040 ಶ್ರೀಕೃಷ್ಣಾರ್ಜುನಸಂವಾದೇ ಮೋಕ್ಷಸಂನ್ಯಾಸಯೋಗಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭಗವದ್ಗೀತಾ ಪರ್ವ

ಅಧ್ಯಾಯ 40

ಸಾರ

06040001 ಅರ್ಜುನ ಉವಾಚ।
06040001a ಸನ್ಯಾಸಸ್ಯ ಮಹಾಬಾಹೋ ತತ್ತ್ವಮಿಚ್ಛಾಮಿ ವೇದಿತುಂ।
06040001c ತ್ಯಾಗಸ್ಯ ಚ ಹೃಷೀಕೇಶ ಪೃಥಕ್ಕೇಶಿನಿಷೂದನ।।

ಅರ್ಜುನನು ಹೇಳಿದನು: “ಹೃಷೀಕೇಶ! ಕೇಶಿನಿಷೂದನ! ಮಹಾಬಾಹೋ! ಸಂನ್ಯಾಸ ಮತ್ತು ತ್ಯಾಗಗಳ ತತ್ತ್ವಗಳನ್ನು ಪ್ರತ್ಯೇಕವಾಗಿ ತಿಳಿಯಬಯಸುತ್ತೇನೆ.”

06040002 ಶ್ರೀಭಗವಾನುವಾಚ।
06040002a ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸಂ ಕವಯೋ ವಿದುಃ।
06040002c ಸರ್ವಕರ್ಮಫಲತ್ಯಾಗಂ ಪ್ರಾಹುಸ್ತ್ಯಾಗಂ ವಿಚಕ್ಷಣಾಃ।।

ಶ್ರೀ ಭಗವಂತನು ಹೇಳಿದನು: “ಕಾಮ್ಯಕರ್ಮಗಳನ್ನು ಬಿಡುವುದನ್ನು ಕವಿಗಳು ಸಂನ್ಯಾಸವೆಂದು ತಿಳಿಯುತ್ತಾರೆ. ಸರ್ವಕರ್ಮಗಳ ಫಲವನ್ನು ತ್ಯಜಿಸುವುದು ತ್ಯಾಗವೆಂದು ವಿಚಕ್ಷಣರು ಕರೆಯುತ್ತಾರೆ.

06040003a ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ।
06040003c ಯಜ್ಞದಾನತಪಃಕರ್ಮ ನ ತ್ಯಾಜ್ಯಮಿತಿ ಚಾಪರೇ।।

ದೋಷವುಳ್ಳದ್ದಾದುದರಿಂದ ಕರ್ಮಗಳನ್ನು ಬಿಡಬೇಕು ಎಂದು ಕೆಲವು ಮನೀಷಿಣರು ಹೇಳುತ್ತಾರೆ. ಆದರೆ ಯಜ್ಞ, ದಾನ, ಮತ್ತು ತಪಃಕರ್ಮಗಳನ್ನು ತ್ಯಜಿಸಬಾರದು ಎಂದು ಇತರರು ಹೇಳುತ್ತಾರೆ.

06040004a ನಿಶ್ಚಯಂ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ।
06040004c ತ್ಯಾಗೋ ಹಿ ಪುರುಷವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ।।

ಭರತಸತ್ತಮ! ಪುರುಷವ್ಯಾಘ್ರ! ತ್ಯಾಗದ ಕುರಿತಾದ ನಿಶ್ಚಯವನ್ನು ನನ್ನಿಂದ ಕೇಳು. ತ್ಯಾಗದಲ್ಲಿ ಮೂರು ವಿಧಗಳಿವೆ ಎಂದು ಹೇಳುತ್ತಾರೆ.

06040005a ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್।
06040005c ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಂ।।

ಯಜ್ಞ, ದಾನ ಮತ್ತು ತಪಃಕರ್ಮಗಳನ್ನು ತ್ಯಜಿಸಬಾರದು. ಅವೂ ಕಾರ್ಯಗಳೇ. ಮನೀಷಿಣರಿಗೆ ಯಜ್ಞ-ದಾನ-ತಪಸ್ಸುಗಳು ಪಾವನವಾದವುಗಳು.

06040006a ಏತಾನ್ಯಪಿ ತು ಕರ್ಮಾಣಿ ಸಂಗಂ ತ್ಯಕ್ತ್ವಾ ಫಲಾನಿ ಚ।
06040006c ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತಂ ಮತಮುತ್ತಮಂ।।

ಪಾರ್ಥ! ಆದರೆ ಈ ಕರ್ಮಗಳನ್ನೂ ಕೂಡ ಸಂಗ ಮತ್ತು ಫಲಗಳನ್ನು ತೊರೆದು ಮಾಡಬೇಕೆಂದು ನನ್ನ ಉತ್ತಮ ಮತ ಮತ್ತು ನಿಶ್ಚಯ.

06040007a ನಿಯತಸ್ಯ ತು ಸಂನ್ಯಾಸಃ ಕರ್ಮಣೋ ನೋಪಪದ್ಯತೇ।
06040007c ಮೋಹಾತ್ತಸ್ಯ ಪರಿತ್ಯಾಗಸ್ತಾಮಸಃ ಪರಿಕೀರ್ತಿತಃ।।

ಆದರೆ ನಿಯತ ನಿತ್ಯಕರ್ಮದ ಸಂನ್ಯಾಸವು ಯುಕ್ತವಲ್ಲ. ಮೋಹದಿಂದ ಅದನ್ನು ಪರಿತ್ಯಜಿಸುವುದನ್ನು ತಾಮಸವೆಂದು ಹೇಳಲ್ಪಡುತ್ತದೆ.

06040008a ದುಃಖಮಿತ್ಯೇವ ಯತ್ಕರ್ಮ ಕಾಯಕ್ಲೇಶಭಯಾತ್ತ್ಯಜೇತ್।
06040008c ಸ ಕೃತ್ವಾ ರಾಜಸಂ ತ್ಯಾಗಂ ನೈವ ತ್ಯಾಗಫಲಂ ಲಭೇತ್।।

ಯಾರು ದುಃಖ ಮತ್ತು ಶರೀರಕ್ಕೆ ಕಷ್ಟವಾಗುತ್ತದೆ ಎಂಬ ಭಯದಿಂದ ಕರ್ಮಗಳನ್ನು ತ್ಯಜಿಸುತ್ತಾರೋ ಅವರು ರಾಜಸ ತ್ಯಾಗವನ್ನು ಮಾಡಿದುದರಿಂದ ತ್ಯಾಗದ ಫಲವನ್ನು ಪಡೆಯುವುದಿಲ್ಲ.

06040009a ಕಾರ್ಯಮಿತ್ಯೇವ ಯತ್ಕರ್ಮ ನಿಯತಂ ಕ್ರಿಯತೇಽರ್ಜುನ।
06040009c ಸಂಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ತ್ವಿಕೋ ಮತಃ।।

ಯಾವ ನಿತ್ಯಕರ್ಮಗಳನ್ನು ಮಾಡಬೇಕಾದವು ಎಂದು ಸಂಗ-ಫಲಗಳನ್ನು ತ್ಯಜಿಸಿ ಮಾಡುತ್ತಾರೋ ಅರ್ಜುನ! ಆ ತ್ಯಾಗವು ಸಾತ್ತ್ವಿಕವೆಂದು ನನ್ನ ಮತ.

