017 ಸೈನ್ಯವರ್ಣನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭಗವದ್ಗೀತಾ ಪರ್ವ

ಅಧ್ಯಾಯ 17

ಸಾರ

ಯುದ್ಧಕ್ಕೆ ಸೇರಿದ್ದ ಮಹೀಪಾಲರಿಗೆ ಭೀಷ್ಮನ ಮಾತು; ಕರ್ಣನು ತನ್ನ ಅನುಯಾಯಿ-ಬಂಧುಗಳೊಡನೆ ಶಸ್ತ್ರವನ್ನು ಕೆಳಗಿಟ್ಟುದುದು (1-13). ಕರ್ಣನಿಲ್ಲದೇ ತವಕಗೊಂಡ ಕೌರವ ಸೇನೆಯ ರಣಯಾತ್ರೆ (14-39).

06017001 ಸಂಜಯ ಉವಾಚ।
06017001a ಯಥಾ ಸ ಭಗವಾನ್ವ್ಯಾಸಃ ಕೃಷ್ಣದ್ವೈಪಾಯನೋಽಬ್ರವೀತ್।
06017001c ತಥೈವ ಸಹಿತಾಃ ಸರ್ವೇ ಸಮಾಜಗ್ಮುರ್ಮಹೀಕ್ಷಿತಃ।।

ಸಂಜಯನು ಹೇಳಿದನು: “ಆ ಭಗವಾನ ವ್ಯಾಸ ಕೃಷ್ಣದ್ವೈಪಾಯನನು ಹೇಳಿದಹಾಗೆಯೇ ಎಲ್ಲ ಮಹೀಕ್ಷಿತರೂ ಒಟ್ಟಿಗೇ ಸೇರಿದ್ದರು.

06017002a ಮಘಾವಿಷಯಗಃ ಸೋಮಸ್ತದ್ದಿನಂ ಪ್ರತ್ಯಪದ್ಯತ।
06017002c ದೀಪ್ಯಮಾನಾಶ್ಚ ಸಂಪೇತುರ್ದಿವಿ ಸಪ್ತ ಮಹಾಗ್ರಹಾಃ।।

ಆ ದಿನ ಸೋಮನು ಮಘಾನಕ್ಷತ್ರದಲ್ಲಿದ್ದನು. ಆಕಾಶದಲ್ಲಿ ಏಳು ಮಹಾಗ್ರಹಗಳು ಬೆಳಗುತ್ತಿರುವುದು ಕಂಡುಬರುತ್ತಿತ್ತು.

06017003a ದ್ವಿಧಾಭೂತ ಇವಾದಿತ್ಯ ಉದಯೇ ಪ್ರತ್ಯದೃಶ್ಯತ।
06017003c ಜ್ವಲಂತ್ಯಾ ಶಿಖಯಾ ಭೂಯೋ ಭಾನುಮಾನುದಿತೋ ದಿವಿ।।

ಉದಯಕಾಲದಲ್ಲಿ ಸೂರ್ಯನು ಎರಡಾಗಿದ್ದನೋ ಎನ್ನುವಂತೆ ತೋರುತ್ತಿತ್ತು. ಅಲ್ಲದೇ ಆ ಭಾನುವು ಆಕಾಶದಲ್ಲಿ ಕಾಣಿಸಿಕೊಂಡಾಗ ಜ್ವಾಲೆಗಳೊಂದಿಗೆ ಉರಿಯುತ್ತಿರುವಂತೆ ತೋರುತ್ತಿದ್ದನು.

06017004a ವವಾಶಿರೇ ಚ ದೀಪ್ತಾಯಾಂ ದಿಶಿ ಗೋಮಾಯುವಾಯಸಾಃ।
06017004c ಲಿಪ್ಸಮಾನಾಃ ಶರೀರಾಣಿ ಮಾಂಸಶೋಣಿತಭೋಜನಾಃ।।

ಉರಿದು ಬೆಳಗುತ್ತಿದ್ದ ದಿಕ್ಕುಗಳಿಂದ ಮೃತದೇಹಗಳನ್ನು ಭಕ್ಷಿಸುವ ನರಿ-ಕಾಗೆಗಳು ಕೆಳಗುರುಳುವ ಶರೀರಗಳ ಮಾಂಸ-ರಕ್ತಗಳ ಭೋಜನಗಳಿಗಾಗಿ ಕಾದು ಕೂಗುತ್ತಿರುವುದು ಕೇಳಿ ಬರುತ್ತಿತ್ತು.

