013 ಉತ್ತರದ್ವೀಪಾದಿಸಂಸ್ಥಾನ ವರ್ಣನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೂಮಿ ಪರ್ವ

ಅಧ್ಯಾಯ 13

ಸಾರ

ಉತ್ತರದ್ವೀಪಾದಿಸಂಸ್ಥಾನ ವರ್ಣನ (1-50).

06013001 ಸಂಜಯ ಉವಾಚ।
06013001a ಉತ್ತರೇಷು ತು ಕೌರವ್ಯ ದ್ವೀಪೇಷು ಶ್ರೂಯತೇ ಕಥಾ।
06013001c ಯಥಾಶ್ರುತಂ ಮಹಾರಾಜ ಬ್ರುವತಸ್ತನ್ನಿಬೋಧ ಮೇ।।

ಸಂಜಯನು ಹೇಳಿದನು: “ಕೌರವ್ಯ! ಉತ್ತರದಲ್ಲಿರುವ ದ್ವೀಪಗಳ ಕುರಿತು ಹೇಳಿದುದನ್ನು ಕೇಳಿದ್ದೇವಲ್ಲ? ಮಹಾರಾಜ! ಕೇಳಿದಹಾಗೆ ಅದನ್ನು ನಿನಗೆ ಹೇಳುತ್ತೇನೆ. ಕೇಳು.

06013002a ಘೃತತೋಯಃ ಸಮುದ್ರೋಽತ್ರ ದಧಿಮಂಡೋದಕೋಽಪರಃ।
06013002c ಸುರೋದಃ ಸಾಗರಶ್ಚೈವ ತಥಾನ್ಯೋ ಘರ್ಮಸಾಗರಃ।।

ಅಲ್ಲಿರುವ ಸಮುದ್ರದ ನೀರು ತುಪ್ಪ. ಅದರ ನಂತರದ ಸಮುದ್ರದ ನೀರು ಮೊಸರು. ನಂತರದ್ದು ಸುರೆಯೇ ನೀರಾಗಿರುವ ಸಾಗರ ಮತ್ತು ಇನ್ನೊಂದು ನೀರಿರುವ ಘರ್ಮಸಾಗರ.

06013003a ಪರಸ್ಪರೇಣ ದ್ವಿಗುಣಾಃ ಸರ್ವೇ ದ್ವೀಪಾ ನರಾಧಿಪ।
06013003c ಸರ್ವತಶ್ಚ ಮಹಾರಾಜ ಪರ್ವತೈಃ ಪರಿವಾರಿತಾಃ।।

ನರಾಧಿಪ! ಅವೆಲ್ಲವೂ ಪರಸ್ಪರರರಿಗಿಂತ ದ್ವಿಗುಣವಾಗಿವೆ. ಮಹಾರಾಜ! ಎಲ್ಲವೂ ಪರ್ವತಗಳಿಂದ ಸುತ್ತುವರೆಯಲ್ಪಟ್ಟಿವೆ.

06013004a ಗೌರಸ್ತು ಮಧ್ಯಮೇ ದ್ವೀಪೇ ಗಿರಿರ್ಮಾನಃಶಿಲೋ ಮಹಾನ್।
06013004c ಪರ್ವತಃ ಪಶ್ಚಿಮಃ ಕೃಷ್ಣೋ ನಾರಾಯಣನಿಭೋ ನೃಪ।।

ಮಧ್ಯಮ ದ್ವೀಪದಲ್ಲಿ ಕೆಂಪುಶಿಲೆಯ ಗೌರವೆನ್ನುವ ಮಹಾ ಗಿರಿಯಿದೆ. ನೃಪ! ಅದಕ್ಕೆ ಪಶ್ಚಿಮದಲ್ಲಿ ಕೃಷ್ಣ ಎಂಬ, ನಾರಾಯಣನಿಗೆ ಪ್ರಿಯವಾದ ಗಿರಿಯಿದೆ.

06013005a ತತ್ರ ರತ್ನಾನಿ ದಿವ್ಯಾನಿ ಸ್ವಯಂ ರಕ್ಷತಿ ಕೇಶವಃ।
06013005c ಪ್ರಜಾಪತಿಮುಪಾಸೀನಃ ಪ್ರಜಾನಾಂ ವಿದಧೇ ಸುಖಂ।।

ಅಲ್ಲಿ ಕೇಶವನು ದಿವ್ಯ ರತ್ನಗಳನ್ನು ಸ್ವಯಂ ರಕ್ಷಿಸುತ್ತಾನೆ. ಪ್ರಜಾಪತಿಯಂತೆ ಆಸೀನನಾಗಿ ಪ್ರಜೆಗಳೆಗೆ ವಿವಿಧ ಸುಖಗಳನ್ನು ಕರುಣಿಸುತ್ತಾನೆ.

06013006a ಕುಶದ್ವೀಪೇ ಕುಶಸ್ತಂಬೋ ಮಧ್ಯೇ ಜನಪದಸ್ಯ ಹ।
06013006c ಸಂಪೂಜ್ಯತೇ ಶಲ್ಮಲಿಶ್ಚ ದ್ವೀಪೇ ಶಾಲ್ಮಲಿಕೇ ನೃಪ।।

ನೃಪ! ಅಲ್ಲಿಯ ಜನಪದಗಳ ಮಧ್ಯೆಯಿರುವ ಕುಶದ್ವೀಪ ಕುಶಸ್ತಂಬಗಳು, ಮತ್ತು ಶಲ್ಮಲಿ ದ್ವೀಪ ಮತ್ತು ಶಲ್ಮಲೀ ವೃಕ್ಷಗಳು (ಬೂರುಗದ ಮರಗಳು) ಸಂಪೂಜ್ಯವಾದವು.

