015 ಧೃತರಾಷ್ಟ್ರಪ್ರಶ್ನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭಗವದ್ಗೀತಾ ಪರ್ವ

ಅಧ್ಯಾಯ 15

ಸಾರ

ಭೀಷ್ಮನ ವಧೆಯನ್ನು ಕೇಳಿ ಧೃತರಾಷ್ಟ್ರನ ವಿಲಾಪ (1-75).

06015001 ಧೃತರಾಷ್ಟ್ರ ಉವಾಚ।
06015001a ಕಥಂ ಕುರೂಣಾಂ ಋಷಭೋ ಹತೋ ಭೀಷ್ಮಃ ಶಿಖಂಡಿನಾ।
06015001c ಕಥಂ ರಥಾತ್ ಸ ನ್ಯಪತತ್ಪಿತಾ ಮೇ ವಾಸವೋಪಮಃ।।

ಧೃತರಾಷ್ಟ್ರನು ಹೇಳಿದನು: “ಕುರುಗಳ ಋಷಭ ಭೀಷ್ಮನು ಶಿಖಂಡಿಯಿಂದ ಹೇಗೆ ಹತನಾದನು? ವಾಸವೋಪಮನಾದ ನನ್ನ ಪಿತನು ರಥದಿಂದ ಹೇಗೆ ಬಿದ್ದನು?

06015002a ಕಥಮಾಸಂಶ್ಚ ಮೇ ಪುತ್ರಾ ಹೀನಾ ಭೀಷ್ಮೇಣ ಸಂಜಯ।
06015002c ಬಲಿನಾ ದೇವಕಲ್ಪೇನ ಗುರ್ವರ್ಥೇ ಬ್ರಹ್ಮಚಾರಿಣಾ।।

ಸಂಜಯ! ತಂದೆಗಾಗಿ ಬ್ರಹ್ಮಚರ್ಯವನ್ನು ಪಾಲಿಸಿದ, ದೇವತೆಗಳಂತೆ ಬಲಶಾಲಿಯಾಗಿದ್ದ ಭೀಷ್ಮನಿಲ್ಲದೇ ನನ್ನ ಪುತ್ರರು ಹೇಗಿದ್ದಾರೆ?

06015003a ತಸ್ಮಿನ್ ಹತೇ ಮಹಾಸತ್ತ್ವೇ ಮಹೇಷ್ವಾಸೇ ಮಹಾಬಲೇ।
06015003c ಮಹಾರಥೇ ನರವ್ಯಾಘ್ರೇ ಕಿಮು ಆಸೀನ್ಮನಸ್ತದಾ।।

ಆ ಮಹಾಸತ್ವ, ಮಹೇಷ್ವಾಸ, ಮಹಾಬಲಿ, ಮಹಾರಥಿ, ನರವ್ಯಾಘ್ರನು ಹತನಾಗಲು ಅವರ ಮನಸ್ಸು ಹೇಗಿದೆ?

06015004a ಆರ್ತಿಃ ಪರಾ ಮಾವಿಶತಿ ಯತಃ ಶಂಸಸಿ ಮೇ ಹತಂ।
06015004c ಕುರೂಣಾಂ ಋಷಭಂ ವೀರಮಕಂಪ್ಯಂ ಪುರುಷರ್ಷಭಂ।।

ಕುರುಗಳ ಋಷಭ, ವೀರ, ಯುದ್ಧದಲ್ಲಿ ಕಂಪಿಸದ, ಪುರುಷರ್ಷಭನು ಹತನಾಗಿದ್ದಾನೆಂದು ನನಗೆ ಏನು ಹೇಳಿದೆಯೋ ಅದರಿಂದ ನನ್ನನ್ನು ಪರಮ ದುಃಖವು ಆವರಿಸಿದೆ.

06015005a ಕೇ ತಂ ಯಾಂತಮನುಪ್ರೇಯುಃ ಕೇ ಚಾಸ್ಯಾಸನ್ಪುರೋಗಮಾಃ।
06015005c ಕೇಽತಿಷ್ಠನ್ಕೇ ನ್ಯವರ್ತಂತ ಕೇಽಭ್ಯವರ್ತಂತ ಸಂಜಯ।।

ಸಂಜಯ! ಅವನನ್ನು ಯಾರು ಅನುಸರಿಸಿ ಹೋಗುತ್ತಿದ್ದರು? ಯಾರು ಮುಂದಿದ್ದರು? ಯಾರು ಅವನ ಪಕ್ಕದಲ್ಲಿದ್ದರು? ಮತ್ತು ಯಾರು ಅವನೊಂದಿಗೆ ಹೋಗುತ್ತಿದ್ದರು?

06015006a ಕೇ ಶೂರಾ ರಥಶಾರ್ದೂಲಮಚ್ಯುತಂ ಕ್ಷತ್ರಿಯರ್ಷಭಂ।
06015006c ರಥಾನೀಕಂ ಗಾಹಮಾನಂ ಸಹಸಾ ಪೃಷ್ಠತೋಽನ್ವಯುಃ।।

ಶತ್ರುಗಳ ಸೇನೆಯನ್ನು ಹೊಗುವಾಗ ಆ ರಥಶಾರ್ದೂಲ, ಅಚ್ಯುತ, ಕ್ಷತ್ರಿಯರ್ಷಭನನ್ನು ಯಾವ ಶೂರರು ಹಿಂದಿನಿಂದ ರಕ್ಷಣೆಗೆಂದು ಅನುಸರಿಸುತ್ತಿದ್ದರು?

06015007a ಯಸ್ತಮೋಽರ್ಕ ಇವಾಪೋಹನ್ಪರಸೈನ್ಯಮಮಿತ್ರಹಾ।
06015007c ಸಹಸ್ರರಶ್ಮಿಪ್ರತಿಮಃ ಪರೇಷಾಂ ಭಯಮಾದಧತ್।
06015007e ಅಕರೋದ್ದುಷ್ಕರಂ ಕರ್ಮ ರಣೇ ಕೌರವಶಾಸನಾತ್।।

ಸೂರ್ಯನು ಕತ್ತಲೆಯನ್ನು ಕಳೆಯುವಂತೆ ಶತ್ರುಸೈನ್ಯವನ್ನು ಕಳೆಯುತ್ತಿರುವ ಆ ಅಮಿತ್ರಹ, ಸಹಸ್ರರಶ್ಮಿಪ್ರತಿಮನು ಶತ್ರುಗಳಲ್ಲಿ ಭಯವನ್ನು ತಂದು ರಣದಲ್ಲಿ ಕೌರವಶಾಸನದಂತೆ ದುಷ್ಕರ ಕರ್ಮಗಳನ್ನು ಮಾಡಿದನು.

06015008a ಗ್ರಸಮಾನಮನೀಕಾನಿ ಯ ಏನಂ ಪರ್ಯವಾರಯನ್।
06015008c ಕೃತಿನಂ ತಂ ದುರಾಧರ್ಷಂ ಸಂಯಗ್ಯಾಸ್ಯಂತಮಂತಿಕೇ।
06015008e ಕಥಂ ಶಾಂತನವಂ ಯುದ್ಧೇ ಪಾಂಡವಾಃ ಪ್ರತ್ಯವಾರಯನ್।।

ಯುದ್ಧದಲ್ಲಿ ಸೇನೆಗಳನ್ನು ಮುತ್ತಿಗೆ ಹಾಕುವಾಗ ದುರಾಧರ್ಷ ಕೃತ್ಯವನ್ನು ಮಾಡುವ ಅವನನ್ನು ಯಾರು ತಡೆಗಟ್ಟಿ ಕೊನೆಗೊಳಿಸಿದರು? ಪಾಂಡವರು ಯುದ್ಧದಲ್ಲಿ ಶಾಂತನವನನ್ನು ಹೇಗೆ ತಡೆದರು?

