ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 43
ಸಾರ
ಭೀಷ್ಮಾರ್ಜುನರ, ಸಾತ್ಯಕಿ-ಕೃತವರ್ಮರ, ಅಭಿಮನ್ಯು-ಬೃಹದ್ಬಲರ, ಭೀಮಸೇನ-ದುರ್ಯೋಧನರ, ನಕುಲ-ದುಃಶಾಸನರ, ಸಹದೇವ-ದುರ್ಮುಖರ, ಯುಧಿಷ್ಠಿರ-ಶಲ್ಯರ, ಧೃಷ್ಟದ್ಯುಮ್ನ-ದ್ರೋಣರ, ಶಂಖ-ಭೂರಿಶ್ರವರ, ಧೃಷ್ಟಕೇತು-ಬಾಹ್ಲೀಕರ, ಘಟೋತ್ಕಚ-ಅಲಂಬುಸರ, ಶಿಖಂಡಿ-ಅಶ್ವತ್ಥಾಮರ, ವಿರಾಟ-ಭಗದತ್ತರ, ಕೃಪ-ಬೃಹತ್ಕ್ಷತ್ರರ, ದ್ರುಪದ-ಜಯದ್ರಥರ, ಸುತಸೋಮ-ವಿಕರ್ಣರ, ಚೇಕಿತಾನ-ಸುಶರ್ಮರ, ಶಕುನಿ-ಪ್ರತಿವಿಂದ್ಯರ, ಶ್ರುತಕರ್ಮ-ಸುದಕ್ಷಿಣರ, ಇರಾವಾನ-ಶೃತಾಯುಷರ, ಕುಂತಿಭೋಜ-ವಿಂದಾನುವಿಂದರ, ಐವರು ಕೇಕಯ ಸಹೋದರರು- ಐವರು ಗಾಂಧಾರ ಸಹೋದರರ, ಉತ್ತರ-ವೀರಬಾಹು, ಚೇದಿರಾಜ-ಉಲೂಕರ ದ್ವಂದ್ವಯುದ್ಧ (1-83)
06043001 ಸಂಜಯ ಉವಾಚ।
06043001a ಪೂರ್ವಾಹ್ಣೇ ತಸ್ಯ ರೌದ್ರಸ್ಯ ಯುದ್ಧಮಹ್ನೋ ವಿಶಾಂ ಪತೇ।
06043001c ಪ್ರಾವರ್ತತ ಮಹಾಘೋರಂ ರಾಜ್ಞಾಂ ದೇಹಾವಕರ್ತನಂ।।
ಸಂಜಯನು ಹೇಳಿದನು: “ವಿಶಾಂಪತೇ! ಆ ರೌದ್ರ ದಿವಸದ ಪೂರ್ವಾಹ್ಣದಲ್ಲಿ ರಾಜರ ದೇಹವನ್ನು ತುಂಡರಿಸುವ ಮಹಾಘೋರ ಯುದ್ಧವು ಪ್ರಾರಂಭವಾಯಿತು.
06043002a ಕುರೂಣಾಂ ಪಾಂಡವಾನಾಂ ಚ ಸಂಗ್ರಾಮೇ ವಿಜಿಗೀಷತಾಂ।
06043002c ಸಿಂಹಾನಾಮಿವ ಸಂಹ್ರಾದೋ ದಿವಮುರ್ವೀಂ ಚ ನಾದಯನ್।।
ಸಂಗ್ರಾಮದಲ್ಲಿ ಜಯವನ್ನು ಬಯಸಿದ ಕುರುಗಳ ಮತ್ತು ಪಾಂಡವರ ಸಿಂಹಗಳದ್ದಂತಿರುವ ಕೋಪದ ಕೂಗು ಭೂಮಿ-ಆಕಾಶಗಳಲ್ಲಿ ಮೊಳಗಿತು.
06043003a ಆಸೀತ್ಕಿಲಕಿಲಾಶಬ್ದಸ್ತಲಶಂಖರವೈಃ ಸಹ।
06043003c ಜಜ್ಞಿರೇ ಸಿಂಹನಾದಾಶ್ಚ ಶೂರಾಣಾಂ ಪ್ರತಿಗರ್ಜತಾಂ।।
ಅಂಗೈಗಳ ಕಿಲ ಕಿಲ ಶಬ್ಧವು ಶಂಖದ ಶಬ್ಧದೊಂದಿಗೆ ಸೇರಿತು. ಪ್ರತಿಗರ್ಜಿಸುತ್ತಿರುವ ಶೂರರ ಸಿಂಹನಾದಗಳೂ ಉದ್ಭವಿಸಿದವು.
06043004a ತಲತ್ರಾಭಿಹತಾಶ್ಚೈವ ಜ್ಯಾಶಬ್ದಾ ಭರತರ್ಷಭ।
06043004c ಪತ್ತೀನಾಂ ಪಾದಶಬ್ದಾಶ್ಚ ವಾಜಿನಾಂ ಚ ಮಹಾಸ್ವನಾಃ।।
06043005a ತೋತ್ತ್ರಾಂಕುಶನಿಪಾತಾಶ್ಚ ಆಯುಧಾನಾಂ ಚ ನಿಸ್ವನಾಃ।
06043005c ಘಂಟಾಶಬ್ದಾಶ್ಚ ನಾಗಾನಾಮನ್ಯೋನ್ಯಮಭಿಧಾವತಾಂ।।
06043006a ತಸ್ಮಿನ್ಸಮುದಿತೇ ಶಬ್ದೇ ತುಮುಲೇ ಲೋಮಹರ್ಷಣೇ।
06043006c ಬಭೂವ ರಥನಿರ್ಘೋಷಃ ಪರ್ಜನ್ಯನಿನದೋಪಮಃ।।
ಭರತರ್ಷಭ! ಚಪ್ಪಾಳೆಗಳ ಹೊಡೆತದ ಶಬ್ಧ, ಬಿಲ್ಲಿನ ಠೇಂಕಾರ, ಪದಾತಿಗಳ ಪಾದಶಬ್ಧ, ಕುದುರೆಗಳ ಹೀಂಕಾರ, ಅಂಕುಶಗಳು ಮತ್ತು ಆಯುಧಗಳು ಬೀಳುವ ಶಬ್ಧ, ಅನ್ಯೋನ್ಯರನ್ನು ಹೊಡೆಯುತ್ತಿರುವ ಆನೆಗಳ ಗಂಟೆಗಳ ಶಬ್ಧ, ಮತ್ತು ಗುಡುಗಿನಂತಿರುವ ರಥನಿರ್ಘೋಷ ಈ ಎಲ್ಲ ಲೋಮಹರ್ಷಣ ತುಮುಲ ಶಬ್ಧಗಳು ಕೇಳಿಬಂದವು.
06043007a ತೇ ಮನಃ ಕ್ರೂರಮಾಧಾಯ ಸಮಭಿತ್ಯಕ್ತಜೀವಿತಾಃ।
06043007c ಪಾಂಡವಾನಭ್ಯವರ್ತಂತ ಸರ್ವ ಏವೋಚ್ಛ್ರಿತಧ್ವಜಾಃ।।
ಅವರು ಎಲ್ಲರೂ ಮನಸ್ಸನ್ನು ಕ್ರೂರಮಾಡಿಕೊಂಡು ಜೀವಿತವನ್ನು ತ್ಯಜಿಸಿ ಧ್ವಜಗಳನ್ನು ಮೇಲೆತ್ತಿ ಹಿಡಿದು ಪಾಂಡವರ ಮೇಲೆ ಆಕ್ರಮಣ ಮಾಡಿದರು.
06043008a ಸ್ವಯಂ ಶಾಂತನವೋ ರಾಜನ್ನಭ್ಯಧಾವದ್ಧನಂಜಯಂ।
06043008c ಪ್ರಗೃಹ್ಯ ಕಾರ್ಮುಕಂ ಘೋರಂ ಕಾಲದಂಡೋಪಮಂ ರಣೇ।।
ರಾಜನ್! ಸ್ವಯಂ ಶಾಂತನವನು ಕಾಲದಂಡದಂತಿರುವ ಘೋರ ಕಾರ್ಮುಕವನ್ನು ಹಿಡಿದು ಧನಂಜಯನನ್ನು ಆಕ್ರಮಣಿಸಿದನು.
06043009a ಅರ್ಜುನೋಽಪಿ ಧನುರ್ಗೃಹ್ಯ ಗಾಂಡೀವಂ ಲೋಕವಿಶ್ರುತಂ।
06043009c ಅಭ್ಯಧಾವತ ತೇಜಸ್ವೀ ಗಾಂಗೇಯಂ ರಣಮೂರ್ಧನಿ।।
ತೇಜಸ್ವಿ ಅರ್ಜುನನೂ ಕೂಡ ಲೋಕವಿಶ್ರುತ ಗಾಂಡೀವ ಧನುಸ್ಸನ್ನು ಹಿಡಿದು ರಣಮೂರ್ಧನಿಯಲ್ಲಿ ಗಾಂಗೇಯನ ಮೇಲೆ ಎರಗಿದನು.
