ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೂಮಿ ಪರ್ವ
ಅಧ್ಯಾಯ 12
ಸಾರ
ಶಾಕದ್ವೀಪವರ್ಣನೆ (1-37).
06012001 ಧೃತರಾಷ್ಟ್ರ ಉವಾಚ।
06012001a ಜಂಬೂಖಂಡಸ್ತ್ವಯಾ ಪ್ರೋಕ್ತೋ ಯಥಾವದಿಹ ಸಂಜಯ।
06012001c ವಿಷ್ಕಂಭಮಸ್ಯ ಪ್ರಬ್ರೂಹಿ ಪರಿಮಾಣಂ ಚ ತತ್ತ್ವತಃ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಯಥಾವತ್ತಾಗಿ ನೀನು ಜಂಬೂಖಂಡದ ಕುರಿತು ಹೇಳಿದ್ದೀಯೆ. ಈಗ ಅದರ ಸುತ್ತಳತೆ ಮತ್ತು ವಿಸ್ತಾರವೆಷ್ಟೆಂಬುದನ್ನು ಇದ್ದ ಹಾಗೆ ಹೇಳು.
06012002a ಸಮುದ್ರಸ್ಯ ಪ್ರಮಾಣಂ ಚ ಸಮ್ಯಗಚ್ಛಿದ್ರದರ್ಶನ।
06012002c ಶಾಕದ್ವೀಪಂ ಚ ಮೇ ಬ್ರೂಹಿ ಕುಶದ್ವೀಪಂ ಚ ಸಂಜಯ।।
ಸಂಜಯ! ಜಂಬೂದ್ವೀಪದ ಸುತ್ತಲೂ ಇರುವ ಸಮುದ್ರದ, ಶಾಕದ್ವೀಪ ಮತ್ತು ಕುಶದ್ವೀಪಗಳ ಪ್ರಮಾಣಗಳನ್ನು ಹೇಳು.
06012003a ಶಾಲ್ಮಲಂ ಚೈವ ತತ್ತ್ವೇನ ಕ್ರೌಂಚದ್ವೀಪಂ ತಥೈವ ಚ।
06012003c ಬ್ರೂಹಿ ಗಾವಲ್ಗಣೇ ಸರ್ವಂ ರಾಹೋಃ ಸೋಮಾರ್ಕಯೋಸ್ತಥಾ।।
ಗಾವಲ್ಗಣೇ! ಹಾಗೆಯೇ ಶಾಲ್ಮಲ ಮತ್ತು ಕ್ರೌಂಚದ್ವೀಪಗಳ ಕುರಿತು ಮತ್ತು ರಾಹು, ಚಂದ್ರ ಸೂರ್ಯರ ಕುರಿತು ಎಲ್ಲವನ್ನೂ ಹೇಳು.”
06012004 ಸಂಜಯ ಉವಾಚ।
06012004a ರಾಜನ್ಸುಬಹವೋ ದ್ವೀಪಾ ಯೈರಿದಂ ಸಂತತಂ ಜಗತ್।
06012004c ಸಪ್ತ ತ್ವಹಂ ಪ್ರವಕ್ಷ್ಯಾಮಿ ಚಂದ್ರಾದಿತ್ಯೌ ಗ್ರಹಾಂಸ್ತಥಾ।।
ಸಂಜಯನು ಹೇಳಿದನು: “ರಾಜನ್! ಈ ಸಮಸ್ತ ಜಗತ್ತಿನಲ್ಲಿ ಬಹಳಷ್ಟು ದ್ವೀಪಗಳಿವೆ. ಆದರೆ ನಾನು ನಿನಗೆ ಏಳು ದ್ವೀಪಗಳ ಮತ್ತು ಚಂದ್ರ, ಆದಿತ್ಯಾದಿ ಗ್ರಹಗಳ ಕುರಿತು ಹೇಳುತ್ತೇನೆ.
06012005a ಅಷ್ಟಾದಶ ಸಹಸ್ರಾಣಿ ಯೋಜನಾನಾಂ ವಿಶಾಂ ಪತೇ।
06012005c ಷಟ್ಶತಾನಿ ಚ ಪೂರ್ಣಾನಿ ವಿಷ್ಕಂಭೋ ಜಂಬುಪರ್ವತಃ।।
ವಿಶಾಂಪತೇ! ಜಂಬೂಪರ್ವತ (ದ್ವೀಪ)ವು ಸಂಪೂರ್ಣ ಹದಿನೆಂಟು ಸಾವಿರ ಆರುನೂರು ಯೋಜನೆಗಳ ವಿಸ್ತೀರ್ಣದಲ್ಲಿದೆ.