06015009a ನಿಕೃಂತಂತಮನೀಕಾನಿ ಶರದಂಷ್ಟ್ರಂ ತರಸ್ವಿನಂ।
06015009c ಚಾಪವ್ಯಾತ್ತಾನನಂ ಘೋರಮಸಿಜಿಹ್ವಂ ದುರಾಸದಂ।।
06015010a ಅತ್ಯನ್ಯಾನ್ಪುರುಷವ್ಯಾಘ್ರಾನ್ ಹ್ರೀಮಂತಮಪರಾಜಿತಂ।
06015010c ಪಾತಯಾಮಾಸ ಕೌಂತೇಯಃ ಕಥಂ ತಮಜಿತಂ ಯುಧಿ।।

ಸೇನೆಗಳನ್ನು ಕಡಿಯುತ್ತಿರುವ ಆ ಶರದಂಷ್ಟ್ರ, ತರಸ್ವಿ, ಚಾಪದಂತೆ ಬಾಯಿತೆರೆದುಕೊಂಡಿದ್ದ, ಘೋರ ಖಡ್ಗದಂಥಹ ನಾಲಗೆಯುಳ್ಳ, ದುರಾಸದ, ಅನ್ಯರನ್ನು ಮೀರಿಸಿದ್ದ, ಪುರುಷವ್ಯಾಘ್ರ, ಹ್ರೀಮಂತ, ಅಪರಾಜಿತ ಆ ಅಜಿತನನ್ನು ಯುದ್ಧದಲ್ಲಿ ಕೌಂತೇಯರು ಹೇಗೆ ಉರುಳಿಸಿದರು?

06015011a ಉಗ್ರಧನ್ವಾನಮುಗ್ರೇಷುಂ ವರ್ತಮಾನಂ ರಥೋತ್ತಮೇ।
06015011c ಪರೇಷಾಮುತ್ತಮಾಂಗಾನಿ ಪ್ರಚಿನ್ವಂತಂ ಶಿತೇಷುಭಿಃ।।
06015012a ಪಾಂಡವಾನಾಂ ಮಹತ್ಸೈನ್ಯಂ ಯಂ ದೃಷ್ಟ್ವೋದ್ಯಂತಮಾಹವೇ।
06015012c ಕಾಲಾಗ್ನಿಮಿವ ದುರ್ಧರ್ಷಂ ಸಮವೇಷ್ಟತ ನಿತ್ಯಶಃ।।
06015013a ಪರಿಕೃಷ್ಯ ಸ ಸೇನಾಂ ಮೇ ದಶರಾತ್ರಮನೀಕಹಾ।
06015013c ಜಗಾಮಾಸ್ತಮಿವಾದಿತ್ಯಃ ಕೃತ್ವಾ ಕರ್ಮ ಸುದುಷ್ಕರಂ।।

ಉಗ್ರರಲ್ಲಿಯೇ ಉಗ್ರಧನ್ವಿಯಾದ, ಉತ್ತಮ ರಥದಲ್ಲಿ ಚಲಿಸುತ್ತಿದ್ದ, ಶತ್ರುಗಳ ಶಿರಗಳನ್ನು ತೀಕ್ಷ್ಣಬಾಣಗಳಿಂದ ಕತ್ತರಿಸುತ್ತಿದ್ದ, ಯಾರನ್ನು ನೋಡಿ ಪಾಂಡವರ ಮಹಾಸೇನೆಯು ಯುದ್ಧದಲ್ಲಿ ತತ್ತರಿಸುತ್ತಿತ್ತೋ ಆ ಕಾಲಾಗ್ನಿಯಂತೆ ದುರ್ಧರ್ಷನಾಗಿದ್ದ, ನಿತ್ಯವೂ ಸಮರ ಉತ್ಸುಕನಾಗಿದ್ದ ಅವನು ನನ್ನ ಸೇನೆಯನ್ನು ಹತ್ತು ರಾತ್ರಿ ಮತ್ತು ಹಗಲು ಪರಿರಕ್ಷಿಸಿ ಸುದುಷ್ಕರ ಕಾರ್ಯವನ್ನು ಮಾಡಿ ಆದಿತ್ಯನಂತೆ ಅಸ್ತನಾಗಿದ್ದಾನೆ!

06015014a ಯಃ ಸ ಶಕ್ರ ಇವಾಕ್ಷಯ್ಯಂ ವರ್ಷಂ ಶರಮಯಂ ಸೃಜನ್।
06015014c ಜಘಾನ ಯುಧಿ ಯೋಧಾನಾಮರ್ಬುದಂ ದಶಭಿರ್ದಿನೈಃ।।
06015015a ಸ ಶೇತೇ ನಿಷ್ಟನನ್ಭೂಮೌ ವಾತರುಗ್ಣ ಇವ ದ್ರುಮಃ।
06015015c ಮಮ ದುರ್ಮಂತ್ರಿತೇನಾಸೌ ಯಥಾ ನಾರ್ಹಃ ಸ ಭಾರತಃ।।

ಇಂದ್ರನಂತೆ ಯಾರು ಅಕ್ಷಯ ಶರಗಳ ಮಳೆಯನ್ನೇ ಸೃಷ್ಟಿಸಿ ಹತ್ತು ದಿನಗಳ ಯುದ್ಧದಲ್ಲಿ ಪ್ರತಿದಿನವೂ ಹತ್ತುಸಾವಿರ ಯೋಧರನ್ನು ಸಂಹರಿಸಿದನೋ ಆ ಭಾರತನು ಅನರ್ಹನಾಗಿದ್ದರೂ ನನ್ನ ದುರ್ಮಂತ್ರದಿಂದಾಗಿ ಭಿರುಗಾಳಿಯಿಂದ ಹೊಡೆಯಲ್ಪಟ್ಟ ಮರದಂತೆ ಭೂಮಿಯಮೇಲೆ ಹೊಡೆದುರುಳಿ ಮಲಗಿದ್ದಾನೆ!

06015016a ಕಥಂ ಶಾಂತನವಂ ದೃಷ್ಟ್ವಾ ಪಾಂಡವಾನಾಮನೀಕಿನೀ।
06015016c ಪ್ರಹರ್ತುಮಶಕತ್ತತ್ರ ಭೀಷ್ಮಂ ಭೀಮಪರಾಕ್ರಮಂ।।

ಅಲ್ಲಿ ಶಾಂತನವ ಭೀಷ್ಮನ ಭೀಮಪರಾಕ್ರಮವನ್ನು ನೋಡಿ ಪಾಂಡವರ ಸೇನೆಯು ಹೇಗೆ ತಾನೇ ಅವನನ್ನು ಹೊಡೆದುರುಳಿಸಲು ಶಕ್ಯವಾಯಿತು?

06015017a ಕಥಂ ಭೀಷ್ಮೇಣ ಸಂಗ್ರಾಮಮಕುರ್ವನ್ಪಾಂಡುನಂದನಾಃ।
06015017c ಕಥಂ ಚ ನಾಜಯದ್ಭೀಷ್ಮೋ ದ್ರೋಣೇ ಜೀವತಿ ಸಂಜಯ।।

ಸಂಜಯ! ಪಾಂಡುನಂದನರು ಭೀಷ್ಮನೊಂದಿಗೆ ಹೇಗೆ ಯುದ್ಧ ಮಾಡಿದರು? ದ್ರೋಣನು ಜೀವಿತವಿರುವಾಗಲೇ ಅವರು ಹೇಗೆ ಭೀಷ್ಮನನ್ನು ಗೆದ್ದರು?

06015018a ಕೃಪೇ ಸನ್ನಿಹಿತೇ ತತ್ರ ಭರದ್ವಾಜಾತ್ಮಜೇ ತಥಾ।
06015018c ಭೀಷ್ಮಃ ಪ್ರಹರತಾಂ ಶ್ರೇಷ್ಠಃ ಕಥಂ ಸ ನಿಧನಂ ಗತಃ।।

ಭರದ್ವಾಜಾತ್ಮಜ ದ್ರೋಣನು ಸನಿಹದಲ್ಲಿಯೇ ಇರುವಾಗ ಪ್ರಹರಿಗಳಲ್ಲಿ ಶ್ರೇಷ್ಠ ಭೀಷ್ಮನು ಹೇಗೆ ತಾನೇ ನಿಧನ ಹೊಂದಿದನು?

