009 ಧೃತರಾಷ್ಟ್ರವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಜಂಬೂಖಂಡವಿನಿರ್ಮಾಣ ಪರ್ವ

ಅಧ್ಯಾಯ 9

ಸಾರ

ಸಂಜಯನು ಧೃತರಾಷ್ಟ್ರನಿಗೆ ಪರ್ವತಗಳ ಮತ್ತು ಪರ್ವತವಾಸಿಗಳನ್ನು ವರ್ಣಿಸುವುದು (1-21).

06009001 ಧೃತರಾಷ್ಟ್ರ ಉವಾಚ।
06009001a ವರ್ಷಾಣಾಂ ಚೈವ ನಾಮಾನಿ ಪರ್ವತಾನಾಂ ಚ ಸಂಜಯ।
06009001c ಆಚಕ್ಷ್ವ ಮೇ ಯಥಾತತ್ತ್ವಂ ಯೇ ಚ ಪರ್ವತವಾಸಿನಃ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ನನಗೆ ವರ್ಷಗಳ, ಪರ್ವತಗಳ ಮತ್ತು ಪರ್ವತವಾಸಿಗಳ ಹೆಸರುಗಳನ್ನು ಯಥಾತತ್ವವಾಗಿ ಹೇಳು.”

06009002 ಸಂಜಯ ಉವಾಚ।
06009002a ದಕ್ಷಿಣೇನ ತು ಶ್ವೇತಸ್ಯ ನೀಲಸ್ಯೈವೋತ್ತರೇಣ ತು।
06009002c ವರ್ಷಂ ರಮಣಕಂ ನಾಮ ಜಾಯಂತೇ ತತ್ರ ಮಾನವಾಃ।।

ಸಂಜಯನು ಹೇಳಿದನು: “ಶ್ವೇತದ ದಕ್ಷಿಣಕ್ಕೆ ಮತ್ತು ನೀಲದ ಉತ್ತರದಲ್ಲಿರುವ ವರ್ಷದಲ್ಲಿ ರಮಣಕ ಎಂಬ ಹೆಸರಿನ ಮಾನವರು ಜನಿಸುತ್ತಾರೆ.

06009003a ಶುಕ್ಲಾಭಿಜನಸಂಪನ್ನಾಃ ಸರ್ವೇ ಸುಪ್ರಿಯದರ್ಶನಾಃ।
06009003c ರತಿಪ್ರಧಾನಾಶ್ಚ ತಥಾ ಜಾಯಂತೇ ತತ್ರ ಮಾನವಾಃ।।

ಅಲ್ಲಿಯ ಜನರು ಬಿಳಿಯ ಬಣ್ಣದವರಾಗಿದ್ದು, ಉತ್ತಮ ಕುಲದವರಾಗಿದ್ದು ಎಲ್ಲರೂ ನೋಡಲು ತುಂಬಾ ಸುಂದರರಾಗಿರುತ್ತಾರೆ. ಅಲ್ಲಿ ಜನಿಸಿದ ಮಾನವರಿಗೆ ದ್ವೇಷಿಗಳೆಂಬುವವರೇ ಇರುವುದಿಲ್ಲ.

06009004a ದಶ ವರ್ಷಸಹಸ್ರಾಣಿ ಶತಾನಿ ದಶ ಪಂಚ ಚ।
06009004c ಜೀವಂತಿ ತೇ ಮಹಾರಾಜ ನಿತ್ಯಂ ಮುದಿತಮಾನಸಾಃ।।

ಮಹಾರಾಜ! ನಿತ್ಯವೂ ಮುದಿತಮನಸ್ಕರಾದ ಅವರು ಹನ್ನೊಂದು ಸಾವಿರದ ಐದು ನೂರು ವರ್ಷಗಳು ಜೀವಿಸುತ್ತಾರೆ.

06009005a ದಕ್ಷಿಣೇ ಶೃಂಗಿಣಶ್ಚೈವ ಶ್ವೇತಸ್ಯಾಥೋತ್ತರೇಣ ಚ।
06009005c ವರ್ಷಂ ಹೈರಣ್ವತಂ ನಾಮ ಯತ್ರ ಹೈರಣ್ವತೀ ನದೀ।।

ಶೃಂಗಿಣದ ದಕ್ಷಿಣದಲ್ಲಿ ಮತ್ತು ಶ್ವೇತದ ಉತ್ತರದಲ್ಲಿ ಹೈರಣ್ವತೀ ನದಿಯು ಹರಿಯುವ ಹೈರಣ್ವತವೆಂಬ ಹೆಸರಿನ ವರ್ಷವಿದೆ.

