ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 41
ಸಾರ
ರಣರಂಗದಲ್ಲಿ ರಥದಿಂದಿಳಿದು ಕವಚ-ಆಯುಧಗಳನ್ನು ಕಳಚಿ ಯುಧಿಷ್ಠಿರನು ಕೌರವ ಸೇನೆಯ ಕಡೆ ಕಾಲ್ನಡುಗೆಯಲ್ಲಿ ನಡೆಯಲು ವಿಸ್ಮಯಗೊಂಡು ಅವನ ತಮ್ಮಂದಿರು ಕೃಷ್ಣನನ್ನೊಡಗೂಡಿ ಹಿಂಬಾಲಿಸಿದುದು (1-30). ಭೀಷ್ಮನನ್ನು ನಮಸ್ಕರಿಸಿ ಯುಧಿಷ್ಠಿರನು ವಿಜಯದ ಆಶೀರ್ವಾದವನ್ನು ಕೇಳಿದುದು (31-44). ಯುಧಿಷ್ಠಿರನು ದ್ರೋಣನನ್ನು ನಮಸ್ಕರಿಸಿ ವಿಜಯದ ಆಶೀರ್ವಾದವನ್ನು ಕೇಳಿದುದು (45-62). ಯುಧಿಷ್ಠಿರನು ಕೃಪನನ್ನು ನಮಸ್ಕರಿಸಿ ವಿಜಯದ ಆಶೀರ್ವಾದವನ್ನು ಕೇಳಿದುದು (63-71). ಯುಧಿಷ್ಠಿರನು ಶಲ್ಯನನ್ನು ನಮಸ್ಕರಿಸಿ ವಿಜಯದ ಆಶೀರ್ವಾದವನ್ನು ಕೇಳಿದುದು (72-82). ಕೃಷ್ಣನು ಕರ್ಣನನ್ನು ಭೇಟಿಯಾಗಿ ಪಾಂಡವರ ಪರವಾಗಿ ಯುದ್ಧಮಾಡಲು ಕೇಳುವುದು (83-88). ಯುಯುತ್ಸುವು ಪಾಂಡವರ ಸೇನೆಯನ್ನು ಸೇರಿದುದು (89-95). ಯುಧಿಷ್ಠಿರನನ್ನು ಎರಡೂ ಪಕ್ಷಗಳ ಯೋಧರು ಮೆಚ್ಚಿ ಹೊಗಳಿದುದು (96-104).
06041001 ಸಂಜಯ ಉವಾಚ।
06041001a ತತೋ ಧನಂಜಯಂ ದೃಷ್ಟ್ವಾ ಬಾಣಗಾಂಡೀವಧಾರಿಣಂ।
06041001c ಪುನರೇವ ಮಹಾನಾದಂ ವ್ಯಸೃಜಂತ ಮಹಾರಥಾಃ।।
ಸಂಜಯನು ಹೇಳಿದನು: “ಆಗ ಧನಂಜಯನು ಬಾಣಗಾಂಡೀವಗಳನ್ನು ಧರಿಸಿದುದನ್ನು ನೋಡಿ ಮಹಾರಥಿಗಳು ಪುನಃ ಮಹಾನಾದಗೈದರು.
06041002a ಪಾಂಡವಾಃ ಸೋಮಕಾಶ್ಚೈವ ಯೇ ಚೈಷಾಮನುಯಾಯಿನಃ।
06041002c ದಧ್ಮುಶ್ಚ ಮುದಿತಾಃ ಶಂಖಾನ್ವೀರಾಃ ಸಾಗರಸಂಭವಾನ್।।
ಆ ವೀರ ಪಾಂಡವರು, ಸೋಮಕರು ಮತ್ತು ಅವರ ಅನುಯಾಯಿಗಳು ಸಾಗರ ಸಂಭವ ಶಂಖಗಳನ್ನು ಹರ್ಷಿತರಾಗಿ ಊದಿದರು.
06041003a ತತೋ ಭೇರ್ಯಶ್ಚ ಪೇಶ್ಯಶ್ಚ ಕ್ರಕಚಾ ಗೋವಿಷಾಣಿಕಾಃ।
06041003c ಸಹಸೈವಾಭ್ಯಹನ್ಯಂತ ತತಃ ಶಬ್ದೋ ಮಹಾನಭೂತ್।।
ಆಗ ಭೇರಿಗಳು, ಪೇಶಿಗಳು, ಕ್ರಕಚಗಳು, ಗೋವಿಷಾಣಿಕಗಳು ಒಟ್ಟಿಗೇ ಮೊಳಗಿ ಮಹಾ ಶಬ್ಧವುಂಟಾಯಿತು.
06041004a ಅಥ ದೇವಾಃ ಸಗಂಧರ್ವಾಃ ಪಿತರಶ್ಚ ಜನೇಶ್ವರ।
06041004c ಸಿದ್ಧಚಾರಣಸಂಘಾಶ್ಚ ಸಮೀಯುಸ್ತೇ ದಿದೃಕ್ಷಯಾ।।
ಆಗ ಜನೇಶ್ವರ! ದೇವತೆಗಳು, ಒಟ್ಟಿಗೇ ಗಂಧರ್ವರು, ಪಿತೃಗಳು, ಮತ್ತು ಸಿದ್ಧಚಾರಣ ಸಂಘಗಳು ನೋಡಲು ಆಕಾಶದಲ್ಲಿ ಒಂದುಗೂಡಿದರು.
06041005a ಋಷಯಶ್ಚ ಮಹಾಭಾಗಾಃ ಪುರಸ್ಕೃತ್ಯ ಶತಕ್ರತುಂ।
06041005c ಸಮೀಯುಸ್ತತ್ರ ಸಹಿತಾ ದ್ರಷ್ಟುಂ ತದ್ವೈಶಸಂ ಮಹತ್।।
ಮಹಾಭಾಗ ಋಷಿಗಳೂ ಕೂಡ ಶತಕ್ರತುವನ್ನು ಮುಂದಿಟ್ಟುಕೊಂಡು ಒಟ್ಟಿಗೇ ಆ ಮಹಾ ಯುದ್ಧವನ್ನು ನೋಡಲು ಒಂದುಗೂಡಿದರು.
06041006a ತತೋ ಯುಧಿಷ್ಠಿರೋ ದೃಷ್ಟ್ವಾ ಯುದ್ಧಾಯ ಸುಸಮುದ್ಯತೇ।
06041006c ತೇ ಸೇನೇ ಸಾಗರಪ್ರಖ್ಯೇ ಮುಹುಃ ಪ್ರಚಲಿತೇ ನೃಪ।।
06041007a ವಿಮುಚ್ಯ ಕವಚಂ ವೀರೋ ನಿಕ್ಷಿಪ್ಯ ಚ ವರಾಯುಧಂ।
06041007c ಅವರುಹ್ಯ ರಥಾತ್ತೂರ್ಣಂ ಪದ್ಭ್ಯಾಮೇವ ಕೃತಾಂಜಲಿಃ।।
06041008a ಪಿತಾಮಹಮಭಿಪ್ರೇಕ್ಷ್ಯ ಧರ್ಮರಾಜೋ ಯುಧಿಷ್ಠಿರಃ।
06041008c ವಾಗ್ಯತಃ ಪ್ರಯಯೌ ಯೇನ ಪ್ರಾಙ್ಮುಖೋ ರಿಪುವಾಹಿನೀಂ।।
ನೃಪ! ಆಗ ಯುದ್ಧಕ್ಕೆ ಸುಸಮುದ್ಯತವಾಗಿ ಸಾಗರದಂತೆ ಮುಂದೆ ಚಲಿಸುತ್ತಿದ್ದ ಆ ಸೇನೆಗಳನ್ನು ನೋಡಿ ವೀರ ಯುಧಿಷ್ಠಿರನು ಕವಚವನ್ನು ಕಳಚಿ, ಶ್ರೇಷ್ಠ ಆಯುಧವನ್ನು ಕೆಳಗಿಟ್ಟು, ಬೇಗನೆ ರಥದಿಂದ ಕೆಳಗಿಳಿದು, ಕಾಲ್ನಡುಗೆಯಲ್ಲಿಯೇ, ಕೈಗಳನ್ನು ಮುಗಿದು ನಡೆದನು. ಧರ್ಮರಾಜ ಯುಧಿಷ್ಠಿರನು ರಿಪುವಾಹಿನಿಯಲ್ಲಿದ್ದ ಪಿತಾಮಹನನ್ನೇ ನೋಡಿ ಮಾತನಾಡಲು ಪೂರ್ವಾಭಿಮುಖವಾಗಿ ನಡೆದನು.
06041009a ತಂ ಪ್ರಯಾಂತಮಭಿಪ್ರೇಕ್ಷ್ಯ ಕುಂತೀಪುತ್ರೋ ಧನಂಜಯಃ।
06041009c ಅವತೀರ್ಯ ರಥಾತ್ತೂರ್ಣಂ ಭ್ರಾತೃಭಿಃ ಸಹಿತೋಽನ್ವಯಾತ್।।
ಅವನು ಹೋಗುತ್ತಿರುವುದನ್ನು ನೋಡಿ ಕುಂತೀಪುತ್ರ ಧನಂಜಯನು ಕೂಡಲೇ ತನ್ನ ರಥದಿಂದ ಕೆಳಗಿಳಿದು ಇತರ ಸಹೋದರರೊಂದಿಗೆ ಅವನನ್ನು ಅನುಸರಿಸಿ ನಡೆದನು.
06041010a ವಾಸುದೇವಶ್ಚ ಭಗವಾನ್ಪೃಷ್ಠತೋಽನುಜಗಾಮ ಹ।
06041010c ಯಥಾಮುಖ್ಯಾಶ್ಚ ರಾಜಾನಸ್ತಮನ್ವಾಜಗ್ಮುರುತ್ಸುಕಾಃ।।
ಭಗವಾನ್ ವಾಸುದೇವನೂ ಹಿಂದೆ ನಡೆದನು. ಹಾಗೆಯೇ ಉತ್ಸುಕ ಮುಖ್ಯ ರಾಜರೂ ಹಿಂಬಾಲಿಸಿದರು.
06041011 ಅರ್ಜುನ ಉವಾಚ।
06041011a ಕಿಂ ತೇ ವ್ಯವಸಿತಂ ರಾಜನ್ಯದಸ್ಮಾನಪಹಾಯ ವೈ।
06041011c ಪದ್ಭ್ಯಾಮೇವ ಪ್ರಯಾತೋಽಸಿ ಪ್ರಾಙ್ಮುಖೋ ರಿಪುವಾಹಿನೀಂ।।
ಅರ್ಜುನನು ಹೇಳಿದನು: “ರಾಜನ್! ಇದೇನು ಮಾಡುತ್ತಿದ್ದೀಯೆ? ನಮ್ಮನ್ನು ತೊರೆದು ಕಾಲ್ನಡುಗೆಯಲ್ಲಿಯೇ ಪೂರ್ವಾಭಿಮುಖವಾಗಿ ಶತ್ರುಸೇನೆಗಳ ಕಡೆ ಹೋಗುತ್ತಿರುವೆಯಲ್ಲಾ?”
06041012 ಭೀಮಸೇನ ಉವಾಚ।
06041012a ಕ್ವ ಗಮಿಷ್ಯಸಿ ರಾಜೇಂದ್ರ ನಿಕ್ಷಿಪ್ತಕವಚಾಯುಧಃ।
06041012c ದಂಶಿತೇಷ್ವರಿಸೈನ್ಯೇಷು ಭ್ರಾತೄನುತ್ಸೃಜ್ಯ ಪಾರ್ಥಿವ।।
ಭೀಮಸೇನನು ಹೇಳಿದನು: “ರಾಜೇಂದ್ರ! ಪಾರ್ಥಿವ! ಕವಚಾಯುಧಗಳನ್ನು ಕೆಳಗಿಟ್ಟು, ಕವಚಗಳಿಂದ ಕೂಡಿದ ಅರಿಸೇನೆಗಳ ಕಡೆ ತಮ್ಮಂದಿರನ್ನು ತೊರೆದು ಎಲ್ಲಿಗೆ ಹೋಗುತ್ತಿದ್ದೀಯೆ?”
