ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಜಂಬೂಖಂಡವಿನಿರ್ಮಾಣ ಪರ್ವ
ಅಧ್ಯಾಯ 5
ಸಾರ
“ಭೂಮಿಯ ಐಶ್ವರ್ಯವನ್ನು ಇಚ್ಛಿಸಿ ಈ ಎಲ್ಲ ರಾಜರುಗಳೂ ಯುದ್ಧಕ್ಕಾಗಿ ಇಲ್ಲಿ ಸೇರಿದ್ದಾರೆಂದರೆ ಭೂಮಿಯು ಮಹಾ ಗುಣವತಿಯಾಗಿರಬೇಕು; ಭೂಮಿಯ ಗುಣಗಳನ್ನು ಹೇಳು” ಎಂದು ಧೃತರಾಷ್ಟ್ರನು ಕೇಳಲು ಸಂಜಯನು ಭೂಮಿಯ ಗುಣಗಳನ್ನು ಹೇಳಲು ಪ್ರಾರಂಭಿಸಿದುದು (1-21).
06005001 ವೈಶಂಪಾಯನ ಉವಾಚ।
06005001a ಏವಮುಕ್ತ್ವಾ ಯಯೌ ವ್ಯಾಸೋ ಧೃತರಾಷ್ಟ್ರಾಯ ಧೀಮತೇ।
06005001c ಧೃತರಾಷ್ಟ್ರೋಽಪಿ ತಚ್ಚ್ರುತ್ವಾ ಧ್ಯಾನಮೇವಾನ್ವಪದ್ಯತ।।
ವೈಶಂಪಾಯನನು ಹೇಳಿದನು: “ಹೀಗೆ ಧೀಮತ ಧೃತರಾಷ್ಟ್ರನಿಗೆ ಹೇಳಿ ವ್ಯಾಸನು ಹೋದನು. ಅದನ್ನು ಕೇಳಿ ಧೃತರಾಷ್ಟ್ರನಾದರೋ ಯೋಚನೆಯಲ್ಲಿ ಬಿದ್ದನು.
06005002a ಸ ಮುಹೂರ್ತಮಿವ ಧ್ಯಾತ್ವಾ ವಿನಿಃಶ್ವಸ್ಯ ಮುಹುರ್ಮುಹುಃ।
06005002c ಸಂಜಯಂ ಸಂಶಿತಾತ್ಮಾನಮಪೃಚ್ಛದ್ ಭರತರ್ಷಭ।।
ಭರತರ್ಷಭ! ಒಂದು ಕ್ಷಣ ಆಲೋಚಿಸಿ, ಮತ್ತೆ ಮತ್ತೆ ನಿಟ್ಟಿಸಿರು ಬಿಡುತ್ತಾ ಸಂಶಿತಾತ್ಮ ಸಂಜಯನನ್ನು ಕೇಳಿದನು:
06005003a ಸಂಜಯೇಮೇ ಮಹೀಪಾಲಾಃ ಶೂರಾ ಯುದ್ಧಾಭಿನಂದಿನಃ।
06005003c ಅನ್ಯೋನ್ಯಮಭಿನಿಘ್ನಂತಿ ಶಸ್ತ್ರೈರುಚ್ಚಾವಚೈರಪಿ।।
“ಸಂಜಯ! ಯುದ್ಧದಲ್ಲಿ ಸಂತೋಷಪಡುವ ಈ ಶೂರ ಮಹೀಪಾಲರು ಅನ್ಯೋನ್ಯರನ್ನು ಶಸ್ತ್ರಗಳಿಂದ ಹೊಡೆಯುವವರಿದ್ದಾರೆ.
