ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಅಂಬೋಽಪಾಖ್ಯಾನ ಪರ್ವ
ಅಧ್ಯಾಯ 193
ಸಾರ
ಕೆಲವು ಸಮಯದ ವರೆಗೆ ತನ್ನ ಪುರುಷಲಿಂಗವನ್ನು ಕೊಡುತ್ತೇನೆಂದೂ ನಂತರ ಅದನ್ನು ಪುನಃ ಹಿಂದಿರುಗಿಸಬಲ್ಲಳೆಂದೂ ಯಕ್ಷನು ಶಿಖಂಡಿಗೆ ಹೇಳಲು, ಅದರಂತೆಯೇ ಅವಳು ಪುರುಷತ್ವವನ್ನು ಪಡೆದು ನಗರಕ್ಕೆ ಮರಳಿದುದು (1-9). ತನ್ನ ಅಳಿಯನು ಗಂಡು ಎಂದು ಖಾತ್ರಿ ಮಾಡಿಕೊಂಡ ದಾಶಾರ್ಣಕನು ಸೇನೆಯೊಂದಿಗೆ ಹಿಂದಿರುಗಿದುದು (10-29). ಸ್ಥೂಣಕರ್ಣನನ್ನು ಭೇಟಿಯಾಗಲು ಬಂದಿದ್ದ ಕುಬೇರನನ್ನು ಹೊರಬಂದು ಸ್ವಾಗತಿಸದೇ ಇದ್ದ ಅವನ ನಾಚಿಕೆಯ ಕಾರಣವನ್ನು ತಿಳಿದ ಕುಬೇರನು ಅವನಿಗೆ ಶಿಖಂಡಿಯು ಯುದ್ಧದಲ್ಲಿ ಸಾಯುವವರೆಗೆ ನೀನು ಹೆಣ್ಣಾಗಿಯೇ ಇರುತ್ತೀಯೆ ಎಂದು ಶಪಿಸಿದುದು (30-47). ಲಿಂಗವನ್ನು ಹಿಂದಿರುಗಿಸಲು ಬಂದಿದ್ದ ಶಿಖಂಡಿಯು ವಿಷಯವನ್ನು ತಿಳಿದು ಸಂತೋಷದಿಂದ ಹಿಂದಿರುಗಿದುದು (48-59). ಹೆಣ್ಣಾಗಿ ಹುಟ್ಟಿ ನಂತರ ಗಂಡಾದ ಶಿಖಂಡಿಯನ್ನು ತಾನು ಸಂಹರಿಸುವುದಿಲ್ಲವೆಂದು ದುರ್ಯೋಧನನಿಗೆ ಹೇಳಿ ಭೀಷ್ಮನು ಅಂಬೆಯ ಕಥೆಯನ್ನು ಪೂರ್ಣಗೊಳಿಸಿದುದು (60-66).
05193001 ಭೀಷ್ಮ ಉವಾಚ।
05193001a ಶಿಖಂಡಿವಾಕ್ಯಂ ಶ್ರುತ್ವಾಥ ಸ ಯಕ್ಷೋ ಭರತರ್ಷಭ।
05193001c ಪ್ರೋವಾಚ ಮನಸಾ ಚಿಂತ್ಯ ದೈವೇನೋಪನಿಪೀಡಿತಃ।
05193001e ಭವಿತವ್ಯಂ ತಥಾ ತದ್ಧಿ ಮಮ ದುಃಖಾಯ ಕೌರವ।।
ಭೀಷ್ಮನು ಹೇಳಿದನು: “ಭರತರ್ಷಭ! ಕೌರವ! ಶಿಖಂಡಿಯ ಮಾತನ್ನು ಕೇಳಿ ದೈವದಿಂದ ಪೀಡಿತನಾದ ಯಕ್ಷನು ಮನಸ್ಸಿನಲ್ಲಿಯೇ ಚಿಂತಿಸಿ ಉತ್ತರಿಸಿದನು. ಕೌರವ! ನನ್ನ ದುಃಖಕ್ಕೆ ಅದು ಹಾಗೆಯೇ ಆಗಬೇಕಿತ್ತು.
05193002a ಭದ್ರೇ ಕಾಮಂ ಕರಿಷ್ಯಾಮಿ ಸಮಯಂ ತು ನಿಬೋಧ ಮೇ।
05193002c ಕಿಂ ಚಿತ್ಕಾಲಾಂತರಂ ದಾಸ್ಯೇ ಪುಂಲಿಂಗಂ ಸ್ವಮಿದಂ ತವ।
05193002e ಆಗಂತವ್ಯಂ ತ್ವಯಾ ಕಾಲೇ ಸತ್ಯಮೇತದ್ಬ್ರವೀಮಿ ತೇ।।
“ಭದ್ರೇ! ನಿನಗಿಷ್ಟವಾದುದನ್ನು ಮಾಡುತ್ತೇನೆ. ಆದರೆ ನನ್ನ ಕರಾರನ್ನು ಕೇಳು. ಕೆಲವೇ ಕಾಲದವರೆಗೆ ನಾನು ನಿನಗೆ ನನ್ನ ಈ ಪುರುಷನ ಲಿಂಗವನ್ನು ನೀಡುತ್ತೇನೆ. ನಂತರ ನೀನು ಬರಬೇಕು. ಸತ್ಯವನ್ನು ಹೇಳುತ್ತಿದ್ದೇನೆ.
05193003a ಪ್ರಭುಃ ಸಂಕಲ್ಪಸಿದ್ಧೋಽಸ್ಮಿ ಕಾಮರೂಪೀ ವಿಹಂಗಮಃ।
05193003c ಮತ್ಪ್ರಸಾದಾತ್ಪುರಂ ಚೈವ ತ್ರಾಹಿ ಬಂಧೂಂಶ್ಚ ಕೇವಲಾನ್।।
ಸಂಕಲ್ಪಿಸಿದುದನ್ನು ಸಿದ್ಧಿಯಾಗಿಸುವುದರಲ್ಲಿ ನಾನು ಪ್ರಭು. ಕಾಮರೂಪಿ ವಿಹಂಗಮ. ನನ್ನ ಪ್ರಸಾದದಿಂದ ನಿನ್ನ ಬಂಧುಗಳನ್ನೂ ಪುರವನ್ನೂ ಉಳಿಸುತ್ತಿದ್ದೇನೆ.
05193004a ಸ್ತ್ರೀಲಿಂಗಂ ಧಾರಯಿಷ್ಯಾಮಿ ತ್ವದೀಯಂ ಪಾರ್ಥಿವಾತ್ಮಜೇ।
05193004c ಸತ್ಯಂ ಮೇ ಪ್ರತಿಜಾನೀಹಿ ಕರಿಷ್ಯಾಮಿ ಪ್ರಿಯಂ ತವ।।
ಪಾರ್ಥಿವಾತ್ಮಜೇ! ನಿನ್ನ ಈ ಸ್ತ್ರೀಲಿಂಗವನ್ನು ಧರಿಸುತ್ತೇನೆ. ಸತ್ಯವಾಗಿ ಭರವಸೆಯನ್ನು ನೀಡು. ನಿನಗೆ ಪ್ರಿಯವಾದುದನ್ನು ಮಾಡುತ್ತೇನೆ.”
05193005 ಶಿಖಂಡ್ಯುವಾಚ।
05193005a ಪ್ರತಿದಾಸ್ಯಾಮಿ ಭಗವಽಲ್ಲಿಂಗಂ ಪುನರಿದಂ ತವ।
05193005c ಕಿಂ ಚಿತ್ಕಾಲಾಂತರಂ ಸ್ತ್ರೀತ್ವಂ ಧಾರಯಸ್ವ ನಿಶಾಚರ।।
ಶಿಖಂಡಿಯು ಹೇಳಿದಳು: “ನಿನ್ನ ಈ ಲಿಂಗವನ್ನು ಪುನಃ ನಿನಗೆ ಕೊಡುತ್ತೇನೆ. ನಿಶಾಚರ! ಕೆಲವು ಕಾಲದ ಸ್ತ್ರೀತ್ವವನ್ನು ಧರಿಸು.