06043010a ತಾವುಭೌ ಕುರುಶಾರ್ದೂಲೌ ಪರಸ್ಪರವಧೈಷಿಣೌ।
06043010c ಗಾಂಗೇಯಸ್ತು ರಣೇ ಪಾರ್ಥಂ ವಿದ್ಧ್ವಾ ನಾಕಂಪಯದ್ಬಲೀ।
06043010e ತಥೈವ ಪಾಂಡವೋ ರಾಜನ್ಭೀಷ್ಮಂ ನಾಕಂಪಯದ್ಯುಧಿ।।
ಅವರಿಬ್ಬರು ಕುರುಶಾರ್ದೂಲರೂ ಪರಸ್ಪರರನ್ನು ವಧಿಸಲು ಬಯಸಿದ್ದರು. ಬಲೀ ಗಾಂಗೇಯನಾದರೋ ರಣದಲ್ಲಿ ಪಾರ್ಥನನ್ನು ಹೊಡೆದು ಅಲುಗಾಡಿಸಲೂ ಆಗಲಿಲ್ಲ. ರಾಜನ್! ಹಾಗೆಯೇ ಪಾಂಡವನಿಗೂ ಕೂಡ ಯುದ್ಧದಲ್ಲಿ ಭೀಷ್ಮನನ್ನು ಅಲುಗಾಡಿಸಲೂ ಆಗಲಿಲ್ಲ.
06043011a ಸಾತ್ಯಕಿಶ್ಚ ಮಹೇಷ್ವಾಸಃ ಕೃತವರ್ಮಾಣಮಭ್ಯಯಾತ್।
06043011c ತಯೋಃ ಸಮಭವದ್ಯುದ್ಧಂ ತುಮುಲಂ ಲೋಮಹರ್ಷಣಂ।।
ಮಹೇಷ್ವಾಸ ಸಾತ್ಯಕಿಯು ಕೃತವರ್ಮನನ್ನು ಎದುರಿಸಿದನು. ಅವರ ಮಧ್ಯೆ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು.
06043012a ಸಾತ್ಯಕಿಃ ಕೃತವರ್ಮಾಣಂ ಕೃತವರ್ಮಾ ಚ ಸಾತ್ಯಕಿಂ।
06043012c ಆನರ್ಚತುಃ ಶರೈರ್ಘೋರೈಸ್ತಕ್ಷಮಾಣೌ ಪರಸ್ಪರಂ।।
ಸಾತ್ಯಕಿಯು ಕೃತವರ್ಮನನ್ನೂ ಕೃತವರ್ಮನು ಸಾತ್ಯಕಿಯನ್ನೂ ಘೋರ ಶರಗಳಿಂದ ಹೊಡೆದು ಚುಚ್ಚಿ ಪರಸ್ಪರರನ್ನು ದುರ್ಬಲಗೊಳಿಸಿದರು.
06043013a ತೌ ಶರಾಚಿತಸರ್ವಾಂಗೌ ಶುಶುಭಾತೇ ಮಹಾಬಲೌ।
06043013c ವಸಂತೇ ಪುಷ್ಪಶಬಲೌ ಪುಷ್ಪಿತಾವಿವ ಕಿಂಶುಕೌ।।
ಸರ್ವಾಂಗಗಳಲ್ಲಿಯೂ ಬಾಣಗಳಿಂದ ಗಾಯಗೊಂಡ ಅವರಿಬ್ಬರು ಮಹಾಬಲರೂ ವಸಂತದಲ್ಲಿ ಹೂಬಿಟ್ಟಿರುವ ಕುಂಶುಕ ವೃಕ್ಷಗಳಂತೆ ಶೋಭಿಸಿದರು.
06043014a ಅಭಿಮನ್ಯುರ್ಮಹೇಷ್ವಾಸೋ ಬೃಹದ್ಬಲಮಯೋಧಯತ್।
06043014c ತತಃ ಕೋಸಲಕೋ ರಾಜಾ ಸೌಭದ್ರಸ್ಯ ವಿಶಾಂ ಪತೇ।।
06043014e ಧ್ವಜಂ ಚಿಚ್ಛೇದ ಸಮರೇ ಸಾರಥಿಂ ಚ ನ್ಯಪಾತಯತ್।।
ಮಹೇಷ್ವಾಸ ಅಭಿಮನ್ಯುವು ಬೃಹದ್ಬಲನೊಂದಿಗೆ ಯುದ್ಧಮಾಡಿದನು. ವಿಶಾಂಪತೇ! ಆಗ ಸಮರದಲ್ಲಿ ಕೋಸಲಕ ರಾಜನು ಸೌಭದ್ರಿಯ ಧ್ವಜವನ್ನು ತುಂಡರಿಸಿದನು ಮತ್ತು ಸಾರಥಿಯನ್ನು ಬೀಳಿಸಿದನು.
06043015a ಸೌಭದ್ರಸ್ತು ತತಃ ಕ್ರುದ್ಧಃ ಪಾತಿತೇ ರಥಸಾರಥೌ।
06043015c ಬೃಹದ್ಬಲಂ ಮಹಾರಾಜ ವಿವ್ಯಾಧ ನವಭಿಃ ಶರೈಃ।।
ಮಹಾರಾಜ! ಆಗ ಸೌಭದ್ರಿಯಾದರೂ ರಥಸಾರಥಿಗಳನ್ನು ಉರುಳಿಸಿದುದಕ್ಕೆ ಕ್ರುದ್ಧನಾಗಿ ಬೃಹದ್ಬಲನನ್ನು ಒಂಭತ್ತು ಶರಗಳಿಂದ ಹೊಡೆದನು.
06043016a ಅಥಾಪರಾಭ್ಯಾಂ ಭಲ್ಲಾಭ್ಯಾಂ ಪೀತಾಭ್ಯಾಮರಿಮರ್ದನಃ।
06043016c ಧ್ವಜಮೇಕೇನ ಚಿಚ್ಛೇದ ಪಾರ್ಷ್ಣಿಮೇಕೇನ ಸಾರಥಿಂ।
06043016e ಅನ್ಯೋನ್ಯಂ ಚ ಶರೈಸ್ತೀಕ್ಷ್ಣೈಃ ಕ್ರುದ್ಧೌ ರಾಜಂಸ್ತತಕ್ಷತುಃ।।
ಇತರ ಎರಡು ಭಲ್ಲಗಳಿಂದ ಅರಿಮರ್ದನನು ಅವನ ಧ್ವಜವನ್ನು ಕತ್ತರಿಸಿದನು, ಒಂದರಿಂದ ಚಕ್ರರಕ್ಷಕರನ್ನೂ ಮತ್ತು ಒಂದರಿಂದ ಸಾರಥಿಯನ್ನೂ ಹೊಡೆದನು. ರಾಜನ್! ಅವರಿಬ್ಬರೂ ಕ್ರುದ್ಧರಾಗಿ ಅನ್ಯೋನ್ಯರನ್ನು ತೀಕ್ಷ್ಣ ಶರಗಳಿಂದ ದುರ್ಬಲಗೊಳಿಸಿದರು.
06043017a ಮಾನಿನಂ ಸಮರೇ ದೃಪ್ತಂ ಕೃತವೈರಂ ಮಹಾರಥಂ।
06043017c ಭೀಮಸೇನಸ್ತವ ಸುತಂ ದುರ್ಯೋಧನಮಯೋಧಯತ್।।
ಸಮರದಲ್ಲಿ ಭೀಮಸೇನನು ಆ ಮಾನಿನಿ, ದರ್ಪಿ, ವೈರವನ್ನು ಸಾಧಿಸಿದ, ಮಹಾರಥ ನಿನ್ನ ಮಗ ದುರ್ಯೋಧನನೊಂದಿಗೆ ಯುದ್ಧಮಾಡಿದನು.
06043018a ತಾವುಭೌ ನರಶಾರ್ದೂಲೌ ಕುರುಮುಖ್ಯೌ ಮಹಾಬಲೌ।
06043018c ಅನ್ಯೋನ್ಯಂ ಶರವರ್ಷಾಭ್ಯಾಂ ವವೃಷಾತೇ ರಣಾಜಿರೇ।।
ಆ ಇಬ್ಬರು ನರಶಾರ್ದೂಲರೂ, ಕುರುಮುಖ್ಯರೂ, ಮಹಾಬಲರೂ ರಣದಲ್ಲಿ ಅನ್ಯೋನ್ಯರ ಮೇಲೆ ಶರವರ್ಷಗಳನ್ನು ಸುರಿಸಿ ಹೋರಾಡಿದರು.
