194 ಭೀಷ್ಮಾದಿಶಕ್ತಿಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಅಂಬೋಽಪಾಖ್ಯಾನ ಪರ್ವ

ಅಧ್ಯಾಯ 194

ಸಾರ

ಪಾಂಡವರ ಸೇನೆಯನ್ನು ಎಷ್ಟು ದಿನದಲ್ಲಿ ನಾಶಪಡಿಸಬಲ್ಲರೆಂದು ದುರ್ಯೋಧನನು ಕೇಳಲು ಭೀಷ್ಮನು ಒಂದು ತಿಂಗಳೆಂದೂ (1-14), ದ್ರೋಣನು ಒಂದು ತಿಂಗಳೆಂದೂ, ಕೃಪನು ಎರಡು ತಿಂಗಳೆಂದೂ, ಅಶ್ವತ್ಥಾಮನು ಹತ್ತು ರಾತ್ರಿಗಳೆಂದೂ, ಕರ್ಣನು ಐದು ರಾತ್ರಿಗಳೆಂದೂ ಹೇಳಿದುದು (15-22).

05194001 ಸಂಜಯ ಉವಾಚ।
05194001a ಪ್ರಭಾತಾಯಾಂ ತು ಶರ್ವರ್ಯಾಂ ಪುನರೇವ ಸುತಸ್ತವ।
05194001c ಮಧ್ಯೇ ಸರ್ವಸ್ಯ ಸೈನ್ಯಸ್ಯ ಪಿತಾಮಹಮಪೃಚ್ಚತ।।

ಸಂಜಯನು ಹೇಳಿದನು: “ರಾತ್ರಿಯು ಕಳೆದು ಬೆಳಗಾಗಲು ನಿನ್ನ ಮಗನು ಪುನಃ ಸರ್ವ ಸೇನೆಯ ಮಧ್ಯೆ ಪಿತಾಮಹನನ್ನು ಕೇಳಿದನು:

05194002a ಪಾಂಡವೇಯಸ್ಯ ಗಾಂಗೇಯ ಯದೇತತ್ಸೈನ್ಯಮುತ್ತಮಂ।
05194002c ಪ್ರಭೂತನರನಾಗಾಶ್ವಂ ಮಹಾರಥಸಮಾಕುಲಂ।।
05194003a ಭೀಮಾರ್ಜುನಪ್ರಭೃತಿಭಿರ್ಮಹೇಷ್ವಾಸೈರ್ಮಹಾಬಲೈಃ।
05194003c ಲೋಕಪಾಲೋಪಮೈರ್ಗುಪ್ತಂ ಧೃಷ್ಟದ್ಯುಮ್ನಪುರೋಗಮೈಃ।।
05194004a ಅಪ್ರಧೃಷ್ಯಮನಾವಾರ್ಯಮುದ್ವೃತ್ತಮಿವ ಸಾಗರಂ।
05194004c ಸೇನಾಸಾಗರಮಕ್ಷೋಭ್ಯಮಪಿ ದೇವೈರ್ಮಹಾಹವೇ।।
05194005a ಕೇನ ಕಾಲೇನ ಗಾಂಗೇಯ ಕ್ಷಪಯೇಥಾ ಮಹಾದ್ಯುತೇ।
05194005c ಆಚಾರ್ಯೋ ವಾ ಮಹೇಷ್ವಾಸಃ ಕೃಪೋ ವಾ ಸುಮಹಾಬಲಃ।।
05194006a ಕರ್ಣೋ ವಾ ಸಮರಶ್ಲಾಘೀ ದ್ರೌಣಿರ್ವಾ ದ್ವಿಜಸತ್ತಮಃ।
05194006c ದಿವ್ಯಾಸ್ತ್ರವಿದುಷಃ ಸರ್ವೇ ಭವಂತೋ ಹಿ ಬಲೇ ಮಮ।।

