188 ಅಂಬಾಹುತಾಶನಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಅಂಬೋಽಪಾಖ್ಯಾನ ಪರ್ವ

ಅಧ್ಯಾಯ 188

ಸಾರ

ಶಿವನು ಅಂಬೆಗೆ ಭೀಷ್ಮನನ್ನು ವಧಿಸುತ್ತೀಯೆ ಎಂದು ಹೇಳಿ “ಪುರುಷತ್ವವನ್ನೂ ಪಡೆಯುತ್ತೀಯೆ. ಅನ್ಯ ದೇಹಕ್ಕೆ ಹೋದಾಗಲೂ ಕೂಡ ಇವೆಲ್ಲವನ್ನೂ ನೆನಪಿಸಿಕೊಳ್ಳುತ್ತೀಯೆ” ಎಂದು ವರವನ್ನಿತ್ತುದುದು (1-15). ಅನಂತರ ಅಂಬೆಯು ಅಗ್ನಿಪ್ರವೇಶ ಮಾಡಿದುದು (16-18).

05188001 ಭೀಷ್ಮ ಉವಾಚ।
05188001a ತತಸ್ತೇ ತಾಪಸಾಃ ಸರ್ವೇ ತಪಸೇ ಧೃತನಿಶ್ಚಯಾಂ।
05188001c ದೃಷ್ಟ್ವಾ ನ್ಯವರ್ತಯಂಸ್ತಾತ ಕಿಂ ಕಾರ್ಯಮಿತಿ ಚಾಬ್ರುವನ್।।

ಭೀಷ್ಮನು ಹೇಳಿದನು: “ಮಗೂ! ಆಗ ಅಲ್ಲಿದ್ದ ತಾಪಸರೆಲ್ಲ ತಪಸ್ಸಿನಲ್ಲಿ ಧೃತನಿಶ್ಚಯಳಾದ ಅವಳು ಹಿಂದಿರುಗದೇ ಇದ್ದುದನ್ನು ನೋಡಿ “ಏನು ಕಾರ್ಯ?” ಎಂದು ಅವಳನ್ನು ಪ್ರಶ್ನಿಸಿದರು.

05188002a ತಾನುವಾಚ ತತಃ ಕನ್ಯಾ ತಪೋವೃದ್ಧಾನೃಷೀಂಸ್ತದಾ।
05188002c ನಿರಾಕೃತಾಸ್ಮಿ ಭೀಷ್ಮೇಣ ಭ್ರಂಶಿತಾ ಪತಿಧರ್ಮತಃ।।

ಆಗ ಆ ಕನ್ಯೆಯು ತಪೋವೃದ್ಧ ಋಷಿಗಳಿಗೆ ಹೇಳಿದಳು: “ಭೀಷ್ಮನಿಂದ ನಿರಾಕೃತಳಾಗಿ ಪತಿಧರ್ಮದಿಂದ ವಂಚಿತಳಾಗಿದ್ದೇನೆ.

05188003a ವಧಾರ್ಥಂ ತಸ್ಯ ದೀಕ್ಷಾ ಮೇ ನ ಲೋಕಾರ್ಥಂ ತಪೋಧನಾಃ।
05188003c ನಿಹತ್ಯ ಭೀಷ್ಮಂ ಗಚ್ಚೇಯಂ ಶಾಂತಿಮಿತ್ಯೇವ ನಿಶ್ಚಯಃ।।

ತಪೋಧನರೇ! ಅವನ ವಧೆಗೋಸ್ಕರ ದೀಕ್ಷಿತಳಾಗಿದ್ದೇನೆಯೇ ಹೊರತು ಉತ್ತಮ ಲೋಕಗಳಿಗಲ್ಲ. ಭೀಷ್ಮನನ್ನು ಕೊಂದು ಶಾಂತಿಯು ದೊರೆಯುತ್ತದೆ ಎಂದು ನಿಶ್ಚಯಿಸಿದ್ದೇನೆ.

