹಾತ್ಮ ಪಾಂಡವರು ಹೃಷ್ಟರಾಗಿದ್ದರು.

06055004a ಸರ್ವಧರ್ಮವಿಶೇಷಜ್ಞಃ ಪಿತಾ ದೇವವ್ರತಸ್ತವ।
06055004c ಅಭ್ಯಯಾಜ್ಜವನೈರಶ್ವೈಃ ಪಾಂಡವಾನಾಮನೀಕಿನೀಂ।
06055004e ಮಹತ್ಯಾ ಸೇನಯಾ ಗುಪ್ತಸ್ತವ ಪುತ್ರೈಶ್ಚ ಸರ್ವಶಃ।।

ಸರ್ವಧರ್ಮಗಳ ವಿಶೇಷಜ್ಞ, ನಿನ್ನ ಪಿತ ದೇವವ್ರತನು ವೇಗಿ ಅಶ್ವಗಳೊಂದಿಗೆ, ನಿನ್ನ ಪುತ್ರನ ಮಹಾ ಸೇನೆಯಿಂದ ಎಲ್ಲಕಡೆಗಳಿಂದಲೂ ರಕ್ಷಿತನಾಗಿ ಪಾಂಡವ ಸೇನೆಯನ್ನು ಎದುರಿಸಿದನು.

06055005a ಪ್ರಾವರ್ತತ ತತೋ ಯುದ್ಧಂ ತುಮುಲಂ ಲೋಮಹರ್ಷಣಂ।
06055005c ಅಸ್ಮಾಕಂ ಪಾಂಡವೈಃ ಸಾರ್ಧಮನಯಾತ್ತವ ಭಾರತ।।

ಆಗ ಭಾರತ! ನಮ್ಮವರು ಮತ್ತು ನಿನ್ನ ಪಾಂಡವರೊಡನೆ ಲೋಮಹರ್ಷಣ ತುಮುಲ ಯುದ್ಧವು ಪ್ರಾರಂಭವಾಯಿತು.

06055006a ಧನುಷಾಂ ಕೂಜತಾಂ ತತ್ರ ತಲಾನಾಂ ಚಾಭಿಹನ್ಯತಾಂ।
06055006c ಮಹಾನ್ಸಮಭವಚ್ಚಬ್ದೋ ಗಿರೀಣಾಮಿವ ದೀರ್ಯತಾಂ।।

ಗಿರಿಗಳು ಸೀಳಿಹೋಗುತ್ತಿವೆಯೋ ಎನ್ನುವಂತೆ ಅಲ್ಲಿ ಧನುಸ್ಸುಗಳ ಠೇಂಕಾರ ಮತ್ತು ಚಪ್ಪಾಳೆಗಳ ಮಹಾ ಶಬ್ಧವುಂಟಾಯಿತು.

06055007a ತಿಷ್ಠ ಸ್ಥಿತೋಽಸ್ಮಿ ವಿದ್ಧ್ಯೇನಂ ನಿವರ್ತಸ್ವ ಸ್ಥಿರೋ ಭವ।
06055007c ಸ್ಥಿತೋಽಸ್ಮಿ ಪ್ರಹರಸ್ವೇತಿ ಶಬ್ದಾಃ ಶ್ರೂಯಂತ ಸರ್ವಶಃ।।

“ನಿಲ್ಲು!”, “ನಿಂತಿದ್ದೇನೆ!”, “ಇಗೋ ಹೊಡೆಯುತ್ತೇನೆ!”, “ಪಲಾಯನ ಮಾಡು!”, “ಸ್ಥಿರನಾಗಿರು!”, “ಸ್ಥಿರನಾಗಿದ್ದೇನೆ. ಪ್ರಹರಿಸು!” ಎಂಬ ಶಬ್ಧಗಳು ಎಲ್ಲೆಡೆಯಲ್ಲಿ ಕೇಳಿಬಂದವು.

06055008a ಕಾಂಚನೇಷು ತನುತ್ರೇಷು ಕಿರೀಟೇಷು ಧ್ವಜೇಷು ಚ।
06055008c ಶಿಲಾನಾಮಿವ ಶೈಲೇಷು ಪತಿತಾನಾಮಭೂತ್ಸ್ವನಃ।।

ಬಂಗಾರದ ಕವಚಗಳ ಮೇಲೆ, ಕಿರೀಟ-ಧ್ವಜಗಳ ಮೇಲೆ ಬೀಳುತ್ತಿದ್ದ ಶಸ್ತ್ರಾಸ್ತ್ರಗಳ ಧ್ವನಿಯು ಪರ್ವತಗಳ ಮೇಲೆ ಬೀಳುವ ಕಲ್ಲುಗಳ ಧ್ವನಿಯನ್ನು ಹೋಲುತ್ತಿತ್ತು.

06055009a ಪತಿತಾನ್ಯುತ್ತಮಾಂಗಾನಿ ಬಾಹವಶ್ಚ ವಿಭೂಷಿತಾಃ।
06055009c ವ್ಯಚೇಷ್ಟಂತ ಮಹೀಂ ಪ್ರಾಪ್ಯ ಶತಶೋಽಥ ಸಹಸ್ರಶಃ।।

ನೂರಾರು ಸಹಸ್ರಾರು ವಿಭೂಷಿತ ಉತ್ತಮಾಂಗಗಳು ಮತ್ತು ಬಾಹುಗಳು ಭೂಮಿಯ ಮೇಲೆ ಬಿದ್ದು ಕುಣಿಯುತ್ತಿದ್ದವು.

06055010a ಹೃತೋತ್ತಮಾಂಗಾಃ ಕೇ ಚಿತ್ತು ತಥೈವೋದ್ಯತಕಾರ್ಮುಕಾಃ।
06055010c ಪ್ರಗೃಹೀತಾಯುಧಾಶ್ಚಾಪಿ ತಸ್ಥುಃ ಪುರುಷಸತ್ತಮಾಃ।।

ಕೆಲವೆಡೆ ರುಂಡವನ್ನು ಕಳೆದುಕೊಂಡಿದ್ದರೂ ಪುರುಷಸತ್ತಮರ ಮುಂಡಗಳು ಧನುಸ್ಸುಗಳನ್ನು ಮತ್ತು ಇತರ ಆಯುಧಗಳನ್ನು ಎತ್ತಿ ಹಿಡಿದು ನಿಲ್ಲುತ್ತಿದ್ದವು.

06055011a ಪ್ರಾವರ್ತತ ಮಹಾವೇಗಾ ನದೀ ರುಧಿರವಾಹಿನೀ।
06055011c ಮಾತಂಗಾಂಗಶಿಲಾರೌದ್ರಾ ಮಾಂಸಶೋಣಿತಕರ್ದಮಾ।।

ಆಗ ಮಹಾವೇಗದಿಂದ, ಆನೆಗಳ ಅಂಗಾಂಗಗಳೇ ರೌದ್ರಶಿಲೆಗಳಾಗಿ, ಮಾಂಸ-ರಕ್ತಗಳ ಮಿಶ್ರಣದ ಕೆಸರಿನ ರಕ್ತವಾಹಿನೀ ನದಿಯು ಹರಿಯತೊಡಗಿತು.

06055012a ವರಾಶ್ವನರನಾಗಾನಾಂ ಶರೀರಪ್ರಭವಾ ತದಾ।
06055012c ಪರಲೋಕಾರ್ಣವಮುಖೀ ಗೃಧ್ರಗೋಮಾಯುಮೋದಿನೀ।।

ಶ್ರೇಷ್ಠ ಅಶ್ವ-ನರ-ನಾಗಗಳ ಶರೀರಗಳಿಂದ ಹುಟ್ಟಿದ ಅದು ನರಿ-ಹದ್ದುಗಳಿಗೆ ಸಂತೋಷವನ್ನು ನೀಡುತ್ತಾ ಪರಲೋಕದ ಮುಖವಾಗಿ ಹರಿಯುತ್ತಿತ್ತು.

06055013a ನ ದೃಷ್ಟಂ ನ ಶ್ರುತಂ ಚಾಪಿ ಯುದ್ಧಮೇತಾದೃಶಂ ನೃಪ।
06055013c ಯಥಾ ತವ ಸುತಾನಾಂ ಚ ಪಾಂಡವಾನಾಂ ಚ ಭಾರತ।।

ಭಾರತ! ನೃಪ! ನಿನ್ನ ಮಕ್ಕಳ ಮತ್ತು ಪಾಂಡವರ ನಡೆದ ಯುದ್ಧದಂತೆ ಹಿಂದೆ ಏನನ್ನೂ ನೋಡಿರಲಿಲ್ಲ ಅಥವಾ ಕೇಳಿರಲಿಲ್ಲ.

06055014a ನಾಸೀದ್ರಥಪಥಸ್ತತ್ರ ಯೋಧೈರ್ಯುಧಿ ನಿಪಾತಿತೈಃ।
06055014c ಗಜೈಶ್ಚ ಪತಿತೈರ್ನೀಲೈರ್ಗಿರಿಶೃಂಗೈರಿವಾವೃತಂ।।

ಯುದ್ಧದಲ್ಲಿ ಕೆಳಬಿದ್ದಿದ್ದ ಯೋಧರಿಂದ ಮತ್ತು ನೀಲಗಿರಿಶೃಂಗಗಳಂತೆ ಬಿದ್ದಿರುವ ಆನೆಗಳಿಂದ ಶೃಂಗಗಳಿಂದ ಆವೃತವಾಗಿರುವ ಅಲ್ಲಿ ರಥಗಳು ಚಲಿಸಲೂ ದಾರಿಯಿರಲಿಲ್ಲ.

06055015a ವಿಕೀರ್ಣೈಃ ಕವಚೈಶ್ಚಿತ್ರೈರ್ ಧ್ವಜೈಶ್ಚತ್ರೈಶ್ಚ ಮಾರಿಷ।
06055015c ಶುಶುಭೇ ತದ್ರಣಸ್ಥಾನಂ ಶರದೀವ ನಭಸ್ತಲಂ।।

ಮಾರಿಷ! ಅಲ್ಲಿ ಹರಡಿ ಬಿದ್ದಿದ್ದ ಕವಚ, ಬಣ್ಣಬಣ್ಣದ ಧ್ವಜಗಳು ಮತ್ತು ಛತ್ರಗಳಿಂದ ಆ ರಣಸ್ಥಾನವು ಶರತ್ಕಾಲದ ನಭಸ್ತಲದಂತಿ ಶೋಭಿಸುತ್ತಿತ್ತು.

06055016a ವಿನಿರ್ಭಿನ್ನಾಃ ಶರೈಃ ಕೇ ಚಿದಂತಪೀಡಾವಿಕರ್ಷಿಣಃ।
06055016c ಅಭೀತಾಃ ಸಮರೇ ಶತ್ರೂನಭ್ಯಧಾವಂತ ದಂಶಿತಾಃ।।

ಕೆಲವರು ತಮ್ಮ ಕರುಳುಗಳು ಶರಗಳಿಂದ ಕತ್ತರಿಸಲ್ಪಟ್ಟು ಹೊರಬಂದು ಪೀಡಿತರಾಗಿದ್ದರೂ ಸಮರದಲ್ಲಿ ಅಭೀತರಾಗಿ ಕೋಪದಿಂದ ಶತ್ರುಗಳನ್ನು ಬೆನ್ನಟ್ಟಿ ಓಡುತ್ತಿದ್ದರು.

06055017a ತಾತ ಭ್ರಾತಃ ಸಖೇ ಬಂಧೋ ವಯಸ್ಯ ಮಮ ಮಾತುಲ।
06055017c ಮಾ ಮಾಂ ಪರಿತ್ಯಜೇತ್ಯನ್ಯೇ ಚುಕ್ರುಶುಃ ಪತಿತಾ ರಣೇ।।

ರಣದಲ್ಲಿ ಬಿದ್ದಿರುವವರು “ತಾತ! ಭ್ರಾತ! ಸಖ! ಬಂಧೋ! ನನ್ನ ಮಾವ! ನನ್ನನ್ನು ಮೇಲೆತ್ತು! ನನ್ನನ್ನು ಬಿಟ್ಟುಹೋಗಬೇಡ!” ಎಂದು ಕೆಲವರು ಕೂಗುತ್ತಿದ್ದರು.

06055018a ಆಧಾವಾಭ್ಯೇಹಿ ಮಾ ಗಚ್ಛ ಕಿಂ ಭೀತೋಽಸಿ ಕ್ವ ಯಾಸ್ಯಸಿ।
06055018c ಸ್ಥಿತೋಽಹಂ ಸಮರೇ ಮಾ ಭೈರಿತಿ ಚಾನ್ಯೇ ವಿಚುಕ್ರುಶುಃ।।

ಅನ್ಯರು “ಎದ್ದು ಬಾ!”, “ಹೋಗಬೇಡ!”. “ಏತಕ್ಕೆ ಹೆದರುತ್ತೀಯೆ?”, “ಎಲ್ಲಿಗೆ ಹೋಗುತ್ತಿರುವೆ?” “ಸಮರದಲ್ಲಿ ನಾನು ಸ್ಥಿತನಾಗಿದ್ದೇನೆ. ಹೆದರದಿರು!” ಎಂದು ಕೂಗುತ್ತಿದ್ದರು.

06055019a ತತ್ರ ಭೀಷ್ಮಃ ಶಾಂತನವೋ ನಿತ್ಯಂ ಮಂಡಲಕಾರ್ಮುಕಃ।
06055019c ಮುಮೋಚ ಬಾಣಾನ್ದೀಪ್ತಾಗ್ರಾನಹೀನಾಶೀವಿಷಾನಿವ।।

ಅಲ್ಲಿ ಶಾಂತನವ ಭೀಷ್ಮನು ಕಾರ್ಮುಕವನ್ನು ನಿತ್ಯವೂ ಮಂಡಲಾಕಾರವಾಗಿರಿಸಿಕೊಂಡು ಉರಿಯುತ್ತಿದ್ದ ವಿಷಸರ್ಪೋಮ ಬಾಣಗಳನ್ನು ಪ್ರಯೋಗಿಸಿದನು.

06055020a ಶರೈರೇಕಾಯನೀಕುರ್ವನ್ದಿಶಃ ಸರ್ವಾ ಯತವ್ರತಃ।
06055020c ಜಘಾನ ಪಾಂಡವರಥಾನಾದಿಶ್ಯಾದಿಶ್ಯ ಭಾರತ।।

ಭಾರತ! ಆ ಯತವ್ರತನು ಶರಗಳಿಂದ ದಿಕ್ಕುಗಳೆಲ್ಲವನ್ನೂ ಒಂದಾಗಿಸಿ ಪಾಂಡವರ ರಥಗಳನ್ನು ನೋಡಿ ನೋಡಿ ಹೊಡೆದನು.

06055021a ಸ ನೃತ್ಯನ್ವೈ ರಥೋಪಸ್ಥೇ ದರ್ಶಯನ್ಪಾಣಿಲಾಘವಂ।
06055021c ಅಲಾತಚಕ್ರವದ್ರಾಜಂಸ್ತತ್ರ ತತ್ರ ಸ್ಮ ದೃಶ್ಯತೇ।।

ಅವನು ತನ್ನ ಕೈಚಳಕವನ್ನು ಪ್ರದರ್ಶಿಸುತ್ತಾ ರಥದಲ್ಲಿ ನಿಂತು ನೃತ್ಯವಾಡುತ್ತಿರುವ ಉರಿಯುವ ಕೊಳ್ಳಿಯ ಗಾಲಿಯಂತೆ ಅಲ್ಲಲ್ಲಿ ಕಾಣುತ್ತಿದ್ದನು.

06055022a ತಮೇಕಂ ಸಮರೇ ಶೂರಂ ಪಾಂಡವಾಃ ಸೃಂಜಯಾಸ್ತಥಾ।
06055022c ಅನೇಕಶತಸಾಹಸ್ರಂ ಸಮಪಶ್ಯಂತ ಲಾಘವಾತ್।।

ಸಮರದಲ್ಲಿ ಆ ಶೂರನು ಒಬ್ಬನೇ ಆಗಿದ್ದರೂ ಅವನ ಹಸ್ತಲಾಘವದಿಂದ ಪಾಂಡವ-ಸೃಂಜಯರಿಗೆ ಅವನು ಅನೇಕ ಲಕ್ಷಗಳಂತೆ ಕಾಣುತ್ತಿದ್ದನು.

