ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭಗವದ್ಗೀತಾ ಪರ್ವ
ಅಧ್ಯಾಯ 26
ಸಾರ
06026001 ಶ್ರೀಭಗವಾನುವಾಚ।
06026001a ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಂ।
06026001c ವಿವಸ್ವಾನ್ಮನವೇ ಪ್ರಾಹ ಮನುರಿಕ್ಷ್ವಾಕವೇಽಬ್ರವೀತ್।।
ಶ್ರೀ ಭಗವಂತನು ಹೇಳಿದನು: “ಅವ್ಯಯನಾದ ನಾನು ಈ ಯೋಗವನ್ನು ವಿವಸ್ವತನಿಗೆ ಹೇಳಿದೆ. ವಿವಸ್ವತನು ಮನುವಿಗೆ ಹೇಳಿದನು. ಮನುವು ಇಕ್ಷ್ವಾಕುವಿಗೆ ಹೇಳಿದನು.
06026002a ಏವಂ ಪರಂಪರಾಪ್ರಾಪ್ತಮಿಮಂ ರಾಜರ್ಷಯೋ ವಿದುಃ।
06026002c ಸ ಕಾಲೇನೇಹ ಮಹತಾ ಯೋಗೋ ನಷ್ಟಃ ಪರಂತಪ।।
ಪರಂಪರಾಗತವಾಗಿ ಬಂದ ಇದನ್ನು ರಾಜರ್ಷಿಗಳು ತಿಳಿದಿದ್ದರು. ಪರಂತಪ! ಮಹಾ ಕಾಲದಿಂದಾಗಿ ಆ ಯೋಗವು ನಷ್ಟವಾಗಿದೆ.
06026003a ಸ ಏವಾಯಂ ಮಯಾ ತೇಽದ್ಯ ಯೋಗಃ ಪ್ರೋಕ್ತಃ ಪುರಾತನಃ।
06026003c ಭಕ್ತೋಽಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಂ।।
ಅದೇ ಪುರಾತನವಾದ ನಾನು ಹೇಳಿದ್ದ ಯೋಗವನ್ನು, ಈ ಉತ್ತಮ ರಹಸ್ಯವನ್ನು ಇಂದು ನನ್ನ ಭಕ್ತ ನನ್ನ ಸಖ ಎಂದು ನಿನಗೆ ಹೇಳುತ್ತಿದ್ದೇನೆ.”
06026004 ಅರ್ಜುನ ಉವಾಚ।
06026004a ಅಪರಂ ಭವತೋ ಜನ್ಮ ಪರಂ ಜನ್ಮ ವಿವಸ್ವತಃ।
06026004c ಕಥಮೇತದ್ವಿಜಾನೀಯಾಂ ತ್ವಮಾದೌ ಪ್ರೋಕ್ತವಾನಿತಿ।।
ಅರ್ಜುನನು ಹೇಳಿದನು: “ನಿನ್ನ ಜನ್ಮವು ಈಚಿನದು. ವಿವಸ್ವತನ ಜನ್ಮವು ಹಿಂದಿನದು. ಇದನ್ನು ನೀನು ಮೊದಲೇ ಹೇಳಿದೆ ಎನ್ನುವುದನ್ನು ಹೇಗೆ ಅರ್ಥಮಾಡಿಕೊಳ್ಳಲಿ?”
06026005 ಶ್ರೀಭಗವಾನುವಾಚ।
06026005a ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ।
06026005c ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ।।
ಶ್ರೀ ಭಗವಾನನು ಹೇಳಿದನು: “ನನ್ನ ಬಹಳಷ್ಟು ಜನ್ಮಗಳು ಕಳೆದುಹೋಗಿವೆ. ಅರ್ಜುನ ನಿನ್ನದೂ ಕೂಡ. ಅವೆಲ್ಲವನ್ನು ನಾನು ತಿಳಿದಿದ್ದೇನೆ. ಆದರೆ ಪರಂತಪ! ನಿನಗವು ತಿಳಿದಿಲ್ಲ.
06026006a ಅಜೋಽಪಿ ಸನ್ನವ್ಯಯಾತ್ಮಾ ಭೂತಾನಾಮೀಶ್ವರೋಽಪಿ ಸನ್।
06026006c ಪ್ರಕೃತಿಂ ಸ್ವಾಮಧಿಷ್ಠಾಯ ಸಂಭವಾಮ್ಯಾತ್ಮಮಾಯಯಾ।।
ಹುಟ್ಟಿಲ್ಲದವನಾದರೂ ಅವ್ಯಯನಾದರೂ ಭೂತಗಳಿಗೆಲ್ಲ ಈಶ್ವರನಾದರೂ ನನ್ನನ್ನು ನಾನು ಪ್ರಕೃತಿಯ ಪ್ರಭಾವದಲ್ಲಿರಿಸಿಕೊಂಡು ನನ್ನ ಮಾಯೆಯಿಂದ ಹುಟ್ಟುತ್ತೇನೆ.