05188004a ಯತ್ಕೃತೇ ದುಃಖವಸತಿಮಿಮಾಂ ಪ್ರಾಪ್ತಾಸ್ಮಿ ಶಾಶ್ವತೀಂ।
05188004c ಪತಿಲೋಕಾದ್ವಿಹೀನಾ ಚ ನೈವ ಸ್ತ್ರೀ ನ ಪುಮಾನಿಹ।।
05188005a ನಾಹತ್ವಾ ಯುಧಿ ಗಾಂಗೇಯಂ ನಿವರ್ತೇಯಂ ತಪೋಧನಾಃ।
05188005c ಏಷ ಮೇ ಹೃದಿ ಸಂಕಲ್ಪೋ ಯದರ್ಥಮಿದಮುದ್ಯತಂ।।

ಯಾರಿಂದಾಗಿ ನಾನು ಈ ನಿರಂತರ ದುಃಖವನ್ನು ಅನುಭವಿಸುತ್ತಿರುವೆನೋ, ಯಾರಿಂದಾಗಿ ಶಾಶ್ವತವಾಗಿ ಪತಿಲೋಕವನ್ನು ಕಳೆದುಕೊಂಡಿದ್ದೇನೋ, ಯಾರಿಂದಾಗಿ ನಾನು ಹೆಣ್ಣೂ ಅಲ್ಲದ ಪುರುಷನೂ ಅಲ್ಲದ ಜೀವನವನ್ನು ನಡೆಸುತ್ತಿದ್ದೇನೋ ಆ ಗಾಂಗೇಯನನ್ನು ಯುದ್ಧದಲ್ಲಿ ಸಂಹರಿಸಿ ನಾನು ಹಿಂದೆ ಸರಿಯುತ್ತೇನೆ. ತಪೋಧನರೇ! ಇದು ನನ್ನ ಹೃದಯದ ಸಂಕಲ್ಪ. ಇದರ ಹೊರತಾದ ಉದ್ದೇಶವಿಲ್ಲ.

05188006a ಸ್ತ್ರೀಭಾವೇ ಪರಿನಿರ್ವಿಣ್ಣಾ ಪುಂಸ್ತ್ವಾರ್ಥೇ ಕೃತನಿಶ್ಚಯಾ।
05188006c ಭೀಷ್ಮೇ ಪ್ರತಿಚಿಕೀರ್ಷಾಮಿ ನಾಸ್ಮಿ ವಾರ್ಯೇತಿ ವೈ ಪುನಃ।।

ಸ್ತ್ರೀಯಾಗಿದ್ದುಕೊಂಡು ನನಗೆ ಮಾಡಬೇಕಾದುದು ಏನೂ ಇಲ್ಲ. ಪುರುಷನಾಗಲು ನಿಶ್ಚಯಿಸಿದ್ದೇನೆ. ಇದರಿಂದ ಭೀಷ್ಮನಿಗೆ ಪ್ರತೀಕಾರ ಮಾಡಬಲ್ಲೆ. ನನ್ನನ್ನು ಪುನಃ ತಡೆಯಬೇಡಿ.”

05188007a ತಾಂ ದೇವೋ ದರ್ಶಯಾಮಾಸ ಶೂಲಪಾಣಿರುಮಾಪತಿಃ।
05188007c ಮಧ್ಯೇ ತೇಷಾಂ ಮಹರ್ಷೀಣಾಂ ಸ್ವೇನ ರೂಪೇಣ ಭಾಮಿನೀಂ।।

ಆಗ ಆ ಮಹರ್ಷಿಗಳ ಮಧ್ಯದಲ್ಲಿಯೇ ತನ್ನದೇ ರೂಪದಲ್ಲಿ ಶೂಲಪಾಣಿ ದೇವ ಉಮಾಪತಿಯು ಆ ಭಾಮಿನಿಗೆ ಕಾಣಿಸಿಕೊಂಡನು.

05188008a ಚಂದ್ಯಮಾನಾ ವರೇಣಾಥ ಸಾ ವವ್ರೇ ಮತ್ಪರಾಜಯಂ।
05188008c ವಧಿಷ್ಯಸೀತಿ ತಾಂ ದೇವಃ ಪ್ರತ್ಯುವಾಚ ಮನಸ್ವಿನೀಂ।।

ವರವೇನನ್ನು ಕೊಡಲೆಂದು ಕೇಳಲು ಅವಳು ನನ್ನ ಪರಾಜಯವನ್ನು ಕೇಳಿಕೊಂಡಳು. “ವಧಿಸುತ್ತೀಯೆ!” ಎಂದು ದೇವನು ಆ ಮನಸ್ವಿನಿಗೆ ಉತ್ತರಿಸಿದನು.

