ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭಗವದ್ಗೀತಾ ಪರ್ವ
ಅಧ್ಯಾಯ 16
ಸಾರ
ಸಂಜಯನು ಯುದ್ಧದ ವರ್ಣನೆಯನ್ನು ಪ್ರಾರಂಭಿಸಿದುದು (1-10). ದುರ್ಯೋಧನನು ಸರ್ವಪ್ರಯತ್ನದಿಂದ ಭೀಷ್ಮನನ್ನು ರಕ್ಷಿಸಲು ಮತ್ತು ಶಿಖಂಡಿಯನ್ನು ವಧಿಸಲು ದುಃಶಾಸನನಿಗೆ ಹೇಳಿದುದು (11-20). ಸೈನ್ಯವರ್ಣನೆ (21-46).
06016001 ಸಂಜಯ ಉವಾಚ।
06016001a ತ್ವದ್ಯುಕ್ತೋಽಯಮನುಪ್ರಶ್ನೋ ಮಹಾರಾಜ ಯಥಾರ್ಹಸಿ।
06016001c ನ ತು ದುರ್ಯೋಧನೇ ದೋಷಮಿಮಮಾಸಕ್ತುಮರ್ಹಸಿ।।
ಸಂಜಯನು ಹೇಳಿದನು: “ಮಹಾರಾಜ! ಅರ್ಹನಾಗಿರುವ ನೀನು ಕೇಳುತ್ತಿರುವ ಈ ಪ್ರಶ್ನೆಗಳು ನಿನಗೆ ತಕ್ಕುದಾಗಿಯೇ ಇವೆ. ಆದರೆ ಈ ದೋಷವನ್ನು ದುರ್ಯೋಧನನ ಮೇಲೆ ಹಾಕುವುದು ಸರಿಯಲ್ಲ.
06016002a ಯ ಆತ್ಮನೋ ದುಶ್ಚರಿತಾದಶುಭಂ ಪ್ರಾಪ್ನುಯಾನ್ನರಃ।
06016002c ಏನಸಾ ತೇನ ನಾನ್ಯಂ ಸ ಉಪಾಶಂಕಿತುಮರ್ಹತಿ।।
ತನ್ನ ದುಶ್ಚರಿತಗಳಿಂದಾಗಿ ಅಶುಭವನ್ನು ಪಡೆದ ನರನು ಅದು ಅನ್ಯನು ಮಾಡಿದ್ದು ಎಂದು ಹೊರಿಸಬಾರದು.
06016003a ಮಹಾರಾಜ ಮನುಷ್ಯೇಷು ನಿಂದ್ಯಂ ಯಃ ಸರ್ವಮಾಚರೇತ್।
06016003c ಸ ವಧ್ಯಃ ಸರ್ವಲೋಕಸ್ಯ ನಿಂದಿತಾನಿ ಸಮಾಚರನ್।।
ಮಹಾರಾಜ! ಇತರರಿಗೆ ಯಾರು ಎಲ್ಲ ರೀತಿಯಲ್ಲಿ ನಿಂದನೀಯವಾಗಿ ನಡೆದುಕೊಳ್ಳುತ್ತಾನೋ ಅದನ್ನು ಮಾಡಿದವನು ಸರ್ವಲೋಕಗಳ ನಿಂದನೆಗೆ ಮತ್ತು ವಧೆಗೆ ಅರ್ಹ.
06016004a ನಿಕಾರೋ ನಿಕೃತಿಪ್ರಜ್ಞೈಃ ಪಾಂಡವೈಸ್ತ್ವತ್ಪ್ರತೀಕ್ಷಯಾ।
06016004c ಅನುಭೂತಃ ಸಹಾಮಾತ್ಯೈಃ ಕ್ಷಾಂತಂ ಚ ಸುಚಿರಂ ವನೇ।।
ಮೋಸಗಳನ್ನು ಅರಿಯದೇ ಇದ್ದ ಪಾಂಡವರು ನಿನ್ನನ್ನು ನೋಡಿಕೊಂಡು ಅಮಾತ್ಯರೊಂದಿಗೆ ಕ್ಷಾಂತರಾಗಿ ಬಹುಕಾಲ ವನದಲ್ಲಿ ಅನುಭವಿಸಿದರು.
