ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಅಂಬೋಽಪಾಖ್ಯಾನ ಪರ್ವ
ಅಧ್ಯಾಯ 190
ಸಾರ
ಶಿಖಂಡಿಯು ಯೌವನಾವಸ್ಥೆಯನ್ನು ಪಡೆಯಲು ದ್ರುಪದನಿಗೆ ತನ್ನ ಮಗನೆಂದು ತಿಳಿದುಕೊಂಡಿರುವವನು ಸ್ತ್ರೀಯೆಂದು ತಿಳಿದು ಚಿಂತಿಸಲು, ಪತ್ನಿಯ ಸೂಚನೆಯಂತೆ ಅವಳಿಗೆ ವಿವಾಹಯೋಗ್ಯ ಕನ್ಯೆಯನ್ನು ಹುಡುಕಿ, ದಾಶಾರ್ಣಕನ ಮಗಳನ್ನು ಸೊಸೆಯನ್ನಾಗಿ ಸ್ವೀಕರಿಸಿದುದು (1-11). ವಿವಾಹದ ನಂತರ ತಾನು ಮದುವೆಯಾದ ವ್ಯಕ್ತಿಯು ಗಂಡಲ್ಲ, ಹೆಣ್ಣು ಎಂದು ತಿಳಿದ ದಾಶಾರ್ಣಕನ ಮಗಳು ತಂದೆಗೆ ವಿಷಯವನ್ನ್ನು ಹೇಳಿ ಕಳುಹಿಸಲು ದಾಶಾರ್ಣಕನು ಕೋಪಗೊಂಡು ದ್ರುಪದನನ್ನು ನಿಂದಿಸಿ ಯುದ್ಧದ ಬೆದರಿಕೆಯನ್ನು ಹಾಕಿದುದು (12-23).
05190001 ಭೀಷ್ಮ ಉವಾಚ।
05190001a ಚಕಾರ ಯತ್ನಂ ದ್ರುಪದಃ ಸರ್ವಸ್ಮಿನ್ಸ್ವಜನೇ ಮಹತ್।
05190001c ತತೋ ಲೇಖ್ಯಾದಿಷು ತಥಾ ಶಿಲ್ಪೇಷು ಚ ಪರಂ ಗತಾ।।
05190001e ಇಷ್ವಸ್ತ್ರೇ ಚೈವ ರಾಜೇಂದ್ರ ದ್ರೋಣಶಿಷ್ಯೋ ಬಭೂವ ಹ।।
ಭೀಷ್ಮನು ಹೇಳಿದನು: “ರಾಜೇಂದ್ರ! ದ್ರುಪದನು ತನ್ನ ಸ್ವಜನರಲ್ಲಿ ಬಹಳ ಸರ್ವ ಯತ್ನಗಳನ್ನೂ ಮಾಡಿದನು. ಆಗ ಅವನು ಚಿತ್ರಕಲೆಯಲ್ಲಿ ಮತ್ತು ಶಿಲ್ಪಕಲೆಯಲ್ಲಿ ಪಾರಂಗತನಾದನು. ಅವನು ಅಸ್ತ್ರಗಳನ್ನು ಕಲಿಯಲು ದ್ರೋಣನ ಶಿಷ್ಯನೂ ಆದನು.
05190002a ತಸ್ಯ ಮಾತಾ ಮಹಾರಾಜ ರಾಜಾನಂ ವರವರ್ಣಿನೀ।
05190002c ಚೋದಯಾಮಾಸ ಭಾರ್ಯಾರ್ಥಂ ಕನ್ಯಾಯಾಃ ಪುತ್ರವತ್ತದಾ।।
ಮಹಾರಾಜ! ಅವನ ತಾಯಿ ವರವರ್ಣಿನಿಯು ರಾಜನಲ್ಲಿ ತನ್ನ ಪುತ್ರನಂತಿದ್ದ ಕನ್ಯೆಗೆ ಪತ್ನಿಯನ್ನು ಹುಡುಕಲು ಒತ್ತಾಯಿಸಿದಳು.
