049 ಧೃಷ್ಟದ್ಯುಮ್ನದ್ರೋಣಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 49

ಸಾರ

ಧೃಷ್ಟದ್ಯುಮ್ನ-ದ್ರೋಣರ ಯುದ್ಧ (1-35). ಭೀಮಸೇನನು ಧೃಷ್ಟದ್ಯುಮ್ನನನ್ನು ತನ್ನ ರಥದ ಮೇಲೇರಿಸಿಕೊಳ್ಳಲು, ದುರ್ಯೋಧನನು ಕಲಿಂಗ ಸೇನೆಯನ್ನು ಭೀಮನ ಮೇಲೆ ಆಕ್ರಮಣಮಾಡಲು ಪ್ರಚೋದಿಸಿದುದು (36-40).

06049001 ಧೃತರಾಷ್ಟ್ರ ಉವಾಚ।
06049001a ಕಥಂ ದ್ರೋಣೋ ಮಹೇಷ್ವಾಸಃ ಪಾಂಚಾಲ್ಯಶ್ಚಾಪಿ ಪಾರ್ಷತಃ।।
06049001c ರಣೇ ಸಮೀಯತುರ್ಯತ್ತೌ ತನ್ಮಮಾಚಕ್ಷ್ವ ಸಂಜಯ।

ಧೃತರಾಷ್ಟ್ರನು ಹೇಳಿದನು: “ಸಂಜಯ! ಮಹೇಷ್ವಾಸ ದ್ರೋಣ ಮತ್ತು ಪಾರ್ಷತ ಪಾಂಚಾಲ್ಯರೂ ಕೂಡ ರಣದಲ್ಲಿ ಪ್ರಯತ್ನಪೂರ್ವಕವಾಗಿ ಯಾವ ರೀತಿಯಲ್ಲಿ ಯುದ್ಧ ಮಾಡಿದರು ಎನ್ನುವುದನ್ನು ನನಗೆ ಹೇಳು.

06049002a ದಿಷ್ಟಮೇವ ಪರಂ ಮನ್ಯೇ ಪೌರುಷಾದಪಿ ಸಂಜಯ।।
06049002c ಯತ್ರ ಶಾಂತನವೋ ಭೀಷ್ಮೋ ನಾತರದ್ಯುಧಿ ಪಾಂಡವಂ।

ಸಂಜಯ! ಯುದ್ಧದಲ್ಲಿ ಪಾಂಡವನನ್ನು ಶಾಂತನವ ಭೀಷ್ಮನೂ ಕೂಡ ದಾಟಲಾಗಲಿಲ್ಲವೆಂದರೆ ಪೌರುಷಕ್ಕಿಂತಲೂ ದೈವವೇ ಹೆಚ್ಚಿನದೆಂದು ತಿಳಿಯುತ್ತೇನೆ.

06049003a ಭೀಷ್ಮೋ ಹಿ ಸಮರೇ ಕ್ರುದ್ಧೋ ಹನ್ಯಾಲ್ಲೋಕಾಂಶ್ಚರಾಚರಾನ್।।
06049003c ಸ ಕಥಂ ಪಾಂಡವಂ ಯುದ್ಧೇ ನಾತರತ್ಸಂಜಯೌಜಸಾ।

ಸಂಜಯ! ಏಕೆಂದರೆ ಸಮರದಲ್ಲಿ ಕ್ರುದ್ಧನಾಗಿ ತನ್ನ ಓಜಸ್ಸಿನಿಂದ ಲೋಕ ಚರಾಚರಗಳನ್ನೇ ಕೊಲ್ಲಬಲ್ಲ ಭೀಷ್ಮನು ಹೇಗೆ ಪಾಂಡವನನ್ನು ಯುದ್ಧದಲ್ಲಿ ಮೀರಿಸಲಿಲ್ಲ?”

06049004 ಸಂಜಯ ಉವಾಚ।
06049004a ಶೃಣು ರಾಜನ್ ಸ್ಥಿರೋ ಭೂತ್ವಾ ಯುದ್ಧಮೇತತ್ಸುದಾರುಣಂ।
06049004c ನ ಶಕ್ಯಃ ಪಾಂಡವೋ ಜೇತುಂ ದೇವೈರಪಿ ಸವಾಸವೈಃ।।

ಸಂಜಯನು ಹೇಳಿದನು: “ರಾಜನ್! ಸ್ಥಿರನಾಗಿದ್ದುಕೊಂಡು ಈ ಸುದಾರುಣ ಯುದ್ಧವನ್ನು ಕೇಳು. ಪಾಂಡವರನ್ನು ಗೆಲ್ಲಲು ವಾಸವನೊಂದಿಗೆ ದೇವತೆಗಳಿಗೂ ಸಾಧ್ಯವಿಲ್ಲ.

