187 ಅಂಬಾತಪಸ್ಯಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಅಂಬೋಽಪಾಖ್ಯಾನ ಪರ್ವ

ಅಧ್ಯಾಯ 187

ಸಾರ

ತನ್ನಿಂದ ಭೀಷ್ಮನನ್ನು ಸೋಲಿಸಲಿಕ್ಕಾಗಲಿಲ್ಲವೆಂದು ಪರಶುರಾಮನು ಅಂಬೆಗೆ ಹೇಳಲು “ಎಲ್ಲಿ ಸ್ವಯಂ ನಾನೇ ಭೀಷ್ಮನನ್ನು ಸಮರದಲ್ಲಿ ಬೀಳಿಸಬಲ್ಲೆನೋ ಅಲ್ಲಿಗೆ ಹೋಗುತ್ತೇನೆ” ಎಂದು ಹೇಳಿ ಅಂಬೆಯು ತೀವ್ರ ತಪಸ್ಸನ್ನಾಚರಿಸಿದ್ದುದು (1-40).

05187001 ರಾಮ ಉವಾಚ।
05187001a ಪ್ರತ್ಯಕ್ಷಮೇತಲ್ಲೋಕಾನಾಂ ಸರ್ವೇಷಾಮೇವ ಭಾಮಿನಿ।
05187001c ಯಥಾ ಮಯಾ ಪರಂ ಶಕ್ತ್ಯಾ ಕೃತಂ ವೈ ಪೌರುಷಂ ಮಹತ್।।

ರಾಮನು ಹೇಳಿದನು: “ಭಾಮಿನೀ! ಈ ಲೋಕಗಳೆಲ್ಲವುಗಳ ಮುಂದೆ ನನ್ನಲ್ಲಿದ್ದ ಪರಮ ಶಕ್ತಿಯನ್ನುಪಯೋಗಿಸಿ ಮಹಾ ಪೌರುಷವನ್ನು ತೋರಿಸಿದ್ದೇನೆ.

05187002a ನ ಚೈವ ಯುಧಿ ಶಕ್ನೋಮಿ ಭೀಷ್ಮಂ ಶಸ್ತ್ರಭೃತಾಂ ವರಂ।
05187002c ವಿಶೇಷಯಿತುಮತ್ಯರ್ಥಮುತ್ತಮಾಸ್ತ್ರಾಣಿ ದರ್ಶಯನ್।।

ನನ್ನ ಉತ್ತಮ ಅಸ್ತ್ರಗಳನ್ನು ತೋರಿಸಿಯೂ ನಾನು ಶಸ್ತ್ರಭೃತರಲ್ಲಿ ಶ್ರೇಷ್ಠನಾದ ಭೀಷ್ಮನನ್ನು ಯುದ್ಧದಲ್ಲಿ ಮೀರಿಸಲು ಶಕ್ಯನಾಗಲಿಲ್ಲ.

05187003a ಏಷಾ ಮೇ ಪರಮಾ ಶಕ್ತಿರೇತನ್ಮೇ ಪರಮಂ ಬಲಂ।
05187003c ಯಥೇಷ್ಟಂ ಗಮ್ಯತಾಂ ಭದ್ರೇ ಕಿಮನ್ಯದ್ವಾ ಕರೋಮಿ ತೇ।।

ಇದು ನನ್ನ ಶಕ್ತಿಯ ಮಿತಿ. ಇದು ನನ್ನ ಬಲದ ಮಿತಿ. ಭದ್ರೇ! ನಿನಗಿಷ್ಟವಾದಲ್ಲಿಗೆ ಹೋಗುವವಳಾಗು. ಅಥವಾ ನಿನಗೆ ಬೇರೆ ಏನಾದರೂ ಮಾಡಲೇ?

05187004a ಭೀಷ್ಮಮೇವ ಪ್ರಪದ್ಯಸ್ವ ನ ತೇಽನ್ಯಾ ವಿದ್ಯತೇ ಗತಿಃ।
05187004c ನಿರ್ಜಿತೋ ಹ್ಯಸ್ಮಿ ಭೀಷ್ಮೇಣ ಮಹಾಸ್ತ್ರಾಣಿ ಪ್ರಮುಂಚತಾ।।

ಭೀಷ್ಮನನ್ನೇ ಶರಣು ಹೋಗು. ನಿನಗೆ ಬೇರೆ ಗತಿಯೇ ಇಲ್ಲವೆನಿಸುತ್ತದೆ. ಏಕೆಂದರೆ ಮಹಾಸ್ತ್ರಗಳನ್ನು ಪ್ರಯೋಗಿಸಿ ಭೀಷ್ಮನು ನನ್ನನ್ನು ಗೆದ್ದಿದ್ದಾನೆ.””