05193006a ಪ್ರತಿಪ್ರಯಾತೇ ದಾಶಾರ್ಣೇ ಪಾರ್ಥಿವೇ ಹೇಮವರ್ಮಣಿ।
05193006c ಕನ್ಯೈವಾಹಂ ಭವಿಷ್ಯಾಮಿ ಪುರುಷಸ್ತ್ವಂ ಭವಿಷ್ಯಸಿ।।
ಪಾರ್ಥಿವ ಹೇಮವರ್ಮಣಿ ದಾಶಾರ್ಣನು ಹಿಂದಿರುಗಿದ ನಂತರ ನಾನು ಕನ್ಯೆಯಾಗುತ್ತೇನೆ. ನೀನು ಪುರುಷನಾಗುತ್ತೀಯೆ.””
05193007 ಭೀಷ್ಮ ಉವಾಚ।
05193007a ಇತ್ಯುಕ್ತ್ವಾ ಸಮಯಂ ತತ್ರ ಚಕ್ರಾತೇ ತಾವುಭೌ ನೃಪ।
05193007c ಅನ್ಯೋನ್ಯಸ್ಯಾನಭಿದ್ರೋಹೇ ತೌ ಸಂಕ್ರಾಮಯತಾಂ ತತಃ।।
ಭೀಷ್ಮನು ಹೇಳಿದನು: “ನೃಪ! ಹೀಗೆ ಹೇಳಿ ಅವರಿಬ್ಬರೂ ಅಲ್ಲಿ ಒಪ್ಪಂದವನ್ನು ಮಾಡಿಕೊಂಡರು. ಅನ್ಯೋನ್ಯರ ಲಿಂಗಗಳನ್ನು ಬದಲಾಯಿಸಿಕೊಂಡರು.
05193008a ಸ್ತ್ರೀಲಿಂಗಂ ಧಾರಯಾಮಾಸ ಸ್ಥೂಣೋ ಯಕ್ಷೋ ನರಾಧಿಪ।
05193008c ಯಕ್ಷರೂಪಂ ಚ ತದ್ದೀಪ್ತಂ ಶಿಖಂಡೀ ಪ್ರತ್ಯಪದ್ಯತ।।
ನರಾಧಿಪ! ಯಕ್ಷ ಸ್ಥೂಣನು ಸ್ತ್ರೀಲಿಂಗವನ್ನು ಧರಿಸಿದನು. ಶಿಖಂಡಿಯು ಯಕ್ಷನ ದೀಪ್ತ ರೂಪವನ್ನು ಪಡೆದನು.
05193009a ತತಃ ಶಿಖಂಡೀ ಪಾಂಚಾಲ್ಯಃ ಪುಂಸ್ತ್ವಮಾಸಾದ್ಯ ಪಾರ್ಥಿವ।
05193009c ವಿವೇಶ ನಗರಂ ಹೃಷ್ಟಃ ಪಿತರಂ ಚ ಸಮಾಸದತ್।
05193009e ಯಥಾವೃತ್ತಂ ತು ತತ್ಸರ್ವಮಾಚಖ್ಯೌ ದ್ರುಪದಸ್ಯ ಚ।।
ಪಾರ್ಥಿವ! ಆಗ ಪಾಂಚಾಲ್ಯ ಶಿಖಂಡಿಯು ಪುಂಸತ್ವವನ್ನು ಪಡೆದು ಹೃಷ್ಟನಾಗಿ ನಗರವನ್ನು ಪ್ರವೇಶಿಸಿ ತಂದೆಯ ಬಳಿ ಹೋದನು. ನಡೆದುದೆಲ್ಲವನ್ನೂ ದ್ರುಪದನಿಗೆ ಹೇಳಿದನು.
05193010a ದ್ರುಪದಸ್ತಸ್ಯ ತಚ್ಚ್ರುತ್ವಾ ಹರ್ಷಮಾಹಾರಯತ್ಪರಂ।
05193010c ಸಭಾರ್ಯಸ್ತಚ್ಚ ಸಸ್ಮಾರ ಮಹೇಶ್ವರವಚಸ್ತದಾ।।
ಅದನ್ನು ಕೇಳಿ ದ್ರುಪದನು ಪರಮ ಹರ್ಷವನ್ನು ತಾಳಿದನು. ಪತ್ನಿಯೊಂದಿಗೆ ಮಹೇಶ್ವರನ ಮಾತನ್ನು ಸ್ಮರಿಸಿಕೊಂಡನು.
05193011a ತತಃ ಸಂಪ್ರೇಷಯಾಮಾಸ ದಶಾರ್ಣಾಧಿಪತೇರ್ನೃಪ।
05193011c ಪುರುಷೋಽಯಂ ಮಮ ಸುತಃ ಶ್ರದ್ಧತ್ತಾಂ ಮೇ ಭವಾನಿತಿ।।
ಆಗ ನೃಪನು ದಶಾರ್ಣಾಧಿಪತಿಗೆ “ನನ್ನ ಈ ಮಗನು ಪುರುಷನೇ. ನನ್ನನ್ನು ನೀನು ನಂಬಬೇಕು!” ಎಂದು ಹೇಳಿ ಕಳುಹಿಸಿದನು.
05193012a ಅಥ ದಾಶಾರ್ಣಕೋ ರಾಜಾ ಸಹಸಾಭ್ಯಾಗಮತ್ತದಾ।
05193012c ಪಾಂಚಾಲರಾಜಂ ದ್ರುಪದಂ ದುಃಖಾಮರ್ಷಸಮನ್ವಿತಃ।।
ಅಷ್ಟರಲ್ಲಿಯೇ ದುಃಖ ಮತ್ತು ಕೋಪ ಸಮನ್ವಿತ ದಾಶಾರ್ಣಕ ರಾಜನು ಪಾಂಚಾಲರಾಜ ದ್ರುಪದನಲ್ಲಿಗೆ ಬಂದುಬಿಟ್ಟಿದ್ದನು.
05193013a ತತಃ ಕಾಂಪಿಲ್ಯಮಾಸಾದ್ಯ ದಶಾರ್ಣಾಧಿಪತಿಸ್ತದಾ।
05193013c ಪ್ರೇಷಯಾಮಾಸ ಸತ್ಕೃತ್ಯ ದೂತಂ ಬ್ರಹ್ಮವಿದಾಂ ವರಂ।।
ಕಾಂಪಿಲ್ಯವನ್ನು ಸೇರಿ ದಶರ್ಣಾಧಿಪತಿಯು ಬ್ರಹ್ಮವಿದರಲ್ಲಿ ಶ್ರೇಷ್ಠನೋರ್ವನನ್ನು ಸತ್ಕರಿಸಿ ದೂತನನ್ನಾಗಿ ಕಳುಹಿಸಿದನು.
05193014a ಬ್ರೂಹಿ ಮದ್ವಚನಾದ್ದೂತ ಪಾಂಚಾಲ್ಯಂ ತಂ ನೃಪಾಧಮಂ।
05193014c ಯದ್ವೈ ಕನ್ಯಾಂ ಸ್ವಕನ್ಯಾರ್ಥೇ ವೃತವಾನಸಿ ದುರ್ಮತೇ।।
05193014e ಫಲಂ ತಸ್ಯಾವಲೇಪಸ್ಯ ದ್ರಕ್ಷ್ಯಸ್ಯದ್ಯ ನ ಸಂಶಯಃ।।
“ನನ್ನ ವಚನದಂತೆ ದೂತ! ನೃಪಾಧಮ ಪಾಂಚಾಲ್ಯನಿಗೆ ಹೇಳು. “ದುರ್ಮತೇ! ನನ್ನ ಕನ್ಯೆಯನ್ನು ನಿನ್ನ ಕನ್ಯೆಗೆ ತೆಗೆದುಕೊಂಡಿರುವೆಯಲ್ಲ ಅದರ ಫಲವನ್ನು ಇಂದು ನೀನು ಪಡೆಯುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ.”