06012006a ಲಾವಣಸ್ಯ ಸಮುದ್ರಸ್ಯ ವಿಷ್ಕಂಭೋ ದ್ವಿಗುಣಃ ಸ್ಮೃತಃ।
06012006c ನಾನಾಜನಪದಾಕೀರ್ಣೋ ಮಣಿವಿದ್ರುಮಚಿತ್ರಿತಃ।।
ನಾನಾಜನಪದಗಳಿಂದ ತುಂಬಿದ ಮತ್ತು ಮಣಿವಿದ್ರುಮಗಳಿಂದ ಚಿತ್ರಿತವಾದ ಲವಣ ಸಮುದ್ರದ ವಿಸ್ತಾರವು ಅದರ ಎರಡು ಪಟ್ಟು ಇದೆಯೆಂದು ಹೇಳುತ್ತಾರೆ1.
06012007a ನೈಕಧಾತುವಿಚಿತ್ರೈಶ್ಚ ಪರ್ವತೈರುಪಶೋಭಿತಃ।
06012007c ಸಿದ್ಧಚಾರಣಸಂಕೀರ್ಣಃ ಸಾಗರಃ ಪರಿಮಂಡಲಃ।।
ಅನೇಕ ಖನಿಜಗಳಿಂದ ಕೂಡಿದ ವಿಚಿತ್ರ ಪರ್ವತಗಳಿಂದ ಅದು ಶೋಭಿಸುತ್ತದೆ. ಸಿದ್ಧಚಾರಣರಿಂದ ತುಂಬಿರುವ ಆ ಸಾಗರವು ಗೋಲಾಕಾರವಾಗಿದೆ.
06012008a ಶಾಕದ್ವೀಪಂ ಚ ವಕ್ಷ್ಯಾಮಿ ಯಥಾವದಿಹ ಪಾರ್ಥಿವ।
06012008c ಶೃಣು ಮೇ ತ್ವಂ ಯಥಾನ್ಯಾಯಂ ಬ್ರುವತಃ ಕುರುನಂದನ।।
ಪಾರ್ಥಿವ! ಈಗ ಶಾಕದ್ವೀಪದ ಕುರಿತು ಹೇಳುತ್ತೇನೆ. ಕುರುನಂದನ! ಯಥಾನ್ಯಾಯವಾಗಿ ನಾನು ಹೇಳುವುದನ್ನು ಕೇಳು.
06012009a ಜಂಬೂದ್ವೀಪಪ್ರಮಾಣೇನ ದ್ವಿಗುಣಃ ಸ ನರಾಧಿಪ।
06012009c ವಿಷ್ಕಂಭೇಣ ಮಹಾರಾಜ ಸಾಗರೋಽಪಿ ವಿಭಾಗಶಃ।
06012009e ಕ್ಷೀರೋದೋ ಭರತಶ್ರೇಷ್ಠ ಯೇನ ಸಂಪರಿವಾರಿತಃ।।
ನರಾಧಿಪ! ಶಾಕದ್ವೀಪವು ಪ್ರಮಾಣದಲ್ಲಿ ಜಂಬೂದ್ವೀಪಕ್ಕಿಂತ ಎರಡು ಪಟ್ಟಿದೆ2. ಮಹಾರಾಜ! ಭರತಶ್ರೇಷ್ಠ! ಶಾಕದ್ವೀಪವನ್ನು ಸುತ್ತುವರೆದಿರುವ ಕ್ಷೀರಸಾಗರವು ವಿಸ್ತಾರದಲ್ಲಿ ಶಾಕದ್ವೀಪಕ್ಕಿಂತ ಎರಡು ಪಟ್ಟಿದೆ3.
06012010a ತತ್ರ ಪುಣ್ಯಾ ಜನಪದಾ ನ ತತ್ರ ಮ್ರಿಯತೇ ಜನಃ।
06012010c ಕುತ ಏವ ಹಿ ದುರ್ಭಿಕ್ಷಂ ಕ್ಷಮಾತೇಜೋಯುತಾ ಹಿ ತೇ।।
ಅಲ್ಲಿರುವ ಜನಪದಗಳು ಪುಣ್ಯವಾದವು ಮತ್ತು ಅಲ್ಲಿಯ ಜನರು ಸಾಯುವುದಿಲ್ಲ. ಅವರು ಕ್ಷಮ-ತೇಜೋಯುತರಾಗಿರುವಾಗ ಎಲ್ಲಿಂದ ಅಲ್ಲಿ ದುರ್ಭಿಕ್ಷವಿರಬೇಕು?