05188009a ತತಃ ಸಾ ಪುನರೇವಾಥ ಕನ್ಯಾ ರುದ್ರಮುವಾಚ ಹ।
05188009c ಉಪಪದ್ಯೇತ್ಕಥಂ ದೇವ ಸ್ತ್ರಿಯೋ ಮಮ ಜಯೋ ಯುಧಿ।
05188009e ಸ್ತ್ರೀಭಾವೇನ ಚ ಮೇ ಗಾಢಂ ಮನಃ ಶಾಂತಮುಮಾಪತೇ।।

ಆಗ ಪುನಃ ಆ ಕನ್ಯೆಯು ರುದ್ರನನ್ನು ಕೇಳಿದಳು: “ದೇವ! ಸ್ತ್ರೀಯಾಗಿರುವ ನಾನು ಯುದ್ಧದಲ್ಲಿ ಜಯವನ್ನು ಪಡೆಯಲು ಹೇಗೆ ಸಾಧ್ಯ? ಉಮಾಪತೇ! ಸ್ತ್ರೀಭಾವದಿಂದ ನನ್ನ ಮನಸ್ಸಿನಲ್ಲಿ ಅತ್ಯಂತ ಶಾಂತಿಯಿದೆ!

05188010a ಪ್ರತಿಶ್ರುತಶ್ಚ ಭೂತೇಶ ತ್ವಯಾ ಭೀಷ್ಮಪರಾಜಯಃ।
05188010c ಯಥಾ ಸ ಸತ್ಯೋ ಭವತಿ ತಥಾ ಕುರು ವೃಷಧ್ವಜ।
05188010e ಯಥಾ ಹನ್ಯಾಂ ಸಮಾಗಮ್ಯ ಭೀಷ್ಮಂ ಶಾಂತನವಂ ಯುಧಿ।।

ಭೂತೇಶ! ನೀನು ಭೀಷ್ಮಪರಾಜಯವನ್ನು ಕೇಳಿಸಿದ್ದೀಯೆ. ವೃಷಧ್ವಜ! ಅದು ಹೇಗೆ ಸತ್ಯವಾಗಿಸಬಹುದೋ, ಹೇಗೆ ನಾನು ಭೀಷ್ಮ ಶಾಂತನವನನ್ನು ಯುದ್ಧದಲ್ಲಿ ಎದುರಿಸಿ ಕೊಲ್ಲಬಲ್ಲೆನೋ, ಹಾಗೆ ಮಾಡು.”

05188011a ತಾಮುವಾಚ ಮಹಾದೇವಃ ಕನ್ಯಾಂ ಕಿಲ ವೃಷಧ್ವಜಃ।
05188011c ನ ಮೇ ವಾಗನೃತಂ ಭದ್ರೇ ಪ್ರಾಹ ಸತ್ಯಂ ಭವಿಷ್ಯತಿ।।

ಮಹಾದೇವ ವೃಷಧ್ವಜನು ಆ ಕನ್ಯೆಗೆ ಹೇಳಿದನು: “ಭದ್ರೇ! ನನ್ನ ಮಾತು ಸುಳ್ಳಾಗುವುದಿಲ್ಲ. ಹೇಳಿದುದು ಸತ್ಯವಾಗುತ್ತದೆ.

05188012a ವಧಿಷ್ಯಸಿ ರಣೇ ಭೀಷ್ಮಂ ಪುರುಷತ್ವಂ ಚ ಲಪ್ಸ್ಯಸೇ।
05188012c ಸ್ಮರಿಷ್ಯಸಿ ಚ ತತ್ಸರ್ವಂ ದೇಹಮನ್ಯಂ ಗತಾ ಸತೀ।।

ಸತೀ! ರಣದಲ್ಲಿ ಭೀಷ್ಮನನ್ನು ವಧಿಸುತ್ತೀಯೆ. ಮತ್ತು ಪುರುಷತ್ವವನ್ನೂ ಪಡೆಯುತ್ತೀಯೆ. ಅನ್ಯ ದೇಹಕ್ಕೆ ಹೋದಾಗಲೂ ಕೂಡ ಇವೆಲ್ಲವನ್ನೂ ನೆನಪಿಸಿಕೊಳ್ಳುತ್ತೀಯೆ.

05188013a ದ್ರುಪದಸ್ಯ ಕುಲೇ ಜಾತಾ ಭವಿಷ್ಯಸಿ ಮಹಾರಥಃ।
05188013c ಶೀಘ್ರಾಸ್ತ್ರಶ್ಚಿತ್ರಯೋಧೀ ಚ ಭವಿಷ್ಯಸಿ ಸುಸಮ್ಮತಃ।।

ಮಹಾರಥಿ ದ್ರುಪದನ ಕುಲದಲ್ಲಿ ಹುಟ್ಟಿ ಸುಸಮ್ಮತನಾದ ಶೀಘ್ರಾಸ್ತ್ರನೂ ಚಿತ್ರಯೋಧಿಯೂ ಆಗುತ್ತೀಯೆ.

