ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭಗವದ್ಗೀತಾ ಪರ್ವ
ಅಧ್ಯಾಯ 37
ಸಾರ
06037001 ಶ್ರೀಭಗವಾನುವಾಚ।
06037001a ಊರ್ಧ್ವಮೂಲಮಧಃಶಾಖಮಶ್ವತ್ಥಂ ಪ್ರಾಹುರವ್ಯಯಂ।
06037001c ಚಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್।।
ಶ್ರೀಭಗವಾನನು ಹೇಳಿದನು: “ಮೇಲುಗಡೆ ಬೇರುಗಳುಳ್ಳ ಮತ್ತು ಕೆಳಗಡೆ ರೆಂಬೆಗಳುಳ್ಳ ಅಶ್ವತ್ಥವು ಅವ್ಯಯ ಎನ್ನುತ್ತಾರೆ. ಅದರ ಎಲೆಗಳು ಛಂದಸ್ಸುಗಳು. ಇದನ್ನು ತಿಳಿದುಕೊಂಡವನೇ ವೇದವನ್ನು ಬಲ್ಲವನು.
06037002a ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ ಗುಣಪ್ರವೃದ್ಧಾ ವಿಷಯಪ್ರವಾಲಾಃ।
06037002c ಅಧಶ್ಚ ಮೂಲಾನ್ಯನುಸಂತತಾನಿ ಕರ್ಮಾನುಬಂಧೀನಿ ಮನುಷ್ಯಲೋಕೇ।।
ಕೆಳಕ್ಕೂ ಮೇಲಕ್ಕೂ ಅದರ ಶಾಖೆಗಳು ಹಬ್ಬಿಕೊಂಡಿರುತ್ತವೆ. ಗುಣಗಳಿಂದ ಬೆಳೆಯುವ ಅದರಲ್ಲಿ ವಿಷಯಗಳು ಚಿಗುರುಗಳು. ಮನುಷ್ಯಲೋಕದಲ್ಲಿ ಕರ್ಮಾನುಬಂಧಗಳೇ ವ್ಯಾಪಿಸಿಕೊಂಡಿರುವ ಬೇರುಗಳು.
06037003a ನ ರೂಪಮಸ್ಯೇಹ ತಥೋಪಲಭ್ಯತೇ ನಾಂತೋ ನ ಚಾದಿರ್ನ ಚ ಸಂಪ್ರತಿಷ್ಠಾ।
06037003c ಅಶ್ವತ್ಥಮೇನಂ ಸುವಿರೂಢಮೂಲಂ ಅಸಂಗಶಸ್ತ್ರೇಣ ದೃಢೇನ ಚಿತ್ತ್ವಾ।।
06037004a ತತಃ ಪದಂ ತತ್ಪರಿಮಾರ್ಗಿತವ್ಯಂ ಯಸ್ಮಿನ್ಗತಾ ನ ನಿವರ್ತಂತಿ ಭೂಯಃ।
06037004c ತಮೇವ ಚಾದ್ಯಂ ಪುರುಷಂ ಪ್ರಪದ್ಯೇ ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ।।
ಇಲ್ಲಿ ಇದರ ರೂಪವು ಹಾಗೆಯೇ ಕಾಣಬರುವುದಿಲ್ಲ. ಇದಕ್ಕೆ ಅಂತವಾಗಲೀ, ಆದಿಯಾಗಲೀ, ನೆಲೆಯಾಗಲೀ ಇಲ್ಲ. ಚೆನ್ನಾಗಿ ಗಟ್ಟಿಯಾಗಿ ಬೇರೂರಿರುವ ಈ ಅಶ್ವತ್ಥವನ್ನು ದೃಢತೆ ಮತ್ತು ಅಸಂಗಗಳೆಂಬ ಶಸ್ತ್ರಗಳಿಂದ ಕತ್ತರಿಸಿ, ಹೋದರೆ ಪುನಃ ಹಿಂದಿರುಗಿ ಬರಲಾರದದಂತಹ ಆ ಪದದ ಕಡೆ ಪ್ರಯಾಣಿಸಬೇಕು. ಹಿಂದೆ ಯಾವಾತನಿಂದ ಹೊರಟು ಬಂದಿರುವೆಯೋ ಅದೇ ಆದ್ಯ ಪುರುಷನನ್ನು ಶರಣುಹೋಗಬೇಕು,
06037005a ನಿರ್ಮಾನಮೋಹಾ ಜಿತಸಂಗದೋಷಾ ಅಧ್ಯಾತ್ಮನಿತ್ಯಾ ವಿನಿವೃತ್ತಕಾಮಾಃ।
06037005c ದ್ವಂದ್ವೈರ್ವಿಮುಕ್ತಾಃ ಸುಖದುಃಖಸಂಜ್ಞೈರ್ ಗಚ್ಛಂತ್ಯಮೂಢಾಃ ಪದಮವ್ಯಯಂ ತತ್।।
ಮಾನ-ಮೋಹಗಳಿಲ್ಲದವರು, ಸಂಗದೋಷಗಳನ್ನು ಗೆದ್ದವರು, ಆಧ್ಯಾತ್ಮನಿತ್ಯರು, ಕಾಮಗಳನ್ನು ಕಳೆದುಕೊಂಡವರು, ದ್ವಂದ್ವಗಳಿಂದ ಮತ್ತು ಸುಖ-ದುಃಖಗಳಿಂದ ವಿಮುಕ್ತರಾದವರು, ಮತ್ತು ಅಮೂಢರು ಆ ಅವ್ಯಯ ಪದವನ್ನು ಸೇರುತ್ತಾರೆ.