06005004a ಪಾರ್ಥಿವಾಃ ಪೃಥಿವೀಹೇತೋಃ ಸಮಭಿತ್ಯಕ್ತಜೀವಿತಾಃ।
06005004c ನ ಚ ಶಾಮ್ಯಂತಿ ನಿಘ್ನಂತೋ ವರ್ಧಯಂತೋ ಯಮಕ್ಷಯಂ।।
ಭೂಮಿಗಾಗಿ ಈ ಪಾರ್ಥಿವರು ತಮ್ಮ ಜೀವವನ್ನು ತೊರೆದವರಾಗಿ ಪರಸ್ಪರರನ್ನು ಕೊಂದು ಯಮಕ್ಷಯವನ್ನು ವೃದ್ಧಿಸದೇ ಶಾಂತರಾಗುವವರಲ್ಲ.
06005005a ಭೌಮಮೈಶ್ವರ್ಯಮಿಚ್ಛಂತೋ ನ ಮೃಷ್ಯಂತೇ ಪರಸ್ಪರಂ।
06005005c ಮನ್ಯೇ ಬಹುಗುಣಾ ಭೂಮಿಸ್ತನ್ಮಮಾಚಕ್ಷ್ವ ಸಂಜಯ।।
ಭೂಮಿಯ ಐಶ್ವರ್ಯವನ್ನು ಇಚ್ಛಿಸುವ ಅವರು ಪರಸ್ಪರರನ್ನು ಸಹಿಸುತ್ತಿಲ್ಲ. ಹಾಗಿದ್ದರೆ ಭೂಮಿಗೆ ಬಹಳ ಗುಣಗಳಿರಬಹುದೆಂದು ನನಗನ್ನಿಸುತ್ತದೆ. ಅವುಗಳನ್ನು ನನಗೆ ಹೇಳು ಸಂಜಯ!
06005006a ಬಹೂನಿ ಚ ಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ।
06005006c ಕೋಟ್ಯಶ್ಚ ಲೋಕವೀರಾಣಾಂ ಸಮೇತಾಃ ಕುರುಜಾಂಗಲೇ।।
ಬಹಳಷ್ಟು ಸಹಸ್ರ, ಲಕ್ಷ, ಕೋಟಿ, ಅರ್ಬುದ ಸಂಖ್ಯೆಗಳಲ್ಲಿ ಲೋಕವೀರರು ಕುರಜಾಂಗಲದಲ್ಲಿ ಬಂದು ಸೇರಿದ್ದಾರೆ.
06005007a ದೇಶಾನಾಂ ಚ ಪರೀಮಾಣಂ ನಗರಾಣಾಂ ಚ ಸಂಜಯ।
06005007c ಶ್ರೋತುಮಿಚ್ಛಾಮಿ ತತ್ತ್ವೇನ ಯತ ಏತೇ ಸಮಾಗತಾಃ।।
ಹೀಗೆ ಬಂದಿರುವವರ ದೇಶ ನಗರಗಳ ಲಕ್ಷಣಗಳ ಕುರಿತು ಸರಿಯಾಗಿ ಕೇಳಲು ಬಯಸುತ್ತೇನೆ ಸಂಜಯ!
06005008a ದಿವ್ಯಬುದ್ಧಿಪ್ರದೀಪೇನ ಯುಕ್ತಸ್ತ್ವಂ ಜ್ಞಾನಚಕ್ಷುಷಾ।
06005008c ಪ್ರಸಾದಾತ್ತಸ್ಯ ವಿಪ್ರರ್ಷೇರ್ವ್ಯಾಸಸ್ಯಾಮಿತತೇಜಸಃ।।
ಆ ಅಮಿತ ತೇಜಸ್ವಿ ವಿಪ್ರರ್ಷಿ ವ್ಯಾಸದ ಕರುಣೆಯಿಂದ ನೀನು ದಿವ್ಯ ಬುದ್ಧಿಯ ದೀಪದ ಬೆಳಕಿನಿಂದ ಜ್ಞಾನದ ದೃಷ್ಟಿಯನ್ನು ಪಡೆದುಕೊಂಡಿರುವೆ.”