06015019a ಕಥಂ ಚಾತಿರಥಸ್ತೇನ ಪಾಂಚಾಲ್ಯೇನ ಶಿಖಂಡಿನಾ।
06015019c ಭೀಷ್ಮೋ ವಿನಿಹತೋ ಯುದ್ಧೇ ದೇವೈರಪಿ ದುರುತ್ಸಹಃ।।

ಅತಿರಥನೆಂದೆನಿಸಿಕೊಂಡ, ದೇವತೆಗಳಿಗೂ ಜಯಿಸಲಸಾಧ್ಯನಾದ ಭೀಷ್ಮನು ಪಾಂಚಾಲ ಶಿಖಂಡಿಯಿಂದ ಯುದ್ಧದಲ್ಲಿ ಹೇಗೆ ಸಂಹರಿಸಲ್ಪಟ್ಟನು?

06015020a ಯಃ ಸ್ಪರ್ಧತೇ ರಣೇ ನಿತ್ಯಂ ಜಾಮದಗ್ನ್ಯಂ ಮಹಾಬಲಂ।
06015020c ಅಜಿತಂ ಜಾಮದಗ್ನ್ಯೇನ ಶಕ್ರತುಲ್ಯಪರಾಕ್ರಮಂ।।
06015021a ತಂ ಹತಂ ಸಮರೇ ಭೀಷ್ಮಂ ಮಹಾರಥಬಲೋಚಿತಂ।
06015021c ಸಂಜಯಾಚಕ್ಷ್ವ ಮೇ ವೀರಂ ಯೇನ ಶರ್ಮ ನ ವಿದ್ಮಹೇ।।

ಯಾರು ನಿತ್ಯವೂ ಮಹಾಬಲ ಜಾಮದಗ್ನ್ಯನೊಡನೆ ರಣದಲ್ಲಿ ಸ್ಪರ್ಧಿಸುತ್ತಿದ್ದನೋ, ಜಾಮದಗ್ನ್ಯನಿಂದ ಗೆಲ್ಲಲಸಾಧ್ಯನಾಗಿದ್ದನೋ ಅ ಶಕ್ರತುಲ್ಯಪರಾಕ್ರಮಿ, ಮಹಾರಥಿ, ಭೀಷ್ಮನನ್ನು ಸಮರದಲ್ಲಿ ಸಂಹರಿಸಲಾಯಿತೆಂದರೆ ಅದರ ಕುರಿತು ನನಗೆ ಹೇಳು ಸಂಜಯ! ಇಲ್ಲದಿದ್ದರೆ ನನಗೆ ನೆಮ್ಮದಿಯೇ ಇಲ್ಲ.

06015022a ಮಾಮಕಾಃ ಕೇ ಮಹೇಷ್ವಾಸಾ ನಾಜಹುಃ ಸಂಜಯಾಚ್ಯುತಂ।
06015022c ದುರ್ಯೋಧನಸಮಾದಿಷ್ಟಾಃ ಕೇ ವೀರಾಃ ಪರ್ಯವಾರಯನ್।।

ಸಂಜಯ! ನನ್ನವರಾದ ಯಾವ ಮಹೇಷ್ವಾಸರು ಆ ಅಚ್ಯುತನನ್ನು ಬಿಟ್ಟುಕೊಡಲಿಲ್ಲ? ದುರ್ಯೋಧನನ ಕಡೆಯವರಾದ ಯಾವ ವೀರರು ಅವನನ್ನು ಸುತ್ತುವರೆದಿದ್ದರು?

06015023a ಯಚ್ಚಿಖಂಡಿಮುಖಾಃ ಸರ್ವೇ ಪಾಂಡವಾ ಭೀಷ್ಮಮಭ್ಯಯುಃ।
06015023c ಕಚ್ಚಿನ್ನ ಕುರವೋ ಭೀತಾಸ್ತತ್ಯಜುಃ ಸಂಜಯಾಚ್ಯುತಂ।।

ಯಾವಾಗ ಶಿಖಂಡಿಯನ್ನು ಮುಂದಿರಿಸಿಕೊಂಡು ಪಾಂಡವರೆಲ್ಲರೂ ಭೀಷ್ಮನ ಸಮೀಪ ಬಂದರೋ ಆಗ ಕುರುಗಳು ಭಯದಿಂದ ಆ ಅಚ್ಯುತನನ್ನು ತ್ಯಜಿಸಿ ಹೋಗಲಿಲ್ಲ ತಾನೇ?

06015024a ಮೌರ್ವೀಘೋಷಸ್ತನಯಿತ್ನುಃ ಪೃಷತ್ಕಪೃಷತೋ ಮಹಾನ್।
06015024c ಧನುರ್ಹ್ವಾದಮಹಾಶಬ್ದೋ ಮಹಾಮೇಘ ಇವೋನ್ನತಃ।।
06015025a ಯದಭ್ಯವರ್ಷತ್ಕೌಂತೇಯಾನ್ಸಪಾಂಚಾಲಾನ್ಸಸೃಂಜಯಾನ್।
06015025c ನಿಘ್ನನ್ಪರರಥಾನ್ವೀರೋ ದಾನವಾನಿವ ವಜ್ರಭೃತ್।।

ಉನ್ನತ ಮಹಾಮೇಘಗಳ ಗುಡುಗಿನಂತೆ ಬಿಲ್ಲಿನ ಶಬ್ಧವುಳ್ಳ, ಬಿಲ್ಲಿನ ಹೆದೆಯ ಠೇಂಕಾರವು ಮೊಳಗುತ್ತಿರಲು ಕೌಂತೇಯರ, ಪಾಂಚಾಲರ ಮತ್ತು ಸೃಂಜಯರ ಮೇಲೆ ಮಳೆಸುರಿಸಿ ಶತ್ರುಗಳ ರಥಗಳನ್ನು ಆ ವೀರನು ವಜ್ರಭೃತುವು ದಾನವರನ್ನು ಹೇಗೋ ಹಾಗೆ ಪುಡಿಮಾಡುತ್ತಿದ್ದನು.

06015026a ಇಷ್ವಸ್ತ್ರಸಾಗರಂ ಘೋರಂ ಬಾಣಗ್ರಾಹಂ ದುರಾಸದಂ।
06015026c ಕಾರ್ಮುಕೋರ್ಮಿಣಮಕ್ಷಯ್ಯಮದ್ವೀಪಂ ಸಮರೇಽಪ್ಲವಂ।
06015026e ಗದಾಸಿಮಕರಾವರ್ತಂ ಹಯಗ್ರಾಹಂ ಗಜಾಕುಲಂ।।
06015027a ಹಯಾನ್ಗಜಾನ್ಪದಾತಾಂಶ್ಚ ರಥಾಂಶ್ಚ ತರಸಾ ಬಹೂನ್।
06015027c ನಿಮಜ್ಜಯಂತಂ ಸಮರೇ ಪರವೀರಾಪಹಾರಿಣಂ।।
06015028a ವಿದಹ್ಯಮಾನಂ ಕೋಪೇನ ತೇಜಸಾ ಚ ಪರಂತಪಂ।
06015028c ವೇಲೇವ ಮಕರಾವಾಸಂ ಕೇ ವೀರಾಃ ಪರ್ಯವಾರಯನ್।।

ಎಲ್ಲಿ ಬಾಣಗಳು ದುರಾಸದ ಮೊಸಳೆಗಳೋ ಮತ್ತು ಬಿಲ್ಲುಗಳು ಅಲೆಗಳೋ ಅಂಥಹ ಅಸ್ತ್ರ ಮತ್ತು ಬಾಣಗಳ ಸಾಗರದಂತಿದ್ದ, ದ್ವೀಪವೇ ಇಲ್ಲದ ಅಕ್ಷಯ ಸಾಗರದಂತಿದ್ದ, ತೆಪ್ಪವೇ ಕಾಣದ ಅಲ್ಲೋಲಕಲ್ಲೋಲಗೊಂಡ ಸಾಗರದಂತಿದ್ದ, ಗದೆ-ಖಡ್ಗಗಳು ತಿಮಿಂಗಿಲಗಳಂತಿದ್ದ, ಬಹುಸಂಖ್ಯೆಯಲ್ಲಿ ಕುದುರೆ, ಆನೆ, ಪದಾತಿಗಳು ಓಡಾಡುತ್ತಿರುವ ಆ ಸೇನೆಯನ್ನು, ಸಾಗರವನ್ನು ದಡವು ಎದುರಿಸಿ ತಡೆವಂತೆ ಯಾವ ವೀರರು ತಡೆದರು? –

06015029a ಭೀಷ್ಮೋ ಯದಕರೋತ್ಕರ್ಮ ಸಮರೇ ಸಂಜಯಾರಿಹಾ।
06015029c ದುರ್ಯೋಧನಹಿತಾರ್ಥಾಯ ಕೇ ತದಾಸ್ಯ ಪುರೋಽಭವನ್।।

ಸಂಜಯ! ಭೀಷ್ಮನು ದುರ್ಯೋಧನನ ಹಿತಕ್ಕಾಗಿ ಸಮರದಲ್ಲಿ ಈ ಕೆಲಸವನ್ನು ಮಾಡುತ್ತಿರುವಾಗ ಅವನ ಮುಂದೆ ಯಾರಿದ್ದರು?