06041013 ನಕುಲ ಉವಾಚ।
06041013a ಏವಂಗತೇ ತ್ವಯಿ ಜ್ಯೇಷ್ಠೇ ಮಮ ಭ್ರಾತರಿ ಭಾರತ।
06041013c ಭೀರ್ಮೇ ಮೇ ದುನೋತಿ ಹೃದಯಂ ಬ್ರೂಹಿ ಗಂತಾ ಭವಾನ್ಕ್ವ ನು।।
ನಕುಲನು ಹೇಳಿದನು: “ಭಾರತ! ನೀನು ನನ್ನ ಹಿರಿಯಣ್ಣ. ಈ ರೀತಿ ನೀನು ಹೋಗುತ್ತಿರುವುದರಿಂದ ಭೀತಿಯು ನನ್ನ ಹೃದಯವನ್ನು ನೋಯಿಸುತ್ತಿದೆ. ಹೇಳು! ನೀನು ಎಲ್ಲಿಗೆ ಹೋಗುತ್ತಿರುವೆ?”
06041014 ಸಹದೇವ ಉವಾಚ।
06041014a ಅಸ್ಮಿನ್ರಣಸಮೂಹೇ ವೈ ವರ್ತಮಾನೇ ಮಹಾಭಯೇ।
06041014c ಯೋದ್ಧವ್ಯೇ ಕ್ವ ನು ಗಂತಾಸಿ ಶತ್ರೂನಭಿಮುಖೋ ನೃಪ।।
ಸಹದೇವನು ಹೇಳಿದನು: “ಸದ್ಯದಲ್ಲಿಯೇ ಮಹಾಭಯಂಕರ ಯುದ್ಧಮಾಡಲಿಕ್ಕಿರುವ ಈ ರಣಸಮೂಹದಲ್ಲಿ ಶತ್ರುಗಳ ಕಡೆ ಎಲ್ಲಿಗೆ ಹೋಗುತ್ತೀಯೆ ನೃಪ!””
06041015 ಸಂಜಯ ಉವಾಚ।
06041015a ಏವಮಾಭಾಷ್ಯಮಾಣೋಽಪಿ ಭ್ರಾತೃಭಿಃ ಕುರುನಂದನ।
06041015c ನೋವಾಚ ವಾಗ್ಯತಃ ಕಿಂ ಚಿದ್ಗಚ್ಛತ್ಯೇವ ಯುಧಿಷ್ಠಿರಃ।।
ಸಂಜಯನು ಹೇಳಿದನು: “ಕುರುನಂದನ! ತಮ್ಮಂದಿರು ಈ ರೀತಿ ಕೇಳುತ್ತಿದ್ದರೂ ಯುಧಿಷ್ಠಿರನು ಏನನ್ನೂ ಮಾತನಾಡದೇ ಮುಂದುವರೆದನು.
06041016a ತಾನುವಾಚ ಮಹಾಪ್ರಾಜ್ಞೋ ವಾಸುದೇವೋ ಮಹಾಮನಾಃ।
06041016c ಅಭಿಪ್ರಾಯೋಽಸ್ಯ ವಿಜ್ಞಾತೋ ಮಯೇತಿ ಪ್ರಹಸನ್ನಿವ।।
ಮಹಾಪ್ರಾಜ್ಞ ಮಹಾಮನಸ್ವಿ ವಾಸುದೇವನು ಅವರಿಗೆ ನಗುತ್ತಾ “ಇವನ ಅಭಿಪ್ರಾಯವು ನನಗೆ ತಿಳಿದಿದೆ” ಎಂದನು.
06041017a ಏಷ ಭೀಷ್ಮಂ ತಥಾ ದ್ರೋಣಂ ಗೌತಮಂ ಶಲ್ಯಮೇವ ಚ।
06041017c ಅನುಮಾನ್ಯ ಗುರೂನ್ಸರ್ವಾನ್ಯೋತ್ಸ್ಯತೇ ಪಾರ್ಥಿವೋಽರಿಭಿಃ।।
“ಈ ಪಾರ್ಥಿವನು ಭೀಷ್ಮ, ದ್ರೋಣ, ಗೌತಮ ಮತ್ತು ಶಲ್ಯರೇ ಮೊದಲಾದ ಗುರುಗಳನ್ನು ಗೌರವಿಸಿ ಎಲ್ಲ ಶತ್ರುಗಳೊಂದಿಗೆ ಹೋರಾಡುತ್ತಾನೆ.
06041018a ಶ್ರೂಯತೇ ಹಿ ಪುರಾಕಲ್ಪೇ ಗುರೂನನನುಮಾನ್ಯ ಯಃ।
06041018c ಯುಧ್ಯತೇ ಸ ಭವೇದ್ವ್ಯಕ್ತಮಪಧ್ಯಾತೋ ಮಹತ್ತರೈಃ।।
ಗುರುಗಳನ್ನು ಗೌರವಿಸಿ ನಮಸ್ಕರಿಸಿ ಯಾರು ಯುದ್ಧಮಾಡುತ್ತಾನೋ ಅವನು ಮಹತ್ತರ ಆಪತ್ತುಗಳನ್ನೂ ಜಯಿಸುತ್ತಾನೆಂದು ಹಿಂದಿನ ಕಲ್ಪಗಳಿಂದ ಕೇಳುತ್ತೇವೆ.
06041019a ಅನುಮಾನ್ಯ ಯಥಾಶಾಸ್ತ್ರಂ ಯಸ್ತು ಯುಧ್ಯೇನ್ಮಹತ್ತರೈಃ।
06041019c ಧ್ರುವಸ್ತಸ್ಯ ಜಯೋ ಯುದ್ಧೇ ಭವೇದಿತಿ ಮತಿರ್ಮಮ।।
ತನಗಿಂತಲೂ ಮಹತ್ತರರನ್ನು ಯಥಾಶಾಸ್ತ್ರವಾಗಿ ನಮಸ್ಕರಿಸಿ ಯುದ್ಧಮಾಡುವವನಿಗೆ ಯುದ್ಧದಲ್ಲಿ ಜಯವು ಖಂಡಿತವಾದುದು ಎಂದು ನನಗನ್ನಿಸುತ್ತದೆ.”
06041020a ಏವಂ ಬ್ರುವತಿ ಕೃಷ್ಣೇ ತು ಧಾರ್ತರಾಷ್ಟ್ರಚಮೂಂ ಪ್ರತಿ।
06041020c ಹಾಹಾಕಾರೋ ಮಹಾನಾಸೀನ್ನಿಃಶಬ್ದಾಸ್ತ್ವಪರೇಽಭವನ್।।
ಕೃಷ್ಣನು ಹೀಗೆ ಹೇಳಲು ಧಾರ್ತರಾಷ್ಟ್ರನ ಸೇನೆಯಲ್ಲಿ ಮಹಾ ಹಾಹಾಕಾರವಾಯಿತು. ಇನ್ನೊಂದು ಕಡೆಯಲ್ಲಿ ನಿಃಶಬ್ಧವಾಯಿತು.
06041021a ದೃಷ್ಟ್ವಾ ಯುಧಿಷ್ಠಿರಂ ದೂರಾದ್ಧಾರ್ತರಾಷ್ಟ್ರಸ್ಯ ಸೈನಿಕಾಃ।
06041021c ಮಿಥಃ ಸಂಕಥಯಾಂ ಚಕ್ರುರ್ನೇಶೋಽಸ್ತಿ ಕುಲಪಾಂಸನಃ।।
ದೂರದಿಂದಲೇ ಯುಧಿಷ್ಠಿರನನ್ನು ನೋಡಿ ಧಾರ್ತರಾಷ್ಟ್ರನ ಸೈನಿಕರು ತಮ್ಮೊಂದಿಗೇ ಮಾತನಾಡಿಕೊಂಡರು: “ಇವನು ಕುಲಪಾಂಸನ!
06041022a ವ್ಯಕ್ತಂ ಭೀತ ಇವಾಭ್ಯೇತಿ ರಾಜಾಸೌ ಭೀಷ್ಮಮಂತಿಕಾತ್।
06041022c ಯುಧಿಷ್ಠಿರಃ ಸಸೋದರ್ಯಃ ಶರಣಾರ್ಥಂ ಪ್ರಯಾಚಕಃ।।
ಈ ರಾಜನು ಹೆದರಿಕೊಂಡಿದ್ದಾನೆ ಎನ್ನುವುದು ವ್ಯಕ್ತವಾಗುತ್ತಿದೆ. ಯುಧಿಷ್ಠಿರನು ಸೋದರರೊಂದಿಗೆ ಶರಣಾಗಲು ಬೇಡಿಕೊಂಡು ಭೀಷ್ಮನಲ್ಲಿಗೆ ಬರುತ್ತಿದ್ದಾನೆ.
06041023a ಧನಂಜಯೇ ಕಥಂ ನಾಥೇ ಪಾಂಡವೇ ಚ ವೃಕೋದರೇ।
06041023c ನಕುಲೇ ಸಹದೇವೇ ಚ ಭೀತೋಽಭ್ಯೇತಿ ಚ ಪಾಂಡವಃ।।
ಧನಂಜಯ, ಪಾಂಡವ ವೃಕೋದರ, ನಕುಲ ಸಹದೇವರು ನಾಯಕರಾಗಿರುವಾಗ ಈ ಪಾಂಡವನು ಏಕೆ ಭೀತನಾಗಿದ್ದಾನೆ?
06041024a ನ ನೂನಂ ಕ್ಷತ್ರಿಯಕುಲೇ ಜಾತಃ ಸಂಪ್ರಥಿತೇ ಭುವಿ।
06041024c ಯಥಾಸ್ಯ ಹೃದಯಂ ಭೀತಮಲ್ಪಸತ್ತ್ವಸ್ಯ ಸಂಯುಗೇ।।
ಭುವಿಯಲ್ಲಿ ಪ್ರಸಿದ್ಧನಾದರೂ, ಯುದ್ಧದ ಕುರಿತು ಹೃದಯದಲ್ಲಿ ಭೀತಿಪಡುತ್ತಿರುವ ಈ ಅಲ್ಪಸತ್ವನು ಕ್ಷತ್ರಿಯಕುಲದಲ್ಲಿಯೇ ಜನಿಸಿರಲಿಕ್ಕಿಲ್ಲ!”
06041025a ತತಸ್ತೇ ಕ್ಷತ್ರಿಯಾಃ ಸರ್ವೇ ಪ್ರಶಂಸಂತಿ ಸ್ಮ ಕೌರವಾನ್।
06041025c ಹೃಷ್ಟಾಃ ಸುಮನಸೋ ಭೂತ್ವಾ ಚೈಲಾನಿ ದುಧುವುಃ ಪೃಥಕ್।।
ಆಗ ಆ ಕ್ಷತ್ರಿಯರೆಲ್ಲರೂ ಕೌರವರನ್ನು ಪ್ರಶಂಸಿಸಿದರು. ಸಂತೋಷದಿಂದ ಸುಮನಸ್ಕರಾಗಿ ತಮ್ಮ ಅಂಗವಸ್ತ್ರಗಳನ್ನು ಪುನಃ ಪುನಃ ಮೇಲೆತ್ತಿ ಬೀಸಿದರು.
06041026a ವ್ಯನಿಂದಂತ ತತಃ ಸರ್ವೇ ಯೋಧಾಸ್ತತ್ರ ವಿಶಾಂ ಪತೇ।
06041026c ಯುಧಿಷ್ಠಿರಂ ಸಸೋದರ್ಯಂ ಸಹಿತಂ ಕೇಶವೇನ ಹ।।
ವಿಶಾಂಪತೇ! ಆಗ ಅಲ್ಲಿರುವ ಯೋಧರೆಲ್ಲರೂ ಸೋದರರೊಂದಿಗೆ ಯುಧಿಷ್ಠಿರನನ್ನೂ ಜೊತೆಗೆ ಕೇಶವನನ್ನೂ ನಿಂದಿಸಿದರು.