06005009 ಸಂಜಯ ಉವಾಚ।
06005009a ಯಥಾಪ್ರಜ್ಞಂ ಮಹಾಪ್ರಾಜ್ಞ ಭೌಮಾನ್ವಕ್ಷ್ಯಾಮಿ ತೇ ಗುಣಾನ್।
06005009c ಶಾಸ್ತ್ರಚಕ್ಷುರವೇಕ್ಷಸ್ವ ನಮಸ್ತೇ ಭರತರ್ಷಭ।।
ಸಂಜಯನು ಹೇಳಿದನು: “ಭರತರ್ಷಭ! ಮಹಾಪ್ರಾಜ್ಞ! ನಿನಗೆ ನಮನಗಳು. ನನಗೆ ತಿಳಿದಂತೆ ಭೂಮಿಯ ಗುಣಗಳನ್ನು ಹೇಳುತ್ತೇನೆ. ನಿನ್ನ ಶಾಸ್ತ್ರಗಳ ಕಣ್ಣುಗಳಿಂದ ಇದನ್ನು ಕೇಳು.
06005010a ದ್ವಿವಿಧಾನೀಹ ಭೂತಾನಿ ತ್ರಸಾನಿ ಸ್ಥಾವರಾಣಿ ಚ।
06005010c ತ್ರಸಾನಾಂ ತ್ರಿವಿಧಾ ಯೋನಿರಂಡಸ್ವೇದಜರಾಯುಜಾಃ।।
ಇಲ್ಲಿ ಇರುವವುಗಳು ಎರಡು ರೀತಿಯವು: ಚಲಿಸುವವು ಮತ್ತು ಚಲಿಸದೇ ಇರುವವು. ಚಲಿಸುವವುಗಳಲ್ಲಿ ಮೂರು ವಿಧಗಳವು - ಯೋನಿಯಿಂದ ಜನಿಸುವವು, ಅಂಡದಿಂದ ಜನಿಸುವವು ಮತ್ತು ಉಷ್ಣ-ತೇವಗಳಿಂದ ಜನಿಸುವವು.
06005011a ತ್ರಸಾನಾಂ ಖಲು ಸರ್ವೇಷಾಂ ಶ್ರೇಷ್ಠಾ ರಾಜನ್ಜರಾಯುಜಾಃ।
06005011c ಜರಾಯುಜಾನಾಂ ಪ್ರವರಾ ಮಾನವಾಃ ಪಶವಶ್ಚ ಯೇ।।
ರಾಜನ್! ಚಲಿಸುವವುಗಳಲ್ಲಿ ಎಲ್ಲರಿಗಿಂತಲೂ ಶ್ರೇಷ್ಠವಾದವು ಯೋನಿಯಿಂದ ಹುಟ್ಟಿದವು. ಯೋನಿಜನ್ಮರಲ್ಲಿ ಪ್ರಮುಖರಾದವರು ಮಾನವರು ಮತ್ತು ಪಶುಗಳು.
06005012a ನಾನಾರೂಪಾಣಿ ಬಿಭ್ರಾಣಾಸ್ತೇಷಾಂ ಭೇದಾಶ್ಚತುರ್ದಶ।
06005012c ಅರಣ್ಯವಾಸಿನಃ ಸಪ್ತ ಸಪ್ತೈಷಾಂ ಗ್ರಾಮವಾಸಿನಃ।।
ನಾನಾರೂಪಗಳಲ್ಲಿರುವ ಇವುಗಳಲ್ಲಿ ಹದಿನಾಲ್ಕು ಭೇದಗಳಿವೆ. ಅವುಗಳಲ್ಲಿ ಏಳು ಅರಣ್ಯಗಳಲ್ಲಿ ವಾಸಿಸುವಂಥವು (ವನ್ಯ) ಮತ್ತು ಇನ್ನೊಂದು ಏಳು ಗ್ರಾಮವಾಸಿಗಳು.