06015030a ಕೇಽರಕ್ಷನ್ದಕ್ಷಿಣಂ ಚಕ್ರಂ ಭೀಷ್ಮಸ್ಯಾಮಿತತೇಜಸಃ।
06015030c ಪೃಷ್ಠತಃ ಕೇ ಪರಾನ್ವೀರಾ ಉಪಾಸೇಧನ್ಯತವ್ರತಾಃ।।

ಅಮಿತತೇಜಸ ಭೀಷ್ಮನ ಎಡಚಕ್ರವನ್ನು ಯಾರು ರಕ್ಷಿಸುತ್ತಿದ್ದರು? ಅವನ ಮುಂದೆ ಯಾವ ವೀರ ಯತವ್ರತರು ಅವನನ್ನು ಬೆಂಬಲಿಸುತ್ತಿದ್ದರು?

06015031a ಕೇ ಪುರಸ್ತಾದವರ್ತಂತ ರಕ್ಷಂತೋ ಭೀಷ್ಮಮಂತಿಕೇ।
06015031c ಕೇಽರಕ್ಷನ್ನುತ್ತರಂ ಚಕ್ರಂ ವೀರಾ ವೀರಸ್ಯ ಯುಧ್ಯತಃ।।

ಭೀಷ್ಮನನ್ನು ಅಂತ್ಯದಲ್ಲಿ ಯಾರು ಮುಂದಿನಿಂದ ರಕ್ಷಿಸುತ್ತಿದ್ದರು? ಯುದ್ಧ ಮಾಡುತ್ತಿರುವ ಆ ವೀರನ ಬಲಚಕ್ರವನ್ನು ಯಾವವೀರರು ರಕ್ಷಿಸುತ್ತಿದ್ದರು?

06015032a ವಾಮೇ ಚಕ್ರೇ ವರ್ತಮಾನಾಃ ಕೇಽಘ್ನನ್ಸಂಜಯ ಸೃಂಜಯಾನ್।
06015032c ಸಮೇತಾಗ್ರಮನೀಕೇಷು ಕೇಽಭ್ಯರಕ್ಷನ್ದುರಾಸದಂ।।

ಸಂಜಯ! ಅವನ ಎಡಚಕ್ರದಲ್ಲಿದ್ದುಕೊಂಡು ಯಾರು ಸೃಂಜಯರನ್ನು ಸದೆಬಡಿದರು? ಯುದ್ಧದಲ್ಲಿ ತೊಡಗಿರುವಾಗ ಆ ದುರಾಸದನ ಮುಂದಿನ ಚಕ್ರಗಳನ್ನು ಯಾರು ರಕ್ಷಿಸಿದರು?

06015033a ಪಾರ್ಶ್ವತಃ ಕೇಽಭ್ಯವರ್ತಂತ ಗಚ್ಛಂತೋ ದುರ್ಗಮಾಂ ಗತಿಂ।
06015033c ಸಮೂಹೇ ಕೇ ಪರಾನ್ವೀರಾನ್ಪ್ರತ್ಯಯುಧ್ಯಂತ ಸಂಜಯ।।

ಸಂಜಯ! ದುರ್ಗಮ ಗತಿಯಲ್ಲಿ ಹೋಗುತ್ತಿರುವ ಅವನನ್ನು ಎರಡೂ ಕಡೆಗಳಿಂದ ಯಾರು ರಕ್ಷಿಸಿದರು? ಯುದ್ಧದಲ್ಲಿ ಯಾರು ಪರವೀರರು ಅವನೊಂದಿಗೆ ಪ್ರತಿಯುದ್ಧ ಮಾಡಿದರು?

06015034a ರಕ್ಷ್ಯಮಾಣಃ ಕಥಂ ವೀರೈರ್ಗೋಪ್ಯಮಾನಾಶ್ಚ ತೇನ ತೇ।
06015034c ದುರ್ಜಯಾನಾಮನೀಕಾನಿ ನಾಜಯಂಸ್ತರಸಾ ಯುಧಿ।।

ವೀರರಿಂದ ರಕ್ಷಿಸಲ್ಪಟ್ಟಿದ್ದರೂ, ಅವರನ್ನು ರಕ್ಷಿಸುತ್ತಿದ್ದರೂ ಹೇಗೆ ಅವನು ಯುದ್ಧದಲ್ಲಿ ಆ ದುರ್ಜಯ ಸೇನೆಯನ್ನು ತಕ್ಷಣವೇ ಗೆಲ್ಲಲಿಲ್ಲ?

06015035a ಸರ್ವಲೋಕೇಶ್ವರಸ್ಯೇವ ಪರಮೇಷ್ಠಿಪ್ರಜಾಪತೇಃ।
06015035c ಕಥಂ ಪ್ರಹರ್ತುಮಪಿ ತೇ ಶೇಕುಃ ಸಂಜಯ ಪಾಂಡವಾಃ।।

ಸಂಜಯ! ಸರ್ವಲೋಕೇಶ್ವರ, ಪರಮೇಷ್ಠಿ, ಪ್ರಜಾಪತಿಯಂತಿದ್ದರೂ ಅವನನ್ನು ಪಾಂಡವರು ಹೇಗೆ ಹೊಡೆಯಲು ಶಕ್ಯರಾದರು?

06015036a ಯಸ್ಮಿನ್ದ್ವೀಪೇ ಸಮಾಶ್ರಿತ್ಯ ಯುಧ್ಯಂತಿ ಕುರವಃ ಪರೈಃ।
06015036c ತಂ ನಿಮಗ್ನಂ ನರವ್ಯಾಘ್ರಂ ಭೀಷ್ಮಂ ಶಂಸಸಿ ಸಂಜಯ।।

ಯಾವ ದ್ವೀಪವನ್ನು ಅವಲಂಬಿಸಿ ಕುರುಗಳು ಶತ್ರುಗಳೊಂದಿಗೆ ಯುದ್ಧ ಮಾಡುತ್ತಿರುವರೋ ಆ ನರವ್ಯಾಘ್ರ ಭೀಷ್ಮನು ನಿಮಗ್ನನಾಗಿದ್ದುದನ್ನು ಹೇಳುತ್ತಿದ್ದೀಯೆ ಸಂಜಯ!

06015037a ಯಸ್ಯ ವೀರ್ಯೇ ಸಮಾಶ್ವಸ್ಯ ಮಮ ಪುತ್ರೋ ಬೃಹದ್ಬಲಃ।
06015037c ನ ಪಾಂಡವಾನಗಣಯತ್ಕಥಂ ಸ ನಿಹತಃ ಪರೈಃ।।

ಯಾರ ವೀರ್ಯವನ್ನು ಅವಲಂಬಿಸಿ ನನ್ನ ಪುತ್ರರು ಪಾಂಡವರನ್ನು ಗಣನೆಗೆ ತೆಗೆದುಕೊಂಡಿರಲಿಲ್ಲವೋ ಅವನನ್ನೇ ಶತ್ರುಗಳು ಹೇಗೆ ಸಂಹರಿಸಿದರು?