06013007a ಕ್ರೌಂಚದ್ವೀಪೇ ಮಹಾಕ್ರೌಂಚೋ ಗಿರೀ ರತ್ನಚಯಾಕರಃ।
06013007c ಸಂಪೂಜ್ಯತೇ ಮಹಾರಾಜ ಚಾತುರ್ವರ್ಣ್ಯೇನ ನಿತ್ಯದಾ।।

ಮಹಾರಾಜ! ಕ್ರೌಂಚದ್ವೀಪದಲ್ಲಿರುವ ರತ್ನಗಳ ಆಕರ ಮಹಾಕ್ರೌಂಚ ಗಿರಿಯನ್ನು ಚಾತುರ್ವರ್ಣದವರು ನಿತ್ಯವೂ ಪೂಜಿಸುತ್ತಾರೆ.

06013008a ಗೋಮಂದಃ ಪರ್ವತೋ ರಾಜನ್ಸುಮಹಾನ್ಸರ್ವಧಾತುಮಾನ್।
06013008c ಯತ್ರ ನಿತ್ಯಂ ನಿವಸತಿ ಶ್ರೀಮಾನ್ಕಮಲಲೋಚನಃ।
06013008e ಮೋಕ್ಷಿಭಿಃ ಸಂಸ್ತುತೋ ನಿತ್ಯಂ ಪ್ರಭುರ್ನಾರಾಯಣೋ ಹರಿಃ।।

ರಾಜನ್! ಗೋಮಂದ ಪರ್ವತವು ತುಂಬಾ ದೊಡ್ಡದು ಮತ್ತು ಸರ್ವ ಧಾತುಗಳನ್ನೂ ಹೊಂದಿರುವಂಥಹುದು. ಅಲ್ಲಿ ನಿತ್ಯವೂ ಮೋಕ್ಷಹೊಂದಿದವರಿಂದ ಸ್ತುತಿಸಲ್ಪಟ್ಟು ಶ್ರೀಮಾನ್ ಕಮಲಲೋಚನ ಪ್ರಭು ಹರಿ ನಾರಾಯಣನು ವಾಸಿಸುತ್ತಾನೆ.

06013009a ಕುಶದ್ವೀಪೇ ತು ರಾಜೇಂದ್ರ ಪರ್ವತೋ ವಿದ್ರುಮೈಶ್ಚಿತಃ।
06013009c ಸುಧಾಮಾ ನಾಮ ದುರ್ಧರ್ಷೋ ದ್ವಿತೀಯೋ ಹೇಮಪರ್ವತಃ।।
06013010a ದ್ಯುತಿಮಾನ್ನಾಮ ಕೌರವ್ಯ ತೃತೀಯಃ ಕುಮುದೋ ಗಿರಿಃ।
06013010c ಚತುರ್ಥಃ ಪುಷ್ಪವಾನ್ನಾಮ ಪಂಚಮಸ್ತು ಕುಶೇಶಯಃ।।
06013011a ಷಷ್ಠೋ ಹರಿಗಿರಿರ್ನಾಮ ಷಡೇತೇ ಪರ್ವತೋತ್ತಮಾಃ।
06013011c ತೇಷಾಮಂತರವಿಷ್ಕಂಭೋ ದ್ವಿಗುಣಃ ಪ್ರವಿಭಾಗಶಃ।।

ರಾಜೇಂದ್ರ! ಕುಶದ್ವೀಪದಲ್ಲಿ ವಿದ್ರುಮಗಳಿಂದ ಕೂಡಿರುವ ಸುಧಾಮ ಎಂಬ ಹೆಸರಿನ ದುರ್ಧರ್ಷ ಪರ್ವತವೂ ಮತ್ತು ಎರಡನೆಯದಾಗಿ ಹೇಮಪರ್ವತ ದ್ಯುತಿಮಾನ್, ಮೂರನೆಯದು ಕುಮುದ ಗಿರಿ, ನಾಲ್ಕನೆಯದು ಪುಷ್ಪವಾನ್, ಐದನೆಯದು ಕುಶೇಶಯ ಮತ್ತು ಆರನೆಯದರ ಹೆಸರು ಹರಿಗಿರಿ. ಈ ಆರು ಉತ್ತಮ ಪರ್ವತಗಳು. ಅವುಗಳ ವಿಸ್ತಾರಗಳು ಕ್ರಮೇಣವಾಗಿ ಹಿಂದಿನದಕ್ಕಿಂತ ದ್ವಿಗುಣವಾಗಿವೆ1.

06013012a ಔದ್ಭಿದಂ ಪ್ರಥಮಂ ವರ್ಷಂ ದ್ವಿತೀಯಂ ವೇಣುಮಂಡಲಂ।
06013012c ತೃತೀಯಂ ವೈ ರಥಾಕಾರಂ ಚತುರ್ಥಂ ಪಾಲನಂ ಸ್ಮೃತಂ।।
06013013a ಧೃತಿಮತ್ಪಂಚಮಂ ವರ್ಷಂ ಷಷ್ಠಂ ವರ್ಷಂ ಪ್ರಭಾಕರಂ।
06013013c ಸಪ್ತಮಂ ಕಾಪಿಲಂ ವರ್ಷಂ ಸಪ್ತೈತೇ ವರ್ಷಪುಂಜಕಾಃ।।

ಔದ್ಭಿದವು ಮೊದಲನೆಯ ವರ್ಷ. ಎರಡನೆಯದು ವೇಣುಮಂಡಲ. ಮೂರನೆಯದು ರಥಾಕಾರ. ನಾಲ್ಕನೆಯದು ಪಾಲನವೆಂದು ಹೇಳುತ್ತಾರೆ. ಧೃತಿಮತ್ ಐದನೆಯ ವರ್ಷ. ಆರನೆಯ ವರ್ಷವು ಪ್ರಭಾಕರ. ಏಳನೆಯದು ಕಪಿಲ ವರ್ಷ. ಈ ಏಳು ವರ್ಷಪುಂಜಕಗಳು.

