ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಜಂಬೂಖಂಡವಿನಿರ್ಮಾಣ ಪರ್ವ
ಅಧ್ಯಾಯ 1
ಸಾರ
ಕುರು-ಪಾಂಡವ ಸೇನೆಗಳು ಕುರುಕ್ಷೇತ್ರಕ್ಕೆ ಬಂದು ಬೀಡುಬಿಟ್ಟಿದುದು (1-25). ಎರಡೂ ಸೇನೆಗಳೂ ನಿಯಮ-ಧರ್ಮಗಳನ್ನು ಹಾಕಿಕೊಂಡಿದುದು (26-34).
06001001 ಜನಮೇಜಯ ಉವಾಚ1।
06001001a ಕಥಂ ಯುಯುಧಿರೇ ವೀರಾಃ ಕುರುಪಾಂಡವಸೋಮಕಾಃ।
06001001c ಪಾರ್ಥಿವಾಶ್ಚ ಮಹಾಭಾಗಾ2 ನಾನಾದೇಶಸಮಾಗತಾಃ।।
ಜನಮೇಜಯನು ಹೇಳಿದನು: “ವೀರ ಕುರು-ಪಾಂಡವ-ಸೋಮಕರು ಮತ್ತು ನಾನಾ ದೇಶಗಳಿಂದ ಬಂದು ಸೇರಿದ ಮಹಾಭಾಗ ಪಾರ್ಥಿವರು ಹೇಗೆ ಯುದ್ಧಮಾಡಿದರು?”
06001002 ವೈಶಂಪಾಯನ ಉವಾಚ।
06001002a ಯಥಾ ಯುಯುಧಿರೇ ವೀರಾಃ ಕುರುಪಾಂಡವಸೋಮಕಾಃ।
06001002c ಕುರುಕ್ಷೇತ್ರೇ ತಪಃಕ್ಷೇತ್ರೇ ಶೃಣು ತತ್ಪೃಥಿವೀಪತೇ।।
ವೈಶಂಪಾಯನನು ಹೇಳಿದನು: “ಪೃಥಿವೀಪತೇ! ವೀರ ಕುರು-ಪಾಂಡವ-ಸೋಮಕರು ತಪಃಕ್ಷೇತ್ರ ಕುರುಕ್ಷೇತ್ರದಲ್ಲಿ ಹೇಗೆ ಯುದ್ಧಮಾಡಿದರೆನ್ನುವುದನ್ನು ಕೇಳು.
06001003a ಅವತೀರ್ಯ ಕುರುಕ್ಷೇತ್ರಂ ಪಾಂಡವಾಃ ಸಹಸೋಮಕಾಃ।
06001003c ಕೌರವಾನಭ್ಯವರ್ತಂತ ಜಿಗೀಷಂತೋ ಮಹಾಬಲಾಃ।।
ಸೋಮಕರೊಂದಿಗೆ ಕುರುಕ್ಷೇತ್ರಕ್ಕೆ ಬಂದಿಳಿದ ಮಹಾಬಲಿ ಪಾಂಡವರು ಗೆಲ್ಲುವ ಆಸೆಯನ್ನಿಟ್ಟುಕೊಂಡು ಕೌರವರನ್ನು ಎದುರಿಸಿದರು.
06001004a ವೇದಾಧ್ಯಯನಸಂಪನ್ನಾಃ ಸರ್ವೇ ಯುದ್ಧಾಭಿನಂದಿನಃ।
06001004c ಆಶಂಸಂತೋ ಜಯಂ ಯುದ್ಧೇ ವಧಂ ವಾಭಿಮುಖಾ ರಣೇ।।
ವೇದಾಧ್ಯಯನ ಸಂಪನ್ನರಾದ ಅವರೆಲ್ಲರೂ ಯುದ್ಧವನ್ನು ಆನಂದಿಸುವವರಾಗಿದ್ದರು. ಯುದ್ಧದಲ್ಲಿ ಜಯವನ್ನು ಆಶಿಸುತ್ತಾ ರಣದಲ್ಲಿ ವಧೆಯನ್ನು ಎದುರಿಸಿದರು.