06005013a ಸಿಂಹವ್ಯಾಘ್ರವರಾಹಾಶ್ಚ ಮಹಿಷಾ ವಾರಣಾಸ್ತಥಾ।
06005013c ಋಕ್ಷಾಶ್ಚ ವಾನರಾಶ್ಚೈವ ಸಪ್ತಾರಣ್ಯಾಃ ಸ್ಮೃತಾ ನೃಪ।।
ನೃಪ! ಸಿಂಹ, ಹುಲಿ, ಹಂದಿ, ಕಾಡೆಮ್ಮೆ, ಆನೆ, ಕರಡಿ, ಮತ್ತು ಮಂಗಗಳು ಈ ಏಳು ಅರಣ್ಯವಾಸಿಗಳೆಂದು ಹೇಳುತ್ತಾರೆ.
06005014a ಗೌರಜೋ ಮನುಜೋ ಮೇಷೋ ವಾಜ್ಯಶ್ವತರಗರ್ದಭಾಃ।
06005014c ಏತೇ ಗ್ರಾಮ್ಯಾಃ ಸಮಾಖ್ಯಾತಾಃ ಪಶವಃ ಸಪ್ತ ಸಾಧುಭಿಃ।।
ಹಸು, ಆಡು, ಕುರಿ, ಮನುಷ್ಯ, ಕುದುರೆ, ಹೇಸರಗತ್ತೆ ಮತ್ತು ಕತ್ತೆ ಈ ಏಳು ಪಶುಗಳು ಗ್ರಾಮ್ಯವೆಂದೂ ಸಾಧುಗಳೆಂದೂ ಹೇಳಲ್ಪಟ್ಟಿವೆ.
06005015a ಏತೇ ವೈ ಪಶವೋ ರಾಜನ್ಗ್ರಾಮ್ಯಾರಣ್ಯಾಶ್ಚತುರ್ದಶ।
06005015c ವೇದೋಕ್ತಾಃ ಪೃಥಿವೀಪಾಲ ಯೇಷು ಯಜ್ಞಾಃ ಪ್ರತಿಷ್ಠಿತಾಃ।।
ರಾಜನ್! ಈ ಹದಿನಾಲ್ಕು ಗ್ರಾಮ್ಯ ಮತ್ತು ಅರಣ್ಯ ಪಶುಗಳ ಕುರಿತು ವೇದಗಳಲ್ಲಿ ಹೇಳಲಾಗಿದೆ1. ಪೃಥಿವೀಪಾಲ! ಇವುಗಳ ಮೇಲೆಯೇ ಯಜ್ಞಗಳು ಅವಲಂಬಿಸಿವೆ.
06005016a ಗ್ರಾಮ್ಯಾಣಾಂ ಪುರುಷಃ ಶ್ರೇಷ್ಠಃ ಸಿಂಹಶ್ಚಾರಣ್ಯವಾಸಿನಾಂ।
06005016c ಸರ್ವೇಷಾಮೇವ ಭೂತಾನಾಮನ್ಯೋನ್ಯೇನಾಭಿಜೀವನಂ।।
ಗ್ರಾಮ್ಯ ಪಶುಗಳಲ್ಲಿ ಪುರುಷನು ಶ್ರೇಷ್ಠ2 ಮತ್ತು ಅರಣ್ಯವಾಸಿಗಳಲ್ಲಿ ಸಿಂಹವು ಶ್ರೇಷ್ಠ. ಅನ್ಯೋನ್ಯರೊಂದಿಗೆ ಜೀವನವನ್ನು ಅವಲಂಬಿಸಿಕೊಂಡು ಇವೆಲ್ಲವೂ ಜೀವಿಸುತ್ತವೆ.
06005017a ಉದ್ಭಿಜ್ಜಾಃ3 ಸ್ಥಾವರಾಃ ಪ್ರೋಕ್ತಾಸ್ತೇಷಾಂ ಪಂಚೈವ ಜಾತಯಃ।
06005017c ವೃಕ್ಷಗುಲ್ಮಲತಾವಲ್ಲ್ಯಸ್ತ್ವಕ್ಸಾರಾಸ್ತೃಣಜಾತಯಃ।।
ಸಸ್ಯಗಳು ಚಲಿಸದೇ ಇರುವವು. ಇವುಗಳಲ್ಲಿ ಐದು ಜಾತಿಗಳಿವೆಯೆಂದು ಹೇಳುತ್ತಾರೆ: ವೃಕ್ಷ (ಮರ), ಗುಲ್ಮ4, ಲತೆ5, ವಲ್ಲಿ6, ಮತ್ತು ತ್ವಕ್ಷಾರ7ಗಳು.
