ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಅಂಬೋಽಪಾಖ್ಯಾನ ಪರ್ವ
ಅಧ್ಯಾಯ 186
ಸಾರ
ಭೀಷ್ಮನು ಪ್ರಸ್ವಾಪವನ್ನು ಪ್ರಯೋಗಿಸಬೇಕೆಂದಿರುವಾಗ ವಸುಗಳೊಂದಿಗೆ ನಾರದನು ಅವನನ್ನು ತಡೆದು, ಭೀಷ್ಮನೂ ಪರಶುರಾಮನೂ ಯುದ್ಧದಿಂದ ಹಿಂದೆ ಸರಿಯುವಂತೆ ಮಾಡಿದುದು (1-36).
05186001 ಭೀಷ್ಮ ಉವಾಚ।
05186001a ತತೋ ಹಲಹಲಾಶಬ್ದೋ ದಿವಿ ರಾಜನ್ಮಹಾನಭೂತ್।
05186001c ಪ್ರಸ್ವಾಪಂ ಭೀಷ್ಮ ಮಾ ಸ್ರಾಕ್ಷೀರಿತಿ ಕೌರವನಂದನ।।
ಭೀಷ್ಮನು ಹೇಳಿದನು: “ರಾಜನ್! ಆಗ “ಕೌರವನಂದನ! ಭೀಷ್ಮ! ಪ್ರಸ್ವಾಪವನ್ನು ಪ್ರಯೋಗಿಸಬೇಡ!” ಎಂದು ದಿವಿಯಲ್ಲಿ ಮಹಾ ಹಲಹಲ ಶಬ್ಧವು ಕೇಳಿಬಂದಿತು.
05186002a ಅಯುಂಜಮೇವ ಚೈವಾಹಂ ತದಸ್ತ್ರಂ ಭೃಗುನಂದನೇ।
05186002c ಪ್ರಸ್ವಾಪಂ ಮಾಂ ಪ್ರಯುಂಜಾನಂ ನಾರದೋ ವಾಕ್ಯಮಬ್ರವೀತ್।।
ಹೀಗೆ ಹೇಳಿದರೂ ನಾನು ಆ ಅಸ್ತ್ರವನ್ನು ಭೃಗುನಂದನನ ಮೇಲೆ ಗುರಿಯಿಟ್ಟೆನು. ನಾನು ಪ್ರಸ್ವಾಪವನ್ನು ಪ್ರಯೋಗಿಸುವುದರಲ್ಲಿರುವಾಗ ನಾರದನು ಹೇಳಿದನು:
05186003a ಏತೇ ವಿಯತಿ ಕೌರವ್ಯ ದಿವಿ ದೇವಗಣಾಃ ಸ್ಥಿತಾಃ।
05186003c ತೇ ತ್ವಾಂ ನಿವಾರಯಂತ್ಯದ್ಯ ಪ್ರಸ್ವಾಪಂ ಮಾ ಪ್ರಯೋಜಯ।।
“ಕೌರವ್ಯ! ಯೋಚಿಸು! ದೇವಗಣಗಳು ದಿವಿಯಲ್ಲಿ ನಿಂತಿರುವರು. ಇಂದು ಅವರೂ ಕೂಡ ನಿನ್ನನ್ನು ತಡೆಯುತ್ತಿದ್ದಾರೆ. ಪ್ರಸ್ವಾಪವನ್ನು ಪ್ರಯೋಗಿಸಬೇಡ!
05186004a ರಾಮಸ್ತಪಸ್ವೀ ಬ್ರಹ್ಮಣ್ಯೋ ಬ್ರಾಹ್ಮಣಶ್ಚ ಗುರುಶ್ಚ ತೇ।
05186004c ತಸ್ಯಾವಮಾನಂ ಕೌರವ್ಯ ಮಾ ಸ್ಮ ಕಾರ್ಷೀಃ ಕಥಂ ಚನ।।
ಕೌರವ್ಯ! ರಾಮನು ತಪಸ್ವೀ, ಬ್ರಹ್ಮಣ್ಯ, ಬ್ರಾಹ್ಮಣ ಮತ್ತು ನಿನ್ನ ಗುರು. ಎಂದೂ ಅವನ ಅಪಮಾನವನ್ನು ಮಾಡಬೇಡ!”
