ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭಗವದ್ಗೀತಾ ಪರ್ವ
ಅಧ್ಯಾಯ 24
ಸಾರ
06024001 ಸಂಜಯ ಉವಾಚ।
06024001a ತಂ ತಥಾ ಕೃಪಯಾವಿಷ್ಟಮಶ್ರುಪೂರ್ಣಾಕುಲೇಕ್ಷಣಂ।
06024001c ವಿಷೀದಂತಮಿದಂ ವಾಕ್ಯಮುವಾಚ ಮಧುಸೂದನಃ।।
ಸಂಜಯನು ಹೇಳಿದನು: “ಹೀಗೆ ಕನಿಕರದಿಂದ ಕಂಬನಿದುಂಬಿ ದುಃಖಿಸುತ್ತಿರುವ ಅರ್ಜುನನನ್ನು ಕುರಿತು ಮಧುಸೂದನನು ಈ ಮಾತನ್ನು ಹೇಳಿದನು.
06024002 ಶ್ರೀಭಗವಾನುವಾಚ।
06024002a ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಂ।
06024002c ಅನಾರ್ಯಜುಷ್ಟಮಸ್ವರ್ಗ್ಯಮಕೀರ್ತಿಕರಮರ್ಜುನ।।
ಶ್ರೀಭಗವಾನನು ಹೇಳಿದನು: “ಅರ್ಜುನ! ಒಳ್ಳೆಯವರಿಗೆ ಹೇಳಿಸಿದಲ್ಲದ1, ಸ್ವರ್ಗವನ್ನು ದೊರಕಿಸದ, ಹಾಗೂ ಅಪಕೀರ್ತಿಕರವಾದ ಇಂಥ ಕೊಳಕು ಬುದ್ಧಿಯು ಈ ವಿಷಮಕಾಲದಲ್ಲಿ ನಿನಗೆಲ್ಲಿಂದ ಬಂದಿತು?2
06024003a ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ।
06024003c ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ।।
ಪಾರ್ಥ! ನಪುಂಸಕನಂತೆ ನುಡಿಯದಿರು! ನಿನ್ನಂಥವರಿಗೆ ಇದು ಹೇಳಿಸಿದುದಲ್ಲ. ಹಗೆಗಳನ್ನು ಗೆಲ್ಲಬಲ್ಲ ನೀನು ಕೀಳಾದ ಈ ಎದೆಯಳುಕನ್ನು ತೊರೆದು ಎದ್ದು ನಿಲ್ಲು!”
06024004 ಅರ್ಜುನ ಉವಾಚ।
06024004a ಕಥಂ ಭೀಷ್ಮಮಹಂ ಸಂಖ್ಯೇ ದ್ರೋಣಂ ಚ ಮಧುಸೂದನ।
06024004c ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾವರಿಸೂದನ।।
ಅರ್ಜುನನು ಹೇಳಿದನು: “ಮಧುಸೂದನ! ಅರಿಸೂದನ! ಪೂಜಾರ್ಹರಾಗಿರುವ ಭೀಷ್ಮನನ್ನೂ, ದ್ರೋಣನನ್ನೂ ಯುದ್ಧದಲ್ಲಿ ಎದುರಿಸಿ ಬಾಣಗಳಿಂದ ಹೇಗೆ ಹೊಡೆದೇನು?
06024005a ಗುರೂನಹತ್ವಾ ಹಿ ಮಹಾನುಭಾವಾಂ ಶ್ರೇಯೋ ಭೋಕ್ತುಂ ಭೈಕ್ಷಮಪೀಹ ಲೋಕೇ।
06024005c ಹತ್ವಾರ್ಥಕಾಮಾಂಸ್ತು ಗುರೂನಿಹೈವ ಭುಂಜೀಯ ಭೋಗಾನ್ರುಧಿರಪ್ರದಿಗ್ಧಾನ್।।
ಮಹಾನುಭಾವ ಗುರುಗಳನ್ನು ಕೊಂದು ರಾಜ್ಯಸುಖವನ್ನು ಪಡೆಯುವುದಕ್ಕಿಂತ ಕೊಲ್ಲದೆಯೇ ತಿರಿದು ತಿನ್ನುವುದು ಲೇಸು. ಸುಖಾಪೇಕ್ಷಿ ಗುರುಗಳನ್ನು ಕೊಂದರೆ ಅವರ ನೆತ್ತರಿನಿಂದ ತೋಯುವ ಭೋಗವನ್ನಲ್ಲವೆ ನಾವು ಉಣ್ಣಬೇಕು?
06024006a ನ ಚೈತದ್ವಿದ್ಮಃ ಕತರನ್ನೋ ಗರೀಯೋ ಯದ್ವಾ ಜಯೇಮ ಯದಿ ವಾ ನೋ ಜಯೇಯುಃ।
06024006c ಯಾನೇವ ಹತ್ವಾ ನ ಜಿಜೀವಿಷಾಮಸ್ ತೇಽವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ।।
ನಾವು ಗೆಲ್ಲುವೆವೋ ಅವರೇ ಗೆಲ್ಲುವರೋ! ಇವುಗಳಲ್ಲಿ ಯಾವುದು ಮೇಲಾದುದು ಎಂದು ಏನೂ ತಿಳಿಯದಾಗಿದೆ. ಯಾರನ್ನು ಕೊಂದು ನಾವು ಬದುಕಲು ಬಯಸುವುದಿಲ್ಲವೋ ಆ ಕೌರವರೇ ಇದಿರು ಬಂದು ನಿಂತಿದ್ದಾರೆ.
06024007a ಕಾರ್ಪಣ್ಯದೋಷೋಪಹತಸ್ವಭಾವಃ ಪೃಚ್ಛಾಮಿ ತ್ವಾಂ ಧರ್ಮಸಮ್ಮೂಢಚೇತಾಃ।
06024007c ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ ಶಿಷ್ಯಸ್ತೇಽಹಂ ಶಾಧಿ ಮಾಂ ತ್ವಾಂ ಪ್ರಪನ್ನಂ।।
ವ್ಯಸನದಿಂದಲೂ ಪಾಪಭೀತಿಯಿಂದಲೂ ಎದೆಗಾರಿಕೆಯನ್ನು ಕಳೆದುಕೊಂಡಿದ್ದೇನೆ. ಧರ್ಮದ ವಿಚಾರದಲ್ಲಿಯೂ ಮನಸ್ಸು ಮಂಕಾಗಿದೆ. ನಾನು ನಿನ್ನ ಶಿಷ್ಯನಾಗಿ ಶರಣುಬಂದಿದ್ದೇನೆ. ಯಾವುದು ಶ್ರೇಯವೆಂದು ನೀನೇ ನಿರ್ಣಯಿಸಿ ದಾರಿ ತೋರು!
06024008a ನ ಹಿ ಪ್ರಪಶ್ಯಾಮಿ ಮಮಾಪನುದ್ಯಾದ್ ಯಚ್ಛೋಕಮುಚ್ಛೋಷಣಮಿಂದ್ರಿಯಾಣಾಂ।
06024008c ಅವಾಪ್ಯ ಭೂಮಾವಸಪತ್ನಂ ಋದ್ಧಂ ರಾಜ್ಯಂ ಸುರಾಣಾಮಪಿ ಚಾಧಿಪತ್ಯಂ।।
ದೇವತೆಗಳ ಒಡೆತನದಿಂದಾಗಲೀ, ಬಂಧುಗಳಿಲ್ಲದ ಈ ಸಂಪದ್ಭರಿತ ಭೂಮಿಯ ಒಡೆತನದಿಂದಾಗಲೀ ನನ್ನ ಇಂದ್ರಿಯಗಳನ್ನು ಹಿಂಡಿಬಿಡುವ ಈ ನೋವು ಮಾಯವಾಗದು. ಇದಕ್ಕೆ ಉಪಾಯವನ್ನು ಕಾಣದಾಗಿದ್ದೇನೆ.””
06024009 ಸಂಜಯ ಉವಾಚ।
06024009a ಏವಮುಕ್ತ್ವಾ ಹೃಷೀಕೇಶಂ ಗುಡಾಕೇಶಃ ಪರಂತಪ।
06024009c ನ ಯೋತ್ಸ್ಯ ಇತಿ ಗೋವಿಂದಮುಕ್ತ್ವಾ ತೂಷ್ಣೀಂ ಬಭೂವ ಹ।।
ಸಂಜಯನು ಹೇಳಿದನು: “ಪರಂತಪ ಗುಡಾಕೇಶ ಅರ್ಜುನನು ಹೃಷೀಕೇಶ ಕೃಷ್ಣನಿಗೆ ಹೀಗೆ ಹೇಳಿ “ಗೋವಿಂದ! ನಾನು ಯುದ್ಧಮಾಡಲಾರೆ!” ಎಂದು ಸುಮ್ಮನಾದನು.
06024010a ತಮುವಾಚ ಹೃಷೀಕೇಶಃ ಪ್ರಹಸನ್ನಿವ ಭಾರತ।
06024010c ಸೇನಯೋರುಭಯೋರ್ಮಧ್ಯೇ ವಿಷೀದಂತಮಿದಂ ವಚಃ।।
ಭಾರತ! ಎರಡೂ ಸೇನೆಗಳ ನಡುವೆ ಶೋಕಿಸುತ್ತಾ ಕುಳಿತಿದ್ದ ಅರ್ಜುನನನ್ನು ನೋಡಿ ಹೃಷೀಕೇಶನು ನಗುವವನಂತೆ ಹೀಗೆ ಹೇಳತೊಡಗಿದನು:
06024011 ಶ್ರೀಭಗವಾನುವಾಚ।
06024011a ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ।
06024011c ಗತಾಸೂನಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ।।
ಶ್ರೀಭಗವಾನನು ಹೇಳಿದನು: “ನೀನು ದುಃಖಪಡಬಾರದವರಿಗಾಗಿ3 ದುಃಖಿಸುತ್ತಿರುವೆ. ತಿಳಿದವರು ಆಡುವಂಥಹ ಮಾತುಗಳನ್ನೂ ಆಡುತ್ತಿರುವೆ. ತಿಳಿದವರು ಹೋದವರ (ಸತ್ತುಹೋದವರ) ಮತ್ತು ಇನ್ನೂ ಹೋಗದೇ ಇದ್ದವರ (ಇರುವವರ) ಕುರಿತು ಶೋಕಿಸುವುದಿಲ್ಲ.
06024012a ನ ತ್ವೇವಾಹಂ ಜಾತು ನಾಸಂ ನ ತ್ವಂ ನೇಮೇ ಜನಾಧಿಪಾಃ।
06024012c ನ ಚೈವ ನ ಭವಿಷ್ಯಾಮಃ ಸರ್ವೇ ವಯಮತಃ ಪರಂ।।
ನಾನಾಗಲೀ, ನೀನಾಗಲೀ, ಈ ಅರಸರಾಗಲೀ ಹಿಂದೆ ಇರಲಿಲ್ಲವೆಂದಲ್ಲ. ಮುಂದೆ ಇರುವುದಿಲ್ಲವೆಂದೂ ಅಲ್ಲ.
06024013a ದೇಹಿನೋಽಸ್ಮಿನ್ಯಥಾ ದೇಹೇ ಕೌಮಾರಂ ಯೌವನಂ ಜರಾ।
06024013c ತಥಾ ದೇಹಾಂತರಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ4।।
ದೇಹವನ್ನು ಹೊಂದಿರುವಾಗ ಈ ಜೀವನಿಗೆ ಬಾಲ್ಯ, ತಾರುಣ್ಯ, ಮುಪ್ಪು ಎಂಬೀ ಬದಲಾವಣೆಗಳು ಹೇಗೆ ಬರುವವೋ ಹಾಗೆಯೇ ಒಂದು ದೇಹವು ಹೋದರೆ ಇನ್ನೊಂದು ದೇಹವು ಪ್ರಾಪ್ತವಾಗುವುದು. ತಿಳಿದವರು ಈ ವಿಷಯದಲ್ಲಿ ಗಲಿಬಿಲಿಗೊಳ್ಳುವುದಿಲ್ಲ.
