029 ಶ್ರೀಕೃಷ್ಣಾರ್ಜುನಸಂವಾದೇ ಜ್ಞಾನವಿಜ್ಞಾನಯೋಗಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭಗವದ್ಗೀತಾ ಪರ್ವ

ಅಧ್ಯಾಯ 29

ಸಾರ

06029001 ಶ್ರೀಭಗವಾನುವಾಚ।
06029001a ಮಯ್ಯಾಸಕ್ತಮನಾಃ ಪಾರ್ಥ ಯೋಗಂ ಯುಂಜನ್ಮದಾಶ್ರಯಃ।
06029001c ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛೃಣು।।

ಶ್ರೀ ಭಗವಾನನು ಹೇಳಿದನು: “ಪಾರ್ಥ! ನನ್ನಲ್ಲಿಯೇ ಆಸಕ್ತನಾಗಿ, ಮನಸ್ಸಿನಿಂದ ನನ್ನನ್ನೇ ಆಶ್ರಯಿಸಿ ಯೋಗವನ್ನಾಚರಿಸುತ್ತಾ ಅಸಂಶಯವಾಗಿ ಹಾಗೂ ಸಮಗ್ರವಾಗಿ ನನ್ನನ್ನು ಹೇಗೆ ತಿಳಿದುಕೊಳ್ಳಬಹುದು ಎನ್ನುವುದನ್ನು ಕೇಳು.

06029002a ಜ್ಞಾನಂ ತೇಽಹಂ ಸವಿಜ್ಞಾನಮಿದಂ ವಕ್ಷ್ಯಾಮ್ಯಶೇಷತಃ।
06029002c ಯಜ್ಜ್ಞಾತ್ವಾ ನೇಹ ಭೂಯೋಽನ್ಯಜ್ಜ್ಞಾತವ್ಯಮವಶಿಷ್ಯತೇ।।

ವಿಜ್ಞಾನದಿಂದೊಡಗೂಡಿದ ಈ ಜ್ಞಾನವನ್ನು ಸಂಪೂರ್ಣವಾಗಿ ನಿನಗೆ ನಾನು ಹೇಳಿಕೊಡುತ್ತೇನೆ. ಇದನ್ನು ತಿಳಿದ ನಂತರ ಇನ್ನು ಹೆಚ್ಚಿನದನ್ನು ತಿಳಿದುಕೊಳ್ಳಲು ಉಳಿಯುವುದೇ ಇಲ್ಲ.

06029003a ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ಯತತಿ ಸಿದ್ಧಯೇ।
06029003c ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ।।

ಸಾವಿರ ಮನುಷ್ಯರಲ್ಲಿ ಯಾವನೋ ಒಬ್ಬನು ಸಿದ್ಧಿಗಾಗಿ ಪ್ರಯತ್ನಿಸುತ್ತಾನೆ. ಪ್ರಯತ್ನಿಸುವ ಸಿದ್ಧರಲ್ಲಿಯೂ ಯಾವನೋ ಒಬ್ಬನ್ನು ನನ್ನನ್ನು ಸರಿಯಾಗಿ ತಿಳಿದುಕೊಂಡಿರುತ್ತಾನೆ.

06029004a ಭೂಮಿರಾಪೋಽನಲೋ ವಾಯುಃ ಖಂ ಮನೋ ಬುದ್ಧಿರೇವ ಚ।
06029004c ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ।।

ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತ್ತು ಅಹಂಕಾರ ಹೀಗೆ ಎಂಟು ವಿಧಗಳಲ್ಲಿ ನನ್ನ ಪ್ರಕೃತಿಯು ಭಿನ್ನವಾಗಿದೆ.

06029005a ಅಪರೇಯಂ ಇತಸ್ತ್ವನ್ಯಾಂ ಪ್ರಕೃತಿಂ ವಿದ್ಧಿ ಮೇ ಪರಾಂ।
06029005c ಜೀವಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್।।

ಇದು ನನ್ನ ಅಪರ (ಕೀಳು) ಪ್ರಕೃತಿ. ಮಹಾಬಾಹೋ! ಯಾವುದರಿಂದ ಈ ಜಗತ್ತು ಆಧರಿಸಿದೆಯೋ ಆ ಇರುವವುಗಳಲ್ಲಿರುವ ಜೀವವು ಇದಕ್ಕಿಂತಲೂ ಉಚ್ಛವಾದ ನನ್ನ ಪ್ರಕೃತಿಯೆಂದು ತಿಳಿದುಕೋ1.