05193015a ಏವಮುಕ್ತಸ್ತು ತೇನಾಸೌ ಬ್ರಾಹ್ಮಣೋ ರಾಜಸತ್ತಮ।
05193015c ದೂತಃ ಪ್ರಯಾತೋ ನಗರಂ ದಾಶಾರ್ಣನೃಪಚೋದಿತಃ।।
ರಾಜಸತ್ತಮ! ಹೀಗೆ ಹೇಳಲು ದಾಶಾರ್ಣನೃಪತಿಯ ಹೇಳಿಕೆಯಂತೆ ಆ ದೂತನು ನಗರಕ್ಕೆ ಹೊರಟನು.
05193016a ತತ ಆಸಾದಯಾಮಾಸ ಪುರೋಧಾ ದ್ರುಪದಂ ಪುರೇ।
05193016c ತಸ್ಮೈ ಪಾಂಚಾಲಕೋ ರಾಜಾ ಗಾಮರ್ಘ್ಯಂ ಚ ಸುಸತ್ಕೃತಂ।
05193016e ಪ್ರಾಪಯಾಮಾಸ ರಾಜೇಂದ್ರ ಸಹ ತೇನ ಶಿಖಂಡಿನಾ।।
ಆ ಪುರೋಹಿತನು ದ್ರುಪದನ ಪುರವನ್ನು ಸೇರಿದನು. ಆಗ ರಾಜಾ ಪಾಂಚಾಲಕನು ಶಿಖಂಡಿಯೊಡನೆ ಅವನನ್ನು ಗೋವು-ಅರ್ಘ್ಯಗಳನ್ನಿತ್ತು ಸತ್ಕರಿಸತೊಡಗಿದನು.
05193017a ತಾಂ ಪೂಜಾಂ ನಾಭ್ಯನಂದತ್ಸ ವಾಕ್ಯಂ ಚೇದಮುವಾಚ ಹ।
05193017c ಯದುಕ್ತಂ ತೇನ ವೀರೇಣ ರಾಜ್ಞಾ ಕಾಂಚನವರ್ಮಣಾ।।
ಆ ಪೂಜೆಗಳನ್ನು ಸ್ವೀಕರಿಸದೇ ಅವನು ಇದನ್ನು ಹೇಳಿದನು: “ವೀರ ರಾಜ ಕಾಂಚನವರ್ಮನು ನಿನಗೆ ಇದನ್ನು ಹೇಳಿ ಕಳುಹಿಸಿದ್ದಾನೆ.
05193018a ಯತ್ತೇಽಹಮಧಮಾಚಾರ ದುಹಿತ್ರರ್ಥೇಽಸ್ಮಿ ವಂಚಿತಃ।
05193018c ತಸ್ಯ ಪಾಪಸ್ಯ ಕರಣಾತ್ಫಲಂ ಪ್ರಾಪ್ನುಹಿ ದುರ್ಮತೇ।।
“ದುರ್ಮತೇ! ನಿನ್ನ ಮಗಳಿಗಾಗಿ ನೀನು ನಡೆಸಿದ ಈ ಅಧಮಾಚಾರ ವಂಚನೆಗಳ ಪಾಪಗಳನ್ನು ಮಾಡಿದ್ದುದರ ಫಲವನ್ನು ಹೊಂದುತ್ತೀಯೆ.
05193019a ದೇಹಿ ಯುದ್ಧಂ ನರಪತೇ ಮಮಾದ್ಯ ರಣಮೂರ್ಧನಿ।
05193019c ಉದ್ಧರಿಷ್ಯಾಮಿ ತೇ ಸದ್ಯಃ ಸಾಮಾತ್ಯಸುತಬಾಂಧವಂ।।
ನರಪತೇ! ಇಂದು ರಣಮೂರ್ಧನಿಯಲ್ಲಿ ನನಗೆ ಯುದ್ಧವನ್ನು ನೀಡು. ಸದ್ಯ ನಿನ್ನನ್ನು ಅಮಾತ್ಯ-ಸುತ-ಬಾಂಧವರೊಂದಿಗೆ ಮುಗಿಸುತ್ತೇನೆ.”
05193020a ತದುಪಾಲಂಭಸಮ್ಯುಕ್ತಂ ಶ್ರಾವಿತಃ ಕಿಲ ಪಾರ್ಥಿವಃ।
05193020c ದಶಾರ್ಣಪತಿದೂತೇನ ಮಂತ್ರಿಮಧ್ಯೇ ಪುರೋಧಸಾ।।
ದಶಾರ್ಣಪತಿಯ ದೂತನು ಮಂತ್ರಿಗಳ ಮಧ್ಯದಲ್ಲಿ ಹೇಳಿದ ಆ ನಿಂದನೆಯ ಮಾತುಗಳನ್ನು ಪಾರ್ಥಿವನು ಬಲಾತ್ಕಾರವಾಗಿ ಕೇಳಬೇಕಾಯಿತು.
05193021a ಅಬ್ರವೀದ್ಭರತಶ್ರೇಷ್ಠ ದ್ರುಪದಃ ಪ್ರಣಯಾನತಃ।
05193021c ಯದಾಹ ಮಾಂ ಭವಾನ್ಬ್ರಹ್ಮನ್ಸಂಬಂಧಿವಚನಾದ್ವಚಃ।
05193021e ತಸ್ಯೋತ್ತರಂ ಪ್ರತಿವಚೋ ದೂತ ಏವ ವದಿಷ್ಯತಿ।।
ಭರತಶ್ರೇಷ್ಠ! ಆಗ ದ್ರುಪದನು ಶಿರಬಾಗಿ ಹೇಳಿದನು: “ಬ್ರಹ್ಮನ್! ನೀನು ಹೇಳಿದ ನನ್ನ ಸಂಬಂಧಿಯ ಮಾತುಗಳಿಗೆ ಉತ್ತರವನ್ನು ನಮ್ಮ ದೂತನೇ ಪ್ರತಿಯಾಗಿ ಹೇಳುತ್ತಾನೆ.”
05193022a ತತಃ ಸಂಪ್ರೇಷಯಾಮಾಸ ದ್ರುಪದೋಽಪಿ ಮಹಾತ್ಮನೇ।
05193022c ಹಿರಣ್ಯವರ್ಮಣೇ ದೂತಂ ಬ್ರಾಹ್ಮಣಂ ವೇದಪಾರಗಂ।।
ಆಗ ದ್ರುಪದನೂ ಕೂಡ ಮಹಾತ್ಮ ಹಿರಣ್ಯವರ್ಮಣನಲ್ಲಿಗೆ ವೇದಪಾರಂಗತ ಬ್ರಾಹ್ಮಣನನ್ನು ದೂತನನ್ನಾಗಿ ಕಳುಹಿಸಿದನು.
05193023a ಸಮಾಗಮ್ಯ ತು ರಾಜ್ಞಾ ಸ ದಶಾರ್ಣಪತಿನಾ ತದಾ।
05193023c ತದ್ವಾಕ್ಯಮಾದದೇ ರಾಜನ್ಯದುಕ್ತಂ ದ್ರುಪದೇನ ಹ।।
ರಾಜನ್! ಅವನು ರಾಜ ದಶಾರ್ಣಪತಿಯ ಬಳಿ ಬಂದು ದ್ರುಪದನು ಹೇಳಿ ಕಳುಹಿಸಿದುದನ್ನು ಹೇಳಿದನು.
