ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಜಂಬೂಖಂಡವಿನಿರ್ಮಾಣ ಪರ್ವ
ಅಧ್ಯಾಯ 7
ಸಾರ
ಸಂಜಯನು ಧೃತರಾಷ್ಟ್ರನಿಗೆ ಭೂಮಿ ಮೊದಲಾದವುಗಳ ಪರಿಮಾಣಗಳನ್ನು ವರ್ಣಿಸಿದುದು (1-53).
06007001 ಧೃತರಾಷ್ಟ್ರ ಉವಾಚ।
06007001a ಉಕ್ತೋ ದ್ವೀಪಸ್ಯ ಸಂಕ್ಷೇಪೋ ವಿಸ್ತರಂ ಬ್ರೂಹಿ ಸಂಜಯ।
06007001c ಯಾವದ್ಭೂಮ್ಯವಕಾಶೋಽಯಂ ದೃಶ್ಯತೇ ಶಶಲಕ್ಷಣೇ।
06007001e ತಸ್ಯ ಪ್ರಮಾಣಂ ಪ್ರಬ್ರೂಹಿ ತತೋ ವಕ್ಷ್ಯಸಿ ಪಿಪ್ಪಲಂ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ದ್ವೀಪದ ಕುರಿತು ಸಂಕ್ಷೇಪವಾಗಿ ಹೇಳಿದ್ದೀಯೆ. ವಿಸ್ತಾರವಾಗಿ ಹೇಳು. ಶಶಖಂಡದಲ್ಲಿ ಭೂಮಿಯ ಅವಕಾಶವೆಷ್ಟಿರುವುದು? ಅನಂತರ ಪಿಪ್ಪಲ ಖಂಡವನ್ನು ವಿವರಿಸುವೆಯಂತೆ.””
06007002 ವೈಶಂಪಾಯನ ಉವಾಚ।
06007002a ಏವಮುಕ್ತಃ ಸ ರಾಜ್ಞಾ ತು ಸಂಜಯೋ ವಾಕ್ಯಮಬ್ರವೀತ್।
06007002c ಪ್ರಾಗಾಯತಾ ಮಹಾರಾಜ ಷಡೇತೇ ರತ್ನಪರ್ವತಾಃ।
06007002e ಅವಗಾಢಾ ಹ್ಯುಭಯತಃ ಸಮುದ್ರೌ ಪೂರ್ವಪಶ್ಚಿಮೌ।।
ವೈಶಂಪಾಯನನು ಹೇಳಿದನು: “ಹೀಗೆ ಹೇಳಿದ ರಾಜನಿಗೆ ಸಂಜಯನು ಹೇಳಿದನು: “ಮಹಾರಾಜ! ಪೂರ್ವ-ಪಶ್ಚಿಮವಾಗಿ ಸಮುದ್ರದ ಪರ್ಯಂತ ಆರು ಪರ್ವತರತ್ನಗಳಿವೆ. ಇವುಗಳ ಪೂರ್ವ ಮತ್ತು ಪಶ್ಚಿಮಗಳಲ್ಲಿ ಎರಡು ಸಮುದ್ರಗಳಿವೆ.
06007003a ಹಿಮವಾನ್ ಹೇಮಕೂಟಶ್ಚ ನಿಷಧಶ್ಚ ನಗೋತ್ತಮಃ।
06007003c ನೀಲಶ್ಚ ವೈಡೂರ್ಯಮಯಃ ಶ್ವೇತಶ್ಚ ರಜತಪ್ರಭಃ।
06007003e ಸರ್ವಧಾತುವಿನದ್ಧಶ್ಚ ಶೃಂಗವಾನ್ನಾಮ ಪರ್ವತಃ।।
ಇವುಗಳು - ಹಿಮಾಲಯ, ಹೇಮಕೂಟ, ನಗೋತ್ತಮ ನಿಷಧ, ವೈಡೂರ್ಯಮಯ ನೀಲ, ರಜತಪ್ರಭೆಯುಳ್ಳ ಶ್ವೇತ, ಸರ್ವಧಾತುಗಳಿಂದ ಕೂಡಿರುವ ಶೃಂಗವೆಂಬ ಹೆಸರಿನ ಪರ್ವತ.
06007004a ಏತೇ ವೈ ಪರ್ವತಾ ರಾಜನ್ಸಿದ್ಧಚಾರಣಸೇವಿತಾಃ।
06007004c ತೇಷಾಮಂತರವಿಷ್ಕಂಭೋ ಯೋಜನಾನಿ ಸಹಸ್ರಶಃ।।
ರಾಜನ್! ಈ ಪರ್ವತಗಳು ಸಿದ್ಧ-ಚಾರಣರ ವಾಸಸ್ಥಾನಗಳು. ಇವುಗಳ ಒಳಭಾಗವು ಸಹಸ್ರಾರು ಯೋಜನ ವಿಶಾಲವಾಗಿವೆ.
06007005a ತತ್ರ ಪುಣ್ಯಾ ಜನಪದಾಸ್ತಾನಿ ವರ್ಷಾಣಿ ಭಾರತ।
06007005c ವಸಂತಿ ತೇಷು ಸತ್ತ್ವಾನಿ ನಾನಾಜಾತೀನಿ ಸರ್ವಶಃ।।
ಭಾರತ! ಅಲ್ಲಿ ಪುಣ್ಯ ಜನಪದಗಳಿರುವ ವರ್ಷ1ಗಳಿವೆ. ಅಲ್ಲಿ ನಾನಾ ಜಾತಿಯ ಎಲ್ಲ ಸತ್ವಗಳೂ ವಾಸಿಸುತ್ತವೆ.
06007006a ಇದಂ ತು ಭಾರತಂ ವರ್ಷಂ ತತೋ ಹೈಮವತಂ ಪರಂ।
06007006c ಹೇಮಕೂಟಾತ್ಪರಂ ಚೈವ ಹರಿವರ್ಷಂ ಪ್ರಚಕ್ಷತೇ।।
ಇದು ಭಾರತ ವರ್ಷ. ಇದರ ನಂತರದ್ದು ಹೈಮವತ. ಹೇಮಕೂಟದ ನಂತರದ್ದು ಹರಿವರ್ಷವೆಂದು ಹೇಳುತ್ತಾರೆ.
06007007a ದಕ್ಷಿಣೇನ ತು ನೀಲಸ್ಯ ನಿಷಧಸ್ಯೋತ್ತರೇಣ ಚ।
06007007c ಪ್ರಾಗಾಯತೋ ಮಹಾರಾಜ ಮಾಲ್ಯವಾನ್ನಾಮ ಪರ್ವತಃ।।
ಮಹಾರಾಜ! ನೀಲಪರ್ವತದ ದಕ್ಷಿಣಕ್ಕೂ ನಿಷಧ ಪರ್ವತದ ಉತ್ತರಕ್ಕೂ ಪೂರ್ವ-ಪಶ್ಚಿಮವಾಗಿ ಮಾಲ್ಯವತ್ ಎಂಬ ಹೆಸರಿನ ಪರ್ವತವಿದೆ.