06005018a ಏಷಾಂ ವಿಂಶತಿರೇಕೋನಾ ಮಹಾಭೂತೇಷು ಪಂಚಸು।
06005018c ಚತುರ್ವಿಂಶತಿರುದ್ದಿಷ್ಟಾ ಗಾಯತ್ರೀ ಲೋಕಸಮ್ಮತಾ।।
ಈ ಹತ್ತೊಂಭತ್ತು ಮತ್ತು ಐದು ಮಹಾಭೂತಗಳು - ಒಟ್ಟು ಇಪ್ಪತ್ನಾಲ್ಕು ಗಾಯತ್ರಿಯೆಂದು ಲೋಕಸಮ್ಮತಗೊಂಡಿದೆ8.
06005019a ಯ ಏತಾಂ ವೇದ ಗಾಯತ್ರೀಂ ಪುಣ್ಯಾಂ ಸರ್ವಗುಣಾನ್ವಿತಾಂ।
06005019c ತತ್ತ್ವೇನ ಭರತಶ್ರೇಷ್ಠ ಸ ಲೋಕಾನ್ನ ಪ್ರಣಶ್ಯತಿ।।
ಭರತಶ್ರೇಷ್ಠ! ಈ ಪುಣ್ಯೆ ಸರ್ವಗುಣಾನ್ವಿತೆ ಗಾಯತ್ರಿಯನ್ನು ತತ್ವಶಃ9 ತಿಳಿದುಕೊಂಡವರು ಈ ಲೋಕಗಳಲ್ಲಿ ನಾಶಹೊಂದುವುದಿಲ್ಲ.
06005020a ಭೂಮೌ ಹಿ ಜಾಯತೇ ಸರ್ವಂ ಭೂಮೌ ಸರ್ವಂ ಪ್ರಣಶ್ಯತಿ।
06005020c ಭೂಮಿಃ ಪ್ರತಿಷ್ಠಾ ಭೂತಾನಾಂ ಭೂಮಿರೇವ ಪರಾಯಣಂ।।
ಇವೆಲ್ಲವೂ ಭೂಮಿಯಲ್ಲಿಯೇ ಹುಟ್ಟುತ್ತವೆ. ಮತ್ತು ಎಲ್ಲವೂ ಭೂಮಿಯಲ್ಲಿಯೇ ನಾಶಹೊಂದುತ್ತವೆ. ಇರುವ ಎಲ್ಲವಕ್ಕೆ ಭೂಮಿಯೇ ಆಧಾರ. ಭೂಮಿಯೇ ಆಶ್ರಯ.
06005021a ಯಸ್ಯ ಭೂಮಿಸ್ತಸ್ಯ ಸರ್ವಂ ಜಗತ್ ಸ್ಥಾವರಜಂಗಮಂ।
06005021c ತತ್ರಾಭಿಗೃದ್ಧಾ ರಾಜಾನೋ ವಿನಿಘ್ನಂತೀತರೇತರಂ।।
ಈ ಭೂಮಿಯು ಯಾರದ್ದೋ ಅವರಿಗೇ ಅದರಲ್ಲಿರುವ ಎಲ್ಲ ಸ್ಥಾವರ-ಜಂಗಮಗಳು ಸೇರುತ್ತವೆ. ಅದನ್ನೇ ಬಯಸಿ ರಾಜರು ಪರಸ್ಪರರನ್ನು ಸಂಹರಿಸುತ್ತಾರೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ಭೌಮಗುಣಕಥನೇ ಪಂಚಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ಭೌಮಗುಣಕಥನ ಎನ್ನುವ ಐದನೇ ಅಧ್ಯಾಯವು.