06043019a ತೌ ತು ವೀಕ್ಷ್ಯ ಮಹಾತ್ಮಾನೌ ಕೃತಿನೌ ಚಿತ್ರಯೋಧಿನೌ।
06043019c ವಿಸ್ಮಯಃ ಸರ್ವಭೂತಾನಾಂ ಸಮಪದ್ಯತ ಭಾರತ।।
ಭಾರತ! ಆ ಮಹಾತ್ಮ, ಕೃತಕೃತ್ಯ, ಚಿತ್ರಯೋಧಿಗಳಿಬ್ಬರನ್ನೂ ನೋಡಿ ಸರ್ವಭೂತಗಳಿಗೂ ವಿಸ್ಮಯವುಂಟಾಯಿತು.
06043020a ದುಃಶಾಸನಸ್ತು ನಕುಲಂ ಪ್ರತ್ಯುದ್ಯಾಯ ಮಹಾರಥಂ।
06043020c ಅವಿಧ್ಯನ್ನಿಶಿತೈರ್ಬಾಣೈರ್ಬಹುಭಿರ್ಮರ್ಮಭೇದಿಭಿಃ।।
ದುಃಶಾಸನನಾದರೋ ಮಹಾರಥ ನಕುಲನೊಂದಿಗೆ ಯುದ್ಧಮಾಡಿದನು ಮತ್ತು ಬಹಳಷ್ಟು ಮರ್ಮಭೇದಿ ನಿಶಿತ ಬಾಣಗಳಿಂದ ಹೊಡೆದನು.
06043021a ತಸ್ಯ ಮಾದ್ರೀಸುತಃ ಕೇತುಂ ಸಶರಂ ಚ ಶರಾಸನಂ।
06043021c ಚಿಚ್ಛೇದ ನಿಶಿತೈರ್ಬಾಣೈಃ ಪ್ರಹಸನ್ನಿವ ಭಾರತ।
06043021e ಅಥೈನಂ ಪಂಚವಿಂಶತ್ಯಾ ಕ್ಷುದ್ರಕಾಣಾಂ ಸಮಾರ್ದಯತ್।।
ಭಾರತ! ಮಾದ್ರೀಸುತನು ನಸುನಗುತ್ತಾ ನಿಶಿತ ಬಾಣಗಳಿಂದ ಅವನ ಧ್ವಜವನ್ನೂ, ಶರಗಳನ್ನೂ, ಧ್ವಜವನ್ನೂ ತುಂಡರಿಸಿದನು. ಇನ್ನೂ ಇಪ್ಪತ್ತೈದು ಕ್ಷುದ್ರಕ (ತಲೆ ಚಿಕ್ಕದಾಗಿರುವ ಬಾಣ) ಗಳಿಂದ ಅವನನ್ನು ಗಾಯಗೊಳಿಸಿದನು.
06043022a ಪುತ್ರಸ್ತು ತವ ದುರ್ಧರ್ಷೋ ನಕುಲಸ್ಯ ಮಹಾಹವೇ।
06043022c ಯುಗೇಷಾಂ ಚಿಚ್ಛಿದೇ ಬಾಣೈರ್ಧ್ವಜಂ ಚೈವ ನ್ಯಪಾತಯತ್।।
ನಿನ್ನ ದುರ್ಧರ್ಷ ಪುತ್ರನಾದರೋ ಮಹಾಹವದಲ್ಲಿ ಎರಡು ಬಾಣಗಳಿಂದ ನಕುಲನ ಧ್ವಜವನ್ನು ಉರುಳಿಸಿದನು.
06043023a ದುರ್ಮುಖಃ ಸಹದೇವಂ ತು ಪ್ರತ್ಯುದ್ಯಾಯ ಮಹಾಬಲಂ।
06043023c ವಿವ್ಯಾಧ ಶರವರ್ಷೇಣ ಯತಮಾನಂ ಮಹಾಹವೇ।।
ದುರ್ಮುಖನು ಮಹಾಬಲ ಸಹದೇವನನ್ನು ಎದುರಿಸಿ ಯುದ್ಧಮಾಡಿದನು. ಮಹಾಹವದಲ್ಲಿ ಯುದ್ಧಮಾಡುತ್ತಾ ಶರವರ್ಷಗಳಿಂದ ಹೊಡೆದನು.
06043024a ಸಹದೇವಸ್ತತೋ ವೀರೋ ದುರ್ಮುಖಸ್ಯ ಮಹಾಹವೇ।
06043024c ಶರೇಣ ಭೃಶತೀಕ್ಷ್ಣೇನ ಪಾತಯಾಮಾಸ ಸಾರಥಿಂ।।
ಆಗ ವೀರ ಸಹದೇವನು ಮಹಾಹವದಲ್ಲಿ ಅತಿ ತೀಕ್ಷ್ಣ ಶರದಿಂದ ದುರ್ಮುಖನ ಸಾರಥಿಯನ್ನು ಕೆಳಗುರುಳಿಸಿದನು.
06043025a ತಾವನ್ಯೋನ್ಯಂ ಸಮಾಸಾದ್ಯ ಸಮರೇ ಯುದ್ಧದುರ್ಮದೌ।
06043025c ತ್ರಾಸಯೇತಾಂ ಶರೈರ್ಘೋರೈಃ ಕೃತಪ್ರತಿಕೃತೈಷಿಣೌ।।
ಆ ಇಬ್ಬರು ಯುದ್ಧ ದುರ್ಮದರೂ ಸಮರದಲ್ಲಿ ಅನ್ಯೋನ್ಯರನ್ನು ಎದುರಿಸಿ ಹೊಡೆಯಲು ಮತ್ತು ತಿರುಗಿ ಹೊಡೆಯಲು ಬಯಸಿ ಘೋರ ಶರಗಳಿಂದ ಪರಸ್ಪರರನ್ನು ಪೀಡಿಸಿದರು.
06043026a ಯುಧಿಷ್ಠಿರಃ ಸ್ವಯಂ ರಾಜಾ ಮದ್ರರಾಜಾನಮಭ್ಯಯಾತ್।
06043026c ತಸ್ಯ ಮದ್ರಾಧಿಪಶ್ಚಾಪಂ ದ್ವಿಧಾ ಚಿಚ್ಛೇದ ಮಾರಿಷ।।
ಸ್ವಯಂ ರಾಜಾ ಯುಧಿಷ್ಠಿರನು ಮದ್ರರಾಜನನ್ನು ಎದುರಿಸಿದನು. ಮದ್ರಾಧಿಪನು ಅವನು ನೋಡುತ್ತಿದ್ದಂತೆಯೇ ಅವನ ಚಾಪವನ್ನು ಎರಡಾಗಿ ತುಂಡರಿಸಿದನು.
06043027a ತದಪಾಸ್ಯ ಧನುಶ್ಚಿನ್ನಂ ಕುಂತೀಪುತ್ರೋ ಯುಧಿಷ್ಠಿರಃ।
06043027c ಅನ್ಯತ್ಕಾರ್ಮುಕಮಾದಾಯ ವೇಗವದ್ಬಲವತ್ತರಂ।।
ತುಂಡಾದ ಧನುಸ್ಸನ್ನು ಬಿಸುಟು ಕುಂತೀಪುತ್ರ ಯುಧಿಷ್ಠಿರನು ವೇಗದಿಂದ ಬಲವತ್ತರವಾದ ಇನ್ನೊಂದು ಕಾರ್ಮುಕವನ್ನು ತೆಗೆದುಕೊಂಡನು.
06043028a ತತೋ ಮದ್ರೇಶ್ವರಂ ರಾಜಾ ಶರೈಃ ಸನ್ನತಪರ್ವಭಿಃ।
06043028c ಚಾದಯಾಮಾಸ ಸಂಕ್ರುದ್ಧಸ್ತಿಷ್ಠ ತಿಷ್ಠೇತಿ ಚಾಬ್ರವೀತ್।।
ಆಗ ರಾಜನು ಸನ್ನತಪರ್ವ ಶರಗಳಿಂದ ಮದ್ರೇಶ್ವರನನ್ನು ಹೊಡೆದು ಸಂಕ್ರುದ್ಧನಾಗಿ “ನಿಲ್ಲು! ನಿಲ್ಲು!” ಎಂದು ಹೇಳಿದನು.
06043029a ಧೃಷ್ಟದ್ಯುಮ್ನಸ್ತತೋ ದ್ರೋಣಮಭ್ಯದ್ರವತ ಭಾರತ।
06043029c ತಸ್ಯ ದ್ರೋಣಃ ಸುಸಂಕ್ರುದ್ಧಃ ಪರಾಸುಕರಣಂ ದೃಢಂ।।
06043029e ತ್ರಿಧಾ ಚಿಚ್ಛೇದ ಸಮರೇ ಯತಮಾನಸ್ಯ ಕಾರ್ಮುಕಂ।।
ಭಾರತ! ಆಗ ಧೃಷ್ಟದ್ಯುಮ್ನನು ದ್ರೋಣನನ್ನು ಎದುರಿಸಿದನು. ಸಂಕ್ರುದ್ಧನಾದ ದ್ರೋಣನು ಸಮರದಲ್ಲಿ ಯುದ್ಧಮಾಡುತ್ತಿರುವ ಅವನ ಶತ್ರುಗಳ ಅಸುವನ್ನು ನೀಗಿಸುವ ದೃಢ ಕಾರ್ಮುಕವನ್ನು ಮೂರು ಭಾಗಗಳಾಗಿ ತುಂಡುಮಾಡಿದನು.
