191 ದ್ರುಪದಪ್ರಶ್ನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಅಂಬೋಽಪಾಖ್ಯಾನ ಪರ್ವ

ಅಧ್ಯಾಯ 191

ಸಾರ

ದಾಶಾರ್ಣಕನು ಸೇನೆಯೊಂದಿಗೆ ಬರಲು ಚಿಂತಿತನಾದ ದ್ರುಪದನು ತನ್ನ ಪತ್ನಿಗೆ ಸತ್ಯವನ್ನು ಹೇಳೆಂದು ಕೇಳಿದುದು (1-20).

05191001 ಭೀಷ್ಮ ಉವಾಚ।
05191001a ಏವಮುಕ್ತಸ್ಯ ದೂತೇನ ದ್ರುಪದಸ್ಯ ತದಾ ನೃಪ।
05191001c ಚೋರಸ್ಯೇವ ಗೃಹೀತಸ್ಯ ನ ಪ್ರಾವರ್ತತ ಭಾರತೀ।।

ಭೀಷ್ಮನು ಹೇಳಿದನು: “ನೃಪ! ದೂತನು ಹೀಗೆ ಹೇಳಲು ದೃಪದನು ಕಳ್ಳತನ ಮಾಡುವಾಗಲೇ ಸಿಕ್ಕಿಬಿದ್ದವನಂತೆ ಏನನ್ನೂ ಮಾತನಾಡಲಿಲ್ಲ.

05191002a ಸ ಯತ್ನಮಕರೋತ್ತೀವ್ರಂ ಸಂಬಂಧೈರನುಸಾಂತ್ವನೈಃ।
05191002c ದೂತೈರ್ಮಧುರಸಂಭಾಷೈರ್ನೈತದಸ್ತೀತಿ ಸಂದಿಶನ್।।

ಅದು ಹಾಗಲ್ಲವೆಂದು ಸೂಚನೆಯನ್ನು ನೀಡಲು ತನ್ನ ಸಂಬಂಧಿಗಳ ಅನುಸಾಂತ್ವನದ ಮೂಲಕ, ಮಧುರ ಸಂಭಾಷಣೆ ಮಾಡಬಲ್ಲ ದೂತರ ಮೂಲಕ ತೀವ್ರ ಪ್ರಯತ್ನ ಮಾಡಿದನು.

05191003a ಸ ರಾಜಾ ಭೂಯ ಏವಾಥ ಕೃತ್ವಾ ತತ್ತ್ವತ ಆಗಮಂ।
05191003c ಕನ್ಯೇತಿ ಪಾಂಚಾಲಸುತಾಂ ತ್ವರಮಾಣೋಽಭಿನಿರ್ಯಯೌ।।

ಆ ರಾಜನು ಇನ್ನೊಮ್ಮೆ ಆ ಪಾಂಚಾಲಸುತೆಯು ಕನ್ಯೆಯೆಂದು ಪರೀಕ್ಷಿಸಿ ಸತ್ಯವನ್ನು ತಿಳಿದುಕೊಂಡು ತ್ವರೆಮಾಡಿ ಹೊರಟನು.

05191004a ತತಃ ಸಂಪ್ರೇಷಯಾಮಾಸ ಮಿತ್ರಾಣಾಮಮಿತೌಜಸಾಂ।
05191004c ದುಹಿತುರ್ವಿಪ್ರಲಂಭಂ ತಂ ಧಾತ್ರೀಣಾಂ ವಚನಾತ್ತದಾ।।

ಅವನು ತನ್ನ ಧಾತ್ರಿಗಳ ಮಾತಿನಂತೆ ಮಗಳಿಗೆ ಮೋಸವಾಗಿದೆ ಎಂದು ತನ್ನ ಎಲ್ಲ ಅಮಿತೌಜಸ ಮಿತ್ರರಿಗೆ ಹೇಳಿ ಕಳುಹಿಸಿದನು.

05191005a ತತಃ ಸಮುದಯಂ ಕೃತ್ವಾ ಬಲಾನಾಂ ರಾಜಸತ್ತಮಃ।
05191005c ಅಭಿಯಾನೇ ಮತಿಂ ಚಕ್ರೇ ದ್ರುಪದಂ ಪ್ರತಿ ಭಾರತ।।

ಭಾರತ! ಆ ರಾಜಸತ್ತಮನು ಸೇನೆಗಳನ್ನು ಒಟ್ಟುಗೂಡಿಸಿ ದ್ರುಪದನ ಮೇಲೆ ಧಾಳಿಯಿಡಲು ನಿಶ್ಚಯಿಸಿದನು.