“ಗಾಂಗೇಯ! ಪಾಂಡವನ ಈ ಉತ್ತಮ ಸೈನ್ಯವನ್ನು, ನರ-ನಾಗ-ಅಶ್ವ ಮತ್ತು ಮಹಾರಥಗಳ ಸಂಕುಲದಿಂದ ಕೂಡಿದ, ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ಲೋಕಪಾಲಕರಂತಿರುವ ಭೀಮಾರ್ಜುನರೇ ಮೊದಲಾದವರ ರಕ್ಷಣೆಯಲ್ಲಿರುವ, ಗೆಲ್ಲಲಸಾಧ್ಯವಾದ, ತಡೆಯಲಸಾಧ್ಯವಾದ ಸಾಗರದಂತೆ ಉಕ್ಕಿ ಬರುತ್ತಿರುವ, ದೇವತೆಗಳಿಂದಲೂ ಅಲುಗಾಡಿಸಲಸಾಧ್ಯವಾದ ಈ ಸೇನಾ ಸಾಗರವನ್ನು ಗಾಂಗೇಯ! ನೀನಾಗಲೀ, ಅಥವಾ ಮಹೇಷ್ವಾಸ ಆಚಾರ್ಯನಾಗಲೀ, ಅಥವಾ ಮಹಾಬಲಿ ಕೃಪನಾಗಲೀ, ಅಥವಾ ಸಮರಶ್ಲಾಘೀ ಕರ್ಣನಾಗಲೀ ಅಥವಾ ದ್ವಿಜಸತ್ತಮ ದ್ರೌಣಿಯಾಗಲೀ ಎಷ್ಟುಸಮಯದಲ್ಲಿ ಮುಗಿಸಬಲ್ಲರು? ಏಕೆಂದರೆ ನನ್ನ ಬಲದಲ್ಲಿರುವ ನೀವೆಲ್ಲರೂ ದಿವ್ಯಾಸ್ತ್ರವಿದುಷರು.

05194007a ಏತದಿಚ್ಚಾಮ್ಯಹಂ ಜ್ಞಾತುಂ ಪರಂ ಕೌತೂಹಲಂ ಹಿ ಮೇ।
05194007c ಹೃದಿ ನಿತ್ಯಂ ಮಹಾಬಾಹೋ ವಕ್ತುಮರ್ಹಸಿ ತನ್ ಮಮ।।

ಮಹಾಬಾಹೋ! ಇದನ್ನು ತಿಳಿಯಲು ನಾನು ಇಚ್ಛಿಸುತ್ತೇನೆ. ನಿತ್ಯವೂ ಇದರ ಕುರಿತು ನನ್ನ ಹೃದಯದಲ್ಲಿ ಪರಮ ಕುತೂಹಲವಿದೆ. ಅದನ್ನು ನನಗೆ ಹೇಳಬೇಕು.”

05194008 ಭೀಷ್ಮ ಉವಾಚ।
05194008a ಅನುರೂಪಂ ಕುರುಶ್ರೇಷ್ಠ ತ್ವಯ್ಯೇತತ್ಪೃಥಿವೀಪತೇ।
05194008c ಬಲಾಬಲಮಮಿತ್ರಾಣಾಂ ಸ್ವೇಷಾಂ ಚ ಯದಿ ಪೃಚ್ಚಸಿ।।

ಭೀಷ್ಮನು ಹೇಳಿದನು: “ಪೃಥಿವೀಪತೇ! ಕುರುಶ್ರೇಷ್ಠ! ಅಮಿತ್ರರ ಮತ್ತು ನಮ್ಮವರ ಬಲಾಬಲಗಳ ಕುರಿತು ನೀನು ಕೇಳಿರುವ ಇದು ನಿನಗೆ ಅನುರೂಪವಾದುದು.

05194009a ಶೃಣು ರಾಜನ್ಮಮ ರಣೇ ಯಾ ಶಕ್ತಿಃ ಪರಮಾ ಭವೇತ್।
05194009c ಅಸ್ತ್ರವೀರ್ಯಂ ರಣೇ ಯಚ್ಚ ಭುಜಯೋಶ್ಚ ಮಹಾಭುಜ।।

ರಾಜನ್! ಮಹಾಭುಜ! ರಣದಲ್ಲಿ ನನ್ನ ಶಕ್ತಿಯ ಗಡಿಯೇನೆನ್ನುವುದನ್ನು, ರಣದಲ್ಲಿ ನನ್ನ ಭುಜಗಳ ಅಸ್ತ್ರವೀರ್ಯವನ್ನು ಕೇಳು.