06040010a ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನುಷಜ್ಜತೇ।
06040010c ತ್ಯಾಗೀ ಸತ್ತ್ವಸಮಾವಿಷ್ಟೋ ಮೇಧಾವೀ ಚಿನ್ನಸಂಶಯಃ।।

ಸತ್ತ್ವಸಮಾವಿಷ್ಟನಾದ ಮೇಧಾವೀ ತ್ಯಾಗಿಯು ಚಿನ್ನಸಂಶಯನಾಗಿ ಅಕುಶಲಕರ್ಮಗಳನ್ನು ದ್ವೇಷಿಸುವುದೂ ಇಲ್ಲ, ಕುಶಲ ಕರ್ಮವನ್ನು ಪ್ರೀತಿಸುವುದೂ ಇಲ್ಲ.

06040011a ನ ಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತಃ।
06040011c ಯಸ್ತು ಕರ್ಮಫಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ।।

ಒಂದನ್ನೂ ಬಿಡದೆ ಎಲ್ಲ ಕರ್ಮಗಳನ್ನೂ ತ್ಯಜಿಸಲು ದೇಹಭೃತನಿಗೆ ಶಕ್ಯವಾಗುವುದಿಲ್ಲ. ಯಾರು ಕರ್ಮಫಲತ್ಯಾಗಿಯೋ ಅವನೇ ತ್ಯಾಗಿಯೆನಿಸುವನು.

06040012a ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಂ।
06040012c ಭವತ್ಯತ್ಯಾಗಿನಾಂ ಪ್ರೇತ್ಯ ನ ತು ಸಂನ್ಯಾಸಿನಾಂ ಕ್ವ ಚಿತ್।।

ತ್ಯಾಗಿಗಳಲ್ಲದವರಿಗೆ ಅನಿಷ್ಟ, ಇಷ್ಟ ಮತ್ತು ಮಿಶ್ರವೆಂದು ಮೂರು ವಿಧದ ಫಲಗಳು ಮರಣದ ನಂತರ ಉಂಟಾಗುತ್ತದೆ. ಆದರೆ ಸಂನ್ಯಾಸಿಗಳಿಗೆ ಎಂದೂ ಈ ಫಲಗಳುಂಟಾಗುವುದಿಲ್ಲ.

06040013a ಪಂಚೈತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ।
06040013c ಸಾಂಖ್ಯೇ ಕೃತಾಂತೇ ಪ್ರೋಕ್ತಾನಿ ಸಿದ್ಧಯೇ ಸರ್ವಕರ್ಮಣಾಂ।।

ಮಹಾಬಾಹೋ! ಸರ್ವಕರ್ಮಗಳ ಸಿದ್ಧಿಗೆ ಈ ಐದೂ ಕಾರಣಗಳು ಎಂದು ಸಾಂಖ್ಯ ಕೃತಾಂತದಲ್ಲಿ ಹೇಳಿದ್ದಾರೆ. ಅದನ್ನು ನನ್ನಿಂದ ತಿಳಿದುಕೋ.

06040014a ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ವಿಧಂ।
06040014c ವಿವಿಧಾಶ್ಚ ಪೃಥಕ್ಚೇಷ್ಟಾ ದೈವಂ ಚೈವಾತ್ರ ಪಂಚಮಂ।।

ಅಧಿಷ್ಠಾನ, ಕರ್ತ, ಪ್ರತ್ಯೇಕವಾಗಿರುವ ವಿವಿಧ ಕರಣಗಳು, ಪ್ರತ್ಯೇಕವಾದ ವಿವಿಧ ಚೇಷ್ಟೆಗಳು, ಮತ್ತು ಅಲ್ಲಿರುವ ದೈವವು ಐದನೆಯದು.

06040015a ಶರೀರವಾಙ್ಮನೋಭಿರ್ಯತ್ಕರ್ಮ ಪ್ರಾರಭತೇ ನರಃ।
06040015c ನ್ಯಾಯ್ಯಂ ವಾ ವಿಪರೀತಂ ವಾ ಪಂಚೈತೇ ತಸ್ಯ ಹೇತವಃ।।

ಶರೀರ-ವಾಕ್-ಮನಸ್ಸುಗಳಿಂದ ನರನು ನ್ಯಾಯವಾದ ಅಥವಾ ವಿಪರೀತವಾದ ಯಾವ ಕರ್ಮವನ್ನು ಪ್ರಾರಂಭಿಸುತ್ತಾನೋ ಅದಕ್ಕೆ ಈ ಐದು ಹೇತುಗಳು.

06040016a ತತ್ರೈವಂ ಸತಿ ಕರ್ತಾರಮಾತ್ಮಾನಂ ಕೇವಲಂ ತು ಯಃ।
06040016c ಪಶ್ಯತ್ಯಕೃತಬುದ್ಧಿತ್ವಾನ್ನ ಸ ಪಶ್ಯತಿ ದುರ್ಮತಿಃ।।

ಆದರೆ ಅಲ್ಲಿಯೇ ಇರುವ ಆತ್ಮನನ್ನು ಕೇವಲ ಕರ್ತಾರನೆಂದು ಯಾರು ಅಕೃತಬುದ್ಧಿಯಿಂದ ತಿಳಿದುಕೊಳ್ಳುತ್ತಾನೋ ಆ ದುರ್ಮತಿಯು ತಿಳಿಯನು.

06040017a ಯಸ್ಯ ನಾಹಂಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇ।
06040017c ಹತ್ವಾಪಿ ಸ ಇಮಾಽಲ್ಲೋಕಾನ್ನ ಹಂತಿ ನ ನಿಬಧ್ಯತೇ।।

ಯಾರಿಗೆ ನಾನು ಮಾಡಿದೆ ಎನ್ನುವ ಭಾವವಿರುವುದಿಲ್ಲವೋ, ಯಾರ ಬುದ್ಧಿಯು ಅಂಟಿಕೊಳ್ಳುವುದಿಲ್ಲವೋ ಅವನು ಈ ಲೋಕಗಳನ್ನು ಕೊಂದರೂ ಕೊಂದಹಾಗೆ ಆಗುವುದಿಲ್ಲ. ಏಕೆಂದರೆ ಅವನು ಆ ಕರ್ಮದೊಂದಿಗೆ ಬದ್ಧನಾಗಿರುವುದಿಲ್ಲ.

06040018a ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮಚೋದನಾ।
06040018c ಕರಣಂ ಕರ್ಮ ಕರ್ತೇತಿ ತ್ರಿವಿಧಃ ಕರ್ಮಸಂಗ್ರಹಃ।।

ಜ್ಞಾನ, ಜ್ಞೇಯ ಮತ್ತು ಪರಿಜ್ಞಾತಾ - ಇವು ಕರ್ಮಚೋದನೆಯು ಮೂರು ವಿಧಗಳು. ಕರಣ, ಕರ್ಮ, ಕರ್ತ – ಇವು ಮೂರು ವಿಧದ ಕರ್ಮಸಂಗ್ರಹವು.

06040019a ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧೈವ ಗುಣಭೇದತಃ।
06040019c ಪ್ರೋಚ್ಯತೇ ಗುಣಸಂಖ್ಯಾನೇ ಯಥಾವಚ್ಚೃಣು ತಾನ್ಯಪಿ।।

ಜ್ಞಾನ, ಕರ್ಮ ಮತ್ತು ಕರ್ತ ಇವು ಗುಣಭೇದದಿಂದ ಮೂರು ಬಗೆಯವು ಎಂದು ಗುಣಸಂಖ್ಯಾನದಲ್ಲಿ ಹೇಳುತ್ತಾರೆ. ಅವುಗಳನ್ನು ಯಥಾವತ್ತಾಗಿ ಕೇಳು.