06013014a ಏತೇಷು ದೇವಗಂಧರ್ವಾಃ ಪ್ರಜಾಶ್ಚ ಜಗತೀಶ್ವರ।
06013014c ವಿಹರಂತಿ ರಮಂತೇ ಚ ನ ತೇಷು ಮ್ರಿಯತೇ ಜನಃ।।

ಜಗತೀಶ್ವರ! ಇವುಗಳಲ್ಲಿ ದೇವ-ಗಂಧರ್ವರು ಮತ್ತು ಪ್ರಜೆಗಳು ವಿಹರಿಸಿ ರಮಿಸುತ್ತಾರೆ. ಅವುಗಳಲ್ಲಿ ಜನರು ಸಾಯುವುದಿಲ್ಲ.

06013015a ನ ತೇಷು ದಸ್ಯವಃ ಸಂತಿ ಮ್ಲೇಚ್ಛಜಾತ್ಯೋಽಪಿ ವಾ ನೃಪ।
06013015c ಗೌರಪ್ರಾಯೋ ಜನಃ ಸರ್ವಃ ಸುಕುಮಾರಶ್ಚ ಪಾರ್ಥಿವ।।

ನೃಪ! ಆ ವರ್ಷಗಳಲ್ಲಿ ದಸ್ಯುಗಳೂ ಮ್ಲೇಚ್ಛ ಜಾತಿಯವರೂ ಇರುವುದಿಲ್ಲ. ಪಾರ್ಥಿವ! ಜನರೆಲ್ಲರೂ ಗೌರವರ್ಣದವರೂ ಸುಕುಮಾರರೂ ಆಗಿರುತ್ತಾರೆ.

06013016a ಅವಶಿಷ್ಟೇಷು ವರ್ಷೇಷು ವಕ್ಷ್ಯಾಮಿ ಮನುಜೇಶ್ವರ।
06013016c ಯಥಾಶ್ರುತಂ ಮಹಾರಾಜ ತದವ್ಯಗ್ರಮನಾಃ ಶೃಣು।।

ಮನುಜೇಶ್ವರ! ಉಳಿದಿರುವ ವರ್ಷಗಳ ಕುರಿತು ಕೇಳಿದಂತೆ ಹೇಳುತ್ತೇನೆ. ಮಹಾರಾಜ! ಅವ್ಯಗ್ರಮಸ್ಸಿನಿಂದ ಅದನ್ನು ಕೇಳು.

06013017a ಕ್ರೌಂಚದ್ವೀಪೇ ಮಹಾರಾಜ ಕ್ರೌಂಚೋ ನಾಮ ಮಹಾಗಿರಿಃ।
06013017c ಕ್ರೌಂಚಾತ್ಪರೋ ವಾಮನಕೋ ವಾಮನಾದಂಧಕಾರಕಃ।।

ಮಹಾರಾಜ! ಕ್ರೌಂಚದ್ವೀಪದಲ್ಲಿ ಕ್ರೌಂಚವೆಂಬ ಮಹಾಗಿರಿ. ಕ್ರೌಂಚದಿಂದ ಆಚೆಗೆ ವಾಮನಕ. ವಾಮನದಿಂದ ಅಂಧಕಾರಕ.

06013018a ಅಂಧಕಾರಾತ್ಪರೋ ರಾಜನ್ಮೈನಾಕಃ ಪರ್ವತೋತ್ತಮಃ।
06013018c ಮೈನಾಕಾತ್ಪರತೋ ರಾಜನ್ಗೋವಿಂದೋ ಗಿರಿರುತ್ತಮಃ।।

ರಾಜನ್! ಅಂಧಕಾರದ ಆಚೆ ಪರ್ವತೋತ್ತಮ ಮೈನಾಕವಿದೆ. ರಾಜನ್! ಮೈನಾಕದ ಆಚೆ ಉತ್ತಮ ಗಿರಿ ಗೋವಿಂದವಿದೆ.

06013019a ಗೋವಿಂದಾತ್ತು ಪರೋ ರಾಜನ್ನಿಬಿಡೋ ನಾಮ ಪರ್ವತಃ।
06013019c ಪರಸ್ತು ದ್ವಿಗುಣಸ್ತೇಷಾಂ ವಿಷ್ಕಂಭೋ ವಂಶವರ್ಧನ।।

ವಂಶವರ್ಧನ! ಗೋವಿಂದದ ಆಚೆ ವಿಸ್ತೀರ್ಣದಲ್ಲಿ ಅದರ ಎರಡು ಪಟ್ಟಿರುವ ನಿಬಿಡ ಎಂಬ ಹೆಸರಿನ ಪರ್ವತವಿದೆ.

06013020a ದೇಶಾಂಸ್ತತ್ರ ಪ್ರವಕ್ಷ್ಯಾಮಿ ತನ್ಮೇ ನಿಗದತಃ ಶೃಣು।
06013020c ಕ್ರೌಂಚಸ್ಯ ಕುಶಲೋ ದೇಶೋ ವಾಮನಸ್ಯ ಮನೋನುಗಃ।।

ಅಲ್ಲಿ ಇರುವ ದೇಶಗಳ ಕುರಿತು ಹೇಳುತ್ತೇನೆ. ಕೇಳು. ಕ್ರೌಂಚದಲ್ಲಿರುವುದು ಕುಶಲ ದೇಶ. ವಾಮನದಲ್ಲಿರುವುದು ಮನೋನುಗ.