05193024a ಆಗಮಃ ಕ್ರಿಯತಾಂ ವ್ಯಕ್ತಂ ಕುಮಾರೋ ವೈ ಸುತೋ ಮಮ।
05193024c ಮಿಥ್ಯೈತದುಕ್ತಂ ಕೇನಾಪಿ ತನ್ನ ಶ್ರದ್ಧೇಯಮಿತ್ಯುತ।।
“ನನ್ನ ಮಗನು ನಿಜವಾಗಿಯೂ ಕುಮಾರನು. ಶೋಧನೆಯಾಗಲಿ. ಯಾರೋ ಸುಳ್ಳುಹೇಳಿದ್ದಾರೆ. ಅವರು ಹೇಳಿದುದನ್ನು ನಂಬಬಾರದು.”
05193025a ತತಃ ಸ ರಾಜಾ ದ್ರುಪದಸ್ಯ ಶ್ರುತ್ವಾ ವಿಮರ್ಶಯುಕ್ತೋ ಯುವತೀರ್ವರಿಷ್ಠಾಃ।
05193025c ಸಂಪ್ರೇಷಯಾಮಾಸ ಸುಚಾರುರೂಪಾಃ ಶಿಖಂಡಿನಂ ಸ್ತ್ರೀ ಪುಮಾನ್ವೇತಿ ವೇತ್ತುಂ।।
ದ್ರುಪದನನ್ನು ಕೇಳಿ ಆ ರಾಜನು ವಿಮರ್ಶಿಸಿ ಸುಂದರ ರೂಪಿನ ಉತ್ತಮ ಯುವತಿಯರನ್ನು ಶಿಖಂಡಿಯು ಸ್ತ್ರೀಯೋ ಪುರುಷನೋ ಎಂದು ತಿಳಿಯಲು ಕಳುಹಿಸಿದನು.
05193026a ತಾಃ ಪ್ರೇಷಿತಾಸ್ತತ್ತ್ವಭಾವಂ ವಿದಿತ್ವಾ ಪ್ರೀತ್ಯಾ ರಾಜ್ಞೇ ತಚ್ಚಶಂಸುರ್ಹಿ ಸರ್ವಂ।
05193026c ಶಿಖಂಡಿನಂ ಪುರುಷಂ ಕೌರವೇಂದ್ರ ದಶಾರ್ಣರಾಜಾಯ ಮಹಾನುಭಾವಂ।।
ಕೌರವೇಂದ್ರ! ಕಳುಹಿಸಲ್ಪಟ್ಟ ಅವರು ಸತ್ಯವೇನೆಂದು ತಿಳಿದು ಸಂತೋಷದಿಂದ ಅವೆಲ್ಲವನ್ನೂ – ಶಿಖಂಡಿಯು ಪುರುಷನೆಂದು- ಮಹಾನುಭಾವ ದಶಾರ್ಣರಾಜ ರಾಜನಿಗೆ ವರದಿಮಾಡಿದರು.
05193027a ತತಃ ಕೃತ್ವಾ ತು ರಾಜಾ ಸ ಆಗಮಂ ಪ್ರೀತಿಮಾನಥ।
05193027c ಸಂಬಂಧಿನಾ ಸಮಾಗಮ್ಯ ಹೃಷ್ಟೋ ವಾಸಮುವಾಸ ಹ।।
ಇದನ್ನು ಕೇಳಿ ರಾಜನು ಅತ್ಯಂತ ಹರ್ಷಿತನಾದನು. ತನ್ನ ಸಂಬಂಧಿಯನ್ನು ಭೇಟಿಮಾಡಿ ಸಂತೋಷದಲ್ಲಿ ಅಲ್ಲಿ ತಂಗಿದನು.
05193028a ಶಿಖಂಡಿನೇ ಚ ಮುದಿತಃ ಪ್ರಾದಾದ್ವಿತ್ತಂ ಜನೇಶ್ವರಃ।
05193028c ಹಸ್ತಿನೋಽಶ್ವಾಂಶ್ಚ ಗಾಶ್ಚೈವ ದಾಸ್ಯೋ ಬಹುಶತಾಸ್ತಥಾ।
05193028e ಪೂಜಿತಶ್ಚ ಪ್ರತಿಯಯೌ ನಿವರ್ತ್ಯ ತನಯಾಂ ಕಿಲ।।
ಆ ಜನೇಶ್ವರನು ಸಂತೋಷದಿಂದ ಶಿಖಂಡಿಗೆ ಬಹು ಸಂಪತ್ತನ್ನು-ಆನೆಗಳು, ಕುದುರೆಗಳು, ಗೋವುಗಳು ಮತ್ತು ದಾಸಿಯರನ್ನು ಬಹು ನೂರು ಸಂಖ್ಯೆಗಳಲ್ಲಿ ಕೊಟ್ಟು, ಗೌರವಿಸಲ್ಪಟ್ಟು, ತನ್ನ ಮಗಳನ್ನು ಹಿಂದಿರುಗಿಸಿ, ಮರಳಿದನು.
05193029a ವಿನೀತಕಿಲ್ಬಿಷೇ ಪ್ರೀತೇ ಹೇಮವರ್ಮಣಿ ಪಾರ್ಥಿವೇ।
05193029c ಪ್ರತಿಯಾತೇ ತು ದಾಶಾರ್ಣೇ ಹೃಷ್ಟರೂಪಾ ಶಿಖಂಡಿನೀ।।
ತನ್ನ ಮೇಲಿದ್ದ ಆರೋಪವನ್ನು ಕಳೆದುಕೊಂಡ ಶಿಖಂಡಿಯು ಪಾರ್ಥಿವ ಹೇಮವರ್ಮ ದಾಶಾರ್ಣನು ಹಿಂದಿರುಗಲು ಸಂತೋಷಗೊಂಡನು.
05193030a ಕಸ್ಯ ಚಿತ್ತ್ವಥ ಕಾಲಸ್ಯ ಕುಬೇರೋ ನರವಾಹನಃ।
05193030c ಲೋಕಾನುಯಾತ್ರಾಂ ಕುರ್ವಾಣಃ ಸ್ಥೂಣಸ್ಯಾಗಾನ್ನಿವೇಶನಂ।।
ಅಷ್ಟರಲ್ಲಿಯೇ ಸ್ವಲ್ಪ ಕಾಲದ ನಂತರ ಲೋಕಾನುಯಾತ್ರೆಯನ್ನು ಮಾಡುತ್ತಾ ನರವಾಹನ ಕುಬೇರನು ಸ್ಥೂಣನ ಮನೆಗೆ ಬಂದನು.
05193031a ಸ ತದ್ಗೃಹಸ್ಯೋಪರಿ ವರ್ತಮಾನ ಆಲೋಕಯಾಮಾಸ ಧನಾಧಿಗೋಪ್ತಾ।
05193031c ಸ್ಥೂಣಸ್ಯ ಯಕ್ಷಸ್ಯ ನಿಶಾಮ್ಯ ವೇಶ್ಮ ಸ್ವಲಂಕೃತಂ ಮಾಲ್ಯಗುಣೈರ್ವಿಚಿತ್ರಂ।।
ಅವನ ಮನೆಯ ಮೇಲೆ ಹಾರಾಡುತ್ತಾ ಆ ಧನಾಧಿಗೋಪ್ತನು ಅವಲೋಕಿಸಿದನು. ಈ ಸ್ವಲಂಕೃತವಾದ ವಿಚಿತ್ರ ಮಾಲೆಗಳಿಂದ ಕೂಡಿದ ಇದು ಯಕ್ಷ ಸ್ಥೂಣನ ಮನೆಯೆಂದು ಗುರುತಿಸಿದನು.