06029006a ಏತದ್ಯೋನೀನಿ ಭೂತಾನಿ ಸರ್ವಾಣೀತ್ಯುಪಧಾರಯ।
06029006c ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಲಯಸ್ತಥಾ।।

ಸರ್ವಭೂತಗಳೂ ಇವುಗಳಿಂದ ಉಂಟಾಗುವವೆಂದು ನಿಶ್ಚಯಿಸು. ನಾನೇ ಈ ಎಲ್ಲ ಜಗತ್ತಿನ ಪ್ರಭವ ಮತ್ತು ಪ್ರಲಯ.

06029007a ಮತ್ತಃ ಪರತರಂ ನಾನ್ಯತ್ಕಿಂ ಚಿದಸ್ತಿ ಧನಂಜಯ।
06029007c ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ।।

ಧನಂಜಯ! ನನಗಿಂತಲೂ ಇನ್ನು ಹೆಚ್ಚಿನ ಮತ್ತೊಂದು ಯಾವುದೂ ಇಲ್ಲ. ಇವೆಲ್ಲವೂ ನನ್ನಲ್ಲಿ ದಾರದಲ್ಲಿ ಪೋಣಿಸಲ್ಪಟ್ಟ ಮಣಿಗಳ ಸಾಲಿನಂತೆ ಇವೆ.

06029008a ರಸೋಽಹಮಪ್ಸು ಕೌಂತೇಯ ಪ್ರಭಾಸ್ಮಿ ಶಶಿಸೂರ್ಯಯೋಃ।
06029008c ಪ್ರಣವಃ ಸರ್ವವೇದೇಷು ಶಬ್ದಃ ಖೇ ಪೌರುಷಂ ನೃಷು।।

ಕೌಂತೇಯ! ನೀರಿನಲ್ಲಿ ನಾನು ರಸ. ಶಶಿ-ಸೂರ್ಯರಲ್ಲಿ ನಾನು ಪ್ರಭೆ. ಸರ್ವವೇದಗಳಲ್ಲಿ ನಾನು ಪ್ರಣವ. ಆಕಾಶದಲ್ಲಿ ಶಬ್ಧ. ಮತ್ತು ನರರಲ್ಲಿ ನಾನು ಪೌರುಷ.

06029009a ಪುಣ್ಯೋ ಗಂಧಃ ಪೃಥಿವ್ಯಾಂ ಚ ತೇಜಶ್ಚಾಸ್ಮಿ ವಿಭಾವಸೌ।
06029009c ಜೀವನಂ ಸರ್ವಭೂತೇಷು ತಪಶ್ಚಾಸ್ಮಿ ತಪಸ್ವಿಷು।।

ಪೃಥ್ವಿಯಲ್ಲಿ ಪುಣ್ಯಗಂಧವೂ, ವಿಭಾವಸುವಿನಲ್ಲಿ ತೇಜಸ್ಸೂ ಆಗಿರುವೆನು. ಸರ್ವಭೂತಗಳಲ್ಲಿ ಜೀವನವೂ, ತಪಸ್ವಿಗಳಲ್ಲಿ ತಪಸ್ಸೂ ಆಗಿದ್ದೇನೆ.

06029010a ಬೀಜಂ ಮಾಂ ಸರ್ವಭೂತಾನಾಂ ವಿದ್ಧಿ ಪಾರ್ಥ ಸನಾತನಂ।
06029010c ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಂ।।

ಪಾರ್ಥ! ನನ್ನನ್ನು ಸರ್ವಭೂತಗಳ ಸನಾತನ ಬೀಜವೆಂದು ತಿಳಿ. ನಾನು ಬುದ್ಧಿವಂತರ ಬುದ್ಧಿ ಮತ್ತು ತೇಜಸ್ವಿಗಳ ತೇಜಸ್ಸು.

