ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 51
ಸಾರ
ಅಭಿಮನ್ಯು-ಅರ್ಜುನರ ಪರಾಕ್ರಮ; ಎರಡನೇ ದಿನದ ಯುದ್ಧಸಮಾಪ್ತಿ (1-43).
06051001 ಸಂಜಯ ಉವಾಚ।
06051001a ಗತಾಪರಾಹ್ಣಭೂಯಿಷ್ಠೇ ತಸ್ಮಿನ್ನಹನಿ ಭಾರತ।
06051001c ರಥನಾಗಾಶ್ವಪತ್ತೀನಾಂ ಸಾದಿನಾಂ ಚ ಮಹಾಕ್ಷಯೇ।।
06051002a ದ್ರೋಣಪುತ್ರೇಣ ಶಲ್ಯೇನ ಕೃಪೇಣ ಚ ಮಹಾತ್ಮನಾ।
06051002c ಸಮಸಜ್ಜತ ಪಾಂಚಾಲ್ಯಸ್ತ್ರಿಭಿರೇತೈರ್ಮಹಾರಥೈಃ।।
ಸಂಜಯನು ಹೇಳಿದನು: “ಭಾರತ! ಆದಿನದ ಅಪರಾಹ್ಣವು ಕಳೆಯಲು ರಥನಾಗಾಶ್ವಪದಾತಿಗಳ ಮಹಾಕ್ಷಯವು ಮುಂದುವರೆದಿರಲು ಪಾಂಚಾಲ್ಯನು ಈ ಮೂವರು ಮಹಾರಥ ಮಹಾತ್ಮರೊಂದಿಗೆ - ದ್ರೋಣಪುತ್ರ, ಶಲ್ಯ ಮತ್ತು ಕೃಪ - ಯುದ್ಧದಲ್ಲಿ ತೊಡಗಿದನು.
06051003a ಸ ಲೋಕವಿದಿತಾನಶ್ವಾನ್ನಿಜಘಾನ ಮಹಾಬಲಃ।
06051003c ದ್ರೌಣೇಃ ಪಾಂಚಾಲದಾಯಾದಃ ಶಿತೈರ್ದಶಭಿರಾಶುಗೈಃ।।
ಆ ಮಹಾಬಲ ಪಾಂಚಾಲದಾಯಾದನು ಹತ್ತು ಹರಿತ ಆಶುಗಗಳಿಂದ ದ್ರೌಣಿಯ ಲೋಕವಿಶ್ರುತ ಕುದುರೆಗಳನ್ನು ಸಂಹರಿಸಿದನು.
06051004a ತತಃ ಶಲ್ಯರಥಂ ತೂರ್ಣಮಾಸ್ಥಾಯ ಹತವಾಹನಃ।
06051004c ದ್ರೌಣಿಃ ಪಾಂಚಾಲದಾಯಾದಮಭ್ಯವರ್ಷದಥೇಷುಭಿಃ।।
ಆಗ ಹತವಾಹನನಾದ ದ್ರೌಣಿಯು ತಕ್ಷಣವೇ ಶಲ್ಯನ ರಥವನ್ನು ಏರಿ ಪಾಂಚಾಲದಾಯದನ ಮೇಲೆ ಬಾಣಗಳಿಂದ ಆಕ್ರಮಣ ಮಾಡಿದನು.
06051005a ಧೃಷ್ಟದ್ಯುಮ್ನಂ ತು ಸಂಸಕ್ತಂ ದ್ರೌಣಿನಾ ದೃಶ್ಯ ಭಾರತ।
06051005c ಸೌಭದ್ರೋಽಭ್ಯಪತತ್ತೂರ್ಣಂ ವಿಕಿರನ್ನಿಶಿತಾಂ ಶರಾನ್।।
ಭಾರತ! ಧೃಷ್ಟದ್ಯುಮ್ನನು ದ್ರೌಣಿಯೊಂದಿಗೆ ಯುದ್ಧದಲ್ಲಿ ನಿರತನಾಗಿದ್ದುದನ್ನು ನೋಡಿ ಸೌಭದ್ರನು ವೇಗದಿಂದ ನಿಶಿತ ಶರಗಳನ್ನು ಎರಚುತ್ತಾ ದ್ರೌಣಿಯನ್ನು ಎದುರಿಸಿದನು.
