ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಜಂಬೂಖಂಡವಿನಿರ್ಮಾಣ ಪರ್ವ
ಅಧ್ಯಾಯ 2
ಸಾರ
ವ್ಯಾಸನು ಸಂಜಯನಿಗೆ ದಿವ್ಯದೃಷ್ಠಿಯನ್ನಿತ್ತು ಧೃತರಾಷ್ಟ್ರನಿಗೆ ಯುದ್ಧದ ವರ್ಣನೆಯನ್ನು ಮಾಡಲು ಹೇಳಿದುದು (1-14). ಯುದ್ಧದಲ್ಲಿ ಮಹಾಕ್ಷಯವನ್ನು ಸೂಚಿಸುವ ಭಯಾನಕ ನಿಮಿತ್ತಗಳ ಕುರಿತು ವ್ಯಾಸನು ಹೇಳಿದುದು (15-33).
06002001 ವೈಶಂಪಾಯನ ಉವಾಚ।
06002001a ತತಃ ಪೂರ್ವಾಪರೇ ಸಂಧ್ಯೇ ಸಮೀಕ್ಷ್ಯ ಭಗವಾನೃಷಿಃ।
06002001c ಸರ್ವವೇದವಿದಾಂ ಶ್ರೇಷ್ಠೋ ವ್ಯಾಸಃ ಸತ್ಯವತೀಸುತಃ।।
06002002a ಭವಿಷ್ಯತಿ ರಣೇ ಘೋರೇ ಭರತಾನಾಂ ಪಿತಾಮಹಃ।
06002002c ಪ್ರತ್ಯಕ್ಷದರ್ಶೀ ಭಗವಾನ್ಭೂತಭವ್ಯಭವಿಷ್ಯವಿತ್।।
06002003a ವೈಚಿತ್ರವೀರ್ಯಂ ರಾಜಾನಂ ಸ ರಹಸ್ಯಂ ಬ್ರವೀದಿದಂ।
06002003c ಶೋಚಂತಮಾರ್ತಂ ಧ್ಯಾಯಂತಂ ಪುತ್ರಾಣಾಮನಯಂ ತದಾ।।
ವೈಶಂಪಾಯನನು ಹೇಳಿದನು: “ಹೀಗೆ ಪೂರ್ವ-ಪಶ್ಚಿಮ ಮುಖಗಳಾಗಿ ಸೇರಿದ್ದ ಅವರನ್ನು ನೋಡಿ ಭಗವಾನ್ ಋಷಿ, ಸರ್ವವೇದವಿದರಲ್ಲಿ ಶ್ರೇಷ್ಠ ವ್ಯಾಸ ಸತ್ಯವತೀ ಸುತ, ಭರತರ ಪಿತಾಮಹ, ಭೂತ-ಭವ್ಯ-ಭವಿಷ್ಯಗಳನ್ನು ತಿಳಿದಿದ್ದ, ಘೋರ ರಣವು ನಡೆಯಲಿದೆಯೆಂದು ಪ್ರತ್ಯಕ್ಷವಾಗಿ ಕಂಡ ಭಗವಾನನು ತನ್ನ ಪುತ್ರರ ಅನ್ಯಾಯದ ಕುರಿತು ಯೋಚಿಸಿ ಶೋಕಿಸಿ ಆರ್ತನಾಗಿರುವ ರಾಜ ವೈಚಿತ್ರವೀರ್ಯನಿಗೆ ರಹಸ್ಯದಲ್ಲಿ ಇದನ್ನು ಹೇಳಿದನು.
06002004 ವ್ಯಾಸ ಉವಾಚ।
06002004a ರಾಜನ್ಪರೀತಕಾಲಾಸ್ತೇ ಪುತ್ರಾಶ್ಚಾನ್ಯೇ ಚ ಭೂಮಿಪಾಃ।
06002004c ತೇ ಹನಿಷ್ಯಂತಿ ಸಂಗ್ರಾಮೇ ಸಮಾಸಾದ್ಯೇತರೇತರಂ।।
ವ್ಯಾಸನು ಹೇಳಿದನು: “ರಾಜನ್! ನಿನ್ನ ಪುತ್ರರು ಮತ್ತು ಅನ್ಯ ಭೂಮಿಪರ ಕಾಲವು ಬಂದಾಗಿದೆ. ಅವರು ಸಂಗ್ರಾಮದಲ್ಲಿ ಪರಸ್ಪರರರನ್ನು ಕೊಲ್ಲುತ್ತಾರೆ.