06017005a ಅಹನ್ಯಹನಿ ಪಾರ್ಥಾನಾಂ ವೃದ್ಧಃ ಕುರುಪಿತಾಮಹಃ।
06017005c ಭರದ್ವಾಜಾತ್ಮಜಶ್ಚೈವ ಪ್ರಾತರುತ್ಥಾಯ ಸಂಯತೌ।।
06017006a ಜಯೋಽಸ್ತು ಪಾಂಡುಪುತ್ರಾಣಾಂ ಇತ್ಯೂಚತುರರಿಂದಮೌ।
06017006c ಯುಯುಧಾತೇ ತವಾರ್ಥಾಯ ಯಥಾ ಸ ಸಮಯಃ ಕೃತಃ।।

ಅರಿಂದಮರಾದ ವೃದ್ಧ ಕುರುಪಿತಾಮಹ ಮತ್ತು ಭರದ್ವಾಜಾತ್ಮಜರು, ಮಾಡಿಕೊಂಡ ಒಪ್ಪಂದದಂತೆ ನಿನಗಾಗಿ ಪಾರ್ಥರನ್ನು ಎದುರಿಸಿ ಯುದ್ಧಮಾಡುವವರಾಗಿದ್ದರೂ, ಪ್ರತಿದಿನವೂ ಬೆಳಿಗ್ಗೆ ಎದ್ದು ಮನಸ್ಸನ್ನು ಸಂಯಮದಲ್ಲಿರಿಸಿಕೊಂಡು “ಪಾಂಡುಪುತ್ರರಿಗೆ ಜಯವಾಗಲಿ!” ಎಂದು ಹೇಳುತ್ತಿದ್ದರು.

06017007a ಸರ್ವಧರ್ಮವಿಶೇಷಜ್ಞಃ ಪಿತಾ ದೇವವ್ರತಸ್ತವ।
06017007c ಸಮಾನೀಯ ಮಹೀಪಾಲಾನಿದಂ ವಚನಮಬ್ರವೀತ್।।

ನಿನ್ನ ಪಿತ ಸರ್ಮಧರ್ಮವಿಶೇಷಜ್ಞ ದೇವವ್ರತನು ಮಹೀಪಾಲರನ್ನು ಕರೆದು ಈ ಮಾತನ್ನಾಡಿದನು:

06017008a ಇದಂ ವಃ ಕ್ಷತ್ರಿಯಾ ದ್ವಾರಂ ಸ್ವರ್ಗಾಯಾಪಾವೃತಂ ಮಹತ್।
06017008c ಗಚ್ಛಧ್ವಂ ತೇನ ಶಕ್ರಸ್ಯ ಬ್ರಹ್ಮಣಶ್ಚ ಸಲೋಕತಾಂ।।

“ಕ್ಷತ್ರಿಯರೇ! ಸ್ವರ್ಗದ ಈ ಮಹಾದ್ವಾರವು ತೆರೆದುಕೊಂಡಿದೆ. ಇದರ ಮೂಲಕ ಶಕ್ರ ಮತ್ತು ಬ್ರಹ್ಮನ ಲೋಕಗಳನ್ನು ಸೇರಿ.

06017009a ಏಷ ವಃ ಶಾಶ್ವತಃ ಪಂಥಾಃ ಪೂರ್ವೈಃ ಪೂರ್ವತರೈರ್ಗತಃ।
06017009c ಸಂಭಾವಯತ ಚಾತ್ಮಾನಮವ್ಯಗ್ರಮನಸೋ ಯುಧಿ।।

ಹಿಂದೆ ಹೋಗಿರುವ ಹಿಂದಿನವರು ಇದೇ ದಾರಿಯಲ್ಲಿ ಹೋಗಿದ್ದರು. ಯುದ್ಧದಲ್ಲಿ ಅವ್ಯಗ್ರಮನಸ್ಕರಾಗಿ ಇರುವಂತೆ ನಿಮ್ಮನ್ನು ನೀವು ನೋಡಿಕೊಳ್ಳಿ.

