025 ಶ್ರೀಕೃಷ್ಣಾರ್ಜುನಸಂವಾದೇ ಕರ್ಮಯೋಗಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭಗವದ್ಗೀತಾ ಪರ್ವ

ಅಧ್ಯಾಯ 25

ಸಾರ

06025001 ಅರ್ಜುನ ಉವಾಚ।
06025001a ಜ್ಯಾಯಸೀ ಚೇತ್ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ದನ।
06025001c ತತ್ಕಿಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ।।

ಅರ್ಜುನನು ಹೇಳಿದನು: “ಜನಾರ್ದನ! ಕೇಶವ! ಕರ್ಮಕ್ಕಿಂತ ಜ್ಞಾನವೇ ಶ್ರೇಷ್ಠವೆಂದು ನಿನ್ನ ಅಭಿಪ್ರಾಯವಾದರೆ ಘೋರವಾದ ಕರ್ಮದಲ್ಲಿ ನನ್ನನ್ನೇಕೆ ತೊಡಗಿಸುವೆ?

06025002a ವ್ಯಾಮಿಶ್ರೇಣೈವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ।
06025002c ತದೇಕಂ ವದ ನಿಶ್ಚಿತ್ಯ ಯೇನ ಶ್ರೇಯೋಽಹಮಾಪ್ನುಯಾಂ।।

ಒಮ್ಮೆ ಕರ್ಮ, ಒಮ್ಮೆ ಜ್ಞಾನ ಇವುಗಳನ್ನು ಬೆರೆಸಿ ತೊಡಕಾಗಿ ಮಾತನಾಡಿ ನನ್ನ ಬುದ್ಧಿಯನ್ನೇ ಮಂಕಾಗಿಸಿದ್ದೀಯೆ. ನನಗೆ ಶ್ರೇಯಸ್ಕರವಾದ ಒಂದೇ ಮಾರ್ಗವನ್ನು ನಿಶ್ಚಯಿಸಿ ಹೇಳು.”

06025003 ಶ್ರೀಭಗವಾನುವಾಚ।
06025003a ಲೋಕೇಽಸ್ಮಿನ್ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ।
06025003c ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಂ।।

ಶ್ರೀಭಗವಂತನು ಹೇಳಿದನು: “ಅನಘ! ನಾನು ಮೊದಲೇ ಹೇಳಿದಂತೆ ಈ ಲೋಕದಲ್ಲಿ ಎರಡು ವಿಧದ ನಿಷ್ಠೆಗಳಿವೆ: ಸಾಂಖ್ಯರಿಗೆ ಜ್ಞಾನಯೋಗ ಮತ್ತು ಯೋಗಿಗಳಿಗೆ ಕರ್ಮಯೋಗ.

06025004a ನ ಕರ್ಮಣಾಮನಾರಂಭಾನ್ನೈಷ್ಕರ್ಮ್ಯಂ ಪುರುಷೋಽಶ್ನುತೇ।
06025004c ನ ಚ ಸಮ್ನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ।।

ಕರ್ಮಗಳನ್ನು ಮಾಡದೇ ಇರುವುದರಿಂದ ಮನುಷ್ಯನಿಗೆ ಕರ್ಮಗಳಿಂದ ಮುಕ್ತಿ ದೊರೆಯುವುದಿಲ್ಲ. ಕೇವಲ ಸನ್ಯಾಸದಿಂದ ಸಿದ್ಧಿಯು ದೊರೆಯುವುದಿಲ್ಲ.

06025005a ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್।
06025005c ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ।।

ಯಾಕೆಂದರೆ ಯಾರೂ ಒಂದು ಕ್ಷಣವೂ ಕೂಡ ಕರ್ಮವನ್ನು ಮಾಡದೇ ಇರಲಾರನು. ಪ್ರಕೃತಿಯಿಂದ ಜನಿಸಿದ ಗುಣಗಳು ಅವಶ್ಯವಾಗಿ ಎಲ್ಲರಿಂದಲೂ ಕರ್ಮವನ್ನು ಮಾಡಿಸುತ್ತವೆ.

06025006a ಕರ್ಮೇಂದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಸ್ಮರನ್।
06025006c ಇಂದ್ರಿಯಾರ್ಥಾನ್ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇ।।

ಕರ್ಮೇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡು ಮನಸ್ಸಿನಲ್ಲಿ ಇಂದ್ರಿಯಗಳ ವಸ್ತುಗಳ ಕುರಿತು ಸ್ಮರಿಸುತ್ತಿರುವ ವಿಮೂಢಾತ್ಮನನ್ನು ಮಿಥ್ಯಾಚಾರಿ ಎಂದು ಹೇಳುತ್ತಾರೆ.

