ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಅಂಬೋಽಪಾಖ್ಯಾನ ಪರ್ವ
ಅಧ್ಯಾಯ 181
ಸಾರ
ದಿವ್ಯಾಸ್ತ್ರಗಳಿಂದ ಹೋರಾಡುವಾಗ ಪರಶುರಾಮನು ಭೀಷ್ಮನ ಬಾಣಗಳಿಗೆ ಸಿಲುಕಿ ಮೂರ್ಛೆಹೋದುದು (1-23). ಎರಡನೆಯ ದಿನದ ಯುದ್ಧ ಸಮಾಪ್ತಿ (24-36).
05181001 ಭೀಷ್ಮ ಉವಾಚ।
05181001a ಆತ್ಮನಸ್ತು ತತಃ ಸೂತೋ ಹಯಾನಾಂ ಚ ವಿಶಾಂ ಪತೇ।
05181001c ಮಮ ಚಾಪನಯಾಮಾಸ ಶಲ್ಯಾನ್ಕುಶಲಸಮ್ಮತಃ।।
ಭೀಷ್ಮನು ಹೇಳಿದನು: “ವಿಶಾಂಪತೇ! ಕುಶಲಸಮ್ಮತನಾದ ಸೂತನು ತನ್ನ, ಕುದುರೆಗಳ ಮತ್ತು ನನ್ನ ದೇಹಗಳಿಂದ ಚುಚ್ಚಿಕೊಂಡಿದ್ದ ಬಾಣಗಳನ್ನು ಕಿತ್ತನು.
05181002a ಸ್ನಾತೋಪವೃತ್ತೈಸ್ತುರಗೈರ್ಲಬ್ಧತೋಯೈರವಿಹ್ವಲೈಃ।
05181002c ಪ್ರಭಾತ ಉದಿತೇ ಸೂರ್ಯೇ ತತೋ ಯುದ್ಧಮವರ್ತತ।।
ಪ್ರಭಾತದಲ್ಲಿ ಸೂರ್ಯನು ಉದಯಿಸಲು, ಕುದುರೆಗಳಿಗೆ ಸ್ನಾನಮಾಡಿಸಿ, ಹುಲ್ಲಿನಲ್ಲಿ ಹೊರಳಾಡಿಸಿ, ನೀರು ಕುಡಿಸಿ, ಆಯಾಸವನ್ನು ಕಳೆದುಕೊಂಡು ಯುದ್ಧಕ್ಕೆ ಹಿಂದಿರುಗಿದೆನು.
05181003a ದೃಷ್ಟ್ವಾ ಮಾಂ ತೂರ್ಣಮಾಯಾಂತಂ ದಂಶಿತಂ ಸ್ಯಂದನೇ ಸ್ಥಿತಂ।
05181003c ಅಕರೋದ್ರಥಮತ್ಯರ್ಥಂ ರಾಮಃ ಸಜ್ಜಂ ಪ್ರತಾಪವಾನ್।।
ರಥದ ಮೇಲೆ ಕುಳಿತು ಕವಚಗಳನ್ನು ಧರಿಸಿ ಮೊದಲೇ ಬಂದಿದ್ದ ನನ್ನನ್ನು ನೋಡಿ ಪ್ರತಾಪವಾನ್ ರಾಮನು ಸಿದ್ಧತೆಗಳನ್ನು ಮಾಡಿಕೊಂಡನು.
05181004a ತತೋಽಹಂ ರಾಮಮಾಯಾಂತಂ ದೃಷ್ಟ್ವಾ ಸಮರಕಾಂಕ್ಷಿಣಂ।
05181004c ಧನುಃಶ್ರೇಷ್ಠಂ ಸಮುತ್ಸೃಜ್ಯ ಸಹಸಾವತರಂ ರಥಾತ್।।
ಆಗ ನಾನು ಸಮರಕಾಂಕ್ಷಿಣಿಯಾಗಿ ಬರುತ್ತಿದ್ದ ರಾಮನನ್ನು ನೋಡಿ ತಕ್ಷಣವೇ ಶ್ರೇಷ್ಠ ಧನುಸ್ಸನ್ನು ಬದಿಗಿಟ್ಟು ರಥದಿಂದ ಕೆಳಗಿಳಿದೆನು.