06041027a ತತಸ್ತತ್ಕೌರವಂ ಸೈನ್ಯಂ ಧಿಕ್ಕೃತ್ವಾ ತು ಯುಧಿಷ್ಠಿರಂ।
06041027c ನಿಃಶಬ್ದಮಭವತ್ತೂರ್ಣಂ ಪುನರೇವ ವಿಶಾಂ ಪತೇ।।
ವಿಶಾಂಪತೇ! ಆಗ ಯುಧಿಷ್ಠಿರನನ್ನು ಧಿಕ್ಕರಿಸಿ ಕೌರವ ಸೈನ್ಯವು ಪುನಃ ನಿಃಶಬ್ಧವಾಯಿತು.
06041028a ಕಿಂ ನು ವಕ್ಷ್ಯತಿ ರಾಜಾಸೌ ಕಿಂ ಭೀಷ್ಮಃ ಪ್ರತಿವಕ್ಷ್ಯತಿ।
06041028c ಕಿಂ ಭೀಮಃ ಸಮರಶ್ಲಾಘೀ ಕಿಂ ನು ಕೃಷ್ಣಾರ್ಜುನಾವಿತಿ।।
06041029a ವಿವಕ್ಷಿತಂ ಕಿಮಸ್ಯೇತಿ ಸಂಶಯಃ ಸುಮಹಾನಭೂತ್।
06041029c ಉಭಯೋಃ ಸೇನಯೋ ರಾಜನ್ಯುಧಿಷ್ಠಿರಕೃತೇ ತದಾ।।
ಯುಧಿಷ್ಠಿರನು ಹೀಗೆ ಮಾಡಲು ಎರಡೂ ಸೇನೆಗಳಲ್ಲಿ “ರಾಜನು ಏನು ಹೇಳುತ್ತಾನೆ? ಭೀಷ್ಮನು ಏನೆಂದು ಉತ್ತರಿಸುತ್ತಾನೆ? ಸಮರಶ್ಲಾಘೀ ಭೀಮ ಮತ್ತು ಕೃಷ್ಣಾರ್ಜುನರು ಏನು ಹೇಳುತ್ತಾರೆ?” ಎಂದು ಮಹಾ ಸಂಶಯವುಂಟಾಯಿತು.
06041030a ಸ ವಿಗಾಹ್ಯ ಚಮೂಂ ಶತ್ರೋಃ ಶರಶಕ್ತಿಸಮಾಕುಲಾಂ।
06041030c ಭೀಷ್ಮಮೇವಾಭ್ಯಯಾತ್ತೂರ್ಣಂ ಭ್ರಾತೃಭಿಃ ಪರಿವಾರಿತಃ।।
ಅವನು ಶರ-ಶಕ್ತಿಗಳಿಂದ ಕೂಡಿದ್ದ ಶತ್ರುಗಳ ಸೇನೆಯನ್ನು ಪ್ರವೇಶಿಸಿ, ತಮ್ಮಂದಿರಿಂದ ಸುತ್ತುವರೆಯಲ್ಪಟ್ಟು ಭೀಷ್ಮನನ್ನು ಸಮೀಪಿಸಿದನು.
06041031a ತಂ ಉವಾಚ ತತಃ ಪಾದೌ ಕರಾಭ್ಯಾಂ ಪೀಡ್ಯ ಪಾಂಡವಃ।
06041031c ಭೀಷ್ಮಂ ಶಾಂತನವಂ ರಾಜಾ ಯುದ್ಧಾಯ ಸಮುಪಸ್ಥಿತಂ।।
ಆಗ ರಾಜಾ ಪಾಂಡವನು ಯುದ್ಧಕ್ಕೆ ಸಿದ್ಧನಾಗಿದ್ದ ಶಾಂತನವ ಭೀಷ್ಮನ ಪಾದಗಳನ್ನು ಕೈಗಳಿಂದ ಹಿಡಿದುಕೊಂಡು ಹೇಳಿದನು:
06041032 ಯುಧಿಷ್ಠಿರ ಉವಾಚ।
06041032a ಆಮಂತ್ರಯೇ ತ್ವಾಂ ದುರ್ಧರ್ಷ ಯೋತ್ಸ್ಯೇ ತಾತ ತ್ವಯಾ ಸಹ।
06041032c ಅನುಜಾನೀಹಿ ಮಾಂ ತಾತ ಆಶಿಷಶ್ಚ ಪ್ರಯೋಜಯ।।
ಯುಧಿಷ್ಠಿರನು ಹೇಳಿದನು: “ತಾತ! ದುರ್ಧರ್ಷ! ನಿನ್ನೊಡನೆ ಯುದ್ಧಮಾಡಲು ಕರೆಸಿಕೊಂಡಿರುವೆ! ಅನುಜ್ಞೆಯನ್ನು ನೀಡು. ತಾತ! ಜಯವಾಗಲೆಂದು ಆಶೀರ್ವದಿಸು!”
06041033 ಭೀಷ್ಮ ಉವಾಚ।
06041033a ಯದ್ಯೇವಂ ನಾಭಿಗಚ್ಛೇಥಾ ಯುಧಿ ಮಾಂ ಪೃಥಿವೀಪತೇ।
06041033c ಶಪೇಯಂ ತ್ವಾಂ ಮಹಾರಾಜ ಪರಾಭಾವಾಯ ಭಾರತ।।
ಭೀಷ್ಮನು ಹೇಳಿದನು: “ಭಾರತ! ಪೃಥಿವೀಪತೇ! ಮಹಾರಾಜ! ಹೀಗೆ ನೀನು ನನ್ನ ಬಳಿ ಬರದೇ ಇದ್ದಿದ್ದರೆ ನಿನಗೆ ಪರಾಭವವಾಗಲೆಂದು ಶಪಿಸುತ್ತಿದ್ದೆ.
06041034a ಪ್ರೀತೋಽಸ್ಮಿ ಪುತ್ರ ಯುಧ್ಯಸ್ವ ಜಯಮಾಪ್ನುಹಿ ಪಾಂಡವ।
06041034c ಯತ್ತೇಽಭಿಲಷಿತಂ ಚಾನ್ಯತ್ತದವಾಪ್ನುಹಿ ಸಂಯುಗೇ।।
ಪುತ್ರ! ಪಾಂಡವ! ಪ್ರೀತನಾಗಿದ್ದೇನೆ. ಯುದ್ಧಮಾಡು. ಜಯವನ್ನು ಹೊಂದು. ಯುದ್ಧದಲ್ಲಿ ನಿನಗೆ ಅನ್ಯ ಏನೆಲ್ಲ ಅಭಿಲಾಷೆಗಳಿವೆಯೋ ಅವುಗಳನ್ನೂ ಪಡೆಯುತ್ತೀಯೆ.
06041035a ವ್ರಿಯತಾಂ ಚ ವರಃ ಪಾರ್ಥ ಕಿಮಸ್ಮತ್ತೋಽಭಿಕಾಂಕ್ಷಸಿ।
06041035c ಏವಂ ಗತೇ ಮಹಾರಾಜ ನ ತವಾಸ್ತಿ ಪರಾಜಯಃ।।
ಪಾರ್ಥ! ನನ್ನಿಂದ ಏನನ್ನು ಬಯಸುತ್ತೀಯೋ ಆ ವರವನ್ನು ಕೇಳು. ಮಹಾರಾಜ! ಇದೇ ರೀತಿ ನಡೆದರೆ ನಿನಗೆ ಪರಾಜಯವಿಲ್ಲ.
06041036a ಅರ್ಥಸ್ಯ ಪುರುಷೋ ದಾಸೋ ದಾಸಸ್ತ್ವರ್ಥೋ ನ ಕಸ್ಯ ಚಿತ್।
06041036c ಇತಿ ಸತ್ಯಂ ಮಹಾರಾಜ ಬದ್ಧೋಽಸ್ಮ್ಯರ್ಥೇನ ಕೌರವೈಃ।।
ಮನುಷ್ಯನು ಧನದ ದಾಸನೇ ಹೊರತು ಧನವು ಎಂದೂ ಯಾರ ದಾಸನೂ ಆಗಿರುವುದಿಲ್ಲ. ಮಹಾರಾಜ! ಇದು ಸತ್ಯ. ಧನದಿಂದಲೇ ನಾನು ಕೌರವರಿಗೆ ಬದ್ಧನಾಗಿದ್ದೇನೆ.
06041037a ಅತಸ್ತ್ವಾಂ ಕ್ಲೀಬವದ್ವಾಕ್ಯಂ ಬ್ರವೀಮಿ ಕುರುನಂದನ।
06041037c ಹೃತೋಽಸ್ಮ್ಯರ್ಥೇನ ಕೌರವ್ಯ ಯುದ್ಧಾದನ್ಯತ್ಕಿಮಿಚ್ಛಸಿ।।
ಕುರುನಂದನ! ಆದುದರಿಂದ ಈ ಕ್ಲೀಬವಾಕ್ಯವನ್ನು ಹೇಳುತ್ತಿದ್ದೇನೆ. ಧನದಿಂದ ನಾನು ಅಪಹೃತನಾಗಿದ್ದೇನೆ. ಕೌರವ್ಯ! ಯುದ್ಧದಿಂದ ಬೇರೆ ಏನನ್ನು ಇಚ್ಛಿಸುತ್ತೀಯೆ?”
06041038 ಯುಧಿಷ್ಠಿರ ಉವಾಚ।
06041038a ಮಂತ್ರಯಸ್ವ ಮಹಾಪ್ರಾಜ್ಞ ಹಿತೈಷೀ ಮಮ ನಿತ್ಯಶಃ।
06041038c ಯುಧ್ಯಸ್ವ ಕೌರವಸ್ಯಾರ್ಥೇ ಮಮೈಷ ಸತತಂ ವರಃ।।
ಯುಧಿಷ್ಠಿರನು ಹೇಳಿದನು: “ಮಹಾಪ್ರಾಜ್ಞ! ನಿತ್ಯವೂ ನನ್ನ ಹಿತೈಷಿಯಾಗಿ ಸಲಹೆ ನೀಡುತ್ತಿರು. ಸತತವೂ ಕೌರವನಿಗೋಸ್ಕರ ಯುದ್ಧಮಾಡು. ಇದೇ ನನ್ನ ವರ.”
06041039 ಭೀಷ್ಮ ಉವಾಚ।
06041039a ರಾಜನ್ಕಿಮತ್ರ ಸಾಹ್ಯಂ ತೇ ಕರೋಮಿ ಕುರುನಂದನ।
06041039c ಕಾಮಂ ಯೋತ್ಸ್ಯೇ ಪರಸ್ಯಾರ್ಥೇ ಬ್ರೂಹಿ ಯತ್ತೇ ವಿವಕ್ಷಿತಂ।।
ಭೀಷ್ಮನು ಹೇಳಿದನು: “ರಾಜನ್! ಕುರುನಂದನ! ಇದರಲ್ಲಿ ನಿನಗೆ ಏನು ಸಹಾಯಮಾಡಲಿ? ನಿನ್ನ ಶತ್ರುಗಳಿಗಾಗಿ ಹೋರಾಡುತ್ತಿದ್ದೇನೆ. ನಿನ್ನ ಬಯಕೆಯೇನೆನ್ನುವುದನ್ನು ಹೇಳು!”