05194010a ಆರ್ಜವೇನೈವ ಯುದ್ಧೇನ ಯೋದ್ಧವ್ಯ ಇತರೋ ಜನಃ।
05194010c ಮಾಯಾಯುದ್ಧೇನ ಮಾಯಾವೀ ಇತ್ಯೇತದ್ಧರ್ಮನಿಶ್ಚಯಃ।।

ಸಾಮಾನ್ಯ ಜನರು ಯುದ್ಧಮಾಡುವಾಗ ಆರ್ಜವದಿಂದಲೇ ಯುದ್ಧ ಮಾಡಬೇಕು. ಮಾಯಾವಿಯೊಂದಿಗೆ ಮಾಯಾಯುದ್ಧವನ್ನು ಮಾಡಬೇಕು. ಇದು ಧರ್ಮನಿಶ್ಚಯ.

05194011a ಹನ್ಯಾಮಹಂ ಮಹಾಬಾಹೋ ಪಾಂಡವಾನಾಮನೀಕಿನೀಂ।
05194011c ದಿವಸೇ ದಿವಸೇ ಕೃತ್ವಾ ಭಾಗಂ ಪ್ರಾಗಾಹ್ನಿಕಂ ಮಮ।।

ಮಹಾಬಾಹೋ! ಪಾಂಡವರ ಸೇನೆಯನ್ನು ದಿನ ದಿನವೂ ಮಧ್ಯಾಹ್ನದ ಮೊದಲ ಭಾಗವನ್ನಾಗಿಸಿ ನಾನು ಕೊಲ್ಲಬಲ್ಲೆ.

05194012a ಯೋಧಾನಾಂ ದಶಸಾಹಸ್ರಂ ಕೃತ್ವಾ ಭಾಗಂ ಮಹಾದ್ಯುತೇ।
05194012c ಸಹಸ್ರಂ ರಥಿನಾಮೇಕಮೇಷ ಭಾಗೋ ಮತೋ ಮಮ।।

ಮಹಾದ್ಯುತೇ! ಹತ್ತುಸಾವಿರ ಯೋಧರನ್ನು ಒಂದು ಭಾಗವನ್ನಾಗಿ ಮಾಡಿಕೊಂಡು ಒಂದು ಸಾವಿರ ರಥಿಕರು ಒಂದು ಭಾಗವಾಗುತ್ತಾರೆ ಎಂದು ನನ್ನ ಮತ.

05194013a ಅನೇನಾಹಂ ವಿಧಾನೇನ ಸಮ್ನದ್ಧಃ ಸತತೋತ್ಥಿತಃ।
05194013c ಕ್ಷಪಯೇಯಂ ಮಹತ್ಸೈನ್ಯಂ ಕಾಲೇನಾನೇನ ಭಾರತ।।

ಈ ರೀತಿಯ ವಿಧಾನದಿಂದ ಸದಾ ಸನ್ನದ್ಧನಾಗಿ ಮೇಲೆ ನಿಂತಿದ್ದರೆ ಭಾರತ! ನಾನು ಈ ಸೇನೆಯನ್ನು ಸಮಯದಲ್ಲಿ ಕೊನೆಗಾಣಿಸಬಹುದು.

05194014a ಯದಿ ತ್ವಸ್ತ್ರಾಣಿ ಮುಂಚೇಯಂ ಮಹಾಂತಿ ಸಮರೇ ಸ್ಥಿತಃ।
05194014c ಶತಸಾಹಸ್ರಘಾತೀನಿ ಹನ್ಯಾಂ ಮಾಸೇನ ಭಾರತ।।

ಭಾರತ! ಒಂದುವೇಳೆ ನೂರುಸಾವಿರರನ್ನು ಸಂಹರಿಸುವ ಮಹಾ ಅಸ್ತ್ರಗಳನ್ನು ಪ್ರಯೋಗಿಸಿದರೆ ಸಮರದಲ್ಲಿ ನಿಂತು ಒಂದು ತಿಂಗಳಲ್ಲಿ ಕೊಲ್ಲಬಹುದು.””