06016005a ಹಯಾನಾಂ ಚ ಗಜಾನಾಂ ಚ ಶೂರಾಣಾಂ ಚಾಮಿತೌಜಸಾಂ।
06016005c ಪ್ರತ್ಯಕ್ಷಂ ಯನ್ಮಯಾ ದೃಷ್ಟಂ ದೃಷ್ಟಂ ಯೋಗಬಲೇನ ಚ।।
06016006a ಶೃಣು ತತ್ಪೃಥಿವೀಪಾಲ ಮಾ ಚ ಶೋಕೇ ಮನಃ ಕೃಥಾಃ।
06016006c ದಿಷ್ಟಮೇತತ್ಪುರಾ ನೂನಮೇವಂಭಾವಿ ನರಾಧಿಪ।।
ಮಹೀಪಾಲ! ಯೋಗಬಲದಿಂದ ನಾನು ಪ್ರತ್ಯಕ್ಷವಾಗಿ ಕಂಡ ಕುದುರೆಗಳ, ಆನೆಗಳ, ಅಮಿತೌಜಸ ಶೂರರ ದೃಶ್ಯಗಳನ್ನು ನೋಡಿರುವುದನ್ನು ಕೇಳು. ಮನಸ್ಸನ್ನು ಶೋಕಕ್ಕೊಳಪಡಿಸಬೇಡ. ನರಾಧಿಪ! ಇದು ಹೀಗೆಯೇ ಆಗುತ್ತದೆಯೆಂದು ಹಿಂದೆಯೇ ದೈವ ನಿರ್ಧಿತವಾಗಿತ್ತು.
06016007a ನಮಸ್ಕೃತ್ವಾ ಪಿತುಸ್ತೇಽಹಂ ಪಾರಾಶರ್ಯಾಯ ಧೀಮತೇ।
06016007c ಯಸ್ಯ ಪ್ರಸಾದಾದ್ದಿವ್ಯಂ ಮೇ ಪ್ರಾಪ್ತಂ ಜ್ಞಾನಮನುತ್ತಮಂ।।
ಯಾರ ಪ್ರಸಾದದಿಂದ ನನಗೆ ಈ ದಿವ್ಯವಾದ ಅನುತ್ತಮ ಜ್ಞಾನವು ಪ್ರಾಪ್ತವಾಯಿತೋ ಆ ನಿನ್ನ ತಂದೆ ಧೀಮತ ಪಾರಶರ್ಯನಿಗೆ ನಮಸ್ಕರಿಸುತ್ತೇನೆ.
06016008a ದೃಷ್ಟಿಶ್ಚಾತೀಂದ್ರಿಯಾ ರಾಜನ್ದೂರಾಚ್ಚ್ರವಣಮೇವ ಚ।
06016008c ಪರಚಿತ್ತಸ್ಯ ವಿಜ್ಞಾನಮತೀತಾನಾಗತಸ್ಯ ಚ।।
06016009a ವ್ಯುತ್ಥಿತೋತ್ಪತ್ತಿವಿಜ್ಞಾನಮಾಕಾಶೇ ಚ ಗತಿಃ ಸದಾ।
06016009c ಶಸ್ತ್ರೈರಸಂಗೋ ಯುದ್ಧೇಷು ವರದಾನಾನ್ಮಹಾತ್ಮನಃ।।
ರಾಜನ್! ಅತೀಂದ್ರಿಯ ದೃಷ್ಟಿ, ದೂರದ್ದನ್ನೂ ಕೇಳುವ, ಇನ್ನೊಬ್ಬರ ಚಿತ್ತವನ್ನು – ಅತೀತವನ್ನೂ ಅನಾಗತವನ್ನೂ – ತಿಳಿಯುವ ವಿಶೇಷ ಜ್ಞಾನ, ಸದಾ ಆಕಾಶದಲ್ಲಿಯೂ ಸಂಚರಿಸಬಲ್ಲ, ಯುದ್ಧದಲ್ಲಿ ಶಸ್ತ್ರಗಳು ತಾಗದ ವರದಾನವನ್ನು ನಾನು ಆ ಮಹಾತ್ಮನಿಂದ ಪಡೆದೆ.
06016010a ಶೃಣು ಮೇ ವಿಸ್ತರೇಣೇದಂ ವಿಚಿತ್ರಂ ಪರಮಾದ್ಭುತಂ।
06016010c ಭಾರತಾನಾಂ ಮಹದ್ಯುದ್ಧಂ ಯಥಾಭೂಲ್ಲೋಮಹರ್ಷಣಂ।।
ವಿಚಿತ್ರವಾದ, ಪರಮಾದ್ಭುತವಾದ, ಲೋಮಹರ್ಷಣವಾದ ಈ ಭಾರತರ ಮಹಾಯುದ್ಧವನ್ನು ನಡೆದ ಹಾಗೆ ನನ್ನಿಂದ ಕೇಳು.
06016011a ತೇಷ್ವನೀಕೇಷು ಯತ್ತೇಷು ವ್ಯೂಢೇಷು ಚ ವಿಧಾನತಃ।
06016011c ದುರ್ಯೋಧನೋ ಮಹಾರಾಜ ದುಃಶಾಸನಮಥಾಬ್ರವೀತ್।।
ಮಹಾರಾಜ! ಆ ಸೇನೆಗಳನ್ನು ವಿಧಾನತಃ ವ್ಯೂಹಗಳಲ್ಲಿ ರಚಿಸುವಾಗ ದುರ್ಯೋಧನನು ದುಃಶಾಸನನಿಗೆ ಹೀಗೆ ಹೇಳಿದನು:
06016012a ದುಃಶಾಸನ ರಥಾಸ್ತೂರ್ಣಂ ಯುಜ್ಯಂತಾಂ ಭೀಷ್ಮರಕ್ಷಿಣಃ।
06016012c ಅನೀಕಾನಿ ಚ ಸರ್ವಾಣಿ ಶೀಘ್ರಂ ತ್ವಮನುಚೋದಯ।।
“ದುಃಶಾಸನ! ಈ ರಥಗಳನ್ನು ತಕ್ಷಣವೇ ಭೀಷ್ಮನ ರಕ್ಷಣೆಗೆ ಬಳಸು. ಎಲ್ಲ ಸೇನೆಗಳನ್ನೂ ಶೀಘ್ರವಾಗಿ ಪ್ರಚೋದಿಸು.
