050 ದ್ವಿತೀಯಯುದ್ಧದಿವಸೇ ಕಲಿಂಗರಾಜವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 50

ಸಾರ

ಕಲಿಂಗ-ನಿಷಾದರೊಡನೆ ಭೀಮನ ಯುದ್ಧ (1-115).

06050001 ಧೃತರಾಷ್ಟ್ರ ಉವಾಚ।
06050001a ತಥಾ ಪ್ರತಿಸಮಾದಿಷ್ಟಃ ಕಲಿಂಗೋ ವಾಹಿನೀಪತಿಃ।
06050001c ಕಥಮದ್ಭುತಕರ್ಮಾಣಂ ಭೀಮಸೇನಂ ಮಹಾಬಲಂ।।
06050002a ಚರಂತಂ ಗದಯಾ ವೀರಂ ದಂಡಪಾಣಿಮಿವಾಂತಕಂ।
06050002c ಯೋಧಯಾಮಾಸ ಸಮರೇ ಕಲಿಂಗಃ ಸಹ ಸೇನಯಾ।।

ಧೃತರಾಷ್ಟ್ರನು ಹೇಳಿದನು: “ಹೀಗೆ ಆದೇಶಗೊಂಡ ಕಲಿಂಗ ವಾಹಿನೀಪತಿಯು ಸಮರದಲ್ಲಿ ಸೇನೆಯೊಂದಿಗೆ ದಂಡಪಾಣಿ ಅಂತಕನಂತೆ ಗದೆಯನ್ನು ತಿರುಗಿಸುವ ಅದ್ಭುತಕರ್ಮಿ ಮಹಾಬಲ ವೀರ ಭೀಮಸೇನನೊಂದಿಗೆ ಹೇಗೆ ಯುದ್ಧಮಾಡಿದನು?”

06050003 ಸಂಜಯ ಉವಾಚ।
06050003a ಪುತ್ರೇಣ ತವ ರಾಜೇಂದ್ರ ಸ ತಥೋಕ್ತೋ ಮಹಾಬಲಃ।
06050003c ಮಹತ್ಯಾ ಸೇನಯಾ ಗುಪ್ತಃ ಪ್ರಾಯಾದ್ಭೀಮರಥಂ ಪ್ರತಿ।।

ಸಂಜಯನು ಹೇಳಿದನು: “ರಾಜೇಂದ್ರ! ನಿನ್ನ ಮಗನಿಂದ ಹಾಗೆ ಆದೇಶಗೊಂಡ ಮಹಾಬಲನು ಮಹಾಸೇನೆಯಿಂದ ರಕ್ಷಿತನಾಗಿ ಭೀಮನ ರಥದ ಬಳಿ ಬಂದನು.

06050004a ತಾಮಾಪತಂತೀಂ ಸಹಸಾ ಕಲಿಂಗಾನಾಂ ಮಹಾಚಮೂಂ।
06050004c ರಥನಾಗಾಶ್ವಕಲಿಲಾಂ ಪ್ರಗೃಹೀತಮಹಾಯುಧಾಂ।।
06050005a ಭೀಮಸೇನಃ ಕಲಿಂಗಾನಾಮಾರ್ಚದ್ಭಾರತ ವಾಹಿನೀಂ।
06050005c ಕೇತುಮಂತಂ ಚ ನೈಷಾದಿಮಾಯಾಂತಂ ಸಹ ಚೇದಿಭಿಃ।।

ಭಾರತ! ಮಹಾಯುಧಗಳನ್ನು ಹಿಡಿದು ರಥ-ಆನೆ-ಕುದುರೆಗಳಿಂದ ಕೂಡಿದ ಕಲಿಂಗ ಮಹಾಸೇನೆಯು ರಭಸದಿಂದ ತನ್ನ ಮೇಲೆ ಬೀಳಲು ಭೀಮಸೇನನು ಕಲಿಂಗರನ್ನು, ಮತ್ತು ಚೇದಿಗಳೊಡನೆ ಬಂದಿದ್ದ ನೈಷಾದೀ ಕೇತುಮಂತನನ್ನೂ ಪೀಡಿಸಿದನು.

06050006a ತತಃ ಶ್ರುತಾಯುಃ ಸಂಕ್ರುದ್ಧೋ ರಾಜ್ಞಾ ಕೇತುಮತಾ ಸಹ।
06050006c ಆಸಸಾದ ರಣೇ ಭೀಮಂ ವ್ಯೂಢಾನೀಕೇಷು ಚೇದಿಷು।।

ಆಗ ಸಂಕ್ರುದ್ಧನಾದ ಶ್ರುತಾಯುವು ರಾಜಾ ಕೇತುಮತ ಮತ್ತು ಚೇದಿಸೇನೆಗಳೊಂದಿಗೆ ರಣದಲ್ಲಿ ಭೀಮನನ್ನು ಎದುರಿಸಿದನು.

06050007a ರಥೈರನೇಕಸಾಹಸ್ರೈಃ ಕಲಿಂಗಾನಾಂ ಜನಾಧಿಪಃ।
06050007c ಅಯುತೇನ ಗಜಾನಾಂ ಚ ನಿಷಾದೈಃ ಸಹ ಕೇತುಮಾನ್।
06050007e ಭೀಮಸೇನಂ ರಣೇ ರಾಜನ್ಸಮಂತಾತ್ಪರ್ಯವಾರಯತ್।।

ರಾಜನ್! ಕಲಿಂಗರ ಜನಾಧಿಪನು ಅನೇಕ ಸಹಸ್ರ ರಥಗಳೊಂದಿಗೆ, ಹತ್ತು ಸಾವಿರ ಆನೆಗಳೊಂದಿಗೆ, ಕೇತುಮಾನ ನಿಷಾದರೊಂದಿಗೆ ರಣದಲ್ಲಿ ಭೀಮಸೇನನನ್ನು ಎಲ್ಲ ಕಡೆಗಳಿಂದ ಸುತ್ತುವರೆದನು.

06050008a ಚೇದಿಮತ್ಸ್ಯಕರೂಷಾಶ್ಚ ಭೀಮಸೇನಪುರೋಗಮಾಃ।
06050008c ಅಭ್ಯವರ್ತಂತ ಸಹಸಾ ನಿಷಾದಾನ್ಸಹ ರಾಜಭಿಃ।।

ಭೀಮಸೇನನನ್ನು ಮುಂದಿಟ್ಟುಕೊಂಡು ಚೇದಿ-ಮತ್ಸ್ಯ-ಕರೂಷರು ತಕ್ಷಣವೇ ಬಂದು ರಾಜರೊಂದಿಗೆ ನಿಷಾದರನ್ನು ಎದುರಿಸಿದರು.

06050009a ತತಃ ಪ್ರವವೃತೇ ಯುದ್ಧಂ ಘೋರರೂಪಂ ಭಯಾನಕಂ।
06050009c ಪ್ರಜಾನನ್ನ ಚ ಯೋಧಾನ್ಸ್ವಾನ್ಪರಸ್ಪರಜಿಘಾಂಸಯಾ।।

ಆಗ ಘೋರರೂಪವಾದ ಭಯಾನಕ ಯುದ್ಧವು ನಡೆಯಿತು. ಪರಸ್ಪರರನ್ನು ಕೊಲ್ಲಲು ಬಯಸುತ್ತಿದ್ದ ಸೈನಿಕರು ಅವರು ತಮ್ಮವರೋ ಅಥವಾ ಶತ್ರುಗಳೋ ಎಂದೂ ಯೋಚಿಸುತ್ತಿರಲಿಲ್ಲ.

06050010a ಘೋರಮಾಸೀತ್ತತೋ ಯುದ್ಧಂ ಭೀಮಸ್ಯ ಸಹಸಾ ಪರೈಃ।
06050010c ಯಥೇಂದ್ರಸ್ಯ ಮಹಾರಾಜ ಮಹತ್ಯಾ ದೈತ್ಯಸೇನಯಾ।।

ಮಹಾರಾಜ! ಶತ್ರುಗಳೊಂದಿಗೆ ಭೀಮನು ಮಾಡಿದ ಯುದ್ಧವು ಇಂದ್ರನು ಮಹಾ ದೈತ್ಯಸೇನೆಯೊಡನೆ ಮಾಡಿದಂತೆ ಘೋರವಾಗಿತ್ತು.

06050011a ತಸ್ಯ ಸೈನ್ಯಸ್ಯ ಸಂಗ್ರಾಮೇ ಯುಧ್ಯಮಾನಸ್ಯ ಭಾರತ।
06050011c ಬಭೂವ ಸುಮಹಾಂ ಶಬ್ದಃ ಸಾಗರಸ್ಯೇವ ಗರ್ಜತಃ।।

ಭಾರತ! ಸಂಗ್ರಾಮದಲ್ಲಿ ಅವನು ಸೈನ್ಯದೊಂದಿಗೆ ಯುದ್ಧಮಾಡುವಾಗ ಸಾಗರವೇ ಗರ್ಜಿಸುತ್ತಿದೆಯೋ ಎನ್ನುವಂತೆ ಮಹಾ ಶಬ್ಧವುಂಟಾಯಿತು.

06050012a ಅನ್ಯೋನ್ಯಸ್ಯ ತದಾ ಯೋಧಾ ನಿಕೃಂತಂತೋ ವಿಶಾಂ ಪತೇ।
06050012c ಮಹೀಂ ಚಕ್ರುಶ್ಚಿತಾಂ ಸರ್ವಾಂ ಶಶಶೋಣಿತಸಮ್ನಿಭಾಂ।।

ವಿಶಾಂಪತೇ! ಅನ್ಯೋನ್ಯರನ್ನು ಕತ್ತರಿಸುತ್ತಾ ಯೋಧರು ಭೂಮಿಯನ್ನೇ ಮೊಲದ ರಕ್ತದಂತೆ ಚಿತೆಯನ್ನಾಗಿ ಮಾಡಿದರು.

06050013a ಯೋಧಾಂಶ್ಚ ಸ್ವಾನ್ಪರಾನ್ವಾಪಿ ನಾಭ್ಯಜಾನಂ ಜಿಘಾಂಸಯಾ।
06050013c ಸ್ವಾನಪ್ಯಾದದತೇ ಸ್ವಾಶ್ಚ ಶೂರಾಃ ಸಮರದುರ್ಜಯಾಃ।।

ಯೋಧರು ತಮ್ಮವರು ಅಥವಾ ಪರರು ಯಾರು ಎಂದು ತಿಳಿದುಕೊಳ್ಳದೆಯೇ ಸಂಹರಿಸುತ್ತಿದ್ದರು. ಆ ಸಮರ ದುರ್ಜಯ ಶೂರರು ಕೈಗೆ ಸಿಕ್ಕಿದವರನ್ನು, ತಮ್ಮವರೇ ಆಗಿದ್ದರೂ, ಕೊಲ್ಲುತ್ತಿದ್ದರು.

06050014a ವಿಮರ್ದಃ ಸುಮಹಾನಾಸೀದಲ್ಪಾನಾಂ ಬಹುಭಿಃ ಸಹ।
06050014c ಕಲಿಂಗೈಃ ಸಹ ಚೇದೀನಾಂ ನಿಷಾದೈಶ್ಚ ವಿಶಾಂ ಪತೇ।।

ವಿಶಾಂಪತೇ! ಹೀಗೆ ಅತಿ ದೊಡ್ಡದಾದ ಕಲಿಂಗ, ನಿಷಾದ ಮತ್ತು ಚೇದಿ ಸೇನೆಗಳೊಡನೆ ಅಲ್ಪರ ಮಹಾ ಯುದ್ಧವು ನಡೆಯಿತು.

06050015a ಕೃತ್ವಾ ಪುರುಷಕಾರಂ ತು ಯಥಾಶಕ್ತಿ ಮಹಾಬಲಾಃ।
06050015c ಭೀಮಸೇನಂ ಪರಿತ್ಯಜ್ಯ ಸಮ್ನ್ಯವರ್ತಂತ ಚೇದಯಃ।।

ಯಥಾಶಕ್ತಿ ಪೌರುಷವನ್ನು ತೋರಿಸಿ ಮಹಾಬಲ ಚೇದಯರು ಭೀಮಸೇನನನ್ನು ಬಿಟ್ಟು ಪಲಾಯನ ಮಾಡಿದರು.

