035 ಶ್ರೀಕೃಷ್ಣಾರ್ಜುನಸಂವಾದೇ ಕ್ಷೇತ್ರಕ್ಷೇತ್ರಜ್ಞವಿಭಾಗಯೋಗಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭಗವದ್ಗೀತಾ ಪರ್ವ

ಅಧ್ಯಾಯ 35

ಸಾರ

06035001 ಶ್ರೀಭಗವಾನುವಾಚ।
06035001a ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ।
06035001c ಏತದ್ಯೋ ವೇತ್ತಿ ತಂ ಪ್ರಾಹುಃ ಕ್ಷೇತ್ರಜ್ಞ ಇತಿ ತದ್ವಿದಃ।।

ಶ್ರೀಭಗವಾನನು ಹೇಳಿದನು: “ಕೌಂತೇಯ! ಈ ಶರೀರವನ್ನು ಕ್ಷೇತ್ರವೆಂದು ಕರೆಯುತ್ತಾರೆ. ಇದನ್ನು ಯಾರು ಅರಿಯುತ್ತಾರೋ ಅವರನ್ನು ಕ್ಷೇತ್ರಜ್ಞ ಎಂದು ತದ್ವಿದರು ಕರೆಯುತ್ತಾರೆ.

06035002a ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ ಸರ್ವಕ್ಷೇತ್ರೇಷು ಭಾರತ।
06035002c ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ ಯತ್ತಜ್ಜ್ಞಾನಂ ಮತಂ ಮಮ।।

ಭಾರತ! ಸರ್ವಕ್ಷೇತ್ರಗಳಲ್ಲಿರುವ ಕ್ಷೇತ್ರಜ್ಞನು ನಾನೇ ಎಂದು ತಿಳಿ. ಕ್ಷೇತ್ರ-ಕ್ಷೇತ್ರಜ್ಞರ ಜ್ಞಾನವೇ ಜ್ಞಾನವೆಂದು ನನ್ನ ಮತ.

06035003a ತತ್ ಕ್ಷೇತ್ರಂ ಯಚ್ಚ ಯಾದೃಕ್ಚ ಯದ್ವಿಕಾರಿ ಯತಶ್ಚ ಯತ್।
06035003c ಸ ಚ ಯೋ ಯತ್ಪ್ರಭಾವಶ್ಚ ತತ್ಸಮಾಸೇನ ಮೇ ಶೃಣು।।

ಆ ಕ್ಷೇತ್ರವು ಯಾವುದು? ಹೇಗಿರುವಂಥಹುದು? ಅದಕ್ಕೆ ಯಾವ ವಿಕಾರಗಳಿವೆ? ಯಾವುದರಿಂದ ಯಾವುದು ಬಂದಿದೆ? ಆ ಕ್ಷೇತ್ರಜ್ಞನು ಯಾರು? ಅವನ ಪ್ರಭಾವವೇನು? ಅದನ್ನು ಸಂಕ್ಷಿಪ್ತವಾಗಿ ನನ್ನಿಂದ ಕೇಳು.

06035004a ಋಷಿಭಿರ್ಬಹುಧಾ ಗೀತಂ ಚಂದೋಭಿರ್ವಿವಿಧೈಃ ಪೃಥಕ್।
06035004c ಬ್ರಹ್ಮಸೂತ್ರಪದೈಶ್ಚೈವ ಹೇತುಮದ್ಭಿರ್ವಿನಿಶ್ಚಿತೈಃ।।

ಇದರ ಕುರಿತು ಋಷಿಗಳು ಅನೇಕ ವಿವಿಧ ಛಂದಸ್ಸುಗಳುಳ್ಳ ಗೀತಗಳಿಂದ, ಹೇತುಗಳಿಂದೊಡಗೂಡಿದ ನಿಶ್ಚಯಗಳಿಂದ, ಬ್ರಹ್ಮಸೂತ್ರದ ಪದಗಳಿಂದ ಹೇಳಿದ್ದಾರೆ.