06029011a ಬಲಂ ಬಲವತಾಂ ಚಾಹಂ ಕಾಮರಾಗವಿವರ್ಜಿತಂ।
06029011c ಧರ್ಮಾವಿರುದ್ಧೋ ಭೂತೇಷು ಕಾಮೋಽಸ್ಮಿ ಭರತರ್ಷಭ।।

ನಾನು ಕಾಮರಾಗವಿವರ್ಜಿತನಾದ ಬಲವಂತರ ಬಲ. ಭರತರ್ಷಭ! ಇರುವವುಗಳಲ್ಲಿರುವ ಧರ್ಮವಿರುದ್ಧವಾದ ಕಾಮವೂ ನಾನೇ.

06029012a ಯೇ ಚೈವ ಸಾತ್ತ್ವಿಕಾ ಭಾವಾ ರಾಜಸಾಸ್ತಾಮಸಾಶ್ಚ ಯೇ।
06029012c ಮತ್ತ ಏವೇತಿ ತಾನ್ವಿದ್ಧಿ ನ ತ್ವಹಂ ತೇಷು ತೇ ಮಯಿ।।

ಸಾತ್ವಿಕ, ರಾಜಸ ಮತ್ತು ತಾಮಸಗಳ ಏನೆಲ್ಲ ಭಾವಗಳಿವೆಯೋ ಅವು ನಾನೇ ಎಂದು ತಿಳಿ. ಆದರೆ ನಾನು ಅವುಗಳಲ್ಲಿ ಇರುವುದಿಲ್ಲ. ಅವು ನನ್ನಲ್ಲಿ ಇರುತ್ತವೆ.

06029013a ತ್ರಿಭಿರ್ಗುಣಮಯೈರ್ಭಾವೈರೇಭಿಃ ಸರ್ವಮಿದಂ ಜಗತ್।
06029013c ಮೋಹಿತಂ ನಾಭಿಜಾನಾತಿ ಮಾಮೇಭ್ಯಃ ಪರಮವ್ಯಯಂ।।

ಈ ಮೂರು ಗುಣಗಳ ಭಾವಗಳಿಂದಲೇ ಈ ಜಗತ್ತೆಲ್ಲವೂ ಮೋಹಿತಗೊಂಡು ನಾನೇ ಪರಮ ಅವ್ಯಯನೆಂದು ತಿಳಿಯಲಾರದು.

06029014a ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ।
06029014c ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ।।

ನನ್ನ ಈ ಗುಣಮಯವಾದ ದೈವೀ ಮಾಯೆಯನ್ನು ದಾಟುವುದು ಬಹಳ ಕಷ್ಟ. ನನ್ನನ್ನೇ ಯಾರು ಶರಣು ಹೊಂದುತ್ತಾರೋ ಅವರು ನನ್ನ ಈ ಮಾಯೆಯನ್ನು ದಾಟಬಲ್ಲರು.

06029015a ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯಂತೇ ನರಾಧಮಾಃ।
06029015c ಮಾಯಯಾಪಹೃತಜ್ಞಾನಾ ಆಸುರಂ ಭಾವಮಾಶ್ರಿತಾಃ।।

ಕೆಟ್ಟ ಕರ್ಮಗಳನ್ನು ಮಾಡುವ ಮೂಢ ನರಾಧಮರು ನನಗೆ ಶರಣು ಬರುವುದಿಲ್ಲ. ಮಾಯೆಯಿಂದ ಅಪಹೃತರಾಗಿ ಅವರು ಅಜ್ಞಾನದಿಂದ ಅಸುರಭಾವವನ್ನು ಆಶ್ರಯಿಸುವರು.

06029016a ಚತುರ್ವಿಧಾ ಭಜಂತೇ ಮಾಂ ಜನಾಃ ಸುಕೃತಿನೋಽರ್ಜುನ।
06029016c ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ।।

ಅರ್ಜುನ! ಭರತರ್ಷಭ! ನಾಲ್ಕು ವಿಧದ ಜನರು ನನ್ನನ್ನು ಭಜಿಸುತ್ತಾರೆ - ಒಳ್ಳೆಯ ಕರ್ಮಗಳನ್ನು ಮಾಡುವವರು, ಆರ್ತರು, ಜಿಜ್ಞಾಸುಗಳು (ಭಗವಂತನ ತತ್ವವನ್ನು ತಿಳಿಯಲು ಬಯಸುವವರು), ಅರ್ಥಾರ್ಥಿಗಳು (ಧನವನ್ನು ಬಯಸುವವರು) ಮತ್ತು ಜ್ಞಾನಿಗಳು (ಭಗವಂತನ ತತ್ವವನ್ನು ತಿಳಿದುಕೊಂಡಿರುವವರು).