05191006a ತತಃ ಸಮ್ಮಂತ್ರಯಾಮಾಸ ಮಿತ್ರೈಃ ಸಹ ಮಹೀಪತಿಃ।
05191006c ಹಿರಣ್ಯವರ್ಮಾ ರಾಜೇಂದ್ರ ಪಾಂಚಾಲ್ಯಂ ಪಾರ್ಥಿವಂ ಪ್ರತಿ।।

ರಾಜೇಂದ್ರ! ಆಗ ಮಹೀಪತಿ ಹಿರಣ್ಯವರ್ಮನು ಪಾಂಚಾಲ್ಯ ರಾಜನ ಕುರಿತು ತನ್ನ ಮಿತ್ರರೊಡನೆ ಸಮಾಲೋಚನೆ ಮಾಡಿದನು.

05191007a ತತ್ರ ವೈ ನಿಶ್ಚಿತಂ ತೇಷಾಮಭೂದ್ರಾಜ್ಞಾಂ ಮಹಾತ್ಮನಾಂ।
05191007c ತಥ್ಯಂ ಚೇದ್ಭವತಿ ಹ್ಯೇತತ್ಕನ್ಯಾ ರಾಜಂ ಶಿಖಂಡಿನೀ।
05191007e ಬದ್ಧ್ವಾ ಪಾಂಚಾಲರಾಜಾನಮಾನಯಿಷ್ಯಾಮಹೇ ಗೃಹಾನ್।।

ಆ ಮಹಾತ್ಮ ರಾಜರು ನಿಶ್ಚಯಿಸಿದರು: “ಒಂದುವೇಳೆ ರಾಜನ ಶಿಖಂಡಿನಿಯು ಕನ್ಯೆಯೇ ಆಗಿದ್ದರೆ ನಾವು ಪಾಂಚಾಲರಾಜನನ್ನು ಮನೆಯಿಂದ ಬಂಧಿಸಿ ಕರೆದುಕೊಂಡು ಬರೋಣ.

05191008a ಅನ್ಯಂ ರಾಜಾನಮಾಧಾಯ ಪಾಂಚಾಲೇಷು ನರೇಶ್ವರಂ।
05191008c ಘಾತಯಿಷ್ಯಾಮ ನೃಪತಿಂ ದ್ರುಪದಂ ಸಶಿಖಂಡಿನಂ।।

ಇನ್ನೊಬ್ಬನನ್ನು ಪಾಂಚಾಲ ನರೇಶ್ವರನನ್ನಾಗಿ ಮಾಡಿ ನೃಪತಿ ದ್ರುಪದನನ್ನು ಶಿಖಂಡಿಯೊಡನೆ ಸಂಹರಿಸೋಣ!”

05191009a ಸ ತದಾ ದೂತಮಾಜ್ಞಾಯ ಪುನಃ ಕ್ಷತ್ತಾರಮೀಶ್ವರಃ।
05191009c ಪ್ರಾಸ್ಥಾಪಯತ್ಪಾರ್ಷತಾಯ ಹನ್ಮೀತಿ ತ್ವಾಂ ಸ್ಥಿರೋ ಭವ।।

ಆಗ ಆ ಕ್ಷತ್ತಾರರ ಈಶ್ವರನು ದೂತನನ್ನು ಪುನಃ ಪಾರ್ಷತನಿಗೆ “ನಿನ್ನನ್ನು ಕೊಲ್ಲುತ್ತೇವೆ. ನಿಲ್ಲು!” ಎಂದು ಹೇಳಿ ಕಳುಹಿಸಿದನು.

05191010a ಸ ಪ್ರಕೃತ್ಯಾ ಚ ವೈ ಭೀರುಃ ಕಿಲ್ಬಿಷೀ ಚ ನರಾಧಿಪಃ।
05191010c ಭಯಂ ತೀವ್ರಮನುಪ್ರಾಪ್ತೋ ದ್ರುಪದಃ ಪೃಥಿವೀಪತಿಃ।।

ಸ್ವಭಾವದಲ್ಲಿ ನಾಚಿಕೆಯುಳ್ಳವನಾದ, ತಪ್ಪಿತಸ್ಥನಾದ ನರಾಧಿಪ ಪೃಥಿವೀಪತಿ ದ್ರುಪದನು ತೀವ್ರ ಭಯಪಟ್ಟನು.

05191011a ವಿಸೃಜ್ಯ ದೂತಂ ದಾಶಾರ್ಣಂ ದ್ರುಪದಃ ಶೋಕಕರ್ಶಿತಃ।
05191011c ಸಮೇತ್ಯ ಭಾರ್ಯಾಂ ರಹಿತೇ ವಾಕ್ಯಮಾಹ ನರಾಧಿಪಃ।।

ಶೋಕಕರ್ಶಿತ ನರಾಧಿಪ ದ್ರುಪದನು ದಾಶಾರ್ಣನಿಗೆ ದೂತನನ್ನು ಕಳುಹಿಸಿ, ಏಕಾಂತದಲ್ಲಿ ಪತ್ನಿಯೊಡನೆ ಮಾತನಾಡಿದನು.