05181005a ಅಭಿವಾದ್ಯ ತಥೈವಾಹಂ ರಥಮಾರುಹ್ಯ ಭಾರತ।
05181005c ಯುಯುತ್ಸುರ್ಜಾಮದಗ್ನ್ಯಸ್ಯ ಪ್ರಮುಖೇ ವೀತಭೀಃ ಸ್ಥಿತಃ।।
ಭಾರತ! ಅವನನ್ನು ನಮಸ್ಕರಿಸಿ ರಥವನ್ನೇರಿ ಯುದ್ಧಮಾಡಲೋಸುಗ ಭಯವಿಲ್ಲದೇ ಜಾಮದಗ್ನಿಯ ಎದಿರು ನಿಂತೆನು.
05181006a ತತೋ ಮಾಂ ಶರವರ್ಷೇಣ ಮಹತಾ ಸಮವಾಕಿರತ್।
05181006c ಅಹಂ ಚ ಶರವರ್ಷೇಣ ವರ್ಷಂತಂ ಸಮವಾಕಿರಂ।।
ಆಗ ಅವನು ನನ್ನನ್ನು ಮಹಾ ಶರವರ್ಷದಿಂದ ಮುಚ್ಚಿದನು. ನಾನೂ ಕೂಡ ಶರವರ್ಷವನ್ನು ಸುರಿಸಿ ಅವನನ್ನು ಮುಚ್ಚಿದೆನು.
05181007a ಸಂಕ್ರುದ್ಧೋ ಜಾಮದಗ್ನ್ಯಸ್ತು ಪುನರೇವ ಪತತ್ರಿಣಃ।
05181007c ಪ್ರೇಷಯಾಮಾಸ ಮೇ ರಾಜನ್ದೀಪ್ತಾಸ್ಯಾನುರಗಾನಿವ।।
ರಾಜನ್! ಸಂಕ್ರುದ್ಧ ಜಾಮದಗ್ನಿಯು ಪುನಃ ಬೆಂಕಿಯನ್ನು ಕಾರುವ ಸರ್ಪಗಳಂತಿರುವ ಪತತ್ರಿ ಬಾಣಗಳನ್ನು ನನ್ನ ಮೇಲೆ ಪ್ರಯೋಗಿಸಿದನು.
05181008a ತಾನಹಂ ನಿಶಿತೈರ್ಭಲ್ಲೈಃ ಶತಶೋಽಥ ಸಹಸ್ರಶಃ।
05181008c ಅಚ್ಚಿದಂ ಸಹಸಾ ರಾಜನ್ನಂತರಿಕ್ಷೇ ಪುನಃ ಪುನಃ।।
ರಾಜನ್! ತಕ್ಷಣವೇ ನಾನು ಅವುಗಳನ್ನು ನೂರಾರು ಸಹಸ್ರ ಹರಿತ ಭಲ್ಲೆಗಳಿಂದ ಅಂತರಿಕ್ಷದಲ್ಲಿಯೇ ಪುನಃ ಪುನಃ ತುಂಡರಿಸಿದನು.
05181009a ತತಸ್ತ್ವಸ್ತ್ರಾಣಿ ದಿವ್ಯಾನಿ ಜಾಮದಗ್ನ್ಯಃ ಪ್ರತಾಪವಾನ್।
05181009c ಮಯಿ ಪ್ರಚೋದಯಾಮಾಸ ತಾನ್ಯಹಂ ಪ್ರತ್ಯಷೇಧಯಂ।।
ಆಗ ಪ್ರತಾಪವಾನ್ ಜಾಮದಗ್ನಿಯು ದಿವ್ಯಾಸ್ತ್ರಗಳನ್ನು ನನ್ನ ಮೇಲೆ ಪ್ರಯೋಗಿಸತೊಡಗಿದನು. ಅವುಗಳನ್ನೂ ನಾನು ತಡೆಹಿಡಿದೆನು.