06012011a ಶಾಕದ್ವೀಪಸ್ಯ ಸಂಕ್ಷೇಪೋ ಯಥಾವದ್ ಭರತರ್ಷಭ।
06012011c ಉಕ್ತ ಏಷ ಮಹಾರಾಜ ಕಿಮನ್ಯಚ್ಚ್ರೋತುಮಿಚ್ಛಸಿ।।
ಭರತರ್ಷಭ! ಶಾಕದ್ವೀಪದ ಕುರಿತು ಇದ್ದುದನ್ನು ಸಂಕ್ಷೇಪವಾಗಿ ಹೇಳಿದ್ದೇನೆ. ಮಹಾರಾಜ! ಇನ್ನು ಏನನ್ನು ಕೇಳಲು ಬಯಸುತ್ತೀಯೆ?”
06012012 ಧೃತರಾಷ್ಟ್ರ ಉವಾಚ।
06012012a ಶಾಕದ್ವೀಪಸ್ಯ ಸಂಕ್ಷೇಪೋ ಯಥಾವದಿಹ ಸಂಜಯ।
06012012c ಉಕ್ತಸ್ತ್ವಯಾ ಮಹಾಭಾಗ ವಿಸ್ತರಂ ಬ್ರೂಹಿ ತತ್ತ್ವತಃ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಶಾಕದ್ವೀಪದ ಕುರಿತು ಇದ್ದುದನ್ನು ಸಂಕ್ಷಿಪ್ತವಾಗಿ ತಿಳಿಸಿದ್ದೀಯೆ. ಮಹಾಭಾಗ! ನೀನು ಹೇಳಿದುದನ್ನೇ ತತ್ವತಃ ವಿಸ್ತಾರವಾಗಿ ಹೇಳು.”
06012013 ಸಂಜಯ ಉವಾಚ।
06012013a ತಥೈವ ಪರ್ವತಾ ರಾಜನ್ಸಪ್ತಾತ್ರ ಮಣಿಭೂಷಿತಾಃ।
06012013c ರತ್ನಾಕರಾಸ್ತಥಾ ನದ್ಯಸ್ತೇಷಾಂ ನಾಮಾನಿ ಮೇ ಶೃಣು।
06012013e ಅತೀವಗುಣವತ್ಸರ್ವಂ ತತ್ರ ಪುಣ್ಯಂ ಜನಾಧಿಪ।।
ಸಂಜಯನು ಹೇಳಿದನು: “ರಾಜನ್! ಅಲ್ಲಿಯೇ ಇರುವ ಏಳು ಮಣಿಭೂಷಿತ ಪರ್ವತಗಳ, ಸಾಗರಗಳ, ನದಿಗಳ ಹೆಸರುಗಳನ್ನು ನನ್ನಿಂದ ಕೇಳು. ಜನಾಧಿಪ! ಅಲ್ಲಿ ಎಲ್ಲವೂ ಅತೀವ ಗುಣವತ್ತಾಗಿವೆ ಮತ್ತು ಪುಣ್ಯವಾಗಿವೆ.
06012014a ದೇವರ್ಷಿಗಂಧರ್ವಯುತಃ ಪರಮೋ ಮೇರುರುಚ್ಯತೇ।
06012014c ಪ್ರಾಗಾಯತೋ ಮಹಾರಾಜ ಮಲಯೋ ನಾಮ ಪರ್ವತಃ।
06012014e ಯತೋ ಮೇಘಾಃ ಪ್ರವರ್ತಂತೇ ಪ್ರಭವಂತಿ ಚ ಸರ್ವಶಃ।।
ದೇವ-ಋಷಿ-ಗಂಧರ್ವರಿಂದ ಕೂಡಿರುವ ಮೇರುವನ್ನು ಪರಮವೆಂದು ಹೇಳುತ್ತಾರೆ. ಮಹಾರಾಜ! ಅದರ ನಂತರ ಬರುತ್ತದೆ ಮಲಯ ಎಂಬ ಹೆಸರಿನ ಪರ್ವತ. ಈ ಪರ್ವತದಿಂದಲೇ ಮೋಡಗಳು ಹುಟ್ಟುತ್ತವೆ ಮತ್ತು ಎಲ್ಲ ಕಡೆ ಪಸರಿಸುತ್ತವೆ.
06012015a ತತಃ ಪರೇಣ ಕೌರವ್ಯ ಜಲಧಾರೋ ಮಹಾಗಿರಿಃ।
06012015c ಯತ್ರ ನಿತ್ಯಮುಪಾದತ್ತೇ ವಾಸವಃ ಪರಮಂ ಜಲಂ।
06012015e ಯತೋ ವರ್ಷಂ ಪ್ರಭವತಿ ವರ್ಷಾಕಾಲೇ ಜನೇಶ್ವರ।।
ಕೌರವ್ಯ! ನಂತರದ್ದು ಜಲಧಾರ ಎಂಬ ಮಹಾಗಿರಿಯಿದೆ. ಅಲ್ಲಿ ವಾಸವನು ನಿತ್ಯವೂ ಪರಮ ಜಲವನ್ನು ಪಡೆಯುತ್ತಾನೆ ಮತ್ತು ಜನೇಶ್ವರ! ಅದೇ ನೀರನ್ನು ಮಳೆಗಾಳದಲ್ಲಿ ಮಳೆಯಾಗಿ ಸುರಿಸುತ್ತಾನೆ.