06051006a ಸ ಶಲ್ಯಂ ಪಂಚವಿಂಶತ್ಯಾ ಕೃಪಂ ಚ ನವಭಿಃ ಶರೈಃ।
06051006c ಅಶ್ವತ್ಥಾಮಾನಮಷ್ಟಾಭಿರ್ವಿವ್ಯಾಧ ಪುರುಷರ್ಷಭ।।
ಪುರುಷರ್ಷಭ! ಅವನು ಶಲ್ಯನನ್ನು ಇಪ್ಪತ್ತೈದು ಶರಗಳಿಂದ, ಕೃಪನನ್ನು ಒಂಭತ್ತರಿಂದ ಮತ್ತು ಅಶ್ವತ್ಥಾಮನನ್ನು ಎಂಟು ಬಾಣಗಳಿಂದ ಹೊಡೆದನು.
06051007a ಆರ್ಜುನಿಂ ತು ತತಸ್ತೂರ್ಣಂ ದ್ರೌಣಿರ್ವಿವ್ಯಾಧ ಪತ್ರಿಣಾ।
06051007c ಶಲ್ಯೋ ದ್ವಾದಶಭಿಶ್ಚೈವ ಕೃಪಶ್ಚ ನಿಶಿತೈಸ್ತ್ರಿಭಿಃ।।
ಆಗ ತಕ್ಷಣವೇ ಆರ್ಜುನಿಯನ್ನು ದ್ರೌಣಿಯು ಪತ್ರಿಗಳಿಂದ, ಶಲ್ಯನು ಹನ್ನೆರಡು ಮತ್ತು ಕೃಪನು ಮೂರು ನಿಶಿತಬಾಣಗಳಿಂದ ಹೊಡೆದರು.
06051008a ಲಕ್ಷ್ಮಣಸ್ತವ ಪೌತ್ರಸ್ತು ತವ ಪೌತ್ರಮವಸ್ಥಿತಂ।
06051008c ಅಭ್ಯವರ್ತತ ಸಂಹೃಷ್ಟಸ್ತತೋ ಯುದ್ಧಮವರ್ತತ।।
ನಿನ್ನ ಮೊಮ್ಮಗ ಲಕ್ಷ್ಮಣನು ನಿನ್ನ ಮೊಮ್ಮಗನನ್ನು ಎದುರಿಸಲು, ಆಗ ಸಂಹೃಷ್ಟರಾದ ಅವರಿಬ್ಬರ ನಡುವೆ ಯುದ್ಧವು ನಡೆಯಿತು.
06051009a ದೌರ್ಯೋಧನಿಸ್ತು ಸಂಕ್ರುದ್ಧಃ ಸೌಭದ್ರಂ ನವಭಿಃ ಶರೈಃ।
06051009c ವಿವ್ಯಾಧ ಸಮರೇ ರಾಜಂಸ್ತದದ್ಭುತಮಿವಾಭವತ್।।
ರಾಜನ್! ದೌರ್ಯೋಧನಿಯಾದರೋ ಸಂಕ್ರುದ್ಧನಾಗಿ ಸಮರದಲ್ಲಿ ಸೌಭದ್ರನನ್ನು ಒಂಭತ್ತು ಶರಗಳಿಂದ ಹೊಡೆದನು. ಆಗ ಈ ಅದ್ಭುತವಾಯಿತು.
06051010a ಅಭಿಮನ್ಯುಸ್ತು ಸಂಕ್ರುದ್ಧೋ ಭ್ರಾತರಂ ಭರತರ್ಷಭ।
06051010c ಶರೈಃ ಪಂಚಾಶತಾ ರಾಜನ್ ಕ್ಷಿಪ್ರಹಸ್ತೋಽಭ್ಯವಿಧ್ಯತ।।
ರಾಜನ್! ಭರತರ್ಷಭ! ಸಂಕ್ರುದ್ಧನಾದ ಅಭಿಮನ್ಯುವಾದರೋ ತನ್ನ ಹಸ್ತಲಾಘವದಿಂದ ತಮ್ಮನನ್ನು ಐವತ್ತು ಶರಗಳಿಂದ ಹೊಡೆದನು.
