019 ಪಾಂಡವಸೈನ್ಯವ್ಯೂಹಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭಗವದ್ಗೀತಾ ಪರ್ವ

ಅಧ್ಯಾಯ 19

ಸಾರ

ಪಾಂಡವರ ಸೇನಾವ್ಯೂಹ (1-16). ಪಾಂಡವ ಸೇನೆಯ ವರ್ಣನೆ (17-44).

06019001 ಧೃತರಾಷ್ಟ್ರ ಉವಾಚ।
06019001a ಅಕ್ಷೌಹಿಣ್ಯೋ ದಶೈಕಾಂ ಚ ವ್ಯೂಢಾಂ ದೃಷ್ಟ್ವಾ ಯುಧಿಷ್ಠಿರಃ।
06019001c ಕಥಮಲ್ಪೇನ ಸೈನ್ಯೇನ ಪ್ರತ್ಯವ್ಯೂಹತ ಪಾಂಡವಃ।।

ಧೃತರಾಷ್ಟ್ರನು ಹೇಳಿದನು: “ಹನ್ನೊಂದು ಅಕ್ಷೌಹಿಣೀ ಸೇನೆಯು ವ್ಯೂಹಗೊಂಡಿದುದನ್ನು ನೋಡಿದ ಪಾಂಡವ ಯುಧಿಷ್ಠಿರನು ಕಡಿಮೆ ಸೇನೆಯಿಂದ ಹೇಗೆ ಪ್ರತಿವ್ಯೂಹವನ್ನು ರಚಿಸಿದನು?

06019002a ಯೋ ವೇದ ಮಾನುಷಂ ವ್ಯೂಹಂ ದೈವಂ ಗಾಂಧರ್ವಮಾಸುರಂ।
06019002c ಕಥಂ ಭೀಷ್ಮಂ ಸ ಕೌಂತೇಯಃ ಪ್ರತ್ಯವ್ಯೂಹತ ಪಾಂಡವಃ।।

ಮಾನುಷ, ದೈವ, ಗಾಂಧರ್ವ, ಆಸುರ ವ್ಯೂಹಗಳನ್ನು ತಿಳಿದಿದ್ದ ಭೀಷ್ಮನನ್ನು ಎದುರಿಸಿ ಕೌಂತೇಯ ಪಾಂಡವನು ಹೇಗೆ ವ್ಯೂಹವನ್ನು ರಚಿಸಿದನು?”

06019003 ಸಂಜಯ ಉವಾಚ।
06019003a ಧಾರ್ತರಾಷ್ಟ್ರಾಣ್ಯನೀಕಾನಿ ದೃಷ್ಟ್ವಾ ವ್ಯೂಢಾನಿ ಪಾಂಡವಃ।
06019003c ಅಭ್ಯಭಾಷತ ಧರ್ಮಾತ್ಮಾ ಧರ್ಮರಾಜೋ ಧನಂಜಯಂ।।

ಸಂಜಯನು ಹೇಳಿದನು: “ಧಾರ್ತರಾಷ್ಟ್ರರ ಸೇನೆಗಳೂ ವ್ಯೂಹಗೊಂಡಿದನ್ನು ನೋಡಿದ ಪಾಂಡವ ಧರ್ಮಾತ್ಮ ಧರ್ಮರಾಜನು ಧನಂಜಯನಿಗೆ ಹೇಳಿದನು:

06019004a ಮಹರ್ಷೇರ್ವಚನಾತ್ತಾತ ವೇದಯಂತಿ ಬೃಹಸ್ಪತೇಃ।
06019004c ಸಂಹತಾನ್ಯೋಧಯೇದಲ್ಪಾನ್ಕಾಮಂ ವಿಸ್ತಾರಯೇದ್ಬಹೂನ್।।

“ಅಯ್ಯಾ! ಮಹರ್ಷಿ ಬೃಹಸ್ಪತಿಯ ಮಾತುಗಳಂತೆ ಕಡಿಮೆಯಿರುವ ಸೇನೆಯು ಒಂದಕ್ಕೊಂದು ತಾಗಿಕೊಂಡು ಸಂಹತವಾಗಿರಬೇಕು. ದೊಡ್ಡ ಸೇನೆಯು ಬೇಕಾದಷ್ಟು ವಿಸ್ತಾರವಾಗಿ ಹರಡಿಕೊಳ್ಳಬಹುದು.

06019005a ಸೂಚೀಮುಖಮನೀಕಂ ಸ್ಯಾದಲ್ಪಾನಾಂ ಬಹುಭಿಃ ಸಹ।
06019005c ಅಸ್ಮಾಕಂ ಚ ತಥಾ ಸೈನ್ಯಮಲ್ಪೀಯಃ ಸುತರಾಂ ಪರೈಃ।।

ದೊಡ್ಡ ಸೇನೆಯೊಂದಿಗೆ ಯುದ್ಧಮಾಡುವಾಗ ಸಣ್ಣಸೇನೆಯ ಮುಖವು ಸೂಜಿಯ ಮೊನೆಯಂತಿರಬೇಕು. ಹೇಗೆ ನೋಡಿದರೂ ನಮ್ಮ ಸೇನೆಯು ಶತ್ರುಸೈನ್ಯಕ್ಕಿಂತ ಸಣ್ಣದು.