06035005a ಮಹಾಭೂತಾನ್ಯಹಂಕಾರೋ ಬುದ್ಧಿರವ್ಯಕ್ತಮೇವ ಚ।
06035005c ಇಂದ್ರಿಯಾಣಿ ದಶೈಕಂ ಚ ಪಂಚ ಚೇಂದ್ರಿಯಗೋಚರಾಃ।।
06035006a ಇಚ್ಛಾ ದ್ವೇಷಃ ಸುಖಂ ದುಃಖಂ ಸಂಘಾತಶ್ಚೇತನಾ ಧೃತಿಃ।
06035006c ಏತತ್ ಕ್ಷೇತ್ರಂ ಸಮಾಸೇನ ಸವಿಕಾರಮುದಾಹೃತಂ।।

ಮಹಾಭೂತಗಳು, ಅಹಂಕಾರ, ಬುದ್ಧಿ, ಅವ್ಯಕ್ತ, ಹತ್ತು ಮತ್ತು ಒಂದು ಇಂದ್ರಿಯಗಳು, ಐದು ಇಂದ್ರಿಯಗೋಚರಗಳು, ಇಚ್ಛೆ, ದ್ವೇಷ, ಸುಖ, ದುಃಖ, ಸಂಘಾತ, ಚೇತನ, ಧೃತಿ ಇವೇ ಕ್ಷೇತ್ರವು. ವಿಕಾರಗಳನ್ನೂ ಸೇರಿಸಿ ಸಂಕ್ಷಿಪ್ತವಾಗಿ ಹೇಳಿದ್ದಾಯಿತು.

06035007a ಅಮಾನಿತ್ವಮದಂಭಿತ್ವಮಹಿಂಸಾ ಕ್ಷಾಂತಿರಾರ್ಜವಂ।
06035007c ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ।।
06035008a ಇಂದ್ರಿಯಾರ್ಥೇಷು ವೈರಾಗ್ಯಮನಹಂಕಾರ ಏವ ಚ।
06035008c ಜನ್ಮಮೃತ್ಯುಜರಾವ್ಯಾಧಿದುಃಖದೋಷಾನುದರ್ಶನಂ।।

ಅಮಾನಿತ್ವ (ತನ್ನನ್ನು ತಾನೇ ಮೆಚ್ಚಿಕೊಳ್ಳದಿರುವುದು), ಅದಂಭಿತ್ವ (ತನ್ನ ಧರ್ಮವನ್ನು ಪ್ರಕಟಮಾಡಿಕೊಳ್ಳದಿರುವುದು), ಅಹಿಂಸಾ, ಕ್ಷಾಂತಿ (ಇನ್ನೊಬ್ಬರು ತಪ್ಪು ಮಾಡಿದರೂ ಮನೋವಿಕಾರಗೊಳ್ಳದಿರುವುದು), ಆರ್ಜವ (ಋಜುವಾಗಿರುವುದು, ಕೊಂಕಿಲ್ಲದೇ ಇರುವುದು), ಆಚಾರ್ಯೋಪಾಸನೆ, ಶೌಚ, ಸ್ಥೈರ್ಯ, ಆತ್ಮವಿನಿಗ್ರಹ, ಇಂದ್ರಿಯಾರ್ಥಗಳಲ್ಲಿ ವೈರಾಗ್ಯ, ಅಹಂಕಾರವಿಲ್ಲದಿರುವುದು – ಇವೇ ಜನ್ಮ-ಮೃತ್ಯು-ಜರ-ವ್ಯಾಧಿ-ದುಃಖ-ದೋಷಗಳ ದರ್ಶನಗಳು.