06043030a ಶರಂ ಚೈವ ಮಹಾಘೋರಂ ಕಾಲದಂಡಮಿವಾಪರಂ।
06043030c ಪ್ರೇಷಯಾಮಾಸ ಸಮರೇ ಸೋಽಸ್ಯ ಕಾಯೇ ನ್ಯಮಜ್ಜತ।।
ಮತ್ತು ಕಾಲದಂಡದಂತಿರುವ ಇನ್ನೊಂದು ಮಹಾಘೋರ ಶರವನ್ನು ಕಳುಹಿಸಲು ಸಮರದಲ್ಲಿ ಅದು ಅವನ ದೇಹಕ್ಕೆ ತಾಗಿತು.
06043031a ಅಥಾನ್ಯದ್ಧನುರಾದಾಯ ಸಾಯಕಾಂಶ್ಚ ಚತುರ್ದಶ।
06043031c ದ್ರೋಣಂ ದ್ರುಪದಪುತ್ರಸ್ತು ಪ್ರತಿವಿವ್ಯಾಧ ಸಂಯುಗೇ।
06043031e ತಾವನ್ಯೋನ್ಯಂ ಸುಸಂಕ್ರುದ್ಧೌ ಚಕ್ರತುಃ ಸುಭೃಶಂ ರಣಂ।।
ಆಗ ಅನ್ಯ ಧನುಸ್ಸನ್ನು ತೆಗೆದುಕೊಂಡು ಹದಿನಾಲ್ಕು ಸಾಯಕಗಳಿಂದ ದ್ರುಪದಪುತ್ರನು ದ್ರೋಣನನ್ನು ಹಿಂದಿರುಗಿ ಹೊಡೆದನು. ಅವರಿಬ್ಬರೂ ಅನ್ಯೋನ್ಯರ ಮೇಲೆ ಕ್ರುದ್ಧರಾಗಿ ತುಂಬ ಘೋರವಾಗಿ ರಣದಲ್ಲಿ ಹೊಡೆದಾಡಿದರು.
06043032a ಸೌಮದತ್ತಿಂ ರಣೇ ಶಂಖೋ ರಭಸಂ ರಭಸೋ ಯುಧಿ।
06043032c ಪ್ರತ್ಯುದ್ಯಯೌ ಮಹಾರಾಜ ತಿಷ್ಠ ತಿಷ್ಠೇತಿ ಚಾಬ್ರವೀತ್।।
ಮಹಾರಾಜ! ರಣದಲ್ಲಿ ರಭಸನಾಗಿದ್ದ ಶಂಖನು ರಭಸನಾಗಿದ್ದ ಸೌಮದತ್ತಿಯನ್ನು (ಭೂರಿಶ್ರವನನ್ನು) ಎದುರಿಸಿ “ನಿಲ್ಲು! ನಿಲ್ಲು!” ಎಂದು ಹೇಳಿದನು.
06043033a ತಸ್ಯ ವೈ ದಕ್ಷಿಣಂ ವೀರೋ ನಿರ್ಬಿಭೇದ ರಣೇ ಭುಜಂ।
06043033c ಸೌಮದತ್ತಿಸ್ತಥಾ ಶಂಖಂ ಜತ್ರುದೇಶೇ ಸಮಾಹನತ್।।
ಆ ವೀರನು ರಣದಲ್ಲಿ ಅವನ ಬಲಭುಜವನ್ನು ಸೀಳಿದನು. ಆಗ ಸೌಮದತ್ತಿಯು ಶಂಖನನ್ನು ಹೆಗಲ ಮೇಲೆ ಹೊಡೆದನು.
06043034a ತಯೋಃ ಸಮಭವದ್ಯುದ್ಧಂ ಘೋರರೂಪಂ ವಿಶಾಂ ಪತೇ।
06043034c ದೃಪ್ತಯೋಃ ಸಮರೇ ತೂರ್ಣಂ ವೃತ್ರವಾಸವಯೋರಿವ।।
ವಿಶಾಂಪತೇ! ಆ ಇಬ್ಬರು ದರ್ಪದವರ ನಡುವಿನ ಯುದ್ಧವು ಬೇಗನೇ ವೃತ್ರ-ವಾಸವರ ನಡುವಿನ ಸಮರದಂತೆ ಘೋರ ರೂಪವನ್ನು ತಾಳಿತು.
06043035a ಬಾಹ್ಲೀಕಂ ತು ರಣೇ ಕ್ರುದ್ಧಂ ಕ್ರುದ್ಧರೂಪೋ ವಿಶಾಂ ಪತೇ।
06043035c ಅಭ್ಯದ್ರವದಮೇಯಾತ್ಮಾ ಧೃಷ್ಟಕೇತುರ್ಮಹಾರಥಃ।।
ವಿಶಾಂಪತೇ! ಕ್ರುದ್ಧ ರೂಪಿ ಮಹಾರಥ ಧೃಷ್ಟಕೇತುವು ಕ್ರುದ್ಧ ಬಾಹ್ಲೀಕನನ್ನು ರಣದಲ್ಲಿ ಎದುರಿಸಿದನು.
06043036a ಬಾಹ್ಲೀಕಸ್ತು ತತೋ ರಾಜನ್ಧೃಷ್ಟಕೇತುಮಮರ್ಷಣಂ।
06043036c ಶರೈರ್ಬಹುಭಿರಾನರ್ಚತ್ಸಿಂಹನಾದಮಥಾನದತ್।।
ರಾಜನ್! ಆಗ ಬಾಹ್ಲೀಕನು ಅಮರ್ಷಣ ಧೃಷ್ಟಕೇತುವನ್ನು ಬಹಳ ಶರಗಳಿಂದ ಗಾಯಗೊಳಿಸಿ ಸಿಂಹನಾದಗೈದನು.
06043037a ಚೇದಿರಾಜಸ್ತು ಸಂಕ್ರುದ್ಧೋ ಬಾಹ್ಲೀಕಂ ನವಭಿಃ ಶರೈಃ।
06043037c ವಿವ್ಯಾಧ ಸಮರೇ ತೂರ್ಣಂ ಮತ್ತೋ ಮತ್ತಮಿವ ದ್ವಿಪಂ।।
ಸಂಕ್ರುದ್ಧನಾದ ಚೇದಿರಾಜನಾದರೋ ಬಾಹ್ಲೀಕನನ್ನು ಒಂಭತ್ತು ಶರಗಳಿಂದ ಹೊಡೆದನು. ಮದಿಸಿದ ಆನೆಯು ಮದಿಸಿದ ಆನೆಯೊಂದಿಗೆ ಹೋರಾಡುವಂತೆ ಇಬ್ಬರೂ ಸಮರದಲ್ಲಿ ಹೋರಾಡಿದರು.
06043038a ತೌ ತತ್ರ ಸಮರೇ ಕ್ರುದ್ಧೌ ನರ್ದಂತೌ ಚ ಮುಹುರ್ಮುಹುಃ।
06043038c ಸಮೀಯತುಃ ಸುಸಂಕ್ರುದ್ಧಾವಂಗಾರಕಬುಧಾವಿವ।।
ಅವರಿಬ್ಬರೂ ಅಲ್ಲಿ ಸಮರದಲ್ಲಿ ಕ್ರುದ್ಧರಾಗಿ ಮತ್ತೆ ಮತ್ತೆ ಗರ್ಜಿಸುತ್ತಿದ್ದರು. ಅಂಗಾರಕ-ಬುಧರಂತೆ ಸಂಕ್ರುದ್ಧರಾಗಿ ಪರಸ್ಪರ ಹೋರಾಡಿದರು.
06043039a ರಾಕ್ಷಸಂ ಕ್ರೂರಕರ್ಮಾಣಂ ಕ್ರೂರಕರ್ಮಾ ಘಟೋತ್ಕಚಃ।
06043039c ಅಲಂಬುಸಂ ಪ್ರತ್ಯುದಿಯಾದ್ಬಲಂ ಶಕ್ರ ಇವಾಹವೇ।।
ಶಕ್ರನು ಬಲನನ್ನು ಹೇಗೋ ಹಾಗೆ ಕ್ರೂರಕರ್ಮಿ ಘಟೋತ್ಕಚನು ಕ್ರೂರಕರ್ಮಗಳ ರಾಕ್ಷಸ ಅಲಂಬುಸನನ್ನು ಆಹವದಲ್ಲಿ ಎದುರಿಸಿದನು.