06041040 ಯುಧಿಷ್ಠಿರ ಉವಾಚ।
06041040a ಕಥಂ ಜಯೇಯಂ ಸಂಗ್ರಾಮೇ ಭವಂತಮಪರಾಜಿತಂ।
06041040c ಏತನ್ಮೇ ಮಂತ್ರಯ ಹಿತಂ ಯದಿ ಶ್ರೇಯಃ ಪ್ರಪಶ್ಯಸಿ।।
ಯುಧಿಷ್ಠಿರನು ಹೇಳಿದನು: “ಅಪರಾಜಿತನಾದ ನಿನ್ನನ್ನು ಸಂಗ್ರಾಮದಲ್ಲಿ ಹೇಗೆ ಜಯಿಸಬಹುದು? ನಿನಗೆ ಶ್ರೇಯಸ್ಕರವೆಂದು ಕಂಡರೆ ನನಗೆ ಹಿತವಾದ ಈ ಸಲಹೆಯನ್ನು ನೀಡು.”
06041041 ಭೀಷ್ಮ ಉವಾಚ।
06041041a ನ ತಂ ಪಶ್ಯಾಮಿ ಕೌಂತೇಯ ಯೋ ಮಾಂ ಯುಧ್ಯಂತಮಾಹವೇ।
06041041c ವಿಜಯೇತ ಪುಮಾನ್ಕಶ್ಚಿದಪಿ ಸಾಕ್ಷಾಚ್ಚತಕ್ರತುಃ।।
ಭೀಷ್ಮನು ಹೇಳಿದನು: “ಕೌಂತೇಯ! ಆಹವದಲ್ಲಿ ನನ್ನೊಂದಿಗೆ ಯುದ್ಧಮಾಡಿ ಗೆಲ್ಲುವ ಯಾವ ಪುರುಷನನ್ನೂ, ಸಾಕ್ಷಾತ್ ಶತಕ್ರತುವೂ ಕೂಡ, ನಾನು ಕಾಣುವುದಿಲ್ಲ.”
06041042 ಯುಧಿಷ್ಠಿರ ಉವಾಚ।
06041042a ಹಂತ ಪೃಚ್ಛಾಮಿ ತಸ್ಮಾತ್ತ್ವಾಂ ಪಿತಾಮಹ ನಮೋಽಸ್ತು ತೇ।
06041042c ಜಯೋಪಾಯಂ ಬ್ರವೀಹಿ ತ್ವಮಾತ್ಮನಃ ಸಮರೇ ಪರೈಃ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ನಿನಗೆ ನಮಸ್ಕಾರಗಳು! ಅದನ್ನು ಪುನಃ ನಿನ್ನಲ್ಲಿ ಕೇಳುತ್ತಿದ್ದೇನೆ. ಸಮರದಲ್ಲಿ ಶತ್ರುಗಳು ನಿನ್ನನ್ನು ಗೆಲ್ಲುವ ಉಪಾಯವನ್ನು ಹೇಳು.”
06041043 ಭೀಷ್ಮ ಉವಾಚ।
06041043a ನ ಶತ್ರುಂ ತಾತ ಪಶ್ಯಾಮಿ ಸಮರೇ ಯೋ ಜಯೇತ ಮಾಂ।
06041043c ನ ತಾವನ್ಮೃತ್ಯುಕಾಲೋ ಮೇ ಪುನರಾಗಮನಂ ಕುರು।।
ಭೀಷ್ಮನು ಹೇಳಿದನು: “ಮಗೂ! ಸಮರದಲ್ಲಿ ನನ್ನನ್ನು ಜಯಿಸಬಲ್ಲ ಶತ್ರುವನ್ನು ನಾನು ಕಾಣುವುದಿಲ್ಲ. ನನ್ನ ಮೃತ್ಯುಕಾಲವು ಇನ್ನೂ ಬಂದಿಲ್ಲ. ಪುನಃ ಬರುವುದನ್ನು ಮಾಡು!””
06041044 ಸಂಜಯ ಉವಾಚ।
06041044a ತತೋ ಯುಧಿಷ್ಠಿರೋ ವಾಕ್ಯಂ ಭೀಷ್ಮಸ್ಯ ಕುರುನಂದನ।
06041044c ಶಿರಸಾ ಪ್ರತಿಜಗ್ರಾಹ ಭೂಯಸ್ತಮಭಿವಾದ್ಯ ಚ।।
ಸಂಜಯನು ಹೇಳಿದನು: “ಕುರುನಂದನ! ಆಗ ಭೀಷ್ಮನ ವಾಕ್ಯವನ್ನು ಶಿರಸಾ ಸ್ವೀಕರಿಸಿ ಯುಧಿಷ್ಠಿರನು ಪುನಃ ಅವನನ್ನು ವಂದಿಸಿದನು.
06041045a ಪ್ರಾಯಾತ್ಪುನರ್ಮಹಾಬಾಹುರಾಚಾರ್ಯಸ್ಯ ರಥಂ ಪ್ರತಿ।
06041045c ಪಶ್ಯತಾಂ ಸರ್ವಸೈನ್ಯಾನಾಂ ಮಧ್ಯೇನ ಭ್ರಾತೃಭಿಃ ಸಹ।।
ಅನಂತರ ಆ ಮಹಾಬಾಹುವು ಸರ್ವಸೈನ್ಯಗಳಿಗೂ ಕಾಣಿಸುವಂತೆ ಮಧ್ಯದಲ್ಲಿ ತಮ್ಮಂದಿರನ್ನೊಡಗೂಡಿ ಆಚಾರ್ಯನ ರಥದ ಕಡೆ ನಡೆದನು.
06041046a ಸ ದ್ರೋಣಮಭಿವಾದ್ಯಾಥ ಕೃತ್ವಾ ಚೈವ ಪ್ರದಕ್ಷಿಣಂ।
06041046c ಉವಾಚ ವಾಚಾ ದುರ್ಧರ್ಷಮಾತ್ಮನಿಃಶ್ರೇಯಸಂ ವಚಃ।।
ಅವನು ಆ ದುರ್ಧರ್ಷ ದ್ರೋಣನನ್ನು ಪ್ರದಕ್ಷಿಣೆಮಾಡಿ ನಮಸ್ಕರಿಸಿ ತನಗೆ ಶ್ರೇಯಸ್ಸನ್ನು ನೀಡುವಂತಹ ಮಾತುಗಳನ್ನಾಡಿದನು.
06041047a ಆಮಂತ್ರಯೇ ತ್ವಾಂ ಭಗವನ್ಯೋತ್ಸ್ಯೇ ವಿಗತಕಲ್ಮಷಃ।
06041047c ಜಯೇಯಂ ಚ ರಿಪೂನ್ಸರ್ವಾನನುಜ್ಞಾತಸ್ತ್ವಯಾ ದ್ವಿಜ।।
“ಭಗವನ್! ವಿಗತಕಲ್ಮಶನಾದ ನಿನ್ನೊಡನೆ ಯುದ್ಧಮಾಡಲು ಆಮಂತ್ರಿತನಾಗಿದ್ದೇನೆ. ದ್ವಿಜ! ನಿನ್ನಿಂದ ಅನುಜ್ಞಾತನಾಗಿ ಸರ್ವ ಶತ್ರುಗಳನ್ನೂ ಗೆಲ್ಲಬಲ್ಲೆನು.”
06041048 ದ್ರೋಣ ಉವಾಚ।
06041048a ಯದಿ ಮಾಂ ನಾಭಿಗಚ್ಛೇಥಾ ಯುದ್ಧಾಯ ಕೃತನಿಶ್ಚಯಃ।
06041048c ಶಪೇಯಂ ತ್ವಾಂ ಮಹಾರಾಜ ಪರಾಭಾವಾಯ ಸರ್ವಶಃ।।
ದ್ರೋಣನು ಹೇಳಿದನು: “ಮಹಾರಾಜ! ಯುದ್ಧದ ನಿಶ್ಚಯವನ್ನು ಮಾಡಿ ಒಂದುವೇಳೆ ನೀನು ನನ್ನಲ್ಲಿಗೆ ಬಾರದೇ ಇದ್ದಿದ್ದರೆ ನಾನು ನಿನಗೆ ಎಲ್ಲೆಡೆಯಿಂದ ಪರಾಭವವಾಗಲೆಂದು ಶಪಿಸುತ್ತಿದ್ದೆ.
06041049a ತದ್ಯುಧಿಷ್ಠಿರ ತುಷ್ಟೋಽಸ್ಮಿ ಪೂಜಿತಶ್ಚ ತ್ವಯಾನಘ।
06041049c ಅನುಜಾನಾಮಿ ಯುಧ್ಯಸ್ವ ವಿಜಯಂ ಸಮವಾಪ್ನುಹಿ।।
ಅನಘ! ಯುಧಿಷ್ಠಿರ! ನಿನ್ನಿಂದ ಪೂಜಿತನಾಗಿ ತುಷ್ಟನಾಗಿದ್ದೇನೆ. ಅನುಮತಿಯನ್ನಿತ್ತಿದ್ದೇನೆ. ಯುದ್ಧ ಮಾಡು! ವಿಜಯವನ್ನು ಹೊಂದುವೆ!
06041050a ಕರವಾಣಿ ಚ ತೇ ಕಾಮಂ ಬ್ರೂಹಿ ಯತ್ತೇಽಭಿಕಾಂಕ್ಷಿತಂ।
06041050c ಏವಂ ಗತೇ ಮಹಾರಾಜ ಯುದ್ಧಾದನ್ಯತ್ಕಿಮಿಚ್ಛಸಿ।।
ಈಗ ನಿನಗಿಷ್ಟವಾದುದನ್ನು ಮಾಡಲು ಬಿಡು. ನೀನು ಏನನ್ನು ಬಯಸುತ್ತೀಯೆ ಹೇಳು. ಮಹಾರಾಜ! ಹೀಗಿರುವಾಗ ಯುದ್ಧದಲ್ಲಿ ಸಹಾಯವನ್ನು ಬಿಟ್ಟು ಬೇರೆ ಏನನ್ನು ಬಯಸುತ್ತೀಯೆ?
06041051a ಅರ್ಥಸ್ಯ ಪುರುಷೋ ದಾಸೋ ದಾಸಸ್ತ್ವರ್ಥೋ ನ ಕಸ್ಯ ಚಿತ್।
06041051c ಇತಿ ಸತ್ಯಂ ಮಹಾರಾಜ ಬದ್ಧೋಽಸ್ಮ್ಯರ್ಥೇನ ಕೌರವೈಃ।।
ಮನುಷ್ಯನು ಧನದ ದಾಸನೇ ಹೊರತು ಧನವು ಎಂದೂ ಯಾರ ದಾಸನೂ ಆಗಿರುವುದಿಲ್ಲ. ಮಹಾರಾಜ! ಇದು ಸತ್ಯ. ಧನದಿಂದಲೇ ನಾನು ಕೌರವರಿಗೆ ಬದ್ಧನಾಗಿದ್ದೇನೆ.
06041052a ಅತಸ್ತ್ವಾಂ ಕ್ಲೀಬವದ್ಬ್ರೂಮೋ ಯುದ್ಧಾದನ್ಯತ್ಕಿಮಿಚ್ಛಸಿ।
06041052c ಯೋತ್ಸ್ಯಾಮಿ ಕೌರವಸ್ಯಾರ್ಥೇ ತವಾಶಾಸ್ಯೋ ಜಯೋ ಮಯಾ।।
ಆದುದರಿಂದ ನಾನು ಒಬ್ಬ ಶಂಡನಂತೆ ಯುದ್ಧದಲ್ಲಿ ಸಹಾಯವಲ್ಲದೇ ಬೇರೆ ಏನನ್ನು ಬಯಸುತ್ತೀಯೆಂದು ಕೇಳುತ್ತಿದ್ದೇನೆ. ನಾನು ಕೌರವನಿಗಾಗಿ ಹೋರಾಡುತ್ತೇನೆ. ಆದರೆ ನನ್ನ ಆಸೆಯು ನಿನ್ನ ಜಯದ ಕುರಿತಾಗಿದೆ.”
