048 ಭೀಷ್ಮಾರ್ಜುನಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 48

ಸಾರ

ಯುದ್ಧಾರಂಭ (1-6). ಭೀಷ್ಮಾರ್ಜುನರ ಯುದ್ಧ (7-70).

06048001 ಧೃತರಾಷ್ಟ್ರ ಉವಾಚ।
06048001a ಏವಂ ವ್ಯೂಢೇಷ್ವನೀಕೇಷು ಮಾಮಕೇಷ್ವಿತರೇಷು ಚ।
06048001c ಕಥಂ ಪ್ರಹರತಾಂ ಶ್ರೇಷ್ಠಾಃ ಸಂಪ್ರಹಾರಂ ಪ್ರಚಕ್ರಿರೇ।।

ಧೃತರಾಷ್ಟ್ರನು ಹೇಳಿದನು: “ಈ ರೀತಿ ಸೇನೆಗಳ ವ್ಯೂಹಗಳನ್ನು ರಚಿಸಿ ಶ್ರೇಷ್ಠರಾದ ನನ್ನವರೂ ಇತರರೂ ಹೇಗೆ ಪ್ರಹರ ಮತ್ತು ಸಂಪ್ರಹಾರಗಳಲ್ಲಿ ತೊಡಗಿದರು?”

06048002 ಸಂಜಯ ಉವಾಚ।
06048002a ಸಮಂ ವ್ಯೂಢೇಷ್ವನೀಕೇಷು ಸನ್ನದ್ಧಾ ರುಚಿರಧ್ವಜಾಃ।
06048002c ಅಪಾರಮಿವ ಸಂದೃಶ್ಯ ಸಾಗರಪ್ರತಿಮಂ ಬಲಂ।।

ಸಂಜಯನು ಹೇಳಿದನು: “ಸೇನೆಗಳ ವ್ಯೂಹಗಳನ್ನು ಸಮನಾಗಿ ರಚಿಸಿ ಸುಂದರ ಧ್ವಜಗಳಿಂದ ಸನ್ನದ್ಧವಾಗಿದ್ದ ಆ ಅಪಾರಸೇನೆಯು ಸಾಗರದಂತೆ ಬಲಶಾಲಿಯಾಗಿ ತೋರಿತು.

06048003a ತೇಷಾಂ ಮಧ್ಯೇ ಸ್ಥಿತೋ ರಾಜಾ ಪುತ್ರೋ ದುರ್ಯೋಧನಸ್ತವ।
06048003c ಅಬ್ರವೀತ್ತಾವಕಾನ್ಸರ್ವಾನ್ಯುಧ್ಯಧ್ವಮಿತಿ ದಂಶಿತಾಃ।।

ಅವರ ಮಧ್ಯೆ ನಿಂತಿದ್ದ ನಿನ್ನ ಪುತ್ರ ರಾಜಾ ದುರ್ಯೋಧನನು ನಿನ್ನವರೆಲ್ಲರಿಗೆ “ಕವಚಧಾರಿಗಳೇ! ಯುದ್ಧಮಾಡಿ!” ಎಂದು ಹೇಳಿದನು.

06048004a ತೇ ಮನಃ ಕ್ರೂರಮಾಸ್ಥಾಯ ಸಮಭಿತ್ಯಕ್ತಜೀವಿತಾಃ।
06048004c ಪಾಂಡವಾನಭ್ಯವರ್ತಂತ ಸರ್ವ ಏವೋಚ್ಛ್ರಿತಧ್ವಜಾಃ।।

ಮೇಲೆ ಧ್ವಜಗಳು ಹಾರಾಡುತ್ತಿರಲು ಅವರು ಎಲ್ಲರೂ ಮನಸ್ಸನ್ನು ಕ್ರೂರವಾಗಿಸಿಕೊಂಡು, ಜೀವವನ್ನು ತೊರೆದು ಪಾಂಡವರ ಮೇಲೆ ಆಕ್ರಮಣ ಮಾಡಿದರು.

06048005a ತತೋ ಯುದ್ಧಂ ಸಮಭವತ್ತುಮುಲಂ ಲೋಮಹರ್ಷಣಂ।
06048005c ತಾವಕಾನಾಂ ಪರೇಷಾಂ ಚ ವ್ಯತಿಷಕ್ತರಥದ್ವಿಪಂ।।

ಆಗ ನಿನ್ನವರ ಮತ್ತು ಶತ್ರುಗಳ ನಡುವೆ ರಥ-ಗಜ-ಅಶ್ವ-ಪದಾತಿಗಳ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು.

06048006a ಮುಕ್ತಾಸ್ತು ರಥಿಭಿರ್ಬಾಣಾ ರುಕ್ಮಪುಂಖಾಃ ಸುತೇಜನಾಃ।
06048006c ಸನ್ನಿಪೇತುರಕುಂಠಾಗ್ರಾ ನಾಗೇಷು ಚ ಹಯೇಷು ಚ।।

ರಥಿಗಳು ಬಿಟ್ಟ ಸುತೇಜನ ಹರಿತ ರುಕ್ಮಪುಂಖ ಬಾಣಗಳು ಆನೆ-ಕುದುರೆಗಳ ಮೇಲೆ ಬೀಳುತ್ತಿದ್ದವು.

06048007a ತಥಾ ಪ್ರವೃತ್ತೇ ಸಂಗ್ರಾಮೇ ಧನುರುದ್ಯಮ್ಯ ದಂಶಿತಃ।
06048007c ಅಭಿಪತ್ಯ ಮಹಾಬಾಹುರ್ಭೀಷ್ಮೋ ಭೀಮಪರಾಕ್ರಮಃ।।

ಹೀಗೆ ಸಂಗ್ರಾಮವು ಪ್ರಾರಂಭವಾಗಲು ಧನುಸ್ಸನ್ನು ಎತ್ತಿಕೊಂಡು, ಕವಚಗಳನ್ನು ಧರಿಸಿ ಮಹಾಬಾಹು ಭೀಮಪರಾಕ್ರಮಿ ಭೀಷ್ಮನು ಆಕ್ರಮಣ ಮಾಡಿದನು.

06048008a ಸೌಭದ್ರೇ ಭೀಮಸೇನೇ ಚ ಶೈನೇಯೇ ಚ ಮಹಾರಥೇ।
06048008c ಕೇಕಯೇ ಚ ವಿರಾಟೇ ಚ ಧೃಷ್ಟದ್ಯುಮ್ನೇ ಚ ಪಾರ್ಷತೇ।।
06048009a ಏತೇಷು ನರವೀರೇಷು ಚೇದಿಮತ್ಸ್ಯೇಷು ಚಾಭಿತಃ।
06048009c ವವರ್ಷ ಶರವರ್ಷಾಣಿ ವೃದ್ಧಃ ಕುರುಪಿತಾಮಹಃ।।

ಕುರುಪಿತಾಮಹ ವೃದ್ಧನು ನರವೀರರಾದ ಸೌಭದ್ರ, ಭೀಮಸೇನ, ಮಹಾರಥ ಶೈನ, ಕೇಕಯ, ವಿರಾಟ, ಪಾರ್ಷತ ಧೃಷ್ಟದ್ಯುಮ್ನ ಮತ್ತು ಚೇದಿ-ಮತ್ಸ್ಯರ ಮೇಲೆ ಶರವರ್ಷಗಳನ್ನು ಸುರಿಸಿ ಹೊಡೆದನು.