05188014a ಯಥೋಕ್ತಮೇವ ಕಲ್ಯಾಣಿ ಸರ್ವಮೇತದ್ಭವಿಷ್ಯತಿ।
05188014c ಭವಿಷ್ಯಸಿ ಪುಮಾನ್ಪಶ್ಚಾತ್ಕಸ್ಮಾಚ್ಚಿತ್ಕಾಲಪರ್ಯಯಾತ್।।

ಕಲ್ಯಾಣೀ! ಏನು ಹೇಳಿದೆನೋ ಅವೆಲ್ಲವೂ ನಡೆಯುತ್ತವೆ. ಕಾಲಬಂದಾಗ ನಂತರ ಹೇಗೋ ನೀನು ಪುರುಷನಾಗುತ್ತೀಯೆ.”

05188015a ಏವಮುಕ್ತ್ವಾ ಮಹಾತೇಜಾಃ ಕಪರ್ದೀ ವೃಷಭಧ್ವಜಃ।
05188015c ಪಶ್ಯತಾಮೇವ ವಿಪ್ರಾಣಾಂ ತತ್ರೈವಾಂತರಧೀಯತ।।

ಹೀಗೆ ಹೇಳಿ ಆ ವಿಪ್ರರು ನೋಡುತ್ತಿದ್ದಂತೆಯೇ ಮಹಾತೇಜಸ್ವಿ ಕಪರ್ದೀ ವೃಷಭಧ್ವಜನು ಅಲ್ಲಿಯೇ ಅಂತರ್ಧಾನನಾದನು.

05188016a ತತಃ ಸಾ ಪಶ್ಯತಾಂ ತೇಷಾಂ ಮಹರ್ಷೀಣಾಮನಿಂದಿತಾ।
05188016c ಸಮಾಹೃತ್ಯ ವನಾತ್ತಸ್ಮಾತ್ಕಾಷ್ಠಾನಿ ವರವರ್ಣಿನೀ।।

ಆಗ ಆ ಅನಿಂದಿತೆ ವರವರ್ಣಿನಿಯು ಆ ಮಹರ್ಷಿಗಳು ನೋಡುತ್ತಿದ್ದಂತೆಯೇ ವನದಲ್ಲಿದ್ದ ಕಟ್ಟಿಗೆಗಳನ್ನು ಒಟ್ಟುಹಾಕಿದಳು.

05188017a ಚಿತಾಂ ಕೃತ್ವಾ ಸುಮಹತೀಂ ಪ್ರದಾಯ ಚ ಹುತಾಶನಂ।
05188017c ಪ್ರದೀಪ್ತೇಽಗ್ನೌ ಮಹಾರಾಜ ರೋಷದೀಪ್ತೇನ ಚೇತಸಾ।।
05188018a ಉಕ್ತ್ವಾ ಭೀಷ್ಮವಧಾಯೇತಿ ಪ್ರವಿವೇಶ ಹುತಾಶನಂ।
05188018c ಜ್ಯೇಷ್ಠಾ ಕಾಶಿಸುತಾ ರಾಜನ್ಯಮುನಾಮಭಿತೋ ನದೀಂ।।

ಮಹಾರಾಜ! ರಾಜನ್! ಹಿರಿಯ ಕಾಶಿಸುತೆಯು ಯಮುನಾನದಿಯ ತೀರದಲ್ಲಿ ಅತಿದೊಡ್ಡ ಚಿತೆಯನ್ನು ಮಾಡಿ, ಹುತಾಶನನನ್ನು ಹಚ್ಚಿ, ಉರಿಯುತ್ತಿರುವ ಅಗ್ನಿಯಲ್ಲಿ ರೋಷದಿಂದ ಉರಿಯುವ ಚೇತನದಿಂದ “ಭೀಷ್ಮವಧಾಯ” ಎಂದು ಹೇಳಿ ಹುತಾಶನನನ್ನು ಪ್ರವೇಶಿಸಿದಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಅಂಬಾಹುತಾಶನಪ್ರವೇಶೇ ಅಷ್ಟಾಶೀತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಅಂಬಾಹುತಾಶನಪ್ರವೇಶದಲ್ಲಿ ನೂರಾಎಂಭತ್ತೆಂಟನೆಯ ಅಧ್ಯಾಯವು.