05194015 ಸಂಜಯ ಉವಾಚ।
05194015a ಶ್ರುತ್ವಾ ಭೀಷ್ಮಸ್ಯ ತದ್ವಾಕ್ಯಂ ರಾಜಾ ದುರ್ಯೋಧನಸ್ತದಾ।
05194015c ಪರ್ಯಪೃಚ್ಚತ ರಾಜೇಂದ್ರ ದ್ರೋಣಮಂಗಿರಸಾಂ ವರಂ।।

ಸಂಜಯನು ಹೇಳಿದನು: “ರಾಜೇಂದ್ರ! ಭೀಷ್ಮನ ಆ ಮಾತುಗಳನ್ನು ಕೇಳಿ ರಾಜಾ ದುರ್ಯೋಧನನು ಅಂಗಿರಸರಲ್ಲಿ ಶ್ರೇಷ್ಠನಾದ ದ್ರೋಣನನ್ನು ಪ್ರಶ್ನಿಸಿದನು.

05194016a ಆಚಾರ್ಯ ಕೇನ ಕಾಲೇನ ಪಾಂಡುಪುತ್ರಸ್ಯ ಸೈನಿಕಾನ್।
05194016c ನಿಹನ್ಯಾ ಇತಿ ತಂ ದ್ರೋಣಃ ಪ್ರತ್ಯುವಾಚ ಹಸನ್ನಿವ।।

“ಆಚಾರ್ಯ! ಪಾಂಡುಪುತ್ರರ ಸೈನಿಕರನ್ನು ಎಷ್ಟು ಸಮಯದಲ್ಲಿ ಕೊಲ್ಲಬಲ್ಲಿರಿ?” ಇದಕ್ಕೆ ದ್ರೋಣನು ನಗುತ್ತಾ ಉತ್ತರಿಸಿದನು.

05194017a ಸ್ಥವಿರೋಽಸ್ಮಿ ಕುರುಶ್ರೇಷ್ಠ ಮಂದಪ್ರಾಣವಿಚೇಷ್ಟಿತಃ।
05194017c ಅಸ್ತ್ರಾಗ್ನಿನಾ ನಿರ್ದಹೇಯಂ ಪಾಂಡವಾನಾಮನೀಕಿನೀಂ।।
05194018a ಯಥಾ ಭೀಷ್ಮಃ ಶಾಂತನವೋ ಮಾಸೇನೇತಿ ಮತಿರ್ಮಮ।
05194018c ಏಷಾ ಮೇ ಪರಮಾ ಶಕ್ತಿರೇತನ್ ಮೇ ಪರಮಂ ಬಲಂ।।

“ಕುರುಶ್ರೇಷ್ಠ! ಮುದುಕನಾಗಿದ್ದೇನೆ. ಪ್ರಾಣವು ಮಂದವಾಗಿ ನಡೆದುಕೊಳ್ಳುತ್ತಿದೆ. ಶಾಂತನವ ಭೀಷ್ಮನಂತೆ ನಾನೂ ಕೂಡ ಅಸ್ತ್ರಾಗ್ನಿಯಿಂದ ಪಾಂಡವರ ಸೇನೆಯನ್ನು ಒಂದು ತಿಂಗಳಲ್ಲಿ ಸುಡಬಲ್ಲೆನೆಂದೆನಿಸುತ್ತದೆ. ಇದು ನನ್ನ ಶಕ್ತಿಯ ಮಿತಿ. ಮತ್ತು ಇದು ನನ್ನ ಬಲದ ಮಿತಿ.”