06017010a ನಾಭಾಗೋ ಹಿ ಯಯಾತಿಶ್ಚ ಮಾಂಧಾತಾ ನಹುಷೋ ನೃಗಃ।
06017010c ಸಂಸಿದ್ಧಾಃ ಪರಮಂ ಸ್ಥಾನಂ ಗತಾಃ ಕರ್ಮಭಿರೀದೃಶೈಃ।।

ಏಕೆಂದರೆ ನಾಭಾಗ, ಯಯಾತಿ, ಮಾಂಧಾತ, ನಹುಷ, ನೃಗ ಮೊದಲಾದವರು ಇಂತಹದೇ ಕರ್ಮಗಳಿಂದ ಸಂಸಿದ್ಧರಾಗಿ ಪರಮ ಗತಿಯನ್ನು ಪಡೆದರು.

06017011a ಅಧರ್ಮಃ ಕ್ಷತ್ರಿಯಸ್ಯೈಷ ಯದ್ವ್ಯಾಧಿಮರಣಂ ಗೃಹೇ।
06017011c ಯದಾಜೌ ನಿಧನಂ ಯಾತಿ ಸೋಽಸ್ಯ ಧರ್ಮಃ ಸನಾತನಃ।।

ಮನೆಯಲ್ಲಿ ವ್ಯಾಧಿಯಿಂದ ಮರಣಹೊಂದುವುದು ಕ್ಷತ್ರಿಯರಿಗೆ ಅಧರ್ಮ. ಯುದ್ಧದಲ್ಲಿ ನಿಧನವನ್ನು ಹೊಂದುವುದೇ ಇವರ ಸನಾತನ ಧರ್ಮ.”

06017012a ಏವಮುಕ್ತಾ ಮಹೀಪಾಲಾ ಭೀಷ್ಮೇಣ ಭರತರ್ಷಭ।
06017012c ನಿರ್ಯಯುಃ ಸ್ವಾನ್ಯನೀಕಾನಿ ಶೋಭಯಂತೋ ರಥೋತ್ತಮೈಃ।।

ಭರತರ್ಷಭ! ಭೀಷ್ಮನು ಹೀಗೆ ಹೇಳಲು ಮಹೀಪಾಲರು ಉತ್ತಮ ರಥಗಳಿಂದ ಶೋಭಿಸುತ್ತಿದ್ದ ತಮ್ಮ ತಮ್ಮ ಸೇನೆಗಳಿಗೆ ತೆರಳಿದರು.

06017013a ಸ ತು ವೈಕರ್ತನಃ ಕರ್ಣಃ ಸಾಮಾತ್ಯಃ ಸಹ ಬಂಧುಭಿಃ।
06017013c ನ್ಯಾಸಿತಃ ಸಮರೇ ಶಸ್ತ್ರಂ ಭೀಷ್ಮೇಣ ಭರತರ್ಷಭ।।

ಆದರೆ ವೈಕರ್ತನ ಕರ್ಣನು ಮಾತ್ರ ತನ್ನ ಅಮಾತ್ಯ- ಬಂಧುಗಳೊಂದಿಗೆ ಭೀಷ್ಮನ ಸಮರದಲ್ಲಿ ಶಸ್ತ್ರವನ್ನು ಕೆಳಗಿಟ್ಟನು.