06050016a ಸರ್ವೈಃ ಕಲಿಂಗೈರಾಸನ್ನಃ ಸಮ್ನಿವೃತ್ತೇಷು ಚೇದಿಷು।
06050016c ಸ್ವಬಾಹುಬಲಮಾಸ್ಥಾಯ ನ ನ್ಯವರ್ತತ ಪಾಂಡವಃ।।

ಚೇದಿಯೋಧರು ಹಿಮ್ಮೆಟ್ಟಲು ಪಾಂಡವನು ಸ್ವಬಾಹುಬಲವನ್ನು ಆಶ್ರಯಿಸಿ ಸರ್ವ ಕಲಿಂಗರನ್ನೂ ತಡೆದನು.

06050017a ನ ಚಚಾಲ ರಥೋಪಸ್ಥಾದ್ಭೀಮಸೇನೋ ಮಹಾಬಲಃ।
06050017c ಶಿತೈರವಾಕಿರನ್ಬಾಣೈಃ ಕಲಿಂಗಾನಾಂ ವರೂಥಿನೀಂ।।

ರಥದಲ್ಲಿದ್ದ ಮಹಾಬಲ ಭೀಮಸೇನನು ಕಲಿಂಗರ ಸೇನೆಯು ಹರಿತ ಬಾಣಗಳ ಮಳೆಸುರಿಸುತ್ತಿದ್ದರೂ ವಿಚಲಿತನಾಗಲ್ಲ.

06050018a ಕಲಿಂಗಸ್ತು ಮಹೇಷ್ವಾಸಃ ಪುತ್ರಶ್ಚಾಸ್ಯ ಮಹಾರಥಃ।
06050018c ಶಕ್ರದೇವ ಇತಿ ಖ್ಯಾತೋ ಜಘ್ನತುಃ ಪಾಂಡವಂ ಶರೈಃ।।

ಶಕ್ರದೇವನೆಂದು ಖ್ಯಾತನಾದ ಕಲಿಂಗನ ಮಗ ಮಹಾರಥ ಮಹೇಷ್ವಾಸನು ಪಾಂಡವನನ್ನು ಶರಗಳಿಂದ ಹೊಡೆದನು.

06050019a ತತೋ ಭೀಮೋ ಮಹಾಬಾಹುರ್ವಿಧುನ್ವನ್ರುಚಿರಂ ಧನುಃ।
06050019c ಯೋಧಯಾಮಾಸ ಕಾಲಿಂಗಾನ್ಸ್ವಬಾಹುಬಲಮಾಶ್ರಿತಃ।।

ಆಗ ಮಹಾಬಾಹು ಭೀಮನು ಸುಂದರ ಧನುಸ್ಸನ್ನು ಠೇಂಕರಿಸಿ ಸ್ವಬಾಹುಬಲವನ್ನು ಆಶ್ರಯಿಸಿ ಕಲಿಂಗರೊಂದಿಗೆ ಯುದ್ಧಮಾಡಿದನು.

06050020a ಶಕ್ರದೇವಸ್ತು ಸಮರೇ ವಿಸೃಜನ್ಸಾಯಕಾನ್ಬಹೂನ್।
06050020c ಅಶ್ವಾಂ ಜಘಾನ ಸಮರೇ ಭೀಮಸೇನಸ್ಯ ಸಾಯಕೈಃ।
06050020e ವವರ್ಷ ಶರವರ್ಷಾಣಿ ತಪಾಂತೇ ಜಲದೋ ಯಥಾ।।

ಶಕ್ರದೇವನು ಸಮರದಲ್ಲಿ ಅನೇಕ ಸಾಯಕಗಳನ್ನು ಬಿಟ್ಟು ಭೀಮಸೇನನ ಕುದುರೆಗಳನ್ನು ಕೊಂದನು ಮತ್ತು ಬೇಸಗೆಯ ಕೊನೆಯಲ್ಲಿ ಮೋಡಗಳು ಹೇಗೋ ಹಾಗೆ ಸಮರದಲ್ಲಿ ಸಾಯಕಗಳ ಶರವರ್ಷಗಳನ್ನು ಸುರಿಸಿದನು.

06050021a ಹತಾಶ್ವೇ ತು ರಥೇ ತಿಷ್ಠನ್ಭೀಮಸೇನೋ ಮಹಾಬಲಃ।
06050021c ಶಕ್ರದೇವಾಯ ಚಿಕ್ಷೇಪ ಸರ್ವಶೈಕ್ಯಾಯಸೀಂ ಗದಾಂ।।

ಕುದುರೆಗಳು ಸತ್ತರೂ ರಥದ ಮೇಲೆ ನಿಂತು ಮಹಾಬಲ ಭೀಮಸೇನನು ಲೋಹಮಯ ಗದೆಯನ್ನು ಶಕ್ತಿಯನ್ನೆಲ್ಲ ಉಪಯೋಗಿಸಿ ಶಕ್ರದೇವನ ಮೇಲೆ ಎಸೆದನು.

06050022a ಸ ತಯಾ ನಿಹತೋ ರಾಜನ್ಕಲಿಂಗಸ್ಯ ಸುತೋ ರಥಾತ್।
06050022c ಸಧ್ವಜಃ ಸಹ ಸೂತೇನ ಜಗಾಮ ಧರಣೀತಲಂ।।

ರಾಜನ್! ಕಲಿಂಗನ ಮಗನು ಅವನಿಂದ ಹತನಾಗಿ ಧ್ವಜ-ಸೂತರೊಂದಿಗೆ ರಥದಿಂದ ಧರಣೀತಲಕ್ಕೆ ಬಿದ್ದನು.

06050023a ಹತಮಾತ್ಮಸುತಂ ದೃಷ್ಟ್ವಾ ಕಲಿಂಗಾನಾಂ ಜನಾಧಿಪಃ।
06050023c ರಥೈರನೇಕಸಾಹಸ್ರೈರ್ಭಿಮಸ್ಯಾವಾರಯದ್ದಿಶಃ।।

ತನ್ನ ಮಗನು ತೀರಿಕೊಂಡಿದುದನ್ನು ಕಂಡು ಕಲಿಂಗರ ಜನಾಧಿಪನು ಅನೇಕ ಸಹಸ್ರ ರಥಗಳೊಂದಿಗೆ ಭೀಮಸೇನನನ್ನು ಎಲ್ಲ ಕಡೆಗಳಿಂದ ಸುತ್ತುವರೆದನು.

06050024a ತತೋ ಭೀಮೋ ಮಹಾಬಾಹುರ್ಗುರ್ವೀಂ ತ್ಯಕ್ತ್ವಾ ಮಹಾಗದಾಂ।
06050024c ಉದ್ಬಬರ್ಹಾಥ ನಿಸ್ತ್ರಿಂಶಂ ಚಿಕೀರ್ಷುಃ ಕರ್ಮ ದಾರುಣಂ।।
06050025a ಚರ್ಮ ಚಾಪ್ರತಿಮಂ ರಾಜನ್ನಾರ್ಷಭಂ ಪುರುಷರ್ಷಭ।
06050025c ನಕ್ಷತ್ರೈರರ್ಧಚಂದ್ರೈಶ್ಚ ಶಾತಕುಂಭಮಯೈಶ್ಚಿತಂ।।

ರಾಜನ್! ಆಗ ಮಹಾಬಾಹು ಭೀಮನು ದಾರುಣ ಕರ್ಮವನ್ನು ಮಾಡಲೆಸಗಿ ಭಾರವಾದ ಮಹಾಗದೆಯನ್ನು ಬಿಟ್ಟು ಖಡ್ಗವನ್ನೂ ಅಪ್ರತಿಮವಾಗಿದ್ದ ನಕ್ಷತ್ರ-ಅರ್ಧಚಂದ್ರಗಳ ಮತ್ತು ನೂರುಕುಂಭಗಳ ಚಿತ್ರವಿರುವ ಗುರಾಣಿಯನ್ನು ಹಿಡಿದು ಕೆಳಗಿಳಿದನು.

06050026a ಕಲಿಂಗಸ್ತು ತತಃ ಕ್ರುದ್ಧೋ ಧನುರ್ಜ್ಯಾಮವಮೃಜ್ಯ ಹ।
06050026c ಪ್ರಗೃಹ್ಯ ಚ ಶರಂ ಘೋರಮೇಕಂ ಸರ್ಪವಿಷೋಪಮಂ।
06050026e ಪ್ರಾಹಿಣೋದ್ಭೀಮಸೇನಾಯ ವಧಾಕಾಂಕ್ಷೀ ಜನೇಶ್ವರಃ।।

ಆಗ ಕಲಿಂಗ ಜನೇಶ್ವರನು ಕ್ರುದ್ಧನಾಗಿ ಧನುಸ್ಸನ್ನು ಟೇಂಕರಿಸಿ ಘೋರ ಸರ್ಪವಿಷೋಪಮ ಬಾಣವೊಂದನ್ನು ಹಿಡಿದು ಭೀಮಸೇನನ ವಧಾಕಾಂಕ್ಷಿಯಾಗಿ ಪ್ರಯೋಗಿಸಿದನು.

06050027a ತಮಾಪತಂತಂ ವೇಗೇನ ಪ್ರೇರಿತಂ ನಿಶಿತಂ ಶರಂ।
06050027c ಭೀಮಸೇನೋ ದ್ವಿಧಾ ರಾಜಂಶ್ಚಿಚ್ಛೇದ ವಿಪುಲಾಸಿನಾ।
06050027e ಉದಕ್ರೋಶಚ್ಚ ಸಂಹೃಷ್ಟಸ್ತ್ರಾಸಯಾನೋ ವರೂಥಿನೀಂ।।

ರಾಜನ್! ವೇಗದಿಂದ ಬಂದು ಬೀಳುತ್ತಿದ್ದ ಆ ನಿಶಿತ ಶರದಿಂದ ಪ್ರೇರಿತನಾಗಿ ಭೀಮಸೇನನು ಅದನ್ನು ವಿಪುಲ ಖಡ್ಗದಿಂದ ಎರಡಾಗಿ ತುಂಡರಿಸಿದನು. ಸಂಹೃಷ್ಟನಾಗಿ ಜೋರಾಗಿ ಸಿಂಹನಾದಗೈದು ಸೇನೆಗಳನ್ನು ತತ್ತರಿಸುವಂತೆ ಮಾಡಿದನು.

06050028a ಕಲಿಂಗಸ್ತು ತತಃ ಕ್ರುದ್ಧೋ ಭೀಮಸೇನಾಯ ಸಂಯುಗೇ।
06050028c ತೋಮರಾನ್ಪ್ರಾಹಿಣೋಚ್ಚೀಘ್ರಂ ಚತುರ್ದಶ ಶಿಲಾಶಿತಾನ್।।

ಆಗ ಕ್ರುದ್ಧನಾದ ಕಲಿಂಗನು ಸಂಯುಗದಲ್ಲಿ ಭೀಮಸೇನನ ಮೇಲೆ ಹದಿನಾಲ್ಕು ಶೀಘ್ರವಾದ, ಶಿಲಾಶಿತ ತೋಮರಗಳನ್ನು ಪ್ರಯೋಗಿಸಿದನು.

06050029a ತಾನಪ್ರಾಪ್ತಾನ್ಮಹಾಬಾಹುಃ ಖಗತಾನೇವ ಪಾಂಡವಃ।
06050029c ಚಿಚ್ಛೇದ ಸಹಸಾ ರಾಜನ್ನಸಂಭ್ರಾಂತೋ ವರಾಸಿನಾ।।

ರಾಜನ್! ಅವುಗಳು ತಲುಪುವುದರೊಳಗೆ ಆಕಾಶಮಾರ್ಗದಲ್ಲಿರುವಾಗಲೇ ಪಾಂಡವನು ಸಂಭ್ರಾಂತನಾಗಿ ಶ್ರೇಷ್ಠ ಖಡ್ಗದಿಂದ ತಕ್ಷಣವೇ ತುಂಡುಮಾಡಿದನು.