06025007a ಯಸ್ತ್ವಿಂದ್ರಿಯಾಣಿ ಮನಸಾ ನಿಯಮ್ಯಾರಭತೇಽರ್ಜುನ।
06025007c ಕರ್ಮೇಂದ್ರಿಯೈಃ ಕರ್ಮಯೋಗಮಸಕ್ತಃ ಸ ವಿಶಿಷ್ಯತೇ।।

ಅರ್ಜುನ! ಯಾರು ಇಂದ್ರಿಯಗಳನ್ನು ಮನಸ್ಸಿನಿಂದ ನಿಯಂತ್ರಿಸಿ ಕರ್ಮಯೋಗದಲ್ಲಿ ಆಸಕ್ತನಾಗಿ ಕರ್ಮೇಂದ್ರಿಯಗಳಿಂದ ಕರ್ಮಮಾಡುತ್ತಾನೋ ಅವನು ವಿಶೇಷವೆನಿಸಿಕೊಳ್ಳುತ್ತಾನೆ.

06025008a ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹ್ಯಕರ್ಮಣಃ।
06025008c ಶರೀರಯಾತ್ರಾಪಿ ಚ ತೇ ನ ಪ್ರಸಿಧ್ಯೇದಕರ್ಮಣಃ।।

ನಿನಗೆ ನಿಯೋಜಿಸಿದ ಕರ್ಮಗಳನ್ನು ಮಾಡು. ಯಾಕೆಂದರೆ ಕರ್ಮವನ್ನು ಮಾಡದೇ ಇರುವುದಕ್ಕಿಂತ ಕರ್ಮವನ್ನು ಮಾಡುವುದು ಹೆಚ್ಚಿನದು. ಅಕರ್ಮಣದಿಂದ ಶರೀರಯಾತ್ರೆಯೂ ಅಸಾಧ್ಯವಾಗುತ್ತದೆ.

06025009a ಯಜ್ಞಾರ್ಥಾತ್ಕರ್ಮಣೋಽನ್ಯತ್ರ ಲೋಕೋಽಯಂ ಕರ್ಮಬಂಧನಃ।
06025009c ತದರ್ಥಂ ಕರ್ಮ ಕೌಂತೇಯ ಮುಕ್ತಸಂಗಃ ಸಮಾಚರ।।

ಯಜ್ಞಾರ್ಥವಲ್ಲದ ಕರ್ಮಗಳಿಂದ ಮನುಷ್ಯನು ಕರ್ಮಬಂಧನಕ್ಕೊಳಗಾಗುತ್ತಾನೆ. ಆದುದರಿಂದ ಕೌಂತೇಯ! ಫಲಗಳಿಗೆ ಅಂಟಿಕೊಳ್ಳದೇ ಕರ್ಮಗಳನ್ನು ಮಾಡು.

06025010a ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋವಾಚ ಪ್ರಜಾಪತಿಃ।
06025010c ಅನೇನ ಪ್ರಸವಿಷ್ಯಧ್ವಮೇಷ ವೋಽಸ್ತ್ವಿಷ್ಟಕಾಮಧುಕ್।।

ಹಿಂದೆ ಯಜ್ಞದೊಂದಿಗೆ ಪ್ರಜೆಗಳನ್ನು ಸೃಷ್ಟಿಸಿದ ಪ್ರಜಾಪತಿಯು ಹೇಳಿದನು: “ಇದರಿಂದ ಇಮ್ಮಡಿಗೊಳ್ಳಿ. ಇದೇ ನಿಮ್ಮ ಇಷ್ಟಗಳನ್ನು ಪೂರೈಸುತ್ತದೆ.

06025011a ದೇವಾನ್ಭಾವಯತಾನೇನ ತೇ ದೇವಾ ಭಾವಯಂತು ವಃ।
06025011c ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ।।

ಇದರಿಂದ ದೇವತೆಗಳನ್ನು ಭಾವಯಿಸಿ. ಆ ದೇವತೆಗಳು ನಿಮ್ಮನ್ನು ಭಾವಯಿಸಲಿ. ಪರಸ್ಪರರನ್ನು ಭಾವಯಿಸಿಕೊಂಡು ಪರಮ ಶ್ರೇಯಸ್ಸನ್ನು ಪಡೆಯಿರಿ.