06015038a ಯಃ ಪುರಾ ವಿಬುಧೈಃ ಸೇಂದ್ರೈಃ ಸಾಹಾಯ್ಯೇ ಯುದ್ಧದುರ್ಮದಃ।
06015038c ಕಾಂಕ್ಷಿತೋ ದಾನವಾನ್ ಘ್ನದ್ಭಿಃ ಪಿತಾ ಮಮ ಮಹಾವ್ರತಃ।।
06015039a ಯಸ್ಮಿಂ ಜಾತೇ ಮಹಾವೀರ್ಯೇ ಶಂತನುರ್ಲೋಕಶಂಕರೇ।
06015039c ಶೋಕಂ ದುಃಖಂ ಚ ದೈನ್ಯಂ ಚ ಪ್ರಾಜಹಾತ್ಪುತ್ರಲಕ್ಷ್ಮಣಿ।।
06015040a ಪ್ರಜ್ಞಾ ಪರಾಯಣಂ ತಜ್ಜ್ಞಂ ಸದ್ಧರ್ಮನಿರತಂ ಶುಚಿಂ।
06015040c ವೇದವೇದಾಂಗತತ್ತ್ವಜ್ಞಂ ಕಥಂ ಶಂಸಸಿ ಮೇ ಹತಂ।।

ಹಿಂದೆ ದಾನವರನ್ನು ಸದೆಬಡಿಯಲು ಬಯಸಿ ಇಂದ್ರನೂ ಸೇರಿ ದೇವತೆಗಳು ಕೇಳಿದ್ದ ನನ್ನ ತಂದೆ ಯುದ್ಧ ದುರ್ಮದ ಮಹಾವ್ರತನು, ಲೋಕಶಂಕರ ಶಂತನುವಿಗೆ ಹುಟ್ಟಿ ಪುತ್ರಲಕ್ಷ್ಮಣನಾಗಿದ್ದು ಅವನ ಶೋಕ, ದುಃಖ ಮತ್ತು ದೈನ್ಯತೆಗಳನ್ನು ಕಳೆದ ಆ ಮಹಾವೀರ್ಯನು, ಆ ಪ್ರಜ್ಞಾಪರಾಯಣ, ತಜ್ಞ, ಸದ್ಧರ್ಮನಿರತ, ಶುಚಿ, ವೇದವೇದಾಂಗತತ್ವಜ್ಞನು ಹೇಗೆ ಹತನಾದನೆಂದು ನನಗೆ ವರ್ಣಿಸು.

06015041a ಸರ್ವಾಸ್ತ್ರವಿನಯೋಪೇತಂ ದಾಂತಂ ಶಾಂತಂ ಮನಸ್ವಿನಂ।
06015041c ಹತಂ ಶಾಂತನವಂ ಶ್ರುತ್ವಾ ಮನ್ಯೇ ಶೇಷಂ ಬಲಂ ಹತಂ।।

ಆ ಸರ್ವಾಸ್ತ್ರವಿನಯೋಪೇತ, ದಾಂತ, ಶಾಂತ, ಮನಸ್ವಿ, ಶಾಂತನವನು ಹತನಾದನೆಂದು ಕೇಳಿ ಉಳಿದ ಸೇನೆಯೂ ಹತವಾಗಿರಬಹುದು ಎಂದನಿಸುತ್ತದೆ.

06015042a ಧರ್ಮಾದಧರ್ಮೋ ಬಲವಾನ್ಸಂಪ್ರಾಪ್ತ ಇತಿ ಮೇ ಮತಿಃ।
06015042c ಯತ್ರ ವೃದ್ಧಂ ಗುರುಂ ಹತ್ವಾ ರಾಜ್ಯಮಿಚ್ಛಂತಿ ಪಾಂಡವಾಃ।।

ವೃದ್ಧ ಗುರುವನ್ನೂ ಕೊಂದು ಪಾಂಡವರು ರಾಜ್ಯವನ್ನು ಬಯಸುತ್ತಾರೆಂದರೆ ಧರ್ಮಕ್ಕಿಂತಲೂ ಅಧರ್ಮವೇ ಬಲವನ್ನು ಪಡೆದಿದೆ ಎಂದು ನನ್ನ ಅಭಿಪ್ರಾಯ.

06015043a ಜಾಮದಗ್ನ್ಯಃ ಪುರಾ ರಾಮಃ ಸರ್ವಾಸ್ತ್ರವಿದನುತ್ತಮಃ।
06015043c ಅಂಬಾರ್ಥಮುದ್ಯತಃ ಸಂಖ್ಯೇ ಭೀಷ್ಮೇಣ ಯುಧಿ ನಿರ್ಜಿತಃ।।
06015044a ತಮಿಂದ್ರಸಮಕರ್ಮಾಣಂ ಕಕುದಂ ಸರ್ವಧನ್ವಿನಾಂ।
06015044c ಹತಂ ಶಂಸಸಿ ಭೀಷ್ಮಂ ಮೇ ಕಿಂ ನು ದುಃಖಮತಃ ಪರಂ।।

ಹಿಂದೆ ಸರ್ವಾಸ್ತ್ರವಿದು ಅನುತ್ತಮ ಜಾಮದಗ್ನ್ಯ ರಾಮನು ಅಂಬೆಗೋಸ್ಕರ ಭೀಷ್ಮನೊಂದಿಗೆ ಯುದ್ಧವನ್ನು ಪ್ರಾರಂಭಿಸಿ ಸೋತಿದ್ದನು. ಆ ಇಂದ್ರಸಮಕರ್ಮಿ, ಸರ್ವಧನ್ವಿಗಳ ಕಕುದ ಭೀಷ್ಮನು ಹತನಾದನೆಂದು ಹೇಳಿದೆಯಲ್ಲಾ ಅದಕ್ಕಿಂತಲೂ ಅಧಿಕವಾದ ದುಃಖವಾದರೂ ಏನಿದೆ?

06015045a ಅಸಕೃತ್ ಕ್ಷತ್ರಿಯವ್ರಾತಾಃ ಸಂಖ್ಯೇ ಯೇನ ವಿನಿರ್ಜಿತಾಃ।
06015045c ಜಾಮದಗ್ನ್ಯಸ್ತಥಾ ರಾಮಃ ಪರವೀರನಿಘಾತಿನಾ।।
06015046a ತಸ್ಮಾನ್ನೂನಂ ಮಹಾವೀರ್ಯಾದ್ಭಾರ್ಗವಾದ್ಯುದ್ಧದುರ್ಮದಾತ್।
06015046c ತೇಜೋವೀರ್ಯಬಲೈರ್ಭೂಯಾಂ ಶಿಖಂಡೀ ದ್ರುಪದಾತ್ಮಜಃ।।
06015047a ಯಃ ಶೂರಂ ಕೃತಿನಂ ಯುದ್ಧೇ ಸರ್ವಶಾಸ್ತ್ರವಿಶಾರದಂ।
06015047c ಪರಮಾಸ್ತ್ರವಿದಂ ವೀರಂ ಜಘಾನ ಭರತರ್ಷಭಂ।।

ಬಹಳ ಬಾರಿ ಕ್ಷತ್ರಿಯರ ಗುಂಪುಗಳನ್ನು ಯುದ್ಧದಲ್ಲಿ ಗೆದ್ದ, ಹಾಗೆಯೇ ಪರವೀರನಿಘಾತಿ, ಯುದ್ಧದುರ್ಮದ, ಮಹಾವೀರ್ಯ, ತೇಜೋವೀರ್ಯ, ಬಲೋ ವೀರ್ಯ ಭಾರ್ಗವ ಜಾಮದಗ್ನಿ ರಾಮನಿಂದಲೂ ಸೋಲಿಸಲ್ಪಡದ ಅವನನ್ನು ದ್ರುಪದಾತ್ಮಜ ಶಿಖಂಡಿಯು ಸೋಲಿಸಿದನು. ಅ ಭರತರ್ಷಭ ವೀರ ಪರಮಾಸ್ತ್ರವಿದು ಸರ್ವಶಾಸ್ತ್ರವಿಶಾರದ ಶೂರ ಕೃತಿನನನ್ನು ಯುದ್ಧದಲ್ಲಿ ಸೋಲಿಸಿದ ಅವನು ತೇಜಸ್ಸು-ವೀರ್ಯ-ಬಲಗಳಲ್ಲಿ ಇನ್ನೂ ಹೆಚ್ಚಿನವನೇ ಇರಬೇಕು.