06051011a ಲಕ್ಷ್ಮಣೋಽಪಿ ತತಸ್ತಸ್ಯ ಧನುಶ್ಚಿಚ್ಛೇದ ಪತ್ರಿಣಾ।
06051011c ಮುಷ್ಟಿದೇಶೇ ಮಹಾರಾಜ ತತ ಉಚ್ಚುಕ್ರುಶುರ್ಜನಾಃ।।
ಮಹಾರಾಜ! ಆಗ ಲಕ್ಷ್ಮಣನೂ ಕೂಡ ಪತ್ರಿಗಳಿಂದ ಅವನ ಮುಷ್ಟಿಪ್ರದೇಶಕ್ಕೆ ಹೊಡೆದು ಧನುಸ್ಸನ್ನು ತುಂಡರಿಸಿದನು. ಆಗ ಜನರು ಕೂಗಾಡಿದರು.
06051012a ತದ್ವಿಹಾಯ ಧನುಶ್ಚಿನ್ನಂ ಸೌಭದ್ರಃ ಪರವೀರಹಾ।
06051012c ಅನ್ಯದಾದತ್ತವಾಂಶ್ಚಿತ್ರಂ ಕಾರ್ಮುಕಂ ವೇಗವತ್ತರಂ।।
ತುಂಡಾಗಿದ್ದ ಧನುಸ್ಸನ್ನು ಬಿಸಾಡಿ ಪರವೀರಹ ಸೌಭದ್ರನು ಇನ್ನೊಂದು ಚಿತ್ರ, ವೇಗವತ್ತರ ಕಾರ್ಮುಕವನ್ನು ಎತ್ತಿಕೊಂಡನು.
06051013a ತೌ ತತ್ರ ಸಮರೇ ಹೃಷ್ಟೌ ಕೃತಪ್ರತಿಕೃತೈಷಿಣೌ।
06051013c ಅನ್ಯೋನ್ಯಂ ವಿಶಿಖೈಸ್ತೀಕ್ಷ್ಣೈರ್ಜಘ್ನತುಃ ಪುರುಷರ್ಷಭೌ।।
ಆ ಇಬ್ಬರು ಪುರುಷರ್ಷಭರೂ ಸಮರದಲ್ಲಿ ಹರ್ಷಿತರಾಗಿ, ಪ್ರತಿಗೆ ಪ್ರತಿಮಾಡುವುದರಲ್ಲಿ ಇಚ್ಛೆಯುಳ್ಳವರಾಗಿದ್ದು ಅನ್ಯೋನ್ಯರನ್ನು ತೀಕ್ಷ್ಣ ವಿಶಿಖಗಳಿಂದ ಹೊಡೆದರು.
06051014a ತತೋ ದುರ್ಯೋಧನೋ ರಾಜಾ ದೃಷ್ಟ್ವಾ ಪುತ್ರಂ ಮಹಾರಥಂ।
06051014c ಪೀಡಿತಂ ತವ ಪೌತ್ರೇಣ ಪ್ರಾಯಾತ್ತತ್ರ ಜನೇಶ್ವರಃ।।
ಆಗ ರಾಜಾ ಜನೇಶ್ವರ ದುರ್ಯೋಧನನು ನಿನ್ನ ಪೌತ್ರನಿಂದ ತನ್ನ ಮಗ ಮಹಾರಥನು ಪೀಡಿತನಾಗುತ್ತಿರುವುದನ್ನು ಕಂಡು ಅಲ್ಲಿಗೆ ಬಂದನು.
06051015a ಸಮ್ನಿವೃತ್ತೇ ತವ ಸುತೇ ಸರ್ವ ಏವ ಜನಾಧಿಪಾಃ।
06051015c ಆರ್ಜುನಿಂ ರಥವಂಶೇನ ಸಮಂತಾತ್ಪರ್ಯವಾರಯನ್।।
ನಿನ್ನ ಮಗನು ಅಲ್ಲಿಗೆ ಬರಲು ಎಲ್ಲ ಜನಾಧಿಪರೂ ಕೂಡ ರಥಸಂಕುಲಗಳಿಂದ ಆರ್ಜುನಿಯನ್ನು ಎಲ್ಲ ಕಡೆಗಳಿಂದ ಸುತ್ತುವರೆದರು.
06051016a ಸ ತೈಃ ಪರಿವೃತಃ ಶೂರೈಃ ಶೂರೋ ಯುಧಿ ಸುದುರ್ಜಯೈಃ।
06051016c ನ ಸ್ಮ ವಿವ್ಯಥತೇ ರಾಜನ್ ಕೃಷ್ಣತುಲ್ಯಪರಾಕ್ರಮಃ।।
ರಾಜನ್! ಯುದ್ಧದಲ್ಲಿ ಆ ಸುದುರ್ಜಯ ಶೂರರಿಂದ ಪರಿವೃತನಾಗಿದ್ದರೂ ಆ ಕೃಷ್ಣತುಲ್ಯ ಪರಾಕ್ರಮಿಯು ಸ್ವಲ್ಪವೂ ವ್ಯಥಿತನಾಗಲಿಲ್ಲ.