06049005a ದ್ರೋಣಸ್ತು ನಿಶಿತೈರ್ಬಾಣೈರ್ಧೃಷ್ಟದ್ಯುಮ್ನಮಯೋಧಯತ್।
06049005c ಸಾರಥಿಂ ಚಾಸ್ಯ ಭಲ್ಲೇನ ರಥನೀಡಾದಪಾತಯತ್।

ದ್ರೋಣನಾದರೋ ನಿಶಿತ ಬಾಣಗಳಿಂದ ಧೃಷ್ಟದ್ಯುಮ್ನನನ್ನು ಗಾಯಗೊಳಿಸಿದನು. ಅವನ ಸಾರಥಿಯನ್ನು ಕೂಡ ಭಲ್ಲದಿಂದ ಹೊಡೆದು ರಥದಿಂದ ಬೀಳಿಸಿದನು.

06049006a ತಸ್ಯಾಥ ಚತುರೋ ವಾಹಾಂಶ್ಚತುರ್ಭಿಃ ಸಾಯಕೋತ್ತಮೈಃ।
06049006c ಪೀಡಯಾಮಾಸ ಸಂಕ್ರುದ್ಧೋ ಧೃಷ್ಟದ್ಯುಮ್ನಸ್ಯ ಮಾರಿಷ।।

ಮಾರಿಷ! ಸಂಕ್ರುದ್ಧನಾಗಿ ಧೃಷ್ಟದ್ಯುಮ್ನನ ನಾಲ್ಕು ಕುದುರೆಗಳನ್ನು ಉತ್ತಮ ಸಾಯಕಗಳಿಂದ ಪೀಡಿಸಿದನು.

06049007a ಧೃಷ್ಟದ್ಯುಮ್ನಸ್ತತೋ ದ್ರೋಣಂ ನವತ್ಯಾ ನಿಶಿತೈಃ ಶರೈಃ।
06049007c ವಿವ್ಯಾಧ ಪ್ರಹಸನ್ವೀರಸ್ತಿಷ್ಠ ತಿಷ್ಠೇತಿ ಚಾಬ್ರವೀತ್।।

ಆಗ ಧೃಷ್ಟದ್ಯುಮ್ನನು ನಗುತ್ತಾ ದ್ರೋಣನನ್ನು ತೊಂಭತ್ತು ನಿಶಿತ ಬಾಣಗಳಿಂದ ಹೊಡೆದು “ನಿಲ್ಲು! ನಿಲ್ಲು!” ಎಂದು ಹೇಳಿದನು.

06049008a ತತಃ ಪುನರಮೇಯಾತ್ಮಾ ಭಾರದ್ವಾಜಃ ಪ್ರತಾಪವಾನ್।
06049008c ಶರೈಃ ಪ್ರಚ್ಛಾದಯಾಮಾಸ ಧೃಷ್ಟದ್ಯುಮ್ನಮಮರ್ಷಣಂ।।

ಆಗ ಪುನಃ ಅಮೇಯಾತ್ಮ ಪ್ರತಾಪವಾನ್ ಭಾರದ್ವಾಜನು ಅಮರ್ಷಣ ಧೃಷ್ಟದ್ಯುಮ್ನನನ್ನು ಶರಗಳಿಂದ ಮುಚ್ಚಿಬಿಟ್ಟನು.

06049009a ಆದದೇ ಚ ಶರಂ ಘೋರಂ ಪಾರ್ಷತಸ್ಯ ವಧಂ ಪ್ರತಿ।
06049009c ಶಕ್ರಾಶನಿಸಮಸ್ಪರ್ಶಂ ಮೃತ್ಯುದಂಡಮಿವಾಪರಂ।।

ಪಾರ್ಷತನ ವಧೆಗೆಂದು ಮುಟ್ಟಲು ವಜ್ರದಂತೆ ಕಠೋರವಾಗಿದ್ದ, ಮೃತ್ಯುದಂಡದಂತಿದ್ದ ಘೋರ ಶರವನ್ನು ಎತ್ತಿಕೊಂಡನು.