06001005a ಅಭಿಯಾಯ ಚ ದುರ್ಧರ್ಷಾಂ ಧಾರ್ತರಾಷ್ಟ್ರಸ್ಯ ವಾಹಿನೀಂ।
06001005c ಪ್ರಾಙ್ಮುಖಾಃ ಪಶ್ಚಿಮೇ ಭಾಗೇ ನ್ಯವಿಶಂತ ಸಸೈನಿಕಾಃ।।
ಆ ದುರ್ಧರ್ಷರು ಧಾರ್ತರಾಷ್ಟ್ರನ ವಾಹಿನಿಯನ್ನು ಎದುರಿಸಿ ಪೂರ್ವಾಭಿಮುಖರಾಗಿ ಪಶ್ಚಿಮಭಾಗದಲ್ಲಿ ಸೈನಿಕರೊಂದಿಗೆ ಬೀಡುಬಿಟ್ಟರು.
06001006a ಸಮಂತಪಂಚಕಾದ್ಬಾಹ್ಯಂ ಶಿಬಿರಾಣಿ ಸಹಸ್ರಶಃ।
06001006c ಕಾರಯಾಮಾಸ ವಿಧಿವತ್ಕುಂತೀಪುತ್ರೋ ಯುಧಿಷ್ಠಿರಃ।।
ಕುಂತೀಪುತ್ರ ಯುಧಿಷ್ಠಿರನು ವಿಧಿವತ್ತಾಗಿ ಸಮಂತಪಂಚಕದ ಹೊರಗೆ ಸಹಸ್ರಾರು ಶಿಬಿರಗಳನ್ನು ಮಾಡಿಸಿದನು.
06001007a ಶೂನ್ಯೇವ ಪೃಥಿವೀ ಸರ್ವಾ ಬಾಲವೃದ್ಧಾವಶೇಷಿತಾ।
06001007c ನಿರಶ್ವಪುರುಷಾ ಚಾಸೀದ್ರಥಕುಂಜರವರ್ಜಿತಾ।।
ಕೇವಲ ಬಾಲಕ ವೃದ್ಧರು ಉಳಿದಿದ್ದ ಇಡೀ ಭೂಮಿಯು ಕುದುರೆ-ಪುರುಷ-ರಥ-ಕುಂಜರಗಳಿಲ್ಲದೇ ಶೂನ್ಯವಾಗಿ ತೋರಿತು.
06001008a ಯಾವತ್ತಪತಿ ಸೂರ್ಯೋ ಹಿ ಜಂಬೂದ್ವೀಪಸ್ಯ ಮಂಡಲಂ।
06001008c ತಾವದೇವ ಸಮಾವೃತ್ತಂ ಬಲಂ ಪಾರ್ಥಿವಸತ್ತಮ।।
ಪಾರ್ಥಿವಸತ್ತಮ! ಸೂರ್ಯನು ಸುಡುವ ಜಂಬೂದ್ವೀಪದ ಎಲ್ಲ ಕಡೆಗಳಿಂದ ಸೇನೆಗಳನ್ನು ಒಟ್ಟುಗೂಡಿಸಲಾಗಿತ್ತು.
06001009a ಏಕಸ್ಥಾಃ ಸರ್ವವರ್ಣಾಸ್ತೇ ಮಂಡಲಂ ಬಹುಯೋಜನಂ।
06001009c ಪರ್ಯಾಕ್ರಾಮಂತ ದೇಶಾಂಶ್ಚ ನದೀಃ ಶೈಲಾನ್ವನಾನಿ ಚ।।
ದೇಶ, ನದಿ, ಶೈಲ, ವನಗಳನ್ನು ದಾಟಿ ಬಂದ ಸರ್ವವರ್ಣದವರೂ ಬಹುಯೋಜನ ಮಂಡಲಗಳಲ್ಲಿ ಒಟ್ಟಾಗಿದ್ದರು.
06001010a ತೇಷಾಂ ಯುಧಿಷ್ಠಿರೋ ರಾಜಾ ಸರ್ವೇಷಾಂ ಪುರುಷರ್ಷಭ।
06001010c ಆದಿದೇಶ ಸವಾಹಾನಾಂ ಭಕ್ಷ್ಯಭೋಜ್ಯಮನುತ್ತಮಂ।।
ಪುರುಷರ್ಷಭ! ರಾಜ ಯುಧಿಷ್ಠಿರನು ಅವರ ವಾಹನಗಳೊಂದಿಗೆ ಎಲ್ಲರಿಗೂ ಅನುತ್ತಮ ಭಕ್ಷ-ಭೋಜ್ಯಗಳನ್ನು ನಿಯೋಜಿಸಿದನು.