06050030a ನಿಕೃತ್ಯ ತು ರಣೇ ಭೀಮಸ್ತೋಮರಾನ್ವೈ ಚತುರ್ದಶ।
06050030c ಭಾನುಮಂತಮಭಿಪ್ರೇಕ್ಷ್ಯ ಪ್ರಾದ್ರವತ್ಪುರುಷರ್ಷಭಃ।।

ರಣದಲ್ಲಿ ಆ ಹದಿನಾಲ್ಕು ತೋಮರಗಳನ್ನು ಕತ್ತರಿಸಿ ಪುರುರ್ಷಭ ಭೀಮನು ಭಾನುಮಂತನನ್ನು ನೋಡಿ ಧಾವಿಸಿ ಬಂದನು.

06050031a ಭಾನುಮಾಂಸ್ತು ತತೋ ಭೀಮಂ ಶರವರ್ಷೇಣ ಚಾದಯನ್।
06050031c ನನಾದ ಬಲವನ್ನಾದಂ ನಾದಯಾನೋ ನಭಸ್ತಲಂ।।

ಆಗ ಭಾನುಮಂತನು ಭೀಮನನ್ನು ಶರವರ್ಷಗಳಿಂದ ಹೊಡೆದು ನಭಸ್ಥಲವನ್ನೂ ಮೊಳಗಿಸುವ ಬಲವತ್ತಾದ ಸಿಂಹನಾದವನ್ನು ಕೂಗಿದನು.

06050032a ನ ತಂ ಸ ಮಮೃಷೇ ಭೀಮಃ ಸಿಂಹನಾದಂ ಮಹಾರಣೇ।
06050032c ತತಃ ಸ್ವರೇಣ ಮಹತಾ ವಿನನಾದ ಮಹಾಸ್ವನಂ।।

ಮಹಾರಣದಲ್ಲಿ ಅವನ ಸಿಂಹನಾದವನ್ನು ಸಹಿಸದೇ ಭೀಮನು ಮಹಾ ಸ್ವರದಲ್ಲಿ ಮಹಾಸ್ವನ ಸಿಂಹನಾದವನ್ನು ಮಾಡಿದನು.

06050033a ತೇನ ಶಬ್ದೇನ ವಿತ್ರಸ್ತಾ ಕಲಿಂಗಾನಾಂ ವರೂಥಿನೀ।
06050033c ನ ಭೀಮಂ ಸಮರೇ ಮೇನೇ ಮಾನುಷಂ ಭರತರ್ಷಭ।।

ಭರತರ್ಷಭ! ಅವನ ಶಬ್ಧದಿಂದ ವಿತ್ರಸ್ತರಾದ ಕಲಿಂಗರ ಸೇನೆಯು ಸಮರದಲ್ಲಿ ಭೀಮನು ಮನುಷ್ಯನಲ್ಲವೆಂದು ಅಭಿಪ್ರಾಯಪಟ್ಟಿತು.

06050034a ತತೋ ಭೀಮೋ ಮಹಾರಾಜ ನದಿತ್ವಾ ವಿಪುಲಂ ಸ್ವನಂ।
06050034c ಸಾಸಿರ್ವೇಗಾದವಪ್ಲುತ್ಯ ದಂತಾಭ್ಯಾಂ ವಾರಣೋತ್ತಮಂ।।
06050035a ಆರುರೋಹ ತತೋ ಮಧ್ಯಂ ನಾಗರಾಜಸ್ಯ ಮಾರಿಷ।
06050035c ಖಡ್ಗೇನ ಪೃಥುನಾ ಮಧ್ಯೇ ಭಾನುಮಂತಮಥಾಚ್ಛಿನತ್।।

ಮಹಾರಾಜ! ಆಗ ಭೀಮನು ವಿಪುಲ ಸ್ವರದಲ್ಲಿ ಕೂಗಿ, ವೇಗವಾಗಿ ಉತ್ತಮ ಆನೆಯ ಎರಡೂ ದಂತಗಳನ್ನು ಬಲವಾಗಿ ಹಿಡಿದು ಛಂಗನೆ ಗಜರಾಜನ ಮೇಲೆ ಹಾರಿ ಹೋಗಿ ಮಹಾ ಖಡ್ಗದಿಂದ ಭಾನುಮಂತನನ್ನು ಮಧ್ಯದಲ್ಲಿಯೇ ಕತ್ತರಿಸಿದನು.

06050036a ಸೋಽಂತರಾಯುಧಿನಂ ಹತ್ವಾ ರಾಜಪುತ್ರಮರಿಂದಮಃ।
06050036c ಗುರುಭಾರಸಹಸ್ಕಂಧೇ ನಾಗಸ್ಯಾಸಿಮಪಾತಯತ್।।

ಆ ಯೋಧ ರಾಜಪುತ್ರನನ್ನು ಸಂಹರಿಸಿದ ಅರಿಂದಮನು ಅತಿಭಾರವಾದ ಖಡ್ಗವನ್ನು ಆನೆಯ ಮೇಲೆ ಪ್ರಯೋಗಿಸಿ ಅದನ್ನೂ ಬೀಳಿಸಿದನು.

06050037a ಚಿನ್ನಸ್ಕಂಧಃ ಸ ವಿನದನ್ಪಪಾತ ಗಜಯೂಥಪಃ।
06050037c ಆರುಗ್ಣಃ ಸಿಂಧುವೇಗೇನ ಸಾನುಮಾನಿವ ಪರ್ವತಃ।।

ಭುಜಗಳು ತುಂಡಾಗಲು ಆ ಗಜಯೂಥಪವು ಸಿಂಧುವೇಗದಿಂದ ಕೊರೆಯಲ್ಪಟ್ಟು ಬೀಳುವ ಪರ್ವತದಂತೆ ಕೂಗಿ ಬಿದ್ದಿತು.

06050038a ತತಸ್ತಸ್ಮಾದವಪ್ಲುತ್ಯ ಗಜಾದ್ಭಾರತ ಭಾರತಃ।
06050038c ಖಡ್ಗಪಾಣಿರದೀನಾತ್ಮಾ ಅತಿಷ್ಠದ್ಭುವಿ ದಂಶಿತಃ।।

ಭಾರತ! ಅದು ಕೆಳಗೆ ಬೀಳುವುದರೊಳಗೆ ಭಾರತನು ಆನೆಯಿಂದ ಕೆಳಗೆ ಹಾರಿ ಖಡ್ಗವನ್ನು ಹಿಡಿದುಕೊಂಡೇ ಅದೀನಾತ್ಮನಾಗಿ ಕವಚಗಳನ್ನು ಧರಿಸಿ ನೆಲದ ಮೇಲೆ ನಿಂತನು.

06050039a ಸ ಚಚಾರ ಬಹೂನ್ಮಾರ್ಗಾನಭೀತಃ ಪಾತಯನ್ಗಜಾನ್।
06050039c ಅಗ್ನಿಚಕ್ರಮಿವಾವಿದ್ಧಂ ಸರ್ವತಃ ಪ್ರತ್ಯದೃಶ್ಯತ।।

ಆಗ ಅನೇಕ ಮಾರ್ಗಗಳಲ್ಲಿ ಭಯವಿಲ್ಲದೇ ಚಲಿಸುತ್ತಾ ಅನೇಕ ಆನೆಗಳನ್ನು ಬೀಳಿಸಿದನು. ಅವನು ಅಗ್ನಿಚಕ್ರದಂತೆ ಎಲ್ಲಕಡೆ ಕಡಿಯುತ್ತಿರುವುದು ಕಂಡುಬಂದಿತು.

06050040a ಅಶ್ವವೃಂದೇಷು ನಾಗೇಷು ರಥಾನೀಕೇಷು ಚಾಭಿಭೂಃ।
06050040c ಪದಾತೀನಾಂ ಚ ಸಂಘೇಷು ವಿನಿಘ್ನಂ ಶೋಣಿತೋಕ್ಷಿತಃ।।

ಅಶ್ವವೃಂದಗಳನ್ನೂ, ಆನೆಗಳನ್ನೂ, ರಥಾನೀಕಗಳನ್ನು, ಪದಾತಿಗಳ ಸಂಕುಲಗಳನ್ನೂ ಸಂಹರಿಸಿ ರಕ್ತದಿಂದ ತೋಯ್ದು ಹೋದನು.

06050040e ಶ್ಯೇನವದ್ವ್ಯಚರದ್ಭೀಮೋ ರಣೇ ರಿಪುಬಲೋತ್ಕಟಃ।।
06050041a ಚಿಂದಂಸ್ತೇಷಾಂ ಶರೀರಾಣಿ ಶಿರಾಂಸಿ ಚ ಮಹಾಜವಃ।

ರಿಪುಬಲೋತ್ಕಟ ಮಹಾವೇಗೀ ಭೀಮನು ರಣದಲ್ಲಿ ಗಿಡುಗದಂತೆ ಸಂಚರಿಸಿ ಅವರ ಶರೀರ-ಶಿರಗಳನ್ನು ಕತ್ತರಿಸಿದನು.

06050041c ಖಡ್ಗೇನ ಶಿತಧಾರೇಣ ಸಂಯುಗೇ ಗಜಯೋಧಿನಾಂ।।
06050042a ಪದಾತಿರೇಕಃ ಸಂಕ್ರುದ್ಧಃ ಶತ್ರೂಣಾಂ ಭಯವರ್ಧನಃ।
06050042c ಮೋಹಯಾಮಾಸ ಚ ತದಾ ಕಾಲಾಂತಕಯಮೋಪಮಃ।।

ಸಂಯುಗದಲ್ಲಿ ಶತ್ರುಗಳ ಭಯವರ್ಧಕ ಭೀಮನು ಹರಿತ ಖಡ್ಗದಿಂದ ಒಬ್ಬನೇ ಕಾಲ್ನಡುಗೆಯಲ್ಲಿಯೇ ಗಜಯೋಧಿಗಳನ್ನು ಕೊಲ್ಲುತ್ತಾ ಕಾಲಾಂತಕನಂತೆ ಅವರನ್ನು ಭಯದಿಂದ ಮೋಹಗೊಳಿಸಿದನು.

06050043a ಮೂಢಾಶ್ಚ ತೇ ತಮೇವಾಜೌ ವಿನದಂತಃ ಸಮಾದ್ರವನ್।
06050043c ಸಾಸಿಮುತ್ತಮವೇಗೇನ ವಿಚರಂತಂ ಮಹಾರಣೇ।।

ಆ ಮೂಢರು ಜೋರಾಗಿ ಕೂಗಿಕೊಳ್ಳುತ್ತಾ ಅವನ ಮೇಲೆ ಎರಗುತ್ತಿದ್ದರು. ಅವನು ಉತ್ತಮ ವೇಗದಿಂದ ಮಹಾರಣದಲ್ಲಿ ಸಂಚರಿಸುತ್ತಿದ್ದನು.

06050044a ನಿಕೃತ್ಯ ರಥಿನಾಮಾಜೌ ರಥೇಷಾಶ್ಚ ಯುಗಾನಿ ಚ।
06050044c ಜಘಾನ ರಥಿನಶ್ಚಾಪಿ ಬಲವಾನರಿಮರ್ದನಃ।।

ರಥಿಗಳನ್ನೂ ರಥಸಂಕುಲಗಳನ್ನು ಆ ಬಲವಾನ ಅರಿಮರ್ದಮನು ಕತ್ತರಿಸಿ ಸಂಹರಿಸಿದನು.

06050045a ಭೀಮಸೇನಶ್ಚರನ್ಮಾರ್ಗಾನ್ಸುಬಹೂನ್ಪ್ರತ್ಯದೃಶ್ಯತ।
06050045c ಭ್ರಾಂತಮುದ್ಭ್ರಾಂತಮಾವಿದ್ಧಮಾಪ್ಲುತಂ ಪ್ರಸೃತಂ ಸೃತಂ।
06050045e ಸಂಪಾತಂ ಸಮುದೀರ್ಯಂ ಚ ದರ್ಶಯಾಮಾಸ ಪಾಂಡವಃ।।

ಪಾಂಡವ ಭೀಮಸೇನನು ಅನೇಕ ಮಾರ್ಗಗಳಲ್ಲಿ ಸಂಚರಿಸುತ್ತಿರುವಂತೆ ಕಾಣುತ್ತಿತ್ತು. ಅವನು ಭ್ರಾಂತ, ಉದ್ಭ್ರಾಂತ, ಅವಿದ್ಧ, ಆಪ್ಲುತ, ಪ್ರಸೃತ, ಸೃತ, ಸಂಪಾತ, ಸಮುದೀರ್ಣ ಮುಂತಾದ ವರಸೆಗಳನ್ನು1 ಪ್ರದರ್ಶಿಸಿದನು.