06002005a ತೇಷು ಕಾಲಪರೀತೇಷು ವಿನಶ್ಯತ್ಸು ಚ ಭಾರತ।
06002005c ಕಾಲಪರ್ಯಾಯಮಾಜ್ಞಾಯ ಮಾ ಸ್ಮ ಶೋಕೇ ಮನಃ ಕೃಥಾಃ।।
ಭಾರತ! ಕಾಲದ ಬದಲಾವಣೆಗಳಿಂದ ಆಗುವ ಈ ವಿನಾಶವನ್ನು ಕಾಲಪರ್ಯಾಯವೆಂದು ತಿಳಿದು ಮನಸ್ಸಿನಲ್ಲಿ ಶೋಕಪಡಬೇಡ.
06002006a ಯದಿ ತ್ವಿಚ್ಛಸಿ ಸಂಗ್ರಾಮೇ ದ್ರಷ್ಟುಮೇನಂ ವಿಶಾಂ ಪತೇ।
06002006c ಚಕ್ಷುರ್ದದಾನಿ ತೇ ಹಂತ ಯುದ್ಧಮೇತನ್ನಿಶಾಮಯ।।
ವಿಶಾಂಪತೇ! ಈ ಸಂಗ್ರಾಮವನ್ನು ನೋಡಲು ಬಯಸುವೆಯಾದರೆ ನಿನಗೆ ಕಣ್ಣುಗಳನ್ನು ಕೊಡುತ್ತೇನೆ. ಅದನ್ನು ನೋಡು!”
06002007 ಧೃತರಾಷ್ಟ್ರ ಉವಾಚ।
06002007a ನ ರೋಚಯೇ ಜ್ಞಾತಿವಧಂ ದ್ರಷ್ಟುಂ ಬ್ರಹ್ಮರ್ಷಿಸತ್ತಮ।
06002007c ಯುದ್ಧಮೇತತ್ತ್ವಶೇಷೇಣ ಶೃಣುಯಾನ್ತವ ತೇಜಸಾ।।
ಧೃತರಾಷ್ಟ್ರನು ಹೇಳಿದನು: “ಬ್ರಹ್ಮರ್ಷಿಸತ್ತಮ! ಜ್ಞಾತಿವಧೆಯನ್ನು ನೋಡಲು ನನಗೆ ಇಷ್ಟವಿಲ್ಲ. ಆದರೆ ನಿನ್ನ ತೇಜಸ್ಸಿನಿಂದ ಈ ಯುದ್ಧದ ಕುರಿತು ಯಾವುದನ್ನೂ ಬಿಟ್ಟುಹೋಗದ ಹಾಗೆ ಕೇಳುತ್ತೇನೆ.””
06002008 ವೈಶಂಪಾಯನ ಉವಾಚ।
06002008a ತಸ್ಮಿನ್ನನಿಚ್ಛತಿ ದ್ರಷ್ಟುಂ ಸಂಗ್ರಾಮಂ ಶ್ರೋತುಮಿಚ್ಛತಿ।
06002008c ವರಾಣಾಮೀಶ್ವರೋ ದಾತಾ ಸಂಜಯಾಯ ವರಂ ದದೌ।।
ವೈಶಂಪಾಯನನು ಹೇಳಿದನು: “ಅವನು ಸಂಗ್ರಾಮವನ್ನು ನೋಡಲು ಇಚ್ಛಿಸುವುದಿಲ್ಲ. ಕೇಳಲು ಬಯಸುತ್ತಾನೆ ಎಂದು ತಿಳಿದ ಈಶ್ವರ ವ್ಯಾಸನು ಸಂಜಯನಿಗೆ ವರವನ್ನಿತ್ತನು.