06019006a ಏತದ್ವಚನಮಾಜ್ಞಾಯ ಮಹರ್ಷೇರ್ವ್ಯೂಹ ಪಾಂಡವ।
06019006c ತಚ್ಚ್ರುತ್ವಾ ಧರ್ಮರಾಜಸ್ಯ ಪ್ರತ್ಯಭಾಷತ ಫಲ್ಗುಣಃ।।

ಪಾಂಡವ! ಮಹರ್ಷಿಯ ಈ ಮಾತನ್ನು ತಿಳಿದುಕೊಂಡು ವ್ಯೂಹವನ್ನು ರಚಿಸು.” ಧರ್ಮರಾಜನನ್ನು ಕೇಳಿ ಫಲ್ಗುಣನು ಉತ್ತರಿಸಿದನು.

06019007a ಏಷ ವ್ಯೂಹಾಮಿ ತೇ ರಾಜನ್ವ್ಯೂಹಂ ಪರಮದುರ್ಜಯಂ।
06019007c ಅಚಲಂ ನಾಮ ವಜ್ರಾಖ್ಯಂ ವಿಹಿತಂ ವಜ್ರಪಾಣಿನಾ।।

“ರಾಜನ್! ವಜ್ರವೆಂಬ ಹೆಸರಿನಿಂದ ಕರೆಯಲ್ಪಡುವ, ವಜ್ರಪಾಣಿಯೇ ಹೇಳಿಕೊಟ್ಟಿರುವ, ಪರಮ ದುರ್ಜಯವಾದ ವಜ್ರವೆಂಬ ವ್ಯೂಹವನ್ನು ನಿನಗಾಗಿ ರಚಿಸುತ್ತೇನೆ.

06019008a ಯಃ ಸ ವಾತ ಇವೋದ್ಧೂತಃ ಸಮರೇ ದುಃಸಹಃ ಪರೈಃ।
06019008c ಸ ನಃ ಪುರೋ ಯೋತ್ಸ್ಯತಿ ವೈ ಭೀಮಃ ಪ್ರಹರತಾಂ ವರಃ।।

ಒಡೆದುಹೋದ ಭಿರುಗಾಳಿಯಂತೆ ಮುನ್ನುಗ್ಗುವ, ಸಮರದಲ್ಲಿ ಶತ್ರುಗಳಿಗೆ ದುಃಸ್ಸಹನಾದ, ಪ್ರಹರಿಗಳಲ್ಲಿ ಶ್ರೇಷ್ಠ ಭೀಮನು ಇದರ ಮುಂದೆ ನಿಂತು ಹೋರಾಡುತ್ತಾನೆ.

06019009a ತೇಜಾಂಸಿ ರಿಪುಸೈನ್ಯಾನಾಂ ಮೃದ್ನನ್ಪುರುಷಸತ್ತಮಃ।
06019009c ಅಗ್ರೇಽಗ್ರಣೀರ್ಯಾಸ್ಯತಿ ನೋ ಯುದ್ಧೋಪಾಯವಿಚಕ್ಷಣಃ।।

ಯುದ್ಧದ ಉಪಾಯಗಳನ್ನು ಕಂಡುಕೊಂಡಿರುವ ಆ ಪುರುಷಸತ್ತಮನು ತನ್ನ ತೇಜಸ್ಸಿನಿಂದಲೇ ರಿಪು ಸೇನೆಗಳನ್ನು ಸದೆಬಡಿಯುತ್ತಾ ಮುಂದೆ ನಮ್ಮ ಅಗ್ರಣಿಯಾಗಿ ಹೋರಾಡುತ್ತಾನೆ.

06019010a ಯಂ ದೃಷ್ಟ್ವಾ ಪಾರ್ಥಿವಾಃ ಸರ್ವೇ ದುರ್ಯೋಧನಪುರೋಗಮಾಃ।
06019010c ನಿವರ್ತಿಷ್ಯಂತಿ ಸಂಭ್ರಾಂತಾಃ ಸಿಂಹಂ ಕ್ಷುದ್ರಮೃಗಾ ಇವ।।

ಅವನನ್ನು ನೋಡಿ ದುರ್ಯೋಧನನ ನಾಯಕತ್ವದಲ್ಲಿರುವ ಪಾರ್ಥಿವರೆಲ್ಲರೂ ಸಿಂಹನನ್ನು ಕಂಡ ಕ್ಷುದ್ರಮೃಗಗಳಂತೆ ಸಂಭ್ರಾಂತರಾಗಿ ಹಿಂದೆಸರಿಯುತ್ತಾರೆ.