06040020a ಸರ್ವಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ।
06040020c ಅವಿಭಕ್ತಂ ವಿಭಕ್ತೇಷು ತಜ್ಜ್ಞಾನಂ ವಿದ್ಧಿ ಸಾತ್ತ್ವಿಕಂ।।

ಯಾವುದರಿಂದ ಸರ್ವಭೂತಗಳಲ್ಲಿಯೂ ಅವ್ಯಯವಾದ ಒಂದೇ ಭಾವವನ್ನು – ವಿಭಕ್ತವಾಗಿರುವವುಗಳಲ್ಲಿ ಅವಿಭಕ್ತತೆಯನ್ನು – ಕಂಡುಕೊಳ್ಳುತ್ತಾರೋ ಆ ಜ್ಞಾನವು ಸಾತ್ವಿಕವೆಂದು ತಿಳಿ.

06040021a ಪೃಥಕ್ತ್ವೇನ ತು ಯಜ್ಜ್ಞಾನಂ ನಾನಾಭಾವಾನ್ಪೃಥಗ್ವಿಧಾನ್।
06040021c ವೇತ್ತಿ ಸರ್ವೇಷು ಭೂತೇಷು ತಜ್ಜ್ಞಾನಂ ವಿದ್ಧಿ ರಾಜಸಂ।।

ಯಾವುದರಿಂದ ಸರ್ವಭೂತಗಳಲ್ಲಿಯೂ ಪ್ರತ್ಯೇಕತೆಯ ನಾನಾ ಭಾವಗಳನ್ನು ಪ್ರತ್ಯೇಕವಾಗಿಯೇ ತಿಳಿದುಕೊಳ್ಳುತ್ತಾರೋ ಆ ಜ್ಞಾನವು ರಾಜಸವೆಂದು ತಿಳಿ.

06040022a ಯತ್ತು ಕೃತ್ಸ್ನವದೇಕಸ್ಮಿನ್ಕಾರ್ಯೇ ಸಕ್ತಮಹೈತುಕಂ।
06040022c ಅತತ್ತ್ವಾರ್ಥವದಲ್ಪಂ ಚ ತತ್ತಾಮಸಮುದಾಹೃತಂ।।

ಆದರೆ ಯಾವುದು ಒಂದು ಕಾರ್ಯದಲ್ಲಿ ಅದೇ ಎಲ್ಲವೂ ಎಂಬಂತೆ ಸಕ್ತವಾಗಿರುವುದೋ ಹೇತುವಿಲ್ಲದ್ದೋ ತತ್ತ್ವಾರ್ಥವಿಲ್ಲದ್ದೋ ಅಲ್ಪವಾಗಿರುವುದೋ ಅದು ತಾಮಸವೆನಿಸುವುದು.

06040023a ನಿಯತಂ ಸಂಗರಹಿತಮರಾಗದ್ವೇಷತಃ ಕೃತಂ।
06040023c ಅಫಲಪ್ರೇಪ್ಸುನಾ ಕರ್ಮ ಯತ್ತತ್ಸಾತ್ತ್ವಿಕಮುಚ್ಯತೇ।।

ನಿಯತನಾಗಿ, ಸಂಗರಹಿತನಾಗಿ, ರಾಗದ್ವೇಷಗಳಿಲ್ಲದೇ, ಫಲವನ್ನು ಪಡೆಯಬೇಕೆಂಬ ಇಚ್ಛೆಯಿಲ್ಲದವನು ಮಾಡುವ ಕರ್ಮಗಳು ಸಾತ್ವಿಕವೆನಿಸುವವು.

06040024a ಯತ್ತು ಕಾಮೇಪ್ಸುನಾ ಕರ್ಮ ಸಾಹಂಕಾರೇಣ ವಾ ಪುನಃ।
06040024c ಕ್ರಿಯತೇ ಬಹುಲಾಯಾಸಂ ತದ್ರಾಜಸಮುದಾಹೃತಂ।।

ಆದರೆ ಕರ್ಮಫಲವನ್ನು ಪಡೆಯಬೇಕೆಂಬ ಇಚ್ಛೆಯಿಂದ ಅಹಂಕಾರವುಳ್ಳವನು ಬಹಳ ಆಯಾಸಪಟ್ಟುಕೊಂಡು ಮಾಡುವ ಕರ್ಮಗಳು ರಾಜಸವೆನಿಸುತ್ತವೆ.

06040025a ಅನುಬಂಧಂ ಕ್ಷಯಂ ಹಿಂಸಾಮನಪೇಕ್ಷ್ಯ ಚ ಪೌರುಷಂ।
06040025c ಮೋಹಾದಾರಭ್ಯತೇ ಕರ್ಮ ಯತ್ತತ್ತಾಮಸಮುಚ್ಯತೇ।।

ಆಗುವ ಪರಿಣಾಮಗಳನ್ನೂ, ಕ್ಷಯವನ್ನೂ, ಹಿಂಸೆಯ, ಪೌರುಷವನ್ನೂ ಲೆಕ್ಕಿಸದೇ ಮೋಹದಿಂದ ಮಾಡುವ ಕರ್ಮವನ್ನು ತಾಮಸವೆಂದು ಹೇಳುತ್ತಾರೆ.

06040026a ಮುಕ್ತಸಂಗೋಽನಹಂವಾದೀ ಧೃತ್ಯುತ್ಸಾಹಸಮನ್ವಿತಃ।
06040026c ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ।।

ಮುಕ್ತಸಂಗ, ಅನಹಂವಾದಿ, ಧೃತಿ-ಉತ್ಸಾಹ ಸಮನ್ವಿತ, ಸಿದ್ಧಿ-ಅಸಿದ್ಧಿಗಳಿಗೆ ನಿರ್ವಿಕಾರ ಕರ್ತನನ್ನು ಸಾತ್ವಿಕನೆಂದು ಹೇಳುತ್ತಾರೆ.

06040027a ರಾಗೀ ಕರ್ಮಫಲಪ್ರೇಪ್ಸುರ್ಲುಬ್ಧೋ ಹಿಂಸಾತ್ಮಕೋಽಶುಚಿಃ।
06040027c ಹರ್ಷಶೋಕಾನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ।।

ರಾಗೀ, ಕರ್ಮಫಲವನ್ನು ಬಯಸುವ, ಲುಬ್ಧ, ಹಿಂಸಾತ್ಮಕ, ಅಶುಚಿ, ಹರ್ಷ-ಶೋಕಾನ್ವಿತ ಕರ್ತನು ರಾಜಸನೆಂದು ಎನಿಸಿಕೊಳ್ಳುತ್ತಾನೆ.

06040028a ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಕೃತಿಕೋಽಲಸಃ।
06040028c ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ।।

ಅಯುಕ್ತ, ಪ್ರಾಕೃತ, ಸ್ತಬ್ಧ, ಶಠ (ಮಾಯಾವೀ), ಇನ್ನೊಬ್ಬರ ಕೆಲಸವನ್ನು ಹಾಳುಮಾಡುವವನು, ಆಲಸಿ, ವಿಷಾದೀ, ದೀರ್ಘಸೂತ್ರೀ ಕರ್ತನನ್ನು ತಾಮಸನೆಂದು ಹೇಳುತ್ತಾರೆ.

06040029a ಬುದ್ಧೇರ್ಭೇದಂ ಧೃತೇಶ್ಚೈವ ಗುಣತಸ್ತ್ರಿವಿಧಂ ಶೃಣು।
06040029c ಪ್ರೋಚ್ಯಮಾನಮಶೇಷೇಣ ಪೃಥಕ್ತ್ವೇನ ಧನಂಜಯ।।

ಧನಂಜಯ! ಬುದ್ಧಿ ಮತ್ತು ಧೃತಿಗಳು ಗುಣದಿಂದ ಮೂರುವಿಧವಾಗಿರುವುದನ್ನು ಸಂಪೂರ್ಣವಾಗಿ ಬೇರೆ ಬೇರೆಯಾಗಿ ಹೇಳುವುದನ್ನು ಕೇಳು.