05193032a ಲಾಜೈಶ್ಚ ಗಂಧೈಶ್ಚ ತಥಾ ವಿತಾನೈರ್ ಅಭ್ಯರ್ಚಿತಂ ಧೂಪನಧೂಪಿತಂ ಚ।
05193032c ಧ್ವಜೈಃ ಪತಾಕಾಭಿರಲಂಕೃತಂ ಚ ಭಕ್ಷ್ಯಾನ್ನಪೇಯಾಮಿಷದತ್ತಹೋಮಂ।।
ಲಾಜ, ಗಂಧ, ಚಪ್ಪರಗಳಿಂದ, ಅಭ್ಯರ್ಚಿಸಿದ ಧೂಪದ ಕಂಪಿನಿಂದ ತುಂಬಿದ, ಧ್ವಜ-ಪತಾಕೆಗಳಿಂದ ಅಲಂಕೃತವಾದ ಆ ಭವನದಲ್ಲಿ ಭಕ್ಷಾನ್ನ, ಪಾನೀಯಗಳ ಹೊಳೆಯೇ ಹರಿದಿತ್ತು.
05193033a ತತ್ಸ್ಥಾನಂ ತಸ್ಯ ದೃಷ್ಟ್ವಾ ತು ಸರ್ವತಃ ಸಮಲಂಕೃತಂ।
05193033c ಅಥಾಬ್ರವೀದ್ಯಕ್ಷಪತಿಸ್ತಾನ್ಯಕ್ಷಾನನುಗಾಂಸ್ತದಾ।।
ಸರ್ವತವೂ ಸಮಲಂಕೃತವಾದ ಅವನ ಆ ಸ್ಥಾನವನ್ನು ನೋಡಿ ಯಕ್ಷಪತಿಯು ಅನುಸರಿಸಿ ಬಂದ ಯಕ್ಷರಿಗೆ ಹೇಳಿದನು:
05193034a ಸ್ವಲಂಕೃತಮಿದಂ ವೇಶ್ಮ ಸ್ಥೂಣಸ್ಯಾಮಿತವಿಕ್ರಮಾಃ।
05193034c ನೋಪಸರ್ಪತಿ ಮಾಂ ಚಾಪಿ ಕಸ್ಮಾದದ್ಯ ಸುಮಂದಧೀಃ।।
“ಅಮಿತವಿಕ್ರಮಿಗಳೇ! ಈ ಸ್ವಲಂಕೃತ ಮನೆಯು ಸ್ಥೂಣನದು. ಆದರೆ ಆ ಮಹಾಮಂದಬುದ್ಧಿಯು ಹೊರಬಂದು ನನ್ನ ಮುಂದೆ ಹೊರಳುವುದಿಲ್ಲವಲ್ಲ?
05193035a ಯಸ್ಮಾಜ್ಜಾನನ್ಸುಮಂದಾತ್ಮಾ ಮಾಮಸೌ ನೋಪಸರ್ಪತಿ।
05193035c ತಸ್ಮಾತ್ತಸ್ಮೈ ಮಹಾದಂಡೋ ಧಾರ್ಯಃ ಸ್ಯಾದಿತಿ ಮೇ ಮತಿಃ।।
ನಾನು ಇಲ್ಲಿದ್ದೇನೆಂದು ತಿಳಿದೂ ಆ ಸುಮಂದಾತ್ಮನು ನನ್ನ ಮುಂದೆ ಹರಿದು ಬರುತ್ತಿಲ್ಲ. ಆದುದರಿಂದ ಅವನಿಗೆ ಮಹಾದಂಡವನ್ನು ವಿಧಿಸಬೇಕೆಂದು ನನಗನ್ನಿಸುತ್ತದೆ.”
05193036 ಯಕ್ಷಾ ಊಚುಃ।
05193036a ದ್ರುಪದಸ್ಯ ಸುತಾ ರಾಜನ್ರಾಜ್ಞೋ ಜಾತಾ ಶಿಖಂಡಿನೀ।
05193036c ತಸ್ಯೈ ನಿಮಿತ್ತೇ ಕಸ್ಮಿಂಶ್ಚಿತ್ಪ್ರಾದಾತ್ಪುರುಷಲಕ್ಷಣಂ।।
ಯಕ್ಷರು ಹೇಳಿದರು: “ರಾಜನ್! ರಾಜ ದ್ರುಪದನಿಗೆ ಶಿಖಂಡಿನೀ ಎಂಬ ಮಗಳು ಜನಿಸಿದ್ದಳು. ಯಾವುದೋ ಕಾರಣದಿಂದ ಇವನು ಅವಳಿಗೆ ತನ್ನ ಪುರುಷಲಕ್ಷಣವನ್ನು ಕೊಟ್ಟಿದ್ದಾನೆ.
05193037a ಅಗ್ರಹೀಲ್ಲಕ್ಷಣಂ ಸ್ತ್ರೀಣಾಂ ಸ್ತ್ರೀಭೂತಸ್ತಿಷ್ಠತೇ ಗೃಹೇ।
05193037c ನೋಪಸರ್ಪತಿ ತೇನಾಸೌ ಸವ್ರೀಡಃ ಸ್ತ್ರೀಸ್ವರೂಪವಾನ್।।
ಅವಳ ಸ್ತ್ರೀಲಕ್ಷಣವನ್ನು ಸ್ವೀಕರಿಸಿ ಸ್ತ್ರೀಯಂತೆ ಅವನು ಮನೆಯ ಒಳಗೆಯೇ ಇರುತ್ತಾನೆ. ಸ್ತ್ರೀರೂಪವನ್ನು ಧರಿಸಿರುವ ಅವನು ನಾಚಿಕೊಂಡು ನಿನ್ನ ಎದಿರು ಬರುತ್ತಿಲ್ಲ.
05193038a ಏತಸ್ಮಾತ್ಕಾರಣಾದ್ರಾಜನ್ ಸ್ಥೂಣೋ ನ ತ್ವಾದ್ಯ ಪಶ್ಯತಿ।
05193038c ಶ್ರುತ್ವಾ ಕುರು ಯಥಾನ್ಯಾಯಂ ವಿಮಾನಮಿಹ ತಿಷ್ಠತಾಂ।।
ರಾಜನ್! ಇದೇ ಕಾರಣದಿಂದ ಸ್ಥೂಣನು ಇಂದು ನಿನಗೆ ಕಾಣುತ್ತಿಲ್ಲ. ಇದನ್ನು ಕೇಳಿ ವಿಮಾನದಲ್ಲಿದ್ದುಕೊಂಡೇ ನ್ಯಾಯವಾದುದನ್ನು ಮಾಡು.””
05193039 ಭೀಷ್ಮ ಉವಾಚ।
05193039a ಆನೀಯತಾಂ ಸ್ಥೂಣ ಇತಿ ತತೋ ಯಕ್ಷಾಧಿಪೋಽಬ್ರವೀತ್।
05193039c ಕರ್ತಾಸ್ಮಿ ನಿಗ್ರಹಂ ತಸ್ಯೇತ್ಯುವಾಚ ಸ ಪುನಃ ಪುನಃ।।
ಭೀಷ್ಮನು ಹೇಳಿದನು: ““ಸ್ಥೂಣನನ್ನು ಕರೆತನ್ನಿ! ಅವನನ್ನು ಶಿಕ್ಷಿಸುತ್ತೇನೆ!” ಎಂದು ಯಕ್ಷಾಧಿಪನು ಪುನಃ ಪುನಃ ಹೇಳಿದನು.
