020 ಸೈನ್ಯವರ್ಣನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭಗವದ್ಗೀತಾ ಪರ್ವ

ಅಧ್ಯಾಯ 20

ಸಾರ

ಸೈನ್ಯವರ್ಣನೆ (1-20).

06020001 ಧೃತರಾಷ್ಟ್ರ ಉವಾಚ।
06020001a ಸೂರ್ಯೋದಯೇ ಸಂಜಯ ಕೇ ನು ಪೂರ್ವಂ ಯುಯುತ್ಸವೋ ಹೃಷ್ಯಮಾಣಾ ಇವಾಸನ್।
06020001c ಮಾಮಕಾ ವಾ ಭೀಷ್ಮನೇತ್ರಾಃ ಸಮೀಕೇ ಪಾಂಡವಾ ವಾ ಭೀಮನೇತ್ರಾಸ್ತದಾನೀಂ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಸೂರ್ಯೋದಯವಾದಾಗ ಯಾರು ಹರ್ಷಿತರಾಗಿ ಇನ್ನೊಬ್ಬರ ಮೇಲೆ ಆಕ್ರಮಣ ಮಾಡಿದರು? ಭೀಷ್ಮನ ನೇತ್ರತ್ವದಲ್ಲಿದ್ದ ನನ್ನವರ ಸೇನೆಯೋ ಅಥವಾ ಭೀಮನ ನೇತೃತ್ವದಲ್ಲಿದ್ದ ಪಾಂಡವರ ಸೇನೆಯೋ?

06020002a ಕೇಷಾಂ ಜಘನ್ಯೌ ಸೋಮಸೂರ್ಯೌ ಸವಾಯೂ ಕೇಷಾಂ ಸೇನಾಂ ಶ್ವಾಪದಾ ವ್ಯಾಭಷಂತ।
06020002c ಕೇಷಾಂ ಯೂನಾಂ ಮುಖವರ್ಣಾಃ ಪ್ರಸನ್ನಾಃ ಸರ್ವಂ ಹ್ಯೇತದ್ಬ್ರೂಹಿ ತತ್ತ್ವಂ ಯಥಾವತ್।।

ಯಾರ ಕಡೆ ಸೂರ್ಯ, ಚಂದ್ರ ಮತ್ತು ವಾಯುವು ಹೊಡೆದರು? ಯಾವ ಸೇನೆಯಲ್ಲಿ ಶ್ವಾಪದಗಳು ಬೊಗಳಿದವು? ಯಾರ ಕಡೆಯ ಯುವಕರ ಮುಖಗಳು ಪ್ರಸನ್ನವಾಗಿದ್ದವು? ಇವೆಲ್ಲವನ್ನೂ ಯಥಾವತ್ತಾಗಿ ವಿವರಿಸಿ ಹೇಳು.”

06020003 ಸಂಜಯ ಉವಾಚ।
06020003a ಉಭೇ ಸೇನೇ ತುಲ್ಯಮಿವೋಪಯಾತೇ ಉಭೇ ವ್ಯೂಹೇ ಹೃಷ್ಟರೂಪೇ ನರೇಂದ್ರ।
06020003c ಉಭೇ ಚಿತ್ರೇ ವನರಾಜಿಪ್ರಕಾಶೇ ತಥೈವೋಭೇ ನಾಗರಥಾಶ್ವಪೂರ್ಣೇ।।

ಸಂಜಯನು ಹೇಳಿದನು: “ನರೇಂದ್ರ! ಎರಡೂ ಸೇನೆಗಳ ವ್ಯೂಹಗಳೂ ಸಮನಾಗಿ ಹೃಷ್ಟರೂಪವಾಗಿದ್ದವು. ಎರಡೂ ಸೇನೆಗಳೂ ಸಮನಾಗಿ ವನರಾಜಿಯಂತೆ ಪ್ರಕಾಶಿತರಾಗಿ ಸುಂದರವಾಗಿದ್ದವು. ಅವೆರಡೂ ಆನೆ-ರಥ-ಅಶ್ವಗಳಿಂದ ಪೂರ್ಣಗೊಂಡಿದ್ದವು.

