034 ಶ್ರೀಕೃಷ್ಣಾರ್ಜುನಸಂವಾದೇ ಭಕ್ತಿಯೋಗಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭಗವದ್ಗೀತಾ ಪರ್ವ

ಅಧ್ಯಾಯ 34

ಸಾರ

06034001 ಅರ್ಜುನ ಉವಾಚ।
06034001a ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ।
06034001c ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ।।

ಅರ್ಜುನನು ಹೇಳಿದನು: “ಹೀಗೆ ಸತತಯುಕ್ತರಾಗಿ ನಿನ್ನನ್ನು ಪರ್ಯುಪಾಸನೆಮಾಡುವ ಭಕ್ತರು ಮತ್ತು ಅಕ್ಷರ ಅವ್ಯಕ್ತವಾದುದನ್ನು ಪರ್ಯುಪಾಸನೆ ಮಾಡುವವರು - ಇವರಲ್ಲಿ ಯೋಗವಿತ್ತಮರು ಯಾರು?”

06034002 ಶ್ರೀಭಗವಾನುವಾಚ।
06034002a ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯಯುಕ್ತಾ ಉಪಾಸತೇ।
06034002c ಶ್ರದ್ಧಯಾ ಪರಯೋಪೇತಾಸ್ತೇ ಮೇ ಯುಕ್ತತಮಾ ಮತಾಃ।।

ಶ್ರೀಭಗವಾನನು ಹೇಳಿದನು: “ನನ್ನಲ್ಲಿಯೇ ಮನಸ್ಸನ್ನಿಟ್ಟು, ನಿತ್ಯಯುಕ್ತರಾಗಿ ಪರಮ ಶ್ರದ್ಧೆಯಿಂದ ನನ್ನನ್ನು ಉಪಾಸನೆ ಮಾಡುವವರು ಹೆಚ್ಚಿನ ಯೋಗಿಗಳೆಂದು ನನ್ನ ಮತವು.

06034003a ಯೇ ತ್ವಕ್ಷರಮನಿರ್ದೇಶ್ಯಮವ್ಯಕ್ತಂ ಪರ್ಯುಪಾಸತೇ।
06034003c ಸರ್ವತ್ರಗಮಚಿಂತ್ಯಂ ಚ ಕೂಟಸ್ಥಮಚಲಂ ಧ್ರುವಂ।।
06034004a ಸಂನಿಯಮ್ಯೇಂದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ।
06034004c ತೇ ಪ್ರಾಪ್ನುವಂತಿ ಮಾಮೇವ ಸರ್ವಭೂತಹಿತೇ ರತಾಃ।।

ಆದರೆ ಅನಿರ್ದೇಶ್ಯವಾದ, ಅವ್ಯಕ್ತವಾದ, ಸರ್ವತ್ರಗವಾದ, ಅಚಿಂತ್ಯವಾದ, ಕೂಟಸ್ಥವಾದ, ಅಚಲವಾದ, ಧ್ರುವವಾದ ಅಕ್ಷರವನ್ನು, ಇಂದ್ರಿಯಗ್ರಾಮವನ್ನು ಸರಿಯಾಗಿ ನಿಯಂತ್ರಿಸಿಕೊಂಡು, ಸರ್ವತ್ರ ಸಮಬುದ್ಧಿಗಳಾಗಿ ಪರ್ಯುಪಾಸನೆ ಮಾಡುವವರೂ ಕೂಡ ನನ್ನನ್ನೇ ಪಡೆಯುವರು.

06034005a ಕ್ಲೇಶೋಽಧಿಕತರಸ್ತೇಷಾಮವ್ಯಕ್ತಾಸಕ್ತಚೇತಸಾಂ।
06034005c ಅವ್ಯಕ್ತಾ ಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೇ।।

ಅವ್ಯಕ್ತಾಸಕ್ತಚೇತಸರಿಗೆ ಕ್ಲೇಶವು ಅಧಿಕ. ಏಕೆಂದರೆ ದೇಹವಂತರಿಗೆ ಅವ್ಯಕ್ತವೆಂಬ ಗತಿಯು ದುಃಖದಿಂದ ದೊರೆಯುತ್ತದೆ.