06026007a ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ।
06026007c ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ।।
ಭಾರತ! ಯಾವಾಗ ಧರ್ಮದ ಗ್ಲಾನಿಯಾಗುತ್ತದೆಯೋ ಯಾವಾಗ ಅಧರ್ಮದ ಅಭ್ಯುತ್ಥಾನವಾಗುತ್ತದೆಯೋ ಆಗ ನನ್ನನ್ನು ನಾನೇ ಹುಟ್ಟಿಸಿಕೊಳ್ಳುತ್ತೇನೆ.
06026008a ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ।
06026008c ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ।।
ಸಜ್ಜನರನ್ನು ಕಾಪಾಡುವುದಕ್ಕಾಗಿಯೂ ಪಾಪಿಗಳ ವಿನಾಶಕ್ಕಾಗಿಯೂ ಧರ್ಮವನ್ನು ನೆಲೆಗೊಳಿಸುವುದಕ್ಕಾಗಿಯೂ ನಾನು ಯುಗ ಯುಗಗಳಲ್ಲಿಯೂ ಹುಟ್ಟುತ್ತೇನೆ.
06026009a ಜನ್ಮ ಕರ್ಮ ಚ ಮೇ ದಿವ್ಯಮೇವಂ ಯೋ ವೇತ್ತಿ ತತ್ತ್ವತಃ।
06026009c ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋಽರ್ಜುನ।।
ಅರ್ಜುನ! ನನ್ನ ಈ ದಿವ್ಯ ಜನ್ಮ ಮತ್ತು ಕರ್ಮಗಳ ತತ್ತ್ವವನ್ನು ಹೀಗೆಯೇ ಯಾರು ಅರ್ಥಮಾಡಿಕೊಳ್ಳುತ್ತಾರೋ ಅವರು ದೇಹವನ್ನು ತ್ಯಜಿಸಿ ಪುನರ್ಜನ್ಮವನ್ನು ಹೊಂದುವುದಿಲ್ಲ.
06026010a ವೀತರಾಗಭಯಕ್ರೋಧಾ ಮನ್ಮಯಾ ಮಾಮುಪಾಶ್ರಿತಾಃ।
06026010c ಬಹವೋ ಜ್ಞಾನತಪಸಾ ಪೂತಾ ಮದ್ಭಾವಮಾಗತಾಃ।।
ರಾಗ, ಭಯ ಕ್ರೋಧಗಳನ್ನು ಕಳೆದುಕೊಂಡು ನನ್ನಲ್ಲಿಯೇ ಇದ್ದು ನನ್ನನ್ನು ಉಪಾಶ್ರಿಸುವ ಬಹುಮಂದಿಗಳು ಜ್ಞಾನತಪಸ್ಸಿನಿಂದ ಪೂತರಾಗಿ ನನ್ನ ಭಾವವನ್ನು ತಾಳುತ್ತಾರೆ.
06026011a ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ।
06026011c ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ।।
ಪಾರ್ಥ! ಯಾವಯಾವ ರೀತಿಗಳಲ್ಲಿ ನನ್ನ ಹತ್ತಿರ ಬರುತ್ತಾರೋ ಆ ಆ ರೀತಿಗಳಲ್ಲಿ ನಾನು ಅವರಿಗೆ ಅನುಗ್ರಹಿಸುತ್ತೇನೆ. ಮನುಷ್ಯರು ಎಲ್ಲ ರೀತಿಯಲ್ಲಿಯೂ ನನ್ನ ನಡತೆಯನ್ನೇ ಅನುಸರಿಸುತ್ತಾರೆ.
06026012a ಕಾಂಕ್ಷಂತಃ ಕರ್ಮಣಾಂ ಸಿದ್ಧಿಂ ಯಜಂತ ಇಹ ದೇವತಾಃ।
06026012c ಕ್ಷಿಪ್ರಂ ಹಿ ಮಾನುಷೇ ಲೋಕೇ ಸಿದ್ಧಿರ್ಭವತಿ ಕರ್ಮಜಾ।।
ಕರ್ಮಗಳ ಸಿದ್ಧಿಯನ್ನು ಬಯಸಿ ಇಲ್ಲಿ ದೇವತೆಗಳಿಗೆ ಯಜಿಸುತ್ತಾರೆ. ಈ ಮನುಷ್ಯಲೋಕದಲ್ಲಿ ಕ್ಷಿಪ್ರವಾಗಿಯೇ ಕರ್ಮದ ಫಲವು ದೊರೆಯುತ್ತದೆ.