06041053 ಯುಧಿಷ್ಠಿರ ಉವಾಚ।
06041053a ಜಯಮಾಶಾಸ್ಸ್ವ ಮೇ ಬ್ರಹ್ಮನ್ಮಂತ್ರಯಸ್ವ ಚ ಮದ್ಧಿತಂ।
06041053c ಯುಧ್ಯಸ್ವ ಕೌರವಸ್ಯಾರ್ಥೇ ವರ ಏಷ ವೃತೋ ಮಯಾ।।
ಯುಧಿಷ್ಠಿರನು ಹೇಳಿದನು: “ಬ್ರಹ್ಮನ್! ನನ್ನ ಜಯವನ್ನು ಬಯಸು. ನನ್ನ ಹಿತದಲ್ಲಿ ಸಲಹೆ ನೀಡು. ಕೌರವನ ಕಡೆಯಿಂದ ಯುದ್ಧಮಾಡು. ಇದು ನಾನು ಆರಿಸಿಕೊಳ್ಳುವ ವರ.”
06041054 ದ್ರೋಣ ಉವಾಚ।
06041054a ಧ್ರುವಸ್ತೇ ವಿಜಯೋ ರಾಜನ್ಯಸ್ಯ ಮಂತ್ರೀ ಹರಿಸ್ತವ।
06041054c ಅಹಂ ಚ ತ್ವಾಭಿಜಾನಾಮಿ ರಣೇ ಶತ್ರೂನ್ವಿಜೇಷ್ಯಸಿ।।
ದ್ರೋಣನು ಹೇಳಿದನು: “ರಾಜನ್! ಹರಿಯೇ ಮಂತ್ರಿಯಾಗಿರುವ ನಿನಗೆ ವಿಜಯವು ನಿಶ್ಚಯಿಸಿದ್ದು. ನನಗೂ ಕೂಡ ತಿಳಿದಿದೆ. ರಣದಲ್ಲಿ ಶತ್ರುಗಳನ್ನು ಜಯಿಸುತ್ತೀಯೆ.
06041055a ಯತೋ ಧರ್ಮಸ್ತತಃ ಕೃಷ್ಣೋ ಯತಃ ಕೃಷ್ಣಸ್ತತೋ ಜಯಃ।
06041055c ಯುಧ್ಯಸ್ವ ಗಚ್ಛ ಕೌಂತೇಯ ಪೃಚ್ಛ ಮಾಂ ಕಿಂ ಬ್ರವೀಮಿ ತೇ।।
ಧರ್ಮವು ಎಲ್ಲಿದೆಯೋ ಅಲ್ಲಿ ಕೃಷ್ಣ. ಕೃಷ್ಣನೆಲ್ಲಿರುವನೋ ಅಲ್ಲಿ ಜಯ. ಕೌಂತೇಯ! ಹೋಗು. ಯುದ್ಧಮಾಡು. ಕೇಳು. ಇನ್ನೇನು ಹೇಳಲಿ?”
06041056 ಯುಧಿಷ್ಠಿರ ಉವಾಚ।
06041056a ಪೃಚ್ಛಾಮಿ ತ್ವಾಂ ದ್ವಿಜಶ್ರೇಷ್ಠ ಶೃಣು ಮೇ ಯದ್ವಿವಕ್ಷಿತಂ।
06041056c ಕಥಂ ಜಯೇಯಂ ಸಂಗ್ರಾಮೇ ಭವಂತಮಪರಾಜಿತಂ।।
ಯುಧಿಷ್ಠಿರನು ಹೇಳಿದನು: “ದ್ವಿಜಶ್ರೇಷ್ಠ! ನಾನು ನಿನ್ನಲ್ಲಿ ಕೇಳುತ್ತಿದ್ದೇನೆ. ಹೇಳುವುದನ್ನು ಕೇಳು. ಸಂಗ್ರಾಮದಲ್ಲಿ ನಾವು ಹೇಗೆ ನಿನ್ನನ್ನು ಸೋಲಿಸಿ ಜಯವನ್ನು ಪಡೆಯಬಹುದು?”
06041057 ದ್ರೋಣ ಉವಾಚ।
06041057a ನ ತೇಽಸ್ತಿ ವಿಜಯಸ್ತಾವದ್ಯಾವದ್ಯುಧ್ಯಾಮ್ಯಹಂ ರಣೇ।
06041057c ಮಮಾಶು ನಿಧನೇ ರಾಜನ್ಯತಸ್ವ ಸಹ ಸೋದರೈಃ।।
ದ್ರೋಣನು ಹೇಳಿದನು: “ರಾಜನ್! ರಣದಲ್ಲಿ ನಾನು ಯುದ್ಧ ಮಾಡುತ್ತಿರುವವರೆಗೆ ನಿನಗೆ ವಿಜಯವಿಲ್ಲ. ಸೋದರರೊಂದಿಗೆ ಬೇಗನೆ ನನ್ನ ಸಾವಿಗೆ ಪ್ರಯತ್ನಿಸು.”
06041058 ಯುಧಿಷ್ಠಿರ ಉವಾಚ।
06041058a ಹಂತ ತಸ್ಮಾನ್ಮಹಾಬಾಹೋ ವಧೋಪಾಯಂ ವದಾತ್ಮನಃ।
06041058c ಆಚಾರ್ಯ ಪ್ರಣಿಪತ್ಯೈಷ ಪೃಚ್ಛಾಮಿ ತ್ವಾಂ ನಮೋಽಸ್ತು ತೇ।।
ಯುಧಿಷ್ಠಿರನು ಹೇಳಿದನು: “ಮಹಾಬಾಹೋ! ಹಾಗಿದ್ದರೆ ನಿನ್ನ ವಧೆಯ ಉಪಾಯವನ್ನು ಹೇಳು. ಆಚಾರ್ಯ! ನಿನಗೆ ನಮಸ್ಕಾರಗಳು. ಇದನ್ನು ತಿಳಿಸಿಕೊಡು. ಕೇಳಿಕೊಳ್ಳುತ್ತಿದ್ದೇನೆ.”
06041059 ದ್ರೋಣ ಉವಾಚ।
06041059a ನ ಶತ್ರುಂ ತಾತ ಪಶ್ಯಾಮಿ ಯೋ ಮಾಂ ಹನ್ಯಾದ್ರಣೇ ಸ್ಥಿತಂ।
06041059c ಯುಧ್ಯಮಾನಂ ಸುಸಂರಬ್ಧಂ ಶರವರ್ಷೌಘವರ್ಷಿಣಂ।।
ದ್ರೋಣನು ಹೇಳಿದನು: “ಮಗೂ! ರಣದಲ್ಲಿ ನಿಂತಿರುವ, ಸುಸಂರಬ್ಧನಾಗಿ ಶರವರ್ಷಗಳನ್ನು ಸುರಿಸುತ್ತಾ ಯುದ್ಧಮಾಡುತ್ತಿರುವ ನನ್ನನ್ನು ಕೊಲ್ಲುವ ಯಾವ ಶತ್ರುವನ್ನೂ ನಾನು ಕಾಣೆ!
06041060a ಋತೇ ಪ್ರಾಯಗತಂ ರಾಜನ್ನ್ಯಸ್ತಶಸ್ತ್ರಮಚೇತನಂ।
06041060c ಹನ್ಯಾನ್ಮಾಂ ಯುಧಿ ಯೋಧಾನಾಂ ಸತ್ಯಮೇತದ್ಬ್ರವೀಮಿ ತೇ।।
ರಾಜನ್! ಶಸ್ತ್ರಗಳನ್ನು ಕೆಳಗಿಟ್ಟು, ಅಚೇತನನಾಗಿ ಪ್ರಾಯಗತನಾದ ನನ್ನನ್ನು ಮಾತ್ರ ಯುದ್ಧದಲ್ಲಿ ಯೋಧರು ಕೊಲ್ಲಬಹುದು. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.
06041061a ಶಸ್ತ್ರಂ ಚಾಹಂ ರಣೇ ಜಹ್ಯಾಂ ಶ್ರುತ್ವಾ ಸುಮಹದಪ್ರಿಯಂ।
06041061c ಶ್ರದ್ಧೇಯವಾಕ್ಯಾತ್ಪುರುಷಾದೇತತ್ಸತ್ಯಂ ಬ್ರವೀಮಿ ತೇ।।
ನನಗೆ ಶ್ರದ್ಧೆಯಿರುವವನ ಕ್ರೂರವಾದ ಸುಮಹಾ ಅಪ್ರಿಯ ವಾಕ್ಯಗಳನ್ನು ಕೇಳಿ ನಾನು ರಣದಲ್ಲಿ ಶಸ್ತ್ರಗಳನ್ನು ತ್ಯಜಿಸಿಯೇನು. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.””
06041062 ಸಂಜಯ ಉವಾಚ 06041062a ಏತಚ್ಚ್ರುತ್ವಾ ಮಹಾರಾಜ ಭಾರದ್ವಾಜಸ್ಯ ಧೀಮತಃ।
06041062c ಅನುಮಾನ್ಯ ತಮಾಚಾರ್ಯಂ ಪ್ರಾಯಾಚ್ಚಾರದ್ವತಂ ಪ್ರತಿ।।
ಸಂಜಯನು ಹೇಳಿದನು: “ಮಹಾರಾಜ! ಭಾರದ್ವಾಜನ ಈ ಮಾತನ್ನು ಕೇಳಿ ಧೀಮತನು ಆಚಾರ್ಯನ ಅನುಮತಿಯನ್ನು ಪಡೆದು ಶಾರದ್ವತನ ಕಡೆ ನಡೆದನು.
06041063a ಸೋಽಭಿವಾದ್ಯ ಕೃಪಂ ರಾಜಾ ಕೃತ್ವಾ ಚಾಪಿ ಪ್ರದಕ್ಷಿಣಂ।
06041063c ಉವಾಚ ದುರ್ಧರ್ಷತಮಂ ವಾಕ್ಯಂ ವಾಕ್ಯವಿಶಾರದಃ।।
ಆ ವಾಕ್ಯವಿಶಾರದ ರಾಜನು ಕೃಪನನ್ನೂ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಆ ದುರ್ಧರ್ಷತಮನಿಗೆ ಈ ಮಾತನ್ನಾಡಿದನು:
06041064a ಅನುಮಾನಯೇ ತ್ವಾಂ ಯೋತ್ಸ್ಯಾಮಿ ಗುರೋ ವಿಗತಕಲ್ಮಷಃ।
06041064c ಜಯೇಯಂ ಚ ರಿಪೂನ್ಸರ್ವಾನನುಜ್ಞಾತಸ್ತ್ವಯಾನಘ।।
“ಗುರೋ! ಕಲ್ಮಷಗಳನ್ನು ಕಳೆದುಕೊಂಡು ನಿನ್ನೊಂದಿಗೆ ಯುದ್ಧಮಾಡುತ್ತೇನೆ. ಅಪ್ಪಣೆ ಕೊಡಬೇಕು. ಅನಘ! ಈ ರಿಪುಗಳೆಲ್ಲರನ್ನೂ ಜಯಿಸುತ್ತೇನೆ. ಅನುಜ್ಞೆ ನೀಡಬೇಕು!”
06041065 ಕೃಪ ಉವಾಚ।
06041065a ಯದಿ ಮಾಂ ನಾಭಿಗಚ್ಛೇಥಾ ಯುದ್ಧಾಯ ಕೃತನಿಶ್ಚಯಃ।
06041065c ಶಪೇಯಂ ತ್ವಾಂ ಮಹಾರಾಜ ಪರಾಭಾವಾಯ ಸರ್ವಶಃ।।
ಕೃಪನು ಹೇಳಿದನು: “ಯುದ್ಧವನ್ನು ನಿಶ್ಚಯಿಸಿ ನೀನು ನನ್ನ ಬಳಿ ಬರದೇ ಇದ್ದಿದ್ದರೆ ಮಹಾರಾಜ! ನಾನು ನಿನ್ನ ಸರ್ವಶಃ ಸೋಲಾಗಲೆಂದು ಶಪಿಸುತ್ತಿದ್ದೆ.