06012016a ಉಚ್ಚೈರ್ಗಿರೀ ರೈವತಕೋ ಯತ್ರ ನಿತ್ಯಂ ಪ್ರತಿಷ್ಠಿತಃ।
06012016c ರೇವತೀ ದಿವಿ ನಕ್ಷತ್ರಂ ಪಿತಾಮಹಕೃತೋ ವಿಧಿಃ।।
ಅನಂತರ ಎತ್ತರದ ರೈವತಕ ಗಿರಿಯಿದೆ. ಅಲ್ಲಿ ವಿಧಿ ಪಿತಾಮಹನು ಮಾಡಿದ ರೇವತೀ ನಕ್ಷತ್ರವು ದಿವಿಯಲ್ಲಿ ನಿತ್ಯವೂ ಪತಿಷ್ಠಿತಗೊಂಡಿದೆ.
06012017a ಉತ್ತರೇಣ ತು ರಾಜೇಂದ್ರ ಶ್ಯಾಮೋ ನಾಮ ಮಹಾಗಿರಿಃ।
06012017c ಯತಃ ಶ್ಯಾಮತ್ವಮಾಪನ್ನಾಃ ಪ್ರಜಾ ಜನಪದೇಶ್ವರ।।
ರಾಜೇಂದ್ರ! ಅದರ ಉತ್ತರದಲ್ಲಿ ಶ್ಯಾಮ ಎಂಬ ಹೆಸರಿನ ಮಹಾಗಿರಿಯಿದೆ. ಜನಪದೇಶ್ವರ! ಅಲ್ಲಿರುವ ಪ್ರಜೆಗಳು ಶ್ಯಾಮತ್ವವನ್ನು ಪಡೆದಿದ್ದಾರೆ.”
06012018 ಧೃತರಾಷ್ಟ್ರ ಉವಾಚ।
06012018a ಸುಮಹಾನ್ಸಂಶಯೋ ಮೇಽದ್ಯ ಪ್ರೋಕ್ತಂ ಸಂಜಯ ಯತ್ತ್ವಯಾ।
06012018c ಪ್ರಜಾಃ ಕಥಂ ಸೂತಪುತ್ರ ಸಂಪ್ರಾಪ್ತಾಃ ಶ್ಯಾಮತಾಮಿಹ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ನೀನು ಈಗ ಹೇಳಿದುದರಲ್ಲಿ ನನಗೆ ಮಹಾಸಂಶಯವಿದೆ. ಸೂತಪುತ್ರ! ಅಲ್ಲಿಯ ಪ್ರಜೆಗಳು ಹೇಗೆ ಶ್ಯಾಮತ್ವವನ್ನು ಪಡೆದರು4?”
06012019 ಸಂಜಯ ಉವಾಚ।
06012019a ಸರ್ವೇಷ್ವೇವ ಮಹಾಪ್ರಾಜ್ಞ ದ್ವೀಪೇಷು ಕುರುನಂದನ।
06012019c ಗೌರಃ ಕೃಷ್ಣಶ್ಚ ವರ್ಣೌ ದ್ವೌ ತಯೋರ್ವರ್ಣಾಂತರಂ ನೃಪ।।
ಸಂಜಯನು ಹೇಳಿದನು: “ಕುರುನಂದನ! ಮಹಾಪ್ರಾಜ್ಞ! ನೃಪ! ಎಲ್ಲ ದ್ವೀಪಗಳಲ್ಲಿಯೂ ಗೌರವರ್ಣದವರು, ಕೃಷ್ಣವರ್ಣದವರು ಮತ್ತು ಇವೆರಡೂ ವರ್ಣಗಳ ನಡುವೆ ಇರುವವರು ಕಂಡುಬರುತ್ತಾರೆ.