06048010a ಪ್ರಾಕಂಪತ ಮಹಾವ್ಯೂಹಸ್ತಸ್ಮಿನ್ವೀರಸಮಾಗಮೇ।
06048010c ಸರ್ವೇಷಾಮೇವ ಸೈನ್ಯಾನಾಮಾಸೀದ್ವ್ಯತಿಕರೋ ಮಹಾನ್।।

ಆ ವೀರಸಮಾಗಮದಲ್ಲಿ ಮಹಾವ್ಯೂಹವು ಕಂಪಿಸಿತು. ಎಲ್ಲ ಸೇನೆಗಳಲ್ಲಿಯೂ ಮಹಾ ಅಸ್ತವ್ಯಸ್ತವಾಯಿತು.

06048011a ಸಾದಿತಧ್ವಜನಾಗಾಶ್ಚ ಹತಪ್ರವರವಾಜಿನಃ।
06048011c ವಿಪ್ರಯಾತರಥಾನೀಕಾಃ ಸಮಪದ್ಯಂತ ಪಾಂಡವಾಃ।।

ಅಶ್ವಯೋಧರು, ಧ್ವಜವುಳ್ಳವರು, ಆನೆಗಳು ಮತ್ತು ರಥಿಕರು ಅಪಾರ ಸಂಖ್ಯೆಯಲ್ಲಿ ಮರಣವನ್ನಿಪ್ಪಿದರು. ಪಾಂಡವರ ರಥಸೈನ್ಯವು ದಿಕ್ಕಾಪಾಲಾಗಿ ಓಡಿ ಹೋಯಿತು.

06048012a ಅರ್ಜುನಸ್ತು ನರವ್ಯಾಘ್ರೋ ದೃಷ್ಟ್ವಾ ಭೀಷ್ಮಂ ಮಹಾರಥಂ।
06048012c ವಾರ್ಷ್ಣೇಯಮಬ್ರವೀತ್ಕ್ರುದ್ಧೋ ಯಾಹಿ ಯತ್ರ ಪಿತಾಮಹಃ।।

ನರವ್ಯಾಘ್ರ ಅರ್ಜುನನಾದರೋ ಮಹಾರಥ ಭೀಷ್ಮನನ್ನು ನೋಡಿ ಕ್ರುದ್ಧನಾಗಿ ವಾರ್ಷ್ಣೇಯನಿಗೆ ಹೇಳಿದನು: “ಪಿತಾಮಹನಿರುವಲ್ಲಿಗೆ ಕೊಂಡೊಯ್ಯಿ!

06048013a ಏಷ ಭೀಷ್ಮಃ ಸುಸಂಕ್ರುದ್ಧೋ ವಾರ್ಷ್ಣೇಯ ಮಮ ವಾಹಿನೀಂ।
06048013c ನಾಶಯಿಷ್ಯತಿ ಸುವ್ಯಕ್ತಂ ದುರ್ಯೋಧನಹಿತೇ ರತಃ।।

ವಾರ್ಷ್ಣೇಯ! ದುರ್ಯೋಧನನ ಹಿತರತನಾಗಿ ಈ ಭೀಷ್ಮನು ಸಂಕ್ರುದ್ಧನಾಗಿ ನನ್ನ ಸೇನೆಯನ್ನು ನಾಶಗೊಳಿಸುತ್ತಿದ್ದಾನೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ.

06048014a ಏಷ ದ್ರೋಣಃ ಕೃಪಃ ಶಲ್ಯೋ ವಿಕರ್ಣಶ್ಚ ಜನಾರ್ದನ।
06048014c ಧಾರ್ತರಾಷ್ಟ್ರಾಶ್ಚ ಸಹಿತಾ ದುರ್ಯೋಧನಪುರೋಗಮಾಃ।।
06048015a ಪಾಂಚಾಲಾನ್ನಿಹನಿಷ್ಯಂತಿ ರಕ್ಷಿತಾ ದೃಢಧನ್ವನಾ।
06048015c ಸೋಽಹಂ ಭೀಷ್ಮಂ ಗಮಿಷ್ಯಾಮಿ ಸೈನ್ಯಹೇತೋರ್ಜನಾರ್ದನ।।

ಜನಾರ್ದನ! ಈ ದೃಢಧನ್ವಿಯಿಂದ ರಕ್ಷಿತರಾಗಿ ದ್ರೋಣ, ಕೃಪ, ಶಲ್ಯ ಮತ್ತು ವಿಕರ್ಣರು ದುರ್ಯೋಧನನ ನಾಯಕತ್ವದಲ್ಲಿ ಧಾರ್ತರಾಷ್ಟ್ರರ ಸಹಿತ ಪಾಂಚಾಲರನ್ನು ನಾಶಮಾಡಿಬಿಡುತ್ತಾರೆ. ಜನಾರ್ದನ! ನನ್ನ ಸೇನೆಗೋಸ್ಕರ ನಾನು ಭೀಷ್ಮನ ಹತ್ತಿರ ಹೋಗುತ್ತೇನೆ.”

06048016a ತಮಬ್ರವೀದ್ವಾಸುದೇವೋ ಯತ್ತೋ ಭವ ಧನಂಜಯ।
06048016c ಏಷ ತ್ವಾ ಪ್ರಾಪಯೇ ವೀರ ಪಿತಾಮಹರಥಂ ಪ್ರತಿ।।

ಅವನಿಗೆ ವಾಸುದೇವನು ಹೇಳಿದನು: “ಧನಂಜಯ! ಪ್ರಯತ್ನಿಸುವವನಾಗು! ವೀರ! ಪಿತಾಮಹನ ರಥದ ಬಳಿ ಇಗೋ ನಿನ್ನನ್ನು ತಲುಪಿಸುತ್ತೇನೆ.”

06048017a ಏವಮುಕ್ತ್ವಾ ತತಃ ಶೌರೀ ರಥಂ ತಂ ಲೋಕವಿಶ್ರುತಂ।
06048017c ಪ್ರಾಪಯಾಮಾಸ ಭೀಷ್ಮಾಯ ರಥಂ ಪ್ರತಿ ಜನೇಶ್ವರ।।

ಜನೇಶ್ವರ! ಹೀಗೆ ಹೇಳಿ ಶೌರಿಯು ಆ ಲೋಕವಿಶ್ರುತ ರಥವನ್ನು ಭೀಷ್ಮನ ರಥದ ಬಳಿ ಕೊಂಡೊಯ್ದನು.

06048018a ಚಂಚದ್ಬಹುಪತಾಕೇನ ಬಲಾಕಾವರ್ಣವಾಜಿನಾ।
06048018c ಸಮುಚ್ಛ್ರಿತಮಹಾಭೀಮನದದ್ವಾನರಕೇತುನಾ।
06048018e ಮಹತಾ ಮೇಘನಾದೇನ ರಥೇನಾದಿತ್ಯವರ್ಚಸಾ।।

ಅನೇಕ ಪತಾಕೆಗಳು ಹಾರಾಡುತ್ತಿದ್ದ, ಬೆಳ್ಳಕ್ಕಿಯ ಚುಕ್ಕೆಗಳಂತೆ ಅಪ್ಪಟ ಬಿಳಿಯ ಕುದುರೆಗಳನ್ನು ಕಟ್ಟಿದ್ದ, ಮಹಾಭಯಂಕರವಾಗಿ ಘರ್ಜನೆ ಮಾಡುತ್ತಿದ್ದ ವಾನರನನ್ನು ಧ್ವಜದಲ್ಲಿರಿಸಿದ್ದ ಆ ಆದಿತ್ಯವರ್ಚಸ ರಥವು ಮಹಾ ಮೇಘನಾದದಿಂದ ಕೂಡಿತ್ತು.