05181010a ಅಸ್ತ್ರೈರೇವ ಮಹಾಬಾಹೋ ಚಿಕೀರ್ಷನ್ನಧಿಕಾಂ ಕ್ರಿಯಾಂ।
05181010c ತತೋ ದಿವಿ ಮಹಾನ್ನಾದಃ ಪ್ರಾದುರಾಸೀತ್ಸಮಂತತಃ।।
ಮಹಾಬಾಹೋ! ಅಸ್ತ್ರಗಳಿಂದಲೇ ನನ್ನ ಕ್ರಿಯೆಯು ಅಧಿಕವಾಗಲು ದಿವಿಯಲ್ಲಿ ಎಲ್ಲೆಡೆಯಿಂದ ಮಹಾನಾದವುಂಟಾಯಿತು.
05181011a ತತೋಽಹಮಸ್ತ್ರಂ ವಾಯವ್ಯಂ ಜಾಮದಗ್ನ್ಯೇ ಪ್ರಯುಕ್ತವಾನ್।
05181011c ಪ್ರತ್ಯಾಜಘ್ನೇ ಚ ತದ್ರಾಮೋ ಗುಃಯಕಾಸ್ತ್ರೇಣ ಭಾರತ।।
ಭಾರತ! ಆಗ ನಾನು ವಾಯುವ್ಯಾಸ್ತ್ರವನ್ನು ಜಾಮದಗ್ನಿಯ ಮೇಲೆ ಪ್ರಯೋಗಿಸಿದನು. ಗುಹ್ಯಕಾಸ್ತ್ರದಿಂದ ರಾಮನು ಅದನ್ನು ತುಂಡರಿಸಿದನು.
05181012a ತತೋಽಸ್ತ್ರಮಹಮಾಗ್ನೇಯಮನುಮಂತ್ರ್ಯ ಪ್ರಯುಕ್ತವಾನ್।
05181012c ವಾರುಣೇನೈವ ರಾಮಸ್ತದ್ವಾರಯಾಮಾಸ ಮೇ ವಿಭುಃ।।
ಆಗ ನಾನು ಆಗ್ನೇಯಾಸ್ತ್ರವನ್ನು ಅನುಮಂತ್ರಿಸಿ ಪ್ರಯೋಗಿಸಲು ನನ್ನ ವಿಭು ರಾಮನು ಅದನ್ನು ವಾರುಣದಿಂದ ತಡೆದನು.
05181013a ಏವಮಸ್ತ್ರಾಣಿ ದಿವ್ಯಾನಿ ರಾಮಸ್ಯಾಹಮವಾರಯಂ।
05181013c ರಾಮಶ್ಚ ಮಮ ತೇಜಸ್ವೀ ದಿವ್ಯಾಸ್ತ್ರವಿದರಿಂದಮಃ।।
ಹೀಗೆ ನಾನು ರಾಮನ ದಿವ್ಯಾಸ್ತ್ರಗಳನ್ನು ತಡೆಗಟ್ಟಲು ತೇಜಸ್ವಿ ದಿವ್ಯಾಸ್ತ್ರವಿದು ಅರಿಂದಮ ರಾಮನೂ ಕೂಡ ನನ್ನವನ್ನು ತಡೆದನು.
05181014a ತತೋ ಮಾಂ ಸವ್ಯತೋ ರಾಜನ್ರಾಮಃ ಕುರ್ವನ್ದ್ವಿಜೋತ್ತಮಃ।
05181014c ಉರಸ್ಯವಿಧ್ಯತ್ಸಂಕ್ರುದ್ಧೋ ಜಾಮದಗ್ನ್ಯೋ ಮಹಾಬಲಃ।।
ಆಗ ರಾಜನ್! ಆ ದ್ವಿಜೋತ್ತಮ ಜಾಮದಗ್ನ್ಯ ಮಹಾಬಲ ರಾಮನು ಸಂಕ್ರುದ್ಧನಾಗಿ ನನ್ನ ಬಲದಿಯಲ್ಲಿ ಬಂದು ಎದೆಯನ್ನು ಚುಚ್ಚಿದನು.