06026013a ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ।
06026013c ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಂ।।
ಗುಣ ಮತ್ತು ಕರ್ಮಗಳ ಪ್ರಕಾರ ವಿಭಜಿಸಿ ನಾಲ್ಕು ವರ್ಣಗಳನ್ನು ನಾನು ಸೃಷ್ಟಿಸಿದೆ. ಅದರ ಕರ್ತಾರನಾಗಿದ್ದರೂ ಕೂಡ ನನ್ನನ್ನು ಅಕರ್ತಾರನೆಂದೂ ಅವ್ಯಯನೆಂದೂ ತಿಳಿ.
06026014a ನ ಮಾಂ ಕರ್ಮಾಣಿ ಲಿಂಪಂತಿ ನ ಮೇ ಕರ್ಮಫಲೇ ಸ್ಪೃಹಾ।
06026014c ಇತಿ ಮಾಂ ಯೋಽಭಿಜಾನಾತಿ ಕರ್ಮಭಿರ್ನ ಸ ಬಧ್ಯತೇ।।
ಕರ್ಮಗಳು ನನಗೆ ಅಂಟಿಕೊಳ್ಳುವುದಿಲ್ಲ; ಕರ್ಮಫಲಗಳೂ ನನ್ನನ್ನು ಮುಟ್ಟುವುದಿಲ್ಲ. ನನ್ನನ್ನು ಈ ರೀತಿಯಲ್ಲಿ ತಿಳಿದುಕೊಂಡವನು ಕೂಡ ಕರ್ಮಗಳಿಂದ ಬಂಧಿತನಾಗುವುದಿಲ್ಲ.
06026015a ಏವಂ ಜ್ಞಾತ್ವಾ ಕೃತಂ ಕರ್ಮ ಪೂರ್ವೈರಪಿ ಮುಮುಕ್ಷುಭಿಃ।
06026015c ಕುರು ಕರ್ಮೈವ ತಸ್ಮಾತ್ತ್ವಂ ಪೂರ್ವೈಃ ಪೂರ್ವತರಂ ಕೃತಂ।।
ಇದನ್ನು ಹೀಗೆಯೇ ತಿಳಿದು ಹಿಂದೆ ಕೂಡ ಮುಮುಕ್ಷುಗಳು ಕರ್ಮವನ್ನು ಮಾಡುತ್ತಿದ್ದರು. ಆದುದರಿಂದ ನೀನು ಕೂಡ ಪೂರ್ವಜರು ಪೂರ್ವದಲ್ಲಿ ಮಾಡಿದಂತೆ ಕರ್ಮವನ್ನು ಮಾಡು.
06026016a ಕಿಂ ಕರ್ಮ ಕಿಮಕರ್ಮೇತಿ ಕವಯೋಽಪ್ಯತ್ರ ಮೋಹಿತಾಃ।
06026016c ತತ್ತೇ ಕರ್ಮ ಪ್ರವಕ್ಷ್ಯಾಮಿ ಯಜ್ಜ್ಞಾತ್ವಾ ಮೋಕ್ಷ್ಯಸೇಽಶುಭಾತ್।।
ಯಾವುದು ಕರ್ಮ ಮತ್ತು ಯಾವುದು ಅಕರ್ಮ ಎಂದು ಬುದ್ಧಿವಂತರೂ ಕೂಡ ಗೊಂದಲಕ್ಕೊಳಗಾಗುತ್ತಾರೆ. ಆ ಕರ್ಮವೇನೆಂಬುದನ್ನು ನಾನು ನಿನಗೆ ಹೇಳುತ್ತೇನೆ. ಇದನ್ನು ತಿಳಿದು ನೀನು ಅಶುಭದಿಂದ ಮುಕ್ತನಾಗುತ್ತೀಯೆ.
06026017a ಕರ್ಮಣೋ ಹ್ಯಪಿ ಬೋದ್ಧವ್ಯಂ ಬೋದ್ಧವ್ಯಂ ಚ ವಿಕರ್ಮಣಃ।
06026017c ಅಕರ್ಮಣಶ್ಚ ಬೋದ್ಧವ್ಯಂ ಗಹನಾ ಕರ್ಮಣೋ ಗತಿಃ।।
ಯಾಕೆಂದರೆ ಕರ್ಮಗಳ ಕುರಿತೂ ತಿಳಿದುಕೊಳ್ಳಬೇಕು. ದುಷ್ಟಕರ್ಮಗಳ ಕುರಿತೂ ತಿಳಿದುಕೊಳ್ಳಬೇಕು. ಅಕರ್ಮದ ಕುರಿತೂ ತಿಳಿದುಕೊಳ್ಳಬೇಕು. ಕರ್ಮದ ಗತಿಯು ಗಹನವಾದದ್ದು.