06048019a ವಿನಿಘ್ನನ್ಕೌರವಾನೀಕಂ ಶೂರಸೇನಾಂಶ್ಚ ಪಾಂಡವಃ।
06048019c ಆಯಾಚ್ಚರಾನ್ನುದಂ ಶೀಘ್ರಂ ಸುಹೃಚ್ಛೋಷವಿನಾಶನಃ।।
06048020a ತಮಾಪತಂತಂ ವೇಗೇನ ಪ್ರಭಿನ್ನಮಿವ ವಾರಣಂ।
06048020c ತ್ರಾಸಯಾನಂ ರಣೇ ಶೂರಾನ್ಪಾತಯಂತಂ ಚ ಸಾಯಕೈಃ।।
06048021a ಸೈಂಧವಪ್ರಮುಖೈರ್ಗುಪ್ತಃ ಪ್ರಾಚ್ಯಸೌವೀರಕೇಕಯೈಃ।
06048021c ಸಹಸಾ ಪ್ರತ್ಯುದೀಯಾಯ ಭೀಷ್ಮಃ ಶಾಂತನವೋಽರ್ಜುನಂ।।

ಬರುವಾಗ ಕೌರವ ಶೂರಸೇನೆಯನ್ನು ಸಂಹರಿಸುತ್ತಾ, ಶೀಘ್ರವಾದ ಬಾಣಗಳನ್ನು ಬಿಡುತ್ತ, ಸುಹೃದಯರ ಶೋಕವನ್ನು ನಾಶಪಡಿಸುವ ಪಾಂಡವ ಅರ್ಜುನನು ಮದೋದಕವನ್ನು ಸುರಿಸುವ ಆನೆಯಂತೆ ಮಹಾ ವೇಗದಿಂದ ಮೇಲೆ ಬೀಳುತ್ತಾ ರಣದಲ್ಲಿ ಶೂರರನ್ನು ಸಾಯಕಗಳಿಂದ ಗಾಯಗೊಳಿಸಿ ಬೀಳಿಸುತ್ತಾ, ಸೈಂಧವಪ್ರಮುಖರಾದ ಪ್ರಾಚ್ಯ-ಸೌವೀರ-ಕೇಕಯರು ರಕ್ಷಿಸುತ್ತಿದ್ದ ಭೀಷ್ಮ ಶಾಂತನವನ ಮೇಲೆ ಜೋರಾಗಿ ಆಕ್ರಮಣ ಮಾಡಿದನು.

06048022a ಕೋ ಹಿ ಗಾಂಡೀವಧನ್ವಾನಮನ್ಯಃ ಕುರುಪಿತಾಮಹಾತ್।
06048022c ದ್ರೋಣವೈಕರ್ತನಾಭ್ಯಾಂ ವಾ ರಥಃ ಸಂಯಾತುಮರ್ಹತಿ।।

ಕುರುಪಿತಾಮಹ, ದ್ರೋಣ ಮತ್ತು ವೈಕರ್ತನನನ್ನು ಬಿಟ್ಟರೆ ಬೇರೆ ಯಾರುತಾನೇ ಗಾಂಡೀವಧನ್ವಿ ಅರ್ಜುನನನ್ನು ತಡೆಹಿಡಿಯಬಲ್ಲರು?

06048023a ತತೋ ಭೀಷ್ಮೋ ಮಹಾರಾಜ ಕೌರವಾಣಾಂ ಪಿತಾಮಹಃ।
06048023c ಅರ್ಜುನಂ ಸಪ್ತಸಪ್ತತ್ಯಾ ನಾರಾಚಾನಾಂ ಸಮಾವೃಣೋತ್।।

ಆಗ ಮಹಾರಾಜ! ಕೌರವರ ಪಿತಾಮಹ ಭೀಷ್ಮನು ಅರ್ಜುನನನ್ನು ಎಪ್ಪತ್ತೇಳು ನಾರಾಚಗಳಿಂದ ಪ್ರಹರಿಸಿದನು.

06048024a ದ್ರೋಣಶ್ಚ ಪಂಚವಿಂಶತ್ಯಾ ಕೃಪಃ ಪಂಚಾಶತಾ ಶರೈಃ।
06048024c ದುರ್ಯೋಧನಶ್ಚತುಃಷಷ್ಟ್ಯಾ ಶಲ್ಯಶ್ಚ ನವಭಿಃ ಶರೈಃ।।
06048025a ಸೈಂಧವೋ ನವಭಿಶ್ಚಾಪಿ ಶಕುನಿಶ್ಚಾಪಿ ಪಂಚಭಿಃ।
06048025c ವಿಕರ್ಣೋ ದಶಭಿರ್ಭಲ್ಲೈ ರಾಜನ್ವಿವ್ಯಾಧ ಪಾಂಡವಂ।।

ರಾಜನ್! ದ್ರೋಣನು ಇಪ್ಪತ್ತೈದು ಬಾಣಗಳಿಂದಲೂ, ಕೃಪನು ಐವತ್ತು ಬಾಣಗಳಿಂದಲೂ, ದುರ್ಯೋಧನನು ಅರವತ್ನಾಲ್ಕು ಬಾಣಗಳಿಂದಲೂ, ಶಲ್ಯನು ಒಂಭತ್ತು ಬಾಣಗಳಿಂದಲೂ, ಸೈಂಧವನು ಒಂಭತ್ತರಿಂದಲೂ, ಶಕುನಿಯು ಐದರಿಂದಲೂ, ವಿಕರ್ಣನು ಹತ್ತು ಭಲ್ಲಗಳಿಂದಲೂ ಪಾಂಡವನನ್ನು ಹೊಡೆದರು.

06048026a ಸ ತೈರ್ವಿದ್ಧೋ ಮಹೇಷ್ವಾಸಃ ಸಮಂತಾನ್ನಿಶಿತೈಃ ಶರೈಃ।
06048026c ನ ವಿವ್ಯಥೇ ಮಹಾಬಾಹುರ್ಭಿದ್ಯಮಾನ ಇವಾಚಲಃ।।

ಅವರ ನಿಶಿತ ಶರಗಳಿಂದ ಎಲ್ಲ ಕಡೆ ಹೊಡೆಯಲ್ಪಟ್ಟರೂ ಬಾಣದ ಏಟಿಗೊಳಗಾದ ಪರ್ವತದಂತೆ ಆ ಮಹೇಷ್ವಾಸ ಮಹಾಬಾಹುವು ವ್ಯಥಿತನಾಗಲಿಲ್ಲ.