06037006a ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ।
06037006c ಯದ್ಗತ್ವಾ ನ ನಿವರ್ತಂತೇ ತದ್ಧಾಮ ಪರಮಂ ಮಮ।।
ಅಲ್ಲಿ ಸೂರ್ಯನೂ ಬೆಳಗುವುದಿಲ್ಲ. ಚಂದ್ರನೂ ಬೆಳಗುವುದಿಲ್ಲ. ಪಾವಕನೂ ಬೆಳಗುವುದಿಲ್ಲ. ಹೋದ ಸ್ಥಾನದಿಂದ ಹಿಂದಿರುಗದಿರುವ ಅದೇ ನನ್ನ ಪರಮ ಧಾಮವು.
06037007a ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ।
06037007c ಮನಃಷಷ್ಠಾನೀಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ।।
ನನ್ನ ಸನಾತನ ಅಂಶವು ಜೀವಲೋಕದಲ್ಲಿ ಜೀವಭೂತವಾಗಿ ಪ್ರಕೃತಿಯಲ್ಲಿರುವ ಮನಸ್ಸು ಮತ್ತು ಆರು ಇಂದ್ರಿಯಗಳನ್ನು ಸೆಳೆದುಕೊಳ್ಳುತ್ತದೆ.
06037008a ಶರೀರಂ ಯದವಾಪ್ನೋತಿ ಯಚ್ಚಾಪ್ಯುತ್ಕ್ರಾಮತೀಶ್ವರಃ।
06037008c ಗೃಹೀತ್ವೈತಾನಿ ಸಂಯಾತಿ ವಾಯುರ್ಗಂಧಾನಿವಾಶಯಾತ್।।
ಈಶ್ವರನು ಶರೀರವನ್ನು ಪಡೆಯುವಾಗ ಮತ್ತು ಶರೀರವನ್ನು ತೊರೆಯುವಾಗ ವಾಯುವು ಗಂಧಗಳನ್ನು ಕೊಂಡೊಯ್ಯುವಂತೆ ಇವುಗಳನ್ನು ಹೊತ್ತುಕೊಂಡು ಹೋಗುತ್ತಾನೆ.
06037009a ಶ್ರೋತ್ರಂ ಚಕ್ಷುಃ ಸ್ಪರ್ಶನಂ ಚ ರಸನಂ ಘ್ರಾಣಮೇವ ಚ।
06037009c ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ।।
ಕಿವಿ, ಕಣ್ಣು, ಸ್ಪರ್ಶ, ರಸ, ಘ್ರಾಣ ಮತ್ತು ಮನಸ್ಸುಗಳಲ್ಲಿ ಇದ್ದುಕೊಂಡು ವಿಷಯಗಳನ್ನು ಉಪಸೇವಿಸುತ್ತಾನೆ.