06024014a ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾಃ।
06024014c ಆಗಮಾಪಾಯಿನೋಽನಿತ್ಯಾಸ್ತಾಂಸ್ತಿತಿಕ್ಷಸ್ವ ಭಾರತ।।
5ಕೌಂತೇಯ! ಭಾರತ! ಇಂದ್ರಿಯಗಳೊಡನೆ ವಿಷಯಗಳ ಸಂಯೋಗದಿಂದಲೇ ಶೀತ-ಉಷ್ಣ ಮತ್ತು ಸುಖ-ದುಃಖಗಳ ಅನುಭವವಾಗುವುದು6. ಈ ಅನುಭವಗಳಿಗೆ ಮೊದಲೊಂದಿದೆ ಮತ್ತು ಕೊನೆಯೊಂದಿದೆ. ಆದುದರಿಂದ ಅವು ಅನಿತ್ಯವಾದವು7. ಈ ಅನುಭವಗಳನ್ನು ಮೆಟ್ಟಿ ನಿಲ್ಲು!8
06024015a ಯಂ ಹಿ ನ ವ್ಯಥಯಂತ್ಯೇತೇ ಪುರುಷಂ ಪುರುಷರ್ಷಭ।
06024015c ಸಮದುಃಖಸುಖಂ ಧೀರಂ ಸೋಽಮೃತತ್ವಾಯ ಕಲ್ಪತೇ।।
ಪುರುಷರ್ಷಭ! ಯಾರು ಈ ಅನುಭವಗಳಿಂದ ವ್ಯಥೆಪಡುವುದಿಲ್ಲವೋ ಮತ್ತು ಯಾರಿಗೆ ದುಃಖ ಸುಖಗಳು ಸಮನಾಗಿರುವವೋ ಆ ಧೀರ9 ಪುರುಷನು ಅಮೃತತ್ವ10ವನ್ನು ಪಡೆದಂತೆ.
06024016a ನಾಸತೋ ವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ।
06024016c ಉಭಯೋರಪಿ ದೃಷ್ಟೋಽಮ್ತಸ್ತ್ವನಯೋಸ್ತತ್ತ್ವದರ್ಶಿಭಿಃ।।
ಯಾವುದು ಸತ್ಯವಲ್ಲವೋ11 ಅದರ ಇರುವಿಕೆಯಿಲ್ಲ12. ಯಾವುದು ಸತ್ಯವೋ13 ಅದು ಇಲ್ಲದೇ ಇರುವುದಿಲ್ಲ14. ತತ್ತ್ವವನ್ನು ಕಂಡುಕೊಂಡವರು ಇವೆರಡರ ಕುರಿತೂ ಚೆನ್ನಾಗಿ ತಿಳಿದುಕೊಂಡಿರುತ್ತಾರೆ.
06024017a ಅವಿನಾಶಿ ತು ತದ್ವಿದ್ಧಿ ಯೇನ ಸರ್ವಮಿದಂ ತತಂ।
06024017c ವಿನಾಶಮವ್ಯಯಸ್ಯಾಸ್ಯ ನ ಕಶ್ಚಿತ್ಕರ್ತುಮರ್ಹತಿ।।
ಯಾವುದರಿಂದ ಇವೆಲ್ಲವೂ15 ಇವೆಯೋ16 ಅದು ಅವಿನಾಶಿಯೆಂದು ತಿಳಿ. ಈ ಅವ್ಯಯವಾದುದನ್ನು ಯಾರೂ ವಿನಾಶಗೊಳಿಸಲಾರರು.
06024018a ಅಂತವಂತ ಇಮೇ ದೇಹಾ ನಿತ್ಯಸ್ಯೋಕ್ತಾಃ ಶರೀರಿಣಃ।
06024018c ಅನಾಶಿನೋಽಪ್ರಮೇಯಸ್ಯ ತಸ್ಮಾದ್ಯುಧ್ಯಸ್ವ ಭಾರತ।।
ಆ ನಿತ್ಯ, ಅನಾಶಿನಿ17, ಅಪ್ರಮೇಯ18ನ ಈ ದೇಹಗಳು ಇಲ್ಲವಾಗುವಂಥವುಗಳು19. ಆದುದರಿಂದ ಯುದ್ಧಮಾಡು ಭಾರತ!
06024019a ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಂ।
06024019c ಉಭೌ ತೌ ನ ವಿಜಾನೀತೋ ನಾಯಂ ಹಂತಿ ನ ಹನ್ಯತೇ।।
ಇದು ಕೊಲ್ಲುತ್ತದೆಯೆಂದೋ ಅಥವಾ ಕೊಲ್ಲಲ್ಪಡುತ್ತದೆಯೆಂದೋ ಯಾರು ತಿಳಿಯುತ್ತಾರೋ ಅವರಿಬ್ಬರೂ ತಿಳಿದುಕೊಂಡಿಲ್ಲ. ಇದು ಕೊಲ್ಲುವುದೂ ಇಲ್ಲ. ಕೊಲ್ಲಲ್ಪಡುವುದೂ ಇಲ್ಲ.
06024020a ನ ಜಾಯತೇ ಮ್ರಿಯತೇ ವಾ ಕದಾ ಚಿನ್ ನಾಯಂ ಭೂತ್ವಾ ಭವಿತಾ ವಾ ನ ಭೂಯಃ।
06024020c ಅಜೋ ನಿತ್ಯಃ ಶಾಶ್ವತೋಽಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ।।
ಇದು ಹುಟ್ಟಲೂ ಇಲ್ಲ ಸಾಯುವುದೂ ಇಲ್ಲ. ಇದ್ದುದಾದ ಇದು ಮುಂದೆ ಇಲ್ಲದಂತೆ ಆಗುವುದಿಲ್ಲ. ಇದು ಹುಟ್ಟಿದುದಲ್ಲ. ಇದು ನಿತ್ಯ. ಶಾಶ್ವತ. ಪುರಾಣ. ಶರೀರವನ್ನು ಕೊಂದರೂ ಇದು ಸಾಯುವುದಿಲ್ಲ20.
06024021a ವೇದಾವಿನಾಶಿನಂ ನಿತ್ಯಂ ಯ ಏನಮಜಮವ್ಯಯಂ।
06024021c ಕಥಂ ಸ ಪುರುಷಃ ಪಾರ್ಥ ಕಂ ಘಾತಯತಿ ಹಂತಿ ಕಂ।।
ಪಾರ್ಥ! ಇದು ಅವಿನಾಶಿ. ಹುಟ್ಟಿಲ್ಲದುದು. ನಿತ್ಯ ಮತ್ತು ಅವ್ಯಯ. ಇದನ್ನು ತಿಳಿದ ಪುರುಷನು ಹೇಗೆ ಯಾರನ್ನು ಕೊಲ್ಲಬಲ್ಲನು? ಯಾರನ್ನು ಕೊಲ್ಲಿಸಬಲ್ಲನು?21
06024022a ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋಽಪರಾಣಿ।
06024022c ತಥಾ ಶರೀರಾಣಿ ವಿಹಾಯ ಜೀರ್ಣಾನ್ಯ್ ಅನ್ಯಾನಿ ಸಮ್ಯಾತಿ ನವಾನಿ ದೇಹೀ।।
ಜೀರ್ಣವಾದ ಬಟ್ಟೆಗಳನ್ನು ತೊರೆದು ಹೊಸಬಟ್ಟೆಗಳನ್ನು ಹೇಗೆ ಮನುಷ್ಯನು ತೊಡುತ್ತಾನೋ ಹಾಗೆ ಇದು ಜೀರ್ಣವಾದ ಶರೀರಗಳನ್ನು ತೊರೆದು ಬೇರೆ ಹೊಸ ದೇಹಗಳನ್ನು ಸೇರುತ್ತದೆ22.
06024023a ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ।
06024023c ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ।।
ಇದನ್ನು ಶಸ್ತ್ರಗಳು ಕತ್ತರಿಸಲಾರವು. ಬೆಂಕಿಯು ಸುಡಲಾರದು. ನೀರು ನೆನಯಿಸಲಾರದು, ಮತ್ತು ಗಾಳಿಯು ಒಣಗಿಸಲಾರದು23.
06024024a ಅಚ್ಛೇದ್ಯೋಽಯಮದಾಹ್ಯೋಽಯಮಕ್ಲೇದ್ಯೋಽಶೋಷ್ಯ ಏವ ಚ।
06024024c ನಿತ್ಯಃ ಸರ್ವಗತಃ ಸ್ಥಾಣುರಚಲೋಽಯಂ ಸನಾತನಃ।।
ಇದನ್ನು ಕತ್ತರಿಸಲಾಗದು. ಇದನ್ನು ಸುಡಲಾಗದು. ತೋಯಿಸಲಾಗದು ಮತ್ತು ಒಣಗಿಸಲೂ ಆಗದು. ಇದು ನಿತ್ಯ. ಎಲ್ಲದರಲ್ಲಿ ಇರುವುದು. ಸ್ಥಿರವಾಗಿರುವುದು. ಅಚರವಾದುದು ಮತ್ತು ಸನಾತನವಾದುದು24.
06024025a ಅವ್ಯಕ್ತೋಽಯಮಚಿಂತ್ಯೋಽಯಮವಿಕಾರ್ಯೋಽಯಮುಚ್ಯತೇ।
06024025c ತಸ್ಮಾದೇವಂ ವಿದಿತ್ವೈನಂ ನಾನುಶೋಚಿತುಮರ್ಹಸಿ।।
ಇದು ಅವ್ಯಕ್ತ25, ಇದು ಅಚಿಂತ್ಯ26, ಮತ್ತು ಅವಿಕಾರಿ27 ಎಂದು ಹೇಳುತ್ತಾರೆ. ಆದುದರಿಂದ ಅದು ಹೀಗೇ ಎಂದು ತಿಳಿದಿದೆಯಾದುದರಿಂದ ನೀನು ಶೋಕಪಡಬೇಕಾದುದಿಲ್ಲ.
06024026a ಅಥ ಚೈನಂ ನಿತ್ಯಜಾತಂ ನಿತ್ಯಂ ವಾ ಮನ್ಯಸೇ ಮೃತಂ।
06024026c ತಥಾಪಿ ತ್ವಂ ಮಹಾಬಾಹೋ ನೈನಂ ಶೋಚಿತುಮರ್ಹಸಿ।।
ಒಂದುವೇಳೆ ನೀನು ಇದು ನಿತ್ಯವೂ ಹುಟ್ಟುತ್ತಿರುತ್ತದೆ ಮತ್ತು ಸಾಯುತ್ತಿರುತ್ತದೆ ಎಂದು ತಿಳಿದರೂ ಕೂಡ, ಮಹಾಬಾಹು! ಈ ರೀತಿಯಾಗಿ ಶೋಕಿಸಬೇಕಾಗಿಲ್ಲ.
06024027a ಜಾತಸ್ಯ ಹಿ ಧ್ರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯ ಚ।
06024027c ತಸ್ಮಾದಪರಿಹಾರ್ಯೇಽರ್ಥೇ ನ ತ್ವಂ ಶೋಚಿತುಮರ್ಹಸಿ।।
ಯಾಕೆಂದರೆ ಹುಟ್ಟಿದುದಕ್ಕೆ ಸಾವು ನಿಶ್ಚಯವು. ಸತ್ತಿದುದಕ್ಕೆ ಹುಟ್ಟೂ ನಿಶ್ಚಯವೇ. ಅನಿವಾರ್ಯವಾದ ಈ ವಿಷಯದಲ್ಲಿ ದುಃಖಿಸುವುದು ಸರಿಯಲ್ಲ.
06024028a ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ।
06024028c ಅವ್ಯಕ್ತನಿಧನಾನ್ಯೇವ ತತ್ರ ಕಾ ಪರಿದೇವನಾ।।
ಭಾರತ! ಆದಿಯಲ್ಲಿ ಎಲ್ಲವೂ ಅವ್ಯಕ್ತವಾಗಿದ್ದು, ಮಧ್ಯದಲ್ಲಿ ವ್ಯಕ್ತವಾಗುತ್ತವೆ. ಸಾವಿನನಂತರ ಅವು ಅವ್ಯಕ್ತವಾಗುತ್ತವೆ. ಇದರಲ್ಲಿ ದುಃಖಿಸುವುದೇನಿದೆ?