06048027a ಸ ಭೀಷ್ಮಂ ಪಂಚವಿಂಶತ್ಯಾ ಕೃಪಂ ಚ ನವಭಿಃ ಶರೈಃ।
06048027c ದ್ರೋಣಂ ಷಷ್ಟ್ಯಾ ನರವ್ಯಾಘ್ರೋ ವಿಕರ್ಣಂ ಚ ತ್ರಿಭಿಃ ಶರೈಃ।।
06048028a ಆರ್ತಾಯನಿಂ ತ್ರಿಭಿರ್ಬಾಣೈ ರಾಜಾನಂ ಚಾಪಿ ಪಂಚಭಿಃ।
06048028c ಪ್ರತ್ಯವಿಧ್ಯದಮೇಯಾತ್ಮಾ ಕಿರೀಟೀ ಭರತರ್ಷಭ।।

ಭರತರ್ಷಭ! ಆಗ ಆ ನರವ್ಯಾಘ್ರ ಅಮೇಯಾತ್ಮ ಕಿರೀಟಿಯು ಭೀಷ್ಮನನ್ನು ಇಪ್ಪತ್ತೈದು ಬಾಣಗಳಿಂದಲೂ, ಕೃಪನನ್ನು ಒಂಭತ್ತು ಬಾಣಗಳಿಂದಲೂ, ದ್ರೋಣನನ್ನು ಆರರಿಂದಲೂ, ವಿಕರ್ಣನನ್ನು ಮೂರು ಬಾಣಗಳಿಂದಲೂ, ಶಲ್ಯನನ್ನು ಮೂರು ಬಾಣಗಳಿಂದಲೂ ರಾಜಾ ದುರ್ಯೋಧನನನ್ನು ಐದರಿಂದಲೂ ಮರಳಿ ಹೊಡೆದನು.

06048029a ತಂ ಸಾತ್ಯಕಿರ್ವಿರಾಟಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ।
06048029c ದ್ರೌಪದೇಯಾಭಿಮನ್ಯುಶ್ಚ ಪರಿವವ್ರುರ್ಧನಂಜಯಂ।।

ಧನಂಜಯನನ್ನು ಸಾತ್ಯಕಿ, ವಿರಾಟ, ಧೃಷ್ಟದ್ಯುಮ್ನ ಪಾರ್ಷತ, ದ್ರೌಪದೇಯರು ಮತ್ತು ಅಭಿಮನ್ಯುವು ಸುತ್ತುವರೆದರು.

06048030a ತತೋ ದ್ರೋಣಂ ಮಹೇಷ್ವಾಸಂ ಗಾಂಗೇಯಸ್ಯ ಪ್ರಿಯೇ ರತಂ।
06048030c ಅಭ್ಯವರ್ಷತ ಪಾಂಚಾಲ್ಯಃ ಸಂಯುಕ್ತಃ ಸಹ ಸೋಮಕೈಃ।।

ಆಗ ಸೋಮಕರೊಂದಿಗೆ ಕೂಡಿ ಪಾಂಚಾಲ್ಯನು ಗಾಂಗೇಯನ ಪ್ರಿಯರತ, ಮಹೇಷ್ವಾಸ ದ್ರೋಣನನ್ನು ಆಕ್ರಮಣಿಸಿದನು.

06048031a ಭೀಷ್ಮಸ್ತು ರಥಿನಾಂ ಶ್ರೇಷ್ಠಸ್ತೂರ್ಣಂ ವಿವ್ಯಾಧ ಪಾಂಡವಂ।
06048031c ಅಶೀತ್ಯಾ ನಿಶಿತೈರ್ಬಾಣೈಸ್ತತೋಽಕ್ರೋಶಂತ ತಾವಕಾಃ।।

ರಥಿಗಳಲ್ಲಿ ಶ್ರೇಷ್ಠ ಭೀಷ್ಮನಾದರೋ ಪಾಂಡವನನ್ನು ಲೋಹದ ನಿಶಿತ ಬಾಣಗಳಿಂದ ವೇಗವಾಗಿ ಹೊಡೆಯಲು ನಿನ್ನವರು ಆಕ್ರೋಶಮಾಡಿದರು.

06048032a ತೇಷಾಂ ತು ನಿನದಂ ಶ್ರುತ್ವಾ ಪ್ರಹೃಷ್ಟಾನಾಂ ಪ್ರಹೃಷ್ಟವತ್।
06048032c ಪ್ರವಿವೇಶ ತತೋ ಮಧ್ಯಂ ರಥಸಿಂಹಃ ಪ್ರತಾಪವಾನ್।।

ಪ್ರಹೃಷ್ಟರಾದ ಅವರ ಆ ಸಂತೋಷದ ಕೂಗನ್ನು ಕೇಳಿ ಪ್ರತಾಪವಾನ್ ರಥಸಿಂಹನು ಅವರ ಮಧ್ಯೆ ಪ್ರವೇಶಿಸಿದನು.

06048033a ತೇಷಾಂ ತು ರಥಸಿಂಹಾನಾಂ ಮಧ್ಯಂ ಪ್ರಾಪ್ಯ ಧನಂಜಯಃ।
06048033c ಚಿಕ್ರೀಡ ಧನುಷಾ ರಾಜಽಲ್ಲಕ್ಷ್ಯಂ ಕೃತ್ವಾ ಮಹಾರಥಾನ್।।

ರಾಜನ್! ಆ ರಥಸಿಂಹರ ಮಧ್ಯೆ ಪ್ರವೇಶಿಸಿದ ಧನಂಜಯನು ಮಹಾರಥರನ್ನು ಗುರಿಯಾಗಿಟ್ಟುಕೊಂಡು ಧನುಸ್ಸಿನೊಂದಿಗೆ ಆಟವಾಡತೊಡಗಿದನು.

06048034a ತತೋ ದುರ್ಯೋಧನೋ ರಾಜಾ ಭೀಷ್ಮಮಾಹ ಜನೇಶ್ವರಃ।
06048034c ಪೀಡ್ಯಮಾನಂ ಸ್ವಕಂ ಸೈನ್ಯಂ ದೃಷ್ಟ್ವಾ ಪಾರ್ಥೇನ ಸಂಯುಗೇ।।

ಆಗ ರಾಜಾ ಜನೇಶ್ವರ ದುರ್ಯೋಧನನು ಸಂಯುಗದಲ್ಲಿ ಪಾರ್ಥನು ತನ್ನ ಸೇನೆಯನ್ನು ಪೀಡಿಸುವುದನ್ನು ನೋಡಿ ಭೀಷ್ಮನಿಗೆ ಹೇಳಿದನು:

06048035a ಏಷ ಪಾಂಡುಸುತಸ್ತಾತ ಕೃಷ್ಣೇನ ಸಹಿತೋ ಬಲೀ।
06048035c ಯತತಾಂ ಸರ್ವಸೈನ್ಯಾನಾಂ ಮೂಲಂ ನಃ ಪರಿಕೃಂತತಿ।
06048035e ತ್ವಯಿ ಜೀವತಿ ಗಾಂಗೇಯೇ ದ್ರೋಣೇ ಚ ರಥಿನಾಂ ವರೇ।।

“ಅಯ್ಯಾ! ಈ ಬಲೀ ಪಾಂಡುಸುತನು ಕೃಷ್ಣನ ಸಹಿತ, ಗಾಂಗೇಯ! ನೀನು ಮತ್ತು ರಥಿಗಳಲ್ಲಿ ಶ್ರೇಷ್ಠ ದ್ರೋಣನು ಜೀವಂತವಿರುವಾಗಲೇ ಪ್ರಯತ್ನಿಸುತ್ತಿರುವ ಸರ್ವಸೇನೆಗಳನ್ನು ಬುಡಸಹಿತ ಕಿತ್ತೊಗೆಯುತ್ತಿದ್ದಾನಲ್ಲ!