06009006a ಯಕ್ಷಾನುಗಾ ಮಹಾರಾಜ ಧನಿನಃ ಪ್ರಿಯದರ್ಶನಾಃ।
06009006c ಮಹಾಬಲಾಸ್ತತ್ರ ಸದಾ ರಾಜನ್ಮುದಿತಮಾನಸಾಃ।।

ರಾಜನ್! ಮಹಾರಾಜ! ಅಲ್ಲಿರುವ ಸದಾ ಮುದಿತಮಾನಸರು ಯಕ್ಷನ ಅನುಯಾಯಿಗಳು, ಧನಿಗಳು, ಮಹಾಬಲರು ಮತ್ತು ನೋಡಲು ಸುಂದರರು.

06009007a ಏಕಾದಶ ಸಹಸ್ರಾಣಿ ವರ್ಷಾಣಾಂ ತೇ ಜನಾಧಿಪ।
06009007c ಆಯುಷ್ಪ್ರಮಾಣಂ ಜೀವಂತಿ ಶತಾನಿ ದಶ ಪಂಚ ಚ।।

ಜನಾಧಿಪ! ಅಲ್ಲಿ ಜೀವಿಸುವವರ ಆಯುಸ್ಸಿನ ಪ್ರಮಾಣವು ಹನ್ನೊಂದು ಸಾವಿರದ ಐವತ್ತು ನೂರು ವರ್ಷಗಳು1.

06009008a ಶೃಂಗಾಣಿ ವೈ ಶೃಂಗವತಸ್ತ್ರೀಣ್ಯೇವ ಮನುಜಾಧಿಪ।
06009008c ಏಕಂ ಮಣಿಮಯಂ ತತ್ರ ತಥೈಕಂ ರೌಕ್ಮಮದ್ಭುತಂ।।

ಮನುಜಾಧಿಪ! ಶೃಂಗವತದಲ್ಲಿ ಮೂರು ಶಿಖರಗಳಿವೆ - ಒಂದು ಮಣಿಮಯವಾದುದು ಮತ್ತು ಇನ್ನೊಂದು ಅದ್ಭುತ ಬಂಗಾರದ್ದು.

06009009a ಸರ್ವರತ್ನಮಯಂ ಚೈಕಂ ಭವನೈರುಪಶೋಭಿತಂ।
06009009c ತತ್ರ ಸ್ವಯಂಪ್ರಭಾ ದೇವೀ ನಿತ್ಯಂ ವಸತಿ ಶಾಂಡಿಲೀ।।

ಇನ್ನೊಂದು ಸರ್ವ ರತ್ನಮಯವಾಗಿದ್ದು ಭವನಗಳಿಂದ ಶೋಭಿಸುತ್ತದೆ. ಅಲ್ಲಿ ಸ್ವಯಂಪ್ರಭೆ ದೇವೀ ಶಾಂಡಿಲಿಯು ನಿತ್ಯವೂ ವಾಸಿಸುತ್ತಾಳೆ.

06009010a ಉತ್ತರೇಣ ತು ಶೃಂಗಸ್ಯ ಸಮುದ್ರಾಂತೇ ಜನಾಧಿಪ।
06009010c ವರ್ಷಮೈರಾವತಂ ನಾಮ ತಸ್ಮಾಚ್ಚೃಂಗವತಃ ಪರಂ।।

ಜನಾಧಿಪ! ಶೃಂಗದ ಉತ್ತರಕ್ಕೆ, ಸಮುದ್ರದ ಅಂಚಿನಲ್ಲಿ, ಐರಾವತವೆಂಬ ಹೆಸರಿನ ವರ್ಷವಿದೆ. ಇಲ್ಲಿ ಶೃಂಗವತವಿರುವುದರಿಂದ ಇದು ಅತಿ ಶ್ರೇಷ್ಠವಾದುದು.