06055023a ಮಾಯಾಕೃತಾತ್ಮಾನಮಿವ ಭೀಷ್ಮಂ ತತ್ರ ಸ್ಮ ಮೇನಿರೇ।
06055023c ಪೂರ್ವಸ್ಯಾಂ ದಿಶಿ ತಂ ದೃಷ್ಟ್ವಾ ಪ್ರತೀಚ್ಯಾಂ ದದೃಶುರ್ಜನಾಃ।।

ಭೀಷ್ಮನು ಮಾಯೆಯಿಂದ ತನ್ನನ್ನು ಅನೇಕರೂಪಗಳನ್ನಾಗಿ ಮಾಡಿಕೊಂಡಿರಬಹುದೆಂದು ಅಲ್ಲಿರುವವರು ಭಾವಿಸಿದರು. ಪೂರ್ವದಲ್ಲಿ ಅವನನ್ನು ನೋಡಿದ ಜನರು ಪಶ್ಚಿಮದಲ್ಲಿಯೂ ಅವನನ್ನು ನೋಡುತ್ತಿದ್ದರು.

06055024a ಉದೀಚ್ಯಾಂ ಚೈನಮಾಲೋಕ್ಯ ದಕ್ಷಿಣಸ್ಯಾಂ ಪುನಃ ಪ್ರಭೋ।
06055024c ಏವಂ ಸ ಸಮರೇ ವೀರೋ ಗಾಂಗೇಯಃ ಪ್ರತ್ಯದೃಶ್ಯತ।।

ಪ್ರಭೋ! ಉತ್ತರದಲ್ಲಿ ಒಂದು ಕ್ಷಣ ಕಾಣಿಸಿಕೊಂಡರೆ ಪುನಃ ದಕ್ಷಿಣದಲ್ಲಿ ಕಾಣಿಸಿಕೊಳ್ಳುತ್ತಿದ್ದನು. ಹೀಗೆ ಸಮರದಲ್ಲಿ ವೀರ ಗಾಂಗೇಯನು ಕಾಣುತ್ತಿದ್ದನು.

06055025a ನ ಚೈನಂ ಪಾಂಡವೇಯಾನಾಂ ಕಶ್ಚಿಚ್ಚಕ್ನೋತಿ ವೀಕ್ಷಿತುಂ।
06055025c ವಿಶಿಖಾನೇವ ಪಶ್ಯಂತಿ ಭೀಷ್ಮಚಾಪಚ್ಯುತಾನ್ಬಹೂನ್।।

ಪಾಂಡವರು ಕೇವಲ ಅವನ ಚಾಪದಿಂದ ಬರುತ್ತಿರುವ ಅನೇಕ ವಿಶಿಖ ಬಾಣಗಳನ್ನು ಕಾಣುತ್ತಿದ್ದರೇ ಹೊರತು ಅವನನ್ನು ನೋಡಲು ಶಕ್ಯರಾಗಿರಲಿಲ್ಲ.

06055026a ಕುರ್ವಾಣಂ ಸಮರೇ ಕರ್ಮ ಸೂದಯಾನಂ ಚ ವಾಹಿನೀಂ।
06055026c ವ್ಯಾಕ್ರೋಶಂತ ರಣೇ ತತ್ರ ವೀರಾ ಬಹುವಿಧಂ ಬಹು।
06055026e ಅಮಾನುಷೇಣ ರೂಪೇಣ ಚರಂತಂ ಪಿತರಂ ತವ।।

ಸಮರದಲ್ಲಿ ವಾಹಿನಿಯನ್ನು ಸಂಹರಿಸುವ ಕೆಲಸವನ್ನು ಮಾಡುತ್ತಾ ಅಮಾನುಷ ರೂಪದಿಂದ ರಣದಲ್ಲಿ ಸಂಚರಿಸುತ್ತಿರುವ ನಿನ್ನ ಪಿತನ ಕುರಿತು ಅಲ್ಲಿದ್ದ ಅನೇಕ ವೀರರು ಬಹುವಿಧಗಳಲ್ಲಿ ಮಾತನಾಡಿಕೊಳ್ಳುತ್ತಿದ್ದರು.

06055027a ಶಲಭಾ ಇವ ರಾಜಾನಃ ಪತಂತಿ ವಿಧಿಚೋದಿತಾಃ।
06055027c ಭೀಷ್ಮಾಗ್ನಿಮಭಿ ಸಂಕ್ರುದ್ಧಂ ವಿನಾಶಾಯ ಸಹಸ್ರಶಃ।।

“ಪತಂಗಗಳಂತೆ ವಿಧಿಚೋದಿತರಾಗಿ ಸಹಸ್ರರ ವಿನಾಶಕ್ಕಾಗಿ ಸಂಕ್ರುದ್ಧನಾಗಿರುವ ಭೀಷ್ಮನೆಂಬ ಅಗ್ನಿಯಲ್ಲಿ ರಾಜರು ಬೀಳುತ್ತಿದ್ದಾರೆ.”

06055028a ನ ಹಿ ಮೋಘಃ ಶರಃ ಕಶ್ಚಿದಾಸೀದ್ಭೀಷ್ಮಸ್ಯ ಸಂಯುಗೇ।
06055028c ನರನಾಗಾಶ್ವಕಾಯೇಷು ಬಹುತ್ವಾಲ್ಲಘುವೇಧಿನಃ।।

ಸಂಯುಗದಲ್ಲಿ ಲಘುವೇಧಿ ಭೀಷ್ಮನು ನರ-ನಾಗ-ಅಶ್ವಗಳ ಮೇಲೆ ಬಿಟ್ಟ ಅನೇಕ ಶರಗಳಲ್ಲಿ ಯಾವುದೂ ವ್ಯರ್ಥವಾಗುತ್ತಿರಲಿಲ್ಲ.

06055029a ಭಿನತ್ತ್ಯೇಕೇನ ಬಾಣೇನ ಸುಮುಕ್ತೇನ ಪತತ್ರಿಣಾ।
06055029c ಗಜಕಂಕಟಸನ್ನಾಹಂ ವಜ್ರೇಣೇವಾಚಲೋತ್ತಮಂ।।

ಚೆನ್ನಾಗಿ ಚೂಪಾಗಿರುವ ಒಂದೇ ಒಂದು ಪತತ್ರಿ ಬಾಣದಿಂದಲೇ ವಜ್ರದಿಂದ ಉತ್ತಮ ಪರ್ವತವನ್ನು ಹೇಗೋ ಹಾಗೆ ಮುಳ್ಳಿನ ಕವಚಗಳಿಂದ ಕೂಡಿದ ಆನೆಗಳನ್ನು ಸೀಳಿಬಿಡುತ್ತಿದ್ದನು.

06055030a ದ್ವೌ ತ್ರೀನಪಿ ಗಜಾರೋಹಾನ್ಪಿಂಡಿತಾನ್ವರ್ಮಿತಾನಪಿ।
06055030c ನಾರಾಚೇನ ಸುತೀಕ್ಷ್ಣೇನ ನಿಜಘಾನ ಪಿತಾ ತವ।।

ನಿನ್ನ ತಂದೆಯು ಒಂದೇ ಒಂದು ಸುತೀಕ್ಷ್ಣ ನಾರಾಚದಿಂದ ಕವಚಗಳನ್ನು ಧರಿಸಿದ್ದ ಎರಡು ಅಥವಾ ಮೂರು ಗಜಾರೋಹಿಗಳನ್ನು ಸೇರಿಸಿ ಕೊಲ್ಲುತ್ತಿದ್ದನು.

06055031a ಯೋ ಯೋ ಭೀಷ್ಮಂ ನರವ್ಯಾಘ್ರಮಭ್ಯೇತಿ ಯುಧಿ ಕಶ್ಚನ।
06055031c ಮುಹೂರ್ತದೃಷ್ಟಃ ಸ ಮಯಾ ಪಾತಿತೋ ಭುವಿ ದೃಶ್ಯತೇ।।

ನರವ್ಯಾಘ್ರ! ಯುದ್ಧದಲ್ಲಿ ಯಾರು ಯಾರು ಯಾವಾಗಲಾದರೂ ಭೀಷ್ಮನನ್ನು ಎದುರಿಸಿದರೆಂದರೆ ಮುಹೂರ್ತದಲ್ಲಿಯೇ ಅವರು ನೆಲದಮೇಲೆ ಬೀಳುತ್ತಿರುವ ದೃಶ್ಯವನ್ನು ನಾನು ನೋಡುತ್ತಿದ್ದೆ.

06055032a ಏವಂ ಸಾ ಧರ್ಮರಾಜಸ್ಯ ವಧ್ಯಮಾನಾ ಮಹಾಚಮೂಃ।
06055032c ಭೀಷ್ಮೇಣಾತುಲವೀರ್ಯೇಣ ವ್ಯಶೀರ್ಯತ ಸಹಸ್ರಧಾ।।

ಹೀಗೆ ಭೀಷ್ಮನ ಅತುಲ ವೀರ್ಯದಿಂದ ವಧಿಸಲ್ಪಟ್ಟ ಧರ್ಮರಾಜನ ಮಹಾಸೇನೆಯು ಸಹಸ್ರಭಾಗಗಳಾಗಿ ಒಡೆದು ಹೋಯಿತು.

06055033a ಪ್ರಕೀರ್ಯತ ಮಹಾಸೇನಾ ಶರವರ್ಷಾಭಿತಾಪಿತಾ।
06055033c ಪಶ್ಯತೋ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ।।

ಮಹಾತ್ಮ ವಾಸುದೇವ-ಪಾರ್ಥರು ನೋಡುತ್ತಿದ್ದಂತೆಯೇ ಶರವರ್ಷಗಳಿಂದ ತಾಪಿತ ಮಹಾಸೇನೆಯು ಚೆಲ್ಲಾಪಿಲ್ಲಿಯಾಯಿತು.

06055034a ಯತಮಾನಾಪಿ ತೇ ವೀರಾ ದ್ರವಮಾಣಾನ್ಮಹಾರಥಾನ್।
06055034c ನಾಶಕ್ನುವನ್ವಾರಯಿತುಂ ಭೀಷ್ಮಬಾಣಪ್ರಪೀಡಿತಾಃ।।

ಭೀಷ್ಮನ ಬಾಣಗಳಿಂದ ಪೀಡಿತರಾಗಿ ಓಡಿ ಹೋಗುತ್ತಿರುವ ಮಹಾರಥರನ್ನು ನಿಲ್ಲಿಸಲು ಪ್ರಯತ್ನಿಸಿದರೂ ಆ ವೀರರಿಗೆ ಸಾಧ್ಯವಾಗಲಿಲ್ಲ.

06055035a ಮಹೇಂದ್ರಸಮವೀರ್ಯೇಣ ವಧ್ಯಮಾನಾ ಮಹಾಚಮೂಃ।
06055035c ಅಭಜ್ಯತ ಮಹಾರಾಜ ನ ಚ ದ್ವೌ ಸಹ ಧಾವತಃ।।

ಮಹಾರಾಜ! ಮಹೇಂದ್ರಸಮ ವೀರನಿಂದ ವಧಿಸಲ್ಪಡುತ್ತಿರುವ ಆ ಮಹಾಸೇನೆಯು ಒಡೆದುಹೋಯಿತು. ಇಬ್ಬರೂ ಒಟ್ಟಿಗೇ ಓಡಿಹೋಗುತ್ತಿರುವವರನ್ನು ನಿಲ್ಲಿಸಲಾಗುತ್ತಿರಲಿಲ್ಲ.

06055036a ಆವಿದ್ಧನರನಾಗಾಶ್ವಂ ಪತಿತಧ್ವಜಕೂಬರಂ।
06055036c ಅನೀಕಂ ಪಾಂಡುಪುತ್ರಾಣಾಂ ಹಾಹಾಭೂತಮಚೇತನಂ।।

ವಧಿಸಲ್ಪಟ್ಟ ನರ-ನಾಗಾಶ್ವಗಳಿಂದ, ಕೆಳಗೆ ಬಿದ್ದ ಧ್ವಜಕೂಬರಗಳಿಂದ ಪಾಂಡುಪುತ್ರರ ಸೇನೆಯು ಹಾಹಾಕಾರಮಾಡಿ ಚೇತನವನ್ನು ಕಳೆದುಕೊಂಡಿತು.

06055037a ಜಘಾನಾತ್ರ ಪಿತಾ ಪುತ್ರಂ ಪುತ್ರಶ್ಚ ಪಿತರಂ ತಥಾ।
06055037c ಪ್ರಿಯಂ ಸಖಾಯಂ ಚಾಕ್ರಂದೇ ಸಖಾ ದೈವಬಲಾತ್ಕೃತಃ।।

ಅಲ್ಲಿ ದೈವಬಲವೇ ಮಾಡುವಂತೆ ತಂದೆಯರು ಪುತ್ರರನ್ನು, ಪುತ್ರರು ತಂದೆಯನ್ನು, ಪ್ರಿಯರು ಸಖರನ್ನು ಸಂಹರಿಸಿದರು.

06055038a ವಿಮುಚ್ಯ ಕವಚಾನನ್ಯೇ ಪಾಂಡುಪುತ್ರಸ್ಯ ಸೈನಿಕಾಃ।
06055038c ಪ್ರಕೀರ್ಯ ಕೇಶಾನ್ಧಾವಂತಃ ಪ್ರತ್ಯದೃಶ್ಯಂತ ಭಾರತ।।

ಭಾರತ! ಪಾಂಡುಪುತ್ರರ ಕೆಲವು ಸೈನಿಕರು ಕವಚಗಳನ್ನು ಕಳಚಿ, ಕೂದಲು ಬಿಚ್ಚಿ ಓಡಿಹೋಗುತ್ತಿರುವುದು ಕಂಡುಬಂದಿತು.

06055039a ತದ್ಗೋಕುಲಮಿವೋದ್ಭ್ರಾಂತಮುದ್ಭ್ರಾಂತರಥಯೂಥಪಂ।
06055039c ದದೃಶೇ ಪಾಂಡುಪುತ್ರಸ್ಯ ಸೈನ್ಯಮಾರ್ತಸ್ವರಂ ತದಾ।।

ಪಾಂಡುಪುತ್ರನ ಸೇನೆಯ ರಥಯೂಥಪರು ಭ್ರಾಂತಗೊಂಡ ಗೋವುಗಳ ಸಮೂಹದಂತೆ ಭ್ರಾಂತರಾಗಿ ಆರ್ತಸ್ವರದಲ್ಲಿ ಕೂಗುತ್ತಾ ಓಡಿಹೋಗುತ್ತಿರುವುದು ಕಂಡುಬಂದಿತು.

06055040a ಪ್ರಭಜ್ಯಮಾನಂ ತತ್ಸೈನ್ಯಂ ದೃಷ್ಟ್ವಾ ದೇವಕಿನಂದನಃ।
06055040c ಉವಾಚ ಪಾರ್ಥಂ ಬೀಭತ್ಸುಂ ನಿಗೃಹ್ಯ ರಥಮುತ್ತಮಂ।।

ಒಡೆದುಹೋಗುತ್ತಿರುವ ಆ ಸೈನ್ಯವನ್ನು ನೋಡಿ ದೇವಕಿನಂದನನು ಉತ್ತಮ ರಥವನ್ನು ಹಿಡಿದು ನಿಲ್ಲಿಸಿ ಪಾರ್ಥ ಬೀಭತ್ಸುವಿಗೆ ಹೇಳಿದನು:

06055041a ಅಯಂ ಸ ಕಾಲಃ ಸಂಪ್ರಾಪ್ತಃ ಪಾರ್ಥ ಯಃ ಕಾಂಕ್ಷಿತಸ್ತ್ವಯಾ।
06055041c ಪ್ರಹರಾಸ್ಮೈ ನರವ್ಯಾಘ್ರ ನ ಚೇನ್ಮೋಹಾದ್ವಿಮುಹ್ಯಸೇ।।

“ಪಾರ್ಥ! ನೀನು ಬಯಸುತ್ತಿದ್ದ ಸಮಯವು ಈಗ ಬಂದೊದಗಿದೆ. ನರವ್ಯಾಘ್ರ! ಮೋಹವೇನಾದರೂ ಇದ್ದರೆ ಅದನ್ನು ಕೊಡವಿ ಹಾಕಿ ಇವನನ್ನು ಹೊಡೆ!