06020004a ಉಭೇ ಸೇನೇ ಬೃಹತೀ ಭೀಮರೂಪೇ ತಥೈವೋಭೇ ಭಾರತ ದುರ್ವಿಷಹ್ಯೇ।
06020004c ತಥೈವೋಭೇ ಸ್ವರ್ಗಜಯಾಯ ಸೃಷ್ಟೇ ತಥಾ ಹ್ಯುಭೇ ಸತ್ಪುರುಷಾರ್ಯಗುಪ್ತೇ।।

ಭಾರತ! ಎರಡೂ ಸೇನೆಗಳೂ ದೊಡ್ಡವಾಗಿದ್ದವು ಮತ್ತು ಭೀಮರೂಪಿಗಳಾಗಿದ್ದವು. ಎರಡೂ ಒಬ್ಬರನ್ನೊಬ್ಬರು ಸಹಿಸಿಕೊಳ್ಳಲಾರದಂತಿದ್ದವು. ಎರಡೂ ಕಡೆಯವರು ಸ್ವರ್ಗವನ್ನೇ ಜಯಿಸಬಲ್ಲರೋ ಎಂದು ತೋರುತ್ತಿದ್ದವು. ಎರಡೂ ಕಡೆಯವರೂ ಸತ್ಪುರುಷರಿಂದ ರಕ್ಷಿಸಲ್ಪಟ್ಟಿದ್ದರು.

06020005a ಪಶ್ಚಾನ್ಮುಖಾಃ ಕುರವೋ ಧಾರ್ತರಾಷ್ಟ್ರಾಃ ಸ್ಥಿತಾಃ ಪಾರ್ಥಾಃ ಪ್ರಾಙ್ಮುಖಾ ಯೋತ್ಸ್ಯಮಾನಾಃ।
06020005c ದೈತ್ಯೇಂದ್ರಸೇನೇವ ಚ ಕೌರವಾಣಾಂ ದೇವೇಂದ್ರಸೇನೇವ ಚ ಪಾಂಡವಾನಾಂ।।

ಧಾರ್ತರಾಷ್ಟ್ರರ ಕೌರವ ಸೇನೆಯು ಪಶ್ಚಿಮಕ್ಕೆ ಮುಖಮಾಡಿತ್ತು. ಪಾಂಡವರು ಪೂರ್ವದಿಕ್ಕಿಗೆ ಮುಖಮಾಡಿ ಯುದ್ಧಮಾಡುವವರಿದ್ದರು. ಕೌರವರದ್ದು ದೈತ್ಯೇಂದ್ರನ ಸೇನೆಯಂತಿತ್ತು. ಪಾಂಡವರದ್ದು ದೇವೇಂದ್ರಸೇನೆಯಂತಿತ್ತು.

06020006a ಶುಕ್ರೋ ವಾಯುಃ ಪೃಷ್ಠತಃ ಪಾಂಡವಾನಾಂ ಧಾರ್ತರಾಷ್ಟ್ರಾಂ ಶ್ವಾಪದಾ ವ್ಯಾಭಷಂತ।
06020006c ಗಜೇಂದ್ರಾಣಾಂ ಮದಗಂಧಾಂಶ್ಚ ತೀವ್ರಾನ್ ನ ಸೇಹಿರೇ ತವ ಪುತ್ರಸ್ಯ ನಾಗಾಃ।।

ಪಾಂಡವರ ಹಿಂದಿನಿಂದ ಗಾಳಿಯು ಬೀಸಿತು, ಧಾರ್ತರಾಷ್ಟ್ರರಲ್ಲಿ ಶ್ವಾಪದಗಳು ಬೊಗಳಿದವು. ನಿನ್ನ ಪುತ್ರನ ಆನೆಗಳು ಅವರ ಗಜೇಂದ್ರರ ತೀವ್ರ ಮದಗಂಧವನ್ನು ಸಹಿಸಲಾರದೇ ಹೋದವು.