06016013a ಅಯಂ ಮಾ ಸಮನುಪ್ರಾಪ್ತೋ ವರ್ಷಪೂಗಾಭಿಚಿಂತಿತಃ।
06016013c ಪಾಂಡವಾನಾಂ ಸಸೈನ್ಯಾನಾಂ ಕುರೂಣಾಂ ಚ ಸಮಾಗಮಃ।।
ಬಹಳ ವರ್ಷಗಳಿಂದ ಬಯಸುತ್ತಿರುವ, ಸೇನೆಗಳೊಂದಿಗೆ ಪಾಂಡವರ ಮತ್ತು ಕೌರವರ ಸಮಾಗಮದ ಆ ಅವಕಾಶವು ಈಗ ಬಂದೊದಗಿದೆ.
06016014a ನಾತಃ ಕಾರ್ಯತಮಂ ಮನ್ಯೇ ರಣೇ ಭೀಷ್ಮಸ್ಯ ರಕ್ಷಣಾತ್।
06016014c ಹನ್ಯಾದ್ಗುಪ್ತೋ ಹ್ಯಸೌ ಪಾರ್ಥಾನ್ಸೋಮಕಾಂಶ್ಚ ಸಸೃಂಜಯಾನ್।।
ಭೀಷ್ಮನ ರಕ್ಷಣೆಯನ್ನು ಬಿಟ್ಟು ಬೇರೆ ಯಾವ ಕೆಲಸವೂ ಮುಖ್ಯವಾದುದಲ್ಲವೆಂದು ತಿಳಿದಿದ್ದೇನೆ. ಏಕೆಂದರೆ ಉಳಿಸಿಕೊಂಡರೆ ಇವನು ಸೋಮಕ-ಸೃಂಜಯರೊಂದಿಗೆ ಪಾರ್ಥರನ್ನು ಸಂಹರಿಸುತ್ತಾನೆ.
06016015a ಅಬ್ರವೀಚ್ಚ ವಿಶುದ್ಧಾತ್ಮಾ ನಾಹಂ ಹನ್ಯಾಂ ಶಿಖಂಡಿನಂ।
06016015c ಶ್ರೂಯತೇ ಸ್ತ್ರೀ ಹ್ಯಸೌ ಪೂರ್ವಂ ತಸ್ಮಾದ್ವರ್ಜ್ಯೋ ರಣೇ ಮಮ।।
“ನಾನು ಶಿಖಂಡಿಯನ್ನು ಸಂಹರಿಸುವುದಿಲ್ಲ. ಅವನು ಹಿಂದೆ ಸ್ತ್ರೀಯಾಗಿದ್ದನೆಂದು ಹೇಳುತ್ತಾರೆ. ಆದುದರಿಂದ ರಣದಲ್ಲಿ ನಾನು ಅವನನ್ನು ವರ್ಜಿಸುತ್ತೇನೆ” ಎಂದು ಆ ವಿಶುದ್ಧಾತ್ಮನು ಹೇಳಿದ್ದನು.
06016016a ತಸ್ಮಾದ್ಭೀಷ್ಮೋ ರಕ್ಷಿತವ್ಯೋ ವಿಶೇಷೇಣೇತಿ ಮೇ ಮತಿಃ।
06016016c ಶಿಖಂಡಿನೋ ವಧೇ ಯತ್ತಾಃ ಸರ್ವೇ ತಿಷ್ಠಂತು ಮಾಮಕಾಃ।।
ಆದುದರಿಂದ ವಿಶೇಷವಾಗಿ ಭೀಷ್ಮನನ್ನು ರಕ್ಷಿಸಬೇಕೆಂದು ನನ್ನ ವಿಚಾರ. ನನ್ನವರೆಲ್ಲರೂ ಶಿಖಂಡಿಯ ವಧೆಗೆ ನಿಲ್ಲಲಿ.