06055042a ಯತ್ತ್ವಯಾ ಕಥಿತಂ ವೀರ ಪುರಾ ರಾಜ್ಞಾಂ ಸಮಾಗಮೇ।
06055042c ಭೀಷ್ಮದ್ರೋಣಮುಖಾನ್ಸರ್ವಾನ್ಧಾರ್ತರಾಷ್ಟ್ರಸ್ಯ ಸೈನಿಕಾನ್।।
06055043a ಸಾನುಬಂಧಾನ್ ಹನಿಷ್ಯಾಮಿ ಯೇ ಮಾಂ ಯೋತ್ಸ್ಯಂತಿ ಸಂಯುಗೇ।
06055043c ಇತಿ ತತ್ಕುರು ಕೌಂತೇಯ ಸತ್ಯಂ ವಾಕ್ಯಮರಿಂದಮ।।

ವೀರ! ಕೌಂತೇಯ! ಅರಿಂದಮ! ಹಿಂದೆ ನೀನು ರಾಜರ ಸಮಾಗಮದಲ್ಲಿ ಭೀಷ್ಮ-ದ್ರೋಣ ಪ್ರಮುಖರೆಲ್ಲರನ್ನೂ, ಧಾರ್ತರಾಷ್ಟ್ರನ ಸೈನಿಕರನ್ನೂ, ಅವರ ಅನುಯಾಯಿಗಳೊಂದಿಗೆ ಸಂಯುಗದಲ್ಲಿ ಯಾರು ನನ್ನೊಂದಿಗೆ ಯುದ್ಧಮಾಡುವರೋ ಅವರನ್ನು ಸಂಹರಿಸುತ್ತೇನೆ ಎಂದು ಹೇಳಿದ್ದೆಯಲ್ಲ ಆ ಮಾತನ್ನು ಸತ್ಯಮಾಡು.

06055044a ಬೀಭತ್ಸೋ ಪಶ್ಯ ಸೈನ್ಯಂ ಸ್ವಂ ಭಜ್ಯಮಾನಂ ಸಮಂತತಃ।
06055044c ದ್ರವತಶ್ಚ ಮಹೀಪಾಲಾನ್ಸರ್ವಾನ್ಯೌಧಿಷ್ಠಿರೇ ಬಲೇ।।
06055045a ದೃಷ್ಟ್ವಾ ಹಿ ಸಮರೇ ಭೀಷ್ಮಂ ವ್ಯಾತ್ತಾನನಮಿವಾಂತಕಂ।
06055045c ಭಯಾರ್ತಾಃ ಸಂಪ್ರಣಶ್ಯಂತಿ ಸಿಂಹಂ ಕ್ಷುದ್ರಮೃಗಾ ಇವ।।

ಬೀಭತ್ಸೋ! ಎಲ್ಲ ಕಡೆಗಳಲ್ಲಿ ಒಡೆದು ಹೋಗುತ್ತಿರುವ ನಿನ್ನ ಸೈನ್ಯವನ್ನು, ಯುಧಿಷ್ಠಿರಬಲದಲ್ಲಿ ಓಡಿಹೋಗುತ್ತಿರುವ ಸರ್ವ ಮಹೀಪಾಲರನ್ನೂ ನೋಡು. ಸಮರದಲ್ಲಿ ಅಂತಕನಂತೆ ಬಾಯಿಕಳೆದುಕೊಂಡಿರುವ ಭೀಷ್ಮನನ್ನು ನೋಡಿ ಸಿಂಹನನ್ನು ನೋಡಿದ ಕ್ಷುದ್ರಮೃಗಗಳಂತೆ ಭಯಾರ್ತರಾಗಿ ನಾಶಹೊಂದುತ್ತಿದ್ದಾರೆ.”

06055046a ಏವಮುಕ್ತಃ ಪ್ರತ್ಯುವಾಚ ವಾಸುದೇವಂ ಧನಂಜಯಃ।
06055046c ಚೋದಯಾಶ್ವಾನ್ಯತೋ ಭೀಷ್ಮೋ ವಿಗಾಃಶೈತದ್ಬಲಾರ್ಣವಂ।।

ಹೀಗೆ ಹೇಳಿದ ವಾಸುದೇವನಿಗೆ ಧನಂಜಯನು ಉತ್ತರಿಸಿದನು: “ಎಲ್ಲಿ ಈ ಸೇನಾಸಾಗರವನ್ನು ಪ್ರಹರಿಸುತ್ತಿರುವ ಭೀಷ್ಮನಿರುವಲ್ಲಿಗೆ ಕುದುರೆಗಳನ್ನು ಓಡಿಸು!”

06055047a ತತೋಽಶ್ವಾನ್ರಜತಪ್ರಖ್ಯಾಂಶ್ಚೋದಯಾಮಾಸ ಮಾಧವಃ।
06055047c ಯತೋ ಭೀಷ್ಮರಥೋ ರಾಜನ್ದುಷ್ಪ್ರೇಕ್ಷ್ಯೋ ರಶ್ಮಿಮಾನಿವ।।

ಆಗ ರಜತವರ್ಣದ ಕುದುರೆಗಳನ್ನು ಮಾಧವನು ಸೂರ್ಯನಂತೆ ದುಷ್ಪ್ರೇಕ್ಷನಾಗಿದ್ದ ಭೀಷ್ಮನ ರಥವಿರುವಲ್ಲಿಗೆ ಓಡಿಸಿದನು.

06055048a ತತಸ್ತತ್ಪುನರಾವೃತ್ತಂ ಯುಧಿಷ್ಠಿರಬಲಂ ಮಹತ್।
06055048c ದೃಷ್ಟ್ವಾ ಪಾರ್ಥಂ ಮಹಾಬಾಹುಂ ಭೀಷ್ಮಾಯೋದ್ಯಂತಮಾಹವೇ।।

ಆಗ ಆಹವದಲ್ಲಿ ಭೀಷ್ಮನೊಡನೆ ಯುದ್ಧಮಾಡಲು ಬಂದ ಮಹಾಬಾಹು ಪಾರ್ಥನನ್ನು ನೋಡಿ ಯುಧಿಷ್ಠಿರನ ಮುಹಾಸೇನೆಯು ಹಿಂದಿರುಗಿತು.

06055049a ತತೋ ಭೀಷ್ಮಃ ಕುರುಶ್ರೇಷ್ಠಃ ಸಿಂಹವದ್ವಿನದನ್ಮುಹುಃ।
06055049c ಧನಂಜಯರಥಂ ತೂರ್ಣಂ ಶರವರ್ಷೈರವಾಕಿರತ್।।

ಆಗ ಕುರುಶ್ರೇಷ್ಠ ಭೀಷ್ಮನು ಮತ್ತೆ ಮತ್ತೆ ಸಿಂಹದಂತೆ ಗರ್ಜಿಸುತ್ತಾ ಧನಂಜಯನ ರಥವನ್ನು ಬೇಗನೆ ಶರವರ್ಷಗಳಿಂದ ಮುಚ್ಚಿದನು.

06055050a ಕ್ಷಣೇನ ಸ ರಥಸ್ತಸ್ಯ ಸಹಯಃ ಸಹಸಾರಥಿಃ।
06055050c ಶರವರ್ಷೇಣ ಮಹತಾ ಸಂಚನ್ನೋ ನ ಪ್ರಕಾಶತೇ।।

ಕ್ಷಣದಲ್ಲಿಯೇ ಆ ಮಹಾ ಶರವರ್ಷದಿಂದ, ಹಯ-ಸಾರಥಿಗಳೊಂದಿಗೆ ಅವನ ರಥವು ಮುಚ್ಚಿಹೋಗಿ ಕಾಣದಂತಾಯಿತು.

06055051a ವಾಸುದೇವಸ್ತ್ವಸಂಭ್ರಾಂತೋ ಧೈರ್ಯಮಾಸ್ಥಾಯ ಸತ್ತ್ವವಾನ್।
06055051c ಚೋದಯಾಮಾಸ ತಾನಶ್ವಾನ್ವಿತುನ್ನಾನ್ಭೀಷ್ಮಸಾಯಕೈಃ।।

ಆದರೆ ಸತ್ತ್ವವಾನ್ ವಾಸುದೇವನು ಸಂಭ್ರಾಂತನಾಗದೇ ಧೈರ್ಯದಲ್ಲಿದ್ದುಕೊಂಡೇ ಭೀಷ್ಮನ ಸಾಯಕಗಳಿಂದ ಹೊಡೆಯಲ್ಪಟ್ಟ ಆ ಅಶ್ವಗಳನ್ನು ನಡೆಸುತ್ತಲೇ ಇದ್ದನು.

06055052a ತತಃ ಪಾರ್ಥೋ ಧನುರ್ಗೃಹ್ಯ ದಿವ್ಯಂ ಜಲದನಿಸ್ವನಂ।
06055052c ಪಾತಯಾಮಾಸ ಭೀಷ್ಮಸ್ಯ ಧನುಶ್ಚಿತ್ತ್ವಾ ತ್ರಿಭಿಃ ಶರೈಃ।।

ಆಗ ಪಾರ್ಥನು ಮೋಡದಂತೆ ಶಬ್ಧಮಾಡುತ್ತಿದ್ದ ದಿವ್ಯ ಧನುಸ್ಸನ್ನು ಹಿಡಿದು ಭೀಷ್ಮನ ಧನುಸ್ಸನ್ನು ಮೂರು ಶರಗಳಿಂದ ತುಂಡುಮಾಡಿ ಬೀಳಿಸಿದನು.

06055053a ಸ ಚ್ಛಿನ್ನಧನ್ವಾ ಕೌರವ್ಯಃ ಪುನರನ್ಯನ್ಮಹದ್ಧನುಃ।
06055053c ನಿಮೇಷಾಂತರಮಾತ್ರೇಣ ಸಜ್ಯಂ ಚಕ್ರೇ ಪಿತಾ ತವ।।

ಧನುಸ್ಸು ತುಂಡಾಗಲು ನಿನ್ನ ಪಿತ ಕೌರವ್ಯನು ನಿಮಿಷಾಂತರದಲ್ಲಿ ಇನ್ನೊಂದು ಮಹಾಧನುಸ್ಸನ್ನು ಸಜ್ಜುಗೊಳಿಸಿದನು.

06055054a ವಿಚಕರ್ಷ ತತೋ ದೋರ್ಭ್ಯಾಂ ಧನುರ್ಜಲದನಿಸ್ವನಂ।
06055054c ಅಥಾಸ್ಯ ತದಪಿ ಕ್ರುದ್ಧಶ್ಚಿಚ್ಛೇದ ಧನುರರ್ಜುನಃ।।

ಮೋಡದಂತೆ ಶಬ್ಧಮಾಡುತ್ತಿದ್ದ ಆ ಧನುಸ್ಸನ್ನು ಎರಡೂ ಕೈಗಳಿಂದ ಸೆಳೆಯಲು ಕ್ರುದ್ಧನಾದ ಅರ್ಜುನನು ಆ ಧನುಸ್ಸನ್ನು ಕೂಡ ತುಂಡರಿಸಿದನು.

06055055a ತಸ್ಯ ತತ್ಪೂಜಯಾಮಾಸ ಲಾಘವಂ ಶಂತನೋಃ ಸುತಃ।
06055055c ಸಾಧು ಪಾರ್ಥ ಮಹಾಬಾಹೋ ಸಾಧು ಭೋ ಪಾಂಡುನಂದನ।।

ಆಗ ಶಂತನುವಿನ ಮಗನು ಅವನ ಹಸ್ತಲಾಘವವನ್ನು ಪ್ರಶಂಸಿಸಿದನು: “ಸಾಧು ಪಾರ್ಥ! ಮಹಾಬಾಹೋ! ಸಾಧು! ಭೋ ಪಾಂಡುನಂದನ!

06055056a ತ್ವಯ್ಯೇವೈತದ್ಯುಕ್ತರೂಪಂ ಮಹತ್ಕರ್ಮ ಧನಂಜಯ।
06055056c ಪ್ರೀತೋಽಸ್ಮಿ ಸುದೃಢಂ ಪುತ್ರ ಕುರು ಯುದ್ಧಂ ಮಯಾ ಸಹ।।

ಧನಂಜಯ! ಈ ಮಹತ್ಕಾರ್ಯವು ನಿನಗೇ ಯುಕ್ತರೂಪವಾದುದು. ಪುತ್ರ! ನಿನ್ನ ಈ ಸುದೃಢತೆಗೆ ಮೆಚ್ಚಿದ್ದೇನೆ. ನನ್ನೊಂದಿಗೆ ಯುದ್ಧಮಾಡು!”

06055057a ಇತಿ ಪಾರ್ಥಂ ಪ್ರಶಸ್ಯಾಥ ಪ್ರಗೃಹ್ಯಾನ್ಯನ್ಮಹದ್ಧನುಃ।
06055057c ಮುಮೋಚ ಸಮರೇ ವೀರಃ ಶರಾನ್ಪಾರ್ಥರಥಂ ಪ್ರತಿ।।

ಹೀಗೆ ಸಮರದಲ್ಲಿ ಪಾರ್ಥನನ್ನು ಪ್ರಶಂಸಿಸಿ ಆ ವೀರನು ಬೇರೆ ಮಹಾ ಧನುಸ್ಸನ್ನು ತೆಗೆದುಕೊಂಡು ಪಾರ್ಥನ ರಥದ ಮೇಲೆ ಶರಗಳನ್ನು ಪ್ರಯೋಗಿಸಿದನು.

06055058a ಅದರ್ಶಯದ್ವಾಸುದೇವೋ ಹಯಯಾನೇ ಪರಂ ಬಲಂ।
06055058c ಮೋಘಾನ್ಕುರ್ವನ್ ಶರಾಂಸ್ತಸ್ಯ ಮಂಡಲಾನ್ಯಚರಲ್ಲಘು।।

ಲಘುತ್ವದಿಂದ ಮಂಡಲಾಕಾರದಲ್ಲಿ ನಡೆಸಿ ಅವನ ಶರಗಳನ್ನು ವ್ಯರ್ಥಗೊಳಿಸಿ ವಾಸುದೇವನು ಕುದುರೆಗಳನ್ನು ಓಡಿಸುವುದರಲ್ಲಿ ತನಗಿದ್ದ ಪರಮ ಶಕ್ತಿಯನ್ನು ತೋರಿಸಿದನು.

06055059a ತಥಾಪಿ ಭೀಷ್ಮಃ ಸುದೃಢಂ ವಾಸುದೇವಧನಂಜಯೌ।
06055059c ವಿವ್ಯಾಧ ನಿಶಿತೈರ್ಬಾಣೈಃ ಸರ್ವಗಾತ್ರೇಷು ಮಾರಿಷ।।

ಆಗಲೂ ಕೂಡ ಸುದೃಢರಾದ ವಾಸುದೇವ-ಧನಂಜಯರನ್ನು ಭೀಷ್ಮನು ಎಲ್ಲ ಅಂಗಾಂಗಳಿಗೆ ನಿಶಿತ ಬಾಣಗಳಿಂದ ಹೊಡೆದು ಗಾಯಗೊಳಿಸಿದನು.

06055060a ಶುಶುಭಾತೇ ನರವ್ಯಾಘ್ರೌ ತೌ ಭೀಷ್ಮಶರವಿಕ್ಷತೌ।
06055060c ಗೋವೃಷಾವಿವ ನರ್ದಂತೌ ವಿಷಾಣೋಲ್ಲಿಖಿತಾಂಕಿತೌ।।

ಭೀಷ್ಮನ ಶರಗಳಿಂದ ಗಾಯಗೊಂಡ ಆ ನರವ್ಯಾಘ್ರರಿಬ್ಬರು ಗೂಳಿಗಳ ಕಾದಾಟದಲ್ಲಿ ಕೊಂಬುಗಳು ಗೀರಿದ ಚಿಹ್ನೆಗಳಿರುವ ಎರಡು ಗೂಳಿಗಳಂತೆ ಶೋಭಿಸಿದರು.