06025012a ಇಷ್ಟಾನ್ಭೋಗಾನ್ ಹಿ ವೋ ದೇವಾ ದಾಸ್ಯಂತೇ ಯಜ್ಞಭಾವಿತಾಃ।
06025012c ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಏವ ಸಃ।।

ಯಜ್ಞದಿಂದ ಭಾವಿತರಾದ ದೇವತೆಗಳು ನಿಮಗೆ ಇಷ್ಟಗಳನ್ನೂ ಬೋಗಗಳನ್ನೂ ನೀಡುತ್ತಾರೆ. ಅವರಿಂದ ಪಡೆದುದನ್ನು ಅವರಿಗೇ ಕೊಡದೇ ಭೋಗಿಸುವವನು ಕಳ್ಳನೇ ತಾನೇ.

06025013a ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವಕಿಲ್ಬಿಷೈಃ।
06025013c ಭುಂಜತೇ ತೇ ತ್ವಘಂ ಪಾಪಾ ಯೇ ಪಚಂತ್ಯಾತ್ಮಕಾರಣಾತ್।।

ಯಜ್ಞಶಿಷ್ಟವನ್ನು ಸೇವಿಸುವವರು ಸರ್ವ ಕಿಲ್ಬಿಷಗಳಿಂದ ಮುಕ್ತರಾಗುತ್ತಾರೆ. ಆದರೆ ತಮಗಾಗಿಯೇ ಅಡುಗೆಮಾಡುವ ಪಾಪಿಗಳು ಪಾಪವನ್ನೆಸಗುತ್ತಾರೆ.

06025014a ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ।
06025014c ಯಜ್ಞಾದ್ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ।।

ಅನ್ನದಿಂದ ಭೂತಗಳಾಗುತ್ತವೆ. ಪರ್ಜನ್ಯದಿಂದ ಅನ್ನವುಂಟಾಗುತ್ತದೆ. ಯಜ್ಞದಿಂದ ಪರ್ಜನ್ಯವಾಗುತ್ತದೆ. ಕರ್ಮದಿಂದಲೇ ಯಜ್ಞವಾಗುತ್ತದೆ.”

06025015a ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಂ।
06025015c ತಸ್ಮಾತ್ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಂ।।

ಕರ್ಮವು ಬ್ರಹ್ಮೋದ್ಭವವೆಂದು ತಿಳಿ. ಬ್ರಹ್ಮವು ಅಕ್ಷರದಿಂದ ಹುಟ್ಟಿದೆ. ಆದುದರಿಂದ ಸರ್ವಗತನಾದ ನಿತ್ಯನಾದ ಬ್ರಹ್ಮನು ಯಜ್ಞದಲ್ಲಿ ಪ್ರತಿಷ್ಠಿತನಾಗಿದ್ದಾನೆ.

06025016a ಏವಂ ಪ್ರವರ್ತಿತಂ ಚಕ್ರಂ ನಾನುವರ್ತಯತೀಹ ಯಃ।
06025016c ಅಘಾಯುರಿಂದ್ರಿಯಾರಾಮೋ ಮೋಘಂ ಪಾರ್ಥ ಸ ಜೀವತಿ।।

ಪಾರ್ಥ! ಹೀಗೆ ತಿರುಗಿಸಲ್ಪಟ್ಟ ಚಕ್ರವನ್ನು ಇಲ್ಲಿ ಯಾರು ಅನುಸರಿಸುವುದಿಲ್ಲವೋ ಅಂಥಹ ಇಂದ್ರಿಯಗಳೊಡನೆ ಆಟವಾಡುತ್ತಿರುವ ಪಾಪಜೀವಿಯು ವ್ಯರ್ಥವಾಗಿ ಜೀವಿಸುತ್ತಾನೆ.

06025017a ಯಸ್ತ್ವಾತ್ಮರತಿರೇವ ಸ್ಯಾದಾತ್ಮತೃಪ್ತಶ್ಚ ಮಾನವಃ।
06025017c ಆತ್ಮನ್ಯೇವ ಚ ಸಂತುಷ್ಟಸ್ತಸ್ಯ ಕಾರ್ಯಂ ನ ವಿದ್ಯತೇ।।

ಯಾರು ಆತ್ಮನೊಂದಿಗೇ ಆನಂದಿಸುತ್ತಾನೋ ಆತ್ಮನಿಂದಲೇ ತೃಪ್ತನಾಗಿರುತ್ತಾನೋ ಮತ್ತು ಆತ್ಮನಲ್ಲಿಯೇ ಸಂತುಷ್ಟನಾಗಿರುತ್ತಾನೋ ಅ ಮಾನವನಿಗೆ ಕಾರ್ಯವೆನ್ನುವುದೇ ಇಲ್ಲ.