06020007a ದುರ್ಯೋಧನೋ ಹಸ್ತಿನಂ ಪದ್ಮವರ್ಣಂ ಸುವರ್ಣಕಕ್ಷ್ಯಂ ಜಾತಿಬಲಂ ಪ್ರಭಿನ್ನಂ।
06020007c ಸಮಾಸ್ಥಿತೋ ಮಧ್ಯಗತಃ ಕುರೂಣಾಂ ಸಂಸ್ತೂಯಮಾನೋ ಬಂದಿಭಿರ್ಮಾಗಧೈಶ್ಚ।।

ಕುರುಗಳ ಮಧ್ಯದಲ್ಲಿ ದುರ್ಯೋಧನನು ಮದವೊಡೆದ, ಬಲವಾದ ಜಾತಿಯ, ಪದ್ಮವರ್ಣದ ಆನೆಯ ಮೇಲೆ ಸುವರ್ಣದ ಕಕ್ಷೆಯಲ್ಲಿ ಕುಳಿತಿದ್ದನು. ಬಂದಿ-ಮಾಗಧರು ಅವನನ್ನು ಸಂಸ್ತುತಿಸುತ್ತಿದ್ದರು.

06020008a ಚಂದ್ರಪ್ರಭಂ ಶ್ವೇತಮಸ್ಯಾತಪತ್ರಂ ಸೌವರ್ಣೀ ಸ್ರಗ್ ಭ್ರಾಜತೇ ಚೋತ್ತಮಾಂಗೇ।
06020008c ತಂ ಸರ್ವತಃ ಶಕುನಿಃ ಪಾರ್ವತೀಯೈಃ ಸಾರ್ಧಂ ಗಾಂಧಾರೈಃ ಪಾತಿ ಗಾಂಧಾರರಾಜಃ।।

ಬಂಗಾರದ ಸರಪಳಿಯಿದ್ದ ಚಂದ್ರಪ್ರಭೆಯ ಶ್ವೇತಛತ್ರವು ಅವನ ಶಿರದ ಮೇಲೆ ಹೊಳೆಯುತ್ತಿತ್ತು. ಅವನನ್ನು ಸತ್ತುವರೆದು ಗಾಂಧಾರರಾಜ ಶಕುನಿಯು ಪರ್ವತೇಯರು ಮತ್ತು ಗಾಂಧಾರರೊಂದಿಗೆ ರಕ್ಷಿಸುತ್ತಿದ್ದನು.

06020009a ಭೀಷ್ಮೋಽಗ್ರತಃ ಸರ್ವಸೈನ್ಯಸ್ಯ ವೃದ್ಧಃ ಶ್ವೇತಚ್ಛತ್ರಃ ಶ್ವೇತಧನುಃ ಸಶಂಖಃ।
06020009c ಶ್ವೇತೋಷ್ಣೀಷಃ ಪಾಂಡುರೇಣ ಧ್ವಜೇನ ಶ್ವೇತೈರಶ್ವೈಃ ಶ್ವೇತಶೈಲಪ್ರಕಾಶಃ।।

ಸರ್ವಸೇನೆಗಳ ಅಗ್ರಸ್ಥಾನದಲ್ಲಿದ್ದ ವೃದ್ಧ ಭೀಷ್ಮನು ಶ್ವೇತ ಛತ್ರ, ಶ್ವೇತ ಧನುಸ್ಸು ಮತ್ತು ಶಂಖಗಳು, ಶ್ವೇತ ಕಿರೀಟ, ಶ್ವೇತ ಧ್ವಜ, ಮತ್ತು ಶ್ವೇತ ಅಶ್ವಗಳೊಂದಿಗೆ ಶ್ವೇತಶೈಲದಂತೆ ಪ್ರಕಾಶಿಸುತ್ತಿದ್ದನು.