06040030a ಪ್ರವೃತ್ತಿಂ ಚ ನಿವೃತ್ತಿಂ ಚ ಕಾರ್ಯಾಕಾರ್ಯೇ ಭಯಾಭಯೇ।
06040030c ಬಂಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ।।

ಪಾರ್ಥ! ಯಾವ ಬುದ್ಧಿಯು ಪ್ರವೃತ್ತಿ, ನಿವೃತ್ತಿ, ಕಾರ್ಯ-ಅಕಾರ್ಯಗಳು, ಭಯ-ಅಭಯ, ಬಂಧನ-ಮೋಕ್ಷಗಳನ್ನು ತಿಳಿದಿರುತ್ತದೆಯೋ ಅದನ್ನು ಸಾತ್ವಿಕೀ ಎಂದು ತಿಳಿಯಬೇಕು.

06040031a ಯಯಾ ಧರ್ಮಮಧರ್ಮಂ ಚ ಕಾರ್ಯಂ ಚಾಕಾರ್ಯಮೇವ ಚ।
06040031c ಅಯಥಾವತ್ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ।।

ಪಾರ್ಥ! ಯಾವ ಬುದ್ಧಿಯು ಧರ್ಮ-ಅಧರ್ಮಗಳನ್ನು, ಕಾರ್ಯ-ಅಕಾರ್ಯಗಳನ್ನು ಯಥಾವತ್ತಾಗಿ ಅರಿತುಕೊಳ್ಳುವುದಿಲ್ಲವೋ ಅದನ್ನು ರಾಜಸೀ ಎಂದು ತಿಳಿದುಕೊಳ್ಳಬೇಕು.

06040032a ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾವೃತಾ।
06040032c ಸರ್ವಾರ್ಥಾನ್ವಿಪರೀತಾಂಶ್ಚ ಬುದ್ಧಿಃ ಸಾ ಪಾರ್ಥ ತಾಮಸೀ।।

ಪಾರ್ಥ! ತಮಸ್ಸಿನಿಂದ ಆವೃತವಾಗಿ ಅಧರ್ಮವನ್ನು ಧರ್ಮವೆಂದು ಸ್ವೀಕರಿಸಿ ಎಲ್ಲವುಗಳನ್ನೂ ವಿಪರೀತವಾಗಿ ಅರ್ಥಮಾಡಿಕೊಳ್ಳುವ ಬುದ್ಧಿಯು ತಾಮಸೀ.

06040033a ಧೃತ್ಯಾ ಯಯಾ ಧಾರಯತೇ ಮನಃಪ್ರಾಣೇಂದ್ರಿಯಕ್ರಿಯಾಃ।
06040033c ಯೋಗೇನಾವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ।।

ಪಾರ್ಥ! ಯಾವ ಅವ್ಯಭಿಚಾರಿ ಧೃತಿಯಿಂದ ಮನಸ್ಸು, ಪ್ರಾಣ ಮತ್ತು ಇಂದ್ರಿಯಕ್ರಿಯೆಗಳನ್ನು ಯೋಗದಿಂದ ಧರಿಸುತ್ತಾರೋ ಆ ಧೃತಿಯು ಸಾತ್ತ್ವಿಕಿ.

06040034a ಯಯಾ ತು ಧರ್ಮಕಾಮಾರ್ಥಾನ್ಧೃತ್ಯಾ ಧಾರಯತೇಽರ್ಜುನ।
06040034c ಪ್ರಸಂಗೇನ ಫಲಾಕಾಂಕ್ಷೀ ಧೃತಿಃ ಸಾ ಪಾರ್ಥ ರಾಜಸೀ।।

ಅರ್ಜುನ! ಪಾರ್ಥ! ಪ್ರಸಂಗದಿಂದ ಫಲಾಕಾಂಕ್ಷಿಯಾಗಿ ಧರ್ಮ-ಕಾಮ-ಅರ್ಥಗಳನ್ನು ಧರಿಸುವ ಧೃತಿಯು ರಾಜಸೀ.

06040035a ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ ಚ।
06040035c ನ ವಿಮುಂಚತಿ ದುರ್ಮೇಧಾ ಧೃತಿಃ ಸಾ ಪಾರ್ಥ ತಾಮಸೀ।।

ಪಾರ್ಥ! ಯಾವುದರಿಂದ ಸ್ವಪ್ನ, ಭಯ, ಶೋಕ, ವಿಷಾದ, ಮದಗಳನ್ನು ಬಿಡಲಿಕ್ಕಾಗುವುದಿಲ್ಲವೋ ಆ ಕೆಟ್ಟ ಬುದ್ಧಿಯ ಧೃತಿಯು ತಾಮಸೀ.

06040036a ಸುಖಂ ತ್ವಿದಾನೀಂ ತ್ರಿವಿಧಂ ಶೃಣು ಮೇ ಭರತರ್ಷಭ।
06040036c ಅಭ್ಯಾಸಾದ್ರಮತೇ ಯತ್ರ ದುಃಖಾಂತಂ ಚ ನಿಗಚ್ಛತಿ।।
06040037a ಯತ್ತದಗ್ರೇ ವಿಷಮಿವ ಪರಿಣಾಮೇಽಮೃತೋಪಮಂ।
06040037c ತತ್ಸುಖಂ ಸಾತ್ತ್ವಿಕಂ ಪ್ರೋಕ್ತಮಾತ್ಮಬುದ್ಧಿಪ್ರಸಾದಜಂ।।

ಭರತರ್ಷಭ! ಈಗ ಮೂರು ವಿಧವಾದ ಸುಖವನ್ನು ನನ್ನಿಂದ ಕೇಳು. ಅಭ್ಯಾಸದಂತೆ ಮತ್ತೆ ಮತ್ತೆ ಅನುಭವಿಸುವ, ಯಾವುದು ದುಃಖವನ್ನು ಕೊನೆಗೊಳಿಸುತ್ತದೆಯೋ, ಯಾವುದು ಮೊದಲು ವಿಷದಂತಿದ್ದರೂ ಪರಿಣಾಮದಲ್ಲಿ ಅಮೃತೋಪಮವಾಗಿರುವುದೋ ಆ ಆತ್ಮಬುದ್ಧಿಯಿಂದ ಜನಿಸಿದ ಸುಖವನ್ನು ಸಾತ್ತ್ವಿಕವೆನ್ನುವರು.

06040038a ವಿಷಯೇಂದ್ರಿಯಸಮ್ಯೋಗಾದ್ಯತ್ತದಗ್ರೇಽಮೃತೋಪಮಂ।
06040038c ಪರಿಣಾಮೇ ವಿಷಮಿವ ತತ್ಸುಖಂ ರಾಜಸಂ ಸ್ಮೃತಂ।।

ವಿಷಯೇಂದ್ರಿಯಗಳ ಸಂಯೋಗದಿಂದ ಜನಿಸಿದ, ಮೊದಲು ಅಮೃತೋಪಮವಾಗಿದ್ದುಕೊಂಡು ಪರಿಣಾಮದಲ್ಲಿ ವಿಷದಂತಿರುವ ಸುಖವನ್ನು ರಾಜಸವೆಂದು ಹೇಳುತ್ತಾರೆ.

06040039a ಯದಗ್ರೇ ಚಾನುಬಂಧೇ ಚ ಸುಖಂ ಮೋಹನಮಾತ್ಮನಃ।
06040039c ನಿದ್ರಾಲಸ್ಯಪ್ರಮಾದೋತ್ಥಂ ತತ್ತಾಮಸಮುದಾಹೃತಂ।।

ಯಾವುದು ಮೊದಲೂ ಮತ್ತು ಅನುಭವಿಸಿದ ನಂತರವೂ ಆತ್ಮನನ್ನು ಮೋಹಿತಗೊಳಿಸುವುದೋ ಆ ನಿದ್ರೆ, ಆಲಸ್ಯ ಮತ್ತು ಪ್ರಮಾದಗಳಿಂದ ಜನಿಸುವ ಸುಖವನ್ನು ತಾಮಸವೆಂದು ಉದಾಹರಿಸುತ್ತಾರೆ.