06007008a ತತಃ ಪರಂ ಮಾಲ್ಯವತಃ ಪರ್ವತೋ ಗಂಧಮಾದನಃ।
06007008c ಪರಿಮಂಡಲಸ್ತಯೋರ್ಮಧ್ಯೇ ಮೇರುಃ ಕನಕಪರ್ವತಃ।।
ಮಾಲ್ಯವತ್ಪರ್ವತದಿಂದಾಚೆ ಗಂಧಮಾದನ ಪರ್ವತವಿದೆ. ಈ ಎರಡು ಪರ್ವತಗಳ ಮಧ್ಯೆ ಗೋಲಾಕಾರದ ಕನಕಪರ್ವತ ಮೇರುವಿದೆ.
06007009a ಆದಿತ್ಯತರುಣಾಭಾಸೋ ವಿಧೂಮ ಇವ ಪಾವಕಃ।
06007009c ಯೋಜನಾನಾಂ ಸಹಸ್ರಾಣಿ ಷೋಡಶಾಧಃ ಕಿಲ ಸ್ಮೃತಃ।।
ಉದಯಿಸುವ ಸೂರ್ಯನಂತೆ, ಹೊಗೆಯಿಲ್ಲದ ಅಗ್ನಿಯಂತೆ ಹೊಳೆಯುವ ಇದರ ಆಳವು ಹದಿನಾರು ಸಹಸ್ರ ಯೋಜನೆಗಳೆಂದು ಹೇಳುವುದಿಲ್ಲವೇ?
06007010a ಉಚ್ಚೈಶ್ಚ ಚತುರಾಶೀತಿರ್ಯೋಜನಾನಾಂ ಮಹೀಪತೇ।
06007010c ಊರ್ಧ್ವಮಂತಶ್ಚ ತಿರ್ಯಕ್ಚ ಲೋಕಾನಾವೃತ್ಯ ತಿಷ್ಠತಿ।।
ಮಹೀಪತೇ! ಇದರ ಎತ್ತರವು ಎಂಭತ್ನಾಲ್ಕು ಯೋಜನೆಗಳು. ಇದರ ಅಗಲವೂ ಅಷ್ಟೇ ಆಗಿರುತ್ತದೆ. ಇದರ ಮೇಲೆ, ಕೆಳಗೆ, ಮತ್ತು ಸುತ್ತಲೂ ಲೋಕಗಳು ಆವರಿಸಿಕೊಂಡು ನಿಂತಿವೆ.
06007011a ತಸ್ಯ ಪಾರ್ಶ್ವೇ ತ್ವಿಮೇ ದ್ವೀಪಾಶ್ಚತ್ವಾರಃ ಸಂಸ್ಥಿತಾಃ ಪ್ರಭೋ।
06007011c ಭದ್ರಾಶ್ವಃ ಕೇತುಮಾಲಶ್ಚ ಜಂಬೂದ್ವೀಪಶ್ಚ ಭಾರತ।
06007011e ಉತ್ತರಾಶ್ಚೈವ ಕುರವಃ ಕೃತಪುಣ್ಯಪ್ರತಿಶ್ರಯಾಃ।।
ಪ್ರಭೋ! ಭಾರತ! ಅದರ ಪಾರ್ಶ್ವಗಳಲ್ಲಿ ನಾಲ್ಕು ದ್ವೀಪಗಳಿವೆ: ಭದ್ರ, ಕೇತುಮಾಲ, ಜಂಬೂದ್ವೀಪ, ಮತ್ತು ಪುಣ್ಯಕೃತರಿಗೆ ಆಶ್ರಯವಾಗಿರುವ ಉತ್ತರ ಕುರು.
06007012a ವಿಹಗಃ ಸುಮುಖೋ ಯತ್ರ ಸುಪರ್ಣಸ್ಯಾತ್ಮಜಃ ಕಿಲ।
06007012c ಸ ವೈ ವಿಚಿಂತಯಾಮಾಸ ಸೌವರ್ಣಾನ್ಪ್ರೇಕ್ಷ್ಯ ವಾಯಸಾನ್।।
06007013a ಮೇರುರುತ್ತಮಮಧ್ಯಾನಾಮಧಮಾನಾಂ ಚ ಪಕ್ಷಿಣಾಂ।
06007013c ಅವಿಶೇಷಕರೋ ಯಸ್ಮಾತ್ತಸ್ಮಾದೇನಂ ತ್ಯಜಾಮ್ಯಹಂ।।
ಸುಪರ್ಣನ ಮಗ ಸುಮುಖನೆಂಬ ಪಕ್ಷಿಯು ಸುವರ್ಣಮಯ ಕಾಗೆಗಳನ್ನು ನೋಡಿ ಯೋಚಿಸಿದನು: “ಈ ಮೇರುವು ಪಕ್ಷಿಗಳಲ್ಲಿ ಉತ್ತಮ, ಮದ್ಯಮ ಮತ್ತು ಅಧಮರಲ್ಲಿ ವ್ಯತ್ಯಾಸವನ್ನೇ ಕಾಣುತ್ತಿಲ್ಲ. ಆದುದರಿಂದ ಇದನ್ನು ನಾನು ತ್ಯಜಿಸುತ್ತೇನೆ.”
06007014a ತಮಾದಿತ್ಯೋಽನುಪರ್ಯೇತಿ ಸತತಂ ಜ್ಯೋತಿಷಾಂ ಪತಿಃ।
06007014c ಚಂದ್ರಮಾಶ್ಚ ಸನಕ್ಷತ್ರೋ ವಾಯುಶ್ಚೈವ ಪ್ರದಕ್ಷಿಣಂ।।
ಮೇರುಪರ್ವತವನ್ನು ಗ್ರಹಗಳ ಅಧಿಪತಿ ಸೂರ್ಯನು ಸುತ್ತುಹಾಕುತ್ತಾನೆ. ನಕ್ಷತ್ರಗಳೊಂದಿಗೆ ಚಂದ್ರನೂ, ಮತ್ತು ವಾಯುವೂ ಅದಕ್ಕೆ ಪ್ರದಕ್ಷಿಣೆ ಮಾಡುತ್ತಾರೆ.
