052 ತೃತೀಯಯುದ್ಧದಿವಸೇ ಪರಸ್ಪರವ್ಯೂಹರಚನಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 52

ಸಾರ

ಭೀಷ್ಮನು ಗರುಡವ್ಯೂಹವನ್ನು ರಚಿಸಿದುದು (1-9). ಅರ್ಜುನನು ಅರ್ಧಚಂದ್ರದ ವ್ಯೂಹವನ್ನು ರಚಿಸಿದುದು (10-18). ಯುದ್ಧಾರಂಭ (19-22).

06052001 ಸಂಜಯ ಉವಾಚ।
06052001a ಪ್ರಭಾತಾಯಾಂ ತು ಶರ್ವರ್ಯಾಂ ಭೀಷ್ಮಃ ಶಾಂತನವಸ್ತತಃ।
06052001c ಅನೀಕಾನ್ಯನುಸಮ್ಯಾನೇ ವ್ಯಾದಿದೇಶಾಥ ಭಾರತ।।

ಸಂಜಯನು ಹೇಳಿದನು: “ಭಾರತ! ರಾತ್ರಿಯು ಕಳೆದು ಪ್ರಭಾತವಾಗಲು ಶಾಂತನವ ಭೀಷ್ಮನು ಯುದ್ಧಕ್ಕೆ ಹೊರಡುವಂತೆ ಸೇನೆಗಳಿಗೆ ಆದೇಶವಿತ್ತನು.

06052002a ಗಾರುಡಂ ಚ ಮಹಾವ್ಯೂಹಂ ಚಕ್ರೇ ಶಾಂತನವಸ್ತದಾ।
06052002c ಪುತ್ರಾಣಾಂ ತೇ ಜಯಾಕಾಂಕ್ಷೀ ಭೀಷ್ಮಃ ಕುರುಪಿತಾಮಹಃ।।

ಆಗ ನಿನ್ನ ಪುತ್ರರ ವಿಜಯಾಕಾಂಕ್ಷಿಯಾದ ಕುರುಪಿತಾಮಹ ಶಾಂತನವ ಭೀಷ್ಮನು ಗರುಡ ಮಹಾವ್ಯೂಹವನ್ನು ರಚಿಸಿದನು.

06052003a ಗರುಡಸ್ಯ ಸ್ವಯಂ ತುಂಡೇ ಪಿತಾ ದೇವವ್ರತಸ್ತವ।
06052003c ಚಕ್ಷುಷೀ ಚ ಭರದ್ವಾಜಃ ಕೃತವರ್ಮಾ ಚ ಸಾತ್ವತಃ।।

ಗರುಡನ ಕೊಕ್ಕಿನ ಪ್ರದೇಶತಲ್ಲಿ ನಿನ್ನ ಪಿತ ಸ್ವಯಂ ದೇವವ್ರತನಿದ್ದನು. ಭಾರದ್ವಾಜ ಮತ್ತು ಸಾತ್ವತ ಕೃತವರ್ಮರು ಅದರ ಕಣ್ಣುಗಳಾಗಿದ್ದರು.

06052004a ಅಶ್ವತ್ಥಾಮಾ ಕೃಪಶ್ಚೈವ ಶೀರ್ಷಮಾಸ್ತಾಂ ಯಶಸ್ವಿನೌ।
06052004c ತ್ರಿಗರ್ತೈರ್ಮತ್ಸ್ಯಕೈಕೇಯೈರ್ವಾಟಧಾನೈಶ್ಚ ಸಂಯುತೌ।।

ಅದರ ಶೀರ್ಷಭಾಗದಲ್ಲಿ ಯಶಸ್ವಿ ಅಶ್ವತ್ಥಾಮ-ಕೃಪರೂ, ಒಟ್ಟಿಗೆ ತ್ರಿಗರ್ತರು, ಕೇಕಯರು, ವಾಟದಾನರೂ ಇದ್ದರು.

06052005a ಭೂರಿಶ್ರವಾಃ ಶಲಃ ಶಲ್ಯೋ ಭಗದತ್ತಶ್ಚ ಮಾರಿಷ।
06052005c ಮದ್ರಕಾಃ ಸಿಂಧುಸೌವೀರಾಸ್ತಥಾ ಪಂಚನದಾಶ್ಚ ಯೇ।।
06052006a ಜಯದ್ರಥೇನ ಸಹಿತಾ ಗ್ರೀವಾಯಾಂ ಸಮ್ನಿವೇಶಿತಾಃ।
06052006c ಪೃಷ್ಠೇ ದುರ್ಯೋಧನೋ ರಾಜಾ ಸೋದರೈಃ ಸಾನುಗೈರ್ವೃತಃ।।