06017014a ಅಪೇತಕರ್ಣಾಃ ಪುತ್ರಾಸ್ತೇ ರಾಜಾನಶ್ಚೈವ ತಾವಕಾಃ।
06017014c ನಿರ್ಯಯುಃ ಸಿಂಹನಾದೇನ ನಾದಯಂತೋ ದಿಶೋ ದಶ।।

ಆಗ ಕರ್ಣನಿಲ್ಲದೇ ತವಕಗೊಂಡ ನಿನ್ನ ಪುತ್ರರು ಮತ್ತು ರಾಜರು ಹತ್ತೂ ದಿಕ್ಕುಗಳನ್ನು ಸಿಂಹನಾದದಿಂದ ಮೊಳಗಿಸುತ್ತಾ ಹೊರಟರು.

06017015a ಶ್ವೇತೈಶ್ಚತ್ರೈಃ ಪತಾಕಾಭಿರ್ಧ್ವಜವಾರಣವಾಜಿಭಿಃ।
06017015c ತಾನ್ಯನೀಕಾನ್ಯಶೋಭಂತ ರಥೈರಥ ಪದಾತಿಭಿಃ।।

ಶ್ವೇತ ಛತ್ರಗಳಿಂದ, ಪತಾಕೆಗಳಿಂದ, ಧ್ವಜ, ಆನೆ, ಕುದುರೆಗಳಿಂದ, ರಥಗಳಿಂದ, ಪಾದಾತಿಗಳಿಂದ ಆ ಸೇನೆಗಳು ಶೋಭಿಸಿದವು.

06017016a ಭೇರೀಪಣವಶಬ್ದೈಶ್ಚ ಪಟಹಾನಾಂ ಚ ನಿಸ್ವನೈಃ।
06017016c ರಥನೇಮಿನಿನಾದೈಶ್ಚ ಬಭೂವಾಕುಲಿತಾ ಮಹೀ।।

ಭೇರಿ-ಪಣವಗಳ ಶಬ್ಧಗಳಿಂದ, ಪಟಹಗಳ ನಿಸ್ವನಗಳಿಂದ, ರಥಗಾಲಿಗಳ ನಿನಾದಗಳಿಂದ ಮಹಿಯು ವ್ಯಾಕುಲಿತಗೊಂಡಿತು.

06017017a ಕಾಂಚನಾಂಗದಕೇಯೂರೈಃ ಕಾರ್ಮುಕೈಶ್ಚ ಮಹಾರಥಾಃ।
06017017c ಭ್ರಾಜಮಾನಾ ವ್ಯದೃಶ್ಯಂತ ಜಂಗಮಾಃ ಪರ್ವತಾ ಇವ।।

ಕಾಂಚನದ ಅಂಗದ-ಕೇಯೂರಗಳು ಮತ್ತು ಧನುಸ್ಸುಗಳಿಂದ ಆ ಮಹಾರಥರು ಉರಿಯುತ್ತಿರುವ ಜಂಗಮ ಪರ್ವತಗಳಂತೆ ತೋರುತ್ತಿದ್ದರು.

06017018a ತಾಲೇನ ಮಹತಾ ಭೀಷ್ಮಃ ಪಂಚತಾರೇಣ ಕೇತುನಾ।
06017018c ವಿಮಲಾದಿತ್ಯಸಂಕಾಶಸ್ತಸ್ಥೌ ಕುರುಚಮೂಪತಿಃ।।

ಮಹಾ ತಾಲವೃಕ್ಷ ಮತ್ತು ಐದು ನಕ್ಷತ್ರಗಳ ಧ್ವಜದ ಕುರುಚಮೂಪತಿ ಭೀಷ್ಮನು ವಿಮಲ ಆಕಾಶದಲ್ಲಿರುವ ಆದಿತ್ಯನಂತೆ ನಿಂತಿದ್ದನು.

06017019a ಯೇ ತ್ವದೀಯಾ ಮಹೇಷ್ವಾಸಾ ರಾಜಾನೋ ಭರತರ್ಷಭ।
06017019c ಅವರ್ತಂತ ಯಥಾದೇಶಂ ರಾಜನ್ ಶಾಂತನವಸ್ಯ ತೇ।।

ಭರತರ್ಷಭ! ರಾಜನ್! ನಿನ್ನ ಆ ಎಲ್ಲ ಮಹೇಷ್ವಾಸ ರಾಜರೂ ಶಾಂತನವನ ಆದೇಶದಂತೆ ತಮ್ಮ ತಮ್ಮ ಸ್ಥಳಗಳಲ್ಲಿ ನಿಂತುಕೊಂಡರು.