06049010a ಹಾಹಾಕಾರೋ ಮಹಾನಾಸೀತ್ಸರ್ವಸೈನ್ಯಸ್ಯ ಭಾರತ।
06049010c ತಮಿಷುಂ ಸಂಧಿತಂ ದೃಷ್ಟ್ವಾ ಭಾರದ್ವಾಜೇನ ಸಂಯುಗೇ।।

ಭಾರತ! ಸಂಯುಗದಲ್ಲಿ ಭಾರದ್ವಾಜನು ಆ ಬಾಣವನ್ನು ಹೂಡಿದ್ದುದನ್ನು ನೋಡಿ ಸರ್ವ ಸೈನ್ಯಗಳಲ್ಲಿ ಮಹಾ ಹಾಹಾಕಾರವುಂಟಾಯಿತು.

06049011a ತತ್ರಾದ್ಭುತಮಪಶ್ಯಾಮ ಧೃಷ್ಟದ್ಯುಮ್ನಸ್ಯ ಪೌರುಷಂ।
06049011c ಯದೇಕಃ ಸಮರೇ ವೀರಸ್ತಸ್ಥೌ ಗಿರಿರಿವಾಚಲಃ।।

ಆಗ ಧೃಷ್ಟದ್ಯುಮ್ನನ ಅದ್ಭುತ ಪೌರುಷವನ್ನು ನೋಡಿದೆವು. ಅವನೊಬ್ಬನೇ ವೀರನು ಸಮರದಲ್ಲಿ ಗಿರಿಯಂತೆ ಅಚಲನಾಗಿ ನಿಂತಿದ್ದನು.

06049012a ತಂ ಚ ದೀಪ್ತಂ ಶರಂ ಘೋರಮಾಯಾಂತಂ ಮೃತ್ಯುಮಾತ್ಮನಃ।
06049012c ಚಿಚ್ಛೇದ ಶರವೃಷ್ಟಿಂ ಚ ಭಾರದ್ವಾಜೇ ಮುಮೋಚ ಹ।।

ತನ್ನ ಮೃತ್ಯುವಾಗಿಯೇ ಭಾರದ್ವಾಜನು ಬಿಟ್ಟ ಆ ಘೋರವಾಗಿ ಉರಿಯುತ್ತಾ ಬರುತ್ತಿದ್ದ ಬಾಣವನ್ನು ಅವನು ಶರವೃಷ್ಟಿಯಿಂದ ಕತ್ತರಿಸಿದನು.

06049013a ತತ ಉಚ್ಚುಕ್ರುಶುಃ ಸರ್ವೇ ಪಾಂಚಾಲಾಃ ಪಾಂಡವೈಃ ಸಹ।
06049013c ಧೃಷ್ಟದ್ಯುಮ್ನೇನ ತತ್ಕರ್ಮ ಕೃತಂ ದೃಷ್ಟ್ವಾ ಸುದುಷ್ಕರಂ।।

ಸುದುಷ್ಕರವಾದ ಆ ಕೆಲಸವನ್ನು ಮಾಡಿದ ಧೃಷ್ಟದ್ಯುಮ್ನನನ್ನು ನೋಡಿ ಪಾಂಚಾಲ-ಪಾಂಡವರೆಲ್ಲರೂ ಒಟ್ಟಿಗೇ ಹರ್ಷೋದ್ಗಾರ ಮಾಡಿದರು.

06049014a ತತಃ ಶಕ್ತಿಂ ಮಹಾವೇಗಾಂ ಸ್ವರ್ಣವೈಡೂರ್ಯಭೂಷಿತಾಂ।
06049014c ದ್ರೋಣಸ್ಯ ನಿಧನಾಕಾಂಕ್ಷೀ ಚಿಕ್ಷೇಪ ಸ ಪರಾಕ್ರಮೀ।।

ಆಗ ಆ ಪರಾಕ್ರಮಿಯು ದ್ರೋಣನ ಸಾವನ್ನು ಬಯಸಿ ಮಹಾವೇಗದ ಸ್ವರ್ಣವೈಡೂರ್ಯಭೂಷಿತ ಶಕ್ತಿಯನ್ನು ಎಸೆದನು.