06001011a ಸಂಜ್ಞಾಶ್ಚ ವಿವಿಧಾಸ್ತಾಸ್ತಾಸ್ತೇಷಾಂ ಚಕ್ರೇ ಯುಧಿಷ್ಠಿರಃ।
06001011c ಏವಂವಾದೀ ವೇದಿತವ್ಯಃ ಪಾಂಡವೇಯೋಽಯಂ ಇತ್ಯುತ।।
ಯುಧಿಷ್ಠಿರನು ಅವರಿಗೆ ವಿವಿಧ ಸಂಜ್ಞೆಗಳನ್ನು ಕೊಟ್ಟನು. ಇವುಗಳನ್ನು ಹೇಳುವುದರಿಂದ ಅವರು ಪಾಂಡವರ ಕಡೆಯವರೆಂದು ತಿಳಿಯಬಹುದಾಗಿತ್ತು.
06001012a ಅಭಿಜ್ಞಾನಾನಿ ಸರ್ವೇಷಾಂ ಸಂಜ್ಞಾಶ್ಚಾಭರಣಾನಿ ಚ।
06001012c ಯೋಜಯಾಮಾಸ ಕೌರವ್ಯೋ ಯುದ್ಧಕಾಲ ಉಪಸ್ಥಿತೇ।।
ಹಾಗೆಯೇ ಕೌರವ್ಯನು ಯುದ್ಧಕಾಲದಲ್ಲಿ ಗುರುತಿಸಲಿಕ್ಕಾಗಿ ಎಲ್ಲರಿಗೂ ಸಂಜ್ಞೆಗಳನ್ನೂ ಆಭರಣಗಳನ್ನೂ ಆಯೋಜಿಸಿದನು.
06001013a ದೃಷ್ಟ್ವಾ ಧ್ವಜಾಗ್ರಂ ಪಾರ್ಥಾನಾಂ ಧಾರ್ತರಾಷ್ಟ್ರೋ ಮಹಾಮನಾಃ।
06001013c ಸಹ ಸರ್ವೈರ್ಮಹೀಪಾಲೈಃ ಪ್ರತ್ಯವ್ಯೂಹತ ಪಾಂಡವಾನ್।।
06001014a ಪಾಂಡುರೇಣಾತಪತ್ರೇಣ ಧ್ರಿಯಮಾಣೇನ ಮೂರ್ಧನಿ।
06001014c ಮಧ್ಯೇ ನಾಗಸಹಸ್ರಸ್ಯ ಭ್ರಾತೃಭಿಃ ಪರಿವಾರಿತಂ।।
ಪಾರ್ಥರ ಧ್ವಜಾಗ್ರವನ್ನು ನೋಡಿದ ಮಹಾಮನಸ್ವಿ ಧಾರ್ತರಾಷ್ಟ್ರನು ನೆತ್ತಿಯ ಮೇಲೆ ಹಿಡಿದಿದ್ದ ಬಿಳಿಯ ಕೊಡೆಯ ನೆರಳಿನಲ್ಲಿ, ಸಹಸ್ರಾರು ಆನೆಗಳ ಮಧ್ಯೆ, ತಮ್ಮಂದಿರಿಂದ ಪರಿವಾರಿತನಾಗಿ ಸರ್ವ ಮಹೀಪಾಲರೊಂದಿಗೆ ಪಾಂಡವರ ವಿರುದ್ಧ ವ್ಯೂಹವನ್ನು ರಚಿಸಿದನು.
06001015a ದೃಷ್ಟ್ವಾ ದುರ್ಯೋಧನಂ ಹೃಷ್ಟಾಃ ಸರ್ವೇ ಪಾಂಡವಸೈನಿಕಾಃ।
06001015c ದಧ್ಮುಃ ಸರ್ವೇ ಮಹಾಶಂಖಾನ್ಭೇರೀರ್ಜಘ್ನುಃ ಸಹಸ್ರಶಃ।।
ದುರ್ಯೋಧನನನ್ನು ನೋಡಿ ಸಂತೋಷದಿಂದ ಸರ್ವ ಪಾಂಡವಸೈನಿಕರೂ ಸಹಸ್ರಾರು ಮಹಾಶಂಖಗಳನ್ನು ಊದಿದರು ಮತ್ತು ಭೇರಿಗಳನ್ನು ಬಾರಿಸಿದರು.