06051017a ಸೌಭದ್ರಮಥ ಸಂಸಕ್ತಂ ತತ್ರ ದೃಷ್ಟ್ವಾ ಧನಂಜಯಃ।
06051017c ಅಭಿದುದ್ರಾವ ಸಂಕ್ರುದ್ಧಸ್ತ್ರಾತುಕಾಮಃ ಸ್ವಮಾತ್ಮಜಂ।।
ಸಂಸಕ್ತನಾಗಿದ್ದ ಸೌಭದ್ರನನ್ನು ನೋಡಿ ಧನಂಜಯನು ತನ್ನ ಮಗನನ್ನು ರಕ್ಷಿಸಲು ಬಯಸಿ ಸಂಕ್ರುದ್ಧನಾಗಿ ಅಲ್ಲಿಗೆ ಧಾವಿಸಿದನು.
06051018a ತತಃ ಸರಥನಾಗಾಶ್ವಾ ಭೀಷ್ಮದ್ರೋಣಪುರೋಗಮಾಃ।
06051018c ಅಭ್ಯವರ್ತಂತ ರಾಜಾನಃ ಸಹಿತಾಃ ಸವ್ಯಸಾಚಿನಂ।।
ಆಗ ರಥ-ಆನೆ-ಅಶ್ವಗಳೊಡನೆ ಭೀಷ್ಮ-ದ್ರೋಣರನ್ನು ಮುಂದಿರಿಸಿಕೊಂಡು ರಾಜರು ಒಟ್ಟಿಗೇ ಸವ್ಯಸಾಚಿಯನ್ನು ಎದುರಿಸಿದರು.
06051019a ಉದ್ಧೂತಂ ಸಹಸಾ ಭೌಮಂ ನಾಗಾಶ್ವರಥಸಾದಿಭಿಃ।
06051019c ದಿವಾಕರಪಥಂ ಪ್ರಾಪ್ಯ ರಜಸ್ತೀವ್ರಮದೃಶ್ಯತ।।
ಒಮ್ಮಿಂದೊಮ್ಮೆಲೇ ಆನೆ-ರಥ-ಕುದುರೆಗಳ ಚಲನವಲನದಿಂದ ಭೂಮಿಯಲ್ಲಿ ತೀವ್ರವಾದ ಧೂಳೆದ್ದು ಅದು ಸೂರ್ಯನ ಮಾರ್ಗದ ವರೆಗೂ ತಲುಪಿದುದು ಕಂಡುಬಂದಿತು.
06051020a ತಾನಿ ನಾಗಸಹಸ್ರಾಣಿ ಭೂಮಿಪಾಲಶತಾನಿ ಚ।
06051020c ತಸ್ಯ ಬಾಣಪಥಂ ಪ್ರಾಪ್ಯ ನಾಭ್ಯವರ್ತಂತ ಸರ್ವಶಃ।।
ಅರ್ಜುನನ ಬಾಣಪಥಕ್ಕೆ ಸಿಲುಕಿ ಸಹಸ್ರಾರು ಆನೆಗಳು ಮತ್ತು ನೂರಾರು ಭುಮಿಪಾಲರು ಎಲ್ಲಕಡೆ ಓಡಿ ಹೋಗತೊಡಗಿದರು.
06051021a ಪ್ರಣೇದುಃ ಸರ್ವಭೂತಾನಿ ಬಭೂವುಸ್ತಿಮಿರಾ ದಿಶಃ।
06051021c ಕುರೂಣಾಮನಯಸ್ತೀವ್ರಃ ಸಮದೃಶ್ಯತ ದಾರುಣಃ।।
ಎಲ್ಲ ಭೂತಗಳು ನೋವಿನಿಂದ ಕೂಗಿದವು. ದಿಕ್ಕುಗಳು ಕತ್ತಲೆಯಿಂದ ತುಂಬಿದವು. ಕುರುಗಳು ತೀವ್ರ ಕಷ್ಟಕ್ಕೀಡಾಗಿರುವುದು ಕಂಡುಬರುತ್ತಿತ್ತು.