06049015a ತಾಮಾಪತಂತೀಂ ಸಹಸಾ ಶಕ್ತಿಂ ಕನಕಭೂಷಣಾಂ।
06049015c ತ್ರಿಧಾ ಚಿಕ್ಷೇಪ ಸಮರೇ ಭಾರದ್ವಾಜೋ ಹಸನ್ನಿವ।।

ಸಮರದಲ್ಲಿ ವೇಗದಿಂದ ಬೀಳುತ್ತಿರುವ ಆ ಕನಕಭೂಷಣ ಶಕ್ತಿಯನ್ನು ಭಾರದ್ವಾಜನು ನಗುತ್ತಾ ಮೂರು ಭಾಗಗಳಾಗಿ ತುಂಡರಿಸಿದನು.

06049016a ಶಕ್ತಿಂ ವಿನಿಹತಾಂ ದೃಷ್ಟ್ವಾ ಧೃಷ್ಟದ್ಯುಮ್ನಃ ಪ್ರತಾಪವಾನ್।
06049016c ವವರ್ಷ ಶರವರ್ಷಾಣಿ ದ್ರೋಣಂ ಪ್ರತಿ ಜನೇಶ್ವರ।।

ಜನೇಶ್ವರ! ಶಕ್ತಿಯು ನಾಶವಾದುದನ್ನು ನೋಡಿ ಪ್ರತಾಪವಾನ್ ಧೃಷ್ಟದ್ಯುಮ್ನನು ದ್ರೋಣನ ಮೇಲೆ ಬಾಣಗಳ ಮಳೆಯನ್ನು ಸುರಿಸಿದನು.

06049017a ಶರವರ್ಷಂ ತತಸ್ತಂ ತು ಸನ್ನಿವಾರ್ಯ ಮಹಾಯಶಾಃ।
06049017c ದ್ರೋಣೋ ದ್ರುಪದಪುತ್ರಸ್ಯ ಮಧ್ಯೇ ಚಿಚ್ಛೇದ ಕಾರ್ಮುಕಂ।।

ಆಗ ಆ ಶರವರ್ಷವನ್ನು ನಿಲ್ಲಿಸಿ ಮಹಾಯಶ ದ್ರೋಣನು ದ್ರುಪದಪುತ್ರನ ಧನುಸ್ಸನ್ನು ಮಧ್ಯದಲ್ಲಿ ತುಂಡರಿಸಿದನು.

06049018a ಸ ಚ್ಛಿನ್ನಧನ್ವಾ ಸಮರೇ ಗದಾಂ ಗುರ್ವೀಂ ಮಹಾಯಶಾಃ।
06049018c ದ್ರೋಣಾಯ ಪ್ರೇಷಯಾಮಾಸ ಗಿರಿಸಾರಮಯೀಂ ಬಲೀ।।

ಸಮರದಲ್ಲಿ ಧನುಸ್ಸು ತುಂಡಾಗಲು ಆ ಬಲೀ ಮಹಾಯಶಸ್ವಿಯು ಭಾರವಾದ ಲೋಹನಿರ್ಮಿತ ಗದೆಯನ್ನು ತಿರುತಿರುಗಿಸಿ ದ್ರೋಣನ ಮೇಲೆ ಎಸೆದನು.

06049019a ಸಾ ಗದಾ ವೇಗವನ್ಮುಕ್ತಾ ಪ್ರಾಯಾದ್ದ್ರೋಣಜಿಘಾಂಸಯಾ।
06049019c ತತ್ರಾದ್ಭುತಮಪಶ್ಯಾಮ ಭಾರದ್ವಾಜಸ್ಯ ವಿಕ್ರಮಂ।।

ವೇಗವಾಗಿ ಎಸೆಯಲ್ಪಟ್ಟು ದ್ರೋಣನ ಜೀವವನ್ನು ಕಳೆಯಬಲ್ಲ ಆ ಗದೆಯು ಬರುತ್ತಿರಲು ಅಲ್ಲಿ ಭಾರದ್ವಾಜನ ಅದ್ಭುತ ವಿಕ್ರಮವನ್ನು ಕಂಡೆವು.