05190003a ತತಸ್ತಾಂ ಪಾರ್ಷತೋ ದೃಷ್ಟ್ವಾ ಕನ್ಯಾಂ ಸಂಪ್ರಾಪ್ತಯೌವನಾಂ।
05190003c ಸ್ತ್ರಿಯಂ ಮತ್ವಾ ತದಾ ಚಿಂತಾಂ ಪ್ರಪೇದೇ ಸಹ ಭಾರ್ಯಯಾ।।
ಆಗ ತನ್ನ ಕನ್ಯೆಯು ಯೌವನವನ್ನು ಪಡೆದುದನ್ನು ನೋಡಿ ಪಾರ್ಷತನು ಆಗ ಅವಳನ್ನು ಸ್ತ್ರೀಯೆಂದು ತಿಳಿದು ತನ್ನ ಪತ್ನಿಯೊಂದಿಗೆ ಚಿಂತಿಸತೊಡಗಿದನು.
05190004 ದ್ರುಪದ ಉವಾಚ।
05190004a ಕನ್ಯಾ ಮಮೇಯಂ ಸಂಪ್ರಾಪ್ತಾ ಯೌವನಂ ಶೋಕವರ್ಧಿನೀ।
05190004c ಮಯಾ ಪ್ರಚ್ಚಾದಿತಾ ಚೇಯಂ ವಚನಾಚ್ಚೂಲಪಾಣಿನಃ।।
ದ್ರುಪದನು ಹೇಳಿದನು: “ನನ್ನ ಮಗಳು ಯೌವನವನ್ನು ಪಡೆದು ನನ್ನ ಶೋಕವನ್ನು ಹೆಚ್ಚಿಸಿದ್ದಾಳೆ. ಶೂಲಪಾಣಿಯ ವಚನದಂತೆ ನಾನು ಇವಳನ್ನು ಅಡಗಿಸಿಟ್ಟೆ.
05190005a ನ ತನ್ಮಿಥ್ಯಾ ಮಹಾರಾಜ್ಞೈ ಭವಿಷ್ಯತಿ ಕಥಂ ಚನ।
05190005c ತ್ರೈಲೋಕ್ಯಕರ್ತಾ ಕಸ್ಮಾದ್ಧಿ ತನ್ಮೃಷಾ ಕರ್ತುಮರ್ಹತಿ।।
ಮಹಾರಾಜ್ಞಿ! ಅದು ಎಂದೂ ಸುಳ್ಳಾಗುವುದಿಲ್ಲ! ಹೇಗೆ ತಾನೇ ತ್ರೈಲೋಕ್ಯಕರ್ತನು ಸುಳ್ಳು ಹೇಳಿಯಾನು?”
05190006 ಭಾರ್ಯೋವಾಚ।
05190006a ಯದಿ ತೇ ರೋಚತೇ ರಾಜನ್ವಕ್ಷ್ಯಾಮಿ ಶೃಣು ಮೇ ವಚಃ।
05190006c ಶ್ರುತ್ವೇದಾನೀಂ ಪ್ರಪದ್ಯೇಥಾಃ ಸ್ವಕಾರ್ಯಂ ಪೃಷತಾತ್ಮಜ।।
ಭಾರ್ಯೆಯು ಹೇಳಿದಳು: “ರಾಜನ್! ಇಷ್ಟವಾದರೆ ನಾನು ಹೇಳುವುದನ್ನು ಕೇಳು. ಪೃಷತಾತ್ಮಜ! ನನ್ನ ಮಾತನ್ನು ಕೇಳಿ ನಿನ್ನ ಕಾರ್ಯವನ್ನು ಮಾಡಬೇಕು.
05190007a ಕ್ರಿಯತಾಮಸ್ಯ ನೃಪತೇ ವಿಧಿವದ್ದಾರಸಂಗ್ರಹಃ।
05190007c ಸತ್ಯಂ ಭವತಿ ತದ್ವಾಕ್ಯಮಿತಿ ಮೇ ನಿಶ್ಚಿತಾ ಮತಿಃ।।
ನೃಪತೇ! ಇವನಿಗೆ ವಿಧಿವತ್ತಾಗಿ ಪತ್ನಿಯನ್ನು ಪಡೆಯುವ ಕಾರ್ಯವನ್ನು ಮಾಡೋಣ. ಆಗ ಶಿವನ ಮಾತು ಸತ್ಯವಾಗುತ್ತದೆ ಎಂದು ನನ್ನ ಬುದ್ಧಿಯು ನಿಶ್ಚಯಿಸಿದೆ.””