05187005 ಭೀಷ್ಮ ಉವಾಚ।
05187005a ಏವಮುಕ್ತ್ವಾ ತತೋ ರಾಮೋ ವಿನಿಃಶ್ವಸ್ಯ ಮಹಾಮನಾಃ।
05187005c ತೂಷ್ಣೀಮಾಸೀತ್ತದಾ ಕನ್ಯಾ ಪ್ರೋವಾಚ ಭೃಗುನಂದನಂ।।

ಭೀಷ್ಮನು ಹೇಳಿದನು: “ಹೀಗೆ ಹೇಳಿ ಮಹಾಮನಸ್ವಿ ರಾಮನು ನಿಟ್ಟುಸಿರು ಬಿಡುತ್ತಾ ಸುಮ್ಮನಾದನು. ಆಗ ಕನ್ಯೆಯು ಭೃಗುನಂದನನಿಗೆ ಹೇಳಿದಳು:

05187006a ಭಗವನ್ನೇವಮೇವೈತದ್ಯಥಾಹ ಭಗವಾಂಸ್ತಥಾ।
05187006c ಅಜೇಯೋ ಯುಧಿ ಭೀಷ್ಮೋಽಯಮಪಿ ದೇವೈರುದಾರಧೀಃ।।

“ಭಗವನ್! ಇನ್ನು ನೀನು ಹೇಳಿದಂತೆಯೇ! ಈ ಉದಾರಧೀ ಭೀಷ್ಮನು ಯುದ್ಧದಲ್ಲಿ ದೇವತೆಗಳಿಗೂ ಅಜೇಯನು.

05187007a ಯಥಾಶಕ್ತಿ ಯಥೋತ್ಸಾಹಂ ಮಮ ಕಾರ್ಯಂ ಕೃತಂ ತ್ವಯಾ।
05187007c ಅನಿಧಾಯ ರಣೇ ವೀರ್ಯಮಸ್ತ್ರಾಣಿ ವಿವಿಧಾನಿ ಚ।।

ಯಥಾಶಕ್ತಿಯಾಗಿ ಯಥೋತ್ಸಾಹವಾಗಿ ನೀನು, ರಣದಲ್ಲಿ ನಿನ್ನ ವಿವಿಧ ವೀರ್ಯ ಅಸ್ತ್ರಗಳನ್ನು ಕೆಳಗಿಡದೆಯೇ ನನ್ನ ಕೆಲಸವನ್ನು ಮಾಡಿದ್ದೀಯೆ.

05187008a ನ ಚೈಷ ಶಕ್ಯತೇ ಯುದ್ಧೇ ವಿಶೇಷಯಿತುಮಂತತಃ।
05187008c ನ ಚಾಹಮೇನಂ ಯಾಸ್ಯಾಮಿ ಪುನರ್ಭೀಷ್ಮಂ ಕಥಂ ಚನ।।

ಕೊನೆಯಲ್ಲಿಯೂ ಯುದ್ಧದಲ್ಲಿ ಅವನನ್ನು ಮೀರಿಸಲು ಸಾಧ್ಯವಾಗಲಿಲ್ಲ. ಆದರೆ ನಾನು ಪುನಃ ಎಂದೂ ಭೀಷ್ಮನಲ್ಲಿಗೆ ಹೋಗುವುದಿಲ್ಲ.

05187009a ಗಮಿಷ್ಯಾಮಿ ತು ತತ್ರಾಹಂ ಯತ್ರ ಭೀಷ್ಮಂ ತಪೋಧನ।
05187009c ಸಮರೇ ಪಾತಯಿಷ್ಯಾಮಿ ಸ್ವಯಮೇವ ಭೃಗೂದ್ವಹ।।

ತಪೋಧನ! ಭೃಗೂದ್ವಹ! ಎಲ್ಲಿ ಸ್ವಯಂ ನಾನೇ ಭೀಷ್ಮನನ್ನು ಸಮರದಲ್ಲಿ ಬೀಳಿಸಬಲ್ಲೆನೋ ಅಲ್ಲಿಗೆ ಹೋಗುತ್ತೇನೆ.”