05191012a ಭಯೇನ ಮಹತಾವಿಷ್ಟೋ ಹೃದಿ ಶೋಕೇನ ಚಾಹತಃ।
05191012c ಪಾಂಚಾಲರಾಜೋ ದಯಿತಾಂ ಮಾತರಂ ವೈ ಶಿಖಂಡಿನಃ।।

ಮಹಾ ಭಯದಿಂದ ಆವಿಷ್ಟನಾದ, ಶೋಕದಿಂದ ಹೃದಯವನ್ನು ಕಳೆದುಕೊಂಡ ಪಾಂಚಾಲರಾಜನು ಶಿಖಂಡಿಯ ತಾಯಿ ಪ್ರಿಯೆಗೆ ಹೇಳಿದನು:

05191013a ಅಭಿಯಾಸ್ಯತಿ ಮಾಂ ಕೋಪಾತ್ಸಂಬಂಧೀ ಸುಮಹಾಬಲಃ।
05191013c ಹಿರಣ್ಯವರ್ಮಾ ನೃಪತಿಃ ಕರ್ಷಮಾಣೋ ವರೂಥಿನೀಂ।।

“ನನ್ನ ಸಂಬಂಧೀ ಸುಮಹಾಬಲ ನೃಪತಿ ಹಿರಣ್ಯವರ್ಮನು ಕೋಪದಿಂದ ದೊಡ್ಡ ಸೇನೆಯೊಂದಿಗೆ ನನ್ನನ್ನು ಆಕ್ರಮಣಿಸಲಿದ್ದಾನೆ.

05191014a ಕಿಮಿದಾನೀಂ ಕರಿಷ್ಯಾಮಿ ಮೂಢಃ ಕನ್ಯಾಮಿಮಾಂ ಪ್ರತಿ।
05191014c ಶಿಖಂಡೀ ಕಿಲ ಪುತ್ರಸ್ತೇ ಕನ್ಯೇತಿ ಪರಿಶಂಕಿತಃ।।

ಮೂಢನಾದ ನಾನು ಈ ಕನ್ಯೆಯ ಕುರಿತು ಈಗ ಏನು ಮಾಡಲಿ? ನಿನ್ನ ಪುತ್ರ ಶಿಖಂಡಿಯು ಕನ್ಯೆಯೆಂದು ಶಂಕಿಸುತ್ತಿದ್ದಾರೆ.

05191015a ಇತಿ ನಿಶ್ಚಿತ್ಯ ತತ್ತ್ವೇನ ಸಮಿತ್ರಃ ಸಬಲಾನುಗಃ।
05191015c ವಂಚಿತೋಽಸ್ಮೀತಿ ಮನ್ವಾನೋ ಮಾಂ ಕಿಲೋದ್ಧರ್ತುಮಿಚ್ಚತಿ।।

ಇದರಲ್ಲಿ ಸತ್ಯವೇನೆಂದು ನಿಶ್ಚಯಿಸಿ ಮಿತ್ರರು, ಅನುಯಾಯಿಗಳ ಸೇನೆಗಳೊಂದಿಗೆ ನಾನು ಅವನನ್ನು ವಂಚಿಸಿದ್ದೇನೆ ಎಂದು ತೀರ್ಮಾನಿಸಿ ನನ್ನನ್ನು ಕಿತ್ತೊಗೆಯಲು ಬಯಸಿದ್ದಾನೆ.

05191016a ಕಿಮತ್ರ ತಥ್ಯಂ ಸುಶ್ರೋಣಿ ಕಿಂ ಮಿಥ್ಯಾ ಬ್ರೂಹಿ ಶೋಭನೇ।
05191016c ಶ್ರುತ್ವಾ ತ್ವತ್ತಃ ಶುಭೇ ವಾಕ್ಯಂ ಸಂವಿಧಾಸ್ಯಾಮ್ಯಹಂ ತಥಾ।।

ಸುಶ್ರೋಣಿ! ಶೋಭನೇ! ಇದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದನ್ನು ಹೇಳು. ಶುಭೇ! ನಿನ್ನಿಂದ ಸತ್ಯವಾಕ್ಯವನ್ನು ಕೇಳಿ ಏನು ಮಾಡಬೇಕೋ ಅದನ್ನು ಮಾಡುತ್ತೇನೆ.