06035009a ಅಸಕ್ತಿರನಭಿಷ್ವಂಗಃ ಪುತ್ರದಾರಗೃಹಾದಿಷು।
06035009c ನಿತ್ಯಂ ಚ ಸಮಚಿತ್ತತ್ವವಮಿಷ್ಟಾನಿಷ್ಟೋಪಪತ್ತಿಷು।।
06035010a ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ।
06035010c ವಿವಿಕ್ತದೇಶಸೇವಿತ್ವಮರತಿರ್ಜನಸಂಸದಿ।।
06035011a ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವಜ್ಞಾನಾರ್ಥದರ್ಶನಂ।
06035011c ಏತಜ್ಜ್ಞಾನಮಿತಿ ಪ್ರೋಕ್ತಮಜ್ಞಾನಂ ಯದತೋಽನ್ಯಥಾ।।

ಮಕ್ಕಳು, ಹೆಂಡತಿ, ಮನೆ ಮೊದಲಾದವುಗಳಲ್ಲಿ ಅಸಕ್ತಿ, ತಾನು ಬೇರೆಯಲ್ಲವೆಂಬ ಭಾವನೆ, ಬೇಕಾದವುಗಳು ಮತ್ತು ಬೇಡವಾದವುಗಳು ಎರಡರಲ್ಲಿ ಯಾವುದು ಬಂದಾಗಲೂ ಸಮನಾಗಿರುವುದು, ನನ್ನಲ್ಲಿ ಅನನ್ಯಯೋಗದಿಂದ ಬೇರೆ ಎಲ್ಲಿಯೂ ಹೋಗದ ಭಕ್ತಿ, ಏಕಾಂತ ಪ್ರದೇಶಗಳನ್ನು ಸೇವಿಸುವುದು, ಜನಸಂಸದಿಯಲ್ಲಿ ಸಂತೋಷಪಡದಿರುವುದು, ಆಧ್ಯಾತ್ಮ ಜ್ಞಾನದಲ್ಲಿ ನಿತ್ಯನಾಗಿರುವುದು – ಇವು ತತ್ವಜ್ಞಾನಾರ್ಥದರ್ಶನಗಳು. ಇದನ್ನು ಜ್ಞಾನವೆಂದು ಹೇಳುತ್ತಾರೆ. ಇದಕ್ಕೆ ಹೊರತಾಗಿದ್ದುದು ಅಜ್ಞಾನ.

06035012a ಜ್ಞೇಯಂ ಯತ್ತತ್ಪ್ರವಕ್ಷ್ಯಾಮಿ ಯಜ್ಜ್ಞಾತ್ವಾಮೃತಮಶ್ನುತೇ।
06035012c ಅನಾದಿಮತ್ಪರಂ ಬ್ರಹ್ಮ ನ ಸತ್ತನ್ನಾಸದುಚ್ಯತೇ।।

ಯಾವುದು ತಿಳಿಯಬೇಕಾದುದೋ ಅದನ್ನು ಹೇಳುತ್ತೇನೆ. ಇದನ್ನು ತಿಳಿದು ಅಮೃತತ್ವವನ್ನು ಪಡೆಯಬಹುದು. ಅದು ಆದಿಯಿಲ್ಲದಿರುವ, ಇದೆ ಮತ್ತು ಇಲ್ಲ ಎಂದೆನಿಸಿಕೊಂಡಿರುವ ಪರಬ್ರಹ್ಮ.

06035013a ಸರ್ವತಃಪಾಣಿಪಾದಂ ತತ್ಸರ್ವತೋಕ್ಷಿಶಿರೋಮುಖಂ।
06035013c ಸರ್ವತಃಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ।।

ಎಲ್ಲಕಡೆಯೂ ಅದರ ಪಾದ-ಪಾಣಿಗಳಿವೆ. ಅದು ಎಲ್ಲಕಡೆಯೂ ಕಣ್ಣು, ಶಿರ, ಮುಖಗಳನ್ನು ಹೊಂದಿದೆ. ಎಲ್ಲಕಡೆಯೂ ಕೇಳುತ್ತದೆ. ಲೋಕದಲ್ಲಿ ಎಲ್ಲವನ್ನೂ ಆವರಿಸಿಕೊಂಡಿದೆ.