06001016a ತತಃ ಪ್ರಹೃಷ್ಟಾಂ ಸ್ವಾಂ ಸೇನಾಮಭಿವೀಕ್ಷ್ಯಾಥ ಪಾಂಡವಾಃ।
06001016c ಬಭೂವುರ್ಹೃಷ್ಟಮನಸೋ ವಾಸುದೇವಶ್ಚ ವೀರ್ಯವಾನ್।।
ಆಗ ಪ್ರಹೃಷ್ಟರಾಗಿದ್ದ ತಮ್ಮ ಸೇನೆಯನ್ನು ನೋಡಿ ಪಾಂಡವರೂ ವೀರ್ಯವಾನ್ ವಾಸುದೇವನೂ ಹೃಷ್ಟಮನಸ್ಕರಾದರು.
06001017a ತತೋ ಯೋಧಾನ್ ಹರ್ಷಯಂತೌ ವಾಸುದೇವಧನಂಜಯೌ।
06001017c ದಧ್ಮತುಃ ಪುರುಷವ್ಯಾಘ್ರೌ ದಿವ್ಯೌ ಶಂಖೌ ರಥೇ ಸ್ಥಿತೌ।।
ಆಗ ಯೋಧರನ್ನು ಹರ್ಷಗೊಳಿಸುತ್ತಾ ವಾಸುದೇವ-ಧನಂಜಯರಿಬ್ಬರು ಪುರುಷವ್ಯಾಘ್ರರೂ ರಥದಲ್ಲಿ ನಿಂತು ದಿವ್ಯ ಶಂಖಗಳನ್ನು ಊದಿದರು.
06001018a ಪಾಂಚಜನ್ಯಸ್ಯ ನಿರ್ಘೋಷಂ ದೇವದತ್ತಸ್ಯ ಚೋಭಯೋಃ।
06001018c ಶ್ರುತ್ವಾ ಸವಾಹನಾ ಯೋಧಾಃ ಶಕೃನ್ಮೂತ್ರಂ ಪ್ರಸುಸ್ರುವುಃ।।
ಪಾಂಚಜನ್ಯ ಮತ್ತು ದೇವದತ್ತ ಇವೆರಡರ ನಿರ್ಘೋಷವನ್ನು ಕೇಳಿ ಪ್ರಾಣಿಗಳೊಂದಿಗೆ ಯೋಧರೂ ಮಲ-ಮೂತ್ರಗಳನ್ನು ವಿಸರ್ಜಿಸಿದರು.
06001019a ಯಥಾ ಸಿಂಹಸ್ಯ ನದತಃ ಸ್ವನಂ ಶ್ರುತ್ವೇತರೇ ಮೃಗಾಃ।
06001019c ತ್ರಸೇಯುಸ್ತದ್ವದೇವಾಸೀದ್ಧಾರ್ತರಾಷ್ಟ್ರಬಲಂ ತದಾ।।
ಗರ್ಜಿಸುವ ಸಿಂಹದ ಕೂಗನ್ನು ಕೇಳಿ ಇತರ ಮೃಗಗಳು ಭಯಪಡುವಂತೆ ಧಾರ್ತರಾಷ್ಟ್ರನ ಸೇನೆಯು ಶಂಖನಾದವನ್ನು ಕೇಳಿ ತಲ್ಲಣಿಸಿತು.
06001020a ಉದತಿಷ್ಠದ್ರಜೋ ಭೌಮಂ ನ ಪ್ರಾಜ್ಞಾಯತ ಕಿಂ ಚನ।
06001020c ಅಂತರ್ಧೀಯತ ಚಾದಿತ್ಯಃ ಸೈನ್ಯೇನ ರಜಸಾವೃತಃ।।
ಮೇಲೆದ್ದ ಧೂಳಿನಿಂದ ಭೂಮಿಯಲ್ಲಿ ಏನೂ ಕಾಣದಂತಾಯಿತು. ಆದಿತ್ಯನು ಮುಳುಗಿದನೋ ಎನ್ನುವಂತೆ ಧೂಳು ಸೈನ್ಯಗಳನ್ನು ಆವರಿಸಿತು.