06019011a ತಂ ಸರ್ವೇ ಸಂಶ್ರಯಿಷ್ಯಾಮಃ ಪ್ರಾಕಾರಮಕುತೋಭಯಂ।
06019011c ಭೀಮಂ ಪ್ರಹರತಾಂ ಶ್ರೇಷ್ಠಂ ವಜ್ರಪಾಣಿಮಿವಾಮರಾಃ।।

ನಾವೆಲ್ಲರೂ ಗೋಡೆಯಂತಿರುವ ಆ ಪ್ರಹರಿಗಳಲ್ಲಿ ಶ್ರೇಷ್ಠ ಭೀಮನ ಹಿಂದೆ, ವಜ್ರಪಾಣಿಯ ಹಿಂದೆ ಅಮರರು ಹೇಗೋ ಹಾಗೆ ಅಭಯರಾಗಿ ಆಶ್ರಯ ಪಡೆಯೋಣ.

06019012a ನ ಹಿ ಸೋಽಸ್ತಿ ಪುಮಾಽಲ್ಲೋಕೇ ಯಃ ಸಂಕ್ರುದ್ಧಂ ವೃಕೋದರಂ।
06019012c ದ್ರಷ್ಟುಮತ್ಯುಗ್ರಕರ್ಮಾಣಂ ವಿಷಹೇತ ನರರ್ಷಭಂ।।

ಆ ನರರ್ಷಭ ಉಗ್ರಕರ್ಮಿ ಸಂಕ್ರುದ್ಧ ವೃಕೋದರನನ್ನು ನೋಡಿ ಉಸಿರನ್ನು ಹಿಡಿದುಕೊಂಡಿರಬಹುದಾದ ಪುರುಷರು ಈ ಲೋಕದಲ್ಲಿ ಯಾರೂ ಇಲ್ಲ.

06019013a ಭೀಮಸೇನೋ ಗದಾಂ ಬಿಭ್ರದ್ವಜ್ರಸಾರಮಯೀಂ ದೃಢಾಂ।
06019013c ಚರನ್ವೇಗೇನ ಮಹತಾ ಸಮುದ್ರಮಪಿ ಶೋಷಯೇತ್।।

ವಜ್ರಸಾರದಿಂದ ತುಂಬಿದ ದೃಢ ಗದೆಯನ್ನು ಬೀಸಿ ಭೀಮಸೇನನು ಮಹಾವೇಗದಿಂದ ನಡೆದು ಸಮುದ್ರವನ್ನು ಕೂಡ ಬತ್ತಿಸಬಲ್ಲನು.

06019014a ಕೇಕಯಾ ಧೃಷ್ಟಕೇತುಶ್ಚ ಚೇಕಿತಾನಶ್ಚ ವೀರ್ಯವಾನ್।
06019014c ಏತ ತಿಷ್ಠಂತಿ ಸಾಮಾತ್ಯಾಃ ಪ್ರೇಕ್ಷಕಾಸ್ತೇ ನರೇಶ್ವರ।।
06019015a ಧೃತರಾಷ್ಟ್ರಸ್ಯ ದಾಯಾದಾ ಇತಿ ಬೀಭತ್ಸುರಬ್ರವೀತ್।

ಕೇಕಯರು, ಧೃಷ್ಟಕೇತು ಮತ್ತು ವೀರ್ಯವಾನ ಚೇಕಿತಾನರು ಅಮಾತ್ಯರೊಂದಿಗೆ ನರೇಶ್ವರ! ಧೃತರಾಷ್ಟ್ರನ ದಾಯಾದಾ ನಿನ್ನನ್ನು ನೋಡಿಕೊಳ್ಳಲು ನಿಂತಿರುತ್ತಾರೆ.” ಹೀಗೆ ಬೀಭತ್ಸುವು ಹೇಳಿದನು.

06019015c ಬ್ರುವಾಣಂ ತು ತಥಾ ಪಾರ್ಥಂ ಸರ್ವಸೈನ್ಯಾನಿ ಮಾರಿಷ।
06019015e ಅಪೂಜಯಂಸ್ತದಾ ವಾಗ್ಭಿರನುಕೂಲಾಭಿರಾಹವೇ।।

ಮಾರಿಷ! ಹಾಗೆ ಹೇಳಿದ ಪಾರ್ಥನನ್ನು ಸರ್ವಸೇನೆಗಳೂ ಅನುಕೂಲಕರ ಮಾತುಗಳಿಂದ ರಣರಂಗದಲ್ಲಿ ಗೌರವಿಸಿದರು.

06019016a ಏವಮುಕ್ತ್ವಾ ಮಹಾಬಾಹುಸ್ತಥಾ ಚಕ್ರೇ ಧನಂಜಯಃ।
06019016c ವ್ಯೂಹ್ಯ ತಾನಿ ಬಲಾನ್ಯಾಶು ಪ್ರಯಯೌ ಫಲ್ಗುನಸ್ತದಾ।।

ಹೀಗೆ ಹೇಳಿದ ಹಾಗೆಯೇ ಮಹಾಬಾಹು ಧನಂಜಯನು ಮಾಡಿದನು. ಆ ಸೇನೆಗಳನ್ನು ವ್ಯೂಹದಲ್ಲಿ ರಚಿಸಿ ಫಲ್ಗುನನು ಮುಂದುವರೆದನು.

