022 ಶ್ರೀಕೃಷ್ಣಾರ್ಜುನಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭಗವದ್ಗೀತಾ ಪರ್ವ

ಅಧ್ಯಾಯ 22

ಸಾರ

ಪಾಂಡವ ಸೇನೆಯ ವರ್ಣನೆ (1-14). ಕೃಷ್ಣನು ಅರ್ಜುನನಿಗೆ ಹೇಳಿದ ಮಾತು (15-16). ಧೃತರಾಷ್ಟ್ರ-ಸಂಜಯರ ಸಂವಾದ (17-22).

06022001 ಸಂಜಯ ಉವಾಚ।
06022001a ತತೋ ಯುಧಿಷ್ಠಿರೋ ರಾಜಾ ಸ್ವಾಂ ಸೇನಾಂ ಸಮಚೋದಯತ್।
06022001c ಪ್ರತಿವ್ಯೂಹನ್ನನೀಕಾನಿ ಭೀಷ್ಮಸ್ಯ ಭರತರ್ಷಭ।।

ಸಂಜಯನು ಹೇಳಿದನು: “ಭರತರ್ಷಭ! ಆಗ ರಾಜಾ ಯುಧಿಷ್ಠಿರನು ತನ್ನ ಸೇನೆಯನ್ನೂ ಭೀಷ್ಮನ ಸೇನೆಗಳಿಗೆ ಪ್ರತಿವ್ಯೂಹವಾಗಿ ರಚಿಸಿ ಪ್ರತಿಚೋದಿಸಿದನು.

06022002a ಯಥೋದ್ದಿಷ್ಟಾನ್ಯನೀಕಾನಿ ಪ್ರತ್ಯವ್ಯೂಹಂತ ಪಾಂಡವಾಃ।
06022002c ಸ್ವರ್ಗಂ ಪರಮಭೀಪ್ಸಂತಃ ಸುಯುದ್ಧೇನ ಕುರೂದ್ವಹಾಃ।।

“ಪಾಂಡವರು ಶಾಸ್ತ್ರಗಳಲ್ಲಿ ಹೇಳಿರುವಂತೆ ಸೇನೆಗಳನ್ನು ಪ್ರತಿವ್ಯೂಹವಾಗಿ ರಚಿಸಿದ್ದಾರೆ. ಕುರೂದ್ವಹರೇ! ಒಳ್ಳೆಯ ಯುದ್ಧವನ್ನು ಮಾಡಿ ಸ್ವರ್ಗವನ್ನು ಪಡೆಯಿರಿ!”

06022003a ಮಧ್ಯೇ ಶಿಖಂಡಿನೋಽನೀಕಂ ರಕ್ಷಿತಂ ಸವ್ಯಸಾಚಿನಾ।
06022003c ಧೃಷ್ಟದ್ಯುಮ್ನಸ್ಯ ಚ ಸ್ವಯಂ ಭೀಮೇನ ಪರಿಪಾಲಿತಂ।।

ಮಧ್ಯದಲ್ಲಿ ಶಿಖಂಡಿಯ ಸೇನೆಯನ್ನು ಸವ್ಯಸಾಚಿಯು ರಕ್ಷಿಸುತ್ತಿದ್ದನು. ಧೃಷ್ಟದ್ಯುಮ್ನನ ಸೇನೆಯನ್ನು ಸ್ವಯಂ ಭೀಮನು ಪರಿಪಾಲಿಸುತ್ತಿದ್ದನು.

06022004a ಅನೀಕಂ ದಕ್ಷಿಣಂ ರಾಜನ್ಯುಯುಧಾನೇನ ಪಾಲಿತಂ।
06022004c ಶ್ರೀಮತಾ ಸಾತ್ವತಾಗ್ರ್ಯೇಣ ಶಕ್ರೇಣೇವ ಧನುಷ್ಮತಾ।।

ರಾಜನ್! ದಕ್ಷಿಣಭಾಗದ ಸೇನೆಯನ್ನು ಸುಂದರ, ಸಾತ್ವತಾಗ್ರ್ಯ, ಶಕ್ರನಂತಿರುವ ಧನುಷ್ಮತ ಯುಯುಧಾನನು ಪಾಲಿಸುತ್ತಿದ್ದನು.