06055061a ಪುನಶ್ಚಾಪಿ ಸುಸಂಕ್ರುದ್ಧಃ ಶರೈಃ ಸನ್ನತಪರ್ವಭಿಃ।
06055061c ಕೃಷ್ಣಯೋರ್ಯುಧಿ ಸಂರಬ್ಧೋ ಭೀಷ್ಮೋ ವ್ಯಾವಾರಯದ್ದಿಶಃ।।

ಯುದ್ಧದಲ್ಲಿ ಸಂರಬ್ಧನಾದ ಭೀಷ್ಮನು ಪುನಃ ಸಂಕ್ರುದ್ಧನಾಗಿ ಸನ್ನತಪರ್ವ ಶರಗಳಿಂದ ಇಬ್ಬರೂ ಕೃಷ್ಣರನ್ನೂ ಎಲ್ಲ ಕಡೆಗಳಿಂದ ಮುಚ್ಚಿದನು.

06055062a ವಾರ್ಷ್ಣೇಯಂ ಚ ಶರೈಸ್ತೀಕ್ಷ್ಣೈಃ ಕಂಪಯಾಮಾಸ ರೋಷಿತಃ।
06055062c ಮುಹುರಭ್ಯುತ್ಸ್ಮಯನ್ಭೀಷ್ಮಃ ಪ್ರಹಸ್ಯ ಸ್ವನವತ್ತದಾ।।

ರೋಷಿತನಾಗಿ ಆಗಾಗ ಜೋರಾಗಿ ನಗುತ್ತಾ ಭೀಷ್ಮನು ತೀಕ್ಷ್ಣ ಶರಗಳಿಂದ ವಾರ್ಷ್ಣೇಯನನ್ನು ಹೊಡೆದು ನಡುಗಿಸಿದನು.

06055063a ತತಃ ಕೃಷ್ಣಸ್ತು ಸಮರೇ ದೃಷ್ಟ್ವಾ ಭೀಷ್ಮಪರಾಕ್ರಮಂ।
06055063c ಸಂಪ್ರೇಕ್ಷ್ಯ ಚ ಮಹಾಬಾಹುಃ ಪಾರ್ಥಸ್ಯ ಮೃದುಯುದ್ಧತಾಂ।।

ಆಗ ಕೃಷ್ಣನು ಸಮರದಲ್ಲಿ ಭೀಷ್ಮನ ಪರಾಕ್ರಮವನ್ನು ಮತ್ತು ಮಹಾಬಾಹು ಪಾರ್ಥನು ಮೃದುವಾಗಿ ಯುದ್ಧಮಾಡುತ್ತಿರುವುದನ್ನು ನೋಡಿದನು.

06055064a ಭೀಷ್ಮಂ ಚ ಶರವರ್ಷಾಣಿ ಸೃಜಂತಮನಿಶಂ ಯುಧಿ।
06055064c ಪ್ರತಪಂತಮಿವಾದಿತ್ಯಂ ಮಧ್ಯಮಾಸಾದ್ಯ ಸೇನಯೋಃ।।

ಯುದ್ಧದಲ್ಲಿ ಸೇನೆಗಳ ಮಧ್ಯದಲ್ಲಿದ್ದುಕೊಂಡು ಆದಿತ್ಯನಂತೆ ಉರಿಯುತ್ತಾ ಭೀಷ್ಮನು ಎಡೆಬಿಡದೆ ಬಾಣಗಳ ಮಳೆಯನ್ನು ಸುರಿಸುತ್ತಿದ್ದನು.

06055065a ವರಾನ್ವರಾನ್ವಿನಿಘ್ನಂತಂ ಪಾಂಡುಪುತ್ರಸ್ಯ ಸೈನಿಕಾನ್।
06055065c ಯುಗಾಂತಮಿವ ಕುರ್ವಾಣಂ ಭೀಷ್ಮಂ ಯೌಧಿಷ್ಠಿರೇ ಬಲೇ।।

ಪಾಂಡುಪುತ್ರ ಯುಧಿಷ್ಠಿರನ ಬಲದಲ್ಲಿದ್ದ ಶ್ರೇಷ್ಠ ಶ್ರೇಷ್ಠ ಸೈನಿಕರನ್ನು ಯುಗಾಂತದಂತೆ ನಾಶಮಾಡುತ್ತಿರುವ ಭೀಷ್ಮನನ್ನು ನೋಡಿದನು.

06055066a ಅಮೃಷ್ಯಮಾಣೋ ಭಗವಾನ್ಕೇಶವಃ ಪರವೀರಹಾ।
06055066c ಅಚಿಂತಯದಮೇಯಾತ್ಮಾ ನಾಸ್ತಿ ಯೌಧಿಷ್ಠಿರಂ ಬಲಂ।।

ಅದನ್ನು ನೋಡಿ ಸಹಿಸಲಾಗದೇ ಪರವೀರಹ ಅಮೇಯಾತ್ಮ ಭಗವಾನ್ ಕೇಶವನು ಚಿಂತಿಸಿದನು: “ಯುಧಿಷ್ಠಿರನ ಬಲವು ಇಲ್ಲವಾಗುತ್ತಿದೆ.

06055067a ಏಕಾಹ್ನಾ ಹಿ ರಣೇ ಭೀಷ್ಮೋ ನಾಶಯೇದ್ದೇವದಾನವಾನ್।
06055067c ಕಿಮು ಪಾಂಡುಸುತಾನ್ಯುದ್ಧೇ ಸಬಲಾನ್ಸಪದಾನುಗಾನ್।।

ರಣದಲ್ಲಿ ದೇವದಾನವರನ್ನೂ ಒಂದೇ ಹಗಲಿನಲ್ಲಿ ನಾಶಮಾಡಬಲ್ಲ ಭೀಷ್ಮನಿಗೆ ಯುದ್ಧದಲ್ಲಿ ಸೇನೆ-ಅನುಯಾಯಿಗಳೊಂದಿಗೆ ಪಾಂಡುಸುತರು ಯಾವ ಲೆಕ್ಕಕ್ಕೆ?

06055068a ದ್ರವತೇ ಚ ಮಹತ್ಸೈನ್ಯಂ ಪಾಂಡವಸ್ಯ ಮಹಾತ್ಮನಃ।
06055068c ಏತೇ ಚ ಕೌರವಾಸ್ತೂರ್ಣಂ ಪ್ರಭಗ್ನಾನ್ದೃಶ್ಯ ಸೋಮಕಾನ್।
06055068e ಆದ್ರವಂತಿ ರಣೇ ಹೃಷ್ಟಾ ಹರ್ಷಯಂತಃ ಪಿತಾಮಹಂ।।

ಮಹಾತ್ಮ ಪಾಂಡವನ ಮಹಾಸೇನೆಯು ಓಡಿಹೋಗುತ್ತಿದೆ. ಭಗ್ನವಾಗಿ ಓಡಿಹೋಗುತ್ತಿರುವ ಸೋಮಕರನ್ನು ನೋಡಿ ಕೌರವರು ರಣದಲ್ಲಿ ಪಿತಾಮಹನಿಗೆ ಹರ್ಷವನ್ನುಂಟುಮಾಡುತ್ತಾ ಬೆನ್ನಟ್ಟಿ ಹೋಗುತ್ತಿದ್ದಾರೆ.

06055069a ಸೋಽಹಂ ಭೀಷ್ಮಂ ನಿಹನ್ಮ್ಯದ್ಯ ಪಾಂಡವಾರ್ಥಾಯ ದಂಶಿತಃ।
06055069c ಭಾರಮೇತಂ ವಿನೇಷ್ಯಾಮಿ ಪಾಂಡವಾನಾಂ ಮಹಾತ್ಮನಾಂ।।

ಆದುದರಿಂದ ಇಂದು ಪಾಂಡವರಿಗೋಸ್ಕರ ನಾನು ಕವಚವನ್ನು ಧರಿಸಿ ಭೀಷ್ಮನನ್ನು ಕೊಂದು, ಮಹಾತ್ಮ ಪಾಂಡವರ ಈ ಭಾರವನ್ನು ನಾಶಪಡಿಸುತ್ತೇನೆ.

06055070a ಅರ್ಜುನೋಽಪಿ ಶರೈಸ್ತೀಕ್ಷ್ಣೈರ್ವಧ್ಯಮಾನೋ ಹಿ ಸಂಯುಗೇ।
06055070c ಕರ್ತವ್ಯಂ ನಾಭಿಜಾನಾತಿ ರಣೇ ಭೀಷ್ಮಸ್ಯ ಗೌರವಾತ್।।

ಅರ್ಜುನನೂ ಕೂಡ ಸಂಯುಗದಲ್ಲಿ ತೀಕ್ಷ್ಣಶರಗಳಿಂದ ವಧಿಸುತ್ತಿರುವ ಭೀಷ್ಮನ ಮೇಲಿನ ಗೌರವದಿಂದ ರಣದಲ್ಲಿ ತನ್ನ ಕರ್ತವ್ಯವನ್ನು ತಿಳಿಯದವನಾಗಿದ್ದಾನೆ.”

06055071a ತಥಾ ಚಿಂತಯತಸ್ತಸ್ಯ ಭೂಯ ಏವ ಪಿತಾಮಹಃ।
06055071c ಪ್ರೇಷಯಾಮಾಸ ಸಂಕ್ರುದ್ಧಃ ಶರಾನ್ಪಾರ್ಥರಥಂ ಪ್ರತಿ।।

ಅವನು ಹಾಗೆ ಯೋಚಿಸುತ್ತಿರಲು ಪಿತಾಮಹನು ಪುನಃ ಸಂಕ್ರುದ್ಧನಾಗಿ ಶರಗಳನ್ನು ಪಾರ್ಥನ ರಥದ ಮೇಲೆ ಪ್ರಯೋಗಿಸಿದನು.

06055072a ತೇಷಾಂ ಬಹುತ್ವಾದ್ಧಿ ಭೃಶಂ ಶರಾಣಾಂ ದಿಶೋಽಥ ಸರ್ವಾಃ ಪಿಹಿತಾ ಬಭೂವುಃ।
06055072c ನ ಚಾಂತರಿಕ್ಷಂ ನ ದಿಶೋ ನ ಭೂಮಿರ್ ನ ಭಾಸ್ಕರೋಽದೃಶ್ಯತ ರಶ್ಮಿಮಾಲೀ।
06055072e ವವುಶ್ಚ ವಾತಾಸ್ತುಮುಲಾಃ ಸಧೂಮಾ ದಿಶಶ್ಚ ಸರ್ವಾಃ ಕ್ಷುಭಿತಾ ಬಭೂವುಃ।।

ಆ ಬಹಳ ಸಂಖ್ಯೆಯ ಶರಗಳು ದಿಕ್ಕುಗಳೆಲ್ಲವನ್ನು ಮುಚ್ಚಿಬಿಟ್ಟವು. ಆಗ ಅಂತರಿಕ್ಷವಾಗಲೀ, ದಿಕ್ಕುಗಳಾಗಲೀ, ಭೂಮಿಯಾಗಲೀ, ರಶ್ಮಿಮಾಲೀ ಭಾಸ್ಕರನಾಗಲೀ ಕಾಣಲಿಲ್ಲ. ಗಾಳಿಯು ಭಯಂಕರವಾಗಿಯೂ, ಹೊಗೆಯಿಂದ ತುಂಬಿಕೊಂಡೂ ಬೀಸತೊಡಗಿತು. ಎಲ್ಲ ದಿಕ್ಕುಗಳೂ ಕ್ಷೋಭೆಗೊಂಡವು.

06055073a ದ್ರೋಣೋ ವಿಕರ್ಣೋಽಥ ಜಯದ್ರಥಶ್ಚ ಭೂರಿಶ್ರವಾಃ ಕೃತವರ್ಮಾ ಕೃಪಶ್ಚ।
06055073c ಶ್ರುತಾಯುರಂಬಷ್ಠಪತಿಶ್ಚ ರಾಜಾ ವಿಂದಾನುವಿಂದೌ ಚ ಸುದಕ್ಷಿಣಶ್ಚ।।
06055074a ಪ್ರಾಚ್ಯಾಶ್ಚ ಸೌವೀರಗಣಾಶ್ಚ ಸರ್ವೇ ವಸಾತಯಃ ಕ್ಷುದ್ರಕಮಾಲವಾಶ್ಚ।
06055074c ಕಿರೀಟಿನಂ ತ್ವರಮಾಣಾಭಿಸಸ್ರುರ್ ನಿದೇಶಗಾಃ ಶಾಂತನವಸ್ಯ ರಾಜ್ಞಃ।।

ಆಗ ರಾಜ ಶಾಂತನವನ ಆದೇಶದಂತೆ ದ್ರೋಣ, ವಿಕರ್ಣ, ಜಯದ್ರಥ, ಭೂರಿಶ್ರವ, ಕೃತವರ್ಮ, ಕೃಪ, ಶ್ರುತಾಯು, ರಾಜಾ ಅಂಬಷ್ಠಪತಿ, ವಿಂದಾನುವಿಂದರು, ಸುದಕ್ಷಿಣ, ಪ್ರಾಚಿಯವರು, ಸೌವೀರಗಣರೆಲ್ಲರೂ, ವಸಾತಯರು, ಕ್ಷುದ್ರಕಮಾಲರು ತ್ವರೆಮಾಡಿ ಕಿರೀಟಿಯನ್ನು ಸುತ್ತುವರೆದರು.

06055075a ತಂ ವಾಜಿಪಾದಾತರಥೌಘಜಾಲೈರ್ ಅನೇಕಸಾಹಸ್ರಶತೈರ್ದದರ್ಶ।
06055075c ಕಿರೀಟಿನಂ ಸಂಪರಿವಾರ್ಯಮಾಣಂ ಶಿನೇರ್ನಪ್ತಾ ವಾರಣಯೂಥಪೈಶ್ಚ।।

ಶತ್ರುಪಕ್ಷದ ಲಕ್ಷೋಪಲಕ್ಷ ಅಶ್ವ-ಪದಾತಿ-ರಥಸೈನ್ಯಗಳು ಮತ್ತು ಗಜಸೈನ್ಯಗಳು ಕಿರೀಟಿಯನ್ನು ಘೇರಾಯಿಸಿ ನಿಂತಿರುವುದನ್ನು ಸಾತ್ಯಕಿಯು ದೂರದಿಂದಲೇ ನೋಡಿದನು.

06055076a ತತಸ್ತು ದೃಷ್ಟ್ವಾರ್ಜುನವಾಸುದೇವೌ ಪದಾತಿನಾಗಾಶ್ವರಥೈಃ ಸಮಂತಾತ್।
06055076c ಅಭಿದ್ರುತೌ ಶಸ್ತ್ರಭೃತಾಂ ವರಿಷ್ಠೌ ಶಿನಿಪ್ರವೀರೋಽಭಿಸಸಾರ ತೂರ್ಣಂ।।

ಅರ್ಜುನ ವಾಸುದೇವರು ಪದಾತಿ-ನಾಗ-ಅಶ್ವ-ರಥಗಳಿಂದ ಸುತ್ತುವರೆಯಲ್ಪಟ್ಟಿರುವುದನ್ನು ನೋಡಿ ಶಸ್ತ್ರಭೃತ ವರಿಷ್ಠ ಶಿನಿಪ್ರವೀರನು ತಕ್ಷಣವೇ ಅಲ್ಲಿಗೆ ಧಾವಿಸಿ ಬಂದನು.

06055077a ಸ ತಾನ್ಯನೀಕಾನಿ ಮಹಾಧನುಷ್ಮಾನ್ ಶಿನಿಪ್ರವೀರಃ ಸಹಸಾಭಿಪತ್ಯ।
06055077c ಚಕಾರ ಸಾಹಾಯ್ಯಮಥಾರ್ಜುನಸ್ಯ ವಿಷ್ಣುರ್ಯಥಾ ವೃತ್ರನಿಷೂದನಸ್ಯ।।

ಮಹಾಧನುಷ್ಮಂತನ ಶಿನಿಪ್ರವೀರನು ಆ ಸೇನೆಗಳ ಮೇಲೆ ಎರಗಿದನು. ವೃತ್ರನಿಷೂದನನಿಗೆ ವಿಷ್ಣುವು ಹೇಗೆ ಸಹಾಯಮಾಡಿದನೋ ಹಾಗೆ ಅವನು ಅರ್ಜುನನಿಗೆ ಸಹಾಯಮಾಡಿದನು.