06020010a ತಸ್ಯ ಸೈನ್ಯಂ ಧಾರ್ತರಾಷ್ಟ್ರಾಶ್ಚ ಸರ್ವೇ ಬಾಹ್ಲೀಕಾನಾಮೇಕದೇಶಃ ಶಲಶ್ಚ।
06020010c ಯೇ ಚಾಂಬಷ್ಠಾಃ ಕ್ಷತ್ರಿಯಾ ಯೇ ಚ ಸಿಂಧೌ ತಥಾ ಸೌವೀರಾಃ ಪಂಚನದಾಶ್ಚ ಶೂರಾಃ।।

ಅವನ ಸೇನೆಯಲ್ಲಿ ಧೃತರಾಷ್ಟ್ರನ ಎಲ್ಲ ಮಕ್ಕಳೂ, ಬಾಹ್ಲೀಕ ದೇಶದ ನಾಯಕ ಶಲ, ಅಂಬಷ್ಠರೆಂಬ ಕ್ಷತ್ರಿಯರು, ಹಾಗೆಯೇ ಸಿಂಧು ಮತ್ತು ಪಂಚನದಿಗಳ ಶೂರ ಸೌವೀರರು ಇದ್ದರು.

06020011a ಶೋಣೈರ್ಹಯೈ ರುಕ್ಮರಥೋ ಮಹಾತ್ಮಾ ದ್ರೋಣೋ ಮಹಾಬಾಹುರದೀನಸತ್ತ್ವಃ।
06020011c ಆಸ್ತೇ ಗುರುಃ ಪ್ರಯಶಾಃ ಸರ್ವರಾಜ್ಞಾಂ ಪಶ್ಚಾಚ್ಚಮೂಮಿಂದ್ರ ಇವಾಭಿರಕ್ಷನ್।।

ಸರ್ವರಾಜರ ಗುರು ಮಹಾಬಾಹು ದೀನಸತ್ವ ಮಹಾತ್ಮ ದ್ರೋಣನು ಕೆಂಪು ಕುದುರೆಗಳನ್ನು ಕಟ್ಟಿದ್ದ ಬಂಗಾರದ ರಥದಲ್ಲಿ ಇಂದ್ರನಂತೆ ಹಿಂದಿನಿಂದ ರಕ್ಷಿಸುತ್ತಿದ್ದನು.

06020012a ವಾರ್ದ್ಧಕ್ಷತ್ರಿಃ ಸರ್ವಸೈನ್ಯಸ್ಯ ಮಧ್ಯೇ ಭೂರಿಶ್ರವಾಃ ಪುರುಮಿತ್ರೋ ಜಯಶ್ಚ।
06020012c ಶಾಲ್ವಾ ಮತ್ಸ್ಯಾಃ ಕೇಕಯಾಶ್ಚಾಪಿ ಸರ್ವೇ ಗಜಾನೀಕೈರ್ಭ್ರಾತರೋ ಯೋತ್ಸ್ಯಮಾನಾಃ।।

ಎಲ್ಲ ಸೇನೆಗಳ ಮಧ್ಯೆ ವಾರ್ದ್ಧಕ್ಷತ್ರಿ, ಭೂರಿಶ್ರವ, ಪುರುಮಿತ್ರ, ಜಯ, ಶಾಲ್ವ, ಮತ್ಸ್ಯರು, ಕೇಕಯ ಸಹೋದರರು ಎಲ್ಲರೂ ತಮ್ಮ ಆನೆಗಳ ಸೇನೆಗಳೊಂದಿಗೆ ಹೋರಾಡುತ್ತಿದ್ದರು.

06020013a ಶಾರದ್ವತಶ್ಚೋತ್ತರಧೂರ್ಮಹಾತ್ಮಾ ಮಹೇಷ್ವಾಸೋ ಗೌತಮಶ್ಚಿತ್ರಯೋಧೀ।
06020013c ಶಕೈಃ ಕಿರಾತೈರ್ಯವನೈಃ ಪಹ್ಲವೈಶ್ಚ ಸಾರ್ಧಂ ಚಮೂಂ ಉತ್ತರತೋಽಭಿಪಾತಿ।।

ಮಹಾತ್ಮ ಶಾರದ್ವತ ಮಹೇಷ್ವಾಸ ಚಿತ್ರಯೋಧೀ ಗೌತಮನು ಶಕ-ಕಿರಾತ-ಯವನ-ಪಹ್ಲವರ ಸೇನೆಗಳೊಂದಿಗೆ ಉತ್ತರ ದಿಕ್ಕಿಗೆ ಹೋಗಿ ನೆಲೆಸಿದನು.