06025018a ನೈವ ತಸ್ಯ ಕೃತೇನಾರ್ಥೋ ನಾಕೃತೇನೇಹ ಕಶ್ಚನ।
06025018c ನ ಚಾಸ್ಯ ಸರ್ವಭೂತೇಷು ಕಶ್ಚಿದರ್ಥವ್ಯಪಾಶ್ರಯಃ।।

ಅವನಿಗೆ ಕರ್ಮವನ್ನು ಮಾಡುವುದರಲ್ಲಿ ಅಥವಾ ಕರ್ಮವನ್ನು ಮಾಡುವುದೇ ಇರುವುದರಲ್ಲಿ ಎಂದೂ ಅರ್ಥವಿಲ್ಲ. ಅವನಿಗೆ ಸರ್ವಭೂತಗಳಲ್ಲಿಯೂ ಯಾವರೀತಿಯ ಅವಲಂಬನೆಯೂ ಇರುವುದಿಲ್ಲ.

06025019a ತಸ್ಮಾದಸಕ್ತಃ ಸತತಂ ಕಾರ್ಯಂ ಕರ್ಮ ಸಮಾಚರ।
06025019c ಅಸಕ್ತೋ ಹ್ಯಾಚರನ್ಕರ್ಮ ಪರಮಾಪ್ನೋತಿ ಪೂರುಷಃ।।

ಆದುದರಿಂದ ಯಾವಾಗಲೂ ಅಸಕ್ತನಾಗಿ ಮಾಡಬೇಕಾದ ಕರ್ಮವನ್ನು ಮಾಡು. ಏಕೆಂದರೆ ಅಸಕ್ತನಾಗಿ ಕರ್ಮಮಾಡುವ ಪುರುಷನು ಅತ್ಯುತ್ತಮವಾದುದನ್ನು ಪಡೆಯುತ್ತಾನೆ.

06025020a ಕರ್ಮಣೈವ ಹಿ ಸಂಸಿದ್ಧಿಮಾಸ್ಥಿತಾ ಜನಕಾದಯಃ।
06025020c ಲೋಕಸಂಗ್ರಹಮೇವಾಪಿ ಸಂಪಶ್ಯನ್ಕರ್ತುಮರ್ಹಸಿ।।

ಕರ್ಮದಿಂದಲೇ ಜನಕಾದಿಗಳು ಸಂಸಿದ್ಧಿಗೆ ಪ್ರಯತ್ನಿಸಿದರು. ಲೋಕಸಂಗ್ರಹವನ್ನು ಗುರಿಯಾಗಿಟ್ಟುಕೊಂಡೂ ಕರ್ಮಗಳನ್ನು ಮಾಡಬೇಕಾಗುತ್ತದೆ.

06025021a ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ।
06025021c ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ।।

ಶ್ರೇಷ್ಠನಾದವನು ಏನೇನು ಆಚರಣೆಗಳನ್ನು ಮಾಡುತ್ತಾನೋ ಅವುಗಳನ್ನೇ ಇತರ ಜನರೂ ಮಾಡುತ್ತಾರೆ. ಅವನು ಯಾವುದನ್ನು ಪ್ರಮಾಣವೆಂದು ಎತ್ತಿಹಿಡಿಯುತ್ತಾನೋ ಅದನ್ನೇ ಲೋಕವು ಅನುಸರಿಸುತ್ತದೆ.

06025022a ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂ ಚನ।
06025022c ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ।।

ಪಾರ್ಥ! ಮೂರು ಲೋಕಗಳಲ್ಲಿಯೂ ನಾನು ಮಾಡಬೇಕಾದ ಕರ್ತವ್ಯವೊಂದೂ ಇಲ್ಲ. ನಾನು ಪಡೆಯದೇ ಇದ್ದುದು ಅಥವಾ ಪಡೆಯಬೇಕಾಗಿದ್ದುದು ಏನೂ ಇಲ್ಲ. ಆದರೂ ನಾನು ಕರ್ಮಾಚರಣೆ ಮಾಡುತ್ತೇನೆ.

06025023a ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತಂದ್ರಿತಃ।
06025023c ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ।।

ಪಾರ್ಥ! ಒಂದು ವೇಳೆ ಯಾವಾಗಲಾದರೂ ನಾನು ಈ ಕರ್ಮಗಳನ್ನು ಅಯಾಸಗೊಳ್ಳದೇ ಮುಂದುವರಿಸಿಕೊಂಡು ಹೋಗಲಿಲ್ಲವೆಂದಾದರೆ ಮನುಷ್ಯರು ಎಲ್ಲರೀತಿಯಲ್ಲಿಯೂ ನನ್ನನ್ನು ಅನುಸರಿಸುತ್ತಾರೆ.