05181015a ತತೋಽಹಂ ಭರತಶ್ರೇಷ್ಠ ಸಮ್ನ್ಯಷೀದಂ ರಥೋತ್ತಮೇ।
05181015c ಅಥ ಮಾಂ ಕಶ್ಮಲಾವಿಷ್ಟಂ ಸೂತಸ್ತೂರ್ಣಮಪಾವಹತ್।
05181015e ಗೋರುತಂ ಭರತಶ್ರೇಷ್ಠ ರಾಮಬಾಣಪ್ರಪೀಡಿತಂ।।
ಭರತಶ್ರೇಷ್ಠ! ಆಗ ನಾನು ನೋವಿನಿಂದ ಬಳಲಿ ಆ ಉತ್ತಮ ರಥದಲ್ಲಿಯೇ ಒರಗಿದೆನು. ಭರತಶ್ರೇಷ್ಠ! ಎದೆಯಲ್ಲಿ ರಾಮಬಾಣಪೀಡಿತನಾಗಿ ನೋವಿನಲ್ಲಿದ್ದ ನನ್ನನ್ನು ಮತ್ತು ರಥವನ್ನು ಸೂತನು ಯುದ್ಧದಿಂದ ದೂರ ಕರೆದೊಯ್ದನು.
05181016a ತತೋ ಮಾಮಪಯಾತಂ ವೈ ಭೃಶಂ ವಿದ್ಧಮಚೇತಸಂ।
05181016c ರಾಮಸ್ಯಾನುಚರಾ ಹೃಷ್ಟಾಃ ಸರ್ವೇ ದೃಷ್ಟ್ವಾ ಪ್ರಚುಕ್ರುಶುಃ।
05181016e ಅಕೃತವ್ರಣಪ್ರಭೃತಯಃ ಕಾಶಿಕನ್ಯಾ ಚ ಭಾರತ।।
ಆಗ ನಾನು ಅಚೇತಸನಾಗಿ ಒಯ್ಯಲ್ಪಡುತ್ತಿದ್ದುದನ್ನು ನೋಡಿದ ಅಕೃತವ್ರಣ ಮತ್ತು ಕಾಶಿಕನ್ಯೆಯೇ ಮೊದಲಾದ ರಾಮನ ಅನುಚರರೆಲ್ಲರೂ ಸಂತೋಷಗೊಂಡು ಕೂಗಿದರು.
05181017a ತತಸ್ತು ಲಬ್ಧಸಂಜ್ಞೋಽಹಂ ಜ್ಞಾತ್ವಾ ಸೂತಮಥಾಬ್ರುವಂ।
05181017c ಯಾಹಿ ಸೂತ ಯತೋ ರಾಮಃ ಸಜ್ಜೋಽಹಂ ಗತವೇದನಃ।।
ಆಗ ನನಗೆ ಎಚ್ಚರ ಬಂದು ಸೂತನಿಗೆ ಹೇಳಿದೆನು: “ಸೂತ! ರಾಮನಿರುವಲ್ಲಿಗೆ ಕರೆದುಕೊಂಡು ಹೋಗು! ವೇದನೆಯು ಕಳೆದು ನಾನು ಸಿದ್ಧನಾಗಿದ್ದೇನೆ.”