06034006a ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಾಃ।
06034006c ಅನನ್ಯೇನೈವ ಯೋಗೇನ ಮಾಂ ಧ್ಯಾಯಂತ ಉಪಾಸತೇ।।
06034007a ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್।
06034007c ಭವಾಮಿ ನಚಿರಾತ್ಪಾರ್ಥ ಮಯ್ಯಾವೇಶಿತಚೇತಸಾಂ।।

ಪಾರ್ಥ! ಆದರೆ ಸರ್ವಕರ್ಮಗಳನ್ನೂ ನನ್ನಲ್ಲಿ ಸಂನ್ಯಾಸಮಾಡಿ, ಮತ್ಪರರಾಗಿ, ಅನನ್ಯವಾಗಿರುವ ಯೋಗದಿಂದ ನನ್ನನ್ನು ಧ್ಯಾನಿಸುತ್ತಾ ಉಪಾಸಿಸುವ, ನನ್ನಲ್ಲಿಯೇ ತಮ್ಮ ಚಿತ್ತವನ್ನು ನೆಟ್ಟಿರುವವರನ್ನು ನಾನು ತಕ್ಷಣವೇ ಮೃತ್ಯುಸಂಸಾರದ ಸಾಗರದಿಂದ ಮೇಲೆತ್ತಿಬಿಡುತ್ತೇನೆ.

06034008a ಮಯ್ಯೇವ ಮನ ಆಧತ್ಸ್ವ ಮಯಿ ಬುದ್ಧಿಂ ನಿವೇಶಯ।
06034008c ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ।।

ನನ್ನಲ್ಲಿಯೇ ಮನಸ್ಸನ್ನಿಡು. ನನ್ನಲ್ಲಿ ಬುದ್ಧಿಯನ್ನು ಹೊಗಿಸು. ಹೀಗೆ ಮಾಡಿದ ನಂತರ ನನ್ನಲ್ಲಿಯೇ ನಿವಾಸಮಾಡುವೆ. ಸಂಶಯವಿಲ್ಲ.

06034009a ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯಿ ಸ್ಥಿರಂ।
06034009c ಅಭ್ಯಾಸಯೋಗೇನ ತತೋ ಮಾಮಿಚ್ಛಾಪ್ತುಂ ಧನಂಜಯ।।

ಧನಂಜಯ! ನನ್ನಲ್ಲಿ ಚಿತ್ತವನ್ನು ಸ್ಥಿರವಾಗಿ ಸಮಾಧಾನಗೊಳಿಸಿಕೊಂಡಿರುವುದಕ್ಕೆ ಶಕ್ತನಾಗದೇ ಇದ್ದರೆ ಅಭ್ಯಾಸಯೋಗದಿಂದ ನನ್ನನ್ನು ಪಡೆಯಲು ಇಚ್ಛಿಸು.

06034010a ಅಭ್ಯಾಸೇಽಪ್ಯಸಮರ್ಥೋಽಸಿ ಮತ್ಕರ್ಮಪರಮೋ ಭವ।
06034010c ಮದರ್ಥಮಪಿ ಕರ್ಮಾಣಿ ಕುರ್ವನ್ಸಿದ್ಧಿಮವಾಪ್ಸ್ಯಸಿ।।

ಅಭ್ಯಾಸಮಾಡಲೂ ಅಸಮರ್ಥನಾದರೆ ನನಗಾಗಿ ಕರ್ಮಪರನಾಗು. ಕರ್ಮಗಳನ್ನು ನನಗಾಗಿ ಮಾಡುತ್ತಿದ್ದರೂ ಸಿದ್ಧಿಯನ್ನು ಪಡೆಯುತ್ತೀಯೆ.

06034011a ಅಥೈತದಪ್ಯಶಕ್ತೋಽಸಿ ಕರ್ತುಂ ಮದ್ಯೋಗಮಾಶ್ರಿತಃ।
06034011c ಸರ್ವಕರ್ಮಫಲತ್ಯಾಗಂ ತತಃ ಕುರು ಯತಾತ್ಮವಾನ್।।

ಆದರೆ ಇದನ್ನು ಕೂಡ ಮಾಡಲು ಅಶಕ್ತನಾದರೆ ನನ್ನ ಯೋಗವನ್ನು ಆಶ್ರಯಿಸಿ ಯತಾತ್ಮನಾಗಿ ಸರ್ವ ಕರ್ಮಗಳ ಫಲಗಳನ್ನು ತ್ಯಾಗಮಾಡು.