06019017a ಸಂಪ್ರಯಾತಾನ್ಕುರೂನ್ದೃಷ್ಟ್ವಾ ಪಾಂಡವಾನಾಂ ಮಹಾಚಮೂಃ।
06019017c ಗಂಗೇವ ಪೂರ್ಣಾ ಸ್ತಿಮಿತಾ ಸ್ಯಂದಮಾನಾ ವ್ಯದೃಶ್ಯತ।।

ಕುರುಗಳ ಸೇನೆಯನ್ನು ಗುರಿಯನ್ನಾಗಿಟ್ಟುಕೊಂಡು ಹೋಗುತ್ತಿದ್ದ ಪಾಂಡವರ ಮಹಾಸೇನೆಯು ನೆರೆಬಂದ ಗಂಗೆಯು ಹರಿದು ಬರುತ್ತಿರುವಂತೆ ಕಂಡಿತು.

06019018a ಭೀಮಸೇನೋಽಗ್ರಣೀಸ್ತೇಷಾಂ ಧೃಷ್ಟದ್ಯುಮ್ನಶ್ಚ ಪಾರ್ಷತಃ।
06019018c ನಕುಲಃ ಸಹದೇವಶ್ಚ ಧೃಷ್ಟಕೇತುಶ್ಚ ವೀರ್ಯವಾನ್।।

ಅವರ ಅಗ್ರಣಿಗಳಾಗಿ ಭೀಮಸೇನ, ಪಾರ್ಷತ ಧೃಷ್ಟದ್ಯುಮ್ನ, ನಕುಲ, ಸಹದೇವರು ಮತ್ತು ವೀರ್ಯವಾನ್ ಧೃಷ್ಟಕೇತು ಇದ್ದರು.

06019019a ಸಮುದ್ಯೋಜ್ಯ ತತಃ ಪಶ್ಚಾದ್ರಾಜಾಪ್ಯಕ್ಷೌಹಿಣೀವೃತಃ।
06019019c ಭ್ರಾತೃಭಿಃ ಸಹ ಪುತ್ರೈಶ್ಚ ಸೋಽಭ್ಯರಕ್ಷತ ಪೃಷ್ಠತಃ।।

ಅವರ ನಂತರ ಅವರನ್ನು ಹಿಂದಿನಿಂದ ರಕ್ಷಿಸುತ್ತ, ಒಂದು ಅಕ್ಷೌಹಿಣೀ ಸೇನೆಯೊಂದಿಗೆ, ಸಹೋದರರು ಮತ್ತು ಮಕ್ಕಳನ್ನು ಕೂಡಿಕೊಂಡು ರಾಜ ವಿರಾಟನು ಹೊರಟನು.

06019020a ಚಕ್ರರಕ್ಷೌ ತು ಭೀಮಸ್ಯ ಮಾದ್ರೀಪುತ್ರೌ ಮಹಾದ್ಯುತೀ।
06019020c ದ್ರೌಪದೇಯಾಃ ಸಸೌಭದ್ರಾಃ ಪೃಷ್ಠಗೋಪಾಸ್ತರಸ್ವಿನಃ।।

ಮಹಾದ್ಯುತೀ ಭೀಮನ ಚಕ್ರಗಳನ್ನು ಮಾದ್ರೀಪುತ್ರರು ರಕ್ಷಿಸುತ್ತಿದ್ದರು. ಸೌಭದ್ರಿಯೊಂದಿಗೆ ದ್ರೌಪದೇಯರು ಆ ತರಸ್ವಿನಿಯನ್ನು ಹಿಂದಿನಿಂದ ರಕ್ಷಿಸುತ್ತಿದ್ದರು.

06019021a ಧೃಷ್ಟದ್ಯುಮ್ನಶ್ಚ ಪಾಂಚಾಲ್ಯಸ್ತೇಷಾಂ ಗೋಪ್ತಾ ಮಹಾರಥಃ।
06019021c ಸಹಿತಃ ಪೃತನಾಶೂರೈ ರಥಮುಖ್ಯೈಃ ಪ್ರಭದ್ರಕೈಃ।।

ಅವರನ್ನು ಮಹಾರಥಿ ಪಾಂಚಾಲ ಧೃಷ್ಟದ್ಯುಮ್ನನು ಪ್ರಭದ್ರಕ ರಥಮುಖ್ಯರ, ಶೂರರ ಸೇನೆಯೊಂದಿಗೆ ರಕ್ಷಿಸಿದನು.