06026018a ಕರ್ಮಣ್ಯಕರ್ಮ ಯಃ ಪಶ್ಯೇದಕರ್ಮಣಿ ಚ ಕರ್ಮ ಯಃ।
06026018c ಸ ಬುದ್ಧಿಮಾನ್ಮನುಷ್ಯೇಷು ಸ ಯುಕ್ತಃ ಕೃತ್ಸ್ನಕರ್ಮಕೃತ್।।
ಕರ್ಮದಲ್ಲಿ ಅಕರ್ಮವನ್ನೂ ಅಕರ್ಮದಲ್ಲಿ ಕರ್ಮವನ್ನೂ ಯಾರು ಕಾಣುತ್ತಾನೋ ಅವನು ಮನುಷ್ಯರಲ್ಲಿಯೇ ಬುದ್ಧಿವಂತನು. ಅವನು ಎಲ್ಲ ಕರ್ಮಗಳನ್ನೂ ಮಾಡುವ ಯೋಗಿ.
06026019a ಯಸ್ಯ ಸರ್ವೇ ಸಮಾರಂಭಾಃ ಕಾಮಸಂಕಲ್ಪವರ್ಜಿತಾಃ।
06026019c ಜ್ಞಾನಾಗ್ನಿದಗ್ಧಕರ್ಮಾಣಂ ತಮಾಹುಃ ಪಂಡಿತಂ ಬುಧಾಃ।।
ಯಾರ ಎಲ್ಲ ಕರ್ಮಗಳು ಕಾಮ ಮತ್ತು ಸಂಕಲ್ಪಗಳಿಂದ ವರ್ಜಿತವಾಗಿರುವವೋ ಮತ್ತು ಯಾರ ಕರ್ಮಗಳು ಜ್ಞಾನಾಗ್ನಿಯಲ್ಲಿ ಸುಟ್ಟಿರುವವೋ ಅಂಥವನನ್ನು ಪಂಡಿತನೆಂದು ತಿಳಿದವರು ಕರೆಯುತ್ತಾರೆ.
06026020a ತ್ಯಕ್ತ್ವಾ ಕರ್ಮಫಲಾಸಂಗಂ ನಿತ್ಯತೃಪ್ತೋ ನಿರಾಶ್ರಯಃ।
06026020c ಕರ್ಮಣ್ಯಭಿಪ್ರವೃತ್ತೋಽಪಿ ನೈವ ಕಿಂ ಚಿತ್ಕರೋತಿ ಸಃ।।
ಕರ್ಮಫಲದ ಸಂಗವನ್ನು ತೊರೆದು ನಿತ್ಯ ತೃಪ್ತನಾಗಿರುವ ಯಾವುದರಮೇಲೂ ಆಶ್ರಯಿಸಿರದವನು ಕರ್ಮಗಳಲ್ಲಿ ತೊಡಗಿದ್ದರೂ ನಿಜವಾಗಿ ಅವನು ಏನೂ ಮಾಡುತ್ತಿರುವುದಿಲ್ಲ.
06026021a ನಿರಾಶೀರ್ಯತಚಿತ್ತಾತ್ಮಾ ತ್ಯಕ್ತಸರ್ವಪರಿಗ್ರಹಃ।
06026021c ಶಾರೀರಂ ಕೇವಲಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಂ।।
ಬೇಕೆನ್ನದಿಲ್ಲದಿರುವವನು, ಮನಸ್ಸು ಮತ್ತು ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವವನು, ತನ್ನದೆನಿಸಿರುವ ಎಲ್ಲವನ್ನೂ ತೊರೆದಿರುವವನು ಕೇವಲ ಶರೀರವನ್ನಿರಿಸಿಕೊಳ್ಳುವುದಕ್ಕಾಗಿ ಮಾಡುವ ಕರ್ಮಗಳಿಂದ ಪಾಪವನ್ನು ಹೊಂದುವುದಿಲ್ಲ.
06026022a ಯದೃಚ್ಛಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ।
06026022c ಸಮಃ ಸಿದ್ಧಾವಸಿದ್ಧೌ ಚ ಕೃತ್ವಾಪಿ ನ ನಿಬಧ್ಯತೇ।।
ಕೇಳದೇ ಬಂದಿರುವುದರಿಂದಲೇ ಸಂತುಷ್ಟನಾಗಿ ದ್ವಂದ್ವಗಳಿಲ್ಲದೇ ಮತ್ಸರವಿಲ್ಲದೇ ಸಿದ್ಧಿ ಅಸಿದ್ಧಿಗಳನ್ನು ಸಮನಾಗಿರಿಸಿದವನು ಕರ್ಮಗಳನ್ನು ಮಾಡಿದರೂ ಬಂಧನಕ್ಕೊಳಗಾಗುವುದಿಲ್ಲ.