06024029a ಆಶ್ಚರ್ಯವತ್ಪಶ್ಯತಿ ಕಶ್ಚಿದೇನಂ ಆಶ್ಚರ್ಯವದ್ವದತಿ ತಥೈವ ಚಾನ್ಯಃ।
06024029c ಆಶ್ಚರ್ಯವಚ್ಚೈನಮನ್ಯಃ ಶೃಣೋತಿ ಶ್ರುತ್ವಾಪ್ಯೇನಂ ವೇದ ನ ಚೈವ ಕಶ್ಚಿತ್।।
ಕೆಲವರು ಇದನ್ನು ಆಶ್ಚರ್ಯವೆಂದು ಕಾಣುತ್ತಾರೆ. ಇತರರು ಇದೇ ಆಶ್ಚರ್ಯದ ಕುರಿತು ಮಾತನ್ನಾಡುತ್ತಾರೆ. ಇನ್ನೂ ಇತರರು ಇದನ್ನು ಆಶ್ಚರ್ಯವೆಂದು ಕೇಳುತ್ತಾರೆ. ಇದನ್ನು ಕೇಳಿದನಂತರವೂ ಕೆಲವರಿಗೆ ಅರ್ಥವಾಗುವುದಿಲ್ಲ.
06024030a ದೇಹೀ ನಿತ್ಯಮವಧ್ಯೋಽಯಂ ದೇಹೇ ಸರ್ವಸ್ಯ ಭಾರತ।
06024030c ತಸ್ಮಾತ್ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸಿ।।
ಭಾರತ! ಎಲ್ಲ ದೇಹಗಳಲ್ಲಿರುವ ಈ ದೇಹಿಯು ನಿತ್ಯವೂ ಅವಧ್ಯ. ಆದುದರಿಂದ ಈ ಸರ್ವಭೂತಗಳ ಕುರಿತು ನೀನು ಶೋಚಿಸಬೇಕಾಗಿಲ್ಲ.
06024031a ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಂಪಿತುಮರ್ಹಸಿ।
06024031c ಧರ್ಮ್ಯಾದ್ಧಿ ಯುದ್ಧಾಚ್ಚ್ರೇಯೋಽನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ।।
ನಿನ್ನ ಸ್ವಧರ್ಮದ ಕುರಿತು ಯೋಚಿಸಿದರೆ ಅಲ್ಲಿಯೂ ಕೂಡ ನೀನು ಹಿಂಜರಿಯುವ ಅವಶ್ಯಕತೆಯಿಲ್ಲ. ಯಾಕೆಂದರೆ ಕ್ಷತ್ರಿಯನಿಗೆ ಧರ್ಮಯುದ್ಧಕ್ಕಿಂತ ಹೆಚ್ಚಿನ ಶ್ರೇಯಸ್ಸನ್ನು ಕೊಡುವಂಥಹುದು ಬೇರೆ ಯಾವುದೂ ಇಲ್ಲ.
06024032a ಯದೃಚ್ಛಯಾ ಚೋಪಪನ್ನಂ ಸ್ವರ್ಗದ್ವಾರಮಪಾವೃತಂ।
06024032c ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮೀದೃಶಂ।।
ಪಾರ್ಥ! ಸ್ವರ್ಗಕ್ಕೆ ದ್ವಾರವಾಗಿರುವ, ತಾನಾಗಿಯೇ ಬಂದೊದಗಿದ ಇಂಥಹ ಯುದ್ಧವನ್ನು ಪಡೆದ ಕ್ಷತ್ರಿಯರು ಬಹಳ ಸಂತೋಷ ಪಡುತ್ತಾರೆ.
06024033a ಅಥ ಚೇತ್ತ್ವಂ ಇಮಂ ಧರ್ಮ್ಯಂ ಸಂಗ್ರಾಮಂ ನ ಕರಿಷ್ಯಸಿ।
06024033c ತತಃ ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ।।
ಈ ಧರ್ಮ ಸಂಗ್ರಾಮವನ್ನು ಹೋರಾಡದೇ ಇದ್ದರೆ ನೀನು ಸ್ವಧರ್ಮವನ್ನೂ, ಕೀರ್ತಿಯನ್ನೂ ತೊರೆದು ಪಾಪವನ್ನು ಪಡೆಯುತ್ತೀಯೆ.
06024034a ಅಕೀರ್ತಿಂ ಚಾಪಿ ಭೂತಾನಿ ಕಥಯಿಷ್ಯಂತಿ ತೇಽವ್ಯಯಾಂ।
06024034c ಸಂಭಾವಿತಸ್ಯ ಚಾಕೀರ್ತಿರ್ಮರಣಾದತಿರಿಚ್ಯತೇ।।
ಇರುವವರು ಕೊನೆಯವರೆಗೂ ನಿನ್ನ ಈ ಅಕೀರ್ತಿಯ ಕುರಿತು ಹೇಳುತ್ತಿರುತ್ತಾರೆ. ಸಂಭಾವಿತನಿಗೆ ಅಕೀರ್ತಿಯು ಮರಣಕ್ಕಿಂತಲೂ ಅಧಿಕವೆಂದು ಹೇಳುತ್ತಾರೆ.
06024035a ಭಯಾದ್ರಣಾದುಪರತಂ ಮಂಸ್ಯಂತೇ ತ್ವಾಂ ಮಹಾರಥಾಃ।
06024035c ಯೇಷಾಂ ಚ ತ್ವಂ ಬಹುಮತೋ ಭೂತ್ವಾ ಯಾಸ್ಯಸಿ ಲಾಘವಂ।।
ಮಹಾರಥಿಗಳು ನೀನು ಭಯಪಟ್ಟು ರಣದಿಂದ ಹೊರಹೋದೆಯೆಂದು ತಿಳಿಯುತ್ತಾರೆ. ಯಾರು ನಿನ್ನನ್ನು ಈಗ ಗೌರವಿಸುತ್ತಿರುವರೋ ಅವರಿಗೇ ನೀನು ಹಗುರಾಗುತ್ತೀಯೆ.
06024036a ಅವಾಚ್ಯವಾದಾಂಶ್ಚ ಬಹೂನ್ವದಿಷ್ಯಂತಿ ತವಾಹಿತಾಃ।
06024036c ನಿಂದಂತಸ್ತವ ಸಾಮರ್ಥ್ಯಂ ತತೋ ದುಃಖತರಂ ನು ಕಿಂ।।
ನಿನಗೆ ಆಗದವರು ನಿನ್ನ ಸಾಮರ್ಥ್ಯವನ್ನು ನಿಂದಿಸಿ ಹೇಳಬಾರದ ಬಹಳಷ್ಟು ಮಾತುಗಳನ್ನಾಡುತ್ತಾರೆ. ಇದಕ್ಕಿಂದ ಹೆಚ್ಚಿನ ದುಃಖಕರವಾದುದು ಏನಿದೆ?
06024037a ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಂ।
06024037c ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ।।
ಒಂದುವೇಳೆ ನೀನು ಸತ್ತರೆ ಸ್ವರ್ಗವನ್ನು ಪಡೆಯುತ್ತೀಯೆ. ಅಥವಾ ಗೆದ್ದರೆ ಭೂಮಿಯನ್ನು ಭೋಗಿಸುತ್ತೀಯೆ. ಆದುದರಿಂದ ಕೌಂತೇಯ! ಯುದ್ಧಮಾಡಲು ನಿರ್ಧರಿಸಿ ಏಳು.
06024038a ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ।
06024038c ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ।।
ಸುಖ-ದುಃಖ, ಲಾಭ-ನಷ್ಟ ಮತ್ತು ಜಯ-ಸೋಲುಗಳನ್ನು ಒಂದಾಗಿರಿಸಿಕೊಂಡು ಯುದ್ಧವನ್ನು ಮಾಡು. ಇದರಿಂದ ನೀನು ಪಾಪವನ್ನು ಪಡೆಯುವುದಿಲ್ಲ.
06024039a ಏಷಾ ತೇಽಭಿಹಿತಾ ಸಾಂಖ್ಯೇ ಬುದ್ಧಿರ್ಯೋಗೇ ತ್ವಿಮಾಂ ಶೃಣು।
06024039c ಬುದ್ಧ್ಯಾ ಯುಕ್ತೋ ಯಯಾ ಪಾರ್ಥ ಕರ್ಮಬಂಧಂ ಪ್ರಹಾಸ್ಯಸಿ।।
ಪಾರ್ಥ! ಇದು ಸಾಂಖ್ಯಯೋಗವು ಹೇಳಿರುವಂಥ ವಿಚಾರ. ಈಗ ಕರ್ಮಯೋಗವು ಹೇಳುವ ವಿಚಾರವನ್ನು ಕೇಳು. ಇದರಿಂದ ನೀನು ಕರ್ಮ ಬಂಧನದಿಂದ ಮುಕ್ತನಾಗುವೆ.
06024040a ನೇಹಾಭಿಕ್ರಮನಾಶೋಽಸ್ತಿ ಪ್ರತ್ಯವಾಯೋ ನ ವಿದ್ಯತೇ।
06024040c ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್।।
ಇದರಲ್ಲಿ ಪ್ರಯತ್ನವು ನಷ್ಟವಾಯಿತೆನ್ನುವುದಿಲ್ಲ ಅಥವಾ ಪ್ರಯತ್ನವು ಕೆಟ್ಟ ಪರಿಣಾಮವನ್ನು ನೀಡಿತು ಎನ್ನುವುದಿಲ್ಲ. ಈ ರೀತಿ ಸ್ವಲ್ಪವಾದರೂ ನಡೆದುಕೊಳ್ಳುವುದರಿಂದ ಮಹಾಭಯವನ್ನು ದೂರವಿರಿಸಿಕೊಳ್ಳಬಹುದು.
06024041a ವ್ಯವಸಾಯಾತ್ಮಿಕಾ ಬುದ್ಧಿರೇಕೇಹ ಕುರುನಂದನ।
06024041c ಬಹುಶಾಖಾ ಹ್ಯನಂತಾಶ್ಚ ಬುದ್ಧಯೋಽವ್ಯವಸಾಯಿನಾಂ।।
ಕುರುನಂದನ! ಈ ನಡತೆಯಲ್ಲಿ ಇದು ಒಂದೇ ಒಂದು ವಿಚಾರವಿದೆ. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರಿಗೆ ಬಹುವಿಧದ, ಕೊನೆಯೇ ಇಲ್ಲದ ವಿಚಾರಗಳಿರುತ್ತವೆ.
06024042a ಯಾಮಿಮಾಂ ಪುಷ್ಪಿತಾಂ ವಾಚಂ ಪ್ರವದಂತ್ಯವಿಪಶ್ಚಿತಃ।
06024042c ವೇದವಾದರತಾಃ ಪಾರ್ಥ ನಾನ್ಯದಸ್ತೀತಿ ವಾದಿನಃ।।
06024043a ಕಾಮಾತ್ಮಾನಃ ಸ್ವರ್ಗಪರಾ ಜನ್ಮಕರ್ಮಫಲಪ್ರದಾಂ।
06024043c ಕ್ರಿಯಾವಿಶೇಷಬಹುಲಾಂ ಭೋಗೈಶ್ವರ್ಯಗತಿಂ ಪ್ರತಿ।।
ಪಾರ್ಥ! ಇದನ್ನು (ಕರ್ಮಯೋಗವನ್ನು) ತಿಳಿಯದವರು, ಸ್ವರ್ಗವನ್ನೇ ಪರಮ ಗುರಿಯನ್ನಾಗಿಸಿಕೊಂಡ ಕಾಮಾತ್ಮರು ವೇದದ ಪರವಾಗಿಯೇ ವಾದಿಸುತ್ತಾ ವೇದಕ್ಕೆ ಹೊರತಾಗಿ ಇನ್ನಿಲ್ಲ ಎಂದು ಜನ್ಮದ ಫಲವನ್ನು ಕೊಡುವ ಕರ್ಮದ ಕುರಿತು, ಭೋಗ ಐಶ್ವರ್ಯಗಳನ್ನು ನೀಡುವ ಬಹಳ ವಿಶೇಷ ಕ್ರಿಯೆಗಳ ಕುರಿತು ಹೂವಿನಂಥಹ ಮಾತುಗಳನ್ನು ಆಡುತ್ತಿರುತ್ತಾರೆ.
