183 ರಾಮಭೀಷ್ಮಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಅಂಬೋಽಪಾಖ್ಯಾನ ಪರ್ವ

ಅಧ್ಯಾಯ 183

ಸಾರ

ಪರಶುರಾಮನ ಬಾಣಗಳಿಂದ ಭೀಷ್ಮನು ಮೂರ್ಛಿತನಾದುದು (1-10). ವಸುಗಳು ಭೀಷ್ಮನನ್ನು ಉಪಚರಿಸಿದುದು, ಗಂಗೆಯು ಅವನ ರಥವನ್ನು ನಡೆಸಿದುದು (11-17). ರಾಮನು ಮೂರ್ಛಿತನಾದುದು, ನಾಲ್ಕನೆಯ ದಿನದ ಯುದ್ಧವು ಮುಗಿದು, ಹಾಗೆ ಒಟ್ಟು ೨೩ ದಿನಗಳ ಯುದ್ಧವು ನಡೆದುದು (18-27).

05183001 ಭೀಷ್ಮ ಉವಾಚ।
05183001a ತತಃ ಪ್ರಭಾತೇ ರಾಜೇಂದ್ರ ಸೂರ್ಯೇ ವಿಮಲ ಉದ್ಗತೇ।
05183001c ಭಾರ್ಗವಸ್ಯ ಮಯಾ ಸಾರ್ಧಂ ಪುನರ್ಯುದ್ಧಮವರ್ತತ।।

ಭೀಷ್ಮನು ಹೇಳಿದನು: “ರಾಜೇಂದ್ರ! ಪ್ರಭಾತದಲ್ಲಿ ವಿಮಲ ಸೂರ್ಯನು ಉದಯವಾಗಲು ಪುನಃ ನನ್ನೊಡನೆ ಭಾರ್ಗವನ ಯುದ್ಧವು ನಡೆಯಿತು.

05183002a ತತೋ ಭ್ರಾಂತೇ ರಥೇ ತಿಷ್ಠನ್ರಾಮಃ ಪ್ರಹರತಾಂ ವರಃ।
05183002c ವವರ್ಷ ಶರವರ್ಷಾಣಿ ಮಯಿ ಶಕ್ರ ಇವಾಚಲೇ।।

ಆಗ ಬೆಳಗುತ್ತಾ ನಿಂತಿದ್ದ ಪ್ರಹರಿಗಳಲ್ಲಿ ಶ್ರೇಷ್ಠ ರಾಮನು ನನ್ನ ಮೇಲೆ ಶಕ್ರನು ಪರ್ವತಗಳ ಮೇಲೆ ಹೇಗೋ ಹಾಗೆ ಶರವರ್ಷಗಳನ್ನು ಸುರಿಸಿದನು.

05183003a ತೇನ ಸೂತೋ ಮಮ ಸುಹೃಚ್ಚರವರ್ಷೇಣ ತಾಡಿತಃ।
05183003c ನಿಪಪಾತ ರಥೋಪಸ್ಥೇ ಮನೋ ಮಮ ವಿಷಾದಯನ್।।

ಆ ಶರವರ್ಷದಿಂದ ಹೊಡೆಯಲ್ಪಟ್ಟ ನನ್ನ ಸೂತನು ರಥದಲ್ಲಿಯೇ ಕುಸಿದು ಬಿದ್ದು ನನ್ನ ಮನಸ್ಸನ್ನು ದುಃಖಗೊಳಿಸಿದನು.

05183004a ತತಃ ಸೂತಃ ಸ ಮೇಽತ್ಯರ್ಥಂ ಕಶ್ಮಲಂ ಪ್ರಾವಿಶನ್ಮಹತ್।
05183004c ಪೃಥಿವ್ಯಾಂ ಚ ಶರಾಘಾತಾನ್ನಿಪಪಾತ ಮುಮೋಹ ಚ।।

ಆಗ ಅವನಲ್ಲಿ ಮಹಾ ಕಶ್ಮಲವು ಪ್ರವೇಶಿಸಿ ನನ್ನ ಸೂತನು ಶರಘಾತದಿಂದ ಮೂರ್ಛೆಗೊಂಡು ಭೂಮಿಯ ಮೇಲೆ ಬಿದ್ದನು.