06035014a ಸರ್ವೇಂದ್ರಿಯಗುಣಾಭಾಸಂ ಸರ್ವೇಂದ್ರಿಯವಿವರ್ಜಿತಂ।
06035014c ಅಸಕ್ತಂ ಸರ್ವಭೃಚ್ಚೈವ ನಿರ್ಗುಣಂ ಗುಣಭೋಕ್ತೃ ಚ।।

ಅದು ಸರ್ವೇಂದ್ರಿಯಗಳ ಗುಣಗಳಿಂದ ಕೂಡಿದೆ. ಆದರೆ ಸರ್ವ ಇಂದ್ರಿಯಗಳನ್ನು ವರ್ಜಿಸಿದೆ. ಅದು ಅಸಕ್ತ ಆದರೆ ಎಲ್ಲವನ್ನೂ ಧರಿಸಿದೆ. ಅದು ನಿರ್ಗುಣ. ಆದರೆ ಗುಣಗಳನ್ನು ಭೋಗಿಸುವಂತಹುದು.

06035015a ಬಹಿರಂತಶ್ಚ ಭೂತಾನಾಮಚರಂ ಚರಮೇವ ಚ।
06035015c ಸೂಕ್ಷ್ಮತ್ವಾತ್ತದವಿಜ್ಞೇಯಂ ದೂರಸ್ಥಂ ಚಾಂತಿಕೇ ಚ ತತ್।।

ಅದು ಇರುವವುಗಳ ಹೊರಗೂ ಒಳಗೂ ಇರುವುದು. ಚರವೂ ಅಚರವೂ ಆಗಿರುವುದು. ಸೂಕ್ಷ್ಮವಾಗಿರುವುದರಿಂದ ಅದು ಅರಿಯಲಸಾಧ್ಯವಾಗಿರುವುದು. ಅದು ದೂರದಲ್ಲಿರುವುದು. ಹತ್ತಿರದಲ್ಲಿಯೂ ಇರುವುದು.

06035016a ಅವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಂ।
06035016c ಭೂತಭರ್ತೃ ಚ ತಜ್ಜ್ಞಾಯಂ ಗ್ರಸಿಷ್ಣು ಪ್ರಭವಿಷ್ಣು ಚ।।

ಇರುವವುಗಳಲ್ಲಿ ಅವಿಭಕ್ತವಾಗಿಯೂ ವಿಭಕ್ತವಾಗಿಯೂ ಇರುವುದು. ತಿಳಿಯಬೇಕಾಗಿರುವ ಅದು ಇರುವವನ್ನು ಕಾಪಾಡುತ್ತದೆ. ಎಲ್ಲವನ್ನೂ ಕಬಳಿಸುತ್ತದೆ. ಮತ್ತು ಎಲ್ಲವನ್ನು ಹುಟ್ಟಿಸುತ್ತದೆ ಕೂಡ.

06035017a ಜ್ಯೋತಿಷಾಮಪಿ ತಜ್ಜ್ಯೋತಿಸ್ತಮಸಃ ಪರಮುಚ್ಯತೇ।
06035017c ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ ಹೃದಿ ಸರ್ವಸ್ಯ ವಿಷ್ಠಿತಂ।।

ಅದು ಜ್ಯೋತಿಗಳಿಗೂ ಹೆಚ್ಚಿನ ಜ್ಯೋತಿ. ಕತ್ತಲೆಗೂ ಆಚೆಯಿರುವುದು. ಅದು ಜ್ಞಾನ, ತಿಳಿಯುವಂಥಹುದು, ಮತ್ತು ಜ್ಞಾನದ ಫಲ. ಎಲ್ಲರ ಹೃದಯಗಳಲ್ಲಿ ನೆಲೆಸಿದೆ.