06013021a ಮನೋನುಗಾತ್ಪರಶ್ಚೋಷ್ಣೋ ದೇಶಃ ಕುರುಕುಲೋದ್ವಹ।
06013021c ಉಷ್ಣಾತ್ಪರಃ ಪ್ರಾವರಕಃ ಪ್ರಾವರಾದಂಧಕಾರಕಃ।।

ಕುರುಕುಲೋದ್ವಹ! ಮನೋನುಗದ ಆಚೆಯಿರುವ ದೇಶವು ಉಷ್ಣ. ಉಷ್ಣದ ಆಚೆ ಪ್ರಾವರಕ. ಪ್ರಾವರಕದ ಆಚೆಯಿರುವುದು ಅಂಧಕಾರಕ.

06013022a ಅಂಧಕಾರಕದೇಶಾತ್ತು ಮುನಿದೇಶಃ ಪರಃ ಸ್ಮೃತಃ।
06013022c ಮುನಿದೇಶಾತ್ಪರಶ್ಚೈವ ಪ್ರೋಚ್ಯತೇ ದುಂದುಭಿಸ್ವನಃ।।

ಅಂಧಕಾರಕದೇಶದ ನಂತರ ಮುನಿದೇಶವೆಂದು ಹೇಳುತ್ತಾರೆ. ಮುನಿದೇಶದ ಆಚೆ ದುಂದುಭಿಸ್ವನವೆಂದು ಹೇಳುತ್ತಾರೆ.

06013023a ಸಿದ್ಧಚಾರಣಸಂಕೀರ್ಣೋ ಗೌರಪ್ರಾಯೋ ಜನಾಧಿಪ।
06013023c ಏತೇ ದೇಶಾ ಮಹಾರಾಜ ದೇವಗಂಧರ್ವಸೇವಿತಾಃ।।

ಜನಾಧಿಪ! ಮಹಾರಾಜ! ಈ ಸಿದ್ಧ-ಚಾರಣರಿಂದ ಕೂಡಿದ, ದೇವ-ಗಂಧರ್ವ ಸೇವಿತ ದೇಶಗಳಲ್ಲಿರುವವವರು ಗೌರವರ್ಣದವರು.

06013024a ಪುಷ್ಕರೇ ಪುಷ್ಕರೋ ನಾಮ ಪರ್ವತೋ ಮಣಿರತ್ನಮಾನ್।
06013024c ತತ್ರ ನಿತ್ಯಂ ನಿವಸತಿ ಸ್ವಯಂ ದೇವಃ ಪ್ರಜಾಪತಿಃ।।

ಪುಷ್ಕರದಲ್ಲಿ ಪುಷ್ಕರ ಎನ್ನುವ ಮಣಿರತ್ನಗಳ ಪರ್ವತವಿದೆ. ಅಲ್ಲಿ ನಿತ್ಯವೂ ಸ್ವಯಂ ದೇವ ಪ್ರಜಾಪತಿಯು ವಾಸಿಸುತ್ತಾನೆ.

06013025a ತಂ ಪರ್ಯುಪಾಸತೇ ನಿತ್ಯಂ ದೇವಾಃ ಸರ್ವೇ ಮಹರ್ಷಿಭಿಃ।
06013025c ವಾಗ್ಭಿರ್ಮನೋನುಕೂಲಾಭಿಃ ಪೂಜಯಂತೋ ಜನಾಧಿಪ।।

ಜನಾಧಿಪ! ಅವನನ್ನು ನಿತ್ಯವೂ ಎಲ್ಲ ದೇವತೆಗಳೂ, ಮಹರ್ಷಿಗಳೂ ವಾಕ್, ಮನಸ್ಸು ಮತ್ತು ಅನುಕೂಲಗಳಿಂದ ಪೂಜಿಸುತ್ತಾರೆ.

06013026a ಜಂಬೂದ್ವೀಪಾತ್ಪ್ರವರ್ತಂತೇ ರತ್ನಾನಿ ವಿವಿಧಾನ್ಯುತ।
06013026c ದ್ವೀಪೇಷು ತೇಷು ಸರ್ವೇಷು ಪ್ರಜಾನಾಂ ಕುರುನಂದನ।।
06013027a ವಿಪ್ರಾಣಾಂ ಬ್ರಹ್ಮಚರ್ಯೇಣ ಸತ್ಯೇನ ಚ ದಮೇನ ಚ।
06013027c ಆರೋಗ್ಯಾಯುಃಪ್ರಮಾಣಾಭ್ಯಾಂ ದ್ವಿಗುಣಂ ದ್ವಿಗುಣಂ ತತಃ।।

ಕುರುನಂದನ! ಜಂಬೂದ್ವೀಪದ ವಿವಿಧ ರತ್ನಗಳನ್ನು ತಂದು ಇಲ್ಲಿ ಬಳಸಲಾಗುತ್ತದೆ. ಈ ಎಲ್ಲ ದ್ವೀಪಗಳ ಪ್ರಜೆಗಳು ಬ್ರಹ್ಮಚರ್ಯ, ಸತ್ಯ, ಮತ್ತು ದಮಗಳಿಂದ ಕೂಡಿದ ವಿಪ್ರರು. ಇವರ ಆರೋಗ್ಯ ಮತ್ತು ಆಯುಸ್ಸಿನ ಪ್ರಮಾಣಗಳೆರಡೂ ದ್ವಿಗುಣ ದ್ವಿಗುಣಗಳಾಗುತ್ತಾ ಹೋಗುತ್ತವೆ.

06013028a ಏಕೋ ಜನಪದೋ ರಾಜನ್ದ್ವೀಪೇಷ್ವೇತೇಷು ಭಾರತ।
06013028c ಉಕ್ತಾ ಜನಪದಾ ಯೇಷು ಧರ್ಮಶ್ಚೈಕಃ ಪ್ರದೃಶ್ಯತೇ।।

ಭಾರತ! ಈ ದ್ವೀಪಗಳಲ್ಲಿ ಒಂದೇ ಜನಪದವಿದೆ. ಈ ಜನಪದದಲ್ಲಿ ಒಂದೇ ಧರ್ಮವು ಕಾಣಿಸುತ್ತದೆ ಎಂದು ಹೇಳುತ್ತಾರೆ.