06055078a ವಿಶೀರ್ಣನಾಗಾಶ್ವರಥಧ್ವಜೌಘಂ ಭೀಷ್ಮೇಣ ವಿತ್ರಾಸಿತಸರ್ವಯೋಧಂ।
06055078c ಯುಧಿಷ್ಠಿರಾನೀಕಮಭಿದ್ರವಂತಂ ಪ್ರೋವಾಚ ಸಂದೃಶ್ಯ ಶಿನಿಪ್ರವೀರಃ।।

ನಾಗಾಶ್ವರಥಧ್ವಜಗಳು ಬಹುಸಂಖ್ಯೆಗಳಲ್ಲಿ ನಾಶವಾಗಿರುವುದನ್ನು, ಎಲ್ಲ ಯೋಧರು ಭೀಷ್ಮನಿಂದ ಪೀಡಿತರಾಗಿರುವುದನ್ನು, ಮತ್ತು ಯುಧಿಷ್ಠಿರನ ಸೇನೆಯು ಓಡಿಹೋಗುತ್ತಿರುವುದನ್ನು ನೋಡಿ ಶಿನಿಪ್ರವೀರನು ಹೇಳಿದನು:

06055079a ಕ್ವ ಕ್ಷತ್ರಿಯಾ ಯಾಸ್ಯಥ ನೈಷ ಧರ್ಮಃ ಸತಾಂ ಪುರಸ್ತಾತ್ಕಥಿತಃ ಪುರಾಣೈಃ।
06055079c ಮಾ ಸ್ವಾಂ ಪ್ರತಿಜ್ಞಾಂ ಜಹತ ಪ್ರವೀರಾಃ ಸ್ವಂ ವೀರಧರ್ಮಂ ಪರಿಪಾಲಯಧ್ವಂ।।

“ಕ್ಷತ್ರಿಯರೇ! ಎಲ್ಲಿ ಓಡಿಹೋಗುತ್ತಿದ್ದೀರಿ? ಪುರಾಣಗಳಲ್ಲಿ ಹೇಳಿರುವ, ಸತ್ಯವಂತರು ಮುಂದಿಟ್ಟಿರುವ ಕ್ಷತ್ರಿಯ ಧರ್ಮವು ಇದಲ್ಲ. ಪ್ರವೀರರೇ! ನೀವು ಮಾಡಿರುವ ಪ್ರತಿಜ್ಞೆಯನ್ನು ಬಿಡಬೇಡಿ. ನಿಮ್ಮ ವೀರಧರ್ಮವನ್ನು ಪರಿಪಾಲಿಸಿ!”

06055080a ತಾನ್ವಾಸವಾನಂತರಜೋ ನಿಶಮ್ಯ ನರೇಂದ್ರಮುಖ್ಯಾನ್ದ್ರವತಃ ಸಮಂತಾತ್।
06055080c ಪಾರ್ಥಸ್ಯ ದೃಷ್ಟ್ವಾ ಮೃದುಯುದ್ಧತಾಂ ಚ ಭೀಷ್ಮಂ ಚ ಸಂಖ್ಯೇ ಸಮುದೀರ್ಯಮಾಣಂ।।

ಆ ಮಾತನ್ನು ವಾಸವಾನುಜನು ಕೇಳಿದನು. ಎಲ್ಲಕಡೆ ಓಡಿಹೋಗುತ್ತಿರುವ ನರೇಂದ್ರಮುಖ್ಯರನ್ನು ನೋಡಿ, ಪಾರ್ಥನ ಮೃದು ಯುದ್ಧವನ್ನೂ ಯುದ್ಧದಲ್ಲಿ ಎಲ್ಲರನ್ನೂ ವಧಿಸುತ್ತಿರುವ ಭೀಷ್ಮನನ್ನೂ ನೋಡಿದನು.

06055081a ಅಮೃಷ್ಯಮಾಣಃ ಸ ತತೋ ಮಹಾತ್ಮಾ ಯಶಸ್ವಿನಂ ಸರ್ವದಶಾರ್ಹಭರ್ತಾ।
06055081c ಉವಾಚ ಶೈನೇಯಮಭಿಪ್ರಶಂಸನ್ ದೃಷ್ಟ್ವಾ ಕುರೂನಾಪತತಃ ಸಮಂತಾತ್।।

ಆಗ ಅದನ್ನು ಸಹಿಸಲಾಗದೇ ಮಹಾತ್ಮ ಸರ್ವದಶಾರ್ಹಭರ್ತನು ಎಲ್ಲಕಡೆ ಕುರುಗಳನ್ನು ಉರುಳಿಸುತ್ತಿದ್ದ ಯಶಸ್ವಿನಿ ಶೈನೇಯನನ್ನು ಪ್ರಶಂಸಿಸುತ್ತಾ ಹೇಳಿದನು:

06055082a ಯೇ ಯಾಂತಿ ಯಾಂತ್ವೇವ ಶಿನಿಪ್ರವೀರ ಯೇಽಪಿ ಸ್ಥಿತಾಃ ಸಾತ್ವತ ತೇಽಪಿ ಯಾಂತು।
06055082c ಭೀಷ್ಮಂ ರಥಾತ್ಪಶ್ಯ ನಿಪಾತ್ಯಮಾನಂ ದ್ರೋಣಂ ಚ ಸಂಖ್ಯೇ ಸಗಣಂ ಮಯಾದ್ಯ।।

“ಶಿನಿಪ್ರವೀರ! ಯಾರು ಹೋಗುತ್ತಿದ್ದಾರೋ ಅವರು ಹೋಗಲಿ ಬಿಡು. ಸಾತ್ವತ! ಇಲ್ಲಿ ಯಾರು ನಿಂತಿದ್ದಾರೋ ಅವರು ಕೂಡ ಹೋಗಲಿ. ಇಂದು ನಾನು ಭೀಷ್ಮನನ್ನು ರಥದಿಂದ ಮತ್ತು ದ್ರೋಣನನ್ನೂ ಗಣಗಳೊಂದಿಗೆ ಯುದ್ಧದಲ್ಲಿ ಬೀಳಿಸುವುದನ್ನು ನೋಡು!

06055083a ನಾಸೌ ರಥಃ ಸಾತ್ವತ ಕೌರವಾಣಾಂ ಕ್ರುದ್ಧಸ್ಯ ಮುಚ್ಯೇತ ರಣೇಽದ್ಯ ಕಶ್ಚಿತ್।
06055083c ತಸ್ಮಾದಹಂ ಗೃಹ್ಯ ರಥಾಂಗಮುಗ್ರಂ ಪ್ರಾಣಂ ಹರಿಷ್ಯಾಮಿ ಮಹಾವ್ರತಸ್ಯ।।

ಸಾತ್ವತ! ಕೌರವರಲ್ಲಿ ಯಾವ ರಥನೂ ರಣದಲ್ಲಿ ಇಂದು ಕ್ರುದ್ಧನಾದ ನನ್ನಿಂದ ಪ್ರಾಣವುಳಿಸಿಕೊಂಡು ಹೋರುವುದಿಲ್ಲ. ಆದುದರಿಂದಲೇ ಈಗ ಉಗ್ರ ಚಕ್ರವನ್ನು ಹಿಡಿದು ಆ ಮಹಾವ್ರತನ ಪ್ರಾಣವನ್ನು ಅಪಹರಿಸಿಬಿಡುತ್ತೇನೆ.

06055084a ನಿಹತ್ಯ ಭೀಷ್ಮಂ ಸಗಣಂ ತಥಾಜೌ ದ್ರೋಣಂ ಚ ಶೈನೇಯ ರಥಪ್ರವೀರಂ।
06055084c ಪ್ರೀತಿಂ ಕರಿಷ್ಯಾಮಿ ಧನಂಜಯಸ್ಯ ರಾಜ್ಞಶ್ಚ ಭೀಮಸ್ಯ ತಥಾಶ್ವಿನೋಶ್ಚ।।

ಶೈನೇಯ! ಸಸೈನ್ಯನಾದ ಭೀಷ್ಮನನ್ನು ಮತ್ತು ಹಾಗೆಯೇ ರಥಪ್ರವೀರ ದ್ರೋಣನನ್ನು ಕೊಂದು ಧನಂಜಯ, ರಾಜ, ಭೀಮ ಮತ್ತು ಯಮಳರಿಗೆ ಪ್ರಿಯವನ್ನುಂಟುಮಾಡುತ್ತೇನೆ.

06055085a ನಿಹತ್ಯ ಸರ್ವಾನ್ಧೃತರಾಷ್ಟ್ರಪುತ್ರಾಂಸ್ ತತ್ಪಕ್ಷಿಣೋ ಯೇ ಚ ನರೇಂದ್ರಮುಖ್ಯಾಃ।
06055085c ರಾಜ್ಯೇನ ರಾಜಾನಮಜಾತಶತ್ರುಂ ಸಂಪಾದಯಿಷ್ಯಾಮ್ಯಹಮದ್ಯ ಹೃಷ್ಟಃ।।

ಇಂದು ಸಂತುಷ್ಟನಾಗಿ ಧೃತರಾಷ್ಟ್ರಪುತ್ರರೆಲ್ಲರನ್ನೂ ಮತ್ತು ಅವರ ಪಕ್ಷದಲ್ಲಿರುವು ನರೇಂದ್ರಮುಖ್ಯರನ್ನೂ ಸಂಹರಿಸಿ ರಾಜಾ ಅಜಾತಶತ್ರುವಿಗೆ ರಾಜ್ಯವನ್ನು ದೊರಕಿಸಿಕೊಡುತ್ತೇನೆ.”

06055086a ತತಃ ಸುನಾಭಂ ವಸುದೇವಪುತ್ರಃ ಸೂರ್ಯಪ್ರಭಂ ವಜ್ರಸಮಪ್ರಭಾವಂ।
06055086c ಕ್ಷುರಾಂತಮುದ್ಯಮ್ಯ ಭುಜೇನ ಚಕ್ರಂ ರಥಾದವಪ್ಲುತ್ಯ ವಿಸೃಜ್ಯ ವಾಹಾನ್।।

ಆಗ ವಸುದೇವಪುತ್ರನು ಸೂರ್ಯನ ಪ್ರಭೆಯುಳ್ಳ, ವಜ್ರಸಮ ಪ್ರಭಾವವನ್ನುಳ್ಳ, ಸುತ್ತಲೂ ಚೂಪಾದ ಅಲಗುಗಳ ಸುನಾಭ ಚಕ್ರವನ್ನು ಕೈಯಲ್ಲಿ ಹಿಡಿದು ಕುದುರೆಗಳ ಲಗಾಮುಗಳನ್ನು ಕೆಳಗಿಟ್ಟು, ರಥದಿಂದ ಕೆಳಕ್ಕೆ ಧುಮುಕಿದನು.

06055087a ಸಂಕಂಪಯಂಗಾಂ ಚರಣೈರ್ಮಹಾತ್ಮಾ ವೇಗೇನ ಕೃಷ್ಣಃ ಪ್ರಸಸಾರ ಭೀಷ್ಮಂ।
06055087c ಮದಾಂಧಮಾಜೌ ಸಮುದೀರ್ಣದರ್ಪಃ ಸಿಂಹೋ ಜಿಘಾಂಸನ್ನಿವ ವಾರಣೇಂದ್ರಂ।।

ತನ್ನ ಗಂಭೀರ ನಡುಗೆಯಿಂದ ಭೂಮಿಯನ್ನೇ ನಡುಗಿಸುತ್ತಾ, ಬೆಳೆದು ಕೊಬ್ಬಿದ ದರ್ಪದಿಂದ ಕೂಡಿದ ಮದಾಂಧ ಸಲಗವನ್ನು ಸಿಂಹವು ಕೊಲ್ಲಲು ಬರುತ್ತಿರುವಂತೆ ವೇಗದಿಂದ ಕೃಷ್ಣನು ಭೀಷ್ಮನ ಬಳಿ ಬಂದನು.

06055088a ಸೋಽಭ್ಯದ್ರವದ್ಭೀಷ್ಮಮನೀಕಮಧ್ಯೇ ಕ್ರುದ್ಧೋ ಮಹೇಂದ್ರಾವರಜಃ ಪ್ರಮಾಥೀ।
06055088c ವ್ಯಾಲಂಬಿಪೀತಾಂತಪಟಶ್ಚಕಾಶೇ ಘನೋ ಯಥಾ ಖೇಽಚಿರಭಾಪಿನದ್ಧಃ।।

ಸೇನೆಗಳ ಮಧ್ಯದಲ್ಲಿದ್ದ ಭೀಷ್ಮನ ಕಡೆ ಕ್ರುದ್ಧನಾದ ಮಹೇಂದ್ರನ ತಮ್ಮ, ಪ್ರಮಾಥಿಯು ಕ್ರುದ್ಧನಾಗಿ ರಭಸದಿಂದ ಹೋಗುತ್ತಿರಲು ಅವನ ಪೀತಾಂಬರವು ಪಟಟನೆ ಹಾರಾಡುತ್ತಿತ್ತು ಮತ್ತು ಅವನು ಮಿಂಚಿನಿಂದ ಕೂಡಿದ ಘನ ಮೋಡದಂತೆ ಪ್ರಕಾಶಿಸಿದನು.

06055089a ಸುದರ್ಶನಂ ಚಾಸ್ಯ ರರಾಜ ಶೌರೇಸ್ ತಚ್ಚಕ್ರಪದ್ಮಂ ಸುಭುಜೋರುನಾಲಂ।
06055089c ಯಥಾದಿಪದ್ಮಂ ತರುಣಾರ್ಕವರ್ಣಂ ರರಾಜ ನಾರಾಯಣನಾಭಿಜಾತಂ।।

ಶೌರಿಯ ಆ ಸುದರ್ಶನ ಚಕ್ರವು ಪದ್ಮದಂತೆ ರಾರಾಜಿಸಿತು. ಅವನ ಸುಂದರ ಭುಜವೇ ದಂಟಾಗಿತ್ತು. ನಾರಾಯಣನ ನಾಭಿಯಿಂದ ಹುಟ್ಟಿದ ಉದಯಿಸುತ್ತಿರುವ ಸೂರ್ಯನ ವರ್ಣದ ಪದ್ಮದಂತೆ ರಾರಾಜಿಸುತ್ತಿತ್ತು.

06055090a ತತ್ಕೃಷ್ಣಕೋಪೋದಯಸೂರ್ಯಬುದ್ಧಂ ಕ್ಷುರಾಂತತೀಕ್ಷ್ಣಾಗ್ರಸುಜಾತಪತ್ರಂ।
06055090c ತಸ್ಯೈವ ದೇಹೋರುಸರಃಪ್ರರೂಢಂ ರರಾಜ ನಾರಾಯಣಬಾಹುನಾಲಂ।।

ಕೃಷ್ಣನ ಕೋಪವೆಂಬ ಸೂರ್ಯದಿಂದ ಅದು ಅರಳುವಂತಿತ್ತು. ಕ್ಷುರದ ಅಂಚಿನಂತೆ ಆ ಸುಜಾತಪತ್ರದ ತುದಿಗಳು ತೀಕ್ಷ್ಣವಾಗಿದ್ದವು. ಅವನ ದೇಹವೇ ಅದು ಉಗಮಿಸಿದ ಸರೋವರದಂತಿತ್ತು. ನಾರಾಯಣನ ಬಾಹುವೇ ದಂಟಾಗಿದ್ದ ಅದು ರಾರಾಜಿಸುತ್ತಿತ್ತು.

06055091a ತಮಾತ್ತಚಕ್ರಂ ಪ್ರಣದಂತಮುಚ್ಚೈಃ ಕ್ರುದ್ಧಂ ಮಹೇಂದ್ರಾವರಜಂ ಸಮೀಕ್ಷ್ಯ।
06055091c ಸರ್ವಾಣಿ ಭೂತಾನಿ ಭೃಶಂ ವಿನೇದುಃ ಕ್ಷಯಂ ಕುರೂಣಾಮಿತಿ ಚಿಂತಯಿತ್ವಾ।।

ಕ್ರುದ್ಧನಾಗಿ ಚಕ್ರವನ್ನು ಹಿಡಿದು ಗಟ್ಟಿಯಾಗಿ ಗರ್ಜಿಸುತ್ತಾ ಬರುತ್ತಿದ್ದ ಮಹೇಂದ್ರಾವರಜನನ್ನು ನೋಡಿ ಕುರುಗಳ ಕ್ಷಯವಾಗುತ್ತಿದೆಯೆಂದು ಯೋಚಿಸಿ ಸರ್ವ ಭೂತಗಳೂ ಜೋರಾಗಿ ಕೂಗಿದವು.