06050046a ಕೇ ಚಿದಗ್ರಾಸಿನಾ ಚಿನ್ನಾಃ ಪಾಂಡವೇನ ಮಹಾತ್ಮನಾ।
06050046c ವಿನೇದುರ್ಭಿನ್ನಮರ್ಮಾಣೋ ನಿಪೇತುಶ್ಚ ಗತಾಸವಃ।।

ಕೆಲವರನ್ನು ಮಹಾತ್ಮ ಪಾಂಡವನು ಖಡ್ಗದಿಂದ ಕತ್ತರಿಸಿದರೆ ಇನ್ನು ಕೆಲವರನ್ನು ಮರ್ಮಗಳನ್ನು ಭೇದಿಸಿ ಕೆಳಗೆ ಬೀಳಿಸಿ ಅಸುನೀಗಿಸುತ್ತಿದ್ದನು.

06050047a ಚಿನ್ನದಂತಾಗ್ರಹಸ್ತಾಶ್ಚ ಭಿನ್ನಕುಂಭಾಸ್ತಥಾಪರೇ।
06050047c ವಿಯೋಧಾಃ ಸ್ವಾನ್ಯನೀಕಾನಿ ಜಘ್ನುರ್ಭಾರತ ವಾರಣಾಃ।
06050047e ನಿಪೇತುರುರ್ವ್ಯಾಂ ಚ ತಥಾ ವಿನದಂತೋ ಮಹಾರವಾನ್।।

ಆನೆಗಳ ದಂತ ಸೊಂಡಿಲುಗಳು ತುಂಡಾದವು. ಇತರ ಆನೆಗಳ ಕುಂಭಸ್ಥಲಗಳು ಒಡೆದವು. ಭಾರತ! ಇಂತಹ ಆನೆಗಳು ನೋವನ್ನು ತಡೆಯಲಾರದೇ ತಮ್ಮದೇ ಸೇನೆಗಳ ಮೇಲೆ ಎರಗಿ ಮಹಾರವವನ್ನು ಕೂಗಿ ಸೈನಿಕರನ್ನು ಸಂಹರಿಸುತ್ತಿದ್ದವು.

06050048a ಚಿನ್ನಾಂಶ್ಚ ತೋಮರಾಂಶ್ಚಾಪಾನ್ಮಹಾಮಾತ್ರಶಿರಾಂಸಿ ಚ।
06050048c ಪರಿಸ್ತೋಮಾನಿ ಚಿತ್ರಾಣಿ ಕಕ್ಷ್ಯಾಶ್ಚ ಕನಕೋಜ್ಜ್ವಲಾಃ।।
06050049a ಗ್ರೈವೇಯಾಣ್ಯಥ ಶಕ್ತೀಶ್ಚ ಪತಾಕಾಃ ಕಣಪಾಂಸ್ತಥಾ।
06050049c ತೂಣೀರಾಣ್ಯಥ ಯಂತ್ರಾಣಿ ವಿಚಿತ್ರಾಣಿ ಧನೂಂಷಿ ಚ।।
06050050a ಅಗ್ನಿಕುಂಡಾನಿ ಶುಭ್ರಾಣಿ ತೋತ್ತ್ರಾಂಶ್ಚೈವಾಂಕುಶೈಃ ಸಹ।
06050050c ಘಂಟಾಶ್ಚ ವಿವಿಧಾ ರಾಜನ್ ಹೇಮಗರ್ಭಾಂಸ್ತ್ಸರೂನಪಿ।
06050050e ಪತತಃ ಪತಿತಾಂಶ್ಚೈವ ಪಶ್ಯಾಮಃ ಸಹ ಸಾದಿಭಿಃ।।

ರಾಜನ್! ಕತ್ತರಿಸಿ ಬಿದ್ದಿದ್ದ ತೋಮರಗಳು, ಧನುಸ್ಸುಗಳು, ಮಹಾಗಾತ್ರದ ಶಿರಗಳು, ಚಿತ್ರವಿಚಿತ್ರವಾಗಿದ್ದ ಬಂಗಾರದದಾರಗಳಿಂದ ಉಜ್ವಲವಾಗಿದ್ದ ಆನೆಗಳ ನಡುವಿಗೆ ಕಟ್ಟುವ ಹಗ್ಗಗಳು, ಕಂಠಾಭರಣಗಳು, ಶಕ್ತಿ, ಪತಾಕೆ, ಕಣಪಗಳು, ತೂಣೀರಗಳು, ವಿಚಿತ್ರ ಯಂತ್ರಗಳು, ಧನುಸ್ಸುಗಳು, ಶುಭ್ರ ಅಗ್ನಿಕುಂಡಗಳು, ಚಾವಟಿಗಳು, ಅಂಕುಶಗಳು, ವಿವಿಧ ಗಂಟೆಗಳು, ಸುವರ್ಣಖಚಿತ ಖಡ್ಗ-ಋಷ್ಟಿಗಳು, ಬಿದ್ದ ಮತ್ತು ಬೀಳುತ್ತಿರುವ ಮಾವುತರು ಎಲ್ಲವನ್ನೂ ಒಟ್ಟಿಗೇ ನೋಡಿದೆವು.

06050051a ಚಿನ್ನಗಾತ್ರಾವರಕರೈರ್ನಿಹತೈಶ್ಚಾಪಿ ವಾರಣೈಃ।
06050051c ಆಸೀತ್ತಸ್ಮಿನ್ಸಮಾಸ್ತೀರ್ಣಾ ಪತಿತೈರ್ಭೂರ್ನಗೈರಿವ।।

ದೇಹ ಮತ್ತು ಶ್ರೇಷ್ಠ ಸೊಂಡಿಲುಗಳು ಕತ್ತರಿಸಲ್ಪಟ್ಟು ಸತ್ತು ಬಿದ್ದಿದ್ದ ಆನೆಗಳ ರಾಶಿಗಳಿಂದ ಕೆಳಕ್ಕೆ ಕುಸಿದು ಹರಡಿಕೊಂಡಿರುವಂತೆ ರಣಭೂಮಿಯು ವ್ಯಾಪ್ತವಾಗಿ ಕಾಣುತ್ತಿತ್ತು.

06050052a ವಿಮೃದ್ಯೈವಂ ಮಹಾನಾಗಾನ್ಮಮರ್ದಾಶ್ವಾನ್ನರರ್ಷಭಃ।
06050052c ಅಶ್ವಾರೋಹವರಾಂಶ್ಚಾಪಿ ಪಾತಯಾಮಾಸ ಭಾರತ।।
06050052e ತದ್ಘೋರಮಭವದ್ಯುದ್ಧಂ ತಸ್ಯ ತೇಷಾಂ ಚ ಭಾರತ।।

ಭಾರತ! ಹೀಗೆ ಮಹಾಗಜಗಳನ್ನು ಮರ್ದಿಸಿ ನರರ್ಷಭನು ಅಶ್ವಗಳನ್ನೂ ಅಶ್ವಾರೋಹಿಗಳನ್ನೂ ಬೀಳಿಸತೊಡಗಿದನು. ಭಾರತ! ಆಗ ಅವನ ಮತ್ತು ಅವರ ಮಧ್ಯೆ ಘೋರ ಯುದ್ಧವು ನಡೆಯಿತು.

06050053a ಖಲೀನಾನ್ಯಥ ಯೋಕ್ತ್ರಾಣಿ ಕಶಾಶ್ಚ ಕನಕೋಜ್ಜ್ವಲಾಃ।
06050053c ಪರಿಸ್ತೋಮಾಶ್ಚ ಪ್ರಾಸಾಶ್ಚ ಋಷ್ಟಯಶ್ಚ ಮಹಾಧನಾಃ।।
06050054a ಕವಚಾನ್ಯಥ ಚರ್ಮಾಣಿ ಚಿತ್ರಾಣ್ಯಾಸ್ತರಣಾನಿ ಚ।
06050054c ತತ್ರ ತತ್ರಾಪವಿದ್ಧಾನಿ ವ್ಯದೃಶ್ಯಂತ ಮಹಾಹವೇ।।

ಆಗ ಕುದುರೆಗಳ ಲಗಾಮು, ಕಟ್ಟುವ ಹಗ್ಗ, ಜೀನು, ಪ್ರಾಸ, ಅಮೂಲ್ಯ ಋಷ್ಟಿಗಳು, ಕವಚಗಳು, ಗುರಾಣಿಗಳು, ಬಣ್ಣಬಣ್ಣದ ಕಂಬಳಿಗಳು ಅಲ್ಲಲ್ಲಿ ಮಹಾಹವದಲ್ಲಿ ಚದುರಿ ಬಿದ್ದಿರುವುದು ಕಂಡುಬಂದಿತು.

06050055a ಪ್ರೋಥಯಂತ್ರೈರ್ವಿಚಿತ್ರೈಶ್ಚ ಶಸ್ತ್ರೈಶ್ಚ ವಿಮಲೈಸ್ತಥಾ।
06050055c ಸ ಚಕ್ರೇ ವಸುಧಾಂ ಕೀರ್ಣಾಂ ಶಬಲೈಃ ಕುಸುಮೈರಿವ।।

ವಿಚಿತ್ರ ಯಂತ್ರಗಳಿಂದಲೂ, ವಿಮಲ ಖಡ್ಗಗಳಿಂದಲೂ ಹರಡಿಹೋದ ವಸುಧೆಯನ್ನು ಅವನು ಶಬಲ ಕುಸುಮಗಳು ಹರಡಿರುವಂತೆ ಮಾಡಿದನು.

06050056a ಆಪ್ಲುತ್ಯ ರಥಿನಃ ಕಾಂಶ್ಚಿತ್ಪರಾಮೃಶ್ಯ ಮಹಾಬಲಃ।
06050056c ಪಾತಯಾಮಾಸ ಖಡ್ಗೇನ ಸಧ್ವಜಾನಪಿ ಪಾಂಡವಃ।।

ಕೆಲವೊಮ್ಮೆ ಆ ಮಹಾಬಲ ಪಾಂಡವನು ರಥದ ಮೇಲೆ ಹಾರಿ ಖಡ್ಗದಿಂದ ಅಲ್ಲಿರುವವರನ್ನು ಕೊಂದು ಕೆಳಗೆ ಹಾರುತ್ತಿದ್ದನು.

06050057a ಮುಹುರುತ್ಪತತೋ ದಿಕ್ಷು ಧಾವತಶ್ಚ ಯಶಸ್ವಿನಃ।
06050057c ಮಾರ್ಗಾಂಶ್ಚ ಚರತಶ್ಚಿತ್ರಾನ್ವ್ಯಸ್ಮಯಂತ ರಣೇ ಜನಾಃ।।

ಕ್ಷಣದಲ್ಲಿಯೇ ಹಾರುತ್ತಿದ್ದನು. ಯಶಸ್ವಿಯು ದಿಕ್ಕುಗಳಲ್ಲಿ ಓಡುತ್ತಿದ್ದನು. ಚಿತ್ರವಿಚಿತ್ರ ಮಾರ್ಗಗಳಲ್ಲಿ ಸಂಚರಿಸುತ್ತಿರುವ ಅವನನ್ನು ನೋಡಿ ರಣದಲ್ಲಿ ಎಲ್ಲರೂ ವಿಸ್ಮಿತರಾದರು.