06040040a ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ।
06040040c ಸತ್ತ್ವಂ ಪ್ರಕೃತಿಜೈರ್ಮುಕ್ತಂ ಯದೇಭಿಃ ಸ್ಯಾತ್ತ್ರಿಭಿರ್ಗುಣೈಃ।।

ಪೃಥಿವಿಯಲ್ಲಾಗಲೀ, ದಿವಿಯಲ್ಲಿಯಾಗಲೀ, ಪುನಃ ದೇವತೆಗಳಲ್ಲಿಯಾಗಲೀ, ಈ ಮೂರು ಪ್ರಕೃತಿಜವಾದ ಗುಣಗಳಿಂದ ಕೂಡಿರದ ಸತ್ತ್ವವು ಯಾವುದೂ ಇಲ್ಲ.

06040041a ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ।
06040041c ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ।।

ಪರಂತಪ! ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಕರ್ಮಗಳನ್ನೂ ಕೂಡ ಸ್ವಭಾವದಿಂದ ಹುಟ್ಟುವ ಗುಣಗಳ ಪ್ರಕಾರ ವಿಂಗಡಿಸಲ್ಪಟ್ಟಿದೆ.

06040042a ಶಮೋ ದಮಸ್ತಪಃ ಶೌಚಂ ಕ್ಷಾಂತಿರಾರ್ಜವಮೇವ ಚ।
06040042c ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಂ।।

ಶಮ, ದಮ, ತಪಸ್ಸು, ಶೌಚ, ಕ್ಷಾಂತಿ, ಆರ್ಜವ, ಜ್ಞಾನ, ವಿಜ್ಞಾನ, ಆಸ್ತಿಕ್ಯ ಇವು ಸ್ವಭಾವಜವಾದ ಬ್ರಹ್ಮಕರ್ಮಗಳು.

06040043a ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಂ।
06040043c ದಾನಮೀಶ್ವರಭಾವಶ್ಚ ಕ್ಷತ್ರಕರ್ಮ ಸ್ವಭಾವಜಂ।।

ಶೌರ್ಯ, ತೇಜಸ್ಸು, ಧೃತಿ, ದಕ್ಷತೆ, ಯುದ್ಧದಲ್ಲಿ ಪಲಾಯನ ಮಾಡದಿರುವುದು, ದಾನ, ಮತ್ತು ಈಶ್ವರಭಾವಗಳು ಸ್ವಭಾವಜವಾದ ಕ್ಷತ್ರಕರ್ಮಗಳು.

06040044a ಕೃಷಿಗೋರಕ್ಷ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಂ।
06040044c ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಂ।।

ಕೃಷಿ, ಗೋರಕ್ಷಣೆ, ವಾಣಿಜ್ಯ, ಇವು ಸ್ವಭಾವಜವಾದ ವೈಶ್ಯಕರ್ಮಗಳು. ಪರಿಚರ್ಯಾತ್ಮಕ ಕರ್ಮವು ಶೂದ್ರನಿಗೆ ಸ್ವಭಾವಜ.

06040045a ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಃ।
06040045c ಸ್ವಕರ್ಮನಿರತಃ ಸಿದ್ಧಿಂ ಯಥಾ ವಿಂದತಿ ತಚ್ಚೃಣು।।

ತನ್ನ ತನ್ನ ಕರ್ಮದಲ್ಲಿ ಅಭಿರತನಾದ ನರನು ಸಂಸಿದ್ಧಿಯನ್ನು ಹೊಂದುತ್ತಾನೆ. ಸ್ವಕರ್ಮದಲ್ಲಿ ನಿರತನಾದವನು ಹೇಗೆ ಸಿದ್ಧಿಯನ್ನು ಹೊಂದುತ್ತಾನೆ ಎನ್ನುವುದನ್ನು ಕೇಳು.

06040046a ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಂ।
06040046c ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ।।

ಯಾರಿಂದ ಭೂತಗಳ ಪ್ರವೃತ್ತಿಯು ಉಂಟಾಗುವುದೋ, ಯಾರಿಂದಾಗಿ ಇವೆಲ್ಲವೂ ಇವೆಯೋ ಅವನನ್ನು ಸ್ವಕರ್ಮಗಳಿಂದ ಅರ್ಚಿಸಿ ಮಾನವನು ಸಿದ್ಧಿಯನ್ನು ಪಡೆಯುತ್ತಾನೆ.

06040047a ಶ್ರೇಯಾನ್ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಠಿತಾತ್।
06040047c ಸ್ವಭಾವನಿಯತಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಂ।।

ಚೆನ್ನಾಗಿ ಅನುಷ್ಠಾನ ಮಾಡಿದ ಪರಧರ್ಮಕ್ಕಿಂತಲೂ ಉತ್ತಮವಾಗಿರದ ಸ್ವಧರ್ಮವೇ ಶ್ರೇಯವಾದುದು. ಸ್ವಭಾವನಿಯತ ಕರ್ಮವನ್ನು ಮಾಡುವವನು ಕಿಲ್ಬಿಷವನ್ನು ಹೊಂದುವುದಿಲ್ಲ.

06040048a ಸಹಜಂ ಕರ್ಮ ಕೌಂತೇಯ ಸದೋಷಮಪಿ ನ ತ್ಯಜೇತ್।
06040048c ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾವೃತಾಃ।।

ಕೌಂತೇಯ! ಸಹಜ ಕರ್ಮವನ್ನು ದೋಷಗಳಿದ್ದರೂ ಬಿಡಬಾರದು. ಏಕೆಂದರೆ ಹೊಗೆಯಿರುವ ಬೆಂಕಿಯ ಹಾಗೆ ಎಲ್ಲ ಕರ್ಮಗಳೂ ದೋಷವನ್ನೊಳಗೊಂಡಿರುತ್ತವೆ.

06040049a ಅಸಕ್ತಬುದ್ಧಿಃ ಸರ್ವತ್ರ ಜಿತಾತ್ಮಾ ವಿಗತಸ್ಪೃಹಃ।
06040049c ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನಾಧಿಗಚ್ಛತಿ।।

ಎಲ್ಲದರಲ್ಲಿ ಸಂಗವಿಲ್ಲದ ಅಂತಃಕರಣವಿರುವವನು ಜಿತಾತ್ಮನಾಗಿ, ಆಸೆಗಳು ತೊಲಗಿರುವವನು ಸಂನ್ಯಾಸದಿಂದ ಕರ್ಮಗಳನ್ನು ಬಿಟ್ಟ ಪರಮ ಸಿದ್ಧಿಯನ್ನು ಪಡೆಯುತ್ತಾನೆ.

06040050a ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮ ತಥಾಪ್ನೋತಿ ನಿಬೋಧ ಮೇ।
06040050c ಸಮಾಸೇನೈವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ।।

ಕೌಂತೇಯ! ಆ ನೈಷ್ಕರ್ಮಸಿದ್ಧಿಯನ್ನು ಪಡೆದು ಬ್ರಹ್ಮನನ್ನು ಹೇಗೆ ಸೇರುತ್ತಾನೆ ಎನ್ನುವುದನ್ನು ಸಂಕ್ಷಿಪ್ತವಾಗಿ ನನ್ನಿಂದ ತಿಳಿದುಕೋ. ಅದು ಜ್ಞಾನದ ಅಂತವು.