05193040a ಸೋಽಭ್ಯಗಚ್ಚತ ಯಕ್ಷೇಂದ್ರಮಾಹೂತಃ ಪೃಥಿವೀಪತೇ।
05193040c ಸ್ತ್ರೀಸ್ವರೂಪೋ ಮಹಾರಾಜ ತಸ್ಥೌ ವ್ರೀಡಾಸಮನ್ವಿತಃ।।
ಮಹಾರಾಜ! ಪೃಥಿವೀಪತೇ! ಯಕ್ಷೇಂದ್ರನು ಕರೆಯಿಸಿಕೊಳ್ಳಲು ಅವನು ಸ್ತ್ರೀಸ್ವರೂಪದಲ್ಲಿ ಬಂದು ಬಹುನಾಚಿಕೆಯಿಂದ ನಿಂತುಕೊಂಡನು.
05193041a ತಂ ಶಶಾಪ ಸುಸಂಕ್ರುದ್ಧೋ ಧನದಃ ಕುರುನಂದನ।
05193041c ಏವಮೇವ ಭವತ್ವಸ್ಯ ಸ್ತ್ರೀತ್ವಂ ಪಾಪಸ್ಯ ಗುಹ್ಯಕಾಃ।।
ಕುರುನಂದನ! ಸಂಕೃದ್ಧನಾದ ಧನದನು ಅವನಿಗೆ ಶಪಿಸಿದನು: “ಗುಹ್ಯಕರೇ! ಈ ಪಾಪಿಯು ಸ್ತ್ರೀಯಾಗಿಯೇ ಇರಲಿ!”
05193042a ತತೋಽಬ್ರವೀದ್ಯಕ್ಷಪತಿರ್ಮಹಾತ್ಮಾ ಯಸ್ಮಾದದಾಸ್ತ್ವವಮನ್ಯೇಹ ಯಕ್ಷಾನ್।
05193042c ಶಿಖಂಡಿನೇ ಲಕ್ಷಣಂ ಪಾಪಬುದ್ಧೇ ಸ್ತ್ರೀಲಕ್ಷಣಂ ಚಾಗ್ರಹೀಃ ಪಾಪಕರ್ಮನ್।।
ಆಗ ಮಹಾತ್ಮ ಯಕ್ಷಪತಿಯು ಹೀಗೆ ಹೇಳಿದನು: “ಪಾಪಬುದ್ಧೆ! ಪಾಪಕರ್ಮಿ! ಶಿಖಂಡಿಯಿಂದ ಸ್ತ್ರೀಲಕ್ಷಣವನ್ನು ತೆಗೆದುಕೊಂಡು ನೀನು ಯಕ್ಷರನ್ನು ಅಪಮಾನಿಸಿರುವೆ.
05193043a ಅಪ್ರವೃತ್ತಂ ಸುದುರ್ಬುದ್ಧೇ ಯಸ್ಮಾದೇತತ್ಕೃತಂ ತ್ವಯಾ।
05193043c ತಸ್ಮಾದದ್ಯ ಪ್ರಭೃತ್ಯೇವ ತ್ವಂ ಸ್ತ್ರೀ ಸ ಪುರುಷಸ್ತಥಾ।।
ಸುದುರ್ಬುದ್ಧೇ! ಇದೂವರೆಗೂ ಯಾರೂ ಮಾಡದಿರುವುದನ್ನು ನೀನು ಮಾಡಿದ್ದೀಯೆ. ಆದುದರಿಂದ ಇಂದಿನಿಂದ ನೀನು ಸ್ತ್ರೀಯಾಗಿಯೂ ಅವನು ಪುರುಷನಾಗಿಯೂ ಇರುತ್ತೀರಿ.”
05193044a ತತಃ ಪ್ರಸಾದಯಾಮಾಸುರ್ಯಕ್ಷಾ ವೈಶ್ರವಣಂ ಕಿಲ।
05193044c ಸ್ಥೂಣಸ್ಯಾರ್ಥೇ ಕುರುಷ್ವಾಂತಂ ಶಾಪಸ್ಯೇತಿ ಪುನಃ ಪುನಃ।।
ಆಗ ಅವನ ಶಾಪಕ್ಕೆ ಅಂತ್ಯವನ್ನು ಮಾಡಬೇಕೆಂದು ಸ್ಥೂಣನ ಪರವಾಗಿ ಯಕ್ಷರು ಪುನಃ ಪುನಃ ವೈಶ್ರವಣನನ್ನು ಬೇಡಿಕೊಂಡರು.
05193045a ತತೋ ಮಹಾತ್ಮಾ ಯಕ್ಷೇಂದ್ರಃ ಪ್ರತ್ಯುವಾಚಾನುಗಾಮಿನಃ।
05193045c ಸರ್ವಾನ್ಯಕ್ಷಗಣಾಂಸ್ತಾತ ಶಾಪಸ್ಯಾಂತಚಿಕೀರ್ಷಯಾ।।
ಆಗ ಮಹಾತ್ಮ ಯಕ್ಷೇಂದ್ರನು ತನ್ನ ಅನುಗಾಮಿ ಎಲ್ಲ ಯಕ್ಷಗಣಗಳಿಗೆ ಶಾಪದ ಅಂತ್ಯದ ಕುರಿತು ಹೇಳಿದನು:
05193046a ಹತೇ ಶಿಖಂಡಿನಿ ರಣೇ ಸ್ವರೂಪಂ ಪ್ರತಿಪತ್ಸ್ಯತೇ।
05193046c ಸ್ಥೂಣೋ ಯಕ್ಷೋ ನಿರುದ್ವೇಗೋ ಭವತ್ವಿತಿ ಮಹಾಮನಾಃ।।
“ರಣದಲ್ಲಿ ಶಿಖಂಡಿನಿಯು ಸತ್ತ ನಂತರ ಯಕ್ಷ ಸ್ಥೂಣನು ಸ್ವರೂಪವನ್ನು ಪಡೆಯುತ್ತಾನೆ. ಮಹಾಮನಸ್ವಿ ಸ್ಥೂಣನು ಉದ್ವೇಗಪಡದಿರಲಿ.”
05193047a ಇತ್ಯುಕ್ತ್ವಾ ಭಗವಾನ್ದೇವೋ ಯಕ್ಷರಾಕ್ಷಸಪೂಜಿತಃ।
05193047c ಪ್ರಯಯೌ ಸಹ ತೈಃ ಸರ್ವೈರ್ನಿಮೇಷಾಂತರಚಾರಿಭಿಃ।।
ಹೀಗೆ ಹೇಳಿ ಭಗವಾನ ದೇವ ಯಕ್ಷಪೂಜಿತನು ಆ ಎಲ್ಲ ನಿಮೇಷಾಂತರಚಾರಿಗಳೊಂದಿಗೆ ಹೊರಟು ಹೋದನು.
05193048a ಸ್ಥೂಣಸ್ತು ಶಾಪಂ ಸಂಪ್ರಾಪ್ಯ ತತ್ರೈವ ನ್ಯವಸತ್ತದಾ।
05193048c ಸಮಯೇ ಚಾಗಮತ್ತಂ ವೈ ಶಿಖಂಡೀ ಸ ಕ್ಷಪಾಚರಂ।।
ಸ್ಥೂಣನಾದರೋ ಶಾಪವನ್ನು ಪಡೆದು ಅಲ್ಲಿಯೇ ವಾಸಿಸಿದನು. ಸ್ವಲ್ಪ ಸಮಯದಲ್ಲಿಯೇ ಶಿಖಂಡಿಯು ಆ ಕ್ಷಪಾಚರನಲ್ಲಿಗೆ ಬಂದನು.