05181018a ತತೋ ಮಾಮವಹತ್ಸೂತೋ ಹಯೈಃ ಪರಮಶೋಭಿತೈಃ।
05181018c ನೃತ್ಯದ್ಭಿರಿವ ಕೌರವ್ಯ ಮಾರುತಪ್ರತಿಮೈರ್ಗತೌ।।
ಆಗ ಕೌರವ್ಯ! ಸೂತನು ನನ್ನನ್ನು ಗಾಳಿಯಂತೆ ಹೋಗಬಲ್ಲ ಪರಮ ಶೋಭಿತ ಕುದುರೆಗಳಿಂದ ರಣಕ್ಕೆ ಕರೆದೊಯ್ದನು.
05181019a ತತೋಽಹಂ ರಾಮಮಾಸಾದ್ಯ ಬಾಣಜಾಲೇನ ಕೌರವ।
05181019c ಅವಾಕಿರಂ ಸುಸಂರಬ್ಧಃ ಸಂರಬ್ಧಂ ವಿಜಿಗೀಷಯಾ।।
ಕೌರವ! ಆಗ ನಾನು ರಾಮನನ್ನು ಸೇರಿ ಸಿಟ್ಟಿನಿಂದ ಆ ಸಿಟ್ಟಾಗುವವನನ್ನು ಗೆಲ್ಲಲು ಬಯಸಿ ಅವನನ್ನು ಬಾಣಜಾಲಗಳಿಂದ ಮುಚ್ಚಿದೆನು.
05181020a ತಾನಾಪತತ ಏವಾಸೌ ರಾಮೋ ಬಾಣಾನಜಿಹ್ಮಗಾನ್।
05181020c ಬಾಣೈರೇವಾಚ್ಚಿನತ್ತೂರ್ಣಮೇಕೈಕಂ ತ್ರಿಭಿರಾಹವೇ।।
ಆದರೆ ರಾಮನು ನನ್ನ ಪ್ರತಿಯೊಂದಕ್ಕೂ ಮೂರು ಬಾಣಗಳನ್ನು ಬಿಟ್ಟು, ನನ್ನವು ಅವನನ್ನು ತಲುಪುವ ಮೊದಲೇ ಕತ್ತರಿಸಿದನು.
05181021a ತತಸ್ತೇ ಮೃದಿತಾಃ ಸರ್ವೇ ಮಮ ಬಾಣಾಃ ಸುಸಂಶಿತಾಃ।
05181021c ರಾಮಬಾಣೈರ್ದ್ವಿಧಾ ಚಿನ್ನಾಃ ಶತಶೋಽಥ ಮಹಾಹವೇ।।
ಆ ಮಹಾಹವದಲ್ಲಿ ನನ್ನ ಸುಸಂಶಿತ ನೂರಾರು ಬಾಣಗಳನ್ನು ರಾಮನ ಬಾಣಗಳು ಎರಡಾಗಿ ತುಂಡರಿಸಲು ಅವರೆಲ್ಲರೂ ಸಂತೋಷಗೊಂಡರು.
05181022a ತತಃ ಪುನಃ ಶರಂ ದೀಪ್ತಂ ಸುಪ್ರಭಂ ಕಾಲಸಮ್ಮಿತಂ।
05181022c ಅಸೃಜಂ ಜಾಮದಗ್ನ್ಯಾಯ ರಾಮಾಯಾಹಂ ಜಿಘಾಂಸಯಾ।।
ಆಗ ನಾನು ಜಾಮದಗ್ನಿ ರಾಮನನ್ನು ಕೊಲ್ಲಬೇಕೆಂದು ಬಯಸಿ ಉರಿಯುತ್ತಿರುವ ಪ್ರಭೆಯುಳ್ಳ, ಮೃತ್ಯುವನ್ನು ಕೂಡಿರುವ ಶರವನ್ನು ಪ್ರಯೋಗಿಸಿದೆನು.
05181023a ತೇನ ತ್ವಭಿಹತೋ ಗಾಢಂ ಬಾಣಚ್ಚೇದವಶಂ ಗತಃ।
05181023c ಮುಮೋಹ ಸಹಸಾ ರಾಮೋ ಭೂಮೌ ಚ ನಿಪಪಾತ ಹ।।
ಆ ಬಾಣದಿಂದ ಗಾಢವಾಗಿ ಹೊಡೆತತಿಂದು ರಾಮನು ತಕ್ಷಣವೇ ಮೂರ್ಛೆಗೊಂಡು ನೆಲದ ಮೇಲೆ ಬಿದ್ದನು.