06050058a ನಿಜಘಾನ ಪದಾ ಕಾಂಶ್ಚಿದಾಕ್ಷಿಪ್ಯಾನ್ಯಾನಪೋಥಯತ್।
06050058c ಖಡ್ಗೇನಾನ್ಯಾಂಶ್ಚ ಚಿಚ್ಛೇದ ನಾದೇನಾನ್ಯಾಂಶ್ಚ ಭೀಷಯನ್।।

ಕೆಲವರನ್ನು ಕಾಲಿನಿಂದ ತುಳಿದು ಕೊಂದನು. ಅನ್ಯರನ್ನು ನೆಲಕ್ಕೆ ಬಡಿದು ಕೊಂದನು. ಅನ್ಯರನ್ನು ಖಡ್ಗದಿಂದ ಕತ್ತರಿಸಿ ಮತ್ತೆ ಕೆಲವರನ್ನು ಕೂಗಿ ಹೆದರಿಸಿ ಕೊಂದನು.

06050059a ಊರುವೇಗೇನ ಚಾಪ್ಯನ್ಯಾನ್ಪಾತಯಾಮಾಸ ಭೂತಲೇ।
06050059c ಅಪರೇ ಚೈನಮಾಲೋಕ್ಯ ಭಯಾತ್ಪಂಚತ್ವಮಾಗತಾಃ।।

ಅವನು ನಡೆಯುವಾಗ ತೊಡೆಗಳ ವೇಗದಿಂದಲೇ ಭೂತಲದಲ್ಲಿ ಕೆಲವರು ಬಿದ್ದರು. ಇನ್ನು ಕೆಲವರು ಅವನನ್ನು ನೋಡಿಯೇ ಭೀತರಾಗಿ ಪಂಚತ್ವವನ್ನು ಸೇರಿದರು.

06050060a ಏವಂ ಸಾ ಬಹುಲಾ ಸೇನಾ ಕಲಿಂಗಾನಾಂ ತರಸ್ವಿನಾಂ।
06050060c ಪರಿವಾರ್ಯ ರಣೇ ಭೀಷ್ಮಂ ಭೀಮಸೇನಮುಪಾದ್ರವತ್।।

ಈ ರೀತಿ ಭೀಷ್ಮನನ್ನು ಸುತ್ತುವರೆದು ಯುದ್ಧಮಾಡುತ್ತಿದ್ದ ತರಸ್ವೀ ಕಲಿಂಗರ ಮಹಾ ಸೇನೆಯನ್ನು ಭೀಮಸೇನನು ರಣದಲ್ಲಿ ಆಕ್ರಮಣಿಸಿದನು.

06050061a ತತಃ ಕಲಿಂಗಸೈನ್ಯಾನಾಂ ಪ್ರಮುಖೇ ಭರತರ್ಷಭ।
06050061c ಶ್ರುತಾಯುಷಮಭಿಪ್ರೇಕ್ಷ್ಯ ಭೀಮಸೇನಃ ಸಮಭ್ಯಯಾತ್।।

ಭರತರ್ಷಭ! ಆಗ ಕಲಿಂಗ ಸೈನ್ಯಗಳ ಪ್ರಮುಖ ಶ್ರುತಾಯುಷನನ್ನು ನೋಡಿ ಭೀಮಸೇನನು ಧಾವಿಸಿದನು.

06050062a ತಮಾಯಾಂತಮಭಿಪ್ರೇಕ್ಷ್ಯ ಕಲಿಂಗೋ ನವಭಿಃ ಶರೈಃ।
06050062c ಭೀಮಸೇನಮಮೇಯಾತ್ಮಾ ಪ್ರತ್ಯವಿಧ್ಯತ್ಸ್ತನಾಂತರೇ।।

ಅವನು ಬರುತ್ತಿರುವುದನ್ನು ನೋಡಿ ಅಮೇಯಾತ್ಮ ಕಲಿಂಗನು ಒಂಭತ್ತು ಶರಗಳಿಂದ ಭೀಮಸೇನನ ಎದೆಗೆ ಹೊಡೆದನು.

06050063a ಕಲಿಂಗಬಾಣಾಭಿಹತಸ್ತೋತ್ತ್ರಾರ್ದಿತ ಇವ ದ್ವಿಪಃ।
06050063c ಭೀಮಸೇನಃ ಪ್ರಜಜ್ವಾಲ ಕ್ರೋಧೇನಾಗ್ನಿರಿವೇಂಧನೈಃ।।

ಅಂಕುಶದಿಂದ ಚುಚ್ಚಲ್ಪಟ್ಟ ಆನೆಯಂತೆ ಕಲಿಂಗಬಾಣದಿಂದ ಹೊಡೆಯಲ್ಪಟ್ಟ ಭೀಮಸೇನನು ಇಂಧನಗಳಿಂದ ಪ್ರಜ್ವಲಿಸುವ ಅಗ್ನಿಯಂತೆ ಕ್ರೋಧದಿಂದ ಉರಿದೆದ್ದನು.

06050064a ಅಥಾಶೋಕಃ ಸಮಾದಾಯ ರಥಂ ಹೇಮಪರಿಷ್ಕೃತಂ।
06050064c ಭೀಮಂ ಸಂಪಾದಯಾಮಾಸ ರಥೇನ ರಥಸಾರಥಿಃ।।

ಅದೇ ಸಮಯದಲ್ಲಿ ರಥಸಾರಥಿ ಅಶೋಕನು ಭೀಮನಿಗೆ ಹೇಮಪರಿಷ್ಕೃತ ರಥವನ್ನು ತಂದು ಕೊಟ್ಟನು.

06050065a ತಮಾರುಹ್ಯ ರಥಂ ತೂರ್ಣಂ ಕೌಂತೇಯಃ ಶತ್ರುಸೂದನಃ।
06050065c ಕಲಿಂಗಮಭಿದುದ್ರಾವ ತಿಷ್ಠ ತಿಷ್ಠೇತಿ ಚಾಬ್ರವೀತ್।।

ಶತ್ರುಸೂದನ ಕೌಂತೇಯನು ತಕ್ಷಣವೇ ಆ ರಥವನ್ನು ಏರಿ “ನಿಲ್ಲು! ನಿಲ್ಲು!” ಎಂದು ಹೇಳುತ್ತಾ ಕಲಿಂಗನನ್ನು ಎದುರಿಸಿದನು.

06050066a ತತಃ ಶ್ರುತಾಯುರ್ಬಲವಾನ್ಭೀಮಾಯ ನಿಶಿತಾನ್ ಶರಾನ್।
06050066c ಪ್ರೇಷಯಾಮಾಸ ಸಂಕ್ರುದ್ಧೋ ದರ್ಶಯನ್ಪಾಣಿಲಾಘವಂ।।

ಆಗ ಬಲವಾನ್ ಶ್ರುತಾಯುವು ಕೈಚಳಕವನ್ನು ಪ್ರದರ್ಶಿಸುತ್ತಾ ಸಂಕ್ರುದ್ಧನಾಗಿ ಭೀಮನ ಮೇಲೆ ನಿಶಿತ ಬಾಣಗಳನ್ನು ಪ್ರಯೋಗಿಸಿದನು.

06050067a ಸ ಕಾರ್ಮುಕವರೋತ್ಸೃಷ್ಟೈರ್ನವಭಿರ್ನಿಶಿತೈಃ ಶರೈಃ।
06050067c ಸಮಾಹತೋ ಭೃಶಂ ರಾಜನ್ಕಲಿಂಗೇನ ಮಹಾಯಶಾಃ।
06050067e ಸಂಚುಕ್ರುಧೇ ಭೃಶಂ ಭೀಮೋ ದಂಡಾಹತ ಇವೋರಗಃ।।

ರಾಜನ್! ಮಹಾಯಶ ಕಲಿಂಗನು ಆ ಶ್ರೇಷ್ಠ ಧನುಸ್ಸಿನಿಂದ ಒಂಭತ್ತು ನಿಶಿತ ಬಾಣಗಳನ್ನು ಪ್ರಯೋಗಿಸಿ ಹೊಡೆಯಲು ದಂಡದಿಂದ ಹೊಡೆಯಲ್ಪಟ್ಟ ಹಾವಿನಂತೆ ಭೀಮನು ತುಂಬಾ ಸಿಟ್ಟಿಗೆದ್ದನು.

06050068a ಕ್ರುದ್ಧಶ್ಚ ಚಾಪಮಾಯಮ್ಯ ಬಲವದ್ಬಲಿನಾಂ ವರಃ।
06050068c ಕಲಿಂಗಮವಧೀತ್ಪಾರ್ಥೋ ಭೀಮಃ ಸಪ್ತಭಿರಾಯಸೈಃ।।

ಕ್ರುದ್ಧನಾಗಿ ಬಲವಾದ ಚಾಪವನ್ನು ತೆಗೆದುಕೊಂಡು ಬಲಿಗಳಲ್ಲಿ ಶ್ರೇಷ್ಠ ಪಾರ್ಥ ಭೀಮನು ಕಲಿಂಗನನ್ನು ಏಳು ಆಯಸಗಳಿಂದ ಹೊಡೆದನು.

06050069a ಕ್ಷುರಾಭ್ಯಾಂ ಚಕ್ರರಕ್ಷೌ ಚ ಕಲಿಂಗಸ್ಯ ಮಹಾಬಲೌ।
06050069c ಸತ್ಯದೇವಂ ಚ ಸತ್ಯಂ ಚ ಪ್ರಾಹಿಣೋದ್ಯಮಸಾದನಂ।।

ಎರಡು ಕ್ಷುರಗಳಿಂದ ಕಲಿಂಗನ ಚಕ್ರರಕ್ಷಕರಾದ ಮಹಾಬಲಿ ಸತ್ಯದೇವ ಮತ್ತು ಸತ್ಯರನ್ನು ಯಮಸಾದನಕ್ಕೆ ಕಳುಹಿಸಿದನು.

06050070a ತತಃ ಪುನರಮೇಯಾತ್ಮಾ ನಾರಾಚೈರ್ನಿಶಿತೈಸ್ತ್ರಿಭಿಃ।
06050070c ಕೇತುಮಂತಂ ರಣೇ ಭೀಮೋಽಗಮಯದ್ಯಮಸಾದನಂ।।

ಆಗ ಪುನಃ ಅಮೇಯಾತ್ಮ ಭೀಮನು ರಣದಲ್ಲಿ ಮೂರು ನಿಶಿತ ನಾರಾಚಗಳಿಂದ ಕೇತುಮಂತನನ್ನು ಯಮಸಾದನಕ್ಕೆ ಕಳುಹಿಸಿದನು.

06050071a ತತಃ ಕಲಿಂಗಾಃ ಸಂಕ್ರುದ್ಧಾ ಭೀಮಸೇನಮಮರ್ಷಣಂ।
06050071c ಅನೀಕೈರ್ಬಹುಸಾಹಸ್ರೈಃ ಕ್ಷತ್ರಿಯಾಃ ಸಮವಾರಯನ್।।

ಆಗ ಸಂಕ್ರುದ್ಧ ಕಲಿಂಗರು ಅಮರ್ಷಣ ಭೀಮಸೇನನನ್ನು ಅನೇಕ ಸಾವಿರ ಕ್ಷತ್ರಿಯ ಸೈನ್ಯಗಳಿಂದ ಸುತ್ತುವರೆದರು.

06050072a ತತಃ ಶಕ್ತಿಗದಾಖಡ್ಗತೋಮರರ್ಷ್ಟಿಪರಶ್ವಧೈಃ।
06050072c ಕಲಿಂಗಾಶ್ಚ ತತೋ ರಾಜನ್ಭೀಮಸೇನಮವಾಕಿರನ್।।

ರಾಜನ್! ಆಗ ಕಲಿಂಗರು ಭೀಮಸೇನನನ್ನು ಶಕ್ತಿ-ಗದೆ-ಖಡ್ಗ-ತೋಮರ-ಋಷ್ಠಿ-ಪರಶಾಯುಧಗಳಿಂದ ಮುತ್ತಿಗೆ ಹಾಕಿದರು.