06016017a ತಥಾ ಪ್ರಾಚ್ಯಾಃ ಪ್ರತೀಚ್ಯಾಶ್ಚ ದಾಕ್ಷಿಣಾತ್ಯೋತ್ತರಾಪಥಾಃ।
06016017c ಸರ್ವಶಸ್ತ್ರಾಸ್ತ್ರಕುಶಲಾಸ್ತೇ ರಕ್ಷಂತು ಪಿತಾಮಹಂ।।
ಹಾಗೆಯೇ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣಗಳಿಂದ ಬಂದ ಸರ್ವ ಶಸ್ತ್ರಾಸ್ತ್ರಕುಶಲರೂ ಪಿತಾಮಹನನ್ನು ರಕ್ಷಿಸಲಿ.
06016018a ಅರಕ್ಷ್ಯಮಾಣಂ ಹಿ ವೃಕೋ ಹನ್ಯಾತ್ಸಿಂಹಂ ಮಹಾಬಲಂ।
06016018c ಮಾ ಸಿಂಹಂ ಜಂಬುಕೇನೇವ ಘಾತಯಾಮಃ ಶಿಖಂಡಿನಾ।।
ಸಿಂಹವು ಮಹಾಬಲಶಾಲಿಯಾಗಿದ್ದರೂ ರಕ್ಷಣೆಯಿಲ್ಲದಿದ್ದರೆ ತೋಳವು ಕೊಂದುಹಾಕುತ್ತದೆ. ನರಿಯಂತಿರುವ ಶಿಖಂಡಿಯಿಂದ ಕೊಲ್ಲಲ್ಪಡದಂತೆ ಈ ಸಿಂಹವನ್ನು ರಕ್ಷಿಸೋಣ.
06016019a ವಾಮಂ ಚಕ್ರಂ ಯುಧಾಮನ್ಯುರುತ್ತಮೌಜಾಶ್ಚ ದಕ್ಷಿಣಂ।
06016019c ಗೋಪ್ತಾರೌ ಫಲ್ಗುನಸ್ಯೈತೌ ಫಲ್ಗುನೋಽಪಿ ಶಿಖಂಡಿನಃ।।
ಯುಧಾಮನ್ಯುವು ಎಡ ಚಕ್ರವನ್ನೂ ಉತ್ತಮೌಜಸನು ಬಲ ಚಕ್ರವನ್ನೂ ರಕ್ಷಿಸುತ್ತಿದ್ದಾರೆ. ಶಿಖಂಡಿಯನ್ನು ರಕ್ಷಿಸುವ ಫಲ್ಗುನನಂತೆ ಈ ಇಬ್ಬರು.
06016020a ಸಂರಕ್ಷ್ಯಮಾಣಃ ಪಾರ್ಥೇನ ಭೀಷ್ಮೇಣ ಚ ವಿವರ್ಜಿತಃ।
06016020c ಯಥಾ ನ ಹನ್ಯಾದ್ಗಾಂಗೇಯಂ ದುಃಶಾಸನ ತಥಾ ಕುರು।।
ದುಃಶಾಸನ! ಪಾರ್ಥನಿಂದ ಸಂರಕ್ಷಿಸಲ್ಪಟ್ಟ ಮತ್ತು ಭೀಷ್ಮನಿಂದ ವಿವರ್ಜಿತನಾದ ಅವನು ಗಾಂಗೇಯನನ್ನು ಕೊಲ್ಲದಹಾಗೆ ಮಾಡು.”
06016021a ತತೋ ರಜನ್ಯಾಂ ವ್ಯುಷ್ಟಾಯಾಂ ಶಬ್ದಃ ಸಮಭವನ್ಮಹಾನ್।
06016021c ಕ್ರೋಶತಾಂ ಭೂಮಿಪಾಲಾನಾಂ ಯುಜ್ಯತಾಂ ಯುಜ್ಯತಾಮಿತಿ।।
ಆಗ ರಾತ್ರಿಯು ಕಳೆಯಲು “ಹೊರಡಿ! ಹೊರಡಿ!” ಎಂಬ ಭೂಮಿಪಾಲರ ಕೂಗಿನ ಮಹಾ ಶಬ್ಧವುಂಟಾಯಿತು.
06016022a ಶಂಖದುಂದುಭಿನಿರ್ಘೋಷೈಃ ಸಿಂಹನಾದೈಶ್ಚ ಭಾರತ।
06016022c ಹಯಹೇಷಿತಶಬ್ದೈಶ್ಚ ರಥನೇಮಿಸ್ವನೈಸ್ತಥಾ।।
06016023a ಗಜಾನಾಂ ಬೃಂಹತಾಂ ಚೈವ ಯೋಧಾನಾಂ ಚಾಭಿಗರ್ಜತಾಂ।
06016023c ಕ್ಷ್ವೇಡಿತಾಸ್ಫೋಟಿತೋತ್ಕ್ರುಷ್ಟೈಸ್ತುಮುಲಂ ಸರ್ವತೋಽಭವತ್।।
ಎಲ್ಲ ಕಡೆಗಳಿಂದಲೂ ಶಂಖ-ದುಂದುಭಿಗಳ ನಿರ್ಘೋಷ, ಸಿಂಹನಾದ, ಕುದುರೆಗಳ ಹೀಂಕಾರದ ಶಬ್ಧ, ರಥಚಕ್ರಗಳ ಶಬ್ಧ, ಆನೆಗಳ ಘೀಳು, ಯೋಧರ ಗರ್ಜನೆ, ಚಪ್ಪಳೆ, ತೋಳುಗಳನ್ನು ಚಪ್ಪರಿಸುವ ಶಬ್ಧ ಹೀಗೆ ತುಮುಲವುಂಟಾಯಿತು.