06025024a ಉತ್ಸೀದೇಯುರಿಮೇ ಲೋಕಾ ನ ಕುರ್ಯಾಂ ಕರ್ಮ ಚೇದಹಂ।
06025024c ಸಂಕರಸ್ಯ ಚ ಕರ್ತಾ ಸ್ಯಾಂ ಉಪಹನ್ಯಾಮಿಮಾಃ ಪ್ರಜಾಃ।।

ನಾನು ಕರ್ಮಗಳನ್ನು ಮಾಡದೇ ಇದ್ದರೆ ಈ ಲೋಕಗಳು ಕುಸಿದುಬೀಳುತ್ತವೆ. ಸಂಕರದ ಕರ್ತನಾಗುತ್ತೇನೆ ಮತ್ತು ಈ ಪ್ರಜೆಗಳ ನಾಶವಾಗುತ್ತದೆ.

06025025a ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ ಭಾರತ।
06025025c ಕುರ್ಯಾದ್ವಿದ್ವಾಂಸ್ತಥಾಸಕ್ತಶ್ಚಿಕೀರ್ಷುರ್ಲೋಕಸಂಗ್ರಹಂ।।

ಭಾರತ! ಅವಿದ್ವಾಂಸರು ಹೇಗೆ ಸಕ್ತರಾಗಿ ಕರ್ಮಗಳನ್ನೆಸಗುತ್ತಾರೋ ಹಾಗೆ ಲೋಕಸಂಗ್ರಹವನ್ನು ಬಯಸಿ ವಿದ್ವಾಂಸನಾದವನು ಅಸಕ್ತನಾಗಿ ಕರ್ಮಗಳನ್ನು ಮಾಡಬೇಕು.

06025026a ನ ಬುದ್ಧಿಭೇದಂ ಜನಯೇದಜ್ಞಾನಾಂ ಕರ್ಮಸಂಗಿನಾಂ।
06025026c ಜೋಷಯೇತ್ಸರ್ವಕರ್ಮಾಣಿ ವಿದ್ವಾನ್ಯುಕ್ತಃ ಸಮಾಚರನ್।।

ಕರ್ಮಕ್ಕೆ ಅಂಟಿಕೊಂಡಿರುವ ಅಜ್ಞಾನಿಗಳಲ್ಲಿ ಬುದ್ಧಿಭೇದವನ್ನು ಹುಟ್ಟಿಸಬಾರದು. ತಿಳಿದವನು ಯುಕ್ತನಾಗಿದ್ದು ಕರ್ಮಗಳನ್ನು ಮಾಡಿಕೊಂಡು ಅವರು ಎಲ್ಲ ಕರ್ಮಗಳನ್ನೂ ಮಾಡುವಂತೆ ಮಾಡಬೇಕು.

06025027a ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ।
06025027c ಅಹಂಕಾರವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ।।

ಪ್ರಕೃತಿಯ ಗುಣಗಳೇ ಎಲ್ಲರೀತಿಯಲ್ಲಿಯೂ ಕರ್ಮಗಳನ್ನು ಮಾಡಿಸುತ್ತವೆ. ಅಹಂಕಾರದ ವಿಮೂಢಾತ್ಮನು ನಾನು ಮಾಡುತ್ತೇನೆ ಎಂದು ತಿಳಿಯುತ್ತಾನೆ.

06025028a ತತ್ತ್ವವಿತ್ತು ಮಹಾಬಾಹೋ ಗುಣಕರ್ಮವಿಭಾಗಯೋಃ।
06025028c ಗುಣಾ ಗುಣೇಷು ವರ್ತಂತ ಇತಿ ಮತ್ವಾ ನ ಸಜ್ಜತೇ।।

ಆದರೆ ಮಹಾಬಾಹೋ! ಗುಣ ಮತ್ತು ಕರ್ಮಗಳ ವಿಭಜನೆಯ ತತ್ವವನ್ನು ತಿಳಿದವನು ಗುಣಗಳು1 ಗುಣಗಳ2 ಮೇಲೆ ವರ್ತಿಸುತ್ತಿವೆ ಎಂದು ತಿಳಿದು ಅಂಟಿಕೊಳ್ಳುವುದಿಲ್ಲ.