05181024a ತತೋ ಹಾಹಾಕೃತಂ ಸರ್ವಂ ರಾಮೇ ಭೂತಲಮಾಶ್ರಿತೇ।
05181024c ಜಗದ್ಭಾರತ ಸಂವಿಗ್ನಂ ಯಥಾರ್ಕಪತನೇಽಭವತ್।।
ಆಗ ರಾಮನು ನೆಲದ ಮೇಲೆ ಮಲಗಿರಲು ಎಲ್ಲರೂ ಹಾಹಾಕಾರ ಮಾಡಿದರು. ಭಾರತ! ಸೂರ್ಯನೇ ಕೆಳಗೆ ಬಿದ್ದನೋ ಎನ್ನುವಂತೆ ಜಗತ್ತು ಸಂವಿಗ್ನಗೊಂಡಿತು.
05181025a ತತ ಏನಂ ಸುಸಂವಿಗ್ನಾಃ ಸರ್ವ ಏವಾಭಿದುದ್ರುವುಃ।
05181025c ತಪೋಧನಾಸ್ತೇ ಸಹಸಾ ಕಾಶ್ಯಾ ಚ ಭೃಗುನಂದನಂ।।
ಆಗ ಸುಸಂವಿಗ್ನರಾದ ಎಲ್ಲ ತಪೋಧರನೂ ಕಾಶ್ಯೆಯೊಂದಿಗೆ ತಕ್ಷಣವೇ ಭೃಗುನಂದನನಲ್ಲಿಗೆ ಧಾವಿಸಿದರು.
05181026a ತ ಏನಂ ಸಂಪರಿಷ್ವಜ್ಯ ಶನೈರಾಶ್ವಾಸಯಂಸ್ತದಾ।
05181026c ಪಾಣಿಭಿರ್ಜಲಶೀತೈಶ್ಚ ಜಯಾಶೀರ್ಭಿಶ್ಚ ಕೌರವ।।
ಕೌರವ! ಅವನನ್ನು ಮೆಲ್ಲಗೆ ತಬ್ಬಿಕೊಂಡು, ಕೈಗಳಿಂದ ತಣ್ಣೀರನ್ನು ಚುಮುಕಿಸಿ ಜಯ ಆಶೀರ್ವಚನಗಳಿಂದ ಆಶ್ವಾಸನೆಯನ್ನಿತ್ತರು.
05181027a ತತಃ ಸ ವಿಹ್ವಲೋ ವಾಕ್ಯಂ ರಾಮ ಉತ್ಥಾಯ ಮಾಬ್ರವೀತ್।
05181027c ತಿಷ್ಠ ಭೀಷ್ಮ ಹತೋಽಸೀತಿ ಬಾಣಂ ಸಂಧಾಯ ಕಾರ್ಮುಕೇ।।
ಆಗ ವಿಹ್ವಲನಾದ ರಾಮನು ಮೇಲೆದ್ದು ಧನುಸ್ಸಿಗೆ ಬಾಣವನ್ನು ಹೂಡಿ “ಭೀಷ್ಮ! ನಿಲ್ಲು! ನಿನ್ನನ್ನು ಕೊಲ್ಲುತ್ತೇನೆ!” ಎಂದು ಹೇಳಿದನು.