06035018a ಇತಿ ಕ್ಷೇತ್ರಂ ತಥಾ ಜ್ಞಾನಂ ಜ್ಞೇಯಂ ಚೋಕ್ತಂ ಸಮಾಸತಃ।
06035018c ಮದ್ಭಕ್ತ ಏತದ್ವಿಜ್ಞಾಯ ಮದ್ಭಾವಾಯೋಪಪದ್ಯತೇ।।

ಹೀಗೆ ಕ್ಷೇತ್ರವನ್ನೂ, ಜ್ಞಾನವನ್ನೂ, ಜ್ಞೇಯವನ್ನೂ ಸಂಕ್ಷಿಪ್ತವಾಗಿ ಹೇಳಿದ್ದಾಯಿತು. ನನ್ನ ಭಕ್ತನು ಇದನ್ನು ತಿಳಿದುಕೊಂಡು ನನ್ನದೇ ಭಾವವನ್ನು ಪಡೆಯುತ್ತಾನೆ.

06035019a ಪ್ರಕೃತಿಂ ಪುರುಷಂ ಚೈವ ವಿದ್ಧ್ಯನಾದೀ ಉಭಾವಪಿ।
06035019c ವಿಕಾರಾಂಶ್ಚ ಗುಣಾಂಶ್ಚೈವ ವಿದ್ಧಿ ಪ್ರಕೃತಿಸಂಭವಾನ್।।

ಪ್ರಕೃತಿ ಮತ್ತು ಪುರುಷ ಎರಡೂ ಅನಾದಿಯೆಂದು ತಿಳಿ. ವಿಕಾರಗಳೂ ಗುಣಗಳೂ ಪ್ರಕೃತಿಯಿಂದ ಹುಟ್ಟಿದವೆಂದು ತಿಳಿ.

06035020a ಕಾರ್ಯಕಾರಣಕರ್ತೃತ್ವೇ ಹೇತುಃ ಪ್ರಕೃತಿರುಚ್ಯತೇ।
06035020c ಪುರುಷಃ ಸುಖದುಃಖಾನಾಂ ಭೋಕ್ತೃತ್ವೇ ಹೇತುರುಚ್ಯತೇ।।

ಪ್ರಕೃತಿಯು ಕಾರ್ಯ-ಕಾರಣ-ಕರ್ತೃತ್ವಗಳಿಗೆ ಹೇತುವೆಂದೆನಿಸಿಕೊಂಡಿರುವುದು. ಪುರುಷನು ಸುಖ-ದುಃಖಗಳನ್ನು ಅನುಭವಿಸುವುದಕ್ಕೆ ಹೇತುವೆಂದೆನಿಸಿಕೊಂಡಿರುವನು.

06035021a ಪುರುಷಃ ಪ್ರಕೃತಿಸ್ಥೋ ಹಿ ಭುಂಕ್ತೇ ಪ್ರಕೃತಿಜಾನ್ಗುಣಾನ್।
06035021c ಕಾರಣಂ ಗುಣಸಂಗೋಽಸ್ಯ ಸದಸದ್ಯೋನಿಜನ್ಮಸು।।

ಪುರುಷನು ಪ್ರಕೃತಿಸ್ಥನಾಗಿಯೇ ಪ್ರಕೃತಿಯಿಂದ ಉಂಟಾದ ಗುಣಗಳನ್ನು ಅನುಭವಿಸುತ್ತಾನೆ. ಈ ಗುಣಸಂಗದ ಕಾರಣದಿಂದಲೇ ಅವನು ಒಳ್ಳೆಯ ಮತ್ತು ಕೆಟ್ಟ ಯೋನಿಗಳಲ್ಲಿ ಜನ್ಮತಾಳುತ್ತಾನೆ.