05183005a ತತಃ ಸೂತೋಽಜಹಾತ್ಪ್ರಾಣಾನ್ರಾಮಬಾಣಪ್ರಪೀಡಿತಃ।
05183005c ಮುಹೂರ್ತಾದಿವ ರಾಜೇಂದ್ರ ಮಾಂ ಚ ಭೀರಾವಿಶತ್ತದಾ।।

ರಾಮಬಾಣಪೀಡಿತನಾಗಿ ಅವನು ಅಸುವನ್ನು ನೀಗಿದನು. ರಾಜೇಂದ್ರ! ಒಂದು ಕ್ಷಣ ನನ್ನಲ್ಲಿ ಭೀತಿಯು ಆವೇಶಗೊಂಡಿತು.

05183006a ತತಃ ಸೂತೇ ಹತೇ ರಾಜನ್ ಕ್ಷಿಪತಸ್ತಸ್ಯ ಮೇ ಶರಾನ್।
05183006c ಪ್ರಮತ್ತಮನಸೋ ರಾಮಃ ಪ್ರಾಹಿಣೋನ್ಮೃತ್ಯುಸಮ್ಮಿತಾನ್।।

ರಾಜನ್! ಸೂತನು ಹತನಾಗಲು ನಾನು ಪ್ರಮತ್ತಮನಸ್ಕನಾಗಿದ್ದಾಗ ರಾಮನು ನನ್ನ ಮೇಲೆ ಮೃತ್ಯುಸಮ್ಮಿತ ಶರಗಳನ್ನು ಎಸೆದನು.

05183007a ತತಃ ಸೂತವ್ಯಸನಿನಂ ವಿಪ್ಲುತಂ ಮಾಂ ಸ ಭಾರ್ಗವಃ।
05183007c ಶರೇಣಾಭ್ಯಹನದ್ಗಾಢಂ ವಿಕೃಷ್ಯ ಬಲವದ್ಧನುಃ।।

ಸೂತನ ವ್ಯಸನದಿಂದ ತತ್ತರಿಸುತ್ತಿದ್ದ ನನ್ನ ಮೇಲೆ ಆ ಭಾರ್ಗವನು ಬಲವಾದ ಧನುಸ್ಸನ್ನು ಜೋರಾಗಿ ಎಳೆದು ಬಾಣಗಳಿಂದ ಹೊಡೆದನು.

05183008a ಸ ಮೇ ಜತ್ರ್ವಂತರೇ ರಾಜನ್ನಿಪತ್ಯ ರುಧಿರಾಶನಃ।
05183008c ಮಯೈವ ಸಹ ರಾಜೇಂದ್ರ ಜಗಾಮ ವಸುಧಾತಲಂ।।

ರಾಜನ್! ರಾಜೇಂದ್ರ! ರಕ್ತಕುಡಿಯುವ ಆ ಶರವು ನನ್ನನ್ನು ಚುಚ್ಚಿ ಹೊರಬಂದು ನನ್ನೊಂದಿಗೇ ನೆಲದ ಮೇಲೆ ಬಿದ್ದಿತು.

05183009a ಮತ್ವಾ ತು ನಿಹತಂ ರಾಮಸ್ತತೋ ಮಾಂ ಭರತರ್ಷಭ।
05183009c ಮೇಘವದ್ವ್ಯನದಚ್ಚೋಚ್ಚೈರ್ಜಹೃಷೇ ಚ ಪುನಃ ಪುನಃ।।

ಭರತರ್ಷಭ! ನಾನು ನಿಹತನಾದೆನೆಂದು ತಿಳಿದು ರಾಮನು ಮೇಘದಂತೆ ಜೋರಾಗಿ ಪುನಃ ಪುನಃ ಹರ್ಷೋದ್ಗಾರ ಮಾಡಿದನು.