06041066a ಅರ್ಥಸ್ಯ ಪುರುಷೋ ದಾಸೋ ದಾಸಸ್ತ್ವರ್ಥೋ ನ ಕಸ್ಯ ಚಿತ್।
06041066c ಇತಿ ಸತ್ಯಂ ಮಹಾರಾಜ ಬದ್ಧೋಽಸ್ಮ್ಯರ್ಥೇನ ಕೌರವೈಃ।।
ಮನುಷ್ಯನು ಧನದ ದಾಸನೇ ಹೊರತು ಧನವು ಎಂದೂ ಯಾರ ದಾಸನೂ ಆಗಿರುವುದಿಲ್ಲ. ಮಹಾರಾಜ! ಇದು ಸತ್ಯ. ಧನದಿಂದಲೇ ನಾನು ಕೌರವರಿಗೆ ಬದ್ಧನಾಗಿದ್ದೇನೆ.
06041067a ತೇಷಾಮರ್ಥೇ ಮಹಾರಾಜ ಯೋದ್ಧವ್ಯಂ ಇತಿ ಮೇ ಮತಿಃ।
06041067c ಅತಸ್ತ್ವಾಂ ಕ್ಲೀಬವದ್ಬ್ರೂಮಿ ಯುದ್ಧಾದನ್ಯತ್ಕಿಮಿಚ್ಛಸಿ।।
ಮಹಾರಾಜ! ಅವರ ಉದ್ದೇಶಕ್ಕೆ ಹೋರಾಡಬೇಕೆಂದು ನನ್ನ ಅಭಿಪ್ರಾಯವಿದೆ. ಆದುದರಿಂದ ಶಂಡನಂತೆ ಹೇಳುತ್ತಿದ್ದೇನೆ. ನಿನ್ನ ಪರವಾಗಿ ಯುದ್ಧಮಾಡುವುದನ್ನು ಬಿಟ್ಟು ಬೇರೆ ಏನನ್ನು ಬಯಸುತ್ತೀಯೆ?”
06041068 ಯುಧಿಷ್ಠಿರ ಉವಾಚ।
06041068a ಹಂತ ಪೃಚ್ಛಾಮಿ ತೇ ತಸ್ಮಾದಾಚಾರ್ಯ ಶೃಣು ಮೇ ವಚಃ।
ಯುಧಿಷ್ಠಿರನು ಹೇಳಿದನು: “ಆಚಾರ್ಯ! ಅದು ಹಾಗಿದೆಯೆಂದೇ ನಿನ್ನನ್ನು ಕೇಳಿಕೊಳ್ಳುತ್ತೇನೆ. ನನ್ನ ಮಾತನ್ನು ಕೇಳು.””
06041069 ಸಂಜಯ ಉವಾಚ।
06041069a ಇತ್ಯುಕ್ತ್ವಾ ವ್ಯಥಿತೋ ರಾಜಾ ನೋವಾಚ ಗತಚೇತನಃ।
06041069c ತಂ ಗೌತಮಃ ಪ್ರತ್ಯುವಾಚ ವಿಜ್ಞಾಯಾಸ್ಯ ವಿವಕ್ಷಿತಂ।
06041069e ಅವಧ್ಯೋಽಹಂ ಮಹೀಪಾಲ ಯುಧ್ಯಸ್ವ ಜಯಮಾಪ್ನುಹಿ।।
ಸಂಜಯನು ಹೇಳಿದನು: “ಇದನ್ನು ಹೇಳಿ ವ್ಯಥಿತನಾದ ರಾಜನು ಚೇತನವನ್ನು ಕಳೆದುಕೊಂಡು ಏನನ್ನೂ ಹೇಳದೇ ಸುಮ್ಮನಾದನು. ಆದರೆ ಅವನು ಹೇಳಬಯಸಿದುದನ್ನು ತಿಳಿದುಕೊಂಡ ಗೌತಮನು ಉತ್ತರಿಸಿದನು: “ಮಹೀಪಾಲ! ನಾನು ಅವಧ್ಯ! ಯುದ್ಧಮಾಡು! ಜಯವನ್ನು ಹೊಂದು!
06041070a ಪ್ರೀತಸ್ತ್ವಭಿಗಮೇನಾಹಂ ಜಯಂ ತವ ನರಾಧಿಪ।
06041070c ಆಶಾಸಿಷ್ಯೇ ಸದೋತ್ಥಾಯ ಸತ್ಯಮೇತದ್ಬ್ರವೀಮಿ ತೇ।।
ನೀನು ಬಂದಿದುದರಿಂದ ಪ್ರೀತನಾಗಿದ್ದೇನೆ. ನರಾಧಿಪ! ಪ್ರತಿದಿನ ಬೆಳಿಗ್ಗೆ ಎದ್ದು ನಿನ್ನ ಜಯಕ್ಕಾಗಿ ಆಶಿಸುತ್ತೇನೆ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.”
06041071a ಏತಚ್ಚ್ರುತ್ವಾ ಮಹಾರಾಜ ಗೌತಮಸ್ಯ ವಚಸ್ತದಾ।
06041071c ಅನುಮಾನ್ಯ ಕೃಪಂ ರಾಜಾ ಪ್ರಯಯೌ ಯೇನ ಮದ್ರರಾಟ್।।
ಮಹಾರಾಜ! ಗೌತಮನಾಡಿದ ಈ ಮಾತುಗಳನ್ನು ಕೇಳಿ ರಾಜನು ಕೃಪನಿಂದ ಅನುಮತಿಯನ್ನು ಪಡೆದು ಮದ್ರರಾಜನಿರುವಲ್ಲಿಗೆ ಹೋದನು.
06041072a ಸ ಶಲ್ಯಮಭಿವಾದ್ಯಾಥ ಕೃತ್ವಾ ಚಾಭಿಪ್ರದಕ್ಷಿಣಂ।
06041072c ಉವಾಚ ರಾಜಾ ದುರ್ಧರ್ಷಮಾತ್ಮನಿಃಶ್ರೇಯಸಂ ವಚಃ।।
ಆಗ ಅವನು ಆ ದುರ್ಧರ್ಷ ಶಲ್ಯನಿಗೂ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ತನಗೆ ಶ್ರೇಯಸ್ಸನ್ನು ಕೊಡುವ ಈ ಮಾತುಗಳನ್ನು ಹೇಳಿದನು:
06041073a ಅನುಮಾನಯೇ ತ್ವಾಂ ಯೋತ್ಸ್ಯಾಮಿ ಗುರೋ ವಿಗತಕಲ್ಮಷಃ।
06041073c ಜಯೇಯಂ ಚ ಮಹಾರಾಜ ಅನುಜ್ಞಾತಸ್ತ್ವಯಾ ರಿಪೂನ್।।
“ಗುರೋ! ವಿಗತಕಲ್ಮಶನಾಗಿ ನಿನ್ನೊಡನೆ ಯುದ್ಧ ಮಾಡುತ್ತೇನೆ. ಮಹಾರಾಜ! ರಿಪುಗಳನ್ನು ಜಯಿಸಲು ನಿನ್ನ ಅನುಜ್ಞೆಯನ್ನು ನೀಡು!”
06041074 ಶಲ್ಯ ಉವಾಚ।
06041074a ಯದಿ ಮಾಂ ನಾಭಿಗಚ್ಛೇಥಾ ಯುದ್ಧಾಯ ಕೃತನಿಶ್ಚಯಃ।
06041074c ಶಪೇಯಂ ತ್ವಾಂ ಮಹಾರಾಜ ಪರಾಭಾವಾಯ ವೈ ರಣೇ।।
ಶಲ್ಯನು ಹೇಳಿದನು: “ಯುದ್ಧ ಮಾಡಲು ನಿಶ್ಚಯ ಮಾಡಿ ನೀನು ನನ್ನಲ್ಲಿಗೆ ಬರದಿದ್ದರೆ ಮಹಾರಾಜ! ರಣದಲ್ಲಿ ನಿನ್ನ ಪರಾಭವವಾಗಲೆಂದು ಶಪಿಸುತ್ತಿದ್ದೆ.
06041075a ತುಷ್ಟೋಽಸ್ಮಿ ಪೂಜಿತಶ್ಚಾಸ್ಮಿ ಯತ್ಕಾಂಕ್ಷಸಿ ತದಸ್ತು ತೇ।
06041075c ಅನುಜಾನಾಮಿ ಚೈವ ತ್ವಾಂ ಯುಧ್ಯಸ್ವ ಜಯಮಾಪ್ನುಹಿ।।
ನಿನ್ನಿಂದ ತೃಪ್ತನಾಗಿದ್ದೇನೆ. ಗೌರವಿಸಲ್ಪಟ್ಟಿದ್ದೇನೆ. ಏನನ್ನು ಬಯಸುತ್ತೀಯೋ ಅದು ನಿನ್ನದಾಗಲಿ! ನಿನಗೆ ಅಪ್ಪಣೆಯನ್ನೂ ಕೊಡುತ್ತಿದ್ದೇನೆ. ಯುದ್ಧಮಾಡು. ಜಯವನ್ನು ಪಡೆ.
06041076a ಬ್ರೂಹಿ ಚೈವ ಪರಂ ವೀರ ಕೇನಾರ್ಥಃ ಕಿಂ ದದಾಮಿ ತೇ।
06041076c ಏವಂ ಗತೇ ಮಹಾರಾಜ ಯುದ್ಧಾದನ್ಯತ್ಕಿಮಿಚ್ಛಸಿ।।
ವೀರ! ಬೇರೆ ಏನಾದರೂ ಕೇಳುವುದಿದ್ದರೆ ಹೇಳು. ನಿನಗೆ ಏನನ್ನು ಕೊಡಲಿ? ಮಹಾರಾಜ! ಹೀಗಿರುವಾಗ ಯುದ್ಧದಲ್ಲಿ ಸಹಾಯವೊಂದನ್ನು ಬಿಟ್ಟು ಬೇರೆ ಏನನ್ನು ಬಯಸುತ್ತೀಯೆ?
06041077a ಅರ್ಥಸ್ಯ ಪುರುಷೋ ದಾಸೋ ದಾಸಸ್ತ್ವರ್ಥೋ ನ ಕಸ್ಯ ಚಿತ್।
06041077c ಇತಿ ಸತ್ಯಂ ಮಹಾರಾಜ ಬದ್ಧೋಽಸ್ಮ್ಯರ್ಥೇನ ಕೌರವೈಃ।।
ಮನುಷ್ಯನು ಧನದ ದಾಸನೇ ಹೊರತು ಧನವು ಎಂದೂ ಯಾರ ದಾಸನೂ ಆಗಿರುವುದಿಲ್ಲ. ಮಹಾರಾಜ! ಇದು ಸತ್ಯ. ಧನದಿಂದಲೇ ನಾನು ಕೌರವರಿಗೆ ಬದ್ಧನಾಗಿದ್ದೇನೆ.
06041078a ಕರಿಷ್ಯಾಮಿ ಹಿ ತೇ ಕಾಮಂ ಭಾಗಿನೇಯ ಯಥೇಪ್ಸಿತಂ।
06041078c ಬ್ರವೀಮ್ಯತಃ ಕ್ಲೀಬವತ್ತ್ವಾಂ ಯುದ್ಧಾದನ್ಯತ್ಕಿಮಿಚ್ಛಸಿ।।
ತಂಗಿಯ ಮಗನೇ! ನೀನು ಏನನ್ನು ಬಯಸುತ್ತೀಯೋ ಅದನ್ನು ಮಾಡುತ್ತೇನೆ. ಶಂಡನಂತೆ ಹೇಳುತ್ತಿದ್ದೇನೆ. ಯುದ್ಧದಲ್ಲಿ ಸಹಾಯದ ಹೊರತು ಏನನ್ನು ಬಯಸುತ್ತೀಯೆ?”