06055092a ಸ ವಾಸುದೇವಃ ಪ್ರಗೃಹೀತಚಕ್ರಃ ಸಂವರ್ತಯಿಷ್ಯನ್ನಿವ ಜೀವಲೋಕಂ।
06055092c ಅಭ್ಯುತ್ಪತಽಲ್ಲೋಕಗುರುರ್ಬಭಾಸೇ ಭೂತಾನಿ ಧಕ್ಷ್ಯನ್ನಿವ ಕಾಲವಹ್ನಿಃ।।

ಚಕ್ರವನ್ನು ಹಿಡಿದ ಆ ವಾಸುದೇವನು ಜೀವಲೋಕಗಳನ್ನೇ ಮುಗಿಸಿಬಿಡುವನೋ ಎಂಬಂತೆ ತೋರಿದನು. ಸಮಸ್ತ ಭೂತಗಳನ್ನು ಸುಟ್ಟು ಭಸ್ಮಮಾಡಲು ಹುಟ್ಟಿಕೊಂಡಿರುವ ಕಾಲಾಗ್ನಿಯೋ ಎಂಬಂತೆ ಆ ಲೋಕಗುರುವು ಕಾಣಿಸಿದನು.

06055093a ತಮಾಪತಂತಂ ಪ್ರಗೃಹೀತಚಕ್ರಂ ಸಮೀಕ್ಷ್ಯ ದೇವಂ ದ್ವಿಪದಾಂ ವರಿಷ್ಠಂ।
06055093c ಅಸಂಭ್ರಮಾತ್ಕಾರ್ಮುಕಬಾಣಪಾಣೀ ರಥೇ ಸ್ಥಿತಃ ಶಾಂತನವೋಽಭ್ಯುವಾಚ।।

ಚಕ್ರವನ್ನು ಹಿಡಿದು ತನ್ನಕಡೆ ಓಡಿ ಬರುತ್ತಿದ್ದ ದ್ವಿಪದರಲ್ಲಿ ವರಿಷ್ಠ, ದೇವನನ್ನು ನೋಡಿ ಗಾಭರಿಗೊಳ್ಳದೇ ಕಾರ್ಮುಕಬಾಣಗಳನ್ನು ಹಿಡಿದು ರಥದಲ್ಲಿಯೇ ನಿಂತಿದ್ದ ಶಾಂತನವನು ಹೇಳಿದನು:

06055094a ಏಹ್ಯೇಹಿ ದೇವೇಶ ಜಗನ್ನಿವಾಸ ನಮೋಽಸ್ತು ತೇ ಶಾರ್ಙ್ಗರಥಾಂಗಪಾಣೇ।
06055094c ಪ್ರಸಹ್ಯ ಮಾಂ ಪಾತಯ ಲೋಕನಾಥ ರಥೋತ್ತಮಾದ್ಭೂತಶರಣ್ಯ ಸಂಖ್ಯೇ।।

“ಬಾ! ಬಾ! ದೇವೇಶ! ಜಗನ್ನಿವಾಸ! ಶಾಂಙ್ರಚಕ್ರಪಾಣೇ! ನಿನಗೆ ನಮಸ್ಕಾರ! ಲೋಕನಾಥ! ಭೂತಶರಣ್ಯ! ನನ್ನನ್ನು ಹೊಡೆದು ಈ ಉತ್ತಮ ರಥದಿಂದ ಉರುಳಿಸು.

06055095a ತ್ವಯಾ ಹತಸ್ಯೇಹ ಮಮಾದ್ಯ ಕೃಷ್ಣ ಶ್ರೇಯಃ ಪರಸ್ಮಿನ್ನಿಹ ಚೈವ ಲೋಕೇ।
06055095c ಸಂಭಾವಿತೋಽಸ್ಮ್ಯಂಧಕವೃಷ್ಣಿನಾಥ ಲೋಕೈಸ್ತ್ರಿಭಿರ್ವೀರ ತವಾಭಿಯಾನಾತ್।।

ಕೃಷ್ಣ! ಇಂದು ನಿನ್ನಿಂದ ಹತನಾಗಿ ಇಲ್ಲಿ ಮತ್ತು ಪರಲೋಕಗಳಲ್ಲಿ ಶ್ರೇಯಸ್ಸನ್ನು ಪಡೆಯುತ್ತೇನೆ. ಅಂಧಕವೃಷ್ಣಿನಾಥ! ಮೂರು ಲೋಕಗಳ ವೀರ! ನಿನ್ನಿಂದ ಹೊಡೆಯಲ್ಪಟ್ಟು ನಾನು ಸಂಭಾವಿತನಾಗುತ್ತೇನೆ.”

06055096a ರಥಾದವಪ್ಲುತ್ಯ ತತಸ್ತ್ವರಾವಾನ್ ಪಾರ್ಥೋಽಪ್ಯನುದ್ರುತ್ಯ ಯದುಪ್ರವೀರಂ।
06055096c ಜಗ್ರಾಹ ಪೀನೋತ್ತಮಲಂಬಬಾಹುಂ ಬಾಹ್ವೋರ್ಹರಿಂ ವ್ಯಾಯತಪೀನಬಾಹುಃ।।

ಆಗ ರಥದಿಂದ ಹಾರಿ ತ್ವರೆಮಾಡಿ ಯದುಪ್ರವೀರನನ್ನು ಬೆನ್ನಟ್ಟಿ ಹೋಗಿ ಪಾರ್ಥನು ಹರಿಯ ದಪ್ಪನೆಯ ಉತ್ತಮ ನೀಳ ಬಾಹುಗಳನ್ನು ತನ್ನ ವಿಶಾಲ ದಪ್ಪ ತೋಳುಗಳಿಂದ ಹಿಡಿದುಕೊಂಡನು.

06055097a ನಿಗೃಹ್ಯಮಾಣಶ್ಚ ತದಾದಿದೇವೋ ಭೃಶಂ ಸರೋಷಃ ಕಿಲ ನಾಮ ಯೋಗೀ।
06055097c ಆದಾಯ ವೇಗೇನ ಜಗಾಮ ವಿಷ್ಣುರ್ ಜಿಷ್ಣುಂ ಮಹಾವಾತ ಇವೈಕವೃಕ್ಷಂ।।

ಹಾಗೆ ಹಿಡಿದುಕೊಂಡಿದ್ದರೂ ತುಂಬಾ ರೋಷಗೊಂಡಿದ್ದ ಆ ಆದಿದೇವ ನಾಮ ಯೋಗಿ ವಿಷ್ಣುವು ಅತ್ಯಂತ ವೇಗದಿಂದ - ಭಿರುಗಾಳಿಯಲ್ಲಿ ವೃಕ್ಷವು ಬುಡವನ್ನೂ ಎಳೆದುಕೊಂಡು ಹೋಗುವಂತೆ- ಜಿಷ್ಣುವನ್ನೂ ಎಳೆದುಕೊಂಡು ಹೋದನು.

06055098a ಪಾರ್ಥಸ್ತು ವಿಷ್ಟಭ್ಯ ಬಲೇನ ಪಾದೌ ಭೀಷ್ಮಾಂತಿಕಂ ತೂರ್ಣಮಭಿದ್ರವಂತಂ।
06055098c ಬಲಾನ್ನಿಜಗ್ರಾಹ ಕಿರೀಟಮಾಲೀ ಪದೇಽಥ ರಾಜನ್ದಶಮೇ ಕಥಂ ಚಿತ್।।

ಭೀಷ್ಮನ ಸಮೀಪಕ್ಕೆ ತನ್ನನ್ನು ಸೆಳೆದುಕೊಂಡು ಶೀಘ್ರವಾಗಿ ಓಡುತ್ತಿದ್ದ ಅವನ ಪಾದಗಳನ್ನು ಪಾರ್ಥನು ಬಲದಿಂದ ಹಿಡಿದುಕೊಂಡನು. ಕಿರೀಟಮಾಲಿಯು ಹಾಗೆ ಬಲವಾಗಿ ಹಿಡಿದುಕೊಂಡು ರಾಜನ್! ಹತ್ತನೆಯ ಹೆಜ್ಜೆಯಲ್ಲಿ ಅವನನ್ನು ಹೇಗೋ ತಡೆದನು.

06055099a ಅವಸ್ಥಿತಂ ಚ ಪ್ರಣಿಪತ್ಯ ಕೃಷ್ಣಂ ಪ್ರೀತೋಽರ್ಜುನಃ ಕಾಂಚನಚಿತ್ರಮಾಲೀ।
06055099c ಉವಾಚ ಕೋಪಂ ಪ್ರತಿಸಂಹರೇತಿ ಗತಿರ್ಭವಾನ್ಕೇಶವ ಪಾಂಡವಾನಾಂ।।

ನಿಂತು ತನ್ನ ಕೈಗಳನ್ನು ಹಿಡಿದಿದ್ದ ಕೃಷ್ಣನಿಗೆ ಪ್ರೀತನಾಗಿ ಕಾಂಚನಚಿತ್ರಮಾಲೀ ಅರ್ಜುನನು ಹೇಳಿದನು: “ಕೇಶವ! ಕೋಪವನ್ನು ಉಪಸಂಹರಿಸು! ನೀನು ಪಾಂಡವರ ಗತಿ!

06055100a ನ ಹಾಸ್ಯತೇ ಕರ್ಮ ಯಥಾಪ್ರತಿಜ್ಞಂ ಪುತ್ರೈಃ ಶಪೇ ಕೇಶವ ಸೋದರೈಶ್ಚ।
06055100c ಅಂತಂ ಕರಿಷ್ಯಾಮಿ ಯಥಾ ಕುರೂಣಾಂ ತ್ವಯಾಹಂ ಇಂದ್ರಾನುಜ ಸಂಪ್ರಯುಕ್ತಃ।।

ಪ್ರತಿಜ್ಞೆಮಾಡಿದಂತೆ ಮಾಡದೇ ಇರುವುದಿಲ್ಲ. ಕೇಶವ! ಇಂದ್ರಾನುಜ! ಮಕ್ಕಳ ಮತ್ತು ಸೋದರರ ಆಣೆಯಾಗಿ, ನಿನ್ನೊಡನೆ ಕೂಡಿಕೊಂಡು ಕುರುಗಳನ್ನು ಕೊನೆಗೊಳಿಸುತ್ತೇನೆ.”

06055101a ತತಃ ಪ್ರತಿಜ್ಞಾಂ ಸಮಯಂ ಚ ತಸ್ಮೈ ಜನಾರ್ದನಃ ಪ್ರೀತಮನಾ ನಿಶಮ್ಯ।
06055101c ಸ್ಥಿತಃ ಪ್ರಿಯೇ ಕೌರವಸತ್ತಮಸ್ಯ ರಥಂ ಸಚಕ್ರಃ ಪುನರಾರುರೋಹ।।

ಆಗ ಅವನ ಪ್ರತಿಜ್ಞೆಯನ್ನೂ ಆಣೆಯನ್ನೂ ಕೇಳಿ ಜನಾರ್ದನನು ಪ್ರೀತಮನಸ್ಕನಾದನು. ಕೌರವ ಸತ್ತಮನಿಗೆ ಪ್ರಿಯವಾದುದನ್ನು ಮಾಡುವುದರಲ್ಲಿಯೇ ಸ್ಥಿತನಾಗಿದ್ದ ಅವನು ಚಕ್ರದೊಂದಿಗೆ ಪುನಃ ರಥವನ್ನೇರಿದನು.

06055102a ಸ ತಾನಭೀಷೂನ್ಪುನರಾದದಾನಃ ಪ್ರಗೃಹ್ಯ ಶಂಖಂ ದ್ವಿಷತಾಂ ನಿಹಂತಾ।
06055102c ವಿನಾದಯಾಮಾಸ ತತೋ ದಿಶಶ್ಚ ಸ ಪಾಂಚಜನ್ಯಸ್ಯ ರವೇಣ ಶೌರಿಃ।।

ಅವನು ಕಡಿವಾಣಗಳನ್ನು ಪುನಃ ಹಿಡಿದನು. ವೈರಿಗಳ ಸಂಹಾರಿ ಶೌರಿಯು ಶಂಖವನ್ನು ಹಿಡಿದು ಆ ಪಾಂಚಜನ್ಯದ ಧ್ವನಿಯಿಂದ ದಿಶಗಳನ್ನು ಮೊಳಗಿಸಿದನು.

06055103a ವ್ಯಾವಿದ್ಧನಿಷ್ಕಾಂಗದಕುಂಡಲಂ ತಂ ರಜೋವಿಕೀರ್ಣಾಂಚಿತಪಕ್ಷ್ಮನೇತ್ರಂ।
06055103c ವಿಶುದ್ಧದಂಷ್ಟ್ರಂ ಪ್ರಗೃಹೀತಶಂಖಂ ವಿಚುಕ್ರುಶುಃ ಪ್ರೇಕ್ಷ್ಯ ಕುರುಪ್ರವೀರಾಃ।।

ಕೊರಳಿಸ ಸರ, ತೋಳ್ಬಂದಿಗಳು ಮತ್ತು ಕುಂಡಲಗಳು ಅಸ್ತವ್ಯಸ್ತವಾಗಿದ್ದ, ಬಿಲ್ಲಿನಂತೆ ಬಾಗಿದ್ದ ಕಣ್ಣಿನ ಹುಬ್ಬುಗಳು ಧೂಳಿನಿಂದ ತುಂಬಿದ, ಶಂಖವನ್ನು ಹಿಡಿದ ಆ ವಿಶುದ್ಧದಂಷ್ಟ್ರನನ್ನು ನೋಡಿ ಕುರುಪ್ರವೀರರು ಜೋರಾಗಿ ಕೂಗಿದರು.

06055104a ಮೃದಂಗಭೇರೀಪಟಹಪ್ರಣಾದಾ ನೇಮಿಸ್ವನಾ ದುಂದುಭಿನಿಸ್ವನಾಶ್ಚ।
06055104c ಸಸಿಂಹನಾದಾಶ್ಚ ಬಭೂವುರುಗ್ರಾಃ ಸರ್ವೇಷ್ವನೀಕೇಷು ತತಃ ಕುರೂಣಾಂ।।

ಆಗ ಕುರುಗಳ ಸರ್ವ ಸೇನೆಗಳಲ್ಲಿ ಮೃದಂಗ-ಭೇರಿ-ಪಟಹ-ಪ್ರಣಾದಗಳ, ರಥದ ಗಾಲಿಗಳ ಧ್ವನಿಯೂ, ದುಂದುಭಿಗಳ ಧ್ವನಿಯೂ, ಉಗ್ರ ಸಿಂಹನಾದಗಳೂ ಕೇಳಿಬಂದವು.

06055105a ಗಾಂಡೀವಘೋಷಃ ಸ್ತನಯಿತ್ನುಕಲ್ಪೋ ಜಗಾಮ ಪಾರ್ಥಸ್ಯ ನಭೋ ದಿಶಶ್ಚ।
06055105c ಜಗ್ಮುಶ್ಚ ಬಾಣಾ ವಿಮಲಾಃ ಪ್ರಸನ್ನಾಃ ಸರ್ವಾ ದಿಶಃ ಪಾಂಡವಚಾಪಮುಕ್ತಾಃ।।

ಪಾರ್ಥನ ಗಾಂಡೀವದ ಘೋಷವು ಮೋಡಗಳಂತೆ ಮೊಳಗಿ ನಭ-ದಿಶಗಳನ್ನು ತಲುಪಿತು. ಪಾಂಡವನ ಚಾಪದಿಂದ ಹೊರಬಂದ ವಿಮಲ ಪ್ರಸನ್ನ ಬಾಣಗಳು ಎಲ್ಲ ದಿಶಗಳಲ್ಲಿ ಹಾರಿದವು.