06022005a ಮಹೇಂದ್ರಯಾನಪ್ರತಿಮಂ ರಥಂ ತು ಸೋಪಸ್ಕರಂ ಹಾಟಕರತ್ನಚಿತ್ರಂ।
06022005c ಯುಧಿಷ್ಠಿರಃ ಕಾಂಚನಭಾಂಡಯೋಕ್ತ್ರಂ ಸಮಾಸ್ಥಿತೋ ನಾಗಕುಲಸ್ಯ ಮಧ್ಯೇ।।

ಆನೆಗಳ ಹಿಂಡಿನ ಮಧ್ಯೆ ಯುಧಿಷ್ಠಿರನು ಮಹೇಂದ್ರನ ಯಾನದಂತಿದ್ದ ಉತ್ತಮ ಧ್ವಜಸ್ಥಂಭವಿರುವ, ಚಿನ್ನ-ರತ್ನಗಳಿಂದ ಅಲಂಕರಿಸಲ್ಪಟ್ಟಿದ್ದ, ಕಾಂಚನದಂತಿದ್ದ ಕುದುರೆಗಳನ್ನು ಕಟ್ಟಿದ ರಥದಲ್ಲಿ ಕುಳಿತಿದ್ದನು.

06022006a ಸಮುಚ್ಛ್ರಿತಂ ದಾಂತಶಲಾಕಮಸ್ಯ ಸುಪಾಂಡುರಂ ಚತ್ರಮತೀವ ಭಾತಿ।
06022006c ಪ್ರದಕ್ಷಿಣಂ ಚೈನಮುಪಾಚರಂತಿ ಮಹರ್ಷಯಃ ಸಂಸ್ತುತಿಭಿರ್ನರೇಂದ್ರಂ।।

ಮೇಲೆ ಎತ್ತಿ ಹಿಡಿದ ದಂತದ ಸ್ಥಂಭಕ್ಕೆ ಕಟ್ಟಿದ್ದ ಶ್ವೇತ ಛತ್ರವು ಅತೀವವಾಗಿ ಬೆಳಗುತ್ತಿರಲು, ಆ ನರೇಂದ್ರನನ್ನು ಸಂಸ್ತುತಿಸುತ್ತಾ ಮಹರ್ಷಿಗಳು ಪ್ರದಕ್ಷಿಣೆ ಹಾಕಿ ನಡೆಯುತ್ತಿದ್ದರು.

06022007a ಪುರೋಹಿತಾಃ ಶತ್ರುವಧಂ ವದಂತೋ ಮಹರ್ಷಿವೃದ್ಧಾಃ ಶ್ರುತವಂತ ಏವ।
06022007c ಜಪ್ಯೈಶ್ಚ ಮಂತ್ರೈಶ್ಚ ತಥೌಷಧೀಭಿಃ ಸಮಂತತಃ ಸ್ವಸ್ತ್ಯಯನಂ ಪ್ರಚಕ್ರುಃ।।

ಪುರೋಹಿತರು, ಮಹರ್ಷಿ-ವೃದ್ಧರು, ಮತ್ತು ಸಿದ್ಧರೂ ಕೂಡ ಜಪ, ಮಂತ್ರ, ಔಷಧಿಗಳಿಂದ ಅವನನ್ನು ಸುತ್ತುವರೆದು ಶತ್ರುವಧೆಯನ್ನು ಹೇಳುತ್ತಾ ಸ್ವಸ್ತಿವಾಚನ ಮಾಡಿದರು.

06022008a ತತಃ ಸ ವಸ್ತ್ರಾಣಿ ತಥೈವ ಗಾಶ್ಚ ಫಲಾನಿ ಪುಷ್ಪಾಣಿ ತಥೈವ ನಿಷ್ಕಾನ್।
06022008c ಕುರೂತ್ತಮೋ ಬ್ರಾಹ್ಮಣಸಾನ್ಮಹಾತ್ಮಾ ಕುರ್ವನ್ಯಯೌ ಶಕ್ರ ಇವಾಮರೇಭ್ಯಃ।।

ಆಗ ಆ ಕುರೂತ್ತಮ ಮಹಾತ್ಮನು ಬ್ರಾಹ್ಮಣರಿಗೆ ವಸ್ತ್ರಗಳು, ಗೋವುಗಳು, ಫಲ-ಪುಷ್ಪಗಳು ಮತ್ತು ನಾಣ್ಯಗಳನ್ನಿತ್ತು ಅಮರರೊಂದಿಗೆ ಶಕ್ರನಂತೆ ಮುಂದುವರೆದನು.