05187010a ಏವಮುಕ್ತ್ವಾ ಯಯೌ ಕನ್ಯಾ ರೋಷವ್ಯಾಕುಲಲೋಚನಾ।
05187010c ತಪಸೇ ಧೃತಸಂಕಲ್ಪಾ ಮಮ ಚಿಂತಯತೀ ವಧಂ।।

ಹೀಗೆ ಹೇಳಿ ಆ ರೋಷವ್ಯಾಕುಲಲೋಚನೆ ಕನ್ಯೆಯು ನನ್ನ ವಧೆಯನ್ನೇ ಚಿಂತಿಸುತ್ತಾ ತಪಸ್ಸಿನ ಧೃತ ಸಂಕಲ್ಪವನ್ನು ಮಾಡಿ ಹೊರಟು ಹೋದಳು.

05187011a ತತೋ ಮಹೇಂದ್ರಂ ಸಹ ತೈರ್ಮುನಿಭಿರ್ಭೃಗುಸತ್ತಮಃ।
05187011c ಯಥಾಗತಂ ಯಯೌ ರಾಮೋ ಮಾಮುಪಾಮಂತ್ರ್ಯ ಭಾರತ।।

ಭಾರತ! ಆಗ ಆ ಮುನಿ ಭೃಗುಸತ್ತಮ ರಾಮನು ನನ್ನನ್ನು ಬೀಳ್ಕೊಂಡು ಎಲ್ಲಿಂದ ಬಂದಿದ್ದನೋ ಆ ಮಹೇಂದ್ರ ಪರ್ವತಕ್ಕೆ ಮುನಿಗಳ ಸಹಿತ ಹೊರಟು ಹೋದನು.

05187012a ತತೋಽಹಂ ರಥಮಾರುಹ್ಯ ಸ್ತೂಯಮಾನೋ ದ್ವಿಜಾತಿಭಿಃ।
05187012c ಪ್ರವಿಶ್ಯ ನಗರಂ ಮಾತ್ರೇ ಸತ್ಯವತ್ಯೈ ನ್ಯವೇದಯಂ।
05187012e ಯಥಾವೃತ್ತಂ ಮಹಾರಾಜ ಸಾ ಚ ಮಾಂ ಪ್ರತ್ಯನಂದತ।।

ಆಗ ನಾನು ರಥವನ್ನೇರಿ, ದ್ವಿಜಾತಿಯವರು ಸ್ತುತಿಸುತ್ತಿರಲು ನಗರವನ್ನು ಪ್ರವೇಶಿಸಿ ತಾಯಿ ಸತ್ಯವತಿಗೆ ನಡೆದುದೆಲ್ಲವನ್ನೂ ನಿವೇದಿಸಿದೆನು. ಮಹಾರಾಜ! ಅವಳೂ ಕೂಡ ನನ್ನನ್ನು ಅಭಿನಂದಿಸಿದಳು.

05187013a ಪುರುಷಾಂಶ್ಚಾದಿಶಂ ಪ್ರಾಜ್ಞಾನ್ಕನ್ಯಾವೃತ್ತಾಂತಕರ್ಮಣಿ।
05187013c ದಿವಸೇ ದಿವಸೇ ಹ್ಯಸ್ಯಾ ಗತಜಲ್ಪಿತಚೇಷ್ಟಿತಂ।
05187013e ಪ್ರತ್ಯಾಹರಂಶ್ಚ ಮೇ ಯುಕ್ತಾಃ ಸ್ಥಿತಾಃ ಪ್ರಿಯಹಿತೇ ಮಮ।।

ಆ ಕನ್ಯೆಯ ಕೆಲಸಗಳ ವೃತ್ತಾಂತವನ್ನು ತಿಳಿಯಲೋಸುಗ ನಾನು ಪ್ರಾಜ್ಞ ಪುರುಷರನ್ನು ನಿಯೋಜಿಸಿದೆನು. ಅವರು ನನ್ನ ಪ್ರಿಯಹಿತಗಳಲ್ಲಿ ನಿರತರಾಗಿ ದಿವಸ ದಿವಸವೂ ಅವಳ ಓಡಾಟಗಳನ್ನು, ಮಾತುಗಳನ್ನು ಮತ್ತು ನಡತೆಗಳನ್ನು ನನಗೆ ವರದಿ ಮಾಡಿದರು.

