031 ಶ್ರೀಕೃಷ್ಣಾರ್ಜುನಸಂವಾದೇ ರಾಜವಿದ್ಯಯೋಗಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭಗವದ್ಗೀತಾ ಪರ್ವ

ಅಧ್ಯಾಯ 31

ಸಾರ

06031001 ಶ್ರೀಭಗವಾನುವಾಚ।
06031001a ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ।
06031001c ಜ್ಞಾನಂ ವಿಜ್ಞಾನಸಹಿತಂ ಯಜ್ಜ್ಞಾತ್ವಾ ಮೋಕ್ಷ್ಯಸೇಽಶುಭಾತ್।।

ಶ್ರೀಭಗವಾನನು ಹೇಳಿದನು: “ಅನಸೂಯನೇ! ನಿನಗೆ ಈ ವಿಜ್ಞಾನಸಹಿತ ಜ್ಞಾನವನ್ನು ಹೇಳುತ್ತೇನೆ. ಇದನ್ನು ತಿಳಿದು ನೀನು ಅಶುಭದಿಂದ ಮೋಕ್ಷಹೊಂದುತ್ತೀಯೆ.

06031002a ರಾಜವಿದ್ಯಾ ರಾಜಗುಹ್ಯಂ ಪವಿತ್ರಮಿದಮುತ್ತಮಂ।
06031002c ಪ್ರತ್ಯಕ್ಷಾವಗಮಂ ಧರ್ಮ್ಯಂ ಸುಸುಖಂ ಕರ್ತುಮವ್ಯಯಂ।।

ಈ ರಾಜವಿದ್ಯೆ ರಾಜಗುಹ್ಯವು ಉತ್ತಮ ಮತ್ತು ಪವಿತ್ರವಾದುದು. ಇದನ್ನು ಪ್ರತ್ಯಕ್ಷ ಅನುಭವದಿಂದ ತಿಳಿದುಕೊಳ್ಳಬಹುದು. ಇದೇ ಧರ್ಮ. ಮಾಡಲು ಸುಲಭವಾದುದು. ಅವ್ಯಯವಾದುದು.

06031003a ಅಶ್ರದ್ಧಧಾನಾಃ ಪುರುಷಾ ಧರ್ಮಸ್ಯಾಸ್ಯ ಪರಂತಪ।
06031003c ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯುಸಂಸಾರವರ್ತ್ಮನಿ।।

ಪರಂತಪ! ಈ ಧರ್ಮದಲ್ಲಿ ಶ್ರದ್ಧೆಯಿರದ ಪುರುಷರು ನನ್ನನ್ನು ಹೊಂದದೇ ಮೃತ್ಯು-ಸಂಸಾರಗಳ ಮಾರ್ಗದಲ್ಲಿ ಹಿಂದಿರುಗುತ್ತಾರೆ.

06031004a ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ।
06031004c ಮತ್ಸ್ಥಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ।।

ಈ ಜಗತ್ತೆಲ್ಲವೂ ನನ್ನ ಅವ್ಯಕ್ತ ರೂಪದಿಂದ ವ್ಯಾಪ್ತವಾಗಿರುವುದು. ಇರುವ ಎಲ್ಲವೂ ನನ್ನಲ್ಲಿವೆ. ಆದರೆ ನಾನು ಅವುಗಳಲ್ಲಿಲ್ಲ1.

06031005a ನ ಚ ಮತ್ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಂ।
06031005c ಭೂತಭೃನ್ನ ಚ ಭೂತಸ್ಥೋ ಮಮಾತ್ಮಾ ಭೂತಭಾವನಃ।।

ಮತ್ತು ಇರುವವುಗಳು ನನ್ನಲ್ಲಿರುವುದೂ ಇಲ್ಲ. ನನ್ನ ಈ ಈಶ್ವರ ಯೋಗವನ್ನು ನೋಡು! ಭೂತಭಾವನನಾದ ನನ್ನ ಆತ್ಮವು ಭೂತಭೃತ್ತೂ ಅಲ್ಲ. ಭೂತಸ್ಥನೂ ಅಲ್ಲ.

06031006a ಯಥಾಕಾಶಸ್ಥಿತೋ ನಿತ್ಯಂ ವಾಯುಃ ಸರ್ವತ್ರಗೋ ಮಹಾನ್।
06031006c ತಥಾ ಸರ್ವಾಣಿ ಭೂತಾನಿ ಮತ್ಸ್ಥಾನೀತ್ಯುಪಧಾರಯ।।

ಹೇಗೆ ಸರ್ವತ್ರಗತವಾದ ಮಹಾವಾಯುವು ನಿತ್ಯವೂ ಆಕಾಶದಲ್ಲಿರುವುದೋ ಹಾಗೆ ಸರ್ವ ಭೂತಗಳೂ ನನ್ನಲ್ಲಿರುವವೆಂದು ನಿಶ್ಚಯಿಸು.

06031007a ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಂ।
06031007c ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಂ।।

ಕೌಂತೇಯ! ಕಲ್ಪವು ಕ್ಷಯವಾಗುವಾಗ ಸರ್ವ ಭೂತಗಳೂ ನನ್ನ ಪ್ರಕೃತಿಯನ್ನು ಸೇರುತ್ತವೆ. ಕಲ್ಪದ ಆದಿಯಲ್ಲಿ ಪುನಃ ಅವುಗಳನ್ನು ಸೃಷ್ಟಿಸುತ್ತೇನೆ.

