189 ಶಿಖಂಡ್ಯುತ್ಪತ್ತಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಅಂಬೋಽಪಾಖ್ಯಾನ ಪರ್ವ

ಅಧ್ಯಾಯ 189

ಸಾರ

ಭೀಷ್ಮನಿಗೆ ಪ್ರತೀಕಾರವನ್ನುಂಟುಮಾಡುವವನು ಬೇಕೆಂದು ದ್ರುಪದನು ಶಿವನಲ್ಲಿ ಬೇಡಿಕೊಳ್ಳಲು ಶಿವನು “ನಿನಗೆ ಹೆಣ್ಣು ಮತ್ತು ಗಂಡಾಗಿರುವುದು ಆಗುತ್ತದೆ” ಎಂದು ಹೇಳಿದುದು (1-6). ದ್ರುಪದನ ಪತ್ನಿಯು ತನಗೆ ಮಗಳು ಹುಟ್ಟಿದ್ದರೂ ಗಂಡು ಮಗನು ಹುಟ್ಟಿದ್ದಾನೆ ಎಂದು ಗಂಡನಿಗೆ ಸುಳ್ಳುಹೇಳಿ ಅವಳಿಗೆ ಶಿಖಂಡಿಯೆಂಬ ಹೆಸರನ್ನಿತ್ತು ಗಂಡುಮಗುವಿನಂತೆಯೇ ಬೆಳೆಸಿದುದು (7-18).

05189001 ದುರ್ಯೋಧನ ಉವಾಚ।
05189001a ಕಥಂ ಶಿಖಂಡೀ ಗಾಂಗೇಯ ಕನ್ಯಾ ಭೂತ್ವಾ ಸತೀ ತದಾ।
05189001c ಪುರುಷೋಽಭವದ್ಯುಧಿ ಶ್ರೇಷ್ಠ ತನ್ಮೇ ಬ್ರೂಹಿ ಪಿತಾಮಹ।।

ದುರ್ಯೋಧನನು ಹೇಳಿದನು: “ಗಾಂಗೇಯ! ಪಿತಾಮಹ! ಯೋಧಶ್ರೇಷ್ಠ! ಮೊದಲು ಕನ್ಯೆಯಾಗಿದ್ದ ಶಿಖಂಡಿಯು ನಂತರ ಹೇಗೆ ಪುರುಷನಾದನೆನ್ನುವುದನ್ನು ನನಗೆ ಹೇಳು.”

05189002 ಭೀಷ್ಮ ಉವಾಚ।
05189002a ಭಾರ್ಯಾ ತು ತಸ್ಯ ರಾಜೇಂದ್ರ ದ್ರುಪದಸ್ಯ ಮಹೀಪತೇಃ।
05189002c ಮಹಿಷೀ ದಯಿತಾ ಹ್ಯಾಸೀದಪುತ್ರಾ ಚ ವಿಶಾಂ ಪತೇ।।

ಭೀಷ್ಮನು ಹೇಳಿದನು: “ರಾಜೇಂದ್ರ! ವಿಶಾಂಪತೇ! ಮಹೀಪತಿ ದ್ರುಪದನ ಪ್ರಿಯ ಮಹಿಷಿಯು ಅಪುತ್ರವತಿಯಾಗಿದ್ದಳು.

05189003a ಏತಸ್ಮಿನ್ನೇವ ಕಾಲೇ ತು ದ್ರುಪದೋ ವೈ ಮಹೀಪತಿಃ।
05189003c ಅಪತ್ಯಾರ್ಥಂ ಮಹಾರಾಜ ತೋಷಯಾಮಾಸ ಶಂಕರಂ।।

ಮಹಾರಾಜ! ಇದೇ ಸಮಯದಲ್ಲಿ ಮಹೀಪತಿ ದ್ರುಪದನು ಮಕ್ಕಳಿಗೋಸ್ಕರ ಶಂಕರನನ್ನು ತೃಪ್ತಿಪಡಿಸಿದನು.