06002009 ವ್ಯಾಸ ಉವಾಚ।
06002009a ಏಷ ತೇ ಸಂಜಯೋ ರಾಜನ್ಯುದ್ಧಮೇತದ್ವದಿಷ್ಯತಿ।
06002009c ಏತಸ್ಯ ಸರ್ವಂ ಸಂಗ್ರಾಮೇ ನಪರೋಕ್ಷಂ ಭವಿಷ್ಯತಿ।।
ವ್ಯಾಸನು ಹೇಳಿದನು: “ರಾಜನ್! ಈ ಸಂಜಯನು ನಿನಗೆ ಯುದ್ಧದಲ್ಲಿ ನಡೆಯುವ ಸಕಲ ಸಮಾಚಾರಗಳನ್ನೂ ಹೇಳುತ್ತಾನೆ. ಸಂಗ್ರಾಮದಲ್ಲಿ ಎಲ್ಲವೂ ಇವನಿಗೆ ಕಾಣುವಂತಾಗುತ್ತದೆ.
06002010a ಚಕ್ಷುಷಾ ಸಂಜಯೋ ರಾಜನ್ದಿವ್ಯೇನೈಷ ಸಮನ್ವಿತಃ।
06002010c ಕಥಯಿಷ್ಯತಿ ತೇ ಯುದ್ಧಂ ಸರ್ವಜ್ಞಶ್ಚ ಭವಿಷ್ಯತಿ।।
ರಾಜನ್! ದಿವ್ಯದೃಷ್ಟಿಯಿಂದ ಸಮನ್ವಿತನಾದ ಈ ಸಂಜಯನು ಸರ್ವಜ್ಞನಾಗುತ್ತಾನೆ ಮತ್ತು ನಿನಗೆ ಯುದ್ಧದ ಎಲ್ಲವನ್ನೂ ಹೇಳುತ್ತಾನೆ.
06002011a ಪ್ರಕಾಶಂ ವಾ ರಹಸ್ಯಂ ವಾ ರಾತ್ರೌ ವಾ ಯದಿ ವಾ ದಿವಾ।
06002011c ಮನಸಾ ಚಿಂತಿತಮಪಿ ಸರ್ವಂ ವೇತ್ಸ್ಯತಿ ಸಂಜಯಃ।।
ಬಹಿರಂಗವಾಗಿರಲಿ ಅಥವಾ ರಹಸ್ಯವಾಗಿರಲಿ, ರಾತ್ರಿಯಾಗಿರಲಿ ಅಥವಾ ದಿನವಾಗಿರಲಿ, ಮನಸ್ಸಿನಲ್ಲಿ ಯೋಚಿಸಿದ್ದು ಕೂಡ ಏಲ್ಲವೂ ಸಂಜಯನಿಗೆ ತಿಳಿಯುತ್ತದೆ.
06002012a ನೈನಂ ಶಸ್ತ್ರಾಣಿ ಭೇತ್ಸ್ಯಂತಿ ನೈನಂ ಬಾಧಿಷ್ಯತೇ ಶ್ರಮಃ।
06002012c ಗಾವಲ್ಗಣಿರಯಂ ಜೀವನ್ಯುದ್ಧಾದಸ್ಮಾದ್ವಿಮೋಕ್ಷ್ಯತೇ।।
ಇವನನ್ನು ಶಸ್ತ್ರಗಳು ಭೇದಿಸುವುದಿಲ್ಲ. ಇವನನ್ನು ಶ್ರಮವು ಬಾಧಿಸುವುದಿಲ್ಲ. ಈ ಗಾವಲ್ಗಣಿಯು ಜೀವಂತನಾಗಿಯೇ ಯುದ್ಧದಿಂದ ಆಚೆ ಬರುತ್ತಾನೆ.
06002013a ಅಹಂ ಚ ಕೀರ್ತಿಮೇತೇಷಾಂ ಕುರೂಣಾಂ ಭರತರ್ಷಭ।
06002013c ಪಾಂಡವಾನಾಂ ಚ ಸರ್ವೇಷಾಂ ಪ್ರಥಯಿಷ್ಯಾಮಿ ಮಾ ಶುಚಃ।।
ಭರತರ್ಷಭ! ನಾನಾದರೋ ಈ ಕುರುಗಳ ಮತ್ತು ಪಾಂಡವರ ಎಲ್ಲರ ಕೀರ್ತಿಯನ್ನು ಪಸರಿಸುತ್ತೇನೆ. ಶೋಕಿಸಬೇಡ.