05194019a ದ್ವಾಭ್ಯಾಮೇವ ತು ಮಾಸಾಭ್ಯಾಂ ಕೃಪಃ ಶಾರದ್ವತೋಽಬ್ರವೀತ್।
05194019c ದ್ರೌಣಿಸ್ತು ದಶರಾತ್ರೇಣ ಪ್ರತಿಜಜ್ಞೇ ಬಲಕ್ಷಯಂ।
05194019e ಕರ್ಣಸ್ತು ಪಂಚರಾತ್ರೇಣ ಪ್ರತಿಜಜ್ಞೇ ಮಹಾಸ್ತ್ರವಿತ್।।

ಎರಡೇ ತಿಂಗಳುಗಳು ಸಾಕೆಂದು ಶಾರದ್ವತ ಕೃಪನು ಹೇಳಿದನು. ದ್ರೌಣಿಯಾದರೋ ಹತ್ತು ರಾತ್ರಿಗಳಲ್ಲಿ ಬಲಕ್ಷಯಮಾಡುತ್ತೇನೆಂದು ಪ್ರತಿಜ್ಞೆಮಾಡಿದನು. ಮಹಾಸ್ತ್ರಗಳನ್ನು ತಿಳಿದಿದ್ದ ಕರ್ಣನು ಐದು ರಾತ್ರಿಗಳಲ್ಲೆಂದು ಪ್ರತಿಜ್ಞೆ ಮಾಡಿದನು.

05194020a ತಚ್ಚ್ರುತ್ವಾ ಸೂತಪುತ್ರಸ್ಯ ವಾಕ್ಯಂ ಸಾಗರಗಾಸುತಃ।
05194020c ಜಹಾಸ ಸಸ್ವನಂ ಹಾಸಂ ವಾಕ್ಯಂ ಚೇದಮುವಾಚ ಹ।।

ಸೂತಪುತ್ರನ ಆ ಮಾತುಗಳನ್ನು ಕೇಳಿ ಸಾಗರಗೆಯ ಸುತನು ಜೋರಾಗಿ ನಕ್ಕು ಹಾಸ್ಯದ ಈ ಮಾತುಗಳನ್ನಾಡಿದನು:

05194021a ನ ಹಿ ತಾವದ್ರಣೇ ಪಾರ್ಥಂ ಬಾಣಖಡ್ಗಧನುರ್ಧರಂ।
05194021c ವಾಸುದೇವಸಮಾಯುಕ್ತಂ ರಥೇನೋದ್ಯಂತಮಚ್ಯುತಂ।।
05194022a ಸಮಾಗಚ್ಚಸಿ ರಾಧೇಯ ತೇನೈವಮಭಿಮನ್ಯಸೇ।
05194022c ಶಕ್ಯಮೇವಂ ಚ ಭೂಯಶ್ಚ ತ್ವಯಾ ವಕ್ತುಂ ಯಥೇಷ್ಟತಃ।।

“ರಾಧೇಯ! ರಣದಲ್ಲಿ ನೀನು ಎಲ್ಲಿಯವರೆಗೆ ಬಾಣಖಡ್ಗಧನುರ್ಧರನಾದ ಪಾರ್ಥನನ್ನು, ಜೊತೆಯಲ್ಲಿ ರಥವನ್ನೋಡಿಸುವ ಅಚ್ಯುತ ವಾಸುದೇವನನ್ನು ಎದುರಿಸುವುದಿಲ್ಲವೋ ಅಲ್ಲಿಯ ವರೆಗೆ ನಿನಗಿಷ್ಟ ಬಂದುದನ್ನು ಹೇಳಬಹುದು. ನಂತರವೂ ನಿನಗಿಷ್ಟವಾದಂತೆ ಹೇಳಿಕೊಳ್ಳಬಹುದು!”””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಭೀಷ್ಮಾದಿಶಕ್ತಿಕಥನೇ ಚತುರ್ನವತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಭೀಷ್ಮಾದಿಶಕ್ತಿಕಥನದಲ್ಲಿ ನೂರಾತೊಂಭತ್ನಾಲ್ಕನೆಯ ಅಧ್ಯಾಯವು.