06024044a ಭೋಗೈಶ್ವರ್ಯಪ್ರಸಕ್ತಾನಾಂ ತಯಾಪಹೃತಚೇತಸಾಂ।
06024044c ವ್ಯವಸಾಯಾತ್ಮಿಕಾ ಬುದ್ಧಿಃ ಸಮಾಧೌ ನ ವಿಧೀಯತೇ।।
ಭೋಗೈಶ್ವರ್ಯದಲ್ಲಿಯೇ ಆಸಕ್ತರಾಗಿ ಆ ಮಾತುಗಳಿಂದ ಚೇತನವನ್ನೇ ಕಳೆದುಕೊಂಡವರ ಬುದ್ಧಿಗೆ ವ್ಯವಸಾಯಾತ್ಮಿಕವಾದ ಸಮಾಧಿಯೇ ಗೊತ್ತಿರುವುದಿಲ್ಲ.
06024045a ತ್ರೈಗುಣ್ಯವಿಷಯಾ ವೇದಾ ನಿಸ್ತ್ರೈಗುಣ್ಯೋ ಭವಾರ್ಜುನ।
06024045c ನಿರ್ದ್ವಂದ್ವೋ ನಿತ್ಯಸತ್ತ್ವಸ್ಥೋ ನಿರ್ಯೋಗಕ್ಷೇಮ ಆತ್ಮವಾನ್।।
ತ್ರಿಗುಣಗಳು ವೇದದ ವಿಷಯವಾಗಿವೆ. ಅರ್ಜುನ! ತ್ರಿಗುಣಗಳನ್ನು ಮೀರಿದವನಾಗು! ದ್ವಂದ್ವಗಳಿಲ್ಲದವನಾಗು. ನಿತ್ಯವೂ ಸತ್ತ್ವಗುಣದಲ್ಲಿರುವವನಾಗು. ಯೋಗ-ಕ್ಷೇಮವಿಲ್ಲದವನಾಗು28. ಆತ್ಮವಂತನಾಗು.
06024046a ಯಾವಾನರ್ಥ ಉದಪಾನೇ ಸರ್ವತಃ ಸಂಪ್ಲುತೋದಕೇ।
06024046c ತಾವಾನ್ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ।।
ತಿಳಿದಿರುವ ಬ್ರಾಹ್ಮಣನಿಗೆ ಎಲ್ಲಕಡೆಯೂ ನೀರಿನ ಪ್ರವಾಹವೇ ಇರುವಾಗ ಬಾವಿಯ ನೀರಿನ ಉಪಯೋಗವು ಎಷ್ಟೋ ಅಷ್ಟೇ ಎಲ್ಲವನ್ನೂ ತಿಳಿದಿರುವ ಬ್ರಾಹ್ಮಣನಿಗೆ ವೇದಗಳ ಉಪಯೋಗ.
06024047a ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾ ಚನ।
06024047c ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಽಸ್ತ್ವಕರ್ಮಣಿ।।
ಕರ್ಮಾಚರಣೆಯಲ್ಲಿ ಮಾತ್ರ ನಿನಗೆ ಅಧಿಕಾರವಿದೆ. ಅದರ ಫಲದ ಮೇಲೆಂದೂ ಇಲ್ಲ. ಫಲವನ್ನು ಕಾರಣವಾಗಿಟ್ಟುಕೊಂಡು ಕರ್ಮ ಮಾಡಬೇಡ. ಕರ್ಮವನ್ನು ಮಾಡದೆಯೂ ಇರಬೇಡ.
06024048a ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ।
06024048c ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ।।
ಧನಂಜಯ! ಬಾಂಧವ್ಯವನ್ನು ತೊರೆದು, ಸಿದ್ಧಿ-ಅಸಿದ್ಧಿಗಳಲ್ಲಿ ಸಮನಾಗಿದ್ದು, ಯೋಗಸ್ಥನಾಗಿ ಕರ್ಮಗಳನ್ನು ಮಾಡು. ಸಮತ್ವವನ್ನೇ ಯೋಗ ಎನ್ನುತ್ತಾರೆ.
06024049a ದೂರೇಣ ಹ್ಯವರಂ ಕರ್ಮ ಬುದ್ಧಿಯೋಗಾದ್ಧನಂಜಯ।
06024049c ಬುದ್ಧೌ ಶರಣಮನ್ವಿಚ್ಛ ಕೃಪಣಾಃ ಫಲಹೇತವಃ।।
ಧನಂಜಯ! ಕರ್ಮವು ಬುದ್ಧಿಯೋಗಕ್ಕಿಂತ ತುಂಬಾ ಕೀಳು. ಬುದ್ಧಿಯೋಗದಲ್ಲಿ ಶರಣು ಹೋಗು. ಫಲಕ್ಕಾಗಿ ಕರ್ಮಮಾಡುವವರು ಕೃಪಣರು.
06024050a ಬುದ್ಧಿಯುಕ್ತೋ ಜಹಾತೀಹ ಉಭೇ ಸುಕೃತದುಷ್ಕೃತೇ।
06024050c ತಸ್ಮಾದ್ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಂ।।
ಬುದ್ಧಿಯುಕ್ತನಾದವನು ಸುಕೃತ ದುಷ್ಕೃತಗಳೆರಡನ್ನೂ ತೊರೆಯುತ್ತಾನೆ29. ಆದುದರಿಂದ ಯೋಗವನ್ನು ಅಳವಡಿಸಿಕೋ. ಕರ್ಮದಲ್ಲಿ ಕೌಶಲ್ಯದಿಂದಿರುವುದೇ ಯೋಗ.
06024051a ಕರ್ಮಜಂ ಬುದ್ಧಿಯುಕ್ತಾ ಹಿ ಫಲಂ ತ್ಯಕ್ತ್ವಾ ಮನೀಷಿಣಃ।
06024051c ಜನ್ಮಬಂಧವಿನಿರ್ಮುಕ್ತಾಃ ಪದಂ ಗಚ್ಛಂತ್ಯನಾಮಯಂ।।
ತಿಳಿದವರು ಬುದ್ಧಿಯುಕ್ತರಾಗಿ ಕರ್ಮದಿಂದುಂಟಾದ ಫಲವನ್ನು ತ್ಯಜಿಸಿ ಜನ್ಮಬಂಧನದಿಂದ ಬಿಡುಗಡೆ ಹೊಂದಿ ಅನಾಮಯ30 ಪದವನ್ನು ಪಡೆಯುತ್ತಾರೆ.
06024052a ಯದಾ ತೇ ಮೋಹಕಲಿಲಂ ಬುದ್ಧಿರ್ವ್ಯತಿತರಿಷ್ಯತಿ।
06024052c ತದಾ ಗಂತಾಸಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯ ಚ।।
ಯಾವಾಗ ಮನಸ್ಸಿನ ಕಿಲುಬು ತೊಗಲುವುದೋ ಆಗ ನೀನು ಕೇಳಿದ್ದರ ಮತ್ತು ಮುಂದೆ ಕೇಳಬಹುದಾದುದರ ಯತಾರ್ಥ ತಿಳುವಳಿಕೆಯನ್ನು ಪಡೆಯುವೆ.
06024053a ಶ್ರುತಿವಿಪ್ರತಿಪನ್ನಾ ತೇ ಯದಾ ಸ್ಥಾಸ್ಯತಿ ನಿಶ್ಚಲಾ।
06024053c ಸಮಾಧಾವಚಲಾ ಬುದ್ಧಿಸ್ತದಾ ಯೋಗಮವಾಪ್ಸ್ಯಸಿ।।
ಈಗ ಕೇಳಿದುದರ ಗೊಂದಲಗಳಿಂದ ಯಾವಾಗ ನೀನು ನಿಶ್ಚಲವಾಗಿ ನಿಲ್ಲುತ್ತೀಯೋ ಮತ್ತು ಸಮಾಧಾನದಿಂದ ಅಚಲ ಬುದ್ಧಿಯವನಾಗುತ್ತೀಯೋ ಆಗ ಯೋಗವನ್ನು ಹೊಂದುತ್ತೀಯೆ.”
06024054 ಅರ್ಜುನ ಉವಾಚ।
06024054a ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ।
06024054c ಸ್ಥಿತಧೀಃ ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಂ।।
ಅರ್ಜುನನು ಹೇಳಿದನು: “ಕೇಶವ! ಸಮಾಧಿಯಲ್ಲಿರುವ ಸ್ಥಿತಪ್ರಜ್ಞನ ವ್ಯಾಖ್ಯೆ ಏನು? ಸ್ಥಿತಬುದ್ದಿಯುಳ್ಳವನ ಮಾತು ಹೇಗಿರುತ್ತದೆ? ಅವನು ಹೇಗೆ ಕುಳಿತಿರುತ್ತಾನೆ? ಓಡಾಡುತ್ತಿರುತ್ತಾನೆ?”
06024055 ಶ್ರೀಭಗವಾನುವಾಚ।
06024055a ಪ್ರಜಹಾತಿ ಯದಾ ಕಾಮಾನ್ಸರ್ವಾನ್ಪಾರ್ಥ ಮನೋಗತಾನ್।
06024055c ಆತ್ಮನ್ಯೇವಾತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ।।
ಶ್ರೀಭಗವಾನನು ಹೇಳಿದನು: “ಪಾರ್ಥ! ಮನೋಗತಗಳಾದ ಎಲ್ಲ ಕಾಮಗಳನ್ನೂ ಸಂಪೂರ್ಣವಾಗಿ ತೊರೆದಾಗ, ಆತ್ಮನು ಆತ್ಮನಲ್ಲಿಯೇ ತುಷ್ಟನಾದಾಗ, ಸ್ಥಿತಪ್ರಜ್ಞ ಎಂದು ಕರೆಯಲ್ಪಡುತ್ತಾನೆ.
06024056a ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ।
06024056c ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ।।
ದುಃಖಗಳಲ್ಲಿ ಕುಗ್ಗದ ಮತ್ತು ಸುಖಗಳಲ್ಲಿ ಹಿಗ್ಗದ ಮನಸ್ಸುಳ್ಳ, ರಾಗ, ಭಯ ಮತ್ತು ಕ್ರೋಧಗಳನ್ನು ಕಳೆದುಕೊಂಡ ಮುನಿಯನ್ನು ಸ್ಥಿತಪ್ರಜ್ಞನೆಂದು ಹೇಳುತ್ತಾರೆ.
06024057a ಯಃ ಸರ್ವತ್ರಾನಭಿಸ್ನೇಹಸ್ತತ್ತತ್ಪ್ರಾಪ್ಯ ಶುಭಾಶುಭಂ।
06024057c ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ।।
ಅವನ ಪ್ರಜ್ಞೆಯು ಎಲ್ಲಿಯೂ ಯಾವುದರೊಂದಿಗೂ ಅಂಟಿಕೊಳ್ಳದೇ ಪ್ರತಿಷ್ಠಿತವಾಗಿರುತ್ತದೆ. ಎಲ್ಲಿಂದಲೂ ಯಾವುದನ್ನೂ, ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದಾಗಿರಲಿ. ಬಂದಿತೆಂದು ಸಂತೋಷಪಡುವುದಿಲ್ಲ ಅಥವಾ ಬೇಡವೆಂದು ತಿರಸ್ಕರಿಸುವುದಿಲ್ಲ.
06024058a ಯದಾ ಸಂಹರತೇ ಚಾಯಂ ಕೂರ್ಮೋಽಂಗಾನೀವ ಸರ್ವಶಃ।
06024058c ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ।।
ಯಾವಾಗ ಇವನು ಇಂದ್ರಿಯಗಳನ್ನು ಸಂಪೂರ್ಣವಾಗಿ ಆಮೆಯು ತನ್ನ ಅಂಗಗಳನ್ನು ಹೇಗೋ ಹಾಗೆ ಒಳಗೆ ಎಳೆದುಕೊಳ್ಳುತ್ತಾನೋ ಆಗ ಅವನ ಪ್ರಜ್ಞೆಯು ಪ್ರತಿಷ್ಠಿತವಾಗಿರುತ್ತದೆ.
06024059a ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ।
06024059c ರಸವರ್ಜಂ ರಸೋಽಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ।।
ನಿರಾಹಾರಿಯಾದ31 ದೇಹಿಗೆ ವಿಷಯಸುಖಗಳು ದೂರವಾಗುತ್ತವೆ. ಪರವನ್ನು ಕಂಡವನಿಗೆ ರುಚಿಯೂ ಕೂಡ ಬೇಡವಾಗುತ್ತದೆ.