06040051a ಬುದ್ಧ್ಯಾ ವಿಶುದ್ಧಯಾ ಯುಕ್ತೋ ಧೃತ್ಯಾತ್ಮಾನಂ ನಿಯಮ್ಯ ಚ।
06040051c ಶಬ್ದಾದೀನ್ವಿಷಯಾಂಸ್ತ್ಯಕ್ತ್ವಾ ರಾಗದ್ವೇಷೌ ವ್ಯುದಸ್ಯ ಚ।।
06040052a ವಿವಿಕ್ತಸೇವೀ ಲಘ್ವಾಶೀ ಯತವಾಕ್ಕಾಯಮಾನಸಃ।
06040052c ಧ್ಯಾನಯೋಗಪರೋ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ।।
06040053a ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಂ।
06040053c ವಿಮುಚ್ಯ ನಿರ್ಮಮಃ ಶಾಂತೋ ಬ್ರಹ್ಮಭೂಯಾಯ ಕಲ್ಪತೇ।।

ವಿಶುದ್ಧ ಬುದ್ಧಿಯುಳ್ಳವನಾಗಿ, ಧೃತಿಯಿಂದ ತನ್ನನ್ನು ನಿಯಮದಲ್ಲಿರಿಸಿಕೊಂಡು, ಶಬ್ದವೇ ಮೊದಲಾದ ವಿಷಯಗಳನ್ನು ತೊರೆದು, ರಾಗ-ದ್ವೇಷಗಳನ್ನು ತಿರಸ್ಕರಿಸಿ, ಏಕಾಂತ ಸ್ಥಳಗಳನ್ನು ಸೇವಿಸುವ, ಅಲ್ಪ ಆಹಾರವನ್ನು ತೆಗೆದುಕೊಳ್ಳುವ ಸ್ವಭಾವವುಳ್ಳ, ಮಾತು-ಕಾಯ-ಮನಸ್ಸುಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ, ಧ್ಯಾನಯೋಗಪರನಾದ, ನಿತ್ಯವೂ ವೈರಾಗ್ಯವನ್ನು ಆಶ್ರಯಿಸಿ, ಅಹಂಕಾರ-ಬಲ-ದರ್ಪ-ಕಾಮ-ಕ್ರೋಧ-ಪರಿಗ್ರಹ ಇವುಗಳನ್ನು ಬಿಟ್ಟು, ನಾನು-ನನ್ನದೆಂಬ ಭಾವನೆಯಿಲ್ಲದವನಾಗಿ ಶಾಂತನಾಗಿರುವವನು ಬ್ರಹ್ಮವೇ ಆಗುವುದಕ್ಕೆ ಸಮರ್ಥನಾಗುತ್ತಾನೆ.

06040054a ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ।
06040054c ಸಮಃ ಸರ್ವೇಷು ಭೂತೇಷು ಮದ್ಭಕ್ತಿಂ ಲಭತೇ ಪರಾಂ।।

ಬ್ರಹ್ಮನಾಗಿ ಪ್ರಸನ್ನಾತ್ಮನಾಗಿರುವವನು ಶೋಕಿಸುವುದಿಲ್ಲ. ಬಯಸುವುದಿಲ್ಲ. ಸರ್ವಭೂತಗಳಲ್ಲಿಯೂ ಸಮನಾಗಿ ನನ್ನ ಮೇಲಿನ ಪರಮ ಭಕ್ತಿಯನ್ನು ಪಡೆದುಕೊಳ್ಳುತ್ತಾನೆ.

06040055a ಭಕ್ತ್ಯಾ ಮಾಮಭಿಜಾನಾತಿ ಯಾವಾನ್ಯಶ್ಚಾಸ್ಮಿ ತತ್ತ್ವತಃ।
06040055c ತತೋ ಮಾಂ ತತ್ತ್ವತೋ ಜ್ಞಾತ್ವಾ ವಿಶತೇ ತದನಂತರಂ।।

ಭಕ್ತಿಯಿಂದ ನನ್ನನ್ನು ಯಾರು ಮತ್ತು ಎಷ್ಟು ಎನ್ನುವುದನ್ನು ತತ್ತ್ವತಃ ತಿಳಿದುಕೊಳ್ಳುತ್ತಾನೆ. ನನ್ನನ್ನು ತತ್ತ್ವತವಾಗಿ ತಿಳಿದುಕೊಂಡು ಅದರ ನಂತರ ನನ್ನನ್ನು ಪ್ರವೇಶಿಸುತ್ತಾನೆ.

06040056a ಸರ್ವಕರ್ಮಾಣ್ಯಪಿ ಸದಾ ಕುರ್ವಾಣೋ ಮದ್ವ್ಯಪಾಶ್ರಯಃ।
06040056c ಮತ್ಪ್ರಸಾದಾದವಾಪ್ನೋತಿ ಶಾಶ್ವತಂ ಪದಮವ್ಯಯಂ।।

ಸದಾ ಎಲ್ಲ ಕರ್ಮಗಳನ್ನು ಮಾಡುತ್ತಿದ್ದರೂ ನನ್ನನ್ನು ಉಪಾಶ್ರಯಿಸಿದ ಅವನು ನನ್ನ ಪ್ರಸಾದದಿಂದ ಶಾಶ್ವತ ಅವ್ಯಯ ಪದವನ್ನು ಹೊಂದುತ್ತಾನೆ.

06040057a ಚೇತಸಾ ಸರ್ವಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಃ।
06040057c ಬುದ್ಧಿಯೋಗಮುಪಾಶ್ರಿತ್ಯ ಮಚ್ಚಿತ್ತಃ ಸತತಂ ಭವ।।

ಚಿತ್ತದಿಂದ ಎಲ್ಲ ಕರ್ಮಗಳನ್ನೂ ನನ್ನಲ್ಲಿ ಸಂನ್ಯಾಸಮಾಡಿ ಮತ್ಪರನಾಗಿರು. ಬುದ್ಧಿಯೋಗವನ್ನವಲಂಬಿಸಿ ಸತತವಾಗಿ ನನ್ನಲ್ಲಿಯೇ ಚಿತ್ತವನ್ನಿಡು.

06040058a ಮಚ್ಚಿತ್ತಃ ಸರ್ವದುರ್ಗಾಣಿ ಮತ್ಪ್ರಸಾದಾತ್ತರಿಷ್ಯಸಿ।
06040058c ಅಥ ಚೇತ್ತ್ವಮಹಂಕಾರಾನ್ನ ಶ್ರೋಷ್ಯಸಿ ವಿನಂಕ್ಷ್ಯಸಿ।।

ನನ್ನಲ್ಲಿ ಚಿತ್ತವನ್ನಿರಿಸಿಕೊಂಡಿದ್ದರೆ ಸರ್ವ ಕಷ್ಟಗಳನ್ನೂ ನನ್ನ ಪ್ರಸಾದದಿಂದ ದಾಟುತ್ತೀಯೆ. ಹಾಗೆ ಇಲ್ಲದಿದ್ದರೆ ಅಹಂಕಾರದಿಂದ ನಾಶಹೊಂದುವೆ.

06040059a ಯದಹಂಕಾರಮಾಶ್ರಿತ್ಯ ನ ಯೋತ್ಸ್ಯ ಇತಿ ಮನ್ಯಸೇ।
06040059c ಮಿಥ್ಯೈಷ ವ್ಯವಸಾಯಸ್ತೇ ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ।।

ಅಹಂಕಾರವನ್ನು ಆಶ್ರಯಿಸಿ ಯುದ್ಧಮಾಡುವುದಿಲ್ಲ ಎಂದು ತಿಳಿದುಕೊಂಡಿರುವೆಯಾದರೆ ನಿನ್ನ ಈ ವ್ಯವಹಾರವು ಸುಳ್ಳು. ಪ್ರಕೃತಿಯು ನಿನ್ನನ್ನು ಯುದ್ಧಕ್ಕೆ ಕಟ್ಟಿಹಾಕುತ್ತದೆ.