05190008 ಭೀಷ್ಮ ಉವಾಚ।
05190008a ತತಸ್ತೌ ನಿಶ್ಚಯಂ ಕೃತ್ವಾ ತಸ್ಮಿನ್ಕಾರ್ಯೇಽಥ ದಂಪತೀ।
05190008c ವರಯಾಂ ಚಕ್ರತುಃ ಕನ್ಯಾಂ ದಶಾರ್ಣಾಧಿಪತೇಃ ಸುತಾಂ।।
ಭೀಷ್ಮನು ಹೇಳಿದನು: “ಹೀಗೆ ಆ ಕಾರ್ಯದ ಕುರಿತು ನಿಶ್ಚಯ ಮಾಡಿದ ದಂಪತಿಗಳು ದಶಾರ್ಣಾಧಿಪತಿಯ ಮಗಳನ್ನು ಕನ್ಯೆಯನ್ನಾಗಿ ಆರಿಸಿದರು.
05190009a ತತೋ ರಾಜಾ ದ್ರುಪದೋ ರಾಜಸಿಂಹಃ
ಸರ್ವಾನ್ರಾಜ್ಞಾಃ ಕುಲತಃ ಸಂನಿಶಾಮ್ಯ।
05190009c ದಾಶಾರ್ಣಕಸ್ಯ ನೃಪತೇಸ್ತನೂಜಾಂ
ಶಿಖಂಡಿನೇ ವರಯಾಮಾಸ ದಾರಾನ್।।
ಆಗ ರಾಜಾ ರಾಜಸಿಂಹ ದ್ರುಪದನು ಎಲ್ಲ ರಾಜಕುಲಗಳನ್ನು ವಿಚಾರಿಸಿ ದಾಶಾರ್ಣಕ ನೃಪನ ತನುಜೆಯನ್ನು ಶಿಖಂಡಿಯ ಪತ್ನಿಯನ್ನಾಗಿ ವರಿಸಿದನು.
05190010a ಹಿರಣ್ಯವರ್ಮೇತಿ ನೃಪೋ ಯೋಽಸೌ ದಾಶಾರ್ಣಕಃ ಸ್ಮೃತಃ।
05190010c ಸ ಚ ಪ್ರಾದಾನ್ ಮಹೀಪಾಲಃ ಕನ್ಯಾಂ ತಸ್ಮೈ ಶಿಖಂಡಿನೇ।।
ದಾಶಾರ್ಣಕ ನೃಪನು ಹಿರಣ್ಯವರ್ಮನೆಂದು ಖ್ಯಾತನಾಗಿದ್ದನು. ಆ ಮಹೀಪಾಲನು ತನ್ನ ಕನ್ಯೆಯನ್ನು ಶಿಖಂಡಿಗೆ ಕೊಟ್ಟನು.
05190011a ಸ ಚ ರಾಜಾ ದಶಾರ್ಣೇಷು ಮಹಾನಾಸೀನ್ಮಹೀಪತಿಃ।
05190011c ಹಿರಣ್ಯವರ್ಮಾ ದುರ್ಧರ್ಷೋ ಮಹಾಸೇನೋ ಮಹಾಮನಾಃ।।
ಆ ರಾಜನು ದಶಾರ್ಣರಿಗೆ ಮಹಾ ಮಹೀಪತಿಯಾಗಿದ್ದನು. ಹಿರಣ್ಯವರ್ಮನು ದುರ್ಧರ್ಷನೂ, ಮಹಾಸೇನನೂ, ಮಹಾಮನಸ್ವಿಯೂ ಆಗಿದ್ದನು.
05190012a ಕೃತೇ ವಿವಾಹೇ ತು ತದಾ ಸಾ ಕನ್ಯಾ ರಾಜಸತ್ತಮ।
05190012c ಯೌವನಂ ಸಮನುಪ್ರಾಪ್ತಾ ಸಾ ಚ ಕನ್ಯಾ ಶಿಖಂಡಿನೀ।।
ರಾಜಸತ್ತಮ! ವಿವಾಹವು ಮುಗಿದನಂತರ ಆ ಕನ್ಯೆಯು ಕನ್ಯೆ ಶಿಖಂಡಿನಿಯಂತೆ ಯೌವನವನ್ನು ಪಡೆದಳು.
05190013a ಕೃತದಾರಃ ಶಿಖಂಡೀ ತು ಕಾಂಪಿಲ್ಯಂ ಪುನರಾಗಮತ್।
05190013c ನ ಚ ಸಾ ವೇದ ತಾಂ ಕನ್ಯಾಂ ಕಂ ಚಿತ್ಕಾಲಂ ಸ್ತ್ರಿಯಂ ಕಿಲ।।
ಪತ್ನಿಯನ್ನು ಮಾಡಿಕೊಂಡು ಶಿಖಂಡಿಯು ಕಾಂಪಿಲ್ಯ ನಗರಕ್ಕೆ ಹಿಂದಿರುಗಿದನು. ಆದರೆ ಕೆಲ ಸಮಯ ಆ ಕನ್ಯೆಯು ಅವನು ಸ್ತ್ರೀಯೆಂದು ತಿಳಿಯಲೇ ಇಲ್ಲ.