05187014a ಯದೈವ ಹಿ ವನಂ ಪ್ರಾಯಾತ್ಕನ್ಯಾ ಸಾ ತಪಸೇ ಧೃತಾ।
05187014c ತದೈವ ವ್ಯಥಿತೋ ದೀನೋ ಗತಚೇತಾ ಇವಾಭವಂ।।

ಅವಳು ತಪಸ್ಸಿಗೆ ಹಠಮಾಡಿ ವನಕ್ಕೆ ಹೋದಾಗಿನಿಂದಲೇ ನಾನು ವ್ಯಥಿತನೂ, ದೀನನೂ, ಬುದ್ಧಿಕಳೆದುಕೊಂಡಂಥವನೂ ಆದೆನು.

05187015a ನ ಹಿ ಮಾಂ ಕ್ಷತ್ರಿಯಃ ಕಶ್ಚಿದ್ವೀರ್ಯೇಣ ವಿಜಯೇದ್ಯುಧಿ।
05187015c ಋತೇ ಬ್ರಹ್ಮವಿದಸ್ತಾತ ತಪಸಾ ಸಂಶಿತವ್ರತಾತ್।।

ಮಗೂ! ಏಕೆಂದರೆ ಬ್ರಹ್ಮವಿದನಾದ ಸಂಶಿತವ್ರತ ತಾಪಸನನ್ನು ಬಿಟ್ಟು ಬೇರೆ ಯಾವ ಕ್ಷತ್ರಿಯನೂ ವೀರ್ಯದಿಂದ ನನ್ನನ್ನು ಯುದ್ಧದಲ್ಲಿ ಜಯಿಸಲಾರನು!

05187016a ಅಪಿ ಚೈತನ್ಮಯಾ ರಾಜನ್ನಾರದೇಽಪಿ ನಿವೇದಿತಂ।
05187016c ವ್ಯಾಸೇ ಚೈವ ಭಯಾತ್ಕಾರ್ಯಂ ತೌ ಚೋಭೌ ಮಾಮವೋಚತಾಂ।।

ರಾಜನ್! ಭಯದಿಂದ ನಾನು ಇದನ್ನು ನಾರದ ಮತ್ತು ವ್ಯಾಸನಿಗೂ ಕೂಡ ಹೇಳುವ ಕಾರ್ಯವನ್ನು ಮಾಡಿದೆ. ಅವರು ನನಗೆ ಹೇಳಿದರು:

05187017a ನ ವಿಷಾದಸ್ತ್ವಯಾ ಕಾರ್ಯೋ ಭೀಷ್ಮ ಕಾಶಿಸುತಾಂ ಪ್ರತಿ।
05187017c ದೈವಂ ಪುರುಷಕಾರೇಣ ಕೋ ನಿವರ್ತಿತುಮುತ್ಸಹೇತ್।।

“ಭೀಷ್ಮ! ಕಾಶಿಸುತೆಯ ಕುರಿತು ವಿಷಾದಪಡಬೇಡ. ದೈವವನ್ನು ಪುರುಷ ಕಾರಣಗಳಿಂದ ಯಾರುತಾನೇ ತಡೆಯಲು ಪ್ರಯತ್ನಿಸಬೇಕು?”

05187018a ಸಾ ತು ಕನ್ಯಾ ಮಹಾರಾಜ ಪ್ರವಿಶ್ಯಾಶ್ರಮಮಂಡಲಂ।
05187018c ಯಮುನಾತೀರಮಾಶ್ರಿತ್ಯ ತಪಸ್ತೇಪೇಽತಿಮಾನುಷಂ।।

ಮಹಾರಾಜ! ಆ ಕನ್ಯೆಯಾದರೋ ಯಮುನಾತೀರದ ಆಶ್ರಮಮಂಡಲವನ್ನು ಪ್ರವೇಶಿಸಿ ಅತಿಮಾನುಷ ತಪಸ್ಸನ್ನು ತಪಿಸಿದಳು.

05187019a ನಿರಾಹಾರಾ ಕೃಶಾ ರೂಕ್ಷಾ ಜಟಿಲಾ ಮಲಪಂಕಿನೀ।
05187019c ಷಣ್ಮಾಸಾನ್ವಾಯುಭಕ್ಷಾ ಚ ಸ್ಥಾಣುಭೂತಾ ತಪೋಧನಾ।।

ಆ ತಪೋಧನೆಯು ನಿರಾಹಾರಳಾಗಿ, ಕೃಶಳಾಗಿ, ರೂಕ್ಷಳಾಗಿ, ಜಟಿಲಳಾಗಿ, ಹೊಲಸುತುಂಬಿಕೊಂಡು ಆರು ತಿಂಗಳು ಗಾಳಿಯನ್ನೇ ಸೇವಿಸುತ್ತಾ ಅಲುಗಾಡದೇ ನಿಂತಿದ್ದಳು.