06012020a ಶ್ಯಾಮೋ ಯಸ್ಮಾತ್ಪ್ರವೃತ್ತೋ ವೈ ತತ್ತೇ ವಕ್ಷ್ಯಾಮಿ ಭಾರತ।
06012020c ಆಸ್ತೇಽತ್ರ ಭಗವಾನ್ ಕೃಷ್ಣಸ್ತತ್ಕಾಂತ್ಯಾ ಶ್ಯಾಮತಾಂ ಗತಃ।।
ಭಾರತ! ಅಲ್ಲಿರುವವರು ಹೇಗೆ ಶ್ಯಾಮವರ್ಣದವರಾದರೆಂದು ನಿನಗೆ ಹೇಳುತ್ತೇನೆ. ಅಲ್ಲಿರುವವರು ಭಗವಾನ್ ಕೃಷ್ಣನ ಕಾಂತಿಯಿಂದ ಶ್ಯಾಮತ್ವವನ್ನು ಪಡೆದರು5.
06012021a ತತಃ ಪರಂ ಕೌರವೇಂದ್ರ ದುರ್ಗಶೈಲೋ ಮಹೋದಯಃ।
06012021c ಕೇಸರೀ ಕೇಸರಯುತೋ ಯತೋ ವಾತಃ ಪ್ರವಾಯತಿ।।
ಕೌರವೇಂದ್ರ! ಅದಕ್ಕೂ ನಂತರದ ಮಹೋದಯ ದುರ್ಗಶೈಲವಿದೆ. ಅಲ್ಲಿ ಬೀಸುವ ಗಾಳಿಯು ಕೇಸರೀ ಬಣ್ಣದಾಗಿದ್ದು ಕೇಸರೀಯತವಾಗಿದೆ.
06012022a ತೇಷಾಂ ಯೋಜನವಿಷ್ಕಂಭೋ ದ್ವಿಗುಣಃ ಪ್ರವಿಭಾಗಶಃ।
06012022c ವರ್ಷಾಣಿ ತೇಷು ಕೌರವ್ಯ ಸಂಪ್ರೋಕ್ತಾನಿ ಮನೀಷಿಭಿಃ।।
ಕೌರವ್ಯ! ಅವುಗಳ ವಿಸ್ತಾರವು ಕ್ರಮವಾಗಿ ಅದರ ಮೊದಲಿನದಕ್ಕಿಂತ ದ್ವಿಗುಣವಾಗಿರುತ್ತದೆ6. ಅಲ್ಲಿ ಏಳು ವರ್ಷ(ಖಂಡ)ಗಳಿವೆ ಎಂದು ಮನೀಷಿಗಳು ಹೇಳುತ್ತಾರೆ.
06012023a ಮಹಾಮೇರುರ್ಮಹಾಕಾಶೋ ಜಲದಃ ಕುಮುದೋತ್ತರಃ।
06012023c ಜಲಧಾರಾತ್ಪರೋ ರಾಜನ್ಸುಕುಮಾರ ಇತಿ ಸ್ಮೃತಃ।।
ರಾಜನ್! ಮಹಾಮೇರು ಪರ್ವತದ ಸಮೀಪ ಮಹಾಕಾಶವರ್ಷವಿದೆ. ಜಲದ (ಮಲಯ) ಪರ್ವತದ ಪಕ್ಕ ಕುಮುದೋತ್ತರವರ್ಷವಿದೆ. ಇಲಧಾರ ಪರ್ವತದ ಸಮೀಪ ಸುಕುಮಾರ ವರ್ಷವಿದೆ ಎಂದು ಹೇಳುತ್ತಾರೆ.
06012024a ರೈವತಸ್ಯ ತು ಕೌಮಾರಃ ಶ್ಯಾಮಸ್ಯ ತು ಮಣೀಚಕಃ।
06012024c ಕೇಸರಸ್ಯಾಥ ಮೋದಾಕೀ ಪರೇಣ ತು ಮಹಾಪುಮಾನ್।।
ರೈವತದ ಪಕ್ಕದಲ್ಲಿರುವುದು ಕೌಮಾರವರ್ಷ. ಶ್ಯಾಮಪರ್ವತದ ಪಕ್ಕದಲ್ಲಿರುವುದು ಮಣೀಚಕ ವರ್ಷ. ಕೇಸರ ಪರ್ವತದ ಸಮೀಪದ್ದು ಮೋದಾಕೀಖಂಡ. ಮೋದಾಕೀಖಂಡದ ನಂತರ ಮಹಾಪುಮಾನ್ ಎಂಬ ಪರ್ವತವಿದೆ.