05183010a ತಥಾ ತು ಪತಿತೇ ರಾಜನ್ಮಯಿ ರಾಮೋ ಮುದಾ ಯುತಃ।
05183010c ಉದಕ್ರೋಶನ್ಮಹಾನಾದಂ ಸಹ ತೈರನುಯಾಯಿಭಿಃ।।

ರಾಜನ್! ನಾನು ಹಾಗೆ ಬೀಳಲು ರಾಮನು ಸಂತೋಷಗೊಂಡು ಅವನ ಅನುಯಾಯಿಗಳೊಂದಿಗೆ ಮಹಾನಾದವನ್ನು ಕೂಗಿದನು.

05183011a ಮಮ ತತ್ರಾಭವನ್ಯೇ ತು ಕೌರವಾಃ ಪಾರ್ಶ್ವತಃ ಸ್ಥಿತಾಃ।
05183011c ಆಗತಾ ಯೇ ಚ ಯುದ್ಧಂ ತಜ್ಜನಾಸ್ತತ್ರ ದಿದೃಕ್ಷವಃ।।
05183011e ಆರ್ತಿಂ ಪರಮಿಕಾಂ ಜಗ್ಮುಸ್ತೇ ತದಾ ಮಯಿ ಪಾತಿತೇ।।

ಆದರೆ ಯುದ್ಧವನ್ನು ನೋಡಲು ಬಂದಿದ್ದ ಕೌರವರು ನನ್ನ ಪಕ್ಕದಲ್ಲಿ ನಿಂತು ನಾನು ಬಿದ್ದುದನ್ನು ನೋಡಿ ಆರ್ತರಾದರು.

05183012a ತತೋಽಪಶ್ಯಂ ಪಾತಿತೋ ರಾಜಸಿಂಹ ದ್ವಿಜಾನಷ್ಟೌ ಸೂರ್ಯಹುತಾಶನಾಭಾನ್।
05183012c ತೇ ಮಾಂ ಸಮಂತಾತ್ಪರಿವಾರ್ಯ ತಸ್ಥುಃ ಸ್ವಬಾಹುಭಿಃ ಪರಿಗೃಹ್ಯಾಜಿಮಧ್ಯೇ।।

ರಾಜಸಿಂಹ! ಅಲ್ಲಿ ಬಿದ್ದಾಗ ಸೂರ್ಯ-ಹುತಾಶನರಂತೆ ಹೊಳೆಯುತ್ತಿದ್ದ ಎಂಟು ದ್ವಿಜರನ್ನು ನೋಡಿದೆನು. ಅವರು ನನ್ನನ್ನು ರಣದ ಮಧ್ಯದಲ್ಲಿ ತಮ್ಮ ಬಾಹುಗಳಿಂದ ಮೇಲೆತ್ತಿ ಹಿಡಿದು ನಿಲ್ಲಿಸಿದರು.

05183013a ರಕ್ಷ್ಯಮಾಣಶ್ಚ ತೈರ್ವಿಪ್ರೈರ್ನಾಹಂ ಭೂಮಿಮುಪಾಸ್ಪೃಶಂ।
05183013c ಅಂತರಿಕ್ಷೇ ಸ್ಥಿತೋ ಹ್ಯಸ್ಮಿ ತೈರ್ವಿಪ್ರೈರ್ಬಾಂಧವೈರಿವ।
05183013e ಸ್ವಪನ್ನಿವಾಂತರಿಕ್ಷೇ ಚ ಜಲಬಿಂದುಭಿರುಕ್ಷಿತಃ।।

ಆ ವಿಪ್ರರಿಂದ ಹಿಡಿಯಲ್ಪಟ್ಟ ನಾನು ನೆಲವನ್ನು ಮುಟ್ಟಲಿಲ್ಲ. ಆ ವಿಪ್ರ ಬಾಂಧವರ ಬೆಂಬಲದಿಂದ ಅಂತರಿಕ್ಷದಲ್ಲಿಯೇ ನಿಂತಿದ್ದೆನು. ಅವರು ಅಂತರಿಕ್ಷದಿಂದ ನೀರಿನ ಹನಿಗಳನ್ನು ಚುಮುಕಿಸಿದರು.