06022009a ಸಹಸ್ರಸೂರ್ಯಃ ಶತಕಿಂಕಿಣೀಕಃ ಪರಾರ್ಧ್ಯಜಾಂಬೂನದಹೇಮಚಿತ್ರಃ।
06022009c ರಥೋಽರ್ಜುನಸ್ಯಾಗ್ನಿರಿವಾರ್ಚಿಮಾಲೀ ವಿಭ್ರಾಜತೇ ಶ್ವೇತಹಯಃ ಸುಚಕ್ರಃ।।

ನೂರು ಗಂಟೆಗಳನ್ನು ಕಟ್ಟಿದ್ದ, ಉತ್ತಮ ಜಾಂಬೂನದ ಚಿನ್ನದ ಚಿತ್ರಗಳನ್ನು ಪಡೆದಿದ್ದ, ಶ್ವೇತ ಹಯ ಮತ್ತು ಚಕ್ರಗಳ ಅರ್ಜುನನ ರಥವು ಅಗ್ನಿಯ ತೇಜಸ್ಸನ್ನು ಪಡೆದು ಸಹಸ್ರ ಸೂರ್ಯರಂತೆ ವಿಭ್ರಾಜಿಸುತ್ತಿತ್ತು.

06022010a ತಮಾಸ್ಥಿತಃ ಕೇಶವಸಂಗೃಹೀತಂ ಕಪಿಧ್ವಜಂ ಗಾಂಡಿವಬಾಣಹಸ್ತಃ।
06022010c ಧನುರ್ಧರೋ ಯಸ್ಯ ಸಮಃ ಪೃಥಿವ್ಯಾಂ ನ ವಿದ್ಯತೇ ನೋ ಭವಿತಾ ವಾ ಕದಾ ಚಿತ್।।

ಕೇಶವನು ಹಿಡಿದಿದ್ದ ಆ ಕಪಿಧ್ವಜ ರಥದಲ್ಲಿ ಯಾರ ಸಮನಾದ ಧನುರ್ಧರನು ಈ ಪೃಥ್ವಿಯಲ್ಲಿಯೇ ಇಲ್ಲವೋ, ಇರಲಿಲ್ಲವೋ ಮತ್ತು ಮುಂದೆ ಎಂದೂ ಇರುವುದಿಲ್ಲವೋ ಅವನು ಗಾಂಡೀವ ಬಾಣಗಳನ್ನು ಕೈಯಲ್ಲಿ ಹಿಡಿದು ನಿಂತಿದ್ದನು.

06022011a ಉದ್ವರ್ತಯಿಷ್ಯಂಸ್ತವ ಪುತ್ರಸೇನಾಂ ಅತೀವ ರೌದ್ರಂ ಸ ಬಿಭರ್ತಿ ರೂಪಂ।
06022011c ಅನಾಯುಧೋ ಯಃ ಸುಭುಜೋ ಭುಜಾಭ್ಯಾಂ ನರಾಶ್ವನಾಗಾನ್ಯುಧಿ ಭಸ್ಮ ಕುರ್ಯಾತ್।।
06022012a ಸ ಭೀಮಸೇನಃ ಸಹಿತೋ ಯಮಾಭ್ಯಾಂ ವೃಕೋದರೋ ವೀರರಥಸ್ಯ ಗೋಪ್ತಾ।

ನಿನ್ನ ಪುತ್ರನ ಸೇನೆಯನ್ನು ಪುಡಿಮಾಡುವನೋ ಅಂತಿರುವ, ಅತೀವ ರೌದ್ರ, ಭಯವನ್ನುಂಟುಮಾಡುವ ರೂಪವುಳ್ಳ, ಅನಾಯುಧನಾಗಿಯೂ ತನ್ನ ಉತ್ತಮ ಭುಜಗಳಿಂದ ನರ, ಅಶ್ವ, ಆನೆಗಳನ್ನು ಭಸ್ಮಮಾಡಬಲ್ಲ ಭುಜದ್ವಯಗಳ ಆ ಭೀಮಸೇನನು ಯಮಳರಿಬ್ಬರೊಂದಿಗೆ ವೀರರಥರ ಸೇನೆಯನ್ನು ರಕ್ಷಿಸುತ್ತಿದ್ದನು.