05187020a ಯಮುನಾತೀರಮಾಸಾದ್ಯ ಸಂವತ್ಸರಮಥಾಪರಂ।
05187020c ಉದವಾಸಂ ನಿರಾಹಾರಾ ಪಾರಯಾಮಾಸ ಭಾಮಿನೀ।।

ಇನ್ನೊಂದು ವರ್ಷ ಆ ಭಾಮಿನಿಯು ಯಮುನಾತೀರವನ್ನು ಸೇರಿ ನಿರಾಹಾರಳಾಗಿ ನೀರಿನಲ್ಲಿಯೇ ವಾಸಿಸಿ ಕಳೆದಳು.

05187021a ಶೀರ್ಣಪರ್ಣೇನ ಚೈಕೇನ ಪಾರಯಾಮಾಸ ಚಾಪರಂ।
05187021c ಸಂವತ್ಸರಂ ತೀವ್ರಕೋಪಾ ಪಾದಾಂಗುಷ್ಠಾಗ್ರಧಿಷ್ಠಿತಾ।।

ಅನಂತರ ತೀವ್ರಕೋಪದಿಂದ ಪಾದದ ಅಂಗುಷ್ಠದ ಮೇಲೆ ನಿಂತುಕೊಂಡು ಕೇವಲ ಒಂದು ಒಣ ಎಲೆಯನ್ನು ತಿಂದುಕೊಂಡು ಒಂದು ವರ್ಷವನ್ನು ಕಳೆದಳು.

05187022a ಏವಂ ದ್ವಾದಶ ವರ್ಷಾಣಿ ತಾಪಯಾಮಾಸ ರೋದಸೀ।
05187022c ನಿವರ್ತ್ಯಮಾನಾಪಿ ತು ಸಾ ಜ್ಞಾತಿಭಿರ್ನೈವ ಶಕ್ಯತೇ।।

ಹೀಗೆ ಆ ರೋದಸಿಯು ಹನ್ನೆರಡು ವರ್ಷಗಳು ತಪಿಸಿದಳು. ಅವಳ ಬಾಂಧವರೂ ಕೂಡ ಅವಳನ್ನು ತಡೆಯಲು ಶಕ್ಯರಾಗಲಿಲ್ಲ.

05187023a ತತೋಽಗಮದ್ವತ್ಸಭೂಮಿಂ ಸಿದ್ಧಚಾರಣಸೇವಿತಾಂ।
05187023c ಆಶ್ರಮಂ ಪುಣ್ಯಶೀಲಾನಾಂ ತಾಪಸಾನಾಂ ಮಹಾತ್ಮನಾಂ।।

ಆಗ ಅವಳು ಸಿದ್ಧಚಾರಣಸೇವಿತ ಮಹಾತ್ಮ ತಾಪಸ ಪುಣ್ಯಶೀಲರ ಆಶ್ರಮ ಭೂಮಿಗೆ ಹೋದಳು.

05187024a ತತ್ರ ಪುಣ್ಯೇಷು ದೇಶೇಷು ಸಾಪ್ಲುತಾಂಗೀ ದಿವಾನಿಶಂ।
05187024c ವ್ಯಚರತ್ಕಾಶಿಕನ್ಯಾ ಸಾ ಯಥಾಕಾಮವಿಚಾರಿಣೀ।।

ಅಲ್ಲಿ ಪುಣ್ಯದೇಶಗಳಲ್ಲಿ ಸ್ನಾನಮಾಡುತ್ತಾ ಹಗಲು ರಾತ್ರಿ ಕಾಶಿಕನ್ಯೆಯು ತನಗಿಷ್ಟವಾದ ಹಾಗೆ ತಿರುಗಾಡಿದಳು.