06035022a ಉಪದ್ರಷ್ಟಾನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ।
06035022c ಪರಮಾತ್ಮೇತಿ ಚಾಪ್ಯುಕ್ತೋ ದೇಹೇಽಸ್ಮಿನ್ಪುರುಷಃ ಪರಃ।।

ಈ ದೇಹದಲ್ಲಿರುವ ಪರಮ ಪುರುಷನು ಉಪದ್ರಷ್ಟನು (ತಾನು ಯಾವ ಕೆಲಸವನ್ನೂ ಮಾಡದೇ ಹತ್ತಿರದಲ್ಲಿದ್ದುಕೊಂಡು ಎಲ್ಲವನ್ನೂ ನೋಡುವವನು). ಅನುಮಂತನು (ಮಾಡುತ್ತಿರುವವರನ್ನು ಅನುಮೋದಿಸುವವನು). ಭರ್ತನು. ಭೋಕ್ತ (ಅನುಭವಿಸುವವನು)ನು. ಮಹೇಶ್ವರ. ಪರಮಾತ್ಮ ಎಂದೆನಿಸಿಕೊಂಡಿದ್ದಾನೆ.

06035023a ಯ ಏವಂ ವೇತ್ತಿ ಪುರುಷಂ ಪ್ರಕೃತಿಂ ಚ ಗುಣೈಃ ಸಹ।
06035023c ಸರ್ವಥಾ ವರ್ತಮಾನೋಽಪಿ ನ ಸ ಭೂಯೋಽಭಿಜಾಯತೇ।।

ಹೀಗೆ ಪುರುಷನನ್ನೂ ಗುಣಗಳ ಸಹಿತ ಪ್ರಕೃತಿಯನ್ನೂ ಯಾರು ಅರ್ಥಮಾಡಿಕೊಳ್ಳುತ್ತಾರೋ ಅವರು ವರ್ತಮಾನದಲ್ಲಿ ಏನೇ ಆಗಿದ್ದರೂ ಪುನಃ ಹುಟ್ಟುವುದಿಲ್ಲ.

06035024a ಧ್ಯಾನೇನಾತ್ಮನಿ ಪಶ್ಯಂತಿ ಕೇ ಚಿದಾತ್ಮಾನಮಾತ್ಮನಾ।
06035024c ಅನ್ಯೇ ಸಾಂಖ್ಯೇನ ಯೋಗೇನ ಕರ್ಮಯೋಗೇನ ಚಾಪರೇ।।

ಕೆಲವರು ಧ್ಯಾನದ ಮೂಲಕ, ಕೆಲವರು ಸಾಂಖ್ಯ ಯೋಗದ ಮೂಲಕ, ಇನ್ನು ಕೆಲವರು ಕರ್ಮಯೋಗದ ಮೂಲಕ ಆತ್ಮನಲ್ಲಿ ಆತ್ಮನನ್ನು ಆತ್ಮನಿಂದ ಕಂಡುಕೊಳ್ಳುತ್ತಾರೆ.

06035025a ಅನ್ಯೇ ತ್ವೇವಮಜಾನಂತಃ ಶ್ರುತ್ವಾನ್ಯೇಭ್ಯ ಉಪಾಸತೇ।
06035025c ತೇಽಪಿ ಚಾತಿತರಂತ್ಯೇವ ಮೃತ್ಯುಂ ಶ್ರುತಿಪರಾಯಣಾಃ।।

ಆದರೆ ಬೇರೆ ಕೆಲವರು ತಾವೇ ಇದನ್ನು ತಿಳಿದುಕೊಳ್ಳದೇ ಮತ್ತೊಬ್ಬರಿಂದ ಕೇಳಿ ಉಪಾಸನೆ ಮಾಡುತ್ತಾರೆ. ಅವರೂ ಕೂಡ ಶ್ರುತಿಪರಾಯಣರಾಗಿದ್ದುದರಿಂದ ಮೃತ್ಯುವನ್ನು ದಾಟುತ್ತಾರೆ.

06035026a ಯಾವತ್ಸಂಜಾಯತೇ ಕಿಂ ಚಿತ್ಸತ್ತ್ವಂ ಸ್ಥಾವರಜಂಗಮಂ।
06035026c ಕ್ಷೇತ್ರಕ್ಷೇತ್ರಜ್ಞಸಮ್ಯೋಗಾತ್ತದ್ವಿದ್ಧಿ ಭರತರ್ಷಭ।।

ಭರತರ್ಷಭ! ಹುಟ್ಟುವ ಸ್ಥಾವರ ಜಂಗಮಗಳ ಸತ್ವವು ಕ್ಷೇತ್ರ ಮತ್ತು ಕ್ಷೇತ್ರಜ್ಞರ ಸಂಯೋಗದಿಂದ ಆಗುತ್ತದೆ ಎನ್ನುವುದನ್ನು ತಿಳಿದುಕೋ.