06022012c ತಂ ಪ್ರೇಕ್ಷ್ಯ ಮತ್ತರ್ಷಭಸಿಂಹಖೇಲಂ ಲೋಕೇ ಮಹೇಂದ್ರಪ್ರತಿಮಾನಕಲ್ಪಂ।।
06022013a ಸಮೀಕ್ಷ್ಯ ಸೇನಾಗ್ರಗತಂ ದುರಾಸದಂ ಪ್ರವಿವ್ಯಥುಃ ಪಂಕಗತಾ ಇವೋಷ್ಟ್ರಾಃ।
06022013c ವೃಕೋದರಂ ವಾರಣರಾಜದರ್ಪಂ ಯೋಧಾಸ್ತ್ವದೀಯಾ ಭಯವಿಗ್ನಸತ್ತ್ವಾಃ।।

ಮತ್ತಿನಲ್ಲಿರುವ ಸಿಂಹದ ಆಟದ ನಡುಗೆಯುಳ್ಳ, ಲೋಕದಲ್ಲಿ ಮಹೇಂದ್ರನ ಹಾಗಿರುವ, ಸೇನೆಯ ಮುಂದೆ ಹೋಗುತ್ತಿರುವ ಆ ದುರಾಸದ, ವಾರಣರಾಜದರ್ಪ, ವೃಕೋದರನನ್ನು ನೋಡಿ ನಿನ್ನ ಯೋಧರು ಭಯವಿಗ್ನರಾಗಿ ಸತ್ವವನ್ನು ಕಳೆದುಕೊಂಡು ಕೆಸರಿನಲ್ಲಿ ಸಿಕ್ಕಿಕೊಂಡ ಆನೆಗಳಂತೆ ಭಯಭೀತರಾಗಿದ್ದರು.

06022014a ಅನೀಕಮಧ್ಯೇ ತಿಷ್ಠಂತಂ ರಾಜಪುತ್ರಂ ದುರಾಸದಂ।
06022014c ಅಬ್ರವೀದ್ ಭರತಶ್ರೇಷ್ಠಂ ಗುಡಾಕೇಶಂ ಜನಾರ್ದನಃ।।

ಅನೀಕಮಧ್ಯದಲ್ಲಿ ನಿಂತಿದ್ದ ರಾಜಪುತ್ರ, ದುರಾಸದ, ಭರತಶ್ರೇಷ್ಠ, ಗುಡಾಕೇಶನಿಗೆ ಜನಾರ್ದನನು ಹೇಳಿದನು.

06022015 ವಾಸುದೇವ ಉವಾಚ।
06022015a ಯ ಏಷ ಗೋಪ್ತಾ ಪ್ರತಪನ್ಬಲಸ್ಥೋ ಯೋ ನಃ ಸೇನಾಂ ಸಿಂಹ ಇವೇಕ್ಷತೇ ಚ।
06022015c ಸ ಏಷ ಭೀಷ್ಮಃ ಕುರುವಂಶಕೇತುರ್ ಯೇನಾಹೃತಾಸ್ತ್ರಿಂಶತೋ ವಾಜಿಮೇಧಾಃ।।

ವಾಸುದೇವನು ಹೇಳಿದನು: “ತನ್ನ ಸಿಟ್ಟಿನಿಂದ ನಮ್ಮ ಸೇನೆಯನ್ನು ಸುಡುತ್ತಿರುವ, ನಮ್ಮ ಸೇನೆಯನ್ನು ಸಿಂಹದಂತೆ ನೋಡುತ್ತಿರುವ ಅವನೇ ಮೂರುನೂರು ಅಶ್ವಮೇಧಗಳನ್ನು ಮಾಡಿದ ಕುರುವಂಶಧ್ವಜ ಭೀಷ್ಮ.

06022016a ಏತಾನ್ಯನೀಕಾನಿ ಮಹಾನುಭಾವಂ ಗೂಹಂತಿ ಮೇಘಾ ಇವ ಘರ್ಮರಶ್ಮಿಂ।
06022016c ಏತಾನಿ ಹತ್ವಾ ಪುರುಷಪ್ರವೀರ ಕಾಂಕ್ಷಸ್ವ ಯುದ್ಧಂ ಭರತರ್ಷಭೇಣ।।

ಈ ಸೇನೆಗಳು ಆ ಮಹಾನುಭಾವನನ್ನು ಉರಿಯುತ್ತಿರುವ ಸೂರ್ಯನನ್ನು ಮೋಡಗಳು ಹೇಗೋ ಹಾಗೆ ಸುತ್ತುವರೆದಿವೆ. ಪುರುಷಪವೀರ! ಇವರನ್ನು ಕೊಂದು ಭರತರ್ಷಭನಿಂದ ಯುದ್ಧವನ್ನು ಬಯಸು.””1