06051022a ನಾಪ್ಯಂತರಿಕ್ಷಂ ನ ದಿಶೋ ನ ಭೂಮಿರ್ನ ಚ ಭಾಸ್ಕರಃ।
06051022c ಪ್ರಜಜ್ಞೇ ಭರತಶ್ರೇಷ್ಠ ಶರಸಂಘೈಃ ಕಿರೀಟಿನಃ।।
ಕಿರೀಟಿಯ ಶರಸಂಘಗಳಿಂದ ತುಂಬಿ ಅಂತರಿಕ್ಷವಾಗಲೀ, ದಿಕ್ಕುಗಳಾಗಲೀ, ಭೂಮಿಯಾಗಲೀ, ಭಾಸ್ಕರನಾಗಲೀ ಕಾಣಲಿಲ್ಲ.
06051023a ಸಾದಿತಧ್ವಜನಾಗಾಸ್ತು ಹತಾಶ್ವಾ ರಥಿನೋ ಭೃಶಂ।
06051023c ವಿಪ್ರದ್ರುತರಥಾಃ ಕೇ ಚಿದ್ದೃಶ್ಯಂತೇ ರಥಯೂಥಪಾಃ।।
ಅನೇಕ ಧ್ವಜಗಳು ನಾಶವಾದವು, ಕುದುರೆ-ಆನೆ-ರಥಿಕರು ಹತರಾದರು. ಕೆಲವು ರಥಯೂಥಪರೂ ಓಡಿಹೋಗುತ್ತಿರುವುದು ಕಂಡುಬಂದಿತು.
06051024a ವಿರಥಾ ರಥಿನಶ್ಚಾನ್ಯೇ ಧಾವಮಾನಾಃ ಸಮಂತತಃ।
06051024c ತತ್ರ ತತ್ರೈವ ದೃಶ್ಯಂತೇ ಸಾಯುಧಾಃ ಸಾಂಗದೈರ್ಭುಜೈಃ।।
ಅನ್ಯ ವಿರಥ ರಥಿಗಳು ಎಲ್ಲಕಡೆ ಅಲ್ಲಲ್ಲಿ ಆಯುಧಗಳನ್ನು ಹಿಡಿದು, ಅಂಗದ-ಭುಜಾಭರಣಗಳೊಂದಿಗೆ ಓಡಿಹೋಗುತ್ತಿರುವುದು ಕಂಡುಬಂದಿತು.
06051025a ಹಯಾರೋಹಾ ಹಯಾಂಸ್ತ್ಯಕ್ತ್ವಾ ಗಜಾರೋಹಾಶ್ಚ ದಂತಿನಃ।
06051025c ಅರ್ಜುನಸ್ಯ ಭಯಾದ್ರಾಜನ್ಸಮಂತಾದ್ವಿಪ್ರದುದ್ರುವುಃ।।
ರಾಜನ್! ಅರ್ಜುನನ ಭಯದಿಂದ ಹಯಾರೂಢರು ಕುದುರೆಗಳನ್ನು ಮತ್ತು ಗಜಾರೂಢರು ಆನೆಗಳನ್ನು ಬಿಟ್ಟು ಎಲ್ಲ ಕಡೆ ಓಡಿ ಹೋಗುದರು.
06051026a ರಥೇಭ್ಯಶ್ಚ ಗಜೇಭ್ಯಶ್ಚ ಹಯೇಭ್ಯಶ್ಚ ನರಾಧಿಪಾಃ।
06051026c ಪತಿತಾಃ ಪಾತ್ಯಮಾನಾಶ್ಚ ದೃಶ್ಯಂತೇಽರ್ಜುನತಾಡಿತಾಃ।।
ಅರ್ಜುನನಿಂದ ಹೊಡೆಯಲ್ಪಟ್ಟು ರಥಗಳು, ಆನೆಗಳು, ಕುದುರೆಗಳು ಮತ್ತು ನರಾಧಿಪರು ಬಿದ್ದುದು ಮತ್ತು ಬೀಳುತ್ತಿರುವುದು ಕಂಡುಬಂದಿತು.