05190014a ಹಿರಣ್ಯವರ್ಮಣಃ ಕನ್ಯಾ ಜ್ಞಾತ್ವಾ ತಾಂ ತು ಶಿಖಂಡಿನೀಂ।
05190014c ಧಾತ್ರೀಣಾಂ ಚ ಸಖೀನಾಂ ಚ ವ್ರೀಡಮಾನಾ ನ್ಯವೇದಯತ್।
05190014e ಕನ್ಯಾಂ ಪಂಚಾಲರಾಜಸ್ಯ ಸುತಾಂ ತಾಂ ವೈ ಶಿಖಂಡಿನೀಂ।।
ಶಿಖಂಡಿನಿಯ ಕುರಿತು ಗೊತ್ತಾದ ನಂತರ ಹಿರಣ್ಯವರ್ಮನ ಕನ್ಯೆಯು ನಾಚಿಕೊಳ್ಳುತ್ತಾ ಶಿಖಂಡಿನಿಯು ಪಂಚಾಲರಾಜನ ಮಗಳೆಂದು ತನ್ನ ದಾಸಿಯರಿಗೂ ಸಖಿಗಳಿಗೂ ಹೇಳಿದಳು.
05190015a ತತಸ್ತಾ ರಾಜಶಾರ್ದೂಲ ಧಾತ್ರ್ಯೋ ದಾಶಾರ್ಣಿಕಾಸ್ತದಾ।
05190015c ಜಗ್ಮುರಾರ್ತಿಂ ಪರಾಂ ದುಃಖಾತ್ಪ್ರೇಷಯಾಮಾಸುರೇವ ಚ।।
ರಾಜಶಾರ್ದೂಲ! ಆಗ ದಾಶಾರ್ಣಿಕ ದಾಸಿಯರು ಪರಮ ದುಃಖಿತರಾಗಿ ಆರ್ತರಾಗಿ ವಿಷಯವನ್ನು ಅಲ್ಲಿಗೆ ಹೇಳಿಕಳುಹಿಸಿದರು.
05190016a ತತೋ ದಶಾರ್ಣಾಧಿಪತೇಃ ಪ್ರೇಷ್ಯಾಃ ಸರ್ವಂ ನ್ಯವೇದಯನ್।
05190016c ವಿಪ್ರಲಂಭಂ ಯಥಾವೃತ್ತಂ ಸ ಚ ಚುಕ್ರೋಧ ಪಾರ್ಥಿವಃ।।
ಕಳುಹಿಸಿದವರು ಎಲ್ಲವನ್ನು – ಮೋಸವು ಹೇಗೆ ನಡೆಯಿತೋ ಹಾಗೆ - ನಿವೇದಿಸಿದರು. ಆಗ ಪಾರ್ಥಿವನು ಕುಪಿತನಾದನು.
05190017a ಶಿಖಂಡ್ಯಪಿ ಮಹಾರಾಜ ಪುಂವದ್ರಾಜಕುಲೇ ತದಾ।
05190017c ವಿಜಹಾರ ಮುದಾ ಯುಕ್ತಃ ಸ್ತ್ರೀತ್ವಂ ನೈವಾತಿರೋಚಯನ್।।
ಮಹಾರಾಜ! ಆದರೆ ಶಿಖಂಡಿಯು ಪುರುಷನಂತೆಯೇ ರಾಜಕುಲದಲ್ಲಿ ಸ್ತ್ರೀತ್ವವನ್ನು ಉಲ್ಲಂಘಿಸಿ ಸಂತೋಷದಿಂದ ಓಡಾಡಿಕೊಂಡಿದ್ದನು.
05190018a ತತಃ ಕತಿಪಯಾಹಸ್ಯ ತಚ್ಚ್ರುತ್ವಾ ಭರತರ್ಷಭ।
05190018c ಹಿರಣ್ಯವರ್ಮಾ ರಾಜೇಂದ್ರ ರೋಷಾದಾರ್ತಿಂ ಜಗಾಮ ಹ।।
ಭರತರ್ಷಭ! ಇದನ್ನು ಕೇಳಿದ ರಾಜೇಂದ್ರ ಹಿರಣ್ಯವರ್ಮನು ರೋಷದಿಂದ ಆರ್ತನಾದನು.