06049020a ಲಾಘವಾದ್ವ್ಯಂಸಯಾಮಾಸ ಗದಾಂ ಹೇಮವಿಭೂಷಿತಾಂ।
06049020c ವ್ಯಂಸಯಿತ್ವಾ ಗದಾಂ ತಾಂ ಚ ಪ್ರೇಷಯಾಮಾಸ ಪಾರ್ಷತೇ।।
06049021a ಭಲ್ಲಾನ್ಸುನಿಶಿತಾನ್ಪೀತಾನ್ಸ್ವರ್ಣಪುಂಖಾಂ ಶಿಲಾಶಿತಾನ್।

ಹೇಮವಿಭೂಷಿತ ಗದೆಯನ್ನು ಲಾಘವದಿಂದ ವ್ಯರ್ಥಗೊಳಿಸಿದನು. ಆ ಗದೆಯನ್ನು ವ್ಯರ್ಥಗೊಳಿಸಿ ಪಾರ್ಷತನ ಮೇಲೆ ಹರಿತಾದ, ಶಿಲಾಶಿತ ಸ್ವರ್ಣಪುಂಖ ಭಲ್ಲೆಗಳನ್ನು ಪ್ರಯೋಗಿಸಿದನು.

06049021c ತೇ ತಸ್ಯ ಕವಚಂ ಭಿತ್ತ್ವಾ ಪಪುಃ ಶೋಣಿತಮಾಹವೇ।।
06049022a ಅಥಾನ್ಯದ್ಧನುರಾದಾಯ ಧೃಷ್ಟದ್ಯುಮ್ನೋ ಮಹಾಮನಾಃ।
06049022c ದ್ರೋಣಂ ಯುಧಿ ಪರಾಕ್ರಮ್ಯ ಶರೈರ್ವಿವ್ಯಾಧ ಪಂಚಭಿಃ।।

ಅವು ಅವನ ಕವಚವನ್ನು ಭೇದಿಸಿ ರಕ್ತವನ್ನು ಕುಡಿದವು. ಆಗ ಆಹವದಲ್ಲಿ ಮಹಾಮನಸ್ವಿ ಧೃಷ್ಟದ್ಯುಮ್ನನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಪರಾಕ್ರಮದಿಂದ ಐದು ಶರಗಳಿಂದ ಹೊಡೆದನು.

06049023a ರುಧಿರಾಕ್ತೌ ತತಸ್ತೌ ತು ಶುಶುಭಾತೇ ನರರ್ಷಭೌ।
06049023c ವಸಂತಸಮಯೇ ರಾಜನ್ಪುಷ್ಪಿತಾವಿವ ಕಿಂಶುಕೌ।।

ರಾಜನ್! ಆಗ ರಕ್ತದಿಂದ ತೋಯ್ದುಹೋಗಿದ್ದ ಅವರಿಬ್ಬರು ನರರ್ಷಭರೂ ವಸಂತಸಮಯದಲ್ಲಿ ಹೂಬಿಟ್ಟ ಮುತ್ತುಗದ ಮರಗಳಂತೆ ಶೋಭಿಸಿದರು.

06049024a ಅಮರ್ಷಿತಸ್ತತೋ ರಾಜನ್ಪರಾಕ್ರಮ್ಯ ಚಮೂಮುಖೇ।
06049024c ದ್ರೋಣೋ ದ್ರುಪದಪುತ್ರಸ್ಯ ಪುನಶ್ಚಿಚ್ಛೇದ ಕಾರ್ಮುಕಂ।।

ರಾಜನ್! ಆಗ ಕೋಪಗೊಂಡ ದ್ರೋಣನು ಪರಾಕ್ರಮದಿಂದ ಸೇನಾಮುಖದಲ್ಲಿ ದ್ರುಪದಪುತ್ರನ ಧನುಸ್ಸನ್ನು ಪುನಃ ತುಂಡರಿಸಿದನು.

06049025a ಅಥೈನಂ ಚಿನ್ನಧನ್ವಾನಂ ಶರೈಃ ಸಮ್ನತಪರ್ವಭಿಃ।
06049025c ಅವಾಕಿರದಮೇಯಾತ್ಮಾ ವೃಷ್ಟ್ಯಾ ಮೇಘ ಇವಾಚಲಂ।।

ಆಗ ಆ ಧನುಸ್ಸು ಮುರಿದವನನ್ನು ಅಮೇಯಾತ್ಮನು ಸನ್ನತಪರ್ವ ಬಾಣಗಳಿಂದ ಮೋಡವು ಮಳೆಯಿಂದ ಗಿರಿಯನ್ನು ಮುಚ್ಚುವಂತೆ ಮುಚ್ಚಿದನು.