06041079 ಯುಧಿಷ್ಠಿರ ಉವಾಚ।
06041079a ಮಂತ್ರಯಸ್ವ ಮಹಾರಾಜ ನಿತ್ಯಂ ಮದ್ಧಿತಮುತ್ತಮಂ।
06041079c ಕಾಮಂ ಯುಧ್ಯ ಪರಸ್ಯಾರ್ಥೇ ವರಮೇತದ್ವೃಣೋಮ್ಯಹಂ।।
ಯುಧಿಷ್ಠಿರನು ಹೇಳಿದನು: “ಮಹಾರಾಜ! ನಿತ್ಯವೂ ನನ್ನ ಹಿತದಲ್ಲಿ ಉತ್ತಮ ಸಲಹೆಗಳನ್ನು ನೀಡು. ಬೇಕಾದರೆ ಶತ್ರುಗಳಿಗಾಗಿ ಯುದ್ಧಮಾಡು. ಇದೇ ನಾನು ಆರಿಸಿಕೊಳ್ಳುವ ವರ.”
06041080 ಶಲ್ಯ ಉವಾಚ।
06041080a ಬ್ರೂಹಿ ಕಿಮತ್ರ ಸಾಹ್ಯಂ ತೇ ಕರೋಮಿ ನೃಪಸತ್ತಮ।
06041080c ಕಾಮಂ ಯೋತ್ಸ್ಯೇ ಪರಸ್ಯಾರ್ಥೇ ವೃತೋಽಸ್ಮ್ಯರ್ಥೇನ ಕೌರವೈಃ।।
ಶಲ್ಯನು ಹೇಳಿದನು: “ನೃಪಸತ್ತಮ! ಹೇಳು! ಇದರಲ್ಲಿ ನಿನಗೆ ನಾನು ಏನು ಸಹಾಯವನ್ನು ಮಾಡಬೇಕು? ಕೌರವರು ಧನವನ್ನಿತ್ತು ನನ್ನನ್ನು ಆರಿಸಿಕೊಂಡಿರುವುದರಿಂದ ಅವರಿಗಾಗಿ ನಾನು ಯುದ್ಧಮಾಡಲು ಬಯಸುತ್ತೇನೆ.”
06041081 ಯುಧಿಷ್ಠಿರ ಉವಾಚ।
06041081a ಸ ಏವ ಮೇ ವರಃ ಸತ್ಯ ಉದ್ಯೋಗೇ ಯಸ್ತ್ವಯಾ ಕೃತಃ।
06041081c ಸೂತಪುತ್ರಸ್ಯ ಸಂಗ್ರಾಮೇ ಕಾರ್ಯಸ್ತೇಜೋವಧಸ್ತ್ವಯಾ।।
ಯುಧಿಷ್ಠಿರನು ಹೇಳಿದನು: “ಉದ್ಯೋಗದ ಸಮಯದಲ್ಲಿ ನೀನು ನನಗೆ ಏನು ವರವನ್ನು ನೀಡಿದ್ದೆಯೋ ಅದನ್ನೇ ಸತ್ಯವಾಗಿಸು. ಸಂಗ್ರಾಮದಲ್ಲಿ ಸೂತಪುತ್ರನ ತೇಜೋವಧೆಯನ್ನು ಮಾಡು!”
06041082 ಶಲ್ಯ ಉವಾಚ।
06041082a ಸಂಪತ್ಸ್ಯತ್ಯೇಷ ತೇ ಕಾಮಃ ಕುಂತೀಪುತ್ರ ಯಥೇಪ್ಸಿತಃ।
06041082c ಗಚ್ಛ ಯುಧ್ಯಸ್ವ ವಿಸ್ರಬ್ಧಂ ಪ್ರತಿಜಾನೇ ಜಯಂ ತವ।।
ಶಲ್ಯನು ಹೇಳಿದನು: “ಕುಂತೀಪುತ್ರ! ನೀನು ಬಯಸಿದ ಹಾಗೆ ಇದು ನಡೆಯುತ್ತದೆ. ಹೋಗು! ವಿಸ್ರಬ್ಧನಾಗಿ ಯುದ್ಧಮಾಡು. ನಿನಗೆ ಜಯದ ಭರವಸೆಯನ್ನು ನೀಡುತ್ತೇನೆ!””
06041083 ಸಂಜಯ ಉವಾಚ।
06041083a ಅನುಮಾನ್ಯಾಥ ಕೌಂತೇಯೋ ಮಾತುಲಂ ಮದ್ರಕೇಶ್ವರಂ।
06041083c ನಿರ್ಜಗಾಮ ಮಹಾಸೈನ್ಯಾದ್ಭ್ರಾತೃಭಿಃ ಪರಿವಾರಿತಃ।।
ಸಂಜಯನು ಹೇಳಿದನು: “ಆಗ ಮಾತುಲ ಮಾದ್ರಕೇಶ್ವರನಿಂದ ಅನುಮತಿಯನ್ನು ಪಡೆದು ಕೌಂತೇಯನು ಸಹೋದರರಿಂದ ಪರಿವಾರಿತನಾಗಿ ಆ ಮಹಾಸೇನೆಯಿಂದ ನಿರ್ಗಮಿಸಿದನು.
06041084a ವಾಸುದೇವಸ್ತು ರಾಧೇಯಮಾಹವೇಽಭಿಜಗಾಮ ವೈ।
06041084c ತತ ಏನಮುವಾಚೇದಂ ಪಾಂಡವಾರ್ಥೇ ಗದಾಗ್ರಜಃ।।
ಅಷ್ಟರಲ್ಲಿ ಗದಾಗ್ರಜ ವಾಸುದೇವನು ರಾಧೇಯನನ್ನು ರಣರಂಗದಲ್ಲಿ ಭೇಟಿಯಾಗಿ, ಪಾಂಡವರ ಪರವಾಗಿ ಇದನ್ನು ಹೇಳಿದನು:
06041085a ಶ್ರುತಂ ಮೇ ಕರ್ಣ ಭೀಷ್ಮಸ್ಯ ದ್ವೇಷಾತ್ಕಿಲ ನ ಯೋತ್ಸ್ಯಸಿ।
06041085c ಅಸ್ಮಾನ್ವರಯ ರಾಧೇಯ ಯಾವದ್ಭೀಷ್ಮೋ ನ ಹನ್ಯತೇ।।
“ಕರ್ಣ! ಭೀಷ್ಮನ ದ್ವೇಷದಿಂದಾಗಿ ನೀನು ಯುದ್ಧಮಾಡುತ್ತಿಲ್ಲವೆಂದು ನಾನು ಕೇಳಿದ್ದೇನೆ. ಭೀಷ್ಮನು ಸಾಯುವವರೆಗೆ ರಾಧೇಯ! ನಮ್ಮನ್ನು ವರಿಸು!
06041086a ಹತೇ ತು ಭೀಷ್ಮೇ ರಾಧೇಯ ಪುನರೇಷ್ಯಸಿ ಸಂಯುಗೇ।
06041086c ಧಾರ್ತರಾಷ್ಟ್ರಸ್ಯ ಸಾಹಾಯ್ಯಂ ಯದಿ ಪಶ್ಯಸಿ ಚೇತ್ಸಮಂ।।
ರಾಧೇಯ! ಭೀಷ್ಮನ ಮೃತ್ಯುವಾದ ಬಳಿಕ ಯುದ್ಧದಲ್ಲಿ ನಿನಗೆ ಸರಿಯೆಂದು ಹೇಗನಿಸುತ್ತದೆಯೋ ಹಾಗೆ ಧಾರ್ತರಾಷ್ಟ್ರನ ಸಹಾಯವನ್ನು ಮಾಡುವಿಯಂತೆ!”
06041087 ಕರ್ಣ ಉವಾಚ।
06041087a ನ ವಿಪ್ರಿಯಂ ಕರಿಷ್ಯಾಮಿ ಧಾರ್ತರಾಷ್ಟ್ರಸ್ಯ ಕೇಶವ।
06041087c ತ್ಯಕ್ತಪ್ರಾಣಂ ಹಿ ಮಾಂ ವಿದ್ಧಿ ದುರ್ಯೋಧನಹಿತೈಷಿಣಂ।।
ಕರ್ಣನು ಹೇಳಿದನು: “ಕೇಶವ! ಧಾರ್ತರಾಷ್ಟ್ರನಿಗೆ ವಿಪ್ರಿಯವಾಗಿ ಮಾಡಲಾರೆ. ದುರ್ಯೋಧನನ ಹಿತೈಷಿಣಿಯಾಗಿ ಪ್ರಾಣವನ್ನೇ ತ್ಯಜಿಸುತ್ತೇನೆ. ನಿನಗಿದು ತಿಳಿದೇ ಇದೆ.””
06041088 ಸಂಜಯ ಉವಾಚ।
06041088a ತಚ್ಚ್ರುತ್ವಾ ವಚನಂ ಕೃಷ್ಣಃ ಸಮ್ನ್ಯವರ್ತತ ಭಾರತ।
06041088c ಯುಧಿಷ್ಠಿರಪುರೋಗೈಶ್ಚ ಪಾಂಡವೈಃ ಸಹ ಸಂಗತಃ।।
ಸಂಜಯನು ಹೇಳಿದನು: “ಭಾರತ! ಅವನ ಆ ಮಾತನ್ನು ಕೇಳಿ ಕೃಷ್ಣನು ಯುಧಿಷ್ಠಿರನನ್ನು ಮುಂದಿರಿಸಿಕೊಂಡು ಹಿಂದಿರುಗುತ್ತಿದ್ದ ಪಾಂಡವರೊಂದಿಗೆ ಕೂಡಿಕೊಂಡನು.
06041089a ಅಥ ಸೈನ್ಯಸ್ಯ ಮಧ್ಯೇ ತು ಪ್ರಾಕ್ರೋಶತ್ಪಾಂಡವಾಗ್ರಜಃ।
06041089c ಯೋಽಸ್ಮಾನ್ವೃಣೋತಿ ತದಹಂ ವರಯೇ ಸಾಹ್ಯಕಾರಣಾತ್।।
ಆಗ ಸೈನ್ಯದ ಮಧ್ಯೆ ಪಾಂಡವಾಗ್ರಜನು ಕೂಗಿ ಹೇಳಿದನು: “ಯಾರಾದರೂ ನಮ್ಮ ಪಕ್ಷವನ್ನು ಸೇರಬೇಕೆಂದಿದ್ದರೆ ನಾನು ಅವನನ್ನು ನನ್ನ ಸಹಾಯಕನೆಂದು ಸ್ವೀಕರಿಸುತ್ತೇನೆ!”
06041090a ಅಥ ತಾನ್ಸಮಭಿಪ್ರೇಕ್ಷ್ಯ ಯುಯುತ್ಸುರಿದಮಬ್ರವೀತ್।
06041090c ಪ್ರೀತಾತ್ಮಾ ಧರ್ಮರಾಜಾನಂ ಕುಂತೀಪುತ್ರಂ ಯುಧಿಷ್ಠಿರಂ।।
ಆಗ ಯುಯುತ್ಸುವು ಅವರನ್ನು ನೋಡಿ, ಪ್ರೀತಾತ್ಮಾ ಧರ್ಮರಾಜ ಕುಂತೀಪುತ್ರ ಯುಧಿಷ್ಠಿರನಿಗೆ ಇದನ್ನು ಹೇಳಿದನು:
06041091a ಅಹಂ ಯೋತ್ಸ್ಯಾಮಿ ಮಿಷತಃ ಸಂಯುಗೇ ಧಾರ್ತರಾಷ್ಟ್ರಜಾನ್।
06041091c ಯುಷ್ಮದರ್ಥೇ ಮಹಾರಾಜ ಯದಿ ಮಾಂ ವೃಣುಷೇಽನಘ।।
“ಮಹಾರಾಜ! ಅನಘ! ನೀನು ನನ್ನನ್ನು ಸ್ವೀಕರಿಸಿದರೆ ನಾನು ಬಹಿರಂಗವಾಗಿ ಧಾರ್ತರಾಷ್ಟ್ರರ ವಿರುದ್ಧವಾಗಿ ನಿನ್ನ ಪರವಾಗಿ ರಣದಲ್ಲಿ ಹೋರಾಡುತ್ತೇನೆ.”