06029017a ತೇಷಾಂ ಜ್ಞಾನೀ ನಿತ್ಯಯುಕ್ತ ಏಕಭಕ್ತಿರ್ವಿಶಿಷ್ಯತೇ।
06029017c ಪ್ರಿಯೋ ಹಿ ಜ್ಞಾನಿನೋಽತ್ಯರ್ಥಮಹಂ ಸ ಚ ಮಮ ಪ್ರಿಯಃ।।

ಅವರಲ್ಲಿ ನಿತ್ಯಯುಕ್ತನಾಗಿರುವ, ಏಕಭಕ್ತಿಯನ್ನಿಟ್ಟಿರುವ ಜ್ಞಾನಿಯು ಹೆಚ್ಚಿನವನು. ಏಕೆಂದರೆ ಜ್ಞಾನಿಗೆ ನಾನು ಅತ್ಯಂತ ಪ್ರಿಯ ಮತ್ತು ನನಗೂ ಕೂಡ ಅವನು ಅತ್ಯಂತ ಪ್ರಿಯ.

06029018a ಉದಾರಾಃ ಸರ್ವ ಏವೈತೇ ಜ್ಞಾನೀ ತ್ವಾತ್ಮೈವ ಮೇ ಮತಂ।
06029018c ಆಸ್ಥಿತಃ ಸ ಹಿ ಯುಕ್ತಾತ್ಮಾ ಮಾಮೇವಾನುತ್ತಮಾಂ ಗತಿಂ।।

ಇವರೆಲ್ಲರೂ ಉದಾರರೇ. ಆದರೆ ಜ್ಞಾನಿಯು ನನ್ನ ಆತ್ಮನೇ ಎನ್ನುವುದು ನನ್ನ ಮತ. ಏಕೆಂದರೆ ಅವನು ಯುಕ್ತಾತ್ಮನಾಗಿದ್ದುಕೊಂಡು ಅನುತ್ತಮ ಗತಿಯಾದ ನನ್ನಲ್ಲಿಯೇ ಇರುತ್ತಾನೆ.

06029019a ಬಹೂನಾಂ ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದ್ಯತೇ।
06029019c ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ।।

ಬಹಳ ಜನ್ಮಗಳ ಕೊನೆಯಲ್ಲಿ ಜ್ಞಾನವಂತರು “ವಾಸುದೇವನೇ ಸರ್ವವು” ಎಂದು ನನ್ನನ್ನು ಸೇರುತ್ತಾರೆ. ಅಂತಹ ಮಹಾತ್ಮರು ಸುದುರ್ಲಭ.

06029020a ಕಾಮೈಸ್ತೈಸ್ತೈರ್ಹೃತಜ್ಞಾನಾಃ ಪ್ರಪದ್ಯಂತೇಽನ್ಯದೇವತಾಃ।
06029020c ತಂ ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ।।

ಅವರವರ ಕಾಮಗಳಿಂದ ಜ್ಞಾನವನ್ನು ಕಳೆದುಕೊಂಡು, ಅಯಾಯಾ ಪ್ರಕೃತಿಗಳ ನಿಯಮಾನುಸಾರವಾಗಿ ತಾವೇ ನಿಯಂತ್ರಣಕ್ಕೊಳಪಟ್ಟು ಅನ್ಯ ದೇವತೆಗಳನ್ನು ಶರಣುಹೋಗುತ್ತಾರೆ.

06029021a ಯೋ ಯೋ ಯಾಂ ಯಾಂ ತನುಂ ಭಕ್ತಃ ಶ್ರದ್ಧಯಾರ್ಚಿತುಮಿಚ್ಛತಿ।
06029021c ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಂ।।

ಯಾರ್ಯಾರು ಯಾವ ಯಾವ ದೇವತಾತನುವನ್ನು ಭಕ್ತಿ-ಶ್ರದ್ಧೆಗಳಿಂದ ಪೂಜಿಸಲು ಬಯಸುತ್ತಾರೋ ಅವರವರಿಗೆ ತಕ್ಕಂತಹ ಅಚಲ ಶ್ರದ್ಧೆಯನ್ನು ನಾನೇ ಉಂಟುಮಾಡುತ್ತೇನೆ2.