06012025a ಪರಿವಾರ್ಯ ತು ಕೌರವ್ಯ ದೈರ್ಘ್ಯಂ ಹ್ರಸ್ವತ್ವಮೇವ ಚ।
06012025c ಜಂಬೂದ್ವೀಪೇನ ವಿಖ್ಯಾತಸ್ತಸ್ಯ ಮಧ್ಯೇ ಮಹಾದ್ರುಮಃ।।
06012026a ಶಾಕೋ ನಾಮ ಮಹಾರಾಜ ತಸ್ಯ ದ್ವೀಪಸ್ಯ ಮಧ್ಯಗಃ।
06012026c ತತ್ರ ಪುಣ್ಯಾ ಜನಪದಾಃ ಪೂಜ್ಯತೇ ತತ್ರ ಶಂಕರಃ।।
ಕೌರವ್ಯ! ಆ ದ್ವೀಪದ ಮಧ್ಯದಲ್ಲಿ ವಿಖ್ಯಾತವಾದ ಶಾಕಾ ಎಂಬ ಹೆಸರಿನ ಮಹಾದ್ರುಮವಿದೆ. ಎತ್ತರ ಮತ್ತು ಅಗಲಗಳಲ್ಲಿ ಅದು ಜಂಬೂದ್ವೀಪದಲ್ಲಿರುವ ಜಂಬೂ ವೃಕ್ಷದಂತಿದೆ. ಅಲ್ಲಿಯ ಪುಣ್ಯಜನಪದರು ಶಂಕರನನ್ನು ಪೂಜಿಸುತ್ತಾರೆ.
06012027a ತತ್ರ ಗಚ್ಛಂತಿ ಸಿದ್ಧಾಶ್ಚ ಚಾರಣಾ ದೈವತಾನಿ ಚ।
06012027c ಧಾರ್ಮಿಕಾಶ್ಚ ಪ್ರಜಾ ರಾಜಂಶ್ಚತ್ವಾರೋಽತೀವ ಭಾರತ।।
ರಾಜನ್! ಭಾರತ! ಅಲ್ಲಿಗೆ ಸಿದ್ಧರೂ, ಚಾರಣರೂ, ದೇವತೆಗಳೂ, ಧಾರ್ಮಿಕ ಪ್ರಜೆಗಳೂ ಈ ನಾಲ್ವರೂ ಹೋಗುತ್ತಾರೆ.
06012028a ವರ್ಣಾಃ ಸ್ವಕರ್ಮನಿರತಾ ನ ಚ ಸ್ತೇನೋಽತ್ರ ದೃಶ್ಯತೇ।
06012028c ದೀರ್ಘಾಯುಷೋ ಮಹಾರಾಜ ಜರಾಮೃತ್ಯುವಿವರ್ಜಿತಾಃ।।
ಅಲ್ಲಿ ವರ್ಣಗಳು ಸ್ವಕರ್ಮದಲ್ಲಿ ನಿರತರಾಗಿರುವುದು ಕಂಡುಬರುತ್ತದೆ. ಕಳ್ಳತನವೆಂಬುದಿಲ್ಲ. ಮಹಾರಾಜ! ದೀರ್ಘಾಯುಷಿಗಳಾದ ಅವರು ಜರಾಮೃತ್ಯು ವಿವರ್ಜಿತರಾಗಿರುತ್ತಾರೆ.
06012029a ಪ್ರಜಾಸ್ತತ್ರ ವಿವರ್ಧಂತೇ ವರ್ಷಾಸ್ವಿವ ಸಮುದ್ರಗಾಃ।
06012029c ನದ್ಯಃ ಪುಣ್ಯಜಲಾಸ್ತತ್ರ ಗಂಗಾ ಚ ಬಹುಧಾಗತಿಃ।।
ಅಲ್ಲಿಯ ಪ್ರಜೆಗಳು ಮಳೆಗಾಲದ ನದಿಗಳಂತೆ ಬೆಳೆಯುತ್ತಾರೆ. ಅಲ್ಲಿಯ ನದಿಗಳಲ್ಲಿ ಪುಣ್ಯ ನೀರುಗಳಿವೆ. ಗಂಗೆಯೂ ಕೂಡ ಬಹು ನದಿಗಳಾಗಿ ಹರಿಯುತ್ತಾಳೆ.
06012030a ಸುಕುಮಾರೀ ಕುಮಾರೀ ಚ ಸೀತಾ ಕಾವೇರಕಾ ತಥಾ।
06012030c ಮಹಾನದೀ ಚ ಕೌರವ್ಯ ತಥಾ ಮಣಿಜಲಾ ನದೀ।
06012030e ಇಕ್ಷುವರ್ಧನಿಕಾ ಚೈವ ತಥಾ ಭರತಸತ್ತಮ।।
ಕೌರವ್ಯ! ಭರತಸತ್ತಮ! ಆ ನದಿಗಳು ಸುಕುಮಾರೀ, ಕುಮಾರೀ, ಸೀತಾ, ಕಾವೇರಕಾ, ಮಹಾನದೀ, ಮಣಿಜಲಾ, ಮತ್ತು ಇಕ್ಷುವರ್ಧನಿಕಾ.