06048036a ತ್ವತ್ಕೃತೇ ಹ್ಯೇಷ ಕರ್ಣೋಽಪಿ ನ್ಯಸ್ತಶಸ್ತ್ರೋ ಮಹಾರಥಃ।
06048036c ನ ಯುಧ್ಯತಿ ರಣೇ ಪಾರ್ಥಂ ಹಿತಕಾಮಃ ಸದಾ ಮಮ।।

ನಿನ್ನಿಂದಾಗಿ ಮಹಾರಥ ಕರ್ಣನೂ ಕೂಡ ಶಸ್ತ್ರವನ್ನು ಕೆಳಗಿಟ್ಟಿದ್ದಾನೆ. ಆದುದರಿಂದಲೇ ಸದಾ ನನ್ನ ಹಿತವನ್ನೇ ಬಯಸುವ ಅವನು ರಣದಲ್ಲಿ ಪಾರ್ಥನೊಂದಿಗೆ ಯುದ್ಧಮಾಡುತ್ತಿಲ್ಲ!

06048037a ಸ ತಥಾ ಕುರು ಗಾಂಗೇಯ ಯಥಾ ಹನ್ಯೇತ ಫಲ್ಗುನಃ।
06048037c ಏವಮುಕ್ತಸ್ತತೋ ರಾಜನ್ಪಿತಾ ದೇವವ್ರತಸ್ತವ।
06048037e ಧಿಕ್ ಕ್ಷತ್ರಧರ್ಮಮಿತ್ಯುಕ್ತ್ವಾ ಯಯೌ ಪಾರ್ಥರಥಂ ಪ್ರತಿ।।

ಗಾಂಗೇಯ! ಫಲ್ಗುನನನ್ನು ಕೊಲ್ಲುವಂತಹುದನ್ನು ಮಾಡು!” ಅವನು ಹೀಗೆ ಹೇಳಲು ರಾಜನ್! ನಿನ್ನ ಪಿತ ದೇವವ್ರತನು “ಕ್ಷತ್ರಧರ್ಮಕ್ಕೆ ಧಿಕ್ಕಾರ!” ಎಂದು ಹೇಳಿ ಪಾರ್ಥನ ರಥದ ಬಳಿ ನಡೆದನು.

06048038a ಉಭೌ ಶ್ವೇತಹಯೌ ರಾಜನ್ಸಂಸಕ್ತೌ ದೃಶ್ಯ ಪಾರ್ಥಿವಾಃ।
06048038c ಸಿಂಹನಾದಾನ್ಭೃಶಂ ಚಕ್ರುಃ ಶಂಖಶಬ್ದಾಂಶ್ಚ ಭಾರತ।।

ರಾಜನ್! ಭಾರತ! ಇಬ್ಬರೂ ಶ್ವೇತಹಯರೂ ಸಂಘರ್ಷಣೆಗೆ ಸಿದ್ಧರಾಗಿರುವುದನ್ನು ನೋಡಿ ಪಾರ್ಥಿವರು ಜೋರಾಗಿ ಸಿಂಹನಾದಗೈದರು ಮತ್ತು ಶಂಖಗಳ ಶಬ್ಧಗಳನ್ನು ಮಾಡಿದರು.

06048039a ದ್ರೌಣಿರ್ದುರ್ಯೋಧನಶ್ಚೈವ ವಿಕರ್ಣಶ್ಚ ತವಾತ್ಮಜಃ।
06048039c ಪರಿವಾರ್ಯ ರಣೇ ಭೀಷ್ಮಂ ಸ್ಥಿತಾ ಯುದ್ಧಾಯ ಮಾರಿಷ।।

ಮಾರಿಷ! ದ್ರೌಣಿ, ದುರ್ಯೋಧನ ಮತ್ತು ನಿನ್ನ ಮಗ ವಿಕರ್ಣನು ರಣದಲ್ಲಿ ಭೀಷ್ಮನನ್ನು ಸುತ್ತುವರೆದು ಯುದ್ಧಕ್ಕೆ ನಿಂತರು.

06048040a ತಥೈವ ಪಾಂಡವಾಃ ಸರ್ವೇ ಪರಿವಾರ್ಯ ಧನಂಜಯಂ।
06048040c ಸ್ಥಿತಾ ಯುದ್ಧಾಯ ಮಹತೇ ತತೋ ಯುದ್ಧಮವರ್ತತ।।

ಹಾಗೆಯೇ ಪಾಂಡವರೆಲ್ಲರೂ ಧನಂಜಯನನ್ನು ಸುತ್ತುವರೆದು ಯುದ್ಧಕ್ಕೆ ನಿಂತರು. ಆಗ ಮಹಾಯುದ್ಧವು ನಡೆಯಿತು.

06048041a ಗಾಂಗೇಯಸ್ತು ರಣೇ ಪಾರ್ಥಮಾನರ್ಚನ್ನವಭಿಃ ಶರೈಃ।
06048041c ತಮರ್ಜುನಃ ಪ್ರತ್ಯವಿಧ್ಯದ್ದಶಭಿರ್ಮರ್ಮವೇಧಿಭಿಃ।।

ರಣದಲ್ಲಿ ಗಾಂಗೇಯನಾದರೋ ಪಾರ್ಥನನ್ನು ಒಂಭತ್ತು ಶರಗಳಿಂದ ಹೊಡೆದನು. ಅವನನ್ನು ಅರ್ಜುನನು ಹತ್ತು ಮರ್ಮವೇಧಿಗಳಿಂದ ತಿರುಗಿ ಹೊಡೆದನು.

06048042a ತತಃ ಶರಸಹಸ್ರೇಣ ಸುಪ್ರಯುಕ್ತೇನ ಪಾಂಡವಃ।
06048042c ಅರ್ಜುನಃ ಸಮರಶ್ಲಾಘೀ ಭೀಷ್ಮಸ್ಯಾವಾರಯದ್ದಿಶಃ।।

ಆಗ ಸಮರಶ್ಲಾಘೀ ಪಾಂಡವ ಅರ್ಜುನನು ಚೆನ್ನಾಗಿ ಗುರಿಯಿಟ್ಟ ಸಹಸ್ರ ಬಾಣಗಳಿಂದ ಭೀಷ್ಮನನ್ನು ಎಲ್ಲ ಕಡೆಗಳಿಂದಲೂ ಮುಚ್ಚಿಬಿಟ್ಟನು.

06048043a ಶರಜಾಲಂ ತತಸ್ತತ್ತು ಶರಜಾಲೇನ ಕೌರವ।
06048043c ವಾರಯಾಮಾಸ ಪಾರ್ಥಸ್ಯ ಭೀಷ್ಮಃ ಶಾಂತನವಸ್ತಥಾ।।

ಆಗ ಕೌರವ! ಪಾರ್ಥನ ಆ ಶರಜಾಲವನ್ನು ಭೀಷ್ಮ ಶಾಂತನವನು ಶರಜಾಲದಿಂದಲೇ ತಡೆದನು.

06048044a ಉಭೌ ಪರಮಸಂಹೃಷ್ಟಾವುಭೌ ಯುದ್ಧಾಭಿನಂದಿನೌ।
06048044c ನಿರ್ವಿಶೇಷಮಯುಧ್ಯೇತಾಂ ಕೃತಪ್ರತಿಕೃತೈಷಿಣೌ।।

ಇಬ್ಬರೂ ಪರಮ ಸಂಹೃಷ್ಟರಾಗಿದ್ದರು. ಇಬ್ಬರೂ ಯುದ್ಧದಲ್ಲಿ ಪರಸ್ಪರರನ್ನು ಶ್ಲಾಘಿಸುತ್ತಿದ್ದರು. ಒಬ್ಬರು ಪ್ರಹರಿಸಿದರೆ ಇನ್ನೊಬ್ಬರು ಅದಕ್ಕೆ ಪ್ರತಿಯಾಗಿ ಪ್ರಹರಿಸುತ್ತಿದ್ದರು. ಅವರಿಬ್ಬರ ಯುದ್ಧದಲ್ಲಿ ವ್ಯತ್ಯಾಸವೇ ಕಾಣಲಿಲ್ಲ.