06049026a ಸಾರಥಿಂ ಚಾಸ್ಯ ಭಲ್ಲೇನ ರಥನೀಡಾದಪಾತಯತ್।
06049026c ಅಥಾಸ್ಯ ಚತುರೋ ವಾಹಾಂಶ್ಚತುರ್ಭಿರ್ನಿಶಿತೈಃ ಶರೈಃ।।

ಆಗ ಭಲ್ಲದಿಂದ ಅವನ ಸಾರಥಿಯನ್ನು ರಥದಿಂದ ಬೀಳಿಸಿದನು. ಅವನ ನಾಲ್ಕು ಕುದುರೆಗಳನ್ನೂ ನಾಲ್ಕು ನಿಶಿತ ಶರಗಳಿಂದ ವಧಿಸಿದನು.

06049027a ಪಾತಯಾಮಾಸ ಸಮರೇ ಸಿಂಹನಾದಂ ನನಾದ ಚ।
06049027c ತತೋಽಪರೇಣ ಭಲ್ಲೇನ ಹಸ್ತಾಚ್ಚಾಪಮಥಾಚ್ಛಿನತ್।।

ಸಮರದಲ್ಲಿ ಆಗ ಇನ್ನೊಂದು ಭಲ್ಲದಿಂದ ಅವನ ಕೈಯಲ್ಲಿದ್ದ ಧನುಸ್ಸನ್ನು ತುಂಡರಿಸಿ ಸಿಂಹನಾದಗೈದನು.

06049028a ಸ ಚ್ಛಿನ್ನಧನ್ವಾ ವಿರಥೋ ಹತಾಶ್ವೋ ಹತಸಾರಥಿಃ।
06049028c ಗದಾಪಾಣಿರವಾರೋಹತ್ ಖ್ಯಾಪಯನ್ಪೌರುಷಂ ಮಹತ್।।

ಧನುಸ್ಸು ತುಂಡಾಗಲು, ರಥವನ್ನು ಕಳೆದುಕೊಂಡ, ಅಶ್ವಗಳನ್ನು ಕಳೆದುಕೊಂಡ, ಸಾರಥಿಯನ್ನು ಕಳೆದುಕೊಂಡ ಧೃಷ್ಟದ್ಯುಮ್ನನು ಮಹಾ ಪೌರುಷವನ್ನು ತೋರಿಸುತ್ತಾ ಗದೆಯನ್ನು ಹಿಡಿದು ಇಳಿದುಬಂದನು.

06049029a ತಾಮಸ್ಯ ವಿಶಿಖೈಸ್ತೂರ್ಣಂ ಪಾತಯಾಮಾಸ ಭಾರತ।
06049029c ರಥಾದನವರೂಢಸ್ಯ ತದದ್ಭುತಮಿವಾಭವತ್।।

ಭಾರತ! ರಥದಿಂದ ಕೆಳಗಿಳಿಯುತ್ತಿದ್ದಾಗಲೇ ವೇಗವಾಗಿ ಅವನ ಗದೆಯನ್ನೂ ಪುಡಿಮಾಡಿ ಬೀಳಿಸಿದನು. ಅದೊಂದು ಅದ್ಭುತವಾಗಿತ್ತು.

06049030a ತತಃ ಸ ವಿಪುಲಂ ಚರ್ಮ ಶತಚಂದ್ರಂ ಚ ಭಾನುಮತ್।
06049030c ಖಡ್ಗಂ ಚ ವಿಪುಲಂ ದಿವ್ಯಂ ಪ್ರಗೃಹ್ಯ ಸುಭುಜೋ ಬಲೀ।।
06049031a ಅಭಿದುದ್ರಾವ ವೇಗೇನ ದ್ರೋಣಸ್ಯ ವಧಕಾಂಕ್ಷಯಾ।
06049031c ಆಮಿಷಾರ್ಥೀ ಯಥಾ ಸಿಂಹೋ ವನೇ ಮತ್ತಮಿವ ದ್ವಿಪಂ।।