05193049a ಸೋಽಭಿಗಮ್ಯಾಬ್ರವೀದ್ವಾಕ್ಯಂ ಪ್ರಾಪ್ತೋಽಸ್ಮಿ ಭಗವನ್ನಿತಿ।
05193049c ತಮಬ್ರವೀತ್ತತಃ ಸ್ಥೂಣಃ ಪ್ರೀತೋಽಸ್ಮೀತಿ ಪುನಃ ಪುನಃ।।
ಅವನ ಬಳಿಬಂದು “ಭಗವನ್! ಬಂದಿದ್ದೇನೆ!” ಎಂದು ಹೇಳಿದನು. ಅವನಿಗೆ ಸ್ಥೂಣನು “ಸಂತೋಷವಾಯಿತು!” ಎಂದು ಪುನಃ ಪುನಃ ಹೇಳಿದನು.
05193050a ಆರ್ಜವೇನಾಗತಂ ದೃಷ್ಟ್ವಾ ರಾಜಪುತ್ರಂ ಶಿಖಂಡಿನಂ।
05193050c ಸರ್ವಮೇವ ಯಥಾವೃತ್ತಮಾಚಚಕ್ಷೇ ಶಿಖಂಡಿನೇ।।
ಪ್ರಾಮಾಣಿಕನಾಗಿ ಬಂದಿರುವ ರಾಜಪುತ್ರ ಶಿಖಂಡಿಯನ್ನು ನೋಡಿ ಅವನು ನಡೆದ ವೃತ್ತಾಂತವೆಲ್ಲವನ್ನೂ ಶಿಖಂಡಿಗೆ ಹೇಳಿದನು.
05193051 ಯಕ್ಷ ಉವಾಚ।
05193051a ಶಪ್ತೋ ವೈಶ್ರವಣೇನಾಸ್ಮಿ ತ್ವತ್ಕೃತೇ ಪಾರ್ಥಿವಾತ್ಮಜ।
05193051c ಗಚ್ಚೇದಾನೀಂ ಯಥಾಕಾಮಂ ಚರ ಲೋಕಾನ್ಯಥಾಸುಖಂ।।
ಯಕ್ಷನು ಹೇಳಿದನು: “ಪಾರ್ಥಿವಾತ್ಮಜ! ನಿನ್ನಿಂದಾಗಿ ನಾನು ವೈಶ್ರವಣನಿಂದ ಶಪಿಸಲ್ಪಟ್ಟಿದ್ದೇನೆ. ಹೊರಟು ಹೋಗು! ನಿನಗಿಚ್ಛೆಬಂದಂತೆ ಸುಖವಾಗುವ ಹಾಗೆ ಲೋಕಗಳನ್ನು ಸಂಚರಿಸು.
05193052a ದಿಷ್ಟಮೇತತ್ಪುರಾ ಮನ್ಯೇ ನ ಶಕ್ಯಮತಿವರ್ತಿತುಂ।
05193052c ಗಮನಂ ತವ ಚೇತೋ ಹಿ ಪೌಲಸ್ತ್ಯಸ್ಯ ಚ ದರ್ಶನಂ।।
ಇಲ್ಲಿಗೆ ನೀನು ಬಂದಿರುವುದು ಮತ್ತು ಪೌಲಸ್ತ್ಯನ ದರ್ಶನ ಎಲ್ಲವೂ ಹಿಂದೆ ವಿಧಿ ನಿರ್ಮಿತವಾದುದೆಂದು ಅನಿಸುತ್ತದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ.””
05193053 ಭೀಷ್ಮ ಉವಾಚ।
05193053a ಏವಮುಕ್ತಃ ಶಿಖಂಡೀ ತು ಸ್ಥೂಣಯಕ್ಷೇಣ ಭಾರತ।
05193053c ಪ್ರತ್ಯಾಜಗಾಮ ನಗರಂ ಹರ್ಷೇಣ ಮಹತಾನ್ವಿತಃ।।
ಭೀಷ್ಮನು ಹೇಳಿದನು: “ಭಾರತ! ಯಕ್ಷ ಸ್ಥೂಣನು ಹೀಗೆ ಹೇಳಲು ಶಿಖಂಡಿಯು ಮಹಾಹರ್ಷದಿಂದ ನಗರಕ್ಕೆ ಹಿಂದಿರುಗಿದನು.
05193054a ಪೂಜಯಾಮಾಸ ವಿವಿಧೈರ್ಗಂಧಮಾಲ್ಯೈರ್ಮಹಾಧನೈಃ।
05193054c ದ್ವಿಜಾತೀನ್ದೇವತಾಶ್ಚಾಪಿ ಚೈತ್ಯಾನಥ ಚತುಷ್ಪಥಾನ್।।
ವಿವಿಧ ಗಂಧ-ಮಾಲೆ-ಮಹಾಧನಗಳಿಂದ ದ್ವಿಜಾತಿಯವರನ್ನೂ, ದೇವತೆಗಳನ್ನೂ ಚೈತ್ಯಗಳಲ್ಲಿಯೂ ಚೌರಾಹಗಳಲ್ಲಿಯೂ ಪೂಜಿಸಿದನು.
05193055a ದ್ರುಪದಃ ಸಹ ಪುತ್ರೇಣ ಸಿದ್ಧಾರ್ಥೇನ ಶಿಖಂಡಿನಾ।
05193055c ಮುದಂ ಚ ಪರಮಾಂ ಲೇಭೇ ಪಾಂಚಾಲ್ಯಃ ಸಹ ಬಾಂಧವೈಃ।।
ಪಾಂಚಾಲ್ಯ ದ್ರುಪದನೂ ಸಹ ಬಾಂಧವರೊಂದಿಗೆ ಶಿಖಂಡಿಯ ಸಿದ್ಧಿ-ಏಳಿಗೆಗಳಿಂದ ಪರಮ ಸಂತೋಷವನ್ನು ಹೊಂದಿದನು.
05193056a ಶಿಷ್ಯಾರ್ಥಂ ಪ್ರದದೌ ಚಾಪಿ ದ್ರೋಣಾಯ ಕುರುಪುಂಗವ।
05193056c ಶಿಖಂಡಿನಂ ಮಹಾರಾಜ ಪುತ್ರಂ ಸ್ತ್ರೀಪೂರ್ವಿಣಂ ತಥಾ।।
ಕುರುಪುಂಗವ! ಮಹಾರಾಜ! ಮೊದಲು ಸ್ತ್ರೀಯಾಗಿದ್ದ ಪುತ್ರ ಶಿಖಂಡಿಯನ್ನು ಅವನು ಶಿಷ್ಯನನ್ನಾಗಿ ದ್ರೋಣನಿಗೆ ಕೊಟ್ಟನು.
05193057a ಪ್ರತಿಪೇದೇ ಚತುಷ್ಪಾದಂ ಧನುರ್ವೇದಂ ನೃಪಾತ್ಮಜಃ।
05193057c ಶಿಖಂಡೀ ಸಹ ಯುಷ್ಮಾಭಿರ್ಧೃಷ್ಟದ್ಯುಮ್ನಶ್ಚ ಪಾರ್ಷತಃ।।
ನಿಮ್ಮೊಂದಿಗೆ ನೃಪಾತ್ಮಜ ಶಿಖಂಡಿಯೂ ಪಾರ್ಷತ ಧೃಷ್ಟದ್ಯುಮ್ನನೂ ನಾಲ್ಕು ಭಾಗಗಳ ಧನುರ್ವೇದವನ್ನು ಕಲಿತರು.
05193058a ಮಮ ತ್ವೇತಚ್ಚರಾಸ್ತಾತ ಯಥಾವತ್ಪ್ರತ್ಯವೇದಯನ್।
05193058c ಜಡಾಂಧಬಧಿರಾಕಾರಾ ಯೇ ಯುಕ್ತಾ ದ್ರುಪದೇ ಮಯಾ।।
ಮಗೂ! ನಾನು ದ್ರುಪದನಲ್ಲಿ ನಿಯೋಜಿಸಿದ್ದ ಜಡ, ಕುರುಡ, ಕಿವುಡರಂತೆ ನಟಿಸುತ್ತಿದ್ದ ಚಾರರು ನನಗೆ ನಡೆದ ಇವೆಲ್ಲವನ್ನೂ ಹೇಳಿದರು.