-
ಸಪ್ತಗ್ರಾಮ್ಯಾಃ ಪಶವಃ ಸಪ್ತಾರಣ್ಯಾಃ। ↩︎
-
ಪುರುಷನಿಗೂ ಪಶು ಎಂಬ ಶಬ್ಧವನ್ನು ಬಳಸಲಾಗಿದೆ. ಪುರುಷಂ ವೈ ದೇವಾಃ ಪಶುಪಾಲಭಂತ। ತಸ್ಮಾತ್ರಯಃ ಪಶೂನಾಗೂಂಹಸ್ತಾದಾನಾಃ ಪುರುಷೋ ಹಸ್ತೀ ಮರ್ಕಟಃ। ಎಂಬ ವೇದವಾಕ್ಯವಿದೆ. ↩︎
-
ಉದ್ಭಿಜ್ಜಗಳೆಂದರೆ ಭೂಮಿಯನ್ನು ಭೇದಿಸಿಕೊಂಡು ಹುಟ್ಟುವವು. ↩︎
-
ಗುಲ್ಮವೆಂದರೆ ಮಧ್ಯದ ಕಾಂಡವಿಲ್ಲದ ಗಿಡ, ದರ್ಭೆ, ಜೆಂಡುಹುಲ್ಲು ಮುಂತಾದವು. ↩︎
-
ಬಳ್ಳಿ, ಹಂಬು, ಮರಗಳಿಗೆ ಹಂಬಿಕೊಳ್ಳುವ ಬಳ್ಳಿಗಳು ↩︎
-
ನೆಲದ ಮೇಲೆ ಹರಡಿಕೊಳ್ಳುವ ವರ್ಷಮಾತ್ರವಿರುವ - ಸೋರೆಕಾಯಿ, ಸೌತೇಕಾಯಿ - ಮೊದಲಾದ ಬಳ್ಳಿಗಳು ↩︎
-
ನೆಲದ ಮೇಲೆ ಹರಡಿಕೊಳ್ಳುವ ವರ್ಷಮಾತ್ರವಿರುವ - ಸೋರೆಕಾಯಿ, ಸೌತೇಕಾಯಿ - ಮೊದಲಾದ ಬಳ್ಳಿಗಳು ↩︎
-
ಇದೇ ಅಧ್ಯಾಯದ ೧೦ನೆಯ ಶ್ಲೋಕದಲ್ಲಿ ಹೇಳಿದ ಅಂಡಜ ಮತ್ತು ಸ್ವೇದಜಗಳು ಈ ಇಪ್ಪತ್ನಾಲ್ಕರಿಂದ ಹೊರತಾಗಿವೆಯೇ? ಇಲ್ಲ. ಅಂಡಜಗಳಿಗೆ ಮೈಥುನವಿರುವುದರಿಂದ ಅವು ಪಶುಗಳ ಗುಂಪಿಗೆ ಸೇರುತ್ತವೆ. ಸ್ವೇದಜಗಳು ಸಸ್ಯಗಳ ಗುಂಪಿಗೆ ಸೇರುತ್ತವೆ. ↩︎
-
ಛಾಂದೋಗ್ಯದಲ್ಲಿ ಗಾಯತ್ರಿಯನ್ನು ಭೂಮಿಯನ್ನಾಕ್ರಮಿಸಿರುವವಳೆಂದೇ ವರ್ಣಿಸಲಾದೆ - ಗಾಯತ್ರೀ ವಾ ಇದಂ ಸರ್ವಂ ಭೂತಂ…ಸೈಷಾ ಚತುಷ್ಪದಾ ಷಡ್ವಿಧಾ ಗಾಯತ್ರೀ ತದೇತದೃತಾಭ್ಯನೂಕ್ತಂ ಏತಾವಾನಸ್ಯ ಮಹಿಮಾ ತತೋ ಜ್ಯಾಯಾಂಶ್ಚ ಪೂರುಷಃ। ಪಾದೋಸ್ಯ ಸರ್ವಾಭೂತಾನೀ। ತ್ರಿಪಾದಸ್ಯಾಮೃತಂ ದಿವಿ।। ↩︎