06015048a ಕೇ ವೀರಾಸ್ತಮಮಿತ್ರಘ್ನಮನ್ವಯುಃ ಶತ್ರುಸಂಸದಿ।
06015048c ಶಂಸ ಮೇ ತದ್ಯಥಾ ವೃತ್ತಂ ಯುದ್ಧಂ ಭೀಷ್ಮಸ್ಯ ಪಾಂಡವೈಃ।।

ಆ ಶತ್ರುಸಂಸದಿಯಲ್ಲಿ ಯಾವ ವೀರರು ಆ ಅಮಿತ್ರಘ್ನನನ್ನು ಅನುಸರಿಸಿದರು? ಭೀಷ್ಮ ಮತ್ತು ಪಾಂಡವರ ಯುಧ್ಧವನ್ನು ಹೇಗೆ ನಡೆಯಿತೋ ಹಾಗೆ ವರದಿಮಾಡು.

06015049a ಯೋಷೇವ ಹತವೀರಾ ಮೇ ಸೇನಾ ಪುತ್ರಸ್ಯ ಸಂಜಯ।
06015049c ಅಗೋಪಮಿವ ಚೋದ್ಭ್ರಾಂತಂ ಗೋಕುಲಂ ತದ್ಬಲಂ ಮಮ।।

ಸಂಜಯ! ವೀರನನ್ನು ಕಳೆದುಕೊಂಡ ನನ್ನ ಪುತ್ರನ ಸೇನೆಯು ರಕ್ಷಕನಿಲ್ಲದ ಸ್ತ್ರೀಯಂತಾಗಿದೆ. ನನ್ನ ಸೇನೆಯು ಗೋಪಾಲಕನಿಲ್ಲದ ಗೋಕುಲದಂತೆ ಭ್ರಾಂತಗೊಂಡಿದೆ.

06015050a ಪೌರುಷಂ ಸರ್ವಲೋಕಸ್ಯ ಪರಂ ಯಸ್ಯ ಮಹಾಹವೇ।
06015050c ಪರಾಸಿಕ್ತೇ ಚ ವಸ್ತಸ್ಮಿನ್ಕಥಮಾಸೀನ್ಮನಸ್ತದಾ।।

ಯಾರು ಸರ್ವಲೋಕದ ಪರಮ ಪೌರುಷನಾಗಿದ್ದನೋ ಅವನು ಮಹಾಹವದಲ್ಲಿ ಕೆಳಗುರುಳಿದಾಗ ನನ್ನ ಸೇನೆಯ ಮನಸ್ಥಿತಿಯು ಹೇಗಿದ್ದಿತು?

06015051a ಜೀವಿತೇಽಪ್ಯದ್ಯ ಸಾಮರ್ಥ್ಯಂ ಕಿಮಿವಾಸ್ಮಾಸು ಸಂಜಯ।
06015051c ಘಾತಯಿತ್ವಾ ಮಹಾವೀರ್ಯಂ ಪಿತರಂ ಲೋಕಧಾರ್ಮಿಕಂ।।

ಸಂಜಯ! ಮಹಾವೀರ್ಯನಾದ ಲೋಕಧಾರ್ಮಿಕನಾದ ತಂದೆಯನ್ನು ಕೊಂದು ಇಂದು ನಾವು ಜೀವಿಸಿರಲು ಯಾವ ಸಾಮರ್ಥ್ಯವನ್ನು ಪಡೆದಿದ್ದೇವೆ?

06015052a ಅಗಾಧೇ ಸಲಿಲೇ ಮಗ್ನಾಂ ನಾವಂ ದೃಷ್ಟ್ವೇವ ಪಾರಗಾಃ।
06015052c ಭೀಷ್ಮೇ ಹತೇ ಭೃಶಂ ದುಃಖಾನ್ಮನ್ಯೇ ಶೋಚಂತಿ ಪುತ್ರಕಾಃ।।

ದಾಟಲು ಬಯಸಿದವರು ಅಗಾಧವಾದ ನೀರಿನಲ್ಲಿ ಮುಳುಗಿ ಹೋಗಿರುವ ಅವರ ನಾವೆಯನ್ನು ನೋಡಿದವರಂತೆ, ಭೀಷ್ಮನು ಹತನಾಗಲು ನನ್ನ ಮಕ್ಕಳು ತುಂಬಾ ಶೋಕಿಸುತ್ತಿರಬಹುದೆಂದು ನಾನು ಅಂದುಕೊಳ್ಳುತ್ತೇನೆ.

06015053a ಅದ್ರಿಸಾರಮಯಂ ನೂನಂ ಸುದೃಢಂ ಹೃದಯಂ ಮಮ।
06015053c ಯಚ್ಚ್ರುತ್ವಾ ಪುರುಷವ್ಯಾಘ್ರಂ ಹತಂ ಭೀಷ್ಮಂ ನ ದೀರ್ಯತೇ।।

ಪುರುಷವ್ಯಾಘ್ರ ಭೀಷ್ಮನು ಹತನಾದನೆಂದು ಕೇಳಿದರೂ ಒಡೆಯದೇ ಇದ್ದ ನನ್ನ ಈ ಹೃದಯವು ತುಂಬಾ ಸಾರಮಯವಾಗಿದ್ದು ಸುದೃಢವಾಗಿದೆ ಎನಿಸುತ್ತದೆಯಲ್ಲವೇ?

06015054a ಯಸ್ಮಿನ್ನಸ್ತ್ರಂ ಚ ಮೇಧಾ ಚ ನೀತಿಶ್ಚ ಭರತರ್ಷಭೇ।
06015054c ಅಪ್ರಮೇಯಾಣಿ ದುರ್ಧರ್ಷೇ ಕಥಂ ಸ ನಿಹತೋ ಯುಧಿ।।

ಯಾರಲ್ಲಿ ಅಸ್ತ್ರ, ಬುದ್ಧಿ, ಮತ್ತು ನೀತಿಗಳು ಅಳೆಯಲಾರದಷ್ಟು ಇವೆಯೋ ಆ ದುರ್ಧರ್ಷನು ಯುದ್ಧದಲ್ಲಿ ಹೇಗೆ ಹತನಾದನು?

06015055a ನ ಚಾಸ್ತ್ರೇಣ ನ ಶೌರ್ಯೇಣ ತಪಸಾ ಮೇಧಯಾ ನ ಚ।
06015055c ನ ಧೃತ್ಯಾ ನ ಪುನಸ್ತ್ಯಾಗಾನ್ಮೃತ್ಯೋಃ ಕಶ್ಚಿದ್ವಿಮುಚ್ಯತೇ।।

ಅಸ್ತ್ರಗಳಿಂದಾಗಲೀ, ಶೌರ್ಯದಿಂದಾಗಲೀ, ತಪಸ್ಸು-ಬುದ್ಧಿಶಕ್ತಿಯಿಂದಾಗಲೀ, ಧೃತಿಯಿಂದಾಗಲೀ, ಮತ್ತು ತ್ಯಾಗದಿಂದಾಗಲೀ ಯಾವುದರಿಂದಲೂ ಮೃತ್ಯುವಿನಿಂದ ಬಿಡುಗಡೆಯು ದೊರೆಯುವುದಿಲ್ಲ.

06015056a ಕಾಲೋ ನೂನಂ ಮಹಾವೀರ್ಯಃ ಸರ್ವಲೋಕದುರತ್ಯಯಃ।
06015056c ಯತ್ರ ಶಾಂತನವಂ ಭೀಷ್ಮಂ ಹತಂ ಶಂಸಸಿ ಸಂಜಯ।।

ಸಂಜಯ! ಶಾಂತನವ ಭೀಷ್ಮನು ಹತನಾದ ಎಂದು ನೀನು ಹೇಳುವಲ್ಲಿ ಮಹಾವೀರ್ಯವಾದ ಕಾಲವನ್ನು ಲೋಕದಲ್ಲಿ ಯಾರೂ ದಾಟಲು ಶಕ್ಯರಲ್ಲ ಎಂದಲ್ಲವೇ?