06024060a ಯತತೋ ಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ।
06024060c ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ।।
ಕೌಂತೇಯ! ಪಂಡಿತನಾದ ಮನುಷ್ಯನು ಪ್ರಯತ್ನಿಸಿದರೂ ಕೂಡ ಇಂದ್ರಿಯಗಳು ಹುಚ್ಚೆದ್ದರೆ ಮನಸ್ಸನ್ನು ಬಲಾತ್ಕಾರವಾಗಿ ಕಿತ್ತುಕೊಳ್ಳುತ್ತವೆ.
06024061a ತಾನಿ ಸರ್ವಾಣಿ ಸಂಯಮ್ಯ ಯುಕ್ತ ಆಸೀತ ಮತ್ಪರಃ।
06024061c ವಶೇ ಹಿ ಯಸ್ಯೇಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ।।
ನನ್ನಲ್ಲಿ ಯುಕ್ತನಾಗಿ ಅವೆಲ್ಲವನ್ನೂ ನಿಯಂತ್ರಿಸಬೇಕು. ಯಾರ ಇಂದ್ರಿಯಗಳು ಅವನ ವಶದಲ್ಲಿರುತ್ತದೆಯೋ ಅವನ ಪ್ರಜ್ಞೆಯು ಪ್ರತಿಷ್ಠಿತವಾಗಿರುತ್ತದೆ.
06024062a ಧ್ಯಾಯತೋ ವಿಷಯಾನ್ಪುಂಸಃ ಸಂಗಸ್ತೇಷೂಪಜಾಯತೇ।
06024062c ಸಂಗಾತ್ಸಂಜಾಯತೇ ಕಾಮಃ ಕಾಮಾತ್ಕ್ರೋಧೋಽಭಿಜಾಯತೇ।।
06024063a ಕ್ರೋಧಾದ್ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ।
06024063c ಸ್ಮೃತಿಭ್ರಂಶಾದ್ಬುದ್ಧಿನಾಶೋ ಬುದ್ಧಿನಾಶಾತ್ಪ್ರಣಶ್ಯತಿ।।
ಮನುಷ್ಯನು ವಿಷಯಗಳಲ್ಲಿ ಧ್ಯಾನವಿಟ್ಟಿರುವುದರಿಂದ ಅವುಗಳ ಜೊತೆ ಅಂಟಿಕೊಳ್ಳುತ್ತಾನೆ. ಅಂಟಿಕೊಳ್ಳುವುದರಿಂದ ಕಾಮವು ಹುಟ್ಟುತ್ತದೆ, ಕಾಮದಿಂದ ಕ್ರೋಧವು ಹುಟ್ಟುತ್ತದೆ. ಕ್ರೋಧದಿಂದ ಸಮ್ಮೋಹವುಂಟಾಗುತ್ತದೆ, ಸಮ್ಮೋಹದಿಂದ ಸ್ಮೃತಿವಿಭ್ರಮವಾಗುತ್ತದೆ. ಸ್ಮೃತಿಭ್ರಂಶದಿಂದ ಬುದ್ಧಿನಾಶವಾಗುತ್ತದೆ, ಬುದ್ಧಿನಾಶದಿಂದ ಅವನು ನಾಶಹೊಂದುತ್ತಾನೆ.
06024064a ರಾಗದ್ವೇಷವಿಯುಕ್ತೈಸ್ತು ವಿಷಯಾನಿಂದ್ರಿಯೈಶ್ಚರನ್।
06024064c ಆತ್ಮವಶ್ಯೈರ್ವಿಧೇಯಾತ್ಮಾ ಪ್ರಸಾದಮಧಿಗಚ್ಛತಿ।।
ಆದರೆ ರಾಗ-ದ್ವೇಶಗಳಿಂದ ಮುಕ್ತವಾದ, ಅತ್ಮದ ವಶದಲ್ಲಿರುವು ಇಂದ್ರಿಯಗಳ ಮೂಲಕ ವಿಷಯಗಳನ್ನು ಪರಿಗ್ರಹಿಸಿದರೆ ಅವನು ಪ್ರಸಾದವನ್ನು ಹೊಂದುತ್ತಾನೆ.
06024065a ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಯೋಪಜಾಯತೇ।
06024065c ಪ್ರಸನ್ನಚೇತಸೋ ಹ್ಯಾಶು ಬುದ್ಧಿಃ ಪರ್ಯವತಿಷ್ಠತೇ।।
ಪ್ರಸಾದದಿಂದ ಸರ್ವದುಃಖಗಳ ಹರಣವಾಗುತ್ತದೆ. ಯಾಕೆಂದರೆ ಪ್ರಸನ್ನಚೇತಸನ ಬುದ್ಧಿಯು ನೆಲೆಯಲ್ಲಿ ನಿಂತಿರುತ್ತದೆ.
06024066a ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ।
06024066c ನ ಚಾಭಾವಯತಃ ಶಾಂತಿರಶಾಂತಸ್ಯ ಕುತಃ ಸುಖಂ।।
ಬುದ್ಧಿಯು ನೆಲೆಯಿಲ್ಲದವನಲ್ಲಿ ಯುಕ್ತಭಾವನೆಯು ಇರುವುದಿಲ್ಲ. ಯುಕ್ತಭಾವನೆಯಿಲ್ಲದವನಿಗೆ ಶಾಂತಿಯೆನ್ನುವುದಿರುವುದಿಲ್ಲ. ಶಾಂತಿಯಿಲ್ಲದವನಿಗೆ ಸುಖವು ಎಲ್ಲಿಂದ?
06024067a ಇಂದ್ರಿಯಾಣಾಂ ಹಿ ಚರತಾಂ ಯನ್ಮನೋಽನುವಿಧೀಯತೇ।
06024067c ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವಮಿವಾಂಭಸಿ।।
ಯಾರ ಮನಸ್ಸು ಅಲೆಯುವ ಇಂದ್ರಿಯಗಳನ್ನೇ ಅನುಸರಿಸಿ ಹೋಗುತ್ತದೆಯೋ ಅದು ಅವನ ಪ್ರಜ್ಞೆಯನ್ನು ನೀರಿನಲ್ಲಿ ದೋಣಿಯನ್ನು ಗಾಳಿಯು ಹೇಗೋ ಹಾಗೆ ತೇಲಿಸುತ್ತದೆ.
06024068a ತಸ್ಮಾದ್ಯಸ್ಯ ಮಹಾಬಾಹೋ ನಿಗೃಹೀತಾನಿ ಸರ್ವಶಃ।
06024068c ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ।।
ಮಹಾಬಾಹೋ! ಆದುದರಿಂದ ಇಂದ್ರಿಯಗಳೆಲ್ಲವನ್ನೂ ಅವುಗಳ ವಿಷಯಗಳಿಂದ ಹಿಂದೆ ಎಳೆದುಕೊಂಡಿರುವವನ ಪ್ರಜ್ಞೆಯು ಪ್ರತಿಷ್ಠಿತವಾಗಿರುತ್ತದೆ.
06024069a ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ।
06024069c ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ।।
ಅಂಥಹ ಸಂಯಮಿ ಮುನಿಯು ಸರ್ವಭೂತಗಳಿಗೂ ಕತ್ತಲೆಯೆನಿಸಿರುವಾಗ ಎಚ್ಚರದಿಂದಿರುತ್ತಾನೆ ಮತ್ತು ಭೂತಗಳು ಎಚ್ಚರದಿಂದಿರುವಾಗ ರಾತ್ರಿಯನ್ನು ಕಾಣುತ್ತಾನೆ.
06024070a ಆಪೂರ್ಯಮಾಣಮಚಲಪ್ರತಿಷ್ಠಂ ಸಮುದ್ರಮಾಪಃ ಪ್ರವಿಶಂತಿ ಯದ್ವತ್।
06024070c ತದ್ವತ್ಕಾಮಾ ಯಂ ಪ್ರವಿಶಂತಿ ಸರ್ವೇ ಸ ಶಾಂತಿಮಾಪ್ನೋತಿ ನ ಕಾಮಕಾಮೀ।।
ಎಲ್ಲೆಡೆಯಿಂದ ನೀರು ಹರಿದುಬಂದು ಸೇರಿದರೂ ಸಮುದ್ರವು ಅಚಲವಾಗಿರುವಂತೆ ಎಲ್ಲ ಕಾಮಗಳು ಪ್ರವೇಶಿಸಿದರೂ ಅಚಲವಾಗಿರುವವನಿಗೆ ಶಾಂತಿ ದೊರೆಯುತ್ತದೆ. ವಿಷಯಗಳಲ್ಲಿ ಕಾಮವನ್ನಿಟ್ಟಿರುವವನಿಗಲ್ಲ.
06024071a ವಿಹಾಯ ಕಾಮಾನ್ಯಃ ಸರ್ವಾನ್ಪುಮಾಂಶ್ಚರತಿ ನಿಃಸ್ಪೃಹಃ।
06024071c ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗಚ್ಛತಿ।।
ಸರ್ವ ಕಾಮಗಳನ್ನೂ ತೊರೆದು ಯಾವುದಕ್ಕೂ ಅಂಟಿಕೊಳ್ಳದೇ ಎಲ್ಲಕಡೆ ಸಂಚರಿಸುತ್ತಿರುವವನಿಗೆ, ಹಾಗೂ ಇದು ನಾನು ಮತ್ತು ನನ್ನದು ಎಂಬ ಅಹಂಕಾರವಿಲ್ಲದೇ ಇದ್ದವನಿಗೆ ಶಾಂತಿಯು ದೊರೆಯುತ್ತದೆ.
06024072a ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ ನೈನಾಂ ಪ್ರಾಪ್ಯ ವಿಮುಹ್ಯತಿ।
06024072c ಸ್ಥಿತ್ವಾಸ್ಯಾಮಂತಕಾಲೇಽಪಿ ಬ್ರಹ್ಮನಿರ್ವಾಣಂ ಋಚ್ಛತಿ।।
ಪಾರ್ಥ! ಇದೇ ಬ್ರಾಹ್ಮೀ ಸ್ಥಿತಿ. ಇದನ್ನು ಹೊಂದಿದವನು ವಿಮುಹ್ಯನಾಗುವುದಿಲ್ಲ. ಅಂತ್ಯಕಾಲದಲ್ಲಿ ಕೂಡ ಈ ಸ್ಥಿತಿಯನ್ನು ಹೊಂದಿದವನು ಬ್ರಹ್ಮನಿರ್ವಾಣವನ್ನು ಪಡೆಯುತ್ತಾನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಸಾಂಖ್ಯಯೋಗೋ ನಾಮ ದ್ವಿತೀಯೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಸಾಂಖ್ಯಯೋಗವೆಂಬ ಎರಡನೇ ಅಧ್ಯಾಯವು.
ಭೀಷ್ಮ ಪರ್ವಣಿ ಚತುರ್ವಿಂಶೋಽಧ್ಯಾಯಃ।।
ಭೀಷ್ಮ ಪರ್ವದಲ್ಲಿ ಇಪ್ಪತ್ನಾಲ್ಕನೇ ಅಧ್ಯಾಯವು.