06019022a ಶಿಖಂಡೀ ತು ತತಃ ಪಶ್ಚಾದರ್ಜುನೇನಾಭಿರಕ್ಷಿತಃ।
06019022c ಯತ್ತೋ ಭೀಷ್ಮವಿನಾಶಾಯ ಪ್ರಯಯೌ ಭರತರ್ಷಭ।।

ಭರತರ್ಷಭ! ಅವರ ನಂತರ ಅರ್ಜುನನಿಂದ ರಕ್ಷಿತನಾಗಿ ಶಿಖಂಡಿಯು ಭೀಷ್ಮನ ವಿನಾಶಕ್ಕೆ ಮುಂದುವರೆದನು.

06019023a ಪೃಷ್ಠಗೋಪೋಽರ್ಜುನಸ್ಯಾಪಿ ಯುಯುಧಾನೋ ಮಹಾರಥಃ।
06019023c ಚಕ್ರರಕ್ಷೌ ತು ಪಾಂಚಾಲ್ಯೌ ಯುಧಾಮನ್ಯೂತ್ತಮೌಜಸೌ।।

ಅರ್ಜುನನ ಹಿಂದೆ ಮಹಾರಥಿ ಯುಯುಧಾನನಿದ್ದನು. ಅರ್ಜುನನ ರಥಚಕ್ರಗಳನ್ನು ಪಾಂಚಾಲ ಯುಧಾಮನ್ಯು-ಉತ್ತಮೌಜಸರು ರಕ್ಷಿಸುತ್ತಿದ್ದರು.

06019024a ರಾಜಾ ತು ಮಧ್ಯಮಾನೀಕೇ ಕುಂತೀಪುತ್ರೋ ಯುಧಿಷ್ಠಿರಃ।
06019024c ಬೃಹದ್ಭಿಃ ಕುಂಜರೈರ್ಮತ್ತೈಶ್ಚಲದ್ಭಿರಚಲೈರಿವ।।

ಸೇನೆಯ ಮಧ್ಯೆ ಕುಂತೀಪುತ್ರ ರಾಜಾ ಯುಧಿಷ್ಠಿರನು ಅಚಲ ಪರ್ವತಗಳು ಚಲಿಸುತ್ತಿರುವವೋ ಎಂಬಂತಿದ್ದ ಅನೇಕ ಮದಿಸಿದ ಆನೆಗೊಳಡನಿದ್ದನು.

06019025a ಅಕ್ಷೌಹಿಣ್ಯಾ ಚ ಪಾಂಚಾಲ್ಯೋ ಯಜ್ಞಸೇನೋ ಮಹಾಮನಾಃ।
06019025c ವಿರಾಟಮನ್ವಯಾತ್ಪಶ್ಚಾತ್ಪಾಂಡವಾರ್ಥೇ ಪರಾಕ್ರಮೀ।।

ಮಹಾಮನಸ್ವಿ ಪರಾಕ್ರಮೀ ಪಾಂಚಾಲ್ಯ ಯಜ್ಞಸೇನನು ಪಾಂಡವನಿಗಾಗಿ ಒಂದು ಅಕ್ಷೌಹಿಣೀ ಸೇನೆಯೊಂದಿಗೆ ವಿರಾಟನನ್ನು ಅನುಸರಿಸಿ ಹೋಗುತ್ತಿದ್ದನು.

06019026a ತೇಷಾಮಾದಿತ್ಯಚಂದ್ರಾಭಾಃ ಕನಕೋತ್ತಮಭೂಷಣಾಃ।
06019026c ನಾನಾಚಿಹ್ನಧರಾ ರಾಜನ್ರಥೇಷ್ವಾಸನ್ಮಹಾಧ್ವಜಾಃ।।

ರಾಜನ್! ಆ ರಾಜರ ರಥಗಳ ಮೇಲೆ ನಾನಾ ಚಿಹ್ನೆಗಳನ್ನು ಧರಿಸಿದ, ಉತ್ತಮ ಕನಕ ಭೂಷಣಗಳ ಮತ್ತು ಆದಿತ್ಯ-ಚಂದ್ರರ ಕಾಂತಿಯುಳ್ಳ ಮಹಾಧ್ವಜಗಳಿದ್ದವು.

06019027a ಸಮುತ್ಸರ್ಪ್ಯ ತತಃ ಪಶ್ಚಾದ್ಧೃಷ್ಟದ್ಯುಮ್ನೋ ಮಹಾರಥಃ।
06019027c ಭ್ರಾತೃಭಿಃ ಸಹ ಪುತ್ರೈಶ್ಚ ಸೋಽಭ್ಯರಕ್ಷದ್ಯುಧಿಷ್ಠಿರಂ।।

ಅವರು ಮುಂದುವರೆದ ನಂತರ ಮಹಾರಥಿ ಧೃಷ್ಟದ್ಯುಮ್ನನು ಸಹೋದರರು ಮತ್ತು ಪುತ್ರರೊಡಗೂಡಿ ಯುಧಿಷ್ಠಿರನನ್ನು ಹಿಂದಿನಿಂದ ರಕ್ಷಿಸಿದನು.