05181028a ಸ ಮುಕ್ತೋ ನ್ಯಪತತ್ತೂರ್ಣಂ ಪಾರ್ಶ್ವೇ ಸವ್ಯೇ ಮಹಾಹವೇ।
05181028c ಯೇನಾಹಂ ಭೃಶಸಂವಿಗ್ನೋ ವ್ಯಾಘೂರ್ಣಿತ ಇವ ದ್ರುಮಃ।।
ಮಹಾಹವದಲ್ಲಿ ಬಿಟ್ಟ ಆ ಬಾಣವು ನನ್ನ ಎಡಬದಿಗೆ ಬಂದು ಪೆಟ್ಟುತಿಂದ ಮರದಂತೆ ನನ್ನನ್ನು ಚೆನ್ನಾಗಿ ಗಾಯಗೊಳಿಸಿ ಸಂವಿಗ್ನನನ್ನಾಗಿಸಿತು.
05181029a ಹತ್ವಾ ಹಯಾಂಸ್ತತೋ ರಾಜಂ ಶೀಘ್ರಾಸ್ತ್ರೇಣ ಮಹಾಹವೇ।
05181029c ಅವಾಕಿರನ್ಮಾಂ ವಿಶ್ರಬ್ಧೋ ಬಾಣೈಸ್ತೈರ್ಲೋಮವಾಹಿಭಿಃ।।
ರಾಜನ್! ಮಹಾಹವೆಯಲ್ಲಿ ಶೀಘ್ರಾಸ್ತ್ರದಿಂದ ನನ್ನ ಕುದುರೆಗಳನ್ನು ಕೊಂದು ಲೋಮವಾಹಿ ಬಾಣಗಳನ್ನು ನನ್ನ ಮೇಲೆ ಪ್ರಯೋಗಿಸಿದನು.
05181030a ತತೋಽಹಮಪಿ ಶೀಘ್ರಾಸ್ತ್ರಂ ಸಮರೇಽಪ್ರತಿವಾರಣಂ।
05181030c ಅವಾಸೃಜಂ ಮಹಾಬಾಹೋ ತೇಽಂತರಾಧಿಷ್ಠಿತಾಃ ಶರಾಃ।
05181030e ರಾಮಸ್ಯ ಮಮ ಚೈವಾಶು ವ್ಯೋಮಾವೃತ್ಯ ಸಮಂತತಃ।।
ಮಹಾಬಾಹು! ಆಗ ನಾನೂ ಕೂಡ ಸಮರದಲ್ಲಿ ತಡೆಯಲಸಾಧ್ಯವಾದ ಶ್ರೀಘ್ರಾಸ್ತ್ರವನ್ನು ಪ್ರಯೋಗಿಸಲು ಆ ಶರಗಳು ಮಧ್ಯದಲ್ಲಿಯೇ ನಿಂತುಕೊಂಡವು. ನನ್ನ ಮತ್ತು ರಾಮನ ಬಾಣಗಳು ಆಕಾಶವನ್ನು ಎಲ್ಲೆಡೆಯಲ್ಲಿಯೂ ಆವೃತಗೊಂಡವು.
05181031a ನ ಸ್ಮ ಸೂರ್ಯಃ ಪ್ರತಪತಿ ಶರಜಾಲಸಮಾವೃತಃ।
05181031c ಮಾತರಿಶ್ವಾಂತರೇ ತಸ್ಮಿನ್ಮೇಘರುದ್ಧ ಇವಾನದತ್।।
ಶರಜಾಲದಿಂದ ಸಮಾವೃತನಾದ ಸೂರ್ಯನು ಸುಡಲಿಲ್ಲ. ಮೋಡಗಳೋ ಎನ್ನುವಂತಿರುವ ಅವುಗಳ ಮೂಲಕ ಗಾಳಿಯು ಸುಳಿದಾಡಿ ಶಬ್ಧವನ್ನುಂಟು ಮಾಡಿತು.
05181032a ತತೋ ವಾಯೋಃ ಪ್ರಕಂಪಾಚ್ಚ ಸೂರ್ಯಸ್ಯ ಚ ಮರೀಚಿಭಿಃ।
05181032c ಅಭಿತಾಪಾತ್ಸ್ವಭಾವಾಚ್ಚ ಪಾವಕಃ ಸಮಜಾಯತ।।
ಆಗ ಗಾಳಿಯಿಂದಾದ ಘರ್ಷಣೆ ಮತ್ತು ಸೂರ್ಯನ ಕಿರಣಗಳು ಸೇರಿ ಅಲ್ಲಿ ಪ್ರಾಕೃತಿಕವಾಗಿಯೇ ಬೆಂಕಿ ಎದ್ದಿತು.