06013029a ಈಶ್ವರೋ ದಂಡಮುದ್ಯಮ್ಯ ಸ್ವಯಮೇವ ಪ್ರಜಾಪತಿಃ।
06013029c ದ್ವೀಪಾನೇತಾನ್ಮಹಾರಾಜ ರಕ್ಷಂಸ್ತಿಷ್ಠತಿ ನಿತ್ಯದಾ।।

ಮಹಾರಾಜ! ಸ್ವಯಂ ಪ್ರಜಾಪತಿ ಈಶ್ವರನು ದಂಡವನ್ನು ಹಿಡಿದು ನಿತ್ಯವೂ ಈ ದ್ವೀಪಗಳನ್ನು ರಕ್ಷಿಸಲು ನಿಂತಿರುವನು.

06013030a ಸ ರಾಜಾ ಸ ಶಿವೋ ರಾಜನ್ಸ ಪಿತಾ ಸ ಪಿತಾಮಹಃ।
06013030c ಗೋಪಾಯತಿ ನರಶ್ರೇಷ್ಠ ಪ್ರಜಾಃ ಸಜಡಪಂಡಿತಾಃ।।

ರಾಜನ್! ಅವನೇ ರಾಜಾ. ಅವನೇ ಶಿವ. ಅವನೇ ಪಿತ ಮತ್ತು ಪಿತಾಮಹ. ನರಶ್ರೇಷ್ಠ! ಜಡ-ಪಂಡಿತರನ್ನೂ ಸೇರಿ ಪ್ರಜೆಗಳನ್ನು ಅವನೇ ಕಾಯುತ್ತಾನೆ.

06013031a ಭೋಜನಂ ಚಾತ್ರ ಕೌರವ್ಯ ಪ್ರಜಾಃ ಸ್ವಯಮುಪಸ್ಥಿತಂ।
06013031c ಸಿದ್ಧಮೇವ ಮಹಾರಾಜ ಭುಂಜತೇ ತತ್ರ ನಿತ್ಯದಾ।।

ಕೌರವ್ಯ! ಮಹಾರಾಜ! ಅಲ್ಲಿ ಭೋಜನವು ತಾನೇ ತಯಾರಾಗಿ ಬರುತ್ತದೆ. ಅಲ್ಲಿ ಸಿದ್ಧವಾಗಿರುವ ಅದನ್ನು ಅಲ್ಲಿಯವರು ನಿತ್ಯವೂ ಭುಂಜಿಸುತ್ತಾರೆ.

06013032a ತತಃ ಪರಂ ಸಮಾ ನಾಮ ದೃಶ್ಯತೇ ಲೋಕಸಂಸ್ಥಿತಿಃ।
06013032c ಚತುರಶ್ರಾ ಮಹಾರಾಜ ತ್ರಯಸ್ತ್ರಿಂಶತ್ತು ಮಂಡಲಂ।।

ಅದರ ಆಚೆ ಸಮಾ ಎಂಬ ಹೆಸರಿನ ಲೋಕಸಂಸ್ಥಿತಿಯು ಕಾಣಿಸುತ್ತದೆ. ಮಹಾರಾಜ! ಅದು ನಾಲ್ಕು ಕೋಣಗಳಿಂದ ಕೂಡಿದ್ದು ಮೂವತ್ಮೂರು ಮಂಡಲಗಳನ್ನು ಹೊಂದಿದೆ.

06013033a ತತ್ರ ತಿಷ್ಠಂತಿ ಕೌರವ್ಯ ಚತ್ವಾರೋ ಲೋಕಸಮ್ಮತಾಃ।
06013033c ದಿಗ್ಗಜಾ ಭರತಶ್ರೇಷ್ಠ ವಾಮನೈರಾವತಾದಯಃ।
06013033e ಸುಪ್ರತೀಕಸ್ತಥಾ ರಾಜನ್ಪ್ರಭಿನ್ನಕರಟಾಮುಖಃ।।

ಕೌರವ್ಯ! ಭರತಶ್ರೇಷ್ಠ! ರಾಜನ್! ಅಲ್ಲಿ ನಾಲ್ಕು ಲೋಕಸಮ್ಮತ ದಿಗ್ಗಜಗಳು - ವಾಮನ, ಐರಾವತದಿಂದ ಶುರುವಾಗಿ ಸುಪ್ರತೀಕ ಮತ್ತು ಇನ್ನೊಂದು ಕರಟಾಮುಖ.

06013034a ತಸ್ಯಾಹಂ ಪರಿಮಾಣಂ ತು ನ ಸಂಖ್ಯಾತುಮಿಹೋತ್ಸಹೇ।
06013034c ಅಸಂಖ್ಯಾತಃ ಸ ನಿತ್ಯಂ ಹಿ ತಿರ್ಯಗೂರ್ಧ್ವಮಧಸ್ತಥಾ।।

ಅವುಗಳ ಪರಿಮಾಣಗಳನ್ನು ಲೆಕ್ಕಮಾಡಿ ಹೇಳಲು ನನಗೆ ಉತ್ಸಾಹವಿಲ್ಲ. ಅವುಗಳ ಅಗಲ, ಎತ್ತರ ಮತ್ತು ಗಾತ್ರಗಳು ನಿತ್ಯವೂ ಅಸಂಖ್ಯವಾದುದು.