06009011a ನ ತತ್ರ ಸೂರ್ಯಸ್ತಪತಿ ನ ತೇ ಜೀರ್ಯಂತಿ ಮಾನವಾಃ।
06009011c ಚಂದ್ರಮಾಶ್ಚ ಸನಕ್ಷತ್ರೋ ಜ್ಯೋತಿರ್ಭೂತ ಇವಾವೃತಃ।।

ಅಲ್ಲಿ ಸೂರ್ಯ ಸುಡುವುದಿಲ್ಲ. ಮಾನವರು ಜೀರ್ಣರಾಗುವುದಿಲ್ಲ. ನಕ್ಷತ್ರಗಳೊಡನೆ ಚಂದ್ರಮನು ಮಾತ್ರ ಬೆಳಕಾಗಿ ಆವರಿಸಿರುತ್ತಾನೆ.

06009012a ಪದ್ಮಪ್ರಭಾಃ ಪದ್ಮವರ್ಣಾಃ ಪದ್ಮಪತ್ರನಿಭೇಕ್ಷಣಾಃ।
06009012c ಪದ್ಮಪತ್ರಸುಗಂಧಾಶ್ಚ ಜಾಯಂತೇ ತತ್ರ ಮಾನವಾಃ।।

ಅಲ್ಲಿ ಮನುಷ್ಯರು ಪದ್ಮಪ್ರಭೆಯುಳ್ಳವರಾಗಿ, ಪದ್ಮವರ್ಣದವರಾಗಿ, ಪದ್ಮಪತ್ರದಂತಹ ಕಣ್ಣುಗಳುಳ್ಳವರಾಗಿ, ಪದ್ಮಪತ್ರದ ಸುಗಂಧಗಳುಳ್ಳವರಾಗಿ ಹುಟ್ಟುತ್ತಾರೆ.

06009013a ಅನಿಷ್ಪಂದಾಃ ಸುಗಂಧಾಶ್ಚ ನಿರಾಹಾರಾ ಜಿತೇಂದ್ರಿಯಾಃ।
06009013c ದೇವಲೋಕಚ್ಯುತಾಃ ಸರ್ವೇ ತಥಾ ವಿರಜಸೋ ನೃಪ।।

ನೃಪ! ಕಣ್ಣು ಮುಚ್ಚದಿರುವ, ಸುಗಂಧಗಳುಳ್ಳ ಅವರು ನಿರಾಹಾರರಾಗಿ ಜಿತೇಂದ್ರಿಯರಾಗಿರುತ್ತಾರೆ. ದೇವಲೋಕದಿಂದ ಕೆಳಗೆ ಬಿದ್ದ ಅವರು ಎಲ್ಲರೂ ಪಾಪಗಳಿಲ್ಲದವರು.

06009014a ತ್ರಯೋದಶ ಸಹಸ್ರಾಣಿ ವರ್ಷಾಣಾಂ ತೇ ಜನಾಧಿಪ।
06009014c ಆಯುಷ್ಪ್ರಮಾಣಂ ಜೀವಂತಿ ನರಾ ಭರತಸತ್ತಮ।।

ಜನಾಧಿಪ! ಭರತಸತ್ತಮ! ಅವರ ಆಯುಷ್ಪ್ರಮಾಣವು ಹದಿಮೂರು ಸಾವಿರ ವರ್ಷಗಳಿದ್ದು ಅಲ್ಲಿಯ ನರರು ಅಷ್ಟು ವರ್ಷಗಳು ಜೀವಿಸುತ್ತಾರೆ.

06009015a ಕ್ಷೀರೋದಸ್ಯ ಸಮುದ್ರಸ್ಯ ತಥೈವೋತ್ತರತಃ ಪ್ರಭುಃ।
06009015c ಹರಿರ್ವಸತಿ ವೈಕುಂಠಃ ಶಕಟೇ ಕನಕಾತ್ಮಕೇ।।

ಕ್ಷೀರಸಾಗರದ ಉತ್ತರದಲ್ಲಿ ಪ್ರಭು ಹರಿ ವೈಕುಂಠನು ಕನಕಾತ್ಮಕ ರಥದ ಮೇಲೆ ವಾಸಿಸುತ್ತಾನೆ.