ಭೂರಿಶ್ರವ, ಶಲ, ಶಲ್ಯ, ಭಗದತ್ತ, ಮದ್ರಕ, ಸಿಂಧು-ಸೌವೀರರು, ಪಂಚನದರು ಜಯದ್ರಥನ ಸಹಿತ ಅದರ ಕುತ್ತಿಗೆಯ ಭಾಗದಲ್ಲಿ ಸೇರಿದ್ದರು. ಹಿಂಭಾಗದಲ್ಲಿ ರಾಜಾ ದುರ್ಯೋಧನನು ಸೋದರರು ಮತ್ತು ಅನುಗರಿಂದ ಆವೃತನಾಗಿದ್ದನು.

06052007a ವಿಂದಾನುವಿಂದಾವಾವಂತ್ಯೌ ಕಾಂಬೋಜಶ್ಚ ಶಕೈಃ ಸಹ।
06052007c ಪುಚ್ಛಮಾಸನ್ಮಹಾರಾಜ ಶೂರಸೇನಾಶ್ಚ ಸರ್ವಶಃ।।

ಮಹಾರಾಜ! ಅವಂತಿಯ ವಿಂದಾನುವಿಂದರು, ಕಾಂಬೋಜರು ಮತ್ತು ಶಕರೊಂದಿಗೆ ಶೂರಸೇನರು ಅದರ ಪುಕ್ಕಗಳಾದರು.

06052008a ಮಾಗಧಾಶ್ಚ ಕಲಿಂಗಾಶ್ಚ ದಾಶೇರಕಗಣೈಃ ಸಹ।
06052008c ದಕ್ಷಿಣಂ ಪಕ್ಷಮಾಸಾದ್ಯ ಸ್ಥಿತಾ ವ್ಯೂಹಸ್ಯ ದಂಶಿತಾಃ।।

ದಾಶೇರಕಣಗಳೊಂದಿಗೆ ಮಾಗಧರು ಮತ್ತು ಕಲಿಂಗರು ಕವಚಧಾರಿಗಳಾಗಿ ವ್ಯೂಹದ ಬಲಗಡೆಯಲ್ಲಿ ನಿಂತಿದ್ದರು.

06052009a ಕಾನನಾಶ್ಚ ವಿಕುಂಜಾಶ್ಚ ಮುಕ್ತಾಃ ಪುಂಡ್ರಾವಿಷಸ್ತಥಾ।
06052009c ಬೃಹದ್ಬಲೇನ ಸಹಿತಾ ವಾಮಂ ಪಕ್ಷಮುಪಾಶ್ರಿತಾಃ।।

ಕಾನನರು, ವಿಕುಂಜರು, ಮುಕ್ತರು, ಪುಂಡ್ರದೇಶದವರು ಬೃಹದ್ಬಲನ ಸಹಿತ ಎಡಭಾಗದಲ್ಲಿ ನಿಂತಿದ್ದರು.

06052010a ವ್ಯೂಢಂ ದೃಷ್ಟ್ವಾ ತು ತತ್ಸೈನ್ಯಂ ಸವ್ಯಸಾಚೀ ಪರಂತಪಃ।
06052010c ಧೃಷ್ಟದ್ಯುಮ್ನೇನ ಸಹಿತಃ ಪ್ರತ್ಯವ್ಯೂಹತ ಸಂಯುಗೇ।
06052010e ಅರ್ಧಚಂದ್ರೇಣ ವ್ಯೂಹೇನ ವ್ಯೂಹಂ ತಮತಿದಾರುಣಂ।।

ಆ ಸೇನ್ಯದ ವ್ಯೂಹವನ್ನು ನೋಡಿ ಪರಂತಪ ಸವ್ಯಸಾಚಿಯು ಧೃಷ್ಟದ್ಯುಮ್ನನ ಸಹಿತ ಸಂಯುಗದಲ್ಲಿ ಪ್ರತಿವ್ಯೂಹವಾಗಿ ಅರ್ಧಚಂದ್ರದ ವ್ಯೂಹವನ್ನು ರಚಿಸಿದನು. ಆ ವ್ಯೂಹವು ಅತಿದಾರುಣವಾಗಿತ್ತು.

06052011a ದಕ್ಷಿಣಂ ಶೃಂಗಮಾಸ್ಥಾಯ ಭೀಮಸೇನೋ ವ್ಯರೋಚತ।
06052011c ನಾನಾಶಸ್ತ್ರೌಘಸಂಪನ್ನೈರ್ನಾನಾದೇಶ್ಯೈರ್ನೃಪೈರ್ ವೃತಃ।।

ಅದರ ದಕ್ಷಿಣ ಶೃಂಗದಲ್ಲಿ ಭೀಮಸೇನನು ನಾನಾದೇಶದ ನಾನಾಶಸ್ತ್ರಸಂಪನ್ನ ನೃಪರಿಂದ ಆವೃತನಾಗಿ ರಾಜಿಸಿದನು.