06007015a ಸ ಪರ್ವತೋ ಮಹಾರಾಜ ದಿವ್ಯಪುಷ್ಪಫಲಾನ್ವಿತಃ।
06007015c ಭವನೈರಾವೃತಃ ಸರ್ವೈರ್ಜಾಂಬೂನದಮಯೈಃ ಶುಭೈಃ।।
ಮಹಾರಾಜ! ದಿವ್ಯ ಪುಷ್ಪ ಫಲಭರಿತವಾದ ಆ ಪರ್ವತವು ಎಲ್ಲಕಡೆಗಳಲ್ಲಿಯೂ ಬಂಗಾರಗಳಿಂದ ಮಾಡಲ್ಪಟ್ಟ ಶುಭ ಭವನಗಳಿಂದ ಆವೃತಗೊಂಡಿದೆ.
06007016a ತತ್ರ ದೇವಗಣಾ ರಾಜನ್ಗಂಧರ್ವಾಸುರರಾಕ್ಷಸಾಃ।
06007016c ಅಪ್ಸರೋಗಣಸಂಯುಕ್ತಾಃ ಶೈಲೇ ಕ್ರೀಡಂತಿ ನಿತ್ಯಶಃ।।
ರಾಜನ್! ಆ ಶೈಲದಲ್ಲಿ ನಿತ್ಯವೂ ದೇವಗಣಗಳು, ಗಂಧರ್ವ-ಅಸುರ-ರಾಕ್ಷಸ-ಅಪ್ಸರ ಗಣಗಳು ಒಟ್ಟುಗೂಡಿ ಆಟವಾಡುತ್ತಿರುತ್ತಾರೆ.
06007017a ತತ್ರ ಬ್ರಹ್ಮಾ ಚ ರುದ್ರಶ್ಚ ಶಕ್ರಶ್ಚಾಪಿ ಸುರೇಶ್ವರಃ।
06007017c ಸಮೇತ್ಯ ವಿವಿಧೈರ್ಯರ್ಯಜ್ಞೈರ್ಯಜಂತೇಽನೇಕದಕ್ಷಿಣೈಃ।।
ಅಲ್ಲಿ ಬ್ರಹ್ಮ, ರುದ್ರ ಮತ್ತು ಸುರೇಶ್ವರ ಶಕ್ರನೂ ಕೂಡ ಒಟ್ಟು ಸೇರಿ ಅನೇಕ ದಕ್ಷಿಣೆಗಳಿಂದ ಕೂಡಿದ ವಿವಿಧ ಯಜ್ಞಗಳನ್ನು ಯಾಜಿಸಿದರು.
06007018a ತುಂಬುರುರ್ನಾರದಶ್ಚೈವ ವಿಶ್ವಾವಸುರ್ಹಹಾ ಹುಹೂಃ।
06007018c ಅಭಿಗಮ್ಯಾಮರಶ್ರೇಷ್ಠಾಃ ಸ್ತವೈ ಸ್ತುನ್ವಂತಿ ಚಾಭಿಭೋ।।
ಅಲ್ಲಿ ತುಂಬುರು, ನಾರದ, ವಿಶ್ವಾವಸು, ಹಹಾ ಹುಹೂ ಎಂಬ ಗಂಧರ್ವರು ಮತ್ತು ಅಮರಶ್ರೇಷ್ಠರು ವಿಭುವನ್ನು ಸ್ತೋತ್ರಗಳಿಂದ ಸ್ತುತಿಸುತ್ತಾರೆ.
06007019a ಸಪ್ತರ್ಷಯೋ ಮಹಾತ್ಮಾನಃ ಕಶ್ಯಪಶ್ಚ ಪ್ರಜಾಪತಿಃ।
06007019c ತತ್ರ ಗಚ್ಛಂತಿ ಭದ್ರಂ ತೇ ಸದಾ ಪರ್ವಣಿ ಪರ್ವಣಿ।।
ನಿನಗೆ ಮಂಗಳವಾಗಲಿ! ಅಲ್ಲಿಗೆ ಪರ್ವ ಪರ್ವಗಳಲ್ಲಿ ಸದಾ ಮಹಾತ್ಮ ಸಪ್ತರ್ಷಿಗಳು ಮತ್ತು ಪ್ರಜಾಪತಿ ಕಶ್ಯಪರು ಬರುತ್ತಿರುತ್ತಾರೆ.
06007020a ತಸ್ಯೈವ ಮೂರ್ಧನ್ಯುಶನಾಃ ಕಾವ್ಯೋ ದೈತ್ಯೈರ್ಮಹೀಪತೇ।
06007020c ತಸ್ಯ ಹೀಮಾನಿ ರತ್ನಾನಿ ತಸ್ಯೇಮೇ ರತ್ನಪರ್ವತಾಃ।।
ಮಹೀಪತೇ! ಇದರ ಶಿಖರದಲ್ಲಿಯೇ ಉಶನ ಕಾವ್ಯನನ್ನು ದೈತ್ಯರು ಗೌರವಿಸುತ್ತಾರೆ. ಚಿನ್ನ, ರತ್ನಗಳು ಮತ್ತು ರತ್ನ ಪರ್ವತವೂ ಇದರ ಸಂಬಂಧಿಗಳು.
06007021a ತಸ್ಮಾತ್ಕುಬೇರೋ ಭಗವಾಂಶ್ಚತುರ್ಥಂ ಭಾಗಮಶ್ನುತೇ।
06007021c ತತಃ ಕಲಾಂಶಂ ವಿತ್ತಸ್ಯ ಮನುಷ್ಯೇಭ್ಯಃ ಪ್ರಯಚ್ಛತಿ।।
ಭಗವಾನ್! ಅದರ ನಾಲ್ಕನೇ ಒಂದು ಭಾಗವು ಕುಬೇರನಿಗೆ ಸೇರಿದೆ. ಅವನ ವಿತ್ತದ ಹದಿನಾರರ ಒಂದಂಶವನ್ನು ಅವನು ಮನುಷ್ಯರಿಗೆ ನೀಡುತ್ತಾನೆ.
06007022a ಪಾರ್ಶ್ವೇ ತಸ್ಯೋತ್ತರೇ ದಿವ್ಯಂ ಸರ್ವರ್ತುಕುಸುಮಂ ಶಿವಂ।
06007022c ಕರ್ಣಿಕಾರವನಂ ರಮ್ಯಂ ಶಿಲಾಜಾಲಸಮುದ್ಗತಂ।।
ಅದರ ಉತ್ತರ ಭಾಗದಲ್ಲಿ ಸರ್ವಋತುಗಳಲ್ಲಿಯೂ ಕುಸುಮಗಳಿರುವ ಶುಭವಾದ ರಮ್ಯವಾದ ಬೆಟ್ಟದಾವರೆ ಕರ್ಣಿಕಾ ವನವಿದೆ.