05187025a ನಂದಾಶ್ರಮೇ ಮಹಾರಾಜ ತತೋಲೂಕಾಶ್ರಮೇ ಶುಭೇ।
05187025c ಚ್ಯವನಸ್ಯಾಶ್ರಮೇ ಚೈವ ಬ್ರಹ್ಮಣಃ ಸ್ಥಾನ ಏವ ಚ।।
05187026a ಪ್ರಯಾಗೇ ದೇವಯಜನೇ ದೇವಾರಣ್ಯೇಷು ಚೈವ ಹ।
05187026c ಭೋಗವತ್ಯಾಂ ತಥಾ ರಾಜನ್ಕೌಶಿಕಸ್ಯಾಶ್ರಮೇ ತಥಾ।।
05187027a ಮಾಂಡವ್ಯಸ್ಯಾಶ್ರಮೇ ರಾಜನ್ದಿಲೀಪಸ್ಯಾಶ್ರಮೇ ತಥಾ।
05187027c ರಾಮಹ್ರದೇ ಚ ಕೌರವ್ಯ ಪೈಲಗಾರ್ಗ್ಯಸ್ಯ ಚಾಶ್ರಮೇ।।
05187028a ಏತೇಷು ತೀರ್ಥೇಷು ತದಾ ಕಾಶಿಕನ್ಯಾ ವಿಶಾಂ ಪತೇ।
05187028c ಆಪ್ಲಾವಯತ ಗಾತ್ರಾಣಿ ತೀವ್ರಮಾಸ್ಥಾಯ ವೈ ತಪಃ।।

ಮಹಾರಾಜ! ರಾಜನ್! ವಿಶಾಂಪತೇ! ಕೌರವ್ಯ! ನಂದಾಶ್ರಮ, ನಂತರ ಶುಭ ಉಲೂಕಾಶ್ರಮ, ಚ್ಯವನಾಶ್ರಮ, ಬ್ರಹ್ಮಸ್ಥಾನ, ದೇವರು ಯಾಜಿಸಿದ, ದೇವರ ಅರಣ್ಯ ಪ್ರಯಾಗ, ಭೋಗವತಿ, ಕೌಶಿಕಾಶ್ರಮ, ಮಾಂಡವ್ಯಾಶ್ರಮ, ದಿಲೀಪನ ಆಶ್ರಮ, ರಾಮಸರೋವರ, ಪೈಲಗಾರ್ಗನ ಆಶ್ರಮ - ಈ ತೀರ್ಥಗಳಲ್ಲಿ ಕಾಶಿಕನ್ಯೆಯು ದೇಹವನ್ನು ತೊಳೆದು ತೀವ್ರ ತಪಸ್ಸಿನಲ್ಲಿದ್ದಳು.

05187029a ತಾಮಬ್ರವೀತ್ಕೌರವೇಯ ಮಮ ಮಾತಾ ಜಲೋತ್ಥಿತಾ।
05187029c ಕಿಮರ್ಥಂ ಕ್ಲಿಶ್ಯಸೇ ಭದ್ರೇ ತಥ್ಯಮೇತದ್ಬ್ರವೀಹಿ ಮೇ।।

ಕೌರವೇಯ! ಆಗ ನನ್ನ ಮಾತೆಯು ಜಲದಿಂದ ಮೇಲೆದ್ದು ಅವಳಿಗೆ ಹೇಳಿದಳು: “ಭದ್ರೇ! ಏಕೆ ಈ ಕಷ್ಟಪಡುತ್ತಿರುವೆ? ಕಾರಣವನ್ನು ನನಗೆ ಹೇಳು.”

05187030a ಸೈನಾಮಥಾಬ್ರವೀದ್ರಾಜನ್ಕೃತಾಂಜಲಿರನಿಂದಿತಾ।
05187030c ಭೀಷ್ಮೋ ರಾಮೇಣ ಸಮರೇ ನ ಜಿತಶ್ಚಾರುಲೋಚನೇ।।

ರಾಜನ್! ಅವಳಿಗೆ ಆ ಅನಿಂದಿತೆಯು ಕೈಮುಗಿದು ಹೇಳಿದಳು: “ಚಾರುಲೋಚನೇ! ಭೀಷ್ಮನು ಸಮರದಲ್ಲಿ ರಾಮನನ್ನು ಗೆದ್ದನು.

05187031a ಕೋಽನ್ಯಸ್ತಮುತ್ಸಹೇಜ್ಜೇತುಮುದ್ಯತೇಷುಂ ಮಹೀಪತಿಂ।
05187031c ಸಾಹಂ ಭೀಷ್ಮವಿನಾಶಾಯ ತಪಸ್ತಪ್ಸ್ಯೇ ಸುದಾರುಣಂ।।

ಯುದ್ಧ ಮಾಡಲು ಬರುವ ಆ ಮಹೀಪತಿಯೊಡನೆ ಬೇರೆ ಯಾರುತಾನೇ ಹೋರಾಡಲು ಬಯಸುವರು? ನಾನು ಭೀಷ್ಮನ ವಿನಾಶಕ್ಕೆ ಈ ಸುದಾರುಣ ತಪಸ್ಸನ್ನು ತಪಿಸುತ್ತಿದ್ದೇನೆ.