06013035a ತತ್ರ ವೈ ವಾಯವೋ ವಾಂತಿ ದಿಗ್ಭ್ಯಃ ಸರ್ವಾಭ್ಯ ಏವ ಚ।
06013035c ಅಸಂಬಾಧಾ ಮಹಾರಾಜ ತಾನ್ನಿಗೃಹ್ಣಂತಿ ತೇ ಗಜಾಃ।।
06013036a ಪುಷ್ಕರೈಃ ಪದ್ಮಸಂಕಾಶೈರ್ವರ್ಷ್ಮವದ್ಭಿರ್ಮಹಾಪ್ರಭೈಃ।
06013036c ತೇ ಶನೈಃ ಪುನರೇವಾಶು ವಾಯೂನ್ಮುಂಚಂತಿ ನಿತ್ಯಶಃ।।

ಅಲ್ಲಿ ವಾಯುವು ಎಲ್ಲ ದಿಕ್ಕುಗಳಿಂದಲೂ ಬೀಸುತ್ತಿರುತ್ತಾನೆ. ಆ ಗಾಳಿಯನ್ನು ಈ ಗಜಗಳು ಪದ್ಮಸಂಕಾಶವಾದ, ಏನನ್ನೂ ಎಳೆದುಕೊಳ್ಳಬಹುದಾದ, ಮಹಾಪ್ರಭೆಯನ್ನುಳ್ಳ ತಮ್ಮ ಸೊಂಡಿಲುಗಳಿಂದ ಹಿಡಿದಿಟ್ಟುಕೊಂಡು, ಗಾಳಿಯನ್ನು ಪುನಃ ಮೆಲ್ಲನೇ ನಿತ್ಯವೂ ಬಿಡುತ್ತಿರುತ್ತವೆ.

06013037a ಶ್ವಸದ್ಭಿರ್ಮುಚ್ಯಮಾನಾಸ್ತು ದಿಗ್ಗಜೈರಿಹ ಮಾರುತಾಃ।
06013037c ಆಗಚ್ಛಂತಿ ಮಹಾರಾಜ ತತಸ್ತಿಷ್ಠಂತಿ ವೈ ಪ್ರಜಾಃ।।

ಮಹಾರಾಜ! ಈ ರೀತಿ ದಿಗ್ಗಜಗಳ ಉಸಿರಾಟದಿಂದ ಹೊರಬಂದ ಗಾಳಿಯೇ ಇಲ್ಲಿಗೆ ಬಂದು, ಪ್ರಜೆಗಳು ಉಸಿರಾಡುತ್ತವೆ2.”

06013038 ಧೃತರಾಷ್ಟ್ರ ಉವಾಚ।
06013038a ಪರೋ ವೈ ವಿಸ್ತರೋಽತ್ಯರ್ಥಂ ತ್ವಯಾ ಸಂಜಯ ಕೀರ್ತಿತಃ।
06013038c ದರ್ಶಿತಂ ದ್ವೀಪಸಂಸ್ಥಾನಂ ಉತ್ತರಂ ಬ್ರೂಹಿ ಸಂಜಯ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಮೊದಲನೆಯ ವಿಷಯವನ್ನು ನೀನು ಬಹಳ ವಿಸ್ತಾರವಾಗಿ ಹೇಳಿದ್ದೀಯೆ. ದ್ವೀಪಗಳಿರುವ ಜಾಗಗಳನ್ನೂ ಹೇಳಿದ್ದೀಯೆ. ಸಂಜಯ! ಇನ್ನು ಉಳಿದ ವಿಷಯಗಳ ಕುರಿತು ಹೇಳು.”

06013039 ಸಂಜಯ ಉವಾಚ।
06013039a ಉಕ್ತಾ ದ್ವೀಪಾ ಮಹಾರಾಜ ಗ್ರಹಾನ್ಮೇ ಶೃಣು ತತ್ತ್ವತಃ।
06013039c ಸ್ವರ್ಭಾನುಃ ಕೌರವಶ್ರೇಷ್ಠ ಯಾವದೇಷ ಪ್ರಭಾವತಃ।।

ಸಂಜಯನು ಹೇಳಿದನು: “ಮಹಾರಾಜ! ದ್ವೀಪಗಳ ಕುರಿತು ಹೇಳಿಯಾಯಿತು. ಗ್ರಹಗಳ ಕುರಿತು ತತ್ವತವಾಗಿ ನಾನು ಹೇಳುವುದನ್ನು ಕೇಳು.

06013040a ಪರಿಮಂಡಲೋ ಮಹಾರಾಜ ಸ್ವರ್ಭಾನುಃ ಶ್ರೂಯತೇ ಗ್ರಹಃ।
06013040c ಯೋಜನಾನಾಂ ಸಹಸ್ರಾಣಿ ವಿಷ್ಕಂಭೋ ದ್ವಾದಶಾಸ್ಯ ವೈ।।

ಮಹಾರಾಜ! ಗ್ರಹ ಸ್ವರ್ಭಾನು3ವು ಗೋಲಾಕರದ ಮಂಡಲದಲ್ಲಿದ್ದಾನೆಂದು ಕೇಳಿದ್ದೇವೆ. ಅದರ ವ್ಯಾಸವು ಹನ್ನೆರಡು ಸಾವಿರ ಯೋಜನಗಳು.

06013041a ಪರಿಣಾಹೇನ ಷಟ್ತ್ರಿಂಶದ್ವಿಪುಲತ್ವೇನ ಚಾನಘ।
06013041c ಷಷ್ಟಿಮಾಹುಃ ಶತಾನ್ಯಸ್ಯ ಬುಧಾಃ ಪೌರಾಣಿಕಾಸ್ತಥಾ।।

ಅನಘ! ಅದರ ಸುತ್ತಳತೆ ೩೬ ಸಾವಿರ ಯೋಜನ, ಗಾತ್ರ(ದಪ್ಪ)ವು ೬ ಸಾವಿರ ಯೋಜನವೆಂದು ತಿಳಿದ ಪೌರಾಣಿಕರು ಹೇಳುತ್ತಾರೆ.