06007023a ತತ್ರ ಸಾಕ್ಷಾತ್ಪಶುಪತಿರ್ದಿವ್ಯೈರ್ಭೂತೈಃ ಸಮಾವೃತಃ।
06007023c ಉಮಾಸಹಾಯೋ ಭಗವಾನ್ರಮತೇ ಭೂತಭಾವನಃ।।
ಅಲ್ಲಿ ಸಾಕ್ಷಾತ್ ಪಶುಪತಿ ಭಗವಾನ್ ಭೂತಭಾವನನು ಉಮೆಯೊಂದಿಗೆ ದಿವ್ಯ ಭೂತಗಳಿಂದ ಸಮಾವೃತನಾಗಿ ರಮಿಸುತ್ತಾನೆ.
06007024a ಕರ್ಣಿಕಾರಮಯೀಂ ಮಾಲಾಂ ಬಿಭ್ರತ್ಪಾದಾವಲಂಬಿನೀಂ।
06007024c ತ್ರಿಭಿರ್ನೇತ್ರೈಃ ಕೃತೋದ್ದ್ಯೋತಸ್ತ್ರಿಭಿಃ ಸೂರ್ಯೈರಿವೋದಿತೈಃ।।
ಅಲ್ಲಿ ಅವನು ಪಾದದವರೆಗೂ ಕರ್ಣಿಕಾರಗಳಿಂದ ಮಾಡಿದ ಮಾಲೆಯನ್ನು ಧರಿಸಿ ಉದಯಿಸುತ್ತಿರುವ ಮೂರು ಸೂರ್ಯಗಳಂತಿರುವ ಮೂರುಕಣ್ಣುಗಳಿಂದ ಬೆಳಗುತ್ತಾನೆ.
06007025a ತಂ ಉಗ್ರತಪಸಃ ಸಿದ್ಧಾಃ ಸುವ್ರತಾಃ ಸತ್ಯವಾದಿನಃ।
06007025c ಪಶ್ಯಂತಿ ನ ಹಿ ದುರ್ವೃತ್ತೈಃ ಶಕ್ಯೋ ದ್ರಷ್ಟುಂ ಮಹೇಶ್ವರಃ।।
ಅವನನ್ನು ಉಗ್ರತಪಸ್ವಿ, ಸುವ್ರತ, ಸತ್ಯವಾದಿ ಸಿದ್ಧರು ಮಾತ್ರ ನೋಡುತ್ತಾರೆ. ದುರ್ವೃತ್ತರು ಮಹೇಶ್ವರನನ್ನು ನೋಡಲು ಶಕ್ತರಿಲ್ಲ.
06007026a ತಸ್ಯ ಶೈಲಸ್ಯ ಶಿಖರಾತ್ ಕ್ಷೀರಧಾರಾ ನರೇಶ್ವರ।
06007026c ತ್ರಿಂಶದ್ಬಾಹುಪರಿಗ್ರಾಹ್ಯಾ ಭೀಮನಿರ್ಘಾತನಿಸ್ವನಾ।।
06007027a ಪುಣ್ಯಾ ಪುಣ್ಯತಮೈರ್ಜುಷ್ಟಾ ಗಂಗಾ ಭಾಗೀರಥೀ ಶುಭಾ।
06007027c ಪತತ್ಯಜಸ್ರವೇಗೇನ ಹ್ರದೇ ಚಾಂದ್ರಮಸೇ ಶುಭೇ।
06007027e ತಯಾ ಹ್ಯುತ್ಪಾದಿತಃ ಪುಣ್ಯಃ ಸ ಹ್ರದಃ ಸಾಗರೋಪಮಃ।।
ನರೇಶ್ವರ! ಆ ಶೈಲದ ಶಿಖರದಿಂದ ಹಾಲಿನಂತೆ ಬೆಳ್ಳಗೆ, ಮೂರು ಕವಲುಗಳಾಗಿ, ಭಯಂಕರ ನಿರ್ಘಾತ ನಿಸ್ವನದೊಂದಿಗೆ, ಪುಣ್ಯೆ ಪುಣ್ಯತಮೆ, ಜುಷ್ಟೆ, ಗಂಗಾ, ಭಾಗೀರಥಿ, ಶುಭೆಯು ಅತಿ ವೇಗದಿಂದ ಧುಮಿಕಿ ಶುಭ ಚಾಂದ್ರಮಸ ಸರೋವರಕ್ಕೆ ಬೀಳುತ್ತಾಳೆ. ಅವಳಿಂದ ನಿರ್ಮಾಣಗೊಂಡ ಆ ಸರೋವರವು ಸಾಗರದಂತಿದೆ.
06007028a ತಾಂ ಧಾರಯಾಮಾಸ ಪುರಾ ದುರ್ಧರಾಂ ಪರ್ವತೈರಪಿ।
06007028c ಶತಂ ವರ್ಷಸಹಸ್ರಾಣಾಂ ಶಿರಸಾ ವೈ ಮಹೇಶ್ವರಃ।।
ಪರ್ವತಗಳಿಗೂ ಹೊರಲು ಅಸಾಧ್ಯವಾದ ಅವಳನ್ನು ಹಿಂದೆ ಮಹೇಶ್ವರನು ನೂರು ಸಾವಿರ ವರ್ಷಗಳು ತಲೆಯಲ್ಲಿ ಹೊತ್ತಿದ್ದನು2.
06007029a ಮೇರೋಸ್ತು ಪಶ್ಚಿಮೇ ಪಾರ್ಶ್ವೇ ಕೇತುಮಾಲೋ ಮಹೀಪತೇ।
06007029c ಜಂಬೂಷಂಡಶ್ಚ3 ತತ್ರೈವ ಸುಮಹಾನ್ನಂದನೋಪಮಃ।।
ಮಹೀಪತೇ! ಆ ಮೇರುವಿನ ಪಶ್ಚಿಮ ಪಾರ್ಶ್ವದಲ್ಲಿ ಕೇತುಮಾಲವೆಂಬ ಪ್ರದೇಶವಿದೆ. ಅಲ್ಲಿಯೇ ನಂದನದಂತಿರುವ ತುಂಬಾ ವಿಶಾಲವಾಗಿರುವ ಜಂಬೂಖಂಡವಿದೆ.
06007030a ಆಯುರ್ದಶ ಸಹಸ್ರಾಣಿ ವರ್ಷಾಣಾಂ ತತ್ರ ಭಾರತ।
06007030c ಸುವರ್ಣವರ್ಣಾಶ್ಚ ನರಾಃ ಸ್ತ್ರಿಯಶ್ಚಾಪ್ಸರಸೋಪಮಾಃ।।
ಭಾರತ! ಅಲ್ಲಿರುವವರ ಆಯುಸ್ಸು ಹತ್ತು ಸಾವಿರ ವರ್ಷಗಳು. ಮನುಷ್ಯರು ಬಂಗಾರದ ವರ್ಣದವರಾಗಿರುತ್ತಾರೆ ಮತ್ತು ಸ್ತ್ರೀಯರು ಅಪ್ಸರೆಯರಂತೆ ಇರುತ್ತಾರೆ.