06040060a ಸ್ವಭಾವಜೇನ ಕೌಂತೇಯ ನಿಬದ್ಧಃ ಸ್ವೇನ ಕರ್ಮಣಾ।
06040060c ಕರ್ತುಂ ನೇಚ್ಛಸಿ ಯನ್ಮೋಹಾತ್ಕರಿಷ್ಯಸ್ಯವಶೋಽಪಿ ತತ್।।

ಕೌಂತೇಯ! ಸ್ವಭಾವಜವಾದ ನಿನ್ನ ಕರ್ಮದಿಂದ ನಿಬದ್ಧನಾಗಿ ಮೋಹದಿಂದ ಯಾವುದನ್ನು ಮಾಡಲು ಬಯಸುತ್ತಿಲ್ಲವೋ ಅದನ್ನು ಅವಶನಾಗಿಯಾದರೂ ಮಾಡುತ್ತೀಯೆ.

06040061a ಈಶ್ವರಃ ಸರ್ವಭೂತಾನಾಂ ಹೃದ್ದೇಶೇಽರ್ಜುನ ತಿಷ್ಠತಿ।
06040061c ಭ್ರಾಮಯನ್ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ।।

ಅರ್ಜುನ! ಯಂತ್ರಾರೂಢವಾಗಿರುವ ಸರ್ವಭೂತಗಳನ್ನೂ ಮಾಯೆಯಿಂದ ತಿರುಗಿಸುತ್ತಾ ಈಶ್ವರನು ಸರ್ವಭೂತಗಳ ಹೃದಯ ಪ್ರದೇಶದಲ್ಲಿ ನೆಲೆಸಿರುವನು.

06040062a ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ।
06040062c ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಂ।।

ಭಾರತ! ಸರ್ವಭಾವದಿಂದ ಅವನನ್ನೇ ಶರಣು ಹೋಗು. ಅವನ ಪ್ರಸಾದದಿಂದ ಪರಮ ಶಾಂತಿಯನ್ನೂ ಶಾಶ್ವತ ಸ್ಥಾನವನ್ನೂ ಪಡೆಯುತ್ತೀಯೆ.

06040063a ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ।
06040063c ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು।।

ಹೀಗೆ ಗುಹ್ಯಕ್ಕಿಂತಲೂ ಗುಹ್ಯವಾಗಿರುವ ಜ್ಞಾನವನ್ನು ನಾನು ಹೇಳಿದ್ದೇನೆ. ಇದನ್ನು ಸಂಪೂರ್ಣವಾಗಿ ವಿಮರ್ಶೆಮಾಡಿ ನಿನಗೆ ಇಚ್ಛೆಬಂದಹಾಗೆ ಮಾಡು.

06040064a ಸರ್ವಗುಹ್ಯತಮಂ ಭೂಯಃ ಶೃಣು ಮೇ ಪರಮಂ ವಚಃ।
06040064c ಇಷ್ಟೋಽಸಿ ಮೇ ದೃಢಮಿತಿ ತತೋ ವಕ್ಷ್ಯಾಮಿ ತೇ ಹಿತಂ।।

ಸರ್ವಗುಹ್ಯತಮವಾಗಿರುವ ನನ್ನ ಪರಮ ವಚನವನ್ನು ಇನ್ನೊಮ್ಮೆ ಕೇಳು. ನೀನು ದೃಢವಾಗಿ ಇಷ್ಟನಾಗಿರುವೆ. ಆದರಿಂದ ನಿನಗೆ ಹಿತವಾದುದನ್ನು ಹೇಳುತ್ತೇನೆ.

06040065a ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು।
06040065c ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋಽಸಿ ಮೇ।।

ನನ್ನಲ್ಲಿ ಮನಸ್ಸನ್ನಿಡು. ನನ್ನ ಭಕ್ತನಾಗು. ನನ್ನನ್ನು ಯಾಜಿಸು. ನನ್ನನ್ನು ನಮಸ್ಕರಿಸು. ನನ್ನನ್ನೇ ಸೇರುವೆ. ಸತ್ಯವಾಗಿ ಪ್ರತಿಜ್ಞೆ ಮಾಡುತ್ತಿದ್ದೇನೆ. ನೀನು ನನಗೆ ಪ್ರಿಯನಾಗಿರುವೆ.

06040066a ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ।
06040066c ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ।।

ಸರ್ವ ಧರ್ಮಗಳನ್ನೂ ಪರಿತ್ಯಜಿಸಿ ನನ್ನನ್ನೊಬ್ಬನನ್ನೇ ಶರಣು ಹೊಗು. ನಾನು ನಿನ್ನನ್ನು ಸರ್ವಪಾಪಗಳಿಂದಲೂ ಬಿಡುಗಡೆಗೊಳಿಸುತ್ತೇನೆ. ಶೋಕಿಸಬೇಡ.

06040067a ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾ ಚನ।
06040067c ನ ಚಾಶುಶ್ರೂಷವೇ ವಾಚ್ಯಂ ನ ಚ ಮಾಂ ಯೋಽಭ್ಯಸೂಯತಿ।।

ನಿನಗೆ ಹೇಳಿದ ಇದನ್ನು ತಪಸ್ಸನ್ನಾಚರಿಸಿರದ, ಭಕ್ತನಾಗಿರದ, ಶುಶ್ರೂಷವನ್ನು ಮಾಡಿರದ, ನನ್ನನ್ನು ಅಸೂಯೆಪಡುವವನಿಗೆ ಎಂದೂ ಹೇಳಬಾರದು.

06040068a ಯ ಇದಂ ಪರಮಂ ಗುಹ್ಯಂ ಮದ್ಭಕ್ತೇಷ್ವಭಿಧಾಸ್ಯತಿ।
06040068c ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯಸಂಶಯಃ।।

ಯಾರು ಈ ಪರಮ ಗುಹ್ಯವಾದುದನ್ನು ನನ್ನ ಭಕ್ತರಿಗೆ ತಲುಪಿಸುತ್ತಾರೋ ಅವರು ನನ್ನಲ್ಲಿ ಪರಮ ಭಕ್ತಿಯನ್ನು ಮಾಡಿ ನನ್ನನ್ನೇ ಸೇರುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

06040069a ನ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯಕೃತ್ತಮಃ।
06040069c ಭವಿತಾ ನ ಚ ಮೇ ತಸ್ಮಾದನ್ಯಃ ಪ್ರಿಯತರೋ ಭುವಿ।।

ಮತ್ತು ಮನುಷ್ಯರಲ್ಲಿ ಅವನಿಗಿಂತಲೂ ಹೆಚ್ಚು ನನಗೆ ಪ್ರಿಯವನ್ನು ಮಾಡುವವನು ಯಾರೂ ಇಲ್ಲ. ಅವನಿಗಿಂತಲೂ ನನಗೆ ಪ್ರಿಯನಾದವನು ಬೇರೆ ಯಾರೂ ಭೂಮಿಯ ಮೇಲೆ ಹುಟ್ಟುವುದೂ ಇಲ್ಲ.

06040070a ಅಧ್ಯೇಷ್ಯತೇ ಚ ಯ ಇಮಂ ಧರ್ಮ್ಯಂ ಸಂವಾದಮಾವಯೋಃ।
06040070c ಜ್ಞಾನಯಜ್ಞೇನ ತೇನಾಹಂ ಇಷ್ಟಃ ಸ್ಯಾಂ ಇತಿ ಮೇ ಮತಿಃ।।

ಧರ್ಮಯುಕ್ತವಾದ ನಮ್ಮ ಈ ಸಂವಾದವನ್ನು ಯಾರು ಅಧ್ಯಯನ ಮಾಡುವನೋ ಅವನು ಜ್ಞಾನಯಜ್ಞದಿಂದ ನನ್ನನ್ನು ಇಷ್ಟಪಡಿಸುತ್ತಾನೆ ಎಂದು ನನ್ನ ಮತಿ.