06025029a ಪ್ರಕೃತೇರ್ಗುಣಸಮ್ಮೂಢಾಃ ಸಜ್ಜಂತೇ ಗುಣಕರ್ಮಸು।
06025029c ತಾನಕೃತ್ಸ್ನವಿದೋ ಮಂದಾನ್ ಕೃತ್ಸ್ನವಿನ್ನ ವಿಚಾಲಯೇತ್।।

ಪ್ರಕೃತಿಯ ಗುಣಗಳಲ್ಲಿ ಮುಳುಗಿರುವವರು ಗುಣಗಳಿಂದುಂಟಾದ ಕರ್ಮಗಳಿಗೆ ಅಂಟಿಕೊಂಡಿರುತ್ತಾರೆ. ಎಲ್ಲವನ್ನೂ ತಿಳಿಯದೇ ಇರುವ ಆ ಮಂದರನ್ನು ಎಲ್ಲವನ್ನೂ ತಿಳಿದಿರುವವನು ವಿಚಲಿಸಬಾರದು.

06025030a ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮಚೇತಸಾ।
06025030c ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತಜ್ವರಃ।।

ಎಲ್ಲ ಕರ್ಮಗಳನ್ನೂ ನನಗೆ ಒಪ್ಪಿಸಿ ಆಧ್ಯಾತ್ಮಚೇತಸನಾಗಿ, ಫಲದ ಅಸೆಯನ್ನು ತೊರೆದು, ನನ್ನತನವನ್ನು ತೊರೆದವನಾಗಿ ವಿಗತಜ್ವರನಾಗಿ ಯುದ್ಧಮಾಡು.

06025031a ಯೇ ಮೇ ಮತಮಿದಂ ನಿತ್ಯಮನುತಿಷ್ಠಂತಿ ಮಾನವಾಃ।
06025031c ಶ್ರದ್ಧಾವಂತೋಽನಸೂಯಂತೋ ಮುಚ್ಯಂತೇ ತೇಽಪಿ ಕರ್ಮಭಿಃ।।

ನನ್ನ ಈ ಮತವನ್ನು ನಿತ್ಯವೂ ಯಾವ ಮಾನವನು ಶ್ರದ್ಧಾವಂತನಾಗಿ ಅನಸೂಯನಾಗಿ ಅನುಷ್ಠಾನಮಾಡುತ್ತಾನೋ ಅವನೂ ಕೂಡ ಕರ್ಮಗಳಿಂದ ಮುಕ್ತನಾಗುತ್ತಾನೆ.

06025032a ಯೇ ತ್ವೇತದಭ್ಯಸೂಯಂತೋ ನಾನುತಿಷ್ಠಂತಿ ಮೇ ಮತಂ।
06025032c ಸರ್ವಜ್ಞಾನವಿಮೂಢಾಂಸ್ತಾನ್ವಿದ್ಧಿ ನಷ್ಟಾನಚೇತಸಃ।।

ಆದರೆ ನನ್ನ ಈ ಮತವನ್ನು ತಿರಸ್ಕರಿಸಿ ಇದರಂತೆ ನಡೆದುಕೊಳ್ಳವುದಿರುವ ವಿಮೂಢ ಅಚೇತಸರ ಸರ್ವಜ್ಞಾನವೂ ನಷ್ಟವೆಂದು ತಿಳಿ.

06025033a ಸದೃಶಂ ಚೇಷ್ಟತೇ ಸ್ವಸ್ಯಾಃ ಪ್ರಕೃತೇರ್ಜ್ಞಾನವಾನಪಿ।
06025033c ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ।।

ಜ್ಞಾನಿಯೂ ಕೂಡ ತನ್ನ ಪ್ರಕೃತಿಯ ಪ್ರಕಾರ ನಡೆದುಕೊಳ್ಳುತ್ತಾನೆ. ಆದುದರಿಂದ ಭೂತಗಳು ಪ್ರಕೃತಿಯನ್ನೇ ಅನುಸರಿಸುತ್ತವೆ. ನಿಗ್ರಹವು ಏನು ಮಾಡುತ್ತದೆ?

06025034a ಇಂದ್ರಿಯಸ್ಯೇಂದ್ರಿಯಸ್ಯಾರ್ಥೇ ರಾಗದ್ವೇಷೌ ವ್ಯವಸ್ಥಿತೌ।
06025034c ತಯೋರ್ನ ವಶಮಾಗಚ್ಛೇತ್ತೌ ಹ್ಯಸ್ಯ ಪರಿಪಂಥಿನೌ।।

ಇಂದ್ರಿಯ ಇಂದ್ರಿಯಕ್ಕೂ ಅದರ ವಿಷಯವಸ್ತುವಿನ ಕುರಿತಾದ ರಾಗ ದ್ವೇಷಗಳು ವ್ಯವಸ್ಥಿತಗೊಂಡಿವೆ. ಅವೆರಡರ ಮಧ್ಯೆ ಸಿಲುಕಿಕೊಳ್ಳಬಾರದು. ಏಕೆಂದರೆ ಅವೆರಡೂ ಅವನ ಪ್ರತಿಸ್ಪರ್ಧಿಗಳು.