06043040a ಘಟೋತ್ಕಚಸ್ತು ಸಂಕ್ರುದ್ಧೋ ರಾಕ್ಷಸಂ ತಂ ಮಹಾಬಲಂ।
06043040c ನವತ್ಯಾ ಸಾಯಕೈಸ್ತೀಕ್ಷ್ಣೈರ್ದಾರಯಾಮಾಸ ಭಾರತ।।
ಭಾರತ! ಸಂಕ್ರುದ್ಧ ಘಟೋತ್ಕಚನು ಆ ಮಹಾಬಲ ರಾಕ್ಷಸನನ್ನು ತೊಂಭತ್ತು ತೀಕ್ಷ್ಣ ಸಾಯಕಗಳಿಂದ ಚುಚ್ಚಿದನು.
06043041a ಅಲಂಬುಸಸ್ತು ಸಮರೇ ಭೈಮಸೇನಿಂ ಮಹಾಬಲಂ।
06043041c ಬಹುಧಾ ವಾರಯಾಮಾಸ ಶರೈಃ ಸನ್ನತಪರ್ವಭಿಃ।।
ಸಮರದಲ್ಲಿ ಅಲಂಬುಸನಾದರೋ ಮಹಾಬಲ ಭೈಮಸೇನಿಯನ್ನು ಅನೇಕ ಸನ್ನತಪರ್ವ ಶರಗಳಿಂದ ತಡೆದನು.
06043042a ವ್ಯಭ್ರಾಜೇತಾಂ ತತಸ್ತೌ ತು ಸಂಯುಗೇ ಶರವಿಕ್ಷತೌ।
06043042c ಯಥಾ ದೇವಾಸುರೇ ಯುದ್ಧೇ ಬಲಶಕ್ರೌ ಮಹಾಬಲೌ।।
ಶರಗಳಿಂದ ಚುಚ್ಚಲ್ಪಟ್ಟು ಯುದ್ಧಮಾಡುತ್ತಿರುವ ಅವರಿಬ್ಬರೂ ದೇವಾಸುರರ ಯುದ್ಧದಲ್ಲಿ ಮಹಾಬಲ ಬಲ-ಶಕ್ರರಂತೆ ಶೋಭಿಸಿದರು.
06043043a ಶಿಖಂಡೀ ಸಮರೇ ರಾಜನ್ದ್ರೌಣಿಮಭ್ಯುದ್ಯಯೌ ಬಲೀ।
06043043c ಅಶ್ವತ್ಥಾಮಾ ತತಃ ಕ್ರುದ್ಧಃ ಶಿಖಂಡಿನಮವಸ್ಥಿತಂ।।
06043044a ನಾರಾಚೇನ ಸುತೀಕ್ಷ್ಣೇನ ಭೃಶಂ ವಿದ್ಧ್ವಾ ವ್ಯಕಂಪಯತ್।
ರಾಜನ್! ಸಮರದಲ್ಲಿ ಬಲಶಾಲಿ ಶಿಖಂಡಿಯು ದ್ರೌಣಿಯನ್ನು ಎದುರಿಸಿದನು. ಆಗ ಅಶ್ವತ್ಥಾಮನು ಅಲ್ಲಿದ್ದ ಶಿಖಂಡಿಯನ್ನು ಸುತೀಕ್ಷ್ಣ ನಾರಾಚದಿಂದ ಚೆನ್ನಾಗಿ ಹೊಡೆದು ಕಂಪಿಸುವಂತೆ ಮಾಡಿದನು.
06043044c ಶಿಖಂಡ್ಯಪಿ ತತೋ ರಾಜನ್ದ್ರೋಣಪುತ್ರಮತಾಡಯತ್।।
06043045a ಸಾಯಕೇನ ಸುಪೀತೇನ ತೀಕ್ಷ್ಣೇನ ನಿಶಿತೇನ ಚ।
06043045c ತೌ ಜಘ್ನತುಸ್ತದಾನ್ಯೋನ್ಯಂ ಶರೈರ್ಬಹುವಿಧೈರ್ ಮೃಧೇ।।
ರಾಜನ್! ಆಗ ಶಿಖಂಡಿಯೂ ಕೂಡ ದ್ರೋಣಪುತ್ರನನ್ನು ಸುಪೀತವಾದ, ತೀಕ್ಷ್ಣ ನಿಶಿತ ಸಾಯಕಗಳಿಂದ ಹೊಡೆದನು. ಆಗ ಅವರಿಬ್ಬರೂ ಹೋರಾಟದಲ್ಲಿ ಬಹುವಿಧದ ಶರಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು.
06043046a ಭಗದತ್ತಂ ರಣೇ ಶೂರಂ ವಿರಾಟೋ ವಾಹಿನೀಪತಿಃ।
06043046c ಅಭ್ಯಯಾತ್ತ್ವರಿತೋ ರಾಜಂಸ್ತತೋ ಯುದ್ಧಮವರ್ತತ।।
ರಾಜನ್! ರಣದಲ್ಲಿ ಶೂರ ಭಗದತ್ತನನ್ನು ವಾಹಿನೀಪತಿ ವಿರಾಟನು ತ್ವರೆಮಾಡಿ ಎದುರಿಸಿ ಯುದ್ಧವನ್ನು ಪ್ರಾರಂಭಿಸಿದನು.
06043047a ವಿರಾಟೋ ಭಗದತ್ತೇನ ಶರವರ್ಷೇಣ ತಾಡಿತಃ।
06043047c ಅಭ್ಯವರ್ಷತ್ಸುಸಂಕ್ರುದ್ಧೋ ಮೇಘೋ ವೃಷ್ಟ್ಯಾ ಇವಾಚಲಂ।।
ಭಗದತ್ತನ ಶರವರ್ಷಗಳಿಂದ ಪೀಡಿತನಾದ ವಿರಾಟನು ಸಂಕ್ರುದ್ಧನಾಗಿ ಪರ್ವತದ ಮೇಲೆ ಮೋಡವು ಮಳೆ ಸುರಿಸುವಂತೆ ಶರಗಳ ಮಳೆಯನ್ನು ಸುರಿಸಿದನು.
06043048a ಭಗದತ್ತಸ್ತತಸ್ತೂರ್ಣಂ ವಿರಾಟಂ ಪೃಥಿವೀಪತಿಂ।
06043048c ಚಾದಯಾಮಾಸ ಸಮರೇ ಮೇಘಃ ಸೂರ್ಯಮಿವೋದಿತಂ।।
ತಕ್ಷಣವೇ ಭಗದತ್ತನು ಪೃಥಿವೀಪತಿ ವಿರಾಟನನ್ನು ಉದಯಿಸುತ್ತಿರುವ ಸೂರ್ಯನನ್ನು ಮೋಡಗಳು ಹೇಗೋ ಹಾಗೆ ಸಮರದಲ್ಲಿ ಮುಚ್ಚಿಬಿಟ್ಟನು.
06043049a ಬೃಹತ್ಕ್ಷತ್ರಂ ತು ಕೈಕೇಯಂ ಕೃಪಃ ಶಾರದ್ವತೋ ಯಯೌ।
06043049c ತಂ ಕೃಪಃ ಶರವರ್ಷೇಣ ಚಾದಯಾಮಾಸ ಭಾರತ।।
ಭಾರತ! ಶಾರದ್ವತ ಕೃಪನು ಕೈಕೇಯ ಬೃಹತ್ಕ್ಷತ್ರನನ್ನು ಎದರಿಸಿ ಬಂದನು. ಅವನನ್ನು ಕೃಪನು ಶರವರ್ಷದಿಂದ ಮುಸುಕಿ ಹಾಕಿದನು.
06043050a ಗೌತಮಂ ಕೇಕಯಃ ಕ್ರುದ್ಧಃ ಶರವೃಷ್ಟ್ಯಾಭ್ಯಪೂರಯತ್।
06043050c ತಾವನ್ಯೋನ್ಯಂ ಹಯಾನ್ ಹತ್ವಾ ಧನುಷೀ ವಿನಿಕೃತ್ಯ ವೈ।।
ಕೃದ್ಧನಾದ ಕೇಕಯನು ಗೌತಮನನ್ನು ಶರವೃಷ್ಟಿಯಿಂದ ತುಂಬಿಸಿದನು. ಅವರು ಅನ್ಯೋನ್ಯರ ಕುದುರೆಗಳನ್ನು ಕೊಂದು ಧನುಸ್ಸುಗಳನ್ನು ಕತ್ತರಿಸಿದರು.
06043051a ವಿರಥಾವಸಿಯುದ್ಧಾಯ ಸಮೀಯತುರಮರ್ಷಣೌ।
06043051c ತಯೋಸ್ತದಭವದ್ಯುದ್ಧಂ ಘೋರರೂಪಂ ಸುದಾರುಣಂ।।
ವಿರಥರಾದ ಆ ಇಬ್ಬರು ಅಮರ್ಷಣರು ಖಡ್ಗಯುದ್ಧದಲ್ಲಿ ತೊಡಗಿದರು. ಅವರ ಯುದ್ಧವು ಘೋರರೂಪವೂ ಸುದಾರುಣವೂ ಆಗಿದ್ದಿತು.