06031008a ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ।
06031008c ಭೂತಗ್ರಾಮಮಿಮಂ ಕೃತ್ಸ್ನಮವಶಂ ಪ್ರಕೃತೇರ್ವಶಾತ್।।

ನನ್ನ ಪ್ರಕೃತಿಯನ್ನು ಇಟ್ಟುಕೊಂಡು ಮತ್ತೆ ಮತ್ತೆ ಪ್ರಕೃತಿಯ ವಶದಿಂದ ಪರವಶವಾಗಿರುವ ಈ ಭೂತಗ್ರಾಮಗಳೆಲ್ಲವನ್ನೂ ಮತ್ತೆ ಮತ್ತೆ ಸೃಷ್ಟಿ ಮಾಡುತ್ತಿರುತ್ತೇನೆ.

06031009a ನ ಚ ಮಾಂ ತಾನಿ ಕರ್ಮಾಣಿ ನಿಬಧ್ನಂತಿ ಧನಂಜಯ।
06031009c ಉದಾಸೀನವದಾಸೀನಮಸಕ್ತಂ ತೇಷು ಕರ್ಮಸು।।

ಆದರೆ ಧನಂಜಯ! ಆ ಕರ್ಮಗಳು ಉದಾಸೀನನಾಗಿರುವ, ಆ ಕರ್ಮಗಳಲ್ಲಿ ಅಸಕ್ತನಾಗಿರುವ ನನ್ನನ್ನು ಕಟ್ಟಿಹಾಕುವುದಿಲ್ಲ.

06031010a ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಂ।
06031010c ಹೇತುನಾನೇನ ಕೌಂತೇಯ ಜಗದ್ವಿಪರಿವರ್ತತೇ।।

ಕೌಂತೇಯ! ನನ್ನ ಅಧ್ಯಕ್ಷತೆಯಲ್ಲಿ ಪ್ರಕೃತಿಯು ಸಚರಾಚರವೆಲ್ಲವನ್ನೂ ಹುಟ್ಟಿಸುತ್ತದೆ. ಇದೇ ಕಾರಣದಿಂದ ಜಗತ್ತು ಸುತ್ತುತ್ತಿರುವುದು.

06031011a ಅವಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಂ।
06031011c ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಂ।।

ಭೂತಮಹೇಶ್ವರನಾದ ನನ್ನ ಪರಮ ಭಾವವನ್ನು ತಿಳಿಯದೇ ಮೂಢರು ಮನುಷ್ಯ ದೇಹವನ್ನು ಆಶ್ರಯಿಸಿದ ನನ್ನನ್ನು ತಿರಸ್ಕರಿಸುತ್ತಾರೆ.

06031012a ಮೋಘಾಶಾ ಮೋಘಕರ್ಮಾಣೋ ಮೋಘಜ್ಞಾನಾ ವಿಚೇತಸಃ।
06031012c ರಾಕ್ಷಸೀಮಾಸುರೀಂ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ।।

ವ್ಯರ್ಥ ಆಶೆಗಳ, ವ್ಯರ್ಥ ಕರ್ಮಗಳ, ವ್ಯರ್ಥಜ್ಞಾನಗಳ ಅವರು ವಿಚೇತಸರಾಗಿ ರಾಕ್ಷಸೀ, ಅಸುರೀ, ಮೋಹಿನೀ ಪ್ರಕೃತಿಯನ್ನು ಆಶ್ರಯಿಸುತ್ತಾರೆ.

06031013a ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾಃ।
06031013c ಭಜಂತ್ಯನನ್ಯಮನಸೋ ಜ್ಞಾತ್ವಾ ಭೂತಾದಿಮವ್ಯಯಂ।।

ಪಾರ್ಥ! ಆದರೆ ಮಹಾತ್ಮರು ದೈವೀ ಪ್ರಕೃತಿಯನ್ನು ಆಶ್ರಯಿಸಿ ನನ್ನನ್ನು ಭೂತಾದಿ, ಅವ್ಯಯನೆಂದು ಅರ್ಥಮಾಡಿಕೊಂಡು, ಅನನ್ಯ ಮನಸ್ಕರಾಗಿ ನನ್ನನ್ನೇ ಭಜಿಸುತ್ತಾರೆ.

06031014a ಸತತಂ ಕೀರ್ತಯಂತೋ ಮಾಂ ಯತಂತಶ್ಚ ದೃಢವ್ರತಾಃ।
06031014c ನಮಸ್ಯಂತಶ್ಚ ಮಾಂ ಭಕ್ತ್ಯಾ ನಿತ್ಯಯುಕ್ತಾ ಉಪಾಸತೇ।।

ಸತತವೂ ನನ್ನ ಕೀರ್ತನೆ ಮಾಡುತ್ತಾ, ಪ್ರಯತ್ನ ಪಡುತ್ತಾ, ದೃಢವ್ರತರಾಗಿ ಭಕ್ತಿಯಿಂದ ನಮಸ್ಕರಿಸುತ್ತಾ ನಿತ್ಯಯುಕ್ತರಾಗಿ ಉಪಾಸಿಸುತ್ತಾರೆ.

06031015a ಜ್ಞಾನಯಜ್ಞೇನ ಚಾಪ್ಯನ್ಯೇ ಯಜಂತೋ ಮಾಮುಪಾಸತೇ।
06031015c ಏಕತ್ವೇನ ಪೃಥಕ್ತ್ವೇನ ಬಹುಧಾ ವಿಶ್ವತೋಮುಖಂ।।

ಕೆಲವರು ಜ್ಞಾನಯಜ್ಞದಿಂದ ಯಜಿಸಿ ನನ್ನನ್ನು ಏಕತ್ವದಿಂದ, ಪ್ರತ್ಯೇಕವಾಗಿ, ವಿಶ್ವತೋಮುಖನಾಗಿ ಬಹುವಿಧಗಳಲ್ಲಿ ಉಪಾಸಿಸುತ್ತಾರೆ.