06016024a ಉದತಿಷ್ಠನ್ಮಹಾರಾಜ ಸರ್ವಂ ಯುಕ್ತಮಶೇಷತಃ।
06016024c ಸೂರ್ಯೋದಯೇ ಮಹತ್ಸೈನ್ಯಂ ಕುರುಪಾಂಡವಸೇನಯೋಃ।
06016024e ತವ ರಾಜೇಂದ್ರ ಪುತ್ರಾಣಾಂ ಪಾಂಡವಾನಾಂ ತಥೈವ ಚ।।
ಮಹಾರಾಜ! ರಾಜೇಂದ್ರ! ಸೂರ್ಯನು ಉದಯಿಸಿದಾಗ ಕುರುಪಾಂಡವ ಸೇನೆಗಳ, ನಿನ್ನ ಪುತ್ರರ ಮತ್ತು ಪಾಂಡವರ ಆ ಮಹಾಸೇನೆಯು ಸಂಪೂರ್ಣವಾಗಿ ಕಾಣಿಸಿಕೊಂಡವು.
06016025a ತತ್ರ ನಾಗಾ ರಥಾಶ್ಚೈವ ಜಾಂಬೂನದಪರಿಷ್ಕೃತಾಃ।
06016025c ವಿಭ್ರಾಜಮಾನಾ ದೃಶ್ಯಂತೇ ಮೇಘಾ ಇವ ಸವಿದ್ಯುತಃ।।
ಅಲ್ಲಿ ಬಂಗಾರದಿಂದ ಅಲಂಕರಿಸಿಸಲ್ಪಟ್ಟ ಆನೆಗಳು ಮತ್ತು ರಥಗಳು ವಿದ್ಯುತ್ತಿನಿಂದೊಡಗೂಡಿದ ಮೋಡಗಳಂತೆ ಹೊಳೆದು ಕಾಣುತ್ತಿದ್ದವು.
06016026a ರಥಾನೀಕಾನ್ಯದೃಶ್ಯಂತ ನಗರಾಣೀವ ಭೂರಿಶಃ।
06016026c ಅತೀವ ಶುಶುಭೇ ತತ್ರ ಪಿತಾ ತೇ ಪೂರ್ಣಚಂದ್ರವತ್।।
ಬಹುಸಂಖ್ಯೆಯಲ್ಲಿದ ಆ ರಥಗಳ ಸೇನೆಗಳು ನಗರಗಳಂತೆ ತೋರುತ್ತಿದ್ದವು. ಅಲ್ಲಿ ನಿನ್ನ ತಂದೆಯು ಪೂರ್ಣಚಂದ್ರನಂತೆ ಅತೀವವಾಗಿ ಶೋಭಿಸುತ್ತಿದ್ದನು.
06016027a ಧನುರ್ಭಿರೃಷ್ಟಿಭಿಃ ಖಡ್ಗೈರ್ಗದಾಭಿಃ ಶಕ್ತಿತೋಮರೈಃ।
06016027c ಯೋಧಾಃ ಪ್ರಹರಣೈಃ ಶುಭ್ರೈಃ ಸ್ವೇಷ್ವನೀಕೇಷ್ವವಸ್ಥಿತಾಃ।।
ಯೋಧರು ಧನುಸ್ಸು, ಖಡ್ಗ, ಗದೆ, ಶಕ್ತಿ, ತೋಮರ ಮೊದಲಾದ ಶುಭ್ರ ಪ್ರಹರಣಗಳನ್ನು ಹಿಡಿದು ತಮ್ಮ ತಮ್ಮ ಸೇನೆಗಳಲ್ಲಿ ನಿಂತಿದ್ದರು.
06016028a ಗಜಾ ರಥಾಃ ಪದಾತಾಶ್ಚ ತುರಗಾಶ್ಚ ವಿಶಾಂ ಪತೇ।
06016028c ವ್ಯತಿಷ್ಠನ್ವಾಗುರಾಕಾರಾಃ ಶತಶೋಽಥ ಸಹಸ್ರಶಃ।।
ವಿಶಾಂಪತೇ! ಆನೆಗಳು, ರಥಗಳು, ಪದಾತಿಗಳು ಮತ್ತು ತುರಗಗಳು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ವಾಗುರದ ಆಕಾರದಲ್ಲಿ ರಚಿಸಲ್ಪಟ್ಟಿದ್ದರು.