06002014a ದಿಷ್ಟಮೇತತ್ಪುರಾ ಚೈವ ನಾತ್ರ ಶೋಚಿತುಮರ್ಹಸಿ1।
06002014c ನ ಚೈವ ಶಕ್ಯಂ ಸಮ್ಯಂತುಂ ಯತೋ ಧರ್ಮಸ್ತತೋ ಜಯಃ।।
ಇದು ಮೊದಲೇ ದೈವನಿಶ್ಚಯವಾದುದು. ಇದರ ಕುರಿತು ಶೋಕಿಸಬಾರದು. ಅದನ್ನು ತಡೆಯಲು ಶಕ್ಯವಿಲ್ಲ. ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ.””
06002015 ವೈಶಂಪಾಯನ ಉವಾಚ।
06002015a ಏವಮುಕ್ತ್ವಾ ಸ ಭಗವಾನ್ಕುರೂಣಾಂ ಪ್ರಪಿತಾಮಹಃ।
06002015c ಪುನರೇವ ಮಹಾಬಾಹುಂ ಧೃತರಾಷ್ಟ್ರಂ ಉವಾಚ ಹ।।
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಕುರುಗಳ ಪ್ರಪಿತಾಮಹ ಭಗವಾನನು ಪುನಃ ಮಹಾಬಾಹು ಧೃತರಾಷ್ಟ್ರನಿಗೆ ಹೇಳಿದನು:
06002016a ಇಹ ಯುದ್ಧೇ ಮಹಾರಾಜ ಭವಿಷ್ಯತಿ ಮಹಾನ್ ಕ್ಷಯಃ।
06002016c ಯಥೇಮಾನಿ ನಿಮಿತ್ತಾನಿ ಭಯಾಯಾದ್ಯೋಪಲಕ್ಷಯೇ।।
“ಮಹಾರಾಜ! ಭಯವನ್ನು ಸೂಚಿಸುವ ಈ ನಿಮಿತ್ತಗಳ ಪ್ರಕಾರ ಈ ಯುದ್ಧದಲ್ಲಿ ಮಹಾ ಕ್ಷಯವುಂಟಾಗುತ್ತದೆ.
06002017a ಶ್ಯೇನಾ ಗೃಧ್ರಾಶ್ಚ ಕಾಕಾಶ್ಚ ಕಂಕಾಶ್ಚ ಸಹಿತಾ ಬಲೈಃ।
06002017c ಸಂಪತಂತಿ ವನಾಂತೇಷು ಸಮವಾಯಾಂಶ್ಚ ಕುರ್ವತೇ।।
ಗಿಡುಗ, ಹದ್ದು, ಕಾಗೆ, ಮತ್ತು ಕಂಕಗಳು ಗುಂಪುಗುಂಪಾಗಿ ಮರಗಳ ಮೇಲೆ ಬಂದಿಳಿಯುತ್ತಿವೆ ಮತ್ತು ಕೆಳಗೆ ನೋಡುತ್ತಾ ಕಾಯುತ್ತಿವೆ.
06002018a ಅತ್ಯುಗ್ರಂ ಚ ಪ್ರಪಶ್ಯಂತಿ ಯುದ್ಧಮಾನಂದಿನೋ ದ್ವಿಜಾಃ।
06002018c ಕ್ರವ್ಯಾದಾ ಭಕ್ಷಯಿಷ್ಯಂತಿ ಮಾಂಸಾನಿ ಗಜವಾಜಿನಾಂ।।
ಉಗ್ರವಾದವುಗಳು ಯುದ್ಧದಲ್ಲಿ ಕುದುರೆ ಆನೆಗಳ ಮಾಂಸವನ್ನು ಭಕ್ಷಿಸಲು ಕಾಯುತ್ತ ಕುಳಿತಿವೆ.
06002019a ಖಟಾಖಟೇತಿ ವಾಶಂತೋ ಭೈರವಂ ಭಯವೇದಿನಃ।
06002019c ಕಹ್ವಾಃ ಪ್ರಯಾಂತಿ ಮಧ್ಯೇನ ದಕ್ಷಿಣಾಮಭಿತೋ ದಿಶಂ।।
ಖಟಾ ಖಟಾ ಎಂದು ಭೈರವ ಭಯವೇದನೆಯನ್ನುಂಟುಮಾಡುವ ಕೂಗನ್ನು ಕೂಗುತ್ತಾ ಕಾಗೆಗಳು ಮಧ್ಯದಿಂದ ದಕ್ಷಿಣಾಭಿಮುಖವಾಗಿ ಹಾರಿಹೋಗುತ್ತಿವೆ.