06031016a ಅಹಂ ಕ್ರತುರಹಂ ಯಜ್ಞಃ ಸ್ವಧಾಹಮಹಮೌಷಧಂ।
06031016c ಮಂತ್ರೋಽಹಮಹಮೇವಾಜ್ಯಮಹಮಗ್ನಿರಹಂ ಹುತಂ।।

ನಾನೇ ಕ್ರತು. ನಾನೇ ಯಜ್ಞ, ಸ್ವಧಾ, ನಾನೇ ಔಷಧ. ಮಂತ್ರವು ನಾನು, ನಾನೇ ಆಜ್ಯ, ನಾನೇ ಅಗ್ನಿ, ನಾನೇ ಹುತವು.

06031017a ಪಿತಾಹಮಸ್ಯ ಜಗತೋ ಮಾತಾ ಧಾತಾ ಪಿತಾಮಹಃ।
06031017c ವೇದ್ಯಂ ಪವಿತ್ರಂ ಓಂಕಾರ ಋಕ್ಸಾಮ ಯಜುರೇವ ಚ।।

ನಾನೇ ಈ ಜಗತ್ತಿನ ಪಿತಾಮಹ, ಮಾತಾ, ಧಾತಾ ಮತ್ತು ಪಿತಾಮಹ, ವೇದ್ಯ, ಪವಿತ್ರ, ಓಂಕಾರ, ಋಕ್-ಸಾಮ-ಯಜುರ್ವೇದಗಳು ಕೂಡ.

06031018a ಗತಿರ್ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಂ ಸುಹೃತ್।
06031018c ಪ್ರಭವಃ ಪ್ರಲಯಃ ಸ್ಥಾನಂ ನಿಧಾನಂ ಬೀಜಮವ್ಯಯಂ।।

ನಾನೇ ಗತಿ, ಭರ್ತಾ, ಪ್ರಭು, ಸಾಕ್ಷೀ, ನಿವಾಸ, ಶರಣ, ಸುಹೃತ್, ಪ್ರಭವ, ಪ್ರಲಯ, ಸ್ಥಾನ, ನಿಧಾನ, ಬೀಜ, ಮತ್ತು ಅವ್ಯಯ2.

06031019a ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ।
06031019c ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ।।

ನಾನು ತಪಿಸುತ್ತೇನೆ. ನಾನು ಮಳೆಯನ್ನು ಹಿಂದೆ ತೆಗೆದುಕೊಳ್ಳುತ್ತೇನೆ ಮತ್ತು ಸುರಿಸುತ್ತೇನೆ ಕೂಡ. ನಾನು ಅಮೃತ ಮತ್ತು ಮೃತ್ಯುವೂ ಕೂಡ. ಅರ್ಜುನ! ಇರುವುದು ಮತ್ತು ಇಲ್ಲದಿರುವುದೂ ನಾನೇ3.

06031020a ತ್ರೈವಿದ್ಯಾ ಮಾಂ ಸೋಮಪಾಃ ಪೂತಪಾಪಾ ಯಜ್ಞೈರಿಷ್ಟ್ವಾ ಸ್ವರ್ಗತಿಂ ಪ್ರಾರ್ಥಯಂತೇ।
06031020c ತೇ ಪುಣ್ಯಮಾಸಾದ್ಯ ಸುರೇಂದ್ರಲೋಕಂ ಅಶ್ನಂತಿ ದಿವ್ಯಾನ್ದಿವಿ ದೇವಭೋಗಾನ್।।

ತ್ರೈವಿದ್ಯರು (ಋಕ್, ಯಜುಸ್ಸು ಮತ್ತು ಸಾಮವೇದಗಳನ್ನು ತಿಳಿದಿರುವವರು) ಸೋಮವನ್ನು ಕುಡಿದವರಾಗಿ, ಪಾಪಗಳನ್ನು ಕಳೆದುಕೊಂಡವರಾಗಿ, ನನಗೆ ಯಜ್ಞ-ಇಷ್ಟಿಗಳ ಮೂಲಕ ಸ್ವರ್ಗವನ್ನು ಪ್ರಾರ್ಥಿಸುತ್ತಾರೆ. ಅವರು ಪುಣ್ಯವಾದ ಸುರೇಂದ್ರಲೋಕವನ್ನು ಸೇರಿ, ದಿವಿಯಲ್ಲಿಯ ದಿವ್ಯ ದೇವಭೋಗಗಳನ್ನು ಭೋಗಿಸುತ್ತಾರೆ4.

06031021a ತೇ ತಂ ಭುಕ್ತ್ವಾ ಸ್ವರ್ಗಲೋಕಂ ವಿಶಾಲಂ ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ।
06031021c ಏವಂ ತ್ರಯೀಧರ್ಮಮನುಪ್ರಪನ್ನಾ ಗತಾಗತಂ ಕಾಮಕಾಮಾ ಲಭಂತೇ।।

ಅವರು ಆ ವಿಶಾಲ ಸ್ವರ್ಗಲೋಕವನ್ನು ಭೋಗಿಸಿ ಪುಣ್ಯವು ಕ್ಷೀಣವಾಗಲು ಮರ್ತ್ಯಲೋಕವನ್ನು ಪುನಃ ಪ್ರವೇಶಿಸುತ್ತಾರೆ. ಹೀಗೆ ತ್ರಯೀಧರ್ಮವನ್ನು ಅವಲಂಬಿಸಿದ ಕಾಮಕಾಮರು ಗತಾಗತವನ್ನು ಪಡೆಯುತ್ತಾರೆ5.