05186005a ತತೋಽಪಶ್ಯಂ ದಿವಿಷ್ಠಾನ್ವೈ ತಾನಷ್ಟೌ ಬ್ರಹ್ಮವಾದಿನಃ।
05186005c ತೇ ಮಾಂ ಸ್ಮಯಂತೋ ರಾಜೇಂದ್ರ ಶನಕೈರಿದಮಬ್ರುವನ್।।
ಆಗ ನಾನು ದಿವಿಯಲ್ಲಿದ್ದ ಆ ಎಂಟು ಬ್ರಹ್ಮವಾದಿಗಳನ್ನು ನೋಡಿದೆನು. ರಾಜೇಂದ್ರ! ಅವರು ಮುಗುಳ್ನಗುತ್ತಾ ಮೆಲ್ಲನೆ ನನಗೆ ಹೇಳಿದರು:
05186006a ಯಥಾಹ ಭರತಶ್ರೇಷ್ಠ ನಾರದಸ್ತತ್ತಥಾ ಕುರು।
05186006c ಏತದ್ಧಿ ಪರಮಂ ಶ್ರೇಯೋ ಲೋಕಾನಾಂ ಭರತರ್ಷಭ।।
“ಭರತಶ್ರೇಷ್ಠ! ಭರತರ್ಷಭ! ನಾರದನು ಹೇಳಿದಂತೆಯೇ ಮಾಡು. ಇದು ಲೋಕಗಳಿಗೆ ಪರಮ ಶ್ರೇಯಸ್ಸನ್ನು ತರುತ್ತದೆಯೆಂದು ತಿಳಿ.”
05186007a ತತಶ್ಚ ಪ್ರತಿಸಂಹೃತ್ಯ ತದಸ್ತ್ರಂ ಸ್ವಾಪನಂ ಮೃಧೇ।
05186007c ಬ್ರಹ್ಮಾಸ್ತ್ರಂ ದೀಪಯಾಂ ಚಕ್ರೇ ತಸ್ಮಿನ್ಯುಧಿ ಯಥಾವಿಧಿ।।
ಆಗ ನಾನು ಸ್ವಾಪನವನ್ನು ಹಿಂದೆ ತೆಗೆದುಕೊಂಡೆನು. ಆ ಯುದ್ಧದಲ್ಲಿ ಯಥಾವಿಧಿಯಾಗಿ ಬ್ರಹ್ಮಾಸ್ತ್ರವನ್ನು ಬೆಳಗಿಸಿದೆನು.
05186008a ತತೋ ರಾಮೋ ರುಷಿತೋ ರಾಜಪುತ್ರ ದೃಷ್ಟ್ವಾ ತದಸ್ತ್ರಂ ವಿನಿವರ್ತಿತಂ ವೈ।
05186008c ಜಿತೋಽಸ್ಮಿ ಭೀಷ್ಮೇಣ ಸುಮಂದಬುದ್ಧಿರ್ ಇತ್ಯೇವ ವಾಕ್ಯಂ ಸಹಸಾ ವ್ಯಮುಂಚತ್।।
ರಾಜಪುತ್ರ! ಆ ಅಸ್ತ್ರವನ್ನು ಹಿಂದೆ ತೆಗೆದುಕೊಂಡುದುದನ್ನು ನೋಡಿದ ರಾಮನು ರೋಷಗೊಂಡು “ಮಂದಬುದ್ಧಿಯವನಾದ ನಾನು ಭೀಷ್ಮನಿಂದ ಗೆಲ್ಲಲ್ಪಟ್ಟೆ!” ಎಂದು ಹೇಳಿ ಒಮ್ಮೆಲೇ ಯುದ್ಧವನ್ನು ತ್ಯಜಿಸಿದನು.