-
ಅನಾರ್ಯಜುಷ್ಟಂ ಎಂದರೆ ‘ಕೀಳುಜನರಿಂದ ಮಾಡಲ್ಪಡುವ ಕಾರ್ಯವನ್ನು ಮಾಡುತ್ತಿರುವೆ’ ಎಂದರ್ಥ. ಆರ್ಯಶಬ್ಧದ ಅರ್ಥ ಈ ರೀತಿಯಿದೆ: ಕರ್ತವ್ಯಮಾಚರನ್ನಾರ್ಯಮಕರ್ತವ್ಯಮನಾಚರನ್| ತಿಷ್ಠತಿ ಪ್ರಕೃತಾಚಾರೇ ಸ ಆರ್ಯ ಇತಿ ವೈ ಸ್ಮೃತಃ|| ಕರ್ತವ್ಯವನ್ನು ಬಿಡದೇ ನಿಷಿದ್ಧವಾದುದನ್ನು ಮಾಡದೇ ಧರ್ಮಸಮ್ಮತ ಆಚಾರ-ವ್ಯವಹಾರಗಳಲ್ಲಿ ಇರುವವನಿಗೆ ಆರ್ಯ ಎಂದು ಹೆಸರು. ↩︎
-
ಸ್ವಾಮಿ ವಿವೇಕಾನಂದರು ಈ ಶ್ಲೋಕದ ಮತ್ತು ಮುಂದಿನದರ ಪ್ರಾಮುಖ್ಯತೆಯನ್ನು ನಿರೂಪಿಸುತ್ತಾ “ನೀವು ಗೀತೆಯಲ್ಲಿ ಇನ್ನು ಏನನ್ನೂ ಓದಬೇಕಾಗಿಲ್ಲ. “ಕುತಸ್ತ್ವಾ ಕಶ್ಮಲಮಿದಂ, ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ” ಎಂಬ ಈ ಎರಡು ಶ್ಲೋಕಗಳನ್ನು ಪಾರಾಯಣಮಾಡಿ ಅದರಲ್ಲಿರುವ ಅರ್ಥವನ್ನು ಮನನ ಮಾಡಿದರೆ ಸಾಕು. ಇಡೀ ಗೀತೆಯ ಬೋಧನೆಯ ಸಾರವೇ ಈ ಎರಡು ಶ್ಲೋಕಗಳಲ್ಲಿ ಅಡಕವಾಗಿದೆ” ಎಂದು ಹೇಳಿದ್ದಾರೆ. ↩︎
-
ಭೀಷ್ಮ-ದ್ರೋಣಾದಿಗಳು ಅಶೋಚ್ಯರು ಎಂದರೆ ಶೋಕಕ್ಕೆ ತಕ್ಕವರಲ್ಲ. ಅಂದರೆ ಅವರು ಯಾವಾಗಲೂ ಇರುವಂಥವರು. ಅವರು ಹಿಂದೆ ಇರಲಿಲ್ಲ ಅಥವಾ ಮುಂದೆ ಇರುವುದಿಲ್ಲ ಎಂಬುದಿಲ್ಲ. ↩︎
-
ಅಜಾಯಮಾನೋ ಬಹುಧಾ ವಿಜಾಯತೇ| ತಸ್ಯ ಧೀರಾಃ ಪರಿಜಾನಂತಿ ಯೋನಿಂ|| ಎಂಬ ಪುರುಷಸೂಕ್ತದ ವಾಕ್ಯದಂತೆ ಹುಟ್ಟದೆಯೇ ಇರುವವನು ಅನೇಕ ಪ್ರಕಾರವಾಗಿ ಹುಟ್ಟುತ್ತಾನೆ. ಇದರ ರಹಸ್ಯವನ್ನು ಜ್ಞಾನಿಗಳಾದವರು ತಿಳಿದುಕೊಂಡಿರುತ್ತಾರೆ. ↩︎
-
ಹಿಂದಿನ ಶ್ಲೋಕದಲ್ಲಿ ಹೇಳಿದಂತೆ ದೇಹಾಂತರಪ್ರಾಪ್ತಿಗೆ ಜ್ಞಾನಿಯಾದವನು ವಿಮೋಹಿತನಾಗಿರದಿದ್ದರೆ ಈ ದೇಹದಲ್ಲಿ ಅನುಭವವಾಗುವ ಶೀತ-ಉಷ್ಣ-ಸುಖ-ದುಃಖಗಳ್ಯಾವವು? ಆತ್ಮ ಜ್ಞಾನಿಗೆ ಶೀತೋಷ್ಣ ಸುಖದುಃಖಗಳ ಪರಿವೆಯೇ ಇರುವುದಿಲ್ಲವೇ? ಈ ಸಂದೇಹಗಳಿಗೆ ಉತ್ತರವಾಗಿ ಈ ಶ್ಲೋಕವಿದೆ. ↩︎
-
ಮಾತ್ರಾಸ್ಪರ್ಶಃ ಎಂದರೆ ತನ್ಮಾತ್ರಗಳಾದ ಶಬ್ಧ-ಸ್ಪರ್ಶ-ರೂಪ-ರಸ-ಗಂಧಗಳು ಅವಕ್ಕೆ ಸಂಬಂಧಿಸಿದ ಇಂದ್ರಿಯಗಳೊಡನೆ - ಕಿವಿ, ಚರ್ಮ, ಕಣ್ಣು, ನಾಲಿಗೆ, ಮತ್ತು ಮೂಗು ಇವುಗಳೊಡನೆ ಸಂಪರ್ಕಿಸಿದಾಗ ಮನುಷ್ಯನು ಅನುಭವಿಸುವ ಶೀತ-ಉಷ್ಣ-ಸುಖ-ದುಃಖಗಳು. ↩︎
-
ಮೊದಲು-ಕೊನೆಗಳಿರುವ ಅನುಭವಗಳು ನಿತ್ಯವಲ್ಲದ್ದು ಅಥವಾ ಕ್ಷಣಿಕ ಎಂದೇ ತಿಳಿಯಬೇಕು. ↩︎
-
ಈ ದೇಹಕ್ಕಾಗುವ ಅನುಭವಗಳು ಇಂದ್ರಿಯಜನ್ಮವಾದವುಗಳು. ಬಂದು-ಹೋಗತಕ್ಕವುಗಳು. ಅಶಾಶ್ವತವಾದವುಗಳು. ಅವುಗಳನ್ನು ಸಹಿಸಿಕೊಳ್ಳಲೇ ಬೇಕಾಗುತ್ತದೆ. ↩︎
-
ಧಿಯಃ ರಾಂತೀತಿ ಧೀರಾಃ – ಬುದ್ಧಿಯ ಮೇಲೆ ಪೂರ್ಣ ಅಧಿಕಾರವುಳ್ಳವನು ಧೀರ. ↩︎
-
ಹುಟ್ಟು-ಸಾವುಗಳಿಂದ ಮುಕ್ತಿ ↩︎
-
ಅಸತ್ ಎನ್ನುವ ಶಬ್ಧಕ್ಕೆ ಅನೇಕ ಅರ್ಥಗಳಿವೆ: (೧) ಇರುವುದಲ್ಲದ್ದು (೨) ನಿಜವಾದ ಇರುವಿಕೆಯಿಲ್ಲದ್ದು (೩) ತೋರಿಕೆಯದು (೪) ವಾಸ್ತವವಾಗಿ ಸ್ವಶಕ್ತಿ ಬಲದಿಂದ ಇರದೇ ಮತ್ತೊಂದರ ಆಶ್ರಯದಿಂದ ನಮ್ಮ ಇಂದ್ರಿಯಗಳಿಗೆ ಕಿಂಚಿತ್ಕಾಲ ಮಾತ್ರ ಯಾವುದು ತಿಳಿದುಬರುತ್ತದೆಯೋ ಅದು (೫) ಗೂಢವಾಗಿರುವ ಪದಾರ್ಥ – ವಾಸ್ತವದಲ್ಲಿ ಇರುವುದಾದರೂ ನಮ್ಮ ಪಾಲಿಗೆ ಇಲ್ಲವೆಂಬಂತೆ ತೋರುವುದು. ಅಗೋಚರವಾದುದು. ಅವ್ಯಕ್ತವಾದುದು. (೬) ಸಾಧುವಲ್ಲದ್ದು, ಕೆಟ್ಟದ್ದು. ↩︎
-
ಯಾವುದು ಈಗ ಇದ್ದುದು ಮುಂದೆ ಇರುವುದಿಲ್ಲವೋ ಅದು ಸತ್ಯವಲ್ಲ. ಇಂದ್ರಿಯ-ವಿಷಯಸಂಪರ್ಕದಿಂದ ಉಂಟಾಗುವ ಶೀತೋಷ್ಣ-ಸುಖದುಃಖ ಅನುಭವಗಳು ಈಗ ಇದ್ದು ನಂತರ ಇಲ್ಲದಾಗುವುದುದರಿಂದ – ಕ್ಷಣಿಕವಾಗಿರುವುದುದರಿಂದ – ಸತ್ಯವಾದವುಗಳಲ್ಲ. ಅದರಂತೆಯೇ ದೇಹವೂ ಕೂಡ ಈಗ ಇದ್ದು ಮುಂದೆ ಇಲ್ಲವಾಗುವುದರಿಂದ ಸತ್ಯವಾದುದಲ್ಲ. ↩︎
-
ಸತ್ ಎನ್ನುವ ಶಬ್ಧಕ್ಕೂ ಅನೇಕ ಅರ್ಥಗಳಿವೆ: (೧) ಇರುವುದು (೨) ಸತ್ಯವಾದುದು (೩) ಗೋಚರವಾಗಿರುವ ಪದಾರ್ಥ. ಯಾವುದು ಇದೆಯೆಂದು ನಮಗೆ ಗೊತ್ತಾಗಿದೆಯೋ ಅದು ಸತ್. (೪) ಒಳ್ಳೆಯದು, ಸಾಧುವಾದದ್ದು. ↩︎
-
ಯಾವುದು ಸದಾ ಇರುವುದೋ ಅಂದರೆ ಯಾವುದು ಈಗ ಇದ್ದು ಮುಂದೆಯೂ ಕೂಡ ಇರುತ್ತದೆಯೋ ಅದು ಮಾತ್ರ ಸತ್ಯ. ಅಂದರೆ – ಈ ದೇಹ ಮತ್ತು ಶಾರೀರಿಕ ಅನುಭವಗಳನ್ನು ಅನುಭವಿಸುವ ಆತ್ಮವು ಯಾವಾಗಲೂ ಇರುವುದರಿಂದ ಅದು ಮಾತ್ರ ಸತ್ಯವಾದುದು. ↩︎
-
ಸತ್ ಮತ್ತು ಅಸತ್ ಎರಡೂ ↩︎
-
ಯಾವುದು ಈ ಸರ್ವವನ್ನೂ ವ್ಯಾಪಿಸಿಕೊಂಡಿರುವುದೋ ಅದು ಎಂದೂ ಅರ್ಥವಿದೆ. ↩︎
-
ಅನಾಶಿನಿ ಎಂದರೆ ಅವಿನಾಶೀ – ನಾಶಹೊಂದದೇ ಇರುವಂಥದ್ದು. ಯಾವುದಕ್ಕೆ ಹುಟ್ಟಿಲ್ಲವೋ ಅದಕ್ಕೆ ನಾಶವೂ ಇಲ್ಲ. ಸ್ವಭಾವತಃ ಇದು ನಾಶಹೊಂದುವಂಥಹುದಲ್ಲ. ಇಂಥಹ ಅವಿನಾಶೀ ಆತ್ಮಕ್ಕೆ ಅಂತವಂತ ದೇಹಗಳು ಅಂಟಿಕೊಂಡಿರುತ್ತವೆ. ↩︎
-
ಅಪ್ರಮೇಯ ಎಂದರೆ ಅಳತೆಗೆ ಸಿಗದಂಥಹುದು ಅಂದರ್ಥ. ಶರೀರವು ಯಾವುದಕ್ಕೆ ಸೇರಿರುವುದೋ ಆ ಅತ್ಮನ ಸ್ವರೂಪವನ್ನು ಪ್ರತ್ಯಕ್ಷಾದಿ ಪ್ರಮಾಣಗಳಿಂದ ನಿಶ್ಚಯಿಸಲಾಗುವುದಿಲ್ಲ. ↩︎
-
ಅಂತವಂತ: ಈ ಶರೀರಕ್ಕೆ ಕೊನೆ ತಪ್ಪಿದ್ದಿಲ್ಲ. ಅಂತ್ಯಗೊಳ್ಳುವುದೇ ಇದರ ಸ್ವಭಾವ ಗುಣ. ಕೆಲವು ಅರ್ಥಕಾರರು ಅಂತವಂತ ಶಬ್ಧಕ್ಕೆ ಅಂತರವಿರತಕ್ಕವುಗಳು ಅಂದರೆ ಒಂದರ ನಂತರ ಇನ್ನೊಂದು ಬರುವಂಥವುಗಳು ಎಂದೂ ಅರ್ಥೈಸಿದ್ದಾರೆ. ↩︎