06040071a ಶ್ರದ್ಧಾವಾನನಸೂಯಶ್ಚ ಶೃಣುಯಾದಪಿ ಯೋ ನರಃ।
06040071c ಸೋಽಪಿ ಮುಕ್ತಃ ಶುಭಾಽಲ್ಲೋಕಾನ್ಪ್ರಾಪ್ನುಯಾತ್ಪುಣ್ಯಕರ್ಮಣಾಂ।।

ಶ್ರದ್ಧಾವಂತನೂ ಅಸೂಯೆಯಿಲ್ಲದವನೂ ಆಗಿ, ಯಾವ ನರನು ಇದನ್ನು ಕೇಳುತ್ತಾನೋ ಅವನು ಮುಕ್ತನಾಗಿ ಪುಣ್ಯಕರ್ಮಿಗಳ ಶುಭ ಲೋಕಗಳನ್ನು ಪಡೆಯುತ್ತಾನೆ.

06040072a ಕಚ್ಚಿದೇತಚ್ಚ್ರುತಂ ಪಾರ್ಥ ತ್ವಯೈಕಾಗ್ರೇಣ ಚೇತಸಾ।
06040072c ಕಚ್ಚಿದಜ್ಞಾನಸಮ್ಮೋಹಃ ಪ್ರನಷ್ಟಸ್ತೇ ಧನಂಜಯ।।

ಪಾರ್ಥ! ಏಕಾಗ್ರ ಚಿತ್ತದಿಂದ ನೀನು ಇದನ್ನು ಕೇಳಿದೆ ತಾನೇ? ಧನಂಜಯ! ನಿನ್ನ ಅಜ್ಞಾನ ಸಮ್ಮೋಹಗಳು ಕಳೆದವು ತಾನೇ?”

06040073 ಅರ್ಜುನ ಉವಾಚ।
06040073a ನಷ್ಟೋ ಮೋಹಃ ಸ್ಮೃತಿರ್ಲಬ್ಧಾ ತ್ವತ್ಪ್ರಸಾದಾನ್ಮಯಾಚ್ಯುತ।
06040073c ಸ್ಥಿತೋಽಸ್ಮಿ ಗತಸಂದೇಹಃ ಕರಿಷ್ಯೇ ವಚನಂ ತವ।।

ಅರ್ಜುನನು ಹೇಳಿದನು: “ಅಚ್ಯುತ! ಮೋಹವು ನಷ್ಟವಾಯಿತು. ನಿನ್ನ ಪ್ರಸಾದದಿಂದ ನನಗೆ ಸ್ಮೃತಿಯು ದೊರಕಿತು. ಸಂದೇಹಗಳು ಹೊರಟು ಹೋಗಿವೆ. ನೀನು ಹೇಳಿದಂತೆ ಮಾಡುತ್ತೇನೆ.””

06040074 ಸಂಜಯ ಉವಾಚ।
06040074a ಇತ್ಯಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ।
06040074c ಸಂವಾದಮಿಮಮಶ್ರೌಷಮದ್ಭುತಂ ರೋಮಹರ್ಷಣಂ।।

ಸಂಜಯನು ಹೇಳಿದನು: “ಹೀಗೆ ನಾನು ವಾಸುದೇವ ಮತ್ತು ಮಹಾತ್ಮ ಪಾರ್ಥರ ಈ ಅದ್ಭುತ, ರೋಮಹರ್ಷಣ ಸಂವಾದವನ್ನು ಕೇಳಿದೆನು.

06040075a ವ್ಯಾಸಪ್ರಸಾದಾಚ್ಚ್ರುತವಾನೇತದ್ಗುಹ್ಯಮಹಂ ಪರಂ।
06040075c ಯೋಗಂ ಯೋಗೇಶ್ವರಾತ್ಕೃಷ್ಣಾತ್ಸಾಕ್ಷಾತ್ಕಥಯತಃ ಸ್ವಯಂ।।

ಈ ಗುಹ್ಯತಮ ಪರಮ ಯೋಗವನ್ನು ಯೋಗೇಶ್ವರ ಸ್ವಯಂ ಕೃಷ್ಣನೇ ಹೇಳುವುದನ್ನು ವ್ಯಾಸಪ್ರಸಾದದಿಂದ ಸಾಕ್ಷಾತ್ ಕೇಳಿದೆನು.

06040076a ರಾಜನ್ಸಂಸ್ಮೃತ್ಯ ಸಂಸ್ಮೃತ್ಯ ಸಂವಾದಮಿಮಮದ್ಭುತಂ।
06040076c ಕೇಶವಾರ್ಜುನಯೋಃ ಪುಣ್ಯಂ ಹೃಷ್ಯಾಮಿ ಚ ಮುಹುರ್ಮುಹುಃ।।

ರಾಜನ್! ಕೇಶವ-ಅರ್ಜುನರ ಈ ಅದ್ಭುತ ಪುಣ್ಯ ಸಂವಾದವನ್ನು ನೆನೆ ನೆನೆಸಿಕೊಂಡು ಮತ್ತೆ ಮತ್ತೆ ಹರ್ಷಗೊಳ್ಳುತ್ತಿದ್ದೇನೆ.

06040077a ತಚ್ಚ ಸಂಸ್ಮೃತ್ಯ ಸಂಸ್ಮೃತ್ಯ ರೂಪಮತ್ಯದ್ಭುತಂ ಹರೇಃ।
06040077c ವಿಸ್ಮಯೋ ಮೇ ಮಹಾನ್ರಾಜನ್ ಹೃಷ್ಯಾಮಿ ಚ ಪುನಃ ಪುನಃ।।

ಮತ್ತು ಆ ಹರಿಯ ಅತ್ಯದ್ಭುತ ರೂಪವನ್ನು ನೆನೆ ನೆನೆದುಕೊಂಡು ನನಗೆ ಮಹಾವಿಸ್ಮಯವಾಗುತ್ತಿದೆ. ರಾಜನ್! ಪುನಃ ಪುನಃ ಹರ್ಷಗೊಳ್ಳುತ್ತಿದ್ದೇನೆ.

06040078a ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ।
06040078c ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ।।

ಎಲ್ಲಿ ಯೋಗೇಶ್ವರ ಕೃಷ್ಣನಿರುವನೋ ಎಲ್ಲಿ ಧನುರ್ಧರ ಪಾರ್ಥನಿರುವನೋ ಅಲ್ಲಿ ಶ್ರೀ, ವಿಜಯ, ಭೂತಿ ಮತ್ತು ಧ್ರುವವಾದ ನೀತಿಗಳಿರುವವು ಎಂದು ನನ್ನ ಮತ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಮೋಕ್ಷಸಂನ್ಯಾಸಯೋಗೋ ನಾಮ ಅಷ್ಠಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಮೋಕ್ಷಸಂನ್ಯಾಸಯೋಗವೆಂಬ ಹದಿನೆಂಟನೇ ಅಧ್ಯಾಯವು.
ಭೀಷ್ಮ ಪರ್ವಣಿ ಚತ್ವಾರಿಂಶೋಽಧ್ಯಾಯಃ।।
ಭೀಷ್ಮ ಪರ್ವದಲ್ಲಿ ನಲ್ವತ್ತನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಶ್ರೀಮದ್ಭಗವದ್ಗೀತಾಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಶ್ರೀಮದ್ಭಗವದ್ಗೀತಾಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-5/18, ಉಪಪರ್ವಗಳು-63/100, ಅಧ್ಯಾಯಗಳು-900/1995, ಶ್ಲೋಕಗಳು-29233/73784.