06026023a ಗತಸಂಗಸ್ಯ ಮುಕ್ತಸ್ಯ ಜ್ಞಾನಾವಸ್ಥಿತಚೇತಸಃ।
06026023c ಯಜ್ಞಾಯಾಚರತಃ ಕರ್ಮ ಸಮಗ್ರಂ ಪ್ರವಿಲೀಯತೇ।।
ಸಂಗವನ್ನು ತೊರೆದ, ಜ್ಞಾನದಲ್ಲಿಯೇ ನೆಲೆಗೊಂಡ ಚೇತನವುಳ್ಳ ಮುಕ್ತನ ಯಜ್ಞವೆಂದು ಆಚರಿಸಿದ ಕರ್ಮಗಳೆಲ್ಲವೂ ನಾಶಗೊಳ್ಳುತ್ತವೆ.
06026024a ಬ್ರಹ್ಮಾರ್ಪಣಂ ಬ್ರಹ್ಮಹವಿರ್ಬ್ರಹ್ಮಾಗ್ನೌ ಬ್ರಹ್ಮಣಾ ಹುತಂ।
06026024c ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮಸಮಾಧಿನಾ।।
ಬ್ರಹ್ಮವೆಂಬ ಯಾಗದ ಹುಟ್ಟಿನಲ್ಲಿ ಬ್ರಹ್ಮವೆಂಬ ಹವಿಸ್ಸನ್ನಿಟ್ಟು ಬ್ರಹ್ಮನೇ ಬ್ರಹ್ಮವೆಂಬ ಅಗ್ನಿಯಲ್ಲಿ ಸುರಿದುದು ಬ್ರಹ್ಮನಿಗೇ ಹೋಗಿ ಸೇರುತ್ತದೆ. ಹಾಗೆ ಸಮಾಧಿಯಲ್ಲಿರುವವನ ಕರ್ಮವೂ ಬ್ರಹ್ಮನಿಗೆ ಸೇರುತ್ತದೆ.
06026025a ದೈವಮೇವಾಪರೇ ಯಜ್ಞಂ ಯೋಗಿನಃ ಪರ್ಯುಪಾಸತೇ।
06026025c ಬ್ರಹ್ಮಾಗ್ನಾವಪರೇ ಯಜ್ಞಂ ಯಜ್ಞೇನೈವೋಪಜುಹ್ವತಿ।।
ಇತರ ಯೋಗಿಗಳು ಯಜ್ಞದಿಂದ ದೇವತೆಗಳನ್ನು ಮಾತ್ರ ಪೂಜಿಸುತ್ತಾರೆ. ಇತರರು ಬ್ರಹ್ಮಾಗ್ನಿಯಲ್ಲಿ ಯಜ್ಞವನ್ನು ಯಜ್ಞದಿಂದಲೇ ಯಾಜಿಸುತ್ತಾರೆ.
06026026a ಶ್ರೋತ್ರಾದೀನೀಂದ್ರಿಯಾಣ್ಯನ್ಯೇ ಸಮ್ಯಮಾಗ್ನಿಷು ಜುಹ್ವತಿ।
06026026c ಶಬ್ಧಾದೀನ್ವಿಷಯಾನನ್ಯ ಇಂದ್ರಿಯಾಗ್ನಿಷು ಜುಹ್ವತಿ।।
ಅನ್ಯರು ಶ್ರೋತ್ರುವೇ ಮೊದಲಾದ ಇಂದ್ರಿಯಗಳನ್ನೇ ಸಂಯಮಾಗ್ನಿಯಲ್ಲಿ ಯಾಜಿಸುತ್ತಾರೆ. ಅನ್ಯರು ಶಬ್ಧವೇ ಮೊದಲಾದ ವಿಷಯಗಳನ್ನು ಇಂದ್ರಿಯಾಗ್ನಿಯಲ್ಲಿ ಯಾಜಿಸುತ್ತಾರೆ.