05189004a ಅಸ್ಮದ್ವಧಾರ್ಥಂ ನಿಶ್ಚಿತ್ಯ ತಪೋ ಘೋರಂ ಸಮಾಸ್ಥಿತಃ।
05189004c ಲೇಭೇ ಕನ್ಯಾಂ ಮಹಾದೇವಾತ್ಪುತ್ರೋ ಮೇ ಸ್ಯಾದಿತಿ ಬ್ರುವನ್।।

ನನ್ನ ವಧೆಗೋಸ್ಕರ1 ನಿಶ್ಚಯಿಸಿ ಘೋರ ತಪಸ್ಸಿನಲ್ಲಿ ನಿರತನಾದನು. “ನನಗೆ ಪುತ್ರನಾಗಲಿ!” ಎಂದು ಕೇಳಿಕೊಂಡು ಅವನು ಮಹಾದೇವನಿಂದ ಕನ್ಯೆಯನ್ನು ಪಡೆದನು.

05189005a ಭಗವನ್ಪುತ್ರಮಿಚ್ಚಾಮಿ ಭೀಷ್ಮಂ ಪ್ರತಿಚಿಕೀರ್ಷಯಾ।
05189005c ಇತ್ಯುಕ್ತೋ ದೇವದೇವೇನ ಸ್ತ್ರೀಪುಮಾಂಸ್ತೇ ಭವಿಷ್ಯತಿ।।

“ಭಗವನ್! ಭೀಷ್ಮನಿಗೆ ಪ್ರತೀಕಾರವನ್ನುಂಟುಮಾಡುವ ಮಗನನ್ನು ಇಚ್ಛಿಸುತ್ತೇನೆ.” ಎಂದು ಕೇಳಿಕೊಳ್ಳಲು ದೇವದೇವನು “ನಿನಗೆ ಹೆಣ್ಣು ಮತ್ತು ಗಂಡಾಗಿರುವುದು ಆಗುತ್ತದೆ.

05189006a ನಿವರ್ತಸ್ವ ಮಹೀಪಾಲ ನೈತಜ್ಜಾತ್ವನ್ಯಥಾ ಭವೇತ್।
05189006c ಸ ತು ಗತ್ವಾ ಚ ನಗರಂ ಭಾರ್ಯಾಮಿದಮುವಾಚ ಹ।।

ಮಹೀಪಾಲ! ಹಿಂದಿರುಗು! ಇದಕ್ಕಿಂತ ಬೇರೆಯಾದುದು ಆಗುವುದಿಲ್ಲ.” ಅವನು ನಗರಕ್ಕೆ ಹೋಗಿ ಇದನ್ನು ಪತ್ನಿಗೆ ಹೇಳಿದನು:

05189007a ಕೃತೋ ಯತ್ನೋ ಮಯಾ ದೇವಿ ಪುತ್ರಾರ್ಥೇ ತಪಸಾ ಮಹಾನ್।
05189007c ಕನ್ಯಾ ಭೂತ್ವಾ ಪುಮಾನ್ಭಾವೀ ಇತಿ ಚೋಕ್ತೋಽಸ್ಮಿ ಶಂಭುನಾ।।

“ದೇವೀ! ಪುತ್ರನಿಗಾಗಿ ಮಹಾ ತಪಸ್ಸನ್ನಾಚರಿಸಿ ಪ್ರಯತ್ನಿಸಿದೆ. ಕನ್ಯೆಯಾಗಿ ಮುಂದೆ ಪುರುಷನಾಗುತ್ತಾನೆಂದು ಶಂಭುವು ಹೇಳಿದ್ದಾನೆ.

05189008a ಪುನಃ ಪುನರ್ಯಾಚ್ಯಮಾನೋ ದಿಷ್ಟಮಿತ್ಯಬ್ರವೀಚ್ಚಿವಃ।
05189008c ನ ತದನ್ಯದ್ಧಿ ಭವಿತಾ ಭವಿತವ್ಯಂ ಹಿ ತತ್ತಥಾ।।

ಪುನಃ ಪುನಃ ಬೇಡಿಕೊಳ್ಳಲು ದೇವ ಶಿವನು ಆಗಲಿರುವುದಕ್ಕಿಂತ ಬೇರೆಯಾಗಿ ಆಗುವುದಿಲ್ಲ ಎಂದನು.”

05189009a ತತಃ ಸಾ ನಿಯತಾ ಭೂತ್ವಾ ಋತುಕಾಲೇ ಮನಸ್ವಿನೀ।
05189009c ಪತ್ನೀ ದ್ರುಪದರಾಜಸ್ಯ ದ್ರುಪದಂ ಸಂವಿವೇಶ ಹ।।

ಆಗ ಆ ಮನಸ್ವಿನೀ, ದ್ರುಪದರಾಜನ ಪತ್ನಿಯು ಋತುಕಾಲದಲ್ಲಿ ನಿಯತಳಾಗಿರಲು ದ್ರುಪದನು ಅವಳನ್ನು ಸೇರಿದನು.