05187032a ಚರಾಮಿ ಪೃಥಿವೀಂ ದೇವಿ ಯಥಾ ಹನ್ಯಾಮಹಂ ನೃಪಂ।
05187032c ಏತದ್ವ್ರತಫಲಂ ದೇಹೇ ಪರಸ್ಮಿನ್ಸ್ಯಾದ್ಯಥಾ ಹಿ ಮೇ।।

ದೇವೀ! ಆ ನೃಪನನ್ನು ಕೊಲ್ಲಬಹುದೆಂದು ನಾನು ಭೂಮಿಯಲ್ಲಿ ಅಲೆದಾಡುತ್ತಿದ್ದೇನೆ. ಈ ದೇಹದಲ್ಲಿ ಅಥವಾ ಇನ್ನೊಂದರಲ್ಲಿ. ಇದೇ ನನ್ನ ವ್ರತದಿಂದ ಬಯಸುವ ಫಲ.”

05187033a ತತೋಽಬ್ರವೀತ್ಸಾಗರಗಾ ಜಿಹ್ಮಂ ಚರಸಿ ಭಾಮಿನಿ।
05187033c ನೈಷ ಕಾಮೋಽನವದ್ಯಾಂಗಿ ಶಕ್ಯಃ ಪ್ರಾಪ್ತುಂ ತ್ವಯಾಬಲೇ।।

ಆಗ ಸಾಗರಗೆಯು ಅವಳಿಗೆ ಹೇಳಿದಳು: “ಭಾಮಿನೀ! ನೀನು ಸುತ್ತಿ ಬಳಸಿ ಹೋಗುತ್ತಿದ್ದೀಯೆ. ಅನವದ್ಯಾಂಗೀ! ಅಬಲೇ! ನಿನ್ನ ಈ ಆಸೆಯನ್ನು ಪೂರೈಸಲು ನೀನು ಶಕ್ಯಳಾಗುವುದಿಲ್ಲ.

05187034a ಯದಿ ಭೀಷ್ಮವಿನಾಶಾಯ ಕಾಶ್ಯೇ ಚರಸಿ ವೈ ವ್ರತಂ।
05187034c ವ್ರತಸ್ಥಾ ಚ ಶರೀರಂ ತ್ವಂ ಯದಿ ನಾಮ ವಿಮೋಕ್ಷ್ಯಸಿ।
05187034e ನದೀ ಭವಿಷ್ಯಸಿ ಶುಭೇ ಕುಟಿಲಾ ವಾರ್ಷಿಕೋದಕಾ।।

ಕಾಶ್ಯೇ! ಶುಭೇ! ಭೀಷ್ಮನ ವಿನಾಶಕ್ಕಾಗಿ ನೀನು ವ್ರತವನ್ನು ಆಚರಿಸುತ್ತಿದ್ದೀಯೆ. ಒಂದುವೇಳೆ ವ್ರತಸ್ಥಳಾಗಿದ್ದುಕೊಂಡೇ ನೀನು ಶರೀರವನ್ನು ತೊರೆದರೆ ಮಳೆನೀರಿನಿಂದ ತುಂಬಿಕೊಳ್ಳುವ ಕುಟಿಲ ನದಿಯಾಗುತ್ತೀಯೆ.

05187035a ದುಸ್ತೀರ್ಥಾ ಚಾನಭಿಜ್ಞೇಯಾ ವಾರ್ಷಿಕೀ ನಾಷ್ಟಮಾಸಿಕೀ।
05187035c ಭೀಮಗ್ರಾಹವತೀ ಘೋರಾ ಸರ್ವಭೂತಭಯಂಕರೀ।।

ಅಸಾದ್ಯ ತೀರ್ಥವಾಗುತ್ತೀಯೆ. ಮಳೆನೀರಿನಿಂದ ತುಂಬಿ ಭಯಂಕರ ಪ್ರವಾಹವಾಗಿ ಎಂಟು ತಿಂಗಳು ಎಲ್ಲರಿಗೂ ಘೋರವೂ ಭಯಂಕರಿಯೂ ಆಗುತ್ತೀಯೆ.”