05193059a ಏವಮೇಷ ಮಹಾರಾಜ ಸ್ತ್ರೀಪುಮಾನ್ದ್ರುಪದಾತ್ಮಜಃ।
05193059c ಸಂಭೂತಃ ಕೌರವಶ್ರೇಷ್ಠ ಶಿಖಂಡೀ ರಥಸತ್ತಮಃ।।
ಮಹಾರಾಜ! ಕೌರವಶ್ರೇಷ್ಠ! ಹೀಗೆ ದ್ರುಪದಾತ್ಮಜ ಶಿಖಂಡೀ ರಥಸತ್ತಮನು ಹೆಣ್ಣಾಗಿದ್ದು ಗಂಡಾದನು.
05193060a ಜ್ಯೇಷ್ಠಾ ಕಾಶಿಪತೇಃ ಕನ್ಯಾ ಅಂಬಾ ನಾಮೇತಿ ವಿಶ್ರುತಾ।
05193060c ದ್ರುಪದಸ್ಯ ಕುಲೇ ಜಾತಾ ಶಿಖಂಡೀ ಭರತರ್ಷಭ।।
ಭರತರ್ಷಭ! ಅಂಬಾ ಎಂಬ ಹೆಸರಿನಿಂದ ವಿಶ್ರುತಳಾದ ಕಾಶಿಪತಿಯ ಜೇಷ್ಠ ಕನ್ಯೆಯು ದ್ರುಪದನ ಕುಲದಲ್ಲಿ ಶಿಖಂಡಿಯಾಗಿ ಹುಟ್ಟಿದಳು.
05193061a ನಾಹಮೇನಂ ಧನುಷ್ಪಾಣಿಂ ಯುಯುತ್ಸುಂ ಸಮುಪಸ್ಥಿತಂ।
05193061c ಮುಹೂರ್ತಮಪಿ ಪಶ್ಯೇಯಂ ಪ್ರಹರೇಯಂ ನ ಚಾಪ್ಯುತ।।
ಅವನು ಧನುಸ್ಸನ್ನು ಹಿಡಿದು ನನ್ನೊಡನೆ ಯುದ್ಧಮಾಡಲು ಬಂದರೆ ನಾನು ಅವನನ್ನು ಒಂದು ಕ್ಷಣವೂ ನೋಡುವುದಿಲ್ಲ, ಅವನನ್ನು ಹೊಡೆಯುವುದೂ ಇಲ್ಲ.
05193062a ವ್ರತಮೇತನ್ಮಮ ಸದಾ ಪೃಥಿವ್ಯಾಮಪಿ ವಿಶ್ರುತಂ।
05193062c ಸ್ತ್ರಿಯಾಂ ಸ್ತ್ರೀಪೂರ್ವಕೇ ಚಾಪಿ ಸ್ತ್ರೀನಾಮ್ನಿ ಸ್ತ್ರೀಸ್ವರೂಪಿಣಿ।।
05193063a ನ ಮುಂಚೇಯಮಹಂ ಬಾಣಾನಿತಿ ಕೌರವನಂದನ।
ಕೌರವನಂದನ! ಸ್ತ್ರೀಯರ, ಹಿಂದೆ ಸ್ತ್ರೀಯಾಗಿದ್ದವರ, ಸ್ತ್ರೀಯರ ಹೆಸರಿದ್ದವರ, ಸ್ತ್ರೀಯರ ರೂಪದಲ್ಲಿದ್ದವರ ಮೇಲೆ ನಾನು ಬಾಣಪ್ರಯೋಗ ಮಾಡುವುದಿಲ್ಲ ಎನ್ನುವ, ಸದಾ ನಡೆಸಿಕೊಂಡು ಬರುತ್ತಿರುವ ನನ್ನ ಈ ವ್ರತವು ಭೂಮಿಯಲ್ಲಿಯೇ ವಿಶ್ರುತವಾಗಿದೆ1.
05193063c ನ ಹನ್ಯಾಮಹಮೇತೇನ ಕಾರಣೇನ ಶಿಖಂಡಿನಂ।।
05193064a ಏತತ್ತತ್ತ್ವಮಹಂ ವೇದ ಜನ್ಮ ತಾತ ಶಿಖಂಡಿನಃ।
ಈ ಕಾರಣದಿಂದಲೇ ನಾನು ಶಿಖಂಡಿಯನ್ನು ಹೊಡೆಯುವುದಿಲ್ಲ. ಮಗೂ! ಶಿಖಂಡಿಯ ಮಹಾ ಜನ್ಮವೇನೆಂದು ನಿನಗೆ ತಿಳಿಸಿದ್ದೇನೆ.
05193064c ತತೋ ನೈನಂ ಹನಿಷ್ಯಾಮಿ ಸಮರೇಷ್ವಾತತಾಯಿನಂ।।
05193065a ಯದಿ ಭೀಷ್ಮಃ ಸ್ತ್ರಿಯಂ ಹನ್ಯಾದ್ಧನ್ಯಾದಾತ್ಮಾನಮಪ್ಯುತ।
05193065c ನೈನಂ ತಸ್ಮಾದ್ಧನಿಷ್ಯಾಮಿ ದೃಷ್ಟ್ವಾಪಿ ಸಮರೇ ಸ್ಥಿತಂ।।
ಸಮರದಲ್ಲಿ ಆ ಆತತಾಯಿಯನ್ನು ನಾನು ಸಂಹರಿಸುವುದಿಲ್ಲ. ಸ್ತ್ರೀಯನ್ನು ಕೊಲ್ಲುವುದರ ಮೊದಲು ಭೀಷ್ಮನು ತನ್ನನ್ನು ಕೊಂದುಕೊಳ್ಳುತ್ತಾನೆ. ಆದುದರಿಂದ ಅವನು ಸಮರದಲ್ಲಿ ನಿಂತಿರುವುದನ್ನು ನೋಡಿಯೂ ನಾನು ಅವನನ್ನು ಕೊಲ್ಲುವುದಿಲ್ಲ.””
05193066 ಸಂಜಯ ಉವಾಚ।
05193066a ಏತಚ್ಚ್ರುತ್ವಾ ತು ಕೌರವ್ಯೋ ರಾಜಾ ದುರ್ಯೋಧನಸ್ತದಾ।
05193066c ಮುಹೂರ್ತಮಿವ ಸ ಧ್ಯಾತ್ವಾ ಭೀಷ್ಮೇ ಯುಕ್ತಮಮನ್ಯತ।।
ಸಂಜಯನು ಹೇಳಿದನು: “ಇದನ್ನು ಕೇಳಿದ ಕೌರವ್ಯ ರಾಜಾ ದುರ್ಯೋಧನನು ಒಂದು ಕ್ಷಣ ಯೋಚಿಸಿ ಅದು ಭೀಷ್ಮನಿಗೆ ಯುಕ್ತವಾದುದು ಎಂದು ತೀರ್ಮಾನಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಶಿಖಂಡಿಪುಂಸಪ್ರಾಪ್ತೌ ತ್ರಿನವತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಶಿಖಂಡಿಪುಂಸಪ್ರಾಪ್ತಿಯಲ್ಲಿ ನೂರಾತೊಂಭತ್ಮೂರನೆಯ ಅಧ್ಯಾಯವು.
-
ಭೀಷ್ಮನು ಈ ವ್ರತವನ್ನು ಯಾವ ಸಂದರ್ಭದಲ್ಲಿ ತೆಗೆದುಕೊಂಡಿದ್ದನು ಎನ್ನುವುದು ಸ್ಪಷ್ಟವಾಗುತ್ತಿಲ್ಲ. ↩︎