06001021a ವವರ್ಷ ಚಾತ್ರ ಪರ್ಜನ್ಯೋ ಮಾಂಸಶೋಣಿತವೃಷ್ಟಿಮಾನ್।
06001021c ವ್ಯುಕ್ಷನ್ಸರ್ವಾಣ್ಯನೀಕಾನಿ ತದದ್ಭುತಮಿವಾಭವತ್।।
ಅಲ್ಲಿ ಕಪ್ಪು ಮೋಡಗಳು ಸೇನೆಗಳನ್ನು ಸುತ್ತುವರೆದು ರಕ್ತ-ಮಾಂಸಗಳಿಂದ ಕೂಡಿದ ಮಳೆಯನ್ನು ಸುರಿಸಿದ ಅದ್ಭುತವು ನಡೆಯಿತು.
06001022a ವಾಯುಸ್ತತಃ ಪ್ರಾದುರಭೂನ್ನೀಚೈಃ ಶರ್ಕರಕರ್ಷಣಃ।
06001022c ವಿನಿಘ್ನಂಸ್ತಾನ್ಯನೀಕಾನಿ ವಿಧಮಂಶ್ಚೈವ ತದ್ರಜಃ।।
ಆಗ ಕಲ್ಲು-ಮಣ್ಣುಗಳಿಂದ ಕೂಡಿದ ಜೋರಾದ ಭಿರುಗಾಳಿಯು ಕೆಳಗಿನಿಂದ ಬೀಸಿ ಆ ಧೂಳಿನಿಂದ ಸೇನೆಗಳನ್ನು ಬಡಿದು ಹೊಡೆಯಿತು.
06001023a ಉಭೇ ಸೇನೇ ತದಾ ರಾಜನ್ಯುದ್ಧಾಯ ಮುದಿತೇ ಭೃಶಂ।
06001023c ಕುರುಕ್ಷೇತ್ರೇ ಸ್ಥಿತೇ ಯತ್ತೇ ಸಾಗರಕ್ಷುಭಿತೋಪಮೇ।।
ರಾಜನ್! ಆಗ ಯುದ್ಧಕ್ಕೆ ತುಂಬ ಸಂತೋಷಗೊಂಡು ಕುರುಕ್ಷೇತ್ರದಲ್ಲಿ ನಿಂತಿರುವ ಆ ಎರಡೂ ಸೇನೆಗಳೂ ಅಲ್ಲೋಲಕಲ್ಲೋಲಗೊಳ್ಳುತ್ತಿರುವ ಸಾಗರಗಳಂತೆ ತೋರಿದವು.
06001024a ತಯೋಸ್ತು ಸೇನಯೋರಾಸೀದದ್ಭುತಃ ಸ ಸಮಾಗಮಃ।
06001024c ಯುಗಾಂತೇ ಸಮನುಪ್ರಾಪ್ತೇ ದ್ವಯೋಃ ಸಾಗರಯೋರಿವ।।
ಅವರ ಆ ಸೇನೆಗಳ ಸಮಾಗಮವು ಯುಗಾಂತದಲ್ಲಿ ಎರಡು ಸಾಗರಗಳು ಸೇರುವಂತೆ ಅದ್ಭುತವಾಗಿತ್ತು.
06001025a ಶೂನ್ಯಾಸೀತ್ಪೃಥಿವೀ ಸರ್ವಾ ಬಾಲವೃದ್ಧಾವಶೇಷಿತಾ।
06001025c ತೇನ ಸೇನಾಸಮೂಹೇನ ಸಮಾನೀತೇನ ಕೌರವೈಃ।।
ಕೌರವರು ಒಟ್ಟುಸೇರಿಸಿದ ಸೇನಾಸಮೂಹಗಳಿಂದ ಬಾಲಕ-ವೃದ್ಧರನ್ನು ಬಿಟ್ಟು ಭೂಮಿಯಲ್ಲಾ ಬರಿದಾಗಿತ್ತು.
06001026a ತತಸ್ತೇ ಸಮಯಂ ಚಕ್ರುಃ ಕುರುಪಾಂಡವಸೋಮಕಾಃ।
06001026c ಧರ್ಮಾಂಶ್ಚ ಸ್ಥಾಪಯಾಮಾಸುರ್ಯುದ್ಧಾನಾಂ ಭರತರ್ಷಭ।।
ಭರತರ್ಷಭ! ಆಗ ಕುರು-ಪಾಂಡವ-ಸೋಮಕರು ಒಪ್ಪಂದವನ್ನು ಮಾಡಿಕೊಂಡು ಯುದ್ಧಗಳಲ್ಲಿ ನಿಯಮ-ಧರ್ಮಗಳನ್ನು ಸ್ಥಾಪಿಸಿದರು.