ಆಗ ಆ ಸುಭುಜ ಬಲಿಯು ವಿಶಾಲವಾಗಿದ್ದ, ನೂರು ಚಂದ್ರರಂತೆ ಪ್ರಕಾಶಮಾನವಾಗಿದ್ದ ಗುರಾಣಿಯನ್ನೂ ವಿಪುಲ ದಿವ್ಯ ಖಡ್ಗವನ್ನೂ ಹಿಡಿದು ವೇಗದಿಂದ ದ್ರೋಣನನ್ನು ವಧಿಸಲು ಇಚ್ಛಿಸಿ, ವನದಲ್ಲಿ ಸಿಂಹವು ಮದಿಸಿದ ಆನೆಯ ಮೇಲೆ ಬೀಳುವಂತೆ ಓಡಿ ಬಂದನು.

06049032a ತತ್ರಾದ್ಭುತಮಪಶ್ಯಾಮ ಭಾರದ್ವಾಜಸ್ಯ ಪೌರುಷಂ।
06049032c ಲಾಘವಂ ಚಾಸ್ತ್ರಯೋಗಂ ಚ ಬಲಂ ಬಾಹ್ವೋಶ್ಚ ಭಾರತ।।

ಭಾರತ! ಆಗ ಅಲ್ಲಿ ನಾವು ಭಾರದ್ವಾಜನ ಪೌರುಷವನ್ನೂ, ಲಾಘವವನ್ನೂ, ಅಸ್ತ್ರಯೋಗವನ್ನೂ, ಬಾಹುಗಳ ಬಲವನ್ನೂ ಕಂಡೆವು.

06049033a ಯದೇನಂ ಶರವರ್ಷೇಣ ವಾರಯಾಮಾಸ ಪಾರ್ಷತಂ।
06049033c ನ ಶಶಾಕ ತತೋ ಗಂತುಂ ಬಲವಾನಪಿ ಸಂಯುಗೇ।।

ಪಾರ್ಷತನನ್ನು ಶರವರ್ಷಗಳಿಂದ ತಡೆದನು. ಬಲಶಾಲಿಯಾಗಿದ್ದರೂ ಅವನು ಸಂಯುಗದಲ್ಲಿ ಮುಂದುವರೆಯಲು ಶಕ್ತನಾಗಲಿಲ್ಲ.

06049034a ತತ್ರ ಸ್ಥಿತಮಪಶ್ಯಾಮ ಧೃಷ್ಟದ್ಯುಮ್ನಂ ಮಹಾರಥಂ।
06049034c ವಾರಯಾಣಂ ಶರೌಘಾಂಶ್ಚ ಚರ್ಮಣಾ ಕೃತಹಸ್ತವತ್।।

ಅಲ್ಲಿ ಮಹಾರಥ ಧೃಷ್ಟದ್ಯುಮ್ನನು ಖಡ್ಗ-ಗುರಾಣಿಗಳನ್ನು ಹಿಡಿದು ಶರಗಳಿಂದ ತಡೆಯಲ್ಪಟ್ಟು ನಿಂತಿರುವುದನ್ನು ಭೀಮಸೇನನು ನೋಡಿದನು.

06049035a ತತೋ ಭೀಮೋ ಮಹಾಬಾಹುಃ ಸಹಸಾಭ್ಯಪತದ್ಬಲೀ।
06049035c ಸಾಹಾಯ್ಯಕಾರೀ ಸಮರೇ ಪಾರ್ಷತಸ್ಯ ಮಹಾತ್ಮನಃ।।

ಆಗ ಮಹಾಬಾಹು ಬಲೀ ಭೀಮನು ಸಮರದಲ್ಲಿ ಮಹಾತ್ಮ ಪಾರ್ಷತನಿಗೆ ಸಹಾಯ ಮಾಡಲು ಬೇಗನೇ ಅಲ್ಲಿಗೆ ಧಾವಿಸಿದನು.

06049036a ಸ ದ್ರೋಣಂ ನಿಶಿತೈರ್ಬಾಣೈ ರಾಜನ್ವಿವ್ಯಾಧ ಸಪ್ತಭಿಃ।
06049036c ಪಾರ್ಷತಂ ಚ ತದಾ ತೂರ್ಣಮನ್ಯಮಾರೋಪಯದ್ರಥಂ।।

ರಾಜನ್! ಅವನು ದ್ರೋಣನನ್ನು ಏಳು ಬಾಣಗಳಿಂದ ಹೊಡೆದನು ಮತ್ತು ಬೇಗನೆ ಪಾರ್ಷತನನ್ನು ತನ್ನ ರಥದ ಮೇಲೇರಿಸಿಕೊಂಡನು.