05181033a ತೇ ಶರಾಃ ಸ್ವಸಮುತ್ಥೇನ ಪ್ರದೀಪ್ತಾಶ್ಚಿತ್ರಭಾನುನಾ।
05181033c ಭೂಮೌ ಸರ್ವೇ ತದಾ ರಾಜನ್ಭಸ್ಮಭೂತಾಃ ಪ್ರಪೇದಿರೇ।।
ರಾಜನ್! ತಮ್ಮಲ್ಲಿಯೇ ಉಂಟಾದ ಬೆಂಕಿಯಿಂದ ಸುಟ್ಟು ಆ ಬಾಣಗಳೆಲ್ಲವೂ ಉರಿದು ಭಸ್ಮೀಭೂತವಾಗಿ ಭೂಮಿಯ ಮೇಲೆ ಬಿದ್ದವು.
05181034a ತದಾ ಶತಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ।
05181034c ಅಯುತಾನ್ಯಥ ಖರ್ವಾಣಿ ನಿಖರ್ವಾಣಿ ಚ ಕೌರವ।
05181034e ರಾಮಃ ಶರಾಣಾಂ ಸಂಕ್ರುದ್ಧೋ ಮಯಿ ತೂರ್ಣಮಪಾತಯತ್।।
05181035a ತತೋಽಹಂ ತಾನಪಿ ರಣೇ ಶರೈರಾಶೀವಿಷೋಪಮೈಃ।
05181035c ಸಂಚಿದ್ಯ ಭೂಮೌ ನೃಪತೇಽಪಾತಯಂ ಪನ್ನಗಾನಿವ।।
ಕೌರವ! ನೃಪತೇ! ಸಂಕ್ರುದ್ಧನಾಗಿ ರಾಮನು ನನ್ನ ಮೇಲೆ ನೂರುಗಟ್ಟಲೆ, ಸಾವಿರಗಟ್ಟಲೆ, ಕೋಟಿಗಟ್ಟಲೆ, ಹತ್ತು ಸಾವಿರ, ನೂರುಕೋಟಿಗಟ್ಟಲೆ ಬಾಣಗಳನ್ನು ಪ್ರಯೋಗಿಸಲು ನಾನು ರಣದಲ್ಲಿ ನಾಗಗಳಂಥಹ ಶರಗಳಿಂದ ಅವುಗಳನ್ನು ಕತ್ತರಿಸಿ ಸರ್ಪಗಳಂತೆ ಅವುಗಳನ್ನು ಭೂಮಿಯ ಮೇಲೆ ಬೀಳಿಸಿದೆನು.
05181036a ಏವಂ ತದಭವದ್ಯುದ್ಧಂ ತದಾ ಭರತಸತ್ತಮ।
05181036c ಸಂಧ್ಯಾಕಾಲೇ ವ್ಯತೀತೇ ತು ವ್ಯಪಾಯಾತ್ಸ ಚ ಮೇ ಗುರುಃ।।
ಭರತಸತ್ತಮ! ಹೀಗೆ ಆಗಿನ ಆ ಯುದ್ಧವು ನಡೆಯಿತು. ಸಂಧ್ಯಾಕಾಲವು ಕಳೆಯಲು ನನ್ನ ಗುರುವು ಯುದ್ಧದಿಂದ ಹಿಂದೆಸರಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ರಾಮಭೀಷ್ಮಯುದ್ಧೇ ಏಕಾಶೀತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ರಾಮಭೀಷ್ಮಯುದ್ಧದಲ್ಲಿ ನೂರಾಎಂಭತ್ತೊಂದನೆಯ ಅಧ್ಯಾಯವು.