06001027a ನಿವೃತ್ತೇ ಚೈವ ನೋ ಯುದ್ಧೇ ಪ್ರೀತಿಶ್ಚ ಸ್ಯಾತ್ಪರಸ್ಪರಂ3।
06001027c ಯಥಾಪುರಂ4 ಯಥಾಯೋಗಂ ನ ಚ ಸ್ಯಾಚ್ಚಲನಂ ಪುನಃ।।
“ಈ ಯುದ್ಧವು ಮುಗಿದನಂತರ5 ನಾವು ಪರಸ್ಪರರೊಡನೆ ಪ್ರೀತಿಯಿಂದಲೇ ಇರಬೇಕು. ಮೊದಲಿನಂತೆಯೇ ಪರಸ್ಪರರಲ್ಲಿ ನಡೆದು ಕೊಳ್ಳಬೇಕು.
06001028a ವಾಚಾ ಯುದ್ಧೇ ಪ್ರವೃತ್ತೇ ನೋ ವಾಚೈವ ಪ್ರತಿಯೋಧನಂ।
06001028c ನಿಷ್ಕ್ರಾಂತಃ ಪೃತನಾಮಧ್ಯಾನ್ನ ಹಂತವ್ಯಃ ಕಥಂ ಚನ।।
ವಾಕ್ಯುದ್ಧದಲ್ಲಿ ಪ್ರವೃತ್ತರಾದವರನ್ನು ವಾಕ್ಯುದ್ಧದಿಂದಲೇ ಎದುರಿಸಬೇಕು. ಸೇನೆಯನ್ನು ಬಿಟ್ಟು ಹೋಗುವವರನ್ನು ಎಂದೂ ಕೊಲ್ಲಬಾರದು.
06001029a ರಥೀ ಚ ರಥಿನಾ ಯೋಧ್ಯೋ ಗಜೇನ ಗಜಧೂರ್ಗತಃ।
06001029c ಅಶ್ವೇನಾಶ್ವೀ ಪದಾತಿಶ್ಚ ಪದಾತೇನೈವ ಭಾರತ।।
ರಥದಲ್ಲಿರುವವನೊಡನೆ ರಥದಲ್ಲಿರುವವನೇ, ಆನೆಯ ಸವಾರನೊಡನೆ ಆನೆಯ ಸವಾರಿಯೇ, ಕುದುರೆಯ ಸವಾರನೊಡನೆ ಕುದುರೆಯ ಸವಾರನೇ, ಮತ್ತು ಪದಾತಿಯೊಡನೆ ಪದಾತಿಯೇ ಯುದ್ಧಮಾಡಬೇಕು.
06001030a ಯಥಾಯೋಗಂ ಯಥಾವೀರ್ಯಂ ಯಥೋತ್ಸಾಹಂ ಯಥಾವಯಃ।
06001030c ಸಮಾಭಾಷ್ಯ ಪ್ರಹರ್ತವ್ಯಂ ನ ವಿಶ್ವಸ್ತೇ ನ ವಿಹ್ವಲೇ।।
ಯೋಗ, ವೀರ್ಯ, ಉತ್ಸಾಹ ಮತ್ತು ವಯಸ್ಸಿಗೆ ತಕ್ಕಂತೆ, ಎಚ್ಚರಿಕೆಯನ್ನಿತ್ತು ಹೊಡೆಯಬೇಕು6. ಸಿದ್ಧನಾಗಿರದೇ ಇರುವವನನ್ನು ಅಥವಾ ಭಯಭೀತನಾದವನ್ನು ಹೊಡೆಯಬಾರದು.
06001031a ಪರೇಣ ಸಹ ಸಮ್ಯುಕ್ತಃ ಪ್ರಮತ್ತೋ ವಿಮುಖಸ್ತಥಾ।
06001031c ಕ್ಷೀಣಶಸ್ತ್ರೋ ವಿವರ್ಮಾ ಚ ನ ಹಂತವ್ಯಃ ಕಥಂ ಚನ।।
ಇನ್ನೊಬ್ಬರೊಡನೆ ಹೋರಾಡುತ್ತಿರುವವನನ್ನು7, ಬುದ್ಧಿ ಕಳೆದುಕೊಂಡಿರುವವನನ್ನು, ಹಿಂದೆ ಓಡಿಹೋಗುತ್ತಿರುವನನ್ನು, ಶಸ್ತ್ರವನ್ನು ಕಳೆದುಕೊಂಡವನನ್ನು, ಕವಚವಿಲ್ಲದವನನ್ನು ಎಂದೂ ಹೊಡೆಯಬಾರದು.