06022017 ಧೃತರಾಷ್ಟ್ರ ಉವಾಚ।
06022017a ಕೇಷಾಂ ಪ್ರಹೃಷ್ಟಾಸ್ತತ್ರಾಗ್ರೇ ಯೋಧಾ ಯುಧ್ಯಂತಿ ಸಂಜಯ।
06022017c ಉದಗ್ರಮನಸಃ ಕೇಽತ್ರ ಕೇ ವಾ ದೀನಾ ವಿಚೇತಸಃ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಮೊದಲು ಯಾರ ಸೇನೆಯ ಯೋಧರು ಸಂತೋಷದಿಂದ ಯುದ್ಧಮಾಡಿದರು? ಅಲ್ಲಿ ಯಾರ ಮನಸ್ಸು ಸ್ಥೈರ್ಯದಿಂದ ತುಂಬಿತ್ತು ಮತ್ತು ಯಾರ ಮನಸ್ಸು ದೀನವಾಗಿ ಚೇತನವನ್ನು ಕಳೆದುಕೊಂಡಿತ್ತು?

06022018a ಕೇ ಪೂರ್ವಂ ಪ್ರಾಹರಂಸ್ತತ್ರ ಯುದ್ಧೇ ಹೃದಯಕಂಪನೇ।
06022018c ಮಾಮಕಾಃ ಪಾಂಡವಾನಾಂ ವಾ ತನ್ಮಮಾಚಕ್ಷ್ವ ಸಂಜಯ।।

ಸಂಜಯ! ಹೃದಯವನ್ನು ಕಂಪಿಸುವ ಆ ಯುದ್ಧದಲ್ಲಿ ಮೊದಲು ಯಾರು ಹೊಡೆಯಲು ಪ್ರಾರಂಭಿಸಿದರು? ನನ್ನವರೇ ಅಥವಾ ಪಾಂಡವರೇ? ಅದನ್ನು ನನಗೆ ಹೇಳು.

06022019a ಕಸ್ಯ ಸೇನಾಸಮುದಯೇ ಗಂಧಮಾಲ್ಯಸಮುದ್ಭವಃ।
06022019c ವಾಚಃ ಪ್ರದಕ್ಷಿಣಾಶ್ಚೈವ ಯೋಧಾನಾಮಭಿಗರ್ಜತಾಂ।।

ಯಾರ ಸೇನೆಯಲ್ಲಿ ಮಾಲೆಗಳ ಸುಗಂಧವು ಮೇಲೆದ್ದು ಪಸರಿಸಿತು? ಮತ್ತು ಯಾರ ಯೋಧರು ಗರ್ಜಿಸುತ್ತಾ, ಕೂಗುತ್ತಾ ಪ್ರದಕ್ಷಿಣೆ ಹಾಕಿದರು?”

06022020 ಸಂಜಯ ಉವಾಚ।
06022020a ಉಭಯೋಃ ಸೇನಯೋಸ್ತತ್ರ ಯೋಧಾ ಜಹೃಷಿರೇ ಮುದಾ।
06022020c ಸ್ರಗ್ಧೂಪಪಾನಗಂಧಾನಾಮುಭಯತ್ರ ಸಮುದ್ಭವಃ।।

ಸಂಜಯನು ಹೇಳಿದನು: “ಅಲ್ಲಿ ಎರಡೂ ಸೇನೆಗಳಲ್ಲಿ ಯೋಧರು ಸಂತೋಷಗೊಂಡು ಹರ್ಷಿಸಿದರು. ಇಬ್ಬರಲ್ಲಿಯೂ ಹೂವಿನ ಮಾಲೆಗಳ ಮತ್ತು ಸುಗಂಧಗಳ ಸುವಾಸನೆಯು ಹೊರಬರುತ್ತಿತ್ತು.

06022021a ಸಂಹತಾನಾಮನೀಕಾನಾಂ ವ್ಯೂಢಾನಾಂ ಭರತರ್ಷಭ।
06022021c ಸಂಸರ್ಪತಾಮುದೀರ್ಣಾನಾಂ ವಿಮರ್ದಃ ಸುಮಹಾನಭೂತ್।।

ಭರತರ್ಷಭ! ಹೋರಾಡಲು ಸೇರಿದ್ದ ಸೇನೆಗಳ ವ್ಯೂಹಗಳು ಪರಸ್ಪರರನ್ನು ಎದುರಿಸಿ ಮರ್ದಿಸುವುದು ತುಂಬಾ ಜೋರಾಗಿತ್ತು.