05186009a ತತೋಽಪಶ್ಯತ್ಪಿತರಂ ಜಾಮದಗ್ನ್ಯಃ ಪಿತುಸ್ತಥಾ ಪಿತರಂ ತಸ್ಯ ಚಾನ್ಯಂ।
05186009c ತ ಏವೈನಂ ಸಂಪರಿವಾರ್ಯ ತಸ್ಥುರ್ ಊಚುಶ್ಚೈನಂ ಸಾಂತ್ವಪೂರ್ವಂ ತದಾನೀಂ।।
ಆಗ ಜಾಮದಗ್ನಿಯು ತನ್ನ ತಂದೆಯನ್ನೂ ಇತರ ಪಿತೃಗಳನ್ನೂ ನೋಡಿದನು. ಅವರು ಅವನನ್ನು ಸುತ್ತುವರೆದು ನಿಂತು ಈ ಸಾಂತ್ವನದ ಮಾತುಗಳನ್ನಾಡಿದರು:
05186010a ಮಾ ಸ್ಮೈವಂ ಸಾಹಸಂ ವತ್ಸ ಪುನಃ ಕಾರ್ಷೀಃ ಕಥಂ ಚನ।
05186010c ಭೀಷ್ಮೇಣ ಸಮ್ಯುಗಂ ಗಂತುಂ ಕ್ಷತ್ರಿಯೇಣ ವಿಶೇಷತಃ।।
“ವತ್ಸ! ಸಾಹಸಿಯೊಂದಿಗೆ ಇಂತಹ ಸಾಹಸವನ್ನು – ವಿಶೇಷತಃ ಭೀಷ್ಮನಂತಹ ಕ್ಷತ್ರಿಯನೊಂದಿಗೆ ಯುದ್ಧ ಮಾಡಲು - ಎಂದೂ ಮಾಡಬೇಡ!
05186011a ಕ್ಷತ್ರಿಯಸ್ಯ ತು ಧರ್ಮೋಽಯಂ ಯದ್ಯುದ್ಧಂ ಭೃಗುನಂದನ।
05186011c ಸ್ವಾಧ್ಯಾಯೋ ವ್ರತಚರ್ಯಾ ಚ ಬ್ರಾಹ್ಮಣಾನಾಂ ಪರಂ ಧನಂ।।
ಭೃಗುನಂದನ! ಯುದ್ಧಮಾಡುವುದಾದರೋ ಕ್ಷತ್ರಿಯರ ಧರ್ಮ. ಸ್ವಾಧ್ಯಾಯ ವ್ರತಚರ್ಯೆಗಳು ಬ್ರಾಹ್ಮಣರ ಪರಮ ಧನ.
05186012a ಇದಂ ನಿಮಿತ್ತೇ ಕಸ್ಮಿಂಶ್ಚಿದಸ್ಮಾಭಿರುಪಮಂತ್ರಿತಂ।
05186012c ಶಸ್ತ್ರಧಾರಣಮತ್ಯುಗ್ರಂ ತಚ್ಚ ಕಾರ್ಯಂ ಕೃತಂ ತ್ವಯಾ।।
ಹಿಂದೆ ಯಾವುದೋ ಕಾರಣದಿಂದ ನಾವು ನಿನಗೆ ಶಸ್ತ್ರಧಾರಣದ ಉಪದೇಶವನ್ನು ನೀಡಿದ್ದೆವು. ಅದರಿಂದ ನೀನು ಉಗ್ರ ಕಾರ್ಯವನ್ನು ಎಸಗಿದ್ದೀಯೆ.
05186013a ವತ್ಸ ಪರ್ಯಾಪ್ತಮೇತಾವದ್ಭೀಷ್ಮೇಣ ಸಹ ಸಂಯುಗೇ।
05186013c ವಿಮರ್ದಸ್ತೇ ಮಹಾಬಾಹೋ ವ್ಯಪಯಾಹಿ ರಣಾದಿತಃ।।
ವತ್ಸ! ಭೀಷ್ಮನೊಡನೆ ಮಾಡಿದ ಈ ಯುದ್ಧದೊಂದಿಗೆ ನಿನ್ನ ಯುದ್ಧಗಳನ್ನು ಮುಗಿಸು. ಮಹಾಬಾಹೋ! ಸಾಕಷ್ಟು ಯುದ್ಧ ಮಾಡಿದ್ದೀಯೆ. ಇನ್ನು ನಿಲ್ಲಿಸು!