06035027a ಸಮಂ ಸರ್ವೇಷು ಭೂತೇಷು ತಿಷ್ಠಂತಂ ಪರಮೇಶ್ವರಂ।
06035027c ವಿನಶ್ಯತ್ಸ್ವವಿನಶ್ಯಂತಂ ಯಃ ಪಶ್ಯತಿ ಸ ಪಶ್ಯತಿ।।

ಇರುವ ಎಲ್ಲವುಗಳಲ್ಲಿ ನೆಲೆಸಿರುವ, ಅವು ನಾಶವಾದರೂ ತಾನು ನಾಶವಾಗದೇ ಇರುವ ಪರಮೇಶ್ವರನನ್ನು ಯಾರು ಕಂಡುಕೊಳ್ಳುತ್ತಾರೋ ಅವರೇ ಕಾಣುವವರು.

06035028a ಸಮಂ ಪಶ್ಯನ್ ಹಿ ಸರ್ವತ್ರ ಸಮವಸ್ಥಿತಮೀಶ್ವರಂ।
06035028c ನ ಹಿನಸ್ತ್ಯಾತ್ಮನಾತ್ಮಾನಂ ತತೋ ಯಾತಿ ಪರಾಂ ಗತಿಂ।।

ಏಕೆಂದರೆ ಸರ್ವತ್ರ ಸಮನಾಗಿರುವ ಈಶ್ವರನನ್ನು ಸಮನಾಗಿ ಕಾಣುವವರು ತಮ್ಮಿಂದ ತಮ್ಮನ್ನು ಕಳೆದುಕೊಳ್ಳುವುದಿಲ್ಲ. ಅದರಿಂದ ಪರಮ ಗತಿಯನ್ನು ಪಡೆಯುತ್ತಾರೆ.

06035029a ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ।
06035029c ಯಃ ಪಶ್ಯತಿ ತಥಾತ್ಮಾನಮಕರ್ತಾರಂ ಸ ಪಶ್ಯತಿ।।

ಸರ್ವಪ್ರಕಾರದಲ್ಲಿಯೂ ಪ್ರಕೃತಿಯೇ ಕರ್ಮಗಳನ್ನು ಮಾಡಿಸುತ್ತದೆ ಮತ್ತು ಅಕರ್ತೃವನ್ನು ಕಂಡಿಕೊಂಡಿರುವವರೇ ಕಂಡಿರುವವರು.

06035030a ಯದಾ ಭೂತಪೃಥಗ್ಭಾವಮೇಕಸ್ಥಮನುಪಶ್ಯತಿ।
06035030c ತತ ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ।।

ಪ್ರತ್ಯೇಕವಾಗಿ ಇರುವವುಗಳು ಒಂದರಿಂದಲೇ ಆದವೆಂದು ಮತ್ತು ಅದೇ ವಿಸ್ತಾರಗೊಂಡಿದೆ ಎಂದು ಯಾವಾಗ ಕಾಣುತ್ತಾನೋ ಆಗ ಅವನು ಬ್ರಹ್ಮವನ್ನು ಸೇರುತ್ತಾನೆ.

06035031a ಅನಾದಿತ್ವಾನ್ನಿರ್ಗುಣತ್ವಾತ್ಪರಮಾತ್ಮಾಯಮವ್ಯಯಃ।
06035031c ಶರೀರಸ್ಥೋಽಪಿ ಕೌಂತೇಯ ನ ಕರೋತಿ ನ ಲಿಪ್ಯತೇ।।

ಕೌಂತೇಯ! ಅನಾದಿಯಾಗಿರುವುದರಿಂದ ಮತ್ತು ನಿರ್ಗುಣನಾಗಿರುವುದರಿಂದ ಈ ಅವ್ಯಯ ಪರಮಾತ್ಮನು ಶರೀರದಲ್ಲಿದ್ದರೂ ಮಾಡುವುದಿಲ್ಲ, ಮತ್ತು ಕರ್ಮಫಲದಿಂದ ಲಿಪ್ತನಾಗುವುದಿಲ್ಲ.