06022022a ವಾದಿತ್ರಶಬ್ದಸ್ತುಮುಲಃ ಶಂಖಭೇರೀವಿಮಿಶ್ರಿತಃ।
06022022c ಕುಂಜರಾಣಾಂ ಚ ನದತಾಂ ಸೈನ್ಯಾನಾಂ ಚ ಪ್ರಹೃಷ್ಯತಾಂ।।

ವಾದ್ಯಗಳ ಶಬ್ಧ, ಶಂಖ-ಭೇರಿಗಳ ತುಮುಲಗಳು ಆನೆಗಳ ಮತ್ತು ಹರ್ಷಗೊಂಡಿದ್ದ ಸೈನಿಕರ ಕೂಗಿನೊಂದಿಗೆ ಸೇರಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಕೃಷ್ಣಾರ್ಜುನಸಂವಾದೇ ದ್ವಾವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಕೃಷ್ಣಾರ್ಜುನಸಂವಾದವೆಂಬ ಇಪ್ಪತ್ತೆರಡನೇ ಅಧ್ಯಾಯವು.


  1. ಅನೇಕ ಸಂಪುಟಗಳಲ್ಲಿ ಈ ಸಂದರ್ಭದಲ್ಲಿ ಅರ್ಜುನನು ದುರ್ಗಾಸ್ತೋತ್ರದಿಂದ ದೇವಿಯನ್ನು ಪ್ರಾರ್ಥಿಸಿದ ಪ್ರಕರಣವನ್ನು ವರ್ಣಿಸಲಾಗಿದೆ. ಈ ಸಮಯದಲ್ಲಿ ಯುದ್ಧಸನ್ನದ್ಧರಾದ ಧೃತರಾಷ್ಟ್ರನ ಮಕ್ಕಳ ಅಪಾರ ಸೇನೆಯನ್ನು ನೋಡಿ ಅರ್ಜುನನ ಹಿತಾರ್ಥವಾಗಿ ಕೃಷ್ಣನು ಹೇಳುತ್ತಾನೆ: ಶುಚಿರ್ಭೂತ್ವಾ ಮಹಾಬಾಹೋ ಸಂಗ್ರಾಮಾಭಿಮುಖೇ ಸ್ಥಿತಃ। ಪರಾಜಯಾಯ ಶತ್ರೂಣಾಂ ದುರ್ಗಾಸ್ತೋತ್ರಮುದೀರಯ।। ಆಗ ಪಾರ್ಥನು ರಥದಿಂದಿಳಿದು ಬದ್ಧಾಂಜಲಿಯಾಗಿ ದುರ್ಗೆಯನ್ನು ಸ್ತುತಿಸಿದನು: ನಮಸ್ತೇ ಸಿದ್ಧಸೇನಾನಿ ಆರ್ಯೇ ಮಂದರವಾಸಿನಿ। ಕುಮಾರೀ ಕಾಲಿ ಕಾಪಾಲೀ ಕಪಿಲೇ ಕೃಷ್ಣಪಿಂಗಲೇ।। ಭದ್ರಕಾಲಿ ನಮಸ್ತುಭ್ಯಂ ಮಹಾಕಾಲಿ ನಮೋಸ್ತುತೇ। ಚಂಡಿ ಚಂಡೇ ನಮಸ್ತುಭ್ಯಂ ತಾರಿಣೀ ವರವರ್ಣಿನೀ।। ಕಾತ್ಯಾಯಿನೀ ಮಹಾಭಾಗೇ ಕರಾಲಿ ವಿಜಯೇ ಜಯೇ। ಶಿಖಿಪಿಚ್ಛಧ್ವಜಧರೇ ನಾನಾಭರಣಭೂಷಿತೇ।। ಆಟ್ಟಶೂಲಪ್ರಹರಣೇ ಖಡ್ಗಖೇಟಕಧಾರಿಣೀ। ಗೋಪೇಂದ್ರಸ್ಯಾನುಜೇ ಜ್ಯೇಷ್ಠೇ ನಂದಗೋಪಕುಲೋದ್ಭವೇ।। ಮಹಿಷಾಸೃಕ್ಪ್ರಿಯೇ ನಿತ್ಯಂ ಕೌಶಿಕೀ ಪೀತವಾಸಿನೀ। ಅಟ್ಟಹಾಸೇ ಕೋಕಮುಖೇ ನಮಸ್ತೇಽಸ್ತು ರಣಪ್ರಿಯೇ।। ಉಮೇ ಶಾಕಂಭರೀ ಶ್ವೇತೇ ಕೃಷ್ಣೇ ಕೈಟಭನಾಶಿನೀ। ಹಿರಣ್ಯಾಕ್ಷೀ ವಿರೂಪಾಕ್ಷೀ ಸುಧೂಮಾಕ್ಷಿ ನಮೋಸ್ತು ತೇ।। ವೇದಶ್ರುತಿ ಮಹಾಪುಣ್ಯೇ ಬ್ರಹ್ಮಣ್ಯೇ ಜಾತವೇದಸಿ। ಜಂಬೂಕಟಕಚೈತ್ಯೇಷು ನಿತ್ಯಂ ಸನ್ನಿಹಿತಾಲಯೇ।। ತ್ವಂ ಬ್ರಹ್ಮವಿದ್ಯಾ ವಿದ್ಯಾನಾಂ ಮಹಾನಿದ್ರಾ ಚ ದೇಹಿನಾಂ। ಸ್ಕಂದಮಾತರ್ಭಗವತೀ ದುರ್ಗೇ ಕಾಂತಾರವಾಸಿನೀ।। ಸ್ವಾಹಾಕಾರಃ ಸ್ವಧಾ ಚೈವ ಕಲಾ ಕಾಷ್ಠಾ ಸರಸ್ವತೀ। ಸಾವಿತ್ರೀ ವೇದಮಾತಾ ಚ ತಥಾ ವೇದಾಂತ ಉಚ್ಯತೇ।। ಸ್ತುತಾಸಿ ತ್ವಂ ಮಹಾದೇವೀ ವಿಶುದ್ಧೇನಾಂತರಾತ್ಮನಾ। ಜಯೋ ಭವತು ಮೇ ನಿತ್ಯಂ ತ್ವತ್ಪ್ರಸಾದಾದ್ರಣಾಜಿರೇ।। ಕಾಂತಾರಭಯದುರ್ಗೇಷು ಭಕ್ತಾನಾಂ ಚಾಲಯೇಷು ಚ। ನಿತ್ಯಂ ವಸಸಿ ಪಾತಾಲೇ ಯುದ್ಧೇ ಜಯಸಿ ದಾನವಾನ್।। ತ್ವಂ ಜಂಭನೀ ಮೋಹಿನೀ ಚ ಮಾಯಾ ಹ್ರೀಃ ಶ್ರೀಸ್ತಥೈವ ಚ। ಸಂಧ್ಯಾ ಪ್ರಭಾವತೀ ಚೈವ ಸಾವಿತ್ರೀ ಜನನೀ ತಥಾ।। ತುಷ್ಟಿಃ ಪುಷ್ಟಿರ್ಧೃತಿರ್ದೀಪ್ತಿಶ್ಚಂದ್ರಾದಿತ್ಯವಿವರ್ಧಿನೀ। ಭೂತಿರ್ಭೂತಿಮತಾಂ ಸಂಖ್ಯೇ ವೀಕ್ಷ್ಯಸೇ ಸಿದ್ಧಚಾರಣೈಃ।। ಆಗ ದೇವಿಯು ಪ್ರತ್ಯಕ್ಷಳಾಗಿ – ಸ್ವಲ್ಪೇನೈವ ತು ಕಾಲೇನ ಶತ್ರೂಂಜೇಷ್ಯಸಿ ಪಾಂಡವ। ನರಸ್ತ್ವಮಸಿ ದುರ್ಧರ್ಷ ನಾರಾಯಣಸಹಾಯವಾನ್। ಅಜೇಯಸ್ತ್ವಂ ರಣೇಽರೀಣಾಮಪಿ ವಜ್ರಭೃತಃ ಸ್ವಯಂ।। ಎಂದು ಹೇಳಿ ಅಂತರ್ಹಿತಳಾದಳು. ಈ ಸನ್ನಿವೇಶವು ಪುಣೆಯ ಪರಿಷ್ಕೃತ ಸಂಪುಟದಲ್ಲಿ ಇಲ್ಲ. ↩︎