06016029a ಧ್ವಜಾ ಬಹುವಿಧಾಕಾರಾ ವ್ಯದೃಶ್ಯಂತ ಸಮುಚ್ಛ್ರಿತಾಃ।
06016029c ಸ್ವೇಷಾಂ ಚೈವ ಪರೇಷಾಂ ಚ ದ್ಯುತಿಮಂತಃ ಸಹಸ್ರಶಃ।।
ನಮ್ಮಲ್ಲಿ ಮತ್ತು ಅವರಲ್ಲಿ ಸಹಸ್ರಾರು ಹೊಳೆಯುತ್ತಿರುವ ಬಹುವಿಧದ ಆಕಾರಗಳ ಧ್ವಜಗಳು ಹಾರಾಡುತ್ತಿರುವುದು ಕಂಡುಬಂದವು.
06016030a ಕಾಂಚನಾ ಮಣಿಚಿತ್ರಾಂಗಾ ಜ್ವಲಂತ ಇವ ಪಾವಕಾಃ।
06016030c ಅರ್ಚಿಷ್ಮಂತೋ ವ್ಯರೋಚಂತ ಧ್ವಜಾ ರಾಜ್ಞಾಂ ಸಹಸ್ರಶಃ।।
ಕಾಂಚನ ಮಣಿಗಳಿಂದ ಅಲಂಕರಿಸಲ್ಪಟ್ಟ, ಅಗ್ನಿಯಂತೆ ಬೆಳಗುತ್ತಿರುವ ಆ ಕವಚಧಾರಿ ರಾಜರ ಸಹಸ್ರಾರು ಧ್ವಜಗಳು ಮಿಂಚುತ್ತಿದ್ದವು.
06016031a ಮಹೇಂದ್ರಕೇತವಃ ಶುಭ್ರಾ ಮಹೇಂದ್ರಸದನೇಷ್ವಿವ।
06016031c ಸನ್ನದ್ಧಾಸ್ತೇಷು ತೇ ವೀರಾ ದದೃಶುರ್ಯುದ್ಧಕಾಂಕ್ಷಿಣಃ।।
ಮಹೇಂದ್ರನ ಸದನಕ್ಕೆ ಕಟ್ಟಿದ ಶುಭ್ರವಾದ ಮಹೇಂದ್ರ ಧ್ವಜಗಳಂತೆ ಯುದ್ಧಕಾಂಕ್ಷಿಣರಾದ, ಸನ್ನದ್ಧರಾದ ಆ ವೀರರು ಕಾಣುತ್ತಿದ್ದರು.
06016032a ಉದ್ಯತೈರಾಯುಧೈಶ್ಚಿತ್ರಾಸ್ತಲಬದ್ಧಾಃ ಕಲಾಪಿನಃ।
06016032c ಋಷಭಾಕ್ಷಾ ಮನುಷ್ಯೇಂದ್ರಾಶ್ಚಮೂಮುಖಗತಾ ಬಭುಃ।।
ಚರ್ಮದ ಕೈಬಂದಿಗಳನ್ನು ಧರಿಸಿ ಆಯುಧಗಳನ್ನು ಮೇಲೆತ್ತಿ ಹಿಡಿದು, ಮುಖಗಳನ್ನು ಮೇಲೆಮಾಡಿಕೊಂಡು ಆ ಋಷಭಾಕ್ಷ ಮನುಷ್ಯೇಂದ್ರರು ಸೇನೆಗಳ ಮುಂದೆ ನಿಂತಿದ್ದರು.
06016033a ಶಕುನಿಃ ಸೌಬಲಃ ಶಲ್ಯಃ ಸೈಂಧವೋಽಥ ಜಯದ್ರಥಃ।
06016033c ವಿಂದಾನುವಿಂದಾವಾವಂತ್ಯೌ ಕಾಂಬೋಜಶ್ಚ ಸುದಕ್ಷಿಣಃ।।
06016034a ಶ್ರುತಾಯುಧಶ್ಚ ಕಾಲಿಂಗೋ ಜಯತ್ಸೇನಶ್ಚ ಪಾರ್ಥಿವಃ।
06016034c ಬೃಹದ್ಬಲಶ್ಚ ಕೌಶಲ್ಯಃ ಕೃತವರ್ಮಾ ಚ ಸಾತ್ವತಃ।।
06016035a ದಶೈತೇ ಪುರುಷವ್ಯಾಘ್ರಾಃ ಶೂರಾಃ ಪರಿಘಬಾಹವಃ।
06016035c ಅಕ್ಷೌಹಿಣೀನಾಂ ಪತಯೋ ಯಜ್ವಾನೋ ಭೂರಿದಕ್ಷಿಣಾಃ।।
ಸೌಬಲ ಶಕುನಿ, ಶಲ್ಯ, ಸೈಂಧವ ಜಯದ್ರಥ, ಅವಂತಿಯ ವಿಂದ-ಅನುವಿಂದರಿಬ್ಬರು, ಕಾಂಬೋಜದ ಸುದಕ್ಷಿಣ, ಶ್ರುತಾಯುಧ, ಕಲಿಂಗದ ರಾಜ ಜಯತ್ಸೇನ, ಕೌಶಲ್ಯ, ಬೃಹದ್ಬಲ, ಸಾತ್ವತ ಕೃತವರ್ಮ – ಈ ಹತ್ತು ಪರಿಘದಂತಹ ಬಾಹುಗಳಿದ್ದ, ಭೂರಿದಕ್ಷಿಣೆಗಳನ್ನಿತ್ತು ಯಜ್ಞಗಳನ್ನು ಮಾಡಿದ್ದ ಪುರುಷವ್ಯಾಘ್ರ ಶೂರರು ಅಕ್ಷೌಹಿಣಿಗಳ ನಾಯಕರಾಗಿದ್ದರು.