06043052a ದ್ರುಪದಸ್ತು ತತೋ ರಾಜಾ ಸೈಂಧವಂ ವೈ ಜಯದ್ರಥಂ।
06043052c ಅಭ್ಯುದ್ಯಯೌ ಸಂಪ್ರಹೃಷ್ಟೋ ಹೃಷ್ಟರೂಪಂ ಪರಂತಪ।।
ಪರಂತಪ! ಆಗ ಸಂಪ್ರಹೃಷ್ಟ ರಾಜ ದ್ರುಪದನಾದರೋ ಹೃಷ್ಟರೂಪ ಸೈಂಧವ ಜಯದ್ರಥನನ್ನು ಎದುರಿಸಿದನು.
06043053a ತತಃ ಸೈಂಧವಕೋ ರಾಜಾ ದ್ರುಪದಂ ವಿಶಿಖೈಸ್ತ್ರಿಭಿಃ।
06043053c ತಾಡಯಾಮಾಸ ಸಮರೇ ಸ ಚ ತಂ ಪ್ರತ್ಯವಿಧ್ಯತ।।
ಆಗ ರಾಜ ಸೈಂಧವಕನು ದ್ರುಪದನನ್ನು ಮೂರು ವಿಶಿಖಗಳಿಂದ ಹೊಡೆದನು. ಸಮರದಲ್ಲಿ ಅವನೂ ಕೂಡ ಅವನನ್ನು ಪ್ರತಿಘಾತಿಗೊಳಿಸಿದನು.
06043054a ತಯೋಃ ಸಮಭವದ್ಯುದ್ಧಂ ಘೋರರೂಪಂ ಸುದಾರುಣಂ।
06043054c ಈಕ್ಷಿತೃಪ್ರೀತಿಜನನಂ ಶುಕ್ರಾಂಗಾರಕಯೋರಿವ।।
ಶುಕ್ರ-ಅಂಗಾರಕರಂತಿರುವ ಅವರಿಬ್ಬರ ನಡುವೆ ಘೋರರೂಪದ ಸುದಾರುಣವಾದ, ಆದರೆ ನೋಡುವವರಿಗೆ ಸಂತೋಷವನ್ನುಂಟುಮಾಡುವ ಯುದ್ಧವು ನಡೆಯಿತು.
06043055a ವಿಕರ್ಣಸ್ತು ಸುತಸ್ತುಭ್ಯಂ ಸುತಸೋಮಂ ಮಹಾಬಲಂ।
06043055c ಅಭ್ಯಯಾಜ್ಜವನೈರಶ್ವೈಸ್ತತೋ ಯುದ್ಧಮವರ್ತತ।।
ನಿನ್ನ ಮಗ ವಿಕರ್ಣನಾದರೋ ಮಹಾಬಲ ಸುತಸೋಮನನ್ನು ವೇಗದ ಅಶ್ವಗಳಿಂದ ಯುದ್ಧವನ್ನು ಪ್ರಾರಂಭಿಸಿದನು.
06043056a ವಿಕರ್ಣಃ ಸುತಸೋಮಂ ತು ವಿದ್ಧ್ವಾ ನಾಕಂಪಯಚ್ಚರೈಃ।
06043056c ಸುತಸೋಮೋ ವಿಕರ್ಣಂ ಚ ತದದ್ಭುತಮಿವಾಭವತ್।।
ಆದರೆ ಶರಗಳಿಂದ ಗಾಯಗೊಳಿಸಿದರೂ ವಿಕರ್ಣನು ಸುತಸೋಮನನ್ನು ಅಲುಗಾಡಿಸಲಾಗಲಿಲ್ಲ. ಸುತಸೋಮನೂ ವಿಕರ್ಣನನ್ನು ಹಾಗೆ ಮಾಡಲು ಆಗಲಿಲ್ಲ. ಅದೊಂದು ಅದ್ಭುತವಾಗಿತ್ತು.
06043057a ಸುಶರ್ಮಾಣಂ ನರವ್ಯಾಘ್ರಂ ಚೇಕಿತಾನೋ ಮಹಾರಥಃ।
06043057c ಅಭ್ಯದ್ರವತ್ಸುಸಂಕ್ರುದ್ಧಃ ಪಾಂಡವಾರ್ಥೇ ಪರಾಕ್ರಮೀ।।
ಮಹಾರಥ ಪರಾಕ್ರಮೀ ಚೇಕಿತಾನನು ಪಾಂಡವರಿಗೋಸ್ಕರ ಕೃದ್ಧನಾಗಿ ನರವ್ಯಾಘ್ರ ಸುಶರ್ಮನನ್ನು ಎದುರಿಸಿದನು.
06043058a ಸುಶರ್ಮಾ ತು ಮಹಾರಾಜ ಚೇಕಿತಾನಂ ಮಹಾರಥಂ।
06043058c ಮಹತಾ ಶರವರ್ಷೇಣ ವಾರಯಾಮಾಸ ಸಂಯುಗೇ।।
ಮಹಾರಾಜ! ಸಂಯುಗದಲ್ಲಿ ಸುಶರ್ಮನಾದರೋ ಮಹಾರಥ ಚೇಕಿತಾನನನ್ನು ಮಹಾ ಶರವರ್ಷದಿಂದ ತಡೆದನು.
06043059a ಚೇಕಿತಾನೋಽಪಿ ಸಂರಬ್ಧಃ ಸುಶರ್ಮಾಣಂ ಮಹಾಹವೇ।
06043059c ಪ್ರಾಚ್ಛಾದಯತ್ತಮಿಷುಭಿರ್ಮಹಾಮೇಘ ಇವಾಚಲಂ।।
ಚೀಕಿತಾನನಾದರೋ ಸಂರಬ್ಧನಾಗಿ ಮಹಾಹವದಲ್ಲಿ ಸುಶರ್ಮನನ್ನು ಮಹಾಮೇಘವು ಪರ್ವತವನ್ನು ಮುಚ್ಚುವಂತೆ ಬಾಣಗಳಿಂದ ಮುಚ್ಚಿದನು.
06043060a ಶಕುನಿಃ ಪ್ರತಿವಿಂಧ್ಯಂ ತು ಪರಾಕ್ರಾಂತಂ ಪರಾಕ್ರಮೀ।
06043060c ಅಭ್ಯದ್ರವತ ರಾಜೇಂದ್ರ ಮತ್ತೋ ಮತ್ತಮಿವ ದ್ವಿಪಂ।।
ರಾಜೇಂದ್ರ! ಪರಾಕ್ರಮೀ ಶಕುನಿಯು ಪರಾಕ್ರಾಂತ ಪ್ರತಿವಿಂಧ್ಯನನ್ನು ಮದಿಸಿದ ಆನೆಯು ಮದಿಸಿದ ಆನೆಯನ್ನು ಹೇಗೋ ಹಾಗೆ ಎದುರಿಸಿದನು.
06043061a ಯೌಧಿಷ್ಠಿರಸ್ತು ಸಂಕ್ರುದ್ಧಃ ಸೌಬಲಂ ನಿಶಿತೈಃ ಶರೈಃ।
06043061c ವ್ಯದಾರಯತ ಸಂಗ್ರಾಮೇ ಮಘವಾನಿವ ದಾನವಂ।।
ಸಂಕ್ರುದ್ಧನಾದ ಯುಧಿಷ್ಠಿರನ ಮಗನಾದರೋ ಸಂಗ್ರಾಮದಲ್ಲಿ ನಿಶಿತಬಾಣಗಳಿಂದ ಮಘವತನು ದಾನವನನ್ನು ಹೊಡೆಯುವಂತೆ ಸೌಬಲನನ್ನು ಗಾಯಗೊಸಿದನು.
06043062a ಶಕುನಿಃ ಪ್ರತಿವಿಂಧ್ಯಂ ತು ಪ್ರತಿವಿಧ್ಯಂತಮಾಹವೇ।
06043062c ವ್ಯದಾರಯನ್ಮಹಾಪ್ರಾಜ್ಞಃ ಶರೈಃ ಸಂನತಪರ್ವಭಿಃ।।
ಆಹವದಲ್ಲಿ ಮಹಾಪ್ರಾಜ್ಞ ಶಕುನಿಯು ಪ್ರತಿವಿಂಧ್ಯನೊಡನೆ ಪ್ರತಿಯುದ್ಧವನ್ನು ಮಾಡಿ ಅವನನ್ನು ಸಂನತಪರ್ವ ಶರಗಳಿಂದ ಗಾಯಗೊಳಿಸಿದನು.