06026027a ಸರ್ವಾಣೀಂದ್ರಿಯಕರ್ಮಾಣಿ ಪ್ರಾಣಕರ್ಮಾಣಿ ಚಾಪರೇ।
06026027c ಆತ್ಮಸಮ್ಯಮಯೋಗಾಗ್ನೌ ಜುಹ್ವತಿ ಜ್ಞಾನದೀಪಿತೇ।।
ಇನ್ನೂ ಇತರರು ಇಂದ್ರಿಯಗಳ ಕರ್ಮಗಳನ್ನು ಮತ್ತು ಪ್ರಾಣಕರ್ಮಗಳೆಲ್ಲವನ್ನೂ ಜ್ಞಾನದಿಂದ ಉರಿಸಲ್ಪಟ್ಟ ಆತ್ಮ ಮತ್ತು ಸಂಯಮ ಯೋಗಗಳೆರಡರ ಅಗ್ನಿಯಲ್ಲಿ ಯಾಜಿಸುತ್ತಾರೆ.
06026028a ದ್ರವ್ಯಯಜ್ಞಾಸ್ತಪೋಯಜ್ಞಾ ಯೋಗಯಜ್ಞಾಸ್ತಥಾಪರೇ।
06026028c ಸ್ವಾಧ್ಯಾಯಜ್ಞಾನಯಜ್ಞಾಶ್ಚ ಯತಯಃ ಸಂಶಿತವ್ರತಾಃ।।
ಹಾಗೆಯೇ ಇತರ ಸಂಶಿತವ್ರತ ಯತಿಗಳು ದ್ರವ್ಯಯಜ್ಞ, ತಪೋಯಜ್ಞ, ಯೋಗಯಜ್ಞ, ಸ್ವಾಧ್ಯಾಯಜ್ಞಾನಯಜ್ಞಗಳನ್ನು ಮಾಡುತ್ತಾರೆ.
06026029a ಅಪಾನೇ ಜುಹ್ವತಿ ಪ್ರಾಣಂ ಪ್ರಾಣೇಽಪಾನಂ ತಥಾಪರೇ।
06026029c ಪ್ರಾಣಾಪಾನಗತೀ ರುದ್ಧ್ವಾ ಪ್ರಾಣಾಯಾಮಪರಾಯಣಾಃ।।
ಪ್ರಾಣಾಯಾಮ ಪರಾಯಣರು ಪ್ರಾಣಾಪಾನಗಳ ಗತಿಯನ್ನು ನಿಲ್ಲಿಸಿ ಅಪಾನದಲ್ಲಿ ಪ್ರಾಣವನ್ನು ಮತ್ತೆ ಕೆಲವರು ಅಪಾನವನ್ನು ಪ್ರಾಣದಲ್ಲಿ ಯಾಜಿಸುತ್ತಾರೆ.
06026030a ಅಪರೇ ನಿಯತಾಹಾರಾಃ ಪ್ರಾಣಾನ್ಪ್ರಾಣೇಷು ಜುಹ್ವತಿ।
06026030c ಸರ್ವೇಽಪ್ಯೇತೇ ಯಜ್ಞವಿದೋ ಯಜ್ಞಕ್ಷಪಿತಕಲ್ಮಷಾಃ।।
ಇತರರು ನಿಯತಾಹಾರಿಗಳಾಗಿ ಪ್ರಾಣಗಳನ್ನು ಪ್ರಾಣಗಳಲ್ಲಿ ಯಾಜಿಸುತ್ತಾರೆ. ಇವರೆಲ್ಲರೂ ಯಜ್ಞಗಳಿಂದ ಕಲ್ಮಷಗಳನ್ನು ನಾಶಪಡಿಸಿಕೊಂಡ ಯಜ್ಞವಿದರು.
06026031a ಯಜ್ಞಶಿಷ್ಟಾಮೃತಭುಜೋ ಯಾಂತಿ ಬ್ರಹ್ಮ ಸನಾತನಂ।
06026031c ನಾಯಂ ಲೋಕೋಽಸ್ತ್ಯಯಜ್ಞಸ್ಯ ಕುತೋಽನ್ಯಃ ಕುರುಸತ್ತಮ।।
ಅಮೃತವಾದ ಯಜ್ಞಶಿಷ್ಟವನ್ನು ಭುಂಜಿಸಿದವರು ಸನಾತನ ಬ್ರಹ್ಮನನ್ನು ಸೇರುತ್ತಾರೆ. ಯಜ್ಞವಿಲ್ಲದೇ ಈ ಲೋಕವೇ ಇರುವುದಿಲ್ಲ. ಇನ್ನು ಬೇರೆ ಲೋಕಗಳು ಹೇಗಿರುತ್ತವೆ ಕುರುಸುತ್ತಮ?