06050073a ಸಮ್ನಿವಾರ್ಯ ಸ ತಾಂ ಘೋರಾಂ ಶರವೃಷ್ಟಿಂ ಸಮುತ್ಥಿತಾಂ।
06050073c ಗದಾಮಾದಾಯ ತರಸಾ ಪರಿಪ್ಲುತ್ಯ ಮಹಾಬಲಃ।
06050073e ಭೀಮಃ ಸಪ್ತಶತಾನ್ವೀರಾನನಯದ್ಯಮಸಾದನಂ।।

ಆ ಘೋರ ಶರವೃಷ್ಟಿಯನ್ನು ತಡೆದು ತಕ್ಷಣವೇ ಗದೆಯನ್ನು ಹಿಡಿದು ಮಹಾಬಲ ಭೀಮನು ಕೆಳಗೆ ಧುಮುಕಿ ಎಪ್ಪತ್ತು ವೀರರನ್ನು ಯಮಸಾದನಕ್ಕೆ ಕಳುಹಿಸಿದನು.

06050074a ಪುನಶ್ಚೈವ ದ್ವಿಸಾಹಸ್ರಾನ್ಕಲಿಂಗಾನರಿಮರ್ದನಃ।
06050074c ಪ್ರಾಹಿಣೋನ್ಮೃತ್ಯುಲೋಕಾಯ ತದದ್ಭುತಮಿವಾಭವತ್।।

ಪುನಃ ಆ ಅರಿಮರ್ದನನು ಎರಡು ಸಾವಿರ ಕಲಿಂಗರನ್ನು ಮೃತ್ಯುಲೋಕಕ್ಕೆ ಕಳುಹಿಸಿ ಅದ್ಭುತವನ್ನೆಸಗಿದನು.

06050075a ಏವಂ ಸ ತಾನ್ಯನೀಕಾನಿ ಕಲಿಂಗಾನಾಂ ಪುನಃ ಪುನಃ।
06050075c ಬಿಭೇದ ಸಮರೇ ವೀರಃ ಪ್ರೇಕ್ಷ್ಯ ಭೀಷ್ಮಂ ಮಹಾವ್ರತಂ।।

ಹೀಗೆ ಮಹಾವ್ರತ ಭೀಷ್ಮನನ್ನು ರಕ್ಷಿಸುತ್ತಿದ್ದ ಕಲಿಂಗರ ಸೇನೆಗಳನ್ನು ಪುನಃ ಪುನಃ ಆ ವೀರನು ಸಮರದಲ್ಲಿ ಮರ್ದಿಸಿದನು.

06050076a ಹತಾರೋಹಾಶ್ಚ ಮಾತಂಗಾಃ ಪಾಂಡವೇನ ಮಹಾತ್ಮನಾ।
06050076c ವಿಪ್ರಜಗ್ಮುರನೀಕೇಷು ಮೇಘಾ ವಾತಹತಾ ಇವ।
06050076e ಮೃದ್ನಂತಃ ಸ್ವಾನ್ಯನೀಕಾನಿ ವಿನದಂತಃ ಶರಾತುರಾಃ।।

ಮಹಾತ್ಮ ಪಾಂಡವನಿಂದ ಆರೋಹಿಗಳು ಹತರಾಗಲು ಆನೆಗಳು ಅವನ ಬಾಣಗಳನ್ನು ತಡೆದುಕೊಳ್ಳಲಾಗದೇ ಜೋರಾಗಿ ಕೂಗುತ್ತಾ ತಮ್ಮ ಸೇನೆಯನ್ನೇ ತುಳಿದು ಹಾಕುತ್ತಾ ಗಾಳಿಯಿಂದ ಚದುರಿದ ಮೋಡಗಳಂತೆ ಓಡಿ ಹೋದವು.

06050077a ತತೋ ಭೀಮೋ ಮಹಾಬಾಹುಃ ಶಂಖಂ ಪ್ರಾಧ್ಮಾಪಯದ್ಬಲೀ।
06050077c ಸರ್ವಕಾಲಿಂಗಸೈನ್ಯಾನಾಂ ಮನಾಂಸಿ ಸಮಕಂಪಯತ್।।

ಆಗ ಮಹಾಬಾಹು ಬಲೀ ಭೀಮನು ಶಂಖವನ್ನು ಊದಿ ಸರ್ವಕಲಿಂಗ ಸೈನಿಕರ ಮನಸ್ಸುಗಳನ್ನು ಕಂಪಿಸಿದನು.

06050078a ಮೋಹಶ್ಚಾಪಿ ಕಲಿಂಗಾನಾಮಾವಿವೇಶ ಪರಂತಪ।
06050078c ಪ್ರಾಕಂಪಂತ ಚ ಸೈನ್ಯಾನಿ ವಾಹನಾನಿ ಚ ಸರ್ವಶಃ।।

ಪರಂತಪ! ಕಲಿಂಗರನ್ನು ಮೋಹವು ಆವೇಶಿಸಿತು. ಎಲ್ಲೆಡೆಯೂ ಸೈನ್ಯ- ವಾಹನಗಳು ಕಂಪಿಸಿದವು.

06050079a ಭೀಮೇನ ಸಮರೇ ರಾಜನ್ಗಜೇಂದ್ರೇಣೇವ ಸರ್ವತಃ।
06050079c ಮಾರ್ಗಾನ್ಬಹೂನ್ವಿಚರತಾ ಧಾವತಾ ಚ ತತಸ್ತತಃ।
06050079e ಮುಹುರುತ್ಪತತಾ ಚೈವ ಸಮ್ಮೋಹಃ ಸಮಜಾಯತ।।

ರಾಜನ್! ಭೀಮನು ಸಮರದಲ್ಲಿ ಗಜೇಂದ್ರನಂತೆ ಎಲ್ಲಕಡೆ ಅನೇಕ ಮಾರ್ಗಗಗಳಲ್ಲಿ ಚಲಿಸಿ ಅತ್ತಿತ್ತ ಓಡಿ, ಮತ್ತೆ ಮತ್ತೆ ಹಾರುತ್ತಾ ಸಮ್ಮೋಹವನ್ನುಂಟುಮಾಡಿದನು.

06050080a ಭೀಮಸೇನಭಯತ್ರಸ್ತಂ ಸೈನ್ಯಂ ಚ ಸಮಕಂಪತ।
06050080c ಕ್ಷೋಭ್ಯಮಾಣಮಸಂಬಾಧಂ ಗ್ರಾಹೇಣೇವ ಮಹತ್ಸರಃ।।

ಮಹಾಸರೋವರವನ್ನು ತಡೆಯಿಲ್ಲದೇ ಅಲ್ಲೋಲಕಲ್ಲೋಲ ಮಾಡುವ ಮೊಸಳೆಯಂತಿದ್ದ ಭೀಮಸೇನನ ಭಯದಿಂದ ತ್ರಸ್ತವಾದ ಸೈನ್ಯವು ಕಂಪಿಸಿತು.

06050081a ತ್ರಾಸಿತೇಷು ಚ ವೀರೇಷು ಭೀಮೇನಾದ್ಭುತಕರ್ಮಣಾ।
06050081c ಪುನರಾವರ್ತಮಾನೇಷು ವಿದ್ರವತ್ಸು ಚ ಸಂಘಶಃ।।

ಅದ್ಭುತಕರ್ಮಿ ಭೀಮನಿಂದ ತ್ರಾಸಿತರಾದ ವೀರರು ಗುಂಪುಗುಂಪಾಗಿ ಓಡಿ ಹೋಗುತ್ತಿದ್ದರು. ಪುನಃ ಹಿಂದಿರುಗಿ ಅವನೊಂದಿಗೆ ಯುದ್ಧಮಾಡುತ್ತಿದ್ದರು.

06050082a ಸರ್ವಕಾಲಿಂಗಯೋಧೇಷು ಪಾಂಡೂನಾಂ ಧ್ವಜಿನೀಪತಿಃ।
06050082c ಅಬ್ರವೀತ್ಸ್ವಾನ್ಯನೀಕಾನಿ ಯುಧ್ಯಧ್ವಮಿತಿ ಪಾರ್ಷತಃ।।

ಆಗ ಪಾಂಡವರ ಧ್ವಜಿನೀಪತಿ ಪಾರ್ಷತನು ತನ್ನ ಸೇನೆಗೆ “ಸರ್ವ ಕಲಿಂಗ ಯೋಧರೊಡನೆ ಯುದ್ಧಮಾಡಿ!” ಎಂದು ಆಜ್ಞಾಪಿಸಿದನು.

06050083a ಸೇನಾಪತಿವಚಃ ಶ್ರುತ್ವಾ ಶಿಖಂಡಿಪ್ರಮುಖಾ ಗಣಾಃ।
06050083c ಭೀಮಮೇವಾಭ್ಯವರ್ತಂತ ರಥಾನೀಕೈಃ ಪ್ರಹಾರಿಭಿಃ।।

ಸೇನಾಪತಿಯ ಮಾತನ್ನು ಕೇಳಿ ಶಿಖಂಡಿಪ್ರಮುಖ ಗಣಗಳು ರಥಸೇನೆ ಪ್ರಹಾರಿಗಳೊಂದಿಗೆ ಭೀಮನಿದ್ದಲ್ಲಿಗೆ ಧಾವಿಸಿ ಬಂದವು.

06050084a ಧರ್ಮರಾಜಶ್ಚ ತಾನ್ಸರ್ವಾನುಪಜಗ್ರಾಹ ಪಾಂಡವಃ।
06050084c ಮಹತಾ ಮೇಘವರ್ಣೇನ ನಾಗಾನೀಕೇನ ಪೃಷ್ಠತಃ।।

ಪಾಂಡವ ಧರ್ಮರಾಜನೂ ಮೇಘವರ್ಣದ ಮಹಾ ಗಜಸೇನೆಯೊಂದಿಗೆ ಅವರನ್ನು ಹಿಂಬಾಲಿಸಿ ಬಂದನು.

06050085a ಏವಂ ಸಂಚೋದ್ಯ ಸರ್ವಾಣಿ ಸ್ವಾನ್ಯನೀಕಾನಿ ಪಾರ್ಷತಃ।
06050085c ಭೀಮಸೇನಸ್ಯ ಜಗ್ರಾಹ ಪಾರ್ಷ್ಣಿಂ ಸತ್ಪುರುಷೋಚಿತಾಂ।।

ಹೀಗೆ ಪಾರ್ಷತನು ತನ್ನ ಎಲ್ಲ ಸೇನೆಗಳನ್ನೂ ಒಟ್ಟುಗೂಡಿಸಿಕೊಂಡು ಸತ್ಪುರುಷರಿಗೆ ಉಚಿತವಾದಂತೆ ಭೀಮಸೇನನ ಪೃಷ್ಠಭಾಗವನ್ನು ರಕ್ಷಿಸಿದನು.

06050086a ನ ಹಿ ಪಾಂಚಾಲರಾಜಸ್ಯ ಲೋಕೇ ಕಶ್ಚನ ವಿದ್ಯತೇ।
06050086c ಭೀಮಸಾತ್ಯಕಯೋರನ್ಯಃ ಪ್ರಾಣೇಭ್ಯಃ ಪ್ರಿಯಕೃತ್ತಮಃ।।

ಏಕೆಂದರೆ ಪಾಂಚಾಲರಾಜನಿಗೆ ಲೋಕದಲ್ಲಿ ಭೀಮ-ಸಾತ್ಯಕಿಯರನ್ನು ಬಿಟ್ಟು ಬೇರೆ ಯಾರೂ ಪ್ರಾಣಕ್ಕಿಂತಲೂ ಹೆಚ್ಚು ಪ್ರಿಯರಾದವರು ಇರಲಿಲ್ಲ.

06050087a ಸೋಽಪಶ್ಯತ್ತಂ ಕಲಿಂಗೇಷು ಚರಂತಮರಿಸೂದನಂ।
06050087c ಭೀಮಸೇನಂ ಮಹಾಬಾಹುಂ ಪಾರ್ಷತಃ ಪರವೀರಹಾ।।

ಪರವೀರಹ ಪಾರ್ಷತನು ಕಲಿಂಗರ ಮಧ್ಯೆ ಸಂಚರಿಸುತ್ತಿದ್ದ ಮಹಾಬಾಹು ಅರಿಂದಮ ಭೀಮಸೇನನನ್ನು ನೋಡಿದನು.