06002020a ಉಭೇ ಪೂರ್ವಾಪರೇ ಸಂಧ್ಯೇ ನಿತ್ಯಂ ಪಶ್ಯಾಮಿ ಭಾರತ।
06002020c ಉದಯಾಸ್ತಮನೇ ಸೂರ್ಯಂ ಕಬಂಧೈಃ ಪರಿವಾರಿತಂ।।
ಭಾರತ! ಬೆಳಿಗ್ಗೆ ಮತ್ತು ಸಂಧ್ಯಾಕಾಲಗಳೆರಡೂ ಹೊತ್ತು ನಿತ್ಯವೂ ನಾನು ಉದಯ-ಅಸ್ತಮಾನಗಳ ವೇಳೆಗಳಲ್ಲಿ ಸೂರ್ಯನು ಕಬಂಧ (ತಲೆಯಿಲ್ಲದ ದೇಹ) ಗಳಿಂದ ಸುತ್ತುವರೆದಿದ್ದುದನ್ನು ನೋಡುತ್ತಿದ್ದೇನೆ.
06002021a ಶ್ವೇತಲೋಹಿತಪರ್ಯಂತಾಃ ಕೃಷ್ಣಗ್ರೀವಾಃ ಸವಿದ್ಯುತಃ।
06002021c ತ್ರಿವರ್ಣಾಃ ಪರಿಘಾಃ ಸಂಧೌ ಭಾನುಮಾವಾರಯಂತ್ಯುತ।।
ಬಿಳಿ ಮತ್ತು ಕೆಂಪು ರೆಕ್ಕೆಗಳು ಹಾಗೂ ಕಪ್ಪು ಕೊರಳು - ಈ ಮೂರು ವರ್ಣದ ಪಕ್ಷಿಗಳು ಸಂಧ್ಯಾಸಮಯದಲ್ಲಿ ಸೂರ್ಯನನ್ನು ಗುಂಪಾಗಿ ಮುತ್ತುತ್ತಿವೆ.
06002022a ಜ್ವಲಿತಾರ್ಕೇಂದುನಕ್ಷತ್ರಂ ನಿರ್ವಿಶೇಷದಿನಕ್ಷಪಂ।
06002022c ಅಹೋರಾತ್ರಂ ಮಯಾ ದೃಷ್ಟಂ ತತ್ಕ್ಷಯಾಯ ಭವಿಷ್ಯತಿ।।
ಪ್ರಜ್ವಲಿಸುವ ಸೂರ್ಯ, ಚಂದ್ರ, ನಕ್ಷತ್ರಗಳನ್ನು ವಿಶೇಷ ದಿನಗಳಲ್ಲದಿದ್ದರೂ ನಾನು ಆಹೋ ರಾತ್ರಿ ನೋಡುತ್ತಿದ್ದೇನೆ. ಇದರಿಂದ ಕ್ಷಯವಾಗುತ್ತದೆ.
06002023a ಅಲಕ್ಷ್ಯಃ ಪ್ರಭಯಾ ಹೀನಃ ಪೌರ್ಣಮಾಸೀಂ ಚ ಕಾರ್ತ್ತಿಕೀಂ।
06002023c ಚಂದ್ರೋಽಭೂದಗ್ನಿವರ್ಣಶ್ಚ ಸಮವರ್ಣೇ ನಭಸ್ತಲೇ।।
ಕಾರ್ತೀಕ ಪೂರ್ಣಿಮೆಯಂದೂ ಪ್ರಭೆಯನ್ನು ಕಳೆದುಕೊಂಡ ಚಂದ್ರನು ಕಾಣದಂತಾಗಿದ್ದಾನೆ. ಅವನು ನಭಸ್ತಲದಲ್ಲಿ ಅಗ್ನಿವರ್ಣದ ಮಂಡಲದಲ್ಲಿ ಕಾಣುತ್ತಾನೆ.
06002024a ಸ್ವಪ್ಸ್ಯಂತಿ ನಿಹತಾ ವೀರಾ ಭೂಮಿಮಾವೃತ್ಯ ಪಾರ್ಥಿವಾಃ।
06002024c ರಾಜಾನೋ ರಾಜಪುತ್ರಾಶ್ಚ ಶೂರಾಃ ಪರಿಘಬಾಹವಃ।।
ಪರಿಘದಂಥಹ ಬಾಹುಗಳಿಂದ ವೀರ ಪಾರ್ಥಿವರು, ರಾಜರು, ರಾಜಪುತ್ರರು, ಶೂರರು ಭೂಮಿಯಲ್ಲಿ ಹತರಾಗಿ ಮಲಗುತ್ತಾರೆ.