06037010a ಉತ್ಕ್ರಾಮಂತಂ ಸ್ಥಿತಂ ವಾಪಿ ಭುಂಜಾನಂ ವಾ ಗುಣಾನ್ವಿತಂ।
06037010c ವಿಮೂಢಾ ನಾನುಪಶ್ಯಂತಿ ಪಶ್ಯಂತಿ ಜ್ಞಾನಚಕ್ಷುಷಃ।।
ಬಿಟ್ಟುಹೋಗುವಾಗ, ಇರುವಾಗ, ಅಥವಾ ಗುಣಾನ್ವಿತನಾಗಿ ಭೋಗಿಸುವಾಗಲೂ ಕೂಡ ವಿಮೂಢರು ಇವನನ್ನು ಕಾಣುವುದಿಲ್ಲ. ಆದರೆ ಜ್ಞಾನದೃಷ್ಟಿಯಿರುವವರು ಇವನನ್ನು ನೋಡುತ್ತಾರೆ.
06037011a ಯತಂತೋ ಯೋಗಿನಶ್ಚೈನಂ ಪಶ್ಯಂತ್ಯಾತ್ಮನ್ಯವಸ್ಥಿತಂ।
06037011c ಯತಂತೋಽಪ್ಯಕೃತಾತ್ಮಾನೋ ನೈನಂ ಪಶ್ಯಂತ್ಯಚೇತಸಃ।।
ಪ್ರಯತ್ನಿಸುತ್ತಿರುವ ಯೋಗಿಗಳು ಈತನು ತಮ್ಮಲ್ಲಿರುವುದನ್ನು ಕಂಡುಕೊಳ್ಳುವರು. ಅಕೃತಾತ್ಮರು ಪ್ರಯತ್ನಿಸಿದರೂ, ಅಚೇತಸರಾಗಿರುವುದರಿಂದ ಇವನನ್ನು ಕಾಣದೇ ಇರುವರು.
06037012a ಯದಾದಿತ್ಯಗತಂ ತೇಜೋ ಜಗದ್ಭಾಸಯತೇಽಖಿಲಂ।
06037012c ಯಚ್ಚಂದ್ರಮಸಿ ಯಚ್ಚಾಗ್ನೌ ತತ್ತೇಜೋ ವಿದ್ಧಿ ಮಾಮಕಂ।।
ಯಾವ ತೇಜಸ್ಸು ಆದಿತ್ಯನಲ್ಲಿದ್ದುಕೊಂಡು ಅಖಿಲ ಜಗತ್ತನ್ನೂ ಬೆಳಗುತ್ತದೆಯೋ, ಯಾವುದು ಚಂದ್ರ ಮತ್ತು ಅಗ್ನಿಗಳಲ್ಲಿ ಇದೆಯೋ ಆ ತೇಜಸ್ಸು ನನ್ನದೆಂದು ತಿಳಿ.
06037013a ಗಾಮಾವಿಶ್ಯ ಚ ಭೂತಾನಿ ಧಾರಯಾಮ್ಯಹಮೋಜಸಾ।
06037013c ಪುಷ್ಣಾಮಿ ಚೌಷಧೀಃ ಸರ್ವಾಃ ಸೋಮೋ ಭೂತ್ವಾ ರಸಾತ್ಮಕಃ।।
ನಾನು ಭೂಮಿಯನ್ನು ಹೊಕ್ಕು ಓಜಸ್ಸಿನಿಂದ ಭೂತಗಳನ್ನು ಪೊರೆಯುತ್ತೇನೆ. ರಸಾತ್ಮಕನಾದ ಸೋಮನಾಗಿ ಸರ್ವ ಔಷಧಿಗಳನ್ನೂ ಪೋಷಿಸುತ್ತೇನೆ.
06037014a ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ।
06037014c ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ।।
ನಾನು ಪ್ರಾಣಿಗಳ ದೇಹವನ್ನು ಆಶ್ರಯಿಸಿರುವ ವೈಶ್ವಾನರನಾಗಿ ಪ್ರಾಣಾಪಾನಸಮಾಯುಕ್ತನಾಗಿ ಚತುರ್ವಿಧ ಅನ್ನವನ್ನು ಪಚನಮಾಡುತ್ತೇನೆ.
06037015a ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ।
06037015c ವೇದೈಶ್ಚ ಸರ್ವೈರಹಮೇವ ವೇದ್ಯೋ ವೇದಾಂತಕೃದ್ವೇದವಿದೇವ ಚಾಹಂ।।
ಎಲ್ಲರ ಹೃದಯಗಳಲ್ಲಿ ನಾನು ನೆಲೆಸಿದ್ದೇನೆ. ನೆನಪು, ಜ್ಞಾನ ಮತ್ತು ಅವುಗಳ ಹೋಗುವಿಕೆ ನನ್ನಿಂದಲೇ ಆಗುತ್ತದೆ. ಸರ್ವವೇದಗಳಿಗೂ ನಾನೇ ವೇದ್ಯನು. ವೇದಾಂತವನ್ನು ಮಾಡಿದವನು ನಾನು. ವೇದವಿದನೂ ನಾನು.