05189010a ಲೇಭೇ ಗರ್ಭಂ ಯಥಾಕಾಲಂ ವಿಧಿದೃಷ್ಟೇನ ಹೇತುನಾ।
05189010c ಪಾರ್ಷತಾತ್ಸಾ ಮಹೀಪಾಲ ಯಥಾ ಮಾಂ ನಾರದೋಽಬ್ರವೀತ್।।

ಆಗ ಯಥಾಕಾಲದಲ್ಲಿ ವಿಧಿಯು ಕಂಡ ಕಾರಣದಿಂದ ಪಾರ್ಷತನು ಅವಳಿಗೆ ಗರ್ಭವನ್ನು ನೀಡಿದನೆಂದು ನನಗೆ ನಾರದನು2 ಹೇಳಿದನು.

05189011a ತತೋ ದಧಾರ ತಂ ಗರ್ಭಂ ದೇವೀ ರಾಜೀವಲೋಚನಾ।
05189011c ತಾಂ ಸ ರಾಜಾ ಪ್ರಿಯಾಂ ಭಾರ್ಯಾಂ ದ್ರುಪದಃ ಕುರುನಂದನ।
05189011e ಪುತ್ರಸ್ನೇಹಾನ್ಮಹಾಬಾಹುಃ ಸುಖಂ ಪರ್ಯಚರತ್ತದಾ।।

ಕುರುನಂದನ! ರಾಜಾ! ದ್ರುಪದನ ಪ್ರಿಯ ಭಾರ್ಯೆ ಆ ದೇವಿ ರಾಜೀವಲೋಚನೆಯು ಗರ್ಭವನ್ನು ಹೊತ್ತಳು. ಪುತ್ರಸೇಹದಿಂದ ಆ ಮಹಾಬಾಹುವು ಅವಳ ಸುಖಕ್ಕಾಗಿ ಉಪಚಾರ ಮಾಡಿದನು.

05189012a ಅಪುತ್ರಸ್ಯ ತತೋ ರಾಜ್ಞೋ ದ್ರುಪದಸ್ಯ ಮಹೀಪತೇಃ।
05189012c ಕನ್ಯಾಂ ಪ್ರವರರೂಪಾಂ ತಾಂ ಪ್ರಾಜಾಯತ ನರಾಧಿಪ।।

ನರಾಧಿಪ! ಅಪುತ್ರನಾಗಿದ್ದ ರಾಜ ದೃಪದ ಮಹೀಪತಿಗೆ ಅವಳು ಸುಂದರ ಕನ್ಯೆಗೆ ಜನ್ಮವಿತ್ತಳು.

05189013a ಅಪುತ್ರಸ್ಯ ತು ರಾಜ್ಞಾಃ ಸಾ ದ್ರುಪದಸ್ಯ ಯಶಸ್ವಿನೀ।
05189013c ಖ್ಯಾಪಯಾಮಾಸ ರಾಜೇಂದ್ರ ಪುತ್ರೋ ಜಾತೋ ಮಮೇತಿ ವೈ।।

ರಾಜೇಂದ್ರ! ಆದರೆ ದ್ರುಪದನ ಯಶಸ್ವಿನೀ ಪತ್ನಿಯು ಅಪುತ್ರನಾಗಿದ್ದ ಆ ರಾಜನಿಗೆ “ನನಗೆ ಪುತ್ರನು ಹುಟ್ಟಿದ್ದಾನೆ” ಎಂದು ಹೇಳಿದಳು.

05189014a ತತಃ ಸ ರಾಜಾ ದ್ರುಪದಃ ಪ್ರಚ್ಚನ್ನಾಯಾ ನರಾಧಿಪ।
05189014c ಪುತ್ರವತ್ಪುತ್ರಕಾರ್ಯಾಣಿ ಸರ್ವಾಣಿ ಸಮಕಾರಯತ್।।

ನರಾಧಿಪ! ಆಗ ರಾಜ ದ್ರುಪದನು ಆ ಮುಚ್ಚಿಟ್ಟ ಮಗಳಿಗೆ ಪುತ್ರನಂತೆ ಎಲ್ಲ ಪುತ್ರಕರ್ಮಗಳನ್ನೂ ನೆರವೇರಿಸಿದನು.