05183014a ತತಸ್ತೇ ಬ್ರಾಹ್ಮಣಾ ರಾಜನ್ನಬ್ರುವನ್ಪರಿಗೃಹ್ಯ ಮಾಂ।
05183014c ಮಾ ಭೈರಿತಿ ಸಮಂ ಸರ್ವೇ ಸ್ವಸ್ತಿ ತೇಽಸ್ತ್ವಿತಿ ಚಾಸಕೃತ್।।

ರಾಜನ್! ಆಗ ಆ ಬ್ರಾಹ್ಮಣರು ನನ್ನನ್ನು ಹಿಡಿದು “ಹೆದರಬೇಡ! ಎಲ್ಲವೂ ಸರಿಯಾಗುತ್ತದೆ!” ಎಂದು ಉಪಚರಿಸಿದರು.

05183015a ತತಸ್ತೇಷಾಮಹಂ ವಾಗ್ಭಿಸ್ತರ್ಪಿತಃ ಸಹಸೋತ್ಥಿತಃ।
05183015c ಮಾತರಂ ಸರಿತಾಂ ಶ್ರೇಷ್ಠಾಮಪಶ್ಯಂ ರಥಮಾಸ್ಥಿತಾಂ।।

ಆಗ ಅವರ ಮಾತುಗಳಿಂದ ತೃಪ್ತನಾಗಿ ನಾನು ಒಮ್ಮೆಲೇ ಮೇಲೆದ್ದೆನು. ರಥದಲ್ಲಿದ್ದ ಮಾತೆ ಶ್ರೇಷ್ಠ ಸರಿತೆಯನ್ನು ನೋಡಿದೆನು.

05183016a ಹಯಾಶ್ಚ ಮೇ ಸಂಗೃಹೀತಾಸ್ತಯಾ ವೈ ಮಹಾನದ್ಯಾ ಸಮ್ಯತಿ ಕೌರವೇಂದ್ರ।
05183016c ಪಾದೌ ಜನನ್ಯಾಃ ಪ್ರತಿಪೂಜ್ಯ ಚಾಹಂ ತಥಾರ್ಷ್ಟಿಷೇಣಂ ರಥಮಭ್ಯರೋಹಂ।।

ಕೌರವೇಂದ್ರ! ಯುದ್ಧದಲ್ಲಿ ಆ ಮಹಾನದಿಯೇ ನನ್ನ ಕುದುರೆಗಳ ಕಡಿವಾಣಗಳನ್ನು ಹಿಡಿದು ನಡೆಸುತ್ತಿದ್ದಳು. ನಾನಾದರೋ ಅರ್ಷ್ಟಿಷೇಣನನ್ನು ಹೇಗೋ ಹಾಗೆ ಜನನಿಯ ಪಾದಗಳನ್ನು ಪೂಜಿಸಿ ರಥವನ್ನೇರಿದೆನು.

05183017a ರರಕ್ಷ ಸಾ ಮಮ ರಥಂ ಹಯಾಂಶ್ಚೋಪಸ್ಕರಾಣಿ ಚ।
05183017c ತಾಮಹಂ ಪ್ರಾಂಜಲಿರ್ಭೂತ್ವಾ ಪುನರೇವ ವ್ಯಸರ್ಜಯಂ।।

ಅವಳು ನನ್ನ ರಥವನ್ನೂ ಕುದುರೆಗಳನ್ನೂ ಉಪಕರಣಗಳನ್ನೂ ರಕ್ಷಿಸಿದ್ದಳು. ಕೈಮುಗಿದು ನಮಸ್ಕರಿಸಿ ಪುನಃ ಅವಳನ್ನು ಕಳುಹಿಸಿಕೊಟ್ಟೆನು.

05183018a ತತೋಽಹಂ ಸ್ವಯಮುದ್ಯಮ್ಯ ಹಯಾಂಸ್ತಾನ್ವಾತರಂಹಸಃ।
05183018c ಅಯುಧ್ಯಂ ಜಾಮದಗ್ನ್ಯೇನ ನಿವೃತ್ತೇಽಹನಿ ಭಾರತ।।

ಭಾರತ! ಆಗ ನಾನು ಆ ಗಾಳಿಯ ವೇಗವುಳ್ಳ ಕುದುರೆಗಳನ್ನು ಸ್ವಯಂ ನಿಯಂತ್ರಿಸುತ್ತಾ ದಿನವು ಕಳೆಯುವವರೆಗೆ ಜಾಮದಗ್ನಿಯೊಂದಿಗೆ ಯುದ್ಧ ಮಾಡಿದೆನು.