06019028a ತ್ವದೀಯಾನಾಂ ಪರೇಷಾಂ ಚ ರಥೇಷು ವಿವಿಧಾನ್ಧ್ವಜಾನ್।
06019028c ಅಭಿಭೂಯಾರ್ಜುನಸ್ಯೈಕೋ ಧ್ವಜಸ್ತಸ್ಥೌ ಮಹಾಕಪಿಃ।।

ನಿನ್ನ ಮತ್ತು ಅವರ ರಥಗಳಲ್ಲಿರುವ ವಿವಿಧ ಧ್ವಜಗಳಲ್ಲಿ ಅರ್ಜುನನೊಬ್ಬನದೇ ಧ್ವಜದಲ್ಲಿದ್ದ ಮಹಾಕಪಿಯು ಎದ್ದು ಕಾಣಿಸುತ್ತಿದ್ದನು.

06019029a ಪಾದಾತಾಸ್ತ್ವಗ್ರತೋಽಗಚ್ಛನ್ನಸಿಶಕ್ತ್ಯೃಷ್ಟಿಪಾಣಯಃ।
06019029c ಅನೇಕಶತಸಾಹಸ್ರಾ ಭೀಮಸೇನಸ್ಯ ರಕ್ಷಿಣಃ।।

ಭೀಮಸೇನನ ರಕ್ಷಣೆಗೆಂದು ಖಡ್ಗ-ಶಕ್ತಿ-ಋಷ್ಟಿಪಾಣಿಗಳಾದ ಅನೇಕ ಶತಸಹಸ್ರ ಪದಾತಿಗಳು ಮುಂದೆ ಹೋಗುತ್ತಿದ್ದರು.

06019030a ವಾರಣಾ ದಶಸಾಹಸ್ರಾಃ ಪ್ರಭಿನ್ನಕರಟಾಮುಖಾಃ।
06019030c ಶೂರಾ ಹೇಮಮಯೈರ್ಜಾಲೈರ್ದೀಪ್ಯಮಾನಾ ಇವಾಚಲಾಃ।।
06019031a ಕ್ಷರಂತ ಇವ ಜೀಮೂತಾ ಮದಾರ್ದ್ರಾಃ ಪದ್ಮಗಂಧಿನಃ।
06019031c ರಾಜಾನಮನ್ವಯುಃ ಪಶ್ಚಾಚ್ಚಲಂತ ಇವ ಪರ್ವತಾಃ।।

ಮದದ ನೀರು ಸುರಿಯುತ್ತಿರುವ, ಶೂರ, ಹೇಮಮಯಜಾಲಗಳಿಂದ ಬೆಳಗುತ್ತಿರುವ ಪರ್ವತಗಳಂತಿದ್ದ, ಮಳೆಸುರಿಸುವ ಮೋಡಗಳಂತಿದ್ದ, ಕಮಲಗಳ ಸುಗಂಧವನ್ನು ಸೂಸುತ್ತಿದ್ದ, ಚಲಿಸುತ್ತಿರುವ ಪರ್ವತಗಳಂತಿದ್ದ ಹತ್ತು ಸಾವಿರ ಆನೆಗಳು ರಾಜನನ್ನು ಹಿಂಬಾಲಿಸಿದವು.

06019032a ಭೀಮಸೇನೋ ಗದಾಂ ಭೀಮಾಂ ಪ್ರಕರ್ಷನ್ಪರಿಘೋಪಮಾಂ।
06019032c ಪ್ರಚಕರ್ಷ ಮಹತ್ಸೈನ್ಯಂ ದುರಾಧರ್ಷೋ ಮಹಾಮನಾಃ।।

ಪರಿಘದಂತಿದ್ದ ಉಗ್ರ ಗದೆಯನ್ನು ಬೀಸುತ್ತ ದುರಾಧರ್ಷ ಮಹಾಮನಸ್ವಿ ಭೀಮಸೇನನು ಮಹಾ ಸೇನೆಯನ್ನು ಪುಡಿಮಾಡುವಂತಿದ್ದನು.

06019033a ತಮರ್ಕಮಿವ ದುಷ್ಪ್ರೇಕ್ಷ್ಯಂ ತಪಂತಂ ರಶ್ಮಿಮಾಲಿನಂ।
06019033c ನ ಶೇಕುಃ ಸರ್ವತೋ ಯೋಧಾಃ ಪ್ರತಿವೀಕ್ಷಿತುಮಂತಿಕೇ।।

ಕಿರಣಮಾಲಿನಿ ಸುಡುತ್ತಿರುವ ಸೂರ್ಯನನ್ನು ನೋಡುವುದು ಹೇಗೆ ಕಷ್ಟವೋ ಹಾಗೆ ಸರ್ವ ಯೋಧರೂ ಅವನನ್ನು ನೇರವಾಗಿ ನೋಡಲು ಅಶಕ್ಯರಾದರು.