06017020a ಸ ತು ಗೋವಾಸನಃ ಶೈಬ್ಯಃ ಸಹಿತಃ ಸರ್ವರಾಜಭಿಃ।
06017020c ಯಯೌ ಮಾತಂಗರಾಜೇನ ರಾಜಾರ್ಹೇಣ ಪತಾಕಿನಾ।

ಗೋವಾಸನ ಶೈಬ್ಯನು ಎಲ್ಲ ರಾಜರೊಂದಿಗೆ ರಾಜಾರ್ಹವಾದ, ಪತಾಕೆಗಳುಳ್ಳ ಮಾತಂಗರಾಜನೊಂದಿಗೆ ನಡೆದನು.

06017020e ಪದ್ಮವರ್ಣಸ್ತ್ವನೀಕಾನಾಂ ಸರ್ವೇಷಾಮಗ್ರತಃ ಸ್ಥಿತಃ।।
06017021a ಅಶ್ವತ್ಥಾಮಾ ಯಯೌ ಯತ್ತಃ ಸಿಂಹಲಾಂಗೂಲಕೇತನಃ।

ಧ್ವಜದಲ್ಲಿ ಸಿಂಹದ ಬಾಲವಿದ್ದ ಪದ್ಮವರ್ಣಿ ಅಶ್ವತ್ಥಾಮನು ಸರ್ವ ಸೇನೆಗಳ ಮುಂದೆ ಹೋಗಿ ನಿಂತುಕೊಂಡನು.

06017021c ಶ್ರುತಾಯುಶ್ಚಿತ್ರಸೇನಶ್ಚ ಪುರುಮಿತ್ರೋ ವಿವಿಂಶತಿಃ।।
06017022a ಶಲ್ಯೋ ಭೂರಿಶ್ರವಾಶ್ಚೈವ ವಿಕರ್ಣಶ್ಚ ಮಹಾರಥಃ।
06017022c ಏತೇ ಸಪ್ತ ಮಹೇಷ್ವಾಸಾ ದ್ರೋಣಪುತ್ರಪುರೋಗಮಾಃ।।
06017022e ಸ್ಯಂದನೈರ್ವರವರ್ಣಾಭೈರ್ಭೀಷ್ಮಸ್ಯಾಸನ್ಪುರಃಸರಾಃ।।

ಶ್ರುತಾಯು, ಚಿತ್ರಸೇನ, ಪುರುಮಿತ್ರ, ವಿವಿಂಶತಿ, ಶಲ್ಯ, ಭೂರಿಶ್ರವ, ಮಹಾರಥ ವಿಕರ್ಣ ಈ ಏಳು ಮಹೇಷ್ವಾಸರು, ವರವರ್ಣದ ಕವಚಗಳನ್ನು ಧರಿಸಿ ರಥಗಳಲ್ಲಿ ನಿಂತು ದ್ರೋಣಪುತ್ರನನ್ನು ಮುಂದಿಟ್ಟುಕೊಂಡು, ಭೀಷ್ಮನ ಮುಂದೆ ಸಾಗಿದರು.

06017023a ತೇಷಾಮಪಿ ಮಹೋತ್ಸೇಧಾಃ ಶೋಭಯಂತೋ ರಥೋತ್ತಮಾನ್।
06017023c ಭ್ರಾಜಮಾನಾ ವ್ಯದೃಶ್ಯಂತ ಜಾಂಬೂನದಮಯಾ ಧ್ವಜಾಃ।।

ಅವರ ಉತ್ತಮ ರಥಗಳಿಗೆ ಕಟ್ಟಿದ್ದ ಎತ್ತರವಾದ ಬಂಗಾರದ ಧ್ವಜಗಳು ಹೊಳೆಯುತ್ತಿರುವುದು ತೋರಿತು.