06026032a ಏವಂ ಬಹುವಿಧಾ ಯಜ್ಞಾ ವಿತತಾ ಬ್ರಹ್ಮಣೋ ಮುಖೇ।
06026032c ಕರ್ಮಜಾನ್ವಿದ್ಧಿ ತಾನ್ಸರ್ವಾನೇವಂ ಜ್ಞಾತ್ವಾ ವಿಮೋಕ್ಷ್ಯಸೇ।।
ಹೀಗೆ ಬಹುವಿಧದ ಯಜ್ಞಗಳು ಬ್ರಹ್ಮನ ಮುಖದಿಂದ ಹೊರಚೆಲ್ಲಿವೆ. ಅವೆಲ್ಲವೂ ಕರ್ಮದಿಂದಲೇ ಹುಟ್ಟಿದವೆಂದು ತಿಳಿ. ಇವೆಲ್ಲವನ್ನು ತಿಳಿದೇ ಮೋಕ್ಷವನ್ನು ಹೊಂದುವೆ.
06026033a ಶ್ರೇಯಾನ್ದ್ರವ್ಯಮಯಾದ್ಯಜ್ಞಾಜ್ಜ್ಞಾನಯಜ್ಞಃ ಪರಂತಪ।
06026033c ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ।।
ಪರಂತಪ! ದ್ರವ್ಯ ಯಜ್ಞಕ್ಕಿಂತಲೂ ಜ್ಞಾನಯಜ್ಞವು ಶ್ರೇಷ್ಠ. ಪಾರ್ಥ! ಸರ್ವ ಕರ್ಮಗಳೂ ಅಂತ್ಯದಲ್ಲಿ ಜ್ಞಾನದಲ್ಲಿ ಪರಿಸಮಾಪ್ತವಾಗುತ್ತವೆ.
06026034a ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ।
06026034c ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನಃ।।
ಅದನ್ನು ಸಾಷ್ಟಾಂಗ ನಮಸ್ಕಾರಮಾಡುವುದರ, ಮತ್ತೆ ಮತ್ತೆ ಪ್ರಶ್ನಿಸುವುದರ ಮತ್ತು ಸೇವೆಗಳ ಮೂಲಕ ತಿಳಿ. ತತ್ತ್ವವನ್ನು ಕಂಡ ಜ್ಞಾನಿಗಳು ನಿನಗೆ ಆ ಜ್ಞಾನವನ್ನು ಉಪದೇಶಿಸುತ್ತಾರೆ.
06026035a ಯಜ್ಜ್ಞಾತ್ವಾ ನ ಪುನರ್ಮೋಹಮೇವಂ ಯಾಸ್ಯಸಿ ಪಾಂಡವ।
06026035c ಯೇನ ಭೂತಾನ್ಯಶೇಷೇಣ ದ್ರಕ್ಷ್ಯಸ್ಯಾತ್ಮನ್ಯಥೋ ಮಯಿ।।
ಪಾಂಡವ! ಇದನ್ನು ತಿಳಿದು ನೀನು ಪುನಃ ಈ ರೀತಿಯ ಮೋಹವನ್ನು ಹೊಂದುವುದಿಲ್ಲ. ಇದರಿಂದ ನೀನು ಯಾವುದನ್ನೂ ಬಿಡದೇ ಅನ್ಯ ಭೂತಗಳೆಲ್ಲವನ್ನೂ ಆತ್ಮನಲ್ಲಿ ಅಥವಾ ನನ್ನಲ್ಲಿ ನೋಡುತ್ತೀಯೆ.
06026036a ಅಪಿ ಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ।
06026036c ಸರ್ವಂ ಜ್ಞಾನಪ್ಲವೇನೈವ ವೃಜಿನಂ ಸಂತರಿಷ್ಯಸಿ।।
ಸರ್ವ ಪಾಪಿಗಳಿಗಿಂತಲೂ ಹೆಚ್ಚಿನ ಪಾಪಗಳನ್ನು ಮಾಡಿದ್ದರೂ ಕೂಡ ನೀನು ಎಲ್ಲವನ್ನು ಜ್ಞಾನವೆಂಬ ದೋಣಿಯನ್ನು ಬಳಸಿಯೇ ದಡವನ್ನು ಸೇರಬಹುದು.
06026037a ಯಥೈಧಾಂಸಿ ಸಮಿದ್ಧೋಽಗ್ನಿರ್ಭಸ್ಮಸಾತ್ಕುರುತೇಽರ್ಜುನ।
06026037c ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ಕುರುತೇ ತಥಾ।।
ಅರ್ಜುನ! ಚೆನ್ನಾಗಿ ಉರಿಯುತ್ತಿರುವ ಬೆಂಕಿಯು ಮರದ ತುಂಡುಗಳನ್ನು ಭಸ್ಮವಾಗಿಸುವಂತೆ ಜ್ಞಾನಾಗ್ನಿಯು ಸರ್ವಕರ್ಮಗಳನ್ನೂ ಭಸ್ಮೀಭೂತವಾಗಿಸುತ್ತದೆ.