06043063a ಸುದಕ್ಷಿಣಂ ತು ರಾಜೇಂದ್ರ ಕಾಂಬೋಜಾನಾಂ ಮಹಾರಥಂ।
06043063c ಶ್ರುತಕರ್ಮಾ ಪರಾಕ್ರಾಂತಮಭ್ಯದ್ರವತ ಸಂಯುಗೇ।।
ರಾಜೇಂದ್ರ! ಕಾಂಬೋಜರ ಮಹಾರಥ ಸುದಕ್ಷಿಣನನ್ನಾದರೋ ಪರಾಕ್ರಾಂತ ಶ್ರುತಕರ್ಮನು ಸಂಯುಗದಲ್ಲಿ ಎದುರಿಸಿದನು.
06043064a ಸುದಕ್ಷಿಣಸ್ತು ಸಮರೇ ಸಾಹದೇವಿಂ ಮಹಾರಥಂ।
06043064c ವಿದ್ಧ್ವಾ ನಾಕಂಪಯತ ವೈ ಮೈನಾಕಮಿವ ಪರ್ವತಂ।।
ಸಮರದಲ್ಲಿ ಸುದಕ್ಷಿಣನು ವೈನಾಕಪರ್ವತದಂತಿದ್ದ ಮಹಾರಥ ಸಹದೇವನ ಮಗನನ್ನು ಹೊಡೆದೂ ಅಲುಗಾಡಿಸಲಕ್ಕಾಗಲಿಲ್ಲ.
06043065a ಶ್ರುತಕರ್ಮಾ ತತಃ ಕ್ರುದ್ಧಃ ಕಾಂಬೋಜಾನಾಂ ಮಹಾರಥಂ।
06043065c ಶರೈರ್ಬಹುಭಿರಾನರ್ಚದ್ದಾರಯನ್ನಿವ ಸರ್ವಶಃ।।
ಆಗ ಶ್ರುತಕರ್ಮನು ಕ್ರುದ್ಧನಾಗಿ ಮಹಾರಥ ಕಾಂಬೋಜನನ್ನು ಬಹಳ ಶರಗಳಿಂದ ಚುಚ್ಚಿ ಎಲ್ಲಕಡೆ ಗಾಯಗೊಳಿಸಿದನು.
06043066a ಇರಾವಾನಥ ಸಂಕ್ರುದ್ಧಃ ಶ್ರುತಾಯುಷಮಮರ್ಷಣಂ।
06043066c ಪ್ರತ್ಯುದ್ಯಯೌ ರಣೇ ಯತ್ತೋ ಯತ್ತರೂಪತರಂ ತತಃ।।
ಆಗ ಸಂಕ್ರುದ್ಧನಾದ ಇರಾವಾನನು ಚೆನ್ನಾಗಿ ಪ್ರಯತ್ನಮಾಡಿ ಅಮರ್ಷಣ ಶ್ರುತಾಯುಷನೊಂದಿಗೆ ಪ್ರತಿಯುದ್ಧವನ್ನು ಮಾಡಿದನು.
06043067a ಆರ್ಜುನಿಸ್ತಸ್ಯ ಸಮರೇ ಹಯಾನ್ ಹತ್ವಾ ಮಹಾರಥಃ।
06043067c ನನಾದ ಸುಮಹನ್ನಾದಂ ತತ್ಸೈನ್ಯಂ ಪ್ರತ್ಯಪೂರಯತ್।।
ಅರ್ಜುನನ ಮಹಾರಥ ಮಗನು1 ಸಮರದಲ್ಲಿ ಅವನ ಕುದುರೆಗಳನ್ನು ಕೊಂದು ಮಹಾ ಗರ್ಜನೆಯನ್ನು ಮಾಡಲು ಸೇನೆಯು ಅವನನ್ನು ಮೆಚ್ಚಿತು.
06043068a ಶ್ರುತಾಯುಸ್ತ್ವಥ ಸಂಕ್ರುದ್ಧಃ ಫಾಲ್ಗುನೇಃ ಸಮರೇ ಹಯಾನ್।
06043068c ನಿಜಘಾನ ಗದಾಗ್ರೇಣ ತತೋ ಯುದ್ಧಮವರ್ತತ।।
ಆಗ ಶ್ರುತಾಯುಷನೂ ಸಂಕ್ರುದ್ಧನಾಗಿ ಸಮರದಲ್ಲಿ ಫಾಲ್ಗುನಿಯ ಕುದುರೆಗಳನ್ನು ಗದೆಯ ತುದಿಯಿಂದ ಹೊಡೆದುರುಳಿಸಿದನು. ಆಗ ಯುದ್ಧವು ಮುಂದುವರೆಯಿತು.
06043069a ವಿಂದಾನುವಿಂದಾವಾವಂತ್ಯೌ ಕುಂತಿಭೋಜಂ ಮಹಾರಥಂ।
06043069c ಸಸೇನಂ ಸಸುತಂ ವೀರಂ ಸಂಸಸಜ್ಜತುರಾಹವೇ।।
ಅವಂತಿಯ ವಿಂದಾನುವಿಂದರು ಸೇನೆ ಮತ್ತು ಮಕ್ಕಳೊಂದಿಗೆ ಮಹಾರಥ ವೀರ ಕುಂತಿಭೋಜನನ್ನು ಆಹವದಲ್ಲಿ ಎದುರಿಸಿದರು.
06043070a ತತ್ರಾದ್ಭುತಮಪಶ್ಯಾಮ ಆವಂತ್ಯಾನಾಂ ಪರಾಕ್ರಮಂ।
06043070c ಯದಯುಧ್ಯನ್ ಸ್ಥಿರಾ ಭೂತ್ವಾ ಮಹತ್ಯಾ ಸೇನಯಾ ಸಹ।।
ಅಲ್ಲಿ ಮಹಾಸೇನೆಯೊಂದಿಗೆ ಸ್ಥಿರವಾಗಿದ್ದುಕೊಂಡು ಯುದ್ಧಮಾಡುತ್ತಿರುವ ಅವಂತಿಯವರ ಅದ್ಭುತ ಪರಾಕ್ರಮವು ಕಾಣಿಸಿತು.
06043071a ಅನುವಿಂದಸ್ತು ಗದಯಾ ಕುಂತಿಭೋಜಮತಾಡಯತ್।
06043071c ಕುಂತಿಭೋಜಸ್ತತಸ್ತೂರ್ಣಂ ಶರವ್ರಾತೈರವಾಕಿರತ್।।
ಅನುವಿಂದನು ಗದೆಯಿಂದ ಕುಂತಿಭೋಜನನ್ನು ಹೊಡೆದನು. ಆಗ ತಕ್ಷಣವೇ ಕುಂತಿಭೋಜನು ಅವನನ್ನು ಶರವ್ರಾತಗಳಿಂದ ಮುಚ್ಚಿದನು.
06043072a ಕುಂತಿಭೋಜಸುತಶ್ಚಾಪಿ ವಿಂದಂ ವಿವ್ಯಾಧ ಸಾಯಕೈಃ।
06043072c ಸ ಚ ತಂ ಪ್ರತಿವಿವ್ಯಾಧ ತದದ್ಭುತಮಿವಾಭವತ್।।
ಕುಂತಿಭೋಜನ ಮಗನೂ ಕೂಡ ವಿಂದನನ್ನು ಸಾಯಕಗಳಿಂದ ಹೊಡೆದನು. ಅಗ ಅವನು ಪ್ರತಿಯಾಗಿ ಹೊಡೆಯಲು ಅಲ್ಲಿ ಅದ್ಭುತವಾಯಿತು.
06043073a ಕೇಕಯಾ ಭ್ರಾತರಃ ಪಂಚ ಗಾಂಧಾರಾನ್ಪಂಚ ಮಾರಿಷ।
06043073c ಸಸೈನ್ಯಾಸ್ತೇ ಸಸೈನ್ಯಾಂಶ್ಚ ಯೋಧಯಾಮಾಸುರಾಹವೇ।।
ಮಾರಿಷ! ಕೇಕಯ ಸಹೋದರರೈವರು ಗಾಂಧಾರರ ಐವರನ್ನು ಸಸೈನ್ಯದೊಂದಿಗೆ ಅವರ ಸೇನೆಯೊಂದಿಗೆ ಆಹವದಲ್ಲಿ ಯುದ್ಧಮಾಡತೊಡಗಿದರು.
06043074a ವೀರಬಾಹುಶ್ಚ ತೇ ಪುತ್ರೋ ವೈರಾಟಿಂ ರಥಸತ್ತಮಂ।
06043074c ಉತ್ತರಂ ಯೋಧಯಾಮಾಸ ವಿವ್ಯಾಧ ನಿಶಿತೈಃ ಶರೈಃ।
06043074e ಉತ್ತರಶ್ಚಾಪಿ ತಂ ಧೀರಂ ವಿವ್ಯಾಧ ನಿಶಿತೈಃ ಶರೈಃ।।
ನಿನ್ನ ಮಗ ವೀರಬಾಹುವು ರಥಸತ್ತಮ ವೈರಾಟಿ ಉತ್ತರನನೊಂದಿಗೆ ನಿಶಿತ ಶರಗಳಿಂದ ಯುದ್ಧಮಾಡಿದನು. ಉತ್ತರನೂ ಕೂಡ ಆ ಧೀರನನ್ನು ನಿಶಿತ ಬಾಣಗಳಿಂದ ಹೊಡೆದನು.