06007031a ಅನಾಮಯಾ ವೀತಶೋಕಾ ನಿತ್ಯಂ ಮುದಿತಮಾನಸಾಃ।
06007031c ಜಾಯಂತೇ ಮಾನವಾಸ್ತತ್ರ ನಿಷ್ಟಪ್ತಕನಕಪ್ರಭಾಃ।।
ಅವರು ನಿತ್ಯ ಅನಾಮಯರೂ, ಶೋಕವಿಲ್ಲದವರೂ, ಮುದಿತಮಾನಸರೂ ಆಗಿರುತ್ತಾರೆ. ಅಲ್ಲಿ ಹುಟ್ಟುವ ಮಾನವರು ಕರಗಿಸಿದ ಅಪ್ಪಟ ಚಿನ್ನದ ಪ್ರಭೆಯನ್ನು ಹೊಂದಿರುತ್ತಾರೆ.
06007032a ಗಂಧಮಾದನಶೃಂಗೇಷು ಕುಬೇರಃ ಸಹ ರಾಕ್ಷಸೈಃ।
06007032c ಸಂವೃತೋಽಪ್ಸರಸಾಂ ಸಂಘೈರ್ಮೋದತೇ ಗುಹ್ಯಕಾಧಿಪಃ।।
ಗಂಧಮಾದನದ ಶೃಂಗದಲ್ಲಿ ಗುಹ್ಯಕಾಧಿಪ ಕುಬೇರನು ರಾಕ್ಷಸರೊಂದಿಗೆ ಮತ್ತು ಅಪ್ಸರಗಣಗಳೊಂದಿಗೆ ಸಂವೃತನಾಗಿ ಮೋದಿಸುತ್ತಾನೆ.
06007033a ಗಂಧಮಾದನಪಾದೇಷು ಪರೇಷ್ವಪರಗಂಡಿಕಾಃ।
06007033c ಏಕಾದಶ ಸಹಸ್ರಾಣಿ ವರ್ಷಾಣಾಂ ಪರಮಾಯುಷಃ।।
ಗಂಧಮಾದನದ ಬುಡದಲ್ಲಿ ಇನ್ನೊಂದುಕಡೆ ಇರುವ ಗಂಡಿಕರು ಹನ್ನೊಂದು ಸಾವಿರ ವರ್ಷಗಳ ಪರಮಾಯುಷಿಗಳಾಗಿರುತ್ತಾರೆ.
06007034a ತತ್ರ ಕೃಷ್ಣಾ ನರಾ ರಾಜಂಸ್ತೇಜೋಯುಕ್ತಾ ಮಹಾಬಲಾಃ।
06007034c ಸ್ತ್ರಿಯಶ್ಚೋತ್ಪಲಪತ್ರಾಭಾಃ ಸರ್ವಾಃ ಸುಪ್ರಿಯದರ್ಶನಾಃ।।
ರಾಜನ್! ಅಲ್ಲಿರುವ ಕಪ್ಪು ಮನುಷ್ಯರು ಮಹಾಬಲಶಾಲಿಗಳೂ, ತೇಜೋಯುಕ್ತರೂ ಆಗಿದ್ದು, ಸ್ತ್ರೀಯರೆಲ್ಲರೂ ಕುವಲಯದ ಕಾಂತಿಯಿಂದ ಕೂಡಿದ್ದು, ನೋಡಲು ತುಂಬಾ ಚೆನ್ನಾಗಿರುತ್ತಾರೆ.
06007035a ನೀಲಾತ್ಪರತರಂ ಶ್ವೇತಂ ಶ್ವೇತಾದ್ಧೈರಣ್ಯಕಂ ಪರಂ।
06007035c ವರ್ಷಮೈರಾವತಂ ನಾಮ ತತಃ ಶೃಂಗವತಃ ಪರಂ।।
ನೀಲದ ಆಚೆಯಿರುವುದು ಶ್ವೇತ. ಶ್ವೇತದ ಆಚೆಯಿರುವುದು ಹಿರಣ್ಯಕ. ಅನಂತರ ಐರಾವತ ವರ್ಷ ಮತ್ತು ಅದಕ್ಕೂ ಆಚೆ ಶೃಂಗವತ.
06007036a ಧನುಃಸಂಸ್ಥೇ ಮಹಾರಾಜ ದ್ವೇ ವರ್ಷೇ ದಕ್ಷಿಣೋತ್ತರೇ।
06007036c ಇಲಾವೃತಂ ಮಧ್ಯಮಂ ತು ಪಂಚ ವರ್ಷಾಣಿ ಚೈವ ಹ।।
ಮಹಾರಾಜ! ದಕ್ಷಿಣ ಮತ್ತು ಉತ್ತರಗಳಲ್ಲಿ ಧನುಸ್ಸಿನ ಆಕಾರದಲ್ಲಿ ಎರಡು ವರ್ಷಗಳಿವೆ. ಮಧ್ಯದಲ್ಲಿರುವ ಇಲಾವೃತವೂ ಸೇರಿ ಒಟ್ಟು ಐದು ವರ್ಷಗಳು4.
06007037a ಉತ್ತರೋತ್ತರಮೇತೇಭ್ಯೋ ವರ್ಷಮುದ್ರಿಚ್ಯತೇ ಗುಣೈಃ।
06007037c ಆಯುಷ್ಪ್ರಮಾಣಮಾರೋಗ್ಯಂ ಧರ್ಮತಃ ಕಾಮತೋಽರ್ಥತಃ।।
06007038a ಸಮನ್ವಿತಾನಿ ಭೂತಾನಿ ತೇಷು ವರ್ಷೇಷು ಭಾರತ।
06007038c ಏವಮೇಷಾ ಮಹಾರಾಜ ಪರ್ವತೈಃ ಪೃಥಿವೀ ಚಿತಾ।।
ಭಾರತ! ಈಗ ಹೇಳಿರುವ ವರ್ಷಗಳಲ್ಲಿ ವಾಸಿಸುವವರು ಗುಣಗಳಲ್ಲಿ, ಆಯುಷ್ಪ್ರಮಾಣಗಳಲ್ಲಿ, ಆರೋಗ್ಯದಲ್ಲಿ, ಧರ್ಮ-ಕಾಮ-ಅರ್ಥಗಳಲ್ಲಿ ಉತ್ತರೋತ್ತರ ಸಮನ್ವಿತರು5. ಮಹಾರಾಜ! ಹೀಗೆ ಪೃಥ್ವಿಯು ಪರ್ವತಗಳಿಂದ ಹೆಣೆಯಲ್ಪಟ್ಟಿದೆ.