06017024a ಜಾಂಬೂನದಮಯೀ ವೇದಿಃ ಕಮಂಡಲುವಿಭೂಷಿತಾ।
06017024c ಕೇತುರಾಚಾರ್ಯಮುಖ್ಯಸ್ಯ ದ್ರೋಣಸ್ಯ ಧನುಷಾ ಸಹ।।

ಆಚಾರ್ಯ ಮುಖ್ಯ ದ್ರೋಣನ ಬಂಗಾರದ ಧ್ವಜದಲ್ಲಿ ಕಮಂಡಲು ವಿಭೂಷಿತ ವೇದಿಯ ಜೊತೆ ಧನುಸ್ಸು ಇತ್ತು.

06017025a ಅನೇಕಶತಸಾಹಸ್ರಮನೀಕಮನುಕರ್ಷತಃ।
06017025c ಮಹಾನ್ದುರ್ಯೋಧನಸ್ಯಾಸೀನ್ನಾಗೋ ಮಣಿಮಯೋ ಧ್ವಜಃ।।

ಅನೇಕ ಶತಸಹಸ್ರ ಸೇನೆಗಳು ಹಿಂಬಾಲಿಸುತ್ತಿರುವ ದುರ್ಯೋಧನನ ಮಹಾ ಧ್ವಜವು ಮಣಿಮಯ ಆನೆಯ ಚಿಹ್ನೆಯನ್ನು ಹೊಂದಿತ್ತು.

06017026a ತಸ್ಯ ಪೌರವಕಾಲಿಂಗೌ ಕಾಂಬೋಜಶ್ಚ ಸುದಕ್ಷಿಣಃ।
06017026c ಕ್ಷೇಮಧನ್ವಾ ಸುಮಿತ್ರಶ್ಚ ತಸ್ಥುಃ ಪ್ರಮುಖತೋ ರಥಾಃ।।

ಅವನ ರಥದಲ್ಲಿ ಪ್ರಮುಖ ರಥಿಗಳಾದ ಪೌರವ-ಕಲಿಂಗರು, ಕಾಂಬೋಜದ ಸುದಕ್ಷಿಣ, ಕ್ಷೇಮಧನ್ವಿ ಸುಮಿತ್ರರು ನಿಂತಿದ್ದರು.

06017027a ಸ್ಯಂದನೇನ ಮಹಾರ್ಹೇಣ ಕೇತುನಾ ವೃಷಭೇಣ ಚ।
06017027c ಪ್ರಕರ್ಷನ್ನಿವ ಸೇನಾಗ್ರಂ ಮಾಗಧಶ್ಚ ನೃಪೋ ಯಯೌ।।

ವೃಷಭದ ಚಿಹ್ನೆಯ ಧ್ವಜವಿರುವ ಮಹಾರ್ಹದ ರಥದಲ್ಲಿ, ತನ್ನ ಸೇನೆಯನ್ನು ಎಳೆದುಕೊಂಡು ಹೋಗುತ್ತಿರುವಂತೆ ಮಾಗಧ ನೃಪನು ನಡೆದನು.

06017028a ತದಂಗಪತಿನಾ ಗುಪ್ತಂ ಕೃಪೇಣ ಚ ಮಹಾತ್ಮನಾ।
06017028c ಶಾರದಾಭ್ರಚಯಪ್ರಖ್ಯಂ ಪ್ರಾಚ್ಯಾನಾಮಭವದ್ಬಲಂ।।

ಶುಭ್ರ ಮೋಡಗಳಂತೆ ತೋರುತ್ತಿದ್ದ ಆ ಪೂರ್ವದವರ ಮಹಾಸೇನೆಯನ್ನು ಅಂಗಪತಿ ಮತ್ತು ಮಹಾತ್ಮ ಕೃಪರು ರಕ್ಷಿಸುತ್ತಿದ್ದರು.