06012031a ತತಃ ಪ್ರವೃತ್ತಾಃ ಪುಣ್ಯೋದಾ ನದ್ಯಃ ಕುರುಕುಲೋದ್ವಹ।
06012031c ಸಹಸ್ರಾಣಾಂ ಶತಾನ್ಯೇವ ಯತೋ ವರ್ಷತಿ ವಾಸವಃ।।
ಕುರುಕುಲೋದ್ವಹ! ಹೀಗೆ ಅಲ್ಲಿ ಸಹಸ್ರಾರು ನೂರಾರು ಪುಣ್ಯ ನದಿಗಳು ಹರಿಯುತ್ತವೆ. ವಾಸವನು ಅಲ್ಲಿ ಮಳೆಸುರಿಸುತ್ತಾನೆ.
06012032a ನ ತಾಸಾಂ ನಾಮಧೇಯಾನಿ ಪರಿಮಾಣಂ ತಥೈವ ಚ।
06012032c ಶಕ್ಯತೇ ಪರಿಸಂಖ್ಯಾತುಂ ಪುಣ್ಯಾಸ್ತಾ ಹಿ ಸರಿದ್ವರಾಃ।।
ಅವುಗಳ ಹೆಸರುಗಳನ್ನು ಪರಿಮಾಣಗಳನ್ನು ಪಟ್ಟಿ ಮಾಡಲು ಶಕ್ಯವಿಲ್ಲ. ಅವೆಲ್ಲವೂ ಪುಣ್ಯನದಿಗಳು.
06012033a ತತ್ರ ಪುಣ್ಯಾ ಜನಪದಾಶ್ಚತ್ವಾರೋ ಲೋಕಸಮ್ಮತಾಃ।
06012033c ಮಗಾಶ್ಚ ಮಶಕಾಶ್ಚೈವ ಮಾನಸಾ ಮಂದಗಾಸ್ತಥಾ।।
ಅಲ್ಲಿ ಲೋಕಸಮ್ಮತವಾದ ನಾಲ್ಕು ಪುಣ್ಯ ಜನಪದಗಳಿವೆ - ಮಗಾ, ಮಶಕಾ, ಮಾನಸ ಮತ್ತು ಮಂದಗಾ.
06012034a ಮಗಾ ಬ್ರಾಹ್ಮಣಭೂಯಿಷ್ಠಾಃ ಸ್ವಕರ್ಮನಿರತಾ ನೃಪ।
06012034c ಮಶಕೇಷು ತು ರಾಜನ್ಯಾ ಧಾರ್ಮಿಕಾಃ ಸರ್ವಕಾಮದಾಃ।।
ನೃಪ! ಮಗಾರು ಹೆಚ್ಚಾಗಿ ಸ್ವಕರ್ಮನಿರತರಾದ ಬ್ರಾಹ್ಮಣರು. ಮಶಕರಲ್ಲಿ ಸರ್ವಕಾಮಗಳನ್ನು ನೀಡುವ ಧಾರ್ಮಿಕ ರಾಜರಿದ್ದಾರೆ.
06012035a ಮಾನಸೇಷು ಮಹಾರಾಜ ವೈಶ್ಯಾಃ ಕರ್ಮೋಪಜೀವಿನಃ।
06012035c ಸರ್ವಕಾಮಸಮಾಯುಕ್ತಾಃ ಶೂರಾ ಧರ್ಮಾರ್ಥನಿಶ್ಚಿತಾಃ।
06012035e ಶೂದ್ರಾಸ್ತು ಮಂದಗೇ ನಿತ್ಯಂ ಪುರುಷಾ ಧರ್ಮಶೀಲಿನಃ।।
ಮಹಾರಾಜ! ಮಾನಸರು ವೈಶ್ಯರ ಕರ್ಮೋಪಜೀವಿಗಳು. ಅವರು ಸರ್ವಕಾಮಸಮಾಯುಕ್ತರು, ಶೂರರು ಮತ್ತು ಧರ್ಮಾರ್ಥನಿಶ್ಚಿತರು. ಮಂದಗರು ಶೂದ್ರರು - ನಿತ್ಯವೂ ಧರ್ಮಶೀಲಪುರುಷರು.
06012036a ನ ತತ್ರ ರಾಜಾ ರಾಜೇಂದ್ರ ನ ದಂಡೋ ನ ಚ ದಂಡಿಕಾಃ।
06012036c ಸ್ವಧರ್ಮೇಣೈವ ಧರ್ಮಂ ಚ ತೇ ರಕ್ಷಂತಿ ಪರಸ್ಪರಂ।।
ರಾಜೇಂದ್ರ! ಅಲ್ಲಿ ರಾಜನೂ ಇಲ್ಲ, ದಂಡಿಸುವವನೂ ಇಲ್ಲ, ದಂಡನೆಗೆ ಒಳಪಡುವವರೂ ಇಲ್ಲ. ಸ್ವಧರ್ಮವೇ ಪರಸ್ಪರರ ಧರ್ಮವನ್ನು ರಕ್ಷಿಸುತ್ತದೆ.