06020014a ಮಹಾರಥೈರಂಧಕವೃಷ್ಣಿಭೋಜೈಃ ಸೌರಾಷ್ಟ್ರಕೈರ್ನೈರೃತೈರಾತ್ತಶಸ್ತ್ರೈಃ।
06020014c ಬೃಹದ್ಬಲಃ ಕೃತವರ್ಮಾಭಿಗುಪ್ತೋ ಬಲಂ ತ್ವದೀಯಂ ದಕ್ಷಿಣತೋಽಭಿಪಾತಿ।।

ಮಹಾರಥರಾದ ಅಂಧಕ-ವೃಷ್ಣಿ-ಭೋಜ-ಸೌರಾಷ್ಟ್ರರಿಂದ ಉತ್ತಮ ಆಯುಧಗಳನ್ನು ಹೊಂದಿದ್ದ ಮಹಾಬಲವು ಕೃತವರ್ಮನಿಂದ ರಕ್ಷಿತಗೊಂಡು ನಿನ್ನ ಸೇನೆಯ ದಕ್ಷಿಣ ದಿಕ್ಕಿಗೆ ಹೋಗಿ ನಿಂತಿತು.

06020015a ಸಂಶಪ್ತಕಾನಾಮಯುತಂ ರಥಾನಾಂ ಮೃತ್ಯುರ್ಜಯೋ ವಾರ್ಜುನಸ್ಯೇತಿ ಸೃಷ್ಟಾಃ।
06020015c ಯೇನಾರ್ಜುನಸ್ತೇನ ರಾಜನ್ಕೃತಾಸ್ತ್ರಾಃ ಪ್ರಯಾತಾ ವೈ ತೇ ತ್ರಿಗರ್ತಾಶ್ಚ ಶೂರಾಃ।।

ಮೃತ್ಯುವಾಗಲೀ ಜಯವಾಗಲೀ ಅರ್ಜುನನಿಂದಲೇ ಎಂದು ಸೃಷ್ಟಿಸಲ್ಪಟ್ಟಿದ್ದ ಸಂಶಪ್ತಕರೆಂಬ ಹತ್ತು ಸಾವಿರ ಕೃತಾಸ್ತ್ರ ರಥಿಕರು ಅರ್ಜುನನ್ನೇ ಎದುರಿಸಿಸಲು ಶೂರರಾದ ತ್ರಿಗರ್ತರೊಂದಿಗೆ ಹೊರಟರು.

06020016a ಸಾಗ್ರಂ ಶತಸಹಸ್ರಂ ತು ನಾಗಾನಾಂ ತವ ಭಾರತ।
06020016c ನಾಗೇ ನಾಗೇ ರಥಶತಂ ಶತಂ ಚಾಶ್ವಾ ರಥೇ ರಥೇ।।

ಭಾರತ! ನಿನ್ನ ಸೇನೆಯಲ್ಲಿ ನೂರು ಸಾವಿರ ಆನೆಗಳಿದ್ದವು. ಪ್ರತಿ ಆನೆಗೆ ನೂರು ರಥಿಕರನ್ನೂ, ಒಂದು ರಥಕ್ಕೆ ನೂರು ಅಶ್ವಯೋಧರನ್ನೂ ಇಡಲಾಗಿತ್ತು.