06037016a ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ।
06037016c ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋಽಕ್ಷರ ಉಚ್ಯತೇ।।
ಲೋಕದಲ್ಲಿ ಈ ಇಬ್ಬರು ಪುರುಷರಿದ್ದಾರೆ - ಕ್ಷರ ಮತ್ತು ಅಕ್ಷರ. ಸರ್ವಭೂತಗಳು ಕ್ಷರ. ಅವುಗಳಲ್ಲಿರುವ ಕೂಟಸ್ಥನು ಅಕ್ಷರ.
06037017a ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ।
06037017c ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ।।
ಆದರೆ ಪರಮಾತ್ಮನೆನಿಸಿಕೊಂಡಿರುವ ಉತ್ತಮ ಪುರುಷನು ಬೇರೆ. ಆ ಅವ್ಯಯ ಈಶ್ವರನು ಲೋಕತ್ರಯಗಳನ್ನು ಪ್ರವೇಶಿಸಿ ಧರಿಸಿಕೊಂಡಿರುತ್ತಾನೆ.
06037018a ಯಸ್ಮಾತ್ ಕ್ಷರಮತೀತೋಽಹಮಕ್ಷರಾದಪಿ ಚೋತ್ತಮಃ।
06037018c ಅತೋಽಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ।।
ಕ್ಷರವನ್ನು ದಾಟಿ ಅಕ್ಷರಕ್ಕಿಂತಲೂ ಉತ್ತಮನಾಗಿರುವುದರಿಂದ ನಾನು ಲೋಕದಲ್ಲಿಯೂ ವೇದಗಳಲ್ಲಿಯೂ ಪುರುಷೋತ್ತಮನೆಂದು ಪ್ರಥಿತನಾಗಿದ್ದೇನೆ.
06037019a ಯೋ ಮಾಮೇವಮಸಮ್ಮೂಢೋ ಜಾನಾತಿ ಪುರುಷೋತ್ತಮಂ।
06037019c ಸ ಸರ್ವವಿದ್ಭಜತಿ ಮಾಂ ಸರ್ವಭಾವೇನ ಭಾರತ।।
ಭಾರತ! ಅಸಮ್ಮೂಢನಾಗಿ ನಾನೇ ಪುರುಷೋತ್ತಮನೆಂದು ತಿಳಿದಿರುವ ಸರ್ವವಿದುವು ಸರ್ವಭಾವದಿಂದ ನನ್ನನ್ನು ಭಜಿಸುತ್ತಾನೆ.
06037020a ಇತಿ ಗುಹ್ಯತಮಂ ಶಾಸ್ತ್ರಮಿದಮುಕ್ತಂ ಮಯಾನಘ।
06037020c ಏತದ್ಬುದ್ಧ್ವಾ ಬುದ್ಧಿಮಾನ್ಸ್ಯಾತ್ಕೃತಕೃತ್ಯಶ್ಚ ಭಾರತ।।
ಭಾರತ! ಅನಘ! ಈ ಗುಹ್ಯತಮ ಶಾಸ್ತ್ರವನ್ನು ನಾನು ಹೇಳಿದ್ದಾಯಿತು. ಇದನ್ನು ಅರಿತುಕೊಂಡವನು ಬುದ್ಧಿವಂತನೂ ಕೃತಕೃತ್ಯನೂ ಆಗುತ್ತಾನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಪುರುಷೋತ್ತಮಯೋಗೋ ನಾಮ ಪಂಚದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಪುರುಷೋತ್ತಮಯೋಗವೆಂಬ ಹದಿನೈದನೇ ಅಧ್ಯಾಯವು.
ಭೀಷ್ಮ ಪರ್ವಣಿ ಸಪ್ತತ್ರಿಂಶೋಽಧ್ಯಾಯಃ।।
ಭೀಷ್ಮ ಪರ್ವದಲ್ಲಿ ಮೂವತ್ತೇಳನೇ ಅಧ್ಯಾಯವು.