-
ಹುಟ್ಟುವುದು ಎಂದರೆ ಹಿಂದೆ ಇರಲಿಲ್ಲ, ಈಗ ಇದೆ ಎಂದರ್ಥ. ಇದು ದೇಹಕ್ಕೆ ಅನ್ವಯಿಸುವುದೇ ಹೊರತು ಆತ್ಮಕ್ಕೆ ಅನ್ವಯಿಸುವುದಿಲ್ಲ. ಮಗುವು ಹುಟ್ಟಿತು ಎಂದರೆ ಶರೀರವು ಕಾಣಿಸಿಕೊಂಡಿತು ಎಂದು. ಹುಟ್ಟಿದ ಶರೀರಕ್ಕೆ ಮರಣವುಂಟು. ಯಾವಾಗ ಒಂದು ವಸ್ತುವಿಗೆ ಹುಟ್ಟೇ ಇಲ್ಲವೋ ಅದಕ್ಕೆ ಮರಣವೂ ಇಲ್ಲ. ಆ ವಸ್ತುವೇ ಆತ್ಮವಸ್ತು. ಅದು ಹುಟ್ಟುವುದೂ ಇಲ್ಲ; ಸಾಯುವುದೂ ಇಲ್ಲ. ಹಾಗಾದರೆ ಅದು ಇಲ್ಲವೇ ಇಲ್ಲವೋ? ಎಂದರೆ ಹಾಗಲ್ಲ. ನ ಮ್ರಿಯತೇ ವಾ ಕದಾಚಿತ್ ಹುಟ್ಟದಿದ್ದರೂ ಅದು ಇದೆ ಎಂಬುದನ್ನು ಹೇಳುವ ಸಲುವಾಗಿ ಶ್ರೀಕೃಷ್ಣನು ಇದನ್ನು ಹೇಳಿದ್ದಾನೆ. ಶರೀರವು ಹೋದರೆ ಶರೀರಿಯು ನಾಶಹೊಂದುವುದಿಲ್ಲ. ಮಡಿಕೆಗಳು ಒಡೆದುಹೋಗಬಹುದು. ಮಡಿಕೆಗಳಲ್ಲಿರುವ ಆಕಾಶವು ನಾಶವಾಗುವುದಿಲ್ಲ. ದೇಹದೊಳಗೆ ಸೇರಿಕೊಂಡ ಆತ್ಮವು - ಇಂದ್ರಿಯ, ಬುದ್ಧಿ, ಮನಸ್ಸು – ಈ ಕರಣಗಳ ಮೂಲಕ ಕೆಲಸಮಾಡುತ್ತಿರುತ್ತದೆ. ಕರಣಗಳು ನಶವಾದರೂ (ಕಣ್ಣು ಕಾಣಿಸದಿದ್ದರೂ, ಕಿವಿ ಕೇಳಿಸದಿದ್ದರೂ) ಆತ್ಮವು ಯಥಾರೂಪವಾಗಿ ಇದ್ದೇ ಇರುತ್ತದೆ. ಬೆಳಕು ನೀಡುವ ಉಪಕರಣ (ಬಲ್ಬ್) ಕೆಟ್ಟುಹೋದರೆ ವಿದ್ಯುಚ್ಛಕ್ತಿಯೇ ನಾಶವಾಯಿತು ಎಂದಾಗುವುದಿಲ್ಲ. ಅಂತೆಯೇ ದೇಹವು ವಿನಾಶಹೊಂದಬಹುದು. ಆತ್ಮವು ನಾಶವಾಗುವುದಿಲ್ಲ. ಹುಟ್ಟು, ಬಾಲ್ಯ, ಯೌವನ, ವಾರ್ಧಕ್ಯ, ಜನ್ಮಾಂತರ - ಇವೇ ಮುಂತಾಗಿ ಆತ್ಮನು ವೇಷವನ್ನು ಬದಲಾಯಿಸುತ್ತಾ ಹೋಗುವನು. ವೇಷಗಳಿಗೆ ಒಂದು ಆದಿ ಒಂದು ಅಂತ್ಯವೆಂಬುದಿದೆ. ಆದರೆ ವೇಷ ಹಾಕಿಕೊಳ್ಳುವವನಿಗೆ ಆದಿಯು ಇಲ್ಲ. ಅಂತ್ಯವೂ ಇಲ್ಲ. ಅವನು ಪುರಾಣ ಪುರುಷ. ಬಹಳ ಹಿಂದಿನವನು. ಅವನಿಲ್ಲದ ಕಾಲವೇ ಇಲ್ಲ. ಕಾಲದ ಎಷ್ಟು ಹಿಂದೆ ಹೋದರೂ ಅವನಿರುವನು. ಅವನು ಮೊದಲು; ಆಮೇಲೆ ಕಾಲ-ದೇಶಗಳು. ಆದುದರಿಂದಲೇ ಅವನನ್ನು ಕಲಾತೀತನೆಂದು ಕರೆಯುತ್ತಾರೆ. ನೀರಿನ ಮೇಲಿನ ಗುಳ್ಳೆಯಂತೆ ಈ ಶರೀರ. ಗುಳ್ಳೆಯ ಹಿಂದೆ ನೀರಿದೆ. ಶರೀರದ ಹಿಂದೆ ಆತ್ಮನಿದ್ದಾನೆ. ಗುಳ್ಳೆಗಳು ಒಡೆಯಿತೆಂದರೆ ನೀರು ಇಲ್ಲದೇ ಹೋಗುವುದಿಲ್ಲ. ಶರೀರವು ಹೋಯಿತೆಂದರೆ ಆತ್ಮನು ಹೋಗುವುದಿಲ್ಲ. ಅಸ್ಮಿನ್ ಮಂತ್ರೇ ಷಟ್ ಭಾವವಿಕಾರಾಃ ಲೌಕಿಕವಸ್ತುವಿಕ್ರಿಯಾಃ ಆತನಿ ಪ್ರತಿಷಿಧ್ಯಂತೇ| ಸರ್ಪಪ್ರಕಾರವಿಕ್ರಿಯಾರಹಿತಃ ಆತ್ಮಾ ಇತಿ ವಾಕ್ಯಾರ್ಥಃ - ಈ ಮಂತ್ರದಲ್ಲಿ ಲೋಕದ ವಸ್ತುಗಳಿಗಾಗುವ ಆರು ಭಾವವಿಕಾರಗಳು ಆತ್ಮನಲ್ಲಿರುವುದಿಲ್ಲವೆಂದು ಹೇಳಿರುತ್ತದೆ. ಈ ಆರು ಭಾವ ವಿಕಾರಗಳು - ಜಾಯತೇ (ಹುಟ್ಟುವುದು), ಅಸ್ತಿ (ಇರುವುದು), ವರ್ಧತೇ (ಬೆಳೆಯುವುದು), ಪರಿಣಮತೇ (ಮಾರ್ಪಡುವುದು), ಅಪಕ್ಷೀಯತೇ (ಸವೆಯುವುದು) ಮತ್ತು ವಿನಶ್ಯತಿ (ಹಾಳಾಗುವುದು). ಕಠೋಪನಿಷತ್ತಿನ ಎರಡನೆಯ ವಲ್ಲಿಯಲ್ಲಿ ಈ ಶ್ಲೋಕವೇ ಸ್ವಲ್ಪ ವ್ಯತ್ಯಾಸದಿಂದ ಹೇಳಲ್ಪಟ್ಟಿದೆ - ನ ಜಾಯತೇ ಮ್ರಿಯತೇ ವಾ ವಿಪಶ್ಚಿನ್ನಾಯಂ ಕುತಶ್ಚಿನ್ನ ಬಭೂವ ಕಶ್ಚಿತ್| ಅಜೋ ನಿತ್ಯಃ ಶಾಶ್ವತೋಽಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ|| ಆತ್ಮನು ಹುಟ್ಟುವುದೂ ಇಲ್ಲ; ಸಾಯುವುದೂ ಇಲ್ಲ. ಇವನು ಯಾವುದರಿಂದಲೂ ಹುಟ್ಟಲಿಲ್ಲ. ಇವನಿಂದ ಯಾರೂ ಹುಟ್ಟಲಿಲ್ಲ. ಇವನು ಜನ್ಮರಹಿತನು. ನಿತ್ಯನು. ಶಾಶ್ವತನು. ಪುರಾಣನು. ಶರೀರವು ನಾಶವಾಗುತ್ತಿದ್ದರೂ ಇವನು ನಾಶವಾಗುವುದಿಲ್ಲ. ಪುರಾಣಃ - ಹಿಂದೆಯೂ ಹೊಸದಾಗಿದ್ದವನು, ಸದಾಕಾಲದಲ್ಲಿಯೂ ಅಪೂರ್ವನಾಗಿ, ನಿತ್ಯನೂತನನೆಂದು ಅನುಭವಿಸಲ್ಪಡುವವನು. ಪುರಾಪಿ ನವಃ ಸರ್ವದಾ ಅಪೂರ್ವವತ್ ಅನುಭಾವ್ಯಃ ಎಂದು ಶ್ರೀರಾಮಾನುಜರು ವಿವರಣೆ ನೀಡಿದ್ದಾರೆ. ↩︎
-
ಆತ್ಮನ ನಿಜಸ್ಥಿತಿಯನ್ನು ತಿಳಿದುಕೊಂಡವನು ಯಾರನ್ನು (ಯಾವ ಆತ್ಮನನ್ನು) ಕೊಲ್ಲಿಸುತ್ತಾನೆ? ಯಾರನ್ನು (ಯಾವ ಆತ್ಮನನ್ನು) ಕೊಲ್ಲುತ್ತಾನೆ? ಆತ್ಮಜ್ಞಾನಿಗೆ ಕೊಲ್ಲುವ, ಕೊಲ್ಲಿಸಿಕೊಳ್ಳುವ ಅಥವಾ ಕೊಲ್ಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹುತ್ತವನ್ನು ಬಡಿದರೆ ಹಾವು ಸಾಯುವುದಿಲ್ಲ. ದೇಹವೇ ಒಂದು ಹುತ್ತ. ಅದನ್ನು ಬಡಿದರೆ ಆತ್ಮನು ಸಾಯುವುದಿಲ್ಲ. ಇದನ್ನು ಜ್ಞಾನಿಯಾದವನು ಮನಗಂಡಿರುತ್ತಾನೆ. ಆತ್ಮನು ನಿತ್ಯನು. ನಾಮ-ರೂಪಗಳ ವೇಷ ಧರಿಸುವುದಕ್ಕೆ ಮುಂಚೆಯೂ ಇವನು ಇದ್ದನು. ಹಾಕಿಕೊಂಡ ವೇಷವೆಲ್ಲ ಅಳಿಸಿಹೋದರೂ ಅವನು ಇನ್ನೂ ಇರುತ್ತಾನೆ. ಅಜ ಎಂದರೆ ಹುಟ್ಟಿಲ್ಲದವನು ಎಂದರ್ಥ. ಅವ್ಯಯವೆಂದರೆ ನಾಶವಾಗದಿರುವವನು ಎಂದರ್ಥ. ↩︎
-