06041092 ಯುಧಿಷ್ಠಿರ ಉವಾಚ।
06041092a ಏಹ್ಯೇಹಿ ಸರ್ವೇ ಯೋತ್ಸ್ಯಾಮಸ್ತವ ಭ್ರಾತೄನಪಂಡಿತಾನ್।
06041092c ಯುಯುತ್ಸೋ ವಾಸುದೇವಶ್ಚ ವಯಂ ಚ ಬ್ರೂಮ ಸರ್ವಶಃ।।
ಯುಧಿಷ್ಠಿರನು ಹೇಳಿದನು: “ಬಾ! ಬಾ ಯುಯುತ್ಸೋ! ನಾವೆಲ್ಲರೂ ನಿನ್ನ ಈ ಅಪಂಡಿತ ಸಹೋದರರನ್ನು ಎದುರಿಸಿ ಯುದ್ಧಮಾಡೋಣ! ವಾಸುದೇವನೊಂದಿಗೆ ನಾವೆಲ್ಲರೂ ಹೇಳುತ್ತಿದ್ದೇವೆ.
06041093a ವೃಣೋಮಿ ತ್ವಾಂ ಮಹಾಬಾಹೋ ಯುಧ್ಯಸ್ವ ಮಮ ಕಾರಣಾತ್।
06041093c ತ್ವಯಿ ಪಿಂಡಶ್ಚ ತಂತುಶ್ಚ ಧೃತರಾಷ್ಟ್ರಸ್ಯ ದೃಶ್ಯತೇ।।
ಮಹಾಬಾಹೋ! ನಿನ್ನನ್ನು ಸ್ವೀಕರಿಸಿದ್ದೇನೆ. ನನ್ನ ಕಾರಣಕ್ಕಾಗಿ ಯುದ್ಧಮಾಡು. ನೀನೇ ಧೃತರಾಷ್ಟ್ರನ ವಂಶದ ತಂತುವೂ ಅವನಿಗೆ ಪಿಂಡವನ್ನು ನೀಡುವವನೂ ಎಂದು ತೋರುತ್ತಿದ್ದೀಯೆ.
06041094a ಭಜಸ್ವಾಸ್ಮಾನ್ರಾಜಪುತ್ರ ಭಜಮಾನಾನ್ಮಹಾದ್ಯುತೇ।
06041094c ನ ಭವಿಷ್ಯತಿ ದುರ್ಬುದ್ಧಿರ್ಧಾರ್ತರಾಷ್ಟ್ರೋಽತ್ಯಮರ್ಷಣಃ।।
ರಾಜಪುತ್ರ! ಮಹಾದ್ಯುತೇ! ನಾವು ನಿನ್ನನ್ನು ಸ್ವೀಕರಿಸುವಂತೆ ನೀನೂ ನಮ್ಮನ್ನು ಸ್ವೀಕರಿಸು. ಅತ್ಯಮರ್ಷಣ ದುರ್ಬುದ್ಧಿ ಧಾರ್ತರಾಷ್ಟ್ರನು ಇಲ್ಲವಾಗುತ್ತಾನೆ!””
06041095 ಸಂಜಯ ಉವಾಚ।
06041095a ತತೋ ಯುಯುತ್ಸುಃ ಕೌರವ್ಯಃ ಪರಿತ್ಯಜ್ಯ ಸುತಾಂಸ್ತವ।
06041095c ಜಗಾಮ ಪಾಂಡುಪುತ್ರಾಣಾಂ ಸೇನಾಂ ವಿಶ್ರಾವ್ಯ ದುಂದುಭಿಂ।।
ಸಂಜಯನು ಹೇಳಿದನು: “ಆಗ ಕೌರವ್ಯ ಯುಯುತ್ಸುವು, ದುಂದುಭಿಗಳು ಕೇಳುತ್ತಿರಲು, ನಿನ್ನ ಮಗನನ್ನು ತ್ಯಜಿಸಿ ಪಾಂಡುಪುತ್ರರ ಸೇನೆಗೆ ಹೋದನು.
06041096a ತತೋ ಯುಧಿಷ್ಠಿರೋ ರಾಜಾ ಸಂಪ್ರಹೃಷ್ಟಃ ಸಹಾನುಜೈಃ।
06041096c ಜಗ್ರಾಹ ಕವಚಂ ಭೂಯೋ ದೀಪ್ತಿಮತ್ಕನಕೋಜ್ಜ್ವಲಂ।।
ಆಗ ರಾಜಾ ಯುಧಿಷ್ಠಿರನು ಸಂಪ್ರಹೃಷ್ಟನಾಗಿ ಅನುಜರೊಂದಿಗೆ ಪುನಃ ಬೆಳಗುತ್ತಿದ್ದ ಕನಕೋಜ್ಜ್ವಲ ಕವಚವನ್ನು ಧರಿಸಿದನು.
06041097a ಪ್ರತ್ಯಪದ್ಯಂತ ತೇ ಸರ್ವೇ ರಥಾನ್ಸ್ವಾನ್ಪುರುಷರ್ಷಭಾಃ।
06041097c ತತೋ ವ್ಯೂಹಂ ಯಥಾಪೂರ್ವಂ ಪ್ರತ್ಯವ್ಯೂಹಂತ ತೇ ಪುನಃ।।
ಆ ಎಲ್ಲ ಪುರುಷರ್ಷಭರೂ ತಮ್ಮ ತಮ್ಮ ರಥಗಳನ್ನೇರಿ ಮೊದಲಿನಂತೆಯೇ ಪುನಃ ವ್ಯೂಹಗಳನ್ನು ರಚಿಸಿಕೊಂಡರು.
06041098a ಅವಾದಯನ್ದುಂದುಭೀಂಶ್ಚ ಶತಶಶ್ಚೈವ ಪುಷ್ಕರಾನ್।
06041098c ಸಿಂಹನಾದಾಂಶ್ಚ ವಿವಿಧಾನ್ವಿನೇದುಃ ಪುರುಷರ್ಷಭಾಃ।।
ಆ ಪುರುಷರ್ಷಭರು ನೂರಾರು ದುಂದುಭಿಗಳನ್ನೂ ನೂರಾರು ಪುಷ್ಕರಗಳನ್ನೂ ಮೊಳಗಿಸಿದರು. ವಿವಿಧ ಸಿಂಹನಾದಗಳನ್ನೂ ಗೈದರು.
06041099a ರಥಸ್ಥಾನ್ಪುರುಷವ್ಯಾಘ್ರಾನ್ಪಾಂಡವಾನ್ಪ್ರೇಕ್ಷ್ಯ ಪಾರ್ಥಿವಾಃ।
06041099c ಧೃಷ್ಟದ್ಯುಮ್ನಾದಯಃ ಸರ್ವೇ ಪುನರ್ಜಹೃಷಿರೇ ಮುದಾ।।
ರಥದ ಮೇಲೇರಿದ್ದ ಆ ಪುರುಷವ್ಯಾಘ್ರ ಪಾಂಡವರನ್ನು ಪುನಃ ಕಂಡು ಧೃಷ್ಟದ್ಯುಮ್ನನೇ ಮೊದಲಾದ ಪಾರ್ಥಿವರೆಲ್ಲರೂ ಸಂತೋಷಭರಿತರಾದರು.
06041100a ಗೌರವಂ ಪಾಂಡುಪುತ್ರಾಣಾಂ ಮಾನ್ಯಾನ್ಮಾನಯತಾಂ ಚ ತಾನ್।
06041100c ದೃಷ್ಟ್ವಾ ಮಹೀಕ್ಷಿತಸ್ತತ್ರ ಪೂಜಯಾಂ ಚಕ್ರಿರೇ ಭೃಶಂ।।
ಗೌರವಿಸಬೇಕಾದವರನ್ನು ಗೌರವಿಸಿದ ಪಾಂಡುಪುತ್ರರ ಗೌರವವನ್ನು ನೋಡಿ ಅಲ್ಲಿದ್ದ ಮಹೀಕ್ಷಿತರು ಅವರನ್ನು ತುಂಬಾ ಗೌರವಿಸಿದರು.
06041101a ಸೌಹೃದಂ ಚ ಕೃಪಾಂ ಚೈವ ಪ್ರಾಪ್ತಕಾಲಂ ಮಹಾತ್ಮನಾಂ।
06041101c ದಯಾಂ ಚ ಜ್ಞಾತಿಷು ಪರಾಂ ಕಥಯಾಂ ಚಕ್ರಿರೇ ನೃಪಾಃ।।
ಆ ಮಹಾತ್ಮರ ಕಾಲಕ್ಕೆ ತಕ್ಕುದಾದ ಸೌಹಾರ್ದತೆ, ಕೃಪೆ, ಮತ್ತು ಕುಲದವರ ಮೇಲಿದ್ದ ಅವರ ದಯೆಯ ಕುರಿತು ಇತರ ನೃಪರು ಮಾತನಾಡಿಕೊಂಡರು.
06041102a ಸಾಧು ಸಾಧ್ವಿತಿ ಸರ್ವತ್ರ ನಿಶ್ಚೇರುಃ ಸ್ತುತಿಸಂಹಿತಾಃ।
06041102c ವಾಚಃ ಪುಣ್ಯಾಃ ಕೀರ್ತಿಮತಾಂ ಮನೋಹೃದಯಹರ್ಷಿಣೀಃ।।
ಎಲ್ಲಾ ಕಡೆಗಳಿಂದಲೂ “ಸಾಧು! ಸಾಧು!” ಎಂದು ಮನಸ್ಸು ಮತ್ತು ಹೃದಯಗಳಿಗೆ ಹರ್ಷವನ್ನು ಕೊಡುವ ಆ ಕೀರ್ತಿಮತರ ಪುಣ್ಯ ಹೊಗಳಿಕೆಯ ಮಾತುಗಳೇ ಕೇಳಿಬಂದವು.
06041103a ಮ್ಲೇಚ್ಛಾಶ್ಚಾರ್ಯಾಶ್ಚ ಯೇ ತತ್ರ ದದೃಶುಃ ಶುಶ್ರುವುಸ್ತದಾ।
06041103c ವೃತ್ತಂ ತತ್ಪಾಂಡುಪುತ್ರಾಣಾಂ ರುರುದುಸ್ತೇ ಸಗದ್ಗದಾಃ।।
ಮ್ಲೇಚ್ಛರಾಗಿರಲಿ ಅಥವಾ ಆರ್ಯರಾಗಿರಲಿ ಯಾರೆಲ್ಲ ಅಲ್ಲಿ ಪಾಂಡುಪುತ್ರರ ಆ ನಡತೆಯನ್ನು ನೋಡಿದರೋ ಅಥವಾ ಕೇಳಿದರೋ ಅವರು ಗದ್ಗದರಾಗಿ ಕಣ್ಣೀರಿಟ್ಟರು.
06041104a ತತೋ ಜಘ್ನುರ್ಮಹಾಭೇರೀಃ ಶತಶಶ್ಚೈವ ಪುಷ್ಕರಾನ್।
06041104c ಶಂಖಾಂಶ್ಚ ಗೋಕ್ಷೀರನಿಭಾನ್ದಧ್ಮುರ್ಹೃಷ್ಟಾ ಮನಸ್ವಿನಃ।।
ಆಗ ಆ ಮನಸ್ವಿಗಳು ಹರ್ಷಿತರಾಗಿ ನೂರಾರು ಮಹಾ ಭೇರಿಗಳನ್ನೂ ನೂರಾರು ಪುಷ್ಕರಗಳನ್ನೂ ಬಾರಿಸಿದರು ಮತ್ತು ಆಕಳ ಹಾಲಿನ ಬಣ್ಣದ ಶಂಖಗಳನ್ನೂ ಊದಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮಾದಿಸಮ್ಮಾನನೇ ಏಕಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮಾದಿಸಮ್ಮಾನನವೆಂಬ ನಲ್ವತ್ತೊಂದನೇ ಅಧ್ಯಾಯವು.