06019034a ವಜ್ರೋ ನಾಮೈಷ ತು ವ್ಯೂಹೋ ದುರ್ಭಿದಃ ಸರ್ವತೋಮುಖಃ।
06019034c ಚಾಪವಿದ್ಯುದ್ಧ್ವಜೋ ಘೋರೋ ಗುಪ್ತೋ ಗಾಂಡೀವಧನ್ವನಾ।।

ಸರ್ವತೋಮುಖವಾದ, ಭೇದಿಸಲು ಕಷ್ಟವಾದ, ಚಾಪವಿದ್ಯುಧ್ವಜದ ವಜ್ರವೆಂಬ ಹೆಸರಿನ ಈ ವ್ಯೂಹವನ್ನು ಘೋರ ಗಾಂಡೀವಧನ್ವಿಯು ರಕ್ಷಿಸುತ್ತಿದ್ದನು.

06019035a ಯಂ ಪ್ರತಿವ್ಯೂಹ್ಯ ತಿಷ್ಠಂತಿ ಪಾಂಡವಾಸ್ತವ ವಾಹಿನೀಂ।
06019035c ಅಜೇಯೋ ಮಾನುಷೇ ಲೋಕೇ ಪಾಂಡವೈರಭಿರಕ್ಷಿತಃ।।

ಹೀಗೆ ನಿನ್ನ ಸೇನೆಗೆ ಪ್ರತಿವ್ಯೂಹವನ್ನು ರಚಿಸಿ ಪಾಂಡವರು ಕಾಯುತ್ತಿದ್ದರು. ಪಾಂಡವರಿಂದ ರಕ್ಷಿತವಾದ ಆ ಸೇನೆಯು ಮನುಷ್ಯ ಲೋಕದಲ್ಲಿ ಅಜೇಯವಾಗಿದ್ದಿತು.

06019036a ಸಂಧ್ಯಾಂ ತಿಷ್ಠತ್ಸು ಸೈನ್ಯೇಷು ಸೂರ್ಯಸ್ಯೋದಯನಂ ಪ್ರತಿ।
06019036c ಪ್ರಾವಾತ್ಸಪೃಷತೋ ವಾಯುರನಭ್ರೇ ಸ್ತನಯಿತ್ನುಮಾನ್।।

ಸೇನೆಗಳು ಸಂಧ್ಯೆಯಲ್ಲಿ ಸೂರ್ಯೋದಯವನ್ನು ಕಾಯುತ್ತಿರಲು ಮೋಡಗಳಿಲ್ಲದ ಆಕಾಶದಿಂದ ತುಂತುರು ಹನಿಗಳು ಬಿದ್ದವು ಮತ್ತು ಗುಡುಗಿನ ಶಬ್ಧವು ಕೇಳಿಬಂದಿತು.

06019037a ವಿಷ್ವಗ್ವಾತಾಶ್ಚ ವಾಂತ್ಯುಗ್ರಾ ನೀಚೈಃ ಶರ್ಕರಕರ್ಷಿಣಃ।
06019037c ರಜಶ್ಚೋದ್ಧೂಯಮಾನಂ ತು ತಮಸಾಚ್ಚಾದಯಜ್ಜಗತ್।।

ಎಲ್ಲ ಕಡೆಯಿಂದಲೂ ಒಣ ಹವೆಯು ಬೀಸತೊಡಗಿತು. ಅದು ನೆಲದಿಂದ ಮೊನಚಾದ ಕಲ್ಲಿನ ಹರಳುಗಳನ್ನು ಮೇಲೆಬ್ಬಿಸಿ ಹರಡಿತು. ಮತ್ತು ದಟ್ಟವಾದ ಧೂಳು ಮೇಲೆದ್ದು ಕತ್ತಲೆ ಆವರಿಸಿತು.

06019038a ಪಪಾತ ಮಹತೀ ಚೋಲ್ಕಾ ಪ್ರಾಙ್ಮುಖೀ ಭರತರ್ಷಭ।
06019038c ಉದ್ಯಂತಂ ಸೂರ್ಯಮಾಹತ್ಯ ವ್ಯಶೀರ್ಯತ ಮಹಾಸ್ವನಾ।।

ಭರತರ್ಷಭ! ಪೂರ್ವದಲ್ಲಿ ಮಹಾ ಉಲ್ಕೆಗಳು ಬಿದ್ದವು ಮತ್ತು ಉದಯಿಸುತ್ತಿರುವ ಸೂರ್ಯನನ್ನು ಹೊಡೆದು ಮಹಾ ಶಬ್ಧದೊಂದಿಗೆ ಒಡೆದು ಚೂರಾಗುತ್ತಿದ್ದವು.