06051027a ಸಗದಾನುದ್ಯತಾನ್ಬಾಹೂನ್ಸಖಡ್ಗಾಂಶ್ಚ ವಿಶಾಂ ಪತೇ।
06051027c ಸಪ್ರಾಸಾಂಶ್ಚ ಸತೂಣೀರಾನ್ಸಶರಾನ್ಸಶರಾಸನಾನ್।।
06051028a ಸಾಂಕುಶಾನ್ಸಪತಾಕಾಂಶ್ಚ ತತ್ರ ತತ್ರಾರ್ಜುನೋ ನೃಣಾಂ।
06051028c ನಿಚಕರ್ತ ಶರೈರುಗ್ರೈ ರೌದ್ರಂ ಬಿಭ್ರದ್ವಪುಸ್ತದಾ।।
ವಿಶಾಂಪತೇ! ಗದೆ-ಖಡ್ಗಗಳನ್ನು ಎತ್ತಿ ಹಿಡಿದಿದ್ದ ಕೈಗಳನ್ನೂ, ಪ್ರಾಸ-ತೂಣೀರ-ಶರ-ಧನುಸ್ಸು-ಅಂಕುಶ-ಪತಾಕೆಗಳನ್ನು ಹಿಡಿದ ಕೈಗಳನ್ನೂ ಮತ್ತು ಅವುಗಳೊಂದಿಗೆ ನರರನ್ನು ಅರ್ಜುನನು ಉಗ್ರ ಬಾಣಗಳಿಂದ ಕತ್ತರಿಸಿದನು. ಆಗ ಅವನ ಮುಖವು ರೌದ್ರಾಕಾರವನ್ನು ತಾಳಿತ್ತು.
06051029a ಪರಿಘಾಣಾಂ ಪ್ರವೃದ್ಧಾನಾಂ ಮುದ್ಗರಾಣಾಂ ಚ ಮಾರಿಷ।
06051029c ಪ್ರಾಸಾನಾಂ ಭಿಂಡಿಪಾಲಾನಾಂ ನಿಸ್ತ್ರಿಂಶಾನಾಂ ಚ ಸಂಯುಗೇ।।
06051030a ಪರಶ್ವಧಾನಾಂ ತೀಕ್ಷ್ಣಾನಾಂ ತೋಮರಾಣಾಂ ಚ ಭಾರತ।
06051030c ವರ್ಮಣಾಂ ಚಾಪವಿದ್ಧಾನಾಂ ಕವಚಾನಾಂ ಚ ಭೂತಲೇ।।
06051031a ಧ್ವಜಾನಾಂ ಚರ್ಮಣಾಂ ಚೈವ ವ್ಯಜನಾನಾಂ ಚ ಸರ್ವಶಃ।
06051031c ಚತ್ರಾಣಾಂ ಹೇಮದಂಡಾನಾಂ ಚಾಮರಾಣಾಂ ಚ ಭಾರತ।।
06051032a ಪ್ರತೋದಾನಾಂ ಕಶಾನಾಂ ಚ ಯೋಕ್ತ್ರಾಣಾಂ ಚೈವ ಮಾರಿಷ।
06051032c ರಾಶಯಶ್ಚಾತ್ರ ದೃಶ್ಯಂತೇ ವಿನಿಕೀರ್ಣಾ ರಣಕ್ಷಿತೌ।।
ಮಾರಿಷ! ಭಾರತ! ಆ ಸಂಯುಗದ ರಣಭೂಮಿಯಲ್ಲಿ ಭೂತಲದಲ್ಲಿ ಪರಿಘ-ಮುದ್ಗರ-ಪ್ರಾಸ-ಭಿಂಡಿಪಾಲ-ಕತ್ತಿ-ತೀಕ್ಷ್ಣ ಗಂಡುಗೊಡಲಿ-ತೋಮರ–ಕವಚ-ತುಂಡಾದ ಬಿಲ್ಲುಗಳು-ಧ್ವಜ-ಗುರಾಣಿ-ವ್ಯಜನಗಳು-ಛತ್ರಗಳು-ಹೇಮದಂಡಗಳು-ಚಾಮರಗಳು-ಚಾವಟಿಗಳು-ನೊಗಪಟ್ಟಿಗಳು-ಮತ್ತು ಅಂಕುಶಗಳು ರಾಶಿರಾಶಿಯಾಗಿ ಹರಡಿ ಬಿದ್ದಿರುವುದು ಕಂಡಿತು.