05189015a ರಕ್ಷಣಂ ಚೈವ ಮಂತ್ರಸ್ಯ ಮಹಿಷೀ ದ್ರುಪದಸ್ಯ ಸಾ।
05189015c ಚಕಾರ ಸರ್ವಯತ್ನೇನ ಬ್ರುವಾಣಾ ಪುತ್ರ ಇತ್ಯುತ।
05189015e ನ ಹಿ ತಾಂ ವೇದ ನಗರೇ ಕಶ್ಚಿದನ್ಯತ್ರ ಪಾರ್ಷತಾತ್।।

ಇವನು ಮಗನೆಂದು ಹೇಳುತ್ತಾ ದ್ರುಪದನ ಮಹಿಷಿಯು ಸರ್ವಯತ್ನದಿಂದ ಆ ಸುಳ್ಳನ್ನು ರಕ್ಷಿಸಿದಳು. ಪಾರ್ಷತಳನ್ನು ಬಿಟ್ಟು ಬೇರೆ ಯಾರಿಗೂ ಇಡೀ ನಗರದಲ್ಲಿ ಅದು ಗೊತ್ತಿರಲಿಲ್ಲ.

05189016a ಶ್ರದ್ದಧಾನೋ ಹಿ ತದ್ವಾಕ್ಯಂ ದೇವಸ್ಯಾದ್ಭುತತೇಜಸಃ।
05189016c ಚಾದಯಾಮಾಸ ತಾಂ ಕನ್ಯಾಂ ಪುಮಾನಿತಿ ಚ ಸೋಽಬ್ರವೀತ್।।

ಅವಳ ಮಾತಿನಲ್ಲಿ ಶ್ರದ್ಧೆಯನ್ನಿಟ್ಟ ಆ ದೇವ ಅದ್ಭುತತೇಜಸನು ಆ ಕನ್ಯೆಯನ್ನು ಗಂಡೆಂದೇ ಹೇಳಿಕೊಂಡು ಬಂದನು.

05189017a ಜಾತಕರ್ಮಾಣಿ ಸರ್ವಾಣಿ ಕಾರಯಾಮಾಸ ಪಾರ್ಥಿವಃ।
05189017c ಪುಂವದ್ವಿಧಾನಯುಕ್ತಾನಿ ಶಿಖಂಡೀತಿ ಚ ತಾಂ ವಿದುಃ।।

ಪಾರ್ಥಿವನು ಗಂಡು ಮಗುವಿಗೆ ಮಾಡಬೇಕಾದ ಜಾತಕರ್ಮಗಳೆಲ್ಲವನ್ನೂ ಅವಳಿಗೆ ಮಾಡಿಸಿ ಶಿಖಂಡೀ ಎಂಬ ಹೆಸರನ್ನಿತ್ತನು.

05189018a ಅಹಮೇಕಸ್ತು ಚಾರೇಣ ವಚನಾನ್ನಾರದಸ್ಯ ಚ।
05189018c ಜ್ಞಾತವಾನ್ದೇವವಾಕ್ಯೇನ ಅಂಬಾಯಾಸ್ತಪಸಾ ತಥಾ।।

ನಾನೊಬ್ಬನೇ ಚಾರರ ಮತ್ತು ನಾರದನ ಮಾತುಗಳಿಂದ, ದೇವವಾಕ್ಯದಿಂದ ಮತ್ತು ಅಂಬೆಯ ತಪಸ್ಸಿನಿಂದ ಸತ್ಯವನ್ನು ತಿಳಿದಿದ್ದೆನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಶಿಖಂಡ್ಯುತ್ಪತ್ತೌ ಏಕೋನನವತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಶಿಖಂಡ್ಯುತ್ಪತ್ತಿಯಲ್ಲಿ ನೂರಾಎಂಭತ್ತೊಂಭತ್ತನೆಯ ಅಧ್ಯಾಯವು.


  1. ದ್ರುಪದನು ಏಕೆ ಭೀಷ್ಮನ ವಧೆಯನ್ನು ಬಯಸಿದ್ದ ಎನ್ನುವುದು ಅರ್ಥವಾಗುತ್ತಿಲ್ಲ. ↩︎

  2. ಭೀಷ್ಮನ ಕಥೆಯಲ್ಲಿ ನಾರದನ ಪಾತ್ರವು ದೊಡ್ಡದಾಗಿದೆ. ↩︎