06031022a ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ।
06031022c ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ।।

ಯಾವ ಜನರು ಅನನ್ಯರಾಗಿ ನನ್ನನ್ನೇ ಚಿಂತಿಸಿ ಉಪಾಸನೆ ಮಾಡುತ್ತಾರೋ ಆ ನಿತ್ಯಾಭಿಯುಕ್ತರ ಯೋಗಕ್ಷೇಮವನ್ನು ನಾನು ವಹಿಸಿಕೊಳ್ಳುತ್ತೇನೆ6.

06031023a ಯೇಽಪ್ಯನ್ಯದೇವತಾ ಭಕ್ತಾ ಯಜಂತೇ ಶ್ರದ್ಧಯಾನ್ವಿತಾಃ।
06031023c ತೇಽಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಂ।।

ಕೌಂತೇಯ! ಶ್ರದ್ಧಾನ್ವಿತರಾಗಿ ಯಾವ ಭಕ್ತರು ಅನ್ಯ ದೇವತೆಗಳನ್ನು ಯಜಿಸುತ್ತಾರೋ ಅವರೂ ಕೂಡ ನನ್ನನ್ನೇ ಅವಿಧಿಪೂರ್ವಕವಾಗಿ ಪೂಜಿಸುತ್ತಿರುತ್ತಾರೆ7.

06031024a ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ।
06031024c ನ ತು ಮಾಮಭಿಜಾನಂತಿ ತತ್ತ್ವೇನಾತಶ್ಚ್ಯವಂತಿ ತೇ।।

ಸರ್ವ ಯಜ್ಞಗಳ ಭೋಕ್ತನೂ ಪ್ರಭುವೂ ನಾನೇ. ಆದರೆ ಅವರು ನನ್ನನ್ನು ತತ್ವದಿಂದ ತಿಳಿಯರು. ಆದ್ದರಿಂದ ಅವರು ಜಾರಿಬೀಳುವರು8.

06031025a ಯಾಂತಿ ದೇವವ್ರತಾ ದೇವಾನ್ಪಿತೄನ್ಯಾಂತಿ ಪಿತೃವ್ರತಾಃ।
06031025c ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮದ್ಯಾಜಿನೋಽಪಿ ಮಾಂ।।

ದೇವವ್ರತರಾದವರು ದೇವತೆಗಳನ್ನು ಸೇರುತ್ತಾರೆ. ಪಿತೃವ್ರತರಾದವರು ಪಿತೃಗಳನ್ನು ಸೇರುತ್ತಾರೆ. ಭೂತೇಜ್ಯರು ಭೂತಗಳನ್ನು ಸೇರುವರು. ನನ್ನನ್ನು ಯಾಜಿಸುವವರು ನನ್ನನ್ನು ಸೇರುತ್ತಾರೆ9.

06031026a ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ।
06031026c ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ।।

ಪತ್ರ, ಪುಷ್ಪ, ಫಲ, ನೀರನ್ನು ಯಾರು ನನಗೆ ಭಕ್ತಿಯಿಂದ ನೀಡುತ್ತಾರೋ ಆ ಪ್ರಯತಾತ್ಮರು ಭಕ್ತಿಪೂರ್ವಕವಾಗಿ ಕೊಟ್ಟಿದ್ದುದನ್ನೇ ನಾನು ಸ್ವೀಕರಿಸುತ್ತೇನೆ.

06031027a ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್।
06031027c ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಂ।।

ಕೌಂತೇಯ! ನೀನು ಏನನ್ನು ಮಾಡುತ್ತೀಯೋ, ಏನನ್ನು ತಿನ್ನುತ್ತೀಯೋ, ಏನನ್ನು ಯಾಗಮಾಡುತ್ತೀಯೋ, ಏನನ್ನು ಕೊಡುತ್ತೀಯೋ, ಏನನ್ನು ತಪಿಸುತ್ತೀಯೋ ಅದನ್ನು ನನಗೆ ಅರ್ಪಣೆ ಮಾಡು.

06031028a ಶುಭಾಶುಭಫಲೈರೇವಂ ಮೋಕ್ಷ್ಯಸೇ ಕರ್ಮಬಂಧನೈಃ।
06031028c ಸಂನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ।।

ಈ ರೀತಿ ಶುಭಾಶುಭಫಲಗಳ ಕರ್ಮಬಂಧನಗಳಿಂದ ಮುಕ್ತನಾಗುತ್ತೀಯೆ. ಸಂನ್ಯಾಸಯೋಗಯುಕ್ತನಾಗಿ ವಿಮುಕ್ತನಾಗಿ ನನ್ನ ಬಳಿ ಬರುತ್ತೀಯೆ.

06031029a ಸಮೋಽಹಂ ಸರ್ವಭೂತೇಷು ನ ಮೇ ದ್ವೇಷ್ಯೋಽಸ್ತಿ ನ ಪ್ರಿಯಃ।
06031029c ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಂ।।

ನಾನು ಸರ್ವಭೂತಗಳಲ್ಲಿಯೂ ಸಮನಾಗಿರುವೆನು. ನಾನು ದ್ವೇಷಿಸುವವನು ಯಾರೂ ಇಲ್ಲ. ನನಗೆ ಪ್ರಿಯರಾದವರೂ ಯಾರೂ ಇಲ್ಲ. ಆದರೆ ಯಾರು ನನ್ನನ್ನು ಭಕ್ತಿಯಿಂದ ಭಜಿಸುವರೋ ಅವರು ನನ್ನಲ್ಲಿ ಮತ್ತು ನಾನು ಅವರಲ್ಲಿ ಇರುತ್ತೇವೆ.