06012037a ಏತಾವದೇವ ಶಕ್ಯಂ ತು ತಸ್ಮಿನ್ದ್ವೀಪೇ ಪ್ರಭಾಷಿತುಂ।
06012037c ಏತಾವದೇವ ಶ್ರೋತವ್ಯಂ ಶಾಕದ್ವೀಪೇ ಮಹೌಜಸಿ।।
ಇಷ್ಟನ್ನೇ ಆ ದ್ವೀಪದ ಕುರಿತು ಮಾತನಾಡಲು ಶಕ್ಯ. ಮತ್ತು ಆ ಮಹೌಜಸ ಶಾಕದ್ವೀಪದ ಕುರಿತು ಇಷ್ಟನ್ನೇ ಕೇಳಬೇಕು7.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೂಮಿ ಪರ್ವಣಿ ಶಾಕದ್ವೀಪವರ್ಣನೇ ದ್ವಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೂಮಿ ಪರ್ವದಲ್ಲಿ ಶಾಕದ್ವೀಪವರ್ಣನೆ ಎನ್ನುವ ಹನ್ನೆರಡನೇ ಅಧ್ಯಾಯವು.
-
ಅಂದರೆ ಲವಣಸಮುದ್ರದ ವಿಸ್ತೀರ್ಣವು 37,200 ಯೋಜನೆಗಳು. ↩︎
-
ಅಂದರೆ ಶಾಕದ್ವೀಪದ ವಿಸ್ತಾರ 37,200 ಯೋಜನೆಗಳು. ಶಾಕದ್ವೀಪ ಮತ್ತು ಲವಣಸಮುದ್ರಗಳ ವಿಸ್ತೀರ್ಣಗಳು ಒಂದೇ ಸಮನಾಗಿವೆ. ↩︎
-
ಅಂದರೆ ಕ್ಷೀರಸಾಗರದ ವಿಸ್ತೀರ್ಣ 74,400 ಯೋಜನೆಗಳು. ಕ್ಷೀರಸಾಗರದ ವಿಸ್ತೀರ್ಣವು ಲವಣ ಸಮುದ್ರದ ವಿಸ್ತೀರ್ಣದ ಎರಡು ಪಟ್ಟಿದೆ. ↩︎
-
ಪರ್ವತವು ಶ್ಯಾಮಲವರ್ಣವಾಗಿದ್ದರೆ ಪ್ರಜೆಗಳೇಕೆ ಶ್ಯಾಮಲವರ್ಣದವರಾದರು? ↩︎
-
ಈ ಶ್ಯಾಮಪರ್ವತದಲ್ಲಿಯೇ ಭಗವಾನ್ ಕೃಷ್ಣನಿದ್ದಾನೆ. ಶ್ಯಾಮಲವರ್ಣದ (ಕಡುನೀಲಿಬಣ್ಣದ) ಕೃಷ್ಣನಿಂದಾಗೆ ಪರ್ವತವು ಶ್ಯಾಮವರ್ಣದ್ದಾಯಿತು; ಅಲ್ಲಿರುವವರೂ ಶ್ಯಾಮವರ್ಣದವರಾದರು. ↩︎
-
ಮೊದಲನೆಯ ಪರ್ವತವಾದ ಮೇರುವಿನ ವಿಸ್ತಾರವು ಒಂದು ಸಾವಿರ ಯೋಜನೆಗಳಿದ್ದರೆ ಎರಡನೆಯದಾದ ಮಲಯ ಪರ್ವತವು ಎರಡು ಸಾವಿರ ಯೋಜನೆಗಳ ವಿಸ್ತೀರ್ಣದಲ್ಲಿದೆ. ಮೂರನೆಯ ಪರ್ವತದ ವಿಸ್ತೀರ್ಣವು ನಾಲ್ಕು ಸಾವಿರ ಯೋಜನೆಗಳು. ಹೀಗೆ ಒಂದಕ್ಕೆರಡರಂತೆ ಪರ್ವತದ ವಿಸ್ತೀರ್ಣವು ಕ್ರಮವಾಗಿ ಅಧಿಕವಾಗುತ್ತ ಹೋಗುತ್ತದೆ. ↩︎
-
ಈ ದ್ವೀಪದ ಕುರಿತು ಹೆಚ್ಚುತಿಳಿದುಕೊಳ್ಳಲು ಪ್ರಯತ್ನಿಸಬಾರದು…ಏಕೆ? ↩︎