06015057a ಪುತ್ರಶೋಕಾಭಿಸಂತಪ್ತೋ ಮಹದ್ದುಃಖಮಚಿಂತಯನ್।
06015057c ಆಶಂಸೇಽಹಂ ಪುರಾ ತ್ರಾಣಂ ಭೀಷ್ಮಾಚ್ಚಂತನುನಂದನಾತ್।।

ಪುತ್ರರ ಕುರಿತಾಗಿ ಶೋಕಸಂತಪ್ತನಾಗಿದ್ದ ನಾನು ಮಹಾದುಃಖದಲ್ಲಿ ಚಿಂತಿಸಿ ಹಿಂದೆಯೇ ಭೀಷ್ಮ ಶಂತನುನಂದನನ ತ್ರಾಣವನ್ನು ಅವಲಂಬಿಸಿದ್ದೆ.

06015058a ಯದಾದಿತ್ಯಮಿವಾಪಶ್ಯತ್ಪತಿತಂ ಭುವಿ ಸಂಜಯ।
06015058c ದುರ್ಯೋಧನಃ ಶಾಂತನವಂ ಕಿಂ ತದಾ ಪ್ರತ್ಯಪದ್ಯತ।।

ಸಂಜಯ! ಆದಿತ್ಯನಂತೆ ಭುವಿಗೆ ಬೀಳುತ್ತಿರುವ ಶಾಂತನುವನ್ನು ನೋಡಿ ದುರ್ಯೋಧನನು ಏನು ಮಾಡಿದನು?

06015059a ನಾಹಂ ಸ್ವೇಷಾಂ ಪರೇಷಾಂ ವಾ ಬುದ್ಧ್ಯಾ ಸಂಜಯ ಚಿಂತಯನ್।
06015059c ಶೇಷಂ ಕಿಂ ಚಿತ್ಪ್ರಪಶ್ಯಾಮಿ ಪ್ರತ್ಯನೀಕೇ ಮಹೀಕ್ಷಿತಾಂ।।

ಸಂಜಯ! ನನ್ನ ಸ್ವಬುದ್ಧಿಯಿಂದ ಯೋಚಿಸಿದರೆ ನಮ್ಮಲ್ಲಿ ಮತ್ತು ಶತ್ರುಗಳಲ್ಲಿ ಉಳಿದಿರುವ ಮಹೀಕ್ಷಿತರು ಏನು ಮಾಡುತ್ತಾರೆಂದು ತೋಚುವುದಿಲ್ಲ.

06015060a ದಾರುಣಃ ಕ್ಷತ್ರಧರ್ಮೋಽಯಂ ಋಷಿಭಿಃ ಸಂಪ್ರದರ್ಶಿತಃ।
06015060c ಯತ್ರ ಶಾಂತನವಂ ಹತ್ವಾ ರಾಜ್ಯಮಿಚ್ಛಂತಿ ಪಾಂಡವಾಃ।।

ಶಾಂತನವನನ್ನು ಕೊಂದು ಪಾಂಡವರು ರಾಜ್ಯವನ್ನು ಬಯಸುತ್ತಾರೆ ಎಂದಾದರೆ ಋಷಿಗಳು ಹಾಕಿಕೊಟ್ಟ ಈ ಕ್ಷತ್ರಧರ್ಮವು ದಾರುಣವಾದುದು.

06015061a ವಯಂ ವಾ ರಾಜ್ಯಮಿಚ್ಛಾಮೋ ಘಾತಯಿತ್ವಾ ಪಿತಾಮಹಂ।
06015061c ಕ್ಷತ್ರಧರ್ಮೇ ಸ್ಥಿತಾಃ ಪಾರ್ಥಾ ನಾಪರಾಧ್ಯಂತಿ ಪುತ್ರಕಾಃ।।

ನಾವೂ ಕೂಡ ಪಿತಾಮಹನನ್ನು ಕೊಲ್ಲಿಸಿ ರಾಜ್ಯವನ್ನು ಬಯಸುತ್ತಿದ್ದೇವೆ. ಪಾರ್ಥರೂ ಮತ್ತು ನನ್ನ ಪುತ್ರರೂ ಕ್ಷತ್ರಧರ್ಮದಲ್ಲಿಯೇ ನೆಲೆಸಿದ್ದಾರೆ. ಆದುದರಿಂದ ಅವರು ಅಪರಾಧಮಾಡಿದಂತಾಗಲಿಲ್ಲ.

06015062a ಏತದಾರ್ಯೇಣ ಕರ್ತವ್ಯಂ ಕೃಚ್ಛ್ರಾಸ್ವಾಪತ್ಸು ಸಂಜಯ।
06015062c ಪರಾಕ್ರಮಃ ಪರಂ ಶಕ್ತ್ಯಾ ತಚ್ಚ ತಸ್ಮಿನ್ಪ್ರತಿಷ್ಠಿತಂ।।

ಸಂಜಯ! ಅತಿದೊಡ್ಡ ಆಪತ್ತು ಬಂದಾಗ ಆರ್ಯನು ಮಾಡಬೇಕಾದ ಕರ್ತವ್ಯವೇ ಇದು. ಪರಮ ಶಕ್ತಿಯನ್ನುಪಯೋಗಿಸಿ ಪರಾಕ್ರಮವನ್ನು ತೋರಿಸುವುದು ಕ್ಷತ್ರಧರ್ಮದಲ್ಲಿ ಇದೆ.

06015063a ಅನೀಕಾನಿ ವಿನಿಘ್ನಂತಂ ಹ್ರೀಮಂತಮಪರಾಜಿತಂ।
06015063c ಕಥಂ ಶಾಂತನವಂ ತಾತ ಪಾಂಡುಪುತ್ರಾ ನ್ಯಪಾತಯನ್।।

ಅಯ್ಯಾ! ಸೇನೆಗಳನ್ನು ಸಂಹರಿಸುತ್ತಿದ್ದ, ವಿನಯನಾದ, ಅಪರಾಜಿತ ಶಾಂತನವನನ್ನು ಪಾಂಡುಪುತ್ರರು ಹೇಗೆ ಕೆಡವಿದರು?

06015064a ಕಥಂ ಯುಕ್ತಾನ್ಯನೀಕಾನಿ ಕಥಂ ಯುದ್ಧಂ ಮಹಾತ್ಮಭಿಃ।
06015064c ಕಥಂ ವಾ ನಿಹತೋ ಭೀಷ್ಮಃ ಪಿತಾ ಸಂಜಯ ಮೇ ಪರೈಃ।।

ಸೇನೆಗಳನ್ನು ಹೇಗೆ ರಚಿಸಲಾಗಿತ್ತು? ಮಹಾತ್ಮರು ಹೇಗೆ ಯುದ್ಧಮಾಡಿದರು? ಸಂಜಯ! ನನ್ನ ಪಿತ ಭೀಷ್ಮನನ್ನು ಶತ್ರುಗಳು ಹೇಗೆ ಹೊಡೆದುರುಳಿಸಿದರು?

06015065a ದುರ್ಯೋಧನಶ್ಚ ಕರ್ಣಶ್ಚ ಶಕುನಿಶ್ಚಾಪಿ ಸೌಬಲಃ।
06015065c ದುಃಶ್ಯಾಸನಶ್ಚ ಕಿತವೋ ಹತೇ ಭೀಷ್ಮೇ ಕಿಮಬ್ರುವನ್।।

ಭೀಷ್ಮನು ಹತನಾಗಲು ಜೂಜುಕೋರರಾದ ದುರ್ಯೋಧನ, ಕರ್ಣ, ಸೌಬಲ ಶಕುನಿ ಮತ್ತು ದುಃಶಾಸನರು ಏನು ಹೇಳಿದರು?