06034012a ಶ್ರೇಯೋ ಹಿ ಜ್ಞಾನಮಭ್ಯಾಸಾಜ್ಜ್ಞಾನಾದ್ಧ್ಯಾನಂ ವಿಶಿಷ್ಯತೇ।
06034012c ಧ್ಯಾನಾತ್ಕರ್ಮಫಲತ್ಯಾಗಸ್ತ್ಯಾಗಾಚ್ಚಾಂತಿರನಂತರಂ।।

ಏಕೆಂದರೆ ಅಭ್ಯಾಸಕ್ಕಿಂತ ಜ್ಞಾನವು ಶ್ರೇಯಸ್ಕರವು. ಜ್ಞಾನಕ್ಕಿಂತ ಧ್ಯಾನವು ಹೆಚ್ಚಿನದು. ಧ್ಯಾನಕ್ಕಿಂತ ಕರ್ಮಫಲತ್ಯಾಗವು ಹೆಚ್ಚಿನದು. ತ್ಯಾಗದ ನಂತರ ಶಾಂತಿ.

06034013a ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ।
06034013c ನಿರ್ಮಮೋ ನಿರಹಂಕಾರಃ ಸಮದುಃಖಸುಖಃ ಕ್ಷಮೀ।।
06034014a ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ।
06034014c ಮಯ್ಯರ್ಪಿತಮನೋಬುದ್ಧಿರ್ಯೋ ಮದ್ಭಕ್ತಃ ಸ ಮೇ ಪ್ರಿಯಃ।।

ಇರುವ ಯಾವುದನ್ನೂ ದ್ವೇಷಿಸದೇ, ಮಿತ್ರನೂ ಕರುಣಿಯೂ ಆಗಿ, ನನ್ನದೆನ್ನುವುದನ್ನು ಬಿಟ್ಟು, ನಿರಹಂಕಾರನಾಗಿ, ದುಃಖ-ಸುಖಗಳಲ್ಲಿ ಸಮನಾಗಿ, ಕ್ಷಮಿಸುವವನಾಗಿ, ಸತತವೂ ಸಂತುಷ್ಟನಾಗಿ, ಯೋಗಿಯಾಗಿರುವ, ಧೃಢನಿಶ್ಚಯಿಯಾಗಿ ಪ್ರಯತ್ನಿಸುತ್ತಿರುವವನು, ಮನೋಬುದ್ಧಿಗಳನ್ನು ನನಗೆ ಅರ್ಪಿಸಿರುವವನು, ನನ್ನ ಭಕ್ತನು ನನಗೆ ಪ್ರಿಯ.

06034015a ಯಸ್ಮಾನ್ನೋದ್ವಿಜತೇ ಲೋಕೋ ಲೋಕಾನ್ನೋದ್ವಿಜತೇ ಚ ಯಃ।
06034015c ಹರ್ಷಾಮರ್ಷಭಯೋದ್ವೇಗೈರ್ಮುಕ್ತೋ ಯಃ ಸ ಚ ಮೇ ಪ್ರಿಯಃ।।

ಯಾರಿಂದ ಲೋಕವು ಉದ್ವಿಗ್ನವಾಗುವುದಿಲ್ಲವೋ ಮತ್ತು ಯಾರು ಲೋಕದಿಂದ ಉದ್ವಿಗ್ನಗೊಳ್ಳುವುದಿಲ್ಲವೋ, ಯಾರು ಹರ್ಷ-ಅಮರ್ಷ (ತಡೆದುಕೊಳ್ಳಲಾರದೇ ಇರುವುದು)-ಭಯ-ಉದ್ವೇಗಳಿಂದ ಮುಕ್ತರಾಗಿದ್ದಾರೋ ಅವರು ನನಗೆ ಪ್ರಿಯರು.

06034016a ಅನಪೇಕ್ಷಃ ಶುಚಿರ್ದಕ್ಷ ಉದಾಸೀನೋ ಗತವ್ಯಥಃ।
06034016c ಸರ್ವಾರಂಭಪರಿತ್ಯಾಗೀ ಯೋ ಮದ್ಭಕ್ತಃ ಸ ಮೇ ಪ್ರಿಯಃ।।

ಬೇಕು ಎಂಬ ಅಪೇಕ್ಷೆಗಳಿಲ್ಲದವನು, ಶುಚಿ, ದಕ್ಷ, ಉದಾಸೀನನು (ಮಿತ್ರ-ಶತ್ರು ಪಕ್ಷಗಳಲ್ಲಿಲ್ಲದಿರುವವನು), ವ್ಯಥೆಗಳನ್ನು ಕಳೆದುಕೊಂಡವನು, ಫಲದ ಆಸೆಯಿಂದ ಮಾಡುವ ಎಲ್ಲ ಕರ್ಮಗಳನ್ನೂ ಪರಿತ್ಯಜಿಸಿದವನು ನನ್ನ ಭಕ್ತ. ನನಗೆ ಪ್ರಿಯನಾದವನು.