06049037a ತತೋ ದುರ್ಯೋಧನೋ ರಾಜಾ ಕಲಿಂಗಂ ಸಮಚೋದಯತ್।
06049037c ಸೈನ್ಯೇನ ಮಹತಾ ಯುಕ್ತಂ ಭಾರದ್ವಾಜಸ್ಯ ರಕ್ಷಣೇ।।

ಆಗ ರಾಜಾ ದುರ್ಯೋಧನನು ಭಾರದ್ವಾಜನ ರಕ್ಷಣೆಗೆ ಮಹಾ ಸೇನೆಯಿಂದ ಕೂಡಿದ ಕಲಿಂಗನನ್ನು ಪ್ರಚೋದಿಸಿದನು.

06049038a ತತಃ ಸಾ ಮಹತೀ ಸೇನಾ ಕಲಿಂಗಾನಾಂ ಜನೇಶ್ವರ।
06049038c ಭೀಮಮಭ್ಯುದ್ಯಯೌ ತೂರ್ಣಂ ತವ ಪುತ್ರಸ್ಯ ಶಾಸನಾತ್।।

ಆಗ ಜನೇಶ್ವರ! ತಕ್ಷಣವೇ ನಿನ್ನ ಪುತ್ರನ ಶಾಸನದಂತೆ ಕಲಿಂಗರ ಮಹಾಸೇನೆಯು ಭೀಮನನ್ನು ಎದುರಿಸಿತು.

06049039a ಪಾಂಚಾಲ್ಯಮಭಿಸಂತ್ಯಜ್ಯ ದ್ರೋಣೋಽಪಿ ರಥಿನಾಂ ವರಃ।
06049039c ವಿರಾಟದ್ರುಪದೌ ವೃದ್ಧೌ ಯೋಧಯಾಮಾಸ ಸಂಗತೌ।
06049039e ಧೃಷ್ಟದ್ಯುಮ್ನೋಽಪಿ ಸಮರೇ ಧರ್ಮರಾಜಂ ಸಮಭ್ಯಯಾತ್।।

ರಥಿಗಳಲ್ಲಿ ಶ್ರೇಷ್ಠನಾದ ದ್ರೋಣನೂ ಕೂಡ ಪಾಂಚಾಲ್ಯನನ್ನು ಬಿಟ್ಟು ವೃದ್ಧರಾದ ವಿರಾಟ-ದ್ರುಪದರ ಒಟ್ಟಿಗೆ ಯುದ್ಧಮಾಡಿದನು. ಧೃಷ್ಟದ್ಯುಮ್ನನೂ ಕೂಡ ಸಮರದಲ್ಲಿ ಧರ್ಮರಾಜನನ್ನು ಸೇರಿದನು.

06049040a ತತಃ ಪ್ರವವೃತೇ ಯುದ್ಧಂ ತುಮುಲಂ ಲೋಮಹರ್ಷಣಂ।
06049040c ಕಲಿಂಗಾನಾಂ ಚ ಸಮರೇ ಭೀಮಸ್ಯ ಚ ಮಹಾತ್ಮನಃ।
06049040e ಜಗತಃ ಪ್ರಕ್ಷಯಕರಂ ಘೋರರೂಪಂ ಭಯಾನಕಂ।।

ಆಗ ಸಮರದಲ್ಲಿ ಕಲಿಂಗರು ಮತ್ತು ಮಹಾತ್ಮ ಭೀಮನ ನಡುವೆ ಜಗತ್ತನ್ನೇ ನಾಶಗೊಳಿಸುವಂತಹ ಘೋರರೂಪೀ ಭಯಾನಕ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಧೃಷ್ಟದ್ಯುಮ್ನದ್ರೋಣಯುದ್ಧೇ ಏಕೋನಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಧೃಷ್ಟದ್ಯುಮ್ನದ್ರೋಣಯುದ್ಧ ಎನ್ನುವ ನಲ್ವತ್ತೊಂಭತ್ತನೇ ಅಧ್ಯಾಯವು.