05186014a ಪರ್ಯಾಪ್ತಮೇತದ್ಭದ್ರಂ ತೇ ತವ ಕಾರ್ಮುಕಧಾರಣಂ।
05186014c ವಿಸರ್ಜಯೈತದ್ದುರ್ಧರ್ಷ ತಪಸ್ತಪ್ಯಸ್ವ ಭಾರ್ಗವ।।
ನಿನಗೆ ಮಂಗಳವಾಗಲಿ! ಇದನ್ನು ಸಮಾಪ್ತಗೊಳಿಸು. ದುರ್ಧರ್ಷ! ಭಾರ್ಗವ! ಧನುರ್ಧಾರಣೆಯನ್ನು ವಿಸರ್ಜಿಸಿ ತಪಸ್ಸನ್ನು ತಪಿಸು!
05186015a ಏಷ ಭೀಷ್ಮಃ ಶಾಂತನವೋ ದೇವೈಃ ಸರ್ವೈರ್ನಿವಾರಿತಃ।
05186015c ನಿವರ್ತಸ್ವ ರಣಾದಸ್ಮಾದಿತಿ ಚೈವ ಪ್ರಚೋದಿತಃ।।
ಈ ಶಾಂತನವ ಭೀಷ್ಮನನ್ನು ಎಲ್ಲ ದೇವತೆಗಳೂ ತಡೆಯುತ್ತಿದ್ದಾರೆ. ಈ ರಣದಿಂದ ಹಿಂದಿರುಗು ಎಂದು ಪ್ರಚೋದಿಸುತ್ತಿದ್ದಾರೆ.
05186016a ರಾಮೇಣ ಸಹ ಮಾ ಯೋತ್ಸೀರ್ಗುರುಣೇತಿ ಪುನಃ ಪುನಃ।
05186016c ನ ಹಿ ರಾಮೋ ರಣೇ ಜೇತುಂ ತ್ವಯಾ ನ್ಯಾಯ್ಯಃ ಕುರೂದ್ವಹ।
05186016e ಮಾನಂ ಕುರುಷ್ವ ಗಾಂಗೇಯ ಬ್ರಾಹ್ಮಣಸ್ಯ ರಣಾಜಿರೇ।।
ಪುನಃ ಪುನಃ “ರಾಮನೊಂದಿಗೆ ಹೋರಾಡಬೇಡ. ಅವನು ನಿನ್ನ ಗುರು” ಎಂದೂ, “ಕುರೂದ್ವಹ! ರಾಮನನ್ನು ರಣದಲ್ಲಿ ಗೆಲ್ಲಲು ನಿನಗೆ ಅಥವಾ ಅನ್ಯರಿಗೆ ಸಾಧ್ಯವಿಲ್ಲ! ಗಾಂಗೇಯ! ರಣದಲ್ಲಿ ಬ್ರಾಹ್ಮಣನನ್ನು ಗೌರವಿಸು!” ಎಂದೂ ಹೇಳುತ್ತಿದ್ದಾರೆ.
05186017a ವಯಂ ತು ಗುರವಸ್ತುಭ್ಯಂ ತತಸ್ತ್ವಾಂ ವಾರಯಾಮಹೇ।
05186017c ಭೀಷ್ಮೋ ವಸೂನಾಮನ್ಯತಮೋ ದಿಷ್ಟ್ಯಾ ಜೀವಸಿ ಪುತ್ರಕ।।
ನಿನಗೆ ನಾವು ಗುರುಗಳು. ಆದುದರಿಂದ ನಿನ್ನನ್ನು ತಡೆಯುತ್ತಿದ್ದೇವೆ. ಪುತ್ರಕ! ಭೀಷ್ಮನು ವಸುಗಳಲ್ಲಿಯೇ ಶ್ರೇಷ್ಠನಾದವನು. ಅದೃಷ್ಟ! ನೀನು ಬದುಕಿರುವೆ.
05186018a ಗಾಂಗೇಯಃ ಶಂತನೋಃ ಪುತ್ರೋ ವಸುರೇಷ ಮಹಾಯಶಾಃ।
05186018c ಕಥಂ ತ್ವಯಾ ರಣೇ ಜೇತುಂ ರಾಮ ಶಕ್ಯೋ ನಿವರ್ತ ವೈ।।
ಶಂತನು ಪುತ್ರ ಗಾಂಗೇಯನು ಮಹಾಯಶಸ್ವಿ ವಸುಗಳಲ್ಲೊಬ್ಬನು. ರಾಮ! ಅವನನ್ನು ನೀನು ಹೇಗೆ ರಣದಲ್ಲಿ ಗೆಲ್ಲಲು ಶಕ್ಯ? ಹಿಂದೆ ಸರಿ.
05186019a ಅರ್ಜುನಃ ಪಾಂಡವಶ್ರೇಷ್ಠಃ ಪುರಂದರಸುತೋ ಬಲೀ।
05186019c ನರಃ ಪ್ರಜಾಪತಿರ್ವೀರಃ ಪೂರ್ವದೇವಃ ಸನಾತನಃ।।
05186020a ಸವ್ಯಸಾಚೀತಿ ವಿಖ್ಯಾತಸ್ತ್ರಿಷು ಲೋಕೇಷು ವೀರ್ಯವಾನ್।
05186020c ಭೀಷ್ಮಮೃತ್ಯುರ್ಯಥಾಕಾಲಂ ವಿಹಿತೋ ವೈ ಸ್ವಯಂಭುವಾ।।
ಪಾಂಡವಶ್ರೇಷ್ಠ, ಪುರಂದರಸುತ, ಬಲೀ, ನರ, ಪಜಾಪತಿ, ವೀರ, ಪೂರ್ವದೇವ, ಸನಾತನ, ಸವ್ಯಸಾಚಿ, ಮೂರು ಕಾಲಬಂದಾಗ ಲೋಕಗಳಲ್ಲಿಯೂ ವೀರ್ಯವಂತನೆಂದು ವಿಖ್ಯಾತನಾದ ಅರ್ಜುನನು ಇವನ ಮೃತ್ಯುವಾಗುತ್ತಾನೆ ಎಂದು ಸ್ವಯಂಭುವು ವಿಹಿಸಿದ್ದಾನೆ1.”
05186021a ಏವಮುಕ್ತಃ ಸ ಪಿತೃಭಿಃ ಪಿತೄನ್ರಾಮೋಽಬ್ರವೀದಿದಂ।
05186021c ನಾಹಂ ಯುಧಿ ನಿವರ್ತೇಯಮಿತಿ ಮೇ ವ್ರತಮಾಹಿತಂ।।
ಹೀಗೆ ಹೇಳಿದ ತಂದೆ ಮತ್ತು ಪಿತೃಗಳಿಗೆ ರಾಮನು ಹೇಳಿದನು: “ನಾನು ಯುದ್ಧದಿಂದ ಹಿಂದೆ ಸರಿಯುವುದಿಲ್ಲವೆಂದು ವ್ರತವನ್ನಿಟ್ಟುಕೊಂಡಿದ್ದೇನೆ.
05186022a ನ ನಿವರ್ತಿತಪೂರ್ವಂ ಚ ಕದಾ ಚಿದ್ರಣಮೂರ್ಧನಿ।
05186022c ನಿವರ್ತ್ಯತಾಮಾಪಗೇಯಃ ಕಾಮಂ ಯುದ್ಧಾತ್ಪಿತಾಮಹಾಃ।
05186022e ನ ತ್ವಹಂ ವಿನಿವರ್ತಿಷ್ಯೇ ಯುದ್ಧಾದಸ್ಮಾತ್ಕಥಂ ಚನ।।
ಈ ಹಿಂದೆ ನಾನು ಎಂದೂ ರಣದ ನೆತ್ತಿಯಿಂದ ಹಿಂಜರಿದಿರಲಿಲ್ಲ. ಬೇಕಾದರೆ ಪಿತಾಮಹರು ಆಪಗೇಯನನ್ನು ಯುದ್ಧದಿಂದ ಹಿಂದೆಸರಿಸಿ. ನಾನು ಮಾತ್ರ ಎಂದೂ ಯುದ್ಧದಿಂದ ಹಿಂದೆಸರಿಯುವುದಿಲ್ಲ.”