06052012a ತದನ್ಯೇವ ವಿರಾಟಶ್ಚ ದ್ರುಪದಶ್ಚ ಮಹಾರಥಃ।
06052012c ತದನಂತರಮೇವಾಸೀನ್ನೀಲೋ ನೀಲಾಯುಧೈಃ ಸಹ।।

ಅವನ ಹಿಂದೆ ಮಹಾರಥ ವಿರಾಟ-ದ್ರುಪದರೂ, ತದನಂತರ ನೀಲಾಯುಧರೊಂದಿಗೆ ನೀಲನೂ ಇದ್ದರು.

06052013a ನೀಲಾದನಂತರಂ ಚೈವ ಧೃಷ್ಟಕೇತುರ್ಮಹಾರಥಃ।
06052013c ಚೇದಿಕಾಶಿಕರೂಷೈಶ್ಚ ಪೌರವೈಶ್ಚಾಭಿಸಂವೃತಃ।।

ನೀಲನ ಅನಂತರ ಮಹಾರಥ ಧೃಷ್ಟಕೇತುವು ಚೇದಿ-ಕಾಶಿ-ಕರೂಷ-ಪೌರವರಿಂದ ಸಂವೃತನಾಗಿ ನಿಂತಿದ್ದನು.

06052014a ಧೃಷ್ಟದ್ಯುಮ್ನಃ ಶಿಖಂಡೀ ಚ ಪಾಂಚಾಲಾಶ್ಚ ಪ್ರಭದ್ರಕಾಃ।
06052014c ಮಧ್ಯೇ ಸೈನ್ಯಸ್ಯ ಮಹತಃ ಸ್ಥಿತಾ ಯುದ್ಧಾಯ ಭಾರತ।।

ಭಾರತ! ಆ ಮಹಾಸೇನೆಯ ಮಧ್ಯದಲ್ಲಿ ಯುದ್ಧಕ್ಕೆಂದು ಧೃಷ್ಟದ್ಯುಮ್ನ-ಶಿಖಂಡಿಯರು ಪಾಂಚಾಲ-ಪ್ರಭದ್ರಕರೊಂದಿಗೆ ನಿಂತಿದ್ದರು.

06052015a ತಥೈವ ಧರ್ಮರಾಜೋಽಪಿ ಗಜಾನೀಕೇನ ಸಂವೃತಃ।
06052015c ತತಸ್ತು ಸಾತ್ಯಕೀ ರಾಜನ್ದ್ರೌಪದ್ಯಾಃ ಪಂಚ ಚಾತ್ಮಜಾಃ।।
06052016a ಅಭಿಮನ್ಯುಸ್ತತಸ್ತೂರ್ಣಂ ಇರಾವಾಂಶ್ಚ ತತಃ ಪರಂ।
06052016c ಭೈಮಸೇನಿಸ್ತತೋ ರಾಜನ್ಕೇಕಯಾಶ್ಚ ಮಹಾರಥಾಃ।।

ಅಲ್ಲಿಯೇ ಗಜಸೇನೆಯಿಂದ ಸಂವೃತನಾಗಿ ಧರ್ಮರಾಜನೂ, ಅನಂತರ ಸಾತ್ಯಕಿಯೂ, ದ್ರೌಪದಿಯ ಐವರು ಪುತ್ರರೂ, ಅಭಿಮನ್ಯುವೂ, ಅವನ ಪಕ್ಕದಲ್ಲಿಯೇ ಇರಾವಾನನೂ, ಅವನ ನಂತರ ಭೈಮಸೇನಿ (ಘಟೋತ್ಕಚ) ಯೂ ಅನಂತರ ಮಹಾರಥ ಕೇಕಯರೂ ಇದ್ದರು.

06052017a ತತೋಽಭೂದ್ದ್ವಿಪದಾಂ ಶ್ರೇಷ್ಠೋ ವಾಮಂ ಪಾರ್ಶ್ವಮುಪಾಶ್ರಿತಃ।
06052017c ಸರ್ವಸ್ಯ ಜಗತೋ ಗೋಪ್ತಾ ಗೋಪ್ತಾ ಯಸ್ಯ ಜನಾರ್ದನಃ।।

ಆಗ ಎಡಭಾಗವನ್ನು ಸರ್ವಜಗತ್ತಿನ ರಕ್ಷಕನಾದ ಜನಾರ್ದನನಿಂದ ರಕ್ಷಣೆಯನ್ನು ಪಡೆದ ದ್ವಿಪದರಲ್ಲಿ ಶ್ರೇಷ್ಠನು ನಿಂತಿದ್ದನು.