06002025a ಅಂತರಿಕ್ಷೇ ವರಾಹಸ್ಯ ವೃಷದಂಶಸ್ಯ ಚೋಭಯೋಃ।
06002025c ಪ್ರಣಾದಂ ಯುಧ್ಯತೋ ರಾತ್ರೌ ರೌದ್ರಂ ನಿತ್ಯಂ ಪ್ರಲಕ್ಷಯೇ।।
ನಿತ್ಯವೂ ರಾತ್ರಿಯಲ್ಲಿ ಅಂತರಿಕ್ಷದಲ್ಲಿ ವರಾಹ ವೃಷದಂಶಗಳೀರ್ವರ ರೌದ್ರ ರೋದನೆಯು ಕ್ಷಯವನ್ನು ಸೂಚಿಸುತ್ತದೆ.
06002026a ದೇವತಾಪ್ರತಿಮಾಶ್ಚಾಪಿ ಕಂಪಂತಿ ಚ ಹಸಂತಿ ಚ।
06002026c ವಮಂತಿ ರುಧಿರಂ ಚಾಸ್ಯೈಃ ಸ್ವಿದ್ಯಂತಿ ಪ್ರಪತಂತಿ ಚ।।
ದೇವತೆಗಳ ಪ್ರತಿಮೆಗಳೂ ಕೂಡ ಅಲುಗಾಡುತ್ತವೆ ಮತ್ತು ನಗುತ್ತವೆ. ಕೆಲವೊಮ್ಮೆ ರಕ್ತವನ್ನು ಕಾರುತ್ತವೆ, ಮುಕ್ಕರಿಸಿ ಬೀಳುತ್ತಿವೆ.
06002027a ಅನಾಹತಾ ದುಂದುಭಯಃ ಪ್ರಣದಂತಿ ವಿಶಾಂ ಪತೇ।
06002027c ಅಯುಕ್ತಾಶ್ಚ ಪ್ರವರ್ತಂತೇ ಕ್ಷತ್ರಿಯಾಣಾಂ ಮಹಾರಥಾಃ।।
ವಿಶಾಂಪತೇ! ಬಾರಿಸದೆಯೇ ನಗಾರಿಗಳು ಶಬ್ಧಮಾಡುತ್ತಿವೆ. ಕ್ಷತ್ರಿಯರ ಮಹಾರಥಗಳು ಕುದುರೆಗಳನ್ನು ಕಟ್ಟದೆಯೇ ನಡೆಯುತ್ತಿವೆ.
06002028a ಕೋಕಿಲಾಃ ಶತಪತ್ರಾಶ್ಚ ಚಾಷಾ ಭಾಸಾಃ ಶುಕಾಸ್ತಥಾ।
06002028c ಸಾರಸಾಶ್ಚ ಮಯೂರಾಶ್ಚ ವಾಚೋ ಮುಂಚಂತಿ ದಾರುಣಾಃ।।
ಕೋಕಿಲಗಳು, ಮರಕುಟುಕಗಳು, ನೀರು ಕಾರುಂಡೆಗಳು, ಗಿಳಿಗಳು, ಸಾರಸಗಳು, ನವಿಲುಗಳು ದಾರುಣವಾಗಿ ಕೂಗುತ್ತಿವೆ.
06002029a ಗೃಹೀತಶಸ್ತ್ರಾಭರಣಾ ವರ್ಮಿಣೋ ವಾಜಿಪೃಷ್ಠಗಾಃ।
06002029c ಅರುಣೋದಯೇಷು ದೃಶ್ಯಂತೇ ಶತಶಃ ಶಲಭವ್ರಜಾಃ।।
ಶಸ್ತ್ರಾಭರಣಗಳನ್ನು ಹಿಡಿದ, ಕವಚಧಾರಿಗಳು ಕುದುರೆಗಳ ಮೇಲೆ ಇರುತ್ತಾರೆ. ಅರುಣೋದಯದಲ್ಲಿ ನೂರಾರು ಚಿಟ್ಟೆಗಳು ಕಾಣುತ್ತವೆ.