06007039a ಹೇಮಕೂಟಸ್ತು ಸುಮಹಾನ್ಕೈಲಾಸೋ ನಾಮ ಪರ್ವತಃ।
06007039c ಯತ್ರ ವೈಶ್ರವಣೋ ರಾಜಾ ಗುಹ್ಯಕೈಃ ಸಹ ಮೋದತೇ।।
ಕೈಲಾಸ ಪರ್ವತದ ಒಂದು ಭಾಗವಾಗಿರುವ ಹೇಮಕೂಟವೆಂಬ ದೊಡ್ಡ ಪರ್ವತದಲ್ಲಿ ರಾಜಾ ವೈಶ್ರವಣನು ಗುಹ್ಯಕರೊಂದಿಗೆ ಮೋದಿಸುತ್ತಾನೆ.
06007040a ಅಸ್ತ್ಯುತ್ತರೇಣ ಕೈಲಾಸಂ ಮೈನಾಕಂ ಪರ್ವತಂ ಪ್ರತಿ।
06007040c ಹಿರಣ್ಯಶೃಂಗಃ ಸುಮಹಾನ್ದಿವ್ಯೋ ಮಣಿಮಯೋ ಗಿರಿಃ।।
ಈ ಕೈಲಾಸದಿಂದ ಉತ್ತರಕ್ಕೆ ಮೈನಾಕ ಪರ್ವತದ ಕಡೆ ಹಿರಣ್ಯಶೃಂಗವೆಂಬ ಅತಿ ದೊಡ್ಡ, ದಿವ್ಯ ಮಣಿಮಯ ಗಿರಿಯಿದೆ.
06007041a ತಸ್ಯ ಪಾರ್ಶ್ವೇ ಮಹದ್ದಿವ್ಯಂ ಶುಭಂ ಕಾಂಚನವಾಲುಕಂ।
06007041c ರಮ್ಯಂ ಬಿಂದುಸರೋ ನಾಮ ಯತ್ರ ರಾಜಾ ಭಗೀರಥಃ।
06007041e ದೃಷ್ಟ್ವಾ ಭಾಗೀರಥೀಂ ಗಂಗಾಮುವಾಸ ಬಹುಲಾಃ ಸಮಾಃ।।
ಅದರ ಮಗ್ಗುಲಲ್ಲಿ ಮಹಾ ದಿವ್ಯವಾದ, ಶುಭ ಕಾಂಚನವಾಲುಕವಿದೆ. ಅಲ್ಲಿ ಬಿಂದುವೆಂಬ ಹೆಸರಿನ ರಮ್ಯ ಸರೋವರದಲ್ಲಿ ರಾಜಾ ಭಗೀರಥನು ಗಂಗೆ ಭಾಗೀರಥಿಯನ್ನು ಸಾಕ್ಷಾತ್ಕರಿಸಿ ಬಹಳಷ್ಟು ವರ್ಷಗಳು ವಾಸಿಸಿದನು.
06007042a ಯೂಪಾ ಮಣಿಮಯಾಸ್ತತ್ರ ಚಿತ್ಯಾಶ್ಚಾಪಿ ಹಿರಣ್ಮಯಾಃ।
06007042c ತತ್ರೇಷ್ಟ್ವಾ ತು ಗತಃ ಸಿದ್ಧಿಂ ಸಹಸ್ರಾಕ್ಷೋ ಮಹಾಯಶಾಃ।।
ಅಲ್ಲಿಯ ನೆಲವು ಹಿರಣ್ಮಯವು, ಯೂಪಗಳು ಮಣಿಮಯವು. ಅಲ್ಲಿ ಸಹಸ್ರಾಕ್ಷನು ಮಹಾಯಶ ಇಷ್ಟಿಗಳನ್ನು ಮಾಡಿ ಸಿದ್ಧಿಯನ್ನು ಪಡೆದನು.
06007043a ಸೃಷ್ಟ್ವಾ ಭೂತಪತಿರ್ಯತ್ರ ಸರ್ವಲೋಕಾನ್ಸನಾತನಃ।
06007043c ಉಪಾಸ್ಯತೇ ತಿಗ್ಮತೇಜಾ ವೃತೋ ಭೂತೈಃ ಸಮಾಗತೈಃ।
06007043e ನರನಾರಾಯಣೌ ಬ್ರಹ್ಮಾ ಮನುಃ ಸ್ಥಾಣುಶ್ಚ ಪಂಚಮಃ।।
ಅಲ್ಲಿ ಸರ್ವಲೋಕಗಳನ್ನೂ ಸೃಷ್ಟಿಸಿ ಭೂತಪತಿ, ಸನಾತನನು ತಿಗ್ಮತೇಜಸ್ಸಿನಿಂದ ಆವೃತನಾಗಿ ಭೂತಗಳಲ್ಲಿ ಸಮಾಗತನಾಗಿ ಉಪಾಸಿಸಲ್ಪಡುತ್ತಾನೆ. ಅಲ್ಲಿ ನರ-ನಾರಾಯಣರಿಬ್ಬರು, ಬ್ರಹ್ಮ, ಮನು ಮತ್ತು ಐದನೆಯವನಾಗಿ ಸ್ಥಾಣುವು ಇದ್ದಾರೆ.
06007044a ತತ್ರ ತ್ರಿಪಥಗಾ ದೇವೀ ಪ್ರಥಮಂ ತು ಪ್ರತಿಷ್ಠಿತಾ।
06007044c ಬ್ರಹ್ಮಲೋಕಾದಪಕ್ರಾಂತಾ ಸಪ್ತಧಾ ಪ್ರತಿಪದ್ಯತೇ।।
06007045a ವಸ್ವೋಕಸಾರಾ ನಲಿನೀ ಪಾವನಾ ಚ ಸರಸ್ವತೀ।
06007045c ಜಂಬೂನದೀ ಚ ಸೀತಾ ಚ ಗಂಗಾ ಸಿಂಧುಶ್ಚ ಸಪ್ತಮೀ।।
ಅಲ್ಲಿ ತ್ರಿಪಥಗೆ ದೇವಿಯು ಮೊದಲು ಪ್ರತಿಷ್ಠಿತಳಾಗಿದ್ದಳು. ಬ್ರಹ್ಮಲೋಕದಿಂದ ಅವಳು ಏಳು ಧಾರೆಗಳಾಗಿ – ವಸ್ವೋಕಸಾರಾ ನಲಿನೀ, ಪಾವನೀ, ಸರಸ್ವತೀ, ಜಂಬೂನದೀ, ಸೀತಾ, ಗಂಗಾ ಮತ್ತು ಏಳನೆಯದಾಗಿ ಸಿಂಧು - ಕೆಳಗಿಳಿದಳೆಂದು ಹೇಳುತ್ತಾರೆ.