05183019a ತತೋಽಹಂ ಭರತಶ್ರೇಷ್ಠ ವೇಗವಂತಂ ಮಹಾಬಲಂ।
05183019c ಅಮುಂಚಂ ಸಮರೇ ಬಾಣಂ ರಾಮಾಯ ಹೃದಯಚ್ಚಿದಂ।।

ಭರತಶ್ರೇಷ್ಠ! ಆಗ ನಾನು ಸಮರದಲ್ಲಿ ವೇಗವಂತ ಮಹಾಬಲಶಾಲಿ ಬಾಣವನ್ನು ಬಿಟ್ಟು ರಾಮನ ಹೃದಯವನ್ನು ಚುಚ್ಚಿದೆನು.

05183020a ತತೋ ಜಗಾಮ ವಸುಧಾಂ ಬಾಣವೇಗಪ್ರಪೀಡಿತಃ।
05183020c ಜಾನುಭ್ಯಾಂ ಧನುರುತ್ಸೃಜ್ಯ ರಾಮೋ ಮೋಹವಶಂ ಗತಃ।।

ಆಗ ಬಾಣದ ವೇಗದಿಂದ ಪೀಡಿತನಾದ ರಾಮನು ಧನುವನ್ನು ಬಿಟ್ಟು ತೊಡೆಗಳನ್ನೂರಿ ನೆಲದ ಮೇಲೆ ಬಿದ್ದು ಮೋಹವಶನಾದನು.

05183021a ತತಸ್ತಸ್ಮಿನ್ನಿಪತಿತೇ ರಾಮೇ ಭೂರಿಸಹಸ್ರದೇ।
05183021c ಆವವ್ರುರ್ಜಲದಾ ವ್ಯೋಮ ಕ್ಷರಂತೋ ರುಧಿರಂ ಬಹು।।

ಸಹಸ್ರಭೂರಿಗಳನ್ನಿತ್ತ ರಾಮನು ಹಾಗೆ ಬೀಳಲು ಮೋಡಗಳು ಆಕಾಶವನ್ನು ಕವಿದು ರಕ್ತದ ಮಳೆಯನ್ನು ಸುರಿಸಿದವು.

05183022a ಉಲ್ಕಾಶ್ಚ ಶತಶಃ ಪೇತುಃ ಸನಿರ್ಘಾತಾಃ ಸಕಂಪನಾಃ।
05183022c ಅರ್ಕಂ ಚ ಸಹಸಾ ದೀಪ್ತಂ ಸ್ವರ್ಭಾನುರಭಿಸಂವೃಣೋತ್।।

ಭಿರುಗಾಳಿ ಮತ್ತು ಭೂಕಂಪಗಳೊಡನೆ ನೂರಾರು ಉಲ್ಕೆಗಳು ಬಿದ್ದವು. ಒಮ್ಮಿಂದೊಮ್ಮೆಲೇ ಸ್ವರ್ಭಾನುವು ಉರಿಯುತ್ತಿರುವ ಸೂರ್ಯನನ್ನು ಮುಚ್ಚಿದನು.

05183023a ವವುಶ್ಚ ವಾತಾಃ ಪರುಷಾಶ್ಚಲಿತಾ ಚ ವಸುಂಧರಾ।
05183023c ಗೃಧ್ರಾ ಬಡಾಶ್ಚ ಕಂಕಾಶ್ಚ ಪರಿಪೇತುರ್ಮುದಾ ಯುತಾಃ।।

ಚಂಡಮಾರುತವು ಬೀಸಿತು. ಭೂಮಿಯು ನಡುಗಿತು. ಹದ್ದು, ಕಾಗೆಗಳು ಮತ್ತು ಬಕಪಕ್ಷಿಗಳು ಗುಂಪಾಗಿ ಸಂತೋಷದಿಂದ ಹಾರಾಡತೊಡಗಿದವು.