05186023a ತತಸ್ತೇ ಮುನಯೋ ರಾಜನ್ನೃಚೀಕಪ್ರಮುಖಾಸ್ತದಾ।
05186023c ನಾರದೇನೈವ ಸಹಿತಾಃ ಸಮಾಗಮ್ಯೇದಮಬ್ರುವನ್।।
ರಾಜನ್! ಆಗ ಋಚೀಕನ ಮುಂದಾಳುತ್ವದಲ್ಲಿ ನಾರದನೂ ಸೇರಿ ಮುನಿಗಳು ಒಟ್ಟಾಗಿ ಬಂದು ನನಗೆ ಹೇಳಿದರು:
05186024a ನಿವರ್ತಸ್ವ ರಣಾತ್ತಾತ ಮಾನಯಸ್ವ ದ್ವಿಜೋತ್ತಮಾನ್।
05186024c ನೇತ್ಯವೋಚಮಹಂ ತಾಂಶ್ಚ ಕ್ಷತ್ರಧರ್ಮವ್ಯಪೇಕ್ಷಯಾ।।
“ಮಗೂ! ರಣದಿಂದ ಹಿಂದೆಸರಿ. ದ್ವಿಜೋತ್ತಮನನ್ನು ಗೌರವಿಸು.” “ಇಲ್ಲ” ಎಂದು ನಾನು ಕ್ಷತ್ರಧರ್ಮವನ್ನು ಅಪೇಕ್ಷಿಸದೆಯೇ ಅವರಿಗೆ ಹೇಳಿದೆನು.
05186025a ಮಮ ವ್ರತಮಿದಂ ಲೋಕೇ ನಾಹಂ ಯುದ್ಧಾತ್ಕಥಂ ಚನ।
05186025c ವಿಮುಖೋ ವಿನಿವರ್ತೇಯಂ ಪೃಷ್ಠತೋಽಭ್ಯಾಹತಃ ಶರೈಃ।।
“ಲೋಕದಲ್ಲಿ ಇದು ನನ್ನ ವ್ರತ! ನಾನು ಎಂದೂ ಯುದ್ಧದಿಂದ ಬೆನ್ನಮೇಲೆ ಬಾಣಗಳಿಂದ ಪೆಟ್ಟು ತಿನ್ನದೇ ವಿಮುಖನಾಗಿ ಹಿಂದಿರುಗುವುದಿಲ್ಲವೆಂದು!
05186026a ನಾಹಂ ಲೋಭಾನ್ನ ಕಾರ್ಪಣ್ಯಾನ್ನ ಭಯಾನ್ನಾರ್ಥಕಾರಣಾತ್।
05186026c ತ್ಯಜೇಯಂ ಶಾಶ್ವತಂ ಧರ್ಮಮಿತಿ ಮೇ ನಿಶ್ಚಿತಾ ಮತಿಃ।।
ಇದನ್ನು ನಾನು ಶಾಶ್ವತವಾಗಿ ಲೋಭಕ್ಕಾಗಲೀ, ಕಾರ್ಪಣ್ಯದಿಂದಾಗಲೀ, ಭಯದಿಂದಾಗಲೀ, ಅರ್ಥಕ್ಕಾಗಲೀ ತ್ಯಜಿಸುವುದಿಲ್ಲ ಎಂದು ನನ್ನ ಬುದ್ಧಿಯು ನಿಶ್ಚಯಿಸಿದೆ.”
05186027a ತತಸ್ತೇ ಮುನಯಃ ಸರ್ವೇ ನಾರದಪ್ರಮುಖಾ ನೃಪ।
05186027c ಭಾಗೀರಥೀ ಚ ಮೇ ಮಾತಾ ರಣಮಧ್ಯಂ ಪ್ರಪೇದಿರೇ।।
ಆಗ ನೃಪ! ನಾರದಪ್ರಮುಖ ಮುನಿಗಳೆಲ್ಲರೂ ಮತ್ತು ನನ್ನ ಮಾತೆ ಭಾಗೀರಥಿಯೂ ರಣಮಧ್ಯವನ್ನು ಪ್ರವೇಶಿಸಿದರು.