06031030a ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್।
06031030c ಸಾಧುರೇವ ಸ ಮಂತವ್ಯಃ ಸಮ್ಯಗ್ವ್ಯವಸಿತೋ ಹಿ ಸಃ।।

ತುಂಬಾ ದುರಾಚಾರಿಯಾಗಿದ್ದರೂ ಸದಾ ನನ್ನನ್ನೇ ಅನನ್ಯಭಾಜನಾಗಿ ಭಜಿಸಿದರೆ ಅವನನ್ನು ಸಾಧುವೆಂದೇ ತಿಳಿಯಬೇಕು. ಏಕೆಂದರೆ ಅವನು ಸರಿಯಾದ ವ್ಯವಸಾಯವುಳ್ಳವನಾಗಿರುತ್ತಾನೆ.

06031031a ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾಂತಿಂ ನಿಗಚ್ಛತಿ।
06031031c ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ।।

ಕ್ಷಿಪ್ರವಾಗಿ ಅವನು ಧರ್ಮಾತ್ಮನಾಗುತ್ತಾನೆ. ಶಾಶ್ವತವಾದ ಶಾಂತಿಯನ್ನು ಪಡೆಯುವನು. ಕೌಂತೇಯ! ನನ್ನ ಭಕ್ತನು ಪ್ರಣಾಶವಾಗುವುದಿಲ್ಲ ಎನ್ನುವುದನ್ನು ತಿಳಿದುಕೋ.

06031032a ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇಽಪಿ ಸ್ಯುಃ ಪಾಪಯೋನಯಃ।
06031032c ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇಽಪಿ ಯಾಂತಿ ಪರಾಂ ಗತಿಂ।।

ಪಾರ್ಥ! ಪಾಪಯೋನಿಗಳಾದ ಸ್ತ್ರೀಯರು, ವೈಶ್ಯೆಯರು, ಶೂದ್ರರೂ ಕೂಡ ನನ್ನನ್ನು ಸಮಾಶ್ರಯಿಸಿ ಪರಮ ಗತಿಯನ್ನು ಹೊಂದುತ್ತಾರೆ10.

06031033a ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾ ಭಕ್ತಾ ರಾಜರ್ಷಯಸ್ತಥಾ।
06031033c ಅನಿತ್ಯಮಸುಖಂ ಲೋಕಮಿಮಂ ಪ್ರಾಪ್ಯ ಭಜಸ್ವ ಮಾಂ।।

ಇನ್ನು ಪುನಃ ಪುಣ್ಯ ಭಕ್ತರಾದ ಬ್ರಾಹ್ಮಣರು ಮತ್ತು ರಾಜರ್ಷಿಗಳೇನು? ಅನಿತ್ಯವೂ ಅಸುಖವೂ ಆದ ಈ ಲೋಕವನ್ನು ಪಡೆದಿರುವ ನನ್ನನ್ನೇ ಭಜಿಸು.

06031034a ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು।
06031034c ಮಾಮೇವೈಷ್ಯಸಿ ಯುಕ್ತ್ವೈವಮಾತ್ಮಾನಂ ಮತ್ಪರಾಯಣಃ।।

ನನ್ನಲ್ಲಿಯೇ ಮನಸ್ಸನ್ನಿಡು. ನನ್ನ ಭಕ್ತನಾಗು. ನನ್ನನ್ನು ಯಾಜಿಸು. ನನ್ನನ್ನು ಸಮಸ್ಕರಿಸು. ನನ್ನ ಪರಾಯಣನಾಗಿ ಯುಕ್ತನಾಗಿದ್ದರೆ ಆತ್ಮನಾಗಿರುವ ನನ್ನನ್ನೇ ಬಂದು ಸೇರುವೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ರಾಜವಿದ್ಯಯೋಗೋ ನಾಮ ನವಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ರಾಜವಿದ್ಯಾಯೋಗವೆಂಬ ಒಂಭತ್ತನೇ ಅಧ್ಯಾಯವು.
ಭೀಷ್ಮ ಪರ್ವಣಿ ಏಕತ್ರಿಂಶೋಽಧ್ಯಾಯಃ।।
ಭೀಷ್ಮ ಪರ್ವದಲ್ಲಿ ಮೂವತ್ತೊಂದನೇ ಅಧ್ಯಾಯವು.