06017029a ಅನೀಕಪ್ರಮುಖೇ ತಿಷ್ಠನ್ವರಾಹೇಣ ಮಹಾಯಶಾಃ।
06017029c ಶುಶುಭೇ ಕೇತುಮುಖ್ಯೇನ ರಾಜತೇನ ಜಯದ್ರಥಃ।।

ವರಾಹದ ಮುಖ್ಯ ಧ್ವಜವನ್ನು ಹೊಂದಿದ ರಜತ ರಥದಲ್ಲಿ ತನ್ನ ಸೇನೆಯ ಪ್ರಮುಖನಾಗಿ ಜಯದ್ರಥನು ವಿರಾಜಿಸುತ್ತಿದ್ದನು.

06017030a ಶತಂ ರಥಸಹಸ್ರಾಣಾಂ ತಸ್ಯಾಸನ್ವಶವರ್ತಿನಃ।
06017030c ಅಷ್ಟೌ ನಾಗಸಹಸ್ರಾಣಿ ಸಾದಿನಾಮಯುತಾನಿ ಷಟ್।।

ಒಂದು ಲಕ್ಷ ರಥಗಳು, ಎಂಟು ಸಾವಿರ ಆನೆಗಳು ಮತ್ತು ಆರು ಸಾವಿರ ಅಶ್ವಾರೂಢರು ಅವನ ವಶದಲ್ಲಿದ್ದರು.

06017031a ತತ್ಸಿಂಧುಪತಿನಾ ರಾಜನ್ಪಾಲಿತಂ ಧ್ವಜಿನೀಮುಖಂ।
06017031c ಅನಂತರಥನಾಗಾಶ್ವಮಶೋಭತ ಮಹದ್ಬಲಂ।।

ರಾಜನ್! ಆ ಧ್ವಜಿನೀ ಪ್ರಮುಖ ಸಿಂಧುಪತಿಯಿಂದ ಪಾಲಿತಗೊಂಡ ಅನಂತ ರಥ-ಆನೆ-ಕುದುರೆಗಳಿಂದ ಕೂಡಿದ ಮಹಾಬಲವು ಶೋಭಿಸಿತು.

06017032a ಷಷ್ಟ್ಯಾ ರಥಸಹಸ್ರೈಸ್ತು ನಾಗಾನಾಮಯುತೇನ ಚ।
06017032c ಪತಿಃ ಸರ್ವಕಲಿಂಗಾನಾಂ ಯಯೌ ಕೇತುಮತಾ ಸಹ।।

ಅರವತ್ತು ಸಾವಿರ ರಥಗಳು ಮತ್ತು ಒಂದು ಲಕ್ಷ ಆನೆಗಳ ಸೇನೆಯ ಪತಿ ಕಲಿಂಗನು ಕೇತುಮತನೊಂದಿಗೆ ಹೊರಟನು.

06017033a ತಸ್ಯ ಪರ್ವತಸಂಕಾಶಾ ವ್ಯರೋಚಂತ ಮಹಾಗಜಾಃ।
06017033c ಯಂತ್ರತೋಮರತೂಣೀರೈಃ ಪತಾಕಾಭಿಶ್ಚ ಶೋಭಿತಾಃ।।

ಅವನ ಪರ್ವತಸಂಕಾಶ ಮಹಾಗಜಗಳು ಯಂತ್ರ-ತೋಮರ-ತೂಣೀರಗಳಿಂದ ಮತ್ತು ಶೋಭಿಸುವ ಪತಾಕೆಗಳಿಂದ ವಿರಾಜಿಸಿದವು.

06017034a ಶುಶುಭೇ ಕೇತುಮುಖ್ಯೇನ ಪಾದಪೇನ ಕಲಿಂಗಪಃ।
06017034c ಶ್ವೇತಚ್ಛತ್ರೇಣ ನಿಷ್ಕೇಣ ಚಾಮರವ್ಯಜನೇನ ಚ।।

ಕಲಿಂಗರಾಜನಾದರೋ ಎತ್ತರ ಪಾದಪದ ಧ್ವಜ, ಶ್ವೇತ ಛತ್ರ, ನಿಷ್ಕ-ಚಾಮರಗಳಿಂದ ಶೋಭಿಸಿದನು.