06016036a ಏತೇ ಚಾನ್ಯೇ ಚ ಬಹವೋ ದುರ್ಯೋಧನವಶಾನುಗಾಃ।
06016036c ರಾಜಾನೋ ರಾಜಪುತ್ರಾಶ್ಚ ನೀತಿಮಂತೋ ಮಹಾಬಲಾಃ।।
06016037a ಸನ್ನದ್ಧಾಃ ಸಮದೃಶ್ಯಂತ ಸ್ವೇಷ್ವನೀಕೇಷ್ವವಸ್ಥಿತಾಃ।
06016037c ಬದ್ಧಕೃಷ್ಣಾಜಿನಾಃ ಸರ್ವೇ ಧ್ವಜಿನೋ ಮುಂಜಮಾಲಿನಃ।।
ಇವರು ಇನ್ನೂ ಇತರ ಬಹಳಷ್ಟು ದುರ್ಯೋಧನನ ವಶಾನುಗ ನೀತಿಮಂತ ಮತ್ತು ಮಹಾಬಲ ರಾಜರು ಮತ್ತು ರಾಜಪುತ್ರರು ಎಲ್ಲರೂ ಕೃಷ್ಣಾಜಿನಗಳನ್ನು ಕಟ್ಟಿ, ಧ್ವಜ, ಮಾಲೆಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಸೇನೆಗಳಲ್ಲಿ ಯುದ್ಧ ಸನ್ನದ್ಧರಾಗಿರುವುದು ಕಂಡಿತು.
06016038a ಸೃಷ್ಟಾ ದುರ್ಯೋಧನಸ್ಯಾರ್ಥೇ ಬ್ರಹ್ಮಲೋಕಾಯ ದೀಕ್ಷಿತಾಃ।
06016038c ಸಮೃದ್ಧಾ ದಶ ವಾಹಿನ್ಯಃ ಪರಿಗೃಹ್ಯ ವ್ಯವಸ್ಥಿತಾಃ।।
ಈ ಹತ್ತು ಸಮೃದ್ಧ ವಾಹಿನಿಗಳಲ್ಲಿದ್ದ ಅವರು ಸಂತೋಷದಿಂದ ದುರ್ಯೋಧನನಿಗಾಗಿ ಬ್ರಹ್ಮಲೋಕಕ್ಕೆ ಹೋಗಲು ದೀಕ್ಷಿತರಾಗಿದ್ದರು.
06016039a ಏಕಾದಶೀ ಧಾರ್ತರಾಷ್ಟ್ರೀ ಕೌರವಾಣಾಂ ಮಹಾಚಮೂಃ।
06016039c ಅಗ್ರತಃ ಸರ್ವಸೈನ್ಯಾನಾಂ ಯತ್ರ ಶಾಂತನವೋಽಗ್ರಣೀಃ।।
ಹನ್ನೊಂದನೆಯದು ಎಲ್ಲ ಸೇನೆಗಳ ಮುಂದೆ ಇದ್ದ, ಶಾಂತನವನು ಅಗ್ರಣಿಯಾಗಿದ್ದ ಧಾರ್ತರಾಷ್ಟ್ರೀ ಕೌರವರ ಮಹಾಸೇನೆಯಾಗಿತ್ತು.
06016040a ಶ್ವೇತೋಷ್ಣೀಷಂ ಶ್ವೇತಹಯಂ ಶ್ವೇತವರ್ಮಾಣಮಚ್ಯುತಂ।
06016040c ಅಪಶ್ಯಾಮ ಮಹಾರಾಜ ಭೀಷ್ಮಂ ಚಂದ್ರಮಿವೋದಿತಂ।।
ಮಹಾರಾಜ! ಬಿಳಿಯ ಮುಂಡಾಸು, ಬಿಳಿಯ ಕುದುರೆ, ಬಿಳಿಯ ಕವಚಗಳಿಂದ ಆ ಅಚ್ಯುತ ಭೀಷ್ಮನು ಉದಯಿಸುತ್ತಿರುವ ಚಂದ್ರಮನಂತೆ ತೋರಿದನು.