  1. ಶಂಕರ ಭಾಷ್ಯ: ಮಯಾ ಮಮ ಯಃ ಪರೋ ಭಾವಃ ತೇನ ತತಂ ವ್ಯಾಪ್ತಂ ಸರ್ವಮಿದಂ ಜಗತ್ ಅವ್ಯಕ್ತಮೂರ್ತಿನಾ। ನ ವ್ಯಕ್ತಾ ಮೂರ್ತಿಃ ಸ್ವರೂಪಂ ಯಸ್ಯ ಮಮ ಸೋಽಹಮ್ ಅವ್ಯಕ್ತಮೂರ್ತಿಃ ತೇನ ಮಯಾ ಅವ್ಯಕ್ತ ಮೂರ್ತಿನಾ। ↩︎

  2. ಗತಿ-ಗುರಿ; ಭರ್ತಾ-ಪೊರೆಯುವವನು; ಪ್ರಭು-ಒಡೆಯ, ಎಲ್ಲವೂ ಯಾರಿಂದ ಇದೆಯೋ ಅವನು; ಸಾಕ್ಷೀ-ಎಲ್ಲವನ್ನೂ ಗಮನಿಸುವವನು; Ishwara is the reality because of which everything exists; ಎಲ್ಲವೂ ಯಾರಲ್ಲಿ ಇವೆಯೋ ಅವನು; ಶರಣಂ-ಆಶ್ರಯದಾತ; ಸುಹೃತ್-ಸ್ನೇಹಿತ; ಪ್ರಭವಃ-ಎಲ್ಲವೂ ಯಾರಿಂದ ಹುಟ್ಟಿಕೊಂಡಿವೆಯೋ ಅವನು (ಬ್ರಹ್ಮ); ಪ್ರಲಯಃ-ಎಲ್ಲವೂ ಯಾರಲ್ಲಿ ಸೇರಿಕೊಳ್ಳುತ್ತದೆಯೋ ಅವನು (ಶಿವ); ಸ್ಥಾನ – ಎಲ್ಲವೂ ಯಾರಲ್ಲಿ ಇರುತ್ತದೆಯೋ ಅವನು (ವಿಷ್ಣು); ನಿಧಾನ – ಖಜಾನೆ; ಅವ್ಯಯಂ ಬೀಜಂ – ನಾಶವಾಗದ ಬೀಜ; ಬದಲಾವಣೆ ಹೊಂದದ ಬೀಜ. ಬೀಜವು ಮೊಳಕೆಯಾದಾಗ ಬೀಜವು ನಾಶವಾಗುತ್ತದೆ. ಆದರೆ ಈಶ್ವರನಿಂದ ಎಲ್ಲವೂ ಹೊರಬಂದರೂ ಈಶ್ವರನು ಬದಲಾವಣೆಯಿಲ್ಲದೇ ಇರುತ್ತಾನೆ. ↩︎

  3. ಸಗುಣಬ್ರಹ್ಮನಾಗಿ ನಾನು ಬಿಸಿಯಿಂದ ಸುಡುತ್ತೇನೆ. ನಾನು ಮಳೆಸುರಿಸುತ್ತೇನೆ. ಸುಡುವುದನ್ನು ನಿಲ್ಲಿಸುತ್ತೇನೆ. ಮಳೆಯನ್ನು ನಿಲ್ಲಿಸುತ್ತೇನೆ. ಬಿಸಿಯನ್ನುಂಟುಮಾಡುತ್ತೇನೆ. ಬಿಸಿಯನ್ನು ಹಿಂತೆಗೆದುಕೊಳ್ಳುತ್ತೇನೆ. ಮಳೆಸುರಿಸುತ್ತೇನೆ. ಮಳೆಯನ್ನು ಹಿಂತೆಗೆದುಕೊಳ್ಳುತ್ತೇನೆ. ಪ್ರಾಣಗಳನ್ನು ಹಿಂತೆಗೆದುಕೊಳ್ಳುತ್ತೇನೆ. ಪುನಃ ಹುಟ್ಟಿಸುತ್ತೇನೆ. ವ್ಯಕ್ತವಾಗುವವನೂ ನಾನೇ. ಅವ್ಯಕ್ತನಾಗಿರುವವನೂ ನಾನೇ. ಇರುವ ಮತ್ತು ಇಲ್ಲದಿರುವ ಎಲ್ಲವೂ ನಾನೇ. ಅನುಭವಕ್ಕೆ ಬರುವ ಎಲ್ಲವೂ ಈಶ್ವರನೇ. Not only there is one God, there is only God. ↩︎

  4. ತ್ರೈವಿದ್ಯಾಃ ಅಂದರೆ ಋಗ್ವೇದ, ಯಜುರ್ವೇದ, ಸಾಮವೇದಗಳ ಪ್ರಕಾರ ಯಜ್ಞಗಳನ್ನು ಮಾಡುವವರು. ಯಜ್ಞದಲ್ಲಿ ಬಳಸುವ ಒಂದು ಪ್ರಮುಖ ಹವಿಸ್ಸು ಸೋಮ – ಒಂದು ಸಸ್ಯವನ್ನು ಅರೆದು ತೆಗೆಯುವ ರಸವೇ ಸೋಮ. ಆ ಯಜ್ಞಗಳಿಂದ ನಾನು ಅಂದರೆ ಈಶ್ವರನು ಪೂಜಿಸಲ್ಪಡುತ್ತಾನೆ. ಅಗ್ನಿಯಲ್ಲ ಅಥವಾ ಇಂದ್ರನಲ್ಲ ಅಥವಾ ಅನ್ಯ ದೇವತೆಗಳಲ್ಲ. ಯಜ್ಞವನ್ನು ಪೂರೈಸಿ ಸೋಮವನ್ನು ಕುಡಿಯುವವರು ಪಾಪಗಳನ್ನು ತೊಳೆದುಕೊಂಡು ಪವಿತ್ರರಾಗುತ್ತಾರೆ. ಆದರೆ ಆ ಯಜ್ಞಗಳ ಮೂಲ ಉದ್ದೇಶವು ಇಂದ್ರನ ಲೋಕ ಸ್ವರ್ಗ. ಅಲ್ಲಿಯ ಭೋಗಗಳು. ಆ ಪುಣ್ಯಕರ್ಮಗಳಿಂದ ಅವರು ಸ್ವರ್ಗದಲ್ಲಿ ಭೋಗಗಳನ್ನು ಬೋಗಿಸುತ್ತಾರೆ. ಯಜ್ಞಗಳು ತ್ರೇತಾಯುಗದಲ್ಲಿ ಬಂದವೆಂದು ಹೇಳುತ್ತಾರೆ. ಆದರೂ ಆ ಸ್ವರ್ಗಸುಖವು ಕ್ಷಣಿಕವಾದುದು. You go to heaven with earning a finite religious merit, and you come back once those finite earnings are exhausted/spent. This is just like going to Hawaii for a vacation using your savings, and end the vacation once your money is exhausted. Whenever you experience something pleasant, that is a fruitification of some good Karma. When you are going through something unpleasant or suffering, it is in a way good because you are exausting a bad Karma. Downside of pleasure is that you are exhausting your good Karmas. ↩︎