06001032a ನ ಸೂತೇಷು ನ ಧುರ್ಯೇಷು ನ ಚ ಶಸ್ತ್ರೋಪನಾಯಿಷು।
06001032c ನ ಭೇರೀಶಂಖವಾದೇಷು ಪ್ರಹರ್ತವ್ಯಂ ಕಥಂ ಚನ।।
ಸೂತರನ್ನು8, ಕಟ್ಟಿದ ಪ್ರಾಣಿಗಳನ್ನು, ಶಸ್ತ್ರಗಳ ಸರಬರಾಜುಮಾಡುವವರನ್ನು, ಭೇರಿ-ಶಂಖಗಳನ್ನು ನುಡಿಸುವವರನ್ನು ಎಂದೂ ಹೊಡೆಯಬಾರದು.”
06001033a ಏವಂ ತೇ ಸಮಯಂ ಕೃತ್ವಾ ಕುರುಪಾಂಡವಸೋಮಕಾಃ।
06001033c ವಿಸ್ಮಯಂ ಪರಮಂ ಜಗ್ಮುಃ ಪ್ರೇಕ್ಷಮಾಣಾಃ ಪರಸ್ಪರಂ।।
ಈ ರೀತಿ ಒಪ್ಪಂದವನ್ನು ಮಾಡಿಕೊಂಡು ಕುರು-ಪಾಂಡವ-ಸೋಮಕರು ಪರಸ್ಪರರನ್ನು ವೀಕ್ಷಿಸಿ ಪರಮ ವಿಸ್ಮಿತರಾದರು.
06001034a ನಿವಿಶ್ಯ ಚ ಮಹಾತ್ಮಾನಸ್ತತಸ್ತೇ ಪುರುಷರ್ಷಭಾಃ।
06001034c ಹೃಷ್ಟರೂಪಾಃ ಸುಮನಸೋ ಬಭೂವುಃ ಸಹಸೈನಿಕಾಃ।।
ಅಲ್ಲಿ ತಂಗಿದ ಆ ಮಹಾತ್ಮ ಪುರುಷರ್ಷಭರು ಸೈನಿಕರೊಂದಿಗೆ ಹೃಷ್ಟರೂಪರೂ ಸುಮನಸ್ಕರೂ ಆದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ಸೈನ್ಯಶಿಕ್ಷಣೇ ಪ್ರಥಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ಸೈನ್ಯಶಿಕ್ಷಣ ಎನ್ನುವ ಮೊದಲನೇ ಅಧ್ಯಾಯವು.
-
ಇನ್ನು ಭೀಷ್ಮಪರ್ವವು ಮುಗಿಯುವವರೆಗೆ “ಜನಮೇಜಯ ಉವಾಚ” ಎನ್ನುವುದು ಬರುವುದಿಲ್ಲ. ↩︎
-
“ಸುಮಹಾತ್ಮಾನೋ” ಎಂಬ ಪಾಠವೂ ಇದೆ (ಭಾರತ ದರ್ಶನ ಪ್ರಕಾಶನ, ಸಂಪುಟ 12, ಪುಟ 1). ↩︎
-
ನಿವೃತ್ತೇ ವಿಹಿತೇ ಯುದ್ಧೇ ಸ್ಯಾತ್ಪ್ರೀತಿರ್ನ ಪರಸ್ಪರಂ। ಎಂಬ ಪಾಠಾಂತರವಿದೆ (ಭಾರತ ದರ್ಶನ ಪ್ರಕಾಶನ, ಸಂಪುಟ 12, ಪುಟ 5). ↩︎
-