06020017a ಅಶ್ವೇಽಶ್ವೇ ದಶ ಧಾನುಷ್ಕಾ ಧಾನುಷ್ಕೇ ದಶ ಚರ್ಮಿಣಃ।
06020017c ಏವಂ ವ್ಯೂಢಾನ್ಯನೀಕಾನಿ ಭೀಷ್ಮೇಣ ತವ ಭಾರತ।।

ಭಾರತ! ಪ್ರತಿ ಅಶ್ವಯೋಧನಿಗೂ ಹತ್ತು ಧಾನುಷ್ಕರಿದ್ದರು. ಪ್ರತಿ ಧಾನುಷ್ಕನಿಗೂ ಹತ್ತು ಚರ್ಮಿಗಳಿದ್ದರು. ಹೀಗೆ ನಿನ್ನ ಸೇನೆಯನ್ನು ಬೀಷ್ಮನು ವ್ಯೂಹವನ್ನಾಗಿ ರಚಿಸಿದ್ದನು.

06020018a ಅವ್ಯೂಹನ್ಮಾನುಷಂ ವ್ಯೂಹಂ ದೈವಂ ಗಾಂಧರ್ವಮಾಸುರಂ।
06020018c ದಿವಸೇ ದಿವಸೇ ಪ್ರಾಪ್ತೇ ಭೀಷ್ಮಃ ಶಾಂತನವೋಽಗ್ರಣೀಃ।।

ದಿವಸ ದಿವಸವೂ ಅಗ್ರಣೀ ಶಾಂತನವ ಭೀಷ್ಮನು ಮಾನುಷ, ದೇವ, ಗಾಂಧರ್ವ, ಅಸುರ ವ್ಯೂಹಗಳನ್ನು ರಚಿಸುತ್ತಿದ್ದನು.

06020019a ಮಹಾರಥೌಘವಿಪುಲಃ ಸಮುದ್ರ ಇವ ಪರ್ವಣಿ।
06020019c ಭೀಷ್ಮೇಣ ಧಾರ್ತರಾಷ್ಟ್ರಾಣಾಂ ವ್ಯೂಹಃ ಪ್ರತ್ಯಙ್ಮುಖೋ ಯುಧಿ।।

ವಿಪುಲವಾಗಿ ಮಹಾರಥರಿಂದ ಕೂಡಿದ, ಭೋರಗರೆಯುವ ಸಮುದ್ರದಂತಿರುವ ಧಾರ್ತರಾಷ್ಟ್ರರ ಸೇನೆಯು ಭೀಷ್ಮನಿಂದ ವ್ಯೂಹಗೊಂಡು ಪಶ್ಚಿಮ ಮಖವಾಗಿ ಯುದ್ಧಕ್ಕೆ ನಿಂತಿತು.

06020020a ಅನಂತರೂಪಾ ಧ್ವಜಿನೀ ತ್ವದೀಯಾ ನರೇಂದ್ರ ಭೀಮಾ ನ ತು ಪಾಂಡವಾನಾಂ।
06020020c ತಾಂ ತ್ವೇವ ಮನ್ಯೇ ಬೃಹತೀಂ ದುಷ್ಪ್ರಧೃಷ್ಯಾಂ ಯಸ್ಯಾ ನೇತಾರೌ ಕೇಶವಶ್ಚಾರ್ಜುನಶ್ಚ।।

ನರೇಂದ್ರ! ನಿನ್ನ ಸೇನೆಯು ಅನಂತವಾಗಿಯೂ ಭಯಂಕರವಾಗಿಯೂ ತೋರುತ್ತಿತ್ತು. ಆದರೆ ಕೇಶವ-ಅರ್ಜುನರು ನೇತಾರರಾಗಿದ್ದ ಪಾಂಡವರ ಸೇನೆಯು ನನಗೆ ಅತ್ಯಂತ ದೊಡ್ಡದಾಗಿ, ಗೆಲ್ಲಲಸಾಧ್ಯವಾಗಿ ತೋರುತ್ತಿತ್ತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಸೈನ್ಯವರ್ಣನೇ ವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಸೈನ್ಯವರ್ಣನೆಯೆಂಬ ಇಪ್ಪತ್ತನೇ ಅಧ್ಯಾಯವು.