06017035a ಕೇತುಮಾನಪಿ ಮಾತಂಗಂ ವಿಚಿತ್ರಪರಮಾಂಕುಶಂ।
06017035c ಆಸ್ಥಿತಃ ಸಮರೇ ರಾಜನ್ಮೇಘಸ್ಥ ಇವ ಭಾನುಮಾನ್।।

ರಾಜನ್! ಕೇತುಮಾನನೂ ಕೂಡ ವಿಚಿತ್ರ ಪರಮ ಅಂಕುಶದ ಆನೆಯನ್ನು ಏರಿ ಸಮರದಲ್ಲಿ ಮೇಘವನ್ನೇರಿದ ಭಾನುವಂತೆ ಕಂಡನು.

06017036a ತೇಜಸಾ ದೀಪ್ಯಮಾನಸ್ತು ವಾರಣೋತ್ತಮಮಾಸ್ಥಿತಃ।
06017036c ಭಗದತ್ತೋ ಯಯೌ ರಾಜಾ ಯಥಾ ವಜ್ರಧರಸ್ತಥಾ।।

ವಜ್ರಧರನಂತೆ ತೇಜಸ್ಸಿನಿಂದ ಬೆಳಗುತ್ತಿದ್ದ ರಾಜಾ ಭಗದತ್ತನು ಉತ್ತಮ ಆನೆಯ ಮೇಲೆ ಕುಳಿತು ಹೊರಟನು.

06017037a ಗಜಸ್ಕಂಧಗತಾವಾಸ್ತಾಂ ಭಗದತ್ತೇನ ಸಮ್ಮಿತೌ।
06017037c ವಿಂದಾನುವಿಂದಾವಾವಂತ್ಯೌ ಕೇತುಮಂತಮನುವ್ರತೌ।।

ಆನೆಯ ಹೆಗಲಮೇಲೇರಿ ಹೋಗುತ್ತಿರುವ ಭಗದತ್ತನೊಂದಿಗೆ, ಕೇತುಮಂತನನ್ನು ಅನುಸರಿಸಿ ಅವಂತಿಯ ವಿಂದಾನುವಿಂದರು ಹೊರಟರು.

06017038a ಸ ರಥಾನೀಕವಾನ್ವ್ಯೂಹೋ ಹಸ್ತ್ಯಂಗೋತ್ತಮಶೀರ್ಷವಾನ್।
06017038c ವಾಜಿಪಕ್ಷಃ ಪತನ್ನುಗ್ರಃ ಪ್ರಾಹರತ್ಸರ್ವತೋಮುಖಃ।।
06017039a ದ್ರೋಣೇನ ವಿಹಿತೋ ರಾಜನ್ರಾಜ್ಞಾ ಶಾಂತನವೇನ ಚ।
06017039c ತಥೈವಾಚಾರ್ಯಪುತ್ರೇಣ ಬಾಹ್ಲೀಕೇನ ಕೃಪೇಣ ಚ।।

ರಾಜನ್! ದ್ರೋಣ, ರಾಜ ಶಾಂತನವ, ಆಚಾರ್ಯಪುತ್ರ, ಬಾಹ್ಲೀಕ, ಕೃಪರಿಂತ ರಚಿತಗೊಂಡ ಆ ವ್ಯೂಹವು ಅನೇಕ ರಥಗಳಿಂದ ಕೂಡಿದ್ದು, ಆನೆಗಳು ಅದರ ಉತ್ತಮಾಂಗಗಳು, ರಾಜರು ತಲೆಗಳು, ಕುದುರೆಗಳು ಅದರ ರೆಕ್ಕೆಗಳಾಗಿದ್ದು, ಎಲ್ಲಕಡೆಯಿಂದಲೂ ಮೇಲೆ ನೋಡುತ್ತಾ ಉಗ್ರವಾಗಿ ತೋರುತ್ತಿತ್ತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಸೈನ್ಯವರ್ಣನೇ ಸಪ್ತದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಸೈನ್ಯವರ್ಣನೆಯೆಂಬ ಹದಿನೇಳನೇ ಅಧ್ಯಾಯವು.