ಕೆಲವು ಪುಸ್ತಕಗಳಲ್ಲಿ ಯಥಾಪರ ಎಂಬ ಪಾಠಾಂತರವಿದೆ. ಹೀಗೆ ಈ ಶ್ಲೋಕದ ಉತ್ತರಾರ್ಧವನ್ನು ಕೆಲವರು ಈ ರೀತಿ ವ್ಯಾಖ್ಯಾನಿಸಿದ್ದಾರೆ: ಯಥಾಯೋಗಂ = ತುಲ್ಯಯೋರ್ಯೋಗಸ್ಯ ಅನತಿಕ್ರಮಣಂ - ಸಮಾನಬಲವುಳ್ಳವರು ಮಾತ್ರವೇ ಪರಸ್ಪರರಲ್ಲಿ ಯುದ್ಧಮಾಡಬೇಕು. ಯಥಾಪರಂ = ಯಥಾ ಏನ ಪ್ರಕಾರೇಣ ಅಪರಂ ಅನುತ್ಕೃಷ್ಟಂ ಅನ್ಯಾಯ್ಯಂ ಇತ್ಯರ್ಥಃ। ತಥಾ ನ ಕಸ್ಯಚಿತ್ತುಲ್ಯಯೋಗಾಕ್ರಮಃ ಸ್ಯಾದಿತಿ ಭಾವಃ - ಅನ್ಯಾಯವಾಗದಂತೆ ಅಸಮಾನಬಲವುಳ್ಳವರು ಪರಸ್ಪರ ಕಾದಾಡುವಂತೆ ಯಾವನೊಬ್ಬನೂ ಬಲದಲ್ಲಿ ತನ್ನನ್ನು ಮೀರಿದವನೊಡನೆ ಯುದ್ಧಮಾಡದಂತೆ ನೋಡಿಕೊಳ್ಳಬೇಕು. ↩︎
-
ಕೆಲವು ವ್ಯಾಖ್ಯಾನಕಾರರು ಯುದ್ಧೇ ನಿವೃತ್ತೇ ಎಂಬುದಕ್ಕೆ ಪ್ರತಿದಿನ ಸಾಯಂಕಾಲ ಯುದ್ಧವಿರಾಮದ ಸಮಯದಲ್ಲಿ ಎಂದು ಅರ್ಥೈಸಿದ್ದಾರೆ. ↩︎
-
ಅವನು ತನಗೆ ಸರಿಸಮನಾಗಿದ್ದಾನೆಯೇ? ಅವನಿಗೆ ತನ್ನೊಡನೆ ಯುದ್ಧಮಾಡುವ ಇಚ್ಛೆಯಿದೆಯೇ? ಅವನು ತನ್ನೊಡನೆ ಯುದ್ಧಮಾಡಲು ಉತ್ಸಾಹದಿಂದಿರುವನೇ? ಅವನಿಗೆ ತನ್ನೊಡನೆ ಯುದ್ಧಮಾಡಲು ಸಾಕಷ್ಟು ಬಲವಿದೆಯೇ? ಎಂದು ಸಮಾಲೋಚಿಸಿ ಎದುರಾಳಿಯನ್ನು ಆರಿಸಿಕೊಳ್ಳಬೇಕು. (ಭಾರತ ದರ್ಶನ ಪ್ರಕಾಶನ, ಸಂಪುಟ 12, ಪುಟ 6-7). ↩︎
-
ಒಬ್ಬನು ಇನ್ನೊಬ್ಬನೊಡನೆ ಯುದ್ಧಮಾಡುತ್ತಿರುವಾಗ ತನ್ನ ಕಡೆಯವನ ಬಲವು ಕ್ಷೀಣಿಸುತ್ತಿರುವುದನ್ನು ನೋಡಿ ಮಿತ್ರಯೋಧನಾದ ಇನ್ನೊಬ್ಬನು ಮಧ್ಯದಲ್ಲಿ ಪ್ರವೇಶಿಸಿ ಎದುರಾಳಿಯನ್ನು ಸಂಹರಿಸಬಾರದು. (ಭಾರತ ದರ್ಶನ ಪ್ರಕಾಶನ, ಸಂಪುಟ 12, ಪುಟ 7). ↩︎
-
ಕೆಲವು ವ್ಯಾಖ್ಯಾನಕಾರರು ಸೂತ ಎಂಬ ಶಬ್ಧಕ್ಕೆ ಕುದುರೆಗಳನ್ನು ಸಾಕುವವರೆಂದೂ ಧುರ್ಯ ಎಂಬ ಶಬ್ಧಕ್ಕೆ ಭಾರವನ್ನು ಹೊರುವ ಸೇವಕರೆಂದೂ ಅರ್ಥೈಸಿದ್ದಾರೆ. ↩︎