  5. ಕಾಮಗಳನ್ನು ಸಂಕಲ್ಪಿಸಿ ಯಜ್ಞಾದಿಗಳನ್ನು ಮಾಡುವವರು ಪುನಃ ಹುಟ್ಟಿಕೊಳ್ಳುತ್ತಾರೆ. ಸಂಸಾರದ ಸುಖ-ದುಃಖಗಳನ್ನು ಪುನಃ ಪುನಃ ಅನುಭವಿಸುತ್ತಿರುತ್ತಾರೆ. ಸ್ವರ್ಗದ ಸಂಕಲ್ಪವನ್ನು ಮಾಡಿ ಯಜ್ಞಗಳನ್ನು ಮಾಡುವವರು ಸ್ವರ್ಗಕ್ಕೆ ಹೋಗಿ ತಮ್ಮ ಪುಣ್ಯಗಳನ್ನು ಕಳೆದುಕೊಂಡು ಪುನಃ ಮರ್ತ್ಯಲೋಕಕ್ಕೆ ಬರುತ್ತಾರೆ. ಯುಧಿಷ್ಠಿರನು ರಾಜಸೂಯ ಯಾಗವನ್ನು ಮಾಡುವುದಕ್ಕೆ ಸಂಕಲ್ಪಿಸಿದುದು ತನ್ನ ತಂದೆ ಪಾಂಡುವು ಸ್ವರ್ಗಕ್ಕೆ ಹೋಗಬೇಕೆಂದು! ಇದು ಪ್ರವೃತ್ತಿ ಧರ್ಮ. ಆದರೆ ನಿವೃತ್ತಿ ಧರ್ಮದ ಅರ್ಥಾತ್ ಯಾರ ಗುರಿಯು ಮೋಕ್ಷವೋ ಅವರ ಪೂಜೆ/ಉಪಾಸನೆಗಳು ಬೇರೆ ರೀತಿಯವು. ಅದು ಜ್ಞಾನದಿಂದ ಉಪಾಸಿಸುವುದು. ಜ್ಞಾನಯುಕ್ತ ಭಕ್ತಿ. ನಾಲ್ಕು ಪುರುಷಾರ್ಥಗಳಲ್ಲಿ ಧರ್ಮ, ಅರ್ಥ ಮತ್ತು ಕಾಮಗಳು ಸುಖ/ಭೋಗಗಳ ಕುರಿತಾಗಿವೆ. ಆದರೆ ಮೋಕ್ಷವು ಮಾತ್ರ ಸುಖ/ಭೋಗಗಳನ್ನು ಬಯಸುವುದಿಲ್ಲ. Moksha means being peaceful and content in this life and in future for ever. If one worships for spiritual growth leading to enlightenment, the results he gets are different from the worship with an intention of pleasure now, or later in life, or a life in heaven, you may get that. But the latter is finite. Former is infinite. ಯಾವುದೇ ಸಂಕಲ್ಪದಿಂದ ಮಾಡಿದ ಪೂಜೆ/ಉಪಾಸನೆಗಳು ಕೆಟ್ಟವಲ್ಲ. ಅವು ಮೋಕ್ಷಮಾರ್ಗದಲ್ಲಿರುವ ಹಲವಾರು ಅಡೆತಡೆಗಳನ್ನು ಹೋಗಲಾಡಿಸುವಲ್ಲಿ ಸಹಾಯಕವಾಗುತ್ತವೆ. ಆದುದರಿಂದ ಯಾವುದೇ ರೀತಿಯ ಪೂಜೆ/ಉಪಾಸನೆಗಳೂ ಮೋಕ್ಷಮಾರ್ಗದಲ್ಲಿ ಸಹಾಯಕವಾಗುತ್ತವೆ. ↩︎