06029022a ಸ ತಯಾ ಶ್ರದ್ಧಯಾ ಯುಕ್ತಸ್ತಸ್ಯಾ ರಾಧನಮೀಹತೇ।
06029022c ಲಭತೇ ಚ ತತಃ ಕಾಮಾನ್ಮಯೈವ ವಿಹಿತಾನ್ ಹಿ ತಾನ್।।

ಅದೇ ಶ್ರದ್ಧೆಯಿಂದ ಕೂಡಿದವನಾಗಿ ಅವನು ಅದರ ಆರಾಧನೆಯನ್ನು ಮಾಡಲು ಪ್ರಯತ್ನಿಸುತ್ತಾನೆ. ಮತ್ತು ಅದರಿಂದ ನನ್ನಿಂದಲೇ ಉಂಟುಮಾಡಲ್ಪಟ್ಟ ಕಾಮಗಳನ್ನು ಪಡೆದುಕೊಳ್ಳುತ್ತಾನೆ3.

06029023a ಅಂತವತ್ತು ಫಲಂ ತೇಷಾಂ ತದ್ಭವತ್ಯಲ್ಪಮೇಧಸಾಂ।
06029023c ದೇವಾನ್ದೇವಯಜೋ ಯಾಂತಿ ಮದ್ಭಕ್ತಾ ಯಾಂತಿ ಮಾಮಪಿ।।

ಆದರೆ ಅವರಿಗೆ ದೊರೆಯುವ ಫಲವು ಅಂತ್ಯವುಳ್ಳವು. ಅವು ಅಲ್ಪಮೇಧಸ್ಸಿನವರಿಗೆ ಆಗುತ್ತದೆ. ದೇವತೆಗಳನ್ನು ಪೂಜಿಸುವವರು ದೇವತೆಗಳನ್ನು ಸೇರುತ್ತಾರೆ. ನನ್ನ ಭಕ್ತರು ನನ್ನನ್ನೇ ಸೇರುವರು.

06029024a ಅವ್ಯಕ್ತಂ ವ್ಯಕ್ತಿಮಾಪನ್ನಂ ಮನ್ಯಂತೇ ಮಾಮಬುದ್ಧಯಃ।
06029024c ಪರಂ ಭಾವಮಜಾನಂತೋ ಮಮಾವ್ಯಯಮನುತ್ತಮಂ।।

ಬುದ್ಧಿಯಿಲ್ಲದವರು ಅವ್ಯಕ್ತನಾದ ನಾನು ವ್ಯಕ್ತಿತ್ವವನ್ನು ಪಡೆದಿದ್ದೇನೆಂದು ತಿಳಿದುಕೊಳ್ಳುತ್ತಾರೆ. ಅವ್ಯಯನೂ ಅನುತ್ತಮನೂ ಆಗಿರುವ ನನ್ನ ಪರಮ ಭಾವವನ್ನು ಅರಿತಿರುವುದಿಲ್ಲ.

06029025a ನಾಹಂ ಪ್ರಕಾಶಃ ಸರ್ವಸ್ಯ ಯೋಗಮಾಯಾಸಮಾವೃತಃ।
06029025c ಮೂಢೋಽಯಂ ನಾಭಿಜಾನಾತಿ ಲೋಕೋ ಮಾಮಜಮವ್ಯಯಂ।।

ಯೋಗಮಾಯೆಯಿಂದ ಸಮಾವೃತನಾಗಿರುವ ನಾನು ಎಲ್ಲರಿಗೂ ಗೋಚರನಾಗುವುದಿಲ್ಲ. ಈ ಮೂಢ ಜನರು ಅಜನೂ ಅವ್ಯಯನೂ ಆಗಿರುವ ನನ್ನನ್ನು ಅರಿಯರು.