06013042a ಚಂದ್ರಮಾಸ್ತು ಸಹಸ್ರಾಣಿ ರಾಜನ್ನೇಕಾದಶ ಸ್ಮೃತಃ।
06013042c ವಿಷ್ಕಂಭೇಣ ಕುರುಶ್ರೇಷ್ಠ ತ್ರಯಸ್ತ್ರಿಂಶತ್ತು ಮಂಡಲಂ।
06013042e ಏಕೋನಷಷ್ಟಿರ್ವೈಪುಲ್ಯಾಚ್ಚೀತರಶ್ಮೇರ್ಮಹಾತ್ಮನಃ।।

ರಾಜನ್! ಚಂದ್ರನ ವ್ಯಾಸವು ಹನ್ನೊಂದು ಸಾವಿರ ಯೋಜನಗಳೆಂದು ಹೇಳುತ್ತಾರೆ. ಕುರುಶ್ರೇಷ್ಠ! ಆ ಶೀತಾಂಶುವಿನ ಮಂಡಲದ ಸುತ್ತಳತೆಯು ೩೩ ಸಾವಿರ ಯೋಜನಗಳು ಮತ್ತು ದಪ್ಪವು ೫,೯೦೦ ಯೋಜನಗಳೆಂದು ಮಹಾತ್ಮರು ಹೇಳುತ್ತಾರೆ4.

06013043a ಸೂರ್ಯಸ್ತ್ವಷ್ಟೌ ಸಹಸ್ರಾಣಿ ದ್ವೇ ಚಾನ್ಯೇ ಕುರುನಂದನ।
06013043c ವಿಷ್ಕಂಭೇಣ ತತೋ ರಾಜನ್ಮಂಡಲಂ ತ್ರಿಂಶತಂ ಸಮಂ।।

ಕುರುನಂದನ! ರಾಜನ್! ಸೂರ್ಯಗ್ರಹದ ವಿಸ್ತಾರ ೧೦,೦೦೦ ಯೋಜನಗಳು. ಸುತ್ತಳತೆ ೩೦,೦೦೦ ಯೋಜನಗಳು.

06013044a ಅಷ್ಟಪಂಚಾಶತಂ ರಾಜನ್ವಿಪುಲತ್ವೇನ ಚಾನಘ।
06013044c ಶ್ರೂಯತೇ ಪರಮೋದಾರಃ ಪತಂಗೋಽಸೌ ವಿಭಾವಸುಃ।
06013044e ಏತತ್ಪ್ರಮಾಣಮರ್ಕಸ್ಯ ನಿರ್ದಿಷ್ಟಮಿಹ ಭಾರತ।।

ರಾಜನ್! ಅನಘ! ಸೂರ್ಯನ ಗಾತ್ರ ೫,೮೦೦ ಯೋಜನಗಳು. ಭಾರತ! ಹೀಗೆ ಪರಮೋದಾರನಾದ ಶೀಘ್ರಗಾಮಿಯಾದ ವಿಭಾವಸುವಿನ ನಿರ್ದಿಷ್ಟ ಪರಿಮಾಣವನ್ನು ಹೇಳುತ್ತಾರೆ.

06013045a ಸ ರಾಹುಶ್ಚಾದಯತ್ಯೇತೌ ಯಥಾಕಾಲಂ ಮಹತ್ತಯಾ।
06013045c ಚಂದ್ರಾದಿತ್ಯೌ ಮಹಾರಾಜ ಸಂಕ್ಷೇಪೋಽಯಮುದಾಹೃತಃ।।

ಮಹಾರಾಜ! ಇವುಗಳಲ್ಲಿ ರಾಹುವೇ ದೊಡ್ಡಗ್ರಹವಾದುದರಿಂದ ಕೆಲವು ಸಮಯಗಳಲ್ಲಿ ಇದು ಚಂದ್ರ-ಆದಿತ್ಯರನ್ನು ಮುಚ್ಚಿಬಿಡುತ್ತದೆ.

06013046a ಇತ್ಯೇತತ್ತೇ ಮಹಾರಾಜ ಪೃಚ್ಛತಃ ಶಾಸ್ತ್ರಚಕ್ಷುಷಾ।
06013046c ಸರ್ವಮುಕ್ತಂ ಯಥಾತತ್ತ್ವಂ ತಸ್ಮಾಚ್ಚಮಮವಾಪ್ನುಹಿ।।

ಮಹಾರಾಜ! ನೀನು ಕೇಳಿದುದಕ್ಕೆ ಈ ಮೂರು ಗ್ರಹಗಳ ಕುರಿತು ನಿನಗೆ ಶಾಸ್ತ್ರಗಳ ಆಧಾರದಂತೆ ಎಲ್ಲವನ್ನೂ ಹೇಳಿದ್ದೇನೆ.

06013047a ಯಥಾದೃಷ್ಟಂ ಮಯಾ ಪ್ರೋಕ್ತಂ ಸನಿರ್ಯಾಣಮಿದಂ ಜಗತ್।
06013047c ತಸ್ಮಾದಾಶ್ವಸ ಕೌರವ್ಯ ಪುತ್ರಂ ದುರ್ಯೋಧನಂ ಪ್ರತಿ।।

ಜಗತ್ತಿನ ನಿರ್ಮಾಣ ಮತ್ತು ಅದರ ಸ್ವರೂಪವನ್ನು ನೀನು ಬಯಸಿದಂತೆ ನಾನು ಹೇಳಿದ್ದೇನೆ. ಈ ಕಥನವನ್ನು ಕೇಳಿ ಕೌರವ್ಯ! ನಿನ್ನ ಮಗ ದುರ್ಯೋಧನನ ಕುರಿತು ಆಶ್ವಾಸನೆಯನ್ನು ಹೊಂದು.