06048045a ಭೀಷ್ಮಚಾಪವಿಮುಕ್ತಾನಿ ಶರಜಾಲಾನಿ ಸಂಘಶಃ।
06048045c ಶೀರ್ಯಮಾಣಾನ್ಯದೃಶ್ಯಂತ ಭಿನ್ನಾನ್ಯರ್ಜುನಸಾಯಕೈಃ।।

ಭೀಷ್ಮನ ಚಾಪದಿಂದ ಪ್ರಯೋಗಿಸಲ್ಪಟ್ಟ ಗುಂಪು ಗುಂಪಾದ ಶರಜಾಲಗಳು ಅರ್ಜುನನ ಸಾಯಕಗಳಿಂದ ಚೂರು ಚೂರಾಗಿ ಕೆಳಗೆ ಬೀಳುವುದು ಕಾಣುತ್ತಿತ್ತು.

06048046a ತಥೈವಾರ್ಜುನಮುಕ್ತಾನಿ ಶರಜಾಲಾನಿ ಭಾಗಶಃ।
06048046c ಗಾಂಗೇಯಶರನುನ್ನಾನಿ ನ್ಯಪತಂತ ಮಹೀತಲೇ।।

ಹಾಗೆಯೇ ಅರ್ಜುನನು ಬಿಟ್ಟ ಶರಜಾಲಗಳು ಗಾಂಗೇಯನ ಶರಗಳಿಂದ ತುಂಡಾಗಿ ನೆಲದ ಮೇಲೆ ಬೀಳುತ್ತಿದ್ದವು.

06048047a ಅರ್ಜುನಃ ಪಂಚವಿಂಶತ್ಯಾ ಭೀಷ್ಮಮಾರ್ಚ್ಛಚ್ಚಿತೈಃ ಶರೈಃ।
06048047c ಭೀಷ್ಮೋಽಪಿ ಸಮರೇ ಪಾರ್ಥಂ ವಿವ್ಯಾಧ ತ್ರಿಂಶತಾ ಶರೈಃ।।

ಅರ್ಜುನನು ಇಪ್ಪತ್ತೈದು ನಿಶಿತ ಬಾಣಗಳಿಂದ ಭೀಷ್ಮನನ್ನು ಚುಚ್ಚಿದನು. ಸಮರದಲ್ಲಿ ಭೀಷ್ಮನೂ ಕೂಡ ಪಾರ್ಥನನ್ನು ಮೂವತ್ತು ಬಾಣಗಳಿಂದ ಹೊಡೆದನು.

06048048a ಅನ್ಯೋನ್ಯಸ್ಯ ಹಯಾನ್ವಿದ್ಧ್ವಾ ಧ್ವಜೌ ಚ ಸುಮಹಾಬಲೌ।
06048048c ರಥೇಷಾಂ ರಥಚಕ್ರೇ ಚ ಚಿಕ್ರೀಡತುರರಿಂದಮೌ।।

ಆ ಇಬ್ಬರು ಸುಮಹಾಬಲ ಅರಿಂದಮರು ಅನ್ಯೋನ್ಯರ ಕುದುರೆಗಳನ್ನೂ ರಥಗಳ ಈಷಾದಂಡಗಳನ್ನೂ, ರಥಚಕ್ರಗಳನ್ನೂ ಹೊಡೆದು ಆಟವಾಡುತ್ತಿದ್ದರು.

06048049a ತತಃ ಕ್ರುದ್ಧೋ ಮಹಾರಾಜ ಭೀಷ್ಮಃ ಪ್ರಹರತಾಂ ವರಃ।
06048049c ವಾಸುದೇವಂ ತ್ರಿಭಿರ್ಬಾಣೈರಾಜಘಾನ ಸ್ತನಾಂತರೇ।।

ಮಹಾರಾಜ! ಆಗ ಪ್ರಹರಿಗಳಲ್ಲಿ ಶ್ರೇಷ್ಠ ಭೀಷ್ಮನು ಕ್ರುದ್ಧನಾಗಿ ವಾಸುದೇವನ ಎದೆಗೆ ಮೂರು ಬಾಣಗಳಿಂದ ಹೊಡೆದನು.

06048050a ಭೀಷ್ಮಚಾಪಚ್ಯುತೈರ್ಬಾಣೈರ್ನಿರ್ವಿದ್ಧೋ ಮಧುಸೂದನಃ।
06048050c ವಿರರಾಜ ರಣೇ ರಾಜನ್ಸಪುಷ್ಪ ಇವ ಕಿಂಶುಕಃ।।

ರಾಜನ್! ಭೀಷ್ಮನ ಚಾಪದಿಂದ ಹೊರಟ ಬಾಣಗಳು ತಾಗಿದ ಮಧುಸೂದನನು ರಣದಲ್ಲಿ ಹೂಬಿಟ್ಟ ಕಿಂಶುಕದಂತೆ ರಾರಾಜಿಸಿದನು.

06048051a ತತೋಽರ್ಜುನೋ ಭೃಶಂ ಕ್ರುದ್ಧೋ ನಿರ್ವಿದ್ಧಂ ಪ್ರೇಕ್ಷ್ಯ ಮಾಧವಂ।
06048051c ಗಾಂಗೇಯಸಾರಥಿಂ ಸಂಖ್ಯೇ ನಿರ್ಬಿಭೇದ ತ್ರಿಭಿಃ ಶರೈಃ।।

ಆಗ ಪೆಟ್ಟುತಿಂದ ಮಾಧವನನ್ನು ನೋಡಿ ಕ್ರುದ್ಧನಾದ ಅರ್ಜುನನು ತುಂಬಾ ಕ್ರುದ್ಧನಾಗಿ ಯುದ್ಧದಲ್ಲಿ ಗಾಂಗೇಯನ ಸಾರಥಿಯನ್ನು ಮೂರು ಶರಗಳಿಂದ ಹೊಡೆದನು.

06048052a ಯತಮಾನೌ ತು ತೌ ವೀರಾವನ್ಯೋನ್ಯಸ್ಯ ವಧಂ ಪ್ರತಿ।
06048052c ನಾಶಕ್ನುತಾಂ ತದಾನ್ಯೋನ್ಯಮಭಿಸಂಧಾತುಮಾಹವೇ।।

ಆ ವೀರರಿಬ್ಬರೂ ಅನ್ಯೋನ್ಯರನ್ನು ವಧಿಸಲು ಪ್ರಯುತ್ನ ಮಾಡುತ್ತಿದ್ದರೂ ಯುದ್ಧದಲ್ಲಿ ಅನ್ಯೋನ್ಯರನ್ನು ಮೀರಲು ಶಕ್ಯರಾಗಲಿಲ್ಲ.

06048053a ಮಂಡಲಾನಿ ವಿಚಿತ್ರಾಣಿ ಗತಪ್ರತ್ಯಾಗತಾನಿ ಚ।
06048053c ಅದರ್ಶಯೇತಾಂ ಬಹುಧಾ ಸೂತಸಾಮರ್ಥ್ಯಲಾಘವಾತ್।।

ಮಂಡಲಾಕಾರವಾಗಿ, ವಿಚಿತ್ರವಾಗಿ, ಮುಂದೆ ಮತ್ತು ಹಿಂದೆ ಚಲಿಸುವುದು ಮೊದಲಾದ ಸಾಮರ್ಥ್ಯ ಲಾಘವಗಳನ್ನು ಸಾರಥಿಗಳು ತೋರಿಸಿಕೊಡುತ್ತಿದ್ದರು.