06025035a ಶ್ರೇಯಾನ್ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್।
06025035c ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ।।

ಗುಣಯುಕ್ತವಾಗಿಲ್ಲದಿದ್ದರೂ ಸ್ವಧರ್ಮವನ್ನೇ ಚೆನ್ನಾಗಿ ಅನುಷ್ಠಾನಕ್ಕೆ ತರುವುದು ಪರಧರ್ಮಕ್ಕಿಂತ ಒಳ್ಳೆಯದು. ಸ್ವಧರ್ಮದಲ್ಲಿದ್ದುಕೊಂಡು ಸಾಯುವುದು ಶ್ರೇಯ. ಪರಧರ್ಮವು ಭಯವನ್ನು ತಂದೊಡ್ಡುತ್ತದೆ.”

06025036 ಅರ್ಜುನ ಉವಾಚ।
06025036a ಅಥ ಕೇನ ಪ್ರಯುಕ್ತೋಽಯಂ ಪಾಪಂ ಚರತಿ ಪೂರುಷಃ।
06025036c ಅನಿಚ್ಛನ್ನಪಿ ವಾರ್ಷ್ಣೇಯ ಬಲಾದಿವ ನಿಯೋಜಿತಃ।।

ಅರ್ಜುನನು ಹೇಳಿದನು: “ವಾರ್ಷ್ಣೇಯ! ಹಾಗಿದ್ದರೆ ಪುರುಷನು ಯಾವುದರಿಂದ ಪ್ರಚೋದನೆಗೊಂಡು ತನ್ನ ಇಷ್ಟದ ವಿರುದ್ಧವಾಗಿ ಬಲಾತ್ಕಾರದಿಂದ ಮಾಡಿಸಲ್ಪಟ್ಟಿದೆಯೋ ಎನ್ನುವಂತೆ ಪಾಪವನ್ನು ಎಸಗುತ್ತಾನೆ?”

06025037 ಶ್ರೀಭಗವಾನುವಾಚ।
06025037a ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ।
06025037c ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಂ।।

ಶ್ರೀ ಭಗವಂತನು ಹೇಳಿದನು: “ರಜೋಗುಣಸಮುದ್ಭವವಾದ ಈ ಕಾಮ ಮತ್ತು ಕ್ರೋಧಗಳು ಮಹಾಭಕ್ಷಕರು ಮತ್ತು ಮಹಾಪಾಪಿಗಳು. ಇವೇ ವೈರಿಗಳೆಂದು ತಿಳಿ.

06025038a ಧೂಮೇನಾವ್ರಿಯತೇ ವಹ್ನಿರ್ಯಥಾದರ್ಶೋ ಮಲೇನ ಚ।
06025038c ಯಥೋಲ್ಬೇನಾವೃತೋ ಗರ್ಭಸ್ತಥಾ ತೇನೇದಮಾವೃತಂ।।

ಬೆಂಕಿಯು ಹೊಗೆಯಿಂದ ಮುಚ್ಚಿಕೊಂಡಿರುವಂತೆ, ಕನ್ನಡಿಯು ಕೊಳೆಯಿಂದ ಮುಚ್ಚಿಕೊಂಡಂತೆ ಭ್ರೂಣವು ಗರ್ಭದಿಂದ ಆವೃತಗೊಂಡಿರುವಂತೆ ಇದು ಅದರಿಂದ ಆವೃತಗೊಂಡಿದೆ.

06025039a ಆವೃತಂ ಜ್ಞಾನಮೇತೇನ ಜ್ಞಾನಿನೋ ನಿತ್ಯವೈರಿಣಾ।
06025039c ಕಾಮರೂಪೇಣ ಕೌಂತೇಯ ದುಷ್ಪೂರೇಣಾನಲೇನ ಚ।।

ಕೌಂತೇಯ! ಜ್ಞಾನಿಗಳ ನಿತ್ಯವೈರಿಯಾದ ಕಾಮರೂಪದ ತೃಪ್ತಿಯನ್ನುವುದೇ ಇಲ್ಲದ ಈ ಬೆಂಕಿಯಿಂದಲೇ ಜ್ಞಾನವು ಆವೃತವಾಗಿರುತ್ತದೆ.