05191017a ಅಹಂ ಹಿ ಸಂಶಯಂ ಪ್ರಾಪ್ತೋ ಬಾಲಾ ಚೇಯಂ ಶಿಖಂಡಿನೀ।
05191017c ತ್ವಂ ಚ ರಾಜ್ಞೈ ಮಹತ್ಕೃಚ್ಚ್ರಂ ಸಂಪ್ರಾಪ್ತಾ ವರವರ್ಣಿನಿ।।

ವರವರ್ಣಿನಿ! ಸಂಶಯಕ್ಕೊಳಗಾಗಿರುವ ನನಗೆ, ಬಾಲಕಿ ಶಿಖಂಡಿನಿಗೆ ಮತ್ತು ರಾಣಿ! ನಿನಗೂ ಮಹಾ ಕಷ್ಟವು ಬಂದೊದಗಿದೆ.

05191018a ಸಾ ತ್ವಂ ಸರ್ವವಿಮೋಕ್ಷಾಯ ತತ್ತ್ವಮಾಖ್ಯಾಹಿ ಪೃಚ್ಚತಃ।
05191018c ತಥಾ ವಿದಧ್ಯಾಂ ಸುಶ್ರೋಣಿ ಕೃತ್ಯಸ್ಯಾಸ್ಯ ಶುಚಿಸ್ಮಿತೇ।
05191018e ಶಿಖಂಡಿನಿ ಚ ಮಾ ಭೈಸ್ತ್ವಂ ವಿಧಾಸ್ಯೇ ತತ್ರ ತತ್ತ್ವತಃ।।

ನಾನು ಕೇಳುತ್ತಿದ್ದೇನೆ. ನಮ್ಮನ್ನೆಲ್ಲರನ್ನೂ ಬಿಡುಗಡೆಗೊಳಿಸಲು ಸತ್ಯವನ್ನು ಹೇಳು. ಸುಶ್ರೋಣಿ! ಶುಚಿಸ್ಮಿತೇ! ಸತ್ಯವನ್ನು ತಿಳಿದುಕೊಂಡು ಇದರ ಕುರಿತು ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ಶಿಖಂಡಿನಿಗೆ ನೀನು ಹೆದರಬೇಡ! ಈ ವಿಷಯದಲ್ಲಿ ಸತ್ಯವನ್ನು ತಿಳಿದುಕೊಂಡೇ ಮುಂದುವರೆಯುತ್ತೇನೆ.

05191019a ಕ್ರಿಯಯಾಹಂ ವರಾರೋಹೇ ವಂಚಿತಃ ಪುತ್ರಧರ್ಮತಃ।
05191019c ಮಯಾ ದಾಶಾರ್ಣಕೋ ರಾಜಾ ವಂಚಿತಶ್ಚ ಮಹೀಪತಿಃ।
05191019e ತದಾಚಕ್ಷ್ವ ಮಹಾಭಾಗೇ ವಿಧಾಸ್ಯೇ ತತ್ರ ಯದ್ಧಿತಂ।।

ವರಾರೋಹೇ! ಪುತ್ರಧರ್ಮತನಾದ ನಾನೇ ವಂಚಿತನಾಗಿದ್ದೇನೆ. ಅಂಥಹ ನನ್ನಿಂದ ಮಹೀಪತಿ ರಾಜಾ ದಾಶಾರ್ಣಕನು ವಂಚಿತನಾಗಿದ್ದಾನೆ. ಮಹಾಭಾಗೇ! ಆದುದರಿಂದ ಇದರಲ್ಲಿ ನಿನಗೆ ತಿಳಿದಿರುವುದನ್ನು ಸತ್ಯವಾಗಿ ಹೇಳು!”

05191020a ಜಾನತಾಪಿ ನರೇಂದ್ರೇಣ ಖ್ಯಾಪನಾರ್ಥಂ ಪರಸ್ಯ ವೈ।
05191020c ಪ್ರಕಾಶಂ ಚೋದಿತಾ ದೇವೀ ಪ್ರತ್ಯುವಾಚ ಮಹೀಪತಿಂ।।

ತನಗೆ ಗೊತ್ತಿದ್ದರೂ ಶತ್ರುವನ್ನು ತನಗಿದು ಗೊತ್ತಿರಲಿಲ್ಲವೆಂದು ತೋರಿಸಿಕೊಡಲು ನರೇಂದ್ರನು ಹೀಗೆ ಒತ್ತಾಯಿಸಿ ಕೇಳಲು ಆ ದೇವಿಯು ಮಹೀಪತಿಗೆ ಉತ್ತರಿಸಿದಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ದ್ರುಪದಪ್ರಶ್ನೇ ಏಕನವತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ದ್ರುಪದಪ್ರಶ್ನೆಯಲ್ಲಿ ನೂರಾತೊಂಭತ್ತೊಂದನೆಯ ಅಧ್ಯಾಯವು.