05183024a ದೀಪ್ತಾಯಾಂ ದಿಶಿ ಗೋಮಾಯುರ್ದಾರುಣಂ ಮುಹುರುನ್ನದತ್।
05183024c ಅನಾಹತಾ ದುಂದುಭಯೋ ವಿನೇದುರ್ಭೃಶನಿಸ್ವನಾಃ।।

ಕೆಂಪಾಗಿದ್ದ ದಿಗಂತದಲ್ಲಿ ನರಿಗಳು ದಾರುಣವಾಗಿ ಮತ್ತೆ ಮತ್ತೆ ಕೂಗಿದವು. ಬಾರಿಸದೆಯೇ ದುಂದುಭಿಗಳು ಅತಿ ಜೋರಾಗಿ ಶಬ್ಧಮಾಡಿದವು.

05183025a ಏತದೌತ್ಪಾತಿಕಂ ಘೋರಮಾಸೀದ್ಭರತಸತ್ತಮ।
05183025c ವಿಸಂಜ್ಞಾಕಲ್ಪೇ ಧರಣೀಂ ಗತೇ ರಾಮೇ ಮಹಾತ್ಮನಿ।।

ಭರತಸತ್ತಮ! ಮಹಾತ್ಮ ರಾಮನು ಮೂರ್ಛಿತನಾಗಿ ನೆಲದ ಮೇಲೆ ಬೀಳಲು ಈ ಘೋರ ಉತ್ಪಾತಗಳು ನಡೆದವು.

05183026a ತತೋ ರವಿರ್ಮಂದಮರೀಚಿಮಂಡಲೋ ಜಗಾಮಾಸ್ತಂ ಪಾಂಸುಪುಂಜಾವಗಾಢಃ।
05183026c ನಿಶಾ ವ್ಯಗಾಹತ್ಸುಖಶೀತಮಾರುತಾ ತತೋ ಯುದ್ಧಂ ಪ್ರತ್ಯವಹಾರಯಾವಃ।।

ಕೋಮಲ ಕಿರಣಗಳು ಮುಸುಕಿದ ರವಿಯು ಮರೀಚಿಮಂಡಲದಲ್ಲಿ ಅಸ್ತನಾದನು. ಸುಖ ಶೀತ ಮಾರುತಗಳೊಂದಿಗೆ ರಾತ್ರಿಯು ಪಸರಿಸಿತು. ಆಗ ನಾವು ಯುದ್ಧದಿಂದ ಹಿಂದೆ ಸರಿದೆವು.

05183027a ಏವಂ ರಾಜನ್ನವಹಾರೋ ಬಭೂವ ತತಃ ಪುನರ್ವಿಮಲೇಽಭೂತ್ಸುಘೋರಂ।
05183027c ಕಾಲ್ಯಂ ಕಾಲ್ಯಂ ವಿಂಶತಿಂ ವೈ ದಿನಾನಿ ತಥೈವ ಚಾನ್ಯಾನಿ ದಿನಾನಿ ತ್ರೀಣಿ।।

ರಾಜನ್! ಹೀಗೆ ಯುದ್ಧಕ್ಕೆ ವಿರಾಮವಾಯಿತು. ಬೆಳಗಾಗಲು ಪುನಃ ಘೋರಯುದ್ಧವು ನಡೆಯಿತು. ಹೀಗೆ ಕಾಲ ಕಾಲದಲ್ಲಿ ಇಪ್ಪತ್ತು ಮತ್ತು ಅನ್ಯ ಮೂರು ದಿನಗಳು ಯುದ್ಧವು ನಡೆಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನಪರ್ವಣಿ ರಾಮಭೀಷ್ಮಯುದ್ಧೇ ತ್ರ್ಯಶೀತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ರಾಮಭೀಷ್ಮಯುದ್ಧದಲ್ಲಿ ನೂರಾಎಂಭತ್ಮೂರನೆಯ ಅಧ್ಯಾಯವು.