05186028a ತಥೈವಾತ್ತಶರೋ ಧನ್ವೀ ತಥೈವ ದೃಢನಿಶ್ಚಯಃ।
05186028c ಸ್ಥಿತೋಽಹಮಾಹವೇ ಯೋದ್ಧುಂ ತತಸ್ತೇ ರಾಮಮಬ್ರುವನ್।
05186028e ಸಮೇತ್ಯ ಸಹಿತಾ ಭೂಯಃ ಸಮರೇ ಭೃಗುನಂದನಂ।।
ಆಗಲೂ ನಾನು ಮೊದಲಿನಂತೆ ಶರವನ್ನು ಧನುಸ್ಸಿಗೆ ಹೂಡಿದ್ದೆ, ದೃಢನಿಶ್ಚಯನಾಗಿ ಆಹವದಲ್ಲಿ ಯುದ್ಧಮಾಡಲು ನಿಂತಿದ್ದೆ. ಆಗ ಅವರು ಎಲ್ಲರೂ ಒಟ್ಟಿಗೆ ಇನ್ನೊಮ್ಮೆ ಭೃಗುನಂದನ ರಾಮನಿಗೆ ಹೇಳಿದರು:
05186029a ನಾವನೀತಂ ಹಿ ಹೃದಯಂ ವಿಪ್ರಾಣಾಂ ಶಾಮ್ಯ ಭಾರ್ಗವ।
05186029c ರಾಮ ರಾಮ ನಿವರ್ತಸ್ವ ಯುದ್ಧಾದಸ್ಮಾದ್ದ್ವಿಜೋತ್ತಮ।
05186029e ಅವಧ್ಯೋ ಹಿ ತ್ವಯಾ ಭೀಷ್ಮಸ್ತ್ವಂ ಚ ಭೀಷ್ಮಸ್ಯ ಭಾರ್ಗವ।।
“ಭಾರ್ಗವ! ವಿಪ್ರರ ಹೃದಯವು ಬೆಣ್ಣೆಯಿಂದ್ದಂತೆ. ಶಾಂತನಾಗು! ರಾಮ! ರಾಮ! ದ್ವಿಜೋತ್ತಮ! ಈ ಯುದ್ಧದಿಂದ ಹಿಂದೆಸರಿ! ಭಾರ್ಗವ! ಭೀಷ್ಮನಿಂದ ನೀನು ಅವಧ್ಯ. ಭೀಷ್ಮನೂ ನಿನ್ನಿಂದ ಅವಧ್ಯ.”
05186030a ಏವಂ ಬ್ರುವಂತಸ್ತೇ ಸರ್ವೇ ಪ್ರತಿರುಧ್ಯ ರಣಾಜಿರಂ।
05186030c ನ್ಯಾಸಯಾಂ ಚಕ್ರಿರೇ ಶಸ್ತ್ರಂ ಪಿತರೋ ಭೃಗುನಂದನಂ।।
ಹೀಗೆ ಅವರೆಲ್ಲರೂ ಯುದ್ಧವನ್ನು ತಡೆದರು ಮತ್ತು ಪಿತೃಗಳು ಭೃಗುನಂದನನನ್ನು ಶಸ್ತ್ರವನ್ನು ಕೆಳಗಿಡುವಂತೆ ಮಾಡಿದರು.
05186031a ತತೋಽಹಂ ಪುನರೇವಾಥ ತಾನಷ್ಟೌ ಬ್ರಹ್ಮವಾದಿನಃ।
05186031c ಅದ್ರಾಕ್ಷಂ ದೀಪ್ಯಮಾನಾನ್ವೈ ಗ್ರಹಾನಷ್ಟಾವಿವೋದಿತಾನ್।।
ಆಗ ನಾನು ಪುನಃ ಮೇಲೇರುತ್ತಿರುವ ದೀಪ್ಯಮಾನ ಗ್ರಹಗಳಂತಿದ್ದ ಆ ಎಂಟು ಬ್ರಹ್ಮವಾದಿಗಳನ್ನು ನೋಡಿದೆನು.
05186032a ತೇ ಮಾಂ ಸಪ್ರಣಯಂ ವಾಕ್ಯಮಬ್ರುವನ್ಸಮರೇ ಸ್ಥಿತಂ।
05186032c ಪ್ರೈಹಿ ರಾಮಂ ಮಹಾಬಾಹೋ ಗುರುಂ ಲೋಕಹಿತಂ ಕುರು।।
ಆಗ ಸಮರದಲ್ಲಿ ನಿಂತಿದ್ದ ನನಗೆ ಪ್ರೀತಿಯಿಂದ ಹೇಳಿದರು: “ಮಹಾಬಾಹೋ! ಗುರು ರಾಮನಲ್ಲಿಗೆ ಹೋಗಿ ಲೋಕಕ್ಕೆ ಹಿತವಾದುದನ್ನು ಮಾಡು.”