06025040a ಇಂದ್ರಿಯಾಣಿ ಮನೋ ಬುದ್ಧಿರಸ್ಯಾಧಿಷ್ಠಾನಮುಚ್ಯತೇ।
06025040c ಏತೈರ್ವಿಮೋಹಯತ್ಯೇಷ ಜ್ಞಾನಮಾವೃತ್ಯ ದೇಹಿನಂ।।

ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯು ಇದರ ಅಧಿಷ್ಠಾನವೆಂದು ಹೇಳುತ್ತಾರೆ. ಇವುಗಳಿಂದಲೇ ಇದು ಜ್ಞಾನಕ್ಕೆ ಮುಸುಕು ಹಾಕಿ ದೇಹಿಯನ್ನು ವಿಮೋಹಗೊಳಿಸುತ್ತದೆ.

06025041a ತಸ್ಮಾತ್ತ್ವಮಿಂದ್ರಿಯಾಣ್ಯಾದೌ ನಿಯಮ್ಯ ಭರತರ್ಷಭ।
06025041c ಪಾಪ್ಮಾನಂ ಪ್ರಜಹಿಹ್ಯೇನಂ ಜ್ಞಾನವಿಜ್ಞಾನನಾಶನಂ।।

ಆದುದರಿಂದ ಭರತರ್ಷಭ! ಮೊದಲು ಇಂದ್ರಿಯಗಳನ್ನು ನಿಯಂತ್ರಿಸಿ ಪಾಪವನ್ನೆಸಗುವ ಜ್ಞಾನ ವಿಜ್ಞಾನಗಳನ್ನು ನಾಶಪಡಿಸುವ ಇದನ್ನು ತೊರೆ.

06025042a ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯಃ ಪರಂ ಮನಃ।
06025042c ಮನಸಸ್ತು ಪರಾ ಬುದ್ಧಿರ್ಯೋ ಬುದ್ಧೇಃ ಪರತಸ್ತು ಸಃ।।

ಇಂದ್ರಿಯಗಳು ಶ್ರೇಷ್ಠವೆಂದು ಹೇಳುತ್ತಾರೆ. ಇಂದ್ರಿಯಗಳಿಗಿಂತಲೂ ಶ್ರೇಷ್ಠವಾದದ್ದು ಮನಸ್ಸು. ಮನಸ್ಸಿಗಿಂತಲೂ ಶ್ರೇಷ್ಠವಾದದ್ದು ಬುದ್ಧಿ. ಬುದ್ಧಿಗಿಂತಲೂ ಶ್ರೇಷ್ಠವಾದದ್ದು ಅವನು.

06025043a ಏವಂ ಬುದ್ಧೇಃ ಪರಂ ಬುದ್ಧ್ವಾ ಸಂಸ್ತಭ್ಯಾತ್ಮಾನಮಾತ್ಮನಾ।
06025043c ಜಹಿ ಶತ್ರುಂ ಮಹಾಬಾಹೋ ಕಾಮರೂಪಂ ದುರಾಸದಂ।।

ಮಹಾಬಾಹೋ! ಹೀಗೆ ಬುದ್ಧಿಗಿಂತಲೂ ಶ್ರೇಷ್ಠವಾದುದನ್ನು ತಿಳಿದುಕೊಂಡು ಅತ್ಮನನ್ನು ಆತ್ಮನಲ್ಲಿ ತೊಡಗಿಸಿಕೊಂಡು, ಜಯಿಸಲು ಕಷ್ಟಕರವಾದ ಕಾಮರೂಪದ ಈ ಶತ್ರುವನ್ನು ಜಯಿಸು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಕರ್ಮಯೋಗೋ ನಾಮ ತೃತೀಯೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಕರ್ಮಯೋಗವೆಂಬ ಮೂರನೇ ಅಧ್ಯಾಯವು.
ಭೀಷ್ಮ ಪರ್ವಣಿ ಪಂಚವಿಂಶೋಽಧ್ಯಾಯಃ।।
ಭೀಷ್ಮ ಪರ್ವದಲ್ಲಿ ಇಪ್ಪತ್ತೈದನೇ ಅಧ್ಯಾಯವು.


  1. ಇಂದ್ರಿಯ ರೂಪದಲ್ಲಿರುವ ಗುಣಗಳು. ↩︎

  2. ಇಂದ್ರಿಯಗಳ ವಿಷಯರೂಪದಲ್ಲಿರುವ ಗುಣಗಳ ಮೇಲೆ. ↩︎