05187036a ಏವಮುಕ್ತ್ವಾ ತತೋ ರಾಜನ್ಕಾಶಿಕನ್ಯಾಂ ನ್ಯವರ್ತತ।
05187036c ಮಾತಾ ಮಮ ಮಹಾಭಾಗಾ ಸ್ಮಯಮಾನೇವ ಭಾಮಿನೀ।।

ರಾಜನ್! ಹೀಗೆ ಕಾಶಿಕನ್ಯೆಗೆ ಹೇಳಿ ನನ್ನ ಮಾತೆ ಮಹಾಭಾಗೆ ಭಾಮಿನಿಯು ಮುಗುಳ್ನಗುತ್ತಾ ಹಿಂದಿರುಗಿದಳು.

05187037a ಕದಾ ಚಿದಷ್ಟಮೇ ಮಾಸಿ ಕದಾ ಚಿದ್ದಶಮೇ ತಥಾ।
05187037c ನ ಪ್ರಾಶ್ನೀತೋದಕಮಪಿ ಪುನಃ ಸಾ ವರವರ್ಣಿನೀ।।

ಆ ವರವರ್ಣಿನಿಯು ಕೆಲವೊಮ್ಮೆ ಎಂಟು ತಿಂಗಳು ಮತ್ತು ಕೆಲವೊಮ್ಮ ಹತ್ತು ತಿಂಗಳು ಏನನ್ನೂ ತಿನ್ನದೇ ನೀರನ್ನೂ ಕುಡಿಯದೇ ಪುನಃ ತಪಸ್ಸನ್ನಾಚರಿಸಿದಳು.

05187038a ಸಾ ವತ್ಸಭೂಮಿಂ ಕೌರವ್ಯ ತೀರ್ಥಲೋಭಾತ್ತತಸ್ತತಃ।
05187038c ಪತಿತಾ ಪರಿಧಾವಂತೀ ಪುನಃ ಕಾಶಿಪತೇಃ ಸುತಾ।।

ಕೌರವ್ಯ! ಆ ಕಾಶಿಪತಿಯ ಸುತೆಯು ಅಲ್ಲಿ ಇಲ್ಲಿ ತಿರುಗಾಡುತ್ತ ತೀರ್ಥದ ಆಸೆಯಿಂದ ಪುನಃ ವತ್ಸಭೂಮಿಗೆ ಆಗಮಿಸಿದಳು.

05187039a ಸಾ ನದೀ ವತ್ಸಭೂಮ್ಯಾಂ ತು ಪ್ರಥಿತಾಂಬೇತಿ ಭಾರತ।
05187039c ವಾರ್ಷಿಕೀ ಗ್ರಾಹಬಹುಲಾ ದುಸ್ತೀರ್ಥಾ ಕುಟಿಲಾ ತಥಾ।।

ಭಾರತ! ಅವಳು ವತ್ಸಭೂಮಿಯಲ್ಲಿ ಮಳೆನೀರಿನಿಂದ ತುಂಬಿ ಹರಿಯುವ ಬಹಳ ಮೊಸಳೆಗಳಿರುವ, ಕಷ್ಟದ ತೀರ್ಥ, ಕುಟಿಲ ನದಿಯಾದಳೆಂದು ಹೇಳುತ್ತಾರೆ.

05187040a ಸಾ ಕನ್ಯಾ ತಪಸಾ ತೇನ ಭಾಗಾರ್ಧೇನ ವ್ಯಜಾಯತ।
05187040c ನದೀ ಚ ರಾಜನ್ವತ್ಸೇಷು ಕನ್ಯಾ ಚೈವಾಭವತ್ತದಾ।।

ರಾಜನ್! ತಪಸ್ಸಿನ ಪ್ರಭಾವದಿಂದ ಆ ಕನ್ಯೆಯ ಅರ್ಧಭಾಗವು ನದಿಯಾಗಿ ಹರಿಯಿತು ಮತ್ತು ಇನ್ನೊಂದು ಅರ್ಧಭಾಗವು ಕನ್ಯೆಯಾಗಿಯೇ ಉಳಿಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಅಂಬಾತಪಸ್ಯಾಯಾಂ ಸಪ್ತಾಶೀತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಅಂಬಾತಪಸ್ಯೆಯಲ್ಲಿ ನೂರಾಎಂಭತ್ತೇಳನೆಯ ಅಧ್ಯಾಯವು.