06015066a ಯಚ್ಚರೀರೈರುಪಸ್ತೀರ್ಣಾಂ ನರವಾರಣವಾಜಿನಾಂ।
06015066c ಶರಶಕ್ತಿಗದಾಖಡ್ಗತೋಮರಾಕ್ಷಾಂ ಭಯಾವಹಾಂ।।
06015067a ಪ್ರಾವಿಶನ್ಕಿತವಾ ಮಂದಾಃ ಸಭಾಂ ಯುಧಿ ದುರಾಸದಾಂ।
06015067c ಪ್ರಾಣದ್ಯೂತೇ ಪ್ರತಿಭಯೇ ಕೇಽದೀವ್ಯಂತ ನರರ್ಷಭಾಃ।।

ನರ-ವಾರಣ-ವಾಜಿಗಳ ಶರೀರಗಳೇ ದಾಳದ ಮನೆಗಳಾಗಿರುವ, ಶರ-ಶಕ್ತಿ-ಗದೆ-ಖಡ್ಗ-ತೋಮರಗಳೇ ಭಯಾವಹ ದಾಳಗಳಾಗಿರುವ ಆ ಯುದ್ಧವೆಂಬ ದ್ಯೂತದ ದುರಾಸದ ಸಭೆಯನ್ನು ಪ್ರವೇಶಿಸಿ ಆ ಮಂದ ಜೂಜುಕೋರ ನರರ್ಷಭರು ಪ್ರಾಣದ್ಯೂತದಲ್ಲಿ ಯಾರನ್ನು ಪಣವಾಗಿಟ್ಟಿದ್ದರು?

06015068a ಕೇಽಜಯನ್ಕೇ ಜಿತಾಸ್ತತ್ರ ಹೃತಲಕ್ಷಾ ನಿಪಾತಿತಾಃ।
06015068c ಅನ್ಯೇ ಭೀಷ್ಮಾಚ್ಚಾಂತನವಾತ್ತನ್ಮಮಾಚಕ್ಷ್ವ ಸಂಜಯ।।

ಅಲ್ಲಿ ಯಾರು ಗೆದ್ದರು? ಯಾರು ಸೋತರು? ಯಾರು ದಾಳಗಳನ್ನು ಚೆನ್ನಾಗಿ ಹಾಕಿದರು? ಶಾಂತನವ ಭೀಷ್ಮನಲ್ಲದೇ ಬೇರೆ ಯಾರು ಕೆಳಗುರುಳಿದರು? ಸಂಜಯ! ನನಗೆ ಹೇಳು.

06015069a ನ ಹಿ ಮೇ ಶಾಂತಿರಸ್ತೀಹ ಯುಧಿ ದೇವವ್ರತಂ ಹತಂ।
06015069c ಪಿತರಂ ಭೀಮಕರ್ಮಾಣಂ ಶ್ರುತ್ವಾ ಮೇ ದುಃಖಮಾವಿಶತ್।।

ಈಗ ನನಗೆ ಶಾಂತಿಯೆನ್ನುವುದೇ ಇಲ್ಲದಂತಾಗಿದೆ. ಯುದ್ಧದಲ್ಲಿ ಭೀಮಕರ್ಮಿ ತಂದೆ ದೇವವ್ರತನು ಹತನಾದನೆಂದು ಕೇಳಿ ನನಗೆ ದುಃಖವು ಆವರಿಸಿದೆ.

06015070a ಆರ್ತಿಂ ಮೇ ಹೃದಯೇ ರೂಢಾಂ ಮಹತೀಂ ಪುತ್ರಕಾರಿತಾಂ।
06015070c ತ್ವಂ ಸಿಂಚನ್ಸರ್ಪಿಷೇವಾಗ್ನಿಮುದ್ದೀಪಯಸಿ ಸಂಜಯ।।

ಸಂಜಯ! ಪುತ್ರರು ಮಾಡಿದ ಈ ಮಹಾ ತಪ್ಪಿನಿಂದಾಗಿ ನನ್ನ ಹೃದಯವು ಆರ್ತವಾಗಿದೆ. ಅಗ್ನಿಯಮೇಲೆ ತುಪ್ಪವನ್ನು ಸಿಂಪಡಿಸಿ ಹೆಚ್ಚಾಗಿ ಉರಿಯುವಂತೆ ನೀನು ಮಾಡುತ್ತಿದ್ದೀಯೆ.

06015071a ಮಹಾಂತಂ ಭಾರಮುದ್ಯಮ್ಯ ವಿಶ್ರುತಂ ಸಾರ್ವಲೌಕಿಕಂ।
06015071c ದೃಷ್ಟ್ವಾ ವಿನಿಹತಂ ಭೀಷ್ಮಂ ಮನ್ಯೇ ಶೋಚಂತಿ ಪುತ್ರಕಾಃ।।

ತನ್ನ ಮೇಲೆ ಮಹಾ ಭಾರವನ್ನು ಹೊತ್ತಿದ್ದ, ಸಾರ್ವಲೌಕಿಕ, ವಿಶ್ರುತ ಭೀಷ್ಮನು ವಿನಿಹತನಾದುದನ್ನು ನೋಡಿ ನನ್ನ ಮಕ್ಕಳು ಶೋಕಿಸುತ್ತಿರಬಹುದೆಂದು ಅನ್ನಿಸುತ್ತದೆ.

06015072a ಶ್ರೋಷ್ಯಾಮಿ ತಾನಿ ದುಃಖಾನಿ ದುರ್ಯೋಧನಕೃತಾನ್ಯಹಂ।
06015072c ತಸ್ಮಾನ್ಮೇ ಸರ್ವಮಾಚಕ್ಷ್ವ ಯದ್ವೃತ್ತಂ ತತ್ರ ಸಂಜಯ।।

ಸಂಜಯ! ದುರ್ಯೋಧನನು ಮಾಡಿದ ಆ ದುಃಖಗಳನ್ನು ನಾನು ಕೇಳುತ್ತೇನೆ. ಅಲ್ಲಿ ನಡೆದುದೆಲ್ಲವನ್ನೂ ನನಗೆ ಹೇಳು.

06015073a ಸಂಗ್ರಾಮೇ ಪೃಥಿವೀಶಾನಾಂ ಮಂದಸ್ಯಾಬುದ್ಧಿಸಂಭವಂ।
06015073c ಅಪನೀತಂ ಸುನೀತಂ ವಾ ತನ್ಮಮಾಚಕ್ಷ್ವ ಸಂಜಯ।।

ಮಂದನ ಬುದ್ಧಿಯಿಂದ ಉಂಟಾಗಿರುವ ಪೃಥ್ವೀಶರ ಆ ಸಂಗ್ರಾಮದಲ್ಲಿ ನಡೆದ ಒಳ್ಳೆಯ ಮತ್ತು ಕೆಟ್ಟದ್ದೆಲ್ಲವನ್ನೂ ನನಗೆ ಹೇಳು ಸಂಜಯ!

06015074a ಯತ್ಕೃತಂ ತತ್ರ ಭೀಷ್ಮೇಣ ಸಂಗ್ರಾಮೇ ಜಯಮಿಚ್ಛತಾ।
06015074c ತೇಜೋಯುಕ್ತಂ ಕೃತಾಸ್ತ್ರೇಣ ಶಂಸ ತಚ್ಚಾಪ್ಯಶೇಷತಃ।।

ಜಯವನ್ನು ಬಯಸಿ ಸಂಗ್ರಾಮದಲ್ಲಿ ಆ ತೇಜೋಯುಕ್ತ, ಕೃತಾಸ್ತ್ರನು ಏನೆಲ್ಲ ಮಾಡಿದನೋ ಅದನ್ನು ಯಾವುದನ್ನೂ ಬಿಡದೇ ಹೇಳು.

06015075a ಯಥಾ ತದಭವದ್ಯುದ್ಧಂ ಕುರುಪಾಂಡವಸೇನಯೋಃ।
06015075c ಕ್ರಮೇಣ ಯೇನ ಯಸ್ಮಿಂಶ್ಚ ಕಾಲೇ ಯಚ್ಚ ಯಥಾ ಚ ತತ್।।

ಕುರುಪಾಂಡವರ ಸೇನೆಗಳಲ್ಲಿ ಹೇಗೆ ಯುದ್ಧವು ನಡೆಯಿತು. ಯಾವ ಕಾಲದಲ್ಲಿ ಏನಾಯಿತೋ ಅದನ್ನು ಕ್ರಮಬದ್ಧವಾಗಿ ಹೇಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಧೃತರಾಷ್ಟ್ರಪ್ರಶ್ನೇ ಪಂಚದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಧೃತರಾಷ್ಟ್ರಪ್ರಶ್ನೆ ಎಂಬ ಹದಿನೈದನೇ ಅಧ್ಯಾಯವು.