06051033a ನಾಸೀತ್ತತ್ರ ಪುಮಾನ್ಕಶ್ಚಿತ್ತವ ಸೈನ್ಯಸ್ಯ ಭಾರತ।
06051033c ಯೋಽರ್ಜುನಂ ಸಮರೇ ಶೂರಂ ಪ್ರತ್ಯುದ್ಯಾಯಾತ್ಕಥಂ ಚನ।।
ಭಾರತ! ಆಗ ಅರ್ಜುನನೊಂದಿಗೆ ಸಮರದಲ್ಲಿ ಪ್ರತಿಯುದ್ಧ ಮಾಡಬಲ್ಲ ಯಾವ ಪುರುಷನೂ ನಿನ್ನ ಸೇನೆಯಲ್ಲಿ ಇರಲಿಲ್ಲ.
06051034a ಯೋ ಯೋ ಹಿ ಸಮರೇ ಪಾರ್ಥಂ ಪತ್ಯುದ್ಯಾತಿ ವಿಶಾಂ ಪತೇ।
06051034c ಸ ಸ ವೈ ವಿಶಿಖೈಸ್ತೀಕ್ಷ್ಣೈಃ ಪರಲೋಕಾಯ ನೀಯತೇ।।
ವಿಶಾಂಪತೇ! ಯಾರು ಯಾರು ಸಮರದಲ್ಲಿ ಪಾರ್ಥನನ್ನು ಎದುರಿಸಿ ಯುದ್ಧಮಾಡಿದರೋ ಅವರೆಲ್ಲರೂ ತೀಕ್ಷ್ಣ ವಿಶಿಖಗಳಿಂದ ಪರಲೋಕಕ್ಕೆ ಕೊಂಡೊಯ್ಯಲ್ಪಟ್ಟರು.
06051035a ತೇಷು ವಿದ್ರವಮಾಣೇಷು ತವ ಯೋಧೇಷು ಸರ್ವಶಃ।
06051035c ಅರ್ಜುನೋ ವಾಸುದೇವಶ್ಚ ದಧ್ಮತುರ್ವಾರಿಜೋತ್ತಮೌ।।
ನಿನ್ನ ಯೋಧರು ಹಾಗೆ ದಿಕ್ಕಾಪಾಲಾಗಿ ಓಡಿಹೋಗುತ್ತಿರಲು ಅರ್ಜುನ-ವಾಸುದೇವರು ತಮ್ಮ ಉತ್ತಮ ಶಂಖಗಳನ್ನು ಊದಿದರು.
06051036a ತತ್ಪ್ರಭಗ್ನಂ ಬಲಂ ದೃಷ್ಟ್ವಾ ಪಿತಾ ದೇವವ್ರತಸ್ತವ।
06051036c ಅಬ್ರವೀತ್ಸಮರೇ ಶೂರಂ ಭಾರದ್ವಾಜಂ ಸ್ಮಯನ್ನಿವ।।
ಆ ಬಲವು ಪ್ರಭಗ್ನವಾಗುತ್ತಿರುವುದನ್ನು ನೋಡಿ ನಿನ್ನ ಪಿತ ದೇವವ್ರತನು ಸಮರದಲ್ಲಿ ಶೂರ ಭಾರದ್ವಾಜನಿಗೆ ಮುಗುಳ್ನಕ್ಕು ಹೇಳಿದನು:
06051037a ಏಷ ಪಾಂಡುಸುತೋ ವೀರಃ ಕೃಷ್ಣೇನ ಸಹಿತೋ ಬಲೀ।
06051037c ತಥಾ ಕರೋತಿ ಸೈನ್ಯಾನಿ ಯಥಾ ಕುರ್ಯಾದ್ಧನಂಜಯಃ।।
“ಕೃಷ್ಣನ ಸಹಿತ ಈ ವೀರ ಬಲೀ ಪಾಂಡುಸುತನು ಸೈನ್ಯಗಳಲ್ಲಿ ಧನಂಜಯನು ಹೇಗೆ ಮಾಡುತ್ತಾನೋ ಹಾಗೆಯೇ ಮಾಡುತ್ತಿದ್ದಾನೆ!
06051038a ನ ಹ್ಯೇಷ ಸಮರೇ ಶಕ್ಯೋ ಜೇತುಮದ್ಯ ಕಥಂ ಚನ।
06051038c ಯಥಾಸ್ಯ ದೃಶ್ಯತೇ ರೂಪಂ ಕಾಲಾಂತಕಯಮೋಪಮಂ।।
ಕಾಲಾಂತಕ ಯಮನೋಪಾದಿಯಲ್ಲಿ ಕಾಣುವ ರೂಪವುಳ್ಳ ಇವನನ್ನು ಇಂದು ಸಮರದಲ್ಲಿ ಗೆಲ್ಲಲು ಖಂಡಿತ ಸಾಧ್ಯವಿಲ್ಲ.