06007046a ಅಚಿಂತ್ಯಾ ದಿವ್ಯಸಂಕಲ್ಪಾ ಪ್ರಭೋರೇಷೈವ ಸಂವಿಧಿಃ।
06007046c ಉಪಾಸತೇ ಯತ್ರ ಸತ್ರಂ ಸಹಸ್ರಯುಗಪರ್ಯಯೇ।।
ಅವಳು ಅಚಿಂತ್ಯೆ, ದಿವ್ಯಸಂಕಲ್ಪೆ ಮತ್ತು ಪ್ರಭುವು ಇಲ್ಲಿಯೇ ಸಂವಿಧಾನನಾಗಿರುವನು. ಇಲ್ಲಿ ಸಹಸ್ರಯುಗಪರ್ಯಂತವಾಗಿ ಸತ್ರಗಳಿಂದ ಉಪಾಸನೆ ನಡೆಯುತ್ತಿತ್ತು.
06007047a ದೃಶ್ಯಾದೃಶ್ಯಾ ಚ ಭವತಿ ತತ್ರ ತತ್ರ ಸರಸ್ವತೀ।
06007047c ಏತಾ ದಿವ್ಯಾಃ ಸಪ್ತ ಗಂಗಾಸ್ತ್ರಿಷು ಲೋಕೇಷು ವಿಶ್ರುತಾಃ।।
ಸರಸ್ವತಿಯು ಅಲ್ಲಲ್ಲಿ ಕಾಣುತ್ತಾಳೆ ಮತ್ತು ಅದೃಷ್ಯಳಾಗುತ್ತಾಳೆ. ಈ ದಿವ್ಯ ಸಪ್ತ ಗಂಗೆಯರು ಮೂರು ಲೋಕಗಳಲ್ಲಿ ವಿಶ್ರುತರು.
06007048a ರಕ್ಷಾಂಸಿ ವೈ ಹಿಮವತಿ ಹೇಮಕೂಟೇ ತು ಗುಹ್ಯಕಾಃ।
06007048c ಸರ್ಪಾ ನಾಗಾಶ್ಚ ನಿಷಧೇ ಗೋಕರ್ಣೇ ಚ ತಪೋಧನಾಃ।।
ಹಿಮವತ್ಪರ್ವತದಲ್ಲಿ ರಾಕ್ಷಸರು, ಹೇಮಕೂಟದಲ್ಲಿ ಗುಹ್ಯಕರು ಇರುವರು. ನಿಷಧ ಪರ್ವತದಲ್ಲಿ ಸರ್ಪರೂ, ನಾಗರೂ ಮತ್ತು ಗೋಕರ್ಣರೆಂಬ ತಪೋಧನರೂ ಇದ್ದಾರೆ.
06007049a ದೇವಾಸುರಾಣಾಂ ಚ ಗೃಹಂ ಶ್ವೇತಃ ಪರ್ವತ ಉಚ್ಯತೇ।
06007049c ಗಂಧರ್ವಾ ನಿಷಧೇ ಶೈಲೇ ನೀಲೇ ಬ್ರಹ್ಮರ್ಷಯೋ ನೃಪ।
06007049e ಶೃಂಗವಾಂಸ್ತು ಮಹಾರಾಜ ಪಿತೄಣಾಂ ಪ್ರತಿಸಂಚರಃ।।
ನೃಪ! ಮಹಾರಾಜ! ಶ್ವೇತ ಪರ್ವತವನ್ನು ದೇವಾಸುರರ ಗೃಹವೆಂದು, ನಿಷಧ ಪರ್ವತವನ್ನು ಗಂಧರ್ವರ ಗೃಹವೆಂದೂ, ನೀಲ ಪರ್ವತವನ್ನು ಬ್ರಹ್ಮರ್ಷಿಗಳ ಗೃಹವೆಂದೂ ಹೇಳುತ್ತಾರೆ. ಶೃಂಗ ಪರ್ವತದಲ್ಲಿ ಪಿತೃಗಳು ಸಂಚರಿಸಿರುತ್ತಾರೆ.
06007050a ಇತ್ಯೇತಾನಿ ಮಹಾರಾಜ ಸಪ್ತ ವರ್ಷಾಣಿ ಭಾಗಶಃ।
06007050c ಭೂತಾನ್ಯುಪನಿವಿಷ್ಟಾನಿ ಗತಿಮಂತಿ ಧ್ರುವಾಣಿ ಚ।।
ಮಹಾರಾಜ! ಇವೇ ವಿಭಜನೆಗೊಂಡಿರುವ ಏಳು ವರ್ಷಗಳು. ಚಲಿಸುವ ಮತ್ತು ಅಚಲವಾಗಿರುವವು ಇವುಗಳಲ್ಲಿ ಕೂಡಿವೆ.
06007051a ತೇಷಾಂ ಋದ್ಧಿರ್ಬಹುವಿಧಾ ದೃಶ್ಯತೇ ದೈವಮಾನುಷೀ।
06007051c ಅಶಕ್ಯಾ ಪರಿಸಂಖ್ಯಾತುಂ ಶ್ರದ್ಧೇಯಾ ತು ಬುಭೂಷತಾ।।
ಅವುಗಳಲ್ಲಿ ದೈವ-ಮಾನುಷವಾದ ಬಹುವಿಧದ ಲಕ್ಷಣಗಳು ಕಾಣುತ್ತವೆ. ಅವುಗಳನ್ನು ಎಣಿಸುವುದು ಅಶಕ್ಯ. ಶ್ರದ್ಧೆಯುಳ್ಳವರು ಇದನ್ನು ನಂಬುತ್ತಾರೆ.
06007052a ಯಾಂ ತು ಪೃಚ್ಛಸಿ ಮಾ ರಾಜನ್ದಿವ್ಯಾಮೇತಾಂ ಶಶಾಕೃತಿಂ।
06007052c ಪಾರ್ಶ್ವೇ ಶಶಸ್ಯ ದ್ವೇ ವರ್ಷೇ ಉಭಯೇ ದಕ್ಷಿಣೋತ್ತರೇ।
06007052e ಕರ್ಣೌ ತು ನಾಗದ್ವೀಪಂ ಚ ಕಶ್ಯಪದ್ವೀಪಮೇವ ಚ।।
ರಾಜನ್! ದಿವ್ಯ ಶಶಾಕೃತಿಯಲ್ಲಿರುವ ಇವುಗಳ ಕುರಿತು ನೀನು ನನ್ನನ್ನು ಕೇಳಿದೆಯಷ್ಟೇ? ಆ ಶಶದ ಎರಡೂ ಪಕ್ಕಗಳಲ್ಲಿ, ಎಡ-ಬಲಗಳಲ್ಲಿ, ಎರಡು ವರ್ಷಗಳಿವೆ. ಈ ನಾಗದ್ವೀಪ ಮತ್ತು ಕಶ್ಯಪ ದ್ವೀಪಗಳು ಆ ಮೊಲದ ಕಿವಿಗಳಿದ್ದಂತೆ.