06016041a ಹೇಮತಾಲಧ್ವಜಂ ಭೀಷ್ಮಂ ರಾಜತೇ ಸ್ಯಂದನೇ ಸ್ಥಿತಂ।
06016041c ಶ್ವೇತಾಭ್ರ ಇವ ತೀಕ್ಷ್ಣಾಂಶುಂ ದದೃಶುಃ ಕುರುಪಾಂಡವಾಃ।।
ಬಂಗಾರದ ತಾಲಧ್ವಜವಿರುವ ಬೆಳ್ಳಿಯ ರಥದ ಮೇಲೆ ನಿಂತಿದ್ದ ಭೀಷ್ಮನು ಕುರುಪಾಂಡವರಿಗೆ ಬಿಳಿಯ ಮೋಡಗಳ ಮಧ್ಯೆ ಇರುವ ಸೂರ್ಯನಂತೆ ಕಂಡನು.
06016042a ದೃಷ್ಟ್ವಾ ಚಮೂಮುಖೇ ಭೀಷ್ಮಂ ಸಮಕಂಪಂತ ಪಾಂಡವಾಃ।
06016042c ಸೃಂಜಯಾಶ್ಚ ಮಹೇಷ್ವಾಸಾ ಧೃಷ್ಟದ್ಯುಮ್ನಪುರೋಗಮಾಃ।।
ಸೇನೆಗಳ ಮುಂದೆ ಇರುವ ಭೀಷ್ಮನನ್ನು ನೋಡಿ ಮಹೇಷ್ವಾಸ ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ಪಾಂಡವರು ಮತ್ತು ಸೃಂಜಯರು ನಡುಗಿದರು.
06016043a ಜೃಂಭಮಾಣಂ ಮಹಾಸಿಂಹಂ ದೃಷ್ಟ್ವಾ ಕ್ಷುದ್ರಮೃಗಾ ಯಥಾ।
06016043c ಧೃಷ್ಟದ್ಯುಮ್ನಮುಖಾಃ ಸರ್ವೇ ಸಮುದ್ವಿವಿಜಿರೇ ಮುಹುಃ।।
ಬಾಯಿಕಳೆದ ಮಹಾಸಿಂಹವನ್ನು ನೋಡಿ ಕ್ಷುದ್ರಮೃಗಗಳು ಹೇಗೋ ಹಾಗೆ ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ಎಲ್ಲರೂ ಭೀತರಾಗಿ ಪುನಃ ಪುನಃ ನಡುಗಿದರು.
06016044a ಏಕಾದಶೈತಾಃ ಶ್ರೀಜುಷ್ಟಾ ವಾಹಿನ್ಯಸ್ತವ ಭಾರತ।
06016044c ಪಾಂಡವಾನಾಂ ತಥಾ ಸಪ್ತ ಮಹಾಪುರುಷಪಾಲಿತಾಃ।।
ಭಾರತ! ಇವು ಶ್ರೀಜುಷ್ಟವಾಗಿರುವ ನಿನ್ನ ಹನ್ನೊಂದು ವಾಹಿನಿಗಳು. ಹಾಗೆಯೇ ಮಹಾಪುರುಷ ಪಾಂಡವರಿಂದ ಪಾಲಿತವಾದ ಏಳಿದ್ದವು.
06016045a ಉನ್ಮತ್ತಮಕರಾವರ್ತೌ ಮಹಾಗ್ರಾಹಸಮಾಕುಲೌ।
06016045c ಯುಗಾಂತೇ ಸಮುಪೇತೌ ದ್ವೌ ದೃಶ್ಯೇತೇ ಸಾಗರಾವಿವ।।
ಪರಸ್ಪರರನ್ನು ಎದುರಿಸಿ ಸೇರಿದ್ದ ಆ ಎರಡೂ ಸೇನೆಗಳೂ ಮಹಾ ಮೊಸಳೆಗಳಿಂದ ಕೂಡಿದ, ಉನ್ಮತ್ತ ಮಸಳೆಗಳಿಂದ ಕೂಡಿದ ಯುಗಾಂತದ ಸಾಗರಗಳಂತೆ ಕಂಡವು.
06016046a ನೈವ ನಸ್ತಾದೃಶೋ ರಾಜನ್ದೃಷ್ಟಪೂರ್ವೋ ನ ಚ ಶ್ರುತಃ।
06016046c ಅನೀಕಾನಾಂ ಸಮೇತಾನಾಂ ಸಮವಾಯಸ್ತಥಾವಿಧಃ।।
ರಾಜನ್! ಈ ತರಹ ಸೇನೆಗಳು ಯುದ್ಧಕ್ಕಾಗಿ ಈ ವಿಧದಲ್ಲಿ ಸೇರಿರುವುದನ್ನು ಇದಕ್ಕೂ ಮೊದಲು ನೋಡಿರಲಿಲ್ಲ ಕೇಳಿರಲಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಸೈನ್ಯವರ್ಣನೇ ಷೋಡಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಸೈನ್ಯವರ್ಣನೆಯೆಂಬ ಹದಿನಾರನೇ ಅಧ್ಯಾಯವು.