  6. ಇಲ್ಲಿ ಶ್ರೀಕೃಷ್ಣನು ಮಾಂ (ನನ್ನನ್ನು) ಎಂಬ ಶಬ್ದವನ್ನು ತನ್ನ ಕೃಷ್ಣನ ಅವತಾರವನ್ನಾಗಲೀ, ಅವತರಿಸಿದ ವಿಷ್ಣುವನ್ನಾಗಲೀ ಸೂಚಿಸುವ ಸೀಮಿತ ಅರ್ಥದಲ್ಲಿ ಬಳಸಿಲ್ಲ. ಇಲ್ಲಿ ತನ್ನನ್ನು ಈಶ್ವರ – ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣ, ಕರ್ಮಫಲದಾತಾ – ಎಂಬ ಅರ್ಥದಲ್ಲಿ ಸೂಚಿಸುತ್ತಿದ್ದಾನೆ. ಅನನ್ಯಾಸ್ ಅಂದರೆ ತನಗಿಂತ ಭಿನ್ನವಾಗಿರದ, ಎಲ್ಲವೂ ಈಶ್ವರ ಎಂದು ತಿಳಿದು, ಜ್ಞಾನದೊಂದಿಗೆ ಪೂಜಿಸುವವರು; ಎಲ್ಲವೂ ಈಶ್ವರ ಎಂದು ತಿಳಿದು ಸದಾ ಆ ಈಶ್ವರನನ್ನು ಪೂಜಿಸುವವರು. ಇಲ್ಲಿ ಪೂಜಿಸುವುದು ಎಂದರೆ ಕೇವಲ ಸಾಂಪ್ರದಾಯಿಕ ಪೂಜೆಯಲ್ಲ. ಸತತವೂ ನಿರಂತರವೂ ಎಲ್ಲವೂ ಈಶ್ವರನೇ ಎಂದು ಅವನ ಪೂಜೆಯಲ್ಲಿ ತೊಡಗಿರುವವರು. ತಾನು ಮಾಡುವ ಎಲ್ಲ ಕರ್ಮಗಳೂ ಅವನ ಪೂಜೆಯೆಂದು ತಿಳಿದು ಕರ್ಮಗಳನ್ನು ಮಾಡುವವರು. ↩︎

  7. ಏಕಂ ಸದ್ ವಿಪ್ರಾ ಬಹುಧಾ ವದಂತಿ ಅರ್ಥಾತ್ ಈಶ್ವರ ಒಬ್ಬನೇ. ವಿಪ್ರರು ಅನೇಕ ವಿಧದಲ್ಲಿ ಅವನನ್ನು ವರ್ಣಿಸುತ್ತಾರೆ (ಋಗ್ವೇದ 1:164). ↩︎

  8. ಈಶ್ವರನನನ್ನು ತತ್ತ್ವತಃ (ಅಂದರೆ ಅವನೇ ಎಲ್ಲವೂ, ಅವನು ನನ್ನಲ್ಲಿಯೂ ಇದ್ದಾನೆ ಮತ್ತು ಎಲ್ಲದರಲ್ಲಿಯೂ ಇದ್ದಾನೆ ಎನ್ನುವುದನ್ನು) ತಿಳಿಯದೇ ಪೂಜಿಸುವವರು ಪುನಃ ಪುನಃ ಸಂಸಾರದಲ್ಲಿ ಬೀಳುತ್ತಿರುತ್ತಾರೆ. ಪುನಃ ಪುನಃ ಹುಟ್ಟುತ್ತಿರುತ್ತಾರೆ; ಸಾಯುತ್ತಿರುತ್ತಾರೆ. ದುಃಖ-ಸುಖಗಳನ್ನು ಅನುಭವಿಸುತ್ತಿರುತ್ತಾರೆ. ↩︎

  9. ದೇವವ್ರತರು ಸಾತ್ತ್ವಿಕಭಾವದಿಂದ ಪೂಜಿಸುವವರು; ದೇವತೆಗಳನ್ನು ಪೂಜಿಸುವವರು ಸ್ವರ್ಗವನ್ನು ಪಡೆಯುತ್ತಾರೆ. ಪಿತೃವ್ರತರು ರಾಜಸಿಕರು; ಪಿತೃಗಳನ್ನು ಪೂಜಿಸುವವರು ಪಿತೃಲೋಕವನ್ನು ಸೇರುತ್ತಾರೆ. ಭೂತ-ಪ್ರೇತಗಳನ್ನು ಪೂಜಿಸುವವರು ತಾಮಸ ಗುಣಯುಕ್ತರು; ಅಂಥವರು ನರಕವನ್ನು ಸೇರುತ್ತಾರೆ. ಪೂಜೆಯ ಸಂಕಲ್ಪದಲ್ಲಿಯೂ ಮೂರು ಗುಣಗಳಿವೆ: ಸಾತ್ತ್ವಿಕ, ರಾಜಸಿಕ ಮತ್ತು ತಾಮಸ. ಅನನ್ಯಭಾವದಿಂದ ಅಂದರೆ ಇರುವ ಒಂದೇ ಈಶ್ವರನನ್ನು ಪೂಜಿಸುವವರು, ಈಶ್ವರನು ಒಬ್ಬನೇ, ಎಲ್ಲರಲ್ಲಿಯೂ ಇರುವ ಈಶ್ವರನು ಒಬ್ಬನೇ ಎಂಬ ಜ್ಞಾನದಿಂದ ಪೂಜಿಸುವವರು ಈಶ್ವರನನ್ನೇ ಸೇರುತ್ತಾರೆ. ↩︎

  10. ಸ್ತ್ರೀಯರೂ, ಶೂದ್ರರೂ, ವೈಶ್ಯರೂ ಪಾಪಿಗಳೆಂದು ಅರ್ಥವಲ್ಲ. ಅವರು ಹಿಂದಿನ ಪಾಪಗಳ ದೆಸೆಯಿಂದ ಭಕ್ತಿಗೆ ಅಡ್ಡಿ ಬರಬಹುದಾದ ಜನ್ಮದಲ್ಲಿ ಹುಟ್ಟಿರುತ್ತಾರೆ. ಆದರೆ ಅವರಿಗೆ ಭಕ್ತಿಯಾಗಲೀ ಪರಮಗತಿಯಾಗಲೀ ಅಡ್ಡಿಯಿಲ್ಲ. ↩︎