06035032a ಯಥಾ ಸರ್ವಗತಂ ಸೌಕ್ಷ್ಮ್ಯಾದಾಕಾಶಂ ನೋಪಲಿಪ್ಯತೇ।
06035032c ಸರ್ವತ್ರಾವಸ್ಥಿತೋ ದೇಹೇ ತಥಾತ್ಮಾ ನೋಪಲಿಪ್ಯತೇ।।

ಎಲ್ಲವನ್ನು ವ್ಯಾಪಿಸಿರುವ ಆಕಾಶವು ತನ್ನ ಸೂಕ್ಷ್ಮತೆಯಿಂದಾಗಿ ಹೇಗೆ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲವೋ ಹಾಗೆ ದೇಹದಲ್ಲಿ ಸರ್ವತ್ರನಾಗಿರುವ ಆತ್ಮನೂ ಅಂಟಿಕೊಳ್ಳುವುದಿಲ್ಲ.

06035033a ಯಥಾ ಪ್ರಕಾಶಯತ್ಯೇಕಃ ಕೃತ್ಸ್ನಂ ಲೋಕಮಿಮಂ ರವಿಃ।
06035033c ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ।।

ಭಾರತ! ಹೇಗೆ ರವಿಯು ಒಬ್ಬನೇ ಈ ಇಡೀ ಲೋಕವನ್ನು ಬೆಳಗಿಸುತ್ತಾನೋ ಹಾಗೆ ಕ್ಷೇತ್ರಿಯು ಕ್ಷೇತ್ರವೆಲ್ಲವನ್ನೂ ಪ್ರಕಾಶಿಸುತ್ತಾನೆ.

06035034a ಕ್ಷೇತ್ರಕ್ಷೇತ್ರಜ್ಞಯೋರೇವಮಂತರಂ ಜ್ಞಾನಚಕ್ಷುಷಾ।
06035034c ಭೂತಪ್ರಕೃತಿಮೋಕ್ಷಂ ಚ ಯೇ ವಿದುರ್ಯಾಂತಿ ತೇ ಪರಂ।।

ಹೀಗೆ ಕ್ಷೇತ್ರ-ಕ್ಷೇತ್ರಜ್ಞರ ನಡುವಿನ ಅಂತರವನ್ನೂ, ಇರುವುದನ್ನು ಪ್ರಕೃತಿಯಿಂದ ಮೋಕ್ಷಗೊಳಿಸುವ ವಿಧಿಯನ್ನು ಯಾರು ಜ್ಞಾನದ ಕಣ್ಣುಗಳಿಂದ ತಿಳಿದುಕೊಂಡಿದ್ದಾರೋ ಅವರು ಪರಮ ಗತಿಯನ್ನು ಹೊಂದುತ್ತಾರೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಕ್ಷೇತ್ರಕ್ಷೇತ್ರಜ್ಞವಿಭಾಗಯೋಗೋ ನಾಮ ತ್ರಯೋದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಕ್ಷೇತ್ರಕ್ಷೇತ್ರಜ್ಞವಿಭಾಗಯೋಗವೆಂಬ ಹದಿಮೂರನೇ ಅಧ್ಯಾಯವು.
ಭೀಷ್ಮ ಪರ್ವಣಿ ಪಂಚತ್ರಿಂಶೋಽಧ್ಯಾಯಃ।।
ಭೀಷ್ಮ ಪರ್ವದಲ್ಲಿ ಮೂವತ್ತೈದನೇ ಅಧ್ಯಾಯವು.