06013048a ಶ್ರುತ್ವೇದಂ ಭರತಶ್ರೇಷ್ಠ ಭೂಮಿಪರ್ವ ಮನೋನುಗಂ।
06013048c ಶ್ರೀಮಾನ್ಭವತಿ ರಾಜನ್ಯಃ ಸಿದ್ಧಾರ್ಥಃ ಸಾಧುಸಮ್ಮತಃ।
06013048e ಆಯುರ್ಬಲಂ ಚ ವೀರ್ಯಂ ಚ ತಸ್ಯ ತೇಜಶ್ಚ ವರ್ಧತೇ।।

ಭರತಶ್ರೇಷ್ಠ! ಈ ಭೂಮಿಪರ್ವವನ್ನು ಮನಸ್ಸಿಟ್ಟು ಕೇಳುವ ರಾಜನು ಶ್ರೀಮಂತನಾಗುತ್ತಾನೆ, ಸಿದಾರ್ಥನಾಗುತ್ತಾನೆ, ಸಾಧುಸಮ್ಮತನಾಗುತ್ತಾನೆ. ಅವನ ಆಯಸ್ಸು, ಬಲ, ವೀರ್ಯ ಮತ್ತು ತೇಜಸ್ಸುಗಳು ವೃದ್ಧಿಸುತ್ತವೆ.

06013049a ಯಃ ಶೃಣೋತಿ ಮಹೀಪಾಲ ಪರ್ವಣೀದಂ ಯತವ್ರತಃ।
06013049c ಪ್ರೀಯಂತೇ ಪಿತರಸ್ತಸ್ಯ ತಥೈವ ಚ ಪಿತಾಮಹಾಃ।।

ಮಹೀಪಾಲ! ನಿಯತವಾದ ವ್ರತಾನುಷ್ಟಾನಗಳಲ್ಲಿದ್ದುಕೊಂಡು ಪರ್ವಕಲಗಳಲ್ಲಿ ಈ ಭೂಮಿಪರ್ವವನ್ನು ಶ್ರದ್ಧೆಯಿಂದ ಕೇಳುವವವರ ಪಿತೃಗಳೂ ಪಿತಾಮಹರೂ ಸಂಪ್ರೀತರಾಗುತ್ತಾರೆ.

06013050a ಇದಂ ತು ಭಾರತಂ ವರ್ಷಂ ಯತ್ರ ವರ್ತಾಮಹೇ ವಯಂ।
06013050c ಪೂರ್ವಂ ಪ್ರವರ್ತತೇ ಪುಣ್ಯಂ ತತ್ಸರ್ವಂ ಶ್ರುತವಾನಸಿ।।

ಈಗ ನಾವು ಇರುವ ಮತ್ತು ಪೂರ್ವಜರು ಪುಣ್ಯಕರ್ಮಗಳನ್ನು ಮಾಡಿರುವ ಈ ಭಾರತವರ್ಷದ ಕುರಿತು ನೀನು ಎಲ್ಲವನ್ನೂ ಕೇಳಿದಂತಾಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭೂಮಿ ಪರ್ವಣಿ ಉತ್ತರದ್ವೀಪಾದಿಸಂಸ್ಥಾನ ವರ್ಣನೇ ತ್ರಯೋದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭೂಮಿ ಪರ್ವದಲ್ಲಿ ಉತ್ತರದ್ವೀಪಾದಿಸಂಸ್ಥಾನ ವರ್ಣನವೆಂಬ ಹದಿಮೂರನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೂಮಿ ಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೂಮಿ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-5/18, ಉಪಪರ್ವಗಳು-62/100, ಅಧ್ಯಾಯಗಳು-873/1995, ಶ್ಲೋಕಗಳು-28239/73784.


  1. ಕುಶದ್ವೀಪದಲ್ಲಿ ಮೊದಲನೆಯದಾದ ಗೌರಪರ್ವತಕ್ಕೂ ಎರಡನೆಯದಾದ ಸುಧಾಮಪರ್ವತಕ್ಕೂ ಅಂತರವು ಒಂದು ಸಾವಿರ ಯೋಜನೆಗಳಾಗಿದ್ದರೆ ಸುಧಾಮ ಪರ್ವತಕ್ಕೂ ಮೂರನೆಯದಾದ ಕುಮುದಪರ್ವತಕ್ಕೂ ಎರಡು ಸಾವಿರ ಯೋಜನೆಗಳು. ಕುಮುದಪರ್ವತಕ್ಕೂ ಪುಷ್ಪವತ್ಪರ್ವತಕ್ಕೂ ಅಂತರ ನಾಲ್ಕು ಸಾವಿರ ಯೋಜನೆಗಳು. ಹೀಗೆ ಉತ್ತರೋತ್ತರ ಪರ್ವತಗಳ ವಿಸ್ತೀರ್ಣವು ದ್ವಿಗುಣವಾಗುತ್ತಾ ಹೋಗುತ್ತದೆ. ↩︎

  2. ದಿಗ್ಗಜಗಳ ಅಪರಿಮೇಯತ್ವವನ್ನು ಈ ಶ್ಲೋಕಗಳು ಸೂಚಿಸುತ್ತವೆ. ↩︎

  3. ರಾಹುಗ್ರಹ . ↩︎

  4. ಆಧುನಿಕ ಖಗೋಳಶಾಸ್ತ್ರದ ಪ್ರಕಾರ ಚಂದ್ರನ ಪರಿಧಿ (ಸುತ್ತಳತೆ) 10,951 ಕಿಲೋ ಮೀಟರ್‌ಗಳು ಅಥವಾ 6,783 ಮೈಲುಗಳು. ಅದರ ವ್ಯಾಸವು 1732.4 ಕಿಲೋ ಮೀಟರ್ ಗಳು. http://www.universetoday.com/66662/circumference-of-the-moon/ ↩︎