06050088a ನನರ್ದ ಬಹುಧಾ ರಾಜನ್ ಹೃಷ್ಟಶ್ಚಾಸೀತ್ಪರಂತಪಃ।
06050088c ಶಂಖಂ ದಧ್ಮೌ ಚ ಸಮರೇ ಸಿಂಹನಾದಂ ನನಾದ ಚ।।

ರಾಜನ್! ಆಗ ಪರಂತಪನಿಗೆ ಅತೀವ ಹರ್ಷವಾಗಿ ಅವನು ಕೂಗಿದನು, ಶಂಖವನ್ನು ಊದಿದನು ಮತ್ತು ಸಿಂಹನಾದಗೈದನು.

06050089a ಸ ಚ ಪಾರಾವತಾಶ್ವಸ್ಯ ರಥೇ ಹೇಮಪರಿಷ್ಕೃತೇ।
06050089c ಕೋವಿದಾರಧ್ವಜಂ ದೃಷ್ಟ್ವಾ ಭೀಮಸೇನಃ ಸಮಾಶ್ವಸತ್।।

ಭೀಮಸೇನನೂ ಕೂಡ ಹತ್ತಿರದಲ್ಲಿಯೇ, ಪಾರಿವಾಳಗಳ ಬಣ್ಣದ ಕುದುರೆಗಳನ್ನು ಕಟ್ಟಿದ ಹೇಮಪರಿಷ್ಕೃತ ರಥದಲ್ಲಿ ಕೋವಿದಾರ ಧ್ವಜನನ್ನು ನೋಡಿ ಆಶ್ವಾಸಿತನಾದನು.

06050090a ಧೃಷ್ಟದ್ಯುಮ್ನಸ್ತು ತಂ ದೃಷ್ಟ್ವಾ ಕಲಿಂಗೈಃ ಸಮಭಿದ್ರುತಂ।
06050090c ಭೀಮಸೇನಮಮೇಯಾತ್ಮಾ ತ್ರಾಣಾಯಾಜೌ ಸಮಭ್ಯಯಾತ್।।

ಕಲಿಂಗರಿಂದ ಸುತ್ತುವರೆಯಲ್ಪಟ್ಟ ಅಮೇಯಾತ್ಮ ಭೀಮಸೇನನನ್ನು ನೋಡಿ ಅವನಿಗೆ ಸಹಾಯಮಾಡಲು ಧೃಷ್ಟದ್ಯುಮ್ನನು ಇನ್ನೂ ಹತ್ತಿರಕ್ಕೆ ಬಂದನು.

06050091a ತೌ ದೂರಾತ್ಸಾತ್ಯಕಿರ್ದೃಷ್ಟ್ವಾ ಧೃಷ್ಟದ್ಯುಮ್ನವೃಕೋದರೌ।
06050091c ಕಲಿಂಗಾನ್ಸಮರೇ ವೀರೌ ಯೋಧಯಂತೌ ಮನಸ್ವಿನೌ।।

ದೂರದಿಂದ ಸಾತ್ಯಕಿಯು ಸಮರದಲ್ಲಿ ಕಲಿಂಗರೊಡನೆ ಯುದ್ಧಮಾಡುತ್ತಿದ್ದ ಆ ಇಬ್ಬರು ಮನಸ್ವಿ, ವೀರ ಧೃಷ್ಟದ್ಯುಮ್ನ-ವೃಕೋದರರನ್ನು ನೋಡಿದನು.

06050092a ಸ ತತ್ರ ಗತ್ವಾ ಶೈನೇಯೋ ಜವೇನ ಜಯತಾಂ ವರಃ।
06050092c ಪಾರ್ಥಪಾರ್ಷತಯೋಃ ಪಾರ್ಷ್ಣಿಂ ಜಗ್ರಾಹ ಪುರುಷರ್ಷಭಃ।।

ವಿಜಯಿಗಳಲ್ಲಿ ಶ್ರೇಷ್ಠ ಪುರುಷರ್ಷಭ ಶೈನಿಯು ವೇಗದಿಂದ ಅಲ್ಲಿಗೆ ಬಂದು ಪಾರ್ಥ-ಪಾರ್ಷತರ ಹಿಂಬಾಗದ ರಕ್ಷಣೆಯನ್ನು ವಹಿಸಿಕೊಂಡನು.

06050093a ಸ ಕೃತ್ವಾ ಕದನಂ ತತ್ರ ಪ್ರಗೃಹೀತಶರಾಸನಃ।
06050093c ಆಸ್ಥಿತೋ ರೌದ್ರಮಾತ್ಮಾನಂ ಜಘಾನ ಸಮರೇ ಪರಾನ್।।

ಅಲ್ಲಿ ಅವನು ಧನುಸ್ಸನ್ನು ಹಿಡಿದು ತನ್ನನ್ನೇ ರೌದ್ರನನ್ನಾಗಿಸಿಕೊಂಡು ಸಮರದಲ್ಲಿ ಶತ್ರುಗಳೊಂದಿಗೆ ಕಾದು ಕೊಂದನು.

06050094a ಕಲಿಂಗಪ್ರಭವಾಂ ಚೈವ ಮಾಂಸಶೋಣಿತಕರ್ದಮಾಂ।
06050094c ರುಧಿರಸ್ಯಂದಿನೀಂ ತತ್ರ ಭೀಮಃ ಪ್ರಾವರ್ತಯನ್ನದೀಂ।।

ಅಲ್ಲಿ ಭೀಮನು ಕಲಿಂಗರ ಮಾಂಸ-ಶೋಣಿತ-ಕರ್ದಮಗಳ ರಕ್ತಪ್ರವಾಹದ ನದಿಯನ್ನೇ ಸೃಷ್ಟಿಸಿದ್ದನು.

06050095a ಅಂತರೇಣ ಕಲಿಂಗಾನಾಂ ಪಾಂಡವಾನಾಂ ಚ ವಾಹಿನೀಂ।
06050095c ಸಂತತಾರ ಸುದುಸ್ತಾರಾಂ ಭೀಮಸೇನೋ ಮಹಾಬಲಃ।।

ಕಲಿಂಗರ ಮತ್ತು ಪಾಂಡವರ ಸೇನೆಗಳ ಮಧ್ಯೆ ಭೀಮಸೇನನು ಸುದುಸ್ತಾರ ನದಿಯನ್ನು ಹರಿಸಿದ್ದನು.

06050096a ಭೀಮಸೇನಂ ತಥಾ ದೃಷ್ಟ್ವಾ ಪ್ರಾಕ್ರೋಶಂಸ್ತಾವಕಾ ನೃಪ।
06050096c ಕಾಲೋಽಯಂ ಭೀಮರೂಪೇಣ ಕಲಿಂಗೈಃ ಸಹ ಯುಧ್ಯತೇ।।

ನೃಪ! ಹಾಗಿರುವ ಭೀಮಸೇನನನ್ನು ನೋಡಿ ನಿನ್ನವರು “ಕಲಿಂಗರೊಡನೆ ಯುದ್ಧಮಾಡುತ್ತಿರುವ ಇವನು ಭೀಮರೂಪದ ಕಾಲ!” ಎಂದು ಕೂಗಿಕೊಳ್ಳುತ್ತಿದ್ದರು.

06050097a ತತಃ ಶಾಂತನವೋ ಭೀಷ್ಮಃ ಶ್ರುತ್ವಾ ತಂ ನಿನದಂ ರಣೇ।
06050097c ಅಭ್ಯಯಾತ್ತ್ವರಿತೋ ಭೀಮಂ ವ್ಯೂಢಾನೀಕಃ ಸಮಂತತಃ।।

ಆಗ ರಣದಲ್ಲಿ ಆ ಕೂಗನ್ನು ಕೇಳಿ ಶಾಂತನವ ಭೀಷ್ಮನು ತ್ವರೆಮಾಡಿ ಬಂದು ಸೇನೆಯೊಂದಿಗೆ ಭೀಮನನ್ನು ಎಲ್ಲಕಡೆಗಳಿಂದ ಸುತ್ತುವರೆದನು.

06050098a ತಂ ಸಾತ್ಯಕಿರ್ಭೀಮಸೇನೋ ಧೃಷ್ಟದ್ಯುಮ್ನಶ್ಚ ಪಾರ್ಷತಃ।
06050098c ಅಭ್ಯದ್ರವಂತ ಭೀಷ್ಮಸ್ಯ ರಥಂ ಹೇಮಪರಿಷ್ಕೃತಂ।।

ಆಗ ಭೀಷ್ಮನ ಹೇಮಪರಿಷ್ಕೃತ ರಥವನ್ನು ಸಾತ್ಯಕಿ, ಭೀಮಸೇನ ಮತ್ತು ಪಾರ್ಷತ ಧೃಷ್ಟದ್ಯುಮ್ನರು ಮುತ್ತಿಗೆ ಹಾಕಿದರು.

06050099a ಪರಿವಾರ್ಯ ಚ ತೇ ಸರ್ವೇ ಗಾಂಗೇಯಂ ರಭಸಂ ರಣೇ।
06050099c ತ್ರಿಭಿಸ್ತ್ರಿಭಿಃ ಶರೈರ್ಘೋರೈರ್ಭೀಷ್ಮಮಾನರ್ಚುರಂಜಸಾ।।

ಅವರೆಲ್ಲರೂ ಗಾಂಗೇಯನನ್ನು ಸುತ್ತುವರೆದು ಪ್ರತಿಯೊಬ್ಬರೂ ಮೂರು ಮೂರು ಘೋರ ಬಾಣಗಳಿಂದ ಭೀಷ್ಮನನ್ನು ಚುಚ್ಚಿದರು.

06050100a ಪ್ರತ್ಯವಿಧ್ಯತ ತಾನ್ಸರ್ವಾನ್ಪಿತಾ ದೇವವ್ರತಸ್ತವ।
06050100c ಯತಮಾನಾನ್ಮಹೇಷ್ವಾಸಾಂಸ್ತ್ರಿಭಿಸ್ತ್ರಿಭಿರಜಿಹ್ಮಗೈಃ।।

ಅವೆಲ್ಲವನ್ನು ತಡೆದು ನಿನ್ನ ಪಿತ ದೇವವ್ರತನು ಪ್ರಯತ್ನಿಸಿ ಆ ಮಹೇಷ್ವಾಸರನ್ನು ಮೂರು ಮೂರು ಜಿಹ್ಮಗಗಳಿಂದ ಹೊಡೆದನು.

06050101a ತತಃ ಶರಸಹಸ್ರೇಣ ಸಮ್ನಿವಾರ್ಯ ಮಹಾರಥಾನ್।
06050101c ಹಯಾನ್ಕಾಂಚನಸಮ್ನಾಹಾನ್ಭೀಮಸ್ಯ ನ್ಯಹನಚ್ಚರೈಃ।।

ಆಗ ಸಾವಿರ ಶರಗಳಿಂದ ಆ ಮಹಾರಥರನ್ನು ತಡೆಹಿಡಿದು, ಭೀಮನ ಕಾಂಚನಸಂನಹ ಕುದುರೆಗಳನ್ನು ಶರಗಳಿಂದ ಕೊಂದನು.

06050102a ಹತಾಶ್ವೇ ತು ರಥೇ ತಿಷ್ಠನ್ಭೀಮಸೇನಃ ಪ್ರತಾಪವಾನ್।
06050102c ಶಕ್ತಿಂ ಚಿಕ್ಷೇಪ ತರಸಾ ಗಾಂಗೇಯಸ್ಯ ರಥಂ ಪ್ರತಿ।।

ಕುದುರೆಗಳು ಹತವಾದರೂ ರಥದಲ್ಲಿಯೇ ನಿಂತು ಪ್ರತಾಪವಾನ್ ಭೀಮಸೇನನು ಬೇಗನೇ ಗಾಂಗೇಯನ ರಥದ ಮೇಲೆ ಶಕ್ತಿಯನ್ನು ಎಸೆದನು.