06043075a ಚೇದಿರಾಟ್ಸಮರೇ ರಾಜನ್ನುಲೂಕಂ ಸಮಭಿದ್ರವತ್।
06043075c ಉಲೂಕಶ್ಚಾಪಿ ತಂ ಬಾಣೈರ್ನಿಶಿತೈರ್ಲೋಮವಾಹಿಭಿಃ।।
ರಾಜನ್! ಸಮರದಲ್ಲಿ ಚೇದಿರಾಜನು ಉಲೂಕನನ್ನು ಎದುರಿಸಿದನು. ಉಲೂಕನೂ ಕೂಡ ಅವನು ನಿಶಿತ ಲೋಮವಾಹಿ ಬಾಣಗಳಿಂದ ಹೊಡೆದನು.
06043076a ತಯೋರ್ಯುದ್ಧಂ ಸಮಭವದ್ಘೋರರೂಪಂ ವಿಶಾಂ ಪತೇ।
06043076c ದಾರಯೇತಾಂ ಸುಸಂಕ್ರುದ್ಧಾವನ್ಯೋನ್ಯಮಪರಾಜಿತೌ।।
ವಿಶಾಂಪತೇ! ಸಂಕ್ರುದ್ಧರಾಗಿ ಅನ್ಯೋನ್ಯರನ್ನು ಗಾಯಗೊಳಿಸುತ್ತಿರುವ ಆ ಇಬ್ಬರು ಅಪರಾಜಿತರ ಯುದ್ಧವು ಘೋರರೂಪವನ್ನು ತಾಳಿತು.
06043077a ಏವಂ ದ್ವಂದ್ವಸಹಸ್ರಾಣಿ ರಥವಾರಣವಾಜಿನಾಂ।
06043077c ಪದಾತೀನಾಂ ಚ ಸಮರೇ ತವ ತೇಷಾಂ ಚ ಸಂಕುಲಂ।।
ಹೀಗೆ ನಿನ್ನ ಮತ್ತು ಅವರ ನಡುವೆ ಸಹಸ್ರಾರು ರಥ-ಆನೆ-ಕುದುರೆ-ಪದಾತಿಗಳ ದ್ವಂದ್ವಯುದ್ಧವೂ ಸಂಕುಲಯುದ್ಧವೂ ನಡೆದವು.
06043078a ಮುಹೂರ್ತಮಿವ ತದ್ಯುದ್ಧಮಾಸೀನ್ಮಧುರದರ್ಶನಂ।
06043078c ತತ ಉನ್ಮತ್ತವದ್ರಾಜನ್ನ ಪ್ರಾಜ್ಞಾಯತ ಕಿಂ ಚನ।।
ರಾಜನ್! ಒಂದು ಕ್ಷಣ ಆ ಯುದ್ಧವು ನೋಡಲು ಮಧುರವಾಗಿತ್ತು. ಅನಂತರ ಉನ್ಮತ್ತವಾಗಲು ಏನೂ ತಿಳಿಯಲಿಲ್ಲ.
06043079a ಗಜೋ ಗಜೇನ ಸಮರೇ ರಥೀ ಚ ರಥಿನಂ ಯಯೌ।
06043079c ಅಶ್ವೋಽಶ್ವಂ ಸಮಭಿಪ್ರೇತ್ಯ ಪದಾತಿಶ್ಚ ಪದಾತಿನಂ।।
ಸಮರದಲ್ಲಿ ಗಜಾರೂಡರು ಗಜಾರೂಡರೊಡನೆ, ರಥಿಗಳು ರಥಿಗಳೊಂದಿಗೆ, ಅಶ್ವಾರೋಹಿಗಳು ಅಶ್ವಾರೋಹಿಗಳೊಂದಿಗೆ, ಮತ್ತು ಪದಾತಿಗಳು ಪದಾತಿಗಳೊಂದಿಗೆ ಕಾದಾಡಿದರು.
06043080a ತತೋ ಯುದ್ಧಂ ಸುದುರ್ಧರ್ಷಂ ವ್ಯಾಕುಲಂ ಸಮಪದ್ಯತ।
06043080c ಶೂರಾಣಾಂ ಸಮರೇ ತತ್ರ ಸಮಾಸಾದ್ಯ ಪರಸ್ಪರಂ।।
ಅಲ್ಲಿ ಸಮರದಲ್ಲಿ ಶೂರರು ಪರಸ್ಪರರೊಂದಿಗೆ ಹೋರಾಡುತ್ತಿರಲು ಯುದ್ಧವು ತುಂಬಾ ದುರ್ಧರ್ಷವೂ ವ್ಯಾಕುಲವೂ ಆಯಿತು.
06043081a ತತ್ರ ದೇವರ್ಷಯಃ ಸಿದ್ಧಾಶ್ಚಾರಣಾಶ್ಚ ಸಮಾಗತಾಃ।
06043081c ಪ್ರೈಕ್ಷಂತ ತದ್ರಣಂ ಘೋರಂ ದೇವಾಸುರರಣೋಪಮಂ।।
ಅಲ್ಲಿ ಸೇರಿದ್ದ ದೇವ-ಋಷಿಗಳೂ, ಸಿದ್ಧ-ಚಾರಣರೂ ದೇವಾಸುರರ ರಣಕ್ಕೆ ಸಮನಾದ ಆ ಘೋರ ರಣಯುದ್ಧವನ್ನು ನೋಡಿದರು.
06043082a ತತೋ ದಂತಿಸಹಸ್ರಾಣಿ ರಥಾನಾಂ ಚಾಪಿ ಮಾರಿಷ।
06043082c ಅಶ್ವೌಘಾಃ ಪುರುಷೌಘಾಶ್ಚ ವಿಪರೀತಂ ಸಮಾಯಯುಃ।।
ಆಗ ಸಹಸ್ರಾರು ಆನೆಗಳೂ, ರಥಗಳೂ, ಅಶ್ವಗಳೂ ಮತ್ತು ಮನುಷ್ಯರೂ ತಮ್ಮ ಸ್ವಭಾವಗಳಲ್ಲಿ ವಿಪರೀತರಾದಂತೆ ಕಂಡರು.
06043083a ತತ್ರ ತತ್ರೈವ ದೃಶ್ಯಂತೇ ರಥವಾರಣಪತ್ತಯಃ।
06043083c ಸಾದಿನಶ್ಚ ನರವ್ಯಾಘ್ರ ಯುಧ್ಯಮಾನಾ ಮುಹುರ್ಮುಹುಃ।।
ನರವ್ಯಾಘ್ರ! ಅಲ್ಲಲ್ಲಿಯೇ ರಥ-ಆನೆ-ಪದಾತಿಗಳು ಪುನಃ ಪುನಃ ಅದೇ ಸ್ಥಳದಲ್ಲಿಯೇ ಯುದ್ಧಮಾಡುತ್ತಿರುವಂತೆ ತೋರುತ್ತಿತ್ತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ದ್ವಂದ್ವಯುದ್ಧೇ ತ್ರಿಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ದ್ವಂದ್ವಯುದ್ಧ ಎನ್ನುವ ನಲ್ವತ್ಮೂರನೇ ಅಧ್ಯಾಯವು.
-
ಇದಕ್ಕೆ ಮೊದಲು ಮಹಾಭಾರತದಲ್ಲಿ ಇರಾವಾನನ ಕುರಿತು ಎಲ್ಲಿಯೂ ಉಲ್ಲೇಖವಿಲ್ಲದಿರುವುದು ಒಂದು ವಿಶೇಷವೇ ಸರಿ. ಅರ್ಜುನನಿಗೆ ಚಿತ್ರಾಂಗದೆಯಲ್ಲಿ ಬಭ್ರುವಾಹನ (ಆದಿಪರ್ವ, ಅಧ್ಯಾಯ ೨೦೯), ಸುಭದ್ರೆಯಲ್ಲಿ ಅಭಿಮನ್ಯು (ಆದಿಪರ್ವ, ಅಧ್ಯಾಯ ೨೧೩) ಮತ್ತು ದ್ರೌಪದಿಯಲ್ಲಿ ಶ್ರುತಕರ್ಮ (ಆದಿಪರ್ವ, ಅಧ್ಯಾಯ ೨೧೩) ಎಂಬ ಮಕ್ಕಳಿದ್ದರೆಂದು ಆದಿಪರ್ವದಲ್ಲಿಯೇ ಬಂದಿದ್ದರೂ ಇರಾವಾನನ ಕುರಿತು ಭೀಷ್ಮಪರ್ವದ ಮೊದಲು ಬಂದಿಲ್ಲ. ↩︎