06029026a ವೇದಾಹಂ ಸಮತೀತಾನಿ ವರ್ತಮಾನಾನಿ ಚಾರ್ಜುನ।
06029026c ಭವಿಷ್ಯಾಣಿ ಚ ಭೂತಾನಿ ಮಾಂ ತು ವೇದ ನ ಕಶ್ಚನ।।

ಅರ್ಜುನ! ನಾನು ಹಿಂದೆ ಆಗಿಹೋಗಿರುವ, ಈಗ ಇರುವ ಮತ್ತು ಭವಿಷ್ಯದಲ್ಲಿ ಬರುವ ಭೂತಗಳನ್ನು ತಿಳಿದಿದ್ದೇನೆ. ಆದರೆ ನನ್ನನ್ನು ಯಾರೂ ಅರಿಯರು.

06029027a ಇಚ್ಛಾದ್ವೇಷಸಮುತ್ಥೇನ ದ್ವಂದ್ವಮೋಹೇನ ಭಾರತ।
06029027c ಸರ್ವಭೂತಾನಿ ಸಮ್ಮೋಹಂ ಸರ್ಗೇ ಯಾಂತಿ ಪರಂತಪ।।

ಭಾರತ! ಪರಂತಪ! ಇಚ್ಛೆ-ದ್ವೇಷಗಳಿಂದ ಹುಟ್ಟಿದ ದ್ವಂದ್ವಮೋಹದಿಂದ ಸರ್ವಭೂತಗಳು ತಮ್ಮ ವರ್ತಮಾನ ಜನ್ಮದಲ್ಲಿ ಸಮ್ಮೋಹಗೊಂಡಿರುತ್ತಾರೆ.

06029028a ಯೇಷಾಂ ತ್ವಂತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಂ।
06029028c ತೇ ದ್ವಂದ್ವಮೋಹನಿರ್ಮುಕ್ತಾ ಭಜಂತೇ ಮಾಂ ದೃಢವ್ರತಾಃ।।

ಯಾರ ಪುಣ್ಯಕರ್ಮಗಳಿಂದಾಗಿ ಪಾಪವು ಮುಗಿಯಲು ಬಂದಿದೆಯೋ ಆ ಜನರು ದ್ವಂದ್ವಮೋಹದಿಂದ ವಿಮುಕ್ತರಾಗಿ ದೃಢವ್ರತರಾಗಿ ನನ್ನನ್ನು ಭಜಿಸುತ್ತಾರೆ.

06029029a ಜರಾಮರಣಮೋಕ್ಷಾಯ ಮಾಮಾಶ್ರಿತ್ಯ ಯತಂತಿ ಯೇ।
06029029c ತೇ ಬ್ರಹ್ಮ ತದ್ವಿದುಃ ಕೃತ್ಸ್ನಮಧ್ಯಾತ್ಮಂ ಕರ್ಮ ಚಾಖಿಲಂ।।

ಜರಾಮರಣಮೋಕ್ಷಕ್ಕಾಗಿ ಯಾರು ನನ್ನನ್ನು ಆಶ್ರಯಿಸಿ ಪ್ರಯತ್ನಿಸುತ್ತಾರೋ ಅವರು ಆ ಬ್ರಹ್ಮವನ್ನು, ಸಂಪೂರ್ಣ ಅಧ್ಯಾತ್ಮವನ್ನು, ಅಖಿಲ ಕರ್ಮವನ್ನೂ ಅರಿತುಕೊಳ್ಳುವರು.

06029030a ಸಾಧಿಭೂತಾಧಿದೈವಂ ಮಾಂ ಸಾಧಿಯಜ್ಞಂ ಚ ಯೇ ವಿದುಃ।
06029030c ಪ್ರಯಾಣಕಾಲೇಽಪಿ ಚ ಮಾಂ ತೇ ವಿದುರ್ಯುಕ್ತಚೇತಸಃ।।

ನನ್ನನ್ನು ಅಧಿಭೂತನೆಂದೂ, ಅಧಿದೈವನೆಂದೂ ಮತ್ತು ಅಧಿಯಜ್ಞನೆಂದೂ ಯಾರು ತಿಳಿಯುತ್ತಾರೋ ಅವರು ಮರಣಕಾಲದಲ್ಲಿಯೂ ಯುಕ್ತಚೇತಸರಾಗಿ ನನ್ನನ್ನು ಅರ್ಥಮಾಡಿಕೊಳ್ಳುವರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಜ್ಞಾನವಿಜ್ಞಾನಯೋಗೋ ನಾಮ ಸಪ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಜ್ಞಾನವಿಜ್ಞಾನಯೋಗವೆಂಬ ಏಳನೇ ಅಧ್ಯಾಯವು.
ಭೀಷ್ಮ ಪರ್ವಣಿ ಏಕೋನತ್ರಿಂಶೋಽಧ್ಯಾಯಃ।।
ಭೀಷ್ಮ ಪರ್ವದಲ್ಲಿ ಇಪ್ಪತ್ತೊಂಭತ್ತನೇ ಅಧ್ಯಾಯವು.