06050103a ಅಪ್ರಾಪ್ತಾಮೇವ ತಾಂ ಶಕ್ತಿಂ ಪಿತಾ ದೇವವ್ರತಸ್ತವ।
06050103c ತ್ರಿಧಾ ಚಿಚ್ಛೇದ ಸಮರೇ ಸಾ ಪೃಥಿವ್ಯಾಮಶೀರ್ಯತ।।

ಅದು ತಲುಪುವುದರೊಳಗೇ ಸಮರದಲ್ಲಿ ನಿನ್ನ ಪಿತ ದೇವವ್ರತನು ಅದನ್ನು ಮೂರು ಭಾಗಗಳನ್ನಾಗಿ ತುಂಡರಿಸಿ ಭೂಮಿಯ ಮೇಲೆ ಬೀಳಿಸಿದನು.

06050104a ತತಃ ಶೈಕ್ಯಾಯಸೀಂ ಗುರ್ವೀಂ ಪ್ರಗೃಹ್ಯ ಬಲವದ್ಗದಾಂ।
06050104c ಭೀಮಸೇನೋ ರಥಾತ್ತೂರ್ಣಂ ಪುಪ್ಲುವೇ ಮನುಜರ್ಷಭ।।

ಮನುಜರ್ಷಭ! ಆಗ ಭಾರವಾದ ಬಲವತ್ತಾದ ಉಕ್ಕಿನ ಗದೆಯನ್ನು ಹಿಡಿದು ಭೀಮಸೇನನು ವೇಗದಿಂದ ರಥದ ಕೆಳಗೆ ಧುಮುಕಿದನು.

06050105a ಸಾತ್ಯಕೋಽಪಿ ತತಸ್ತೂರ್ಣಂ ಭೀಮಸ್ಯ ಪ್ರಿಯಕಾಮ್ಯಯಾ।
06050105c ಸಾರಥಿಂ ಕುರುವೃದ್ಧಸ್ಯ ಪಾತಯಾಮಾಸ ಸಾಯಕೈಃ।।

ಆಗ ಭೀಮನ ಪ್ರಿಯಕಾಮಿ ಸಾತ್ಯಕಿಯೂ ಕೂಡ ಕುರುವೃದ್ಧನ ಸಾರಥಿಯನ್ನು ಸಾಯಕಗಳಿಂದ ಉರುಳಿಸಿದನು.

06050106a ಭೀಷ್ಮಸ್ತು ನಿಹತೇ ತಸ್ಮಿನ್ಸಾರಥೌ ರಥಿನಾಂ ವರಃ।
06050106c ವಾತಾಯಮಾನೈಸ್ತೈರಶ್ವೈರಪನೀತೋ ರಣಾಜಿರಾತ್।।

ರಥಿಗಳಲ್ಲಿ ಶ್ರೇಷ್ಠನಾದ ಭೀಷ್ಮನ ಸಾರಥಿಯು ಹತನಾಗಲು ಕುದುರೆಗಳು ವಾಯುವೇಗದಿಂದ ಅವನನ್ನು ರಣರಂಗದಿಂದ ಆಚೆಗೆ ಕೊಂಡೊಯ್ದವು.

06050107a ಭೀಮಸೇನಸ್ತತೋ ರಾಜನ್ನಪನೀತೇ ಮಹಾವ್ರತೇ।
06050107c ಪ್ರಜಜ್ವಾಲ ಯಥಾ ವಹ್ನಿರ್ದಹನ್ಕಕ್ಷಮಿವೈಧಿತಃ।।

ರಾಜನ್! ಮಹಾವ್ರತನು ಹಿಂದೆಸರಿಯಲು ಭೀಮಸೇನನು ಒಣಹುಲ್ಲನ್ನು ಸುಡುತ್ತಿರುವ ಬೆಂಕಿಯಂತೆ ಜ್ವಾಜಲ್ಯಮಾನನಾಗಿ ಬೆಳಗಿದನು.

06050108a ಸ ಹತ್ವಾ ಸರ್ವಕಾಲಿಂಗಾನ್ಸೇನಾಮಧ್ಯೇ ವ್ಯತಿಷ್ಠತ।
06050108c ನೈನಮಭ್ಯುತ್ಸಹನ್ಕೇ ಚಿತ್ತಾವಕಾ ಭರತರ್ಷಭ।।

ಭರತರ್ಷಭ! ಅವನು ಸರ್ವಕಲಿಂಗರನ್ನೂ ಸಂಹರಿಸಿ ಸೇನಾಮಧ್ಯದಲ್ಲಿ ನಿಂತುಕೊಂಡನು. ನಿನ್ನವರು ಯಾರೂ ಅವನೊಂದಿಗೆ ಯುದ್ಧಮಾಡಲು ಉತ್ಸುಕರಾಗಿರಲಿಲ್ಲ.

06050109a ಧೃಷ್ಟದ್ಯುಮ್ನಸ್ತಮಾರೋಪ್ಯ ಸ್ವರಥೇ ರಥಿನಾಂ ವರಃ।
06050109c ಪಶ್ಯತಾಂ ಸರ್ವಸೈನ್ಯಾನಾಮಪೋವಾಹ ಯಶಸ್ವಿನಂ।।

ರಥಿಗಳಲ್ಲಿ ಶ್ರೇಷ್ಠ ಧೃಷ್ಟದ್ಯುಮ್ನನು ಆ ಯಶಸ್ವಿಯನ್ನು ತನ್ನ ರಥದಲ್ಲಿ ಏರಿಸಿಕೊಂಡು ಎಲ್ಲ ಸೈನ್ಯಗಳೂ ನೋಡುತ್ತಿದ್ದಂತೆ ಕರೆದುಕೊಂಡು ಹೋದನು.

06050110a ಸಂಪೂಜ್ಯಮಾನಃ ಪಾಂಚಾಲ್ಯೈರ್ಮತ್ಸ್ಯೈಶ್ಚ ಭರತರ್ಷಭ।
06050110c ಧೃಷ್ಟದ್ಯುಮ್ನಂ ಪರಿಷ್ವಜ್ಯ ಸಮೇಯಾದಥ ಸಾತ್ಯಕಿಂ।।

ಭರತರ್ಷಭ! ಪಾಂಚಾಲರಿಂದ ಮತ್ತು ಮತ್ಸ್ಯರಿಂದ ಗೌರವಿಸಿಕೊಂಡ ಅವನು ಧೃಷ್ಟದ್ಯುಮ್ನನನ್ನು ಆಲಂಗಿಸಿ ಸಾತ್ಯಕಿಯಿರುವಲ್ಲಿಗೆ ಹೋದನು.

06050111a ಅಥಾಬ್ರವೀದ್ಭೀಮಸೇನಂ ಸಾತ್ಯಕಿಃ ಸತ್ಯವಿಕ್ರಮಃ।
06050111c ಪ್ರಹರ್ಷಯನ್ಯದುವ್ಯಾಘ್ರೋ ಧೃಷ್ಟದ್ಯುಮ್ನಸ್ಯ ಪಶ್ಯತಃ।।

ಆಗ ಸತ್ಯವಿಕ್ರಮ ಯದುವ್ಯಾಘ್ರನು ಭೀಮಸೇನನನ್ನು ಸಂತೋಷಗೊಳಿಸುತ್ತಾ ಧೃಷ್ಟದ್ಯುಮ್ನನು ನೋಡುತ್ತಿದ್ದಂತೆ ಹೇಳಿದನು:

06050112a ದಿಷ್ಟ್ಯಾ ಕಲಿಂಗರಾಜಶ್ಚ ರಾಜಪುತ್ರಶ್ಚ ಕೇತುಮಾನ್।
06050112c ಶಕ್ರದೇವಶ್ಚ ಕಾಲಿಂಗಃ ಕಲಿಂಗಾಶ್ಚ ಮೃಧೇ ಹತಾಃ।।

“ಒಳ್ಳೆಯದಾಯಿತು! ಯುದ್ಧದಲ್ಲಿ ನೀನು ಕಲಿಂಗರಾಜ, ರಾಜಪುತ್ರ ಕೇತುಮಾನ, ಕಾಲಿಂಗ ಶಕ್ರದೇವ ಮತ್ತು ಕಲಿಂಗಸೇನೆಯನ್ನು ಸಂಹರಿಸಿದೆ.

06050113a ಸ್ವಬಾಹುಬಲವೀರ್ಯೇಣ ನಾಗಾಶ್ವರಥಸಂಕುಲಃ।
06050113c ಮಹಾವ್ಯೂಹಃ ಕಲಿಂಗಾನಾಮೇಕೇನ ಮೃದಿತಸ್ತ್ವಯಾ।।

ನಿನ್ನ ಬಲವೀರ್ಯದಿಂದ ಕಲಿಂಗ ಸೇನೆಗಳ ಗಜಾಶ್ವರಥಸಂಕುಲಗಳ ಮಹಾವ್ಯೂಹಗಳು ನಾಶವಾದವು.”

06050114a ಏವಮುಕ್ತ್ವಾ ಶಿನೇರ್ನಪ್ತಾ ದೀರ್ಘಬಾಹುರರಿಂದಮಃ।
06050114c ರಥಾದ್ರಥಮಭಿದ್ರುತ್ಯ ಪರ್ಯಷ್ವಜತ ಪಾಂಡವಂ।।

ಹೀಗೆ ಹೇಳಿ ಆಪ್ತನಾದ ದೀರ್ಘಬಾಹು ಅರಿಂದಮ ಶೈನಿಯು ರಥದಿಂದಿಳಿದು ಪಾಂಡವನನ್ನು ಬಿಗಿದಪ್ಪಿದನು.

06050115a ತತಃ ಸ್ವರಥಮಾರುಹ್ಯ ಪುನರೇವ ಮಹಾರಥಃ।
06050115c ತಾವಕಾನವಧೀತ್ಕ್ರುದ್ಧೋ ಭೀಮಸ್ಯ ಬಲಮಾದಧತ್।।

ಆಗ ಪುನಃ ತನ್ನ ರಥವನ್ನೇರಿ ಮಹಾರಥನು ಭೀಮನ ಬಲವನ್ನು ವೃದ್ಧಿಸಿ ಕ್ರುದ್ಧನಾಗಿ ನಿನ್ನವರನ್ನು ವಧಿಸಲು ಉಪಕ್ರಮಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ದ್ವಿತೀಯಯುದ್ಧದಿವಸೇಕಲಿಂಗರಾಜವಧೇ ಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ದ್ವಿತೀಯಯುದ್ಧದಿವಸೇಕಲಿಂಗರಾಜವಧ ಎನ್ನುವ ಐವತ್ತನೇ ಅಧ್ಯಾಯವು.


  1. (1) ಭ್ರಾಂತ - ಖಡ್ಗವನ್ನು ಮಂಡಲಾಕಾರವಾಗಿ ತಿರುಗಿಸುವುದು (2) ಅವಿದ್ಧ – ಶ್ರಮಪಟ್ಟು ಭ್ರಾಂತವನ್ನು ಸಾಧಿಸುವುದು (3) ಉದ್ಭ್ರಾಂತ - ತಲೆಯ ಮೇಲೆ ಮಂಡಲಾಕಾರವಾಗಿ ತಿರುಗಿಸುವುದು (4) ಆಪ್ಲುತ - ಖಡ್ಗವನ್ನು ಮಂಡಲಾಕಾರವಾಗಿ ತಿರುಗಿಸುತ್ತಲೇ ಹಾರುವುದು (5) ಪ್ರಸೃತ - ಎಲ್ಲ ದಿಕ್ಕುಗಳಲ್ಲಿಯೂ ವ್ಯವಸ್ಥಿತವಾದ ನಡುಗೆಯಿಡುತ್ತಾ ಖಡ್ಗವನ್ನು ತಿರುಗಿಸುತ್ತಾ ಸಾಗುವುದು (6) ಪ್ಲುತ - ಖಡ್ಗವನ್ನು ತಿರುಗಿಸುತ್ತಾ ಒಂದೇ ದಿಕ್ಕಿನಲ್ಲಿ ಮುಂದುವರೆಯುವುದು (7) ಸಂಪಾತ - ವೇಗದಿಂದ ಪ್ಲುತ (8) ಸಮುದೀರ್ಣ – ಗಾಯಗೊಳಿಸುವುದು/ಕೊಲ್ಲುವುದು (ಭಾರತ ದರ್ಶನ ಪ್ರಕಾಶನ - 1738). ↩︎