06009016a ಅಷ್ಟಚಕ್ರಂ ಹಿ ತದ್ಯಾನಂ ಭೂತಯುಕ್ತಂ ಮನೋಜವಂ।
06009016c ಅಗ್ನಿವರ್ಣಂ ಮಹಾವೇಗಂ ಜಾಂಬೂನದಪರಿಷ್ಕೃತಂ।।

ಆ ರಥಕ್ಕೆ ಎಂಟು ಚಕ್ರಗಳಿವೆ, ಭೂತಯುಕ್ತವಾಗಿದೆ, ಮನೋವೇಗವನ್ನು ಹೊಂದಿದೆ, ಅಗ್ನಿಯ ಬಣ್ಣವಿದೆ, ಅತಿಯಾದ ವೇಗವಿದೆ, ಪರಿಷ್ಕೃತ ಬಂಗಾರದಿಂದ ಮಾಡಲ್ಪಟ್ಟಿದೆ2.

06009017a ಸ ಪ್ರಭುಃ ಸರ್ವಭೂತಾನಾಂ ವಿಭುಶ್ಚ ಭರತರ್ಷಭ।
06009017c ಸಂಕ್ಷೇಪೋ ವಿಸ್ತರಶ್ಚೈವ ಕರ್ತಾ ಕಾರಯಿತಾ ಚ ಸಃ।।

ಭರತರ್ಷಭ! ಆ ಪ್ರಭುವು ಸರ್ವಭೂತಗಳ ವಿಭುವೂ ಹೌದು. ಅವನಲ್ಲಿ ಎಲ್ಲವೂ ಸಂಕ್ಷಿಪ್ತವಾಗುತ್ತವೆ. ಅವನಿಂದ ಎಲ್ಲವೂ ವಿಸ್ತರವಾಗುತ್ತವೆ3. ಅವನೇ ಮಾಡುವವನು ಮತ್ತು ಮಾಡಿಸುವವನು ಕೂಡ.

06009018a ಪೃಥಿವ್ಯಾಪಸ್ತಥಾಕಾಶಂ ವಾಯುಸ್ತೇಜಶ್ಚ ಪಾರ್ಥಿವ।
06009018c ಸ ಯಜ್ಞಃ ಸರ್ವಭೂತಾನಾಮಾಸ್ಯಂ ತಸ್ಯ ಹುತಾಶನಃ।।

ಪಾರ್ಥಿವ! ಅವನೇ ಪೃಥ್ವಿ, ಆಪ, ಆಕಾಶ, ವಾಯು, ಮತ್ತು ತೇಜ. ಅವನು ಸರ್ವಭೂತಗಳ ಯಜ್ಞ ಮತ್ತು ಅವನ ಮುಖವು ಹುತಾಶನ.””

06009019 ವೈಶಂಪಾಯನ ಉವಾಚ।
06009019a ಏವಮುಕ್ತಃ ಸಂಜಯೇನ ಧೃತರಾಷ್ಟ್ರೋ ಮಹಾಮನಾಃ।
06009019c ಧ್ಯಾನಮನ್ವಗಮದ್ರಾಜಾ ಪುತ್ರಾನ್ಪ್ರತಿ ಜನಾಧಿಪ।।

ವೈಶಂಪಾಯನನು ಹೇಳಿದನು: “ಜನಾಧಿಪ! ಸಂಜಯನು ಹೀಗೆ ಹೇಳಲು ಮಹಾಮನಸ್ವಿ ರಾಜಾ ಧೃತರಾಷ್ಟ್ರನು ತನ್ನ ಪುತ್ರರ ಕುರಿತು ಧ್ಯಾನಮಗ್ನನಾದನ4.