06048054a ಅಂತರಂ ಚ ಪ್ರಹಾರೇಷು ತರ್ಕಯಂತೌ ಮಹಾರಥೌ।
06048054c ರಾಜನ್ನಂತರಮಾರ್ಗಸ್ಥೌ ಸ್ಥಿತಾವಾಸ್ತಾಂ ಮುಹುರ್ಮುಹುಃ।।

ರಾಜನ್! ಪ್ರಹಾರಗಳ ಮಧ್ಯದಲ್ಲಿ ಇಬ್ಬರು ಮಹಾರಥರೂ ತರ್ಕಿಸುತ್ತಿದ್ದರು. ಪುನಃ ಪುನಃ ಮಧ್ಯಮಾರ್ಗವನ್ನು ಹಿಡಿದು ಯುದ್ಧಮಾಡುತ್ತಿದ್ದರು.

06048055a ಉಭೌ ಸಿಂಹರವೋನ್ಮಿಶ್ರಂ ಶಂಖಶಬ್ದಂ ಪ್ರಚಕ್ರತುಃ।
06048055c ತಥೈವ ಚಾಪನಿರ್ಘೋಷಂ ಚಕ್ರತುಸ್ತೌ ಮಹಾರಥೌ।।

ಇಬ್ಬರೂ ಸಿಂಹನಾದ ಮಿಶ್ರಿತ ಶಂಖಧ್ವನಿಯನ್ನು ಮಾಡುತ್ತಿದ್ದರು. ಹಾಗೆಯೇ ಇಬ್ಬರು ಮಹಾರಥರೂ ಧನುಷ್ಟೇಂಕಾರವನ್ನೂ ಮಾಡುತ್ತಿದ್ದರು.

06048056a ತಯೋಃ ಶಂಖಪ್ರಣಾದೇನ ರಥನೇಮಿಸ್ವನೇನ ಚ।
06048056c ದಾರಿತಾ ಸಹಸಾ ಭೂಮಿಶ್ಚಕಂಪ ಚ ನನಾದ ಚ।।

ಅವರ ಶಂಖಪ್ರಣಾದದಿಂದ ಮತ್ತು ರಥಚಕ್ರಗಳ ಶಬ್ಧದಿಂದ ಭೂಮಿಯು ಸೀಳಿ, ನಡುಗಿ ಮಹಾಶಬ್ಧವುಂಟಾಯಿತು.

06048057a ನ ತಯೋರಂತರಂ ಕಶ್ಚಿದ್ದದೃಶೇ ಭರತರ್ಷಭ।
06048057c ಬಲಿನೌ ಸಮರೇ ಶೂರಾವನ್ಯೋನ್ಯಸದೃಶಾವುಭೌ।।

ಭರತರ್ಷಭ! ಅವರಿಬ್ಬರಲ್ಲಿ ಯಾವುದೇ ಅಂತರವು ಕಾಣಲಿಲ್ಲ. ಸಮರದಲ್ಲಿ ಆ ಬಲಿ ಶೂರರಿಬ್ಬರೂ ಅನ್ಯೋನ್ಯರಂತೆಯೇ ಇದ್ದರು.

06048058a ಚಿಹ್ನಮಾತ್ರೇಣ ಭೀಷ್ಮಂ ತು ಪ್ರಜಜ್ಞುಸ್ತತ್ರ ಕೌರವಾಃ।
06048058c ತಥಾ ಪಾಂಡುಸುತಾಃ ಪಾರ್ಥಂ ಚಿಹ್ನಮಾತ್ರೇಣ ಜಜ್ಞಿರೇ।।

ಕೌರವರು ಧ್ವಜಚಿಹ್ನೆಯಿಂದ ಮಾತ್ರ ಭೀಷ್ಮನನ್ನು ಗುರುತಿಸುತ್ತಿದ್ದರು. ಹಾಗೆಯೇ ಪಾಂಡುಸುತರು ಪಾರ್ಥನನ್ನು ಕೇವಲ ಧ್ವಜಚಿಹ್ನೆಯಿಂದ ಗುರುತಿಸುತ್ತಿದ್ದರು.

06048059a ತಯೋರ್ನೃವರಯೋ ರಾಜನ್ದೃಶ್ಯ ತಾದೃಕ್ಪರಾಕ್ರಮಂ।
06048059c ವಿಸ್ಮಯಂ ಸರ್ವಭೂತಾನಿ ಜಗ್ಮುರ್ಭಾರತ ಸಂಯುಗೇ।।

ರಾಜನ್! ಭಾರತ! ಸಂಯುಗದಲ್ಲಿ ಆ ನರಶ್ರೇಷ್ಠರ ಅಂಥಹ ಪರಾಕ್ರಮವನ್ನು ನೋಡಿ ಸರ್ವಭೂತಗಳೂ ವಿಸ್ಮಯಗೊಂಡವು.

06048060a ನ ತಯೋರ್ವಿವರಂ ಕಶ್ಚಿದ್ರಣೇ ಪಶ್ಯತಿ ಭಾರತ।
06048060c ಧರ್ಮೇ ಸ್ಥಿತಸ್ಯ ಹಿ ಯಥಾ ನ ಕಶ್ಚಿದ್ವೃಜಿನಂ ಕ್ವ ಚಿತ್।।

ಭಾರತ! ಹೇಗೆ ಧರ್ಮದಲ್ಲಿ ಸ್ಥಿತನಾಗಿರುವವನಲ್ಲಿ ಯಾವುದೇ ರೀತಿಯ ನ್ಯೂನತೆಗಳು ಕಂಡುಬರುವುದಿಲ್ಲವೋ ಹಾಗೆ ಅವರಿಬ್ಬರಲ್ಲಿ ಯಾವುದೇ ರೀತಿಯ ಕುಂದುಗಳು ಕಾಣುತ್ತಿರಲಿಲ್ಲ.

06048061a ಉಭೌ ಹಿ ಶರಜಾಲೇನ ತಾವದೃಶ್ಯೌ ಬಭೂವತುಃ।
06048061c ಪ್ರಕಾಶೌ ಚ ಪುನಸ್ತೂರ್ಣಂ ಬಭೂವತುರುಭೌ ರಣೇ।।

ಇಬ್ಬರೂ ಬಾಣಗಳ ಬಲೆಗಳಿಂದ ಮುಚ್ಚಿಹೋಗಿರುವುದು ಕಾಣುತ್ತಿತ್ತು. ಪುನಃ ತಕ್ಷಣವೇ ಇಬ್ಬರೂ ರಣದಲ್ಲಿ ಪ್ರಕಾಶಮಾನರಾಗಿರುತ್ತಿದ್ದರು.

06048062a ತತ್ರ ದೇವಾಃ ಸಗಂಧರ್ವಾಶ್ಚಾರಣಾಶ್ಚ ಸಹರ್ಷಿಭಿಃ।
06048062c ಅನ್ಯೋನ್ಯಂ ಪ್ರತ್ಯಭಾಷಂತ ತಯೋರ್ದೃಷ್ಟ್ವಾ ಪರಾಕ್ರಮಂ।।

ಅಲ್ಲಿ ಅವರ ಪರಾಕ್ರಮವನ್ನು ಕಂಡು ದೇವತೆಗಳು, ಗಂಧರ್ವ-ಚಾರಣ-ಋಷಿಗಳೊಂದಿಗೆ ಅನ್ಯೋನ್ಯರಲ್ಲಿ ಮಾತನಾಡಿಕೊಳ್ಳುತ್ತಿದ್ದರು.