05190019a ತತೋ ದಾಶಾರ್ಣಕೋ ರಾಜಾ ತೀವ್ರಕೋಪಸಮನ್ವಿತಃ।
05190019c ದೂತಂ ಪ್ರಸ್ಥಾಪಯಾಮಾಸ ದ್ರುಪದಸ್ಯ ನಿವೇಶನೇ।।
ತೀವ್ರಕೋಪಸಮನ್ವಿತನಾದ ರಾಜಾ ದಾಶಾರ್ಣಕನು ದ್ರುಪದನ ನಿವೇಶನಕ್ಕೆ ದೂತನನ್ನು ಕಳುಹಿಸಿಕೊಟ್ಟನು.
05190020a ತತೋ ದ್ರುಪದಮಾಸಾದ್ಯ ದೂತಃ ಕಾಂಚನವರ್ಮಣಃ।
05190020c ಏಕ ಏಕಾಂತಮುತ್ಸಾರ್ಯ ರಹೋ ವಚನಮಬ್ರವೀತ್।।
ಹಿರಣ್ಯವರ್ಮನ ದೂತನು ದ್ರುಪದನ ಬಳಿ ಬಂದು, ಒಬ್ಬನನ್ನೇ ಏಕಾಂತದಲ್ಲಿ ಕರೆದು ರಹಸ್ಯದಲ್ಲಿ ಈ ಮಾತನ್ನಾಡಿದನು:
05190021a ದಶಾರ್ಣರಾಜೋ ರಾಜಂಸ್ತ್ವಾಮಿದಂ ವಚನಮಬ್ರವೀತ್।
05190021c ಅಭಿಷಂಗಾತ್ಪ್ರಕುಪಿತೋ ವಿಪ್ರಲಬ್ಧಸ್ತ್ವಯಾನಘ।
“ರಾಜನ್! ಅನಘ! ನಿನ್ನಿಂದ ಮೋಸಗೊಂಡು, ಅಪಮಾನಿತನಾಗಿ ದಾಶಾರ್ಣರಾಜನು ನಿನಗೆ ಈ ಮಾತನ್ನು ಹೇಳಿಕಳುಹಿಸಿದ್ದಾನೆ.
05190022a ಅವಮನ್ಯಸೇ ಮಾಂ ನೃಪತೇ ನೂನಂ ದುರ್ಮಂತ್ರಿತಂ ತವ।
05190022c ಯನ್ಮೇ ಕನ್ಯಾಂ ಸ್ವಕನ್ಯಾರ್ಥೇ ಮೋಹಾದ್ಯಾಚಿತವಾನಸಿ।।
“ನೃಪತೇ! ನನ್ನನ್ನು ನೀನು ಅಪಮಾನಗೊಳಿಸಿದ್ದೀಯೆ. ನೀನು ಕೆಟ್ಟ ಸಲಹೆಗಳನ್ನು ಕೊಟ್ಟಿದ್ದೀಯೆ. ನನ್ನ ಕನ್ಯೆಯನ್ನು ನಿನ್ನ ಕನ್ಯೆಗೋಸ್ಕರ ಮೋಸಗೊಳಿಸಿ ತೆಗೆದುಕೊಂಡಿದ್ದೀಯೆ.
05190023a ತಸ್ಯಾದ್ಯ ವಿಪ್ರಲಂಭಸ್ಯ ಫಲಂ ಪ್ರಾಪ್ನುಹಿ ದುರ್ಮತೇ।
05190023c ಏಷ ತ್ವಾಂ ಸಜನಾಮಾತ್ಯಮುದ್ಧರಾಮಿ ಸ್ಥಿರೋ ಭವ।।
ದುರ್ಮತೇ! ಇಂದು ಆ ಮೋಸದ ಫಲವನ್ನು ನೀನು ಪಡೆಯುತ್ತೀಯೆ! ನಿನ್ನನ್ನು ನಿನ್ನ ಜನರು ಅಮಾತ್ಯರೊಂದಿಗೆ ಮುಗಿಸಿಬಿಡುತ್ತೇನೆ. ಸ್ಥಿರನಾಗು!”””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಹಿರಣ್ಯವರ್ಮದೂತಾಗಮನೇ ನವತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಹಿರಣ್ಯವರ್ಮದೂತಾಗಮನದಲ್ಲಿ ನೂರಾತೊಂಭತ್ತನೆಯ ಅಧ್ಯಾಯವು.