06034017a ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ।
06034017c ಶುಭಾಶುಭಪರಿತ್ಯಾಗೀ ಭಕ್ತಿಮಾನ್ಯಃ ಸ ಮೇ ಪ್ರಿಯಃ।।

ಯಾರು ಹರ್ಷಿಸುವುದಿಲ್ಲವೋ, ದ್ವೇಷಿಸುವುದಿಲ್ಲವೋ, ಶೋಕಿಸುವುದಿಲ್ಲವೋ, ಆಸೆಪಡುವುದಿಲ್ಲವೋ ಆ ಶುಭಾಶುಭ ಪರಿತ್ಯಾಗೀ ಭಕ್ತಿಮಾನನು ನನಗೆ ಪ್ರಿಯನಾದವನು.

06034018a ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನಾವಮಾನಯೋಃ।
06034018c ಶೀತೋಷ್ಣಸುಖದುಃಖೇಷು ಸಮಃ ಸಂಗವಿವರ್ಜಿತಃ।।
06034019a ತುಲ್ಯನಿಂದಾಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನ ಚಿತ್।
06034019c ಅನಿಕೇತಃ ಸ್ಥಿರಮತಿರ್ಭಕ್ತಿಮಾನ್ಮೇ ಪ್ರಿಯೋ ನರಃ।।

ಶತ್ರು ಮತ್ತು ಮಿತ್ರರಲ್ಲಿ ಹಾಗೂ ಮಾನ-ಅಪಮಾನಗಳಲ್ಲಿ ಸಮನಾಗಿರುವ, ಶೀತ-ಉಷ್ಣಗಳಲ್ಲಿ, ಸುಖ-ದುಃಖಗಳಲ್ಲಿ ಸಮನಾಗಿದ್ದು ಸಂಗವನ್ನು ವಿವರ್ಜಿಸಿರುವ, ನಿಂದನೆ-ಸ್ತುತಿಗಳಲ್ಲಿ ಮೌನಿಯಾಗಿದ್ದುಕೊಂಡು ಸಮವೆಂದು ಸ್ವೀಕರಿಸುವ, ಯಾವುದರಿಂದಲೂ ಸಂತುಷ್ಟನಾಗುವ, ಇಂಥದೇ ಸ್ಥಾನವೆಂದಿಲ್ಲದಿರುವ, ಸ್ಥಿರಮತಿ, ಭಕ್ತಿಮಾನ ನರನು ನನಗೆ ಪ್ರಿಯನಾದವನು.

06034020a ಯೇ ತು ಧರ್ಮ್ಯಾಮೃತಮಿದಂ ಯಥೋಕ್ತಂ ಪರ್ಯುಪಾಸತೇ।
06034020c ಶ್ರದ್ದಧಾನಾ ಮತ್ಪರಮಾ ಭಕ್ತಾಸ್ತೇಽತೀವ ಮೇ ಪ್ರಿಯಾಃ।।

ಆದರೆ ಈಗ ಹೇಳಿದ ಧರ್ಮ್ಯಾಮೃತವನ್ನು ಶ್ರದ್ಧೆಯುಳ್ಳವರಾಗಿ ಮತ್ಪರರಾಗಿ ಯಾರು ಪರ್ಯುಪಾಸನೆ ಮಾಡುತ್ತಾರೋ ಅವರು ನನಗೆ ಬಹಳ ಪ್ರಿಯರಾಗಿರುವರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಭಕ್ತಿಯೋಗೋ ನಾಮ ದ್ವಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಭಕ್ತಿಯೋಗವೆಂಬ ಹನ್ನೆರಡನೇ ಅಧ್ಯಾಯವು.
ಭೀಷ್ಮ ಪರ್ವಣಿ ಚತುಸ್ತ್ರಿಂಶೋಽಧ್ಯಾಯಃ।।
ಭೀಷ್ಮ ಪರ್ವದಲ್ಲಿ ಮೂವತ್ನಾಲ್ಕನೇ ಅಧ್ಯಾಯವು.