06002030a ಉಭೇ ಸಂಧ್ಯೇ ಪ್ರಕಾಶೇತೇ ದಿಶಾಂ ದಾಹಸಮನ್ವಿತೇ।
06002030c ಆಸೀದ್ರುಧಿರವರ್ಷಂ ಚ ಅಸ್ಥಿವರ್ಷಂ ಚ ಭಾರತ।।
ಭಾರತ! ಎರಡೂ ಸಂಧ್ಯೆಗಳಲ್ಲಿ ಪ್ರಕಾಶಿಸುವ ದಿಕ್ಕುಗಳು ಬಾಯಾರಿಕೆಗೊಂಡಿವೆಯೋ ಎನ್ನುವಂತೆ ರಕ್ತ ಮತ್ತು ಎಲುಬುಗಳ ಮಳೆಯಾಗುತ್ತಿವೆ.
06002031a ಯಾ ಚೈಷಾ ವಿಶ್ರುತಾ ರಾಜಂಸ್ತ್ರೈಲೋಕ್ಯೇ ಸಾಧುಸಮ್ಮತಾ।
06002031c ಅರುಂಧತೀ ತಯಾಪ್ಯೇಷ ವಸಿಷ್ಠಃ ಪೃಷ್ಠತಃ ಕೃತಃ।।
ರಾಜನ್! ತ್ರೈಲೋಕ್ಯಗಳಲ್ಲಿ ಸಾಧುಸಮ್ಮತಳಾದ ಅರುಂಧತಿಯು ವಸಿಷ್ಠನನ್ನು ಹಿಂದೆ ಹಾಕಿದಳೆಂದು ತೋರುತ್ತಿದೆ.
06002032a ರೋಹಿಣೀಂ ಪೀಡಯನ್ನೇಷ ಸ್ಥಿತೋ ರಾಜನ್ ಶನೈಶ್ಚರಃ।
06002032c ವ್ಯಾವೃತ್ತಂ ಲಕ್ಷ್ಮ ಸೋಮಸ್ಯ ಭವಿಷ್ಯತಿ ಮಹದ್ಭಯಂ।।
ರಾಜನ್! ರೋಹಿಣಿಯನ್ನು ಪೀಡಿಸುತ್ತಿರುವಂತೆ ಶನೈಶ್ಚರನು ನಿಂತಿದ್ದಾನೆ. ಚಂದ್ರನ ಲಕ್ಷಣವಾಗಿರುವ ಜಿಂಕೆಯು ತನ್ನ ಸ್ಥಾನವನ್ನು ತಪ್ಪಿ ಮಹಾಭಯವುಂಟಾಗಲಿದೆ.
06002033a ಅನಭ್ರೇ ಚ ಮಹಾಘೋರಂ ಸ್ತನಿತಂ ಶ್ರೂಯತೇಽನಿಶಂ।
06002033c ವಾಹನಾನಾಂ ಚ ರುದತಾಂ ಪ್ರಪತಂತ್ಯಶ್ರುಬಿಂದವಃ।।
ಮೋಡಗಳಿಲ್ಲದಿದ್ದರೂ ಆಕಾಶದಲ್ಲಿ ಮಹಾಘೋರ ಶಬ್ಧವು ಕೇಳಿಬರುತ್ತಿದೆ. ವಾಹನ ಪ್ರಾಣಿಗಳೆಲ್ಲವೂ ಅಳುತ್ತಾ ಕಣ್ಣೀರನ್ನು ಬೀಳಿಸುತ್ತಿವೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ಶ್ರೀವೇದವ್ಯಾಸದರ್ಶನೇ ದ್ವಿತೀಯೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ಶ್ರೀವೇದವ್ಯಾಸದರ್ಶನ ಎನ್ನುವ ಎರಡನೇ ಅಧ್ಯಾಯವು.
-
ದಿಷ್ಟಮೇತನ್ನರವ್ಯಾಘ್ರ ನಾಭಿಶೋಚಿತುಮರ್ಹಸಿ| ಎಂಬ ಪಾಠಾಂತರವಿದೆ (ಭಾರತ ದರ್ಶನ, ಸಂಪುಟ 12, ಪುಟಸಂಖ್ಯೆ 11). ↩︎