06026038a ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ।
06026038c ತತ್ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ।।
ನಿಜವಾಗಿಯೂ ಇಲ್ಲಿ ಜ್ಞಾನಕ್ಕೆ ಸಮಾನವಾದ ಪವಿತ್ರವು ಇಲ್ಲ. ಯೋಗಸಂಸಿದ್ಧನು ಕಾಲಾಂತರದಲ್ಲಿ ಅದನ್ನು ಸ್ವಯಂ ಆತ್ಮನಲ್ಲಿ ತಿಳಿಯುತ್ತಾನೆ.
06026039a ಶ್ರದ್ಧಾವಾಽಲ್ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯಃ।
06026039c ಜ್ಞಾನಂ ಲಬ್ಧ್ವಾ ಪರಾಂ ಶಾಂತಿಮಚಿರೇಣಾಧಿಗಚ್ಛತಿ।।
ಶ್ರದ್ಧಾವಂತನೂ, ತತ್ಪರನೂ ಮತ್ತು ಸಂಯತೇಂದ್ರಿಯನೂ ಆದವನಿಗೆ ಜ್ಞಾನವು ದೊರೆಯುತ್ತದೆ. ಜ್ಞಾನವನ್ನು ಹೊಂದಿದ ತಕ್ಷಣವೇ ಅವನು ಪರಮ ಶಾಂತಿಯನ್ನು ಪಡೆಯುತ್ತಾನೆ.
06026040a ಅಜ್ಞಶ್ಚಾಶ್ರದ್ಧಧಾನಶ್ಚ ಸಂಶಯಾತ್ಮಾ ವಿನಶ್ಯತಿ।
06026040c ನಾಯಂ ಲೋಕೋಽಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ।।
ಅಜ್ಞನು, ಶ್ರದ್ಧೆಯಿಲ್ಲದವನು, ಮತ್ತು ಸಂಶಯಾತ್ಮನು ವಿನಾಶಗೊಳ್ಳುತ್ತಾನೆ. ಸಂಶಯಾತ್ಮನಿಗೆ ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಸುಖವಿರುವುದಿಲ್ಲ.
06026041a ಯೋಗಸಂನ್ಯಸ್ತಕರ್ಮಾಣಂ ಜ್ಞಾನಸಂಚಿನ್ನಸಂಶಯಂ।
06026041c ಆತ್ಮವಂತಂ ನ ಕರ್ಮಾಣಿ ನಿಬಧ್ನಂತಿ ಧನಂಜಯ।।
ಧನಂಜಯ! ಯೋಗದಿಂದ ಕರ್ಮಗಳನ್ನು ತೊರೆದ, ಜ್ಞಾನದಿಂದ ಸಂಶಯವನ್ನು ತರಿದ ಆತ್ಮವಂತನನ್ನು ಕರ್ಮಗಳು ಬಂಧಿಸುವುದಿಲ್ಲ.
06026042a ತಸ್ಮಾದಜ್ಞಾನಸಂಭೂತಂ ಹೃತ್ಸ್ಥಂ ಜ್ಞಾನಾಸಿನಾತ್ಮನಃ।
06026042c ಚಿತ್ತ್ವೈನಂ ಸಂಶಯಂ ಯೋಗಮಾತಿಷ್ಠೋತ್ತಿಷ್ಠ ಭಾರತ।।
ಆದುದರಿಂದ ಭಾರತ! ಅಜ್ಞಾನದಿಂದ ನಿನ್ನಿಂದಲೇ ಹುಟ್ಟಿರುವ ನಿನ್ನಲ್ಲಿಯೇ ಇರುವ ಈ ಸಂಶಯವನ್ನು ಜ್ಞಾನದ ಖಡ್ಗದಿಂದ ತರಿದೆಸೆದು ಯೋಗವನ್ನು ನಿನ್ನದಾಗಿಸಿಕೊಂಡು ಮೇಲೇಳು!”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಜ್ಞಾನಯೋಗೋ ನಾಮ ಚತುರ್ಥೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಜ್ಞಾನಯೋಗವೆಂಬ ನಾಲ್ಕನೇ ಅಧ್ಯಾಯವು.
ಭೀಷ್ಮ ಪರ್ವಣಿ ಷಡ್ವಿಂಶೋಽಧ್ಯಾಯಃ।।
ಭೀಷ್ಮ ಪರ್ವದಲ್ಲಿ ಇಪ್ಪತ್ತಾರನೇ ಅಧ್ಯಾಯವು.