06055106a ತಂ ಕೌರವಾಣಾಮಧಿಪೋ ಬಲೇನ ಭೀಷ್ಮೇಣ ಭೂರಿಶ್ರವಸಾ ಚ ಸಾರ್ಧಂ।
06055106c ಅಭ್ಯುದ್ಯಯಾವುದ್ಯತಬಾಣಪಾಣಿಃ ಕಕ್ಷಂ ದಿಧಕ್ಷನ್ನಿವ ಧೂಮಕೇತುಃ।।

ಕೌರವರ ಅಧಿಪನು, ಭೀಷ್ಮ, ಭೂರಿಶ್ರವ ಮತ್ತು ಸೇನೆಯೊಂದಿಗೆ ಆಕಾಶವನ್ನು ಸುಡುವ ಧೂಮಕೇತುವಿನಂತಿರುವ ಬಾಣವನ್ನು ಹಿಡಿದು ಅವನ ಕಡೆ ಮುನ್ನುಗ್ಗಿದನು.

06055107a ಅಥಾರ್ಜುನಾಯ ಪ್ರಜಹಾರ ಭಲ್ಲಾನ್ ಭೂರಿಶ್ರವಾಃ ಸಪ್ತ ಸುವರ್ಣಪುಂಖಾನ್।
06055107c ದುರ್ಯೋಧನಸ್ತೋಮರಮುಗ್ರವೇಗಂ ಶಲ್ಯೋ ಗದಾಂ ಶಾಂತನವಶ್ಚ ಶಕ್ತಿಂ।।

ಅರ್ಜುನನ ಮೇಲೆ ಭೂರಿಶ್ರವನು ಏಳು ಸುವರ್ಣಪುಂಖಗಳ ಭಲ್ಲಗಳನ್ನು, ದುರ್ಯೋಧನನು ಉಗ್ರವೇಗದ ತೋಮರವನ್ನು, ಶಲ್ಯನು ಗದೆಯನ್ನು ಮತ್ತು ಶಾಂತನವನು ಶಕ್ತಿಯನ್ನು ಎಸೆದರು.

06055108a ಸ ಸಪ್ತಭಿಃ ಸಪ್ತ ಶರಪ್ರವೇಕಾನ್ ಸಂವಾರ್ಯ ಭೂರಿಶ್ರವಸಾ ವಿಸೃಷ್ಟಾನ್।
06055108c ಶಿತೇನ ದುರ್ಯೋಧನಬಾಹುಮುಕ್ತಂ ಕ್ಷುರೇಣ ತತ್ತೋಮರಮುನ್ಮಮಾಥ।।

ಭೂರಿಶ್ರವನು ಪ್ರಯೋಗಿಸಿದ್ದ ಆ ಏಳು ಬಾಣಗಳನ್ನು ಅವನು ತನ್ನದೇ ಏಳು ಬಾಣಗಳಿಂದ ತಡೆದನು ಮತ್ತು ಹರಿತ ಬಾಣದಿಂದ ದುರ್ಯೋಧನನ ಬಾಹುಗಳಿಂದ ಪ್ರಯೋಗಿಸಲ್ಪಟ್ಟ ತೋಮರವನ್ನು ತುಂಡರಿಸಿದನು.

06055109a ತತಃ ಶುಭಾಮಾಪತತೀಂ ಸ ಶಕ್ತಿಂ ವಿದ್ಯುತ್ಪ್ರಭಾಂ ಶಾಂತನವೇನ ಮುಕ್ತಾಂ।
06055109c ಗದಾಂ ಚ ಮದ್ರಾಧಿಪಬಾಹುಮುಕ್ತಾಂ ದ್ವಾಭ್ಯಾಂ ಶರಾಭ್ಯಾಂ ನಿಚಕರ್ತ ವೀರಃ।।

ಆಗ ಆ ವೀರನು ತನ್ನ ಮೇಲೆ ವಿದ್ಯುತ್ಪ್ರಭೆಯಿಂದ ಬೀಳುತ್ತಿದ್ದ ಶಾಂತನವನು ಪ್ರಯೋಗಿಸಿದ ಶಕ್ತಿಯನ್ನು ಮತ್ತು ಮದ್ರಾಧಿಪನು ಬಿಸುಟ ಗದೆಯನ್ನು ಎರಡು ಬಾಣಗಳಿಂದ ತುಂಡರಿಸಿದನು.

06055110a ತತೋ ಭುಜಾಭ್ಯಾಂ ಬಲವದ್ವಿಕೃಷ್ಯ ಚಿತ್ರಂ ಧನುರ್ಗಾಂಡಿವಮಪ್ರಮೇಯಂ।
06055110c ಮಾಹೇಂದ್ರಮಸ್ತ್ರಂ ವಿಧಿವತ್ಸುಘೋರಂ ಪ್ರಾದುಶ್ಚಕಾರಾದ್ಭುತಮಂತರಿಕ್ಷೇ।।

ಆಗ ತನ್ನ ಭುಜಗಳೆರಡರಿಂದ ಬಲವನ್ನುಪಯೋಗಿಸಿ ಬಣ್ಣದ, ಅಪ್ರಮೇಯ ಗಾಂಡೀವ ಧನುಸ್ಸನ್ನು ಎಳೆದು ವಿಧಿವತ್ತಾಗಿ ಅತಿ ಘೋರ ಅದ್ಭುತ ಮಾಹೇಂದ್ರಾಸ್ತ್ರವನ್ನು ಅಂತರಿಕ್ಷದಲ್ಲಿ ಪ್ರಕಟಗೊಳಿಸಿದನು.

06055111a ತೇನೋತ್ತಮಾಸ್ತ್ರೇಣ ತತೋ ಮಹಾತ್ಮಾ ಸರ್ವಾಣ್ಯನೀಕಾನಿ ಮಹಾಧನುಷ್ಮಾನ್।
06055111c ಶರೌಘಜಾಲೈರ್ವಿಮಲಾಗ್ನಿವರ್ಣೈರ್ ನಿವಾರಯಾಮಾಸ ಕಿರೀಟಮಾಲೀ।।

ಆಗ ಆ ಮಹಾತ್ಮ, ಮಹಾಧನುಷ್ಮಾನ್ ಕಿರೀಟಮಾಲಿಯು ಆ ಉತ್ತಮ ಅಸ್ತ್ರದ ಮೂಲಕ ನಿರ್ಮಲ ಅಗ್ನಿಗೆ ಸಮನಾಗಿ ಪ್ರಜ್ವಲಿಸುತಿದ್ದ ಬಾಣಗಳ ಜಾಲಗಳಿಂದ ಸೇನೆಗಳೆಲ್ಲವನ್ನೂ ತಡೆದನು.

06055112a ಶಿಲೀಮುಖಾಃ ಪಾರ್ಥಧನುಃಪ್ರಮುಕ್ತಾ ರಥಾನ್ಧ್ವಜಾಗ್ರಾಣಿ ಧನೂಂಷಿ ಬಾಹೂನ್।
06055112c ನಿಕೃತ್ಯ ದೇಹಾನ್ವಿವಿಶುಃ ಪರೇಷಾಂ ನರೇಂದ್ರನಾಗೇಂದ್ರತುರಂಗಮಾಣಾಂ।।

ಪಾರ್ಥನ ಧನುಸ್ಸಿನಿಂದ ಪ್ರಮುಕ್ತವಾದ ಶಿಲೀಮುಖಗಳು ರಥ-ಧ್ವಜಾಗ್ರ-ಧನುಸ್ಸು-ಬಾಹುಗಳನ್ನು ಕತ್ತರಿಸಿ, ಶತ್ರುಗಳ ನರೇಂದ್ರ, ನಾಗೇಂದ್ರ, ತುರಂಗಗಳ ದೇಹಗಳನ್ನು ಪ್ರವೇಶಿಸಿದವು.

06055113a ತತೋ ದಿಶಶ್ಚಾನುದಿಶಶ್ಚ ಪಾರ್ಥಃ ಶರೈಃ ಸುಧಾರೈರ್ನಿಶಿತೈರ್ವಿತತ್ಯ।
06055113c ಗಾಂಡೀವಶಬ್ದೇನ ಮನಾಂಸಿ ತೇಷಾಂ ಕಿರೀಟಮಾಲೀ ವ್ಯಥಯಾಂ ಚಕಾರ।।

ಆಗ ಪಾರ್ಥನು ಒಂದೇಸಮನೆ ಸುರಿಯುವ ಧಾರೆಗಳಂತಹ ಹರಿತ ಶರಗಳಿಂದ ದಿಕ್ಕು-ಉಪದಿಕ್ಕುಗಳನ್ನು ತುಂಬಿಸಿದನು. ಕಿರೀಟಮಾಲಿಯ ಗಾಂಡೀವ ಶಬ್ಧವೇ ಅವರ ಮನಸ್ಸುಗಳಲ್ಲಿ ವ್ಯಥೆಯನ್ನುಂಟುಮಾಡಿತು.

06055114a ತಸ್ಮಿಂಸ್ತಥಾ ಘೋರತಮೇ ಪ್ರವೃತ್ತೇ ಶಂಖಸ್ವನಾ ದುಂದುಭಿನಿಸ್ವನಾಶ್ಚ।
06055114c ಅಂತರ್ಹಿತಾ ಗಾಂಡಿವನಿಸ್ವನೇನ ಭಭೂವುರುಗ್ರಾಶ್ಚ ರಣಪ್ರಣಾದಾಃ।।

ಹೀಗೆ ಘೋರತಮ ಯುದ್ಧವು ನಡೆಯುತ್ತಿರಲು ಶಂಖಸ್ವನಗಳು, ದುಂದುಭಿಗಳ ನಿಸ್ವನಗಳು, ರಣಕೂಗುಗಳು ಉಗ್ರ ಗಾಂಡೀವ ನಿಸ್ವನದಲ್ಲಿ ಅಡಗಿಹೋದವು.

06055115a ಗಾಂಡೀವಶಬ್ದಂ ತಮಥೋ ವಿದಿತ್ವಾ ವಿರಾಟರಾಜಪ್ರಮುಖಾ ನೃವೀರಾಃ।
06055115c ಪಾಂಚಾಲರಾಜೋ ದ್ರುಪದಶ್ಚ ವೀರಸ್ ತಂ ದೇಶಮಾಜಗ್ಮುರದೀನಸತ್ತ್ವಾಃ।।

ಆಗ ಗಾಂಡೀವಶಬ್ಧವನ್ನು ಕೇಳಿ ವಿರಾಟರಾಜ ಮತ್ತು ವೀರ ಪಾಂಚಾಲರಾಜ ದ್ರುಪದನೇ ಮೊದಲಾದ ನರವೀರರು ದೀನಸತ್ತ್ವರಾಗಿ ಆ ಪ್ರದೇಶಕ್ಕೆ ಆಗಮಿಸಿದರು.

06055116a ಸರ್ವಾಣಿ ಸೈನ್ಯಾನಿ ತು ತಾವಕಾನಿ ಯತೋ ಯತೋ ಗಾಂಡಿವಜಃ ಪ್ರಣಾದಃ।
06055116c ತತಸ್ತತಃ ಸನ್ನತಿಮೇವ ಜಗ್ಮುರ್ ನ ತಂ ಪ್ರತೀಪೋಽಭಿಸಸಾರ ಕಶ್ಚಿತ್।।

ಎಲ್ಲೆಲ್ಲಿ ಗಾಂಡೀವಧನುಸ್ಸಿನ ಶಬ್ಧವು ಕೇಳಿಬರುತ್ತಿತ್ತೋ ಅಲ್ಲಲ್ಲಿ ನಿನ್ನ ಸೈನಿಕರೆಲ್ಲರೂ ದೈನ್ಯರಾಗಿ ನಿಂತುಬಿಡುತ್ತಿದ್ದರು. ಅವನನ್ನು ಎದುರಿಸಲು ಯಾರೂ ಹೋಗುತ್ತಿರಲಿಲ್ಲ.

06055117a ತಸ್ಮಿನ್ಸುಘೋರೇ ನೃಪಸಂಪ್ರಹಾರೇ ಹತಾಃ ಪ್ರವೀರಾಃ ಸರಥಾಃ ಸಸೂತಾಃ।
06055117c ಗಜಾಶ್ಚ ನಾರಾಚನಿಪಾತತಪ್ತಾ ಮಹಾಪತಾಕಾಃ ಶುಭರುಕ್ಮಕಕ್ಷ್ಯಾಃ।।

ಆ ಘೋರ ನೃಪಸಂಪ್ರಹಾರದಲ್ಲಿ ರಥ-ಸೂತರೊಂದಿಗೆ ಪ್ರವೀರರು ಹತರಾದರು. ನಾರಾಚಗಳ ಹೊಡೆತಕ್ಕೆ ಸಿಲುಕಿ ಆನೆಗಳು, ಶುಭರುಕ್ಮಕಕ್ಷೆಗಳ ಮಹಾಪತಾಕೆಗಳು ಸುಟ್ಟು ಬಿದ್ದವು.

06055118a ಪರೀತಸತ್ತ್ವಾಃ ಸಹಸಾ ನಿಪೇತುಃ ಕಿರೀಟಿನಾ ಭಿನ್ನತನುತ್ರಕಾಯಾಃ।
06055118c ದೃಢಾಹತಾಃ ಪತ್ರಿಭಿರುಗ್ರವೇಗೈಃ ಪಾರ್ಥೇನ ಭಲ್ಲೈರ್ನಿಶಿತೈಃ ಶಿತಾಗ್ರೈಃ।।

ಕಿರೀಟಿಯಿಂದ ದೇಹ-ಕಾಯಗಳು ಒಡೆದು ಸತ್ತ್ವಗಳನ್ನು ಕಳೆದುಕೊಂಡು ತಕ್ಷಣವೇ ಬೀಳುತ್ತಿದ್ದರು. ಉಗ್ರವೇಗದಿಂದ ಬರುತ್ತಿದ್ದ ಪಾರ್ಥನ ಪತ್ರಿಗಳು ಮತ್ತು ನಿಶಿತ ಶಿತಾಗ್ರ ಭಲ್ಲಗಳಿಂದ ದೃಢಹತರಾಗಿ ಬೀಳುತ್ತಿದ್ದರು.

06055119a ನಿಕೃತ್ತಯಂತ್ರಾ ನಿಹತೇಂದ್ರಕೀಲಾ ಧ್ವಜಾ ಮಹಾಂತೋ ಧ್ವಜಿನೀಮುಖೇಷು।
06055119c ಪದಾತಿಸಂಘಾಶ್ಚ ರಥಾಶ್ಚ ಸಂಖ್ಯೇ ಹಯಾಶ್ಚ ನಾಗಾಶ್ಚ ಧನಂಜಯೇನ।।
06055120a ಬಾಣಾಹತಾಸ್ತೂರ್ಣಮಪೇತಸತ್ತ್ವಾ ವಿಷ್ಟಭ್ಯ ಗಾತ್ರಾಣಿ ನಿಪೇತುರುರ್ವ್ಯಾಂ।
06055120c ಐಂದ್ರೇಣ ತೇನಾಸ್ತ್ರವರೇಣ ರಾಜನ್ ಮಹಾಹವೇ ಭಿನ್ನತನುತ್ರದೇಹಾಃ।।

ಸೇನಾಮುಖಗಳಲ್ಲಿದ್ದ ದೊಡ್ಡ ದೊಡ್ಡ ಧ್ವಜಗಳೂ, ಯಂತ್ರಗಳೂ, ಸ್ತಂಭಗಳೂ ಮುರಿದು ಬಿದ್ದವು. ಧನಂಜಯನಿಂದ ಹೊಡೆಯಲ್ಪಟ್ಟು ಪದಾತಿಸಮೂಹಗಳು, ರಥಗಳು, ಕುದುರೆಗಳು ಮತ್ತು ಆನೆಗಳು ತಕ್ಷಣವೇ ಸತ್ತ್ವಗಳನ್ನು ಕಳೆದುಕೊಂಡು ಪೆಟ್ಟುಬಿದ್ದ ಸ್ಥಳಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಭೂಮಿಯ ಮೇಲೆ ಬೀಳುತ್ತಿದ್ದವು. ರಾಜನ್! ಆ ಅಸ್ತ್ರಶ್ರೇಷ್ಠ ಐಂದ್ರದ ಪ್ರಭಾವದಿಂದ ಮಹಾಹವದಲ್ಲಿ ತನು-ದೇಹಗಳು ತುಂಡಾಗಿ ಬಿದ್ದಿದ್ದವು.