06019039a ಅಥ ಸಜ್ಜೀಯಮಾನೇಷು ಸೈನ್ಯೇಷು ಭರತರ್ಷಭ।
06019039c ನಿಷ್ಪ್ರಭೋಽಭ್ಯುದಿಯಾತ್ಸೂರ್ಯಃ ಸಘೋಷೋ ಭೂಶ್ಚಚಾಲ ಹ।
06019039e ವ್ಯಶೀರ್ಯತ ಸನಾದಾ ಚ ತದಾ ಭರತಸತ್ತಮ।।

ಭರತರ್ಷಭ! ಭರತಸತ್ತಮ! ಸೇನೆಗಳು ಈ ರೀತಿ ಸಜ್ಜಾಗಿರುವಾಗ ಕಾಂತಿಯನ್ನು ಕಳೆದುಕೊಂಡ ಸೂರ್ಯನು ಉದಯಿಸಿದನು. ಶಬ್ಧದೊಂದಿಗೆ ಭೂಮಿಯು ನಡುಗಿತು, ಮತ್ತು ಶಬ್ಧದೊಂದಿಗೆ ಬಿರಿಯಿತು.

06019040a ನಿರ್ಘಾತಾ ಬಹವೋ ರಾಜನ್ದಿಕ್ಷು ಸರ್ವಾಸು ಚಾಭವನ್।
06019040c ಪ್ರಾದುರಾಸೀದ್ರಜಸ್ತೀವ್ರಂ ನ ಪ್ರಾಜ್ಞಾಯತ ಕಿಂ ಚನ।।

ರಾಜನ್! ಆಗ ಬಹಳಷ್ಟು ಗುಡುಗಿನ ಶಬ್ಧವು ಎಲ್ಲ ಕಡೆಗಳಿಂದ ಕೇಳಿ ಬಂದಿತು. ಧೂಳು ಎಷ್ಟು ದಟ್ಟವಾಗಿತ್ತೆಂದರೆ ಏನೂ ಕೂಡ ಕಾಣುತ್ತಿರಲಿಲ್ಲ.

06019041a ಧ್ವಜಾನಾಂ ಧೂಯಮಾನಾನಾಂ ಸಹಸಾ ಮಾತರಿಶ್ವನಾ।
06019041c ಕಿಂಕಿಣೀಜಾಲನದ್ಧಾನಾಂ ಕಾಂಚನಸ್ರಗ್ವತಾಂ ರವೈಃ।।
06019042a ಮಹತಾಂ ಸಪತಾಕಾನಾಮಾದಿತ್ಯಸಮತೇಜಸಾಂ।
06019042c ಸರ್ವಂ ಝಣಝಣೀಭೂತಮಾಸೀತ್ತಾಲವನೇಷ್ವಿವ।।

ಕಿಂಕಿಣೀಜಾಲಗಳಿಂದ ಕಟ್ಟಲ್ಪಟ್ಟ, ಕಾಂಚನ ಮಾಲೆಗಳಿಂದ ಅಲಂಕರಿಸಲ್ಪಟ್ಟ, ಆದಿತ್ಯ ಸಮ ತೇಜಸ್ಸುಳ್ಳ ಆ ಎತ್ತರ ಧ್ವಜಗಳು ಗಾಳಿಯ ವೇಗಕ್ಕೆ ಅಲುಗಾಡಿ ತಾಲವೃಕ್ಷದ ಅಡವಿಯಂತೆ ಎಲ್ಲವೂ ಝಣಝಣಿಸಿದವು.

06019043a ಏವಂ ತೇ ಪುರುಷವ್ಯಾಘ್ರಾಃ ಪಾಂಡವಾ ಯುದ್ಧನಂದಿನಃ।
06019043c ವ್ಯವಸ್ಥಿತಾಃ ಪ್ರತಿವ್ಯೂಹ್ಯ ತವ ಪುತ್ರಸ್ಯ ವಾಹಿನೀಂ।।

ಹೀಗೆ ಆ ಯುದ್ಧನಂದಿನ ಪುರುಷವ್ಯಾಘ್ರ ಪಾಂಡವರು ನಿನ್ನ ಪುತ್ರನ ವಾಹಿನಿಗೆ ಪ್ರಹಿವ್ಯೂಹವನ್ನು ರಚಿಸಿ ವ್ಯವಸ್ಥಿತರಾದರು.

06019044a ಸ್ರಂಸಂತ ಇವ ಮಜ್ಜಾನೋ ಯೋಧಾನಾಂ ಭರತರ್ಷಭ।
06019044c ದೃಷ್ಟ್ವಾಗ್ರತೋ ಭೀಮಸೇನಂ ಗದಾಪಾಣಿಮವಸ್ಥಿತಂ।।

ಭರತರ್ಷಭ! ಗದಾಪಾಣಿಯಾಗಿ ಮುಂದೆ ನಿಂತಿದ್ದ ಭೀಮಸೇನನು ಯೋಧರ ಮಜ್ಜೆಗಳನ್ನೇ ಹೀರಿಕೊಳ್ಳುತ್ತಾನೋ ಎಂದು ತೋರುತ್ತಿದ್ದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಪಾಂಡವಸೈನ್ಯವ್ಯೂಹೇ ಏಕೋನವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಪಾಂಡವಸೈನ್ಯವ್ಯೂಹವೆಂಬ ಹತ್ತೊಂಭತ್ತನೇ ಅಧ್ಯಾಯವು.