06048063a ನ ಶಕ್ಯೌ ಯುಧಿ ಸಂರಬ್ಧೌ ಜೇತುಮೇತೌ ಮಹಾರಥೌ।
06048063c ಸದೇವಾಸುರಗಂಧರ್ವೈರ್ಲೋಕೈರಪಿ ಕಥಂ ಚನ।।

“ಯುದ್ಧದಲ್ಲಿ ಮಗ್ನರಾಗಿರುವ ಈ ಇಬ್ಬರು ಮಹಾರಥರನ್ನು ಗೆಲ್ಲಲು ದೇವಾಸುರಗಂಧರ್ವರಿಂದಲೂ ಲೋಕಗಳಿಂದಲೂ ಎಂದೂ ಸಾಧ್ಯವಿಲ್ಲ.

06048064a ಆಶ್ಚರ್ಯಭೂತಂ ಲೋಕೇಷು ಯುದ್ಧಮೇತನ್ಮಹಾದ್ಭುತಂ।
06048064c ನೈತಾದೃಶಾನಿ ಯುದ್ಧಾನಿ ಭವಿಷ್ಯಂತಿ ಕಥಂ ಚನ।।

ಮಹಾದ್ಭುತವಾದ ಈ ಯುದ್ಧವು ಲೋಕಗಳಲ್ಲಿ ಆಶ್ಚರ್ಯವನ್ನುಂಟುಮಾಡುತ್ತಿದೆ. ಹೀಗೆ ಕಾಣುವ ಯುದ್ಧವು ಮುಂದೆ ಎಂದೂ ನಡೆಯಲಿಕ್ಕಿಲ್ಲ.

06048065a ನಾಪಿ ಶಕ್ಯೋ ರಣೇ ಜೇತುಂ ಭೀಷ್ಮಃ ಪಾರ್ಥೇನ ಧೀಮತಾ।
06048065c ಸಧನುಶ್ಚ ರಥಸ್ಥಶ್ಚ ಪ್ರವಪನ್ ಸಾಯಕಾನ್ರಣೇ।।

ಧನುಸ್ಸು ರಥಗಳೊಂದಿಗೆ ರಣದಲ್ಲಿ ಸಾಯಕಗಳನ್ನು ಬಿತ್ತುತ್ತಿರುವ ಭೀಷ್ಮನನ್ನು ಧೀಮತ ಪಾರ್ಥನು ಗೆಲ್ಲಲಾರ.

06048066a ತಥೈವ ಪಾಂಡವಂ ಯುದ್ಧೇ ದೇವೈರಪಿ ದುರಾಸದಂ।
06048066c ನ ವಿಜೇತುಂ ರಣೇ ಭೀಷ್ಮ ಉತ್ಸಹೇತ ಧನುರ್ಧರಂ।।

ಹಾಗೆಯೇ ಯುದ್ಧದಲ್ಲಿ ದೇವತೆಗಳಿಗೂ ದುರಾಸದನಾದ ಧನುರ್ಧರ ಪಾಂಡವನನ್ನು ರಣದಲ್ಲಿ ಗೆಲ್ಲಲು ಭೀಷ್ಮನಿಗೂ ಸಾಧ್ಯವಿಲ್ಲ.”

06048067a ಇತಿ ಸ್ಮ ವಾಚಃ ಶ್ರೂಯಂತೇ ಪ್ರೋಚ್ಚರಂತ್ಯಸ್ತತಸ್ತತಃ।
06048067c ಗಾಂಗೇಯಾರ್ಜುನಯೋಃ ಸಂಖ್ಯೇ ಸ್ತವಯುಕ್ತಾ ವಿಶಾಂ ಪತೇ।।

ವಿಶಾಂಪತೇ! ಗಾಂಗೇಯ-ಅರ್ಜುನರ ಯುದ್ಧವನ್ನು ಪ್ರಶಂಸಿಸುವ ಈ ಮಾತುಗಳು ಎಲ್ಲ ಕಡೆಯಿಂದಲೂ ಕೇಳಿ ಬರುತ್ತಿದ್ದವು.

06048068a ತ್ವದೀಯಾಸ್ತು ತತೋ ಯೋಧಾಃ ಪಾಂಡವೇಯಾಶ್ಚ ಭಾರತ।
06048068c ಅನ್ಯೋನ್ಯಂ ಸಮರೇ ಜಘ್ನುಸ್ತಯೋಸ್ತತ್ರ ಪರಾಕ್ರಮೇ।।

ಭಾರತ! ಆಗ ನಿನ್ನ ಮತ್ತು ಪಾಂಡವೇಯರ ಯೋಧರು ಸಮರದಲ್ಲಿ ಪರಾಕ್ರಮದಿಂದ ಅನ್ಯೋನ್ಯರನ್ನು ಸಂಹರಿಸಿದರು.

06048069a ಶಿತಧಾರೈಸ್ತಥಾ ಖಡ್ಗೈರ್ವಿಮಲೈಶ್ಚ ಪರಶ್ವಧೈಃ।
06048069c ಶರೈರನ್ಯೈಶ್ಚ ಬಹುಭಿಃ ಶಸ್ತ್ರೈರ್ನಾನಾವಿಧೈರ್ಯುಧಿ।
06048069e ಉಭಯೋಃ ಸೇನಯೋರ್ವೀರಾ ನ್ಯಕೃಂತಂತ ಪರಸ್ಪರಂ।।

ಹರಿತ ಅಲಗಿನ ಖಡ್ಗಗಳಿಂದ, ಫಳ-ಫಳಿಸುವ ಪರಶುಗಳಿಂದ, ಶರಗಳಿಂದ, ನಾನಾವಿಧದ ಅನೇಕ ಶಸ್ತ್ರಗಳಿಂದ ಎರಡೂ ಸೇನೆಗಳ ವೀರರು ಪರಸ್ಪರರನ್ನು ಯುದ್ಧದಲ್ಲಿ ಕಡಿದುರುಳಿಸುತ್ತಿದ್ದರು.

06048070a ವರ್ತಮಾನೇ ತಥಾ ಘೋರೇ ತಸ್ಮಿನ್ಯುದ್ಧೇ ಸುದಾರುಣೇ।
06048070c ದ್ರೋಣಪಾಂಚಾಲ್ಯಯೋ ರಾಜನ್ಮಹಾನಾಸೀತ್ಸಮಾಗಮಃ।।

ರಾಜನ್! ಹೀಗೆ ಸುದಾರುಣವಾದ ಘೋರ ಯುದ್ಧವು ನಡೆಯುತ್ತಿರಲು ದ್ರೋಣ ಮತ್ತು ಪಾಂಚಾಲ್ಯನ ನಡುವೆ ಮಹಾ ದ್ವಂದ್ವಯುದ್ಧವು ನಡೆಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮಾರ್ಜುನಯುದ್ಧೇ ಅಷ್ಠಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮಾರ್ಜುನಯುದ್ಧ ಎನ್ನುವ ನಲ್ವತ್ತೆಂಟನೇ ಅಧ್ಯಾಯವು.