  1. ಅಪರಾ ನ ಪರಾ ನಿಕೃಷ್ಟಾ ಅಶುದ್ಧಾ ಅನರ್ಥಕರೀ ಸಂಸಾರಬಂಧನಾತ್ಮಿಕಾ ಇಯಂ। ಇತಃ ಅಸ್ಯಾ ಯಥೋಕ್ತಾಯಾಃ ತು ಅನ್ಯಾಂ ವಿಶುದ್ಧಾಂ ಪ್ರಕೃತಿಂ ಮಮ ಆತ್ಮಭೂತಾಂ ವಿದ್ಧಿ ಮೇ ಪರಾಂ ಪ್ರಕೃಷ್ಟಾಂ ಜೀವಭೂತಾಂ ಕ್ಷೇತ್ರಜ್ಞ ಲಕ್ಷಣಾಂ ಪ್ರಾಣಧಾರಣನಿಮಿತ ಭೂತಾಂ ಹೇ ಮಹಾಬಾಹೋ ಯಯಾ ಪ್ರಕೃತ್ಯಾ ಇದಂ ಧಾರ್ಯತೇ ಜಗತ್ ಅಂತಃ ಪ್ರವಿಷ್ಟಯಾ।। ↩︎

  2. ತೇಷಾಂ ಚ ಕಾಮಿನಾಂ ಯೋ ಯಃ ಕಾಮೀ ಯಾಂ ಯಾಂ ದೇವತಾತನುಂ ಶ್ರದ್ಧಯಾ ಸಂಯುಕ್ತಃ ಭಕ್ತಶ್ಚ ಸನ್ ಆರ್ಚಿತುಂ ಪೂಜಯಿತುಂ ಇಚ್ಛತಿ ತಸ್ಯ ತಸ್ಯ ಕಾಮಿನಃ ಅಚಲಾಂ ಸ್ಥಿರಾಂ ಶ್ರದ್ಧಾಂ ತಾಮೇವ ವಿದಧಾಮಿ ಯಯೈವ ಪೂರ್ವಂ ಪ್ರವೃತ್ತಃ ಸ್ವಭಾವತಃ।। ↩︎

  3. ಸಃ ತಯಾ ಮದ್ವಿಹಿತಾ ಶ್ರದ್ಧಯಾ ಯುಕ್ತಃ ಸನ್ ತಸ್ಯಾಃ ದೇವತಾತನ್ವಾಃ ರಾಧನಂ ಆರಾಧನಂ ಈಹತೇ ಚೇಷ್ಟತೇ। ಲಭತೇ ಚ ತತಃ ತಸ್ಯಾ ಆರಾಧಿತಾಯಾ ದೇವತಾತನ್ವಾಃ ಕಾಮಾನ್ ಈಪ್ಸಿತಾನ್ ಮಯೈವ ಪರಮೇಶ್ವರೇಣ ಸರ್ವಜ್ಞೇನ ಕರ್ಮಫಲವಿಭಾಗಜ್ಞತಯಾ ವಿಹಿತಾನ್ ನಿರ್ಮಿತಾನ್ ತಾನ್ ಹಿ। ಯಸ್ಮಾತ್ ತೇ ವಿಹಿತಾಃ ಕಾಮಾಃ ತಸ್ಮಾತ್ ತಾನ್ ಅವಶ್ಯಂ ಲಭತೇ ಇತ್ಯರ್ಥಃ। ‘ಹಿತಾನ್’ ಇತಿ ಪದಚ್ಛೇದೇ ಹಿತತ್ವಂ ಕಾಮಾನಾಂ ಉಪಚರಿತಂ ಕಲ್ಪ್ಯಂ। ನ ಹಿ ಕಾಮಾಃ ಹಿತಾಃ ಕಸ್ಯಚಿತ್।। ↩︎