ಮನುಷ್ಯನು ಹರಕು ಬಟ್ಟೆಗಳನ್ನು ಎಸೆದು ಹೊಸ ಬಟ್ಟೆಗಳನ್ನು ತೊಡುವಂತೆ, ಜೀವನು ಹಳೆಯದಾದ ಶರೀರಗಳನ್ನು ತೊರೆದು ಹೊಸ ಶರೀರಗಳನ್ನು ಪಡೆಯುತ್ತಾನೆ. ಹರಿದುಹೋದ ಬಟ್ಟೆಯನ್ನು ತೆಗೆದು ಹೊಸಬಟ್ಟೆಯನ್ನು ಹಾಕಿಕೊಳ್ಳುವಾಗ ಮುನುಷ್ಯನು ತಾನು ಅನೇಕ ವರ್ಷಗಳಿಂದ ಧರಿಸಿದ್ದ ಜೀರ್ಣವಸ್ತ್ರದ ಪರಿತ್ಯಾಗಕ್ಕಾಗಿ ಪರಿತಪಿಸುವುದಿಲ್ಲ. ಈ ದೇಹವು ದುಡಿದು-ದುಡಿದು ಕೃಶವಾಗಿರುವುದು. ಯಾವ ಸುಧಾರಣೆಯೂ ಇದಕ್ಕೆ ಸಲ್ಲದಾಗುತ್ತದೆ. ಆ ಸಮಯದಲ್ಲಿ ಜೀರ್ಣವಾಗಿ ಹೋದ ಈ ಶರೀರಕ್ಕಾಗಿ ಆತ್ಮನು ಪರಿತಪಿಸುತ್ತಾ ಕುಳಿತುಕೊಳ್ಳುವುದಿಲ್ಲ. ಜೀರ್ಣವಸ್ತ್ರವನ್ನು ಬದಲಾಯಿಸುವಂತೆ ಜೀರ್ಣ ಶರೀರವನ್ನು ಬದಲಾಯಿಸುತ್ತಾನೆ. ನೂತನ ಶರೀರವನ್ನು ಪಡೆದುಕೊಳ್ಳುತ್ತಾನೆ. ಹಳೇ ಮನೆಯಿಂದ ಹೊಸಮನೆಗೆ ಹೋದಂತೆ. ಹಾವು ಪೊರೆಬಿಟ್ಟಂತೆ. ಒಂದನ್ನು ಬಿಟ್ಟೊಡನೆಯೇ ಮತ್ತೊಂದು ಸಿದ್ಧವಾಗಿಬಿಡುತ್ತದೆ. ಹಳೆಯ ಪೀತಾಂಬರವನ್ನೆಸೆದು ಹೊಸ ಗೋಣೀತಾಟನ್ನು ಯಾರೂ ಉಡಲು ಹೋಗುವುದಿಲ್ಲ. ಹಳೆಯ ಪೀತಾಂಬರವನ್ನು ಬಿಟ್ಟು ಹೊಸ ಪೀತಾಂಬರವನ್ನೇ ಉಟ್ಟಾರು. ಹೊಸ ಶರೀರವು ಯಾವುದಾದರೂ ಆಗಬಹುದೇ? ರಾಜನ ಶರೀರವನ್ನು ತೊರೆದು ನಾಯಿಯ ಶರೀರವನ್ನು ಗ್ರಹಿಸಬಹುದೇ? ನಾಯಿಯ ಶರೀರವೂ ನೂತನವಾಗಿಯೇ ಇರಬಹುದು. ಆದರೆ ಹಾಗೆ ಧರಿಸುವುದರಿಂದ ಹರ್ಷವಿಲ್ಲ. ಇಂಥಹುದೇ ಶರೀರವು ಸಿಕ್ಕುವುದೆಂಬ ಸಿದ್ಧಾಂತವೇನು? ಹೊಸ ಶರೀರವೇನೋ ಸಿಕ್ಕಬಹುದು. ಆದರೆ ಈಗ ತಾನಿರುವುದಕ್ಕಿಂತ ಶ್ರೇಷ್ಠ ಶರೀರವು ದೊರಕುತ್ತದೆಯೆಂಬುದಕ್ಕೆ ಆಧಾರವಿದೆಯೇ? ಆಧಾರವಿದೆಯೆಂಬುದಕ್ಕೆ ಶ್ರೀ ರಾಮಾನುಜರು ಈ ಶ್ಲೋಕಕ್ಕೆ ಧರ್ಮಯುದ್ಧೇ ಶರೀರಂ ಸೃಜತಾಂ ತ್ಯಕ್ತಶರೀರಾದಧಿಕತರ ಕಲ್ಯಾಣರೀರಗೃಹಣಂ ಶಾಸ್ತ್ರಾವದಗಮತ ಇತಿ ಜೀರ್ಣಾನಿ ವಾಸಾಂಸಿ ವಿಹಾಯ ನವಾನಿ ಕಲ್ಯಾಣಾನಿ ವಾಸಾಂಸಿ ಗೃಹ್ಣಾತಾಮಿವ ಹರ್ಷನಿಮಿತ್ತಮೇವಾತ್ರೋಪಲಭ್ಯತೇ| ಎಂದು ವ್ಯಾಖ್ಯೆ ಮಾಡಿರುತ್ತಾರೆ. ಅಂದರೆ ಧರ್ಮಯುದ್ಧದಲ್ಲಿ ಶರೀರತ್ಯಾಗಮಾಡುವವರು ಉತ್ತಮವಾದ ನೂತನ ವಸ್ತ್ರಗ್ರಹಣದಂತೆ ಉತ್ತಮೋತ್ತಮ ಶರೀರಗಳನ್ನೇ ಪಡೆಯುತ್ತಾರೆ. ಹರ್ಷವನ್ನೇ ಪಡೆಯುತ್ತಾರೆ. ↩︎
-
ಆತ್ಮಧರ್ಮವೇ ಬೇರೆ; ದೇಹಧರ್ಮವೇ ಬೇರೆ. ದೇಹವನ್ನು ಕತ್ತರಿಸಬಹುದು; ಸುಡಬಹುದು; ತೋಯಿಸಬಹುದು; ಒಣಗಿಸಬಹುದು. ಆದರೆ ನಿರವಯನಾದ ಮತ್ತು ನಿರ್ಗುಣನಾದ ಆತ್ಮನನ್ನು ಶಸ್ತ್ರ, ಅಗ್ನಿ, ನೀರು, ಗಾಳಿ-ಇವುಗಳು ಏನೂ ಮಾಡಲಾರವು. ↩︎
-
ಪಂಚಭೂತಗಳು ಆತ್ಮನನ್ನು ಏನೂ ಮಾಡಲಾರವು. ಆತ್ಮವು ದೇಹವಲ್ಲ; ದೇಹವನ್ನು ಉಪಯೋಗಿಸಿಕೊಳ್ಳುವವನು. ದೇಹಕ್ಕೆ ಬಾಧೆಯಾದರೂ ಆತ್ಮಕ್ಕೆ ಬಾಧೆಯಾಗುವುದಿಲ್ಲ. ಅವನು ನಿತ್ಯ. ಬದಲಾವಣೆಯಿಲ್ಲದವನು. ಚಲನಚಿತ್ರದ ಬಿಳಿಯ ತೆರೆಗೆ ಇವನನ್ನು ಹೋಲಿಸಬಹುದು. ತೆರೆಯ ಮೇಲೆ ಬೀಳುವ ಚಿತ್ರದಲ್ಲಿ ಬೆಂಕಿಹೊತ್ತಿಗೊಳ್ಳುತ್ತದೆ. ಭಿರುಗಾಳಿ ಏಳುತ್ತದೆ. ಜಲಪಾತವಿರುತ್ತದೆ. ಆದರೆ ತೆರೆಯು ಇವುಗಳಿಂದ ಬಾಧಿತವಾಗುವುದಿಲ್ಲ. ಅದು ಯಥಾಪೂರ್ವವಾಗಿಯೇ ಇರುತ್ತದೆ. ನಿತ್ಯನಾಗಿರುವುದರಿಂದ ಅವನು ಸರ್ವಗತ. ಎಲ್ಲ ಕಡೆಯಲ್ಲಿಯೂ ಇರುವವನು. ಸರ್ವ ವ್ಯಾಪಕನು. ↩︎
-
ಅವ್ಯಕ್ತ ಎಂದರೆ ಕಣ್ಣಿಗೆ ಕಾಣಿಸದೇ ಇರುವುದು. ನಾವು ದೇಹವನ್ನು ನೋಡಬಹುದು. ಆದರೆ ಅದರ ಹಿಂದಿರುವ ಆತ್ಮನನ್ನು ಕಾಣಲಾರೆವು. ವ್ಯಕ್ತಾವ್ಯಕ್ತಶಬ್ಧಗಳ ಅರ್ಥವನ್ನು ಮೋಕ್ಷಧರ್ಮಪರ್ವದಲ್ಲಿ ಹೀಗೆ ನಿರೂಪವಾಗಿದೆ: ಇಂದ್ರಿಯೈರ್ಗೃಹ್ಯತೇ ಯದ್ಯತ್ತತ್ತದ್ವ್ಯಕ್ತಮಿತಿ ಸ್ಥಿತಿಃ| ಅವ್ಯಕ್ತಮಿತಿ ವಿಜ್ಞೇಯಂ ಲಿಂಗಗ್ರಾಹ್ಯಮತೀಂದ್ರಿಯಂ|| ಇಂದ್ರಿಯಗಳಿಂದ ಗ್ರಹಿಸಲ್ಪಡುವುದಕ್ಕೆ ವ್ಯಕ್ತವೆಂದೂ ಇಂದ್ರಿಯಗಳಿಂದ ಗ್ರಹಿಸಲ್ಪಡದೇ ಅತೀದ್ರಿಯವಾಗಿ ಹೇತುಗಳಿಂದ ಗ್ರಹಿಸಲ್ಪಡುವುದಕ್ಕೆ ಅವ್ಯಕ್ತವೆಂದೂ ತಿಳಿದುಕೊಳ್ಳಬೇಕು. ಆತ್ಮನು ಅವ್ಯಕ್ತ. ಕಣ್ಣಿಗೆ ಕಾಣಿಸದೇ ಇರತಕ್ಕವನು. ↩︎
-
ಆತ್ಮನು ಕಣ್ಣಿಗೆ ಕಾಣಿಸದೇ ಇದ್ದರೆ ಊಹೆಗಾದರೂ ಸಿಕ್ಕುವನೋ? ಯೋಚಿಸಿ ಅವನನ್ನು ತಿಳಿಯಲು ಸಾಧ್ಯವಾಗುವುದೋ? ಇಲ್ಲ. ಚಿಂತನೆಗೂ ಅವನು ಸಿಕ್ಕದವನು. ಏನನ್ನು ಕುರಿತು ಚಿಂತಿಸಬೇಕು? ಯಾವುದಾದರೂ ವಿಷಯವನ್ನು ಚಿಂತಿಸಬೇಕಾದರೆ ಎಲ್ಲಿಯಾದರೂ ಕೇಳಿದ್ದಾಗಿರಬೇಕು. ನೋಡಿದ್ದಾಗಿರಬೇಕು. ಮೂಸಿದ್ದಾಗಿರಬೇಕು. ರುಚಿನೋಡಿದ್ದಾಗಿರಬೇಕು. ಆದರೆ ಆತ್ಮನು ಇಂದ್ರಿಯಗಳಿಗೆ ಸಿಲುಕುವವನಲ್ಲವೆಂದರೆ ಇವುಗಳಿಗವನು ವಿಷಯವೇ ಅಲ್ಲ. ಮನಸ್ಸಿಕೂ ನಿಲುಕದಂತವನು. ಯತೋ ವಾಚೋ ನಿವರ್ತಂತೇ ಅಪ್ರಾಪ್ತಃ ಮುನಸಾ ಸಹ! ಪರಮಪುರುಷನ ನಿಜಸ್ವರೂಪವನ್ನು ತಿಳಿಯಲಾಗದೇ ವೇದಗಳೂ ಸಹ ಮುನಸ್ಸಿನೊಡನೆ ಹಿಂದಿರುಗುತ್ತವೆ. ↩︎
-
ಅವಿಕಾರಿ ಎಂದರೆ ವಿಕಾರರಹಿತನು ಎಂದರ್ಥ. ಹಾಲಿಗೆ ಹೆಪ್ಪು ಹಾಕಿದರೆ ಮೊಸರಿನ ವಿಕಾರವನ್ನು ಹೊಂದುವಂತೆ ಇವನು ವಿಕಾರಹೊಂದುವುದಿಲ್ಲ. ಯಥಾ ಕ್ಷೀರಂ ದಧ್ಯಾತಂಚನಾದಿನಾ ವಿಕಾರಿ ನ ತಥಾ ಅಯಂ ಆತ್ಮಾ| ಬಾಲ್ಯ, ಯೌವನ, ವಾರ್ಧಕ್ಯ – ಇವುಗಳೆಲ್ಲವೂ ದೇಹದ ವಿಕಾರಗಳು. ಆತ್ಮನ ವಿಕಾರಗಳಲ್ಲ. ಆಕಾರವಿದ್ದರಲ್ಲವೇ ವಿಕಾರವಾಗುವುದು? ಆಕಾರವೇ ಇಲ್ಲವೆಂದಮೇಲೆ ವಿಕಾರದ ಪಶ್ನೆಯೇ ಇಲ್ಲ. ↩︎
-
ಇಲ್ಲದ್ದನ್ನು ಪಡೆಯುವ ಮತ್ತು ಇದ್ದುದನ್ನು ಕಾಪಾಡುವ ಗೋಜು ಬೇಡ. ↩︎
-
ಇದು ಒಳ್ಳೆಯ ಕೆಲಸ ಇದು ಕೆಟ್ಟ ಕೆಲಸ ಎನ್ನುವ ದ್ವಂದ್ವಗಳಿರುವುದಿಲ್ಲ. ↩︎
-
ದುಃಖವಿಲ್ಲದ . ↩︎
-
ಸೇವಿಸದೇ ಇರುವವನ ↩︎