06052018a ಏವಮೇತನ್ಮಹಾವ್ಯೂಹಂ ಪ್ರತ್ಯವ್ಯೂಹಂತ ಪಾಂಡವಾಃ।
06052018c ವಧಾರ್ಥಂ ತವ ಪುತ್ರಾಣಾಂ ತತ್ಪಕ್ಷಂ ಯೇ ಚ ಸಂಗತಾಃ।।

ಈ ರೀತಿ ಮಹಾವ್ಯೂಹವನ್ನು ಪ್ರತಿವ್ಯೂಹವಾಗಿ ರಚಿಸಿ ಪಾಂಡವರು ನಿನ್ನ ಪುತ್ರರ ಮತ್ತು ಅವರ ಪಕ್ಷದಲ್ಲಿ ಸೇರಿದವರ ವಧೆಗಾಗಿ ಸಿದ್ಧರಾದರು.

06052019a ತತಃ ಪ್ರವವೃತೇ ಯುದ್ಧಂ ವ್ಯತಿಷಕ್ತರಥದ್ವಿಪಂ।
06052019c ತಾವಕಾನಾಂ ಪರೇಷಾಂ ಚ ನಿಘ್ನತಾಮಿತರೇತರಂ।।

ಆಗ ಪರಸ್ಪರರನ್ನು ಕೊಲ್ಲುವುದರಲ್ಲಿ ನಿರತರಾದ ನಿನ್ನವರು ಮತ್ತು ಪರರ ರಥಸಂಕುಲಗಳ ನಡುವೆ ಯುದ್ಧವು ಪ್ರಾರಂಭವಾಯಿತು.

06052020a ಹಯೌಘಾಶ್ಚ ರಥೌಘಾಶ್ಚ ತತ್ರ ತತ್ರ ವಿಶಾಂ ಪತೇ।
06052020c ಸಂಪತಂತಃ ಸ್ಮ ದೃಶ್ಯಂತೇ ನಿಘ್ನಮಾನಾಃ ಪರಸ್ಪರಂ।।

ವಿಶಾಂಪತೇ! ಅಲ್ಲಲ್ಲಿ ಅಶ್ವಸೇನೆಗಳು ರಥಸೇನೆಗಳು ಪರಸ್ಪರರನ್ನು ಕೊಲ್ಲುವುದರಲ್ಲಿ ತೊಡಗಿರುವುದು ಕಂಡುಬಂದಿತು.

06052021a ಧಾವತಾಂ ಚ ರಥೌಘಾನಾಂ ನಿಘ್ನತಾಂ ಚ ಪೃಥಕ್ಪೃಥಕ್।
06052021c ಬಭೂವ ತುಮುಲಃ ಶಬ್ದೋ ವಿಮಿಶ್ರೋ ದುಂದುಭಿಸ್ವನೈಃ।।

ಓಡುತ್ತಿರುವ ಮತ್ತು ಪುನಃ ಪುನಃ ಬೀಳುತ್ತಿರುವ ರಥಗಳ ತುಮುಲ ಶಬ್ಧವು ದುಂದುಭಿಸ್ವನಗಳೊಂದಿಗೆ ಮಿಶ್ರಿತವಾಯಿತು.

06052022a ದಿವಸ್ಪೃಮ್ನರವೀರಾಣಾಂ ನಿಘ್ನತಾಂ ಇತರೇತರಂ।
06052022c ಸಂಪ್ರಹಾರೇ ಸುತುಮುಲೇ ತವ ತೇಷಾಂ ಚ ಭಾರತ।।

ಭಾರತ! ಪರಸ್ಪರರನ್ನು ಪ್ರಹರಿಸಿ ಕೊಲ್ಲುತ್ತಿರುವ ನಿನ್ನವರ ಮತ್ತು ಅವರ ನರವೀರರ ತುಮುಲವು ಆಕಾಶವನ್ನೇ ವ್ಯಾಪಿಸಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ತೃತೀಯಯುದ್ಧದಿವಸೇ ಪರಸ್ಪರವ್ಯೂಹರಚನಾಯಾಂ ದ್ವಿಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ತೃತೀಯಯುದ್ಧದಿವಸೇ ಪರಸ್ಪರವ್ಯೂಹರಚನೆ ಎನ್ನುವ ಐವತ್ತೆರಡನೇ ಅಧ್ಯಾಯವು.