06051039a ನ ನಿವರ್ತಯಿತುಂ ಚಾಪಿ ಶಕ್ಯೇಯಂ ಮಹತೀ ಚಮೂಃ।
06051039c ಅನ್ಯೋನ್ಯಪ್ರೇಕ್ಷಯಾ ಪಶ್ಯ ದ್ರವತೀಯಂ ವರೂಥಿನೀ।।
ಅನ್ಯೋನ್ಯರನ್ನು ನೋಡಿ ಓಡಿಹೋಗುತ್ತಿರುವ ಈ ಮಹಾಸೇನೆ ವರೂಥಿನಿಯನ್ನು ಹಿಂದೆ ಕರೆತರಲೂ ಶಕ್ಯವಿಲ್ಲ.
06051040a ಏಷ ಚಾಸ್ತಂ ಗಿರಿಶ್ರೇಷ್ಠಂ ಭಾನುಮಾನ್ಪ್ರತಿಪದ್ಯತೇ।
06051040c ವಪೂಂಷಿ ಸರ್ವಲೋಕಸ್ಯ ಸಂಹರನ್ನಿವ ಸರ್ವಥಾ।।
ಸರ್ವಲೋಕಗಳ ದೃಷ್ಟಿಗಳನ್ನು ಸರ್ವಥಾ ಸಂಹರಿಸಲಿದ್ದಾನೆಯೋ ಎನ್ನುವಂತೆ ಭಾನುಮತನು ಗಿರಿಶ್ರೇಷ್ಠನಲ್ಲಿ ಅಸ್ತನಾಗುತ್ತಿದ್ದಾನೆ.
06051041a ತತ್ರಾವಹಾರಂ ಸಂಪ್ರಾಪ್ತಂ ಮನ್ಯೇಽಹಂ ಪುರುಷರ್ಷಭ।
06051041c ಶ್ರಾಂತಾ ಭೀತಾಶ್ಚ ನೋ ಯೋಧಾ ನ ಯೋತ್ಸ್ಯಂತಿ ಕಥಂ ಚನ।।
ಪುರುಷರ್ಷಭ! ಹಿಂದೆಸರಿಯುವ ಕಾಲವು ಬಂದೊದಗಿದೆಯೆಂದು ನನಗನ್ನಿಸುತ್ತದೆ. ಆಯಾಸಗೊಂಡ, ಭೀತರಾದ ಯೋಧರು ಎಂದೂ ಯುದ್ಧಮಾಡಲಾರರು.”
06051042a ಏವಮುಕ್ತ್ವಾ ತತೋ ಭೀಷ್ಮೋ ದ್ರೋಣಮಾಚಾರ್ಯಸತ್ತಮಂ।
06051042c ಅವಹಾರಮಥೋ ಚಕ್ರೇ ತಾವಕಾನಾಂ ಮಹಾರಥಃ।।
ಹೀಗೆ ಆಚಾರ್ಯಸತ್ತಮ ದ್ರೋಣನಿಗೆ ಹೇಳಿ ಮಹಾರಥ ಭೀಷ್ಮನು ನಿನ್ನವರನ್ನು ಹಿಂದಕ್ಕೆ ಕರೆಸಿಕೊಂಡನು.
06051043a ತತೋಽವಹಾರಃ ಸೈನ್ಯಾನಾಂ ತವ ತೇಷಾಂ ಚ ಭಾರತ।
06051043c ಅಸ್ತಂ ಗಚ್ಛತಿ ಸೂರ್ಯೇಽಭೂತ್ಸಂಧ್ಯಾಕಾಲೇ ಚ ವರ್ತತಿ।।
ಭಾರತ! ಸೂರ್ಯನು ಅಸ್ತವಾಗಲು, ಸಂದ್ಯಾಕಾಲವುಂಟಾಗಲು, ಅವರು ಮತ್ತು ನಿನ್ನವರು ಸೇನೆಗಳನ್ನು ಹಿಂದೆತೆಗೆದುಕೊಂಡರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ದ್ವಿತೀಯಯುದ್ಧದಿವಸಾವಹಾರೇ ಏಕಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ದ್ವಿತೀಯಯುದ್ಧದಿವಸಾವಹಾರ ಎನ್ನುವ ಐವತ್ತೊಂದನೇ ಅಧ್ಯಾಯವು.