06055121a ತತಃ ಶರೌಘೈರ್ನಿಶಿತೈಃ ಕಿರೀಟಿನಾ ನೃದೇಹಶಸ್ತ್ರಕ್ಷತಲೋಹಿತೋದಾ।
06055121c ನದೀ ಸುಘೋರಾ ನರದೇಹಫೇನಾ ಪ್ರವರ್ತಿತಾ ತತ್ರ ರಣಾಜಿರೇ ವೈ।।

ಆಗ ಕಿರೀಟಿಯ ನಿಶಿತ ಶರೌಘಗಳಿಂದ ಕ್ಷತರಾದ ಮನುಷ್ಯರ ದೇಹಗಳಿಂದ ಹೊರಟ ರಕ್ತದ ಕೋಡಿಯು ನರದೇಹಗಳೇ ನೊರೆಯಾದ ಒಂದು ಘೋರ ನದಿಯಾಗಿ ಆ ರಣರಂಗದಲ್ಲಿ ಪರಿಣಮಿಸಿತು.

06055122a ವೇಗೇನ ಸಾತೀವ ಪೃಥುಪ್ರವಾಹಾ ಪ್ರಸುಸ್ರುತಾ ಭೈರವಾರಾವರೂಪಾ।
06055122c ಪರೇತನಾಗಾಶ್ವಶರೀರರೋಧಾ ನರಾಂತ್ರಮಜ್ಜಾಭೃತಮಾಂಸಪಂಕಾ।।

ದೊಡ್ಡಪ್ರವಾಹದಿಂದ ಭೈರವ ರೂಪವನ್ನು ತಾಳಿ ಅತೀವ ವೇಗದಿಂದ ಹರಿಯುತ್ತಿತ್ತು. ಆನೆ-ಕುದುರೆಗಳ ಹೆಣಗಳು ಅದರ ಎರಡು ದಡಗಳಾಗಿದ್ದವು. ನರೇಂದ್ರರ ಮಜ್ಜೆ ಮಾಂಸಗಳ ಮಿಶ್ರಣವು ಆ ರಕ್ತನದಿಯ ಕೆಸರಾಗಿತ್ತು.

06055123a ಪ್ರಭೂತರಕ್ಷೋಗಣಭೂತಸೇವಿತಾ ಶಿರಃಕಪಾಲಾಕುಲಕೇಶಶಾದ್ವಲಾ।
06055123c ಶರೀರಸಂಘಾತಸಹಸ್ರವಾಹಿನೀ ವಿಶೀರ್ಣನಾನಾಕವಚೋರ್ಮಿಸಂಕುಲಾ।।

ಅನೇಕ ರಾಕ್ಷಸ ಭೂತಗಣಗಳು ಅದನ್ನು ಸೇವಿಸುತ್ತಿದ್ದರು. ಕಪೋಲದವರೆಗೂ ಹರಡಿದ್ದ ತಲೆಕೂದಲುಗಳು ಅದರ ದಂಡೆಯಲ್ಲಿರುವ ಹುಲ್ಲುಗಾವಲಿನಂತಿತ್ತು. ಶರೀರಗಳು ಇನ್ನೂ ಬೀಳುತ್ತಿರಲು ಅದು ನಾನಾ ಕವಲುಗಳಾಗಿ ಹರಿದು ಸಹಸ್ರವಾಹಿನಿಯಂತಿತ್ತು.

06055124a ನರಾಶ್ವನಾಗಾಸ್ಥಿನಿಕೃತ್ತಶರ್ಕರಾ ವಿನಾಶಪಾತಾಲವತೀ ಭಯಾವಹಾ।
06055124c ತಾಂ ಕಂಕಮಾಲಾವೃತಗೃಧ್ರಕಹ್ವೈಃ ಕ್ರವ್ಯಾದಸಂಘೈಶ್ಚ ತರಕ್ಷುಭಿಶ್ಚ।।

ಮನುಷ್ಯರ, ಕುದುರೆಗಳ ಮತ್ತು ಆನೆಗಳು ಅದರಲ್ಲಿರುವ ಕಲ್ಲುಹರಳುಗಳಂತಿದ್ದವು. ಆ ಕಂಕಮಾಲೆಯನ್ನು ನಾಯಿಗಳು, ಹದ್ದುಗಳೂ, ತೋಳಗಳೂ, ರಣಹದ್ದುಗಳೂ, ಕಾಗೆಗಲೂ, ಮಾಂಸಾಶಿಗಳ ಸಮೂಹಗಳೂ, ಕಿರುಬಗಳೂ ಸುತ್ತುವರೆದಿದ್ದವು.

06055125a ಉಪೇತಕೂಲಾಂ ದದೃಶುಃ ಸಮಂತಾತ್ ಕ್ರೂರಾಂ ಮಹಾವೈತರಣೀಪ್ರಕಾಶಾಂ।
06055125c ಪ್ರವರ್ತಿತಾಮರ್ಜುನಬಾಣಸಂಘೈರ್ ಮೇದೋವಸಾಸೃಕ್ಪ್ರವಹಾಂ ಸುಭೀಮಾಂ।।

ಎಲ್ಲಕಡೆಯಲ್ಲಿಯೂ ವ್ಯಾಪಿಸಿರುವ, ಅರ್ಜುನನ ಬಾಣಸಮೂಹಗಳಿಂದ ಉತ್ಪನ್ನವಾದ, ಮಾಂಸ-ಮಜ್ಜೆ-ರಕ್ತಗಳಿಂದ ಕೂಡಿ ಹರಿಯುತ್ತಿದ್ದ ಭಯಂಕರ ಕ್ರೂರ ಮಹಾವೈತರಣಿಯಂತೆ ತೋರುವ ರಕ್ತನದಿಯನ್ನು ನೋಡಿದರು.

06055126a ತೇ ಚೇದಿಪಾಂಚಾಲಕರೂಷಮತ್ಸ್ಯಾಃ ಪಾರ್ಥಾಶ್ಚ ಸರ್ವೇ ಸಹಿತಾಃ ಪ್ರಣೇದುಃ।
06055126c ವಿತ್ರಾಸ್ಯ ಸೇನಾಂ ಧ್ವಜಿನೀಪತೀನಾಂ ಸಿಂಹೋ ಮೃಗಾಣಾಮಿವ ಯೂಥಸಂಘಾನ್।।
06055126e ವಿನೇದತುಸ್ತಾವತಿಹರ್ಷಯುಕ್ತೌ ಗಾಂಡೀವಧನ್ವಾ ಚ ಜನಾರ್ದನಶ್ಚ।।

ಆಗ ಚೇದಿ-ಪಾಂಚಾಲ-ಕರೂಷ-ಮತ್ಸ್ಯರು ಮತ್ತು ಪಾರ್ಥರು ಎಲ್ಲರೂ ಒಟ್ಟಿಗೇ ಶತ್ರುಸೇನೆಯ ಧ್ವಜಪತಿಗಳನ್ನು ಮೃಗಗಳನ್ನು ಸಿಂಹಗಳು ತತ್ತರಿಸುವಂತೆ ಸಿಂಹನಾದಗೈದರು. ಅತಿ ಹರ್ಷದಿಂದ ಗಾಂಡೀವ ಧನ್ವಿ ಮತ್ತು ಜನಾರ್ದನರೂ ನಾದಗೈದರು.

06055127a ತತೋ ರವಿಂ ಸಂಹೃತರಶ್ಮಿಜಾಲಂ ದೃಷ್ಟ್ವಾ ಭೃಶಂ ಶಸ್ತ್ರಪರಿಕ್ಷತಾಂಗಾಃ।
06055127c ತದೈಂದ್ರಮಸ್ತ್ರಂ ವಿತತಂ ಸುಘೋರಂ ಅಸಹ್ಯಮುದ್ವೀಕ್ಷ್ಯ ಯುಗಾಂತಕಲ್ಪಂ।।
06055128a ಅಥಾಪಯಾನಂ ಕುರವಃ ಸಭೀಷ್ಮಾಃ ಸದ್ರೋಣದುರ್ಯೋಧನಬಾಹ್ಲಿಕಾಶ್ಚ।
06055128c ಚಕ್ರುರ್ನಿಶಾಂ ಸಂಧಿಗತಾಂ ಸಮೀಕ್ಷ್ಯ ವಿಭಾವಸೋರ್ಲೋಹಿತರಾಜಿಯುಕ್ತಾಂ।।

ಆಗ ರವಿಯು ತನ್ನ ಕಿರಣಗಳನ್ನು ಮುದುಡಿಕೊಳುತ್ತಿರುವುದನ್ನು ನೋಡಿ, ಶಸ್ತ್ರಗಳಿಂದ ಗಾಯಗೊಂಡು, ಸುಘೋರ ಸಹಿಸಲಸಾಧ್ಯ ಯುಗಾಂತಕಲ್ಪ ಆ ಐಂದ್ರಾಸ್ತ್ರವನ್ನು ಕಂಡು, ವಿಭಾವಸುವು ಲೋಹಿತರಾಜಿಯುಕ್ತನಾಗಿ ರಾತ್ರಿಯು ಸಂಧಿಗತವಾದುದನ್ನು ನೋಡಿ, ಭೀಷ್ಮ-ದ್ರೋಣ-ದುರ್ಯೋಧನ-ಬಾಹ್ಲೀಕರೊಂದಿಗೆ ಕೌರವರು ಹಿಮ್ಮೆಟ್ಟಿದರು.

06055129a ಅವಾಪ್ಯ ಕೀರ್ತಿಂ ಚ ಯಶಶ್ಚ ಲೋಕೇ ವಿಜಿತ್ಯ ಶತ್ರೂಂಶ್ಚ ಧನಂಜಯೋಽಪಿ।
06055129c ಯಯೌ ನರೇಂದ್ರೈಃ ಸಹ ಸೋದರೈಶ್ಚ ಸಮಾಪ್ತಕರ್ಮಾ ಶಿಬಿರಂ ನಿಶಾಯಾಂ।

ಲೋಕಗಳಲ್ಲಿ ಕೀರ್ತಿಯನ್ನೂ ಯಶಸ್ಸನ್ನೂ ಪಡೆದು, ಶತ್ರುಗಳನ್ನೂ ಗೆದ್ದು ಧನಂಜಯನು ನರೇಂದ್ರರು ಮತ್ತು ಸೋದರರೊಂದಿಗೆ ಕರ್ಮವನ್ನು ಸಮಾಪ್ತಗೊಳಿಸಿ ರಾತ್ರಿ ಶಿಬಿರಕ್ಕೆ ಬಂದನು.

06055129e ತತಃ ಪ್ರಜಜ್ಞೇ ತುಮುಲಃ ಕುರೂಣಾಂ ನಿಶಾಮುಖೇ ಘೋರತರಃ ಪ್ರಣಾದಃ।।
06055130a ರಣೇ ರಥಾನಾಮಯುತಂ ನಿಹತ್ಯ ಹತಾ ಗಜಾಃ ಸಪ್ತಶತಾರ್ಜುನೇನ।
06055130c ಪ್ರಾಚ್ಯಾಶ್ಚ ಸೌವೀರಗಣಾಶ್ಚ ಸರ್ವೇ ನಿಪಾತಿತಾಃ ಕ್ಷುದ್ರಕಮಾಲವಾಶ್ಚ।
06055130e ಮಹತ್ಕೃತಂ ಕರ್ಮ ಧನಂಜಯೇನ ಕರ್ತುಂ ಯಥಾ ನಾರ್ಹತಿ ಕಶ್ಚಿದನ್ಯಃ।।

ಆಗ ನಿಶಾಮುಖದಲ್ಲಿ ಕುರುಗಳ ಕಡೆಯಲ್ಲಿ ಘೋರತರ ಗಲಾಟೆಯು ಕೇಳಿಬಂದಿತು: “ಅರ್ಜುನನು ಇಂದು ಹತ್ತು ಸಾವಿರ ರಥಗಳನ್ನೂ ಏಳುನೂರು ಆನೆಗಳನ್ನೂ ಸಂಹರಿಸಿದ್ದಾನೆ. ಪೂರ್ವದವರೂ, ಸೌವೀರಗಣಗಳೆಲ್ಲವೂ, ಕ್ಷುದ್ರಕಮಾಲರೂ ಕೆಳಗುರುಳಿದ್ದಾರೆ. ಧನಂಜಯನು ಮಾಡಿದ ಈ ಮಹಾಕೃತ್ಯವನ್ನು ಬೇರೆ ಯಾರೂ ಮಾಡಲು ಶಕ್ಯರಿಲ್ಲ.

06055131a ಶ್ರುತಾಯುರಂಬಷ್ಠಪತಿಶ್ಚ ರಾಜಾ ತಥೈವ ದುರ್ಮರ್ಷಣಚಿತ್ರಸೇನೌ।
06055131c ದ್ರೋಣಃ ಕೃಪಃ ಸೈಂಧವಬಾಹ್ಲಿಕೌ ಚ ಭೂರಿಶ್ರವಾಃ ಶಲ್ಯಶಲೌ ಚ ರಾಜನ್।।
06055131e ಸ್ವಬಾಹುವೀರ್ಯೇಣ ಜಿತಾಃ ಸಭೀಷ್ಮಾಃ ಕಿರೀಟಿನಾ ಲೋಕಮಹಾರಥೇನ।।

ಲೋಕ ಮಹಾರಥ ಕಿರೀಟಿಯು ತನ್ನ ಬಾಹುವೀರ್ಯದಿಂದ ಭೀಷ್ಮನೊಂದಿಗೆ ಶ್ರುತಾಯು, ರಾಜಾ ಅಂಬಷ್ಠಪತಿ, ಹಾಗೆಯೇ ದುರ್ಮರ್ಷಣ-ಚಿತ್ರಸೇನರು, ದ್ರೋಣ, ಕೃಪ, ಸೈಂಧವ, ಬಾಹ್ಲೀಕ, ಭೂರಿಶ್ರವ, ಶಲ್ಯ, ಶಲರನ್ನೂ ಗೆದ್ದಿದ್ದಾನೆ.”

06055132a ಇತಿ ಬ್ರುವಂತಃ ಶಿಬಿರಾಣಿ ಜಗ್ಮುಃ ಸರ್ವೇ ಗಣಾ ಭಾರತ ಯೇ ತ್ವದೀಯಾಃ।
06055132c ಉಲ್ಕಾಸಹಸ್ರೈಶ್ಚ ಸುಸಂಪ್ರದೀಪ್ತೈರ್ ವಿಭ್ರಾಜಮಾನೈಶ್ಚ ತಥಾ ಪ್ರದೀಪೈಃ।
06055132e ಕಿರೀಟಿವಿತ್ರಾಸಿತಸರ್ವಯೋಧಾ ಚಕ್ರೇ ನಿವೇಶಂ ಧ್ವಜಿನೀ ಕುರೂಣಾಂ।।

ಭಾರತ! ಹೀಗೆ ಮಾತನಾಡಿಕೊಳ್ಳುತ್ತಾ ನಿನ್ನವರು ಎಲ್ಲ ಗಣಗಳೂ ಹೆಚ್ಚು ಬೆಳಕು ಕೊಡುತ್ತಿದ್ದ ಸಾವಿರಾರು ಪಂಜುಗಳನ್ನೂ ಪ್ರಕಾಶಮಾನ ದೀವಟಿಗೆಗಳನ್ನೂ ತೆಗೆದುಕೊಂಡು ತಮ್ಮ ತಮ್ಮ ಶಿಬಿರಗಳಿಗೆ ತೆರಳಿದರು. ಕಿರೀಟಿಯ ಬಾಣಗಳ ಪ್ರಹಾರದಿಂದ ತತ್ತರಿಸಿದ್ದ ಯೋಧರೆಲ್ಲರೂ ಕುರು-ಧ್ವಜಗಳ ನಿವೇಶನಗಳಲ್ಲಿ ವಿಶ್ರಾಂತಿಪಡೆದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ತೃತೀಯದಿವಸಾವಹಾರೇ ಪಂಚಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ತೃತೀಯದಿವಸಾವಹಾರ ಎನ್ನುವ ಐವತ್ತೈದನೇ ಅಧ್ಯಾಯವು.