06009020a ಸ ವಿಚಿಂತ್ಯ ಮಹಾರಾಜ ಪುನರೇವಾಬ್ರವೀದ್ವಚಃ।
06009020c ಅಸಂಶಯಂ ಸೂತಪುತ್ರ ಕಾಲಃ ಸಂಕ್ಷಿಪತೇ ಜಗತ್।।
06009020e ಸೃಜತೇ ಚ ಪುನಃ ಸರ್ವಂ ನೇಹ ವಿದ್ಯತಿ ಶಾಶ್ವತಂ।।

ಮಹಾರಾಜ! ಸ್ವಲ್ಪ ಯೋಚಿಸಿ ಅವನು ಪುನಃ ಈ ಮಾತನ್ನಾಡಿದನು: “ಸೂತಪುತ್ರ! ಕಾಲವು ಜಗತ್ತನ್ನು ಸಂಕ್ಷಿಪ್ತಗೊಳಿಸುತ್ತದೆ ಮತ್ತು ಪುನಃ ಸೃಷ್ಟಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇವೆಲ್ಲವೂ ಶಾಶ್ವತವಲ್ಲವೆಂದು ತಿಳಿದಿದೆ.

06009021a ನರೋ ನಾರಾಯಣಶ್ಚೈವ ಸರ್ವಜ್ಞಃ ಸರ್ವಭೂತಭೃತ್।
06009021c ದೇವಾ ವೈಕುಂಠ ಇತ್ಯಾಹುರ್ವೇದಾ ವಿಷ್ಣುರಿತಿ ಪ್ರಭುಂ।।

ನರ-ನಾರಾಯಣರು ಸರ್ವಜ್ಞರು, ಸರ್ವಭೂತಭೃತರು. ದೇವತೆಗಳು ಅವನನ್ನು ವೈಕುಂಠ ಎಂದು ಕರೆಯುತ್ತಾರೆ. ಅವನು ವಿಷ್ಣುವೆಂದೂ ಪ್ರಭುವೆಂದೂ ತಿಳಿಯಲ್ಪಡುತ್ತಾನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ಧೃತರಾಷ್ಟ್ರವಾಕ್ಯೇ ನವಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ಧೃತರಾಷ್ಟ್ರವಾಕ್ಯ ಎನ್ನುವ ಒಂಭತ್ತನೇ ಅಧ್ಯಾಯವು.


  1. ಹನ್ನೆರಡು ಸಾವಿರದ ಐದು ನೂರು? (ಭಾರತ ದರ್ಶನ, ಸಂ.12, ಪು. 73) ↩︎

  2. ಈ ಶ್ಲೋಕವನ್ನು ಯಜುರಾರಣ್ಯಕದಲ್ಲಿರುವ “ಅಷ್ಟಚಕ್ರಾ ನವದ್ವಾರಾ। ದೇವಾನಾಂ ಪೂರಯೋಧ್ಯಾ। ತಸ್ಯಾಗ್ಂ ಹಿರಣ್ಮಯಃ ಕೋಶಃ। ಸ್ವರ್ಗೋ ಲೋಕೋ ಜ್ಯೋತಿಷಾವೃತಃ।” ಎಂಬ ಮಂತ್ರಕ್ಕೆ ಹೋಲಿಸಬಹುದು. ನಮ್ಮ ಶರೀರವು ಎಂಟು ಚಕ್ರಗಳುಳ್ಳದ್ದಾಗಿದೆ. ಈ ಅಷ್ಟಚಕ್ರದ ರಥದಲ್ಲಿ ಹಿರಣ್ಮಯ ಕೋಶವಿದೆ. ಅದು ಜ್ಯೋತಿಯಿಂದ ವ್ಯಾಪ್ತವಾಗಿದೆ. ಇದರಲ್ಲಿ ಹರಿಯಿದ್ದಾನೆ.” ↩︎

  3. ಸಂಕ್ಷೇಪವೆಂದರೆ ಸಂಹಾರಕನೆಂದೂ ವಿಸ್ತರವೆಂದರೆ ಪುನಃ ರಚನೆಯೆಂದೂ ಅರ್ಥೈಸುತ್ತಾರೆ. ↩︎

  4. ಹಿಂದಿನ ಶ್ಲೋಕಗಳಲ್ಲಿ ಸಂಜಯನು ಭಗವಂತನ ಮಹಿಮೆಯನ್ನು ಹೇಳಿದರೂ ಧೃತರಾಷ್ಟ್ರನ ಮನಸ್ಸು ಭಗವಂತನ ಧ್ಯಾನದಲ್ಲಿರದೇ ತನ್ನ ಪುತ್ರರ ಕುರಿತು ಯೋಚಿಸುತ್ತಿತ್ತು! ↩︎