06007053a ತಾಮ್ರವರ್ಣಃ ಶಿರೋ ರಾಜನ್ ಶ್ರೀಮಾನ್ಮಲಯಪರ್ವತಃ।
06007053c ಏತದ್ದ್ವಿತೀಯಂ ದ್ವೀಪಸ್ಯ ದೃಶ್ಯತೇ ಶಶಸಂಸ್ಥಿತಂ।।
ರಾಜನ್! ತಾಮ್ರವರ್ಣದ ಶ್ರೀಮಾನ್ ಮಲಯಪರ್ವತವು ಮೊಲದ ಆಕಾರದಲ್ಲಿರುವ ದ್ವೀಪದ ಶಿರದಂತಿರುವ ಎರಡನೆಯದು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ಭೂಮ್ಯಾದಿಪರಿಮಾಣವಿವರಣೇ ಸಪ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ಭೂಮ್ಯಾದಿಪರಿಮಾಣವಿವರಣ ಎನ್ನುವ ಏಳನೇ ಅಧ್ಯಾಯವು.
-
ವರ್ಷಾಣಿ ಎಂದರೆ ಖಂಡಗಳು. ಮೇಲೆ ಹೇಳಿದ ಆರು ಪರ್ವತಗಳ ನಡುವೆ ಐದು ಖಂಡಗಳೂ ಪೂರ್ವ-ಪಶ್ಚಿಮ ಸಮುದ್ರಾಂತವಾಗಿ ಎರಡು ಖಂಡಗಳೂ - ಒಟ್ಟಿಗೆ ಏಳು ಖಂಡಗಳೆಂದು ವ್ಯಾಖ್ಯಾನಕಾರರು ಅರ್ಥಮಾಡಿರುತ್ತಾರೆ. ↩︎
-
ಅರಣ್ಯಕಪರ್ವದ ಅಧ್ಯಾಯ 108ರಲ್ಲಿ ಗಂಗಾವತರಣದ ಸಮಯದಲ್ಲಿ ಶಿವನು ಗಂಗೆಯನ್ನು ಧರಿಸಿದ ಪುರಾಣ ಕಥೆಯನ್ನು ಲೋಮಶನು ಯುಧಿಷ್ಠಿರನಿಗೆ ಹೇಳಿದುದಿದೆ. ↩︎
-
ಜಂಬೂಖಂಡಸ್ತು ಎಂಬ ಪಾಠಾಂತವಿದೆ. ↩︎
-
ಧನುಸ್ಸಿನ ರೂಪದಲ್ಲಿರುವ ದಕ್ಷಿಣೋತ್ತರ ಪರ್ವತಗಳ ಸಾಲಿನ ದಕ್ಷಿಣ ತುದಿಯಲ್ಲಿ ಶ್ವೇತ-ಹಿರಣ್ಯಕಗಳು, ಮಧ್ಯದಲ್ಲಿ ಇಲಾವೃತ, ಅನಂತರ ಹರಿವರ್ಷ-ಹೈಮವತ ಖಂಡಗಳು, ಉತ್ತರದ ತುದಿಯಲ್ಲಿ ಐರಾವತಖಂಡ ಮತ್ತು ಭರತಖಂಡ - ಹೀಗೆ ಏಳು ಖಂಡಗಳಿವೆ. ಈ ಏಳು ಖಂಡಗಳ ಸ್ಥಾನವು ಈ ಕೆಳಗಿನಂತಿವೆ: (1) ಹಿಮಪತ್ಪರ್ವತದ ದಕ್ಷಿಣಭಾಗದಲ್ಲಿ ಭರತಖಂಡ (2) ಹಿಮವತ್ಪರ್ವತದ ಉತ್ತರ ಭಾಗದಲ್ಲಿ ಹೈಮವತ ಖಂಡ (3) ಹೇಮಕೂಟಪರ್ವತದ ಉತ್ತರದಲ್ಲಿ ಹರಿವರ್ಷ (4) ನಿಷಧಪರ್ವತದ ಉತ್ತರದಲ್ಲಿ ನೀಲಪರ್ವತದ ಉತ್ತರದಲ್ಲಿ ಮೇರುಪರ್ವತದ ಸುತ್ತಲೂ ಇಲಾವೃತಖಂಡ - ಇದರಲ್ಲಿ ಭದಶ್ವ ಅಥವಾ ರಮ್ಯಕ ಮತ್ತು ಕೇತುಮಾಲ ಖಂಡಗಳಿವೆಯೆಂದೂ - ಒಟ್ಟು ನವಮಖಂಡಗಳೆಂದೂ ಹೇಳುತ್ತಾರೆ (5) ನೀಲಪರ್ವತದ ಉತ್ತರದಲ್ಲಿ ಶ್ವೇತವರ್ಷ (6) ಶ್ವೇತಪರ್ವತದ ಉತ್ತರದಲ್ಲಿ ಹೈರಣ್ಯಕವರ್ಷ (7) ಶೃಂಗವತ್ಪರ್ವತದ ಸುತ್ತಲೂ ಇರುವುದು ಐರಾವತವರ್ಷ. ↩︎
-
ಭಾರತ ವರ್ಷದಿಂದ ಪ್ರಾರಂಭಿಸಿ ಅನುಕ್ರಮವಾಗಿ ಆ ಎಲ್ಲ ಖಂಡಗಳೂ ಉತ್ತರೋತ್ತರವಾಗಿ ಅತಿಶಯಿಸುತ್ತವೆ. ಭಾರತದಲ್ಲಿ ಆಯುಃಪ್ರಮಾಣವು 120 ವರ್ಷಗಳಾದರೆ ಹೈಮವತಖಂಡದಲ್ಲಿ ಸಾವಿರ ವರ್ಷಗಳು. ಈ ರೀತಿ ಒಂದು ಖಂಡದಿಂದ ಮುತ್ತೊಂದು ಖಂಡಕ್ಕೆ ಆಯುರಾರೋಗ್ಯ ಧರ್ಮಕಾಮಾರ್ಥಗಳು ಅಧಿಕವಾಗುತ್ತಾ ಹೋಗುತ್ತವೆ. ↩︎