05186033a ದೃಷ್ಟ್ವಾ ನಿವರ್ತಿತಂ ರಾಮಂ ಸುಹೃದ್ವಾಕ್ಯೇನ ತೇನ ವೈ।
05186033c ಲೋಕಾನಾಂ ಚ ಹಿತಂ ಕುರ್ವನ್ನಹಮಪ್ಯಾದದೇ ವಚಃ।।
ಸುಹೃದಯರ ಮಾತಿನಂತೆ ರಾಮನು ಹಿಂದೆಸರಿದುದನ್ನು ನೋಡಿ ಲೋಕಗಳ ಹಿತವನ್ನು ಮಾಡಲೋಸುಗ ನನಗೆ ಹೇಳಿದ ಮಾತನ್ನು ಅನುಸರಿಸಿದೆನು.
05186034a ತತೋಽಹಂ ರಾಮಮಾಸಾದ್ಯ ವವಂದೇ ಭೃಶವಿಕ್ಷತಃ।
05186034c ರಾಮಶ್ಚಾಭ್ಯುತ್ಸ್ಮಯನ್ಪ್ರೇಮ್ಣಾ ಮಾಮುವಾಚ ಮಹಾತಪಾಃ।।
ಆಗ ತುಂಬಾ ಗಾಯಗೊಂಡಿದ್ದ ನಾನು ರಾಮನ ಬಳಿ ಹೋಗಿ ವಂದಿಸಿದೆನು. ಮಹಾತಪಸ್ವಿ ರಾಮನಾದರೋ ಪ್ರೀತಿಯಿಂದ ಮುಗುಳ್ನಗುತ್ತಾ ನನಗೆ ಹೇಳಿದನು:
05186035a ತ್ವತ್ಸಮೋ ನಾಸ್ತಿ ಲೋಕೇಽಸ್ಮಿನ್ ಕ್ಷತ್ರಿಯಃ ಪೃಥಿವೀಚರಃ।
05186035c ಗಮ್ಯತಾಂ ಭೀಷ್ಮ ಯುದ್ಧೇಽಸ್ಮಿಂಸ್ತೋಷಿತೋಽಹಂ ಭೃಶಂ ತ್ವಯಾ।।
“ನಿನ್ನಂಥಹ ಕ್ಷತ್ರಿಯನು ಭೂಮಿಯ ಮೇಲೆ ನಡೆಯುವವ ಯಾರೂ ಲೋಕದಲ್ಲಿಯೇ ಇಲ್ಲ. ಭೀಷ್ಮ! ಹೋಗುವವನಾಗು! ನಿನ್ನಿಂದ ಈ ಯುದ್ಧದಲ್ಲಿ ನಾನು ತುಂಬಾ ತೃಪ್ತನಾಗಿದ್ದೇನೆ.”
05186036a ಮಮ ಚೈವ ಸಮಕ್ಷಂ ತಾಂ ಕನ್ಯಾಮಾಹೂಯ ಭಾರ್ಗವಃ।
05186036c ಉವಾಚ ದೀನಯಾ ವಾಚಾ ಮಧ್ಯೇ ತೇಷಾಂ ತಪಸ್ವಿನಾಂ।।
ನನ್ನ ಸಮಕ್ಷಮದಲ್ಲಿಯೇ ಆ ಕನ್ಯೆಯನ್ನು ಕರೆದು ಭಾರ್ಗವನು ತಪಸ್ವಿಗಳ ಮಧ್ಯೆ ಈ ದೀನ ಮಾತುಗಳನ್ನಾಡಿದನು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಯುದ್ಧನಿವೃತ್ತೌ ಷಡಶೀತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಯುದ್ಧನಿವೃತ್ತದಲ್ಲಿ ನೂರಾಎಂಭತ್ತಾರನೆಯ ಅಧ್ಯಾಯವು.
-
ಅರ್ಜುನನು ತನಗೆ ಮೃತ್ಯುವಾಗುತ್ತಾನೆಂದು ಯುದ್ಧದ ಮೊದಲೇ ಭೀಷ್ಮನಿಗೆ ತಿಳಿದಿತ್ತು! ↩︎